ಸುಪ್ರೀಮ್ ಕೋರ್ಟ್ ನ ಐವರು ನ್ಯಾಯಾಧೀಶರ ಈ ಒಮ್ಮತದ ತೀರ್ಪನ್ನು ಉನ್ನತ ನ್ಯಾಯಾಂಗ ತಜ್ಞರೇ ಪ್ರಶ್ನಿಸಿದ್ದರು. ಬ್ಲಂಡರ್ ಅಂದಿದ್ದರು. ಮುಸ್ಲಿಮ್ ಸಮುದಾಯವಂತೂ ಈ ತೀರ್ಪಿನ ಬಗ್ಗೆ ತಮ್ಮ ತೀವ್ರ ಅಸಮಾಧಾನ ಸೂಚಿಸಿತ್ತು. ಆದರೆ, ಸುಪ್ರೀಮ್ ಕೋರ್ಟಿಗಿಂತ ಉನ್ನತ ನ್ಯಾಯಾಂಗ ಪೀಠ ಇಲ್ಲದೇ ಇರುವುದರಿಂದ ಈ ತೀರ್ಪಿಗೆ ತಲೆಬಾಗಬೇಕಾದುದು ಎಲ್ಲರ ಪಾಲಿಗೂ ಸಾಂವಿಧಾನಿಕ ಬೇಡಿಕೆಯಾಗಿತ್ತು. ತೀವ್ರ ಅಸಮಾಧಾನವಿದ್ದರೂ ಭಾರತೀಯ ಮುಸ್ಲಿಮರು ಈ ತೀರ್ಪಿಗೆ ಬದ್ಧವಾಗಿ ನಡಕೊಂಡರು. ಇದೀಗ ರಾಮಮಂದಿರವು ಉದ್ಘಾಟನೆಗೆ ಸಿದ್ಧವಾಗಿದೆ. ಈಗಾಗಲೇ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳು ರಾಮಮಂದಿರವನ್ನು ಕೇಂದ್ರೀಕರಿಸಿ ಚರ್ಚೆ ಪ್ರಾರಂಭಿಸಿವೆ. ಕನ್ನಡ ಚಾನೆಲ್‌ಗಳೂ ಹಿಂದೆ ಬಿದ್ದಿಲ್ಲ. ಹಾಗಂತ,
ಮುಸ್ಲಿಮರು ಶ್ರೀರಾಮನ ವಿರೋಧಿಗಳಲ್ಲ. ಶ್ರೀರಾಮನನ್ನು ವಿರೋಧಿಸುವುದಕ್ಕೆ ಕಾರಣಗಳೇ ಇಲ್ಲ. ಶ್ರೀರಾಮ ಈ ಮಣ್ಣಿನ ಬಹುದೊಡ್ಡ ಸಮುದಾಯದ ಪಾಲಿಗೆ ಆದರ್ಶ ಪುರುಷ. ಆತನಿಗಾಗಿ ಒಂದಲ್ಲ, ಸಾವಿರ ಮಂದಿರ ಕಟ್ಟುವುದಿದ್ದರೂ ಅದಕ್ಕೆ ಮುಸ್ಲಿಮರಿಂದ ಅಡ್ಡಿಯೂ ಇಲ್ಲ. ಆದರೆ, ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮನನ್ನು ಮುಸ್ಲಿಮ್ ದ್ವೇಷಕ್ಕಾಗಿ ರಾಜಕೀಯ ಶಕ್ತಿಗಳು ಬಳಸುತ್ತಿರುವುದಕ್ಕೆ ಮುಸ್ಲಿಮ್ ಸಮುದಾಯಕ್ಕೆ ನೋವಿದೆ. ಅಂದಹಾಗೆ,
ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸಂಬಂಧಿಸಿದ್ದು ಎಂಬ ಬಗ್ಗೆ ನ್ಯಾಯಾಲಯದಲ್ಲಿ ತಕರಾರಿತ್ತೇ ಹೊರತು ಶ್ರೀರಾಮನಿಗೆ ಸಂಬಂಧಿಸಿ ಯಾವ ತಕರಾರೂ ಇರಲಿಲ್ಲ. ಆ ಜಾಗ ತಮಗೆ ಸಂಬಂಧಿಸಿದ್ದು ಎಂಬುದು ಮುಸ್ಲಿಮರ ವಾದವಾಗಿತ್ತು. ಆದರೆ, ರಾಜಕೀಯ ಶಕ್ತಿಗಳು ಈ ಜಾಗದ ತಕರಾರರನ್ನು ದುರ್ವ್ಯಾಖ್ಯಾನಿಸಿದುವು ಮತ್ತು ಮಂದಿರ-ಮಸೀದಿ ವಿವಾದವಾಗಿ ಬಿಂಬಿಸಿದುವು. ಮಾತ್ರವಲ್ಲ, ಮುಸ್ಲಿಮರು ಶ್ರೀರಾಮನ ವಿರೋಧಿಗಳು ಎಂಬಂತೆ ಪ್ರಚಾರ ಪಡಿಸಿದುವು. ಮಾಧ್ಯಮಗಳು ಈ ಪ್ರಚಾರಕ್ಕೆ ಬೆಂಕಿ ಕೊಟ್ಟು ಎಲ್ಲೆಡೆ ಹಬ್ಬಿಸಿದುವು. ಇದೀಗ ಈ ಪ್ರಕರಣ ಇತ್ಯರ್ಥಗೊಂಡಿದ್ದರೂ ಮಾಧ್ಯಮಗಳ ಹಸಿವು ತಣಿದಂತೆ ಕಾಣಿಸುತ್ತಿಲ್ಲ. ಅವು ಮತ್ತೆ ಮೈಕ್ ಎಂಬ ಪಂಜಿನೊಂದಿಗೆ ಹೊರಡುವ ಸಿದ್ಧತೆಯಲ್ಲಿರುವಂತೆ ಕಾಣಿಸುತ್ತಿದೆ. ಮತ್ತೊಮ್ಮೆ ಈ ದೇಶದಲ್ಲಿ ಧರ್ಮೋನ್ಮಾದ ಹುಟ್ಟು ಹಾಕಲು ಪ್ರಯತ್ನ ಪಡುತ್ತಿರುವಂತಿದೆ. ಅಷ್ಟಕ್ಕೂ,
ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿರುವಾಗ ಇನ್ನೊಂದು ಕಡೆ ಮಸೀದಿ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ. ಅಯೋಧ್ಯೆಗಿಂತ 22 ಕಿ.ಮೀಟರ್ ದೂರದ ದನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆಂದು ಸರಕಾರ 5 ಎಕರೆ ಭೂಮಿಯನ್ನೇನೋ ನೀಡಿದೆ. ಆದರೆ, ಇದು ಕೃಷಿ ಭೂಮಿ ಎಂದು ಹೇಳಲಾಗುತ್ತಿದೆ. ಕೃಷಿ ಭೂಮಿಯಲ್ಲಿ ಮಸೀದಿ ನಿರ್ಮಿಸುವುದಕ್ಕೆ ಅದರದ್ದೇ ಆದ ಕಾನೂನು ತೊಡಕುಗಳಿವೆ. 2021ರಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದನ್ನು ಬಿಟ್ಟರೆ ಉಳಿದಂತೆ ಈವರೆಗೆ ಯಾವ ಚಟುವಟಿಕೆಯೂ ನಡೆದಿಲ್ಲ. ಆಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು (AAD) ವಿವಿಧ ಕಾರಣಗಳನ್ನೊಡ್ಡಿ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡುತ್ತಲೇ ಇದೆ. 2022ರಲ್ಲಿ ಅಗ್ನಿಶಾಮಕ ಇಲಾಖೆಯು ರಸ್ತೆಗೆ ಸಂಬಂಧಿಸಿ ತಕರಾರನ್ನು ಎತ್ತಿ ನಿರಪೇಕ್ಷಣಾ ಸರ್ಟಿಫಿಕೇಟ್ ಕೊಡಲು ನಿರಾಕರಿಸಿತ್ತು. ಆ ಬಳಿಕ ಮಸೀದಿ ನಿರ್ಮಾಣದ ನಕಾಶೆಗೆ ಆಕ್ಷೇಪ ವ್ಯಕ್ತಪಡಿಸಿತು. 4500 ಚದರ ಮೀಟರ್ ವ್ಯಾಪ್ತಿಯಲ್ಲಿ ಮಸೀದಿ, ಪ್ರತಿದಿನ 200 ಮಂದಿಗೆ ಊಟ ಹಾಕಿಸುವಷ್ಟು ದೊಡ್ಡದಾದ ಕಮ್ಯುನಿಟಿ ಕಿಚನ್, 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಮ್ಯೂಸಿಯಂ, ಸಮುದಾಯ ಸಂಶೋಧನಾ ಕೇಂದ್ರ... ಇತ್ಯಾದಿಗಳನ್ನು ನಿರ್ಮಿಸುವ ನಕಾಶೆಯನ್ನು ಆಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿತ್ತು. ಆದರೆ,
ಮಂದಿರ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರಿರುವ ಮುತುವರ್ಜಿಯ ಒಂದು ಶೇಕಡಾ ಅಂಶವನ್ನಾದರೂ ಈ ಮಸೀದಿ ನಿರ್ಮಾಣದತ್ತ ನೀಡುತ್ತಿದ್ದರೆ ಒಂದೇ ಸಮಯದಲ್ಲಿ ಮಸೀದಿ ಮತ್ತು ಮಂದಿರಗಳ ಉದ್ಘಾಟನೆ ನಡೆಸಬಹುದಿತ್ತು. ಒಂದುಕಡೆ, ಸರಕಾರಿ ಸಂಸ್ಥೆಗಳು ಮಸೀದಿ ನಿರ್ಮಾಣಕ್ಕೆ ವಿವಿಧ ಅಡೆ-ತಡೆಗಳನ್ನು ನೀಡುತ್ತಿರುವಾಗ ಇನ್ನೊಂದು ಕಡೆ ಸರಕಾರವೇ ಮುಂದೆ ನಿಂತು ಮಂದಿರ ನಿರ್ಮಿಸುತ್ತಿದೆ. ಅಲ್ಲದೇ, ಸರಕಾರದ ಅಧೀನದಲ್ಲಿರುವ ಸುನ್ನಿ ವಕ್ಫ್ ಬೋರ್ಡ್ ಉದ್ದೇಶಪೂರ್ವಕವಾಗಿಯೇ ಮಸೀದಿ ನಿರ್ಮಾಣಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆಯೇ ಎಂಬ ಅನುಮಾನವೂ ಇದೆ.

