ಜಾತಿಯೇ ಇಲ್ಲದ ಧರ್ಮದ ಅನುಯಾಯಿಗಳು ಜಾತಿಯಾಧಾರಿತವಾಗಿ ಗುರುತಿಸಿಕೊಂಡರೆ ಅದು ಧರ್ಮದ್ರೋಹ ಆಗದೇ? ಇಸ್ಲಾಮ್‌ನಲ್ಲಿ ಜಾತಿಯೇ ಇಲ್ಲ ಎಂದ ಮೇಲೆ ಉಪಜಾತಿ ಯಾವುದು? ಸರಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಥವಾ ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು? ನಿಮ್ಮ ಧರ್ಮ ಯಾವುದು, ಜಾತಿ ಯಾವುದು ಮತ್ತು ಉಪಜಾತಿ ಯಾವುದು ಎಂದು ಸಮೀಕ್ಷೆಯವರು ಮನೆಗೆ ಬಂದು ಪ್ರಶ್ನಿಸಿದರೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಬರೆಯಬಹುದೇ? ಮುಸ್ಲಿಮ್ ಅನ್ನುವುದು ಜಾತಿ ಅಲ್ಲವಲ್ಲ. ಇಸ್ಲಾಮನ್ನು ಅನುಸರಿಸುವವ ಎಂಬ ಅರ್ಥದಲ್ಲಿರುವ ಮುಸ್ಲಿಮ್ ಅನ್ನು ಜಾತಿ ಎಂದು ಒಪ್ಪಿಕೊಂಡರೆ ಇಸ್ಲಾಮಿನ ‘ಜಾತಿರಹಿತ’ ಬೋಧನೆಗೆ ವಿರುದ್ಧವಾಗಿ ನಡಕೊಂಡಂತಲ್ಲವೇ? ಒಂದುವೇಳೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಎಲ್ಲರೂ ತುಂಬಿಸಿದರೂ ಅದರ ನಂತರದ ಉಪಜಾತಿಗೆ ಏನುತ್ತರಿಸಬೇಕು? ಅದನ್ನು ಖಾಲಿ ಬಿಟ್ಟರೆ ಏನು? ತುಂಬಿಸುವುದರಿಂದ ಪ್ರಯೋಜನವೇನು? ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ, ಕಸಾಬ್, ಬ್ಯಾರಿ, ದಖ್ಖನಿ, ಬಾಗ್ಬಾನ್, ಅಟ್ಟಾರಿ, ಚಪ್ಪರ್‌ಬಂದರ್, ದರ್ಜಿ, ಧೋಬಿ, ಜೋಹಾರಿ, ಪಟ್ಟೆಗಾರ್, ಫೂಲ್‌ಮಾಲಿ, ರಂಗ್ರೆಜ್, ತೇಲಿ... ಇತ್ಯಾದಿ ಇತ್ಯಾದಿಯಾಗಿ ದಾಖಲಿಸುವುದರಿಂದ ಇಸ್ಲಾಮಿನ ಸಮಾನತೆ ಮತ್ತು ಜಾತಿರಹಿತ ಪರಿಕಲ್ಪನೆಗೆ ಬೀಳುವ ಹೊಡೆತವೇನು?
ಜಾತಿ ಸಮೀಕ್ಷೆ ಈಗಾಗಲೇ ಆರಂಭಗೊಂಡಿರುವುದರ ನಡುವೆಯೇ ಮುಸ್ಲಿಮ್ ಸಮುದಾಯದಲ್ಲಿ ಈ ಬಗೆಯ ಚರ್ಚೆಯೂ ಮುಂದುವರಿದಿದೆ. ನಿಜವಾಗಿ, ಈ ಚರ್ಚೆ ಸ್ವಾಗತಾರ್ಹ ಮತ್ತು ಮುಸ್ಲಿಮರಿಗೆ ಒಂದು ಸಮುದಾಯವಾಗಿ ಆತ್ಮಾವಲೋಕನ ನಡೆಸುವುದಕ್ಕೂ ಅತ್ಯುತ್ತಮ ಸಂದರ್ಭ. 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟು ಸುಮಾರು 80 ಲಕ್ಷ ಮುಸ್ಲಿಮರಲ್ಲಿ 99 ಉಪಜಾತಿಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ ಶೇಖ್ ಎಂಬುದು ಅತೀ ಹೆಚ್ಚು ಜನಸಂಖ್ಯೆಯಿರುವ ಉಪಜಾತಿ ಎಂದೂ ದಾಖಲಾಗಿದೆ. ಇವರ ಸಂಖ್ಯೆ 5 ಲಕ್ಷದ 50 ಸಾವಿರ. ಅಲ್ಲದೇ ಒಟ್ಟು 80 ಲಕ್ಷ ಜನರಲ್ಲಿ 59 ಲಕ್ಷ ಮಂದಿ ತಮ್ಮನ್ನು ಕೇವಲ ಮುಸ್ಲಿಮ್ ಎಂದು ಗುರುತಿಸಿರುವುದೂ ಗೊತ್ತಾಗಿದೆ. 2025 ಫೆಬ್ರವರಿ 29ರಂದು ಹಿಂದುಳಿದ ಆಯೋಗಗಳ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಆ ವರದಿಯ ಬಗ್ಗೆ ಕೇಳಿಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ಸರಕಾರ ಕೈಹಾಕಿದೆ. ಅಂದಹಾಗೆ,
ಸರಕಾರವೇ ಹೇಳಿಕೊಂಡಿರುವಂತೆ ಇದು ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅತ್ಯಂತ ಪಾರದರ್ಶಕವಾಗಿ ಅರಿತುಕೊಳ್ಳುವುದಕ್ಕೆ ಮಾಡಲಾಗುವ ಯತ್ನ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಒಂದು ನಿರಾಕರಿಸಲಾಗದ ಸತ್ಯವಾಗಿರುವುದರಿಂದ ಮತ್ತು ಬಹುಸಂಖ್ಯಾತ ಜನರು ಜಾತಿಯಾಧಾರಿತವಾಗಿಯೇ ವಿಭಜನೆಗೊಂಡಿರುವುದರಿಂದ ಸಮೀಕ್ಷೆಯ ಕಾಲಂನಲ್ಲಿ ಜಾತಿ ಮತ್ತು ಉಪಜಾತಿಗಳು ಇರಬೇಕಾದುದು ಅನಿವಾರ್ಯ. ಈ ಕಾಲಂಗಳನ್ನು ತುಂಬುವುದು ಐಚ್ಛಿಕವೇ ಹೊರತು ಕಡ್ಡಾಯ ಅಲ್ಲ. ಒಂದುವೇಳೆ, ಧರ್ಮ ಎಂಬ ಕಾಲಂನ್ನು ತುಂಬಿ ಉಳಿದ ಜಾತಿ ಮತ್ತು ಉಪಜಾತಿ ಕಾಲಂಗಳನ್ನು ತುಂಬದೇ ಇದ್ದರೂ ಅಪರಾಧ ಆಗುವುದಿಲ್ಲ. ಆದರೆ,
ಈ ಸಮೀಕ್ಷೆಯ ಉದ್ದೇಶ ಪೂರ್ಣಗೊಳ್ಳಬೇಕಾದರೆ ಪೂರ್ಣ ಪ್ರಮಾಣದಲ್ಲಿ ಈ ಸಮೀಕ್ಷೆಯೊಂದಿಗೆ ಸಹಕರಿಸುವುದು ಅಗತ್ಯ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಿ ದಾಖಲೆಗಳಲ್ಲಿ ಮುಸ್ಲಿಮ್ ಸಮುದಾಯದ ಉಪಜಾತಿಗಳು ಉಲ್ಲೇಖಗೊಂಡಿವೆ. ಮಾತ್ರವಲ್ಲ, ವಿವಿಧ ಸರಕಾರಿ ಖೋಟಾಗಳನ್ನೂ ಮೀಸಲಾತಿಗಳನ್ನೂ ಈ ಉಪಜಾತಿಗಳು ಪಡೆಯುತ್ತಲೂ ಇವೆ. ಈ ಉಪಜಾತಿ ಗುರುತುಗಳೆಲ್ಲ ಬಹುತೇಕ ವೃತ್ತಿಯಾಧಾರಿತ ಗುರುತುಗಳು. ನದಾಫ, ಪಿಂಜಾರ, ಕಸಾಬ್, ಅಟ್ಟಾರಿ, ಬಾಗ್ಬಾನ್, ಚಪ್ಪರ್‌ಬಂದ್ ಸಹಿತ ಜಯಪ್ರಕಾಶ್ ಆಯೋಗ ಪಟ್ಟಿ ಮಾಡಿರುವ ಉಪಜಾತಿಗಳೆಲ್ಲ ವೃತ್ತಿಯ ಹಿನ್ನೆಲೆಯಲ್ಲೇ ಗುರುತಿಸಿಕೊಂಡಿವೆ. ಹೂಮಾರುವ ವೃತ್ತಿಯಲ್ಲಿರುವವರು, ಕಸಾಯಿ ವೃತ್ತಿ ಮಾಡುವವರು, ಧೋಬಿ ವೃತ್ತಿ, ದರ್ಜಿ ವೃತ್ತಿ, ಚಪ್ಪಲಿ ಹೊಲಿಯುವ ವೃತ್ತಿ.. ಇತ್ಯಾದಿ ವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತಾ ಬಂದಿರುವವರು ಒಂದು ಗುಂಪಾಗಿ ಗುರುತಿಸಿಕೊಂಡು ಕೊನೆಗೆ ಅವುಗಳೇ ಒಂದು ಉಪಜಾತಿಯಾಗಿ ಮಾರ್ಪಟ್ಟಿವೆ. ವ್ಯಾಪಾರವನ್ನೇ ನೆಚ್ಚಿಕೊಂಡಿದ್ದರಿAದ ಕರಾವಳಿ ಮತ್ತು ಇನ್ನಿತರ ಪ್ರದೇಶದ ಮುಸ್ಲಿಮರು ‘ಬ್ಯಾರಿ’ಯಾಗಿ ಗುರುತಿಸಿಕೊಂಡರು ಎಂಬ ವಾದವನ್ನೂ ಈ ಹಿನ್ನೆಲೆಯಲ್ಲಿಯೇ ನೋಡಬಹುದು. ನಿಜವಾಗಿ,
ಇವೆಲ್ಲ ಹಿಂದೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿಗಳಂಥಲ್ಲ. ಇವು ವೃತ್ತಿಯಾಧಾರಿತ ಕುಲನಾಮಗಳು. ಇಲ್ಲಿ ಬ್ಯಾರಿ, ದಖ್ಖನಿ, ಕಸಾಬ್, ಪಿಂಜಾರ ಸಹಿತ ಎಲ್ಲರೂ ಒಂದೇರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತಾರೆ. ಐದು ಬಾರಿ ನಮಾಝï ಮಾಡುತ್ತಾರೆ. ಉಪವಾಸ ಆಚರಿಸುತ್ತಾರೆ. ಏಕದೇವನನ್ನು ಮತ್ತು ಪ್ರವಾದಿ ಮುಹಮ್ಮದ್‌ರನ್ನು ಅನುಸರಿಸುತ್ತಾರೆ. ಈ ಎಲ್ಲರೂ ಕುರ್‌ಆನನ್ನೇ ಪವಿತ್ರ ಗ್ರಂಥ ಎಂದು ಅಂಗೀಕರಿಸುತ್ತಾರೆ ಮತ್ತು ಅದರಂತೆ ನಡೆಯುತ್ತಾರೆ. ಪರಸ್ಪರ ವೈವಾಹಿಕ ಸಂಬAಧಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿಯಲ್ಲಿ ಭುಜಕ್ಕೆ ಭುಜ ತಾಗಿಸಿ ನಮಾಜ್ ಮಾಡುತ್ತಾರೆ. ಹಜ್ಜ್ಗೆಂದು ಮಕ್ಕಾಕ್ಕೆ ಹೋಗುತ್ತಾರೆ. ಅಂದರೆ, ಇಲ್ಲಿ ಉಪಜಾತಿ ಎಂಬ ಕಾಲಂನಲ್ಲಿ ದಾಖಲಿಸಲಾಗುವ ಬ್ಯಾರಿ, ನದಾಫ್, ಪಿಂಜಾರ...ಗಳೆಲ್ಲ ವೃತ್ತಿಯಾಧಾರಿತ ಕುಲನಾಮಗಳೇ ಹೊರತು ಧರ್ಮಾಧಾರಿತ ಜಾತಿಗಳಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಆದರೆ,
ಹಿಂದೂ ಸಮಾಜದಲ್ಲಿರುವ ಜಾತಿ ಮತ್ತು ಉಪಜಾತಿಗಳ ಸ್ವರೂಪ ಹೀಗಲ್ಲ. ಅದು ಧರ್ಮಾಧಾರಿತವಾಗಿಯೇ ಗುರುತಿಸಿಕೊಂಡಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಮತ್ತು ಇವುಗಳ ಪರಿಧಿಗೆ ಒಳಪಡದವರು ದಲಿತರು ಎಂಬ ನೆಲೆಯಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ಈ ಸಮುದಾಯಗಳು ಬೇರೆ ಬೇರೆ ರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತವೆ. ಇವುಗಳ ನಡುವೆ ನಂಬಿಕೆಗೆ ಸಂಬAಧಿಸಿಯೇ ವ್ಯತ್ಯಾಸಗಳಿವೆ. ವೈರುಧ್ಯಗಳಿವೆ. ದೇಗುಲ ಪ್ರವೇಶ ನಿಷೇಧಕ್ಕಾಗಿ ಇವತ್ತೂ ದಲಿತರು ಸುದ್ದಿಗೆ ಒಳಗಾಗುತ್ತಿದ್ದಾರೆ. ಅಸ್ಪೃಶ್ಯತೆ ಇದೆ. ಈ ನಾಲ್ಕು ವರ್ಣಗಳ ಒಳಗೆ ಮತ್ತು ಜಾತಿ-ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಅನೇಕ ಬಾರಿ ಇಂಥ ಬೇಲಿಯನ್ನು ಮುರಿದ ಕಾರಣಕ್ಕಾಗಿಯೇ ಮರ್ಯಾದಾ ಹತ್ಯೆಗಳಾಗುತ್ತಿರುವುದೂ ಸುದ್ದಿಗೊಳಗಾಗುತ್ತಿದೆ. ಆದ್ದರಿಂದಲೇ,
ಜಾತಿ-ಉಪಜಾತಿ ಎಂಬ ಕಾಲಂ ಕಂಡಾಗಲೇ ಮುಸ್ಲಿಮರಿಗೆ ಈ ಜಾತಿ ಸಂಘರ್ಷಗಳೇ ಕಣ್ಣೆದುರು ಬರುತ್ತದೆ. ನಾವು ಜಾತಿ-ಉಪಜಾತಿ ಕಾಲಂ ಅನ್ನು ತುಂಬಿಸಿದರೆ ಎಲ್ಲಿ ಹಿಂದೂ ಸಮಾಜದಲ್ಲಿರುವ ಜಾತಿಗಳಾಗಿ ಬಿಡುತ್ತೇವೋ ಎಂಬ ಅವ್ಯಕ್ತ ಭಯ ಮುಸ್ಲಿಮರಲ್ಲಿ ಕಾಣಿಸುತ್ತಿದೆ. ಇದು ಅಸಹಜ ಭಯ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇಂಥದ್ದೊಂದು ಜಾತಿ ವಿಭಜನೆಗೆ ಈ ಸಮೀಕ್ಷೆ ವೇದಿಕೆ ಒದಗಿಸುತ್ತದೋ ಎಂಬ ಭೀತಿಯಲ್ಲಿರುವ ಈ ಕಳಕಳಿಯನ್ನು ತಿರಸ್ಕರಿಸಬೇಕಾಗಿಯೂ ಇಲ್ಲ. ಆದರೆ,
ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಮೇಲೆತ್ತುವುದಕ್ಕೆ ಸರಕಾರದ ಆಶ್ರಯವೂ ಬೇಕಾಗಿದ್ದು, ವೃತ್ತಿಯಾಧಾರಿತ ಕುಲನಾಮಗಳನ್ನು ನಮೂದಿಸುವುದರಿಂದ ಆಯಾ ಕುಲನಾಮಗಳಲ್ಲಿರುವವರ ಒಟ್ಟು ಸಂಖ್ಯೆ ಮತ್ತು ಅವರ ಬದುಕಿನ ಸ್ಥಿತಿ ಸರಕಾರಕ್ಕೆ ಸರಿಯಾಗಿ ಸಿಗುತ್ತದೆ. ಇದರಿಂದ ಅತೀ ಹಿಂದುಳಿದಿರುವ ನಿರ್ದಿಷ್ಟ ಕುಲನಾಮದ ಮುಸ್ಲಿಮ್ ಗುಂಪಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದಕ್ಕೆ ಮತ್ತು ಮೀಸಲಾತಿಯನ್ನು ಒದಗಿಸುವುದಕ್ಕೂ ಅವಕಾಶ ಸಿಗುತ್ತದೆ. ರಾಜ್ಯದ ಒಟ್ಟು 80 ಲಕ್ಷ ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದಕ್ಕೂ ನಿರ್ದಿಷ್ಟ ಕುಲನಾಮಗಳಿಗೆ ಮಾತ್ರ ವಿಶೇಷ ಮೀಸಲಾತಿ, ಅನುದಾನವನ್ನು ಒದಗಿಸಿ ಅವರನ್ನು ಮೇಲೆತ್ತುವುದಕ್ಕೂ ವ್ಯತ್ಯಾಸ ಇದೆ. 80 ಲಕ್ಷ ಮಂದಿಗೆ ಮೀಸಲಾತಿ ಘೋಷಿಸಿದಾಗ ಆ 80 ಲಕ್ಷದಲ್ಲಿರುವ ಶ್ರೀಮಂತರು ಅದನ್ನು ಪಕ್ಕನೇ ಪಡಕೊಳ್ಳುವುದಕ್ಕೂ ದುರ್ಬಲರು ವಂಚಿತರಾಗುವುದಕ್ಕೂ ಅವಕಾಶ ಇದೆ. ಆದರೆ, ನಿರ್ದಿಷ್ಟ ಕುಲನಾಮದಲ್ಲಿ ಗುರುತಿಸಿಕೊಂಡ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಒದಗಿಸುವುದರಿಂದ ಆ ಸಮುದಾಯ ಪೂರ್ಣ ಪ್ರಮಾಣದ ಪ್ರಯೋಜನವನ್ನು ಪಡಕೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ. ಆದ್ದರಿಂದ,
ಸರಕಾರದ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಮುಸ್ಲಿಮ್ ಎಂದೂ ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ.. ಎಂದು ಮುಂತಾಗಿಯೂ ನಮೂದಿಸುವುದು ಬಹಳ ಅಗತ್ಯ. ಈ ಬಗ್ಗೆ ಗೊಂದಲ ಬೇಡ. ಪ್ರವಾದಿ(ಸ) ಕಾಲದಲ್ಲಿ ನದೀರ್, ಕುರೈಶ್ ಖಝ್ರಜ್ ಸಹಿತ ಹಲವು ಬುಡಕಟ್ಟು ಗುರುತಿನೊಂದಿಗೆ ಮುಸ್ಲಿಮರು ಗುರುತಿಸಿಕೊಂಡಿದ್ದರು ಎಂಬುದೂ ಇಲ್ಲಿ ಗಮನಾರ್ಹ.
.jpg)
.jpg)