ನಿಜವಾಗಿ, ದುಶ್ಯಂತ್ ದವೆ ಅವರ ಕಣ್ಣೀರು ಈ ದೇಶದ ಕೋಟ್ಯಂತರ ಮುಸ್ಲಿಮರ ಸಂಕಟವನ್ನು ಪ್ರತಿನಿಧಿಸುತ್ತದೆ ಎಂಬ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ದವೆ ಅವರು ಮುಸ್ಲಿಮ್ ಸಮುದಾಯದ ವ್ಯಕ್ತಿಯಲ್ಲ, ರಾಜಕಾರಣಿಯಲ್ಲ ಅಥವಾ ಪ್ರಭುತ್ವ ವಿರೋಧಿ ಸಂಸ್ಥೆಗಳ ಫಲಾನುಭವಿಯೂ ಅಲ್ಲ. ಅವರೇಕೆ ಮಾತಾಡುತ್ತಾ ಭಾವುಕರಾದರು ಅನ್ನುವುದನ್ನು ಸಮಾಜ ವಿಶ್ಲೇಷಣೆಗೆ ಒಳಪಡಿಸಬೇಕು.
ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನೇ ಹಿಂದೂ ಧರ್ಮದ ರಕ್ಪಣೆ ಎಂದು ಅಂದುಕೊಂಡಿರುವ ಒಂದು ಗುಂಪು ಮತ್ತು ಆ ಗುಂಪನ್ನು ರಕ್ಷಿಸುವ ರಾಜಕೀಯ ಪಕ್ಷ ಇವತ್ತು ಅಧಿಕಾರದಲ್ಲಿದೆ. ದೇಶದಾದ್ಯಂತ ಈ ಗುಂಪು ನಡೆಸುತ್ತಿರುವ ಮುಸ್ಲಿಮ್ ದ್ವೇಷಿ ಚಟುವಟಿಕೆಗಳನ್ನು ಈ ರಾಜಕೀಯ ಪಕ್ಷದ ನೇತಾರರು ವಿವಿಧ ನೆಪಗಳನ್ನೊಡ್ಡಿ ಸಮರ್ಥಿಸುತ್ತಿದ್ದಾರೆ. ಇನ್ನೊಂದು ಕಡೆ ಇದೇ ಗುಂಪಿನ ಜನರು ನ್ಯಾಯಾಲಯಗಳಿಗೆ ಅರ್ಜಿ ಹಾಕಿ ಮಸೀದಿಗಳ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡುತ್ತಿದ್ದಾರೆ. ಎಲ್ಲ ಅರ್ಜಿಗಳಲ್ಲೂ ಒಂದು ಸಾಮಾನ್ಯ ಉಲ್ಲೇಖ ಇರುತ್ತದೆ. ಅದೇನೆಂದರೆ, ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ ಎಂದು. ಇದರ ಹೊಚ್ಚ ಹೊಸ ಅವತಾರವಾಗಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್ ಚಿಶ್ತಿ ದರ್ಗಾ ಗುರುತಿಸಿಕೊಂಡಿದೆ. ಅದು ಪೂರ್ವದಲ್ಲಿ ಶಿವಮಂದಿರವಾಗಿತ್ತು ಮತ್ತು ಅದನ್ನು ಒಡೆದು ದರ್ಗಾ ಮಾಡಲಾಗಿದೆ ಎಂದು ವಿಷ್ಣುಗುಪ್ತ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಹಾಗಂತ,
ಇಂಥ ಅರ್ಜಿಗಳ ಕಾನೂನು ಬದ್ಧತೆಯ ಬಗ್ಗೆ ಈ ದೇಶದ ಅಸಂಖ್ಯ ಜನರಲ್ಲಿ ಹಲವು ಗೊಂದಲಗಳಿವೆ. ಬಾಬರಿ ಮಸೀದಿ ಧ್ವಂಸವಾಗುವುದಕ್ಕಿಂತ ಎರಡು ತಿಂಗಳ ಮೊದಲು, ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ 1991’ ಎಂಬ ಕಾನೂನನ್ನು ಈ ದೇಶದ ಪಾರ್ಲಿಮೆಂಟು ಅಂಗೀಕರಿಸಿತ್ತು. ‘1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಆರಾಧನಾ ಕೇಂದ್ರಗಳು ಯಾವ ಸ್ವರೂಪದಲ್ಲಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಮತ್ತು ಅದರಲ್ಲಿ ಯಾವುದೇ ಮಾರ್ಪಾಡು ಸಲ್ಲ..’ ಎಂಬುದನ್ನು ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಬಾಬರಿ ಮಸೀದಿಯನ್ನು ಈ ಕಾಯ್ದೆಯ ವ್ಯಾಪ್ತಿಂಯಿಂದ ಹೊರಗಿಡಲಾಗಿತ್ತು. ಹಾಗಂತ, ಈ ಕಾನೂನು ಊರ್ಜಿತದಲ್ಲಿದ್ದಾಗ್ಯೂ 2023ರಲ್ಲಿ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಸಮೀಕ್ಷೆ ನಡೆಯಿತು. ಆ ಬಳಿಕ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ, ಸಂಭಾಲ್‌ನ ಜಾಮಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಗಳೂ ನಡೆದುವು. ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವೇ ನಿವೃತ್ತ ಮುಖ್ಯ ನ್ಯಾಯಾಧೀಶ ಚಂದ್ರಚೂಡ್.
ಮಂದಿರವನ್ನು ಒಡೆದು ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಅದರ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕು ಎಂಬ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಲಾ ಗಿತ್ತು. ಆ ಬಳಿಕ ಅದು ಸುಪ್ರೀಮ್ ಕೋರ್ಟ್ ಗೆ ಬಂತು. ಅದನ್ನು ವಿಚಾರಣೆಗೆ ಎತ್ತಿಕೊಂಡದ್ದೇ ಚಂದ್ರಚೂಡ್ ನೇತೃತ್ವದ ವಿಚಾರಣಾ ಪೀಠ. ಅವರು, ‘1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಗೆ ವಿಚಿತ್ರ ವ್ಯಾಖ್ಯಾನ ಬರೆದರು. 'ಈ ಕಾಯ್ದೆಯು 1947 ಆಗಸ್ಟ್ 15ರಂದು ಇದ್ದ ಆರಾಧನಾ ಕೇಂದ್ರಗಳನ್ನು ಯಥಾಸ್ಥಿತಿಯನ್ನು ಕಾಪಾಡಬೇಕು, ಕಟ್ಟಡಗಳ ಸ್ವರೂಪವನ್ನು ಬದಲಿಸಬಾರದೆಂದು ಹೇಳಿದೆಯೇ ಹೊರತು ಕಟ್ಟಡದ ಸರ್ವೇ ನಡೆಸಬಾರದೆಂದು ಹೇಳಿಲ್ಲ..’ ಎಂದು ತೀರ್ಪಿತ್ತರು. ಆ ಒಂದು ತೀರ್ಪೇ ಆ ಬಳಿಕ ಸರ್ವೇ ಬಯಸಿ ಸರಣಿ ಅರ್ಜಿಗಳನ್ನು ಸಲ್ಲಿಸುವುದು ಕಾರಣವಾಯಿತು. ನಿಜವಾಗಿ,
ಚಂದ್ರಚೂಡ್ ಅವರು 1991ರ ಕಾಯ್ದೆಯನ್ನು ಅಕ್ಷರಗಳಲ್ಲಿ ಓದಿದ್ದಾರೆ ಎಂದು ಹೇಳಿದರೇನೇ ಸರಿ. ಅಷ್ಟಕ್ಕೂ, ಆರಾಧನಾ ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಬದಲಿಸಬಾರದು ಎಂದು ಹೇಳುವುದರ ಉದ್ದೇಶವೇನು? ಬಾಬರಿ ಮಸೀದಿಯಂತೆ ಇನ್ನಾವುದೇ ಆರಾಧನಾ ಕೇಂದ್ರವನ್ನೂ ವಿವಾದವನ್ನಾಗಿ ಮಾಡಬಾರದು ಎಂದೇ ಅಲ್ಲವೇ? ಹಾಗಿದ್ದ ಮೇಲೆ ಸರ್ವೇ ಮಾಡುವುದರ ಅಗತ್ಯವೇನಿದೆ? ಪೂರ್ವ ಕಾಲದಲ್ಲಿ ಒಂದು ಆರಾಧನಾ ಕೇಂದ್ರ ಮಸೀದಿಯಾಗಿತ್ತೋ ಮಂದಿರವಾಗಿತ್ತೋ ಎಂದು ಖಚಿತಪಡಿಸಿಕೊಂಡು ಆಗುವುದಕ್ಕೇನಿದೆ? ಅದರಿಂದ ಲಾಭ ಏನು? ಆರಾಧನಾ ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಿರುವ ಸರಿಯಾದ ವಿಧಾನ ಏನೆಂದರೆ, ಅವುಗಳ ಸರ್ವೇ ನಡೆಸದೇ ಇರುವುದು. ಸರ್ವೇಗೆ ಅವಕಾಶ ಕೊಡುವುದೆಂದರೆ, ವಿವಾದಕ್ಕೆ ಅವಕಾಶ ಮಾಡಿಕೊಡುವುದು ಎಂದೇ ಅರ್ಥ. ‘1991ರ ಆರಾಧನಾ ಕೇಂದ್ರಗಳ ಕಾಯ್ದೆ’ಯ ಆಶಯ ಇದುವೇ ಆಗಿತ್ತು ಅನ್ನುವುದು ಅದನ್ನು ಓದಿದವರಿಗೆ ಖಂಡಿತ ಗೊತ್ತಾಗುತ್ತದೆ. ಆದರೆ ಅದರ ಮೇಲೆ ಸೂಕ್ಷ್ಮದರ್ಶಕವನ್ನು ಹಿಡಿದು, ಅದರಲ್ಲಿರುವ ಲೋಪವನ್ನು ಹುಡುಕುವುದೇ ಉದ್ದೇಶವಾದರೆ ಏನಾದರೊಂದು ಲೋಪ ಸಿಕ್ಕೇ ಸಿಗುತ್ತದೆ. ಚಂದ್ರಚೂಡ್ ಅವರು ಕಾನೂನಿನಲ್ಲಿರುವ ಇಂಥ ಲೋಪಗಳನ್ನೇ ಎತ್ತಿಕೊಂಡು ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ್ದಾರೆ. ಗ್ಯಾನ್‌ವಾಪಿಗೆ ಸಂಬಂಧಿಸಿ ಅವರು ನೀಡಿರುವ ಆ ಒಂದು ಆದೇಶವು ಕಂಡ ಕಂಡ ಮಸೀದಿಯನ್ನು ಮಂದಿರ ಎಂದು ವಾದಿಸುವ ಮತ್ತು ಸರ್ವೇಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ ಲ್ಲಿವರೆಗೆ ತಲುಪಿದೆ. ಅಷ್ಟಕ್ಕೂ,
ಈ ಅರ್ಜಿ ಹಾಕುವ ಪ್ರಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅನ್ನುವುದಕ್ಕೆ ಗ್ಯಾ ನ್‌ವಾಪಿಯಿಂದ ಸಂಭಾಲ್ ಜಾಮಾ ಮಸೀದಿಯ ವರೆಗೆ ಅರ್ಜಿ ಹಾಕಿದವರ ವಿವರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಹರಿಶಂಕರ್ ಜೈನ್ ಮತ್ತು ಅವರ ಮಗ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಎಂಬವರೇ ಈ ಎಲ್ಲ ಮಸೀದಿಗಳ ಸಮೀಕ್ಷೆಯನ್ನು ಕೋರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ಹಾಕಿದವರಾಗಿದ್ದಾರೆ. ಈ ಎಲ್ಲ ಮಸೀದಿಗಳ ಪೂರ್ವಾಪರಗಳ ಬಗ್ಗೆ ಈ ಇಬ್ಬರಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಿದ್ದು ಹೇಗೆ? ಯಾವುದೇ ಕಾನೂನು ಪ್ರಕ್ರಿಯೆಗೂ ದುಬಾರಿ ಹಣದ ಅಗತ್ಯ ಇರುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರಕರಣ ಒಂದು ವೇಳೆ ಸುಪ್ರೀಮ್ ಕೋರ್ಟ್ ವರೆಗೆ ಸಾಗಿದರೆ ಅಲ್ಲಿಯವರೆಗೆ ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಈ ಇಬ್ಬರು ಇಷ್ಟೊಂದು ಹಣವನ್ನು ಖರ್ಚು ಮಾಡುವುದಕ್ಕೆ ಯಾವ ಕಾರಣಕ್ಕಾಗಿ ಸಿದ್ಧವಾಗಿದ್ದಾರೆ? ಇವರಿಗೆ ಈ ಹಣವನ್ನು ಒದಗಿಸುವ ಬೇರೆ ಶಕ್ತಿಗಳಿವೆಯೇ? ಅವರು ಯಾರು? ಅವರ ಉದ್ದೇಶ ಏನು? ಅವರೇಕೆ ಮಸೀದಿಗಳ ಹಿಂದೆ ಬಿದ್ದಿದ್ದಾರೆ?... ಇಂಥ ಅನೇಕ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅಂದಹಾಗೆ,
ದುಶ್ಯಂತ್ ದವೆ ಅವರ ಕಣ್ಣೀರು ಚಂದ್ರಚೂಡ್ ಅವರನ್ನು ತಲುಪಿದೆಯೋ ಗೊತ್ತಿಲ್ಲ. ಒಂದುವೇಳೆ ತಲುಪಿದ್ದರೂ ಅವರಲ್ಲಿ ತಮ್ಮ ತೀರ್ಪಿಗಾಗಿ ಪಶ್ಚಾತ್ತಾಪ ಭಾವ ಮೂಡಿಸಿದೆಯೋ, ಅದೂ ಗೊತ್ತಿಲ್ಲ. ಆದರೆ, ಈ ದೇಶದ ಮುಸ್ಲಿಮರ ಸಹಿತ ಶಾಂತಿ, ಸಾಮರಸ್ಯವನ್ನು ಬಯಸುವ ದೊಡ್ಡದೊಂದು ಜನಸಮೂಹ ಅವರ ಈ ತೀರ್ಪನ್ನು ಎಂದೂ ಮರೆಯಲಾರದು ಎಂಬುದು ನಿಜ. ಹಿಂದೂ ಮುಸ್ಲಿಮರನ್ನು ವಿಭಜಿಸಿ, ಧರ್ಮ ದ್ವೇಷವನ್ನು ಸದಾ ಜೀವಂತದಲ್ಲಿಡ ಬಯಸಿರುವ ಗುಂಪಿಗೆ ಅತ್ಯುತ್ತಮ ಅಸ್ತ್ರವನ್ನು ನೀಡಿದ ಅವರನ್ನು ಇತಿಹಾಸ ಎಂದೂ ಕ್ಷಮಿಸದು.

No comments:
Post a Comment