ಕಳೆದ 24 ವರ್ಷಗಳಿಂದ ಅಧ್ಯಕ್ಷರಾಗಿದ್ದ ಸಿರಿಯದ ಬಶ್ಶಾರುಲ್ ಅಸದ್ ಅವರ ಯುಗ ಕೊನೆಗೊಂಡಿದೆ. ಇರಾಕ್‌ನ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ಕ್ಯಾಂಪ್ ಬುಕ್, ಕ್ಯಾಂಪ್ ಕ್ರೋಪ್ಟರ್, ಅಲ್ ತಜ್ಜಿ ಮುಂತಾದ ಅತಿಕ್ರೂರ ಜೈಲುಗಳಲ್ಲಿ 5 ವರ್ಷಗಳ ಕಾಲ ಇದ್ದು, ತನ್ನ ತಲೆಗೆ ಅಮೆರಿಕದಿಂದ 10 ಬಿಲಿಯನ್ ಡಾಲರ್ ಘೋಷಿಸಲ್ಪಟ್ಟ ಅಬೂ ಮುಹಮ್ಮದ್ ಅಲ್ ಜುಲಾನಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಇದೀಗ ಸಿರಿಯದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಜುಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್ ಶಾಂ (HTS) ಎಂಬ ಸಶಸ್ತ್ರ ಹೋರಾಟಗಾರರ ಗುಂಪು ಸಿರಿಯಾದಲ್ಲಿ ವಿಜಯ ಪತಾಕೆ ಹಾರಿಸಿದೆ. ಅಸದ್‌ರಿಂದ ಸಿರಿಯಾವನ್ನು ವಿಮೋಚನೆಗೊಳಿಸಿದೆ. ಈ ಜುಲಾನಿಯನ್ನು ತಾನು ಹತ್ಯೆ ಮಾಡಿರುವುದಾಗಿ ಈ ವಿಮೋಚನೆಗಿಂತ ಎರಡು ವಾರಗಳ ಮೊದಲು ರಷ್ಯಾ ಘೋಷಿಸಿತ್ತು. ಜುಲಾನಿಯ ಚಿತ್ರವನ್ನೂ ಬಿಡುಗಡೆಗೊಳಿಸಿತ್ತು. ಆದರೆ, ಇಂಥ ಹತ್ತು ಹಲವು ಅಡೆತಡೆಗಳು ಮತ್ತು ಸುಳ್ಳುಗಳನ್ನು ದಾಟಿ ಜುಲಾನಿ ಇದೀಗ ಕ್ರಾಂತಿಯೊಂದಕ್ಕೆ ಯಶಸ್ವಿ ನೇತೃತ್ವ ನೀಡಿದ ದಂಡನಾಯಕನಾಗಿ ಗುರುತಿಸಿಕೊಂಡಿದ್ದಾರೆ.
2011ರಲ್ಲಿ ಟುನೀಷ್ಯಾದಲ್ಲಿ ಅರಬ್ ಕ್ರಾಂತಿ ಪ್ರಾರಂಭವಾಯಿತು. ಬಹು ಬೇಗನೇ ಅದು ಈಜಿಪ್ಟಿಗೂ ಕಾಲಿಟ್ಟಿತು. ಸ್ವೇಚ್ಛಾಧಿಪತಿಗಳಿಂದ ತಮ್ಮ ನಾಡನ್ನು ವಿಮೋಚನೆಗೊಳಿಸುವುದು ಈ ಕ್ರಾಂತಿಯ ಗುರಿಯಾಗಿತ್ತು. 23 ವರ್ಷಗಳಿಂದ ಅಧಿಕಾರದಲ್ಲಿದ್ದ ಝೈನುಲ್ ಆಬಿದೀನ್ ವಿರುದ್ಧ ಟುನೀಷ್ಯಾದಲ್ಲಿ 2010 ಡಿ. 17 ರಂದು ಪ್ರತಿಭಟನೆ ಆರಂಭವಾಯಿತು. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನರು ತೀವ್ರವಾಗಿ ಕಂಗೆಟ್ಟಿದ್ದರು. ಇದೇವೇಳೆ, ರಸ್ತೆ ಬದಿ ಹಣ್ಣು-ಹಂಪಲು ಮಾರುತ್ತಿದ್ದ ಅಬ್ದುಲ್ ಅಝೀಝ್ ಎಂಬ ಪದವೀಧರ ಯುವಕನನ್ನು ಪೊಲೀಸರು ಥಳಿಸಿದರು. ಈ ಥಳಿತವೇ ಪ್ರಭುತ್ವ ವಿರೋಧಿ ಹೋರಾಟಕ್ಕೆ ಕಿಚ್ಚನ್ನು ಹಚ್ಚಿತು. ಕೇವಲ 27 ದಿನಗಳೊಳಗೆ ಅಧ್ಯಕ್ಷ ಝೈನುಲ್ ಆಬಿದೀನ್ ಟುನೀಷ್ಯಾದಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದರು. ಇದೇ ಸಂದರ್ಭದಲ್ಲಿ,
ಸಿರಿಯಾದಲ್ಲಿ 14 ವರ್ಷದ ಮೌವಲಿಯ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿ ತೀವ್ರವಾಗಿ ಹಿಂಸಿಸಿದರು. ಈ ಹುಡುಗರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ಹೆತ್ತವರು ಮತ್ತು ಬಂಧುಗಳ ವಿರುದ್ಧ ಪೊಲೀಸರು ಲಾಠಿಚಾರ್ಚ್, ರಬ್ಬರ್ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದರು. ಹೀಗೆ ಪ್ರತಿಭಟನೆಯನ್ನು ಮಟ್ಟಹಾಕಿದ ಪೊಲೀಸರು ಬಂಧನದ 26 ದಿನಗಳ ಬಳಿಕ ಹುಡುಗರನ್ನು ಬಿಡುಗಡೆಗೊಳಿಸಿದರು. ಈ ಘಟನೆ ನಡೆದಿರುವುದು ಪಶ್ಚಿಮ ಸಿರಿಯದ ದಾರಾ ನಗರದಲ್ಲಿ. ಬಿಡುಗಡೆಗೊಂಡ ಬಳಿಕ ಅಧ್ಯಕ್ಷ ಅಸದ್‌ರನ್ನು ಗುರಿಯಾಗಿಸಿ ದಾರಾ ನಗರದ ಮುಖ್ಯ ಗೋಡೆಯಲ್ಲಿ ಈ ಮೌವಲಿಯ, `ಇದು ನಮ್ಮ ವಿಶ್ವಾಸ (ಈಮಾನ್) ಡಾಕ್ಟರ್...' ಎಂಬ ಬರಹವನ್ನು ಬರೆದ. ಅಧ್ಯಕ್ಷ ಬಶ್ಶಾರುಲ್ ಅಸದ್ ಕಣ್ಣಿನ ವೈದ್ಯರಾಗಿದ್ದರು. `ನಾವು ಹೆದರಲ್ಲ, ಬಗ್ಗಲ್ಲ' ಎಂಬ ಅರ್ಥದ ಈ ಬರಹ ಕ್ಷಣ ಮಾತ್ರದಲ್ಲಿ ವೈರಲ್ ಆಯಿತು. ಮಾಧ್ಯಮಗಳು ಅದನ್ನು ಎತ್ತಿಕೊಂಡವು. ಸೋಶಿಯಲ್ ಮೀಡಿಯದಲ್ಲೂ ಹಂಚಿಕೆಯಾಯಿತು. ಇದುವೇ ಅಸದ್ ರಾಜೀನಾಮೆಯನ್ನು ಒತ್ತಾಯಿಸಿ 2011 ಮಾರ್ಚ್ ನಲ್ಲಿ ನಡೆದ ಪ್ರಥಮ ಪ್ರತಿಭಟನೆಗೆ ಕಾರಣವೂ ಆಯಿತು. 2011ರ ಜುಲೈಯಲ್ಲಿ `ಫ್ರೀ ಸಿರಿಯನ್ ಆರ್ಮಿ' ಎಂಬ ವಿಮೋಚನಾ ಗುಂಪು ರಚನೆಗೊಂಡಿತು. ಇದೇ ಸಂದರ್ಭದಲ್ಲಿ 5 ವರ್ಷಗಳ ಕಾಲ ಅಮೆರಿಕದ ಜೈಲಲ್ಲಿದ್ದು ಬಿಡುಗಡೆಗೊಂಡು ಇರಾಕ್‌ನಲ್ಲಿದ್ದ ಜುಲಾನಿ ನೇರ ಸಿರಿಯಕ್ಕೆ ಬಂದು ವಿಮೋಚನಾ ಪ್ರತಿಭಟನೆಯಲ್ಲಿ ಸೇರಿಕೊಂಡ.
ಈ ಜುಲಾನಿಗೆ ಒಂದು ಕ್ರಾಂತಿಕಾರಿ ಹಿನ್ನೆಲೆಯಿದೆ. ಈ ಜುಲಾನಿ ಹುಟ್ಟಿದ್ದು 1982ರಲ್ಲಿ, ಸೌದಿ ಅರೇಬಿಯಾದಲ್ಲಿ. ಹಾಗಂತ, ಈತ ಸೌದಿ ಅರೇಬಿಯದವರಲ್ಲ. ಈ ಜುಲಾನಿಯ ತಂದೆಯ ಕುಟುಂಬ ಸಿರಿಯದ ಗೋಲಾನ್ ಬೆಟ್ಟದಲ್ಲಿ ವಾಸವಾಗಿತ್ತು. 1967ರಲ್ಲಿ ಇಸ್ರೇಲ್ ಜೊತೆ ನಡೆದ 6 ದಿನಗಳ ಯುದ್ಧದಲ್ಲಿ ಗೋಲಾನ್ ಬೆಟ್ಟ ಇಸ್ರೇಲ್‌ನ ವಶವಾಯಿತು. ಜುಲಾನಿಯ ತಂದೆಯ ಹೆತ್ತವರು ಈ ಗೋಲಾನ್ಸಿ ಬೆಟ್ಟದಿಂದ ಸಿರಿಯದ ಇತರ ಭಾಗಕ್ಕೆ ವಲಸೆ ಬಂದರು. ಬಳಿಕ ಸರಕಾರದ ವಿರುದ್ಧ ಪ್ರತಿಕ್ರಾಂತಿಗೆ ಪ್ರಚೋದಿಸಿದರೆಂದು ಹೇಳಿ ಆಗಿನ ಬಾತಿಸ್ಟ್ ಪಕ್ಷದ ಆಡಳಿತ ಜುಲಾನಿಯ ತಂದೆ ಅಹ್ಮದ್ ಹುಸೈನ್ ಅಲ್ ಶರಾಂರನ್ನು ಬಂಧಿಸಿತು. ಜೈಲಿನಿಂದ ತಪ್ಪಿಸಿಕೊಂಡ ಅವರು ನೇರ ಇರಾಕಿಗೆ ತೆರಳಿ ಅಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ಆಗ ಇಸ್ರೇಲ್ ವಿರುದ್ಧ ಯಾಸಿರ್ ಅರಫಾತ್ ನೇತೃತ್ವದ ಪಿಎಲ್‌ಓ ಹೋರಾಟದಲ್ಲಿ ಸಕ್ರಿಯವಾಗಿತ್ತು. ಅದಕ್ಕೆ ಬೆಂಬಲ ಸಾರಿ ಅವರು ಜೋರ್ಡಾನ್‌ಗೆ ಹೋದರು. 1970ರಲ್ಲಿ ಮರಳಿ ಸಿರಿಯಕ್ಕೆ ಬಂದರು. ಇದೀಗ ಪದಚ್ಯುತಗೊಂಡ ಬಶ್ಶಾರುಲ್ ಅಸದ್ ಅವರ ತಂದೆ ಹಾಫಿಝ್ ಅಸದ್‌ರು ಆಗ ಸಿರಿಯದ ಅಧ್ಯಕ್ಷರಾಗಿದ್ದರು. ಅವರ ಆಡಳಿತದ ವಿರುದ್ಧ ಹೋರಾಟ ಸಂಘಟಿಸಿದ ಕಾರಣಕ್ಕಾಗಿ ಬಂಧನಕ್ಕೀಡಾದರು. ಬಿಡುಗಡೆಯ ಬಳಿಕ ನೇರ ಸೌದಿಗೆ ಹೋಗಿ ಅಲ್ಲಿನ ತೈಲ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದ ವೇಳೆ 1982ರಲ್ಲಿ ಈ ಜುಲಾನಿಯ ಜನನವಾಯಿತು. 1989ರಲ್ಲಿ ಈ ಕುಟುಂಬ ಸಿರಿಯಾಕ್ಕೆ ಮರಳಿತು.
`ಇಸ್ರೇಲ್ ವಿರುದ್ಧ ಹಮಾಸ್ ಕೈಗೊಂಡ ಎರಡನೇ ಇಂತಿಫಾದ ಹೋರಾಟದ ವೇಳೆ ತನಗೆ 18 ವರ್ಷವಾಗಿತ್ತು ಮತ್ತು ಫೆಲೆಸ್ತೀನಿನ ಸಂತ್ರಸ್ತರಿಗೆ ತಾನೇನು ಮಾಡಬಲ್ಲೆ ಎಂಬ ಯೋಚನೆ ತನ್ನಲ್ಲಿ ಹುಟ್ಟಿಕೊಂಡಿತ್ತು...' ಎಂದು ಇದೇ ಜುಲಾನಿ ಅಮೆರಿಕ `ಫ್ರಂಟ್ ಲೈನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದಿದೆ. ಅಮೆರಿಕದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ 2003ರಲ್ಲಿ ಇರಾಕ್‌ಗೆ ಹೋದ ಈ ಜುಲಾನಿ ಅಲ್ ಕಾಯಿದಾ ಸೇರಿದ. 2006ರಲ್ಲಿ ಅಮೆರಿಕನ್ ಸೇನೆ ಈ ಜುಲಾನಿಯನ್ನು ಬಂಧಿಸಿತಲ್ಲದೇ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ವಿವಿಧ ಜೈಲಲ್ಲಿಟ್ಟು ಹಿಂಸಿಸಿತು. 2011ರಲ್ಲಿ ಬಿಡುಗಡೆಗೊಂಡಾಗ ಸಿರಿಯದಲ್ಲಿ ಅಸದ್ ಆಡಳಿತದ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿತ್ತು. ಇರಾಕ್‌ನಿಂದ ನೇರ ಸಿರಿಯಾದ ಇದ್ಲಿಬ್ ನಗರಕ್ಕೆ ಬಂದ ಈ ಜುಲಾನಿ, ಅಲ್ಲಿ ಅಲ್ ಕಾಯಿದಾವನ್ನು ಗಟ್ಟಿಗೊಳಿಸಿದ. ಐಸಿಸ್‌ನ ಅಬೂಬಕರ್ ಅಲ್ ಬಗ್ದಾದಿ ಜೊತೆ ಸೇರಿ ಕೆಲಸ ಪ್ರಾರಂಭಿಸಿದ. 2013ರಲ್ಲಿ ಅಲ್ ಕಾಯಿದಾದ ಜೊತೆ ಸಂಬಂಧ ಕಡಿದುಕೊಂಡ ಅಲ್ ಬಗ್ದಾದಿಯು ಇನ್ನು ತನ್ನ ಗಮನ ಕೇವಲ ಸಿರಿಯಕ್ಕೆ ಮಾತ್ರ ಎಂದು ಘೋಷಿಸಿದ. ಐಎಸ್‌ಐಎಲ್ ಎಂಬ ಹೊಸ ಸಂಘಟನೆಯನ್ನೂ ಸ್ಥಾಪಿಸಿದ. ಜುಲಾನಿ ಇದನ್ನು ಒಪ್ಪಲಿಲ್ಲ. ಬಗ್ದಾದಿಯಿಂದ ದೂರ ನಿಂತ.
2016ರಲ್ಲಿ ಸಿರಿಯ ಅಧ್ಯಕ್ಷ ಅಸದ್‌ರ ಸೇನೆಯು ಪ್ರಮುಖ ಅಲೆಪ್ಪೋ ನಗರವನ್ನು ಬಂಡಕೋರರಿಂದ ವಶಪಡಿಸಿಕೊಂಡಿತು. ಆಗ ಅಲ್ಲಿದ್ದ ವಿವಿಧ ಸಂಘಟನೆಗಳ ಸಾವಿರಾರು ಬಂಡುಕೋರರು ಇದ್ಲಿಬ್‌ಗೆ ಪಲಾಯನ ಮಾಡಿದರು. ಇಲ್ಲಿ ಅದಾಗಲೇ ಇದ್ದ ಜುಲಾನಿ ಈ ಎಲ್ಲಾ ಬಂಡುಕೋರ ಗುಂಪುಗಳ ಹೋರಾಟಗಾರರನ್ನು ಒಟ್ಟು ಸೇರಿಸಿ `ಹಯಾತ್ ಅಲ್ ತಹ್ರೀರ್ ಅಲ್ ಶಾಂ' (HTS) ಎಂಬ ಏಕ ಗುಂಪನ್ನು ರಚಿಸಿದ ಮತ್ತು ಅಲ್ ಕಾಯಿದಾದಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಂಡ. 2017ರಲ್ಲಿ ಈ ಇದ್ಲಿಬ್ ನಗರವನ್ನು ಸಂಪೂರ್ಣ ವಶಪಡಿಸಿಕೊಂಡ ಜುಲಾನಿ ಇಲ್ಲಿ ಶಿಕ್ಷಣ, ಆರೋಗ್ಯ, ನಾಗರಿಕ ಸೇವೆ, ನ್ಯಾಯಾಂಗ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ. ಈ HTS ನಿಧಾನಕ್ಕೆ ಬೆಳೆಯುತ್ತಾ ಹೋಯಿತಲ್ಲದೇ, ಅಲ್ ಕಾಯಿದಾವನ್ನು ಮೂಲೆಗುಂಪು ಮಾಡುತ್ತಾ ಸಿರಿಯನ್ ಜನರ ವಿಶ್ವಾಸವನ್ನೂ ಗಳಿಸಿತು. ಇದ್ಲಿಬ್‌ನಲ್ಲಿ ನಡೆಸುತ್ತಿರುವ ಆಡಳಿತವೂ ಜನರ ಗಮನ ಸೆಳೆಯಿತು.
`ಅಲ್ ಕಾಯಿದಾದ ಜೊತೆಗಿದ್ದ ಕಾಲದಲ್ಲಿಯ ನನ್ನ ನಿಲುವುಗಳಿಂದ ತಾನು ಹಿಂದಕ್ಕೆ ಬಂದಿದ್ದರೂ ಮತ್ತು ತಾನು ಸಿರಿಯಾದ ವಿಮೋಚನೆಯನ್ನಷ್ಟೇ ಗುರಿಯಾಗಿಸಿಕೊಂಡಿದ್ದರೂ ತನ್ನನ್ನು ವಿದೇಶಿ ರಾಷ್ಟ್ರಗಳು ಭಯೋತ್ಪಾದಕ ಎಂದು ಕರೆಯುತ್ತಿರುವುದಕ್ಕೆ ವಿಷಾದವಾಗುತ್ತಿದೆ...' ಎಂದು ಜುಲಾನಿ ಈ ಹಿಂದೆ ಹೇಳಿದ್ದ. ಈ ಜುಲಾನಿಗೆ ಅಮೆರಿಕ, ವಿಶ್ವಸಂಸ್ಥೆ, ಟರ್ಕಿ, ಯುರೋಪ್ಯನ್ ರಾಷ್ಟ್ರಗಳೂ ಸೇರಿ ಹಲವು ದೇಶಗಳು ಭಯೋತ್ಪಾದಕ ಎಂಬ ಹಣೆಪಟ್ಟಿಯನ್ನು ಹಚ್ಚಿವೆ. ಇಂಥ ಜುಲಾನಿ ಕೇವಲ ಎರಡೇ ಎರಡು ವಾರಗಳೊಳಗೆ ಅಸದ್‌ರನ್ನು ಹೇಗೆ ಪದಚ್ಯುತಗೊಳಿಸಿದ ಎಂಬ ಪ್ರಶ್ನೆಯಿದೆ. ನಿಜವಾಗಿ,
ಅಸದ್‌ರ ಶಕ್ತಿಯೇ ಇರಾನ್, ಹಿಝ್ಬುಲ್ಲಾ ಮತ್ತು ರಷ್ಯಾವಾಗಿತ್ತು. ಈ ವರೆಗೆ ಬಂಡುಕೋರ ಪಡೆಗಳನ್ನು ಮಟ್ಟ ಹಾಕಿದ್ದೇ ಈ ಮೂರು ರಾಷ್ಟ್ರಗಳು. ಆದರೆ, ಇದೀಗ ಹಿಝ್ಬುಲ್ಲಾ ಮತ್ತು ಇರಾನ್‌ಗಳು ಇಸ್ರೇಲ್‌ನತ್ತ ಗಮನ ಹರಿಸಿರುವುದು ಮತ್ತು ಯುಕ್ರೇನ್‌ನತ್ತ ರಷ್ಯಾ ಗಂಭೀರವಾಗಿರುವುದು ಈ ಜುಲಾನಿ ಪಡೆಗೆ ವರವಾಗಿ ಪರಿಣಮಿಸಿತು. ತಕ್ಷಣ ನೆರವು ಒದಗಿಸಲು ಈ ಮೂರೂ ಶಕ್ತಿಗಳಿಗೆ ಸಾಧ್ಯವಾಗದಿರುವುದೇ ಜುಲಾನಿಯ ಯಶಸ್ವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಅಂತೂ, ಅಸದ್ ಕುಟುಂಬದ 53 ವರ್ಷಗಳ ಆಡಳಿತ ಕೊನೆಗೊಂಡಿದೆ. 24 ವರ್ಷಗಳ ಕಾಲ ಈ ಬಶ್ಶಾರುಲ್ ಅಸದ್ ಸಿರಿಯವನ್ನು ಆಳಿದರೆ ಇವರ ತಂದೆ ಹಾಫಿಝ್ ಅಸದ್‌ರು 29 ವರ್ಷಗಳ ಕಾಲ ಆಳಿದ್ದರು. ಬಶ್ಶಾರುಲ್ ಅಸದ್ ಅಂತೂ ಪ್ರತಿಭಟನಾಕಾರರ ವಿರುದ್ಧ ಎಷ್ಟು ಬರ್ಬರವಾಗಿ ನಡಕೊಂಡರೆಂದರೆ, ಐದೂವರೆ ಲಕ್ಷ ಸಿರಿಯನ್ನರು ಪ್ರಾಣತೆತ್ತರು. ಒಂದು ಕೋಟಿ 30 ಲಕ್ಷ ಮಂದಿ ಸಿರಿಯ ಬಿಟ್ಟು ಪಲಾಯನ ಮಾಡಿದರು. ಸಾವಿರಾರು ಮಂದಿಯನ್ನು ಜೈಲಲ್ಲಿಟ್ಟು ಪೀಡಿಸಿದರು. ಇದೀಗ ಅಸದ್ ಯುಗ ಕೊನೆಗೊಂಡಿದೆ. ಆದರೆ ಜುಲಾನಿ ಯುಗ ಹೇಗಿರುತ್ತದೆ ಎಂಬ ಬಗ್ಗೆ ಜಗತ್ತು ಕುತೂಹಲದಲ್ಲಿದೆ.
.jpg)
No comments:
Post a Comment