Tuesday, 14 June 2022

ನಿಜಕ್ಕೂ, ಈ ದೇಶದ ಶತ್ರು ಯಾರು?

 



ಈ ದೇಶದ ಶತ್ರು ಯಾರು ಎಂದು ಯಾರಲ್ಲಾದರೂ ಕೇಳಿದರೆ, ತಕ್ಷಣಕ್ಕೆ ಸಿಗಬಹುದಾದ ಉತ್ತರ- ಪಾಕಿಸ್ತಾನ. ಅದುಬಿಟ್ಟರೆ ಚೀನಾ. ಆದರೆ ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ಬಿಡುಗಡೆಗೊಳಿಸುವ ವರದಿಯನ್ನು ಪರಿಶೀಲಿಸಿದರೆ, ಶತ್ರು ನಮ್ಮ ಬಗಲಲ್ಲೇ ಇದ್ದಾನೆ ಎಂಬುದು ಮನವರಿಕೆಯಾಗುತ್ತದೆ. ಈ ದೇಶದ ರಸ್ತೆಗಳೇ ಈ ದೇಶದ ಪಾಲಿಗೆ ಅತಿದೊಡ್ಡ ಶತ್ರು. ಈ ದೇಶ ಪಾಕ್ ಮತ್ತು ಚೀನಾಗಳ ಜೊತೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದ್ದರೂ ರಸ್ತೆ ಅಪಘಾತಕ್ಕೆ ಸಂಬಂಧಿಸಿ ವರ್ಷವೊಂದರಲ್ಲಿ ಆಗುತ್ತಿರುವ ಸಾವುಗಳಿಗೆ ಹೋ ಲಿಸಿದರೆ, ಯುದ್ಧದಲ್ಲಿನ ಸಾವಿನ ಪ್ರಮಾಣ ಕಡಿಮೆ.

ಈ ದೇಶದಲ್ಲಿ ಪ್ರತಿದಿನ 377 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗುತ್ತಾರೆ ಎಂದು ಕೇಂದ್ರ ಗೃಹ ಇಲಾಖೆಯ 2021ರ ವರದಿ ಹೇಳುತ್ತದೆ. 2021ರಲ್ಲಿ ಒಟ್ಟು 4,43,110 ರಸ್ತೆ ಅಪಘಾತಗಳಾಗಿವೆ. ಅಂದರೆ ಪ್ರತಿದಿನ 1214 ರಸ್ತೆ ಅಪಘಾತಗಳು, ಸಾವಿನ ಪ್ರಮಾಣ 1,37,605. ಈ ಸಾವುಗಳ ಪೈಕಿ 25% ಸಾವುಗಳು ಕೂಡಾ ದ್ವಿಚಕ್ರ ವಾಹನ ಸವಾರರದ್ದು. ಪ್ರತಿದಿನ 14 ವರ್ಷಕ್ಕಿಂತ ಕೆಳಗಿನ 20 ಮಕ್ಕಳು ಸಾವಿಗೀಡಾಗುತ್ತಾರೆ ಎಂದು ವರದಿ ಹೇಳುತ್ತದೆ. ಪ್ರತಿ ಒಂದು ನಿಮಿಷಕ್ಕೆ ಒಂದು ಅತಿಗಂಭೀರ ಅಪಘಾತ ಸಂಭವಿಸುತ್ತದೆ. ಪ್ರತಿಗಂಟೆಗೆ 10 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಹಾಗಂತ,

ಈ ಅಂಕಿ ಅಂಶಗಳಲ್ಲಿ ಸಣ್ಣ-ಪುಟ್ಟ ಅಪಘಾತಗಳು, ರಾಜಿ ಪಂಚಾತಿಕೆಯಲ್ಲಿ ಇತ್ಯರ್ಥಗೊಂಡ ಅಪಘಾತ ಪ್ರಕರಣಗಳು ಸೇರಿಲ್ಲ. ಪೊ ಲೀಸು ಠಾಣೆಯಲ್ಲಿ ಅಧಿಕೃತವಾಗಿ ನೋಂದಣಿಯಾದ ಪ್ರಕರಣಗಳ ವಿವರವಷ್ಟೇ ಇಲ್ಲಿದೆ. ವಿಷಾದ ಏನೆಂದರೆ,

ಅಪಘಾತದಲ್ಲಿ ಸಾವಿಗೀಡಾಗುವವರು ಮತ್ತು ಗಾಯಗೊಳ್ಳುವವರಲ್ಲಿ ಯುವಕರೇ ಹೆಚ್ಚು ಎಂಬುದು. ಅದರಲ್ಲೂ ದ್ವಿಚಕ್ರ ವಾಹನ ಚಲಾಯಿಸುವ, ಚಿಗುರು ಮೀಸೆಯ ಪೋರರೇ ಹೆಚ್ಚು. ರಸ್ತೆ ಅಪಘಾತಕ್ಕೆ ಸಂಬAಧಿಸಿ ಬಿಡುಗಡೆಗೊಳಿಸಲಾದ ವರದಿಯಲ್ಲಿ, ಅದಕ್ಕೆ ಕಾರಣವಾದ ಅಂಶಗಳ ವಿವರಗಳೂ ಇವೆ. ಅದರಲ್ಲಿ ಅತೀವೇಗದ ಚಾಲನೆಗೆ ಮೊದಲ ಸ್ಥಾನ ಲಭ್ಯವಾಗಿದೆ. ಒಟ್ಟು ಅಪಘಾತ ಗಳ ಪೈಕಿ 60% ಅಪಘಾತಗಳಿಗೂ ಅತಿ ವೇಗದ ಚಾಲನೆಯೇ ಕಾರಣ ಎಂದು ವರದಿ ಹೇಳುತ್ತದೆ. 2020ರಲ್ಲಿ ನಡೆದ ಒಟ್ಟು 3,54,796 ಅ ಪಘಾತಗಳ ಪೈಕಿ 75,383 ಅಪಘಾತಗಳಿಗೆ ಅತಿ ವೇಗದ ಚಾಲನೆಯೇ ಕಾರಣ ಎಂಬುದು ಕೇಂದ್ರ ಸರ್ಕಾರದ ವರದಿಯಲ್ಲಿರುವ ಬಹುಮುಖ್ಯ ಅಂಶ. ಇದನ್ನು ಇನ್ನಷ್ಟು ಸರಳೀಕರಿಸಿ ಹೇಳುವುದಾದರೆ, ರಸ್ತೆ ಅಪಘಾತಕ್ಕೆ ಬಲಿಯಾದ ಒಟ್ಟು 1,33,201 ಮಂದಿಯ ಪೈಕಿ 75,333 ಮಂದಿಯ ಸಾವಿಗೂ ಅತಿವೇಗದ ಚಾಲನೆಯೇ ಕಾರಣ.

ಹಾಗೆಯೇ 3,35,201 ಮಂದಿಗಾದ ಗಾಯಗಳ ಪೈಕಿ 2,09,736 ಮಂದಿಯ ಗಾಯಕ್ಕೂ ಅತಿವೇಗದ ಚಾಲನೆಯೇ ಕಾರಣ.

ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ, ಸಂತ್ರಸ್ತರು. ಒಟ್ಟು ಸಂತ್ರಸ್ತರ ಪೈಕಿ 43.6% ಮಂದಿ ದ್ವಿಚಕ್ರ ವಾಹನ ಸವಾರರಾದರೆ, 13.2% ಸಂತ್ರಸ್ತರು ಕಾರು ಸವಾರರು. ಇನ್ನು ಓವರ್ ಟೇಕಿಂಗ್ ಮತ್ತು ಅತಿವೇಗವಾಗಿ ವಾಹನ ಚಲಾಯಿಸಿದ್ದರಿಂದಾಗಿ 24.3% ಅ ಪಘಾತಗಳಾಗಿದ್ದು, ಕೇವಲ ಈ ಕಾರಣದಿಂದಾಗಿಯೇ 35,219 ಮಂದಿ ಸಾವಿಗೀಡಾಗಿದ್ದಾರೆ. 77,067 ಮಂದಿ ಕೇವಲ ಈ ಓವರ್ ಟೇಕಿಂಗ್ ಚಲಾವಣೆಯಿಂದಾಗಿ ಗಾಯಗೊಂಡಿದ್ದಾರೆ. ಅಷ್ಟಕ್ಕೂ,
ಈ ವರೆಗಿನ ರಸ್ತೆ ಅಪಘಾತಗಳಿಗೆ ಕಾರಣವಾದ ಅಂಶಗಳ ಕೂಲಂಕಷ ಪರಿಶೀಲನೆ ನಡೆಸಿದಾಗ ಸಿಕ್ಕ ಫಲಿತಾಂಶ ಏನೆಂದರೆ, ಅತಿವೇಗ, ಕುಡಿತ, ರಸ್ತೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಇರುವುದು, ತಪ್ಪು ಕಡೆಯಿಂದ ಓವರ್ ಟೇಕಿಂಗ್ ಮತ್ತು ನಿರ್ಲಕ್ಷ್ಯ ಚಲಾವಣೆ- ಇತ್ಯಾದಿಗಳೇ ಅಪಘಾತಕ್ಕೆ ಕಾರಣ ಎಂಬುದು ಪತ್ತೆಯಾಗಿದೆ. ನಿಜವಾಗಿ,

ಯಾವುದೇ ಅಪಘಾತವು- ಅಪಘಾತ ಎಂಬ ನಾಲ್ಕಕ್ಷರಕ್ಕಿಂತ ಆಚೆಗಿನ ಹಲವು ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಪರಿಣಾಮಗಳ ನ್ನು ತಂದೊಡ್ಡುವ ಗಂಭೀರ ಸಮಸ್ಯೆಯಾಗಿದೆ. ಪ್ರತಿವರ್ಷ ಸರಾಸರಿ ಒಂದೂವರೆ ಲಕ್ಷದಷ್ಟು ಮಾನವ ಸಂಪನ್ಮೂಲವನ್ನು ಈ ದೇಶ ಕಳಕೊಳ್ಳುತ್ತಿದೆ ಎಂಬುದು ರಸ್ತೆ ಅಪಘಾತದ ಒಂದು ಮುಖವಾದರೆ, ಹೀಗೆ ಕಳಕೊಳ್ಳುವವರಲ್ಲಿ ದೊಡ್ಡ ಸಂಖ್ಯೆ ದುಡಿಯುವ ಪ್ರಾಯದ ಯುವಕರದ್ದು ಎಂಬುದು ಇನ್ನೊಂದು ಮುಖ ಮತ್ತು ಇದುವೇ ಅತ್ಯಂತ ಗಂಭೀರ ವಿಶ್ಲೇಷಣೆಗೆ ಒಳಗಾಗಬೇಕಾದ ಭಾಗ. ಈ ದೇಶದ ಜಿಡಿಪಿಗೆ ದುಡಿಯುವ ಪ್ರಾಯದ ಯುವಕರ ಕೊಡುಗೆ ಬಹಳ ದೊಡ್ಡದು. ದೇಶದ ಅಭಿವೃದ್ಧಿಯಲ್ಲಿ ಇವರು ಎಸಗುವ ಪಾತ್ರ ಬಹಳ ಮುಖ್ಯ. ದುಡಿಯುವ ಪ್ರಾಯದ ವ್ಯಕ್ತಿಯೋರ್ವ ರಸ್ತೆ ಅಪಘಾತಕ್ಕೆ ತುತ್ತಾಗುವುದರ ನೇರ ಪರಿಣಾಮ ಆತನನ್ನು ಅವಲಂಬಿಸಿದ ಕುಟುಂಬದ ಮೇಲಾಗುತ್ತದೆ. ಆವರೆಗೆ ಇತರರನ್ನು ಅವಲಂಬಿಸದೆ ಬದುಕುತ್ತಿದ್ದ ಕುಟುಂಬವೊಂದು ಆ ಬಳಿಕ ಅತಂತ್ರವಾಗುವುದಕ್ಕೆ ಅವಕಾಶ ಇರುತ್ತದೆ. ಆ ಕುಟುಂಬದ ಮಕ್ಕಳ ಕಲಿಕೆಯ ಮೇಲೆ ಅದು ಪರಿಣಾಮ ಬೀರುತ್ತದೆ. ಸಂತಸದ ಬದುಕು ಒಮ್ಮೆಲೇ ದುಃಖಸ್ಥಿತಿಗೆ ಜಾರುತ್ತದೆ. ಮನೆಯ ವರಮಾನದಲ್ಲಿ ಕುಸಿತವಾಗುವುದರ ಜೊತೆಗೇ ನಿತ್ಯದ ಬದುಕಿಗೆ ಸರ್ಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದು ಸರ್ಕಾರಕ್ಕೂ ಹೊರೆ. ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪಾಲು ಸುಮಾರು 25% ಎಂಬುದೇ ಪ್ರತಿವರ್ಷ ಈ ದೇಶದ ಯುವ ಸಮೂಹದ ಮೇಲೆ ಆಗುತ್ತಿರುವ ಆಘಾತಗಳನ್ನು ಹೇಳುತ್ತದೆ. ದ್ವಿಚಕ್ರ ಚಲಾಯಿಸುವವರಲ್ಲಿ ಹೆಚ್ಚಿನವರು ಯುವ ಪ್ರಾಯದವರು ಮತ್ತು 50 ವರ್ಷಕ್ಕಿಂತ ಒಳಗಿನವರು. ಈ ದೇಶದ ಪಾಲಿಗೆ ಈ ಪ್ರಾಯ ಬಹಳ ಮುಖ್ಯ. ದುಡಿಯುವ ಸಾಮರ್ಥ್ಯವಿರುವ ಇವರನ್ನು ಕಳಕೊಳ್ಳುವುದೆಂದರೆ, ದೇಶದಲ್ಲಿ ಪ್ರತಿ ವರ್ಷ ಬಹುದೊಡ್ಡ ಸಂತ್ರಸ್ತ ಪಡೆಯನ್ನು ತಯಾರಿಸುವುದೆಂದೇ ಅರ್ಥ. ಸ್ವಯಂ ದುಡಿಮೆಯಿಂದ ಬದುಕುತ್ತಿದ್ದ ಕುಟುಂಬಗಳು ದಿಢೀರನೆ ಪರಾವಲಂಬಿಯಾಗುವ ಈ ಸ್ಥಿತಿ ಅತ್ಯಂತ ಅಪಾಯಕಾರಿ. ಇದು ಸೃಷ್ಟಿಸುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಸಣ್ಣದಲ್ಲ. ಆದ್ದರಿಂದ,

ರಸ್ತೆ ಅಪಘಾತಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅಪಘಾತ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಪೂರಕವಾದ ನಿಯಮಗಳನ್ನು ಕಠಿಣಗೊಳಿಸಬೇಕು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕ್ರಮಗಳನ್ನು ಜಾರಿಗೆ ತರಬೇಕು. ಅದೇವೇಳೆ, ಅಪಘಾತಗಳಿಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳು ಮತ್ತು ಅತ್ಯಂತ ಕಳಪೆ ರಸ್ತೆಗಳ ಕೊಡುಗೆಯೇನೂ ಕಡಿಮೆಯಿಲ್ಲ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೂ ಪ್ರತಿದಿನ ಮಾನವ ಸಂಪನ್ಮೂಲವನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಇವನ್ನು ತಡೆಯುವುದಕ್ಕಾಗಿ ರಸ್ತೆ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ಮೇಲೆ ನಿಗಾ ವಹಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ವಿದೇಶಗಳಲ್ಲಿ ಅದರಲ್ಲೂ ಯುಎಇಯಂಥ ಗಲ್ಫ್ ರಾಷ್ಟ್ರಗಳಲ್ಲಿ ರಸ್ತೆ ಕ್ಯಾಮರಾಗಳು ಅಪಘಾತಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿಭಾಯಿಸುತ್ತಿವೆ ಎಂಬುದು ದೃಢವಾಗಿದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಕಠಿಣ ದಂಡನೆಗೆ ಒಳಪಡಿಸಲು ಈ ಕ್ಯಾಮರಾಗಳು ಸಾಕಷ್ಟು ನೆರವು ನೀಡುತ್ತಿವೆ. ಅತಿವೇಗ, ಓವರ್ ಟೇಕಿಂಗ್, ಕೆಂಪು ದೀಪ ಉಲ್ಲಂಘನೆ ಇತ್ಯಾದಿಗಳ ಮೇಲೆ ನಿಗಾ ವಹಿಸುವುದಕ್ಕೆ ಈ ಕ್ಯಾಮರಾಗಳು ಸಹಕಾರಿಯಾಗಿವೆ. ಹಾಗೆಯೇ ತಪ್ಪಿತಸ್ಥರನ್ನು ಕಠಿಣ ದಂಡನೆಗೆ ಒಳಪಡಿಸುವುದೂ ಬಹಳ ಮುಖ್ಯ. ಇಂಥ ಕ್ರಮಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ತಮ್ಮನ್ನು ಸೆರೆಹಿಡಿಯಲು ಕ್ಯಾಮರಾಗಳಿವೆ ಎಂಬ ಪ್ರಜ್ಞೆಯು ವಾಹನ ಸವಾರರನ್ನು ಎಚ್ಚರಿಕೆಯಿಂದ ಚಲಾಯಿಸಲು ಪ್ರೇರೇಪಿಸುತ್ತದೆ. ಅಂದಹಾಗೆ,

ಪತ್ರಿಕೆಗಳು ಪ್ರತಿದಿನ ಪ್ರಕಟಿಸುವ ಅಪಘಾತಗಳ ಸಂಖ್ಯೆ ಮತ್ತು ಅದಕ್ಕೆ ತುತ್ತಾದವರ ಪ್ರಾಯವನ್ನು ನೀವೇ ಒಮ್ಮೆ ಗಮನವಿಟ್ಟು ಪರಿಶೀ ಲಿಸಿ. ದ್ವಿಚಕ್ರ ವಾಹನಗಳು ಮತ್ತು ಯುವಕರೇ ಇದರಲ್ಲಿ ಅಧಿಕ ಕಾಣಿಸುತ್ತಾರೆ. ಅಂದಹಾಗೆ, ರಸ್ತೆ ಉಬ್ಬುಗಳು ಮತ್ತು ಕಳಪೆ ರಸ್ತೆಗಳ ಮೇಲೆ ಆರೋಪ ಹೊರಿಸುವುದರಿಂದ ಈ ಜೀವಗಳು ಮರಳಿ ಬರಲಾರವು. ಪ್ರತಿ ಮನೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯುವಕರನ್ನು ಕೂರಿಸಿ ಹೆತ್ತವರು ಪದೇಪದೇ ಎಚ್ಚರಿಕೆಯನ್ನು ನೀಡುತ್ತಿರಬೇಕು. ಪ್ರತಿಬಾರಿ ವಾಹನವೇರುವ ಮೊದಲು ಯುವಕರ ಕಿವಿಯಲ್ಲಿ ಗುಂಯ್‌ಗುಡುವಷ್ಟು ಈ ಎಚ್ಚರಿಕೆಯ ಪಾಠ ಪರಿಣಾಮಕಾರಿಯಾಗಿರಬೇಕು.

No comments:

Post a Comment