Tuesday, 14 June 2022

ಜ್ಞಾನವಾಪಿ ಮತ್ತು ಮಳಲಿ ಮಸೀದಿ: ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವೇನು?

 



ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರಕಿದೆ ಎನ್ನಲಾದ ಶಿವಲಿಂಗದ ಚಿತ್ರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿಯು ಮಂದಿರವಾಗಿತ್ತೇ ಎಂಬುದನ್ನು ಕಂಡುಕೊಳ್ಳಲು ನಡೆಸಲಾದ ತಾಂಬೂಲ ಪ್ರಶ್ನೆ- ಇವೆರಡಕ್ಕೂ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಈ ಹಿಂದಿನ ಬಾಬರಿ ಮಸೀದಿ ವಿವಾದದ ಸಂದರ್ಭದ ಪ್ರತಿಕ್ರಿಯೆಗಳಿಗೆ ಹೋಲಿಸಿದರೆ, ಸಾಕಷ್ಟು ವ್ಯತ್ಯಾಸಗಳು ಕಾಣಸಿಗುತ್ತವೆ. ಸಾರ್ವಜನಿಕರಿಂದ ಎಷ್ಟು ಗಂಭೀರ ಪ್ರತಿಕ್ರಿಯೆಗಳು ಬಂದುವೋ ಅದಕ್ಕಿಂತಲೂ ಅಧಿಕ ಲಘುವಾದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಜೋಕ್‌ಗಳೂ ಹಂಚಿಕೆಯಾದುವು. ಮಂದಿರ-ಮಸೀದಿ ನೆಪದಲ್ಲಿ ಉಂಟು ಮಾಡುವ ವಿವಾದವನ್ನು ಜನರು ಈ ಹಿಂದಿನಂತೆ ಭಾವನಾತ್ಮಕವಾಗಿ ನೋಡುವುದಕ್ಕಿಂತ ರಾಜಕೀಯವಾಗಿ ನೋಡುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ ಎಂಬುದಕ್ಕೆ ಈ ಪ್ರತಿಕ್ರಿಯೆಗಳು ಸಾಕ್ಷ್ಯ ಒದಗಿಸಿದುವು. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆಯೆಂದು ಒಂದು ಗುಂಪು ವಾದಿಸುವಾಗ, ಅದು ಶಿವ ಲಿಂಗವಲ್ಲ, ಕಾರಂಜಿ ಎಂದು ಇನ್ನೊಂದು ಗುಂಪು ವಾದಿಸಿತು. ಚಿತ್ರಗಳೂ ಪ್ರಕಟವಾದುವು. ಆ ಬಳಿಕ ತಮಾಷೆ, ವ್ಯಂಗ್ಯ, ಕುಚೋದ್ಯ, ಅಪಹಾಸ್ಯ.. ಇತ್ಯಾದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಧಾರಾಳ ಹಂಚಿಕೆಯಾದುವು. ಇದೇವೇಳೆ,

ಮಳಲಿ ಮಸೀದಿಯ ಬಗ್ಗೆ ತಾಂಬೂಲ ಪ್ರಶ್ನೆಯೂ ನಡೆಯಿತು. ಕೇರಳದ ಪಾಣಿಕ್ಕರ್ ಎಂಬವರನ್ನು ಕರೆದು ವೀಳ್ಯದೆಲೆಯಲ್ಲಿ ಸತ್ಯಾಸತ್ಯತೆಯನ್ನು ಹುಡುಕುವ ತಾಂಬೂಲ ಪ್ರಶ್ನೆ ನಡೆಸಲಾಯಿತು. ಇದು ಕೂಡಾ ಗಂಭೀರ ಪ್ರತಿಕ್ರಿಯೆಗಳಿಗಿಂತ ಹೆಚ್ಚು ಲಘುವಾದ ಪ್ರತಿಕ್ರಿಯೆಗಳಲ್ಲಿ ತೇಲಿ ಹೋಯಿತು. ಹಾಸ್ಯ, ತಮಾಷೆ, ಜೋಕ್‌ಗಳು ಈ ತಾಂಬೂಲ ಪ್ರಶ್ನೆಯ ಸುತ್ತ ಹರಿದಾಡಿದುವು. ನಿಜವಾಗಿ,

1990ರಲ್ಲಿ ಪರಾಕಾಷ್ಟೆಗೇರಿದ ಬಾಬರಿ ಮಸೀದಿ ವಿವಾದ ಮತ್ತು 2019 ನವೆಂಬರ್ 9ರಂದು ಈ ಬಗ್ಗೆ ಸುಪ್ರೀಮ್ ಕೋರ್ಟು ನೀಡಿದ ತೀರ್ಪು- ಇವೆರಡೂ ಭಾರತೀಯ ನಾಗರಿಕ ಸಮಾಜದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ. ಈ ಪ್ರಭಾವ ಎರಡು ಬಗೆಯದು. ಒಂದು- ಭಾವನಾತ್ಮಕವಾದರೆ ಇನ್ನೊಂದು- ರಾಜಕೀಯ ಸ್ವರೂಪದ್ದು.

ಬಾಬರಿ ಮಸೀದಿ ವಿವಾದ ಸ್ವತಂತ್ರಪೂರ್ವದಲ್ಲೇ ಹುಟ್ಟಿಕೊಂಡಿತ್ತು ಮತ್ತು ಅದನ್ನು ರಾಮ ಜನ್ಮಭೂಮಿ ಎಂದು ಬಿಂಬಿಸುವ ಪ್ರಯತ್ನಗಳು ಆ ಸಮಯದಲ್ಲೇ ನಡೆದಿದ್ದುವು. ಸ್ವಾತಂತ್ರ‍್ಯ ದೊರೆತು ಎರಡು ವರ್ಷಗಳಾಗುತ್ತಲೇ ಈ ವಿವಾದವನ್ನು ಬೆಚ್ಚಗಿಡುವ ಪ್ರಯತ್ನಗಳೂ ನಡೆದುವು. 1949ರಲ್ಲಿ ಅಯೋಧ್ಯೆ ಜಿಲ್ಲಾಧಿಕಾರಿಯ ಪರೋಕ್ಷ ನೆರವಿನೊಂದಿಗೆ ಮಸೀದಿಯ ಒಳಗೆ ವಿಗ್ರಹ ತಂದಿಟ್ಟ ಬೆಳವಣಿಗೆಯೂ ನಡೆಯಿತು. 1990ರಲ್ಲಿ ಬಿಜೆಪಿ ರಾಮ ರಥಯಾತ್ರೆ ನಡೆಸಿದಾಗಲೂ ಜನರು ಅದನ್ನು ರಾಜಕೀಯಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ನೋಡಿದರು. ಬಾಬರಿ ಮಸೀದಿ ಇರುವ ಕಟ್ಟಡವೇ ರಾಮ ಜನ್ಮಭೂಮಿ ಎಂಬುದಾಗಿ ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ಲಭ್ಯವಾದ ಬಳಿಕವೂ ನಡೆಸಿಕೊಂಡು ಬರಲಾದ ಪ್ರಚಾರವೇ ಇದಕ್ಕೆ ಕಾರಣವಾಗಿತ್ತು. ರಾಮ ರಥಯಾತ್ರೆ ನಡೆಸುವಾಗ ಬಿಜೆಪಿ ರಾಜಕೀಯವಾಗಿ ಇನ್ನೂ ಬಲಿತಿರಲಿಲ್ಲ. ಶಿಶುವಾಗಿದ್ದ ಬಿಜೆಪಿಗೆ ಅಂಥದ್ದೊಂದು ರಥಯಾತ್ರೆ ನಡೆಸಲು ಸಾಧ್ಯವಾದದ್ದು ಮತ್ತು ಅದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದುದಕ್ಕೆ ತಲೆತಲಾಂತರದಿಂದ ಬಾಬರಿ ಮಸೀದಿ ಸುತ್ತ ಹರಡಲಾದ ಸುದ್ದಿಗಳೇ ಕಾರಣವಾಗಿದ್ದುವು. ಆದ್ದರಿಂದಲೇ,

ಬಾಬರಿ ವಿವಾದವನ್ನು ಜನರು ರಾಜಕೀಯಕ್ಕಿಂತ ಹೊರತಾಗಿ ಭಾವನಾತ್ಮಕವಾಗಿ ನೋಡಿದರು. ಮಾತ್ರವಲ್ಲ, ಬಾಬರಿ ವಿವಾದದ ಉದ್ದಕ್ಕೂ ಎಲ್ಲೂ ಜನರು ಲಘುವಾಗಿ ಪ್ರತಿಕ್ರಿಯಿಸಿದ್ದು ಬಹಳ ಬಹಳ ಕಡಿಮೆ. ಮೀಮ್‌ಗಳು, ಜೋಕ್‌ಗಳು, ತಮಾಷೆಗಳೆಲ್ಲ ಈ ವಿವಾದಕ್ಕೆ ಸಂಬಂಧಿಸಿ ವ್ಯಕ್ತವಾಗಿರಲಿಲ್ಲ. ಉತ್ಖನನಕ್ಕೆ ನ್ಯಾಯಾಲಯ ಆದೇಶಿಸಿದಾಗಲೂ ಇದನ್ನು ಲಘುವಾಗಿ ಎತ್ತಿಕೊಂಡು ಸಾರ್ವಜ ನಿಕರು ಆಡಿಕೊಂಡಿರಲಿಲ್ಲ. ಆದರೆ,

ಆ ಬಳಿಕದ ಜ್ಞಾನವಾಪಿ ಮಸೀದಿಯಾಗಲಿ, ಮಳಲಿಯ ಮಸೀದಿಯಾಗಲಿ ಆ ಬಗೆಯ ಗಂಭೀರತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ- ಬಾಬರಿಗೆ ಸಂಬಂಧಿಸಿ ಸುಪ್ರೀಮ್ ತೀರ್ಪು ಮತ್ತು ಬಿಜೆಪಿಯ ರಾಜಕೀಯ ದುರುದ್ದೇಶಗಳ ಬಗ್ಗೆ ಸಾರ್ವಜನಿಕರಲ್ಲಾದ ತಿಳುವಳಿಕೆ. ಒಂದುಕಡೆ,

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಂಜೂರಾದ 60 ಲಕ್ಷಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿ ಇವೆ ಎಂಬುದು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅಧಿಕೃತ ಪಟ್ಟಿಯೇ ಹೇಳುತ್ತಿದೆ. ತೈಲ ಬೆಲೆ ನೂರರ ಗಡಿಯನ್ನು ದಾಟಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂಪಾಯಿಯನ್ನು ದಾಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ವಿಪರೀತ ಏರಿರುವುದರಿಂದ ಹೊಟೇಲು ತಿನಿಸುಗಳು ಸುಡುತ್ತಿವೆ. ತರಕಾರಿಗಳು ಮತ್ತು ದಿನನಿತ್ಯ ಬಳಕೆಯ ವಸ್ತುಗಳೂ ಗಗನಕ್ಕೇರಿ ಕೂತಿವೆ. ಕಳೆದ ಮೂರು ದಶಕದಲ್ಲೇ ನಿರುದ್ಯೋಗ ಪ್ರಮಾಣವು ಉತ್ತುಂಗದಲ್ಲಿದೆ. ವಿದೇಶಿ ಬಂಡವಾಳ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿವೆ. ಒಂದುಕಡೆ, ಬಂಡವಾಳ ಹೂಡುವಂತೆ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುವುದು ಮತ್ತು ಇನ್ನೊಂದೆಡೆ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸುತ್ತಾ ಬಿಗುವಿನ ವಾತಾವರಣ ಉಂಟು ಮಾಡುತ್ತಿರುವುದೂ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಮಂದಿರ-ಮಸೀದಿ ಎಂದು ಬಿಜೆಪಿ ಮತ್ತು ಅದರ ಬೆಂಬಲಿಗ ಪಡೆಯು ಮಾತಾಡತೊಡಗಿದರೆ, ಜನರು ಅದನ್ನು ಲಘುವಾಗಿಯಲ್ಲದೇ ಮತ್ತೆ ಹೇಗೆ ಪರಿಗಣಿಸಬೇಕು?

ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ನೀಡಿದ ತೀರ್ಪಿಗೆ ಜನಸಾಮಾನ್ಯರು ಬಿಡಿ, ಹಿರಿಯ ನ್ಯಾಯವಾದಿಗಳೇ ಅಚ್ಚರಿ ವ್ಯಕ್ತಪಡಿಸಿದ್ದರು. ಸಾಕ್ಷ್ಯಾಧಾರಕ್ಕಿಂತ ಬಹುಸಂಖ್ಯಾತ ಭಾವನೆಗಳಿಗೇ ಆದ್ಯತೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಕಾನೂನನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಒಡೆದವರಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ಮಾತ್ರವಲ್ಲ, ಆ ಕುರಿತಾಗಿರುವ ನ್ಯಾಯ ಪ್ರಕ್ರಿಯೆಯು ಇನ್ನೂ ಸ್ಥಳೀಯ ನ್ಯಾಯಾಲಯದಲ್ಲಿಯೇ ಶೈಶವಾವಸ್ಥೆಯಲ್ಲಿದೆ. ಬಹುಶಃ, ಅದರ ತೀರ್ಪು ಹೊರಬೀಳುವಾಗ ಆರೋಪಿಗಳಲ್ಲಿ ಯಾರಾದರೊಬ್ಬರು ಬದುಕಿ ಉಳಿದಿರುತ್ತಾರೆ ಎಂದು ಹೇಳಲಾಗದಷ್ಟು ವಿಚಾರಣಾ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಒಂದುಕಡೆ, ಬಾಬರಿ ಮಸೀದಿಯ 2.77 ಎಕರೆ ಜಮೀನು ಒಡೆತನದ ತಗಾದೆಯನ್ನು ಇತ್ಯರ್ಥಪಡಿಸಲು ಕೋರ್ಟು ತೋರಿದ ಮುತುವರ್ಜಿಯು ಆ ಜಮೀ ನಿನಲ್ಲಿದ್ದ ಮಸೀದಿಯನ್ನು ಉರುಳಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುತ್ತಿಲ್ಲ ಎಂಬ ಅಸಮಾಧಾನವಾದರೆ, ಇ ನ್ನೊಂದೆಡೆ, ನ್ಯಾಯ ತಜ್ಞರನ್ನೇ ಅಚ್ಚರಿಯಲ್ಲಿ ಕೆಡವಿದ ತೀರ್ಪು- ಇವೆರಡೂ ಆ ಬಳಿಕದ ಮಂದಿರ-ಮಸೀದಿ ವಿವಾದಗಳ ಕುರಿತು ಜ ನರಲ್ಲಿ ಲಘುವಾದ ಭಾವನೆ ಹುಟ್ಟಿಸಲು ಕಾರಣವಾದುವು.

ಅಲ್ಲದೇ, ಮಂದಿರ-ಮಸೀದಿ ಹೊರತು ಬಿಜೆಪಿಗೆ ಅಸ್ತಿತ್ವವಿಲ್ಲ ಎಂಬುದೂ ದಿನೇದಿನೇ ಸ್ಪಷ್ಟವಾಗುತ್ತಿದೆ. ಆಡಳಿತಾತ್ಮಕವಾಗಿ ಬಿಜೆಪಿ ಒಂದು ವಿಫಲ ಪ್ರಯೋಗ. ನೋಟ್‌ಬ್ಯಾನ್ ಮೂಲಕ ಅದು ಈ ದೇಶದ ಆರ್ಥಿಕತೆಗೆ ನೀಡಿದ ಹೊಡೆತದ ಗಾಯ ಇನ್ನೂ ಮಾಸಿಲ್ಲ. ಹೊಸ 2000 ರೂಪಾಯಿ ನೋಟಿನ ಸುತ್ತ ಅದು ಭ್ರಮೆಯೊಂದನ್ನು ಸೃಷ್ಟಿಸಿತು. ನಕಲಿ ಹಣ ಮತ್ತು ಕಪ್ಪು ಹಣದ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ಎಂದು ಅದು ಸಾಮಾಜಿಕ ಮಾಧ್ಯಮಗಳು ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿತು. ಎಲ್ಲಿಯವರೆಗೆಂದರೆ, 2000 ನೋಟಿನಲ್ಲಿ ಉಪಗ್ರಹ ಆಧಾರಿತ ಚಿಪ್ ಅನ್ನು ಅಳವಡಿಸಲಾಗಿದೆ ಎಂಬ ಪುಕಾರನ್ನೂ ಹಬ್ಬಿಸಿತು. ಆದರೆ, ಇದೀಗ ಆ 2000 ನೋಟನ್ನೇ ಮಾರುಕಟ್ಟೆಯಿಂದ ಸದ್ದಿಲ್ಲದೇ ಹಿಂಪಡೆಯುತ್ತಿರುವ ಸೂಚನೆಗಳು ಲಭ್ಯವಾಗುತ್ತಿವೆ. 2000ದ ಅಸಲಿ ನೋಟಿಗಿಂದ ನಕಲಿ ನೋಟುಗಳೇ ಮಾರುಕಟ್ಟೆಯಲ್ಲಿ ಹೆಚ್ಚಿವೆ ಎಂಬ ಮಾಹಿತಿಗಳಿವೆ. ಕಪ್ಪು ಹಣವನ್ನಂತೂ ನೋಟ್‌ಬ್ಯಾನ್‌ನಿಂದ ನಿ ಲ್ಲಿಸಲು ಸಾಧ್ಯವಾಗಿಲ್ಲ ಎಂಬುದು ಈ ಮೊದಲೇ ಸಾಬೀತಾಗಿದೆ. ಹೀಗಿರುತ್ತಾ, ಬಿಜೆಪಿ ಮಂದಿರ-ಮಸೀದಿಯ ಹೊರತು ಅಡಗಿಕೊಳ್ಳಲು ಬೇರೆ ಯಾವ ಜಾಗ ಇದೆ?

ಈ ಸತ್ಯವನ್ನು ಜನರೂ ಈಗ ಅರಿತುಕೊಳ್ಳುತ್ತಿದ್ದಾರೆ. ಬಹುಶಃ, ಈ ಕಾರಣದಿಂದಾಗಿಯೇ ಮಳಲಿ ಮಸೀ ದಿಯ ತಾಂಬೂಲ ಪ್ರಶ್ನೆಯಾಗಲಿ, ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ ಮಸೀದಿ ವಿವಾದಗಳು ಗಂಭೀರತೆಯನ್ನು ಕಳಕೊಂಡು ಲಘು ಹಾಸ್ಯ ಪ್ರತಿಕ್ರಿಯೆಗೆ ತುತ್ತಾಗುತ್ತಿರಬೇಕು. ಜನರು ನಿತ್ಯದ ಬದುಕಿಗೆ ಪರದಾಡುತ್ತಿರುವಾಗ ಬಿಜೆಪಿ ಮತ್ತು ಪರಿವಾರವು ಮಸೀದಿಗಳಲ್ಲಿ ಮಂದಿರದ ಕುರುಹುಗಳಿವೆಯೇ ಎಂಬ ಪತ್ತೆ ಕಾರ್ಯದಲ್ಲಿ ನಿರತವಾಗಿವೆ. ಮುಂದಿನ ಲೋಕಸಭಾ ಚುನಾವಣೆಗೆ ಯಾವುದಾದರೊಂದು ಮಸೀದಿ ವಿವಾದವನ್ನು ಮುನ್ನೆಲೆಗೆ ತರುವುದೇ ಅದರ ಉದ್ದೇಶ. ಆದರೆ ಜನರು ಪ್ರಬುದ್ಧರಾಗುತ್ತಿದ್ದಾರೆ ಮತ್ತು ರಾಜಕೀಯ ದುರುದ್ದೇಶಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮಳಲಿ ಮಸೀದಿ ಮತ್ತು ಜ್ಞಾನವಾಪಿ ಮಸೀದಿ ವಿವಾದಗಳು ಸೂಚಿಸುತ್ತವೆ. ಇದು ಆಶಾದಾಯಕ ಬೆಳವಣಿಗೆ.

 

No comments:

Post a Comment