Tuesday, 14 June 2022

ಮುಸ್ಲಿಮರೇ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ

 



ಪ್ರವಾದಿ(ಸ)ಯವರನ್ನು ನಿಂದಿಸುವ ಮೂಲಕ ಮುಸ್ಲಿಮ್ ಸಮುದಾಯದ ಭಾವನೆಗೆ ಧಕ್ಕೆ ತಂದ ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ ಮತ್ತು ಜಿಂದಾಲ್‌ರನ್ನು ಈವರೆಗೂ ಬಂಧಿಸಿಲ್ಲ. ಅವರ ಮನೆ ಮೇಲೆ ಬುಲ್ಡೋಜರ್ ಹರಿಸಲಾಗಿಲ್ಲ. ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ ಕೊಟ್ಟವರು ಮತ್ತು ದ್ವೇಷ ಭಾಷಣ ಮಾಡಿದವರ ಮನೆ ಮೇಲೆ ಬುಲ್ಡೋಜರ್ ಹರಿದಿಲ್ಲ. ಹಿಜಾಬ್ ವಿವಾದದ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ಕಲ್ಲೆಸೆದ ವಿದ್ಯಾರ್ಥಿಗಳ ಮನೆಯನ್ನೂ ಧ್ವಂಸಗೊಳಿಸಲಾಗಿಲ್ಲ. 2018ರ ಕೊನೆಯಲ್ಲಿ ಕೇರಳದಲ್ಲಿ 7 ಹರತಾಳ ಮತ್ತು ಒಂದು ರಾಜ್ಯ ಬಂದ್ ಕೂಡ ನಡೆಯಿತು. ಇದಕ್ಕೆ ಕಾರಣ, ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು. ‘ಪ್ರಾಯ ಮಿತಿಯಿಲ್ಲದೇ ಎಲ್ಲ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಬಹುದು’ ಎಂದು ಅದು ತೀರ್ಪಿತ್ತಿತ್ತು. ಈ ತೀರ್ಪನ್ನು ಇವತ್ತು ಬುಲ್ಡೋಜರನ್ನು ಸಮರ್ಥಿಸುತ್ತಿರುವ ಇದೇ ಬಿಜೆಪಿ ಮತ್ತು ಸಂಘಪರಿವಾರ ತೀವ್ರವಾಗಿ ವಿರೋಧಿಸಿತ್ತು ಮತ್ತು ಹರತಾಳ ಮತ್ತು ಬಂದ್‌ಗಳನ್ನೂ ನಡೆಸಿತ್ತು. ಈ ಪ್ರತಿಭಟನೆಯಲ್ಲಿ 100ರಷ್ಟು ಸರ್ಕಾರಿ ಬಸ್‌ಗಳಿಗೆ ಹಾನಿಯಾಯಿತು. ಸರ್ಕಾರಿ ಕಚೇರಿ ಮತ್ತು ಲೈಬ್ರರಿಗಳು ಹಾನಿಗೊಂಡವು. 3000ದಷ್ಟು ಮಂದಿಯನ್ನು ಬಂಧಿಸಲಾಯಿತು. 500ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾದುವು. 144 ಸೆಕ್ಷನ್ ಜಾರಿಗೊಳಿಸಲಾಯಿತು. ಆದರೆ, ಇವರಾರ ಮನೆಯ ಮೇಲೂ ಬುಲ್ಡೋಜರ್ ಹರಿದಿಲ್ಲ ಮತ್ತು ಬಿಜೆಪಿಯಾಗಲಿ ಸಂಘಪರಿವಾರವಾಗಲಿ, ಬುಲ್ಡೋಜರ್ ಹರಿಸುವಂತೆ ಆಗ್ರಹಿಸಿಯೂ ಇಲ್ಲ.

ಆದರೆ ಪ್ರವಾದಿ ನಿಂದನೆಯಿಂದ ಪ್ರಚೋದನೆಗೊಂಡು ಬೀದಿಗಿಳಿದ ಉತ್ತರ ಪ್ರದೇಶದ ಮುಸ್ಲಿಮರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಾಗುತ್ತಿದೆ. ಇದಕ್ಕಿಂತ ತಿಂಗಳ ಮೊದಲು ದೆಹಲಿಯಲ್ಲೂ ಇಂಥದ್ದೇ ಕ್ರೌರ್ಯ ಎಸಗಲಾಗಿತ್ತು. ಮುಸ್ಲಿಮ್ ಬಾಹುಳ್ಯದ ಪ್ರದೇಶದ ಮೇಲೆ ಬಿಜೆಪಿ ಆಡಳಿತದ ನಗರ ಪಾಲಿಕೆ ಬುಲ್ಡೋಜರ್ ಹರಿಸಿತ್ತು. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶಕ್ಕೂ ಈ ಕ್ರೌರ್ಯ ವಿಸ್ತರಿಸಿತ್ತು. ಅಷ್ಟಕ್ಕೂ,

ಹಿಂಸಾತ್ಮಕ ಪ್ರತಿಭಟನೆಯನ್ನು ತೋರಿಸಿ ಬುಲ್ಡೋಜರನ್ನು ಸಮರ್ಥಿಸುವವರು, ಶಾಲೆಗೆ ಕಲ್ಲೆಸೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದವರ ಮನೆಯನ್ನೂ ಧ್ವಂಸಗೊಳಿಸುವಂತೆ ಆಗ್ರಹಿಸಬೇಕಿತ್ತಲ್ಲ? ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ತೀರ್ಪನ್ನು ವಿರೋಧಿಸಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದವರ ಮನೆಯನ್ನೂ ಧ್ವಂಸಗೊಳಿಸಲು ಆಗ್ರಹಿಸಬೇಕಿತ್ತಲ್ಲ? ಅಂದರೆ,

ಇಲ್ಲಿನ ಉದ್ದೇಶ ಸ್ಪಷ್ಟ. ಈ ಬುಲ್ಡೋಜರ್ ಮುಸ್ಲಿಮರ ವಿರುದ್ಧ ಮಾತ್ರ ಹರಿಯುತ್ತದೆ. ಮಾತ್ರವಲ್ಲ, ಬಿಜೆಪಿ ಸರ್ಕಾರದ ವಿರುದ್ಧ ಯಾರೆಲ್ಲ ಮಾತಾಡುತ್ತಾರೋ ಮತ್ತು ಹೋರಾಡುತ್ತಾರೋ ಅವರನ್ನೇ ಈ ಬುಲ್ಡೋಜರ್ ಗುರಿಯಾಗಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ,

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಜಾವೇದ್ ಅಹ್ಮದ್. ಇವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಥಳೀಯ ಮುಖಂಡರು. ಅದಕ್ಕಿಂತಲೂ ಮುಖ್ಯವಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಈಗಿನ ಚುನಾಯಿತ ಸದಸ್ಯೆ ಮತ್ತು ಅಲಿಘಡ್ ಮುಸ್ಲಿಮ್ ಮಹಿಳಾ ಯುನಿವರ್ಸಿಟಿಯ ಮಾಜಿ ಅಧ್ಯಕ್ಷೆ ಅಫ್ರೀನ್ ಫಾತಿಮಾರ ತಂದೆ. ಎನ್‌ಆರ್‌ಸಿ ಹೋರಾಟದಲ್ಲಿ ಈ ಅಫ್ರೀನ್ ಫಾತಿಮಾ, ಅವರ ತಂದೆ, ತಾಯಿ ಮತ್ತು ಸಹೋದರಿ ಸಕ್ರಿಯವಾಗಿ ಭಾಗವಹಿಸಿದ್ದರು. ಅನೇಕ ವೇದಿಕೆಗಳಲ್ಲಿ ಈ ಅಫ್ರೀನ್ ಫಾತಿಮಾ ಮಾತಾಡಿದ್ದರು. ಇದೀಗ ಇವರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸ ಮಾಡಲಾಗಿದೆ. ಈ ಧ್ವಂಸಕ್ಕಿಂತ ಒಂದು ದಿನ ಮೊದಲು ಪ್ರತಿಭಟನೆಯ ನೆಪದಲ್ಲಿ ಅಫ್ರೀನ್‌ರ ತಂದೆ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿತ್ತು. ಈ ಮನೆ ಅಕ್ರಮ ಎಂಬುದು ಬುಲ್ಡೋಜರ್ ಹರಿಸಿದವರ ಸಮರ್ಥನೆ. ಆದರೆ ಈ ಸಮರ್ಥನೆ ಪರಮ ಸುಳ್ಳು ಅನ್ನುವುದಕ್ಕೆ ಅವರ ಬಂಧನ ಮತ್ತು ಮರುದಿನದ ಬುಲ್ಡೋಜರೇ ಅತ್ಯುತ್ತಮ ಪುರಾವೆ. ಒಂದುವೇಳೆ ಆ ಮನೆ ಅಕ್ರಮವೇ ಆಗಿದ್ದರೆ ಇಷ್ಟು ಸಮಯ ತಡ ಮಾಡಿದ್ದೇಕೆ? ರಾತ್ರಿ ಹಗಲಾಗುವುದರ ನಡುವೆ ಆ ತಾರಸಿ ಮನೆಯನ್ನು ಕಟ್ಟಲು ಸಾಧ್ಯವೇ? ಕಳೆದ 25 ವರ್ಷಗಳಿಂದ ನಾವು ಆ ಮನೆಗೆ ತೆರಿಗೆ ಕಟ್ಟುತ್ತಿದ್ದೇವೆ ಎಂದು ಅಫ್ರೀನ್ ಫಾತಿಮಾ ಹೇಳಿದ್ದಾರೆ. ಕಟ್ಟಡ ಅಕ್ರಮ ವೆಂದಾದರೆ ತೆರಿಗೆ ಸಕ್ರಮ ಹೇಗಾಗುತ್ತದೆ? ಕಳೆದ 25 ವರ್ಷಗಳಿಂದ ಸರ್ಕಾರ ಯಾವ ಆಧಾರದಲ್ಲಿ ತೆರಿಗೆ ಸ್ವೀಕರಿಸಿದೆ? ಆ ತೆರಿಗೆಯೇ ಆ ಮನೆ ಸಕ್ರಮ ಎಂಬುದಕ್ಕೆ ಪುರಾವೆ ಅಲ್ಲವೇ? ಒಂದುವೇಳೆ ಅಕ್ರಮವೇ ಆಗಿದ್ದರೆ, 25 ವರ್ಷಗಳಿಂದ ತೆರಿಗೆ ಸ್ವೀಕರಿಸಿದ ಮತ್ತು ಆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ನಿಜವಾಗಿ,

ಪ್ರಭುತ್ವ ಜನಾಂಗ ವಿರೋಧಿಯಾದರೆ ಏನಾಗಬಹುದು ಎಂಬುದರ ಸೂಚನೆ ಇದು. ಜನಾಂಗ ವಿರೋಧಿ ಸರ್ಕಾರವು ಯಾವುದೇ ಪ್ರಕರಣವನ್ನು ಎರಡು ರೀತಿಯಾಗಿ ವಿಭಜಿಸುತ್ತದೆ. ಅವರದು ಮತ್ತು ನಮ್ಮದು. ನಮ್ಮದು ಸಹ್ಯ ಮತ್ತು ಅವರದು ಅಸಹ್ಯ ಎಂದು ಮರು ವಿಂಗಡನೆಯನ್ನೂ ಮಾಡುತ್ತದೆ. ಉತ್ತರ ಪ್ರದೇಶದ ಬುಲ್ಡೋಜರ್‌ನ ಹಿಂದಿರುವುದು ಇದೇ ಲೆಕ್ಕಾಚಾರ. ಅಂದಹಾಗೆ,

ಮುಸ್ಲಿಮರು ಹೀಗೇಕೆ ಎಂಬ ಪ್ರಶ್ನೆಯು ಪ್ರವಾದಿ ನಿಂದನೆಯನ್ನು ಖಂಡಿಸಿ ಮುಸ್ಲಿಮರು ನಡೆಸಿದ ಪ್ರತಿಭಟನೆಯ ಬಳಿಕ ಹುಟ್ಟಿಕೊಂಡಿದೆ. ಈ ಪ್ರಶ್ನೆ ಕುಚೋದ್ಯದ್ದಲ್ಲ, ನಿರ್ಲಕ್ಷಿಸಬೇಕಾದದ್ದೂ ಅಲ್ಲ. ಪ್ರತಿಭಟನೆ ಪ್ರತಿಯೋರ್ವರ ಹಕ್ಕು ಎಂದು ಹೇಳುವಾಗ, ಕಾನೂನು ಪಾ ಲಿಸಬೇಕಾದುದು ಪ್ರತಿಯೋ ರ್ವನ ಕರ್ತವ್ಯ ಎಂದೂ ಹೇಳಬೇಕಾಗುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳ ನಡುವೆ ಹೊಂದಾಣಿಕೆ ಆಗ ದಿದ್ದರೆ ಏನಾಗಬಹುದು ಎಂಬುದಕ್ಕೆ ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯೇ ಸಾಕ್ಷಿ. ಈ ಪ್ರತಿಭಟನೆಗೆ ಯಾರು ಕರೆ ಕೊಟ್ಟಿದ್ದಾರೆ ಎಂಬುದೇ ಸ್ಪಷ್ಟವಿಲ್ಲ. ಆದರೆ ಈ ಪ್ರತಿಭಟನೆಯಲ್ಲಿ ಎಸೆಯಲಾದ ಕಲ್ಲು ದೇಶದಾದ್ಯಂತ ಚರ್ಚೆಗೊಳಗಾಗಿದೆ. ಮುಸ್ಲಿಮರು ಹಿಂಸಾಪ್ರಿಯರು ಎಂದು ಮುದ್ರೆಯೊತ್ತಲು ಕಾದಿರುವವರಿಗೆ ಬೇಕಾದ ಪುರಾವೆಗಳನ್ನು ಸ್ವತಃ ಮುಸ್ಲಿಮರೇ ಚಿನ್ನದ ತಟ್ಟೆಯಲ್ಲಿಟ್ಟು ಕೊಟ್ಟು ಬಿಟ್ಟಿದ್ದಾರೆ. ಈ ಪ್ರತಿಭಟನೆಗಿಂತ ಮೊದಲು ಸುಮಾರು 17 ರಾಷ್ಟ್ರಗಳು ಭಾರತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದುವು. ನೂಪುರ್ ಮತ್ತು ಜಿಂದಾಲ್‌ರಿಂದಾಗಿ ಪ್ರಭುತ್ವ ತೀವ್ರ ಮುಜುಗರವನ್ನು ಎದುರಿಸುತ್ತಿತ್ತು.

ಆದರೆ ಮುಸ್ಲಿಮರು ನಡೆಸಿದ ಪ್ರತಿಭಟನೆ ಸರ್ಕಾರವನ್ನು ಮುಜುಗರಿಂದ ಪಾರು ಮಾಡಿತು. ಮುಸ್ಲಿಮರು ಪ್ರತಿಭಟನೆ ನಡೆಸಬೇಕು ಎಂದು ಬಯಸುವ ಪ್ರಭುತ್ವ ಇವತ್ತು ಅಧಿಕಾರದಲ್ಲಿದೆ ಮತ್ತು ಮುಸ್ಲಿಮರ ಪ್ರತಿಭಟನೆಯನ್ನು ಹೇಗೆ ಹಿಂದೂ ವಿರೋಧಿ ಮತ್ತು ದೇಶವಿರೋಧಿಯಾಗಿ ಚಿತ್ರಿಸಬೇಕೆಂದೂ ಅದಕ್ಕೆ ಗೊತ್ತಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮರ ಪ್ರತಿ ಹೆಜ್ಜೆಯೂ ಲೆಕ್ಕಾಚಾರದ್ದಾಗಿರಬೇಕು. ಪ್ರತಿಭಟನೆ ಮಾಡಲೇಬೇಕೆಂದಿದ್ದರೆ ಆ ಪ್ರತಿಭಟನೆಯನ್ನು ಸಮಾಜದ್ರೋಹಿಗಳು ಕೈವಶ ಮಾಡಿಕೊಳ್ಳದಂತೆ ಸರ್ವ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿಭಟನೆಯನ್ನು ಆಯೋಜಿಸುವಷ್ಟೇ ಆ ಪ್ರತಿಭಟನೆ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದೂ ಮುಖ್ಯ. ಮಾಧ್ಯಮಗಳ ಕ್ಯಾಮರಾಗಳು ದೇಶಪ್ರೇಮಿ ಘೋಷಣೆ, ನ್ಯಾಯಯುತ ಹಕ್ಕುಗಳ ಬೇಡಿಕೆಯತ್ತ ತಿರುಗುವುದಿಲ್ಲ. ಎಲ್ಲಿ ಕಾನೂನು ವಿರೋಧಿ ಕೃತ್ಯಗಳಾಗುತ್ತೆ ಎಂಬುದನ್ನು ಹುಡುಕುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಪ್ರತಿಭಟನೆಗಿಳಿದವರು ಮೈಯೆಲ್ಲ ಕಣ್ಣಾಗಿರಬೇಕಾದುದು ತೀರಾ ಅಗತ್ಯ. ಯಾವ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುವ ವರ್ತನೆ ಖಂಡನಾರ್ಹ.

ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯು ಮುಸ್ಲಿಮರ ಪರ ಅನುಕಂಪದ ಬದಲು ಅಸಮಾಧಾನವನ್ನು ಹೆಚ್ಚಿಸಿದೆ. ಈ ವಿಷಯದಲ್ಲಿ ಮುಸ್ಲಿಮರ ಪರ ಧ್ವನಿಯೆತ್ತುತ್ತಿದ್ದವರ ಧ್ವನಿಯನ್ನೂ ಮೌನವಾಗಿಸಿದೆ. ಇದು ಮುಸ್ಲಿಮ್ ಸಮುದಾಯದ ಸ್ವಯಂಕೃತಾ ಪರಾಧ. ಕಾನೂನನ್ನು ಪಾಲಿಸದ ಯಾವ ಸಮುದಾಯವೂ ಸಾರ್ವಜನಿಕರಿಂದಾಗಲಿ, ನ್ಯಾಯಾಂಗದಿಂದಾಗಲಿ ಅಥವಾ ನ್ಯಾಯದ ಪರ ಧ್ವನಿಯೆತ್ತುವ ಮನುಷ್ಯ ಪ್ರೇಮಿಗಳಿಂದಾಗಲಿ ಬೆಂಬಲ ಗಿಟ್ಟಿಸಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವುದಕ್ಕೆ ನ್ಯಾಯಯುತವಾದ ಮಾರ್ಗವನ್ನೇ ಆಯ್ದುಕೊಳ್ಳಬೇಕು. ಪ್ರವಾದಿ ನಿಂದನೆಗೆ ಸಂಬಂಧಿಸಿದ ಪ್ರತಿಭಟನೆಯಿಂದ ಮುಸ್ಲಿಮರಿಗೆ ಏನು ದಕ್ಕಿದೆ ಎಂದು ಅವಲೋಕಿಸಿದರೆ, ಲಾಠಿ ಏಟು, ಜೀವ ಹಾನಿ, ಜೈಲು, ಆಸ್ತಿ-ಪಾಸ್ತಿ ನಷ್ಟ ಇತ್ಯಾದಿಗಳು ಮಾತ್ರ. ಜೈಲಲ್ಲಿರಬೇಕಾಗಿದ್ದು ನೂಪುರ್ ಶರ್ಮ ಮತ್ತು ಜಿಂದಾಲ್. ಆದರೆ, ಇವತ್ತು ಮುಸ್ಲಿಮರು ಜೈಲಲ್ಲಿದ್ದಾರೆ. ಲಾಠಿಯೇಟಿಗೆ ಗುರಿಯಾಗಿದ್ದಾರೆ. ಆದರೆ, ಜೈಲಲ್ಲಿರಬೇಕಾದವರು ಹೊರಗಡೆಯಿದ್ದಾರೆ. ಇದಕ್ಕೆ ಪ್ರಭುತ್ವವನ್ನಷ್ಟೇ ದೂರಿ ಪ್ರಯೋಜನವಿಲ್ಲ. ಮುಸ್ಲಿಮರ ಪಾಲೂ ಇದರಲ್ಲಿದೆ. ತಮ್ಮ ಮಾತು, ವರ್ತನೆಗಳಿಂದ ಈ ದೇಶದ ಜನರ ಹೃದಯದಲ್ಲಿ ಜಾಗ ಗಿಟ್ಟಿಸಿಕೊಳ್ಳಬೇಕಿದ್ದ ಮುಸ್ಲಿಮರು, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಅಪಾಯಕಾರಿ. ಇದು ಬದಲಾಗಲಿ.

No comments:

Post a Comment