Tuesday, 14 June 2022

ಪುತ್ರಿ ರೇಶ್ಮಾಳನ್ನು ಕೊಂದ ತಾಯಿ ವಿಮಲಾ!

 



ಆತ್ಮಹತ್ಯೆಯೊಂದು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಬೇಕಾದರೆ ಒಂದೋ ಆತ್ಮಹತ್ಯೆ ಮಾಡಿದವರು ಕೆಫೆ ಕಾಫಿ ಡೇಯ ಸಿದ್ದಾರ್ಥ ಆಗಿರಬೇಕು ಅಥವಾ ಸುಶಾಂತ್ ಸಿಂಗ್ ರಾಜಪೂತ್‌ರಂಥ ಸಿನಿಮಾ ನಟರಾಗಿರಬೇಕು. ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮುಂತಾದವರ ಆತ್ಮಹತ್ಯೆಗೂ ಒಂದು ಕಿಮ್ಮತ್ತು ಇರುತ್ತದೆ. ಅವರ ಆತ್ಮಹತ್ಯೆಯನ್ನು ಮುಖಪುಟದಲ್ಲಿಟ್ಟು ಪತ್ರಿಕೆಗಳು ಒಂದರ್ಧ ದಿನ ಚರ್ಚಿಸುವ ಆಸಕ್ತಿ ತೋರಿಸುವುದಿದೆ. ಆದರೆ, ಜನಸಾಮಾನ್ಯರ ಆತ್ಮಹತ್ಯೆಗೆ ಮುಖಪುಟ ಬಿಡಿ, ಒಳಪುಟದಲ್ಲಿ ತೀರಾ ಒಂದು ಕಾಲಮ್ ನೀಡುವುದಕ್ಕೂ ಪತ್ರಿಕೆಗಳು ಕಂಜೂಸ್‌ತನ ತೋರಿಸುತ್ತವೆ. ಕಳೆದವಾರ,

ಬಹುತೇಕ ಪತ್ರಿಕೆಗಳ ಒಳಪುಟದಲ್ಲಿ ಒಂದು ಕಾಲಮ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ನಾವೆಲ್ಲರೂ ತುಸು ಪುರುಸೊತ್ತು ಮಾಡಿಕೊಂಡು ಜಿಜ್ಞಾಸೆಗೊಳಪಡಿಸಬೇಕಾದಷ್ಟು ಮಹತ್ವದ್ದಾಗಿತ್ತು. ಕಾಸರಗೋಡು ಸಮೀಪದ 58 ವರ್ಷದ ವಿಮಲಾ ಎಂಬ ತಾಯಿ ತನ್ನ 28 ವರ್ಷದ ಪುತ್ರಿ ರೇಶ್ಮಾಳನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಪ್ರಕಟವಾದ ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಗೆ ಸಂಬಂಧಿಸಿ ಆತ್ಮಹತ್ಯೆಯ ಅಂಕಿ-ಅಂಶ ಪ್ರಕಟವಾಯಿತು. 2022 ಜನವರಿಯಿಂದ ಮೇ ತಿಂಗಳ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯೊಂದರಲ್ಲೇ ಒಟ್ಟು 281 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ, ಈ 281 ಮಂದಿಯ ಪೈಕಿ ಅರ್ಧದಷ್ಟು ಮಂದಿಯ ಪ್ರಾಯ 20ರಿಂದ 40. ಅಂದಹಾಗೆ, ಕೊರೋನಾ ಅತ್ಯಂತ ತೀವ್ರವಾಗಿ ಅಪ್ಪಳಿಸಿದ್ದ 2020ರ ಜನವರಿಯಿಂದ ಜೂನ್‌ವರೆಗಿನ 6 ತಿಂಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 100ರಷ್ಟಿತ್ತು. 2020ರ ಕೊನೆಯಲ್ಲಿ ಈ ಸಂಖ್ಯೆ 743ಕ್ಕೆ ಏರಿತ್ತು. 2021ರಲ್ಲಿ ಈ ಸಂಖ್ಯೆ 828ಕ್ಕೆ ನೆಗೆದಿತ್ತು. ಇದೀಗ 2022ರ ಆರಂಭಿಕ 5 ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿವರ ಸಂಖ್ಯೆ 281ಕ್ಕೆ ಮುಟ್ಟಿದೆ. ಇದೇವೇಳೆ,

ಪುತ್ರಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವಿಮಲಾ ಎಂಬ ತಾಯಿಯ ಪ್ರಕರಣವನ್ನೂ ಇಲ್ಲಿ ಎತ್ತಿಕೊಳ್ಳಬಹುದು. ತಾಯಿ ವಿಮಲಾ ಆರೋಗ್ಯವಂತೆಯಾಗಿದ್ದರೂ ಪುತ್ರಿ ರೇಶ್ಮಾ ಎಂಡೋಸಲ್ಫಾನ್ ಪೀಡಿತೆ. ಅದೊಂದು ಮುಗಿಯದ ಕಾಯಿಲೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ಈ ಎಂಡೋಸಲ್ಫಾನ್ ಮಾಡಿರುವ ಅನಾಹುತ ಸಣ್ಣದಲ್ಲ. ದೊಡ್ಡದೊಂದು ಸಂತ್ರಸ್ತ ಗುಂಪನ್ನೇ ಅದು ಸೃಷ್ಟಿಸಿಬಿಟ್ಟಿದೆ. ದ್ವಿತೀಯ ಮಹಾಯುದ್ಧದ ಅಣುಬಾಂಬ್‌ನ ವಿಕಿರಣಕ್ಕೆ ತುತ್ತಾದವರು ಮತ್ತು ಆನಂತರದ ಪೀಳಿಗೆ ಹೇಗೆ ವಿವಿಧ ಅಂಗವೈಕಲ್ಯಕ್ಕೆ ತುತ್ತಾಗಿ ನರಕಸದೃಶ ಬದುಕು ನಡೆಸಬೇಕಾಯಿತೋ ಅಂಥದ್ದೇ ಒಂದು ದುರಂತ ಬದುಕು ಈ ಎಂಡೋಸಲ್ಫಾನ್ ಪೀಡಿತರದ್ದು. ಗಡಿಪ್ರದೇಶದ ಸಾಕಷ್ಟು ಮನೆಗಳು ಇಂಥವರಿಂದ ತುಂಬಿಕೊಂಡಿದೆ. ಎಂಡೋಸಲ್ಫಾನ್‌ನಿಂದ ಅವರ ಮೇಲೆ ಆಗಿರುವ ದುಷ್ಪರಿಣಾಮಗಳಿಗೆ ಹೋಲಿಸಿದರೆ, ಸರ್ಕಾರದ ವತಿಯಿಂದ ಅವರಿಗೆ ಲಭಿಸಿರುವ ಪರಿಹಾರ ಸೌಲಭ್ಯಗಳು ಶೂನ್ಯ ಅನ್ನುವಷ್ಟು ಕಡಿಮೆ. ಕೆಲವು ವರ್ಷಗಳ ಹಿಂದೆ ಈ ಸಂತ್ರಸ್ತರು ವಿನೂತನ ಪ್ರತಿಭಟನೆಯನ್ನು ನಡೆಸಿದರು. ಸರ್ಕಾರದ ಗಮನ ಸೆಳೆಯಲೆಂದು ಬೆಂಗಳೂರಿಗೂ ಹೋದರು. ಅಂದಹಾಗೆ,

ತನ್ನದೇ ಪ್ರಜೆಗಳನ್ನು ಜೀವಚ್ಛವವಾಗಿ ಬದುಕುವಂತೆ ಮಾಡಿದ ಸರ್ಕಾರವು ಒಂದಿಷ್ಟು ಪುಡಿಗಾಸನ್ನು ಎಸೆದು ಕೈ ತೊಳೆದುಕೊಳ್ಳಬಹುದು. ಆದರೆ, ಎಂಡೋಸಲ್ಫಾನ್ ಎಂಬ ರಾಸಾಯನಿಕದ ಅಡ್ಡ ಪರಿಣಾಮವನ್ನು ಈ ಸರ್ಕಾರದ ಮಂದಿಗೆ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಆ ಸಂತ್ರಸ್ತರೇ ಅನುಭವಿಸಬೇಕು. ಜೀವನಪೂರ್ತಿ ಇನ್ನೊಬ್ಬರನ್ನು ಅವಲಂಬಿಸಿಕೊAಡು ಬದುಕುವುದೆಂದರೆ, ಅದು ಕೊಡುವ ಮಾನಸಿಕ ಒತ್ತಡ ಸಣ್ಣದಲ್ಲ. ಇನ್ನು, ಈ ಎಂಡೋಸಲ್ಫಾನ್ ಅನೇಕ ಮನೆಗಳನ್ನು ಒಡೆದಿದೆ. ಎಂಡೋಪೀಡಿತ ಪತ್ನಿ-ಮಕ್ಕಳನ್ನು ಬಿಟ್ಟು ತೆರಳಿದ ಗಂಡಂದಿರಿದ್ದಾರೆ. ಒಂದು ಮನೆಯಲ್ಲಿ ಮಕ್ಕಳು ಮಾತ್ರ ಎಂಡೋ ಪೀಡಿತರಾದದ್ದಿದೆ. ಪತ್ನಿ ಮಾತ್ರ ಅಥವಾ ಪತಿ ಮಾತ್ರ ಎಂಡೋದ ದುಷ್ಪರಿಣಾಮಕ್ಕೆ ಒಳಗಾದದ್ದಿದೆ. ಕೆಲವೊಂದು ಮನೆಯಲ್ಲಿ ಎಲ್ಲರೂ ಅದರಿಂದ ಪೀಡಿತರಾದದ್ದೂ ಇದೆ. ಇದೊಂದು ಕರುಣಾಜನಕ ಕತೆ. ಇಂಥ ಸಂದರ್ಭ ಪೀಡಿತರಲ್ಲಿ ಧೈರ್ಯ ತುಂಬುವ ಮತ್ತು ಭರವಸೆ ಕಳಕೊಳ್ಳದಂತೆ ಮಾಡುವ ಕೆಲಸ ಸರ್ಕಾರದ ವತಿಯಿಂದ ಆಗಬೇಕು. ಅವರ ನೆಮ್ಮದಿಗೆ ಒತ್ತು ನೀಡುವ ಕೆಲಸಗಳಾಗಬೇಕು. 28 ವರ್ಷಗಳ ವರೆಗೆ ಎಂಡೋಪೀಡಿತ ಮಗಳನ್ನು ಸಾಕಿದ ಅಮ್ಮ, ಅಂತಿಮವಾಗಿ ಇನ್ನು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರಬೇಕಾದರೆ ಆ ತಾಯಿಯ ಎದೆಯೊಳಗೆ ನಡೆದಿರಬಹುದಾದ ಯುದ್ಧವಾದರೂ ಎಂಥದ್ದಿರಬಹುದು? ನನ್ನ ನಂತರ ಈ ಮಗಳ ಆರೈಕೆಗೆ ಇನ್ನಾರು ಎಂಬ ಪ್ರಶ್ನೆ ಬಾರಿಬಾರಿಗೂ ಕಾಡಿರಬಹುದೇ? ನಿಜವಾಗಿ,

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂಬುದು ಜೀವಂತ ಇರುವ ಎಲ್ಲರಿಗೂ ಗೊತ್ತಿದೆ. ಆತ್ಮಹತ್ಯೆಯಿಂದ ಅವರ ಅಸ್ತಿತ್ವ ಇಲ್ಲದಾಗುತ್ತದೆಯೇ ಹೊರತು ಸಮಸ್ಯೆಯಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಅವರು ತನ್ನ ತಂದೆಗೋ ತಾಯಿಗೋ ಸಹೋದರ, ಸಹೋದರಿಯರಿಗೋ ಅಥವಾ ಕುಟುಂಬಕ್ಕೋ ದುಪ್ಪಟ್ಟು ಪ್ರಮಾಣದಲ್ಲಿ ವರ್ಗಾಯಿಸುತ್ತಾರೆ. ಉಡುಪಿಯ ಅಂಕಿ-ಅಂಶಗಳನ್ನೇ ಎತ್ತಿಕೊಳ್ಳಿ. ಇಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅರ್ಧದಷ್ಟು ಮಂದಿ 20 ರಿಂದ 40ರ ನಡುವಿನ ಪ್ರಾಯದವರು. ಯಾವುದೇ ಸಾಹಸಪೂರ್ಣ ಕೆಲಸಕ್ಕೆ ಧುಮುಕುವ ಪ್ರಾಯ ಇದು. ಹೊಟೇಲ್ ಬ್ಯುಸಿನೆಸ್, ವ್ಯಾಪಾರ, ಭೂವ್ಯವಹಾರ, ವಾಹನಗಳನ್ನು ಖರೀದಿಸಿ ಬಾಡಿಗೆಗೆ ಕೊಡುವುದು, ಹೊಸ ಉದ್ಯಮಕ್ಕೆ ಕೈ ಹಾಕುವುದು, ಬಟ್ಟೆ, ಆಟಿಕೆ, ದಿನಸಿ ಇತ್ಯಾದಿ ಅಂಗಡಿಗಳನ್ನು ತೆರೆಯುವುದೆಲ್ಲ ಬಹುತೇಕ ಈ ಪ್ರಾಯದಲ್ಲೆ. ಆದರೆ, ನೋಟು ನಿಷೇಧವು ಇಂಥ ಉತ್ಸಾಹಗಳನ್ನು ಒಮ್ಮೆಲೇ ನೆಲಕ್ಕೆ ಕೆಡವಿ ಬಿಟ್ಟಿತು.

ಆ ಬಳಿಕ ಕೊರೋನಾದ ದಾಳಿಯು ಇದ್ದಬದ್ದ ಆತ್ಮವಿಶ್ವಾಸವನ್ನು ಧರಾಶಾಹಿಗೊಳಿಸಿತು. ನೋಟು ನಿಷೇಧದ ಬಳಿಕ ಈ ದೇಶದಲ್ಲಿ ಯಾರದಾದರೂ ಆದಾಯ ಹೆಚ್ಚಾಗಿದ್ದರೆ ಅದು ಅಂಬಾನಿ ಮತ್ತು ಅದಾನಿಯದ್ದು ಮಾತ್ರ ಎಂಬ ಮಾತನ್ನು ಸಾಬೀತುಪಡಿಸುವುದಕ್ಕೆ ಈ ದೇಶದಲ್ಲಿ ಸಾವಿರಾರು ಉದಾಹರಣೆಗಳಿವೆ. ನೋಟು ನಿಷೇಧದ ಬಳಿಕ ವ್ಯಾಪಾರಿಗಳು ಬದುಕಿ ಉಳಿಯುವುದಕ್ಕಾಗಿ ಬ್ಯಾಂಕ್ ಮತ್ತು ಫೈನಾನ್ಸ್ಗಳಿಂದ ಸಾಲ ಎತ್ತಿಕೊಂಡರು. ಇನ್ನೇನು ತಮ್ಮ ವ್ಯಾಪಾರ ಚಿಗುರೊಡೆಯುತ್ತಿದೆ ಎಂಬಂತಾದಾಗ ಕೊರೋನಾ ವಕ್ಕರಿಸಿತು. 2020ರಿಂದ 22ರ ನಡುವೆ ಎರಡು ಬಾರಿ ಕೊರೋನಾ ಮಾಡಿದ ದಾಳಿಯು ಸಾಲ ಪಡಕೊಂಡವರ ಮುಂದೆ ಬರೀ ಕತ್ತಲೆಯನ್ನಷ್ಟೇ ತೆರೆದಿಟ್ಟಿತು. ಅಲ್ಲದೇ, ಸಾಲ ಪಡಕೊಂಡವರಿಗೆ ಬಡ್ಡಿ ಮನ್ನಾ, ಸಾಲ ಮರುಪಾವತಿಗೆ ಕನಿಷ್ಠ ಎರಡು ಆರ್ಥಿಕ ವರ್ಷದ ಕಾಲಾವಕಾಶ ಇತ್ಯಾದಿ ರಿಯಾಯಿತಿಗಳನ್ನು ರಿಸರ್ವ್ ಬ್ಯಾಂಕ್ ನೀಡಲಿಲ್ಲ. ಒಂದು ಕಡೆ,

ಪಡೆದ ಸಾಲದ ಮರುಪಾವತಿಯ ಚಿಂತೆ, ಇನ್ನೊಂದು ಕಡೆ ನೋಟು ನಿಷೇಧ ಮತ್ತು ಕೊರೋನಾ ದಾಳಿಯಿಂದ ಇನ್ನೂ ಚೇತರಿಸಿಕೊಳ್ಳದ ತನ್ನ ಉದ್ಯಮ- ಇವುಗಳು ಮತ್ತೆ ಮತ್ತೆ ಕಾಡುತ್ತಾ ಸಾಲಗಾರ ರನ್ನು ಖಿನ್ನತೆಗೆ ದೂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇದರ ಜೊತೆಗೇ ಪ್ರೇಮ ವೈಫಲ್ಯ ಮತ್ತು ಮದ್ಯಪಾನ ಚಟಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಉಡುಪಿಯ 73 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 27 ಕೇಂದ್ರಗಳಿಗೆ ಖಾಸಗಿ ಆಸ್ಪತ್ರೆಯ ಮನೋರೋಗ ತಜ್ಞರು ನಿಯಮಿತವಾಗಿ ಭೇಟಿ ಕೊಟ್ಟು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ ಎಂಬ ವರದಿಯೂ ಬಂದಿದೆ. ಈ ವರದಿಯೇ ಜನರ ಸದ್ಯದ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚೆಚ್ಚು ಜನರು ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆ ಖಿನ್ನತೆಯ ಹಿಂದೆ ದುರಂತ ಕತೆಗಳಿರುತ್ತವೆ. ಸಾಲ ಮಾಡಿ ಉದ್ಯಮ ಪ್ರಾರಂಭಿಸಿ ಅದು ಕೈ ಕೊಟ್ಟಾಗ ಮದ್ಯವ್ಯಸನಕ್ಕೆ ತುತ್ತಾಗಿ ತನ್ನ ಸಹಿತ ತನ್ನ ಕುಟುಂಬದ ನೆಮ್ಮದಿಯನ್ನು ಕೆಡಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಅವರ ಕುಡಿತವಷ್ಟೇ ಬಾಹ್ಯನೋಟಕ್ಕೆ ಕಾಣಿಸುತ್ತದೆ. ಆ ನೋಟದ ಆಧಾರದಲ್ಲಿ ನಾವು ಅವರ ಬಗ್ಗೆ ಕೆಟ್ಟ ಷರಾ ಬರೆದು ನಿರ್ಲಕ್ಷ್ಯ ಮಾಡುತ್ತೇವೆ.

ಆದರೆ, ಅವರ ಮದ್ಯಪಾನದ ಹಿಂದೆ ಸರ್ಕಾರದ ಕೆಟ್ಟ ಆಡಳಿತ ನೀತಿಗೂ ಪಾತ್ರ ಇರುತ್ತದೆ. ಆದ್ದರಿಂದ ಆತ್ಮಹತ್ಯೆ ಮಾಡುವ ಮತ್ತು ಮದ್ಯ ಸೇವಿಸುವವರನ್ನು ಬಾಹ್ಯನೋಟದ ಆಚೆಗೆ ವಿಶ್ಲೇಷಣೆಗೆ ಒಳಪಡಿಸಬೇಕು. ಆತ್ಮಹತ್ಯೆ ಪರಿಹಾರ ಅಲ್ಲದಿರಬಹುದು. ಆದರೆ ಅದನ್ನು ಅವರಿಗೆ ಅನಿವಾರ್ಯಗೊಳಿಸಿದವರು ಕಟಕಟೆಯಲ್ಲಿ ನಿಲ್ಲುವಂತೆ ಮಾಡಬೇಕು. ಅಧಿಕಾರದಲ್ಲಿರುವವರ ಮೇಲೆ ಅದರ ಜವಾಬ್ದಾರಿಯನ್ನು ಹೊರಿಸಿ, ಜನರು ಪಾಠ ಕಲಿಸಬೇಕು.

No comments:

Post a Comment