Monday, 23 June 2014

ಹಿರಾದ `ಓದ’ನ್ನು ಸಮಾಜಕ್ಕೂ ಕೇಳಿಸೋಣ

   ಹಿರಾ ಗುಹೆಯಲ್ಲಿ ತಂಗಿ ಮಾನವ ಸಂಸ್ಕರಣೆಯ ಮೊಟ್ಟ ಮೊದಲ ಪಾಠವನ್ನು ಕೇಳಿಸಿಕೊಂಡ ನಂತರ ಪ್ರವಾದಿ ಮುಹಮ್ಮದ್(ಸ) ಮತ್ತೆಂದೂ ‘ಹಿರಾ’ದಲ್ಲಿ ತಂಗಲಿಲ್ಲ. ಬಳಿಕ ಅವರು ಸಮಾಜದ ಕಡೆಗೆ ನಡೆದರು. ನಿಜವಾಗಿ, ಅಂದಿನ ಸಮಾಜದಲ್ಲಿದ್ದ ಗದ್ದಲ, ಗೊಂದಲ, ಹಿಂಸೆ, ಅಸಮಾನತೆ, ಅನ್ಯಾಯಗಳನ್ನು ಪರಿಗಣಿಸಿದರೆ, ಹಿರಾ ಗುಹೆಯು ಪ್ರವಾದಿಯವರಿಗೆ(ಸ) ಮತ್ತೆ ಮತ್ತೆ ತಂಗಲೇಬೇಕಾದ ಮತ್ತು ಶಾಶ್ವತ ವಾಸಸ್ಥಳವನ್ನಾಗಿ ಮಾಡಿಕೊಳ್ಳಲೇ ಬೇಕಾದಷ್ಟು ಯೋಗ್ಯ ನೆಲೆಯಾಗಿತ್ತು. ಯಾಕೆಂದರೆ, ಹಿರಾದಲ್ಲಿ ಅಶಾಂತಿ ಇರಲಿಲ್ಲ. ರಕ್ತದಾಹ ಇರಲಿಲ್ಲ. ಮನುಷ್ಯರಲ್ಲಿಯೇ ಕೆಲವರು ಉಚ್ಛರು, ಕೆಲವರು ಮ್ಲೇಚ್ಛರು; ಕೆಲವು ಯಜಮಾನರು, ಅಸಂಖ್ಯ ದಾಸರು; ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ... ಮುಂತಾದ ಪ್ರಕೃತಿ ವಿರೋಧಿ ವಿಭಜನೆಗಳಿರಲಿಲ್ಲ. ಆದರೂ ಪ್ರವಾದಿ(ಸ) ಸಮಾಜವನ್ನೇ ಆಯ್ಕೆ ಮಾಡಿಕೊಂಡರು. ಯಾಕೆಂದರೆ, ಅವರು ಗುಹೆಯಲ್ಲಿ ಯಾವ ಪಾಠಗಳನ್ನು ಕೇಳಿಸಿಕೊಂಡಿದ್ದರೋ ಅದು ಯಾವ ಕಾರಣಕ್ಕೂ ಅಲ್ಲಿಗೆ ಅಗತ್ಯವಿರಲಿಲ್ಲ, ಗಾಢ ಮೌನ, ನೀರವತೆ, ಏಕತಾನತೆಯ ಗುಹೆಯಲ್ಲಿ, ‘ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ..’ ಎಂದು ಹೇಳುವುದರಿಂದ ಆಗುವ ಪ್ರಯೋಜನವಾದರೂ ಏನು? ಅವರು `ಓದ'ಬೇಕಾದದ್ದು ಸಮಾಜದ ಮುಂದೆ. ಯಾಕೆಂದರೆ, ಆ ಸಮಾಜವು ನಿಜವಾದ `ಓದ'ನ್ನು, ಓದಿನ ಮರ್ಮವನ್ನು ಸಂಪೂರ್ಣ ಮರೆತಿತ್ತು. ಆದ್ದರಿಂದಲೇ, ಪ್ರವಾದಿಯವರು(ಸ) ಓದಲೇಬೇಕಾದ ಜಾಗಕ್ಕೆ ಹಿರಾ ಗುಹೆಯಿಂದ ಮರಳಿದರು. ಹಾಗೆ ಮರಳುವಾಗ ಆ ಮರಳುವ ಜಾಗ ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಖಂಡಿತ ಗೊತ್ತಿತ್ತು. ಅವರು ಏನನ್ನು ಓದಲು ಹೊರಟಿದ್ದರೋ ಅದನ್ನು ಆ ಸಮಾಜ ಒಕ್ಕೊರಳಿನಿಂದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತದೆ ಎಂದು ನಂಬುವಷ್ಟು ಮುಗ್ಧರೂ ಅವರಾಗಿರಲಿಲ್ಲ. ಒಂದು ವೇಳೆ ಹಿರಾದಲ್ಲಿ ಅವರು ಏನನ್ನು ಕೇಳಿಸಿಕೊಂಡಿದ್ದರೋ ಅದನ್ನು ಸಮಾಜದ ಮುಂದೆ ಹೇಳದೇ ಹಿರಾ ಗುಹೆಯಲ್ಲೇ ಬಿಟ್ಟು ಬರುತ್ತಿದ್ದರೆ ಆ ಸಮಾಜ ಪ್ರವಾದಿಯವರ(ಸ) ಮೇಲೆ ಕಲ್ಲೆಸೆಯುತ್ತಲೂ ಇರಲಿಲ್ಲ. ಯುದ್ಧಕ್ಕೆ ನಿಲ್ಲುತ್ತಲೂ ಇರಲಿಲ್ಲ. ಆದರೆ ಪ್ರವಾದಿ ಹಿರಾ ಎಂಬ ಸುರಕ್ಷಿತ ಪ್ರದೇಶಕ್ಕಿಂತ ಸಮಾಜ ಎಂಬ ಅಸುರಕ್ಷಿತ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡರು. ಸವಾಲಿಗೆ ಮುಖಾಮುಖಿಯಾದರು. ಅನ್ಯಾಯ, ಅಕ್ರಮ, ಗೊಂದಲ, ರಕ್ತಪಾತ, ಅಶಾಂತಿಗಳಿಗೆ ಈ `ಓದ'ನ್ನು ಪರಿಹಾರವಾಗಿ ಸೂಚಿಸಿದರು. ಅಂತಿಮವಾಗಿ ಆ `ಓದು' ಆ ಸಮಾಜದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಿತೆಂದರೆ, ಹೆಣ್ಣನ್ನು ದ್ವೇಷಿಸುತ್ತಿದ್ದ ಅದೇ ಮಂದಿ ಹೆಣ್ಣು ಮಗುವಿಗಾಗಿ ಪ್ರಾರ್ಥಿಸುವಷ್ಟು. ಶ್ರೇಣೀಕೃತ ವ್ಯವಸ್ಥೆಯನ್ನು ಸಹಜ ಧರ್ಮವಾಗಿ ಪ್ರತಿಪಾದಿಸುತ್ತಿದ್ದವರೇ ಮ್ಲೇಚ್ಛನ ಜೊತೆ ಒಂದೇ ಬಟ್ಟಲಲ್ಲಿ ಊಟ ಮಾಡುವಷ್ಟು.  
   ರಮಝಾನ್ ಎಂಬುದು ಅದೇ `ಓದಿನ' ಪುಟ್ಟದೊಂದು ಬೀಜ. ಈ ಬೀಜ ಪ್ರತಿಯೋರ್ವ ಉಪವಾಸಿಗನ ಅಂತರಂಗದಲ್ಲೂ ಮೊಳಕೆಯೊಡೆಯಬೇಕು. ಅಂದು `ಹಿರಾಗುಹೆ ಮತ್ತು ಆ ಸಮಾಜದ ಮಧ್ಯೆ' ಎಷ್ಟು ವ್ಯತ್ಯಾಸಗಳಿದ್ದುವೋ ಅಷ್ಟೇ ವ್ಯತ್ಯಾಸ ಆ ‘ಓದು’ ಮತ್ತು ಇವತ್ತಿನ ಸಮಾಜದ ಮಧ್ಯೆ ಇವತ್ತೂ ಇದೆ. ಆದ್ದರಿಂದಲೇ, ಆ ‘ಓದ’ನ್ನು ಮಸೀದಿ ಎಂಬ ಗುಹೆಯಿಂದ ಹೊರಗೆ ತರಬೇಕು. ಅದನ್ನು ಸಮಾಜದೊಂದಿಗೆ ಮುಖಾಮುಖಿಯಾಗಿಸಬೇಕು. ಅದು ಸಾಧ್ಯವಾದರೆ ಖಂಡಿತ ಮುಂದೆ ಈ ಸಮಾಜವೇ ಆ ‘ಓದನ್ನು’ ಪ್ರೀತಿಸಬಹುದು. ಬಹುಶಃ, ರಮಝಾನ್ ಇವತ್ತಿನ ದಿನಗಳಲ್ಲಿ ನೀಡುವ ಮತ್ತು ನೀಡಬೇಕಾದ ಪ್ರಬಲ ಸಂದೇಶ ಇದು. ರಮಝಾನ್ ಒಂದು ಭರವಸೆ. ಈ ಭರವಸೆ ಪ್ರತಿ ಉಪವಾಸಿಗರನ್ನೂ ಎಚ್ಚರಗೊಳಿಸಿದರೆ ಆ ಬಳಿಕ ಸಮಾಜದಲ್ಲಿ ‘ಅಸುರಕ್ಷಿತ’ ಪ್ರದೇಶ ಇರುವುದಕ್ಕೆ ಸಾಧ್ಯವೇ ಇಲ್ಲ. ನಾವು ಹಿರಾದ ಕಡೆಗಲ್ಲ, ಸಮಾಜದ ಕಡೆಗೆ ಮುಖ ಮಾಡೋಣ. ಭರವಸೆಯೆಂಬ ರಮಝಾನ್ ಸಸಿಯನ್ನು ಪ್ರತಿಯೋರ್ವರ ಅಂತರಂಗದಲ್ಲೂ ನೆಡೋಣ. ಹಿರಾದ ‘ಓದ’ನ್ನು ಸಮಾಜಕ್ಕೂ ಕೇಳಿಸೋಣ.

Friday, 20 June 2014

ಮನೆ ಉರುಳಿಸುವ ಮಳೆಯೂ ಮನೆ ಕಟ್ಟುವ ನಾವೂ..

    ಮರ, ಗಿಡ, ಕಲ್ಲು, ಪ್ರಾಣಿ, ಪಕ್ಷಿ.. ಮುಂತಾದುವುಗಳ ಮೇಲೆ ಆರೋಪ ಹೊರಿಸುವುದು ಯಾಕೆ ಸುಲಭ ಅಂದರೆ, ಅವು ತಿರುಗಿ ಉತ್ತರ ಕೊಡುವುದಿಲ್ಲ. ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ಆರೋಪಿಸುವವರ ಬಣ್ಣ ಬಯಲು ಮಾಡುವ ಸಾಮರ್ಥ್ಯವೂ ಇರುವುದಿಲ್ಲ. ಆದ್ದರಿಂದಲೇ ಅನೇಕ ಬಾರಿ ಮನುಷ್ಯರಾದ ನಾವು ಮಳೆಯ ಮೇಲೆ, ಅಣೆಕಟ್ಟು, ತಂಬಾಕಿನ ಮೇಲೆ ಆರೋಪ ಹೊರಿಸಿ ಸುಮ್ಮನಾಗುತ್ತೇವೆ. ಕಳೆದ ವಾರ ತಂಬಾಕು ಕಂಪೆನಿಗಳನ್ನು ತರಾಟೆಗೆತ್ತಿಕೊಳ್ಳುವ ವರದಿಯೊಂದು ಬಿಡುಗಡೆಯಾಯಿತು. ತಂಬಾಕು ಕಂಪೆನಿಗಳ ಜಾಣ್ಮೆ, ಪ್ರಚಾರ ವೈಖರಿಯಿಂದಾಗಿ ಈ ದೇಶದ 15ರಿಂದ 24 ವರ್ಷದೊಳಗಿನ 27% ಮಂದಿ ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಯಿತು. ತಂಬಾಕು ಸಂಬಂಧಿ ಕಾಯಿಲೆಗಾಗಿ 2011ರಲ್ಲಿ ಒಂದು ಲಕ್ಷ  ಕೋಟಿ ರೂಪಾಯಿ ವೆಚ್ಚವಾಗಿದ್ದು, ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ತಂಬಾಕು ಗ್ರಾಹಕರಿರುವ ದೇಶವಾಗಿ ಭಾರತ ಗುರುತಿಗೀಡಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇನ್ನು, ಮಳೆಗಾಲದಲ್ಲಿ ಆಗುವ ಸಾವು, ಹಾನಿ, ಅನಾಹುತಗಳ ಎಲ್ಲ ಜವಾಬ್ದಾರಿಯನ್ನೂ ಮಳೆ ಎಂಬ ಬಾಯಿ ಬಾರದ ಕೈಗೂ ಸಿಗದ ಆರೋಪಿಯ ಮೇಲೆ ಹೊರಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ, ‘ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಮನೆಗಳು, ಜಲಾವೃತಗೊಂಡ ನಗರ, ಮಳೆ ನೀರಿಗೆ ಕೊಚ್ಚಿ ಹೋದ ರಸ್ತೆಗಳು..’ ಮುಂತಾದ ಬಹುವಿಧ ಶೀರ್ಷಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಗಳು ಖಂಡಿತ ಪ್ರಕಟವಾಗಲಿವೆ. ಅಧಿಕಾರಿಗಳು ಭೇಟಿ ಕೊಟ್ಟ ಸುದ್ದಿಗಳು ಚಿತ್ರ ಸಮೇತ ಪ್ರಕಟವಾಗಲಿವೆ. ಮಳೆಯಿಂದಾಗಿ ನದಿ-ತೊರೆಗಳನ್ನು ದಾಟಲಾಗದೆ ತೂಗು ಸೇತುವೆಯ ಮೂಲಕವೋ ಕಡಿದಾದ ದಾರಿಗಳ ಮೂಲಕವೋ ತೆರಳಬೇಕಾದ ಶಾಲಾ ಮಕ್ಕಳ ಸಂಕಟಗಳನ್ನು ಮುಂದಿನ ದಿನಗಳಲ್ಲಿ ನಾವು ಓದಲಿದ್ದೇವೆ. ಕೊನೆಗೆ, 'ಈ ವರ್ಷ ಎಷ್ಟು ಸೆಂಟಿವಿೂಟರ್ ಮಳೆಯಾಗಿದೆ ಮತ್ತು ಅದರಿಂದ ಆಗಿರುವ ಹಾನಿಗಳೆಷ್ಟು' ಎಂಬ ಅಂಕಿ-ಅಂಶಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಈ ವಿಷಯಕ್ಕೆ ಮುಕ್ತಾಯವನ್ನು ಘೋಷಿಸಲಾಗುತ್ತದೆ.
 ನಿಜವಾಗಿ, ಮಳೆ ಸ್ವಯಂ ಕ್ರೂರಿಯೇನೂ ಅಲ್ಲ. ಒಂದು ವೇಳೆ ಅದು ಕ್ರೂರಿಯೇ ಆಗಿರುತ್ತಿದ್ದರೆ, ಅದರ ಆಗಮನಕ್ಕಾಗಿ ಜನರು ಕಾಯುತ್ತಿರಲಿಲ್ಲ. ಮಳೆಯನ್ನು ಅತ್ಯಂತ ಹೆಚ್ಚು ಪ್ರೀತಿಸುವುದು ಮಕ್ಕಳು. ಮಳೆ ಹನಿಯಲು ಪ್ರಾರಂಭಿಸಿತೆಂದರೆ, ಮಕ್ಕಳು ಅಂಗಳದಲ್ಲಿ ಕುಣಿಯತೊಡಗುತ್ತಾರೆ. ತಮ್ಮಿಷ್ಟದ ಆಟ ಆಡುತ್ತಾರೆ. ಒದ್ದೆ ಮಾಡುವುದು ಮಳೆಯ ಗುಣಲಕ್ಷಣ. ಸಾಮಾನ್ಯವಾಗಿ ನೀರಿನಲ್ಲಿ ಒದ್ದೆಯಾಗುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. ಆದರೆ, ಮಳೆಯಲ್ಲಿ ಒದ್ದೆಯಾಗುವುದು ಮಕ್ಕಳಿಗೆ ಅತ್ಯಂತ ಇಷ್ಟ. ಮಳೆ ಬಂತೆಂದರೆ ರೈತ ಖುಷಿಯಾಗುತ್ತಾನೆ. ಭೂಮಿ ಹಸಿರಾಗುತ್ತದೆ. ನೀರಿನ ಹಾಹಾಕಾರವೂ ಮಾಯವಾಗುತ್ತದೆ. ಅಷ್ಟಕ್ಕೂ, ಮಳೆಯೇನೂ ಸೂಚನೆ ಕೊಡದೇನೇ ದಿಢೀರ್ ಆಗಿ ಭೂಮಿಗೆ ಅಪ್ಪಳಿಸುವುದಿಲ್ಲವಲ್ಲ. ಮಳೆ ಆಗಮನದ ಬಗ್ಗೆ ಮಾಧ್ಯಮಗಳಲ್ಲಿ ತಿಂಗಳುಗಳ ಮೊದಲೇ ಸೂಚನೆ ಸಿಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆ ಮೊದಲೇ ವರದಿಗಳು ಬರುತ್ತವೆ. ಹೀಗಿದ್ದೂ, ಒಂದು ನಿಶ್ಚಿತ ಅವಧಿಯಲ್ಲಿ ಮತ್ತು ನಿಶ್ಚಿತ ಪ್ರಮಾಣದಲ್ಲಿ ಸುರಿಯುವ ಮಳೆಯನ್ನೇ ಅಂತಿಮವಾಗಿ ನಾವೇಕೆ ಆರೋಪಿ ಸ್ಥಾನದಲ್ಲಿ ಕೂರಿಸಬೇಕು? ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ನಾವೇನು ವ್ಯವಸ್ಥೆ ಮಾಡಿದ್ದೇವೆ? ತೋಡುಗಳನ್ನು ಮುಚ್ಚಿ, ಅದರ ಮೇಲೆ ಕಾಂಕ್ರೀಟು ಕಟ್ಟಡಗಳನ್ನು ಕಟ್ಟಿರುವ ನಮಗೆ ಮಳೆಯನ್ನು ದೂರುವುದಕ್ಕೆ ಎಷ್ಟು ಅರ್ಹತೆಯಿದೆ? ನಗರಗಳು ಜಲಾವೃತವಾಗುವುದು ಮಳೆಯಿಂದಲೋ ಅಥವಾ ನಮ್ಮ ಧನದಾಹಿ ಜೀವನ ರೀತಿಯಿಂದಲೋ ಎಂದೊಮ್ಮೆ ನಾವು ಸ್ವಯಂ ಅವಲೋಕಿಸಿದರೇನು? ಮಳೆ ಹರಿದು ಹೋಗಬೇಕಾದಲ್ಲೆಲ್ಲಾ ಮನೆ, ಕಟ್ಟಡಗಳನ್ನು ಕಟ್ಟಿ ನೀರನ್ನು ತಡೆಗಟ್ಟುವವರು ನಾವೇ. ಆ ಬಳಿಕ ಮಳೆಯಿಂದಾಗಿ ಮನೆ ಕುಸಿತ, ನಗರ ಜಲಾವೃತ ಎಂದು ಆರೋಪಿಸುವವರೂ ನಾವೇ. ಹಾಗಂತ, ತೋಡುಗಳಿಗೆ ಸೇತುವೆ ನಿರ್ಮಿಸಿ ಕೊಡಬೇಕಾದುದು ಮಳೆ ಅಲ್ಲವಲ್ಲ. ವರ್ಷದ ಮೂರು ತಿಂಗಳಲ್ಲಷ್ಟೇ ಸುರಿದು ಹೊರಟು ಹೋಗುವ ಮಳೆ ಉಳಿದ 9 ತಿಂಗಳ ವರೆಗೆ ಮೌನವಾಗುತ್ತದೆ. ಆ ಸಂದರ್ಭದಲ್ಲಿ ಸೇತುವೆ ನಿರ್ಮಿಸಲು ಅಥವಾ ದುರ್ಬಲ ಗುಡಿಸಲುಗಳನ್ನು ದುರಸ್ತಿಗೊಳಿಸಲು ಮುಂದಾಗಬೇಕಾದುದು ಇಲ್ಲಿನ ವ್ಯವಸ್ಥೆ. ಆದರೆ ಅದನ್ನು ಮಾಡದ ವ್ಯವಸ್ಥೆ ತನ್ನ ಈ ವೈಫಲ್ಯವನ್ನು ಮಳೆಯ ಮೇಲೆ ಹೊರಿಸುವುದು ಎಷ್ಟು ಸಮರ್ಥನೀಯ? ಇದು ಕೇವಲ ಮಳೆಗೆ ಮಾತ್ರ ಸೀಮಿತವಲ್ಲ. ತಂಬಾಕು ಮಾರಾಟವು ವ್ಯಾಪಕವಾಗುತ್ತಿರುವುದಕ್ಕೆ ಕಂಪೆನಿಗಳ ಮಾರಾಟ ವಿಧಾನವೇ ಕಾರಣ ಎಂದೂ ಹೇಳಲಾಗುತ್ತಿದೆ. ಅದು ಗ್ರಾಹಕರನ್ನು ಸೆಳೆಯುವುದಕ್ಕೆ ಅಗ್ಗದ ಮತ್ತು ಭ್ರಮೆಯ ವಿಧಾನಗಳನ್ನು ಬಳಸುತ್ತಿದೆಯಂತೆ. ನಯವಾದ ಸುಳ್ಳನ್ನು ತನ್ನ ಮಾರಾಟ ತಂತ್ರವಾಗಿ ಉಪಯೋಗಿಸುತ್ತಿದೆಯಂತೆ. ಅಂದಹಾಗೆ, ಯಾವ ಕಂಪೆನಿಯೂ ಸರ್ವತಂತ್ರ ಸ್ವತಂತ್ರ ಅಲ್ಲವಲ್ಲ. ಅದಕ್ಕೆ  ಸರಕಾರ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡುವುದಕ್ಕಿಂತ ಮೊದಲು ಆ ಉತ್ಪನ್ನ ಮಾರಾಟ ಯೋಗ್ಯವೇ ಎಂಬುದು ಖಚಿತಗೊಳ್ಳಬೇಕು. ಗ್ರಾಹಕರನ್ನು ಅನಾರೋಗ್ಯಕ್ಕೆ ದೂಡುವ ಯಾವ ಅಂಶವಿದ್ದರೂ ಅದನ್ನು ತಡೆಯುವ ಎಲ್ಲ ಸ್ವಾತಂತ್ರ್ಯವೂ ವ್ಯವಸ್ಥೆಗಿದೆ. ಇಷ್ಟಿದ್ದೂ ನಾವು ಕಂಪೆನಿಗಳನ್ನು ದೂರುತ್ತೇವಲ್ಲ..
 ಏನೇ ಆಗಲಿ, ಈ ಮಳೆ, ಮರ, ಕಲ್ಲುಗಳನ್ನು ಆರೋಪಿ ಸ್ಥಾನದಲ್ಲಿ ಕೂರಿಸುವ ಮೂಲಕ ಒಂದೊಮ್ಮೆ ನಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಬಹುದಾದರೂ ಅವು ನಮ್ಮನ್ನೆಂದೂ ಕ್ಷಮಿಸದು. ಒಂದು ವೇಳೆ ಅವು ಮಾತನಾಡುವ ಸಾಮರ್ಥ್ಯ 
ಗಳಿಸಿಕೊಂಡಿರುತ್ತಿದ್ದರೆ ಇಷ್ಟರಲ್ಲೇ ಅವು ನಮ್ಮನ್ನು ಕಂಬಿಯೆಣಿಸುವಂತೆ ಮಾಡಿ ಬಿಡುತ್ತಿತ್ತೋ ಏನೋ. ಆದ್ದರಿಂದ, ಮಳೆಯನ್ನು ದೂರದಿರೋಣ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ.

Tuesday, 10 June 2014

ಮಿರ್ಝಾ ಎತ್ತಿರುವ ಪ್ರಶ್ನೆಗಳು ಮತ್ತು ಅನಾಥ ಗುರುತಚೀಟಿ

ಮಿರ್ಜಾ
   ಇನ್ನೂ ದೃಢಪಟ್ಟಿಲ್ಲದ ಆರೋಪವೊಂದರ ಹೆಸರಿನಲ್ಲಿ ಮಹಾರಾಷ್ಟ್ರದ ಪುಣೆಯ ಶೇಖ್ ಮುಹ್ಸಿನ್ ಸಾದಿಕ್ ಎಂಬ ಟೆಕ್ಕಿಯನ್ನು (ಕಂಪ್ಯೂಟರ್ ಎಂಜಿನಿಯರ್) ಹಿಂದೂ ರಾಷ್ಟ್ರ ಸೇನೆಯ ಕಾರ್ಯಕರ್ತರು ಕೊಲೆಗೈದ ಮರುದಿನವೇ ಇತ್ತ ಬೆಂಗಳೂರಿನಲ್ಲಿ ಎಜಾಝ್ ಅಹ್ಮದ್ ಮಿರ್ಝಾ ಎಂಬ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.) ನಿರಪರಾಧಿ ಎಂದು ಘೋಷಿಸಿದೆ. ಹಾಗಂತ, ಈ ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿವೆ ಎಂದಲ್ಲ. ರಾಜ್ಯದ ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸಿದ್ದಾರೆಂದು ಆರೋಪಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತ ಮುತೀಉರ್ರಹ್ಮಾನ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಓ.) ಕಿರಿಯ ಸಂಶೋಧಕ ಎಜಾಝ್ ಮಿರ್ಝಾ ಸೇರಿದಂತೆ 15 ಮಂದಿಯನ್ನು 2012 ಆಗಸ್ಟ್ 29ರಂದು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ಭಯೋತ್ಪಾದನೆಯ ಹತ್ತು-ಹಲವು ಚಿತ್ರಕತೆಗಳು ಪ್ರಕಟವಾದುವು. ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿಯು ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚನ್ನು ಈತ ಹೆಣೆದಿದ್ದ ಅಂದುವು. ಪತ್ರಕರ್ತ, ಸಂಶೋಧಕನ ವೇಷದಲ್ಲಿ ಭಯೋತ್ಪಾದಕರು ಹೇಗೆ ವ್ಯವಸ್ಥೆಯೊಳಗೆ ನುಸುಳಿಕೊಳ್ಳುತ್ತಾರೆ ಎಂಬ ಸಂಶೋಧನಾತ್ಮಕ ವರದಿಯನ್ನು ಭೀತಿಯ ಪದಗಳಲ್ಲಿ ಮಂಡಿಸಿದುವು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಇದಾಗಿ ಆರು ತಿಂಗಳುಗಳ ಬಳಿಕ ಮುತೀಉರ್ರಹ್ಮಾನ್‍ನನ್ನು ಎನ್.ಐ.ಏ. ನಿರಪರಾಧಿಯೆಂದು ಘೋಷಿಸಿತು. ಇದೀಗ ಮಿರ್ಝಾನನ್ನು ಅದು ನಿರಪರಾಧಿಯೆಂದು ಸಾರಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಾದಿಕ್‍ನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ. ಶಿವಾಜಿ ಮತ್ತು ಬಾಳಾಠಾಕ್ರೆಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಭ್ಯ ಸ್ಟೇಟಸ್ ಹಾಕಿದ್ದಾನೆ ಎಂಬುದು ಈತನ ಮೇಲಿನ ಆರೋಪ. ಆದರೆ, ಕಿಡಿಗೇಡಿಗಳು ಆತನ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಸ್ಟೇಟಸ್ ಅನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಇದರ ಸತ್ಯಾಂಶ ಹೊರಬರುವ ಮೊದಲೇ ಆತನನ್ನು ಕೊಲೆ ಮಾಡಲಾಗಿದೆ.
 ಅಂದ ಹಾಗೆ, ಇಲ್ಲಿರುವ ಎರಡೂ ಘಟನೆಗಳಲ್ಲೂ ಒಂದು ಪ್ರಮುಖ ಸಾಮ್ಯತೆಯಿದೆ. ಅದುವೇ ಶಂಕೆ. ಏಜಾಝ್ ಮಿರ್ಝಾ ಅಥವಾ ಮುತೀಉರ್ರಹ್ಮಾನ್‍ನ ಬಂಧನದಲ್ಲೂ ಈ ಶಂಕೆಯೇ ಪ್ರಧಾನ ಪಾತ್ರ ವಹಿಸಿತ್ತು. ಇವರ ಬಂಧನಕ್ಕೆ ಪೂರಕವಾಗಿ ಪೊಲೀಸರು ಸಮಾಜದ ಮುಂದೆ ಯಾವ ಸಾಕ್ಷ್ಯವನ್ನೂ ಮಂಡಿಸಿರಲಿಲ್ಲ. ಪತ್ರಿಕಾಗೋಷ್ಠಿ ಕರೆದು ಒಂದೆರಡು ಆರೋಪಗಳನ್ನು ಹೊರಿಸಿದ್ದರೇ ಹೊರತು ಆ ಆರೋಪ ಹುಟ್ಟು ಹಾಕುವ ಹತ್ತು-ಹಲವು ಪ್ರಶ್ನೆಗಳಿಗೆ ಆವತ್ತಾಗಲಿ ಆ ಬಳಿಕವಾಗಲಿ ಉತ್ತರಿಸುವ ಪ್ರಯತ್ನವನ್ನೇ ಮಾಡಿಲ್ಲ. ಆ ನಂತರ ಮಾಧ್ಯಮಗಳಲ್ಲಿ ಪ್ರಕಟವಾದದ್ದೆಲ್ಲ ಶಂಕಿತ ಬರಹಗಳೇ. ಇದೀಗ ಪುಣೆಯ ಟೆಕ್ಕಿಯ ಹತ್ಯೆಗೂ ಇಂಥದ್ದೇ ಶಂಕೆ ಕಾರಣವಾಗಿದೆ. ಆತನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತೇ ಹೊರತು ಆತನೇ ತಪ್ಪಿತಸ್ಥ ಎಂದು ಖಚಿತವಾಗಿ ಪೊಲೀಸರೂ ಹೇಳಿರಲಿಲ್ಲ. ಆದರೆ ಈ ದೇಶದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವ ಶಂಕೆಗೆ ಗುರಿಯಾಗುವುದು ಎಷ್ಟು ಅಪಾಯಕಾರಿ ಎಂಬುದು ಸಾದಿಕ್‍ನ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ. ನಿಜವಾಗಿ, ಸಾದಿಕ್‍ನ ಮೇಲೆ ತಕ್ಷಣಕ್ಕೆ ಶಂಕೆ ವ್ಯಕ್ತಪಡಿಸುವುದಕ್ಕೆ ಸಣ್ಣದೊಂದು ಆಧಾರವಾದರೂ ಇತ್ತು. ಆದರೆ ಹೆಚ್ಚಿನ ಬಾರಿ ಮುಸ್ಲಿಮ್ ಯುವಕರು ಶಂಕಿತಗೊಳ್ಳುವುದಕ್ಕೆ ಇಷ್ಟು ಆಧಾರಗಳೂ ಇರುವುದಿಲ್ಲ. ಈ ದೇಶದ ಉದ್ದಗಲದಿಂದ ಭಯೋತ್ಪಾದನೆ ಮತ್ತು ಶಂಕೆಯ ಹೆಸರಲ್ಲಿ ಅನೇಕ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಅನೇಕ ಬಾರಿ ಅವರ ಬಗ್ಗೆ ಅನುಮಾನ ಪಡುವುದಕ್ಕೆ ಇರುವ ಏಕೈಕ ಕಾರಣ ಅವರ ಮುಸ್ಲಿಮ್ ಐಡೆಂಟಿಟಿ. ಮುಸ್ಲಿಮ್ ಹೆಸರು ಮತ್ತು ಚಹರೆಯನ್ನು ಹೊಂದಿರುವ ವ್ಯಕ್ತಿಯ ಮೇಲೆ ಅನುಮಾನ ಬರುವುದು ಸಹಜ ಎಂಬ ವಾತಾವರಣವನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ಹುಟ್ಟು ಹಾಕಲಾಗಿದೆ. ಆದ್ದರಿಂದಲೇ ಮಿರ್ಝಾ, ಮುತೀಅïರನ್ನು ಪೊಲೀಸರು ಭಯೋತ್ಪಾದಕರೆಂದು ಕರೆದಾಗ ಅದನ್ನು ಸಮರ್ಥಿಸುವಂತೆ ಮಾಧ್ಯಮ ಕ್ಷೇತ್ರದ ಕೆಲವರು ವರ್ತಿಸಿದ್ದು. ಈ ಬಂಧಿತರಲ್ಲಿ ಭಯೋತ್ಪಾದನೆಯ ರೋಗಾಣುಗಳು ಇವೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದು.
 ಭಯೋತ್ಪಾದಕನೆಂಬ ಗುರುತು ಚೀಟಿಯನ್ನು ಎರಡು ವರ್ಷಗಳ ವರೆಗೆ ಕೊರಳಿಗೆ ತೂಗು ಹಾಕಿಕೊಂಡ ಮಿರ್ಝಾನಿಗೆ ಇದೀಗ ನಿರಪರಾಧಿ ಎಂಬ ಗುರುತು ಚೀಟಿ ಲಭ್ಯವಾಗಿದೆ. ಹಾಗಂತ, ಆತ ಆ ಭಯೋತ್ಪಾದಕ ಗುರುತು ಚೀಟಿಯನ್ನು ಕೇಳಿ ಪಡೆದಿರಲಿಲ್ಲ ಅಥವಾ ಸ್ವಯಂ ಸಂಪಾದಿಸಿಯೂ ಇರಲಿಲ್ಲ. ಅದನ್ನು ಸ್ಥಾಪಿತ ಹಿತಾಸಕ್ತಿಗಳು ಬಲವಂತವಾಗಿ ಆತನ ಕೊರಳಿಗೆ ನೇತು ಹಾಕಿದ್ದುವು. ಆತ ಧರಿಸಲು ಒಪ್ಪದೇ ಇದ್ದಾಗ ಆತನ ಮೇಲೆ ಹಿಂಸೆ ಎಸಗಲಾಯಿತು. ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ನ್ಯಾಯಾಧೀಶರ ಮುಂದೆ ಈ ಗುರುತು ಚೀಟಿಯನ್ನು ಸಮರ್ಥಿಸಿಕೊಳ್ಳುವಂತೆ ಬೆದರಿಕೆ ಹಾಕಲಾಯಿತು. ಅದೇ ವೇಳೆ, ನಾಗರಿಕ ಜಗತ್ತು ಮತ್ತು ಆ ಜಗತ್ತಿನಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಮಾಧ್ಯಮದ ಮಂದಿಯೂ ಆತನ ಆ ಗುರುತು ಚೀಟಿಯನ್ನು ಅಸಲಿ ಎಂದೇ ಕರೆದರು. ಆ ಗುರುತು ಚೀಟಿ ಇಡೀ ರಾಜ್ಯವನ್ನೇ ಧ್ವಂಸಗೊಳಿಸುವಷ್ಟು ಭೀಕರ ರೂಪದ್ದು ಅಂದರು. ಆತನೊಂದಿಗೆ ಸಲುಗೆಯಿಂದಿದ್ದ ಗೆಳೆಯರೇ ಆ ಗುರುತನ್ನು ಕಂಡು ಭಯಪಟ್ಟರು. ಮನೆ ಸ್ಮಶಾನವಾಯಿತು. ಡಿಆರ್‍ಡಿಓ ಅಂತೂ ಆತನನ್ನು ಕೆಲಸದಿಂದಲೇ ವಜಾಗೊಳಿಸಿತು. ಹೀಗೆ ಪಡಬಾರದ ಸಂಕಟವನ್ನು ಅನುಭವಿಸಿದ ಆತನಿಗೆ ಇದೀಗ 'ನಿರಪರಾಧಿ' ಎಂಬ ಗುರುತು ಚೀಟಿಯನ್ನು ನೀಡಲಾಗಿದೆ. ಆದರೆ, ಇದನ್ನು ಧರಿಸುವ ಮೊದಲು ಈ ಮೊದಲಿನ ಗುರುತು ಚೀಟಿಯ ಇತ್ಯರ್ಥ  ಆಗಬೇಕಾಗಿದೆ. ಅದನ್ನು ಧರಿಸಬೇಕಾದವರು ಯಾರೆಲ್ಲ? ಅವರೇಕೆ ಇದೀಗ ಅದನ್ನು ಧರಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ? ಎರಡು ವರ್ಷಗಳ ವರೆಗೆ ಧರಿಸಿಕೊಂಡು ಓಡಾಡಿದ ಆತನ ಗುರುತು ಚೀಟಿಯನ್ನು ಕನಿಷ್ಠ ಎರಡು ದಿನಗಳ ಮಟ್ಟಿಗಾದರೂ ಧರಿಸಿಕೊಂಡು ಓಡಾಡಲು ಇವರು ಮುಂದೆ ಬರುತ್ತಿಲ್ಲವೇಕೆ? ಮಿರ್ಝಾ ನಿರಪರಾಧಿ ಎಂದಾದರೆ, ಆತನನ್ನು ಭಯೋತ್ಪಾದಕನೆಂದು ಕರೆದವರು ಏನಾಗಬೇಕು? ಅವರ ಕೊರಳಿಗೆ ಈ ಸಮಾಜ ಯಾವ ಗುರುತನ್ನು ನೇತು ಹಾಕಬೇಕು?
  
ಸಾದಿಕ್

ಏನೇ ಆದರೂ, ಮಿರ್ಝಾ ಆಗಲಿ, ಸಾದಿಕ್ ಆಗಲಿ  ಸಮಾಜವೆಂಬ ನಾವೇ ಹುಟ್ಟು ಹಾಕಿರುವ ಭ್ರಮೆಯೊಂದರ ಬಲಿಪಶುಗಳು. ಅವರು ಶಂಕಿತರಾದದ್ದು ತಮ್ಮ ಕೃತ್ಯಗಳಿಂದಲ್ಲ, ನಮ್ಮ ಭ್ರಮೆಗಳಿಂದ. ಈ ಭ್ರಮೆಯು ಸಾದಿಕ್‍ನ ಜೀವ ತೆಗೆದರೆ, ಮಿರ್ಝಾನ ಅತ್ಯಮೂಲ್ಯ ಸಂತಸವನ್ನೂ ಆಯುಷ್ಯವನ್ನೂ ಕಸಿದುಕೊಂಡಿದೆ. ಮಾತ್ರವಲ್ಲ, ಇಂಥ ಅನೇಕಾರು ಮಿರ್ಝಾರ ಬದುಕನ್ನು ಅದು ಇವತ್ತೂ ಕಸಿದುಕೊಳ್ಳುತ್ತಲೂ ಇವೆ. ಒಂದು ವೇಳೆ ಸಾದಿಕ್‍ನ ಮೇಲಿದ್ದ ಶಂಕೆ ನಿಜವೇ ಆಗಿರುತ್ತಿದ್ದರೂ ಆತನಿಗೆ ಕೆಲವು ತಿಂಗಳುಗಳ ಶಿಕ್ಷೆಯಷ್ಟೇ ಆಗುತ್ತಿತ್ತು. ಆದರೆ ನಾವು ಬಿತ್ತಿರುವ ಭ್ರಮೆಯು ಯಾವ ಪ್ರಮಾಣದಲ್ಲಿದೆಯೆಂದರೆ, ಕೊಲೆಯೇ ನಡೆಸುವಷ್ಟು ಮತ್ತು ಅದನ್ನು ನಿರ್ಲಜ್ಜವಾಗಿ ಸಮರ್ಥಿಸುವಷ್ಟು. ಇವತ್ತು ನಿರಪರಾಧಿ ಮಿರ್ಝಾ ಎತ್ತಿರುವ ಪ್ರಶ್ನೆಯನ್ನು ನಾಳೆ ಸಾದಿಕ್‍ನೂ ಎತ್ತಬಹುದು. ಆದರೆ ಉತ್ತರಿಸುವವರು ಯಾರು?

Saturday, 7 June 2014

ಮಹೇಶ್ವರಿ, ಶಿಲ್ಪ, ಶ್ರೀನಿವಾಸ ಮತ್ತು ನಾವು

   ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆ ಸಣ್ಣದೇನೂ ಅಲ್ಲ. ಪತ್ರಿಕೆಗಳು ಇಂಥ ಸುದ್ದಿಗಳನ್ನು ಪ್ರತಿದಿನ ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟವಾಗುವಷ್ಟು ಸಹಜ ಅನ್ನಿಸಿಕೊಂಡಿರುವ ಇಂಥ ಪ್ರಕರಣಗಳು ಓದುಗರಲ್ಲಿ ಅಪಾರ ಕುತೂಹಲವನ್ನು ಇವತ್ತು ಉಳಿಸಿಕೊಂಡೂ ಇಲ್ಲ. ಓಡಿಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳಗಳನ್ನು ಬೈಯ್ದು ನಾವೆಲ್ಲ ಸುಮ್ಮನಾಗುತ್ತೇವೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೆತ್ತವರನ್ನೇ ತೊರೆಯುವ ಹದಿಹರೆಯದ ಆವೇಶವನ್ನು ಖಂಡಿಸುತ್ತೇವೆ. ನಿಜವಾಗಿ, ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೋ ಪರಾರಿಯಾಗುವುದಕ್ಕೋ ನಿರ್ಧರಿಸುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸುತ್ತದೆ. ಆದರೆ ಅದನ್ನು ಗುರುತಿಸಿ, ಸಮಾಜವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಹದಿಹರೆಯಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರೇಮವು ಗಲ್ಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂಬ ತಪ್ಪಿತಸ್ಥ ಭಾವನೆಯಲ್ಲಿ ಇಂಥ ಜೋಡಿಗಳು ಹೆಚ್ಚಿನ ಬಾರಿ ಕುಗ್ಗಿ ಹೋಗುವುದೇ ಹೆಚ್ಚು. ಹೀಗೆ ಸಮಾಜವನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಓಡಿ ಹೋಗುವ ಅಥವಾ ಸಾವಿಗೆ ಶರಣಾಗುವ ಯುವ ಜೋಡಿಗಳ ಪ್ರಕರಣಗಳು ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿವೆ.
 ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹನುಮಂತ ಮತ್ತು ಮಹೇಶ್ವರಿ ಎಂಬ ಯುವ ಜೋಡಿಯನ್ನು ಕಳೆದ ವಾರ ಕೊಲೆ ಮಾಡಲಾಗಿದೆ. ಆಕೆ ಹನುಮಂತನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಶ್ರೀನಿವಾಸ ಎಂಬವನಿಗೆ ಮದುವೆ ಮಾಡಿಕೊಟ್ಟರು. ಈ ಮದುವೆಯನ್ನು ಒಪ್ಪಿಕೊಳ್ಳದೇ ಆಕೆ ಹನುಮಂತನೊಂದಿಗೆ ಹೊರಟು ಹೋದಾಗ ಶ್ರೀನಿವಾಸನು ಅವಮಾನ ತಡೆಯಲಾರದೇ ಅವರಿಬ್ಬರನ್ನು ಊರ ಹೊರಗೆಯೇ ಹತ್ಯೆ ಮಾಡಿಸಿದ್ದಾನೆ. ಈ ಪ್ರಕರಣಕ್ಕಿಂತ ಒಂದು ತಿಂಗಳು ಮೊದಲಷ್ಟೇ ಮೈಸೂರಿನ ಶಿಲ್ಪಾ ನಾಯಕ್‍ಳನ್ನು ಕೊಲೆ ಮಾಡಲಾಗಿತ್ತು. ಅಭಿಷೇಕ್ ಎಂಬ ದಲಿತನನ್ನು ಪ್ರೀತಿಸಿ ವಿವಾಹವಾದದ್ದೇ ಈ ಹತ್ಯೆಗೆ ಕಾರಣವಾಗಿತ್ತು. ಸಾಮಾನ್ಯವಾಗಿ, ಇಂಥ ಪ್ರೇಮ ಪ್ರಕರಣಗಳು ಹತ್ಯೆ, ಆತ್ಮಹತ್ಯೆ, ಪರಾರಿಗಳ ಮೂಲಕ ಕೆಲವೊಮ್ಮೆ ಸುದ್ದಿಯಾದರೆ ಇನ್ನೂ ಹಲವು ಸುದ್ದಿಯಾಗದೇ ಸತ್ತು ಹೋಗುತ್ತವೆ. ಇವತ್ತು ಓರ್ವ ಹೆಣ್ಣು ಮಗಳನ್ನು ಕೊಲೆಗೈದ ಕ್ರಿಮಿನಲ್ ಅಪರಾಧದೊಂದಿಗೆ ಶ್ರೀನಿವಾಸ ತನ್ನ ‘ಮಧುಚಂದ್ರ’ದ ಬದುಕನ್ನು ಆರಂಭಿಸಿದ್ದಾನೆ. ಆದರೆ ಅಂಥದ್ದೊಂದು ಭೀಕರ ಕೃತ್ಯ ನಡೆಸುವಲ್ಲಿ ಆತನಿಗೆ ಪ್ರಚೋದನೆ ಕೊಟ್ಟದ್ದಾದರೂ ಯಾವುದು? ಮಹೇಶ್ವರಿಯ ನಿರ್ಧಾರವನ್ನು ಖಂಡಿಸುವಾಗಲೂ, ಅದರ ಜೊತೆಗೆ ಹತ್ತು-ಹಲವು ಪ್ರಶ್ನೆಗಳು ಎದುರಾಗುತ್ತವೆ. ಸಾಕಿ-ಸಲಹಿದ ಹೆತ್ತವರನ್ನೇ ತೊರೆದು ಹೋಗುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದು ಯಾವುದು? ಶ್ರೀನಿವಾಸನಾಗಲಿ, ಮಹೇಶ್ವರಿಯಾಗಲಿ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲೇನೂ ಭಾಗಿಯಾಗಿರಲಿಲ್ಲ. ವಿವಾಹ ಬಂಧನದೊಂದಿಗೆ ಜೀವನದ ಹೊಸ ಮಜಲನ್ನು ತುಳಿಯಬೇಕಾದ ಯುವ ಸಮೂಹವನ್ನು ಅರ್ಥೈಸಿಕೊಳ್ಳುವಲ್ಲಿ ಹೆತ್ತವರು ಎಡವುತ್ತಿದ್ದಾರೆಯೇ? ಈ ಎಡವಿಕೆಗೆ ಕಾರಣವೇನು? ಪ್ರಿಯಕರನ ಮಾತು ಕೇಳಿ ಗಂಡನನ್ನೇ ನಿರ್ಲಕ್ಷಿಸಿದಳು ಅಥವಾ ಹೆತ್ತವರನ್ನೇ ತೊರೆದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
 ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ-ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹೀರೋಯಿನ್‍ಳ ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅನುಮತಿ ಇಲ್ಲದೇ ಪ್ರೀತಿಸಿದ ಹೀರೋ ಹೀರೋಯಿನ್‍ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಹೋರೋಯಿನ್‍ಳ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ-ಹೀರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಈ ಹದಿಹರೆಯದ ಯುವಕ-ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ ಸಿನಿಮಾಗಳ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾಗಳನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
 ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ. ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಗಂಡು ಮಕ್ಕಳಿಗೆ ಮಾತ್ರವಾಗಿದ್ದ ಕಾಲೇಜುಗಳು ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನೂ ಸೇರಿಸಿಕೊಳ್ಳುತ್ತಿವೆ. ಕೇವಲ ಗಂಡು  ಮಕ್ಕಳೇ ಇರುವ ಅಥವಾ ಹೆಣ್ಣು ಮಕ್ಕಳೇ ಇರುವ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಮಕ್ಕಳು ಹಿಂಜರಿಯುತ್ತಿದ್ದಾರೆ ಎಂಬ ಸಬೂಬನ್ನು ಕಾಲೇಜು ಆಡಳಿತ ಮಂಡಳಿಗೇ ಇವತ್ತು ನೀಡತೊಡಗಿವೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ, ಪರಸ್ಪರ ಆಕರ್ಷಣೆಗೆ ಒಳಗಾಗುವ ಯುವಕ ಮತ್ತು ಯುವತಿಯನ್ನು ಮಾತ್ರವೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಈ ಆಕರ್ಷಣೆಯು ಈ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ.. ಮಹೇಶ್ವರಿ ಆಗಲಿ, ಶಿಲ್ಪಾ ನಾಯಕ್ ಆಗಲಿ ನಮ್ಮದೇ ಉತ್ಪನ್ನಗಳು. ಈ ಸಮಾಜದ ಆಗು-ಹೋಗುಗಳು, ಅಭಿರುಚಿಗಳು, ಸಿನಿಮಾಗಳು.. ಮುಂತಾದುವುಗಳನ್ನು ನೋಡಿಕೊಂಡೇ ಅವರು ಬೆಳೆದಿದ್ದಾರೆ. ಶ್ರೀನಿವಾಸ ಕೂಡಾ ಈ ಸಮಾಜದ ಮಗುವೇ. ಆತ ಇವತ್ತು ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದರೂ ಆತನೊಳಗೆ ಅಂಥದ್ದೊಂದು ಕ್ರೌರ್ಯವನ್ನು ತುಂಬಿರುವುದು ಈ ಸಮಾಜದ ದ್ವಂದ್ವಗಳೇ. ಇಂಥ ಕಟು ಸತ್ಯಗಳನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ಹಿರಿಯರ ಮೇಲಿದೆ. ಹದಿಹರೆಯದವರ ಆಲೋಚನೆಯನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ಮುಕ್ತ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಎಂಬ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ಅವರಿಗೆ ದಾಟುತ್ತಲಿರಬೇಕು.
 ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ. ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ.

Wednesday, 28 May 2014

ಹೀಗೆ ಮೋದಿಯವರು ಮತ್ತೆ ಮತ್ತೆ ಸುಳ್ಳಾಗಿಸುತ್ತಲೇ ಹೋಗಲಿ...

   ಬಿಜೆಪಿಗೆ ಚಲಾವಣೆಯಾದ ಒಟ್ಟು ಓಟುಗಳಲ್ಲಿ ಒಂದು ಓಟು ತಿರುಗಿಬಿದ್ದಿದೆ. ಆ ಓಟಿನ ಹೆಸರು ಧರ್ಮಾವತಿ. ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಇತ್ತ ಉತ್ತರ ಪ್ರದೇಶದ ಮಥುರಾದಲ್ಲಿ ಧರ್ಮಾವತಿ ಎಂಬ ವಿಧವೆ ನಿರಶನ ಕೈಗೊಂಡಿದ್ದರು. ಮೋದಿಯವರ ಮಾತಿನಿಂದ ಪ್ರಭಾವಿತಗೊಂಡ ಅಸಂಖ್ಯ ಮಹಿಳೆಯರಲ್ಲಿ ಈಕೆಯೂ ಒಬ್ಬರು. ಕಾಶ್ಮೀರದ ಪೂಂಚ್ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಧರ್ಮಾವತಿಯವರ ಪತಿ ಹೇಮರಾಜ್‍ರನ್ನು 2013 ಜನವರಿ 8ರಂದು ಪಾಕ್ ಸೇನೆಯು ಹತ್ಯೆ ಮಾಡಿ ರುಂಡವನ್ನು ಹೊತ್ತೊಯ್ದಿತ್ತು. ಅಂದಿನಿಂದ ಇಂದಿನವರೆಗೆ ಪತಿಯ ರುಂಡಕ್ಕಾಗಿ ಧರ್ಮಾವತಿ ಕಾಯುತ್ತಿದ್ದಾರೆ. ಈ ಕ್ರೌರ್ಯಕ್ಕೆ ಕಾರಣವಾದ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಾ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೇಮರಾಜ್‍ರ ಹತ್ಯೆಯ ಕುರಿತಂತೆ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದರು. ಈ ವಿಷಯದಲ್ಲಿ ಮನ್‍ಮೋಹನ್ ಸಿಂಗ್ ಸರಕಾರದ ನಿಲುವನ್ನು ಅವರು ತೀವ್ರ ತರಾಟೆಗೂ ಎತ್ತಿಕೊಂಡಿದ್ದರು. ಮಾತ್ರವಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಪತಿಯ ರುಂಡ ಕತ್ತರಿಸಿದ ಪಾಕ್‍ನ ಪ್ರಧಾನಿಯನ್ನೇ ತನ್ನ ಪ್ರಮಾಣ ವಚನಕ್ಕೆ ಮೋದಿ ಆಹ್ವಾನಿಸಿರುವುದು ಧರ್ಮಾವತಿಯನ್ನು ಸಿಟ್ಟಿಗೆಬ್ಬಿಸಿದೆ. ಮೋದಿಯವರನ್ನು ನಂಬಿ ಕೆಟ್ಟೆ ಅನ್ನುವ ಭಾವದಲ್ಲಿ ಆಕೆ ಮೇ 26ರಂದು ನಿರಶನ ಕೈಗೊಂಡಿದ್ದಾರೆ.
 ಆದರೂ, ಧರ್ಮಾವತಿಯ ನೋವು, ದುಗುಡ, ಆಕ್ರೋಶವನ್ನು ಗೌರವಿಸುತ್ತಲೇ ನಾವು ಮೋದಿಯವರ ನಡೆಯನ್ನು ಸ್ವಾಗತಿಸಬೇಕಾಗಿದೆ. ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಆಹ್ವಾನಿಸುವ ಮೂಲಕ ಚುನಾವಣಾ ರಾಜಕೀಯಕ್ಕೂ ವಾಸ್ತವ ರಾಜಕೀಯಕ್ಕೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸವನ್ನು ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದ್ದಾರೆ. ಧರ್ಮಾವತಿ ಮುಗ್ಧೆ. ಯೌವನದಲ್ಲೇ ಪತಿಯನ್ನು ಕಳಕೊಂಡ ಆಕೆಯ ಪಾಲಿಗೆ ಪಾಕ್ ಅತಿದೊಡ್ಡ ಶತ್ರು. ಈ ಶತ್ರುವಿಗೆ ಪಾಠ ಕಲಿಸುವುದಕ್ಕಾಗಿ ಆಕೆಯ ಎದುರು ಹಲವು ಆಯ್ಕೆಗಳಿರಬಹುದು. ಪಾಕ್‍ಗೆ ಬಾಂಬ್ ಹಾಕುವುದು, ಸೇನಾ ದಾಳಿ, ಪಾಕ್‍ನೊಂದಿಗೆ ಎಲ್ಲ ವಿಧದ ಸಂಬಂಧ ಕಡಿದುಕೊಳ್ಳುವುದು, ರುಂಡವನ್ನು ಮರಳಿಸುವ ವರೆಗೂ ರಾಜಕೀಯ ಸಂಬಂಧವನ್ನು ಮುರಿದು ಬಿಡುವುದು.. ಇತ್ಯಾದಿ. ಆದರೆ, ನರೇಂದ್ರ ಮೋದಿಯವರು ರಾಜಕಾರಣಿ. ಅವರು ಧರ್ಮಾವತಿಯಂತೆ ಆಲೋಚಿಸುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಪಾಕ್ ಪ್ರಧಾನಿ ನವಾಝ್ ಶರೀಫ್‍ರನ್ನು ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಒಂದು ದೇಶ ಅಭಿವೃದ್ದಿ ಪಥದಲ್ಲಿ ಸಾಗಬೇಕಾದರೆ ಮೊತ್ತಮೊದಲು ಆ ದೇಶದಲ್ಲಿ ಶಾಂತಿ ನೆಲೆಗೊಂಡಿರಬೇಕು. ಪಶ್ಚಿಮ ಮತ್ತು ಪೂರ್ವ ಜರ್ಮನಿಯಾಗಿ ವಿಭಜನೆಗೊಂಡಿದ್ದ ಜರ್ಮನಿಯು ಮತ್ತೆ ಏಕೀಕೃತಗೊಳ್ಳಲು ಇದುವೇ ಕಾರಣ. ಇವತ್ತು ಉತ್ತರ ಮತ್ತು ದಕ್ಷಿಣ ಕೊರಿಯಾಗಳ ನಡುವಿನ ದ್ವೇಷವು ಆ ಇಡೀ ವಲಯವನ್ನು ಅಶಾಂತಿಯೆಡೆಗೆ ದೂಡಿರುವುದು ಎಲ್ಲರಿಗೂ ಗೊತ್ತು. ಅಂದಹಾಗೆ, ಅನಕ್ಷರತೆ ಮತ್ತು ಬಡತನಗಳಿಂದ ಭಾರತ ಮತ್ತು ಪಾಕ್‍ಗಳೆರಡೂ ಇವತ್ತು ತೀವ್ರ ತೊಂದರೆಯನ್ನು ಅನುಭವಿಸುತ್ತಿವೆ. ಭಯೋತ್ಪಾದನೆಯು ಎರಡೂ ರಾಷ್ಟ್ರಗಳ ಮೇಲೆ ಅಪಾರ ಹಾನಿಯನ್ನು ತಂದೊಡ್ಡುತ್ತಿವೆ. ಇಂಥ ಹೊತ್ತಲ್ಲಿ ಎರಡೂ ರಾಷ್ಟ್ರಗಳು ಯುದ್ಧದ ಭಾಷೆಯಲ್ಲಿ ಮಾತಾಡುವುದು ಮತ್ತು ಗಡಿಯಲ್ಲಿ ಯುದ್ಧಸ್ಥಿತಿ ನಿರ್ಮಿಸುವುದರಿಂದ ಶಸ್ತ್ರಾಸ್ತ್ರ ಕಂಪೆನಿಗಳಿಗೆ ಲಾಭವಾಗಬಹುದೇ ಹೊರತು ಭಾರತ-ಪಾಕ್‍ಗಲ್ಲ. ಒಂದು ವೇಳೆ ಯುರೋಪಿಯನ್ ಯೂನಿಯನ್‍ನಂತೆ ಭಾರತ-ಪಾಕ್-ಬಾಂಗ್ಲಾ ಸೇರಿದಂತೆ ನೆರೆಕರೆ ರಾಷ್ಟ್ರಗಳು ಒಂದಾಗಲು ಮನಸ್ಸು ಮಾಡಿದರೆ, ಅದರಿಂದಾಗುವ ಲಾಭ ಅಪಾರವಾದದ್ದು. ಧರ್ಮಾವತಿಗೆ ಇದು ಗೊತ್ತಿಲ್ಲದಿದ್ದರೂ ಮೋದಿಯವರಿಗೆ ಇದು ಖಂಡಿತ ಗೊತ್ತಿರಬಹುದು. ಆದ್ದರಿಂದಲೇ, ನವಾಝ್ ಶರೀಫ್‍ರನ್ನು ಮೋದಿ ಆಹ್ವಾನಿಸಿದ್ದಾರೆ. ಯೋಧನ ರುಂಡ ಹೊತ್ತೊಯ್ದ ರಾಷ್ಟ್ರದ ಪ್ರಧಾನಿಯನ್ನು ಆಲಿಂಗಿಸಿದ್ದಾರೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಅಂದಿದ್ದ ಮೋದಿಯವರೇ ನವಾಝ್‍ರೊಂದಿಗೆ ಮಾತುಕತೆ ನಡೆಸಿದ್ದಾರೆ.
 ನಿಜವಾಗಿ, ಪಾಕ್ ಪ್ರಧಾನಿಯನ್ನು ಆಹ್ವಾನಿಸುವ ಮೂಲಕ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ಮೊದಲ ಶಾಕ್ ಅನ್ನು ನೀಡಿದ್ದಾರೆ. ಮೋದಿಯನ್ನು ಇವರೆಲ್ಲ ಯುದ್ಧದಾಹಿಯಂತೆ ಚಿತ್ರಿಸಿದ್ದರು. ಮೋದಿ ಪ್ರಧಾನಿಯಾದರೆ ಪಾಕ್‍ಗೆ ಬಾಂಬ್ ಹಾಕುವುದು ಖಚಿತ ಎಂಬಂತೆ ವರ್ತಿಸಿದ್ದರು. ಮೋದಿಯನ್ನು ಒಪ್ಪದವರು ಪಾಕಿಸ್ತಾನಕ್ಕೆ ಹೋಗಿ ಅನ್ನುವಷ್ಟರ ಮಟ್ಟಿಗೆ ಅವರು ಆವೇಶ ವ್ಯಕ್ತಪಡಿಸಿದ್ದರು. ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ಪ್ರಜೆ ಕಸಬ್‍ಗೆ ಬಿರಿಯಾನಿ ಕೊಟ್ಟು ಸಾಕುತ್ತಿದೆ, ಹೇಮ್‍ರಾಜ್‍ನ ರುಂಡ ಹೊತ್ತೊಯ್ದ ಪಾಕ್‍ನ ಮೇಲೆ ದಾಳಿ ಮಾಡದ ಏ.ಕೆ. ಆ್ಯಂಟನಿ ನಿರ್ವೀರ್ಯ ರಕ್ಷಣಾ ಮಂತ್ರಿ.. ಎಂದೆಲ್ಲಾ ಟೀಕಿಸಿದ್ದರು. ಆದರೆ ಇವತ್ತು ಪಾಕ್ ಪ್ರಧಾನಿ ನವಾಝ್ ಶರೀಫ್‍ರಿಗೇ ಬಿರಿಯಾನಿ ಉಣಿಸುವಷ್ಟು ಮೋದಿ ಉದಾರಿಯಾಗಿದ್ದಾರೆ. ದ್ವೇಷದ ಭಾಷೆಗಿಂತ ವಿಶ್ವಾಸ ತುಂಬುವ ನಡೆಗಳೇ ಹೆಚ್ಚು ಸೂಕ್ತ ಎಂಬ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ. ಆದರೆ, ಪಾಕ್‍ನ ವಿರುದ್ಧ ಸದಾ ಕೆಂಡದ ಮಾತುಗಳನ್ನೇ ಉದುರಿಸುವ ಶಿವಸೇನೆಯು ಮೋದಿಯವರ ನಿಲುವಿನ ಬಗ್ಗೆ ಯಾವ ಹೇಳಿಕೆಯನ್ನೂ ಹೊರಡಿಸಿಲ್ಲ. ಮನಮೋಹನ್ ಸಿಂಗ್‍ರ ಸರಕಾರದ ವಿದೇಶಾಂಗ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದ ಮತ್ತು ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಬರದಂತೆ, ಅಲ್ಲಿನ ಕಲಾವಿದರ ತಂಡ ಭಾರತದಲ್ಲಿ ಕಾರ್ಯಕ್ರಮ ನಡೆಸದಂತೆ ತಡೆಯೊಡ್ಡುತ್ತಿದ್ದ ಶಿವಸೇನೆಯು ಇದ್ದಕ್ಕಿದ್ದಂತೆ ಮೌನವಾಗಿರುವುದೇಕೆ?
   ಏನೇ ಆಗಲಿ, 151ರಷ್ಟು ಭಾರತೀಯ ವಿೂನುಗಾರರು ಪಾಕ್ ಜೈಲಿನಿಂದ ಬಿಡುಗಡೆಗೊಳ್ಳುವುದಕ್ಕೆ ಕಾರಣವಾದ ನವಾಝ್ ಶರೀಫ್‍ರ ಭಾರತ ಭೇಟಿ ಮತ್ತು ಅದಕ್ಕೆ ಕಾರಣವಾದ ನರೇಂದ್ರ ಮೋದಿಯವರ ನಡೆಯನ್ನು ನಾವೆಲ್ಲ ಸ್ವಾಗತಿಸಲೇಬೇಕಾಗಿದೆ. ನರೇಂದ್ರ ಮೋದಿಯವರ ಕುರಿತಂತೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ಕೈಗೊಳ್ಳುವ ಸಕಾರಾತ್ಮಕ ನಡೆಗಳನ್ನು ನಾವು ಬೆಂಬಲಿಸಲೇಬೇಕು. ಈ ದೇಶ ಇವತ್ತು ಹತ್ತಾರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೇ ಮೋದಿ ಮತ್ತು ಅವರ ಪಕ್ಷವು ಹೇರಿರುವ ಭೀತಿಯ ಅಜೆಂಡಾಗಳೂ ಇವೆ.
ಮೋದಿ ಪ್ರಧಾನಿಯಾದರೆ ಮುಸ್ಲಿಮರ
ನ್ನು ವಿಶ್ವಾಸದಿಂದ ನಡೆಸಿಕೊಳ್ಳಲಾರರು ಎಂಬುದೂ ಈ ಭೀತಿಯ ಅಜೆಂಡಾಗಳಲ್ಲಿ ಒಂದು. ಆದರೆ ಪಾಕ್‍ನ ವಿಷಯದಲ್ಲಿ ಅವರು ಈ ಅನುಮಾನವನ್ನು ಸದ್ಯದ ಮಟ್ಟಿಗಾದರೂ ಸುಳ್ಳು ಮಾಡಿದ್ದಾರೆ. ಧರ್ಮಾವತಿಯವರಿಗೆ ಇದು ಇಷ್ಟವಾಗದಿದ್ದರೂ ಈ ದೇಶದ ಬಹುಸಂಖ್ಯಾತ ಮಂದಿ ಖಂಡಿತ ಮೋದಿಯವರನ್ನು ಈ ನಡೆಗಾಗಿ ಮೆಚ್ಚಿಕೊಂಡಾರು. ಮುಂದಿನ ದಿನಗಳಲ್ಲಿ ಮೋದಿಯವರಿಂದ ಇಂಥ ಇನ್ನಷ್ಟು ಸಕಾರಾತ್ಮಕ ನಡೆಗಳನ್ನು ಈ ದೇಶ ಖಂಡಿತ ನಿರೀಕ್ಷಿಸುತ್ತದೆ. ತನ್ನ ಸುತ್ತ ಈಗಾಗಲೇ ವ್ಯಕ್ತವಾಗಿರುವ ಮತ್ತು ವ್ಯಕ್ತವಾಗುತ್ತಿರುವ ಅನುಮಾನಗಳನ್ನೆಲ್ಲ ಪ್ರಧಾನಿ ಮೋದಿಯವರು ಹೀಗೆ ಸುಳ್ಳು ಮಾಡುತ್ತಲೇ ಹೋಗಲಿ ಮತ್ತು ಮುಸ್ಲಿಮ್ ದ್ವೇಷಿ ನಿಲುವನ್ನು ಹೊಂದಿರುವ ಅವರ ಕೆಲವು ಬೆಂಬಲಿಗರನ್ನು ಮತ್ತೆ ಮತ್ತೆ ನಿರಾಶೆಗೆ ಒಳಪಡಿಸುತ್ತಲೇ ಇರಲಿ ಎಂದೇ ಈ ಸಂದರ್ಭದಲ್ಲಿ ಹಾರೈಸಬೇಕಾಗಿದೆ.

Wednesday, 21 May 2014

ಭಾರತ್ ಮಾತಾಕಿ ಜೈ, ಜೈ ಹಿಂದ್ ಮತ್ತು ಪ್ರಧಾನಿ ಮೋದಿ..

   ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಎಂಬೆರಡು ಘೋಷಣೆಗಳು ಈ ದೇಶದಲ್ಲಿ ಪ್ರತಿದಿನ ನೂರಾರು ಬಾರಿ ಮೊಳಗುತ್ತಿರುತ್ತವೆ. ಸಭೆ-ಸಮಾರಂಭ, ಸೆಮಿನಾರ್, ಸಾಂಸ್ಕøತಿಕ ಕಾರ್ಯಕ್ರಮ.. ಮುಂತಾದ ಎಲ್ಲ ವೇದಿಕೆಗಳಲ್ಲೂ ಈ ಎರಡು ಘೋಷಣೆಗಳಿಗೆ ಜಾಗ ಇರುತ್ತವೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆ ಈ ದೇಶದಲ್ಲಿ ಬಳಕೆಯಲ್ಲಿದ್ದಾಗಲೇ ಅದಕ್ಕೆ ಪರ್ಯಾಯವೆಂಬಂತೆ ‘ಜೈ ಹಿಂದ್' ಘೋಷಣೆಯನ್ನು ಈ ದೇಶಕ್ಕೆ ಪರಿಚಯಿಸಿದ್ದು ಸುಭಾಶ್‍ಚಂದ್ರ ಬೋಸ್. ನಿಜವಾಗಿ, ಈ ಎರಡೂ ಘೋಷಣೆಗಳಲ್ಲಿ ಮೂಲಭೂತವಾದ ವ್ಯತ್ಯಾಸ ಇದೆ. ಭಾರತ್ ಮಾತಾಕಿ ಜೈ ಎಂಬ ಘೋಷಣೆಯು ಭಾರತವನ್ನು ಹೆಣ್ಣಾಗಿ ಚಿತ್ರಿಸಿದರೆ, ಜೈ ಹಿಂದ್ ಇದನ್ನು ನಯವಾಗಿ ತಳ್ಳಿ ಹಾಕುತ್ತದೆ. ದೇಶವನ್ನು ‘ಹೆಣ್ಣು' ಎಂಬ ಖಚಿತ ರೂಪಕ್ಕಿಂತ ಭಿನ್ನವಾಗಿ, ಹೆಣ್ಣು-ಗಂಡು ಸಹಿತ ಸರ್ವ ವೈವಿಧ್ಯತೆಗಳೂ ಇರುವ ಒಂದು ರಮ್ಯ ತಾಣವಾಗಿ ಅದು ಭಾರತವನ್ನು ಕಟ್ಟಿಕೊಡುತ್ತದೆ. ಹಾಗಂತ, ಈ ಎರಡೂ ಘೋಷಣೆಗಳು ಈ ದೇಶದಲ್ಲಿ ಪರಸ್ಪರ ಸಂಘರ್ಷಕ್ಕೆ ಕಾರಣ ಆಗಿಲ್ಲ. ಜೈ ಹಿಂದನ್ನು ಇಷ್ಟಪಡುವವರು ಭಾರತ್ ಮಾತಾಕಿಯನ್ನು ಇಷ್ಟಪಡುವವರ ಮೇಲೆ ದಾಳಿ ಮಾಡಿಲ್ಲ. ಸುಭಾಶ್ ಚಂದ್ರ ಬೋಸ್‍ರನ್ನು ಯಾರೂ ದೇಶದ್ರೋಹಿಯಂತೆ ಕಂಡೂ ಇಲ್ಲ. ಈ ಎರಡೂ ಘೋಷಣೆಗಳ ನಡುವೆ ಇರುವ ಅಪಾರ ಅರ್ಥ ಮತ್ತು ಭಾವ ವ್ಯತ್ಯಾಸದ ಹೊರತಾಗಿಯೂ ಇವು ಈ ದೇಶದಲ್ಲಿ ಸೌಹಾರ್ದತೆಯಿಂದ ಮೊಳಗಿವೆ. ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುವ ಈ ಸಂದರ್ಭದಲ್ಲಿ ಈ ಎರಡು ಘೋಷಣೆಗಳ ನಡುವಿನ ಹೋಲಿಕೆ ಮತ್ತು ಚರ್ಚೆ ಅಗತ್ಯ ಅನಿಸುತ್ತದೆ. ಮೋದಿಯವರು ಚುನಾವಣಾ ಪ್ರಚಾರದ ಸಮಯದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ದೇಶದಲ್ಲಿ ಧಾರಾಳ ಚರ್ಚೆಗೊಳಗಾಗಿವೆ. ಅವರ ಮಾತಿನ ಧಾಟಿ, ದೇಹಭಾಷೆ, ವ್ಯಂಗ್ಯ.. ಎಲ್ಲದರಲ್ಲೂ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಮಾತ್ರ ಒಪ್ಪುವ ಸೂಚನೆಯನ್ನು ಅನೇಕರು ಕಂಡುಕೊಂಡಿದ್ದಾರೆ. ಆದ್ದರಿಂದಲೇ, ಮೋದಿಯವರ ಬಗ್ಗೆ ಆತಂಕ ಮೂಡುವುದು. ಎರಡು ವಿಚಾರಧಾರೆಗಳನ್ನು ಪ್ರತಿನಿಧಿಸುವ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್ ಘೋಷಣೆಗಳನ್ನು ಈ ದೇಶದ ಮಂದಿ ಸ್ಫೂರ್ತಿಯಿಂದಲೇ ಸ್ವೀಕರಿಸಿರುವಾಗ ಮೋದಿಯವರು ಈ ವೈಶಾಲ್ಯತೆಯನ್ನು ತಿರಸ್ಕರಿಸಲಾರರು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಲೇ ಆತಂಕದ ಬಗ್ಗೆ ಚರ್ಚಿಸಬೇಕಾಗಿದೆ. ಮೋದಿಯವರು ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿ, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದೂ ಮತ್ತು ಮುಸ್ಲಿಮ್ ನಿರಾಶ್ರಿತರ ಬಗ್ಗೆ ಭಿನ್ನ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಿಂದ ವಲಸೆ ಹೋಗಿರುವ ಹಿಂದೂ ಪಂಡಿತರ ಬಗ್ಗೆ ಮತ್ತು ಗೋದ್ರಾ, ಮುಝಫ್ಫರ್ ನಗರ್ ಅಥವಾ ಕೋಮುಗಲಭೆ ಪೀಡಿತ ದೇಶದ ಇನ್ನಾವುದೇ ಪ್ರದೇಶದಿಂದ ವಲಸೆ ಹೋಗಿರುವ ಮುಸ್ಲಿಮರ ಬಗ್ಗೆ ಅವರ ನಿಲುವು ಒಂದೇ ರೀತಿಯಾಗಿಲ್ಲ. ಪಂಡಿತರ ಬಗ್ಗೆ ವ್ಯಕ್ತಪಡಿಸುವ ಕಾಳಜಿಯನ್ನು ಅವರು ಮುಸ್ಲಿಮ್ ವಲಸಿಗರ ಬಗ್ಗೆ ವ್ಯಕ್ತಪಡಿಸುತ್ತಿಲ್ಲ. ಹೀಗೆ ಓರ್ವ ಪ್ರಧಾನಿಯ ನಿಲುವಿನಲ್ಲಿ ಇರಬೇಕಾದ ಸಂತುಲಿತತೆಯು ತನ್ನಲ್ಲಿಲ್ಲ ಎಂಬುದನ್ನು ಮೋದಿಯವರು ಅನೇಕ ಬಾರಿ ಸಾಬೀತುಪಡಿಸಿದ್ದಾರೆ. ಆದ್ದರಿಂದಲೇ, ಸುಭಾಶ್‍ಚಂದ್ರ ಬೋಸ್ ಮತ್ತು ಅವರ ಜೈ ಹಿಂದ್ ಘೋಷಣೆ ಮತ್ತೆ ಮತ್ತೆ ಪ್ರಸ್ತುತ ಎನಿಸುವುದು. ಸರ್ದಾರ್ ವಲ್ಲಭಾ ಭಾೈ ಪಟೇಲ್‍ರನ್ನು ಮೋದಿಯವರು ಅತ್ಯಂತ ಇಷ್ಟಪಡುತ್ತಾರೆ. ‘ಅವರು ಪ್ರಧಾನಿಯಾಗಿರುತ್ತಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು..’ ಎಂದು ಚುನಾವಣಾ ಭಾಷಣದಲ್ಲೂ ಹೇಳಿಕೊಂಡಿದ್ದಾರೆ. ಆದರೆ ಪಟೇಲ್‍ರು, ‘ಅಲ್ಪಸಂಖ್ಯಾತರಿಗಿರುವ ಶಾಸಕಾಂಗ ಸಭೆಗಳ ಸಮಿತಿಯ’ ಮುಖ್ಯಸ್ಥರಾಗಿದ್ದರು. ಭಾರತದ ಸಂವಿಧಾನವು ಶಿಕ್ಷಣ, ಸಂಸ್ಕøತಿ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಪಸಂಖ್ಯಾತರಿಗೆ ನೀಡಿದ್ದರೆ ಅದರಲ್ಲಿ ಪಟೇಲ್‍ರ ಪಾತ್ರವೂ ಇದೆ. ಪಟೇಲ್‍ರಲ್ಲಿ ಭಿನ್ನ ವಿಚಾರಧಾರೆ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಗೌರವಿಸುವ ಗುಣವಿತ್ತು. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಎದುರು, ‘ಅಲ್ಪಸಂಖ್ಯಾತ ಆಯೋಗ, ಬುಡಕಟ್ಟು ಆಯೋಗ, ಹಿಂದುಳಿದ ಜಾತಿ-ಜನಾಂಗಗಳ ಆಯೋಗ’ ಸಹಿತ ವಿವಿಧ ಆಯೋಗಗಳು ಮತ್ತು ಅವುಗಳ ಕಲ್ಯಾಣ ಕಾರ್ಯಕ್ರಮಗಳು ಚರ್ಚೆಗೆ ಬರಲಿವೆ. ಅಂಥ ಸಂದರ್ಭದಲ್ಲಿ ಪಟೇಲ್‍ರನ್ನು, ಸುಭಾಶ್‍ರನ್ನು ಅವರು ಗೌರವಿಸುತ್ತಾರೋ ಇಲ್ಲವೋ ಎಂಬ ಆತಂಕವೊಂದು ಸಹಜವಾಗಿ ನಿರ್ಮಾಣವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಇದ್ಯಾಗ್ಯೂ ಪಂಡಿತ್ ನೆಹರೂ ಅವರು ಷಣ್ಮುಗಂ ಚೆಟ್ಟಿ, ಜಾನ್ ಮಥಾಯಿ, ಕೆ.ಎಲ್. ರಾವ್, ದೇಶ್‍ಮುಖ್ ಮುಂತಾದ ರಾಜಕಾರಣಿಯೂ ಅಲ್ಲದ ಕಾಂಗ್ರೆಸಿಗರೂ ಅಲ್ಲದ ವ್ಯಕ್ತಿಗಳನ್ನು ತನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಭಿನ್ನ ವಿಚಾರಧಾರೆಯನ್ನು ಗೌರವಿಸಿದ್ದರು. ಭಾರತದಂತಹ ವೈವಿಧ್ಯತೆಯುಳ್ಳ ದೇಶದಲ್ಲಿ ಒಂದೇ ಸಂಸ್ಕøತಿ, ಒಂದೇ ಧರ್ಮ, ಒಂದೇ ವಿಚಾರಧಾರೆಯನ್ನು ಮಾತ್ರ ಪ್ರತಿನಿಧಿಸುವ ಮತ್ತು ಅವಲ್ಲದವುಗಳನ್ನು ದ್ವೇಷಿಸುವ ವಾತಾವರಣ ಸೃಷ್ಟಿಯಾಗಬಾರದೆಂಬುದೇ ಇದರ ಉದ್ದೇಶವಾಗಿತ್ತು. ಪೂರ್ಣ ಬಹುಮತದೊಂದಿಗೆ ಆಯ್ಕೆಯಾಗಿರುವ ಮೋದಿಯವರಲ್ಲಿ ಇಂಥದ್ದೊಂದು ವೈಶಾಲ್ಯತೆ ಇರಬೇಕೆಂಬುದು ಭಾರತೀಯರ ಆಸೆ. ಅಷ್ಟಕ್ಕೂ, ಬಿಜೆಪಿಗೆ ಈ ಬಾರಿ ಚಲಾವಣೆಯಾಗಿರುವ ಒಟ್ಟು ಮತಗಳು 31%. ಅದಕ್ಕೆ ವಿರುದ್ಧವಾಗಿ 69% ಮತಗಳು ಚಲಾವಣೆಯಾಗಿವೆ. ಬಿಜೆಪಿಗೆ ಪೂರ್ಣ ಬಹುಮತ ದೊರಕಿದ್ದರೂ ಆ ಪಕ್ಷವನ್ನು ಒಪ್ಪದವರ ಸಂಖ್ಯೆ ಒಪ್ಪಿದವರಿಗಿಂತ ಎರಡು ಪಟ್ಟು ಅಧಿಕ ಇದೆ ಎಂಬುದು ಮೋದಿಯವರನ್ನು ಸದಾ ನೆನಪಿಸುತ್ತಿರಬೇಕು. ಈ 69% ಮಂದಿಯನ್ನು ತನ್ನ ಬೆಂಬಲಿಗರಾಗಿ ಪರಿವರ್ತಿಸಿಕೊಳ್ಳುವಂತಹ ನಡೆ ಮತ್ತು ನುಡಿಯನ್ನು ಅವರು ತೋರ್ಪಡಿಸಬೇಕು. ವಿಷಾದ ಏನೆಂದರೆ, ಅವರ ಈ ವರೆಗಿನ ನಡೆ ಮತ್ತು ನುಡಿಗಳು ಇಂಥದ್ದೊಂದು ನಿರೀಕ್ಷೆಗೆ ಪೂರಕವಾಗಿಲ್ಲ. ಆದರೂ ಪ್ರಧಾನಿ ಮೋದಿಯು ಮುಖ್ಯಮಂತ್ರಿ ಮೋದಿಯಂತೆ ಆಗಿರಬೇಕಿಲ್ಲ ಎಂಬ ನಿರೀಕ್ಷೆಯನ್ನು ಇದರ ಜೊತೆಗೇ ಇಟ್ಟುಕೊಳ್ಳಬೇಕಾಗಿದೆ.
 'ಒಂದು ಕೈಯಲ್ಲಿ ಕುರ್‍ಆನ್ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್‍ಟಾಪ್' (ಶಿಕ್ಷಣ) ಅನ್ನು ನೀಡುವುದಾಗಿ ಮೋದಿಯವರು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರಿಗೆ ಭರವಸೆ ಕೊಟ್ಟಿದ್ದರು. ಕೇಳಲು ತುಂಬಾ ಇಂಪಾಗಿರುವ ಮತ್ತು ಪರವಶತೆಗೆ ಒಳಪಡಿಸುವ ಈ ಭರವಸೆಯನ್ನು ಮುಸ್ಲಿಮರು ಅಷ್ಟೇ ಉತ್ಸಾಹದಿಂದ ಸ್ವೀಕರಿಸದೇ ಇದ್ದುದಕ್ಕೆ ಕಾರಣ ಮೋದಿಯವರ ಬೆಂಬಲಿಗರಾಗಿದ್ದರು. ಈ ಬೆಂಬಲಿಗರ ವರ್ತನೆಗಳು ಈ ಭರವಸೆಯನ್ನು ನಂಬುವುದಕ್ಕೆ ಪೂರಕ ಆಗಿಯೇ ಇರಲಿಲ್ಲ. ಅವರಲ್ಲಿ ಹೆಚ್ಚಿನವರು ಕುರ್‍ಆನ್‍ನ ಮೇಲೆ ಗೌರವವನ್ನೇ ಹೊಂದಿಲ್ಲ. ಭಗವದ್ಗೀತೆಯನ್ನು ಮುಸ್ಲಿಮರು ಎಷ್ಟು ಗೌರವಿಸಬೇಕೆಂದು ಅವರು ಬಯಸುತ್ತಾರೋ ಅಂಥದ್ದೊಂದು ಗೌರವವನ್ನು ಅವರಿಂದ ಮುಸ್ಲಿಮರೂ ಬಯಸುತ್ತಾರೆ. ಆದರೆ, ಕುರ್‍ಆನಿನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅದನ್ನು ಹೀನಾಯಗೊಳಿಸುತ್ತಿರುವುದು ಈ ಬೆಂಬಲಿಗರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಯನ್ನು ಅಪಹಾಸ್ಯಕ್ಕೆ ಒಳಪಡಿಸುತ್ತಿರುವುದೂ ಅವರೇ. ಸಾಚಾರ್ ಸಮಿತಿಯು ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿಯನ್ನು ದೇಶದ ಮುಂದಿಟ್ಟಾಗ ನ್ಯಾಯಮೂರ್ತಿ ರಾಜಿಂದರ್ ಸಾಚಾರ್‍ರನ್ನೇ ‘ಮುಸ್ಲಿಮ್' ಎಂಬಂತೆ ಚಿತ್ರಿಸಿ ಇಡೀ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ್ದೂ ಅವರೇ. ಮುಸ್ಲಿಮರ ಶೈಕ್ಷಣಿಕ ಹಿನ್ನಡೆಗೆ ಅವರು ಮುಸ್ಲಿಮರನ್ನೇ ಹೊಣೆಯೆಂದು ವಾದಿಸುತ್ತಿದ್ದಾರೆ. ಅವರಿಗೆ ನೀಡಲಾಗುವ ಸ್ಕಾಲರ್‍ಶಿಪ್ ಅನ್ನು ಸ್ವತಃ ಮೋದಿಯವರೇ ಗುಜರಾತ್‍ನಲ್ಲಿ ತಡೆಹಿಡಿದಿದ್ದಾರೆ. ಹೀಗಿರುವಾಗ, ಮೋದಿಯವರ ಕುರ್‍ಆನ್ ಮತ್ತು ಲ್ಯಾಪ್‍ಟಾಪ್ ಘೋಷಣೆಯಲ್ಲಿ ಮುಸ್ಲಿಮರು ನಂಬಿಕೆ ಇರಿಸುವುದಾದರೂ ಹೇಗೆ? ಅವರ ಬೆಂಬಲಿಗರ ಒಂದು ಕೈಯಲ್ಲಿ ಮುಸ್ಲಿಮ್ ದ್ವೇಷದ ಸಿಡಿ ಮತ್ತು ಇನ್ನೊಂದು ಕೈಯಲ್ಲಿ ಬೆದರಿಕೆಯ ಆಯುಧ ಇರುವಾಗ ಆ ಘೋಷಣೆಯನ್ನು ಮುಸ್ಲಿಮರು ಏನೆಂದು ಪರಿಗಣಿಸಿಯಾರು?
    ಏನೇ ಆಗಲಿ, ಚಾಯ್‍ವಾಲಾ ಮೋದಿಯವರು ಈ ದೇಶದ ಪ್ರಧಾನಿಯಾಗುವುದನ್ನು ನಾವೆಲ್ಲ ತುಂಬು ಹೃದಯದಿಂದ ಗೌರವಿಸಬೇಕಾಗಿದೆ. ಟೀ ಮಾರಾಟ ಮಾಡಿದ ವ್ಯಕ್ತಿ ಈ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುವುದು ಆ ಕೆಲಸದ ಗೌರವವನ್ನು ಹೆಚ್ಚಿಸುತ್ತದೆ. ಗುಜರಿ, ವಿೂನು, ಟೀ ಮಾರಾಟದಲ್ಲಿ ತಮ್ಮ ಬದುಕನ್ನು ಕಂಡುಕೊಂಡಿರುವ ಮುಸ್ಲಿಮರ ಮಟ್ಟಿಗೆ, ಚಾಯ್‍ವಾಲಾ ಮೋದಿ ಆತಂಕ ಮತ್ತು ನಿರೀಕ್ಷೆ ಎರಡರ ಸಂಕೇತವೂ ಆಗಿದ್ದಾರೆ. ಮೋದಿಯವರು ಈ ಆತಂಕವನ್ನು ದೂರ ಮಾಡಿ ನಿರೀಕ್ಷೆಯನ್ನು ನಿಜವಾಗಿಸಲಿ ಹಾಗೂ ಭಾರತ್ ಮಾತಾಕಿ ಜೈ ಮತ್ತು ಜೈ ಹಿಂದ್‍ನ ವೈಶಾಲ್ಯತೆಯನ್ನು ಅಳವಡಿಸಿಕೊಳ್ಳಲಿ ಎಂದೇ ಹಾರೈಸೋಣ.

Thursday, 8 May 2014

ದಕ್ಷಿಣ ಕೊರಿಯದ ಹಡಗು ಮತ್ತು ಈಜಿಪ್ಟ್ ನ ನ್ಯಾಯಾಲಯ

   ಕಳೆದವಾರ ಎರಡು ಘಟನೆಗಳು ಜಾಗತಿಕ ಮಟ್ಟದಲ್ಲಿಯೇ ಸುದ್ದಿಗೀಡಾದುವು. ಒಂದು, ದಕ್ಷಿಣ ಕೊರಿಯಾದ ಹಡಗಿಗೆ ಸಂಬಂಧಿಸಿದ್ದದರೆ ಇನ್ನೊಂದು ಈಜಿಪ್ಟ್ ನ  ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದೆಡೆ, ಬಹುತೇಕ ವಿದ್ಯಾರ್ಥಿಗಳನ್ನೇ ತುಂಬಿಕೊಂಡಿದ್ದ ದಕ್ಷಿಣ ಕೊರಿಯಾದ ಪ್ರಯಾಣಿಕ ಹಡಗು ಸಮುದ್ರದಲ್ಲಿ ಮುಳುಗಿ ಸುಮಾರು 200ರಷ್ಟು ವಿದ್ಯಾರ್ಥಿಗಳು ಸಾವಿಗೀಡಾದರು. ಇನ್ನೊಂದೆಡೆ, ಕೇವಲ ಒಂದೇ ತಿಂಗಳೊಳಗೆ ಈಜಿಪ್ಟ್ ನ  ಪ್ರಮುಖ ನ್ಯಾಯಾಲಯವು 1212 ಮಂದಿಗೆ ಮರಣ ದಂಡನೆ ಶಿಕ್ಷೆಯನ್ನು ಘೋಷಿಸಿತು. ನಿಜವಾಗಿ, ಈ ಎರಡೂ ಘಟನೆಗಳನ್ನು ಜಗತ್ತು ವೀಕ್ಷಿಸಿದ್ದು ಆಘಾತದಿಂದಲೇ. ಮುಳುಗುತ್ತಿರುವ ಹಡಗಿನಿಂದ ಮಕ್ಕಳು ಹೆತ್ತವರಿಗೆ ಕರೆ ಮತ್ತು ಎಸ್.ಎಂ.ಎಸ್. ಮಾಡಿದ್ದನ್ನು ಓದುತ್ತಾ ಅಸಂಖ್ಯ ಮಂದಿ ಕಣ್ಣೀರಾದರು. ವಿಪರೀತ ಮಟ್ಟದಲ್ಲಿ ಸರಕನ್ನು ತುಂಬಿಸಿದ್ದೇ ಹಡಗು ಮುಳುಗಡೆಗೆ ಕಾರಣ ಎಂಬ ತನಿಖಾ ವರದಿಯನ್ನು ಕಂಡು ಜನರು ಆಕ್ರೋಶಿತಗೊಂಡರು. ಕೊರಿಯಾದ ಅಧ್ಯಕ್ಷರೇ ರಾಜೀನಾಮೆ ನೀಡಿದರು. ಮಾನಸಿಕ ಒತ್ತಡ ತಾಳಲಾರದೇ ಶಾಲೆಯ ಪ್ರಾಂಶುಪಾಲರು ಆತ್ಮಹತ್ಯೆ ಮಾಡಿಕೊಂಡರು. ಇದೇ ವೇಳೆ, ಈಜಿಪ್ಟ್ ನ್ಯಾಯಾಲಯದ ತೀರ್ಪನ್ನು ಅಮೇರಿಕ ಸಹಿತ ಜಗತ್ತಿನ ಬಹುತೇಕ ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದುವು. ನ್ಯಾಯದ ಅಪಹಾಸ್ಯ ಅಂದುವು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್‍ರನ್ನು ಅವಿವೇಕಿಯಂತೆ ಮತ್ತು ಮಿಲಿಟರಿಯ ಗುಲಾಮನಂತೆ ಕಂಡುವು.
   ಈಜಿಪ್ಟ್ ನ  ಚುನಾಯಿತ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರನ್ನು 2013 ಜುಲೈಯಲ್ಲಿ ಮಿಲಿಟರಿಯು ಪದಚ್ಯುತಗೊಳಿಸಿದಾಗ ಅದರ ವಿರುದ್ಧ ಅಲ್ಲಿ ತೀವ್ರ ಪ್ರತಿಭಟನೆಗಳು ಕಾಣಿಸಿಕೊಂಡಿದ್ದುವು. ಸೇನೆಯು ನೂರಾರು ಮುರ್ಸಿ ಬೆಂಬಲಿಗರನ್ನು ಗುಂಡಿಟ್ಟು ಕೊಂದಿತ್ತು. ಈಜಿಪ್ಟ್ ನ  ದಕ್ಷಿಣ ಭಾಗದ ಮಿನ್ಯಾ ಎಂಬಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಆಗಸ್ಟ್ 14ರಂದು ಸೇನೆಯು ಗುಂಡಿನ ಮಳೆಗರೆದಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಲ್ಲದೇ ಪೊಲೀಸರ ಹತ್ಯೆಗೂ ಕಾರಣರಾಗಿದ್ದಾರೆ ಎಂಬ ಆರೋಪವನ್ನು ಮುಸ್ಲಿಮ್ ಬ್ರದರ್‍ಹುಡ್‍ನ ಅಧ್ಯಕ್ಷ ಮುಹಮ್ಮದ್ ಬದೀಅï ಸೇರಿದಂತೆ ನೂರಾರು ಮಂದಿಯ ಮೇಲೆ ಹೊರಿಸಲಾಗಿತ್ತು. ಇದೀಗ ಬದೀಅï ಸೇರಿದಂತೆ 683 ಮಂದಿಯ ಮೇಲೆ ಎಪ್ರಿಲ್ 28ರಂದು ಮರಣ ದಂಡನೆಯನ್ನು ಘೋಷಿಸಲಾಗಿದೆ. ಇದೇ ನ್ಯಾಯಾಲಯವು ಇಂಥದ್ದೇ ಆರೋಪದಲ್ಲಿ ಮುರ್ಸಿ ಪರ ಇರುವ 529 ಮಂದಿಗೆ ಮಾರ್ಚ್ 24ರಂದು ಮರಣ ದಂಡನೆ ವಿಧಿಸಿತ್ತು. ಅಚ್ಚರಿಯ ಸಂಗತಿ ಏನೆಂದರೆ ಎಪ್ರಿಲ್ 28ರ ತೀರ್ಪು ನೀಡುವುದಕ್ಕಿಂತ 15 ನಿಮಿಷಗಳ ಮೊದಲಷ್ಟೇ ಆ ಪ್ರಕರಣಕ್ಕೆ ಸಂಬಂಧಿಸಿದ 3,500 ಪುಟಗಳ ವರದಿಯನ್ನು ನ್ಯಾಯಾಧೀಶರಿಗೆ (ದಿ ಹಿಂದೂ ಮೇ 3, 2014) ಸಲ್ಲಿಸಲಾಗಿತ್ತು. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 6000 ಪುಟಗಳ ವರದಿಯನ್ನು ಒಂದೆರಡು ದಿನಕ್ಕಿಂತ ಮೊದಲಷ್ಟೇ ಸಲ್ಲಿಸಲಾಗಿತ್ತು. ನ್ಯಾಯಾಧೀಶ ಸಈದ್ ಯೂಸುಫುಲ್ ಗಝರ್ ಎಂದಲ್ಲ, ಜಗತ್ತಿನ ಯಾವ ನ್ಯಾಯಾಧೀಶರಿಗೂ ಕೇವಲ 15 ನಿಮಿಷಗಳೊಳಗೆ ಮೂರೂವರೆ ಸಾವಿರದಷ್ಟು ಪುಟಗಳುಳ್ಳ ಒಂದು ವರದಿಯನ್ನು ಓದಿ ಮುಗಿಸಲು ಮತ್ತು ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವೇ? ಅಷ್ಟಕ್ಕೂ, ಈಜಿಪ್ಟ್ ಎಂಬುದು ಜಗತ್ತಿನ ಅತ್ಯಂತ ಅರಾಜಕ ರಾಷ್ಟ್ರಗಳ ಪಟ್ಟಿಯಲ್ಲೇನೂ ಇಲ್ಲವಲ್ಲ. ಪೆರು, ಕಾಂಬೋಡಿಯಾ, ನೈಜೀರಿಯಾ, ದಕ್ಷಿಣ ಸುಡಾನ್‍ನಂತೆ ಆಂತರಿಕ ಘರ್ಷಣೆಗಳೋ ಸಶಸ್ತ್ರ ಚಳವಳಿಗಳೋ ಅಲ್ಲಿ ನಡೆಯುತ್ತಿಲ್ಲ. ಕಳೆದ 80 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮುಸ್ಲಿಮ್ ಬ್ರದರ್‍ಹುಡ್ ಎಂದೂ ಕೂಡ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಬಲ್ಲ ಪ್ರತಿಭಟನಾ ಮಾದರಿಯನ್ನು ಅಳವಡಿಸಿಕೊಂಡೂ ಇಲ್ಲ. ಈಜಿಪ್ಟ್ ಅನ್ನು ಆಳುತ್ತಾ ಬಂದಿರುವ ಸರ್ವಾಧಿಕಾರಿಗಳ ವಿರುದ್ಧ ಅದು ಧ್ವನಿ ಎತ್ತಿದ್ದು ಕೂಡ ಸಂಪೂರ್ಣ ಪ್ರಜಾತಂತ್ರ ರೀತಿಯಲ್ಲಿ. ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು ಕೂಡಾ ಇದೇ ಮಾದರಿಯಲ್ಲೇ. ಅವರ ಒಂದು ವರ್ಷದ ಹೃಸ್ವ ಅಧಿಕಾರಾವಧಿಯಲ್ಲಿ ಪ್ರಜಾತಂತ್ರಕ್ಕೆ ಅಪಾಯವೊಡ್ಡಬಲ್ಲ ಅಥವಾ ಈಜಿಪ್ಟ್ ನ  ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲ ಯಾವೊಂದು ಕ್ರಮವೂ ಜರುಗಿರಲಿಲ್ಲ. ಆದ್ದರಿಂದಲೇ ಮುರ್ಸಿಯವರ ಪತನವನ್ನು ಅಮೇರಿಕವೂ ಸೇರಿದಂತೆ ಸಾಕಷ್ಟು ರಾಷ್ಟ್ರಗಳು ಬಹಿರಂಗವಾಗಿಯೇ ಖಂಡಿಸಿದ್ದುವು. ಇಷ್ಟಿದ್ದೂ ನ್ಯಾಯಾಧೀಶ ಗಝರ್ ಅವರ ವಿಚಾರಣೆಯು ಎಷ್ಟು ಹಾಸ್ಯಾಸ್ಪದ ಆಗಿತ್ತೆಂದರೆ, ಆರೋಪಿಗಳ ಪರ ವಾದಿಸುವುದಕ್ಕೆ ಅವಕಾಶವನ್ನೇ ನಿರಾಕರಿಸಲಾಯಿತು. ಘಟನೆಯೊಂದಿಗೆ ಸಂಬಂಧವೇ ಇಲ್ಲದ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ದೂರದ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಶಿಕ್ಷಕರು, ವೈದ್ಯರಾಗಿ ದುಡಿಯುತ್ತಿದ್ದವರನ್ನೂ ಬಂಧಿಸಿ ಆರೋಪ ಹೊರಿಸಲಾಯಿತು. ಪ್ರತಿಭಟನಾ ಸ್ಥಳದಿಂದ 700 ಕಿ.ವಿೂ. ದೂರದಲ್ಲಿ ತನ್ನ ಪಾಡಿಗಿದ್ದ ವ್ಯಕ್ತಿಯ ಮೇಲೂ ಆರೋಪ ಹೊರಿಸಿರುವುದು ಇಂಥವುಗಳಲ್ಲಿ ಒಂದು. ನಿಜವಾಗಿ, ಯಾರೆಲ್ಲ ಮುಸ್ಲಿಮ್ ಬ್ರದರ್‍ಹುಡ್‍ನೊಂದಿಗೆ ಗುರುತಿಸಿಕೊಂಡಿದ್ದಾರೋ ಅಥವಾ ಅದರ ಬಗ್ಗೆ ಮೃದು ನಿಲುವು ತಾಳಿದ್ದಾರೋ ಅವರೆಲ್ಲರನ್ನೂ ಆರೋಪಿಗಳನ್ನಾಗಿಸಿ ದಂಡಿಸುವುದು ಮಿಲಿಟರಿ ವ್ಯವಸ್ಥೆಯ ಉದ್ದೇಶವಾಗಿದೆಯೆಂಬುದು ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ಮುಂದಿನ ದಿನಗಳಲ್ಲಿ ಈ ತೀರ್ಪು ಅಲ್ಲಿನ ಸರ್ವೋಚ್ಚ ಮುಸ್ಲಿಮ್ ವಿದ್ವಾಂಸರ(ಗ್ರ್ಯಾಂಡ್ ಮುಫ್ತಿ) ಪರಿಶೀಲನೆಗೆ ಒಳಪಡಲಿದ್ದು ಆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.
   ಏನೇ ಆಗಲಿ, 2011ರಲ್ಲಿ ಮುಬಾರಕ್ ವಿರುದ್ಧ ಕಾಣಿಸಿಕೊಂಡ ಪ್ರತಿಭಟನೆಯು 2014 ಎಪ್ರಿಲ್ 28ರಂದು 683 ಮಂದಿಯನ್ನು ನೇಣು ಶಿಕ್ಷೆಗೆ ದೂಡುವ ಮೂಲಕ ಒಂದು ಹಂತವನ್ನು ಮುಗಿಸಿದೆ. ಮಿಲಿಟರಿ ಆಡಳಿತದ ಈ ಕ್ರೌರ್ಯದಲ್ಲಿ ಅಕ್ಕಪಕ್ಕದ ಅರಬ್ ರಾಷ್ಟ್ರಗಳ ಕೊಡುಗೆಯೂ ಇದೆ. ಪ್ರತಿ ವರ್ಷ ಈಜಿಪ್ಟ್ ಗೆ  1.5 ಬಿಲಿಯನ್ ಡಾಲರ್ ನೆರವು ನೀಡುತ್ತಿರುವ ಅಮೇರಿಕವೇ ಇವತ್ತು ಆ ನೆರವನ್ನು ಕಡಿತಗೊಳಿಸಲು ಗಂಭೀರವಾಗಿ ಚಿಂತಿಸುತ್ತಿರುವಾಗ ಸೌದಿ, ಯು.ಎ.ಇ. ಮತ್ತು ಕುವೈಟ್‍ಗಳು ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಗೆ  12 ಬಿಲಿಯನ್ ಡಾಲರ್ ಮೊತ್ತವನ್ನು ನೀಡಿವೆ. ಮಾತ್ರವಲ್ಲ, ನ್ಯಾಯಾಲಯದ ತೀರ್ಪಿಗೆ ಅವೆಲ್ಲ ಗಂಭೀರ ಮೌನವನ್ನೂ ತಾಳಿವೆ. ಒಂದು ಕಡೆ, ಮುಳುಗಿದ ಹಡಗಿಗಾಗಿ ಅಧ್ಯಕ್ಷನೇ ಪದತ್ಯಾಗ ಮಾಡುತ್ತಾರೆ. ಇನ್ನೊಂದು ಕಡೆ ನ್ಯಾಯದ ಕಗ್ಗೊಲೆಯನ್ನು ಕಂಡೂ ಅಧ್ಯಕ್ಷ ಅದ್ಲಿ ಮನ್ಸೂರ್ ಮಾತಾಡುವುದಿಲ್ಲ. ದಕ್ಷಿಣ ಕೊರಿಯಾ ಮತ್ತು ಈಜಿಪ್ಟನಲ್ಲಿ ನಡೆದ ಈ ಎರಡು ಘಟನೆಗಳು 2014ರ ಅಚ್ಚರಿಗಳಾಗಿ ಇತಿಹಾಸದಲ್ಲಿ ಗುರುತಿಗೀಡಾಗಬಹುದು