Monday, 2 December 2024

ಕಡುಕೋಳ: ಮತಾಂಧರ ವಿರುದ್ಧ ಯುಎಪಿಎ ದಾಖಲಿಸಿ



ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡುಕೋಳ ಗ್ರಾಮದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು  ಬೆಳಕು ಚೆಲ್ಲಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಲ್ಲೇನು ನಡೆದಿದೆ ಎಂಬುದು ಕಡುಕೋಳವನ್ನು ಬಿಟ್ಟರೆ ರಾಜ್ಯದ ಉಳಿದ  ಭಾಗಗಳಿಗೆ ಬಹಳ ಕಡಿಮೆಯಷ್ಟೇ ಗೊತ್ತಿದೆ. ಇಲ್ಲಿಯ ಸುಮಾರು 70ರಷ್ಟು ಮುಸ್ಲಿಮ್ ಕುಟುಂಬಗಳು ಊರು ತೊರೆದಿವೆ.  ಘಟನೆ ನಡೆದು ಎರಡು ವಾರಗಳು ಕಳೆದರೂ ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿವೆ.  ಎರಡು ವಾರಗಳ ಹಿಂದೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಥಳಿಸಿದವರು, ದಾಂಧಲೆ ನಡೆಸಿದವರು ಮತ್ತು ಸೊತ್ತುಗಳನ್ನು  ನಾಶ ಮಾಡಿದವರು ಮರಳಿ ಬಂದು ಅದನ್ನೇ ಪುನರಾವರ್ತಿಸಲಾರರು ಎಂದು ಹೇಳುವುದು ಹೇಗೆ ಎಂಬ ಭಯ ಅವರಲ್ಲಿ  ಆವರಿಸಿದೆ. ಸನ್ಮಾರ್ಗ ತಂಡ ಆ ಇಡೀ ಪ್ರದೇಶಕ್ಕೆ ಭೇಟಿ ಕೊಟ್ಟು ಸಂತ್ರಸ್ತರನ್ನು ಮಾತನಾಡಿಸಿದಾಗ ಸಿಕ್ಕ ಮಾಹಿತಿಗಳು  ಆಘಾತಕಾರಿಯಾಗಿವೆ. ತಾವೇಕೆ ದಾಳಿಗೊಳಗಾಗಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯೇ ಸಂತ್ರಸ್ತರಿಗಿಲ್ಲ. ಯಾವ ತಪ್ಪೂ  ಮಾಡದೇ ದಾಳಿಗೊಳಗಾಗುವುದೆಂದರೆ, ಭವಿಷ್ಯವೇನು ಎಂಬ ಆತಂಕ ಅವರೆಲ್ಲರನ್ನೂ ಕಾಡತೊಡಗಿದೆ. ಮುಸ್ಲಿಮ್  ದ್ವೇಷವನ್ನು ಅಮಲಾಗಿ ಏರಿಸಿಕೊಂಡವರನ್ನು ಮಟ್ಟ ಹಾಕದಿದ್ದರೆ ರಾಜ್ಯ ಎಂಥ ಅನಾಹುತಕಾರಿ ಪರಿಸ್ಥಿತಿಗೆ  ಸಾಕ್ಷಿಯಾಗಬೇಕಾದೀತು ಎಂಬುದಕ್ಕೆ ಈ ಕಡುಕೋಳ ಒಂದು ಪುರಾವೆ ಅನ್ನಬಹುದು.

ವಕ್ಫ್ ಹೆಸರಲ್ಲಿ ರಾಜ್ಯದಲ್ಲಿ ಮೊದಲ ಹಿಂಸಾಚಾರ ನಡೆದ ಗ್ರಾಮ ಕಡುಕೋಳ. ಹಾಗಂತ, ಈ ಗ್ರಾಮದ ರೈತರಿಗಾಗಲಿ  ಜಮೀನುದಾರರಿಗಾಗಲಿ ಕಂದಾಯ ಇಲಾಖೆಯಿಂದ ನೋಟೀಸೇ ಬಂದಿಲ್ಲ. ನಿಮ್ಮ ಜಮೀನು ವಕ್ಫ್ ಗೆ  ಸೇರಿದ್ದಾಗಿದೆ ಎಂದು  ಯಾವ ಮುಸ್ಲಿಂ ರಾಜಕಾರಣಿಯೂ ಕಡುಕೋಳ ಗ್ರಾಮದ ರೈತರಲ್ಲಿ ಹೇಳಿಲ್ಲ. ಯಾವ ಅಧಿಕಾರಿಯೂ ಅಲ್ಲಿ ಸರ್ವೇ ನಡೆಸಿಲ್ಲ.  ನಿಮ್ಮನ್ನು ಒಕ್ಕಲೆಬ್ಬಿಸುವುದಾಗಿ ಯಾವ ಮುಸ್ಲಿಮರೂ ರೈತರಿಗೆ ಹೇಳಿಲ್ಲ. ಮಸೀದಿಯಿಂದ ಅಂಥದ್ದೊಂದು  ಘೋಷಣೆಯೂ  ನಡೆದಿಲ್ಲ. ಹೀಗಿದ್ದ ಮೇಲೂ ಏಕಾಏಕಿ ಮುಸ್ಲಿಮ್ ಮನೆಗಳಿಗೆ ದಾಳಿಯಾಗಲು ಕಾರಣವೇನು? ಬಿಜೆಪಿ ಪ್ರಣೀತ  ವಿಚಾರಧಾರೆ ಎಷ್ಟು ಮನುಷ್ಯ ವಿರೋಧಿ ಅನ್ನುವುದನ್ನೇ ಇಲ್ಲಿಯ ಹಿಂಸಾಚಾರ ಹೇಳುತ್ತದೆ. ನಿಮ್ಮ ಭೂಮಿ ವಕ್ಫ್  ಇಲಾಖೆಯ ಪಾಲಾಗುತ್ತದೆ ಎಂಬ ಭಯವನ್ನು ಬಿಜೆಪಿ ಈ ಕಡುಕೋಳದ ಹಿಂದೂಗಳಲ್ಲಿ ಮೂಡಿಸಿದೆ. ಮುಸ್ಲಿಮರನ್ನು  ಹಿಂದೂಗಳ ವೈರಿಗಳಂತೆ ನಿರಂತರ ಬಿಂಬಿಸತೊಡಗಿದೆ. ವಿಜಯಪುರದಲ್ಲಿ ರೈತರಿಗೆ ನೀಡಲಾದ ನೋಟೀಸನ್ನು  ಎತ್ತಿಕೊಂಡು ಹಿಂದೂಗಳಲ್ಲಿ ಅಸ್ತಿತ್ವದ ಭಯವನ್ನು ಹುಟ್ಟು ಹಾಕಿದೆ. ಮುಸ್ಲಿಮರು ನಿಮ್ಮ ಜಮೀನು ಕಸಿಯಲು ಹೊಂಚು  ಹಾಕುತ್ತಿರುವ ವೈರಿಗಳು ಎಂಬಂತೆ  ಬಿಂಬಿಸಿದೆ. ಈ ಎಲ್ಲದರ ಒಟ್ಟು ಪರಿಣಾಮವೇ ಈ ದಾಳಿ ಎಂಬುದು ಅಲ್ಲಿಯ ಒಟ್ಟು  ಪರಿಸ್ಥಿತಿಯನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಅಲ್ಲಿನ ಮಸೀದಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಎಂಬ ಸರಿಯಾಗಿ  ದೃಷ್ಟಿಯೂ ಕಾಣಿಸದ ವಯೋ ವೃದ್ಧರನ್ನೂ ಅವರ ಮನೆಯ ಮಹಿಳೆಯರು, ಮಕ್ಕಳನ್ನೂ ಕ್ರೂರಿಗಳು ಥಳಿಸಿದ್ದಾರೆ. ಅಪ್ಪಟ  ಕೃಷಿಕರಾದ ಮತ್ತು ಮನೆಯಲ್ಲಿ ಗೋವುಗಳನ್ನು ಸಾಕುತ್ತಿರುವ ಅವರಿಗೆ ಈ ಗಾಯ ಬದುಕನ್ನಿಡೀ ಕಾಡಲಿದೆ ಎಂಬುದಕ್ಕೆ  ಅವರ ನೋವುಭರಿತ ಮಾತುಗಳೇ ಸಾಕ್ಷಿ. ಹಲವು ಮನೆಗಳ ಮೇಲೆ ದಾಳಿಯಾಗಿವೆ. ಧರ್ಮದ್ವೇಷಿ ಅಮಲನ್ನು  ಏರಿಸಿಕೊಂಡವರ ದಾಳಿಗೆ ಒಂದಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮನೆ, ಪೀಠೋಪಕರಣಗಳು ನಾಶವಾಗಿವೆ. ಎರಡು  ವಾರಗಳಿಂದ ಇಲ್ಲಿನ ಮಸೀದಿ ಬಾಗಿಲು ಮುಚ್ಚಿದೆ. ಈ ಎಲ್ಲವೂ ಯಾಕೆ ನಡೆಯಿತು ಎಂಬ ಪ್ರಶ್ನೆಗೆ ವಕ್ಫ್ ಅನ್ನು  ತೋರಿಸಲಾಗುತ್ತದೆ. ಅಂದಹಾಗೆ,

ಈ ವಕ್ಫ್ ವಿಷಯಕ್ಕೂ ಮುಸ್ಲಿಮರಿಗೂ ಏನು ಸಂಬಂಧ? ವಿಜಯಪುರದ ರೈತರಿಗಾಗಲಿ ಇತರರಿಗಾಗಲಿ ಮುಸ್ಲಿಮರು  ನೋಟೀಸು ಕಳುಹಿಸಿದ್ದಾರಾ? ಅಥವಾ ನೋಟೀಸು ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರಾ? ರೈತರ ಜಮೀನಿನಲ್ಲಿ  ನಿಂತು ಇದು ನಮ್ಮದು ಎಂದು ಹಕ್ಕು ಮಂಡಿಸಿದ್ದಾರಾ? ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ವಕ್ಫ್ನ  ಹೆಸರಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿರುವುದೇಕೆ? ಇದನ್ನು ವಕ್ಫ್ ಪ್ರೇರಿತ ದಾಳಿ ಎನ್ನುವುದು ಎಷ್ಟು ಸರಿ? ಇದು  ಶುದ್ಧ ರಾಜಕೀಯ ಪ್ರೇರಿತ ಧರ್ಮದ್ವೇಷದ ದಾಳಿಯಲ್ಲವೇ? ಮುಸ್ಲಿಮರನ್ನು ಹೇಗೆ ನಡೆಸಿಕೊಂಡರೂ ನಡೆಯುತ್ತದೆ ಎಂಬ  ಭಂಡ ಧೈರ್ಯದ ಕೃತ್ಯವಲ್ಲವೇ? ರಾಜ್ಯ ಸರಕಾರ ಯಾಕೆ ಈ ಘಟನೆಯನ್ನು ಕ್ಷುಲ್ಲಕವಾಗಿ ಕಂಡಿದೆ? ದೂರು ಕೊಡಲೂ  ಹಿಂಜರಿಯುವ ಈ ಸಂತ್ರಸ್ತರ ಬೆನ್ನಿಗೆ ನಿಂತು ಮತಾಂಧರನ್ನು ಮಟ್ಟ ಹಾಕಬೇಕಾದ ಸರಕಾರ ಯಾಕೆ ತೇಪೆ ಹಚ್ಚುವ  ಪ್ರಯತ್ನಕ್ಕಿಳಿದಿದೆ? ಸಂತ್ರಸ್ತರಿಗೆ, ಒಮ್ಮೆ ಮನೆಗೆ ಮರಳಿದರೆ ಸಾಕು ಎಂಬ ಅನಿವಾರ್ಯತೆಯಿದೆ. ಯಾಕೆಂದರೆ, ಅವರೆಲ್ಲ  ದುಡಿದು ತಿನ್ನುವ ಬಡಪಾಯಿಗಳು. ಆದರೆ, ಇಂಥ ಅನಿವಾರ್ಯತೆಗಳನ್ನೇ ಮತಾಂಧರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ರಾಜಿ ಮಾತುಕತೆಯಲ್ಲಿ ಮುಗಿಸುವ ಒತ್ತಡ ಹೇರತೊಡಗುತ್ತಾರೆ. ನಿರ್ದಿಷ್ಟ ರಾಜಕೀಯ ಚಿಂತನೆಯೇ ಇಂಥ ಕ್ರೌರ್ಯಗಳ  ಹಿಂದಿರುವುದರಿAದ ರಾಜಕೀಯ ಒತ್ತಡಗಳೂ ಬೀಳುತ್ತವೆ. ಅಂತಿಮವಾಗಿ,

ದೂರು ದಾಖಲಾಗಿಲ್ಲ ಎಂಬ ಪಿಳ್ಳೆ ನೆಪ ಇಟ್ಟುಕೊಂಡು ಸರಕಾರ ತಪ್ಪಿಸಿಕೊಂಡರೆ, ಊರಿಗೆ ಮರಳಬೇಕಾದರೆ ದೂರು  ದಾಖಲಿಸಬೇಡಿ ಎಂಬ ಒತ್ತಡ ಹಾಕಿ ಈ ದುರುಳರು ತಪ್ಪಿಸಿಕೊಳ್ಳುತ್ತಾರೆ. ಇದೇ ಧೈರ್ಯದಿಂದ ಮತ್ತೊಂದು ಮತಾಂಧ  ಕೃತ್ಯಕ್ಕೆ ಸಂಚು ನಡೆಸುತ್ತಾರೆ. ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಮುಸ್ಲಿಮರ ಕುರಿತಾದ ಧೋರಣೆಯಲ್ಲಿ ಅಂಥ  ವ್ಯತ್ಯಾಸವೇನಿಲ್ಲ ಎಂಬ ಆರೋಪಕ್ಕೆ ಪೂರಕವಾಗಿಯೇ ಸರಕಾರ ನಡಕೊಳ್ಳುತ್ತಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ರೈತರಿಗೆ ನೋಟೀಸು ಕಳುಹಿಸಿರುವುದು ಸರಕಾರದ ಅಧೀನದಲ್ಲಿರುವ ಕಂದಾಯ ಇಲಾಖೆ. ವಕ್ಫ್ ಸಚಿವಾಲಯ  ಇರುವುದು ಸರಕಾರದ ಅಧೀನದಲ್ಲಿ. ವಕ್ಫ್ ಸಚಿವರ ನೇಮಕದಿಂದ ಹಿಡಿದು ವಕ್ಫ್ ಇಲಾಖೆ, ಕಂದಾಯ ಇಲಾಖೆ ಸಹಿತ  ಈ ಇಡೀ ಪ್ರಕ್ರಿಯೆ ನಡೆಯುವುದೂ ಸರಕಾರದ ಅಧೀನದಲ್ಲೇ. ವಕ್ಫ್ ಇಲಾಖೆಯಲ್ಲಿ ವಕ್ಫ್ ಟ್ರಿಬ್ಯೂನಲ್ ಎಂಬ  ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿರುವುದೂ ಈ ದೇಶದ್ದೇ  ಸರಕಾರಗಳು. ಹೈಕೋರ್ಟು ನ್ಯಾಯಾಧೀಶರೇ ಈ  ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಈ ಟ್ರಿಬ್ಯೂನಲ್ ಕೂಡಾ ಸಂವಿಧಾನದ ಅಡಿಯಲ್ಲೇ  ಇದೆ. ಈ  ದೇಶದಲ್ಲಿ ವಕ್ಫ್ ನಿಯಮಾವಳಿಯನ್ನು ಮುಸ್ಲಿಮರು ರಚಿಸಿಲ್ಲ. ಅದನ್ನು ರಚಿಸಿದ್ದು ಮತ್ತು ಪಾರ್ಲಿಮೆಂಟ್‌ನಲ್ಲಿ  ಅಂಗೀಕರಿಸಿಕೊಂಡದ್ದೂ ಇಲ್ಲಿನ ಸರಕಾರಗಳೇ. ಈವರೆಗಿನ ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರ, ಜನತಾ ಸರಕಾರ ಮತ್ತು  ಇನ್ನಿತರ ಸರಕಾರಗಳು ಈ ವಕ್ಫ್ ನಿಯಮಾವಳಿಗಳನ್ನು ಒಪ್ಪಿಕೊಳ್ಳುತ್ತಾ ಅಗತ್ಯ ಕಂಡಾಗ ತಿದ್ದುಪಡಿ ಮಾಡಿಕೊಳ್ಳುತ್ತಾ ಮತ್ತು  ಜಾರಿಮಾಡಿಕೊಳ್ಳುತ್ತಾ ಬಂದಿವೆ. ಈ ಎಲ್ಲದರಲ್ಲೂ ಮುಸ್ಲಿಮರ ಪಾತ್ರ ತೀರಾತೀರಾ ಅತ್ಯಲ್ಪ. ಶಾಸಕಾಂಗ, ನ್ಯಾಯಾಂಗ  ಮತ್ತು ಕಾರ್ಯಾಂಗಗಳಲ್ಲಿ ಜುಜುಬಿ ಅನ್ನುವಷ್ಟೇ ಪ್ರಾತಿನಿಧ್ಯವಿರುವ ಮತ್ತು ಏನೇನೂ ಪ್ರಭಾವಿಯಾಗಿಲ್ಲದ ಮುಸ್ಲಿಮ್  ಸಮುದಾಯಕ್ಕೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯವೂ ಇಲ್ಲ. ಇಷ್ಟೆಲ್ಲಾ ಇದ್ದೂ ವಕ್ಫ್ ಹೆಸರಲ್ಲಿ ಬಿಜೆಪಿ  ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ ದಿನಾ ಪ್ರಚೋದನೆ ಮಾಡುತ್ತಿ ರುವುದೆಂದರೆ ಏನರ್ಥ?  ಮುಸ್ಲಿಮರನ್ನು ತೋರಿಸಿ ಹೊಟ್ಟೆ ಹೊರೆಯುವುದಕ್ಕೆ ಇವರಿಗೆ ನಾಚಿಕೆಯೂ ಆಗುವುದಿಲ್ಲವೇ? ಈ ದರಿದ್ರ ರಾಜಕೀಯಕ್ಕೆ  ಸಾಮಾನ್ಯ ಜನರು ಯಾಕೆ ಇನ್ನೂ ಮರುಳಾಗುತ್ತಿದ್ದಾರೆ?

ಕಡುಕೋಳದಲ್ಲಿ ಏನು ನಡೆದಿದೆಯೋ ಅದು ಈ ರಾಜ್ಯದಲ್ಲಿ ಧರ್ಮದ್ವೇಷಕ್ಕೆ ಇನ್ನೂ ಮಾರುಕಟ್ಟೆಯಿದೆ ಎಂಬುದನ್ನು ಸಾರಿ  ಹೇಳಿದ ಪ್ರಸಂಗವಾಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವುದಕ್ಕೆ ಕಾರಣಗಳೇ ಬೇಕಿಲ್ಲ ಎಂದು ಘಂಟಾಘೋಷವಾಗಿ  ಸಾರಿದ ಸಂದರ್ಭವಾಗಿದೆ. ಮುಸ್ಲಿಮರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆವು, ಅಗತ್ಯ ಕಂಡರೆ ಊರಿಂದಲೇ  ಓಡಿಸಬಲ್ಲೆವು ಎಂಬ ಕಾಡು ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿ ತೋರಿಸಿದ ಘಟನೆಯಾಗಿದೆ. ಇದು  ಮುಂದುವರಿಯಬಾರದು. ಕಡುಕೋಳದ ಸಂತ್ರಸ್ತರು ದೂರು ಕೊಟ್ಟಿದ್ದಾರೋ ಇಲ್ಲವೋ, ಆದರೆ ಮುಸ್ಲಿಮರನ್ನು ಊರಿ ನಿಂದ ಪಲಾಯನ ಮಾಡುವಂತೆ ದಾಳಿ ನಡೆಸಲಾದದ್ದು ನಿಜ. ಅವರು ಸಂತ್ರಸ್ತ ರಾಗಿ ಪಕ್ಕದ ಊರಲ್ಲಿ ನೆಲೆಸಿರುವುದೂ  ನಿಜ. ಆದ್ದರಿಂದ, ಇಂಥ ಸ್ಥಿತಿಗೆ ಕಾರಣರಾದ ಮತಾಂಧರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ದೇಶದಲ್ಲಿ ಗಲಭೆ ಎಬ್ಬಿಸಲು  ಪ್ರಚೋದಿಸುವ ಯುಎಪಿಎ ಕಾನೂನಿನಡಿ ಕೇಸು ದಾಖಲಿಸಿ ಪಾಠ ಕಲಿಸಬೇಕು.