Thursday, 12 May 2016

ಬೀಡಿಗೆ ಬೆಂಕಿ ಕೊಟ್ಟು ಚಳಿ ಕಾಯಿಸುವ ಬುದ್ಧಿವಂತರು..

        ಕಳೆದ ಒಂದೂವರೆ ತಿಂಗಳಿನಿಂದ ಈ ದೇಶದಲ್ಲಿ ಮುಷ್ಕರವೊಂದು ನಡೆಯುತ್ತಿದೆ. ಈ ಮುಷ್ಕರವನ್ನು ಘೋಷಿಸಿರುವುದು ತಂಬಾಕು ಉದ್ಯಮ ಮತ್ತು ಇದರ ನೇರ ಅಡ್ಡಪರಿಣಾಮಕ್ಕೆ ಒಳಗಾಗಿರುವುದು ಈ ದೇಶದ ಕೋಟ್ಯಂತರ ಬಡಪಾಯಿಗಳು. ಕಳೆದ ಒಂದೂವರೆ ತಿಂಗಳಿನಿಂದ ಬೀಡಿ ಉದ್ಯಮ ಮೌನವಾಗಿದೆ. ಬೀಡಿಯನ್ನು `ಅನ್ನ'ವಾಗಿ ನೆಚ್ಚಿಕೊಂಡವರು ಕೋಟ್ಯಂತರ ಮಂದಿಯಿದ್ದಾರೆ. ಇವರಲ್ಲಿ 99% ಮಂದಿಯೂ ತೀರಾ ತೀರಾ ಬಡವರು. ಮೂರು ಹೊತ್ತು ಹೊಟ್ಟೆ ತುಂಬಾ ಉಣ್ಣುವ ನಿರೀಕ್ಷೆ ಇಲ್ಲದವರು. ಬಡತನ ರೇಖೆಗಿಂತ ಕೆಳಗೆ ಜೀವಿಸುವವರು. ಆದ್ದರಿಂದಲೇ, ಬೀಡಿಯ ಮೇಲೆ `ನಿಧಾನ ಕೊಲೆಗಾರ' ಎಂಬ ಆರೋಪ ಪಟ್ಟಿಯನ್ನು ಹೊರಿಸಿ ಈ ಬಡಪಾಯಿಗಳನ್ನು ಕೊಲೆಗಾರರಂತೆಯೋ, ಅಪರಾಧಿಗಳಂತೆಯೋ ಪರಿಗಣಿಸುವುದು ಮತ್ತು ನಿರ್ಲಕ್ಷಿಸುವುದು ಕ್ರೂರವಾಗುತ್ತದೆ. ಬೀಡಿ ಉದ್ಯಮ ನಾಳೆ ಮುಷ್ಕರವನ್ನು ಹಿಂತೆಗೆದುಕೊಳ್ಳಬಹುದು. ಮಾತ್ರವಲ್ಲ ಮರುದಿನ ತನಗಾದ ನಷ್ಟವನ್ನು ಕೋಟಿಗಳಲ್ಲಿ ಮುಂದಿಡಬಹುದು. ಆದರೆ, ಈ ಬಡಪಾಯಿಗಳಿಗೆ ಕೋಟಿಗೆಷ್ಟು ಸೊನ್ನೆ ಎಂಬುದೇ ಬಹುತೇಕ ಗೊತ್ತಿರುವುದಿಲ್ಲ. ಅವರು ಪೈಸೆಗಳಲ್ಲಷ್ಟೇ ನಷ್ಟದ ವಿವರವನ್ನು ಕೊಡಬಹುದು. ಪೈಸೆಗಳು ಇವತ್ತಿನ ದಿನಗಳಲ್ಲಿ ತೀರಾ ಜುಜುಬಿಯಾಗಿರುವುದರಿಂದ ರಾಜಕಾರಣಿಗಳಾಗಲಿ ಮಾಧ್ಯಮಗಳಾಗಲಿ ಈ ವಿವರಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ. ಹೀಗೆ ಕೋಟ್ಯಂತರ ಮಂದಿಯ ವಿಷಾದ ಗೀತೆ ಯಾರಿಗೂ ಕೇಳಿಸದೇ ಸತ್ತು ಹೋಗಬಹುದು.
  ಕೇಂದ್ರ ಸರಕಾರದ ಹೊಸ ಕಾನೂನನ್ನು ಖಂಡಿಸಿ ತುಂಬಾಕು ಉದ್ಯಮ ಮುಷ್ಕರಕ್ಕೆ ನಿಂತಿವೆ. ಬೀಡಿ ಮತ್ತು ಸಿಗರೇಟು ಪ್ಯಾಕುಗಳ ಶೇ. 85ರಷ್ಟು ಭಾಗದಲ್ಲಿ ಸರಕಾರಿ ಜಾಹೀರಾತನ್ನು ಮುದ್ರಿಸಬೇಕೆಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ‘ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದೇ ಈ ಜಾಹೀರಾತಿನ ಮರ್ಮ. ಆದರೆ ಇಷ್ಟು ದೊಡ್ಡ ಜಾಹೀರಾತನ್ನು ಪ್ರಕಟಿಸುವುದು ಅಸಾಧ್ಯ ಎಂದು ಬೀಡಿ ಮತ್ತು ಸಿಗರೇಟು ಉದ್ಯಮ ವಾದಿಸುತ್ತಿದೆ. ಬೀಡಿ ಪ್ಯಾಕೇಟ್‍ಗಳ ಮೇಲೆ ಕಂಪೆನಿಯ ಹೆಸರು, ಬೆಲೆ ಮತ್ತಿತರ ವಿಷಯಗಳನ್ನು ಮುದ್ರಿಸಬೇಕಾಗುತ್ತದೆ. ಬಾಳಿಕೆಯ ದಿನಾಂಕವನ್ನು ಬರೆಯಬೇಕಾಗುತ್ತದೆ. ಇವಕ್ಕೆಲ್ಲ 15% ಜಾಗ ಸಾಕಾಗದು ಎಂಬುದು ಅವುಗಳ ವಾದ. ಈ ವಾದ ಮತ್ತು ಪ್ರತಿವಾದಗಳ ನೇರ ಆಘಾತಕ್ಕೆ ಇವತ್ತು ಬೀಡಿ ಎಲೆ ಕೃಷಿಕರು ಮತ್ತು ಬೀಡಿ ಕಾರ್ಮಿಕರು ತುತ್ತಾಗಿದ್ದಾರೆ. ಹಾಗಂತ, ನಾವು ಈ ಇಡೀ ಬೆಳವಣಿಗೆಯ ವೀಕ್ಷಕರಾಗಿಯೇ ಉಳಿಯಬೇಕಿಲ್ಲ. ಈಗಾಗಲೇ ಬೀಡಿ-ಸಿಗರೇಟು ಪ್ಯಾಕ್‍ಗಳಲ್ಲಿ ಚಿಕ್ಕದಾಗಿ ಈ ಜಾಹೀರಾತು ಪ್ರಕಟವಾಗುತ್ತಿದೆ. ಹೀಗಿರುವಾಗ ಈ ಜಾಹೀರಾತಿನ ಗಾತ್ರವನ್ನು ದೊಡ್ಡದಾಗಿಸಿ ಎಂದು ಸರಕಾರ ಕೇಳಿಕೊಳ್ಳುವುದು ಕಂಪೆನಿಗಳ ಪಾಲಿಗೆ ಅಚ್ಚರಿಯ ವಿಷಯವಾಗುತ್ತದೆ ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದಲೇ, ಈ ಮುಷ್ಕರವನ್ನು ಬರೇ ಜಾಹೀರಾತು ಪ್ರಕರಣವಾಗಿ ಮಾತ್ರ ಕಾಣುವುದು ಅವಸರದ ತೀರ್ಮಾನವಾಗಿ ಬಿಡುವ ಅಪಾಯವೂ ಇದೆ. ಈ ಮುಷ್ಕರದ ಹಿಂದೆ ಕಂಪೆನಿಗಳದ್ದೇ ಆದ ಇತರ ಒಳ ಉದ್ದೇಶಗಳೂ ಇರಬಹುದು. ಬೀಡಿ ಕಾರ್ಮಿಕರನ್ನು ಸತಾಯಿಸುವ ಮೂಲಕ ಅವರು ಮುಂದೆ ಬೆಲೆ ಏರಿಕೆ, ಭತ್ಯೆಗಳಿಗೆ ಒತ್ತಾಯಿಸದಂತೆ  ಬೆದರಿಸುವ  ತಂತ್ರಗಳೂ ಇರಬಹುದು. ಆದರೆ ಇಲ್ಲಿ ಇನ್ನೊಂದು ಬಹುಮುಖ್ಯ ಪ್ರಶ್ನೆಯಿದೆ. 85% ಭಾಗದಲ್ಲಿ ತಂಬಾಕು ವಿರೋಧಿ ಜಾಹೀರಾತನ್ನು ಮುದ್ರಿಸುವುದರಿಂದ ಪ್ರಯೋಜನವಾಗಬಹುದೇ? ಇದು ತಂಬಾಕು ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾದೀತೇ? ಅಷ್ಟಕ್ಕೂ, 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ..'  ಎಂಬ ಸಾಧು ಜಾಹೀರಾತಿನಿಂದ ಹಿಡಿದು ‘ಮದ್ಯ ಕುಟುಂಬವನ್ನೇ ನಾಶಪಡಿಸುತ್ತದೆ..’ ಎಂಬ ಭಯಭರಿತ ಜಾಹೀರಾತಿನ ವರೆಗೆ ಎಷ್ಟೆಲ್ಲ ಮದ್ಯವಿರೋಧಿ ಜಾಹೀರಾತುಗಳು ಈ ದೇಶದಲ್ಲಿಲ್ಲ? ಮದ್ಯದ ಬಾಟಲಿಗಳಲ್ಲಿ ಕಡ್ಡಾಯವಾಗಿ ಮದ್ಯವಿರೋಧಿ ಜಾಹೀರಾತನ್ನು ಮುದ್ರಿಸಿಯೂ ಅವುಗಳ ಖರೀದಿಯಲ್ಲಿ ಇಳಿಕೆ ಆಗುತ್ತಿದೆಯೇ? ಬೀಡಿ ಸೇದುವ ಯಾವ ಗ್ರಾಹಕ ಅದರ ಪ್ಯಾಕೆಟನ್ನು ಗಮನಿಸುತ್ತಾನೆ? ಪ್ಯಾಕೆಟ್‍ನಲ್ಲಿ ಏನಿದೆ ಎಂದು ನೋಡಿ, ಅದರ ಆಧಾರದಲ್ಲಿ ಸೇದುವ ಅಥವಾ ಸೇದದೇ ಇರುವ ಬುದ್ಧಿವಂತ ಗ್ರಾಹಕರು ಮದ್ಯ ಮತ್ತು ತಂಬಾಕು ಉತ್ಪನ್ನಗಳಿಗದ್ದಾರೆಯೇ?
  ತಮಾಷೆ ಏನೆಂದರೆ, ಮದ್ಯ ಅಥವಾ ತಂಬಾಕು ಉತ್ಪನ್ನಗಳು ಮನುಷ್ಯ ಸೇವನೆಗೆ ಅಪಾಯಕಾರಿ ಎಂದು ಹೇಳುವುದು ಸರಕಾರವೇ. ಹಾಗಂತ, ಅದನ್ನು ಆರೋಗ್ಯವಂತ ಮನುಷ್ಯರಿಗೆ ಹಂಚುವುದೂ ಸರಕಾರವೇ. ಇದು ದ್ವಂದ್ವವೋ ಮುಠ್ಠಾಳತನವೋ? ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬ ಮಾತಿಗೆ ಅನ್ವರ್ಥವೆಂಬಂತೆ ನಡಕೊಳ್ಳುತ್ತಿರುವ ಈ ವ್ಯವಸ್ಥೆಯನ್ನು ಪ್ರಶ್ನಿಸದೆಯೇ, ಬರೇ ಬೀಡಿಯನ್ನೋ ಮದ್ಯವನ್ನೋ ದೂಷಿಸುವುದು ತರ್ಕರಹಿತವೆನಿಸುತ್ತದೆ. ಮದ್ಯದ ಬಾಟಲಿಗಳ ಮೇಲೋ ಬೀಡಿ-ಸಿಗರೇಟ್ ಪ್ಯಾಕೆಟ್‍ಗಳ ಮೇಲೋ ಸರಕಾರಿ ಜಾಹೀರಾತು ಪ್ರಕಟಿಸುವುದರಿಂದ ಗ್ರಾಹಕರ ಮೇಲೆ ಭಾರೀ ಪ್ರಮಾಣದ ಜಾಗೃತಿ ಉಂಟಾಗಬಹುದು ಎಂದು ತಂಬಾಕು ಕಂಪೆನಿಗಳು ಬಿಡಿ ಸ್ವತಃ ಸರಕಾರವೇ ಭಾವಿಸಿರುವುದಕ್ಕೆ ಸಾಧ್ಯವಿಲ್ಲ. ಮದ್ಯ ಮತ್ತು ತಂಬಾಕು ಪದಾರ್ಥಗಳೆಲ್ಲ ಊಟ, ಪರೋಟ, ಚಪಾತಿಗಳಂತೆ ಹೊಟ್ಟೆ ತುಂಬಿಸುವವುಗಳಲ್ಲ ಎಂಬುದು ಅದರ ತಯಾರಕರಿಗೆ ಚೆನ್ನಾಗಿ ಗೊತ್ತು. ಅದೊಂದು ಬಗೆಯ ಅಮಲು. ಅಮಲು ಎಂಬುದು ಜಾಹೀರಾತಿಗೆ ಬೆದರುವಷ್ಟು ಪುಕ್ಕಲು ಅಲ್ಲ. ಒಂದು ವೇಳೆ ಈ ಅಮಲು  ಚಟವಾಗಿ ಮಾರ್ಪಟ್ಟರೆ ಬಳಿಕ ಇಡೀ ಮದ್ಯದ ಬಾಟಲಿಯಲ್ಲಿ ಅಥವಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‍ನಲ್ಲಿ ಮಾನವ ಅಸ್ಥಿಪಂಜರದ ಪೋಟೋ ಹಾಕಿದರೂ ಅದು ಗ್ರಾಹಕರ ಮೇಲೆ ಪರಿಣಾಮ ಬೀರುವುದಕ್ಕೆ ಸಾಧ್ಯವೂ ಇಲ್ಲ. ತಂಬಾಕು ಉತ್ಪನ್ನಗಳ ಗ್ರಾಹಕರು ಮಸಾಲೆದೋಸೆ ಗ್ರಾಹಕರಂತೆ ಅಲ್ಲವಲ್ಲ. ಬೆಲೆಗೆ ಬೆದರದಷ್ಟು ಅವರು ಅದರ ಅಪ್ಪಟ ಆರಾಧಕರಾಗಿರುತ್ತಾರೆ. ಪ್ಯಾಕೆಟ್‍ನಲ್ಲಿ ನೀವು ಏನೇ ಮುದ್ರಿಸಿ ಅದಕ್ಕೆ ಕುರುಡಾಗುವಷ್ಟು ಗುಂಡಿಗೆಯನ್ನು ಅವರು ಗಟ್ಟಿ ಮಾಡಿಕೊಂಡಿರುತ್ತಾರೆ. ಆದ್ದರಿಂದಲೇ, ಈ 85% ಜಾಹೀರಾತು ಎಂಬ ಕಾನೂನಿನ ಉದ್ದೇಶಶುದ್ಧಿಯೇ ಅನುಮಾನಕ್ಕೊಳಗಾಗುವುದು. ಸರಕಾರ ಈ ವಿಷಯದಲ್ಲಿ ಪ್ರಾಮಾಣಿಕವಾಗಿದೆಯೇ ಅಥವಾ ಅಂತಾರಾಷ್ಟ್ರೀಯ ಒತ್ತಡಗಳನ್ನು ನಿಭಾಯಿಸುವುದಕ್ಕಾಗಿ ಹೀಗೆ ಆದೇಶ ಹೊರಡಿಸಿದೆಯೇ ಅಥವಾ ಇದು ಸರಕಾರ ಮತ್ತು ತಂಬಾಕು ಕಂಪೆನಿಗಳು ಜೊತೆಯಾಗಿಯೇ ಹೆಣೆದ ತಂತ್ರವೇ? ಸರಕಾರಕ್ಕೆ ತಂಬಾಕು ಕಂಪೆನಿಗಳೇ ಇಂಥದ್ದೊಂದು ಜಾಹೀರಾತು ಐಡಿಯಾವನ್ನು ಕೊಟ್ಟಿರಬಹುದೇ? ತಂಬಾಕು ಸಂಬಂಧಿ ರೋಗಗಳನ್ನು ತಡೆಗಟ್ಟುವುದಕ್ಕೆ ಸರಕಾರ ಗರಿಷ್ಠ ಕ್ರಮ ಕೈಗೊಂಡಿದೆ ಎಂದು ಜನರೆದುರು ವಾದಿಸುವುದಕ್ಕೆ ಪುರಾವೆಯಾಗಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆಯೇ? ಈ ಮೂಲಕ ತಂಬಾಕು ಪದಾರ್ಥಗಳನ್ನು  ನಿಷೇಧಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿಯದಂತೆ ತಡೆಯುವ ಮತ್ತು ಈ ಜಾಹೀರಾತನ್ನು ತೋರಿಸಿ ಅವರನ್ನು ಮಣಿಸುವ ತಂತ್ರ ಇದರ ಹಿಂದಿರಬಹುದೇ?
  ನಿಜವಾಗಿ, ಒಂದು ವ್ಯವಸ್ಥೆಗೆ ಜನರ ಆರೋಗ್ಯದ ಮೇಲೆ ಪ್ರಾಮಾಣಿಕ ಕಾಳಜಿ ಇದೆಯೆಂದಾದರೆ, ಮೊತ್ತಮೊದಲು
ಅನಾರೋಗ್ಯಕ್ಕೆ ಕಾರಣವಾಗುವ ವಸ್ತುಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿರುತ್ತದೆ. ಮದ್ಯವಾಗಲಿ, ತಂಬಾಕು ಉತ್ಪನ್ನಗಳಾಗಲಿ ಎಲ್ಲವೂ ಈ ವ್ಯಾಪ್ತಿಗೆ ಒಳಪಡುವ ವಸ್ತುಗಳು. ಆದರೆ ಸರಕಾರ ಇವುಗಳನ್ನು ಎಷ್ಟು ಮುದ್ದಿನಿಂದ ಸಾಕುತ್ತಿದೆಯೆಂದರೆ, ಅದು ಹೊರಡಿಸುವ ಸಕಲ ಆದೇಶಗಳೂ ಈ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಒದಗಿಸುವಂತಿರುತ್ತದೆ. ಈ ಸರಕಾರಿ ಜಾಹೀರಾತೂ ಅದರಿಂದ ಹೊರತಲ್ಲ. ಬಾಹ್ಯನೋಟಕ್ಕೆ ಇದು ಸಕಾರಾತ್ಮಕವಾಗಿ ಕಂಡರೂ ಆಂತರಿಕವಾಗಿ ಅದರಲ್ಲಿ ಸ್ವರಕ್ಷಣೆಯ ನಕಾರಾತ್ಮಕತೆಯೇ ತುಂಬಿದೆ. ಗ್ರಾಹಕರ ಮೇಲೆ ಇಂಥ ಜಾಹೀರಾತುಗಳು ಯಾವ ಪರಿಣಾಮವನ್ನೂ ಬೀರಲಾರದು ಎಂಬುದು ಸ್ವತಃ ಸರಕಾರಕ್ಕೂ ಗೊತ್ತಿದೆ. ಕಂಪೆನಿಗಳಿಗೂ ಗೊತ್ತಿದೆ. ಒಂದು ರೀತಿಯಲ್ಲಿ, ಇದು ಜನಮರುಳು ಜಾಹೀರಾತು. ಸರಕಾರ ಮತ್ತು ತಂಬಾಕು ಉದ್ಯಮ ಜೊತೆ ಸೇರಿ ಆಡುವ ಚದುರಂಗದಾಟ. ಈ ಆಟದಲ್ಲಿ ಸರಕಾರ ಮತ್ತು ಕಂಪೆನಿಗಳು ಸದಾ ಗೆಲ್ಲುತ್ತಿರುತ್ತವೆ. ಬಡಪಾಯಿ ಕಾರ್ಮಿಕರು ಮತ್ತು ಗ್ರಾಹಕರು ಆರೋಗ್ಯ ಕೆಡಿಸಿಕೊಂಡು ಸಾಯುತ್ತಿರುತ್ತಾರೆ.

Thursday, 5 May 2016

.ಉಳ್ಳಾಲ: ಚೂರಿಗೆ ಅಂಟಿರುವ ಅಮಲು ಯಾವುದು?

        1. ಮೇಸ್ತ್ರಿ, ಕೂಲಿ ಕಾರ್ಮಿಕ, ಕೋಳಿ ಸಾಗಾಟದ ವಾಹನದಲ್ಲಿ ಚಾಲಕ, ಕೋಳಿ ಅಂಗಡಿಯಲ್ಲಿ ನೌಕರ, ಪೈಂಟರ್..
  2. ಪ್ಲಂಬರ್, ಪೈಂಟರ್, ಪಿಯು ವ್ಯಾಸಂಗ, ಡಿಪ್ಲೋಮಾ ವ್ಯಾಸಂಗ..
  ಇವೇನೂ ಉದ್ಯೋಗ ವಾರ್ತೆಯಲ್ಲ ಅಥವಾ ವಿದೇಶಗಳಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಪಟ್ಟಿಯೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲದ ಆಸುಪಾಸಿನಲ್ಲಿ ಇಬ್ಬರು ಅಮಾಯಕರನ್ನು ಇರಿದು ಕೊಲೆಗೈದ ಆರೋಪಿಗಳ ಉದ್ಯೋಗಗಳಿವು. ಸಂಖ್ಯೆ 1ರಲ್ಲಿ ಮುಸ್ಲಿಮ್ ನಾಮಧಾರಿ ಆರೋಪಿಗಳ ವೃತ್ತಿ ವಿವರಣೆಯನ್ನು ನೀಡಲಾಗಿದ್ದರೆ ಸಂಖ್ಯೆ 2ರಲ್ಲಿ ಹಿಂದೂ ನಾಮಧಾರಿ ಆರೋಪಿಗಳ ವೃತ್ತಿ ವಿವರಗಳನ್ನು ನೀಡಲಾಗಿದೆ. ವಿಶೇಷ ಏನೆಂದರೆ, ಆರೋಪಿಗಳು ತಮ್ಮ ಹೆಸರುಗಳನ್ನು ಹಿಂದೂ ಮತ್ತು ಇಸ್ಲಾಮ್ ಧರ್ಮದಲ್ಲಿ ನೋಂದಾಯಿಸಿಕೊಂಡಿದ್ದರೂ ಅವರು ಮಾಡುತ್ತಿರುವ ವೃತ್ತಿಗಳಲ್ಲಿ ಬಹುತೇಕ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರೂ ತೀರಾ ತಳಮಟ್ಟದ ಮತ್ತು ಶ್ರಮದಾಯಕ ವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಇಬ್ಬರಂತೂ ವಿದ್ಯಾರ್ಥಿಗಳು. ಈ ಬಡಪಾಯಿಗಳು ಈ ಇರಿಯುವ ಕ್ರೌರ್ಯದಲ್ಲಿ ತೊಡಗಿಸಿಕೊಂಡದ್ದೇಕೆ? ಸ್ವಇಚ್ಛೆಯಿಂದ ಅವರು ಇರಿದರೇ ಅಥವಾ ಅವರಿಂದ ಈ ಕ್ರೌರ್ಯವನ್ನು ಮಾಡಿಸಲಾಯಿತೇ? ಒಂದು ವೇಳೆ ಸ್ವಇಚ್ಛೆಯೇ ಈ ಪ್ರಾಣಹರಣಕ್ಕೆ ಕಾರಣ ಎಂದಾದರೆ, ಅಂಥದ್ದೊಂದು ಅನಾಹುತಕಾರಿ ಇಚ್ಛೆ ಅವರಲ್ಲಿ ಹುಟ್ಟಿಕೊಂಡದ್ದು ಹೇಗೆ? ಯಾಕೆ? ಸಾವನ್ನು ತನ್ನ ಧರ್ಮದವ ಮತ್ತು ಬೇರೆ ಧರ್ಮದವ ಎಂದು ವಿಂಗಡಿಸಿ ಅನುಭವಿಸಲು ಈ ಬಡಪಾಯಿಗಳನ್ನು ತಯಾರುಗೊಳಿಸಿದ್ದು ಯಾವುದು? ಮನೆಯೇ, ಪರಿಸರವೇ, ಧರ್ಮವೇ, ಕಲಿಕೆಯೇ, ಸಂಘಟನೆಗಳೇ? ಹಾಗಂತ, ಸ್ವಇಚ್ಛೆ ಅಲ್ಲ ಎಂಬುದು ಇದಕ್ಕೆ ಉತ್ತರವಾದರೂ ಪ್ರಶ್ನೆಗಳ ಪಟ್ಟಿಯೇನೂ ಪುಟ್ಟದಾಗುವುದಿಲ್ಲ. ಹಾಗಾದರೆ, ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಆ ಹೊರಗಿನ ವ್ಯಕ್ತಿಗಳು ಯಾರು, ಅವರ ಉದ್ದೇಶವೇನು, ಅವರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ, ಇದರಿಂದ ಅವರಿಗಿರುವ ಲಾಭಗಳೇನು.. ಹೀಗೆ ಪ್ರಶ್ನೆಗಳ ಸರಮಾಲೆ ಎದುರುಗೊಳ್ಳುತ್ತದೆ. ಅಷ್ಟಕ್ಕೂ, ಹಿಂದೂವನ್ನು ಮುಸ್ಲಿಮ್ ಮತ್ತು ಮುಸ್ಲಿಮನನ್ನು ಹಿಂದೂ ಕೊಲ್ಲುವುದರಿಂದ ಆಯಾ ಧರ್ಮಗಳಿಗೆ ಯಾವ ಲಾಭವೂ ಇಲ್ಲ ಎಂಬುದು ಬುದ್ಧಿ ಸ್ವಸ್ಥ ಇರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಒಂದು ವೇಳೆ ಹಿಂದೂವನ್ನು ಹಿಂದೂ ಎಂಬ ಕಾರಣಕ್ಕಾಗಿ ಇರಿದು ಕೊಲ್ಲುವುದು ಮುಸ್ಲಿಮನ ಪಾಲಿಗೆ ಅತ್ಯಂತ ಪುಣ್ಯದಾಯಕ ಮತ್ತು ಸ್ವರ್ಗಕ್ಕೆ ಕೊಂಡೊಯ್ಯುವ ಕೆಲಸವೇ ಆಗಿರುತ್ತಿದ್ದರೆ, ಈ ಇರಿಯುವ ವೃತ್ತಿಯಲ್ಲಿ ಮುಂಚೂಣಿಯಲ್ಲಿರಬೇಕಾದುದು ಪ್ಲಂಬರ್‍ಗಳೋ, ಪೈಂಟರ್ ಗಳೋ, ಮೇಸ್ತ್ರಿಗಳೋ, ಕೋಳಿ ಸಾಗಾಟಗಾರರೋ ಆಗಿರಲಿಲ್ಲ. ಮುಸ್ಲಿಮ್ ವಿದ್ವಾಂಸರು, ಪಂಡಿತರು, ಮಸೀದಿಯ ಧರ್ಮಗುರುಗಳು ಮುಂತಾದವರೇ ಆಗಿರುತ್ತಿದ್ದರು. ಆದರೆ ಪ್ರತಿಬಾರಿಯೂ ಈ ನಿರೀಕ್ಷೆ ಸುಳ್ಳಾಗುತ್ತಿದೆ. ಸಮಾಜದ ತೀರಾ ತಳಮಟ್ಟದಲ್ಲಿ ಬದುಕುವ ಮತ್ತು ವೈಟ್ ಕಾಲರ್ ಉದ್ಯೋಗಿಯಲ್ಲದವರೇ ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಎಪ್ರಿಲ್ 2ನೇ ವಾರದಲ್ಲಿ ಉಳ್ಳಾಲದಲ್ಲಿ ರಾಜು ಕೋಟ್ಯಾನ್ ಎಂಬವರ ಹತ್ಯೆ ನಡೆಯಿತು. ಇದರ ಆರೋಪದಲ್ಲಿ ಸಂಖ್ಯೆ 1ರಲ್ಲಿ ಸೂಚಿತ ವೃತ್ತಿಯಲ್ಲಿರುವ ಮುಸ್ಲಿಮ್ ನಾಮಧಾರಿಗಳನ್ನು ಬಂಧಿಸಲಾಯಿತು. ಇದಾಗಿ ಎರಡು ವಾರಗಳಲ್ಲಿ ನಾಲ್ಕೈದು ಮುಸ್ಲಿಮ್ ಯುವಕರು ಇರಿತಕ್ಕೊಳಗಾದರು. ಸೈಫಾನ್ ಎಂಬ ಯುವಕ ಸಾವಿಗೀಡಾದ. ನಿಜವಾಗಿ, ಸಾವಿಗೀಡಾದ ಸೈಫಾನ್ ಮತ್ತು ರಾಜುಗಾಗಲಿ, ಸೈಫಾನ್ ಗೆ ಇರಿದವರಿಗಾಗಲಿ ಅಥವಾ ಇರಿತಕ್ಕೊಳಗಾದವರಿಗಾಗಲಿ ಪರಸ್ಪರ ಪರಿಚಯವೋ ಸಂಬಂಧವೋ ದ್ವೇಷವೋ ಏನೇನೂ ಇರಲಿಲ್ಲ. ಹೀಗೆ ಕಾರಣವಿಲ್ಲದೇ ದ್ವೇಷಿಸುವ ಮತ್ತು ದ್ವೇಷವಿಲ್ಲದೇ ಇರಿಯುವ ಈ ಮನಸ್ಥಿತಿಗೆ 'ದರ್ಮ ಕಾರಣ' ಎಂದು ಹೇಳಬಹುದೇ? ಹಾಗೆ ಹೇಳುವುದು ನಿಜಕ್ಕೂ ನ್ಯಾಯಬದ್ಧವೇ? ಹಾಗಂತ, ಈ ಇರಿತದಲ್ಲಿ ಭಾಗಿಯಾದ ಆರೋಪಿಗಳೆಲ್ಲ ನಿಷ್ಠಾವಂತ ಧರ್ಮಾನುಯಾಯಿಗಳಾಗಿರುವರೇ? ಇತರ ಧರ್ಮೀಯ ಗೆಳೆಯರನ್ನೇ ಹೊಂದಿಲ್ಲದ, ಅವರ ಬಳಿ ನೌಕರಿ ಮಾಡದ, ಅವರ ಅಂಗಡಿಗಳಿಗೆ ಭೇಟಿಯನ್ನೇ ಕೊಡದ ಮತ್ತು ಸಂಪರ್ಕವನ್ನೇ ಇರಿಸದಷ್ಟು ಅತಿ ಸ್ವಧರ್ಮ ನಿಷ್ಠರು ಇವರಾಗಿರುವರೇ? ಒಂದು ವೇಳೆ ಈ ಆರೋಪಿಗಳಲ್ಲಿ ಖಾಸಗಿಯಾಗಿ ಮಾತಾಡಿದರೆ, ಇವರ ಗೆಳೆಯರ ಪಟ್ಟಿಯಲ್ಲಿ ಅವರ ಧರ್ಮದವರಿಗಿಂತ ಇತರ ಧರ್ಮದ ಗೆಳೆಯರೇ ಹೆಚ್ಚಿರುವ ಸಾಧ್ಯತೆ ಇದೆ. ಅನೇಕ ಬಾರಿ ಇವು ಸಾಬೀತೂ ಗೊಂಡಿವೆ. ಆದ್ದರಿಂದಲೇ, ಆರೋಪಿಗಳನ್ನು ಇನ್ನೊಂದು ಧರ್ಮದ ಬದ್ಧ ವೈರಿಗಳೆಂದೋ ಅಥವಾ ಸ್ವ ಧರ್ಮದ ನಿಷ್ಠಾವಂತ ಕಾರ್ಯಕರ್ತರೆಂದೋ ತೀರ್ಮಾನಿಸಿ ಬಿಡುವುದು ಸೂಕ್ತವೆನಿಸುವುದಿಲ್ಲ. ಕೆಲವೊಮ್ಮೆ ಇಂಥ ತೀರ್ಮಾನಗಳೇ ಪ್ರಕರಣವನ್ನು ಇನ್ನಷ್ಟು ಜಟಿಲತೆಯೆಡೆಗೆ ಕೊಂಡೊಯ್ಯುವುದಕ್ಕೂ ಕಾರಣವಾಗುತ್ತದೆ. ಇದರರ್ಥ, ಇವರ ಬಗ್ಗೆ ಮೃದು ನೀತಿಯನ್ನು ತಳೆಯಬೇಕೆಂದಲ್ಲ. ‘ಯಾವುದೋ ಸಂಚಿನ ಬಲಿಪಶುಗಳು' ಎಂಬ ಪದಪುಂಜದ ಮೂಲಕ ಸೌಮ್ಯ ಭಾವನೆ ಹೊಂದಬೇಕೆಂದೂ ಅಲ್ಲ. ಇವರ ಬಗ್ಗೆ ಸಮಾಜ ಕಠಿಣ ಧೋರಣೆ ತಳೆಯಬೇಕೆಂಬ ಕಾರಣಕ್ಕಾಗಿಯೇ ಆರಂಭದಲ್ಲಿಯೇ ಇವರು ಯಾವ ಧರ್ಮದ ನಾಮಧಾರಿಗಳು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಸಾವಿಗೀಡಾದವರು ಮತ್ತು ಇರಿತಕ್ಕೊಳಗಾದವರು ಯಾವ ಧರ್ಮದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬುದನ್ನೂ ಸೂಚಿಸಲಾಗಿದ್ದೂ ಈ ಕಾರಣಕ್ಕಾಗಿಯೇ. ಆರೋಪಿಗಳನ್ನು ಮತ್ತು ಸಂತ್ರಸ್ತರನ್ನು ಸಮಾಜ ಸ್ಪಷ್ಟವಾಗಿ ಗುರುತಿಸಿ ವಿಭಜಿಸಬೇಕು ಮತ್ತು  ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅಪರಾಧಿಗಳನ್ನು ಶಿಕ್ಷಿಸಬೇಕು ಎಂಬ ಏಕೈಕ ಉದ್ದೇಶವೇ ಈ ಸ್ಪಷ್ಟೀಕರಣದ  ಹಿಂದಿದೆ. ಇವರನ್ನು ಪ್ರಚೋದಿಸಿದವರು ಯಾರೇ ಆಗಿರಲಿ ಮತ್ತು ಅವರ ಉದ್ದೇಶ ಏನೇ ಇರಲಿ ಅದರ ನೆಪದಲ್ಲಿ ಆರೋಪಿಗಳನ್ನು ಬಲಿಪಶುಗಳಂತೆ ಕರುಣೆಯಿಂದ ನೋಡಬೇಕಾದ ಅಗತ್ಯವೇ ಇಲ್ಲ. ಮನುಷ್ಯ ವಿರೋಧಿಗಳ ಬಗ್ಗೆ ಸಮಾಜ ಕಠಿಣ ನಿಲುವನ್ನು ತಳೆಯದೇ ಹೋದರೆ ಅದು ಮರಳಿ ಅಂಥದ್ದೇ ಕೃತ್ಯದಲ್ಲಿ ತೊಡಗಿಸುವುದಕ್ಕೆ ಅವರಲ್ಲಿ ಧೈರ್ಯ ತುಂಬುತ್ತದೆ. ಸದ್ಯ ‘ಕೋಮುಗಲಭೆ' ಎಂಬ ಬಿರುದು ಹೊತ್ತು ನಡೆಯುವ ಮನುಷ್ಯ ವಿರೋಧಿ ಕೃತ್ಯಗಳ ಹೆಚ್ಚಳದಲ್ಲಿ ಸಮಾಜದ ಈ ಸೌಮ್ಯ ಧೋರಣೆಗೂ ಖಂಡಿತ ಪಾತ್ರವಿದೆ. ಜೈಲಿಗೆ ಹೋದಷ್ಟೇ ವೇಗವಾಗಿ ಅವರು ಬಿಡುಗಡೆಗೊಳ್ಳುವುದು ಮತ್ತು ಒಂದಷ್ಟು ಹೆಚ್ಚೇ ಗೌರವದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುವುದೆಲ್ಲ ಈ ತಪ್ಪಿನ ಪರಿಣಾಮದಿಂದಲೇ ಆಗಿದೆ. ಧರ್ಮ ಬೇರೆ ಎಂಬ ಕಾರಣಕ್ಕಾಗಿ ಮನುಷ್ಯರನ್ನು ಇರಿದೋ ಕೊಲೆಗೈದೋ ಬಂಧನಕ್ಕೀಡಾದವರು ಅಥವಾ ತಲೆ ತಪ್ಪಿಸಿಕೊಂಡು ನಡೆಯುವವರನ್ನು ಸಮಾಜ ಯಾವ ಕಾರಣಕ್ಕೂ ಬೆಂಬಲಿಸಬಾರದು. ಈ ಕೃತ್ಯಕ್ಕೆ ಅವರನ್ನು ಯಾರೇ ಪ್ರಚೋದಿಸಿರಲಿ, ಇತರ ಯುವಕರಿಗೆ ಪಾಠವಾಗುವಂತೆ ಅವರನ್ನು ಸಮಾಜ ನಡೆಸಿಕೊಳ್ಳಬೇಕು. ಪ್ರಚೋದಕರಿದ್ದರೂ ಪ್ರಚೋದನೆಗೊಳಗಾಗದ ಯುವಕರ ತಯಾರಿಯ ದೃಷ್ಟಿಯಿಂದ ಸಮಾಜ ಇಷ್ಟು ಕಟುವಾಗಲೇ ಬೇಕಾದ ಅಗತ್ಯವಂತೂ ಖಂಡಿತ ಇದೆ.
  ನಿಜವಾಗಿ, ಹದಿಹರೆಯದ ಯುವಕರು ಇವತ್ತು ಚೂರಿಯನ್ನೋ ತಲವಾರನ್ನೋ ಎತ್ತಿಕೊಳ್ಳುವುದು ಧರ್ಮದ ಮೇಲಿನ ನಿಷ್ಠೆಯಿಂದಲ್ಲ, ಮಾದಕ ಪದಾರ್ಥ ಮತ್ತು ಮದ್ಯಪಾನದ ಅಮಲಿನಿಂದ. ಪರಿಚಯವೇ ಇಲ್ಲದ ಇನ್ನೊಬ್ಬನಿಗೆ ಚೂರಿಯಿಂದ ಇರಿಯುವ ಸಾಮರ್ಥ್ಯ ಮದ್ಯ ಮತ್ತು ಮಾದಕ ಪದಾರ್ಥಗಳ ಹೊರತು ಇನ್ನಾವುದಕ್ಕೂ ಇಲ್ಲ. ವ್ಯವಸ್ಥೆಗೂ ಇದು ಗೊತ್ತಿದೆ. ಈ ಚೂರಿಯಾಟವನ್ನು ಆಡಿಸುವವರಿಗೂ ಆಡುವವರಿಗೂ ಗೊತ್ತಿದೆ. ರಾಜಕೀಯದವರಿಗೂ ಧರ್ಮವನ್ನು ದುರ್ವ್ಯಾಖ್ಯಾನಿಸುವವರಿಗೂ ಗೊತ್ತಿದೆ. ಆದ್ದರಿಂದಲೇ, ಯಾವ ಸ್ವಾಮೀಜಿಗಳೂ ಯಾವ ಮೌಲಾನಾಗಳೂ ಈ ಚೂರಿ ಇರಿತದಲ್ಲಿ ಭಾಗಿಗಳಾಗುತ್ತಿರುವುದು ಕಾಣಿಸುತ್ತಿಲ್ಲ. ಮದ್ಯ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವ ತಳಮಟ್ಟದ ಯುವಕರೇ ಇಂಥ ಕ್ರೌರ್ಯದಲ್ಲಿ ಮತ್ತೆ ಮತ್ತೆ ಗುರುತಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋಗಿ ಮರಳಿ ಬಂದು ಮತ್ತದೇ ಕೃತ್ಯದಲ್ಲಿ ಮುಂದುವರಿಯುತ್ತಾರೆ. ಇದಕ್ಕೆ ತಡೆ ಬೀಳಲೇಬೇಕಿದೆ. ಇಂಥವರ ಬಗ್ಗೆ ನ್ಯಾಯಾಲಯ ಕಠಿಣವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ದುರ್ಬಲ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅವರು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರಾದರೆ ಸಮಾಜವೇ ಅವರನ್ನು ಸಂಸ್ಕರಿಸುವ ಮತ್ತು ಸಂಸ್ಕರಣೆಗೆ ತಯಾರಿಲ್ಲದಿದ್ದರೆ ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಬೇಕು. ಜೊತೆಗೇ ಕಾರಣವಿಲ್ಲದೆಯೇ ದ್ವೇಷಿಸುವುದಕ್ಕೆ ಪ್ರಚೋದಿಸುವ ಮದ್ಯ ಮತ್ತು ಅಮಲು ಪದಾರ್ಥಗಳಿಗೆ ನಿಷೇಧ ಹೇರುವ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ಲಂಬರ್, ಪೈಂಟರ್, ಮೇಸ್ತ್ರಿ, ಎಲೆಕ್ಟ್ರಿಕಲ್ಸ್.. ಮುಂತಾದ ವೃತ್ತಿ ಸೂಚಕ ನಾಮಗಳು 'ಚೂರಿಯ' ಪರ್ಯಾಯ ನಾಮಗಳಾಗಿ ಗುರುತಿಗೀಡಾಗುವ ಅಪಾಯವಿದೆ.
  ಸಾವಿಗೀಡಾದ ರಾಜು ಕೋಟ್ಯಾನ್ ಮತ್ತು ಸೈಫಾನ್ ರು ಕೋಮುಗಲಭೆ ಬಿರುದಾಂಕಿತ ಮನುಷ್ಯ ವಿರೋಧಿ ಇರಿತಗಳ ಕಟ್ಟಕಡೆಯ ಬಲಿಗಳಾಗಲಿ ಎಂದೇ ಹಾರೈಸೋಣ

Thursday, 28 April 2016

ನಿಜಕ್ಕೂ ಧರಣಿ ಕೂರಬೇಕಾದ್ದು ಯಾರ ಮನೆಯ ಮುಂದೆ?

ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್‍
     ಬಿಹಾರದಲ್ಲಿ ಕಳೆದವಾರ ಅಪರೂಪದ ವಿವಾಹವೊಂದು ಜರುಗಿತು. Bihar's bottles disappear and they wed again after 16 years  ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆಯು ಸವಿಸ್ತಾರವಾಗಿ ಚಿತ್ರ ಸಮೇತ ಈ ವಿವಾಹದ ಬಗ್ಗೆ ವರದಿ ಮಾಡಿದೆ. 17 ವರ್ಷದ ಗುಡ್ಡಿ ಕುಮಾರಿ ಎಂಬ ಹುಡುಗಿ ಈ ಮದುವೆಯ ಆಮಂತ್ರಣ ಪತ್ರಿಕೆಯನ್ನು ಖುದ್ದಾಗಿ ಮನೆ ಮನೆಗೆ ಹಂಚಿದ್ದಳು. ಗುಡ್ಡಿಗೆ 1 ವರ್ಷವಾಗಿದ್ದಾಗ ಆಕೆಯ ಹೆತ್ತವರಾದ ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್‍ರು ಪರಸ್ಪರ ಬೇರ್ಪಟ್ಟಿದ್ದರು. ಈ ಅಗಲುವಿಕೆಗೆ ಮದ್ಯಪಾನವೇ ಮುಖ್ಯ ಕಾರಣವಾಗಿತ್ತು. ಜೈಗೋವಿಂದ್ ಸಿಂಗ್‍ರು ಮದ್ಯಪಾನವನ್ನು ಚಟವಾಗಿಸಿಕೊಂಡಿದ್ದರು. ಕುಟುಂಬವನ್ನು ಅದು ತೀವ್ರವಾಗಿ ಬಾಧಿಸಿತು. ವಿಜಯಂತಿ ಕಾದಳು. ಮದ್ಯಪಾನವನ್ನು ಬಿಟ್ಟು ಬಿಡುವಂತೆ ಗಂಡನಲ್ಲಿ ವಿನಂತಿಸಿದಳು. ವಿವಿಧ ರೀತಿಯಲ್ಲಿ ಪ್ರಯತ್ನಿಸಿ ನೋಡಿದಳು. ಕೊನೆಗೆ ಗಂಡ ಬದಲಾಗಲಾರ ಎಂದು ಸ್ಪಷ್ಟವಾದಾಗ ಗಂಡನಿಂದಲೇ ದೂರವಾದಳು. ಇದೀಗ ಅವರು ಮತ್ತೆ ಮರು ಮದುವೆಯಾಗಿ ಒಂದಾಗಿದ್ದಾರೆ. ಬಿಹಾರ ಸರಕಾರವು ಎಪ್ರಿಲ್ 5ರಿಂದ ಜಾರಿಗೊಳಿಸಿದ ಸಂಪೂರ್ಣ ಪಾನ ನಿಷೇಧವು ಅವರಿಬ್ಬರನ್ನು ಮದುವೆ ಮಂಟಪದಲ್ಲಿ ಸಾರ್ವಜನಿಕರ ಮುಂದೆ ಮತ್ತೆ ಅದ್ದೂರಿಯಾಗಿ ಜೋಡಿಸಿದೆ. ತಾನಿನ್ನು ಕುಡಿಯಲಾರೆ ಎಂದು ಗೋವಿಂದ್ ಸಿಂಗ್ ಶಪಥ ತೊಟ್ಟಿದ್ದಾರೆ. ನಿಜವಾಗಿ, ಮಂಡ್ಯದ ಶಕೀಲ್ ಮತ್ತು ಆಶಿತಾರ ಪ್ರೇಮ ವಿವಾಹಕ್ಕಿಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿದ್ದ ವಿವಾಹ ಇದು. ಹರೆಯದ ಗಂಡು ಮತ್ತು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ಮತ್ತು ಧರ್ಮದ ಹಂಗಿಲ್ಲದೇ ವೈವಾಹಿಕ ಸಂಬಂಧದಲ್ಲಿ ಏರ್ಪಡುವುದಕ್ಕೆ ತೀರ್ಮಾನಿಸುವುದೆಲ್ಲ ಭಾರತದ ಸದ್ಯದ ಸಾಮಾಜಿಕ ವಾತಾವರಣದಲ್ಲಿ ಅಸಹಜವೂ ಅಲ್ಲ, ಅತಿರೇಕದ್ದೂ ಅಲ್ಲ. ಪ್ರೇಮ ವಿವಾಹಕ್ಕೆ ಅವುಗಳದ್ದೇ ಆದ ಇತಿ ಮತ್ತು ಮಿತಿಗಳಿವೆ. ವೈವಾಹಿಕ ಜೀವನದ ಬಗ್ಗೆ ಕನಸುಗಳನ್ನಷ್ಟೇ ಕಟ್ಟಿಕೊಂಡಿರುವ ಮತ್ತು ಪ್ರಾಯೋಗಿಕವಾಗಿ ಏನೇನೂ ಅನುಭವವಿಲ್ಲದ ಜೋಡಿಯೊಂದರ ವಿವಾಹಕ್ಕೆ ಹೋಲಿಸಿದರೆ, ವಿಜಯಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರುವಿವಾಹ ಹೆಚ್ಚು ಪ್ರಸ್ತುತವಾದುದು. ಇವರಲ್ಲಿ ಜೀವನಾನುಭವವಿದೆ. ಸಾಮಾಜಿಕ ಕಟ್ಟುಪಾಡುಗಳ ಅರಿವಿದೆ. ದಾಂಪತ್ಯ ಸಂಬಂಧದ ಕುರುಹಾಗಿ ಒಂದು ಮಗು ಇದೆ. ವೈವಾಹಿಕ ಅನುಭವವಿದೆ. ಹೀಗೆ ದಾಂಪತ್ಯ ಸಂಬಂಧದಲ್ಲಿ ಅನುಭವವಿರುವ ಜೋಡಿಯೊಂದು ಮದ್ಯಪಾನದ ಕಾರಣಕ್ಕಾಗಿ ಬೇರ್ಪಡುವುದು ಮತ್ತು ಅದನ್ನು ತ್ಯಜಿಸಿದ ಕಾರಣಕ್ಕಾಗಿ ಮತ್ತೆ ಒಂದಾಗುವುದೆಂದರೆ ಅದು ಹರೆಯದ ಆಕರ್ಷಣೆಗಿಂತ ಗಂಭೀರವಾದುದು. ಮದ್ಯ ಕೇಂದ್ರಿತ ಭಾರತೀಯ ಸಾಮಾಜಿಕ ಜೀವನ ಕ್ರಮದ ಸರಿ-ತಪ್ಪುಗಳನ್ನು ವಿಮರ್ಶೆಗೆ ಒಡ್ಡುವಂತಹದ್ದು. ಅಷ್ಟಕ್ಕೂ, ಮದ್ಯಪಾನದ ಕಾರಣಕ್ಕಾಗಿ ಬೇರ್ಪಟ್ಟ ದಂಪತಿಗಳಲ್ಲಿ ವಿಜಯಂತಿ ಮತ್ತು ಜೈಗೋವಿಂದ್‍ರು ಮೊದಲಿಗರೇನೂ ಅಲ್ಲ. ಬಹುಶಃ, ವಿಜಯಂತಿಗೆ ತನ್ನ ಮಗುವಿನೊಂದಿಗೆ ಪ್ರತ್ಯೇಕ ಜೀವನ ನಡೆಸುವ ಅವಕಾಶವಾದರೂ ಸಿಕ್ಕಿದೆ. ಈ ಅವಕಾಶವೂ ದಕ್ಕದ ಕೋಟ್ಯಂತರ ವಿಜಯಂತಿಯರು ಈ ದೇಶದಲ್ಲಿದ್ದಾರೆ. ಸಂಜೆಯಾಗುತ್ತಲೇ ಈ ವಿಜಯಂತಿಯರ ಎದೆಬಡಿತ ವೇಗವನ್ನು ಪಡಕೊಳ್ಳತೊಡಗುತ್ತದೆ. ಮಕ್ಕಳು ಒಳಕೋಣೆಯ ಬಾಗಿಲ ಸಂದನ್ನು ಆಶ್ರಯಿಸತೊಡಗುತ್ತಾರೆ. ಗಂಡನೆಂಬ ಜೈಗೋವಿಂದರು ಯಾವಾಗ ತಮ್ಮ ಮೇಲೆ ಪ್ರತಾಪವನ್ನು ತೋರಿಸುವರೋ ಎಂಬ ಭೀತಿ ಇಡೀ ಮನೆಯನ್ನು ಆವರಿಸಿರುತ್ತದೆ. ಒಂದು ಕಡೆ ಕಂಠಪೂರ್ತಿ ನಶೆ ಏರಿಸಿ ಬರುವ ಗಂಡ, ಇನ್ನೊಂದು ಕಡೆ ಆ ನಶೆಯ ಸರ್ವ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಪತ್ನಿ ಮತ್ತು ಮಕ್ಕಳು. ಇಂಥದ್ದೊಂದು ಒತ್ತಡದಲ್ಲಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಪ್ರತಿನಿತ್ಯ ನರಳುತ್ತಿರುವಾಗ ನಾವು ಯಾವುದಕ್ಕಾಗಿ ಧರಣಿ ಕೂರಬೇಕು? ಯಾವ ವಿಷಯವನ್ನು ಎತ್ತಿಕೊಂಡು ಪ್ರತಿಭಟನೆ ಮಾಡಬೇಕು? ಮಂಡ್ಯದಲ್ಲಿ ಆಶಿತಾಳ ಮನೆಯ ಮುಂದೆ ಧರಣಿ ಕೂತವರು ಮತ್ತು ಆಕೆಯ ಮದುವೆಯನ್ನು ಹಿಂದೂ ಧರ್ಮಕ್ಕಾಗುವ ಅವಮಾನವೆಂದು ವ್ಯಾಖ್ಯಾನಿಸಿ ಬಂದ್‍ಗೆ ಕರೆಕೊಟ್ಟವರೆಲ್ಲ ಯಾಕೆ ಈ ವಿಷಯವಾಗಿ ಪ್ರತಿಭಟನೆ ಕೈಗೊಳ್ಳುತ್ತಿಲ್ಲ? ಹಿಂದೂ ಧರ್ಮದ ಸೌಂದರ್ಯವನ್ನು ನಾಶ ಮಾಡುವ ಖಾತೆಯೆಂದು ಸಾರಿ ಅಬಕಾರಿ ಖಾತೆಯ ಸಚಿವರ ಮನೆ ಮುಂದೆ ಧರಣಿಯನ್ನೇಕೆ ಏರ್ಪಡಿಸುತ್ತಿಲ್ಲ? ಒಮ್ಮೆ, ಆಶಿತಾ ಮತ್ತು ಶಕೀಲ್ ಜೋಡಿಯನ್ನು ಹಾಗೂ ದಮಯಂತಿ ಮತ್ತು ಜೈಗೋವಿಂದ್ ಸಿಂಗ್ ಜೋಡಿಯನ್ನು ಮುಖಾಮುಖಿಗೊಳಿಸಿ ಪ್ರಶ್ನಿಸಿಕೊಳ್ಳಿ. ಸಾಮಾಜಿಕವಾಗಿ ಯಾವುದು ಆತಂಕಕಾರಿ? ಶಕೀಲ್-ಆಶಿತಾರ ಮಾದರಿಯು ಈ ದೇಶದಲ್ಲಿ ಸಮೂಹ
ಶಕೀಲ್ ಮತ್ತು ಆಶಿತಾ
ಸನ್ನಿಯಾಗಿ ಮಾರ್ಪಡಬಹುದು ಮತ್ತು ಧರ್ಮಗಳೆಲ್ಲ ಛಿನ್ನ-ಭಿನ್ನವಾಗಿ ನಾಶವಾಗಬಹುದು ಎಂದು ಸ್ವತಃ ಈ ಮದುವೆಯ ವಿರುದ್ಧ ಬಂದ್‍ಗೆ ಕರೆ ಕೊಟ್ಟವರೇ ವಾದಿಸಲಾರರು. ಯಾಕೆಂದರೆ ಪ್ರೀತಿ-ಪ್ರೇಮಕ್ಕೆ ಅದರದ್ದೇ ಆದ ಇತಿ-ಮಿತಿಗಳಿವೆ. ಪ್ರೇಮ ವಿವಾಹದಿಂದಾಗಿ ಧರ್ಮವೊಂದು ನಾಶವಾಗಿ ಬಿಡುತ್ತದೆ ಎಂದು ಹೇಳುವುದು ಅತ್ಯಂತ ಅವೈಜ್ಞಾನಿಕ ಮತ್ತು ಅವಿವೇಕತನದ್ದು. ಹರೆಯದ ಆಕರ್ಷಣೆಯ ಮೇಲೆ ಯಾವ ಧರ್ಮವೂ ಅವಲಂಬಿತವಾಗಿಲ್ಲ. ಧರ್ಮವೊಂದು ಅಪಾಯಕ್ಕೆ ಸಿಲುಕಿಕೊಳ್ಳುವ ಸಂದರ್ಭ ಯಾವುದೆಂದರೆ, ಧರ್ಮದ  ಮೂಲಭೂತ ಪ್ರತಿಪಾದನೆಗಳು ವ್ಯಾಪಕ ಮಟ್ಟದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವಾಗ. ಕುಡಿತ ಈ ದೇಶದಲ್ಲಿ ಇವತ್ತು ಮಾಡುತ್ತಿರುವುದು ಈ ನಾಶವನ್ನೇ. ಕುಡಿತದ ಅಮಲು ಹರೆಯದ ಆಕರ್ಷಣೆಯ ‘ಅಮಲಿ'ನಷ್ಟು ಅಲ್ಪಕಾಲಿಕವಲ್ಲ. ಹರೆಯದ ಅಮಲಿನಲ್ಲಿ ಸಿಲುಕಿ ವೈವಾಹಿಕ ಸಂಬಂಧದಲ್ಲಿ ಏರ್ಪಡುವವರನ್ನು ಬಳಿಕ ಜವಾಬ್ದಾರಿಯು ಕಟ್ಟಿ ನಿಲ್ಲಿಸುತ್ತದೆ. ಮಕ್ಕಳು, ಕುಟುಂಬ, ಗೌರವಾನ್ವಿತ ಜೀವನ ಮುಂತಾದದ ಗುರಿಗಳು ಈ ಸಂಬಂಧವನ್ನು ಮತ್ತಷ್ಟು ಭದ್ರಪಡಿಸುತ್ತಾ ಸಾಗುತ್ತದೆ. ಇದಕ್ಕೆ ಹೋಲಿಸಿದರೆ ಕುಡಿತದ ಅಮಲು ಇದಕ್ಕೆ ತೀರಾ ವಿರುದ್ಧವಾದುದು. ಅದು ವೈವಾಹಿಕ ಜೀವನದ ಸೌಂದರ್ಯವನ್ನೇ ಕೆಡಿಸುತ್ತದೆ. ಬೇಜವಾಬ್ದಾರಿತನವನ್ನು ಬೆಳೆಸುತ್ತದೆ. ಮಕ್ಕಳನ್ನು ಅನಾಥಗೊಳಿಸುತ್ತದೆ. ಅನಾರೋಗ್ಯಕ್ಕೆ, ವೈಧವ್ಯದ ಬದುಕಿಗೆ ದಾರಿ ತೆರೆಯುತ್ತದೆ. ನಿಜವಾಗಿ, ಸುಖೀ ಕುಟುಂಬ ಎಂಬುದು ಯಾವುದೇ ಧರ್ಮದ ಮೂಲಭೂತ ಬೇಡಿಕೆ. ಮೌಲ್ಯಗಳಿಂದ ತುಂಬಿ ತುಳುಕುವ ಕುಟುಂಬಗಳೇ ಧರ್ಮದ ನಿಜ ಮಾದರಿಗಳು. ಆದರೆ ಕುಡಿತ ಈ ಮೂಲಭೂತ ಅಂಶವನ್ನೇ ನಾಶ ಮಾಡುತ್ತದೆ. ಅದು ಸ್ವತಃ ಕುಡುಕನನ್ನು ಮಾತ್ರವಲ್ಲ, ಮಕ್ಕಳು, ಮಡದಿ, ಕುಟುಂಬ, ಸಮಾಜ ಸಹಿತ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿಬಿಡುವಷ್ಟು ಅಪಾಯಕಾರಿ ಸಾಮರ್ಥ್ಯವನ್ನು ಪಡೆದಿದೆ.  
        ದುರಂತ ಏನೆಂದರೆ, ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರೆಲ್ಲ ಧರ್ಮದ ಪಾಲಿಗೆ ನಿಜಕ್ಕೂ ಅಪಾಯಕಾರಿಯಾಗಿರುವ ಕುಡಿತದ ಬಗ್ಗೆ ಗಾಢ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ಆಶಿತಾ ಮತ್ತು ಶಕೀಲ್‍ರ ಮದುವೆಯ ವಿಷಯದಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ತೋರಿದ ಆಸಕ್ತಿಯ ಹತ್ತು ಶೇಕಡಾದಷ್ಟಾದರೂ ಈ ಕುಡಿತದ ವಿಷಯದಲ್ಲಿ ತೋರಿಸಿರುತ್ತಿದ್ದರೆ ಎಷ್ಟು ವಿಜಯವಂತಿಯರು ಖುಷಿಪಡುತ್ತಿದ್ದರು? ಗುಡ್ಡಿ ಕುಮಾರಿಯಂಥ ಎಷ್ಟು ಹೆಣ್ಣು ಮಕ್ಕಳ ಬದುಕು ಸುಂದರಗೊಳ್ಳುತ್ತಿತ್ತು? ಪಾನ ನಿಷೇಧ ಘೋಷಿಸಲಾದ ಈ ಸಣ್ಣ ಅವಧಿಯಲ್ಲೇ ಬಿಹಾರದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಅಲ್ಲಿನ ಸರಕಾರವೇ ಹೇಳಿಕೊಂಡಿದೆ. ಮದುವೆ ಸಮಾರಂಭಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ. ನಶೆಯೇರಿಸಿ ಮತ್ತು ಸಮಯ ಪ್ರಜ್ಞೆಯಿಲ್ಲದೇ ಬರುತ್ತಿದ್ದ ವರನ ಕಡೆಯವರ ಹುಚ್ಚಾಟಗಳೂ ಕಡಿಮೆಯಾಗಿವೆ. ಸಾಮಾನ್ಯವೆಂಬಂತಿದ್ದ ‘ಮದುವೆ ಪಾರ್ಟಿ ಘರ್ಷಣೆ'ಗಳು ಇಲ್ಲವಾಗುತ್ತಿವೆ. ಆದ್ದರಿಂದ, ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಸಂಕೇತವಾಗಿ ವಿಜಯವಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರು ಮದುವೆಯನ್ನು ನಾವು ಗುರುತಿಸಬಹುದು. ಆದರೆ ಶಕೀಲ್-ಆಶಿತಾರ ಬೆನ್ನು ಬಿದ್ದವರು ಇದರಲ್ಲಿ ಈವರೆಗೆ ಯಾವ ಆಸಕ್ತಿಯನ್ನೂ ತೋರಿಸಿಲ್ಲ. ಯಾಕೆಂದರೆ ಅವರ ಜೊತೆ ಧರ್ಮವಿಲ್ಲ.


Thursday, 31 March 2016

 ಹ್ಯಾಪಿ ಗುಡ್‍ಫ್ರೈಡೇ?

  ದುಃಖಿಸಬೇಕಾದ ಕಡೆ ಸುಖಿಸುವ ಮತ್ತು ಗೌರವಿಸಬೇಕಾದ ಕಡೆ ದಮನಿಸುವ ಹೊಸ ಪರಂಪರೆಯನ್ನು ಬಿಜೆಪಿ ಮತ್ತು ಪರಿವಾರ ಹುಟ್ಟು ಹಾಕಿದೆ. ಈ ಹಿಂದೆ ತೀರಾ ಸಣ್ಣ ಮಟ್ಟದಲ್ಲಿ ಮತ್ತು ಕದ್ದು ಮುಚ್ಚಿ ಮಾಡಲಾಗುತ್ತಿದ್ದ ಈ ವಿಕೃತಿಯನ್ನು ಇವತ್ತು ಅದ್ದೂರಿಯಾಗಿ ನಿರ್ವಹಿಸಲಾಗುತ್ತಿದೆ. ಸಾಹಿತಿ ಅನಂತಮೂರ್ತಿಯವರ ಸಾವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಕೃತಿಗೆ ದೇಶ ಸಾಕ್ಷಿಯಾಗಿತ್ತು. ಗಣರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿಯೂ ಗಾಂಧೀಜಿಯವರ ಹತ್ಯೆಯನ್ನು ಸಂಭ್ರಮದ ದಿನವನ್ನಾಗಿಯೂ ಇತ್ತೀಚೆಗಷ್ಟೇ ಇಲ್ಲಿ ಆಚರಿಸಲಾಯಿತು. ವಿಕೃತಿಯ ಈ ಪಟ್ಟಿ ತೀರಾ ದೊಡ್ಡದು. ಕಳೆದವಾರ ಕ್ರೈಸ್ತ ಬಂಧುಗಳು ಗುಡ್‍ಫ್ರೈಡೇಯನ್ನು ಆಚರಿಸಿದರು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಶೋಕತಪ್ತ ದಿನವಾಗಿ ಗುಡ್‍ಫ್ರೈಡೇ ಗುರುತಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿಯವರ ಸಚಿವ ಸಂಪುಟದ ಮೂವರು ಹಿರಿಯ ಸಚಿವರು ತಮ್ಮ ಖುಷಿಯನ್ನು ಟ್ವೀಟರ್‍ನ ಮೂಲಕ ಹಂಚಿಕೊಂಡರು. ಹ್ಯಾಪಿ ಗುಡ್‍ಫ್ರೈಡೇ ಎಂದು ಗೆಳೆಯರಿಗೆ ಶುಭಾಶಯ ಕೋರಿದರು. ರೈಲ್ವೆ ಸಚಿವ ಸುರೇಶ್ ಪ್ರಭು, ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.. ಹೀಗೆ ಖುಷಿಪಟ್ಟವರಲ್ಲಿ ಪ್ರಮುಖರು. ಸಚಿವರುಗಳಿಗಾದ ಈ ಸಂತಸ ಸುದ್ದಿಯಾಗುತ್ತಿದ್ದಂತೆಯೇ ಹಿರಿಯ ಕ್ಯಾಥೋಲಿಕ್ ಧರ್ಮಗುರು ಪೌಲ್ ಟೆಲಿಕಟ್ಟ್ ಆಘಾತ ವ್ಯಕ್ತಪಡಿಸಿದರು. ದುಃಖಿಸಬೇಕಾದ ಕಡೆ ಸುಖಿಸಿದವರ ತಿಳುವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಚಿವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾದುವು. ಅಷ್ಟಕ್ಕೂ, ಗುಡ್‍ಫ್ರೈಡೇಯ ಹಿನ್ನೆಲೆ ಮತ್ತು ಮಹತ್ವದ ಅರಿವಿನ ಕೊರತೆಯೇ ಈ ಟ್ವೀಟ್‍ಗಳಿಗೆ ಕಾರಣ ಎಂದು ಈ ಸಚಿವರುಗಳನ್ನು ಒಂದೊಮ್ಮೆ ಸಮರ್ಥಿಸಿಕೊಳ್ಳಬಹುದಾದರೂ ಇವರು ಪ್ರತಿನಿಧಿಸುವ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೆ ನಡೆಸಿರುವ ಮತ್ತು ಈಗ ನಡೆಸುತ್ತಿರುವ ವಿಕೃತಿಗಳನ್ನು ಪರಿಗಣಿಸಿದರೆ ಇದನ್ನು ಅಷ್ಟು ಸರಳವಾಗಿ ನೋಡುವಂತಿಲ್ಲ. ಪ್ರಮಾದ, ಎಡವಟ್ಟು ಮುಂತಾದ ಸಾಧು ಪದಗಳನ್ನು ಬಳಸಿ ಇದನ್ನು ಲಘೂಕರಿಸುವಂತೆಯೂ ಇಲ್ಲ. ವಿಕೃತಿಯು ಅಭ್ಯಾಸವಾಗಿ ಬಿಟ್ಟರೆ ಕ್ರಮೇಣ ಅದು ಮನಸ್ಥಿತಿಯಾಗಿ ಬದಲಾಗಿ ಬಿಡುತ್ತದೆ. ಆ ಬಳಿಕ ತನಗೆ ಒಪ್ಪಿತವಲ್ಲದ ಎಲ್ಲವನ್ನೂ ಬಲವಂತದಿಂದ ದಮನಿಸುವ ಪ್ರವೃತ್ತಿ ಬೆಳೆಯುತ್ತದೆ. ಜೆ.ಎನ್.ಯು. ಪ್ರಕರಣ ಇದಕ್ಕೆ ಅತ್ಯುತ್ತಮ ಉದಾಹರಣೆ. 120 ಕೋಟಿಗಿಂತಲೂ ಅಧಿಕ ಜನರಿರುವ ದೇಶವೊಂದರಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ವೇಮುಲ, ಕನ್ಹಯ್ಯ, ಉಮರ್ ಖಾಲಿದ್ ಮುಂತಾದವರು ಪ್ರತಿಪಾದಿಸುವ ಸಿದ್ಧಾಂತವನ್ನು ಉಳಿದೆಲ್ಲ ಭಾರತೀಯರು ಒಪ್ಪಿಕೊಳ್ಳಬೇಕೆಂದು ಯಾರೂ ಬಲವಂತಪಡಿಸುತ್ತಲೂ ಇಲ್ಲ. ಆದರೆ ಸಂವಿಧಾನಬದ್ಧ ಎಲ್ಲ ವಿಚಾರಧಾರೆಗೂ ಸಮಾನ ಗೌರವ ಮತ್ತು ಸ್ಪೇಸ್ ನೀಡಬೇಕಾದುದು ಎಲ್ಲರ ಕರ್ತವ್ಯ. ಆದರೆ ಬಿಜೆಪಿ ಮತ್ತು ಬಳಗ ಈ ಸ್ಪೇಸ್ ಅನ್ನೇ ಜನರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಭಾರತ್ ಮಾತಾಕಿ ಜೈ, ದೇಶಪ್ರೇಮ-ದೇಶದ್ರೋಹ, ಗೋಮಾಂಸ, ವಂದೇಮಾತರಂ.. ಮುಂತಾದ ವಿಷಯಗಳಲ್ಲಿ ಅದು ತನ್ನ ವಿಚಾರಧಾರೆಯನ್ನು ಈ ದೇಶದ ಮುಂದೆ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ಅದನ್ನು ಒಪ್ಪದವರನ್ನು ನಿರ್ದಯವಾಗಿ ದಮನಿಸುವ ಕ್ರೌರ್ಯವನ್ನು ಮೆರೆದಿದೆ. ಕನ್ಹಯ್ಯ, ಉಮರ್ ಖಾಲಿದ್, ಅನಿರ್ಬನ್‍ರನ್ನು ಅದು ದೇಶದ್ರೋಹದ ಹೆಸರಲ್ಲಿ ಜೈಲಿಗಟ್ಟಿತು. ಎಸ್.ಎ.ಆರ್. ಗೀಲಾನಿಯನ್ನೂ ಕಂಬಿಯೊಳಕ್ಕೆ ನೂಕಿತು. ಹಾಗಂತ, ನಿಜಕ್ಕೂ ಅವರದ್ದು ದೇಶದ್ರೋಹಿ ಕೃತ್ಯವೇ, ದೇಶದ್ರೋಹಕ್ಕಿರುವ ಮಾನದಂಡಗಳು ಏನೆಲ್ಲ.. ಎಂಬ ಬಹುಮುಖ್ಯ ಪ್ರಶ್ನೆಗೆ ಅದು ಎಲ್ಲೂ ಮುಖಾಮುಖಿಯಾಗದೇ ಭಾವನಾತ್ಮಕ ಉತ್ತರಗಳನ್ನು ಕೊಡತೊಡಗಿತು. ಇವರೆಲ್ಲ ಜೈಲಿಗೆ ಹೋದಷ್ಟೇ ಶೀಘ್ರವಾಗಿ ಹೊರಗೂ ಬಂದರು. ಇದೇ ವೇಳೆ, ಶ್ರೀಶ್ರೀ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದರು. ಬಿಜೆಪಿಗೆ ನಿಜಕ್ಕೂ ತಾನು ಪ್ರತಿಪಾದಿಸುವ ‘ದೇಶಪ್ರೇಮಿ' ವಿಚಾರಧಾರೆಯ ಬಗ್ಗೆ ಕಳಕಳಿ ಇದ್ದಿದ್ದೇ ಆಗಿದ್ದರೆ ಮತ್ತು ದೇಶದ್ರೋಹಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳನ್ನು ಅದು ಹೊಂದಿದ್ದೇ ಆಗಿದ್ದರೆ, ಜೈಲಿನಿಂದ ಹೊರಬಂದ ಕನ್ಹಯ್ಯನನ್ನೂ ಜೈಲಿಗೇ ಹೋಗದ ರವಿಶಂಕರ್‍ರನ್ನೂ ಸೈದ್ಧಾಂತಿಕವಾಗಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಿತ್ತು. ಕನ್ಹಯ್ಯ ಗುಂಪಿನ ಮೇಲೆ ಕೈಗೊಂಡ ಉಗ್ರ ಕ್ರಮಗಳನ್ನು ಯಾಕೆ ರವಿಶಂಕರ್ ಮೇಲೆ ಕೈಗೊಂಡಿಲ್ಲವೆಂಬುದಕ್ಕೆ ಸೈದ್ಧಾಂತಿಕ ಉತ್ತರಗಳನ್ನು ನೀಡಬೇಕಿತ್ತು. ಒಂದು ವೇಳೆ, ಇಂಥ ಚರ್ಚೆಗಳಿಗೆ ಪ್ರಾಮಾಣಿಕವಾಗಿ ಅದು ತೆರೆದುಕೊಳ್ಳುತ್ತಿದ್ದರೆ, ದೇಶದ್ರೋಹ ಒಂದೇ ಅಲ್ಲ, ಆಹಾರ, ಸಂಸ್ಕ್ರತಿ ಸಹಿತ ಎಲ್ಲವನ್ನೂ ಸಂವಿಧಾನದ ಆಧಾರದಲ್ಲಿ ಚರ್ಚಿಸುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಬಿಜೆಪಿ ಇಂಥ ಸಂದರ್ಭಗಳಲ್ಲಿ ಅತ್ಯಂತ ಬೇಜವಾಬ್ದಾರಿ ನಿಲುವುಗಳನ್ನೇ ಪ್ರದರ್ಶಿಸಿದೆ. ಅಂದಹಾಗೆ, ಗೋಸಾಗಾಟ, ಗೋಮಾಂಸ ಸೇವನೆ.. ಮುಂತಾದುವುಗಳ ಹೆಸರಲ್ಲಿ ಈ ದೇಶದಲ್ಲಾಗುತ್ತಿರುವ ಯಾವ ಹಲ್ಲೆ, ಹತ್ಯೆಗೂ ಅದು ಖಂಡನೆಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಅದರ ಬದಲು ಅದು ಹಲ್ಲೆಕೋರರನ್ನೇ ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತದೆ. ಅನೈತಿಕ ಪೊಲೀಸ್‍ಗಿರಿಯ ಸಂದರ್ಭದಲ್ಲೂ ಅದರ ನಿಲುವು ಇದಕ್ಕಿಂತ ಭಿನ್ನವಾಗಿಲ್ಲ. ತನ್ನ ನಿಲುವನ್ನು ಬಲವಂತದಿಂದ ಜಾರಿಗೊಳಿಸುವ ಮತ್ತು ತನ್ನ ನಿಲುವಿಗೆ ಸಡ್ಡು ಹೊಡೆಯುವಂತಹ ಪ್ರಕರಣಗಳನ್ನು ನಿರ್ದಯೆಯಿಂದ ದಮನಿಸುವ ಕೆಟ್ಟ ಗುಣವೊಂದು ಅದರಲ್ಲಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸುತ್ತಿಲ್ಲ. ದೇಶದ ಬಹುಸಂಸ್ಕ್ರತಿಯ ಬಗ್ಗೆ ಅಥವಾ ಹಿಂದೂ ಧರ್ಮದ ಸಹಿಷ್ಣುತೆಯ ಬಗ್ಗೆ ಅದು ಭಾಷಣ ಮಾಡುವುದಕ್ಕೂ ಕಾರ್ಯತಃ ಅದು ನಡಕೊಳ್ಳುವುದಕ್ಕೂ ಇರುವ ಅಂತರ ಬಹಳ ದೊಡ್ಡದು. ಇದನ್ನು ನಾವು ಕೇವಲ ದ್ವಂದ್ವ ಎಂಬ ಸಾಧು ಪದದ ಮೂಲಕ ಕರೆದು ಸುಮ್ಮನಾಗುವಂತಿಲ್ಲ. ದ್ವಂದ್ವ ನಿಲುವಿನಲ್ಲಿ ಅಸಹಿಷ್ಣುತೆಗಿಂತಲೂ ಪಲಾಯನವಾದದ ವಾಸನೆಯೇ ಹೆಚ್ಚಿರುತ್ತದೆ. ಆ ಸಂದರ್ಭದ ಇಕ್ಕಟ್ಟನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನದೇ ಹಿಂದಿನ ಧೋರಣೆಯನ್ನು ತ್ಯಜಿಸುವ ವಿಧಾನ ಅದು. ಬಿಜೆಪಿ ಪ್ರದರ್ಶಿಸುತ್ತಿರುವುದು ಈ ಸಂದರ್ಭ ಸಾಧಕತನ ನಿಲುವನ್ನಲ್ಲ. ಈ ನಿಲುವಿನಲ್ಲಿ ಪಲಾಯನವಾದವೂ ಇಲ್ಲ. ಅದು ಗೊತ್ತಿದ್ದೇ ಮತ್ತು ಖಚಿತತೆಯೊಂದಿಗೆಯೇ ಇಂಥ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಭಿನ್ನ ವಿಚಾರಧಾರೆ ಎಂಬೊಂದು ನೆಲೆಗಟ್ಟನ್ನೇ ಬುಡಸಮೇತ ಕೀಳುವ ಅತ್ಯಂತ ಅಸಹಿಷ್ಣು ನೀತಿಯಿದು. ಈ ನೀತಿ ಎಷ್ಟು ಅಪಾಯಕಾರಿಯೆಂದರೆ ಅದು ತನ್ನನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ಆ ಸಮರ್ಥನೆಗೆ ಪೂರಕವಾಗಿ ಯಾವ ವಿಕೃತಿಗೂ ಮುಂದಾಗುತ್ತದೆ. ಸಂವಿಧಾನವನ್ನು ಬೇಕಾದಾಗ ಬೇಕಾದಂತೆ ಉಪಯೋಗಿಸುತ್ತದೆ. ತನ್ನ ವಿಚಾರಧಾರೆಗೆ ಸಂವಿಧಾನ ವಿರುದ್ಧವೆಂದಾದರೆ ಸಂವಿಧಾನದ ಹೆಸರೆತ್ತದೆಯೇ ದೇಶ, ಸಂಸ್ಕ್ರತಿ, ಪರಂಪರೆ, ಧರ್ಮ.. ಎಂಬಿತ್ಯಾದಿ ಪವಿತ್ರ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸಿ ಸಂವಿಧಾನ ಚರ್ಚೆಗೆ ಒಳಗಾಗದಂತೆ ಅಥವಾ ಇವೆಲ್ಲವೂ ಸಂವಿಧಾನದ ಹೊರಗೆ ಇತ್ಯರ್ಥವಾಗಬೇಕಾದ ವಿಷಯಗಳೆಂಬಂತೆ ಭ್ರಮೆ ಮೂಡಿಸುತ್ತದೆ. ಕನ್ಹಯ್ಯ ಮತ್ತು ಬಳಗವನ್ನು ಇವತ್ತು ಅದು ಬೇಟೆಯಾಡುತ್ತಿರುವುದು ಇದೇ ‘ಭ್ರಮಾ’ ಸಂವಿಧಾನದ ಆಧಾರದಲ್ಲಿ. ಈಗಾಗಲೇ ಇದರ ಅಪಾಯಕ್ಕೆ ಶಾರುಖ್, ಅಮೀರ್, ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾದತ್.. ಮುಂತಾದ ಅನೇಕರು ಗುರಿಯಾಗಿದ್ದಾರೆ. ‘ತಾನೇ ಸರಿ ಇತರೆಲ್ಲರೂ ತಪ್ಪು' ಎಂಬ ಮನಸ್ಥಿತಿ ನಿಜಕ್ಕೂ ಅತ್ಯಂತ ಅಪಾಯಕಾರಿ. ವಿಕೃತಿಯೇ ವಿಚಾರಧಾರೆಯಾದರೆ, ಶೋಕಕ್ಕೂ ಸುಖಪಡಲಾಗುತ್ತದೆ. ಕ್ರೌರ್ಯವನ್ನೂ ಗೌರವಿಸಲಾಗುತ್ತದೆ. ಗುಡ್‍ಫ್ರೈಡೇಯಂದು ಸಂತಸ ಹಂಚಿಕೊಂಡಿರುವುದರಲ್ಲಿ ಪರೋಕ್ಷ
ವಾಗಿ ವ್ಯಕ್ತವಾಗುವುದೂ ಇದುವೇ.

Wednesday, 23 March 2016

ನಕಾರಾತ್ಮಕತೆಯ ಪ್ರಾಬಲ್ಯ ಮತ್ತು ಒಂದು ಸಂಶೋಧನೆ

       ಕಳೆದವಾರ ಎರಡು ಪ್ರಮುಖ ಘಟನೆಗಳು ಜರುಗಿದುವು. ಇವುಗಳಲ್ಲಿ ಒಂದು ಘಟನೆಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾದರೆ, ಇನ್ನೊಂದು ಘಟನೆ ಹತ್ತಾರು ಸುದ್ದಿಗಳ ಮಧ್ಯೆ ಕೇವಲ ಒಂದು ಸುದ್ದಿಯಾಗುವ ಭಾಗ್ಯವನ್ನಷ್ಟೇ ಕಂಡು ಸತ್ತು ಹೋಯಿತು. ಮಾರ್ಚ್ 15ರಂದು ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ 4 ಮಂದಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ದುಷ್ಕರ್ಮಿಗಳಿಂದ ಹಲ್ಲೆ ನಡೆಯಿತು. ಇವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸವನ್ನು ಬೇಯಿಸುತ್ತಿದ್ದರು ಎಂಬುದು ಈ ಹಲ್ಲೆಗೆ ಕಾರಣವನ್ನಾಗಿ ಕೊಡಲಾಯಿತು. ಪೊಲೀಸರು ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನೇ ಬಂಧಿಸಿದರು. ಮರುದಿನ ಅವರಿಗೆ ಜಾಮೀನು ನೀಡುವಾಗ, 'ಆರು ತಿಂಗಳುಗಳ ಕಾಲ ನಿಮ್ಮ ಮೇಲೆ ನಿಗಾ ಇಡಲಾಗುವುದು' ಎಂದು ಕೋರ್ಟು ಎಚ್ಚರಿಸಿತು. ಇದರ ಜೊತೆಜೊತೆಗೇ ಅಲ್ಲಿನ ಪ್ರಾಣಿ ಸಾಕಾಣಿಕಾ ಇಲಾಖೆಯಿಂದ ಹೊರಬಿದ್ದ ಸಂಶೋಧನಾ ವರದಿಯು ಆ ಇಡೀ ಘಟನೆಯು ಪೂರ್ವಗ್ರಹ ಪೀಡಿತವಾದುದು ಎಂಬುದಾಗಿ ಸಾರಿತು. ‘ಅವರು ಬೇಯಿಸುತ್ತಿದ್ದುದು ಗೋಮಾಂಸವಲ್ಲ, ಆಡಿನ ಮಾಂಸ’ ಎಂಬುದಾಗಿ ಅದು ಮಾಂಸ ಪರೀಕ್ಷೆಯ ಬಳಿಕ ಘೋಷಿಸಿತು. ಈ ಎಲ್ಲವೂ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಯಿತು. ಟಿ.ವಿ. ಚಾನೆಲ್‍ಗಳು ಈ ಸುದ್ದಿಯನ್ನಾಧರಿಸಿ ಚರ್ಚೆಗಳನ್ನು ಏರ್ಪಡಿಸಿದುವು. ಪತ್ರಿಕೆಗಳಲ್ಲೂ ಸಾಕಷ್ಟು ಕವರೇಜ್ ಲಭ್ಯವಾದುವು. ಇದಾಗಿ ಮೂರು ದಿನಗಳ ಬಳಿಕ ಮಾರ್ಚ್ 20ರಂದು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿ ಭವನ ಇದಕ್ಕೆ ಸಾಕ್ಷಿಯಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಆಗಿರಬಹುದಾದ ಹೊಸ ಸಂಶೋಧನೆಗಳನ್ನು ಪ್ರದರ್ಶಿಸಲು ರಾಷ್ಟ್ರಪತಿ ಭವನವು ಆಹ್ವಾನಿಸಿತ್ತು. ಅದರಂತೆ 114 ಸಂಶೋಧನೆಗಳ ಪಟ್ಟಿಯಲ್ಲಿ 6ನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಐಐಟಿ ಕಾನ್ಪುರ, ಜಮ್ಮು ಕೇಂದ್ರೀಯ ವಿಶ್ವ ವಿದ್ಯಾನಿಲಯ, ಐಐಟಿ ಮದ್ರಾಸ್, ಎನ್ಐಟಿ ತಿರುಚಿನಾಪಳ್ಳಿ, ಐಐಟಿ ದೆಹಲಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯಗಳು ಈ ಪ್ರದರ್ಶನಕ್ಕೆ ಆಯ್ಕೆಯಾದುವು. ಜಾಮಿಯಾದ ಹುಮಾ ಪರ್ವೇಝï, ಫೈಝ ಜಮಾಲ್ ಮತ್ತು ಫರಾಜ್  ಖಾನ್ ಎಂಬೀ ವಿದ್ಯಾರ್ಥಿಗಳು 'ಇನ್ನೋಕಾರ್ಟ್' ಎಂಬ ಪರಿಸರ ಸ್ನೇಹಿ ತಳ್ಳುಗಾಡಿಯನ್ನು ಪ್ರದರ್ಶಿಸಿ ವಿಶೇಷ ಗೌರವಕ್ಕೆ ಪಾತ್ರರಾದರು. ಇದು ಆಹಾರ ಮಾರಾಟ ಮಾಡುವ ತಳ್ಳುಗಾಡಿ. ಇದರಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆಯಿದೆ. ಮೇಲೆ ಮುಚ್ಚಿಗೆಯ ವ್ಯವಸ್ಥೆ ಇದೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿಡಲು ಎರಡು ಪ್ರತ್ಯೇಕ ವಿಭಾಗಗಳ ಜೊತೆಗೇ ಮುಚ್ಚಿಗೆಯ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ‘ಇನ್ನೋಕಾರ್ಟ್’ ಭಾರತದ ಬೀದಿ ಆಹಾರ ಮಾರಾಟ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ವಿವಿಯ ಆವರಣದ ರಸ್ತೆಗಳಲ್ಲಿರುವ ಕ್ಯಾಂಟೀನಿನ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿಸಿ ಈ ತಳ್ಳುಗಾಡಿಯನ್ನು ಪರೀಕ್ಷಿಸುತ್ತೇವೆ ಮತ್ತು ಪೇಟೆಂಟ್‍ಗಾಗಿ ಅರ್ಜಿ ಹಾಕುತ್ತೇವೆ ಎಂದು ಈ ಉತ್ಸಾಹಿ ಮಕ್ಕಳು ಹೇಳಿಕೊಂಡಿದ್ದಾರೆ. ಆದರೆ ಈ ಸಂಶೋಧನೆಯ ಬಗ್ಗೆ ಮಾಧ್ಯಮಗಳು ಬಹುತೇಕ ಶೂನ್ಯ ಕುತೂಹಲವನ್ನು ವ್ಯಕ್ತಪಡಿಸಿದುವು. ತೀರಾ ಸಣ್ಣ ಸುದ್ದಿಯ ಗೌರವವನ್ನಷ್ಟೇ ಅವು ಇದಕ್ಕೆ ಕೊಟ್ಟವು. ಕೆಲವು ಪತ್ರಿಕೆಗಳಂತೂ ಇದಕ್ಕೆ ಸುದ್ದಿಯಾಗುವ ಭಾಗ್ಯವನ್ನೂ ಕರುಣಿಸಲಿಲ್ಲ. ಅಷ್ಟಕ್ಕೂ, ಮಾಧ್ಯಮಗಳ ಮಟ್ಟಿಗೆ ಈ ಸಂಶೋಧನೆಯಲ್ಲಿ ಸೆನ್ಸೇಷನಲ್ ಅನ್ನುವುದು ಏನೂ ಇಲ್ಲ. ಒಂದು ತಳ್ಳುಗಾಡಿ, ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ.. ಇಷ್ಟನ್ನು ಬಿಟ್ಟರೆ ಉಳಿದಂತೆ ಈ ಸುದ್ದಿ ಗೊಂಚಲಿನಲ್ಲಿ ಭಾರತ್ ಮಾತಾಕಿ ಜೈ, ಪಾಕಿಸ್ತಾನ್ ಜಿಂದಾಬಾದ್, ಖಾಕಿ ಚಡ್ಡಿ-ಕಂದು ಪ್ಯಾಂಟು, ದೇಶದ್ರೋಹ-ದೇಶಪ್ರೇಮ, ಗೋಮಾಂಸ.. ಮುಂತಾದುವುಗಳಲ್ಲಿರುವ ಆಕರ್ಷಣೆಯೇನೂ ಈ ಸಂಶೋಧನೆಯಲ್ಲಿಲ್ಲವಲ್ಲ.
  ನಿಜವಾಗಿ, ವಿವಾದಾತ್ಮಕವಲ್ಲದ ಮತ್ತು ಸಕಾರಾತ್ಮಕವಾದ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದು ಮತ್ತು ಅವುಗಳ ಮೇಲೆ ಚರ್ಚೆ-ಸಂವಾದಗಳನ್ನು ಏರ್ಪಾಡು ಮಾಡುವುದು ದಡ್ಡತನ ಎಂದು ಕರೆಸಿಕೊಳ್ಳುವಷ್ಟು ಇವತ್ತು ಅಪ್ರಸ್ತುತ ಅನಿಸಿಕೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಇವತ್ತು ಸುದ್ದಿಯೊಂದು ಗಮನ ಸೆಳೆಯಬೇಕಾದರೆ ಅದು ಮುಸ್ಲಿಮರಿಗೆ ಸಂಬಂಧಿಸಿರಬೇಕು ಮತ್ತು ಸಂಘಪರಿವಾರ ಅದರಲ್ಲಿ ಭಾಗಿಯಾಗಿರಬೇಕು ಎಂಬ ಅಲಿಖಿತ ನಿಯಮ ಗೊತ್ತಿದ್ದೋ  ಗೊತ್ತಿಲ್ಲದೆಯೋ ಜಾರಿಯಲ್ಲಿದೆ. ಗೋಸಾಗಾಟ, ಗೋಮಾಂಸ, ದೇಶದ್ರೋಹ, ಭಯೋತ್ಪಾದನೆ ಮುಂತಾದುವುಗಳೇ ಈ ದೇಶದಲ್ಲಿ ಇವತ್ತು ಸದಾ ಬ್ರೇಕಿಂಗ್ ನ್ಯೂಸ್. ಇಲ್ಲೆಲ್ಲಾ  ಮುಸ್ಲಿಮರ ಪಾತ್ರ ಯಾವಾಗಲೂ ನಕಾರಾತ್ಮಕ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸಿ ಅವರನ್ನು ಹಲ್ಲೆಗೋ ಹತ್ಯೆಗೋ ಒಳಪಡಿಸುವುದು ಬಲಪಂಥೀಯ ದುಷ್ಕರ್ಮಿಗಳ ತಂತ್ರಗಾರಿಕೆ. ಈ ವಿಷಯವನ್ನೆತ್ತಿಕೊಂಡು ಮಾಧ್ಯಮಗಳು ಆ ಬಳಿಕ ಚರ್ಚೆಯನ್ನೇರ್ಪಡಿಸುತ್ತವೆ. ಜಾತ್ಯತೀತವಾದಿಗಳು ಈ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ದುಷ್ಕರ್ಮಿಗಳು ಹಸಿ ಹಸಿ ಸುಳ್ಳನ್ನು ಹೇಳಲು ಈ ಚರ್ಚಾ ವೇದಿಕೆಯನ್ನು ದುರುಪಯೋಗಿಸುತ್ತಾರೆ. ಕೊನೆಗೆ ಕೋಣ ಸಾಗಾಟವು ಗೋಸಾಗಾಟವಾಗಿ ಪರಿವರ್ತನೆಯಾಗುತ್ತದೆ. ಆಡಿನ ಮಾಂಸವು ಗೋಮಾಂಸವಾಗುತ್ತದೆ. ಹಸಿರು ಧ್ವಜವು ಪಾಕಿಸ್ತಾನದ ಧ್ವಜವಾಗಿ ಮಾರ್ಪಡುತ್ತದೆ. ಥಳಿತಕ್ಕೊಳಗಾದವರು ಅಪರಾಧಿಗಳಾಗಿಯೂ ಥಳಿಸಿದವರು ನ್ಯಾಯವಂತರಾಗಿಯೂ ಬಿಂಬಿತರಾಗುತ್ತಾರೆ. ಒಂದು ಬಗೆಯ ಕೋಮುಧ್ರುವೀಕರಣಕ್ಕೆ ಇಂಥ ಚರ್ಚೆಗಳು ಬಹುತೇಕ ಬಾರಿ ವೇದಿಕೆಯಾಗುತ್ತಿವೆಯೇ ಹೊರತು, ಸಕಾರಾತ್ಮಕ ಫಲಿತಾಂಶಗಳನ್ನು ತರುವಲ್ಲಿ ವಿಫಲವಾಗುತ್ತಿವೆಯೇನೋ ಎಂದು ಅನಿಸುತ್ತಿದೆ. ಬಹುಶಃ ಸಕಾರಾತ್ಮಕ ಸುದ್ದಿಗಳ ಮೇಲಿನ ಚರ್ಚೆಯನ್ನು ತಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಬಲಪಂಥೀಯರು ಇಂಥ ಘಟನೆಗಳನ್ನು ಹುಟ್ಟು ಹಾಕುತ್ತಿದ್ದಾರೋ ಎಂಬ ಅನುಮಾನವೂ ಮೂಡುತ್ತಿದೆ. ಹೀಗೆ ಮುಸ್ಲಿಮರೆಂದರೆ ನಕಾರಾತ್ಮಕತೆ, ನಕಾರಾತ್ಮಕತೆಯೆಂದರೆ ಮುಸ್ಲಿಮರು ಎಂಬೊಂದು ವಾತಾವರಣದ ಸೃಷ್ಟಿಗೆ ಒಂದು ಗುಂಪು ತೀವ್ರ ಪರಿಶ್ರಮ ನಡೆಸುತ್ತಿರುವುದರ ಮಧ್ಯೆ, ಸಕಾರಾತ್ಮಕವಾದುದನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದ ತುರ್ತೊಂದು ಸಮಾಜದ ಮೇಲಿದೆ. ಒಂದು ಕಡೆ ಮೋದಿ ಸರಕಾರವು ಜಾಮಿಯಾ ಮಿಲ್ಲಿಯ ಮತ್ತು ಅಲೀಘಡ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಈ ಕುರಿತಂತೆ ಸುಪ್ರೀಮ್ ಕೋರ್ಟಿನಲ್ಲಿಯೇ ತನ್ನ ಇಂಗಿತವನ್ನು ಅದು ವ್ಯಕ್ತಪಡಿಸಿದೆ. ಇನ್ನೊಂದು ಕಡೆ ಜಾಮಿಯಾದ ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ದೇಶವೇ ಹೆಮ್ಮೆ ಪಡಬಹುದಾದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಈ ಸುದ್ದಿ ಯಾಕೆ ಮಹತ್ವಪೂರ್ಣ ಎಂದರೆ, ಮುಸ್ಲಿಮ್ ಎಂಬ ಐಡೆಂಟಿಟಿಯನ್ನೇ ದೇಶದ್ರೋಹವಾಗಿಯೋ ಅಸಹಿಷ್ಣುವಾಗಿಯೋ ಅಥವಾ ಅನುಮಾನಿತವಾಗಿಯೋ ಕಾಣಲಾಗುತ್ತಿರುವ ಈ ಹೊತ್ತಿನಲ್ಲಿ ಈ ಸಾಧನೆಯನ್ನು ಮಾಡಲಾಗಿದೆ ಎಂಬುದರಿಂದಾಗಿ. ಸಹಜ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತೀರಾ ಕಲುಷಿತಗೊಂಡಿರುವ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತುಂಬಾ ವ್ಯತ್ಯಾಸ ಇದೆ. ಆದ್ದರಿಂದಲೇ ಈ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆಯಬೇಕಿತ್ತು ಎಂದು ಮಾತ್ರವಲ್ಲ, ಮಾಧ್ಯಮಗಳು ಈ ಸುದ್ದಿಯ ಹಿನ್ನೆಲೆಯಲ್ಲಿ ಸಕಾರಾತ್ಮಕ ಚರ್ಚೆಯೊಂದನ್ನು ಹುಟ್ಟುಹಾಕುವುದಕ್ಕೂ ಪ್ರಯತ್ನಿಸಬೇಕಾಗಿತ್ತು ಎಂದು ಅನಿಸುವುದು. ಇಂದಿನ ಮುಸ್ಲಿಮ್ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ಇನ್ನೋಕಾರ್ಟ್' ಸುದ್ದಿಯು ಚರ್ಚೆಗೆ ಒಳಗಾಗುತ್ತಿದ್ದರೆ ಅದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗುವುದಕ್ಕೂ ಅವಕಾಶ ಇತ್ತು. ಅಲ್ಲದೇ ಬಲಪಂಥೀಯರ ಉದ್ದೇಶವನ್ನು ವಿಫಲಗೊಳಿಸುವುದಕ್ಕೂ ಅದು ನೆರವಾಗುತ್ತಿತ್ತು. ದುರಂತ ಏನೆಂದರೆ, ಇವತ್ತು ವಿಷಯವೊಂದು ಚರ್ಚಾಸ್ಪದವಾಗಬೇಕಾದರೆ ಅದರಲ್ಲಿ ನಕಾರಾತ್ಮಕತೆ ಇರಲೇಬೇಕು ಎಂಬ ನಿಯಮವಿದೆ. ಆದ್ದರಿಂದ, ಇದನ್ನು ಮೀರುವ ಸಾಹಸ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಸಮಾಜ ನಕಾರಾತ್ಮಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇಲ್ಲದಿಲ್ಲ.

Wednesday, 16 March 2016

ಬದಲಾಗಬೇಕಾದ್ದು ಬಾಹ್ಯವಲ್ಲ, ಅಂತರಂಗ...

        ಶಿಶುವೊಂದು ಬೆಳೆಯುತ್ತಾ ಹೋದಂತೆ ಪ್ಯಾಂಪರ್ಸ್‍ನಿಂದ ಅಂಡರ್‍ವೇರ್‍ಗೆ, ಅಂಡರ್‍ವೇರ್‍ನಿಂದ ಚಡ್ಡಿಗೆ, ಚಡ್ಡಿಯಿಂದ ಪ್ಯಾಂಟ್, ಚೂಡಿದಾರ್, ಲಂಗಧಾವಣಿ, ಸೀರೆ ಅಥವಾ ಲುಂಗಿ ಇತ್ಯಾದಿ ಇತ್ಯಾದಿಗಳಿಗೆ ತನ್ನ ಉಡುಪನ್ನು ಬದಲಾಯಿಸುತ್ತಾ ಹೋಗುವುದು ಸಹಜ. ಆದ್ದರಿಂದಲೇ ಈ ಪ್ರಕ್ರಿಯೆಗೆ ಸಮಾಜ ಆಶ್ಚರ್ಯ ಪಟ್ಟದ್ದೂ ಇಲ್ಲ, ಆತಂಕದಿಂದ ನೋಡಿದ್ದೂ ಇಲ್ಲ. ಆದರೆ, ಚಡ್ಡಿಯನ್ನೋ ಪ್ಯಾಂಟನ್ನೋ ಧರಿಸಿ ಓಡಾಡಬೇಕಾದ ಪ್ರಾಯದ ಹುಡುಗನೋರ್ವ ಪ್ಯಾಂಪರ್ಸ್‍ಗೇ ಜೋತುಬಿದ್ದರೆ ಮತ್ತು ಹಠ ಹಿಡಿದು ಅದನ್ನೇ ಧರಿಸಿ ಓಡಾಡತೊಡಗಿದರೆ ಅದು ಅಸಹಜವಾಗಿ ಕಾಣುತ್ತದೆ. ಮಧ್ಯ ವಯಸ್ಕನೋರ್ವ ಚಡ್ಡಿಯನ್ನೇ ಶಾಶ್ವತ ಉಡುಪಾಗಿ ಆಯ್ಕೆ ಮಾಡಿಕೊಂಡಾಗಲೂ ಇಂಥದ್ದೊಂದು ಕುತೂಹಲ ಹುಟ್ಟುವುದಿದೆ. ಹಾಗಂತ, ಮಧ್ಯವಯಸ್ಕನ ಈ ಉಡುಪು ತಮಾಷೆ, ವ್ಯಂಗ್ಯ, ಅಪಹಾಸ್ಯಕ್ಕೆ ಒಳಗಾಗಬೇಕಾದ ಅಗತ್ಯ ಖಂಡಿತ ಅಲ್ಲ. ಆಯ್ಕೆಯ ಸ್ವಾತಂತ್ರ್ಯ ಇರುವಲ್ಲಿ ಅದನ್ನು ಗೌರವಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಎಚ್ಚರಿಕೆ ಜಾಗೃತವಾಗಿರುವುದರಿಂದಲೇ ಆರೆಸ್ಸೆಸ್ ಕಳೆದ 90 ವರ್ಷಗಳಿಂದ ಸಮವಸ್ತ್ರವಾಗಿ ಪಾಲಿಸುತ್ತಾ ಬಂದಿರುವ ಖಾಕಿ ಚಡ್ಡಿಯನ್ನು ಬಹುಸಂಖ್ಯಾತ ಸಮಾಜ ತಮಾಷೆಗೆ ಬಳಸಿಕೊಂಡಿಲ್ಲ. ಕೆಲವರು ಆರೆಸ್ಸೆಸ್ಸನ್ನು ಗುರುತಿಸುವುದಕ್ಕೆ ಚಡ್ಡಿಯನ್ನು ಸಂಕೇತ ನಾಮವಾಗಿ ಬಳಕೆ ಮಾಡಿದ್ದರೂ ಚಡ್ಡಿಯ ಕಾರಣಕ್ಕಾಗಿಯೇ ಆರೆಸ್ಸೆಸ್ ಟೀಕೆಗೆ ಒಳಗಾಗಿದ್ದು ತೀರಾ ತೀರಾ ಕಡಿಮೆ. ಸಮವಸ್ತ್ರವು ಧರ್ಮ ಇಲ್ಲವೇ ಸಂಘಟನೆಗೆ ಸಂಬಂಧಿಸಿ ತೀರಾ ಖಾಸಗಿಯಾದದ್ದು. ಒಂದು ಸಂಘಟನೆ ಸಮವಸ್ತ್ರವಾಗಿ ಯಾವ ಉಡುಪನ್ನು, ಯಾವ ಬಣ್ಣವನ್ನು ಮತ್ತು ಯಾವ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೊರಗಿನಿಂದ ನಿರ್ದೇಶಿಸುವುದು ಅವುಗಳ ಆಂತರಿಕ ವಿಷಯದಲ್ಲಿ ಮಧ್ಯ ಪ್ರವೇಶಿಸಿದಂತೆ. ಉಡುಪಿನ ಉದ್ದಳತೆಯ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವನ್ನು ವ್ಯಕ್ತಪಡಿಸುವುದಕ್ಕೆ ಒಂದು ಚೌಕಟ್ಟನ್ನು ಸಮಾಜ ಸದಾ ಪಾಲಿಸುತ್ತಲೇ ಬಂದಿದೆ. ಈ ಆಧಾರದಲ್ಲಿ ಹೇಳುವುದಾದರೆ, ಖಾಕಿ ಚಡ್ಡಿಯಿಂದ ಕಂದು ಬಣ್ಣದ ಪ್ಯಾಂಟ್‍ಗೆ ಆರೆಸ್ಸೆಸ್ ತನ್ನ ಸಮವಸ್ತ್ರವನ್ನು ಬದಲಿಸುವುದು ಪಕ್ಕಾ ಆಂತರಿಕ ವಿಷಯ. ಸಾರ್ವಜನಿಕವಾಗಿ ಚರ್ಚಿಸಬೇಕಾದಷ್ಟು ಮಹತ್ವಪೂರ್ಣವಲ್ಲದ್ದು ಎಂದೂ ಹೇಳಬಹುದು. ಆದರೆ ಆರೆಸ್ಸೆಸ್‍ನ ಮಟ್ಟಿಗೆ ಇಷ್ಟನ್ನೇ ಹೇಳಿ ಪೂರ್ಣ ವಿರಾಮ ಹಾಕಬಹುದೇ? ಕಳೆದ 90 ವರ್ಷಗಳಿಂದ ಅದು ಈ ದೇಶದಲ್ಲಿ ಹೇಗೆಲ್ಲ ಗುರುತಿಗೀಡಾಗಿದೆ? ದೇಶದ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಮತ್ತಿತರ ವಿಷಯಗಳಲ್ಲಿ ಅದು ಯಾವೆಲ್ಲ ಪಾತ್ರವನ್ನು ನಿಭಾಯಿಸಿದೆ? ಸಾವರ್ಕರ್, ಗೋಲ್ವಾಲ್ಕರ್, ಹೆಗ್ಡೇವಾರ್‍ಗಳಿಂದ ಹಿಡಿದು ಈಗಿನ ಭಾಗವತ್‍ವರೆಗೆ ಅವರು ವ್ಯಕ್ತಪಡಿಸುತ್ತಾ ಬಂದ ಅಭಿಪ್ರಾಯ, ಸಿದ್ಧಾಂತ, ವಿಚಾರಗಳು ಏನು? ಇತರೆಲ್ಲ ಸಂಘಟನೆಗಳಂತೆ ಆರೆಸ್ಸೆಸ್ಸನ್ನೂ ಸಾಮಾನ್ಯ ಸಂಘಟನೆಯಾಗಿ ಕಾಣಬಹುದೇ?
  ಮುಹಮ್ಮದ್ ಅಲಿ ಜಿನ್ನಾಗಿಂತ ಮೊದಲೇ ದ್ವಿ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಆರೆಸ್ಸೆಸ್. ಈ ಕುರಿತಂತೆ ದೇಶದಲ್ಲಿ ಧಾರಾಳ ಚರ್ಚೆಗಳು ಈಗಾಗಲೇ ನಡೆದಿವೆ. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಆರೋಪ ಸಾವರ್ಕರ್ ಮೇಲಿದೆ. ಹಿಟ್ಲರ್ ಮತ್ತು ಮುಸ್ಸೋಲಿನಿಯಿಂದ ಆರೆಸ್ಸೆಸ್ ಪ್ರಭಾವಿತವಾಗಿರುವುದನ್ನು ಮತ್ತು ಅವರದೇ ಜನಾಂಗೀಯ ಸಿದ್ಧಾಂತವನ್ನು ಅದು ಭಾರತಕ್ಕೆ ಹೊಂದಿಸಿಕೊಂಡು ಪ್ರತಿಪಾದಿಸುತ್ತಿರುವುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲದಷ್ಟು ಇವತ್ತು ಸ್ಪಷ್ಟವಾಗಿದೆ. ಇದರ ನಾಯಕರು ಇಟಲಿಗೆ ತೆರಲಿ ಮುಸೋಲಿನಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆತನ ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕಡ ತಂದು ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದಾರೆ. ಗಾಂಧೀಜಿಯವರನ್ನು ಕೊಂದ ಆರೋಪವನ್ನು ಹೊತ್ತುಕೊಂಡಿರುವುದೂ ಇದೇ ಆರೆಸ್ಸೆಸ್. ಆ ಕಾರಣಕ್ಕಾಗಿಯೇ ಅದು ನಿಷೇಧಕ್ಕೂ ಒಳಪಟ್ಟಿತು. ಆರೆಸ್ಸೆಸ್‍ನ ಸ್ವಾತಂತ್ರ್ಯಪೂರ್ವ ಇತಿಹಾಸವೇ ಇಷ್ಟು ಉಜ್ವಲವಾಗಿರುವಾಗ ಇನ್ನು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ವಿವರವಾಗಿ ಮಂಡಿಸಬೇಕಿಲ್ಲವಲ್ಲ. ಲಕ್ಷಕ್ಕಿಂತಲೂ ಅಧಿಕ ಶಾಖೆಗಳಿರುವ ಮತ್ತು 60ಕ್ಕಿಂತಲೂ ಅಧಿಕ ಉಪ ಸಂಘಟನೆಗಳನ್ನು ಹೊಂದಿರುವ ಆರೆಸ್ಸೆಸ್, ಹಿಂದೂ ರಾಷ್ಟ್ರ ಕಲ್ಪನೆಯೊಂದಿಗೆ ಹುಟ್ಟಿಕೊಂಡಿದೆ. ಈ ರಾಷ್ಟ್ರ ಕಲ್ಪನೆ ಎಷ್ಟು ಅಪಾಯಕಾರಿಯೆಂದರೆ, ಈ ಹಿಂದೂ ರಾಷ್ಟ್ರದಲ್ಲಿ ಸರ್ವರೂ ಸಮಾನರಲ್ಲ. ಮುಸ್ಲಿಮರು, ಕ್ರೈಸ್ತರೆಲ್ಲ ಇಲ್ಲಿ ದ್ವಿತೀಯ ದರ್ಜೆಯ ನಾಗರಿಕರು. ಆರ್ಯ ಜನಾಂಗೀಯ ಮೇಲ್ಮೆಯನ್ನು ಬಹಿರಂಗವಾಗಿ ಇವತ್ತು ಅದು ಪ್ರತಿಪಾದಿಸದಿದ್ದರೂ ಆಂತರಿಕವಾಗಿ ಅದರ ನಡೆ-ನುಡಿಗಳು ಅದನ್ನೇ ಬಿಂಬಿಸುತ್ತವೆ ಎಂದು ಹೇಳಲಾಗುತ್ತದೆ. ಈ ದೇಶದ ದಲಿತ, ಕೊರಗ, ದುರ್ಬಲ, ಆದಿವಾಸಿ ಜನಾಂಗಗಳ ಆರಾಧನಾ ಪದ್ಧತಿಯನ್ನು ಮತ್ತು ಆರಾಧ್ಯರನ್ನು ಅನಾಮತ್ತಾಗಿ ಆಪೋಶನ ಪಡಕೊಂಡ ಮತ್ತು ಪಡಕೊಳ್ಳುತ್ತಿರುವ ಆರೋಪವೂ ಆರೆಸ್ಸೆಸ್‍ನ ಮೇಲಿದೆ. ವರ್ಣಾಶ್ರಮವನ್ನು ವೃತ್ತಿಸೂಚಕವೆಂದು ವ್ಯಾಖ್ಯಾನಿಸುತ್ತಾ ಯಾರಿಗೆ ಬೇಕಾದರೂ ಬ್ರಾಹ್ಮಣನಾಗಬಹುದು ಎಂದು ಅದು ಸಮರ್ಥಿಸಿಕೊಳ್ಳುತ್ತದೆ. ಆದರೆ ಅದರ ಲಕ್ಷಾಂತರ ಶಾಖೆಗಳಲ್ಲಿ ಒಬ್ಬನೇ ಒಬ್ಬ ದಲಿತನನ್ನಾದರೂ ಬ್ರಾಹ್ಮಣನಾಗಿ ಪರಿವರ್ತಿಸಲಾಗಿದೆಯೇ ಎಂಬ ಪ್ರಗತಿಪರರ ಪ್ರಶ್ನೆಗೆ ಈ ವರೆಗೂ ಅದರಿಂದ ಸಮರ್ಪಕ ಉತ್ತರ ಬಂದೇ ಇಲ್ಲ. ನಾಲ್ಕೈದು ತಿಂಗಳ ಹಿಂದಷ್ಟೇ ಅದು ಮೀಸಲಾತಿಯ ವಿರುದ್ಧ ಮಾತಾಡಿತ್ತು. ದಲಿತ ಸಮುದಾಯದ ಆಹಾರ ಪದ್ಧತಿಯನ್ನು ದೈವವಿರೋಧಿಯಾಗಿ ಬಣ್ಣಿಸಿ ನಿಷೇಧ ಹೇರಲು ಒತ್ತಾಯಿಸುತ್ತಿರುವುದೂ ಈ ಸಂಘಟನೆಯೇ. ಈ ದೇಶದಲ್ಲಿ ನಡೆದ ಹೆಚ್ಚಿನೆಲ್ಲ ಹತ್ಯಾಕಾಂಡಗಳ ಕುರಿತಂತೆ ಆರೆಸ್ಸೆಸ್ಸನ್ನು ಆರೋಪಿ ದೃಷ್ಟಿಯಿಂದಲೇ ನೋಡಲಾಗುತ್ತಿದೆ. ಅದರ ಗರಡಿಯಲ್ಲಿ ಪಳಗಿದ ರಾಜಕೀಯ ಅಥವಾ ಸಾಮಾಜಿಕ ನಾಯಕರು ಪ್ರತಿ ಸಂದರ್ಭದಲ್ಲೂ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿಯೇ ಮಾತಾಡುತ್ತಾರೆ. ಮುಸ್ಲಿಮರನ್ನು ತುಚ್ಛೀಕರಿಸುತ್ತಾರೆ. ಸಮ್ಜೋತಾ ಎಕ್ಸ್ ಪ್ರೆಸ್, ಮಕ್ಕಾ, ಮಾಲೆಗಾಂವ್ ಮುಂತಾದ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೂ ಆರೆಸ್ಸೆಸ್‍ಗೂ ನಂಟಿದೆ ಎಂದು ಅನೇಕ ಬಾರಿ ಈ ದೇಶದ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಒಂದು ರೀತಿಯಲ್ಲಿ, ಆರೆಸ್ಸೆಸ್ ತನ್ನ ಹುಟ್ಟಿನಿಂದ ಈವತ್ತಿನವರೆಗೂ ಇಬ್ಬಗೆಯ ನೀತಿಯನ್ನು ಅಳವಡಿಸುತ್ತಲೇ ಬಂದಿದೆ. ಕನ್ಹಯ್ಯಾ ಕುಮಾರ್‍ನನ್ನು ದೇಶದ್ರೋಹಿ ಎಂದು ಕರೆದಿರುವ ಇದೇ ಸಂಘಟನೆ ಶ್ರೀಶ್ರೀ ರವಿಶಂಕರ್ ಅವರ 'ಪಾಕಿಸ್ತಾನ್ ಜಿಂದಾಬಾದ್'ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಅದು ನ್ಯಾಯವನ್ನು ಪ್ರತಿಪಾದಿಸುವ ಪ್ರತಿ ಸಂದರ್ಭದಲ್ಲೂ ತನ್ನವರು ಮತ್ತು ಇತರರು ಎಂಬ ಮಾನದಂಡವನ್ನು ಸದಾ ಪಾಲಿಸುತ್ತಲೇ ಬಂದಿವೆ.
ಅದು ಪ್ರತಿಪಾದಿಸುವ ದೇಶಪ್ರೇಮ, ಸಂಸ್ಕೃತಿ, ಧರ್ಮ, ನಾಗರಿಕತೆ, ಸ್ವಾತಂತ್ರ್ಯ ಮುಂತಾದ ಎಲ್ಲದಕ್ಕೂ ನಾವು ಕಲ್ಪಿಸಿಕೊಂಡಿರುವ ಮತ್ತು ಸಂವಿಧಾನ ಕೊಡಮಾಡಿರುವ ಅರ್ಥಕ್ಕಿಂತ ಭಿನ್ನವಾದದ್ದೊಂದು ಆಯಾಮವಿದೆ. ಬಾಹ್ಯನೋಟಕ್ಕೆ ಅದು ಭಾರತೀಯ ಸಂಸ್ಕೃತಿ ಎಂದು ಹೇಳುತ್ತಿದ್ದರೂ ಆಂತರಿಕವಾಗಿ ಆ ಸಂಸ್ಕೃತಿ ಪೂರ್ಣವಾಗಿ ಆರ್ಯನ್ ಸಂಸ್ಕೃತಿಯ ಕುರಿತಾಗಿರುವುದಾಗಿ ಅದರ ಒಳಹೊಕ್ಕು ಹೊರಬಂದ ನಾಯಕರು ಬಹಿರಂಗಪಡಿಸುತ್ತಿರುತ್ತಾರೆ. ಆರೆಸ್ಸೆಸ್‍ನ ಈ ಒಳಗೊಂದು ಹೊರಗೊಂದು ನೀತಿಯೇ ಅದರ ಮೇಲೆ ಸಾರ್ವಜನಿಕ ಗುಮಾನಿಯನ್ನು ಹೆಚ್ಚಿಸಿದೆಯೆಂದು ಖಂಡಿತ ಹೇಳಬಹುದು. ಆರೆಸ್ಸೆಸ್ ತೀರಾ ಸಾಧುವಲ್ಲ. ಅದು ಸರ್ವ ಸಮಾನತೆಯ ಪ್ರತಿಪಾದಕವೂ ಅಲ್ಲ. ಅದು ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಕಳೆದ 90 ವರ್ಷಗಳಲ್ಲಿ ಅದರ ಮೇಲೆ ಕೇಳಿ ಬಂದಿರುವ ದೂರು ಹಾಗೂ ಅದರ ಕಾರ್ಯಕರ್ತರು ಮತ್ತು ನಾಯಕರ ನಡವಳಿಕೆಗಳು ಅದು ಖಾಕಿ ಚಡ್ಡಿಯಿಂದ ಕಂದು ಬಣ್ಣಕ್ಕೆ ಸಮವಸ್ತ್ರ ಬದಲಿಸಿದಷ್ಟು ಅಹಿಂಸಾತ್ಮಕವಾದುದಲ್ಲ. ಪ್ರತಿ ಹೆಜ್ಜೆಯಲ್ಲೂ ಅದರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಗುರುತುಗಳಿವೆ. ಆದ್ದರಿಂದ ಆರೆಸ್ಸೆಸ್ ಖಾಕಿಯಿಂದ ಕಂದುಬಣ್ಣಕ್ಕೆ ತಿರುಗುವುದರಿಂದ ಈ ಎಲ್ಲ ಕಳಂಕಗಳು ಕಳೆದು ಹೋಗುವುದಿಲ್ಲ. ತನ್ನ ಧೋರಣೆ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕೈಬಿಡದ ಹೊರತು ಉಡುಪಿನ ಬಣ್ಣ ಮತ್ತು ಉದ್ದಳತೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಂಘಟನೆಯ ಧೋರಣೆ ಬದಲಾಗದಿದ್ದರೆ ಚಡ್ಡಿಯೋ ಪ್ಯಾಂಟೋ ಖಾಕಿಯೋ ಕಂದೋ ಯಾವ ಬಣ್ಣವಾದರೇನು? ಅದರಿಂದ ಈ ದೇಶಕ್ಕೆ ಆಗುವ ಲಾಭವೇನು? ಮೊದಲು ಅದರ ಧೋರಣೆ ಬದಲಾಗಲಿ. ಬಳಿಕ ‘ಬಣ್ಣ'ವನ್ನು ಬದಲಾಯಿಸಿಕೊಳ್ಳಲಿ.

Friday, 4 March 2016

ನಾಶವಾಗಬೇಕಾದದ್ದು ಧರ್ಮವೋ?

       ಸಂಸದರೋರ್ವರ ಮತಿಗೆಟ್ಟ ಹೇಳಿಕೆಯನ್ನು ಸಂಪಾದಕೀಯಕ್ಕೆ  ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದು ಉಚಿತವೋ ಅಥವಾ ಹಾಗೆ ಮಾಡುವುದು ಸಂಪಾದಕೀಯದ
ಘನತೆಗೆ ಕಳಂಕವೋ ಎಂಬ ಬಗ್ಗೆ ಒಂದಕ್ಕಿಂತ ಹೆಚ್ಚು ಬಾರಿ ಆಲೋಚಿಸಿ ಕೊನೆಗೆ ಅವರೆತ್ತಿದ ವಿಷಯವು ಅವರ ಸಡಿಲ ನಾಲಗೆಯಷ್ಟು ಹಗುರವಲ್ಲವಾದುದರಿಂದ ಆ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅಗತ್ಯ ತಲೆದೋರಿತು. ಭಯೋತ್ಪಾದನೆಗೂ ಧರ್ಮಕ್ಕೂ ನಂಟಿದೆಯೇ? ಇದ್ದರೆ ಆ ನಂಟು ಯಾವ ಬಗೆಯದು? ಅಂಥದ್ದೊಂದು ನಂಟನ್ನು ಏರ್ಪಡಿಸಿದವರು ಯಾರು? ಧಾರ್ಮಿಕ ವಿದ್ವಾಂಸರೇ, ಧರ್ಮಗ್ರಂಥಗಳೇ ಅಥವಾ ಸ್ವತಃ ಭಯೋತ್ಪಾದಕರೇ? ಅಷ್ಟಕ್ಕೂ, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು ಭಯೋತ್ಪಾದನೆಯನ್ನು ನೋಡುವ ಬಗೆ ಹೇಗೆ? ಬಾಂಬ್ ಸ್ಫೋಟ, ಹತ್ಯೆ, ಅತ್ಯಾಚಾರ, ಹಿಂಸೆ.. ಇತ್ಯಾದಿ ಇತ್ಯಾದಿಗಳನ್ನೇ ಅವರು ಭಯೋತ್ಪಾದನೆ ಅನ್ನುತ್ತಾರಾದರೆ, ಇವೇನು ಇವತ್ತು ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಾಗಿಯಷ್ಟೇ ಉಳಿದಿದೆಯೇ? ಹಿಂಸೆ, ಅತ್ಯಾಚಾರ, ಹತ್ಯೆ ಯಾವ ಧರ್ಮದ ಗುರುತು? ಇಸ್ಲಾಮ್‍ನದ್ದೇ, ಹಿಂದೂ ಧರ್ಮದ್ದೇ ಅಥವಾ ಕ್ರೈಸ್ತ-ಬೌದ್ಧ, ಯಹೂದಿ ಧರ್ಮದ್ದೇ? ಮೀಸಲಾತಿಯನ್ನು ಆಗ್ರಹಿಸಿ ಜಾಟ್ ಸಮುದಾಯದವರು ಕಳೆದ ವಾರ ಹರ್ಯಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 17 ಸಾವಿರ ಮರಗಳ ಮಾರಣ ಹೋಮ ನಡೆದಿದೆ ಎಂದು ಜಿಂದ್, ಬಿವಾನಿ, ಹಿಸ್ಸಾರ್, ಜಜ್ಜಾರ್, ಸೋನಿಪತ್‍ನ ಅರಣ್ಯಾಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಮರಗಳನ್ನು ಕಡಿದು ರಸ್ತೆಗೆ ಹಾಕಲಾಗಿತ್ತು. ಇದಕ್ಕಿಂತಲೂ ಭೀಭತ್ಸಕರ ಸಂಗತಿ ಏನೆಂದರೆ, ಹೀಗೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡ ವಾಹನಗಳಿಂದ ಅನೇಕ ಮಹಿಳೆಯರನ್ನು ಪಕ್ಕದ ಹೊಲಗಳಿಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ ಎಂಬುದು. ಅನಂತ ಕುಮಾರ್ ಹೆಗಡೆಯವರ ಪ್ರಕಾರ ಇದು ಯಾವ ಕೆಟಗರಿಯಲ್ಲಿ ಬರುತ್ತದೆ? ಈ ಕೃತ್ಯವನ್ನು ಎಸಗಿದವರ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಕೃತ್ಯಗಳಿಗಿರುವ ಪರಿಹಾರ’ ಎಂದು ಹೇಳಬಹುದೇ? ಹೆಗಡೆ ಅವರ ಜಾತಿಯನ್ನು ನೇಪಾಳದಲ್ಲಿ ಪ್ರತಿನಿಧಿಸುವ ‘ಮಾಧೇಶಿ’ಗಳು ಎರಡು ತಿಂಗಳುಗಳ ಕಾಲ ಭಾರತ-ನೇಪಾಳದ ಗಡಿಯಲ್ಲಿ ರಸ್ತೆ ತಡೆ ನಿರ್ಮಿಸಿದ್ದರು. ಭಾರತದಿಂದ ನೇಪಾಳಕ್ಕೆ ಆಹಾರ, ತೈಲ ಸಹಿತ ದಿನ ಬಳಕೆಯ ಪ್ರತಿಯೊಂದು ವಸ್ತುವೂ ಸರಬರಾಜಾಗುವ ಏಕೈಕ ರಸ್ತೆಯನ್ನು ಮುಚ್ಚಿದ್ದರು. ಇದರಿಂದಾಗಿ ನೇಪಾಳದ ಮಾರುಕಟ್ಟೆ ಬಹುತೇಕ ಹದಗೆಟ್ಟಿತ್ತು. ನೇಪಾಳೀಯರು ಆಹಾರ ಮತ್ತಿತರ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸಿದರು. ಅಲ್ಲಿನ ಜನರು ಪ್ರಸಕ್ತ ಸಂವಿಧಾನಕ್ಕೆ ಬೆಂಬಲ ಸೂಚಿಸಿದುದೇ ಈ ಪ್ರತಿಭಟನೆಗೆ ಕಾರಣವಾಗಿತ್ತು. ನರೇಂದ್ರ ಮೋದಿ ಸರಕಾರದ ಪರೋಕ್ಷ ಬೆಂಬಲದಿಂದಾಗಿಯೇ ಇಷ್ಟು ದೀರ್ಘ ಅವಧಿಯ ರಸ್ತೆ ತಡೆ ನಿರ್ಮಿಸಲು ಮಾಧೇಶಿಗಳಿಗೆ ಸಾಧ್ಯವಾಗಿದೆ ಎಂದು ನೇಪಾಳ ಸರಕಾರವೇ ಆರೋಪಿಸಿತ್ತು. ಇದರ ದೃಢೀಕರಣವೆಂಬಂತೆ ಮಾಧೇಶಿ ನಾಯಕರು ಭಾರತಕ್ಕೆ ಬಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರನ್ನು ಭೇಟಿಯಾದರು. ಒಂದು ಜನತೆಯ ಮೇಲೆ ಎರಡು ತಿಂಗಳ ಕಾಲ ಆಹಾರ ಭಯೋತ್ಪಾದನೆಯನ್ನು ಹೇರಿದ ಬಗ್ಗೆ ಅನಂತ ಕುಮಾರ್ ಅವರ ನಿಲುವೇನು? ಈ ಕೃತ್ಯ ಅವರ ಪ್ರಕಾರ ಯಾವ ವಿಭಾಗದಲ್ಲಿ ಬರುತ್ತದೆ? ಮಾಧೇಶಿಗಳ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಭಯೋತ್ಪಾದನೆಗಿರುವ ಪರಿಹಾರ’ ಎಂದು ಹೇಳುತ್ತಾರಾ? ದಾದ್ರಿ, ಮುಝಫ್ಫರ್ ನಗರ್, ಗುಜರಾತ್‍ಗಳಲ್ಲಿ ನಡೆದಿರುವುದೇನೆಂಬುದು ಹೆಗಡೆಯವರಿಗೆ ಚೆನ್ನಾಗಿ ಗೊತ್ತು. ಅಲ್ಲಿ ಯಾವ ಬಗೆಯ ಭಯದ ವಾತಾವರಣವನ್ನು ಹುಟ್ಟು ಹಾಕಲಾಗಿತ್ತು ಮತ್ತು ಅದರ ರೂವಾರಿಗಳು ಯಾರು ಎಂಬುದನ್ನು ವಿವರಿಸಬೇಕಾದ ಅಗತ್ಯವೂ ಇಲ್ಲ. ಮಾಯಾ ಕೊಡ್ನಾನಿ, ಬಾಬು ಭಜರಂಗಿ ಸಹಿತ ಗುಜರಾತ್  ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲುದಾರರಾದ ದೊಡ್ಡದೊಂದು ಗುಂಪು ಇವತ್ತು ಯಾವ್ಯಾವ ಜೈಲುಗಳಲ್ಲಿವೆ ಮತ್ತು ಇವರ ಬಗ್ಗೆ ನ್ಯಾಯಾಲಯಗಳು ಏನೇನು ಹೇಳಿವೆ ಎಂಬುದನ್ನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾದ್ವಿ ಪ್ರಜ್ಞಾಸಿಂಗ್, ಪುರೋಹಿತ್, ಆಸೀಮಾನಂದರುಗಳು ಕಳೆದ ನಾಲ್ಕೈದು ವರ್ಷಗಳಿಂದ ಆರೋಪವನ್ನು ಹೊತ್ತು ಜೈಲಲ್ಲಿದ್ದಾರೆ ಎಂಬುದನ್ನು ಹೆಗಡೆಯವರು ಚೆನ್ನಾಗಿಯೇ ಬಲ್ಲರು. ಇಷ್ಟಿದ್ದೂ ಹೆಗಡೆಯವರು ತೀರಾ ಅಜ್ಞಾನಿಯಂತೆ ಮತ್ತು ಎಲ್‍ಕೆಜಿ ಮಗುವಿನಂತೆ ಮಾತಾಡಿರುವುದಕ್ಕೆ ಕಾರಣ ಏನು? ಸಿರಿಯಾ, ಇರಾಕ್, ಯಮನ್ ಮತ್ತಿತರ ಕಡೆ ನಡೆಯುತ್ತಿರುವ ಹಿಂಸೆ, ಹತ್ಯೆ, ಸಾಮೂಹಿಕ ವಲಸೆಗಳನ್ನು ನೋಡಿ ಹೆಗಡೆಯವರು ಈ ನಿರ್ಧಾರಕ್ಕೆ ಬಂದಿರುವರಾದರೆ, ತಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಅವರಿಗೆ ಹೇಳಬೇಕಾಗುತ್ತದೆ. ಅರಬ್ ವಲಯದ ಹಿಂಸಾಚಾರಗಳಿಗೆ ಭೌಗೋಳಿಕವಾದ ಕಾರಣ ಇದೆ. ರಾಜ ಪ್ರಭುತ್ವದ ವಿರುದ್ಧ ಸಿಡಿದೆದ್ದ ಪ್ರಜಾ ಚಳವಳಿಯು ಕ್ರಮೇಣ ಹಳಿತಪ್ಪಿ ವಿಧ್ವಂಸಕ ಶಕ್ತಿಗಳು ಆಪೋಶನ ಪಡೆದುದರ ಫಲಿತಾಂಶ ಅದು. ಅಲ್ಲಿನ ಸಂಘರ್ಷವೇ ಗೋಜಲುಗಳ ಗುಢಾಣ. ಯಾರು ಸಾಚಾ ಯಾರು ನಕಲಿ ಎಂಬುದನ್ನು ತಕ್ಷಣಕ್ಕೆ ತೀರ್ಮಾನಿಸದಷ್ಟು ಆ ‘ರಣಾಂಗಣ’ ಮನುಷ್ಯ ವಿರೋಧಿಯಾಗಿ ಬಿಟ್ಟಿದೆ. ಬಾಹ್ಯನೋಟಕ್ಕೆ, ರಶ್ಯಾವು ಅಸದ್‍ರ ಪರ ಮತ್ತು ಐಸಿಸ್‍ನ ವಿರುದ್ಧ ಹೋರಾಡುತ್ತಿದೆ. ಅಮೇರಿಕವಾದರೋ ಅಸದ್‍ರ ವಿರುದ್ಧ ಮತ್ತು ಐಸಿಸ್‍ನೊಂದಿಗೆ ಮೃದುವಾಗಿ ವರ್ತಿಸುತ್ತಿದೆ. ಸಂಪೂರ್ಣ ಆಂತರಿಕವಾಗಿರುವ ಯಮನ್ ಸಂಘರ್ಷದಲ್ಲಿ ಸೌದಿ ಒಂದು ಪಕ್ಷವನ್ನು ಬೆಂಬಲಿಸುತ್ತಿದೆ. ಅಷ್ಟಕ್ಕೂ ಐಸಿಸ್‍ಗೆ, ಯಮನ್‍ನ ಆಡಳಿತ ವಿರೋಧಿ ಗುಂಪಿಗೆ, ಕುರ್ದ್‍ಗಳಿಗೆ, ಶಿಯಾ-ಸುನ್ನಿ ಜಗಳಕೋರರಿಗೆ ಶಸ್ತ್ರಾಸ್ತ್ರ ಸರಬರಾಜು ಎಲ್ಲಿಂದ? ಅವರ ಆದಾಯ ಮೂಲ ಯಾವುದು? ಒಂದು ರಾಷ್ಟ್ರಕ್ಕೇ ಸವಾಲು ಒಡ್ಡಬಹುದಾದಷ್ಟು ಆಧುನಿಕ ಶಸ್ತ್ರಾಗಳು ಈ ಸಾಮಾನ್ಯ ಜನರ ಗುಂಪಿಗೆ ಸರಬರಾಜು ಮಾಡುತ್ತಿರುವವರು ಯಾರು, ಅವರ ಉದ್ದೇಶವೇನು ಎಂಬುದನ್ನೆಲ್ಲ ಸಂಸದರಾಗಿರುವ ಅನಂತ ಹೆಗಡೆಯವರಿಗೆ ವಿವರಿಸಬೇಕಿಲ್ಲ. ಅರಬ್ ವಲಯ ಸಂಘರ್ಷ ಪೀಡಿತವಾಗಿರುವಷ್ಟೂ ದಿನ ಅಮೆರಿಕ ಸಹಿತ ಯುರೋಪಿಯನ್ ರಾಷ್ಟ್ರಗಳು ಸುಖವಾಗಿರುತ್ತವೆ. ಅವುಗಳ ಅರ್ಥವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಮಾರಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಬಹುಶಃ ಇಸ್ರೇಲ್‍ನ್ನು ಅರಬ್ ಜಗತ್ತಿನ ನಡುವೆ ಹುಟ್ಟು ಹಾಕಿರುವುದರ ಹಿಂದಿನ ಉದ್ದೇಶ ಇದುವೇ ಇರಬೇಕು. ಎಲ್ಲಿಯವರೆಗೆ ಇಸ್ರೇಲ್‍ನ ಅಸ್ತಿತ್ವ ಇರುತ್ತದೋ ಅಲ್ಲಿಯವರೆಗೆ ಅರಬ್ ಜಗತ್ತಿನಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇಸ್ರೇಲ್ ಪರ, ವಿರುದ್ಧ ಮತ್ತು ತಟಸ್ಥ ಎಂಬುದಾಗಿ ಅರಬ್ ಜಗತ್ತು ವಿಭಜನೆಗೊಳ್ಳುವುದು ಮತ್ತು ಆ ಕಾರಣದಿಂದಾಗಿಯೇ ಪರಸ್ಪರ ಸದಾ ಸಂದೇಹದಿಂದಲೇ ಬದುಕುವುದು ಅನಿವಾರ್ಯವಾಗುತ್ತದೆ. ಈ ವಾತಾವರಣವು ಶಸ್ತ್ರಾಸ್ತ್ರ ಖರೀದಿಗೆ ಪೈಪೋಟಿಯನ್ನು ಪ್ರಚೋದಿಸುತ್ತದೆ. ಈ ವಾತಾವರಣವನ್ನು ಒಪ್ಪದ ಮಂದಿ ಪ್ರತಿಭಟನೆಗಿಳಿಯುತ್ತಾರೆ. ಈ ಪ್ರತಿಭಟನೆಯನ್ನು ಇನ್ನಾರೋ ಹೈಜಾಕ್ ಮಾಡುತ್ತಾರೆ. ಅವರ ಕೈಗೆ ಆಧುನಿಕ ಶಸ್ತ್ರಾಸ್ತ್ರಗಳು ಬರುತ್ತವೆ. ಅಂದಹಾಗೆ, ಈ ಪ್ರಕ್ರಿಯೆಯನ್ನು ನಾವು ಅರಬ್ ಜಗತ್ತಿಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಮುಂದೊಂದು ದಿನ ಭಾರತೀಯ ಉಪಭೂಖಂಡದಲ್ಲೂ ಇಸ್ರೇಲ್‍ನಂಥ ಖೊಟ್ಟಿ ರಾಷ್ಟ್ರವೊಂದನ್ನು ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳು ಹುಟ್ಟು ಹಾಕಬಹುದು. ಪಾಕ್‍ನ ಭಾಗವಾಗಿರುವ ಬಲೂಚಿಸ್ತಾನ ಮತ್ತು ಅದರ ವಶದಲ್ಲಿರುವ ಕಾಶ್ಮೀರವನ್ನು ಒಟ್ಟು ಸೇರಿಸಿ ಪ್ರತ್ಯೇಕ ರಾಷ್ಟ್ರ ಕಟ್ಟುವ ಯೋಜನೆ ರೂಪಿಸಬಹುದು. ಈ ಎರಡೂ ಪ್ರದೇಶಗಳು ಚೀನಾದ ಗಡಿಯನ್ನು ಹಂಚಿಕೊಂಡಿದ್ದು, ಇಂಥದ್ದೊಂದು ರಾಷ್ಟ್ರ ಅಸ್ತಿತ್ವಕ್ಕೆ ಬಂದರೆ ಭಾರತಕ್ಕೆ ಚೀನಾದ ಭೀತಿ ಕಡಿಮೆಯಾಗುತ್ತದೆ, ಚೀನಾದೊಂದಿಗೆ ಗಡಿ ಹಂಚುವಿಕೆಯೂ ತಪ್ಪುತ್ತದೆ ಎಂದು ಅದು ನಂಬಿಸಬಹುದು. ಆ ಬಳಿಕ ಈ ‘ಕೂಸ’ನ್ನು ಇಟ್ಟುಕೊಂಡು ಭಾರತ-ಪಾಕ್-ಚೀನಾಗಳ ಮಧ್ಯೆ ಸಂದೇಹವನ್ನು ಹುಟ್ಟಿಸಿ ಶಸ್ತ್ರಾಸ್ತ್ರ ಮಾರಾಟಕ್ಕೆ ಚಾಲನೆ ಕೊಡಬಹುದು. ಬಹುಶಃ ಇಂಥದ್ದೊಂದು ಸಮೀಕರಣವನ್ನು ಅನಂತ ಹೆಗಡೆಯವರು ಮಾಡಿರುವರೋ ಇಲ್ಲವೋ ಆದರೆ, ಇದು ಅಸಂಭವವಲ್ಲ. ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಇಂಥದ್ದೊಂದು ಸಂಭವನೀಯತೆಯನ್ನು ಉಡಾಫೆಯಿಂದ ನಿರ್ಲಕ್ಷಿಸಬೇಕಾಗಿಯೂ ಇಲ್ಲ. ಒಂದು ವೇಳೆ, ಆ ಸಂದರ್ಭದಲ್ಲಿ ಇಲ್ಲಿ ಹುಟ್ಟಿಕೊಳ್ಳಬಹುದಾದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯನ್ನು ಶಸ್ತ್ರಾಸ್ತ್ರ ವ್ಯಾಪಾರಿಗಳು ಹೈಜಾಕ್ ಮಾಡಿ ಹಿಂಸಾತ್ಮಕಗೊಳಿಸಿದರೆ ಏನಾಗಬಹುದು? ಆ ಖರೀದಿಗೊಂಡ ಪ್ರತಿಭಟನಾಕಾರರ ಉಡುಪು, ಧಾರ್ಮಿಕ ಚಿಹ್ನೆ, ಭಾಷೆಯನ್ನು ನೋಡಿಕೊಂಡು ಅವರ ಧರ್ಮದ ಮೇಲೆ ಆ ಹಿಂಸೆಯ ಆರೋಪವನ್ನು ಹೊರಿಸಬಹುದೇ? ಅವರ ಧರ್ಮವೇ ಅದಕ್ಕೆ ಕಾರಣ ಎಂದು ಹೇಳಬಹುದೇ?
        ಹಿಂಸಾನಿರತರು ಪೈಜಾಮ, ಗಡ್ಡ ಧರಿಸಿದ್ದಾರೆಂದೂ ಅಲ್ಲಾಹು ಅಕ್ಬರ್ ಹೇಳುತ್ತಾರೆಂದೂ ವಾದಿಸಿ, ಅವರ ಕೃತ್ಯಗಳಿಗೆ ಇಸ್ಲಾಮೇ ಕಾರಣ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿ ನಿಲುವಾಗುತ್ತದೆ. ಅತ್ಯಾಚಾರ ನಡೆಸುವ ಮತ್ತು ಭ್ರೂಣವನ್ನು ಕತ್ತಿಯ ಮೊನೆಗೆ ಸಿಕ್ಕಿಸಿ ಸಂಭ್ರಮಿಸುವ ವ್ಯಕ್ತಿ ‘ಹರಹರ ಮಹಾದೇವ್’ ಎಂದು ಘೋಷಿಸುವುದರಿಂದ ಅದು ಹಿಂದೂ ಧರ್ಮದ ಕೃತ್ಯವಾಗುತ್ತದೆಯೇ? ಆ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದೇ?  ಆದ್ದರಿಂದ ಅನಂತ ಕುಮಾರ್ ಹೆಗಡೆಯವರ ಮಾತು ಅತ್ಯಂತ ಖಂಡನೀಯ. ಓರ್ವ ಸಂಸದರಾಗಿ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು. ನಿಜವಾಗಿ, ನಾಶ ಮಾಡಬೇಕಾದದ್ದು ಧರ್ಮವನ್ನಲ್ಲ, ಧರ್ಮಾಂಧತೆಯನ್ನು. ಈ ಧರ್ಮಾಂಧತೆ ಎಲ್ಲ ಧರ್ಮಾನುಯಾಯಿಗಳಲ್ಲೂ ಇವೆ. ‘ಹೆಗಡೆ’ ತನ್ನ ಬಣ್ಣದ ಕನ್ನಡಕವನ್ನು ಕಳಚಿಟ್ಟು ನೋಡಲಿ.