Wednesday, 6 February 2019

ಶ್ರೀರಾಮಚಂದ್ರ ಮತ್ತು ಪ್ರವಾದಿ ಅನುಯಾಯಿಗಳಿಗೆ ಅಭಿನಂದನೆಗಳು


   
ಕಳೆದವಾರ ಎರಡು ಘಟನೆಗಳು ನಡೆದುವು. ಈ ಎರಡೂ ಘಟನೆಗಳಿಗೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿತ್ತು ಮತ್ತು ಆ ಎರಡೂ ಘಟನೆಗಳಿಗೆ ಕಾರಣಕರ್ತರಾದವರು ತಲೆ ತಗ್ಗಿಸುವ ರೂಪದಲ್ಲಿತ್ತು. ಇದರಲ್ಲಿ ಒಂದು- ಪ್ರೊಫೆಸರ್ ಭಗವಾನ್‍ರ ಬರಹ. ಆ ಬರಹದಲ್ಲಿ ಶ್ರೀರಾಮನನ್ನು ಅವರು ಅತ್ಯಂತ ಕೆಳದರ್ಜೆಯ, ಅವಮಾನಕರವಾದ ಮತ್ತು ನಿಂದನಾತ್ಮಕ ರೀತಿಯಲ್ಲಿ ಉಲ್ಲೇಖಿಸಿದ್ದರು. ಮಾತ್ರವಲ್ಲ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನನ್ನು ಹೀಗೆಯೇ ಉಲ್ಲೇಖಿಸಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದರು. ಇನ್ನೊಂದು- ಟಿ.ವಿ. ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್‍ರ ಬಗ್ಗೆ ಆಡಿದ ಮಾತು. ಪ್ರವಾದಿ ಮುಹಮ್ಮದ್‍ರಿಗೆ ಶಿಶುಕಾಮಿ ಎಂಬ ಪದವನ್ನು ಅವರು ಪ್ರಯೋಗಿಸಿದ್ದರು. ಸಾರ್ವಜನಿಕರ ಪ್ರತಿಕ್ರಿಯೆಯ ದೃಷ್ಟಿಯಿಂದ ಈ ಎರಡೂ ಸಂದರ್ಭಗಳು ಬಹುಮುಖ್ಯವಾದವು. ಒಂದು ಧರ್ಮದ ಐಕಾನ್‍ಗಳೆಂಬ ನೆಲೆಯಲ್ಲಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರಿಗೆ ಬಹಳ ದೊಡ್ಡ ಗೌರವವಿದೆ. ಯಾವುದೋ ಒಂದು ಕಾಲದಲ್ಲಿ ಮತ್ತು ಎಷ್ಟೋ ಶತಮಾನಗಳ ಹಿಂದೆ ಬಾಳಿ, ತುಂಬು ಜೀವನ ನಡೆಸಿ ಹೊರಟು ಹೋದವರಷ್ಟೇ ಅಲ್ಲ ಇವರು. ಇವರಿಬ್ಬರನ್ನೂ ಈ ಸಮಾಜ ಅನುಸರಿಸುತ್ತಾ ಬಂದಿದೆ. ಶ್ರೀರಾಮ ಈ ದೇಶದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಗುರುತಿಸಿಕೊಂಡವರು. ಅವರನ್ನು ಆರಾಧಿಸುವ, ಆದರಿಸುವ, ದೇವ ಸ್ವರೂಪಿಯಾಗಿ ಕಾಣುವ ಪರಂಪರೆಯೊಂದು ಈ ದೇಶದಲ್ಲಿ ಬೆಳೆದು ಬಂದಿದೆ. ಶ್ರೀರಾಮರ ಕುರಿತಂತೆ ಹೆಣೆದುಕೊಂಡ ಕತೆಗಳೇ ಇಲ್ಲಿ ನೂರಾರು ಇವೆ. ರಾಮ, ಲಕ್ಷ್ಮಣ, ಸೀತೆ, ಹನುಮಂತ, ಸುಗ್ರೀವ, ವಾಲಿ ಇತ್ಯಾದಿ ಇತ್ಯಾದಿಗಳೆಲ್ಲ ಬರೇ ಹೆಸರುಗಳಷ್ಟೇ ಅಲ್ಲ, ಅವೊಂದು ರೂಪಕ. ಜನರು ಸ್ವತಃ ಪಾತ್ರವಾಗಿ ಅವನ್ನು ಬದುಕಿನಲ್ಲಿ ಅನುಸರಿಸುತ್ತಾ ಬಂದಿದ್ದಾರೆ. ಪ್ರವಾದಿ ಮುಹಮ್ಮದರೂ(ಸ) ಅಷ್ಟೇ. 6 ಮತ್ತು 7ನೇ ಶತಮಾನದ ನಡುವೆ ಮಕ್ಕಾ ಮತ್ತು ಮದೀನಾಗಳನ್ನು ಕೇಂದ್ರವಾಗಿಟ್ಟುಕೊಂಡು ಅವರು ನಡೆಸಿದ ಸುಧಾರಣಾ ಚಟುವಟಿಕೆಗಳು ಅಮೋಘ ಮತ್ತು ಅತುಲ್ಯ. ಅವರ ಕಾಲದ ಸಾಮಾಜಿಕ ರೀತಿ-ನೀತಿ, ಜೀವನ ಪದ್ಧತಿ; ಕೌಟುಂಬಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಗಮನಿಸದೇ ಮತ್ತು ಪರಿಶೀಲನೆಗೊಡ್ಡದೇ ಈ ಕಾಲದಲ್ಲಿ ನಿಂತು ನಾವು ಅವರ ಬಗ್ಗೆ ಬೀಸು ಹೇಳಿಕೆಗಳನ್ನು ಕೊಡುವುದು ಸುಲಭ. ಆದರೆ ಬೀಸು ಹೇಳಿಕೆಗಳಿಗಷ್ಟೇ ಸೀಮಿತವಾಗುವ ವ್ಯಕ್ತಿತ್ವವೇ ಅದು ಎಂಬ ಪರಿಶೀಲನೆಗಿಳಿದರೆ ತೆರೆದುಕೊಳ್ಳುವ ಜಗತ್ತೇ ಬೇರೆ. ಅವರ ಬಾಲ್ಯ, ಯೌವನ, ಮದುವೆ, ಮಕ್ಕಳು, ಅವರ ಸುಧಾರಣಾ ಕಾರ್ಯಗಳು, ಅವರು ಎದುರಿಸಿರುವ ಸವಾಲುಗಳು ಮತ್ತು ಅದನ್ನು ಅವರು ಎದುರಿಸಿದ ರೀತಿ, ಅವರ ಸಾಮಾಜಿಕ ಚಿಂತನೆಗಳು, ಹೆಣ್ಣಿನ ಬಗೆಗಿನ ಅವರ ನಿಲುವು, ವಿಧವೆಯರು ಮತ್ತು ಹೆತ್ತವರ ಬಗೆಗಿನ ಅಭಿಪ್ರಾಯಗಳು ಇತ್ಯಾದಿಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ನಡೆಸಿದ ಓರ್ವ ವ್ಯಕ್ತಿ ಅವರನ್ನು ಒಂದು ವಾಕ್ಯದ ಬೀಸು ಹೇಳಿಕೆಯೊಳಗೆ ಬಂಧಿಸಿಡಲಾರ. ಪ್ರವಾದಿ ಮುಹಮ್ಮದ್‍ರಿಂದ ಆಕರ್ಷಿತರಾಗಿ ಅವರ ಅನುಯಾಯಿಗಳಾದ ತತ್ವಜ್ಞಾನಿಗಳಿದ್ದಾರೆ, ಬರಹಗಾರರಿದ್ದಾರೆ, ಕವಿಗಳಿದ್ದಾರೆ, ರಾಜಕಾರಣಿಗಳಿದ್ದಾರೆ, ಕ್ರೀಡಾಪಟುಗಳಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಬಾಕ್ಸಿಂಗ್ ಪಟು ಅಮೇರಿಕದ ಕ್ಯಾಸಿಯಸ್ ಕ್ಲೇ ಅವರು ಮುಹಮ್ಮದಲಿ ಕ್ಲೇ ಆದುದು ಪ್ರವಾದಿಯವರನ್ನು ಓದಿಕೊಂಡು. ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಸರೋಜಿನಿ ನಾಯ್ಡು, ನೆಹರೂ ಎಲ್ಲರೂ ಪ್ರವಾದಿಯವರ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ಜಾಗತಿಕವಾಗಿ ಇವತ್ತು ಪ್ರವಾದಿ ಮುಹಮ್ಮದ್‍ರಿಗೆ 160 ಕೋಟಿಗಿಂತಲೂ ಅಧಿಕ ಅನುಯಾಯಿಗಳಿದ್ದಾರೆ. ಇಂಥ ವ್ಯಕ್ತಿತ್ವದ ಮೇಲೆ ಪ್ರತಿಕ್ರಿಯಿಸುವ ಮೊದಲು ಅವರ ಬಗ್ಗೆ ಅಧ್ಯಯನ ಅತೀ ಅಗತ್ಯ. ಹಾಗಂತ,
ಪ್ರವಾದಿ ಮುಹಮ್ಮದ್‍ರಾಗಲಿ, ಶ್ರೀರಾಮ ಚಂದ್ರರಾಗಲಿ ಈ ಸಮಾಜಕ್ಕೆ ಅಜ್ಞಾತರಾಗಿ ಉಳಿದಿಲ್ಲ. ಇವರನ್ನು ವಿವರಿಸುವ ಸಾವಿರಾರು ಕೃತಿಗಳು ಇಲ್ಲಿವೆ. ಇವರು ಕಾವ್ಯವಾಗಿ, ಕವನವಾಗಿ, ಕತೆ, ಕಾದಂಬರಿಯಾಗಿ, ನಾಟಕವಾಗಿ, ಸಿನಿಮಾವಾಗಿ ಹೀಗೆ ವಿವಿಧ ರೂಪದಲ್ಲಿ ಸಮಾಜದ ನಡುವೆಯಿದ್ದಾರೆ. ಬಿಡಿಬಿಡಿಯಾಗಿರುವ ಇವನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ತಂದುಕೊಂಡು ಅಧ್ಯಯನಕ್ಕಿಳಿದರೆ ಅವರೇನೆಂಬುದು ಗೊತ್ತಾಗುತ್ತದೆ. ವಿಷಾದ ಏನೆಂದರೆ,
ಐತಿಹಾಸಿಕ ವ್ಯಕ್ತಿತ್ವಗಳನ್ನು ಈ ಕಾಲದಲ್ಲಿ ನಿಂತು ನೋಡುವಾಗ ಯಾವ ಎಚ್ಚರಿಕೆಯನ್ನು ಪಾಲಿಸಬೇಕಿತ್ತೋ ಆ ಎಚ್ಚರಿಕೆಯನ್ನು ಕಳೆದವಾರದ ಎರಡೂ ಘಟನೆಗಳಲ್ಲಿ ವಹಿಸಲಾಗಿಲ್ಲ ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಆದರೂ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ಈ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿವೆ. ಪ್ರೊಫಸರ್ ಭಗವಾನ್‍ರ ಬಗ್ಗೆ ಅಥವಾ ಟಿ.ವಿ. ನಿರೂಪಕರ ಬಗ್ಗೆ ಈ ಸಮಾಜ ಸಿಟ್ಟುಗೊಂಡರೂ ಎಲ್ಲೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಇವರನ್ನು ಖಂಡಿಸುವ ಭರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿಲ್ಲ. ರಸ್ತೆ ತಡೆ, ಬಂದ್‍ಗೆ ಕರೆಕೊಟ್ಟಿಲ್ಲ. ಇದೊಂದು ಪ್ರಬುದ್ಧ ನಡೆ. ಪ್ರಬುದ್ಧರೆನಿಸಿಕೊಂಡವರು ತೀರಾ ಅಪ್ರಬುದ್ಧರಂತೆ ವರ್ತಿಸಿದಾಗ ಸಾಮಾನ್ಯವಾಗಿ ಜನರು ರೊಚ್ಚಿಗೇಳುವುದಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದಿದೆ. ಬೈಗುಳ ಸುರಿಸುವುದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳನ್ನು ನಾವು ಅಭಿನಂದಿಸಬೇಕು. ಶ್ರೀರಾಮಚಂದ್ರರಾಗಲಿ ಪ್ರವಾದಿ ಮುಹಮ್ಮದರಾಗಲಿ ನಿಜ ಐಕಾನ್‍ಗಳಾಗುವುದು ಇಂಥ ಪ್ರತಿಕ್ರಿಯೆಗಳ ಮೂಲಕ. ಓರ್ವರು ಶ್ರೀರಾಮಚಂದ್ರರನ್ನು ನಿಂದಿಸಿದರು ಎಂಬುದನ್ನು ಎತ್ತಿಕೊಂಡು ಅದಕ್ಕಿಂತಲೂ ಕೆಟ್ಟದಾಗಿ ಅವರನ್ನು ನಾವು ನಿಂದಿಸಲು ಪ್ರಾರಂಭಿಸಿದರೆ ಅವರಿಗೂ ನಮಗೂ ನಡುವೆ ಇರುವ ವ್ಯತ್ಯಾಸ ಅಳಿದು ಹೋಗುತ್ತದೆ. ಮಾತ್ರವಲ್ಲ, ಶ್ರೀರಾಮಚಂದ್ರರ ನಿಜ ಅನುಯಾಯಿ ನಾವು ಎಂದು ಹೇಳಿಕೊಳ್ಳುವುದಕ್ಕೂ ಅದು ಧಕ್ಕೆ ತರುತ್ತದೆ. ಪ್ರವಾದಿ ಮುಹಮ್ಮದ್‍ರ ನಿಜ ಅನುಯಾಯಿಯೊಬ್ಬ ಪ್ರವಾದಿ ನಿಂದಕರನ್ನು ಅದೇ ಭಾಷೆಯಲ್ಲಿ ನಿಂದಿಸಲಾರ. ನಿಂದನೆಗೆ ಪ್ರತಿಯಾಗಿ ಪ್ರತಿನಿಂದನೆ, ಹತ್ಯೆಗೆ ಪ್ರತಿಯಾಗಿ ಪ್ರತಿಹತ್ಯೆ, ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಅನ್ಯಾಯ, ಅತ್ಯಾಚಾರಕ್ಕೆ ಪ್ರತಿಯಾಗಿ ಪ್ರತಿ ಅತ್ಯಾಚಾರ ಇವೆಲ್ಲ ಧರ್ಮ ವಿರೋಧಿಸಿದ ಕೃತ್ಯಗಳು. ನಿಂದನೆಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಹತ್ಯೆಗೆ ಶಿಕ್ಷೆ ಏನು ಅನ್ನುವುದನ್ನೂ ನಿರ್ಧರಿಸಬೇಕಾದುದು ನ್ಯಾಯಾಲಯವೇ. ಅತ್ಯಾಚಾರವಾಗಲಿ ಇನ್ನಾವುದೇ ಸಮಾಜ ವಿರೋಧಿ ಕೃತ್ಯಗಳಾಗಲಿ ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆ ನ್ಯಾಯಾಲಯದ ಮೇಲಿದೆ. ಈ ಕ್ರಮವನ್ನು ಗೌರವಿಸದೇ ಹೋದರೆ ನಾಗರಿಕ ಸಮಾಜ ಅನಾಗರಿಕವಾಗಿ ಬಿಡುತ್ತದೆ. ಶಿಕ್ಷೆಗೆ ಒಳಗಾಗಬೇಕಾದವರು ತಪ್ಪಿಸಿಕೊಳ್ಳುತ್ತಾರೆ. ಅಮಾಯಕರು ಅನ್ಯಾಯಕ್ಕೊಳಗಾಗುತ್ತಾರೆ. ಆದ್ದರಿಂದಲೇ ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯ ತೋರಿದ ಸಹನೆ ಮತ್ತು ವಹಿಸಿದ ಎಚ್ಚರಿಕೆಯು ಇಷ್ಟವಾಗುವುದು. ಒಂದುವೇಳೆ, ಈ ದೇಶದಲ್ಲಿರುವ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರ ಕೋಟ್ಯಾಂತರ ಅನುಯಾಯಿಗಳು ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವ ಪ್ರಮಾದ ಮಾಡಿರುತ್ತಿದ್ದರೆ ಅದರಿಂದ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುತ್ತಿತ್ತು. ಅನಾಹುತಕಾರಿ ವಿದ್ಯಮಾನಗಳಿಗೆ ಅದು ಕಾರಣವಾಗುತ್ತಿತ್ತು. ಮಾತ್ರವಲ್ಲ, ಇಂಥ ಕ್ರಮಗಳು ಪ್ರವಾದಿ ಮತ್ತು ಶ್ರೀರಾಮರಿಗೆ ಮಾಡುವ ದ್ರೋಹವೂ ಆಗುತ್ತಿತ್ತು.
ಪ್ರಬುದ್ಧ ಧರ್ಮಾನುಯಾಯಿಗಳ ಲಕ್ಷಣ ಏನೆಂದರೆ, ಯಾವ ಸಂದರ್ಭದಲ್ಲಿಯೂ ವಿವೇಚನೆಯನ್ನು ಕಳಕೊಳ್ಳದೇ ಇರುವುದು. ಪ್ರವಾದಿ ಮುಹಮ್ಮದ್‍ರ ನಿಂದನೆಗೆ ಪ್ರತಿಕ್ರಿಯೆಯಾಗಿ ಅವರ ಅನುಯಾಯಿಗಳು ಪ್ರತಿನಿಂದನೆಗೆ ಮತ್ತು ಪ್ರತಿಹಿಂಸೆಗೆ ಇಳಿದರು ಎಂದಾದರೆ, ಅವರು ವಿಚಾರವಂತ ಅನುಯಾಯಿಗಳ ಪಟ್ಟಿಯಿಂದ ಹೊರಗಿದ್ದಾರೆ ಎಂದೇ ಅರ್ಥ. ಶ್ರೀರಾಮರಿಗೆ ಸಂಬಂಧಿಸಿಯೂ ಇವೇ ಮಾತುಗಳನ್ನು ಹೇಳಬೇಕು. ನಿಂದನೆಗೆ ಕಾನೂನಿನ ಭಾಷೆಯಲ್ಲಿ ಉತ್ತರಿಸುವ ವಿವೇಚನೆಯನ್ನು ನಾವು ರೂಢಿಸಿಕೊಳ್ಳಬೇಕು. ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಇದು ಸಾಧ್ಯವಾಗಿದೆ. ಇದಕ್ಕಾಗಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದರ ಅನುಯಾಯಿಗಳಿಗೆ ಅಭಿನಂದನೆಗಳು.

ಸಾಣೇಹಳ್ಳಿ ಸ್ವಾಮೀಜಿಯವರಿಗೆ ಅಭಿನಂದನೆಗಳು



ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರ ಪಾದಯಾತ್ರೆಯೊಂದು ಹೊರಟಿದೆ. ಸುಮಾರು ಎರಡ್ಮೂರು ಸಾವಿರದಷ್ಟಿರುವ ಈ ಮಹಿಳಾ ಗುಂಪಿನಲ್ಲಿ ರೈತ ಮತ್ತು ಕೂಲಿಕಾರ್ಮಿಕ ಕುಟುಂಬದವರೇ ಅಧಿಕವಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ 20-25 ಕಿಲೋ ಮೀಟರ್ ಸಾಗಬೇಕೆಂಬುದು ಈ ಗುಂಪಿನ ಗುರಿ. ಹೀಗೆ ಸಾಗುವ ಮಾರ್ಗ ಮಧ್ಯದ ಗ್ರಾಮಗಳು ಈ ಗುಂಪಿಗೆ ಊಟ-ವಸತಿಯನ್ನು ಕಲ್ಪಿಸುವ ಉಮೇದು ತೋರಿವೆ. ಲೆಕ್ಕಾಚಾರದಂತೆ ಪ್ರತಿದಿನ ಪಾದಯಾತ್ರೆ ಸಾಗಿದರೆ ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜನವರಿ 30ರಂದು ಬೆಂಗಳೂರಿಗೆ ತಲುಪಬಹುದು ಎಂಬ ಭರವಸೆ ಈ ಗುಂಪಿನದು. ಹಾಗಂತ, ಸುಮಾರು 213 ಕಿಲೋಮೀಟರ್ ಸಾಗುವ ಗುರಿಯೊಂದಿಗೆ ಹೊರಟ ಈ ಗುಂಪಿನಲ್ಲಿ ಸಿನಿಮಾ ನಟರಿಲ್ಲ. ಬೃಹತ್ ಉದ್ಯಮಿಗಳಿಲ್ಲ. ರಾಜಕಾರಣಿಗಳಿಲ್ಲ. ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಬ್ಯುಸಿಯಾಗಿರುವವರೂ ಇಲ್ಲ. ಆದ್ದರಿಂದಲೇ, ಈ ಪಾದಯಾತ್ರೆಯ ಯಶಸ್ಸಿನ ಬಗ್ಗೆ ಈಗಲೇ ಕಣಿ ಹೇಳುವುದಕ್ಕೆ ಸಾಧ್ಯವೂ ಇಲ್ಲ. ಆದರೂ ರಾಯಚೂರು, ಬೀದರ್, ಕಲಬುರ್ಗಿಯಿಂದ ಬಂದಿರುವ ಮಹಿಳೆಯರು ಹೀಗೆ ಒಟ್ಟಾಗಿರುವುದಕ್ಕೆ ಏಕೈಕ ಕಾರಣ ಮದ್ಯಪಾನ. ಈ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಮದ್ಯಪಾನದ ಸಂತ್ರಸ್ತರು. ಗಂಡನೆಂದೋ ಅಪ್ಪನೆಂದೋ ಗುರುತಿಸಿಕೊಳ್ಳುವ ವ್ಯಕ್ತಿಯ ಮದ್ಯಪಾನದ ಚಟದಿಂದ ನೆಮ್ಮದಿಯನ್ನು ಕಳಕೊಂಡವರು. ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧವಾಗಬೇಕು ಎಂದು ನಂಬಿದವರು. ಇವರ ಈ ಬಯಕೆಗೆ ‘ಮದ್ಯ ನಿಷೇಧ ಆಂದೋಲನ’ ಎಂಬ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಖುಷಿಯ ವಿಚಾರ ಏನೆಂದರೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಪಾದಯಾತ್ರೆಗೆ ಚಾಲನೆ ನೀಡಿರುವುದು. ಅಷ್ಟಕ್ಕೂ,
ಸಮಾಜದ ಪ್ರಗತಿಗೆ ಮದ್ಯದ ಕೊಡುಗೆಯೇನು ಎಂದು ಪ್ರಶ್ನಿಸಿದಾಗಲೆಲ್ಲ ಆದಾಯದ ಉದ್ದದ ಪಟ್ಟಿಯೊಂದನ್ನು ಸರಕಾರ ಮುಂದಿಡುವುದಿದೆ. ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಜೊತೆಗೇ, ಈ ಆದಾಯದ ಹಿಂದೆ ಕರುಣಾಜನಕವಾದ ಕತೆಯಿದೆ ಎಂಬುದನ್ನೂ ಅದು ಒಪ್ಪಿಕೊಳ್ಳುತ್ತಿದೆ. ಆದ್ದರಿಂದಲೇ, ಸರಕಾರವೇ ಮುಂದೆ ನಿಂತು ಮದ್ಯವರ್ಜನಾ ಶಿಬಿರವನ್ನು ನಡೆಸುತ್ತಿರುವುದು. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತನ್ನೂ ಪ್ರಕಟಿಸುತ್ತಿರುವುದು. ಏಕಕಾಲದಲ್ಲಿ ನಡೆಯುವ ದ್ವಂದ್ವ ಇದು. ಮದ್ಯದ ಆದಾಯವನ್ನೇ ನೆಚ್ಚಿಕೊಂಡಿರುವ ಸರಕಾರವೊಂದು ಮದ್ಯವರ್ಜನಾ ಶಿಬಿರವನ್ನೂ ನಡೆಸುತ್ತದೆ ಎಂದರೆ ಏನರ್ಥ? ಆಡಳಿತ ನಡೆಸುವ ಪಕ್ಷವೇ ವಿರೋಧ ಪಕ್ಷವನ್ನೂ ರಚಿಸಿ ಅದಕ್ಕೆ ಸಂಪನ್ಮೂಲವನ್ನು ಒದಗಿಸಿ ಮುನ್ನಡೆಸಿಕೊಂಡು ಹೋಗುವ ರೀತಿಯಂಥಲ್ಲವೇ ಇದು? ಒಂದುಕಡೆ, ಮದ್ಯದ ಆದಾಯವೂ ಬೇಕು, ಇನ್ನೊಂದು ಕಡೆ, ತಾನು ಮದ್ಯದ ಪರ ಅಲ್ಲ ಎಂದೂ ಬಿಂಬಿಸಿಕೊಳ್ಳಬೇಕು ಎಂಬ ಚಟವನ್ನು ಬಿಟ್ಟರೆ ಇದರಲ್ಲಿ ಬೇರೆ ಏನಿದೆ? ನಿಜವಾಗಿ,
ಮದ್ಯಪಾನದ ವಿರುದ್ಧ ಒಂದು ಸರಕಾರ ಜಾಹೀರಾತನ್ನು ಕೊಡುತ್ತದೆಂದರೆ, ಮದ್ಯಪಾನ ಸಮಾಜದ ಆರೋಗ್ಯಕ್ಕೆ ಹಾನಿಕರ ಎಂದು ಅದು ಒಪ್ಪಿಕೊಳ್ಳುತ್ತದೆ ಎಂದೇ ಅರ್ಥ. ಹೀಗಿರುವಾಗ, ಹಾನಿಕರವಾದುದರ ಮಾರಾಟಕ್ಕೆ ಸರಕಾರ ಅನುಮತಿ ಕೊಡುವುದಾದರೂ ಯಾಕೆ? ಸರಕಾರ ಇರುವುದೇ ಜನರಿಗೆ ಆರೋಗ್ಯಪೂರ್ಣ ಮತ್ತು ನೆಮ್ಮದಿದಾಯಕ ಬದುಕನ್ನು ಖಾತರಿಪಡಿಸಲು. ಸರಕಾರವೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಜನರಿಗೆ ಸುಲಭ ಬದುಕನ್ನು ಒದಗಿಸುವುದಕ್ಕಾಗಿ ಮನುಷ್ಯರೇ ಸೇರಿಕೊಂಡು ಮಾಡಿಕೊಂಡ ವ್ಯವಸ್ಥೆ ಅದು. ಸರಕಾರದಲ್ಲಿರುವವರು ಜನಪ್ರತಿನಿಧಿಗಳೇ ಹೊರತು ಮದ್ಯ ಪ್ರತಿನಿಧಿಗಳಲ್ಲ. ಮದ್ಯವನ್ನು ತಯಾರಿಸುವ ಉದ್ಯಮದಿಂದ ಶಾಸನ ಸಭೆಗಳಿಗೆ ನಾಮಕರಣ ಮಾಡಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಸಾಹಿತ್ಯ, ಸಂಗೀತ, ಕ್ರೀಡೆ ಇತ್ಯಾದಿ ಕ್ಷೇತ್ರದಿಂದ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ನಾಮಕರಣ ಮಾಡುವ ಕ್ರಮ ಇದೆ. ಇಷ್ಟೆಲ್ಲ ಇದ್ದೂ ಮದ್ಯೋದ್ಯಮವನ್ನು ಸರಕಾರ ಆಧರಿಸುತ್ತಿರುವುದೇಕೆ? ಈ ಆದಾಯದಾಚೆಗೆ ಕೋಟ್ಯಾಂತರ ಬಡ ಗುಡಿಸಲುಗಳು ಮತ್ತು ಅಲ್ಲಿನ ಆಕ್ರಂದನಗಳು ಸರಕಾರಕ್ಕೆ ಮುಖ್ಯವಾಗುವುದಿಲ್ಲವೇ? ಬೆಳಗ್ಗಿನಿಂದ ಸಂಜೆಯವರೆಗೆ ದುಡಿದ ಹಣವನ್ನು ಮದ್ಯದಂಗಡಿಗೆ ಸುರಿದು ತೂರಾಡಿಕೊಂಡು ಬರುವ ಅಪ್ಪನನ್ನು ಒಂದು ಮಗು ಹೇಗೆ ಸ್ವಾಗತಿಸೀತು? ಪತ್ನಿಯಾದವಳು ಹೇಗೆ ಸ್ವೀಕರಿಸಿಯಾಳು? ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಹೊಡೆತ, ಬಡಿತ, ಥಳಿತ, ಬೈಗುಳ, ಬೊಬ್ಬೆಗಳ ನೆಮ್ಮದಿರಹಿತ ಜಗತ್ತು ಅದು. ಪ್ರತಿನಿತ್ಯ ನಮ್ಮ ಸುತ್ತ-ಮುತ್ತಲೇ ಈ ಮನುಷ್ಯರು ಬದುಕುತ್ತಿz್ದÁರೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಈ ಮನುಷ್ಯರ ಕುಟುಂಬ ಹಾಳಾಗಿದೆ. ಮಕ್ಕಳ ಮನಸ್ಸು ಹಾಳಾಗಿದೆ. ಮನೆ ಹಾಳಾಗಿದೆ. ಇವರೆಲ್ಲರ ಬದುಕನ್ನು ಹೀಗೆ ಬೀದಿಪಾಲು ಮಾಡಿಕೊಂಡು ಸರಕಾರಕ್ಕೆ ಆದಾಯ ಗಳಿಸಬೇಕೇ?
ಆಹಾರ, ಉದ್ಯೋಗ, ಆರೋಗ್ಯ, ವಸತಿ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯಕ್ಕೆ ಸ್ಥಾನವಿಲ್ಲ. ಯಾಕೆಂದರೆ, ಅದು ಸಾಮಾಜಿಕ ಅನಿವಾರ್ಯತೆ ಅಲ್ಲ. ಮದ್ಯ ಇಲ್ಲದೆ ಬದುಕಬಹುದು. ಆದರೆ ಆಹಾರ, ಆರೋಗ್ಯ, ಉದ್ಯೋಗ, ವಸತಿ ಇಲ್ಲದೇ ಬದುಕಲು ಕಷ್ಟಸಾಧ್ಯ. ದುರಂತ ಏನೆಂದರೆ, ಈ ಅಗತ್ಯತೆಗಳನ್ನು ಪೂರೈಸಲು ವಿಫುಲವಾದ ಸರಕಾರಗಳು ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಮದ್ಯವನ್ನು ವಿತರಿಸುತ್ತಿದೆ. ಒಮ್ಮೆ ಮದ್ಯದ ದಾಸನಾದ ವ್ಯಕ್ತಿ ಆ ಬಳಿಕ ಸರಕಾರದ ಉಳಿದೆಲ್ಲ ವೈಫಲ್ಯಗಳನ್ನು ಮರೆತು ಬಿಡುತ್ತಾನೆ/ಳೆ. ಇದೊಂದು ಸಂಚು. ಮದ್ಯದ ಆದಾಯವನ್ನು ತೋರಿಸಿ ಈ ಸಂಚನ್ನು ಸದ್ಯ ಸಮರ್ಥಿಸಲಾಗುತ್ತಿದೆ. ಜನರನ್ನು ಹಿಂಡಿ, ಅವರ ಆರೋಗ್ಯವನ್ನು ಕೆಡಿಸಿ ಸಂಗ್ರಹಿಸುವ ಆದಾಯದ ಅಗತ್ಯವಾದರೂ ಏನಿದೆ? ಆ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಎಷ್ಟು ನೈತಿಕ? ಅಂದಹಾಗೆ,
ಚಿತ್ರದುರ್ಗದಿಂದ ಹೊರಟ ಪಾದಯಾತ್ರೆಯ ತುಂಬಾ ಮಹಿಳೆಯರೇ ಇದ್ದಾರೆ. ಅದೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು. ಗ್ರಾಮೀಣ ಪ್ರದೇಶವೆಂಬುದು ನಗರ ಪ್ರದೇಶದಂತಲ್ಲ. ನಗರದಲ್ಲಿ ಪ್ರತಿಭಟನೆಗಳು, ರ್ಯಾಲಿಗಳು ಪ್ರತಿದಿನವೆಂಬಂತೆ ನಡೆಯುತ್ತಲೇ ಇರುತ್ತವೆ. ನಗರದಲ್ಲಿ ಅದು ಸುಲಭ. ಆದರೆ ಗ್ರಾಮೀಣ ಪ್ರದೇಶದ ಮಂದಿ ಪಾದಯಾತ್ರೆ ಹಮ್ಮಿಕೊಳ್ಳುವುದು ಅಪರೂಪ. ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮಷ್ಟಕ್ಕೆ ಬದುಕುವ ಈ ಮಂದಿ ಪಾದಯಾತ್ರೆಯಲ್ಲಿ ರಾಜಧಾನಿಗೆ ಹೊರಟಿದ್ದಾರೆಂದರೆ, ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಹಾಗಂತ, ಈ ಪಾದಯಾತ್ರೆಯಲ್ಲಿರುವ ಮಹಿಳೆಯರಷ್ಟೇ ಮದ್ಯಪಾನದ ಸಂತ್ರಸ್ತರಲ್ಲ. ಒಂದುವೇಳೆ, ರಾಜ್ಯದಲ್ಲಿ ಯಾರಾದರೂ ಸಮೀಕ್ಷೆ ನಡೆಸಿದರೆ, ಸರಕಾರವನ್ನೇ ಉರುಳಿಸುವಷ್ಟು ಪ್ರಮಾಣದಲ್ಲಿ ಅವರ ಸಂಖ್ಯೆ ಇದ್ದೀತು. ಸರಕಾರ ಈ ಮಹಿಳೆಯರ ಆಗ್ರಹಕ್ಕೆ ಕಿವಿಯಾಗಬೇಕು. ಸಕಲ ಕೆಡುಕುಗಳ ತಾಯಿ ಎಂದು ಇಸ್ಲಾಮ್ ಧರ್ಮ ಸೂಚಿಸಿರುವ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಇಂದಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಣೇಹಳ್ಳಿ ಸ್ವಾಮೀಜಿಯವರಂತೆ ಈ ರಾಜ್ಯದ ಇತರ ಮಠ-ಮಂದಿರಗಳಿಂದಲೂ ಮದ್ಯ ವಿರೋಧಿ ಬೃಹತ್ ಚಳವಳಿ ರೂಪುತಾಳಬೇಕು. ಚರ್ಚ್-ಮಸೀದಿಗಳೂ ಇದರಲ್ಲಿ ಪಾಲುಗೊಳ್ಳಬೇಕು. ಇದೇನೂ ಅಸಾಧ್ಯವಲ್ಲ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಭಿನಂದನೆಗಳು.

Thursday, 17 January 2019

ಪೌರತ್ವ ಮಸೂದೆ: ಮುಸ್ಲಿಮರನ್ನು ಮಾತ್ರ ಹೆಕ್ಕಿ ಹೊರಗಿಡಲು ಕಾರಣವೇನು?

 

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ಸಿದ್ಧತೆಯು ಎಷ್ಟು ಸಿನಿಕತನದ್ದು ಮತ್ತು ದೂರದೃಷ್ಟಿರಹಿತವಾದದ್ದು ಅನ್ನುವುದಕ್ಕೆ ಅದು ಮಂಡಿಸಿರುವ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಗಳೇ ಉತ್ತಮ ಪುರಾವೆ. ಈ ಎರಡೂ ಮಸೂದೆಗಳನ್ನು ಪಾರ್ಲಿಮೆಂಟ್‍ನಲ್ಲಿ ಒಂದೇ ವಾರದೊಳಗೆ ಮಂಡಿಸಲಾಗಿದೆ. ಅದರಲ್ಲೂ ಪೌರತ್ವ ಮಸೂದೆಯನ್ನು ಅದು ಸಮರ್ಥಿಸುತ್ತಿರುವ ರೀತಿಯಂತೂ ಅತ್ಯಂತ ದಯನೀಯ. 2014 ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಫಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮುಸ್ಲಿಮರನ್ನು ಯಾಕೆ ಹೊರಗಿಟ್ಟಿರಿ ಅನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ. ಅದಕ್ಕೆ ಅವರು ಕೊಟ್ಟ ಉತ್ತರ ಏನೆಂದರೆ ಹಿಂದೂ, ಬೌದ್ಧ, ಜೈನ ಮುಂತಾದ ಧರ್ಮೀಯರಿಗೆ ನೆಲೆಸಲು ಭಾರತ ಬಿಟ್ಟರೆ ಬೇರೆ ದೇಶಗಳಿಲ್ಲ ಅನ್ನುವುದಾಗಿತ್ತು. ಅದರ್ಥ, ಮೇಲಿನ ಮೂರು ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರು ಅನ್ಯ ರಾಷ್ಟ್ರಗಳಲ್ಲಿ ಹೋಗಿ ನೆಲೆಸಲಿ ಎಂದೇ ಆಗುತ್ತದೆ. ಸಂವೇದನೆ ಸತ್ತು ಹೋದ ರಾಜಕಾರಣಿಯ ಹೊರತು ಇನ್ನಾರಿಗೂ ಈ ರೀತಿಯಲ್ಲಿ ಮಾತಾಡಲು ಸಾಧ್ಯವಿಲ್ಲ. ನಿಜವಾಗಿ, ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಆಂತರಿಕ ಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿರುವುದು  ಮುಸ್ಲಿಮೇತರರಷ್ಟೇ  ಅಲ್ಲ ಅನ್ನುವುದಕ್ಕೆ ಅಲ್ಲಿಂದ ಭಾರತಕ್ಕೆ ದೊಡ್ಡ ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ಮುಸ್ಲಿಮರೇ ಸಾಕ್ಷಿ. ಹಿಂದೂ, ಸಿಖ್, ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ವಲಸಿಗರಂತೆಯೇ ಮುಸ್ಲಿಮರೂ ಭಾರತವನ್ನು ಸುರಕ್ಷಿತ ರಾಷ್ಟ್ರವಾಗಿ ಪರಿಗಣಿಸಿದ್ದಾರೆ. ಹೀಗಿರುವಾಗ, ಇವರಿಂದ ಮುಸ್ಲಿಮರನ್ನು ಮಾತ್ರ ಬೇರ್ಪಡಿಸಿ ಹೊರಕ್ಕಟ್ಟುವುದು ಮತ್ತು ಉಳಿದವರನ್ನೆಲ್ಲ ಇಲ್ಲಿಯೇ ಉಳಿಸಿಕೊಳ್ಳುವುದು ಅಂದರೆ ಏನರ್ಥ? ಇವರೆಲ್ಲ, ತಾವಿರುವ ರಾಷ್ಟ್ರ ತಮಗೆ ಸುರಕ್ಷಿತವಲ್ಲ ಎಂಬ ಕಾರಣದಿಂದಲೇ ಭಾರತಕ್ಕೆ ಬಂದಿದ್ದಾರೆ. ಒಂದು ವೇಳೆ, ಇವರಲ್ಲಿ ಮುಸ್ಲಿಮರಿಗೆ ಹೋಗಲು ಅನ್ಯ ರಾಷ್ಟ್ರವಿದೆ ಎಂದಾದರೆ, ಬೌದ್ಧರಿಗೂ ಅನ್ಯ ರಾಷ್ಟ್ರವಿದೆಯಲ್ಲ? ಶ್ರೀಲಂಕಾ, ಮ್ಯಾನ್ಮಾರ್, ಬರ್ಮಾ, ಜಪಾನ್‍ಗಳು ಬೌದ್ಧರೇ ಬಹುಸಂಖ್ಯಾತರಾಗಿರುವ ರಾಷ್ಟ್ರಗಳು. ಅವರನ್ನೂ ಪೌರತ್ವ ವಿಧೇಯಕ ಮಸೂದೆಯಿಂದ ಹೊರಗಿಡಬಹುದಲ್ಲ? ಹಿಂದೂಗಳು ಬಹುಸಂಖ್ಯಾತರಾಗಿರುವ ನೇಪಾಲವು ನಮ್ಮ ಪಕ್ಕದಲ್ಲೇ ಇದೆ. ಮೇಲಿನ ಮೂರು ರಾಷ್ಟ್ರಗಳಿಂದ ಬಂದ ಹಿಂದೂಗಳನ್ನು ನಾವು ಇಲ್ಲೇ ಯಾಕೆ ಉಳಿಸಿಕೊಳ್ಳಬೇಕು? ಅವರಿಗೆ ಇನ್ನೊಂದು ರಾಷ್ಟ್ರವಾಗಿ ನೇಪಾಲ ಇದೆಯಲ್ಲ? ಕ್ರೈಸ್ತರಿಗೆ ಹೋಗಲು ಜಗತ್ತಿನಾದ್ಯಾಂತ ಧಾರಾಳ ರಾಷ್ಟ್ರಗಳಿವೆ. ಅವರನ್ನೇಕೆ ಇಲ್ಲಿಯೇ ಉಳಿಸಿಕೊಳ್ಳಬೇಕು..? ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋಗಬಹುದು. ಮಾತ್ರವಲ್ಲ, ಇದಕ್ಕೆ ಸಮರ್ಪಕ ಉತ್ತರವನ್ನು ಕೊಡುವುದಕ್ಕೆ ಕೇಂದ್ರ ಸರಕಾರಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ,

ವಲಸೆ ಅನ್ನುವುದೇ ಅತಿ ದೊಡ್ಡ ಹಿಂಸೆ. ಒಂದು ರಾಷ್ಟ್ರದಲ್ಲಿ ಆನಂದದಿಂದ ಜೀವಿಸುವ ಯಾವ ಕುಟುಂಬವೂ ಇನ್ನೊಂದು ರಾಷ್ಟ್ರಕ್ಕೆ ತೆರಳಿ ಅಕ್ರಮವಾಗಿ ನೆಲೆಸಲು ಬಯಸುವುದಿಲ್ಲ. ಹುಟ್ಟಿ ಬೆಳೆದ ರಾಷ್ಟ್ರವನ್ನು ಬದಲಿಸುವುದೆಂದರೆ, ಬಟ್ಟೆ ಬದಲಿಸಿದಷ್ಟು ಸುಲಭವೂ ಅಲ್ಲ. ತಾನು ನೆಲೆಸುವ ಆ ಇನ್ನೊಂದು ರಾಷ್ಟ್ರದಲ್ಲಿ ಹೊಸದಾಗಿ ಮನೆ, ಉದ್ಯೋಗ, ಬದುಕು ಕಂಡುಕೊಳ್ಳಬೇಕು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಅಪರಿಚಿತರಾದ ಜನರೊಂದಿಗೆ ಸಂಬಂಧ ಬೆಳೆಸಬೇಕು. ಇವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿಕೊಂಡು ನೆಲೆಸ ಬಯಸುವವರು ಇದ್ದಾರೆಂದರೆ ಅವರು ತನ್ನ ಮೂಲ ರಾಷ್ಟ್ರದಲ್ಲಿ ಅದಕ್ಕಿಂತಲೂ ತೀವ್ರ ತೆರನಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದೇ ಅರ್ಥ. ಹೀಗಿರುವಾಗ ಇಂಥವರನ್ನು ಹಿಂದೂ-ಮುಸ್ಲಿಮ್, ಜೈನ ಎಂದು ಮುಂತಾಗಿ ವಿಭಜಿಸುವುದು ಸರಿಯೇ? ಇವರಲ್ಲಿ ಮುಸ್ಲಿಮರನ್ನು ಹೆಕ್ಕಿ ತೆಗೆದು ಹೊರಕ್ಕಟ್ಟುವುದು ನ್ಯಾಯವೇ? ಹಾಗಂತ,
ಬಿಜೆಪಿ ನೇತೃತ್ವದ ಮೋದಿ ಸರಕಾರವು ಅತ್ಯಂತ ಅವಿವೇಕತನದಿಂದ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅದು ಆರಂಭದಿಂದಲೇ ವಿಭಜನವಾದಿ ಮತ್ತು ಭಾವಾವೇಶದ ರಾಜಕಾರಣವನ್ನು ಜೊತೆ ಸೇರಿಸಿಕೊಂಡೇ ಆಟ ಆಡುತ್ತಿದೆ. ಇದಕ್ಕೆ ಪ್ರಥಮ ಉದಾಹರಣೆ ಏನೆಂದರೆ, ರಾತ್ರೋರಾತ್ರಿ ನೋಟು ನಿಷೇಧ ಮಾಡಿದ ರೀತಿ. ಆ ಬಳಿಕ ಜಿಎಸ್‍ಟಿಯ ಹೇರಿಕೆ. ಅಚ್ಚರಿ ಏನೆಂದರೆ, ಈ ಎರಡಕ್ಕೂ ಪೂರ್ವ ತಯಾರಿ ಎಂಬುದು ಇರಲೇ ಇಲ್ಲ. ದೂರ ದೃಷ್ಟಿಯೂ ಇರಲಿಲ್ಲ. ಇನ್ನು, ಸರ್ವ ಸೌಲಭ್ಯಗಳಿಗೂ ಆಧಾರ್ ಸಂಪರ್ಕ ಕಲ್ಪಿಸಬೇಕೆಂಬ ಬಿಜೆಪಿ ಸರಕಾರದ ನಿರ್ದೇಶನವನ್ನಂತೂ ಸುಪ್ರೀಮ್ ಕೋರ್ಟೇ ತಳ್ಳಿ ಹಾಕಿತು. ತ್ರಿವಳಿ ತಲಾಕೂ ಇಂಥದ್ದೇ ಒಂದು ಎಡವಟ್ಟು. ಇದೀಗ ಒಂದೇ ವಾರದಲ್ಲಿ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮೋದಿ ಸರಕಾರ ಮಂಡಿಸಿದೆ. ಹಾಗಂತ, ಪೌರತ್ವ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬುದು ಬಿಜೆಪಿಗೆ ಗೊತ್ತಿರಲಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಸಾಹಸಕ್ಕೆ  ಕೈ ಹಾಕಿದೆ. ಯಾಕೆಂದರೆ, ಈ ಮಸೂದೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮುದಾಯವನ್ನು ಧ್ರುವೀಕರಿಸಬಹುದು. ಮುಸ್ಲಿಮರನ್ನು ದೇಶದಿಂದ ಹೊರಕ್ಕಟ್ಟುತ್ತಿದ್ದೇವೆ ಎಂಬ ಸಂದೇಶವನ್ನು ಸೂಚ್ಯವಾಗಿ ಸಾರಬಹುದು. ಒಂದು ವೇಳೆ,

ವಲಸಿಗರಿಗೆ ನೆಮ್ಮದಿಯನ್ನು ಕೊಡುವುದೇ ಬಿಜೆಪಿಯ ಉದ್ದೇಶವಾಗಿರುತ್ತಿದ್ದರೆ ಅದು 1985ರಲ್ಲಿ ಮಾಡಿಕೊಳ್ಳಲಾಗಿರುವ ಅಸ್ಸಾಂ ಒಪ್ಪಂದವನ್ನು ಯಥೋಚಿತವಾಗಿ ಜಾರಿಗೆ ತರುವುದಕ್ಕೆ ಮುಂದಾಗಬೇಕಿತ್ತು. ನಿಜವಾಗಿ, ವಲಸಿಗರ ಸಮಸ್ಯೆ ಇರುವುದೇ ಅಸ್ಸಾಮ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ. ಇವು ಪಾಕಿಸ್ತಾನ, ಬಾಂಗ್ಲಾ ಮತ್ತು ಅಫಘಾನಿಸ್ತಾನದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಗಡಿಯನ್ನು ಹಂಚಿಕೊಂಡಿರುವುದರಿಂದ ವಲಸಿಗರ ಸಮಸ್ಯೆ ಸ್ವಾಭಾವಿಕ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿಯೇ 1985ರಲ್ಲಿ ಅಸ್ಸಾಂ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ 1971ರ ಮಾರ್ಚ್ 31ರ ವರೆಗೆ  ಭಾರತಕ್ಕೆ ಬಂದು ನೆಲೆಸಿದ ಎಲ್ಲ ಹಿಂದೂ, ಮುಸ್ಲಿಮರೂ ಭಾರತೀಯ ಪೌರತ್ವಕ್ಕೆ ಅರ್ಹರು. ಆದರೆ ಈಗಿನ ಹೊಸ ಪೌರತ್ವ ಮಸೂದೆಯ ಪ್ರಕಾರ 1971 ಮಾರ್ಚ್‍ನ ನಂತರ 2014 ಡಿ. 31ರ ವರೆಗೆ ವಲಸೆ ಬಂದ ಮುಸ್ಲಿಮೇತರ ವಲಸಿಗರು ಮಾತ್ರ ಪೌರತ್ವಕ್ಕೆ ಅರ್ಹರಾಗುತ್ತಾರೆ. ಈಶಾನ್ಯ ರಾಜ್ಯಗಳ ಪ್ರತಿಭಟನೆಗೆ ಮುಖ್ಯ ಕಾರಣವೇ ಇದು. 1971 ಮಾರ್ಚ್ 31ರ ನಂತರ ಬಂದ ಯಾರಿಗೂ ಪೌರತ್ವ ನೀಡಬಾರದು ಎಂಬುದು ಅವುಗಳ ಬೇಡಿಕೆ. ಹಾಗೆ ಪೌರತ್ವ ಕೊಡುವುದರಿಂದ ಅಲ್ಲಿನ ಪ್ರಾದೇಶಿಕ ಅಸ್ಮಿತೆ ಮತ್ತು ಸ್ಥಳೀಯತೆಗೆ ಧಕ್ಕೆ ಬರಬಹುದು, ಬುಡುಕಟ್ಟು ಸಮುದಾಯಗಳ ಬದುಕು-ಭಾವಕ್ಕೆ ಅಪಾಯ ಒದಗಬಹುದು ಎಂಬುದು ಅವುಗಳ ವಾದ. ಅಂದಹಾಗೆ,
ಈ ಮಸೂದೆ ವಿಭಜನವಾದಿ ರಾಜಕಾರಣದ ಕೂಸು ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಅಷ್ಟಕ್ಕೂ, ಪ್ರತಿಭಟನೆಗಿಳಿದಿರುವ ಈಶಾನ್ಯದ ನಾಲ್ಕೈದು ಪುಟ್ಟ ರಾಜ್ಯಗಳಲ್ಲಿ ರಾಜಕೀಯವಾಗಿ ಬಿಜೆಪಿ ಕಳಕೊಳ್ಳುವಂಥದ್ದೇನೂ ಇಲ್ಲ. ಅಲ್ಲಿರುವ ಒಟ್ಟು ಲೋಕಸಭಾ ಸ್ಥಾನಗಳು ಒಂದು ಉತ್ತರ ಪ್ರದೇಶದಷ್ಟೂ ಇಲ್ಲ. ಆದ್ದರಿಂದ ಅಲ್ಲಿನ ಮತದಾರರ ಭಾವನೆಗಳಿಗೆ ಬೆಲೆಕೊಡುವುದಕ್ಕಿಂತ ಉಳಿದ ಭಾರತವನ್ನು ಕೈವಶಮಾಡಿಕೊಳ್ಳುವುದಕ್ಕೆ ಪೂರಕವಾದ ಕ್ರಮ ಕೈಗೊಳ್ಳುವುದೇ ಉತ್ತಮ ಎಂದು ಬಿಜೆಪಿ ಭಾವಿಸಿದೆ. ಪೌರತ್ವ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ತರಾತುರಿಯಿಂದ ಮಂಡಿಸಿ ಪಾಸು ಮಾಡಿಕೊಂಡಿರುವುದು ಇದೇ ಕಾರಣಕ್ಕೆ. ಮುಸ್ಲಿಮರನ್ನು ನಗಣ್ಯರಾಗಿ ಮತ್ತು ಅವಮಾನಿತರಾಗಿ ನಡೆಸಿಕೊಂಡಷ್ಟೂ ತನ್ನ ಓಟ್ ಬ್ಯಾಂಕ್ ವೃದ್ಧಿಸುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿ ಈಗಲೂ ಇದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅತ್ಯಂತ ಕೆಟ್ಟದಾದ ಮತ್ತು ಮುಸ್ಲಿಮ್ ಕುಟುಂಬಗಳ ವಿಭಜನೆಗೆ ಕಾರಣವಾಗಬಹುದಾದ ಕಾನೂನನ್ನು ರಚಿಸಿ ಸುಗ್ರೀವಾಜ್ಞೆಯೊಂದಿಗೆ ಜಾರಿಗೊಳಿಸಿರುವುದೂ ಇದೇ ನಂಬಿಕೆಯ ಕಾರಣದಿಂದ.
ಪೌರತ್ವ ಮಸೂದೆಯ ಮೂಲಕ ಬಿಜೆಪಿ ತಾನು ಬಹುಸಂಸ್ಕೃತಿಯ  ದೇಶವನ್ನಾಳಲು ಅಸಮರ್ಥ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Thursday, 10 January 2019

ತ್ರಿವಳಿ ತಲಾಕ್‍, ಶಬರಿಮಲೆ, ಸುಪ್ರೀಂ ಕೋರ್ಟ್ ಮತ್ತು ನಂಬಿಕೆ



ಶಬರಿಮಲೆ ಮತ್ತು ತ್ರಿವಳಿ ತಲಾಕ್‍ನ ವಿಷಯದಲ್ಲಿ ಕೇಂದ್ರ ಸರಕಾರದ ಉದ್ದೇಶಶುದ್ಧಿಯನ್ನು ಶಂಕಿತಗೊಳಿಸುವ ಮತ್ತು ಅದರ ನಿಲುವನ್ನು ಪ್ರಶ್ನಾರ್ಹಗೊಳಿಸುವ ಸಂದರ್ಭಗಳು ಸೃಷ್ಟಿಯಾಗುತ್ತಲೇ ಇವೆ. ಶಬರಿಮಲೆ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರ ತಂಡದಲ್ಲಿ ಇಂದೂ ಮಲ್ಹೋತ್ರ ಎಂಬ ಮಹಿಳೆಯೂ ಇದ್ದರು. ಅವರು ಈ ಪ್ರಕರಣವನ್ನು ನಂಬಿಕೆಯ ದೃಷ್ಟಿಕೋನದಿಂದ ನೋಡಿದರು. ನಂಬಿಕೆಯ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸದಿರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಆದರೆ ಈ ನಿಲುವನ್ನು ಉಳಿದ ನ್ಯಾಯಾಧೀಶರು ಮಾನ್ಯ ಮಾಡಲಿಲ್ಲ. ಆದ್ದರಿಂದ, ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳಬಹುದು ಎಂಬ ತೀರ್ಪು ಸುಪ್ರೀಮ್ ಕೋರ್ಟಿನಿಂದ ಹೊರಬಿತ್ತು. ಇದಕ್ಕಿಂತ ಒಂದು ವರ್ಷ ಮೊದಲು ತ್ರಿವಳಿ ತಲಾಕ್‍ಗೆ ಸಂಬಂಧಿಸಿಯೂ ಸುಪ್ರೀಮ್ ಕೋರ್ಟು ಇಂಥದ್ದೊಂದು  ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ದೂರು ದಾಖಲಿಸಿದ್ದು ಶಾಯರಾಬಾನು. ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಐವರು ನ್ಯಾಯಾಧೀಶರ ಪೈಕಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರು. ಈ ವಿಷಯದಲ್ಲಿ ಕೋರ್ಟಿನ ಮಧ್ಯಪ್ರವೇಶವನ್ನು ಅವರಿಬ್ಬರೂ ಬಯಸಲಿಲ್ಲ. ಆದರೆ ಉಳಿದ ಮೂವರು ನ್ಯಾಯಾಧೀಶರು ಈ ಅಭಿಪ್ರಾಯಕ್ಕೆ ವಿರುದ್ಧವಿದ್ದುದರಿಂದ ತ್ರಿವಳಿ ತಲಾಕನ್ನು ಅಂತಿಮವಾಗಿ ಅಸಾಂವಿಧಾನಿಕ ಮತ್ತು ಅನೂರ್ಜಿತವೆಂದು ಘೋಷಿಸಲಾಯಿತು. ಇದರರ್ಥ ಏನೆಂದರೆ, ತ್ರಿವಳಿ ತಲಾಕ್ ಸಂವಿಧಾನಬದ್ಧವಲ್ಲ. ಯಾರಾದರೂ ತ್ರಿವಳಿ ತಲಾಕ್ ಹೇಳಿದರೆ ಅದರಿಂದ ವಿಚ್ಛೇದನ ಏರ್ಪಡುವುದೂ ಇಲ್ಲ. ತ್ರಿವಳಿ ತಲಾಕ್ ಹೇಳುವುದರಿಂದ ಪತಿ-ಪತ್ನಿ ಸಂಬಂಧಕ್ಕೆ ಮತ್ತು ಅವರ ಸ್ಥಾನಮಾನಕ್ಕೆ ಧಕ್ಕೆ ಬರುವುದೂ ಇಲ್ಲ. ಆದ್ದರಿಂದ, ಇನ್ನು ವಿಚ್ಛೇದನಕ್ಕೆ ಯಾರೂ ಈ ಕ್ರಮವನ್ನು ಅನುಸರಿಸುವಂತಿಲ್ಲ... ಸುಪ್ರೀಮ್ ಕೋರ್ಟು ಹೇಳಿದ್ದು ಇಷ್ಟೇ. ಆದರೆ,
ಈ ತೀರ್ಪಿನ ಆರಂಭದಿಂದ ಕೊನೆಯ ವರೆಗೆ ಕಣ್ಣಿಗೆ ಎಣ್ಣೆ ಬಿಟ್ಟು ಪರಿಶೀಲಿಸಿದರೂ ಎಲ್ಲೂ ತ್ರಿವಳಿ ತಲಾಕನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಬೇಕೆಂದು ಕೋರ್ಟು ಹೇಳಿದ್ದು ಎಲ್ಲೂ ಸಿಗುವುದಿಲ್ಲ. ತ್ರಿವಳಿ ತಲಾಕ್ ಹೇಳುವ ಪುರುಷನನ್ನು ಮೂರು ವರ್ಷಗಳ ವರೆಗೆ ಜೈಲಿಗೆ ತಳ್ಳುವಂತಹ ‘ತಲಾಕ್ ಮಸೂದೆಯನ್ನು’ ಜಾರಿಗೊಳಿಸಿ ಎಂದು ಕೇಂದ್ರ ಸರಕಾರಕ್ಕಾಗಲಿ, ಪಾರ್ಲಿಮೆಂಟ್‍ಗಾಗಲಿ ಕೋರ್ಟು ಆದೇಶಿಸಿಲ್ಲ. ಪಾರ್ಲಿಮೆಂಟ್‍ನಲ್ಲಿ ಇಂಥದ್ದೊಂದು  ಮಸೂದೆ ಅಂಗೀಕಾರಗೊಳ್ಳದಿದ್ದರೆ ಸುಗ್ರೀವಾಜ್ಞೆಯ ಮೂಲಕವಾದರೂ ಜಾರಿಗೆ ತನ್ನಿ ಎಂದೂ ಅದು ಹೇಳಿಲ್ಲ. ತ್ರಿವಳಿ ತಲಾಕ್ ಕ್ರಮವನ್ನು ಅದು ಅಸಾಂವಿಧಾನಿಕ ಎಂದಷ್ಟೇ ಹೇಳಿದೆ. ಹಾಗೆ ತಲಾಕ್ ಹೇಳುವುದಕ್ಕೆ ಕಾನೂನಿನ ಪ್ರಕಾರ ಮಾನ್ಯತೆ ಇಲ್ಲ ಎಂದು ಇದರರ್ಥ. ಹೀಗಿರುವಾಗ, ಇದನ್ನು ಕ್ರಿಮಿನಲ್ ಅಪರಾಧವಾಗಿ ಕೇಂದ್ರ ಸರಕಾರ ಪರಿವರ್ತಿಸಿದ್ದು ಏಕೆ? ಮುಸ್ಲಿಮ್ ಸಮುದಾಯದ ಮಹಿಳೆಯರ ಮೇಲೆ ಸುಪ್ರೀಮ್ ಕೋರ್ಟಿಗಿಂತಲೂ ಹೆಚ್ಚಾಗಿ ಕೇಂದ್ರ ಸರಕಾರಕ್ಕೆ ‘ಕಾಳಜಿ’ ಮೂಡಲು ಕಾರಣವೇನು? ತ್ರಿವಳಿ ತಲಾಕ್‍ಗೊಳಗಾದ ಮಹಿಳೆ ನ್ಯಾಯ ಕೇಳಿದ್ದು ಸುಪ್ರೀಮ್ ಕೋರ್ಟಿನಲ್ಲಿ. ತಾನು ತ್ರಿವಳಿ ತಲಾಕ್‍ನ ಸಂತ್ರಸ್ತೆ ಎಂದು ಶಾಯರಾ ಬಾನು ಕೋರ್ಟಿನ ಮುಂದೆ ನಿವೇದಿಸಿಕೊಂಡಿದ್ದರು. ನ್ಯಾಯಾಧೀಶರೆಂದರೆ ರಾಜಕಾರಣಿಗಳಲ್ಲವಲ್ಲ. ಯಾವುದೇ ದೂರನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡುವ ಪರಿಪಾಠವೂ ನ್ಯಾಯಾಧೀಶರಿಗಿಲ್ಲ, ಇರಬಾರದು ಕೂಡ. ದೂರುದಾರೆಯ ದೂರಿನಲ್ಲಿರುವ ಅಂಶ ನ್ಯಾಯಾಂಗೀಯ ಪರಿಧಿಗೆ ಒಳಪಡುತ್ತದೋ ಇಲ್ಲವೋ, ದೂರು ಸಮರ್ಪಕವೋ ಅಲ್ಲವೋ, ದೂರಿನ ಮೇಲೆ ವಿಚಾರಣೆ ನಡೆಸಬೇಕೋ ಬೇಡವೋ, ದೂರಿನ ಮೇಲಿನ ವಿಚಾರಣೆಯನ್ನು ಯಾವ ವಿಚಾರಣಾ ಪೀಠಕ್ಕೆ ಒಪ್ಪಿಸಬೇಕು, ಆ ಪೀಠದಲ್ಲಿ ಯಾವ ನ್ಯಾಯಾಧೀಶರಿರಬೇಕು, ಹೆಣ್ಣೆಷ್ಟು-ಗಂಡೆಷ್ಟು ಇತ್ಯಾದಿ ಇತ್ಯಾದಿಗಳು ಕೋರ್ಟಿಗೆ ಮುಖ್ಯವಾಗುತ್ತದೆಯೇ ಹೊರತು ಇನ್ನೇನೂ ಅಲ್ಲ. ದೂರುದಾರರು ಸಂತ್ರಸ್ತರು ಎಂದು ಸಾಬೀತಾದರೆ ಅವರಿಗೆ ನ್ಯಾಯದಾನ ಮಾಡಬೇಕು, ಅನ್ಯಾಯ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು... ನ್ಯಾಯಾಲಯದಲ್ಲಿ ನಡೆಯುವ ನ್ಯಾಯ ಪ್ರಕ್ರಿಯೆಯ ಮೂಲ ಉದ್ದೇಶ ಇದು. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಶಾಯರಾ ಬಾನು ಅವರ ದೂರನ್ನು ವಿಚಾರಣೆಗೆ ಎತ್ತಿಕೊಂಡಿದೆ. ಅವರ ಅಹವಾಲನ್ನು ಆಲಿಸಿದೆ. ಬಳಿಕ ನ್ಯಾಯವನ್ನೂ ನೀಡಿದೆ. ಹಾಗಾದರೆ, ಈ ನ್ಯಾಯ ವಿಧಾನ ಸರಿಯಲ್ಲ ಅನ್ನುವುದು ಕೇಂದ್ರ ಸರಕಾರದ ವಾದವೇ? ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷ ಜೈಲಿಗಟ್ಟುವ ಸುಗ್ರೀವಾಜ್ಞೆಯು ಕೊಡುವ ಸಂದೇಶವಾದರೂ ಏನು? ಸುಪ್ರೀಮ್ ಕೋರ್ಟು ಇಡೀ ಪ್ರಕರಣವನ್ನು ನೋಡಿದ್ದು ಸಿವಿಲ್ ಪ್ರಕರಣದ ರೂಪದಲ್ಲಿ. ಆದರೆ ಕೇಂದ್ರ ಸರಕಾರ ಅದಕ್ಕೆ ಕ್ರಿಮಿನಲ್ ಸ್ವರೂಪವನ್ನು ನೀಡಿತು. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ಒಂದುವೇಳೆ, ಅದುವೇ ಬಯಕೆಯಾಗಿದ್ದರೆ, ತೀರ್ಪಿನಲ್ಲಿ ಅದನ್ನೂ ಹೇಳಬೇಕಿತಲ್ಲವೇ? ತ್ರಿವಳಿಯನ್ನು ನಿಗ್ರಹಿಸುವುದಕ್ಕಾಗಿ ಶಿಕ್ಷಾ ಕಾನೂನೊಂದನ್ನು ಜಾರಿಗೊಳಿಸಿ ಎಂದು ಆದೇಶಿಸಬೇಕಿತ್ತಲ್ಲವೇ? ಅಂದಹಾಗೆ,
ತ್ರಿವಳಿಯನ್ನು ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಸುಪ್ರೀಮ್ ಕೋರ್ಟು ಸ್ಪಷ್ಟವಾಗಿ ಹೇಳಿರುವಾಗ ಇಷ್ಟು ಸಾಕಾಗಲ್ಲ ಎಂದು ಕೇಂದ್ರ ಸರಕಾರ ತೀರ್ಮಾನಿಸಿದುದು ಯಾವ ಕಾರಣಕ್ಕೆ? ಯಾರ ಹಿತಾಸಕ್ತಿಯನ್ನು ಕಾಪಾಡಲು? ಅಲ್ಲದೇ, ತ್ರಿವಳಿ ತಲಾಕನ್ನು ಖಂಡಿಸಿ ಪ್ರತಿಭಟಿಸಿದ ಯಾವ ಮುಸ್ಲಿಮ್ ಮಹಿಳೆಯರೂ ಅದನ್ನು ಕ್ರಿಮಿನಲ್ ಪ್ರಕರಣವಾಗಿಸಬೇಕೆಂದು ಬೇಡಿಕೆಯಿಟ್ಟಿರಲಿಲ್ಲ. ಪತಿಯನ್ನು ಜೈಲಿಗಟ್ಟುವ ಕಾನೂನು ಜಾರಿಗೆ ತನ್ನಿ ಎಂದು ಒತ್ತಾಯಿಸಿರಲಿಲ್ಲ. ಸ್ವತಃ ಶಾಯರಾ ಬಾನು ಕೂಡ ಇಂಥದ್ದೊಂದು ಬೇಡಿಕೆಯನ್ನು ಇಟ್ಟಿರಲಿಲ್ಲ. ಹಾಗಂತ, ಯಾರೂ ಬೇಡಿಕೆ ಇಟ್ಟಿರದಿದ್ದರೂ ಮತ್ತು ಮುಸ್ಲಿಮ್ ಮಹಿಳೆಯರ ಬಯಕೆ ಅದಾಗಿರದಿದ್ದರೂ ಅದರ ಅಗತ್ಯ ಇದೆ ಎಂದು ಸುಪ್ರೀಮ್ ಕೋರ್ಟಿಗೆ ಅನಿಸಿದ್ದಿದ್ದರೆ ಖಂಡಿತ ಅಂಸಾವಿಧಾನಿಕ ಮತ್ತು ಅನೂರ್ಜಿತ ಎಂದು ಹೇಳುವುದರ ಜೊತೆಜೊತೆಗೇ ‘ಇಷ್ಟು ವರ್ಷಗಳ ಶಿಕ್ಷಾರ್ಹ ಅಪರಾಧ’ ಎಂದೂ ಹೇಳುತ್ತಿತ್ತು. ಆದರೆ ಸುಪ್ರೀಮ್ ಕೋರ್ಟು ಹಾಗೆ ತೀರ್ಪು ನೀಡುವುದು ಬಿಡಿ, ಸೂಚ್ಯವಾಗಿಯೂ ಹೇಳಲಿಲ್ಲ. ಇದರರ್ಥವೇನು? ತ್ರಿವಳಿ ತಲಾಕ್ ಕ್ರಮವನ್ನು ಮುಸ್ಲಿಮ್ ಸಮುದಾಯ ತಿರಸ್ಕರಿಸಬೇಕು ಮತ್ತು ವಿಚ್ಛೇದನದ ಸಾಂವಿಧಾನಿಕ ರೂಪಕ್ಕೆ ಮರಳಬೇಕು ಎಂದು ಸುಪ್ರೀಮ್ ಕೋರ್ಟು ಬಯಸಿದೆ ಎಂದೇ ಅಲ್ಲವೇ? ಸಮುದಾಯದ ಒಳಗೆ ಈ ಬಗೆಯ ಜಾಗೃತಿ ಮೂಡಲಿ ಮತ್ತು ಸ್ವತಃ ಸಮುದಾಯವೇ ಈ ತೀರ್ಪಿನ ಆಧಾರದಲ್ಲಿ ಸುಧಾರಣೆಗೊಳ್ಳಲಿ ಎಂದಲ್ಲವೇ?
ಶಬರಿಮಲೆಯನ್ನು ನಂಬಿಕೆಯ ಪ್ರಶ್ನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಅದಕ್ಕಾಗಿ ನ್ಯಾಯಾಧೀಶೆ ಇಂದು ಮಲ್ಹೋತ್ರಾ ಅವರ ಅಭಿಪ್ರಾಯದ ಮೇಲೆ ಹೆಚ್ಚಿನ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲ ದರ್ಶನಕ್ಕೆ ಅರ್ಹರು’ ಎಂಬ ಕೋರ್ಟಿನ ತೀರ್ಪನ್ನು ವಿರೋಧಿಸುತ್ತಿರುವ ಬಿಜೆಪಿಯ ನಡೆಯನ್ನು ಅವರು ಈ ಮೂಲಕ ಸಮರ್ಥಿಸಿಕೊಂಡಿz್ದÁರೆ. ಆದರೆ, ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅವರು ಈ ಮಾನದಂಡವನ್ನು ಅಳವಡಿಸಿಕೊಳ್ಳುವುದೇ ಇಲ್ಲ. ತ್ರಿವಳಿ ತಲಾಕನ್ನು ಧಾರ್ಮಿಕ ಚೌಕಟ್ಟಿನಲ್ಲಿಟ್ಟು ನೋಡಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ಅಬ್ದುಲ್ ನಝೀರ್‍ ರ ಅಭಿಪ್ರಾಯಗಳ ಮೇಲೆ ಇನ್ನಷ್ಟು ಚರ್ಚೆ ನಡೆಯಬೇಕೆಂದು ಅವರು ಎಲ್ಲೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಒಳಗೆ ಈ ಬಗ್ಗೆ ಜಾಗೃತಿ ನಡೆಯಲಿ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿಲ್ಲ. ಅದರ ಬದಲು ಸುಪ್ರೀಮ್ ಕೋರ್ಟಿನ ಆಶಯವನ್ನೇ ತಪ್ಪಾಗಿ ವ್ಯಾಖ್ಯಾನಿಸುವ ಸಾಹಸಕ್ಕೆ ಅವರು ಮುಂದಾಗಿದ್ದಾರೆ. ಸುಪ್ರೀಮ್ ಕೋರ್ಟು ಬಯಸದೇ ಇರುವ ಕ್ರಿಮಿನಲ್ ಕಾನೂನೊಂದನ್ನು ಏಕಪಕ್ಷೀಯವಾಗಿ ರೂಪಿಸಿ ಸುಗ್ರೀವಾಜ್ಞೆಯ ಮೂಲಕ ಅವರು ಅನುಷ್ಠಾನಕ್ಕೆ ತಂದಿದ್ದಾರೆ. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ದೂರುದಾರೆ ಶಾಯರಾ ಬಾನು ಅವರ ಬಯಕೆಯೂ ಅಲ್ಲ. ಮುಸ್ಲಿಮ್ ಸಮುದಾಯದ ಬೇಡಿಕೆಯೂ ಅಲ್ಲ. ಆದ್ದರಿಂದ ಇದು ಸಂಚು, ದಾಷ್ಟ್ರ್ಯತನ, ದುರುದ್ದೇಶ ನೀತಿ, ಕ್ರೌರ್ಯ, ಅರಾಜಧರ್ಮ, ಇಬ್ಬಂದಿತನ.
   ಪ್ರಧಾನಿ ಮೋದಿಯವರು ರಾಜಧರ್ಮವನ್ನು ಪಾಲಿಸುತ್ತಿಲ್ಲ ಅನ್ನುವುದಕ್ಕೆ ಶಬರಿಮಲೆ ಮತ್ತು ತ್ರಿವಳಿ ತಲಾಕ್ ಮತ್ತೊಂದು ಪುರಾವೆ.

Monday, 31 December 2018

ಬಿಜೆಪಿ ಮತ್ತು ಮಾಧ್ಯಮ ಹೆಣೆದ ಸಂಚೇ ಲೋಕಪಾಲ?




ನಾ ಖಾವೂಂಗಾ ನಾ ಖಾನೆದೂಂಗ ಎಂಬ ಪದೋಕ್ತಿಯನ್ನು ಉರುಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಆ ಬಳಿಕ ಆ ಮಾತನ್ನು ಎಷ್ಟರ ವರೆಗೆ ನಿರ್ಲಕ್ಷಿಸಿದರು ಅನ್ನುವುದಕ್ಕೆ ಆರ್.ಟಿ.ಐ. (ಮಾಹಿತಿ ಹಕ್ಕು ಕಾಯಿದೆ) ಉತ್ತರ ನೀಡಿದೆ. ಈ ಉತ್ತರ ಆಘಾತಕಾರಿಯಾದುದು. ಭ್ರಷ್ಟಾಚಾರವನ್ನು ಖಂಡಿಸಿ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ ಅಧಿಕಾರಕ್ಕೇರಿದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನು ಹೇಗೆ ಮರೆತಿದೆ ಎಂಬುದನ್ನು ಆರ್‍ ಟಿ ಐ ಮೂಲಕ ಲಭ್ಯವಾದ ಮಾಹಿತಿಗಳು ದೇಶದ ಮುಂದಿಟ್ಟಿದೆ.
2013-14ರಲ್ಲಿ ಈ ದೇಶದಲ್ಲಿ ಅಭೂತಪೂರ್ವವಾದ ಬೆಳವಣಿಗೆಗಳು ನಡೆದುವು. ಅದರಲ್ಲಿ ಒಂದು- ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವಾದರೆ, ಇನ್ನೊಂದು- ಬಾಬಾ ರಾಮ್‍ದೇವ್ ಅವರ ಕಪ್ಪು ಹಣ ವಾಪಸಾತಿ ಪ್ರತಿಭಟನೆ. ಈ ಸಂದರ್ಭದಲ್ಲಿ ಮಸೀಹನಂತೆ ಫೋಸು ಕೊಟ್ಟದ್ದು ಬಿಜೆಪಿ. ಅದು ಅಣ್ಣಾ ಹಜಾರೆಯನ್ನು ಬೆಂಬಲಿಸಿತು. ಲೋಕ್‍ಪಾಲ್ ಅನ್ನು ಜಾರಿಗೊಳಿಸಬೇಕೆಂಬ ಹಜಾರೆಯವರ ಬೇಡಿಕೆಗೆ ಬೆಂಬಲ ಸೂಚಿಸಿತು. ಕಪ್ಪು ಹಣ ವಾಪಸಾತಿಯ ಬಗೆಗಂತೂ ಅದು ಕೊಟ್ಟ ಭರವಸೆ ಮತ್ತು ನೀಡಿದ ಮಾಹಿತಿಗಳು ರೋಮಾಂಚನಕಾರಿಯಾದುದು. 2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರು ಕಪ್ಪು ಹಣದ ಬಗ್ಗೆ ಏನೆಲ್ಲ ಮಾಹಿತಿಗಳನ್ನು ದೇಶದ ಮುಂದೆ ಇಟ್ಟಿದ್ದರೋ ಅದನ್ನು ಎಲ್ಲ ರೀತಿಯಲ್ಲೂ ಮೀರಿಸುವ ಮಾಹಿತಿಯನ್ನು ನರೇಂದ್ರ ಮೋದಿಯವರು ದೇಶದ ಮುಂದಿಟ್ಟರು. ಅಧಿಕಾರಕ್ಕೆ ಬಂದ 100 ದಿನದೊಳಗೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ತುಂಬುವುದಾಗಿ ಅವರು ಭರವಸೆ ನೀಡಿದರು. ಅಡ್ವಾಣಿಯವರಿಗೆ ಇಷ್ಟು ಧೈರ್ಯವಿರಲಿಲ್ಲ. ಅವರು ಕಪ್ಪು ಹಣದಿಂದ ಒಂದೊಂದು ಗ್ರಾಮಕ್ಕೆ ಎಷ್ಟೆಷ್ಟು ಅನುದಾನವನ್ನು ಒದಗಿಸಬಹುದು ಎಂದಷ್ಟೇ ಹೇಳಿದ್ದರು. ಮೋದಿ ನೇತೃತ್ವದ ಬಿಜೆಪಿ ಬಾಬಾ ರಾಮ್‍ದೇವ್‍ರನ್ನೂ ಬೆಂಬಲಿಸಿತು. ಹೀಗೆ ಲೋಕಪಾಲವನ್ನು ಜಾರಿಗೆ ತರುವ ಮತ್ತು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿಯನ್ನು ತುಂಬುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಸದ್ಯ ಅವೆರಡನ್ನೂ ಹೇಗೆ ನಿರ್ಲಕ್ಷಿಸಿದೆ ಎಂದರೆ, ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯು ಈವರೆಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ತಮಾಷೆ ಏನೆಂದರೆ, ಈ ಸಮಿತಿಯ ರಚನೆಯಾದದ್ದೇ  2018 ಮಾರ್ಚ್‍ನಲ್ಲಿ. ಇದಕ್ಕೂ ಒಂದು ಕಾರಣ ಇದೆ. ಈ ಬಗ್ಗೆ ಸುಪ್ರೀಮ್ ಕೋರ್ಟಿಗೆ ವ್ಯಕ್ತಿಯೋರ್ವರು ತಕರಾರು ಅರ್ಜಿ ಸಲ್ಲಿಸಿದುದನ್ನು ಪರಿಗಣಿಸಿ ಇಂಥದ್ದೊಂದು ಸಮಿತಿಯನ್ನು ತರಾತುರಿಯಿಂದ ರಚಿಸಲಾಗಿತ್ತು. ಇದರರ್ಥ ಏನು? ಭ್ರಷ್ಟಾಚಾರವನ್ನು ಚುನಾವಣಾ ಅಜೆಂಡಾ ಆಗಿಸಿಕೊಂಡೇ ಅಧಿಕಾರ ಪಡೆದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನೇ ನಿರ್ಲಕ್ಷಿಸಿತು ಎಂದಲ್ಲವೇ? ಯಾಕೆ ಈ ದೇಶದ ಮಾಧ್ಯಮಗಳು ಈ ಬಗ್ಗೆ ಒತ್ತಡವನ್ನು ಹೇರಲಿಲ್ಲ? ಅಣ್ಣಾ ಹಜಾರೆಯವರು ಯಾಕೆ ಪರಿಣಾಮಕಾರಿ ಚಳವಳಿಯನ್ನು ನಡೆಸಲಿಲ್ಲ ಮತ್ತು ಮಾಧ್ಯಮಗಳೇಕೆ ಅಣ್ಣಾ ಅವರ ಆ ಬಳಿಕದ ಸತ್ಯಾಗ್ರಹಕ್ಕೆ ಬೆಂಗಾವಲಾಗಿ ನಿಲ್ಲಲಿಲ್ಲ? ಹಾಗಿದ್ದರೆ, 2013-14ರ ಭ್ರಷ್ಟಾಚಾರ ವಿರೋಧಿ ಹೋರಾಟವೆಂಬುದು ಒಂದು ಸಂಚಾಗಿತ್ತೇ? ಮನಮೋಹನ್ ಸಿಂಗ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಬಿಜೆಪಿ-ಹಜಾರೆ-ರಾಮ್‍ದೇವ್ ಮತ್ತು ಮಾಧ್ಯಮದ ಒಂದು ವರ್ಗ ಈ ಸಂಚಿನ ಹಿಂದಿತ್ತೇ? ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಯಾಕೆ ಮನವಿ ಸಲ್ಲಿಸಬಾರದು?
2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಬಿಜೆಪಿ, ಇವತ್ತು ಆ ಪ್ರಕರಣವನ್ನು ಹೇಗೆ ನಿಭಾಯಿಸಿದೆ ಅನ್ನುವುದೂ ದೇಶಕ್ಕೆ ಗೊತ್ತು. ಆರೋಪಿಗಳೆಲ್ಲ ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ಮೇಲೆ ಮತದಾರರು 2014ರ ಚುನಾವಣೆಯಲ್ಲಿ ಮುನಿಸಿಕೊಳ್ಳುವುದಕ್ಕೆ 1 ಲಕ್ಷ ಕೋಟಿ ರೂಪಾಯಿ ಹಗರಣವಾಗಿ ಬಿಂಬಿತವಾದ 2ಜಿ ಸ್ಪೆಕ್ಟ್ರಂಗೆ ಬಹುಮುಖ್ಯ ಪಾತ್ರ ಇದೆ. ಆದರೆ, ಇವತ್ತು ಅದೊಂದು ಹಗರಣವೇ ಅಲ್ಲವೇನೋ ಅನ್ನುವ ಭಾವನೆ ಮೂಡುವಂತೆ ಬೆಳವಣಿಗೆಗಳು ನಡೆಯುತ್ತಿವೆ. ಹಾಗಿದ್ದರೆ, 2ಜಿ ಸ್ಪೆಕ್ಟ್ರಂನ ಬಗ್ಗೆ 2013-14ರಲ್ಲಿ ಹೇಳಲಾಗಿರುವುದೆಲ್ಲ ಸುಳ್ಳೇ? ಸುದ್ದಿ ಮನೆಯ ಡೆಸ್ಕ್ ರೂಂನಲ್ಲಿ ಕುಳಿತು ಕಟ್ಟಿದ ಕತೆಗಳೇ ಅವೆಲ್ಲ? ಬಿಜೆಪಿ ಜೊತೆ ಮಾಧ್ಯಮದ ಒಂದು ವರ್ಗವೂ ಸೇರಿಕೊಂಡು ಇಂಥದ್ದೊಂದು ಸುಳ್ಳು ಕತೆಯನ್ನು ಹೆಣೆದವೇ? ಯಾಕೆ ಇವತ್ತು ಮಾಧ್ಯಮಗಳು ಮಾತಾಡುತ್ತಿಲ್ಲ? ಟಿವಿಯಲ್ಲಿ ಚರ್ಚೆ, ವಿಶ್ಲೇಷಣೆ, ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು ಪ್ರಸಾರವಾಗುತ್ತಿಲ್ಲ? ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಅನ್ನುವುದೂ ಚುನಾವಣಾ ಗಿಮಿಕ್ಕೇ? ಲೋಕಪಾಲ ಅನ್ನುವುದೂ ಚುನಾವಣಾ ತಂತ್ರವೇ? ಕಪ್ಪು ಹಣ ಅನ್ನುವುದೂ ಜುಮ್ಲಾವೇ?
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ನರೇಂದ್ರ ಮೋದಿಯವರು ಈ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗಳ ಸಮಯದಲ್ಲಂತೂ ಸರಣಿ ಭಾಷಣಗಳನ್ನು ನೀಡಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಭ್ರಷ್ಟಾಚಾರವನ್ನು ಒಂದು ಇಶ್ಯೂ ಆಗಿ ಅವರು ಎತ್ತಿಕೊಂಡದ್ದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಸರಕಾರವನ್ನು ಅವರು 10 ಪರ್ಸೆಂಟ್ ಸರಕಾರ ಎಂದು ಮೂದಲಿಸಿದ್ದರು. ವ್ಯಂಗ್ಯ ಏನೆಂದರೆ, ಆಗಲೂ ಕೇಂದ್ರದಲ್ಲಿ ಲೋಕಪಾಲ ಖಾಲಿ ಬಿದ್ದಿತ್ತು. ಕನಿಷ್ಠ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಕ್ಕಾಗಿ ಒಂದು ಸಮಿತಿಯನ್ನೂ ಆ ಸಮಯದಲ್ಲಿ ಅವರು ರಚಿಸಿರಲಿಲ್ಲ. ಆದರೂ ಅವರು ಭ್ರಷ್ಟಾಚಾರ ನಿರ್ಮೂಲನೆಯ ಕುರಿತಂತೆ ಮಾತಾಡುತ್ತಿದ್ದಾರೆ. ಮಾಧ್ಯಮಗಳು ಅದನ್ನು ವರದಿ ಮಾಡುತ್ತಲೂ ಇವೆ. ಒಂದುವೇಳೆ, ಭ್ರಷ್ಟಾಚಾರದ ನಿರ್ಮೂಲನೆಗೆ ಲೋಕಪಾಲದ ಅಗತ್ಯ ಇಲ್ಲವೆಂದಾದರೆ, ಅದು ಮನಮೋಹನ್ ಸಿಂಗ್‍ರ ಕಾಲದಲ್ಲೂ ಅನಗತ್ಯ ಆಗಬೇಕಿತ್ತಲ್ಲವೇ? ಲೋಕಪಾಲ ಇಲ್ಲದೆಯೇ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎಂದು ಬಿಜೆಪಿ ಹೇಳಬೇಕಿತ್ತಲ್ಲವೇ? ಧರಣಿ ನಡೆಸಬೇಡಿ ಎಂದು ಅಣ್ಣಾ ಹಜಾರೆಯವರಲ್ಲೂ ಅದು ಕೋರಬೇಕಿತ್ತಲ್ಲವೇ? ಆದರೆ ಆ ಸಂದರ್ಭದಲ್ಲಿ ಲೋಕಪಾಲವೇ ಪರಿಹಾರ ಎಂಬ ರೀತಿಯಲ್ಲಿ ಮಾತಾಡಿದ ಬಿಜೆಪಿಯು ಈಗ ಆ ಬಗ್ಗೆ ಗಮನವನ್ನೇ ಹರಿಸಿಲ್ಲ ಅಂದರೆ ಏನರ್ಥ? ಅಧಿಕಾರಕ್ಕೇರಿದ ನಾಲ್ಕೂವರೆ ವರ್ಷಗಳ ಬಳಿಕವೂ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಮಿತಿಯ ಸಭೆಯೇ ನಡೆದಿಲ್ಲವೆಂದರೆ ಏನರ್ಥ?
2014ರ ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಲೋಕಪಾಲ ಮಸೂದೆ ಮತ್ತು ಕಪ್ಪು ಹಣ- ಈ ಎರಡರಲ್ಲೂ ಬಿಜೆಪಿ ಇವತ್ತು ಗಾಢ ವೈಫಲ್ಯವನ್ನು ಕಂಡಿದೆ. ಈ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಈ ಎರಡಕ್ಕೂ ಪಾತ್ರ ಇದೆ. ಆದರೆ, ಮೋದಿಯವರ ಅಧಿಕಾರದ ಅವಧಿ ಕೊನೆಗೊಳ್ಳುತ್ತಾ ಬರುತ್ತಿರುವ ಈ ಹೊತ್ತಿನಲ್ಲಿ ಈ ಎರಡನ್ನೂ ಪರಿಶೀಲನೆಗೆ ಒಡ್ಡಿದರೆ, ನಿರಾಶೆಯ ಜೊತೆಗೇ ಪ್ರಶ್ನೆಗಳೂ ಕಾಡುತ್ತವೆ. ಭ್ರಷ್ಟಾಚಾರ ನಿರ್ಮೂಲನೆಗೂ ಬಿಜೆಪಿಗೂ ಸಂಬಂಧ ಏನು? ಬಿಜೆಪಿ ಅಧಿಕಾರದಲ್ಲಿರುವ ಯಾವೆಲ್ಲ ರಾಜ್ಯಗಳು ಭ್ರಷ್ಟಾಚಾರ ಮುಕ್ತವಾಗಿವೆ? ಬಿಜೆಪಿಯ ಯಾವೆಲ್ಲ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ? ಯಾರಿಗೆಲ್ಲ ಶಿಕ್ಷೆಯಾಗಿದೆ? ವ್ಯಾಪಂ ಹಗರಣ ಎಷ್ಟು ಕೋಟಿಯದು? ಅದರಲ್ಲಿ ಭಾಗಿಯಾದ ಬಿಜೆಪಿಯ ನಾಯಕರುಗಳೆಲ್ಲ ಯಾರ್ಯಾರು? ಶವಪೆಟ್ಟಿಗೆ ಹಗರಣ ಯಾರ ಅಧಿಕಾರಾವಧಿಯಲ್ಲಿ ನಡೆದಿದೆ? ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನೋಟಿನ ಕಂತೆಯೊಂದಿಗೆ ಕಾಣಿಸಿಕೊಂಡ ಬಂಗಾರು ಲಕ್ಷ್ಮಣ್ ಯಾವ ಪಕ್ಷದವರು? ಈ ಪಟ್ಟಿ ಇನ್ನೂ ಉದ್ದ ಇದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‍ನ ಮೇಲೆ ಏನೆಲ್ಲ ಆರೋಪಗಳಿವೆಯೋ ಆ ಎಲ್ಲ ಆರೋಪಗಳೂ ಇವತ್ತು ಬಿಜೆಪಿಯ ಮೇಲೂ ಇದೆ. ಬಹುದೀರ್ಘಕಾಲ ಆಳಿದ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್‍ನಿಂದಾದ ಹಗರಣಗಳ ಪಟ್ಟಿ ಉದ್ದ ಇದೆ ಮತ್ತು ಬಿಜೆಪಿಯ ಆಡಳಿತಾವಧಿ ಹೃಸ್ವವಾಗಿದ್ದರೂ ಹಗರಣಗಳ ವ್ಯಾಪ್ತಿಯಲ್ಲಿ ಆ ಹೃಸ್ವತನವೇನೂ ಕಾಣಿಸುತ್ತಿಲ್ಲ. ಸಣ್ಣ ಅವಧಿಯಲ್ಲಿ ಹಗರಣಗಳ ಮಟ್ಟಿಗೆ ದೊಡ್ಡದೊಂದು ಸಾಧನೆಯನ್ನು ಮಾಡಿದ ಕೀರ್ತಿ ಬಿಜೆಪಿಗಿದೆ. ಹೀಗಿರುವಾಗ, ಲೋಕಪಾಲರನ್ನು ಅದು ನೇಮಿಸುತ್ತದೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂದು ನಾವು ನಿರೀಕ್ಷಿಸುವುದು ಹೇಗೆ? ನಿಜವಾಗಿ,
ಬಿಜೆಪಿ ಏನು ಅನ್ನುವುದಕ್ಕೆ ಲೋಕಪಾಲವೇ ಅತ್ಯುತ್ತಮ ಉದಾಹರಣೆ.

Friday, 21 December 2018

ಕಿಚ್ಚುಗತ್ತಿ ಮಾರಮ್ಮ, ಗಂಗೆ ಮತ್ತು ಗೋಪಾಲದಾಸ



ಚಾಮರಾಜನಗರದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೂ ಉತ್ತರ ಭಾರತದ ಗಂಗಾ ನದಿಗೂ ನೇರವಾಗಿಯೋ ಪರೋಕ್ಷವಾಗಿಯೋ ಆಧ್ಯಾತ್ಮಿಕವಾದ ಸಂಬಂಧ ಇದೆ. ವಿಷಾದ ಏನೆಂದರೆ, ಮಾರಮ್ಮ ಗುಡಿಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿ ಸಾವಿಗೀಡಾಗುವಾಗ ಅತ್ತ ಗಂಗೆಯ ತಟದಲ್ಲಿ ಸತ್ಯಾಗ್ರಹ ನಿರತ ಸಾಧುಗಳು ನಾಪತ್ತೆಯಾಗುತ್ತಿದ್ದಾರೆ.
ಗಂಗೆಗೂ ಸಾಧುಗಳಿಗೂ ಅವಿನಾಭಾವ ನಂಟು ಇದೆ. ಗಂಗೆ ಪವಿತ್ರಳು ಅನ್ನುವ ನಂಬಿಕೆ ಹಿಂದೂಗಳದ್ದು. ಆದ್ದರಿಂದಲೇ, ಗಂಗೆಯ ಪಾವಿತ್ರ್ಯಕ್ಕೆ ಧಕ್ಕೆ ತರಬಹುದಾದ ಯೋಜನೆಗಳ ವಿರುದ್ಧ ಅವರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಪರಿಸರ ತಜ್ಞನಾಗಿ ಗುರುತಿಸಿಕೊಂಡಿದ್ದ ಮತ್ತು ಆ ಬಳಿಕ ಸನ್ಯಾಸಿಯಾಗಿ ಪರಿವರ್ತಿತರಾದ ಜಿ.ಡಿ. ಅಗರ್ವಾಲ್ ಎಂಬವರು ಉಪವಾಸ ಸತ್ಯಾಗ್ರಹ ನಿರತರಾಗಿರುತ್ತಾ ಕಳೆದ ವರ್ಷದ ಅಕ್ಟೋಬರ್ 11 ರಂದು ಸಾವಿಗೀಡಾದರು. ಗಂಗಾ ನದಿಯ ವಿವಿಧ ಉಪನದಿಗಳ ಮೇಲೆ ಸರಕಾರಿ ಯೋಜನೆಗಳು ಜಾರಿಯಾಗುವುದನ್ನು ಮತ್ತು ಮರಳು ಹಾಗೂ ಗಣಿಗಾರಿಕೆಯನ್ನು ವಿರೋಧಿಸಿ ಅವರು ಸಾವಿಗಿಂತ 5 ತಿಂಗಳ ಮೊದಲೇ ಉತ್ತರಾಖಂಡದ ಮತ್ರಿ ಸದನ್ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗಂಗೆ ಕಲುಷಿತಗೊಂಡಿರುವುದಕ್ಕೆ ಗಂಗೆಯ ಉಪನದಿಗಳಾದ ಅಲಕ್‍ನಂದಾ, ಭಾಗೀರಥಿ, ಮಂದಾಕಿನಿ, ಪಿಂದಾಕ ಇತ್ಯಾದಿಗಳ ಮೇಲೆ ಮರಳುಗಾರಿಕೆ, ಗಣಿಗಾರಿಕೆ ಮತ್ತು ಅಣೆಕಟ್ಟುಗಳ ನಿರ್ಮಾಣದಂಥ ಸರಕಾರಿ ಯೋಜನೆಗಳೇ ಕಾರಣ ಅನ್ನುವುದು ಅಗರ್ವಾಲ್‍ರೂ ಸೇರಿದಂತೆ ಅನೇಕ ಸಾಧುಗಳ ವಾದ. ಪರಿಸರ ತಜ್ಞರೂ ಇವರ ಜೊತೆ ನಿಂತಿದ್ದಾರೆ. ಅಣೆಕಟ್ಟುಗಳನ್ನು ಕಟ್ಟಿ ಹೈಡ್ರೋ ಪವರ್ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಕ್ಕೆ ಮುಂದಾಗಿರುವುದನ್ನು ಅಪಾಯಕಾರಿ ಎಂದು ಅವರು ಹೇಳುತ್ತಿದ್ದಾರೆ. ಪರಿಸರ ತಜ್ಞರಾಗಿದ್ದ ಅಗರ್ವಾಲ್ ಅವರು ಸಾಧುವಾಗಿ ಪರಿವರ್ತಿತವಾದದ್ದರ ಹಿಂದೆ ಇದರ ಪ್ರಭಾವವೂ ಇದೆ. ಅವರನ್ನು ಉತ್ತರಾಖಂಡ್ ಸರಕಾರ ಸಾಯಲು ಬಿಟ್ಟಿತು. ಇದೀಗ ಗೋಪಾಲ ದಾಸ್ ಎನ್ನುವ ಇನ್ನೋರ್ವ ಸಾಧುವೂ ನಾಪತ್ತೆಯಾಗಿದ್ದಾರೆ. ಗಂಗೆಯ ನದೀ ಪಾತ್ರದಲ್ಲಿ ಹೈಡ್ರೋಪವರ್ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿರುವುದನ್ನು ಪ್ರತಿಭಟಿಸಿ ಜೂನ್ 24 ರಿಂದ ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಅವರು ಉಪವಾಸ ಪ್ರಾರಂಭಿಸಿದ್ದರು. ಡಿಸೆಂಬರ್ 4 ರಂದು ಅವರನ್ನು ಪೋಲೀಸರು ಬಲವಂತದಿಂದ ಎತ್ತಿಕೊಂಡು ಹೋಗಿ ಡೆಹ್ರಾಡೂನಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಡಿ. 6 ರ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಕೊಲ್ಲಲಾಗಿದೆ ಎಂದು ಮತ್ರಿ ಸದನ್ ಆಶ್ರಮದ ಸ್ವಾಮಿ ಶಿವಾನಂದ್ ಹೇಳುತ್ತಾರೆ. ಇದೀಗ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಗೋಪಾಲ್ ದಾಸ್ ಅವರ ತಾಯಿ ಶಕುಂತಲಾ ದೇವಿ ಉಪವಾಸ ಕೂತಿದ್ದಾರೆ.
ಗಂಗೆ ಮತ್ತು ಮಾರಮ್ಮ ಗುಡಿ ಇವು ಎರಡೂ ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಬೇರೆ ಬೇರೆ ಭಕ್ತರನ್ನು ಹೊಂದಿರುವ ಎರಡು ಶಕ್ತಿ ಕೇಂದ್ರಗಳು. ಎರಡಕ್ಕೂ ಮಹತ್ವ ಲಭಿಸಿರುವುದು ಆಧ್ಯಾತ್ಮಿಕ ಕಾರಣದಿಂದ. ನಿಜವಾಗಿ, ಆಧ್ಯಾತ್ಮಿಕತೆಯಲ್ಲಿ ಎರಡು ಬಗೆಯಿದೆ. ಒಂದು: ಮುಗ್ಧ ಭಕ್ತರು. ಇನ್ನೊಂದು ಆಧ್ಯಾತ್ಮಿಕ ಕೇಂದ್ರವನ್ನು ನಿಯಂತ್ರಿಸುವವರು. ಮಚ್ಚುಗತ್ತಿ ದೇವಾಲಯಕ್ಕೂ ಇದು ಅನ್ವಯಿಸುತ್ತದೆ. ಒಂದು ಕಡೆ ಮುಗ್ಧ ಭಕ್ತರಿದ್ದರೆ, ಇನ್ನೊಂದು ಕಡೆ ಈ ದೇವಾಲಯವನ್ನು ನಿಯಂತ್ರಿಸುವವರ ಮೇಲೆ ಭೂ ಅತಿಕ್ರಮಣ, ಸರಕಾರಿ ಜಮೀನು ಒತ್ತುವರಿ ಇತ್ಯಾದಿ  ಆರೋಪಗಳಿವೆ. ಭಕ್ತರ ಹರಿವು ಹೆಚ್ಚಾದಂತೆಯೇ ಕಾಣಿಕೆಗಳ ಸಂಗ್ರಹವೂ ಅಧಿಕವಾಗುತ್ತದೆ. ಭಕ್ತರನ್ನು ಆಕರ್ಷಿಸುವುದಕ್ಕಾಗಿ ಮೌಡ್ಯಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಕಾಣಿಕೆಗಳ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆಂದರೆ ಆಡಳಿತಾತ್ಮಕವಾಗಿ ದುರಾಸೆಗಳೂ ಜಾಗೃತಗೊಳ್ಳುತ್ತವೆ. ಭಕ್ತರಿಗೆ ಇದು ಗೊತ್ತಿರುವುದಿಲ್ಲ. ಆದಾಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಹೊಸ ಹೊಸ ಪವಾಡಗಳನ್ನು ಹುಟ್ಟು ಹಾಕುತ್ತಿರುವುದರ ಬಗ್ಗೆಯೂ ಅರಿವಿರುವುದಿಲ್ಲ. ತಾವು ಕಣ್ಣಾರೆ ಕಾಣದಿದ್ದರೂ ಯಾರೋ ಹೇಳಿದ್ದನ್ನು, ಕೇಳಿದ್ದನ್ನು ಮನಸಾರೆ ನಂಬಿ ಭಾವುಕತೆಯನ್ನು ಅವರು ಬೆಳೆಸಿಕೊಂಡಿರುತ್ತಾರೆ. ಇವರ ಕಿವಿಗೆ ಪವಾಡದ ಸಂಗತಿಯನ್ನು ಯಾರು ತುಂಬಿಸಿರುತ್ತಾರೋ ಅವರಿಗೂ ಪವಾಡದ ಅನುಭವ ಆಗಿರುವುದಿಲ್ಲ. ಗಂಗೆಗೆ ಸಂಬಂಧಿಸಿಯೂ ಇವತ್ತು ಬಹುತೇಕ ಅಸ್ತಿತ್ವದಲ್ಲಿರುವುದು ಇದುವೇ. ಪವಿತ್ರವೆಂದು ನಂಬಿರುವ ಗಂಗೆಯನ್ನು ಅಪವಿತ್ರ ಮಾಡಿರುವುದು ಯಾವುದೋ ಕಂಪೆನಿಗಳು, ಇನ್ನಾರದೋ ಶವಗಳು, ಮಾಲಿನ್ಯಗಳು ಕಾರಣ ಎಂದೇ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಸರಕಾರ ಅಂಥದ್ದೊಂದು ಜಾಹೀರಾತನ್ನು ಕೊಟ್ಟು ಅಪವಿತ್ರ ಗಂಗೆಯನ್ನು ಶುದ್ಧಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಯನ್ನು ಘೋಷಿಸುತ್ತದೆ. ಜನರಿಗೆ ಸರಕಾರದ ಮೇಲೆ ಪ್ರೀತಿಯೂ ಉಕ್ಕುತ್ತದೆ. ಸರಕಾರಗಳ ಗುರಿಯೂ ಇದುವೇ. ಜನರನ್ನು ನಂಬಿಸುವುದು. ಹೀಗೆ ಜನರಿಗೆ ಸರಕಾರದ ಮೇಲೆ ಒಮ್ಮೆ ನಂಬಿಕೆ ಬಂದು ಬಿಟ್ಟರೆ ಸಾಕು ಆ ಬಳಿಕ ಹಿಂದಿನ ಕ್ರಮವನ್ನೇ ಮುಂದುವರಿಸಿಕೊಂಡು ಹೋಗುವುದಕ್ಕೆ ಸರಕಾರಕ್ಕೆ ದಾರಿ ಸುಲಭವಾಗುತ್ತದೆ. ನಿಜವಾಗಿ, ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಸತ್ಯಾಗ್ರಹ ನಿರತ ಸನ್ಯಾಸಿಗಳು ಸರಕಾರದ ಈ ಧೋರಣೆಯ ವಿರೋಧಿಗಳು. ಒಂದು ಕಡೆ ಗಂಗಾ ಶುದ್ಧೀಕರಣಕ್ಕೆ ಕೋಟ್ಯಾಂತರ ಹಣವನ್ನು ಘೋಷಿಸುವ ಕೇಂದ್ರ ಮತ್ತು ಉತ್ತರಾ ಖಂಡ ಸರಕಾರಗಳು ಇನ್ನೊಂದು ಕಡೆ ಗಂಗೆಯ ಮೇಲೆ ವಿವಿಧ ಕಾರ್ಪೋರೇಟ್ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅತ್ಯಾಚಾರ ನಡೆಸುತ್ತಿದೆ ಎಂಬುದು ಅವರ ದೂರು.
ಸರಕಾರಗಳಿಗೆ ಗಂಗೆಯನ್ನು ಪವಿತ್ರಳು ಎಂದು ನಂಬುವ ಮುಗ್ಧರ ಅಗತ್ಯವಿದೆಯೇ ಹೊರತು ಗೋಪಾಲ ದಾಸ್‍ರಂತಹ ಸನ್ಯಾಸಿಗಳ ಅಗತ್ಯವಿಲ್ಲ. ಇಂಥವರನ್ನು ಸರಕಾರ ಮುಳ್ಳುಗಳಂತೆ ಪರಿಗಣಿಸುತ್ತದೆ ಮತ್ತು ಅವರನ್ನು ದಾರಿಯಿಂದ ಸರಿಸಿ ಬಿಡುವುದಕ್ಕೆ ಯತ್ನಿಸುತ್ತದೆ. ಹರಿದ್ವಾರದಲ್ಲಿ ನಡೆಯುತ್ತಿರುವುದೂ ಇದುವೇ. ಸತ್ಯಾಗ್ರ ನಿರತ ಅಗರ್ವಾಲ್‍ರ ಸಾವಿನ ಬಳಿಕವೂ ಉತ್ತರಾಖಂಡ ಸರಕಾರ ತನ್ನ ಹೈಡ್ರೋಪವರ್ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದಾದರೆ ಮತ್ತು ನದಿ ಪಾತ್ರದ ವಿವಿಧ ಚಟುವಟಿಕೆಗಳಿಗೆ ತಡೆ ಒಡ್ಡುವುದಿಲ್ಲ ಎಂದಾದರೆ ಏನಿದರ ಅರ್ಥ? ಗಂಗೆಯ ಶುದ್ಧೀಕರಣವನ್ನು ಸರಕಾರ ಲಾಭ-ನಷ್ಟದ ಕನ್ನಡಕದಿಂದ ನೋಡುತ್ತಿದೆ ಎಂದೇ ಅಲ್ಲವೇ? ಗಂಗೆಯನ್ನು ಶುದ್ಧೀಕರಣಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತ ಕಾರ್ಪೋರೇಟ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರೆ ಬೊಕ್ಕಸಕ್ಕೂ ಹಣ ಲಭಿಸುತ್ತದೆ ಮತ್ತು ಪಾರ್ಟಿ ಪಂಡೂ ಸಿಗುತ್ತದೆ ಎಂಬುದರ ಹೊರತು ಇದಕ್ಕೆ ಬೇರೆ ಏನು ಕಾರಣವಿದೆ?
ಆಧ್ಯಾತ್ಮಿಕತೆ ಎಂಬುದು ಇವತ್ತು ಶೋಷಣೆಯ ಅತಿ ದೊಡ್ಡ ಮಾರುಕಟ್ಟೆಯಾಗಿ ರೂಪಾಂತರಗೊಂಡಿದೆ. ಮಾರಮ್ಮ ಗುಡಿಯೂ ಗಂಗೆಯೂ ಇದಕ್ಕಿಂತ ಭಿನ್ನವಲ್ಲ. ಸದ್ಯದ ತುರ್ತು ಅಗತ್ಯ ಏನೆಂದರೆ, ಆಧ್ಯಾತ್ಮಿಕ ಕೇಂದ್ರಗಳನ್ನು ಮಧ್ಯವರ್ತಿಗಳಿಂದ ರಕ್ಷಿಸಿ, ಭಕ್ತರಿಗೆ ಮುಕ್ತವಾಗಿಡುವುದು. ಆದಾಯಕ್ಕಿಂತ ಭಕ್ತಿಗೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು. ಅದಾಯವೇ ಸಕಲ ಶೋಷಣೆಗಳ ಮೂಲ. ಆದಾಯದ ಗುರಿ ಇಲ್ಲದೇ ಇರುತ್ತಿದ್ದರೆ ನಿರ್ಜನ ಮತ್ತು ಅರಣ್ಯ ಪ್ರದೇಶದಲ್ಲಿ ಮಾರಮ್ಮ ಗುಡಿ ತಲೆ ಎತ್ತುತ್ತಿತ್ತೇ ಅನ್ನುವ ಪ್ರಶ್ನೆ ಅತ್ಯಂತ ಸೂಕ್ತ. ಆಧ್ಯಾತ್ಮಿಕ ಕೇಂದ್ರಗಳನ್ನು ದಲ್ಲಾಲಿಗಳ ಹಿಡಿತದಿಂದ ಹೊರತಂದು ಜನರಿಗೆ ಮುಕ್ತವಾಗಿಸಿ ಬಿಟ್ಟರೆ ಇವತ್ತಿನ ಬಹುತೇಕ ಶಕ್ತಿ ಕೇಂದ್ರಗಳೂ ಭಕ್ತರ ಬರವನ್ನು ಎದುರಿಸಬಹುದು ಎಂಬುದು ಸುಳ್ಳಲ್ಲ. ಯಾಕೆಂದರೆ, ದಲ್ಲಾಳಿಗಳೇ ಅವುಗಳನ್ನು ಸೃಷ್ಟಿಸಿರುವುದು ಮತ್ತು ಅವುಗಳ ಸುತ್ತ ಪವಾಡಗಳ ಕಟ್ಟಕತೆಗಳನ್ನು ಹುಟ್ಟು ಹಾಕಿರುವುದು. ಹೆಚ್ಚಿನ ಭಕ್ತರು ಮುಗ್ಧರು. ಅವರು ಪವಾಡಗಳನ್ನು ನಂಬುತ್ತಾರೆ. ಶಕ್ತಿ ಕೇಂದ್ರಗಳ ಮೇಲೆ ಭರವಸೆಯಿಡುತ್ತಾರೆ. ಕೊನೆಗೆ ಅನಾಹುತಕ್ಕೂ ತುತ್ತಾಗುತ್ತಾರೆ. ಪವಾಡಗಳನ್ನು ಸೃಷ್ಟಿಸಿದವರು ಅದಾಯವನ್ನು ಲೆಕ್ಕ ಹಾಕುತ್ತಾ ಆರಾಮವಾಗಿರುತ್ತಾರೆ.
ಮಾರುಕಟ್ಟೆ ಆಧಾರಿತ ಆಧ್ಯಾತ್ಮಿಕತೆಯ ಬದಲು ದೇವ ಕೇಂದ್ರಿತ ಮತ್ತು ದಲ್ಲಾಳಿ ರಹಿತ ಆಧ್ಯಾತ್ಮಿಕತೆಯನ್ನು ಪ್ರಚುರ ಪಡಿಸುವ ಮೂಲಕ ಇದಕ್ಕೆ ಉತ್ತರವನ್ನು ನೀಡಬೇಕಾದ ಅಗತ್ಯವಿದೆ. ದೇವನನ್ನು ತಲುಪುದಕ್ಕೆ ಮಾನವನ ಮಧ್ಯಸ್ಥಿತಿಕೆಯ ಅಗತ್ಯವಿಲ್ಲ. ಮಾನವನನ್ನು ಸೃಷ್ಟಿಸಿರುವುದು ದೇವನೆಂದಾದರೆ, ಆ ದೇವನಲ್ಲಿ ಇಷ್ಟಾರ್ಥವನ್ನು ಬೇಡುವುದಕ್ಕೆ ಪೂಜಾರಿಗಳು, ಮುಜಾವರುಗಳ ಅಗತ್ಯ ಏಕಿದೆ? ಪವಾಡಗಳ ಹೆಸರಲ್ಲಿ ವಿವಿಧ ಶಕ್ತಿ ಕೇಂದ್ರಗಳ ಅಗತ್ಯ ಏನಿದೆ?
ನಾಪತ್ತೆಯಾಗಿರುವ ಗೋಪಾಲ ದಾಸ್ ಮತ್ತು ಮಾರಮ್ಮ ಗುಡಿ ಪ್ರಸಾದ ದುರಂತವು ಆಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿಯನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗಲಿ.

Saturday, 15 December 2018

ಐನ್‍ಸ್ಟೀನ್‍ರ ದೇವ ಮತ್ತು ಕೆಲವು ಪ್ರಶ್ನೆಗಳು


   
ದೇವನ ಕುರಿತಾದ ಜಿಜ್ಞಾಸೆ ಹೊಸತಲ್ಲ. ಗಾಡ್, ಪರಮಾತ್ಮ, ಅಲ್ಲಾಹ್, ಖುದಾ... ಹೀಗೆ ಜಗತ್ತಿನ ವಿವಿಧ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಕರೆಯಿಸಿಕೊಳ್ಳುವ ದೇವ, ಈ ಗೋಲದ ಅತಿ ಬಳಕೆಯ ಹೆಸರು. ದೇವನ ಹೆಸರಲ್ಲಿ ಒಂದು ಕಡೆ ಪೂಜೆ-ಪ್ರಾರ್ಥನೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಹತ್ಯೆ, ಮಾರಣ ಹೋಮಗಳೂ ನಡೆಯುತ್ತಿವೆ. ದೇವನನ್ನು ಒಪ್ಪುವ ಮತ್ತು ಒಪ್ಪದಿರುವವರು ಇರುವಂತೆಯೇ, ದೇವನನ್ನು ಭಯ ಪಡುವವರೂ ಮತ್ತು ಪ್ರೀತಿಸುವವರೂ ಇದ್ದಾರೆ. ಮಾನವರೇ ದೇವನಾಗಿ ಪರಿವರ್ತಿತಗೊಳ್ಳುವ ಪ್ರಸಂಗಗಳೂ ನಡೆಯುತ್ತಿವೆ. ಅವರಿಗೆ ಒಂದಷ್ಟು ಭಕ್ತರೂ ಲಭ್ಯವಾಗುತ್ತಾರೆ. ದೇವನೆಂದರೆ ಯಾರು, ಆತನ ರೂಪ, ಆಕಾರ, ಬಣ್ಣಗಳಿಂದ ಹಿಡಿದು ಏಕನೋ ಅನೇಕನೋ, ಪತ್ನಿ-ಮಕ್ಕಳಿರುವವನೋ, ಒಂಟಿಯೋ, ಜಗತ್ತನ್ನು ಸೃಷ್ಟಿಸಿದ್ದು ಆತನೆಂದಾದರೆ ಆತನನ್ನು ಸೃಷ್ಟಿಸಿದ್ದು ಯಾರು, ಆತ ಎಲ್ಲಿದ್ದಾನೆ ಇತ್ಯಾದಿ ಪ್ರಶ್ನೆಗಳು ಈ ಜಗತ್ತಿಗೆ ಹೊಸತಲ್ಲ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಅಸಂಖ್ಯ ವೇದಿಕೆಗಳು ನಿರ್ಮಾಣವಾಗಿವೆ. ಬರಹಗಳು ಖರ್ಚಾಗಿವೆ. ಹಾಗಂತ,
     ಇದು ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಜಿಜ್ಞಾಸೆ ಏನಲ್ಲ. ಪುರಾತನ ಕಾಲದಿಂದಲೂ ದೇವ ಒಂದು ಚೋದ್ಯದ ವಸ್ತು. ದೇವನ ಬಗ್ಗೆ ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರಿಗೂ ಕುತೂಹಲ ಇತ್ತು. ಜರ್ಮನಿಯ ತತ್ವಜ್ಞಾನಿ ಎರಿಕ್ ಗಟ್‍ಕೈಂಡ್‍ಗೆ 1954ರಲ್ಲಿ ಅವರು ಬರೆದಿದ್ದ ಒಂದೂವರೆ ಪುಟದ ಪತ್ರವನ್ನು ಕಳೆದವಾರ ಏಲಂಗೆ ಇಡಲಾಗಿತ್ತು. ಆ ಒಂದು ಪತ್ರ ಸುಮಾರು 3 ಬಿಲಿಯನ್ ಡಾಲರ್ ಗೆ ಮಾರಾಟವಾಗಬಹುದೆಂಬ ಅಂದಾಜನ್ನು ಮಾಡಲಾಗಿದೆ. ಐನ್‍ಸ್ಟೀನ್‍ರಿಗೆ ದೇವನ ಮೇಲೆ ಭಾರೀ ಭರವಸೆಯೇನೂ ಇದ್ದಿರಲಿಲ್ಲ. ದೇವ ಎಂಬುದು ಮಾನವರ ದೌರ್ಬಲ್ಯ ಎಂಬ ರೀತಿಯಲ್ಲಿ ಅವರು ವ್ಯಾಖ್ಯಾನಿಸಿದ್ದರು. ಅದೇವೇಳೆ, ತಾನು ಗುರುತಿಸಿಕೊಂಡಿರುವ ಯಹೂದಿ ಧರ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಲೂ ಇದ್ದರು. ಎರಿಕ್ ಗಟ್‍ಕೈಂಡ್‍ರ Choose life: The biblical call to revolt ಎಂಬ ಕೃತಿಯನ್ನು ಓದಿ, ಆ ಬಳಿಕ ಬರೆದ ಈ ಒಂದೂವರೆ ಪುಟದ ಪತ್ರದಲ್ಲಿ ‘The word God is for me nothing but the expression of and product of human weaknesses’ ಎಂದು ಅವರು ಹೇಳಿದ್ದರು.
    ದೇವಾಸ್ತಿತ್ವದ ಕುರಿತಂತೆ ಐನ್‍ಸ್ಟೀನ್‍ನ ನಿಲುವನ್ನು ಎಷ್ಟು ಮಂದಿ ಒಪ್ಪುತ್ತಾರೋ ಇಲ್ಲವೋ, ಆದರೆ ಈ ಜಗತ್ತಿನ ಜನಸಂಖ್ಯೆಯನ್ನು ಆಸ್ತಿಕರು ಮತ್ತು ನಾಸ್ತಿಕರು ಎಂದು ವಿಭಜಿಸಿದರೆ ಆಸ್ತಿಕರ ಸಂಖ್ಯೆಯೇ ಹೆಚ್ಚಿದ್ದೀತು. ದೇವನನ್ನು ನಿರಾಕರಿಸುವವರಲ್ಲಿ ಈ ಜಗತ್ತಿನ ಹುಟ್ಟಿನ ಬಗ್ಗೆ ಇವತ್ತಿಗೂ ಪ್ರಬಲವಾದ ವಾದಗಳಿಲ್ಲ. ಮಾನವ ಸಂತತಿಯ ಪ್ರಾರಂಭವನ್ನು ನಿಖರವಾಗಿ ಹೇಳಿ ಬಿಡುವುದಕ್ಕೆ ಬೇಕಾದ ದಾಖಲೆಗಳಿಲ್ಲ. ಮಾನವ ವಿಕಾಸವಾದದ ತಳಿ ಎಂದು ಹೇಳಿದರೆ ಮತ್ತು ಆತ ಮೊದಲು ಮಂಗನಾಗಿದ್ದ ಎಂದು ವಾದಿಸಿದರೆ ಆ ವಾದವನ್ನು ಅಲುಗಾಡಿಸುವ ಪ್ರತಿ ಪ್ರಶ್ನೆಗಳೂ ಅಷ್ಟೇ ಪ್ರಬಲವಾಗಿ ಎದುರ್ಗೊಳ್ಳುತ್ತವೆ. ಈ ಜಗತ್ತಿನಲ್ಲಿ ಮನುಷ್ಯ ಜೀವಿ ಮಾತ್ರ ಇರುವುದಲ್ಲ. ಅಸಂಖ್ಯ ವಿಧದ ಕೀಟಗಳಿವೆ. ನದಿ ತೊರೆಗಳಿವೆ. ಸಮುದ್ರಗಳಿವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೇಳಿ ಮುಗಿಸಲಾಗದಷ್ಟು ಈ ಜಗತ್ತಿನಲ್ಲಿ ಜೀವ ವೈವಿಧ್ಯ ಮತ್ತು ಸೃಷ್ಟಿ ವೈಶಿಷ್ಟ್ಯಗಳಿವೆ. ಇವೆಲ್ಲವೂ ಓರ್ವ ಎಂಜಿನಿಯರ್‍ ನ  ನಿಯಂತ್ರಣದಲ್ಲಿರುವಂತೆ ಯಾಕೆ ವರ್ತಿಸುತ್ತಿವೆ ಎಂಬ ಪ್ರಶ್ನೆಯನ್ನು ಆಸ್ತಿಕರು ಕೇಳುತ್ತಲೇ ಇದ್ದಾರೆ. ಬಿಗ್‍ಬ್ಯಾಂಗ್ ಥಿಯರಿಯಲ್ಲೂ ಇಂಥದ್ದೊಂದು ಪ್ರಶ್ನೆಯನ್ನು ಎತ್ತಲಾಗಿತ್ತು. ಈ ಜಗತ್ತನ್ನು ನಿಯಂತ್ರಿಸುವ ಒಂದು ಅದ್ವಿತೀಯ ಶಕ್ತಿ ಇದೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿತ್ತು. ಆದ್ದರಿಂದಲೇ,
      ವಿಜ್ಞಾನಿಗಳೆಲ್ಲರೂ ನಾಸ್ತಿಕರಾಗದೇ ಇದ್ದಿರುವುದು. ಹೆಚ್ಚಿನ ವಿಜ್ಞಾನಿಗಳು ದೇವ ಎಂಬ ಅಜ್ಞಾತ ಶಕ್ತಿಯ ಮೇಲೆ ವಿಶ್ವಾಸವನ್ನು ತಾಳಿದವರೇ ಆಗಿದ್ದಾರೆ. ಇಲ್ಲಿರುವ ಸಮಸ್ಯೆ ಏನೆಂದರೆ, ದೇವನನ್ನು ಹೇಗೆ ಪರಿಭಾವಿಸಬೇಕು ಎಂಬುದರಲ್ಲಿ. ದೇಶದಲ್ಲಿ 120 ಕೋಟಿಗಿಂತಲೂ ಅಧಿಕ ಜನರಿದ್ದಾರೆ. ಇವರಲ್ಲಿ ಬಹುಸಂಖ್ಯಾತ ಮಂದಿ ದೇವನನ್ನು ನಿರಾಕಾರವೆಂದು ಭಾವಿಸುತ್ತಿಲ್ಲ. ಮಾತ್ರವಲ್ಲ, ದೇವನನ್ನು ಪರಿಭಾವಿಸುವಲ್ಲಿ ಈ ಗುಂಪು ಎಷ್ಟು ವಿಭಜಿಸಿ ಬಿಟ್ಟಿವೆಯೆಂದರೆ ನೂರಾರು ರೂಪದಲ್ಲಿ ದೇವನನ್ನು ಇವರೆಲ್ಲ ಕಲ್ಪಿಸಿಕೊಂಡಿದ್ದಾರೆ. ಯಾರು ಹೇಗೆಲ್ಲ ಕಲ್ಪಿಸಿಕೊಂಡಿz್ದÁರೋ ಅದಕ್ಕೆ ತಕ್ಕಂತೆ ಆ ದೇವನಿಗೆ ರೂಪವನ್ನೂ ಕೊಟ್ಟಿದ್ದಾರೆ. ಒಂದು ಕಡೆ ದೇವನೊಬ್ಬನೇ ಎನ್ನುವ ಜನರಿದ್ದರೆ, ಇನ್ನೊಂದು ಕಡೆ ಅದೇ ದೇವನಿಗೆ ಅನೇಕ ರೂಪಗಳನ್ನು ಕೊಟ್ಟು ಆರಾಧಿಸುವ ಕ್ರಮವೂ ಇಲ್ಲಿದೆ. ಪವಿತ್ರ ಕುರ್‍ಆನ್ ದೇವನನ್ನು ಪರಿಚಯಿಸಿರುವುದು ಹೀಗೆ;
      ದೇವನು ಏಕೈಕನು. ಆತ ಯಾರ ಅವಲಂಬಿತನೂ ಅಲ್ಲ. ಆದರೆ ಎಲ್ಲರೂ ಆತನ ಅವಲಂಬಿತರು. ದೇವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸಮಾನರು ಯಾರೂ ಇಲ್ಲ. (ಅಧ್ಯಾಯ 112, ವಚನ 1-4)
     ದೇವ ನಿಜಕ್ಕೂ ಹೇಗಿರಬೇಕು, ಆತ ಹೇಗೆ ಪೂಜೆಗೊಳ್ಳಬೇಕು, ಆತನ ಸಂದೇಶ ಏನು, ಮನುಷ್ಯರನ್ನು ಆತ ಸೃಷ್ಟಿಸಿರುವುದು ನಿಜವೇ ಎಂದಾದರೆ, ಯಾಕೆ ಸೃಷ್ಟಿಸಿದ್ದಾನೆ, ಬರಿದೇ ಸೃಷ್ಟಿಸಿ ಜಗಳಾಡಿಸುವುದು ಆತನ ಉದ್ದೇಶವೇ? ಅಲ್ಲ ಎಂದಾದರೆ, ಆ ಉದ್ದೇಶ ಏನು? ಆತ ಏನನ್ನು ಜನರಿಂದ ಬಯಸುತ್ತಿದ್ದಾನೆ ಇತ್ಯಾದಿಗಳು ಖಂಡಿತ ಉದ್ಧಟತನ ಪ್ರಶ್ನೆಗಳಾಗಲಾರದು. ಈ ಜಗತ್ತು ತನ್ನಿಂತಾನೇ ಸೃಷ್ಟಿಯಾಗಿದೆ ಮತ್ತು ಇದಕ್ಕೆ ಸೃಷ್ಟಿಕರ್ತನೋರ್ವನಿಲ್ಲ ಎಂಬ ವಾದವನ್ನು ಒಪ್ಪದವರೇ ಈ ಜಗತ್ತಿನಲ್ಲಿ ಅಧಿಕ ಇರುವಾಗ ಇವರೆಲ್ಲ ಇಂಥದ್ದೊಂದು ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಬೇಕು. ನಾವೇಕೆ ಬದುಕುತ್ತಿದ್ದೇವೆ ಮತ್ತು ತಿಂದುಂಡು ಕೊನೆಗೊಂದು ದಿನ ಸಾಯುವುದೇ ತಮ್ಮ ಬದುಕಿನ ಉದ್ದೇಶವೇ ಎಂದೊಮ್ಮೆ ಪ್ರಶ್ನಿಸಿಕೊಳ್ಳಬೇಕು. ಇಂಥದ್ದೊಂದು ಬದುಕಿಗಾಗಿ ದೇವನು ನಮ್ಮನ್ನು ಸೃಷ್ಟಿಸಬೇಕಿತ್ತೇ?
    ಹುಟ್ಟಿದ ತಪ್ಪಿಗೆ ಬದುಕುವ ಮತ್ತು ಬದುಕಿದ ತಪ್ಪಿಗೆ ಸಾಯುವ ಪ್ರಕ್ರಿಯೆಯೊಂದು ಪ್ರಾಣಿವರ್ಗದಲ್ಲಿದೆ. ಅವು ಹುಟ್ಟುತ್ತವೆ, ಬದುಕುತ್ತವೆ ಮತ್ತು ಒಂದು ದಿನ ಸಾಯುತ್ತವೆ. ಅವುಗಳ ಮಿತಿ ಅದು. ಆದರೆ ಮನುಷ್ಯನೂ ಹಾಗೆಯೇ? ಪ್ರಾಣಿ ವರ್ಗವನ್ನು ಮೀರಿದ ಮತ್ತು ಅವುಗಳನ್ನು ತನಗೆ ಬೇಕಾದಂತೆ ಪಳಗಿಸುವ ಸಾಮಥ್ರ್ಯವನ್ನು ಪಡೆದಿರುವ ಆತನ ಬದುಕೂ ಅದರಂತೆಯೇ ಆಗಬೇಕೇ? ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಜೊತೆ ಯಾವ ಬಗೆಯ ಸಂಬಂಧವನ್ನು ಬೆಳೆಸಬೇಕು? ಹೇಗೆ ವರ್ತಿಸಬೇಕು? ನೆರೆಕರೆಯಲ್ಲಿ ವಾಸಿಸುವವರ ದಿನಚರಿಗಳು ಹೇಗಿರಬೇಕು? ನಿಜಕ್ಕೂ ದೇವನು ಹೇಗಿರಬೇಕು ಮತ್ತು ನಾವು ಪೂಜಿಸುವ ದೇವನು ಹೇಗಿದ್ದಾನೆ? ನಾವು ದೇವನನ್ನು ಗ್ರಹಿಸಿಕೊಂಡದ್ದು ಯಾವ ಮೂಲದಿಂದ? ನನ್ನ ಗ್ರಹಿಕೆ ಸರಿಯೇ? ಇತ್ಯಾದಿ ಪ್ರಶ್ನೆಗಳು ಮಾನವರಲ್ಲಿ ಮೂಡಬೇಕಾಗಿರುವುದು ಪ್ರಕೃತಿ ಸಹಜ ಬೇಡಿಕೆ.
   ನಮ್ಮೆದುರೇ ಮಂಗಗಳ ಹುಟ್ಟು, ಬೆಳವಣಿಗೆ, ಸಾವು ಸಂಭವಿಸುತ್ತಿರುತ್ತವೆ. ಮಂಗಚೇಷ್ಟೆಯ ನೂರಾರು ವರದಿಗಳನ್ನು ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ನಾವು ಓದಿ ಆನಂದಿಸುತ್ತಲೂ ಇರುತ್ತೇವೆ. ಮಂಗನಿಂದ ಮಾನವ ಅನ್ನುವ ವಾದವನ್ನು ಮತ್ತೆ ಮತ್ತೆ ನಮ್ಮೊಳಗೆ ಕೆದಕಿ ಕೆದಕಿ ಜಿಜ್ಞಾಸೆಗೆ ಒಡ್ಡುವ ಮತ್ತು ಆ ವಾದಕ್ಕೆ ಪ್ರತಿ ವಾದವನ್ನು ಹುಟ್ಟು ಹಾಕುವುದಕ್ಕೆ ಪ್ರೇರಣೆ ಕೊಡುವ ಪ್ರಕೃತಿ ವೈಚಿತ್ರ್ಯಗಳಿವು. ನಿಜವಾಗಿ, ಮನುಷ್ಯ ಮಂಗನಿಂದಲ್ಲ ಮತ್ತು ಮನುಷ್ಯನ ಹುಟ್ಟಿನ ಹಿಂದೆ ಉದ್ದೇಶ ಮತ್ತು ಕಾರಣಗಳಿವೆ ಎಂಬುದು ನಮ್ಮ ವಾದವೆಂದಾದರೆ ಆ ಉದ್ದೇಶ ಮತ್ತು ಗುರಿಗಳನ್ನೊಮ್ಮೆ ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು. ಬದುಕು-ಸಾವು ಮತ್ತು ಸಾವಿನಾಚೆಯ ಬದುಕಿನ ಕುರಿತಾಗಿ ನಮ್ಮನ್ನು ನಾವು ಚಿಂತನೆಗೆ ಹಚ್ಚಿಕೊಳ್ಳಬೇಕು. ಇಂಥ ಚಿಂತನೆಗೆ ದೇವನು ಸಿಕ್ಕಾನು ಮತ್ತು ಆತನೇ ನಿಜವಾದ ದೇವ.
ಐನ್‍ಸ್ಟೀನ್ ಈ ಬಗೆಯ ಹುಡುಕಾಟ ನಡೆಸಿಲ್ಲವೇನೋ.