Thursday, 25 April 2019

ನಗರಗಳೇಕೆ ದನ ಸಾಕುವುದಿಲ್ಲ?



    ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಪರಸ್ಪರ ಕೊಡು-ಕೊಳ್ಳುವಿಕೆಯ ಭಾಗವಾಗಿ ನೋಡದೆ ಪವಿತ್ರ-ಅಪವಿತ್ರತೆಯ ಸಂಬಂಧವಾಗಿ ನೋಡಿದರೆ ಏನಾಗಬಹುದು ಅನ್ನುವುದಕ್ಕೆ ಈಗಿನ ಉತ್ತರ ಪ್ರದೇಶ ಉತ್ತಮ ಉದಾಹರಣೆ. ಗೋಮಾಂಸದ ಹೆಸರಲ್ಲಿ ವೃದ್ಧ ಅಖ್ಲಾಕ್‍ರನ್ನು ಥಳಿಸಿ ಕೊಂದವರನ್ನು ಮತ್ತು ಆ ಬಗೆಯ ಮನಸ್ಥಿತಿ ಪ್ರತಿನಿಧಿಸುವವರನ್ನು ಸಮರ್ಥಿಸುತ್ತಲೇ ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಈಗ ದನಗಳೇ ಒಂದು ಸವಾಲಾಗಿ ನಿಂತಿವೆ. ಕಳೆದವಾರ ಉತ್ತರ ಪ್ರದೇಶದ ಬೀಡಾಡಿ ದನಗಳೂ ಮತ್ತು ರೈತರೂ ಸುದ್ದಿಯ ಮುನ್ನೆಲೆಗೆ ಬಂದರು. ನಿಜವಾಗಿ, ದನಗಳನ್ನು ಅತ್ಯಂತ ಹೆಚ್ಚು ಪ್ರೀತಿಸುವವರೆಂದರೆ ರೈತರು. ದನವಿಲ್ಲದ ರೈತ ಮತ್ತು ರೈತನ ಆಶ್ರಯವನ್ನು ಬಯಸದ ದನ ಇವೆರಡೂ ಅಸಾಧ್ಯ ಅನ್ನುವಷ್ಟು ಅನ್ಯೋನ್ಯ. ಆದರೂ ಉತ್ತರ ಪ್ರದೇಶದ ರೈತರು ಬೀಡಾಡಿ ದನಗಳಿಂದ ರೋಸಿ ಹೋದರು. ಮುಖ್ಯವಾಗಿ, ವಾರಣಾಸಿ, ಇಟಾವಾ, ಗೊಂಡಾ, ಹಥರಸ್, ಆಗ್ರಾ ಮುಂತಾದ ಪ್ರದೇಶಗಳ ರೈತರು ಸುಮಾರು 500ಕ್ಕಿಂತಲೂ ಅಧಿಕ ಬೀಡಾಡಿ ದನಗಳನ್ನು ಪೊಲೀಸು ಠಾಣೆ, ಶಾಲೆ ಮುಂತಾದ ಕಡೆ ಕಟ್ಟಿ ಹಾಕಿ ಪ್ರತಿಭಟಿಸಿದರು. ಹಾಗಂತ, ಹೀಗೆ ಕಟ್ಟುವುದಕ್ಕಿಂತ ಮೊದಲು ಅವರು ತಮ್ಮ ಗೋಧಿ, ಆಲೂಗಡ್ಡೆ, ಕಡಲೆ, ಬಟಾಣಿ, ಸಾಸಿವೆ ಇತ್ಯಾದಿ ಬೆಳೆಗಳನ್ನು ಬೀಡಾಡಿ ದನಗಳಿಂದ ರಕ್ಷಿಸುವುದಕ್ಕಾಗಿ ಮಾಡಬೇಕಾದ ಉಪಾಯಗಳ ಬಗ್ಗೆ ಚರ್ಚಿಸಿದ್ದರು. ರಾತ್ರಿ ಹಗಲೆನ್ನದೇ ತಮ್ಮ ಹೊಲಗಳನ್ನು ಕಾವಲು ಕಾಯುವುದಲ್ಲದೆ ಬೇರೆ ಉಪಾಯ ಇವರಿಗೆ ಕಾಣಿಸಿರಲಿಲ್ಲ. ಕೆಲವರು ಬಿದಿರಿನ ಬೇಲಿ ಹಾಕಿದರು. ಆದರೆ ದನಗಳು ಇವನ್ನೂ ಹೊಡೆದು ಹಾಕಿ ಬೆಳೆ ನಾಶ ಮಾಡಲು ಪ್ರಾರಂಭಿಸಿದಾಗ ಅನ್ಯ ದಾರಿ ಕಾಣದೇ ದನ ಕಟ್ಟಿ ಹಾಕುವ ಪ್ರತಿಭಟನೆಗಿಳಿದರು. ಆದರೆ ಸರಕಾರ ಸುಮಾರು ಎರಡು ಡಜನ್‍ನಷ್ಟು ರೈತರನ್ನು ಬಂಧಿಸಿತು. ದಂಡ ವಿಧಿಸಿತು.
ನಿಜವಾಗಿ, ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ಮತ್ತು ಭಾಷಣಕಾರನಿಗಿಂತ ಚೆನ್ನಾಗಿ ದನಗಳ ಬಗ್ಗೆ ಗೊತ್ತಿರುವವರೆಂದರೆ ರೈತರು. ದನ ಅವರ ಗೆಳೆಯ. ದನ ಅವರ ಆಸ್ತಿ. ದನ ಅವರ ಬದುಕು ಎಲ್ಲವೂ ಆಗಿದೆ. ಇಂಥ ದನಗಳನ್ನು ಅವರು ತಮ್ಮ ವೈರಿ ಎಂದು ಪರಿಗಣಿಸುವುದಕ್ಕೆ ಕಾರಣಗಳೇನು? ತನ್ನ ಒಡನಾಡಿಯ ವಿರುದ್ಧವೇ ಪ್ರತಿಭಟಿಸುವುದರ ಅರ್ಥವೇನು? ರೈತ ಮತ್ತು ರಾಜಕಾರಣಿ ಬೇರ್ಪಡುವುದು ಇಲ್ಲೇ.  ರೈತ ದನವನ್ನು ಪ್ರೀತಿಸುತ್ತಾನೆ. ಸಾಕುತ್ತಾನೆ. ಆರೈಕೆ ಮಾಡುತ್ತಾನೆ. ಆಹಾರ ಒದಗಿಸುತ್ತಾನೆ ಮತ್ತು ಆರಾಧನಾ ಭಾವದಿಂದಲೂ ನೋಡುತ್ತಾನೆ. ತನ್ನ ಮಕ್ಕಳ ಅಥವಾ ಕುಟುಂಬದವರ ಕಾಯಿಲೆಗೆ ಆತ ಹೇಗೆ ಸ್ಪಂದಿಸುತ್ತಾನೋ ಅದೇ ಬಗೆಯ ಸ್ಪಂದನೆ ದನಗಳ ಬಗ್ಗೆ ರೈತರಲ್ಲಿರುತ್ತದೆ. ಯಾಕೆಂದರೆ, ದನಗಳ ಹೊರತು ಅವರು ತನ್ನ ಜೀವನ ಬಂಡಿಯನ್ನು ಕಲ್ಪಿಸಿಕೊಳ್ಳುವ ಹಾಗಿಲ್ಲ. ಅದು ಹಾಲನ್ನು ಒದಗಿಸುತ್ತದೆ. ಹೊಲದಲ್ಲಿ ದುಡಿಯುತ್ತದೆ. ಗೊಬ್ಬರವನ್ನೂ ಒದಗಿಸುತ್ತದೆ. ಓರ್ವ ರೈತ ದನವನ್ನು ಪ್ರೀತಿಸುವುದಕ್ಕೆ ಇವೆಲ್ಲವೂ ಕಾರಣ ಅಥವಾ ಇವಾವುದನ್ನೂ ಒದಗಿಸದ ದನವೊಂದನ್ನು ಬಹುಕಾಲ ಸಾಕಲು ಮತ್ತು ಆರೈಕೆ ಮಾಡಲು ಓರ್ವ ರೈತನಿಂದ ಸಾಧ್ಯವಿಲ್ಲ. ಪರಸ್ಪರ ಕೊಡು-ಕೊಳ್ಳುವಿಕೆಯ ಸಂಬಂಧವೊಂದರ ಆಚೆಗೆ ಬರೇ ಆರಾಧನಾ ಭಾವದಿಂದ ರೈತನೋರ್ವ ದನಗಳನ್ನು ಸಾಕಲು ಸಾಧ್ಯವಿಲ್ಲ. ಇದು ಸಾಮಾಜಿಕ ವಾಸ್ತವ. ಒಂದುವೇಳೆ, ಇದು ಅವಾಸ್ತವಿಕ ಎಂದಾದರೆ, ದನಗಳೆಲ್ಲ ಯಾಕೆ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಗರಗಳಲ್ಲಿ ದನ ಸಾಕಾಣಿಕೆ ಶೂನ್ಯ ಅನ್ನುವಷ್ಟು ಕಡಿಮೆ. ಹತ್ತು-ಇಪ್ಪತ್ತು ಅಂತಸ್ತಿನ ಕಟ್ಟಡಗಳ ಒಡೆಯರೂ ತಮ್ಮ ಫ್ಲ್ಯಾಟಿನ ಪಕ್ಕ ದನ ಸಾಕಾಣಿಕೆಗಾಗಿ ದೊಡ್ಡಿಯೊಂದನ್ನು ಕಟ್ಟುವುದಿಲ್ಲ. ಬೃಹತ್ ಬಂಗಲೆಯಂಥ ಮನೆ ಕಟ್ಟುವವರು ಮತ್ತು ದುಬಾರಿ ಕಾರುಗಳನ್ನು ಇರಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಚಂದದ ಕಾರು ಪಾರ್ಕ್ ಮಾಡಿಕೊಳ್ಳುವವರು ಇಷ್ಟೇ ಮುತುವರ್ಜಿಯಿಂದ ದನ ಸಾಕಾಣಿಕೆಯ ಬಗ್ಗೆ ಮತ್ತು ಅಂಗಳದಲ್ಲೇ ಅದಕ್ಕೊಂದು ದೊಡ್ಡಿ ನಿರ್ಮಿಸುವ ಬಗ್ಗೆ ಕಾಳಜಿ ತೋರುವುದಿಲ್ಲ. ಬರೇ ಆರಾಧನೆಯ ಕಾರಣದಿಂದಾಗಿಯೇ ಯಾರಾದರೂ ದನ ಸಾಕುವುದಾದರೆ, ನಗರಗಳಲ್ಲಿ ವಾಸಿಸುವವರ ಪ್ರತಿ ಮನೆಗಳಲ್ಲೂ ದನ ಕಾಣಿಸಿಕೊಳ್ಳಬೇಕಿತ್ತು. ಫ್ಲ್ಯಾಟ್ ನಿರ್ಮಿಸುವಾಗಲೇ ದನ ಸಾಕಾಣಿಕೆಗಾಗಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಿತ್ತು. ಮನೆಗೊಂದು ಸಿಟೌಟ್ ಇರುವಂತೆಯೇ ಮನೆಗೊಂದು ದನ ದೊಡ್ಡಿ ನಿರ್ಮಿಸುವುದು ಮತ್ತು ದನ ಸಾಕಾಣಿಕೆಯನ್ನು ಒಂದು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ, ನಗರವಾಸಿಗಳಲ್ಲಿ ಈ ಬಗೆಯ ಉಮೇದು ಕಾಣಿಸುವುದೇ ಇಲ್ಲ. ಇದರರ್ಥ ಇವರೆಲ್ಲ ಗೋವಿನ ವಿರೋಧಿಗಳು ಎಂದಲ್ಲ ಮತ್ತು ಅವರು ಗೋವನ್ನು ಪ್ರೀತಿಸುವುದಿಲ್ಲ ಎಂದೂ ಅಲ್ಲ. ಗೋವಿಗೂ ಅದರ ಸಾಕಾಣಿಕೆಗೂ ಆರಾಧನಾ ಭಾವಕ್ಕಿಂತ ಹೊರತಾದ ಕಾರಣಗಳಿವೆ ಎಂದೇ ಅರ್ಥ. ರೈತ ನಗರಗಳಲ್ಲಿ ವಾಸಿಸುವುದಿಲ್ಲ. ಆದ್ದರಿಂದಲೇ ನಗರಗಳು ಗೋವನ್ನು ಸಾಕುವುದೂ ಇಲ್ಲ. ಕೃಷಿ ಕೆಲಸಗಳಿಗೆ ವಿಶಾಲ ಜಮೀನು ಬೇಕು. ಅದು ನಗರಗಳಲ್ಲಿ ಲಭ್ಯ ಇಲ್ಲ. ಆದ್ದರಿಂದ ರೈತರು ಕಾಣಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿ. ದನಗಳು ಕಾಣಸಿಗುವುದೂ ಅಲ್ಲೇ. ಇದು ವಿಚಿತ್ರ. ಇಲ್ಲಿ ಬಹುಮುಖ್ಯವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ದನಗಳೇಕೆ ರೈತರ ಜೊತೆಗೇ ಇವೆ? ದನವನ್ನು ಆರಾಧಿಸುವುದು ರೈತರು ಮಾತ್ರವೇ? ನಗರ ಪ್ರದೇಶಗಳ ಮಂದಿ ದನವನ್ನು ಆರಾಧಿಸುವುದಿಲ್ಲವೇ?
ದನಗಳ ಕುರಿತಂತೆ ಜನರ ನಿಜ ಭಾವನೆಗಳು ವ್ಯಕ್ತವಾಗುವುದು ಇಂಥ ಪ್ರಶ್ನೆಗಳು ಹುಟ್ಟಿಕೊಂಡಾಗಲೇ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಂದಿ ದನಗಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆದರೆ ಈ ಪ್ರೀತಿ ಷರತ್ತುಬದ್ಧ. ಸಾಕುವ ದನದಿಂದ ಸಾಕುವವನಿಗೂ ಪ್ರಯೋಜನವಿರಬೇಕು ಎಂಬುದೇ ಷರತ್ತು. ಪ್ರಯೋಜನವಿರದ ಸಾಕಾಣಿಕೆಯನ್ನು ಜನರು ಬಯಸುವುದಿಲ್ಲ. ನಗರ ಪ್ರದೇಶದ ಮಂದಿ ಯಾಕೆ ಗೋವನ್ನು ಸಾಕುವುದಿಲ್ಲ ಎಂದರೆ, ದನಸಾಕಾಣಿಕೆಗೆ ಪೂರಕವಾದ ಮತ್ತು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾದ ಯಾವ ವಾತಾವರಣವೂ ಅಲ್ಲಿಲ್ಲ. ಅಲ್ಲಿ ಅವರಿಗೆ ಜಮೀನು ಇಲ್ಲ. ಇನ್ನು, ಇರುವ ಸಣ್ಣ ಸ್ಥಳದಲ್ಲೇ  ಸಾಕುವ ಅಂದರೆ, ಅದು ಸುಲಭ ಅಲ್ಲ. ಅದರ ಆರೈಕೆ, ಗೊಬ್ಬರಗಳ ವಿಲೇವಾರಿ, ಪೋಷಣೆ, ಚಿಕಿತ್ಸೆ ಇತ್ಯಾದಿಗಳನ್ನು ನಿಭಾಯಿಸುವುದಕ್ಕೆ ಸಿದ್ಧರಾಗಬೇಕು. ಒಂದುವೇಳೆ, ಇಷ್ಟೆಲ್ಲವನ್ನು ಮಾಡಿದರೂ ಪ್ರತಿಯಾಗಿ ಏನು ಸಿಗುತ್ತದೆ ಮತ್ತು ಎಷ್ಟು ಸಿಗುತ್ತದೆ ಎಂಬ ಪ್ರಶ್ನೆಯಿದೆ. ಹಾಲು ಕೊಡುವ ಹಸುವಿನ ನಿರ್ವಹಣೆಗೂ ಸಮಯ ಮೀಸಲಿಡಬೇಕು. ಅದರ ಕರುವಿನ ಬಗ್ಗೆ ನಿಗಾ ವಹಿಸಬೇಕು. ಹೀಗೆ ದನದ ಕುಟುಂಬವೂ ವಿಸ್ತರಿಸುತ್ತಾ ಹೋದಂತೆ ಒಂದೋ ಹಟ್ಟಿಯನ್ನು ವಿಸ್ತರಿಸುತ್ತಾ ಹೋಗಬೇಕಾಗುತ್ತದೆ ಅಥವಾ ದನಗಳನ್ನು ಮಾರಬೇಕಾಗುತ್ತದೆ. ಮತ್ತದೇ ಸಮಸ್ಯೆ. ಯಾರಿಗೆ ಮಾರುವುದು? ಖರೀದಿಸುವವರು ಯಾಕಾಗಿ ಖರೀದಿಸುತ್ತಾರೆ? ಮಾಂಸಕ್ಕಾಗಿ ಮಾರುವುದು ಅನೈತಿಕವಲ್ಲವೇ? ಹಾಗಾದರೆ, ಇದನ್ನು ದೊಡ್ಡಿಯಲ್ಲಿ ಇಟ್ಟುಕೊಂಡು ಏನು ಮಾಡುವುದು? ಇದರ ಖರ್ಚನ್ನು ಹೇಗೆ ನಿಭಾಯಿಸುವುದು?
ದನಗಳೆಲ್ಲ ಗ್ರಾಮೀಣ ಪ್ರದೇಶದಲ್ಲಿ ಯಾಕಿವೆ ಅನ್ನುವುದಕ್ಕೆ ಈ ಮೇಲಿನ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳಲ್ಲೇ  ಇವೆ. ರೈತರು ಬರೇ ಭಾವನೆಗಾಗಿ ದನ ಸಾಕಾಣಿಕೆ ಮಾಡುತ್ತಿಲ್ಲ. ಅದು ಅವರ ಅನಿವಾರ್ಯತೆ. ಗದ್ದೆಯನ್ನು ಉಳಬೇಕಾದರೆ, ಗೊಬ್ಬರ ಹಾಕಬೇಕಾದರೆ ಅವರಿಗೆ ದನ ಬೇಕು. ಹೈನುತ್ಪನ್ನಗಳಿಗಾಗಿಯೂ ಅವರಿಗೆ ದನ ಬೇಕು. ಅದೊಂದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ. ನಗರಗಳಲ್ಲಿ ಈ ಅವಕಾಶ ಇಲ್ಲ. ಅಲ್ಲಿ ದನಗಳಿಗೆ ಕೊಡುವ ಪ್ರಕ್ರಿಯೆ ನಡೆಯಬಹುದೇ ಹೊರತು ದನಗಳಿಂದ ಕೊಳ್ಳುವಿಕೆಗೆ ಇರುವ ಅವಕಾಶಗಳು ತೀರಾ ತೀರಾ ಕಡಿಮೆ. ಆದ್ದರಿಂದಲೇ ನಗರ ಪ್ರದೇಶಗಳು ದನ ಸಾಕಾಣಿಕೆಯಿಂದ ಮುಕ್ತವಾಗಿವೆ. ಹಾಗಂತ, ಈ ವಾಸ್ತವ ರಾಜಕಾರಣಿಗಳಿಗೆ ಖಂಡಿತ ಗೊತ್ತು. ಆದರೆ ಅದನ್ನು ಹೇಳಿದರೆ ಓಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಹೇಳುತ್ತಿಲ್ಲ.
ಭಾವನಾತ್ಮಕ ರಾಜಕಾರಣಕ್ಕೆ ಯಶಸ್ಸು ಲಭ್ಯವಾಗಬೇಕೆಂದರೆ, ಗೋಸಾಕಾಣಿಕೆಯ ಸುತ್ತ ಇರುವ ಈ ಸತ್ಯಗಳನ್ನು ಅಡಗಿಸಬೇಕು. ‘ಗೋಹತ್ಯೆ ನಿಷೇಧ’ ಎಂಬ ಕೂಗೆಬ್ಬಿಸಿ ಭಾವನಾತ್ಮಕ ಯುದ್ಧಕ್ಕೆ ಜನರನ್ನು ಸಜ್ಜುಗೊಳಿಸಬೇಕು. ಸದ್ಯ ನಡೆಯುತ್ತಿರುವುದು ಇಷ್ಟೇ. ಉತ್ತರ ಪ್ರದೇಶದ ಬೀಡಾಡಿ ದನಗಳು ಸಾರುತ್ತಿರುವುದೂ ಈ ರಾಜಕೀಯದ ಅಡ್ಡ ಪರಿಣಾಮವನ್ನೇ.


Monday, 11 February 2019

ಓದದೆಯೇ ಆಡುವ ಮಾತು ಮತ್ತು ಭಾವುಕ ಗುಂಪು




     ಸಂಘಪರಿವಾರದಿಂದ ಹೊರಬಂದ ಮೂವರು ಪ್ರಮುಖ ನಾಯಕರು ಮಂಗಳೂರಿನಲ್ಲಿ ನಡೆದ ಜನನುಡಿ ಸಾಹಿತ್ಯದ ವೇದಿಕೆಯಲ್ಲಿ ತಮ್ಮ ಗತ ಬದುಕನ್ನು ಮೆಲುಕು ಹಾಕಿಕೊಂಡಿದ್ದಾರೆ. ಅವರ ಮೆಲುಕು ಎಷ್ಟು ಆಘಾತಕಾರಿಯಾದ ವಿಷಯಗಳನ್ನು ಒಳಗೊಂಡಿತ್ತೆಂದರೆ, ಅವರ ಮಾತಿನಿಂದ ಪ್ರಚೋದಿತವಾಗಿ ಈ ಹಿಂದೆ ನ್ಯಾಯಬಾಹಿರ ಕೃತ್ಯಗಳಲ್ಲಿ ಭಾಗಿಯಾದ ಗುಂಪು ಎಷ್ಟು ಅಮಾಯಕವಾದುದು ಎಂದು ಸ್ಪಷ್ಟವಾಗುತ್ತದೆ. ಭಜರಂಗದಳದ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, ನಮೋ ಬ್ರಿಗೇಡ್‍ನ ನಿಕೇತ್ ರಾಜ್ ಮೌರ್ಯ ಮತ್ತು ಸುಧೀರ್ ಮರೊಳ್ಳಿ ಇವರೇ ಆ ಮೂವರು. ಗುಜರಾತ್‍ಗೆ ಭೇಟಿಯನ್ನು ಕೊಡದೆಯೇ ಮತ್ತು ವಿವೇಕಾನಂದರ ಬಗ್ಗೆ ಏನನ್ನೂ ಓದದೆಯೇ ಗುಜರಾತ್‍ನ ಅಭಿವೃದ್ಧಿಯನ್ನು ಮತ್ತು ವಿವೇಕಾನಂದರ ವಿಚಾರಧಾರೆಯನ್ನು ಜನರ ಮುಂದೆ ಭಾವನಾತ್ಮಕ ಹೇಳುತ್ತಿದ್ದುದಾಗಿ ಅವರು ಒಪ್ಪಿಕೊಂಡರು. ಕ್ಷಮೆ ಯಾಚಿಸಿದರು. ತಮ್ಮ ಮಾತುಗಳಿಂದ ಪ್ರಚೋದಿತವಾಗುತ್ತಿದ್ದ ಕಾರ್ಯಕರ್ತರಿಗೆ ಅಧ್ಯಯನರಹಿತವಾದ ತಮ್ಮ ಮಾತುಗಳೇ ವೇದವಾಕ್ಯಗಳಾಗಿದ್ದುವು ಎಂಬ ಧಾಟಿಯಲ್ಲಿ ಅವರು ಮಾತಾಡಿದರು.
  ಇವತ್ತಿನ ಬಹುದೊಡ್ಡ ದುರಂತ ಇದು. ಓದು ಇಲ್ಲ. ಅಧ್ಯಯನ ಇಲ್ಲ. ತಾವು ಆಲಿಸುತ್ತಿರುವ ಮಾತುಗಳು ನಿಜವೋ ಸುಳ್ಳೋ ಎಂಬುದನ್ನು ಒರೆಗೆ ಹಚ್ಚಿ ನೋಡುವ ತಿಳುವಳಿಕೆಯೂ ಈ ಗುಂಪಿನಲ್ಲಿ ಇರುವುದಿಲ್ಲ. ರಾಜಕೀಯಕ್ಕೆ ಬೇಕಾಗಿರುವುದು ಇಂಥ ಜನಸಮೂಹವೇ. ಒಂದುವೇಳೆ, ವಿವೇಕಾನಂದರನ್ನು ಓದಿಕೊಂಡ ಯಾರೇ ಆಗಲಿ, ಅವರನ್ನು ಒಂದು ಧರ್ಮದ ವೈರಿಯಾಗಿ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಅವರು ಇಸ್ಲಾಮನ್ನು ಗೌರವಿಸಿದರು. ಮೆಚ್ಚಿಕೊಂಡರು. ಕ್ರೈಸ್ತ ಧರ್ಮದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಹಿಂದೂ ಧರ್ಮದ ಮೇಲೆ ನಿಷ್ಠೆಯನ್ನೂ ವ್ಯಕ್ತಪಡಿಸಿದರು. ಇದು ನಿಜವಾದ ವಿವೇಕಾನಂದ. ಅವರನ್ನು ಅರಿತುಕೊಳ್ಳುವುದಕ್ಕೆ ಅನೇಕಾರು ಪುಸ್ತಕಗಳಿವೆ. ಅವರೋರ್ವ ಶ್ರದ್ಧಾವಂತ ಹಿಂದು. ಅವರಿಗೆ ಈ ದೇಶದಲ್ಲಿರುವ ಹಿಂದೂಯೇತರ ಧರ್ಮಗಳು ಎಂದೂ ಅಡ್ಡಿಯಾಗಿರಲಿಲ್ಲ. ಈ ಧರ್ಮಗಳ ಆಚರಣೆಗಳು; ಇಗರ್ಜಿ, ಮಸೀದಿ, ಬಸದಿಗಳು ಅವರನ್ನು ವ್ಯಾಕುಲಕ್ಕೆ ಒಳಪಡಿಸಿಯೂ ಇರಲಿಲ್ಲ. ಅವರು ಇಸ್ಲಾಮಿನ ಸಮಾನತೆಯ ಚಿಂತನೆಯಿಂದ, ಕ್ರೈಸ್ತರ ಸೇವಾ ಮನೋಭಾವದಿಂದ ಬಹಳವೇ ಪ್ರಭಾವಿತಗೊಂಡಿದ್ದರು. ವಿವೇಕಾನಂದರ ಬದುಕನ್ನು ಅಧ್ಯಯನ ನಡೆಸಿದರೆ, ಅವರ ಉದಾರವಾದಿ ವಿಚಾರಧಾರೆಗಳು ಎದುರ್ಗೊಳ್ಳುತ್ತಲೇ ಹೋಗುತ್ತವೆ. ವಿಷಾದ ಏನೆಂದರೆ,
ಸದ್ಯದ ದಿನಗಳಲ್ಲಿ ನಮಗೆ ಪರಿಚಿತವಾಗುತ್ತಿರುವ ವಿವೇಕಾನಂದ ಇವರಲ್ಲ. ಉದಾರವಾದಿ ವಿವೇಕಾನಂದರನ್ನು ಯಾಕೋ ಒಂದು ಬೇಲಿಯೊಳಗೆ ಕೂರಿಸಿ ಪ್ರಸ್ತುತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಹಾಗಂತ, ಕೇವಲ ವಿವೇಕಾನಂದರಿಗೆ ಮಾತ್ರ ಸೀಮಿತಗೊಳಿಸಿ ಹೀಗೆ ಹೇಳಬೇಕಾಗಿಲ್ಲ. ಗಾಂಧೀಜಿ, ನೆಹರೂ, ಟಿಪ್ಪು ಸುಲ್ತಾನ್, ಶಿವಾಜಿ, ಔರಂಗಝೇಬ್, ಪ್ರವಾದಿ ಮುಹಮ್ಮದ್‍ರ ಕುರಿತೂ ಹೀಗೆ ಹೇಳಬೇಕಾಗುತ್ತದೆ. 5 ದಶಕಗಳ ಹಿಂದೆ ಗಾಂಧೀಜಿ, ನೆಹರೂ, ಪಟೇಲರ ಬಗ್ಗೆ ಇದ್ದ ಅಭಿಪ್ರಾಯಗಳು ಈಗಿನ ಯುವ ತಲೆಮಾರಿನ ಒಂದು ದೊಡ್ಡ ಗುಂಪಿನಲ್ಲಿ ಇಲ್ಲ. ಇವರನ್ನು ಓದಿಯೇ ಇಲ್ಲದ ಒಂದು ದೊಡ್ಡ ಗುಂಪು ಇವತ್ತು ಇವರ ಬಗ್ಗೆ ಧಾರಾಳ ಮಾತಾಡುತ್ತಿದೆ. ಗಾಂಧೀಜಿ ಈ ದೇಶಕ್ಕೆ ಏನನ್ನೂ ಕೊಟ್ಟಿಲ್ಲ, ನೆಹರೂ ದೇಶ ವಿಭಜಕ ಎಂಬಲ್ಲಿಂದ ತೊಡಗಿ ಉದ್ದಕ್ಕೂ ಇವರ ಬಗ್ಗೆ ನಕಾರಾತ್ಮಕವಾಗಿ ಹೇಳುವ ಯುವ ಗುಂಪು ನಿರ್ಮಾಣವಾಗಿದೆ. ಔರಂಗಝೇಬ್, ಟಿಪ್ಪು ಸುಲ್ತಾನ್, ಶಿವಾಜಿ ಇತ್ಯಾದಿ ವ್ಯಕ್ತಿತ್ವಗಳ ಕುರಿತೂ ಈ ಗುಂಪು ಎಷ್ಟು ಬೇಕಾದರೂ ಮಾತಾಡುತ್ತದೆ. ಹಾಗಂತ,
ಈ ಗುಂಪಿಗೆ ಇವೆಲ್ಲ ಮಾಹಿತಿಗಳು ಎಲ್ಲಿಂದ ಎಂದು ಹುಡುಕ ಹೊರಟರೆ ಲಭ್ಯವಾಗುವುದು ತೀವ್ರ ಆಘಾತ ಮತ್ತು ಬಹುದೊಡ್ಡ ಶೂನ್ಯ. ಕಳೆದುಹೋದ ವ್ಯಕ್ತಿತ್ವಗಳ ಬಗ್ಗೆ ಅವರಾಡುವ ಮಾತುಗಳಿಗೆ ಅವರಲ್ಲಿ ಯಾವುದೇ ಆಧಾರಗಳೂ ಇರುವುದಿಲ್ಲ. ಅಲ್ಲಿ ಇಲ್ಲಿ ಕೇಳಿದವುಗಳು ಮತ್ತು ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ಓದಿದವುಗಳ ಹೊರತು ಅಧ್ಯಯನದ ಅರಿವು ಇರುವುದೇ ಇಲ್ಲ. ಔರಂಗಝೇಬ್‍ನನ್ನು ದೇಗುಲ ಭಂಜಕ ಎಂದು ಹೇಳುವವರಿಗೆ ನಿಜವಾದ ಔರಂಗಝೇಬ್ ಎಷ್ಟು ಮಂದಿಗೆ ಗೊತ್ತಿದೆ? ಆತ ಭಂಜಿಸಿದ ದೇಗುಲಗಳ ಸಂಖ್ಯೆಯನ್ನು ಹುಡುಕುತ್ತಾ ಹೋದರೆ ನಿಖರವಾಗಿ ಸಿಗುವ ಸಂಖ್ಯೆ- ಒಂದು. ಅದಕ್ಕೂ ಬಲವಾದ ಕಾರಣ ಇತ್ತು. ಭಂಜಿಸಿದ ಆ ದೇಗುಲದ ಪಕ್ಕವೇ ಅದೇ ದೇಗುಲದ ಪುನರ್ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದ್ದ ಅನ್ನುವ ಮಾಹಿತಿಯೂ ಸಿಗುತ್ತದೆ. ನಿಜವಾಗಿ,
ಔರಂಗಝೇಬ್ ಹಿಂದೂಗಳ ವಿರೋಧಿ ಆಗಿರಲಿಲ್ಲ. ಹಿಂದೂಗಳ ವಿರೋಧ ಕಟ್ಟಿಕೊಂಡು ಯಾವ ರಾಜರಿಗೂ ಇಲ್ಲಿ ಅಧಿಕಾರ ಚಲಾಯಿಸಲು ಸಾಧ್ಯವೂ ಇರಲಿಲ್ಲ. ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವಿಭಜಿಸದೇ ಬರೇ ರಾಜರುಗಳಾಗಿ ನೋಡಿದರೆ ಮತ್ತು ಈ ಆಧಾರದಲ್ಲಿಯೇ ಅವರ ಆಡಳಿತವನ್ನು ಪರೀಕ್ಷೆಗೊಡ್ಡಿದರೆ, ಈ ರಾಜರುಗಳಲ್ಲಿ (ಅವರು ಹಿಂದೂ ಆಗಲಿ ಮುಸ್ಲಿಮ್ ಆಗಲಿ) ವ್ಯತ್ಯಾಸಗಳು ಬಹುತೇಕ ಕಾಣಿಸುವುದೇ ಇಲ್ಲ. ಶಿವಾಜಿಯ ಸೇನೆಗೆ ಬಲ ತುಂಬಿದವರೇ ಮುಸ್ಲಿಮರು. ಟಿಪ್ಪು, ಔರಂಗಝೇಬರ ಅಧಿಕಾರಕ್ಕೆ ಬೆಂಗಾವಲಾಗಿ ನಿಂತವರೇ ಹಿಂದೂಗಳು. ಇದು ಇತಿಹಾಸ. ಈ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಇರುವ ದಾರಿ ಒಂದೇ- ಓದು ಮತ್ತು ಅಧ್ಯಯನ. ಪ್ರವಾದಿ ಮುಹಮ್ಮದ್ ಏನು ಅನ್ನುವುದನ್ನು ವಿವರಿಸುವುದಕ್ಕೆ ಇಲ್ಲಿ ನೂರಾರು ಪುಸ್ತಕಗಳಿವೆ. ಒಂದುವೇಳೆ,
ಈ ಯಾವ ಪುಸ್ತಕಗಳನ್ನು ಓದದೆಯೇ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೆಂದರೆ, ಅದು ಅಪಾರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದಂತೆಯೇ ಆಗಬಹುದು. ಸತ್ಯ ಹೇಳುವ ಸಾಮರ್ಥ್ಯ ಇರುವುದು ಅಧಿಕೃತ ಇತಿಹಾಸ ಗ್ರಂಥಗಳಿಗೆ ಮಾತ್ರ. ಶಿವಾಜಿಯ ಬಗ್ಗೆಯೂ ನಾವು ಇದನ್ನೇ ಹೇಳಬೇಕು. ವೇದಗ್ರಂಥಗಳ ಕುರಿತು, ಬೈಬಲ್, ಕುರ್‍ಆನ್‍ನ ಬಗ್ಗೆಯೂ ಹೇಳಬೇಕಾದುದು ಇದನ್ನೇ. ಭಾಷಣ ನಮ್ಮ ದಾರಿ ತಪ್ಪಿಸಬಹುದು. ಸಾಮಾಜಿಕ ಜಾಲತಾಣಗಳೂ ಸುಳ್ಳು ಹೇಳಬಹುದು. ಆದರೆ, ನಮ್ಮ ಅರಿವಿನ ಮಟ್ಟವನ್ನು ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಗ್ರಂಥಗಳು ಮಾತ್ರ ವಿಸ್ತರಿಸುತ್ತಾ ಹೋಗುತ್ತವೆ.
ಇತಿಹಾಸದಲ್ಲಿ ಏನು ನಡೆದಿದೆಯೋ ಅದು ಇತಿಹಾಸದ ಭಾಗವೇ ಹೊರತು ಅದಕ್ಕೆ ಇವತ್ತಿನ ಭಾರತ ಹೊಣೆಗಾರ ಅಲ್ಲ. ಔರಂಗಝೇಬ್, ಬಾಬರ್, ಶಿವಾಜಿ, ಗಾಂಧೀಜಿ ಮತ್ತು ಈ ಪಟ್ಟಿಯಲ್ಲಿ ಸೇರಿಕೊಳ್ಳುವ ಎಲ್ಲರೂ ಭೂಮಿಯಲ್ಲಿ ತಂತಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗಿದ್ದಾರೆ. ಅವರ ಹೆಸರಲ್ಲಿ ಇವತ್ತು ನಾವೆಷ್ಟೇ ಜಗಳಾಡಿದರೂ ಅವರಿಗೆ ಕಿಂಚಿತ್ ಲಾಭ ಅಥವಾ ನಷ್ಟ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಸದ್ಯದ ಅಗತ್ಯ ಏನೆಂದರೆ, ಅವರನ್ನು ಅವರಿವರಿಂದ ಕಲಿತುಕೊಳ್ಳದೇ ಪುಸ್ತಕಗಳಿಂದ ಕಲಿತುಕೊಂಡು ಅವರು ಮಾಡಿರಬಹುದಾದ ಪ್ರಮಾದಗಳಿಂದ ಪಾಠ ಕಲಿಯುವುದು. ಮಾತ್ರವಲ್ಲ, ಆಧುನಿಕ ಭಾರತವನ್ನು ಇನ್ನಷ್ಟು ಸುಂದರವಾಗಿ ಕಟ್ಟಲು ಪ್ರಯತ್ನಿಸುವುದು, ಇದು ಅಸಾಧ್ಯವಲ್ಲ. ಆದರೆ ಇದನ್ನು ಸಾಧ್ಯಗೊಳಿಸಲು ರಾಜಕೀಯ ಮುಕ್ತ ಅರಿವನ್ನು ಹೊಂದಬೇಕಾಗುತ್ತದೆ.

    ಈ ದೇಶದ ಇತಿಹಾಸವನ್ನು ಓದುವುದು ಮತ್ತು ಇತಿಹಾಸವನ್ನು ಇತಿಹಾಸವಾಗಿ ಓದುವುದು ಇವೆರಡೂ ಇವತ್ತಿನ ತುರ್ತು ಅಗತ್ಯವೆಂದು ಹೇಳಬಹುದು. ಇತಿಹಾಸವನ್ನು ಓದುವುದಕ್ಕೂ ಇತಿಹಾಸವನ್ನು ಇತಿಹಾಸವಾಗಿ ಓದುವುದಕ್ಕೂ ವ್ಯತ್ಯಾಸ ಇದೆ. ಇತಿಹಾಸವನ್ನು ಇತಿಹಾಸವಾಗಿ ಓದುವಾಗ ನಾವು ಆ ಕಾಲದಲ್ಲಿ ನಿಂತು ಯೋಚಿಸುತ್ತೇವೆಯೇ ಹೊರತು ಇವತ್ತಿನ ಭಾರತವನ್ನು ಅವತ್ತಿನ ಇತಿಹಾಸಕ್ಕೆ ಹೊಣೆಯಾಗಿ ಯೋಚಿಸುವುದಿಲ್ಲ. ಸಾಧ್ಯವಾದರೆ ಈ ದೇಶದಲ್ಲಿರುವ ಎಲ್ಲ ಸಂಘಟನೆಗಳೂ ಇತಿಹಾಸದ ಅಧ್ಯಯನವನ್ನು ತಮ್ಮ ಕಾರ್ಯಕರ್ತರಿಗೆ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಳ್ಳಬೇಕು. ಹೀಗೆ ಅಧ್ಯಯನ ನಿರತ ಯುವ ಸಮೂಹವೊಂದು ತಯಾರಾದರೆ, ಆ ಬಳಿಕ ಭಾಷಣಕಾರರು ಮತ್ತು ಬರಹಗಾರರು ತುಸು ಜಾಗೃತಗೊಂಡಾರು. ಅವರು ಆಡುವುದಕ್ಕಿಂತ ಮೊದಲು ಓದಿಯಾರು. ಹಾಗೆ ಓದಿ ಆಡುವ ಮಾತುಗಳು ಸಮಾಜವನ್ನು ಕಟ್ಟಬಲ್ಲುದೇ ಹೊರತು ಒಡೆಯಲಾರದು.

ನಮ್ಮನ್ನು ಮರುಚಿಂತನೆಗೆ ಒಳಪಡಿಸಬೇಕಾದ ವಾನರ



ರಾಜ್ಯದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಮೇಲೆ ಒಂದು ಬಗೆಯ ಮಂಕು ಕವಿದಿದೆ. ಈ ಮಂಕು ಕರಾವಳಿಯ ಉಳಿದ ಭಾಗಗಳ ಮೇಲೂ ಕವಿಯಲಿದೆಯೇ ಎಂಬ ಭಯವೂ ಕಾಡುತ್ತಿದೆ. ಮಂಗನನ್ನು ಆರಾಧಿಸುವ ಮತ್ತು ಆರಾಧಿಸದ ಸಮುದಾಯಗಳಲ್ಲಿ ಏಕ ಪ್ರಕಾರ ಮಂಗ ಭಯ ಢಾಳಾಗಿ ಕಾಣಿಸಿಕೊಂಡಿದೆ. ಸುಮಾರು 60ಕ್ಕಿಂತಲೂ ಅಧಿಕ ಮಂಗಗಳು ಈಗಾಗಲೇ ಸಾವಿಗೀಡಾಗಿವೆ. ಮಂಗಗಳು ಸಾಯುವುದೆಂದರೆ ಕಾಯಿಲೆ ಇನ್ನೂ ಜೀವಂತವಿದೆ ಎಂದರ್ಥ. ಕಂಗಿನ ತೋಟಗಳು ಹುಲುಸಾದ ಬೆಳೆಯೊಂದಿಗೆ ಕೊಯ್ಲಿಗೆ ಸಿದ್ಧವಾಗಿರುವ ಈ ಸಮಯದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಕೃಷಿಕರನ್ನು ಕಂಗಾಲಾಗಿಸಿದೆ. ಕಂಗಿನ ತೋಟಕ್ಕೆ ಸಾಮಾನ್ಯವಾಗಿ ಮಂಗಗಳು ದಾಳಿಯಿಡುತ್ತವೆ. ಆದ್ದರಿಂದ ತೋಟಕ್ಕೆ ಹೋಗಲು ಮಾಲಿಕರಿಂದ ಕೂಲಿಯಾಳುಗಳ ವರೆಗೆ ಎಲ್ಲರಿಗೂ ಭಯ. ಹಾಗಂತ, ಮಂಗನ ಕಾಯಿಲೆ ಸಾಂಕ್ರಾಮಿಕ ರೋಗವಲ್ಲ ಎಂಬುದು ನಿಜವೇ. ಆದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಎಷ್ಟು ದೃಢಕಾಯರನ್ನೂ ಅದು ಅಲುಗಾಡಿಸಬಹುದು ಅನ್ನುವುದೂ ನಿಜ. ವೈರಸ್ ಪೀಡಿತ ಉಣುಗು ಕಚ್ಚಿದರೆ ಮಾತ್ರ ಹರಡುವ ಕಾಯಿಲೆ ಇದು. ಉಣುಗಿಗೆ ಕಚ್ಚುವುದಕ್ಕೆ ಪ್ರಾಯ ಭೇದ ಇಲ್ಲ. ಸಂಪತ್ತು ನೋಡಿ ಅದು ಕಚ್ಚುವುದೂ ಇಲ್ಲ. ಆದ್ದರಿಂದ ಡಿಎಂಪಿ (ಡಿ ಮಿಥೈಲ್ ಪ್ಯಾಲೆಟ್) ತೈಲವನ್ನು ಹಚ್ಚಿಕೊಳ್ಳುವಂತೆ ಈ ಭಾಗದ ಜನರಲ್ಲಿ ಜಿಲ್ಲಾಡಳಿತ ಮನವಿ ಮಾಡಿಕೊಳ್ಳುತ್ತಿದೆ. ಸಮಸ್ಯೆ ಏನೆಂದರೆ,
 ಈ ತೈಲವೇ ಈಗ ದುರ್ಲಭ ಎನಿಸಿಕೊಂಡಿದೆ. ಅಲ್ಲದೆ, ಮಂಗನ ಕಾಯಿಲೆಗೆ ಲಸಿಕೆ ತಯಾರಿಸುವ ಕೇಂದ್ರವಿರುವದು ಈ ದೇಶದಲ್ಲಿ ಒಂದೇ ಒಂದು. ಅದೂ ಬೆಂಗಳೂರಿನಲ್ಲಿ. ಅಲ್ಲಿಂದಲೇ ತಮಿಳುನಾಡು, ಕೇರಳ, ಗೋವಾ ಇತ್ಯಾದಿ ರಾಜ್ಯಗಳಿಗೂ ಸರಬರಾಜು ಆಗಬೇಕಾಗಿರುವುದರಿಂದ ಲಸಿಕೆ ಸಕಾಲಕ್ಕೆ ಪೂರೈಸಲು ಸಾಧ್ಯವಾಗದಂಥ ಸ್ಥಿತಿಯಿದೆ. ಆಘಾತಕಾರಿ ಸಂಗತಿ ಏನೆಂದರೆ, ಮಂಗನ ಕಾಯಿಲೆಯನ್ನು ಹರಡುವ ಉಣುಗು ಮನುಷ್ಯನಿಗೆ ಕಚ್ಚಿದ ತಕ್ಷಣ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಉಣುಗು ಕಚ್ಚಿದ ವಾರದ ಬಳಿಕ ಮನುಷ್ಯರಲ್ಲಿ ಜ್ವರ, ಚಳಿ ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಂತ, ಈ ಲಕ್ಷಣಗಳು ಮಂಗನ ಕಾಯಿಲೆಯ ಲಕ್ಷಣವೇ ಎಂದು ಖಚಿತಪಡಿಸಿಕೊಳ್ಳಬೇಕಾದರೆ, ಕಾಯಿಲೆ ಪೀಡಿತರ ರಕ್ತದ ಮಾದರಿಗಳನ್ನು ತಪಾಸಿಸಬೇಕು. ಆದರೆ ಇಂಥ ಪ್ರಯೋಗಾಲಯ ಕರಾವಳಿ ಭಾಗದಲ್ಲಿ ಇಲ್ಲವೇ ಇಲ್ಲ. ಒಂದೋ ಬೆಂಗಳೂರಿಗೆ ಇಲ್ಲವೇ ಪುಣೆಗೆ ರಕ್ತದ ಮಾದರಿಯನ್ನು ಕಳುಹಿಸಿಕೊಟ್ಟು ಅಲ್ಲಿಂದ ಬರುವ ಫಲಿತಾಂಶಕ್ಕಾಗಿ ಕಾಯಿಲೆ ಪೀಡಿತರು ಕಾಯಬೇಕು. ಇದಕ್ಕೆ ಕನಿಷ್ಠವೆಂದರೆ 10 ದಿನಗಳು  ಬೇಕಾಗುತ್ತವೆ. 1953ರಲ್ಲಿ ಮೊತ್ತ ಮೊದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಅಂಚಿನಲ್ಲಿ ಕಾಣಿಸಿಕೊಂಡ ಈ ಕಾಯಿಲೆಯನ್ನು ಮಂಗನ ಕಾಯಿಲೆಯೆಂದು ಪತ್ತೆ ಹಚ್ಚಿದ್ದೇ 1957ರಲ್ಲಿ. ವಿಶೇಷ ಏನೆಂದರೆ, 1957ರ ಬಳಿಕ ಅತಿದೊಡ್ಡ ಪ್ರಮಾಣದಲ್ಲಿ ಈ ಬಾರಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಕಾಯಿಲೆಗಳಲ್ಲಿ ಎರಡು ಬಗೆಯಿದೆ. ಒಂದು- ಮನುಷ್ಯ ನಿರ್ಮಿತವಾದರೆ, ಇನ್ನೊಂದು ಪ್ರಾಕೃತಿಕವಾದುದು. ಮಂಗನ ಕಾಯಿಲೆಯನ್ನು ಯಾವ ದೃಷ್ಟಿಯಲ್ಲಿ ಪರಿಶೀಲಿಸಿದರೂ ಅದರ ಹರಡುವಿಕೆಯಲ್ಲಿ ಮನುಷ್ಯನ ಪಾತ್ರವಿದೆಯೆಂದೇ ಅನಿಸುತ್ತದೆ. ಮಂಗನ ಕಾಯಿಲೆಗೂ ಕಾಡಂಚಿನ ಪ್ರದೇಶಗಳಿಗೂ ಸಂಬಂಧ ಇದೆ. ಮಂಗಗಳ ವಾಸ ಸ್ಥಳ ಕಾಡು. ಸಾಮಾನ್ಯವಾಗಿ ‘ಊರಿಗೆ ದಾಳಿಯಿಟ್ಟ ಮಂಗಗಳು’ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನಾವು ಓದುತ್ತಿರುತ್ತೇವೆ. ಇಂತಿಂಥ ಕಡೆ ಕಂಗು, ತೆಂಗು, ಬಾಳೆತೋಟಗಳು ಮಂಗಗಳ ಹಾವಳಿಯಿಂದಾಗಿ ನಾಶವಾಗಿವೆ ಎಂದು ಹೇಳಲಾಗುತ್ತದೆ. ನಿಜವಾಗಿ, ಇಂಥ ಸುದ್ದಿಗಳಲ್ಲಿ ಹೇಳದೇ ಇರುವ ಕೆಲವು ಸತ್ಯಗಳೂ ಇರುತ್ತವೆ. ಮೊದಲು ದಾಳಿಯಿಟ್ಟದ್ದು ಯಾರು ಎಂಬ ಪ್ರಶ್ನೆಯನ್ನು ಇಂಥ ಸುದ್ದಿಗಳು ಖಂಡಿತ ಎತ್ತುತ್ತವೆ. ಮಂಗಗಳು ನಾಡಿಗೆ ದಾಳಿಯಿಡುವ ಮೊದಲು ಮನುಷ್ಯ ಕಾಡಿಗೆ ದಾಳಿಯಿಟ್ಟಿದ್ದಾನೆ. ಕಾಡನ್ನು ನಾಡನ್ನಾಗಿ ಪರಿವರ್ತಿಸಿಕೊಂಡಿದ್ದಾನೆ. ತನ್ನ ವಾಸಸ್ಥಳವು ನಾಶವಾದಾಗ ಪ್ರಾಣಿಗಳು ಸಹಜವಾಗಿ ದಿಕ್ಕು ತಪ್ಪುತ್ತವೆ. ನಾಡಾಗಿ ಪರಿವರ್ತನೆಯಾಗಿರುವ ತಮ್ಮ ಕಾಡಿನಲ್ಲಿ ಮತ್ತು ಕೆಲವೊಮ್ಮೆ ದಿಕ್ಕು ತಪ್ಪಿ ಕಾಡಲ್ಲದ ನಾಡಿನಲ್ಲೂ ಅವು ಅಲೆಯುತ್ತವೆ. ಇದನ್ನೇ ಮನುಷ್ಯ ಬಹಳ ಬುದ್ಧಿವಂತಿಕೆಯಿಂದ ದಾಳಿ ಎಂದು ವ್ಯಾಖ್ಯಾನಿಸುತ್ತಾನೆ. ಮಂಗನ ಕಾಯಿಲೆಗೆ ಸಂಬಂಧಿಸಿಯೂ ಈ ಮಾತು ಅನ್ವಯಿಸುತ್ತದೆ. ಮಂಗನ ಕಾಯಿಲೆ ಎಲ್ಲೆಲ್ಲ  ಕಾಣಿಸಿಕೊಂಡಿವೆಯೋ ಅವೆಲ್ಲ ಕಾಡಂಚಿನಲ್ಲಿರುವ ಪ್ರದೇಶಗಳು. ಈ ಪ್ರದೇಶದ ಮಂದಿ ಅರಣ್ಯವನ್ನು ಒತ್ತುವರಿ ಮಾಡಿಕೊಳ್ಳುವ ಉದ್ದೇಶದಿಂದ ಗುಡ್ಡಗಳಿಗೆ ಬೆಂಕಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಲೂ ಇದೆ. ಅದರಿಂದಾಗಿ ಆಗಿರುವ ಪರಿಣಾಮ ಏನೆಂದರೆ, ಕಾಡಿನ ಸಹಜ ಹುಲ್ಲು ನಾಶವಾಗಿದೆ. ಅದರ ಜಾಗದಲ್ಲಿ ಪೊದೆ ಬೆಳೆದಿದೆ. ಈ ಪೊದೆಗಳಲ್ಲಿಯೇ ಮಂಗನ ಕಾಯಿಲೆ ಹರಡುವ ಉಣುಗುಗಳು ಭಾರೀ ಸಂಖ್ಯೆಯಲ್ಲಿ ಸೇರಿಕೊಂಡಿವೆ. ಅಂದಹಾಗೆ,
ಅಸಂಖ್ಯ ಜೀವಿಗಳ ಪೈಕಿ ಮಂಗ ಒಂದು ಜೀವಿ ಮಾತ್ರ. ಪವಿತ್ರ-ಅಪವಿತ್ರತೆಯ ಆಚೆಗೆ ಅದು ಕೇವಲ ಒಂದು ಪ್ರಾಣಿ. ಈ ಪ್ರಾಣಿ ಯಾಕೆ ಮನುಷ್ಯ ಕಂಟಕವಾಗಿ ಪರಿವರ್ತನೆಯಾಯಿತು ಎಂಬ ಬಗ್ಗೆ ಆಲೋಚಿಸಬೇಕಾದ ಸಮಯ ಇದು. ಮೊದಲನೆಯದಾಗಿ, ಮನುಷ್ಯರು ಆರಾಧನಾ ಭಾವದಿಂದ ನೋಡಬೇಕಾದ ಯಾವ ವಿಶೇಷತೆಯೂ ತನ್ನಲ್ಲಿಲ್ಲ ಎಂಬುದನ್ನು ಸತ್ತು ಬಿದ್ದಿರುವ 60ಕ್ಕಿಂತಲೂ ಅಧಿಕ ಮಂಗಗಳೂ ಬಹಿರಂಗವಾಗಿಯೇ ಸಾರಿವೆ. ಸಾವಿನಿಂದ ತಮ್ಮನ್ನೇ ರಕ್ಷಿಸಿಕೊಳ್ಳಲಾಗದ ಮತ್ತು ಮನುಷ್ಯರನ್ನೇ ಸಾಯಿಸುವ ವೈರಾಣು ತನ್ನ ದೇಹದಲ್ಲಿ ಉತ್ಪತ್ತಿಯಾಗುವುದನ್ನು ತಡೆಯಲಾಗದ ಪ್ರಾಣಿ ಅದು. ಇನ್ನೊಂದು ಸಂಗತಿ ಏನೆಂದರೆ, ಹೆಚ್ಚಿನ ರೋಗಗಳೂ ಮನುಷ್ಯ ನಿರ್ಮಿತವೇ. ಈ ಹಿಂದೆ ಗುಜರಾತ್‍ನಲ್ಲಿ ವ್ಯಾಪಕ ಸಾವು-ನೋವಿಗೆ ಕಾರಣವಾದ ಪ್ಲೇಗ್ ರೋಗದ ಬಗ್ಗೆ ಅನೇಕಾರು ಶಂಕೆಗಳಿದ್ದುವು. ಇದರಲ್ಲಿ ಒಂದು- ಪಾಶ್ಚಾತ್ಯ ರಾಷ್ಟ್ರಗಳು ಪ್ರಯೋಗಾತ್ಮಕವಾಗಿ ಪ್ಲೇಗ್ ವೈರಾಣುವನ್ನು ಗುಜರಾತ್‍ನಲ್ಲಿ ಬಿತ್ತಿದೆ ಎಂಬುದಾಗಿತ್ತು. ಹಾಗಂತ, ಬಡಪಾಯಿ ದೇಶಗಳ ಬಡಪಾಯಿ ಜನರ ಮೇಲೆ ವೈಜ್ಞಾನಿಕ ಪ್ರಯೋಗಗಳು ನಡೆಯುವುದು ಹೊಸತೂ ಅಲ್ಲ, ಸುಳ್ಳೂ ಅಲ್ಲ. ತಮ್ಮ ವೈರಿ ರಾಷ್ಟ್ರದ ಮೇಲೆ ಇನ್ನೊಂದು ರಾಷ್ಟ್ರವು ಜೈವಿಕ ಅಸ್ತ್ರವಾಗಿ ರೋಗಗಳನ್ನು ಬಳಸಿರುವ ಇತಿಹಾಸ ಈ ಜಗತ್ತಿಗಿದೆ. ಆ ಕಾರಣದಿಂದಲೇ, ಈ ಮಂಗನ ಕಾಯಿಲೆಯ ಬಗೆಗೂ ಅನುಮಾನ ವ್ಯಕ್ತವಾಗಿದೆ ಎಂದೇ ಅನಿಸುತ್ತದೆ. ಆದರೂ ಜನದಟ್ಟಣೆಯಿಲ್ಲದ, ಕಾಡಿನಂಚಿನಲ್ಲಿ ವಿರಳವಾಗಿರುವ ಜನರ ಮೇಲೆ ಯಾವುದೇ ರಾಷ್ಟ್ರ ಜೈವಿಕ ಅಸ್ತ್ರವನ್ನು ಪ್ರಯೋಗಿಸುವ ಸಾಧ್ಯತೆ ತೀರಾ ತೀರಾ ಕಡಿಮೆ. ಜೈವಿಕ ಅಸ್ತ್ರವನ್ನು ಪ್ರಯೋಗಿಸುವವರ ಉದ್ದೇಶ ಏನೆಂದರೆ, ದೊಡ್ಡ ಮಟ್ಟದಲ್ಲಿ ಜನರ ಪ್ರಾಣ ಹಾನಿಯಾಗಿಸುವುದು. ಮಂಗನ ಕಾಯಿಲೆ ಸದ್ಯ ಕಾಣಿಸಿಕೊಂಡಿರುವ ಪ್ರದೇಶಗಳನ್ನು ಪರಿಗಣಿಸಿದರೆ, ಅದು ಅಸಾಧ್ಯ. ಆದರೂ ಇವತ್ತಿನ ಕಾಯಿಲೆಗಳಿಗೆ ಕಾಯಿಲೆ ಎಂಬ ಮುಖಕ್ಕಿಂತ ಹೊರತಾದ ಬೇರೆಯದೇ ಆದ ಮುಖವೂ ಇರುತ್ತದೆ ಅನ್ನುವುದು ಸುಳ್ಳಲ್ಲ.
ಮಂಗನ ಕಾಯಿಲೆಯೆಂಬುದು ತಡೆಗಟ್ಟಲು ಸಾಧ್ಯವಿರದ ಅಪಾಯಕಾರಿ ಕಾಯಿಲೆ ಏನಲ್ಲ. ಸ್ಥಳೀಯಾಡಳಿತವು ಮುನ್ನೆಚ್ಚರಿಕೆ ವಹಿಸಿದರೆ ಮತ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರೆ, ಈ ಕಾಯಿಲೆಯ ಭೀತಿಯಿಂದ ಜನರನ್ನು ಮುಕ್ತಗೊಳಿಸಬಹುದು. ಸಾಕಷ್ಟು ಪ್ರಮಾಣದಲ್ಲಿ ಈ ಪ್ರದೇಶಕ್ಕೆ ಔಷಧಗಳನ್ನು ವಿತರಿಸುವುದು, ಸುಸಜ್ಜಿತ ಆಸ್ಪತ್ರೆಯನ್ನು ಈ ಪ್ರದೇಶದಲ್ಲಿ ಸ್ಥಾಪಿಸುವುದು ಮತ್ತು ರಕ್ತದ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯವನ್ನು ನಿರ್ಮಿಸುವುದನ್ನು ಸರಕಾರ ಮಾಡಿದರೆ, ಈ ಕಾಯಿಲೆಯನ್ನು ತಡೆಗಟ್ಟಬಹುದು. ಜೊತೆಗೇ, ಮನುಷ್ಯ ತನ್ನ ದುರಾಸೆಯನ್ನು ಕೈಬಿಟ್ಟು ಪ್ರಕೃತಿಯ ಮಾತುಗಳಿಗೆ ಕಿವಿಗೊಡುವ ಉದಾರತೆಯನ್ನು ತೋರಬೇಕು. ಇತರ ಜೀವಿ, ಜಾಲಗಳಿಗೆ ಜಾಗ ಇರುವ, ಪ್ರಕೃತಿಯ ಸಂವೇದನೆಗೆ ಕಿವಿಯಾಗುವ ಮನಸ್ಸು ಇರಬೇಕು. ಮಂಗನ ಕಾಯಿಲೆಯಲ್ಲಿ ಸಿಗುವ ಪಾಠ ಇದು.

Wednesday, 6 February 2019

ಶ್ರೀರಾಮಚಂದ್ರ ಮತ್ತು ಪ್ರವಾದಿ ಅನುಯಾಯಿಗಳಿಗೆ ಅಭಿನಂದನೆಗಳು


   
ಕಳೆದವಾರ ಎರಡು ಘಟನೆಗಳು ನಡೆದುವು. ಈ ಎರಡೂ ಘಟನೆಗಳಿಗೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿತ್ತು ಮತ್ತು ಆ ಎರಡೂ ಘಟನೆಗಳಿಗೆ ಕಾರಣಕರ್ತರಾದವರು ತಲೆ ತಗ್ಗಿಸುವ ರೂಪದಲ್ಲಿತ್ತು. ಇದರಲ್ಲಿ ಒಂದು- ಪ್ರೊಫೆಸರ್ ಭಗವಾನ್‍ರ ಬರಹ. ಆ ಬರಹದಲ್ಲಿ ಶ್ರೀರಾಮನನ್ನು ಅವರು ಅತ್ಯಂತ ಕೆಳದರ್ಜೆಯ, ಅವಮಾನಕರವಾದ ಮತ್ತು ನಿಂದನಾತ್ಮಕ ರೀತಿಯಲ್ಲಿ ಉಲ್ಲೇಖಿಸಿದ್ದರು. ಮಾತ್ರವಲ್ಲ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನನ್ನು ಹೀಗೆಯೇ ಉಲ್ಲೇಖಿಸಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದರು. ಇನ್ನೊಂದು- ಟಿ.ವಿ. ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್‍ರ ಬಗ್ಗೆ ಆಡಿದ ಮಾತು. ಪ್ರವಾದಿ ಮುಹಮ್ಮದ್‍ರಿಗೆ ಶಿಶುಕಾಮಿ ಎಂಬ ಪದವನ್ನು ಅವರು ಪ್ರಯೋಗಿಸಿದ್ದರು. ಸಾರ್ವಜನಿಕರ ಪ್ರತಿಕ್ರಿಯೆಯ ದೃಷ್ಟಿಯಿಂದ ಈ ಎರಡೂ ಸಂದರ್ಭಗಳು ಬಹುಮುಖ್ಯವಾದವು. ಒಂದು ಧರ್ಮದ ಐಕಾನ್‍ಗಳೆಂಬ ನೆಲೆಯಲ್ಲಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರಿಗೆ ಬಹಳ ದೊಡ್ಡ ಗೌರವವಿದೆ. ಯಾವುದೋ ಒಂದು ಕಾಲದಲ್ಲಿ ಮತ್ತು ಎಷ್ಟೋ ಶತಮಾನಗಳ ಹಿಂದೆ ಬಾಳಿ, ತುಂಬು ಜೀವನ ನಡೆಸಿ ಹೊರಟು ಹೋದವರಷ್ಟೇ ಅಲ್ಲ ಇವರು. ಇವರಿಬ್ಬರನ್ನೂ ಈ ಸಮಾಜ ಅನುಸರಿಸುತ್ತಾ ಬಂದಿದೆ. ಶ್ರೀರಾಮ ಈ ದೇಶದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಗುರುತಿಸಿಕೊಂಡವರು. ಅವರನ್ನು ಆರಾಧಿಸುವ, ಆದರಿಸುವ, ದೇವ ಸ್ವರೂಪಿಯಾಗಿ ಕಾಣುವ ಪರಂಪರೆಯೊಂದು ಈ ದೇಶದಲ್ಲಿ ಬೆಳೆದು ಬಂದಿದೆ. ಶ್ರೀರಾಮರ ಕುರಿತಂತೆ ಹೆಣೆದುಕೊಂಡ ಕತೆಗಳೇ ಇಲ್ಲಿ ನೂರಾರು ಇವೆ. ರಾಮ, ಲಕ್ಷ್ಮಣ, ಸೀತೆ, ಹನುಮಂತ, ಸುಗ್ರೀವ, ವಾಲಿ ಇತ್ಯಾದಿ ಇತ್ಯಾದಿಗಳೆಲ್ಲ ಬರೇ ಹೆಸರುಗಳಷ್ಟೇ ಅಲ್ಲ, ಅವೊಂದು ರೂಪಕ. ಜನರು ಸ್ವತಃ ಪಾತ್ರವಾಗಿ ಅವನ್ನು ಬದುಕಿನಲ್ಲಿ ಅನುಸರಿಸುತ್ತಾ ಬಂದಿದ್ದಾರೆ. ಪ್ರವಾದಿ ಮುಹಮ್ಮದರೂ(ಸ) ಅಷ್ಟೇ. 6 ಮತ್ತು 7ನೇ ಶತಮಾನದ ನಡುವೆ ಮಕ್ಕಾ ಮತ್ತು ಮದೀನಾಗಳನ್ನು ಕೇಂದ್ರವಾಗಿಟ್ಟುಕೊಂಡು ಅವರು ನಡೆಸಿದ ಸುಧಾರಣಾ ಚಟುವಟಿಕೆಗಳು ಅಮೋಘ ಮತ್ತು ಅತುಲ್ಯ. ಅವರ ಕಾಲದ ಸಾಮಾಜಿಕ ರೀತಿ-ನೀತಿ, ಜೀವನ ಪದ್ಧತಿ; ಕೌಟುಂಬಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಗಮನಿಸದೇ ಮತ್ತು ಪರಿಶೀಲನೆಗೊಡ್ಡದೇ ಈ ಕಾಲದಲ್ಲಿ ನಿಂತು ನಾವು ಅವರ ಬಗ್ಗೆ ಬೀಸು ಹೇಳಿಕೆಗಳನ್ನು ಕೊಡುವುದು ಸುಲಭ. ಆದರೆ ಬೀಸು ಹೇಳಿಕೆಗಳಿಗಷ್ಟೇ ಸೀಮಿತವಾಗುವ ವ್ಯಕ್ತಿತ್ವವೇ ಅದು ಎಂಬ ಪರಿಶೀಲನೆಗಿಳಿದರೆ ತೆರೆದುಕೊಳ್ಳುವ ಜಗತ್ತೇ ಬೇರೆ. ಅವರ ಬಾಲ್ಯ, ಯೌವನ, ಮದುವೆ, ಮಕ್ಕಳು, ಅವರ ಸುಧಾರಣಾ ಕಾರ್ಯಗಳು, ಅವರು ಎದುರಿಸಿರುವ ಸವಾಲುಗಳು ಮತ್ತು ಅದನ್ನು ಅವರು ಎದುರಿಸಿದ ರೀತಿ, ಅವರ ಸಾಮಾಜಿಕ ಚಿಂತನೆಗಳು, ಹೆಣ್ಣಿನ ಬಗೆಗಿನ ಅವರ ನಿಲುವು, ವಿಧವೆಯರು ಮತ್ತು ಹೆತ್ತವರ ಬಗೆಗಿನ ಅಭಿಪ್ರಾಯಗಳು ಇತ್ಯಾದಿಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ನಡೆಸಿದ ಓರ್ವ ವ್ಯಕ್ತಿ ಅವರನ್ನು ಒಂದು ವಾಕ್ಯದ ಬೀಸು ಹೇಳಿಕೆಯೊಳಗೆ ಬಂಧಿಸಿಡಲಾರ. ಪ್ರವಾದಿ ಮುಹಮ್ಮದ್‍ರಿಂದ ಆಕರ್ಷಿತರಾಗಿ ಅವರ ಅನುಯಾಯಿಗಳಾದ ತತ್ವಜ್ಞಾನಿಗಳಿದ್ದಾರೆ, ಬರಹಗಾರರಿದ್ದಾರೆ, ಕವಿಗಳಿದ್ದಾರೆ, ರಾಜಕಾರಣಿಗಳಿದ್ದಾರೆ, ಕ್ರೀಡಾಪಟುಗಳಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಬಾಕ್ಸಿಂಗ್ ಪಟು ಅಮೇರಿಕದ ಕ್ಯಾಸಿಯಸ್ ಕ್ಲೇ ಅವರು ಮುಹಮ್ಮದಲಿ ಕ್ಲೇ ಆದುದು ಪ್ರವಾದಿಯವರನ್ನು ಓದಿಕೊಂಡು. ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಸರೋಜಿನಿ ನಾಯ್ಡು, ನೆಹರೂ ಎಲ್ಲರೂ ಪ್ರವಾದಿಯವರ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ಜಾಗತಿಕವಾಗಿ ಇವತ್ತು ಪ್ರವಾದಿ ಮುಹಮ್ಮದ್‍ರಿಗೆ 160 ಕೋಟಿಗಿಂತಲೂ ಅಧಿಕ ಅನುಯಾಯಿಗಳಿದ್ದಾರೆ. ಇಂಥ ವ್ಯಕ್ತಿತ್ವದ ಮೇಲೆ ಪ್ರತಿಕ್ರಿಯಿಸುವ ಮೊದಲು ಅವರ ಬಗ್ಗೆ ಅಧ್ಯಯನ ಅತೀ ಅಗತ್ಯ. ಹಾಗಂತ,
ಪ್ರವಾದಿ ಮುಹಮ್ಮದ್‍ರಾಗಲಿ, ಶ್ರೀರಾಮ ಚಂದ್ರರಾಗಲಿ ಈ ಸಮಾಜಕ್ಕೆ ಅಜ್ಞಾತರಾಗಿ ಉಳಿದಿಲ್ಲ. ಇವರನ್ನು ವಿವರಿಸುವ ಸಾವಿರಾರು ಕೃತಿಗಳು ಇಲ್ಲಿವೆ. ಇವರು ಕಾವ್ಯವಾಗಿ, ಕವನವಾಗಿ, ಕತೆ, ಕಾದಂಬರಿಯಾಗಿ, ನಾಟಕವಾಗಿ, ಸಿನಿಮಾವಾಗಿ ಹೀಗೆ ವಿವಿಧ ರೂಪದಲ್ಲಿ ಸಮಾಜದ ನಡುವೆಯಿದ್ದಾರೆ. ಬಿಡಿಬಿಡಿಯಾಗಿರುವ ಇವನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ತಂದುಕೊಂಡು ಅಧ್ಯಯನಕ್ಕಿಳಿದರೆ ಅವರೇನೆಂಬುದು ಗೊತ್ತಾಗುತ್ತದೆ. ವಿಷಾದ ಏನೆಂದರೆ,
ಐತಿಹಾಸಿಕ ವ್ಯಕ್ತಿತ್ವಗಳನ್ನು ಈ ಕಾಲದಲ್ಲಿ ನಿಂತು ನೋಡುವಾಗ ಯಾವ ಎಚ್ಚರಿಕೆಯನ್ನು ಪಾಲಿಸಬೇಕಿತ್ತೋ ಆ ಎಚ್ಚರಿಕೆಯನ್ನು ಕಳೆದವಾರದ ಎರಡೂ ಘಟನೆಗಳಲ್ಲಿ ವಹಿಸಲಾಗಿಲ್ಲ ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಆದರೂ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ಈ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿವೆ. ಪ್ರೊಫಸರ್ ಭಗವಾನ್‍ರ ಬಗ್ಗೆ ಅಥವಾ ಟಿ.ವಿ. ನಿರೂಪಕರ ಬಗ್ಗೆ ಈ ಸಮಾಜ ಸಿಟ್ಟುಗೊಂಡರೂ ಎಲ್ಲೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಇವರನ್ನು ಖಂಡಿಸುವ ಭರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿಲ್ಲ. ರಸ್ತೆ ತಡೆ, ಬಂದ್‍ಗೆ ಕರೆಕೊಟ್ಟಿಲ್ಲ. ಇದೊಂದು ಪ್ರಬುದ್ಧ ನಡೆ. ಪ್ರಬುದ್ಧರೆನಿಸಿಕೊಂಡವರು ತೀರಾ ಅಪ್ರಬುದ್ಧರಂತೆ ವರ್ತಿಸಿದಾಗ ಸಾಮಾನ್ಯವಾಗಿ ಜನರು ರೊಚ್ಚಿಗೇಳುವುದಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದಿದೆ. ಬೈಗುಳ ಸುರಿಸುವುದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳನ್ನು ನಾವು ಅಭಿನಂದಿಸಬೇಕು. ಶ್ರೀರಾಮಚಂದ್ರರಾಗಲಿ ಪ್ರವಾದಿ ಮುಹಮ್ಮದರಾಗಲಿ ನಿಜ ಐಕಾನ್‍ಗಳಾಗುವುದು ಇಂಥ ಪ್ರತಿಕ್ರಿಯೆಗಳ ಮೂಲಕ. ಓರ್ವರು ಶ್ರೀರಾಮಚಂದ್ರರನ್ನು ನಿಂದಿಸಿದರು ಎಂಬುದನ್ನು ಎತ್ತಿಕೊಂಡು ಅದಕ್ಕಿಂತಲೂ ಕೆಟ್ಟದಾಗಿ ಅವರನ್ನು ನಾವು ನಿಂದಿಸಲು ಪ್ರಾರಂಭಿಸಿದರೆ ಅವರಿಗೂ ನಮಗೂ ನಡುವೆ ಇರುವ ವ್ಯತ್ಯಾಸ ಅಳಿದು ಹೋಗುತ್ತದೆ. ಮಾತ್ರವಲ್ಲ, ಶ್ರೀರಾಮಚಂದ್ರರ ನಿಜ ಅನುಯಾಯಿ ನಾವು ಎಂದು ಹೇಳಿಕೊಳ್ಳುವುದಕ್ಕೂ ಅದು ಧಕ್ಕೆ ತರುತ್ತದೆ. ಪ್ರವಾದಿ ಮುಹಮ್ಮದ್‍ರ ನಿಜ ಅನುಯಾಯಿಯೊಬ್ಬ ಪ್ರವಾದಿ ನಿಂದಕರನ್ನು ಅದೇ ಭಾಷೆಯಲ್ಲಿ ನಿಂದಿಸಲಾರ. ನಿಂದನೆಗೆ ಪ್ರತಿಯಾಗಿ ಪ್ರತಿನಿಂದನೆ, ಹತ್ಯೆಗೆ ಪ್ರತಿಯಾಗಿ ಪ್ರತಿಹತ್ಯೆ, ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಅನ್ಯಾಯ, ಅತ್ಯಾಚಾರಕ್ಕೆ ಪ್ರತಿಯಾಗಿ ಪ್ರತಿ ಅತ್ಯಾಚಾರ ಇವೆಲ್ಲ ಧರ್ಮ ವಿರೋಧಿಸಿದ ಕೃತ್ಯಗಳು. ನಿಂದನೆಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಹತ್ಯೆಗೆ ಶಿಕ್ಷೆ ಏನು ಅನ್ನುವುದನ್ನೂ ನಿರ್ಧರಿಸಬೇಕಾದುದು ನ್ಯಾಯಾಲಯವೇ. ಅತ್ಯಾಚಾರವಾಗಲಿ ಇನ್ನಾವುದೇ ಸಮಾಜ ವಿರೋಧಿ ಕೃತ್ಯಗಳಾಗಲಿ ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆ ನ್ಯಾಯಾಲಯದ ಮೇಲಿದೆ. ಈ ಕ್ರಮವನ್ನು ಗೌರವಿಸದೇ ಹೋದರೆ ನಾಗರಿಕ ಸಮಾಜ ಅನಾಗರಿಕವಾಗಿ ಬಿಡುತ್ತದೆ. ಶಿಕ್ಷೆಗೆ ಒಳಗಾಗಬೇಕಾದವರು ತಪ್ಪಿಸಿಕೊಳ್ಳುತ್ತಾರೆ. ಅಮಾಯಕರು ಅನ್ಯಾಯಕ್ಕೊಳಗಾಗುತ್ತಾರೆ. ಆದ್ದರಿಂದಲೇ ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯ ತೋರಿದ ಸಹನೆ ಮತ್ತು ವಹಿಸಿದ ಎಚ್ಚರಿಕೆಯು ಇಷ್ಟವಾಗುವುದು. ಒಂದುವೇಳೆ, ಈ ದೇಶದಲ್ಲಿರುವ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರ ಕೋಟ್ಯಾಂತರ ಅನುಯಾಯಿಗಳು ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವ ಪ್ರಮಾದ ಮಾಡಿರುತ್ತಿದ್ದರೆ ಅದರಿಂದ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುತ್ತಿತ್ತು. ಅನಾಹುತಕಾರಿ ವಿದ್ಯಮಾನಗಳಿಗೆ ಅದು ಕಾರಣವಾಗುತ್ತಿತ್ತು. ಮಾತ್ರವಲ್ಲ, ಇಂಥ ಕ್ರಮಗಳು ಪ್ರವಾದಿ ಮತ್ತು ಶ್ರೀರಾಮರಿಗೆ ಮಾಡುವ ದ್ರೋಹವೂ ಆಗುತ್ತಿತ್ತು.
ಪ್ರಬುದ್ಧ ಧರ್ಮಾನುಯಾಯಿಗಳ ಲಕ್ಷಣ ಏನೆಂದರೆ, ಯಾವ ಸಂದರ್ಭದಲ್ಲಿಯೂ ವಿವೇಚನೆಯನ್ನು ಕಳಕೊಳ್ಳದೇ ಇರುವುದು. ಪ್ರವಾದಿ ಮುಹಮ್ಮದ್‍ರ ನಿಂದನೆಗೆ ಪ್ರತಿಕ್ರಿಯೆಯಾಗಿ ಅವರ ಅನುಯಾಯಿಗಳು ಪ್ರತಿನಿಂದನೆಗೆ ಮತ್ತು ಪ್ರತಿಹಿಂಸೆಗೆ ಇಳಿದರು ಎಂದಾದರೆ, ಅವರು ವಿಚಾರವಂತ ಅನುಯಾಯಿಗಳ ಪಟ್ಟಿಯಿಂದ ಹೊರಗಿದ್ದಾರೆ ಎಂದೇ ಅರ್ಥ. ಶ್ರೀರಾಮರಿಗೆ ಸಂಬಂಧಿಸಿಯೂ ಇವೇ ಮಾತುಗಳನ್ನು ಹೇಳಬೇಕು. ನಿಂದನೆಗೆ ಕಾನೂನಿನ ಭಾಷೆಯಲ್ಲಿ ಉತ್ತರಿಸುವ ವಿವೇಚನೆಯನ್ನು ನಾವು ರೂಢಿಸಿಕೊಳ್ಳಬೇಕು. ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಇದು ಸಾಧ್ಯವಾಗಿದೆ. ಇದಕ್ಕಾಗಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದರ ಅನುಯಾಯಿಗಳಿಗೆ ಅಭಿನಂದನೆಗಳು.

ಸಾಣೇಹಳ್ಳಿ ಸ್ವಾಮೀಜಿಯವರಿಗೆ ಅಭಿನಂದನೆಗಳು



ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರ ಪಾದಯಾತ್ರೆಯೊಂದು ಹೊರಟಿದೆ. ಸುಮಾರು ಎರಡ್ಮೂರು ಸಾವಿರದಷ್ಟಿರುವ ಈ ಮಹಿಳಾ ಗುಂಪಿನಲ್ಲಿ ರೈತ ಮತ್ತು ಕೂಲಿಕಾರ್ಮಿಕ ಕುಟುಂಬದವರೇ ಅಧಿಕವಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ 20-25 ಕಿಲೋ ಮೀಟರ್ ಸಾಗಬೇಕೆಂಬುದು ಈ ಗುಂಪಿನ ಗುರಿ. ಹೀಗೆ ಸಾಗುವ ಮಾರ್ಗ ಮಧ್ಯದ ಗ್ರಾಮಗಳು ಈ ಗುಂಪಿಗೆ ಊಟ-ವಸತಿಯನ್ನು ಕಲ್ಪಿಸುವ ಉಮೇದು ತೋರಿವೆ. ಲೆಕ್ಕಾಚಾರದಂತೆ ಪ್ರತಿದಿನ ಪಾದಯಾತ್ರೆ ಸಾಗಿದರೆ ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜನವರಿ 30ರಂದು ಬೆಂಗಳೂರಿಗೆ ತಲುಪಬಹುದು ಎಂಬ ಭರವಸೆ ಈ ಗುಂಪಿನದು. ಹಾಗಂತ, ಸುಮಾರು 213 ಕಿಲೋಮೀಟರ್ ಸಾಗುವ ಗುರಿಯೊಂದಿಗೆ ಹೊರಟ ಈ ಗುಂಪಿನಲ್ಲಿ ಸಿನಿಮಾ ನಟರಿಲ್ಲ. ಬೃಹತ್ ಉದ್ಯಮಿಗಳಿಲ್ಲ. ರಾಜಕಾರಣಿಗಳಿಲ್ಲ. ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಬ್ಯುಸಿಯಾಗಿರುವವರೂ ಇಲ್ಲ. ಆದ್ದರಿಂದಲೇ, ಈ ಪಾದಯಾತ್ರೆಯ ಯಶಸ್ಸಿನ ಬಗ್ಗೆ ಈಗಲೇ ಕಣಿ ಹೇಳುವುದಕ್ಕೆ ಸಾಧ್ಯವೂ ಇಲ್ಲ. ಆದರೂ ರಾಯಚೂರು, ಬೀದರ್, ಕಲಬುರ್ಗಿಯಿಂದ ಬಂದಿರುವ ಮಹಿಳೆಯರು ಹೀಗೆ ಒಟ್ಟಾಗಿರುವುದಕ್ಕೆ ಏಕೈಕ ಕಾರಣ ಮದ್ಯಪಾನ. ಈ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಮದ್ಯಪಾನದ ಸಂತ್ರಸ್ತರು. ಗಂಡನೆಂದೋ ಅಪ್ಪನೆಂದೋ ಗುರುತಿಸಿಕೊಳ್ಳುವ ವ್ಯಕ್ತಿಯ ಮದ್ಯಪಾನದ ಚಟದಿಂದ ನೆಮ್ಮದಿಯನ್ನು ಕಳಕೊಂಡವರು. ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧವಾಗಬೇಕು ಎಂದು ನಂಬಿದವರು. ಇವರ ಈ ಬಯಕೆಗೆ ‘ಮದ್ಯ ನಿಷೇಧ ಆಂದೋಲನ’ ಎಂಬ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಖುಷಿಯ ವಿಚಾರ ಏನೆಂದರೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಪಾದಯಾತ್ರೆಗೆ ಚಾಲನೆ ನೀಡಿರುವುದು. ಅಷ್ಟಕ್ಕೂ,
ಸಮಾಜದ ಪ್ರಗತಿಗೆ ಮದ್ಯದ ಕೊಡುಗೆಯೇನು ಎಂದು ಪ್ರಶ್ನಿಸಿದಾಗಲೆಲ್ಲ ಆದಾಯದ ಉದ್ದದ ಪಟ್ಟಿಯೊಂದನ್ನು ಸರಕಾರ ಮುಂದಿಡುವುದಿದೆ. ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಜೊತೆಗೇ, ಈ ಆದಾಯದ ಹಿಂದೆ ಕರುಣಾಜನಕವಾದ ಕತೆಯಿದೆ ಎಂಬುದನ್ನೂ ಅದು ಒಪ್ಪಿಕೊಳ್ಳುತ್ತಿದೆ. ಆದ್ದರಿಂದಲೇ, ಸರಕಾರವೇ ಮುಂದೆ ನಿಂತು ಮದ್ಯವರ್ಜನಾ ಶಿಬಿರವನ್ನು ನಡೆಸುತ್ತಿರುವುದು. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತನ್ನೂ ಪ್ರಕಟಿಸುತ್ತಿರುವುದು. ಏಕಕಾಲದಲ್ಲಿ ನಡೆಯುವ ದ್ವಂದ್ವ ಇದು. ಮದ್ಯದ ಆದಾಯವನ್ನೇ ನೆಚ್ಚಿಕೊಂಡಿರುವ ಸರಕಾರವೊಂದು ಮದ್ಯವರ್ಜನಾ ಶಿಬಿರವನ್ನೂ ನಡೆಸುತ್ತದೆ ಎಂದರೆ ಏನರ್ಥ? ಆಡಳಿತ ನಡೆಸುವ ಪಕ್ಷವೇ ವಿರೋಧ ಪಕ್ಷವನ್ನೂ ರಚಿಸಿ ಅದಕ್ಕೆ ಸಂಪನ್ಮೂಲವನ್ನು ಒದಗಿಸಿ ಮುನ್ನಡೆಸಿಕೊಂಡು ಹೋಗುವ ರೀತಿಯಂಥಲ್ಲವೇ ಇದು? ಒಂದುಕಡೆ, ಮದ್ಯದ ಆದಾಯವೂ ಬೇಕು, ಇನ್ನೊಂದು ಕಡೆ, ತಾನು ಮದ್ಯದ ಪರ ಅಲ್ಲ ಎಂದೂ ಬಿಂಬಿಸಿಕೊಳ್ಳಬೇಕು ಎಂಬ ಚಟವನ್ನು ಬಿಟ್ಟರೆ ಇದರಲ್ಲಿ ಬೇರೆ ಏನಿದೆ? ನಿಜವಾಗಿ,
ಮದ್ಯಪಾನದ ವಿರುದ್ಧ ಒಂದು ಸರಕಾರ ಜಾಹೀರಾತನ್ನು ಕೊಡುತ್ತದೆಂದರೆ, ಮದ್ಯಪಾನ ಸಮಾಜದ ಆರೋಗ್ಯಕ್ಕೆ ಹಾನಿಕರ ಎಂದು ಅದು ಒಪ್ಪಿಕೊಳ್ಳುತ್ತದೆ ಎಂದೇ ಅರ್ಥ. ಹೀಗಿರುವಾಗ, ಹಾನಿಕರವಾದುದರ ಮಾರಾಟಕ್ಕೆ ಸರಕಾರ ಅನುಮತಿ ಕೊಡುವುದಾದರೂ ಯಾಕೆ? ಸರಕಾರ ಇರುವುದೇ ಜನರಿಗೆ ಆರೋಗ್ಯಪೂರ್ಣ ಮತ್ತು ನೆಮ್ಮದಿದಾಯಕ ಬದುಕನ್ನು ಖಾತರಿಪಡಿಸಲು. ಸರಕಾರವೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಜನರಿಗೆ ಸುಲಭ ಬದುಕನ್ನು ಒದಗಿಸುವುದಕ್ಕಾಗಿ ಮನುಷ್ಯರೇ ಸೇರಿಕೊಂಡು ಮಾಡಿಕೊಂಡ ವ್ಯವಸ್ಥೆ ಅದು. ಸರಕಾರದಲ್ಲಿರುವವರು ಜನಪ್ರತಿನಿಧಿಗಳೇ ಹೊರತು ಮದ್ಯ ಪ್ರತಿನಿಧಿಗಳಲ್ಲ. ಮದ್ಯವನ್ನು ತಯಾರಿಸುವ ಉದ್ಯಮದಿಂದ ಶಾಸನ ಸಭೆಗಳಿಗೆ ನಾಮಕರಣ ಮಾಡಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಸಾಹಿತ್ಯ, ಸಂಗೀತ, ಕ್ರೀಡೆ ಇತ್ಯಾದಿ ಕ್ಷೇತ್ರದಿಂದ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ನಾಮಕರಣ ಮಾಡುವ ಕ್ರಮ ಇದೆ. ಇಷ್ಟೆಲ್ಲ ಇದ್ದೂ ಮದ್ಯೋದ್ಯಮವನ್ನು ಸರಕಾರ ಆಧರಿಸುತ್ತಿರುವುದೇಕೆ? ಈ ಆದಾಯದಾಚೆಗೆ ಕೋಟ್ಯಾಂತರ ಬಡ ಗುಡಿಸಲುಗಳು ಮತ್ತು ಅಲ್ಲಿನ ಆಕ್ರಂದನಗಳು ಸರಕಾರಕ್ಕೆ ಮುಖ್ಯವಾಗುವುದಿಲ್ಲವೇ? ಬೆಳಗ್ಗಿನಿಂದ ಸಂಜೆಯವರೆಗೆ ದುಡಿದ ಹಣವನ್ನು ಮದ್ಯದಂಗಡಿಗೆ ಸುರಿದು ತೂರಾಡಿಕೊಂಡು ಬರುವ ಅಪ್ಪನನ್ನು ಒಂದು ಮಗು ಹೇಗೆ ಸ್ವಾಗತಿಸೀತು? ಪತ್ನಿಯಾದವಳು ಹೇಗೆ ಸ್ವೀಕರಿಸಿಯಾಳು? ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಹೊಡೆತ, ಬಡಿತ, ಥಳಿತ, ಬೈಗುಳ, ಬೊಬ್ಬೆಗಳ ನೆಮ್ಮದಿರಹಿತ ಜಗತ್ತು ಅದು. ಪ್ರತಿನಿತ್ಯ ನಮ್ಮ ಸುತ್ತ-ಮುತ್ತಲೇ ಈ ಮನುಷ್ಯರು ಬದುಕುತ್ತಿz್ದÁರೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಈ ಮನುಷ್ಯರ ಕುಟುಂಬ ಹಾಳಾಗಿದೆ. ಮಕ್ಕಳ ಮನಸ್ಸು ಹಾಳಾಗಿದೆ. ಮನೆ ಹಾಳಾಗಿದೆ. ಇವರೆಲ್ಲರ ಬದುಕನ್ನು ಹೀಗೆ ಬೀದಿಪಾಲು ಮಾಡಿಕೊಂಡು ಸರಕಾರಕ್ಕೆ ಆದಾಯ ಗಳಿಸಬೇಕೇ?
ಆಹಾರ, ಉದ್ಯೋಗ, ಆರೋಗ್ಯ, ವಸತಿ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯಕ್ಕೆ ಸ್ಥಾನವಿಲ್ಲ. ಯಾಕೆಂದರೆ, ಅದು ಸಾಮಾಜಿಕ ಅನಿವಾರ್ಯತೆ ಅಲ್ಲ. ಮದ್ಯ ಇಲ್ಲದೆ ಬದುಕಬಹುದು. ಆದರೆ ಆಹಾರ, ಆರೋಗ್ಯ, ಉದ್ಯೋಗ, ವಸತಿ ಇಲ್ಲದೇ ಬದುಕಲು ಕಷ್ಟಸಾಧ್ಯ. ದುರಂತ ಏನೆಂದರೆ, ಈ ಅಗತ್ಯತೆಗಳನ್ನು ಪೂರೈಸಲು ವಿಫುಲವಾದ ಸರಕಾರಗಳು ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಮದ್ಯವನ್ನು ವಿತರಿಸುತ್ತಿದೆ. ಒಮ್ಮೆ ಮದ್ಯದ ದಾಸನಾದ ವ್ಯಕ್ತಿ ಆ ಬಳಿಕ ಸರಕಾರದ ಉಳಿದೆಲ್ಲ ವೈಫಲ್ಯಗಳನ್ನು ಮರೆತು ಬಿಡುತ್ತಾನೆ/ಳೆ. ಇದೊಂದು ಸಂಚು. ಮದ್ಯದ ಆದಾಯವನ್ನು ತೋರಿಸಿ ಈ ಸಂಚನ್ನು ಸದ್ಯ ಸಮರ್ಥಿಸಲಾಗುತ್ತಿದೆ. ಜನರನ್ನು ಹಿಂಡಿ, ಅವರ ಆರೋಗ್ಯವನ್ನು ಕೆಡಿಸಿ ಸಂಗ್ರಹಿಸುವ ಆದಾಯದ ಅಗತ್ಯವಾದರೂ ಏನಿದೆ? ಆ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಎಷ್ಟು ನೈತಿಕ? ಅಂದಹಾಗೆ,
ಚಿತ್ರದುರ್ಗದಿಂದ ಹೊರಟ ಪಾದಯಾತ್ರೆಯ ತುಂಬಾ ಮಹಿಳೆಯರೇ ಇದ್ದಾರೆ. ಅದೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು. ಗ್ರಾಮೀಣ ಪ್ರದೇಶವೆಂಬುದು ನಗರ ಪ್ರದೇಶದಂತಲ್ಲ. ನಗರದಲ್ಲಿ ಪ್ರತಿಭಟನೆಗಳು, ರ್ಯಾಲಿಗಳು ಪ್ರತಿದಿನವೆಂಬಂತೆ ನಡೆಯುತ್ತಲೇ ಇರುತ್ತವೆ. ನಗರದಲ್ಲಿ ಅದು ಸುಲಭ. ಆದರೆ ಗ್ರಾಮೀಣ ಪ್ರದೇಶದ ಮಂದಿ ಪಾದಯಾತ್ರೆ ಹಮ್ಮಿಕೊಳ್ಳುವುದು ಅಪರೂಪ. ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮಷ್ಟಕ್ಕೆ ಬದುಕುವ ಈ ಮಂದಿ ಪಾದಯಾತ್ರೆಯಲ್ಲಿ ರಾಜಧಾನಿಗೆ ಹೊರಟಿದ್ದಾರೆಂದರೆ, ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಹಾಗಂತ, ಈ ಪಾದಯಾತ್ರೆಯಲ್ಲಿರುವ ಮಹಿಳೆಯರಷ್ಟೇ ಮದ್ಯಪಾನದ ಸಂತ್ರಸ್ತರಲ್ಲ. ಒಂದುವೇಳೆ, ರಾಜ್ಯದಲ್ಲಿ ಯಾರಾದರೂ ಸಮೀಕ್ಷೆ ನಡೆಸಿದರೆ, ಸರಕಾರವನ್ನೇ ಉರುಳಿಸುವಷ್ಟು ಪ್ರಮಾಣದಲ್ಲಿ ಅವರ ಸಂಖ್ಯೆ ಇದ್ದೀತು. ಸರಕಾರ ಈ ಮಹಿಳೆಯರ ಆಗ್ರಹಕ್ಕೆ ಕಿವಿಯಾಗಬೇಕು. ಸಕಲ ಕೆಡುಕುಗಳ ತಾಯಿ ಎಂದು ಇಸ್ಲಾಮ್ ಧರ್ಮ ಸೂಚಿಸಿರುವ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಇಂದಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಣೇಹಳ್ಳಿ ಸ್ವಾಮೀಜಿಯವರಂತೆ ಈ ರಾಜ್ಯದ ಇತರ ಮಠ-ಮಂದಿರಗಳಿಂದಲೂ ಮದ್ಯ ವಿರೋಧಿ ಬೃಹತ್ ಚಳವಳಿ ರೂಪುತಾಳಬೇಕು. ಚರ್ಚ್-ಮಸೀದಿಗಳೂ ಇದರಲ್ಲಿ ಪಾಲುಗೊಳ್ಳಬೇಕು. ಇದೇನೂ ಅಸಾಧ್ಯವಲ್ಲ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಭಿನಂದನೆಗಳು.

Thursday, 17 January 2019

ಪೌರತ್ವ ಮಸೂದೆ: ಮುಸ್ಲಿಮರನ್ನು ಮಾತ್ರ ಹೆಕ್ಕಿ ಹೊರಗಿಡಲು ಕಾರಣವೇನು?

 

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ಸಿದ್ಧತೆಯು ಎಷ್ಟು ಸಿನಿಕತನದ್ದು ಮತ್ತು ದೂರದೃಷ್ಟಿರಹಿತವಾದದ್ದು ಅನ್ನುವುದಕ್ಕೆ ಅದು ಮಂಡಿಸಿರುವ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಗಳೇ ಉತ್ತಮ ಪುರಾವೆ. ಈ ಎರಡೂ ಮಸೂದೆಗಳನ್ನು ಪಾರ್ಲಿಮೆಂಟ್‍ನಲ್ಲಿ ಒಂದೇ ವಾರದೊಳಗೆ ಮಂಡಿಸಲಾಗಿದೆ. ಅದರಲ್ಲೂ ಪೌರತ್ವ ಮಸೂದೆಯನ್ನು ಅದು ಸಮರ್ಥಿಸುತ್ತಿರುವ ರೀತಿಯಂತೂ ಅತ್ಯಂತ ದಯನೀಯ. 2014 ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಫಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮುಸ್ಲಿಮರನ್ನು ಯಾಕೆ ಹೊರಗಿಟ್ಟಿರಿ ಅನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ. ಅದಕ್ಕೆ ಅವರು ಕೊಟ್ಟ ಉತ್ತರ ಏನೆಂದರೆ ಹಿಂದೂ, ಬೌದ್ಧ, ಜೈನ ಮುಂತಾದ ಧರ್ಮೀಯರಿಗೆ ನೆಲೆಸಲು ಭಾರತ ಬಿಟ್ಟರೆ ಬೇರೆ ದೇಶಗಳಿಲ್ಲ ಅನ್ನುವುದಾಗಿತ್ತು. ಅದರ್ಥ, ಮೇಲಿನ ಮೂರು ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರು ಅನ್ಯ ರಾಷ್ಟ್ರಗಳಲ್ಲಿ ಹೋಗಿ ನೆಲೆಸಲಿ ಎಂದೇ ಆಗುತ್ತದೆ. ಸಂವೇದನೆ ಸತ್ತು ಹೋದ ರಾಜಕಾರಣಿಯ ಹೊರತು ಇನ್ನಾರಿಗೂ ಈ ರೀತಿಯಲ್ಲಿ ಮಾತಾಡಲು ಸಾಧ್ಯವಿಲ್ಲ. ನಿಜವಾಗಿ, ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಆಂತರಿಕ ಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿರುವುದು  ಮುಸ್ಲಿಮೇತರರಷ್ಟೇ  ಅಲ್ಲ ಅನ್ನುವುದಕ್ಕೆ ಅಲ್ಲಿಂದ ಭಾರತಕ್ಕೆ ದೊಡ್ಡ ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ಮುಸ್ಲಿಮರೇ ಸಾಕ್ಷಿ. ಹಿಂದೂ, ಸಿಖ್, ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ವಲಸಿಗರಂತೆಯೇ ಮುಸ್ಲಿಮರೂ ಭಾರತವನ್ನು ಸುರಕ್ಷಿತ ರಾಷ್ಟ್ರವಾಗಿ ಪರಿಗಣಿಸಿದ್ದಾರೆ. ಹೀಗಿರುವಾಗ, ಇವರಿಂದ ಮುಸ್ಲಿಮರನ್ನು ಮಾತ್ರ ಬೇರ್ಪಡಿಸಿ ಹೊರಕ್ಕಟ್ಟುವುದು ಮತ್ತು ಉಳಿದವರನ್ನೆಲ್ಲ ಇಲ್ಲಿಯೇ ಉಳಿಸಿಕೊಳ್ಳುವುದು ಅಂದರೆ ಏನರ್ಥ? ಇವರೆಲ್ಲ, ತಾವಿರುವ ರಾಷ್ಟ್ರ ತಮಗೆ ಸುರಕ್ಷಿತವಲ್ಲ ಎಂಬ ಕಾರಣದಿಂದಲೇ ಭಾರತಕ್ಕೆ ಬಂದಿದ್ದಾರೆ. ಒಂದು ವೇಳೆ, ಇವರಲ್ಲಿ ಮುಸ್ಲಿಮರಿಗೆ ಹೋಗಲು ಅನ್ಯ ರಾಷ್ಟ್ರವಿದೆ ಎಂದಾದರೆ, ಬೌದ್ಧರಿಗೂ ಅನ್ಯ ರಾಷ್ಟ್ರವಿದೆಯಲ್ಲ? ಶ್ರೀಲಂಕಾ, ಮ್ಯಾನ್ಮಾರ್, ಬರ್ಮಾ, ಜಪಾನ್‍ಗಳು ಬೌದ್ಧರೇ ಬಹುಸಂಖ್ಯಾತರಾಗಿರುವ ರಾಷ್ಟ್ರಗಳು. ಅವರನ್ನೂ ಪೌರತ್ವ ವಿಧೇಯಕ ಮಸೂದೆಯಿಂದ ಹೊರಗಿಡಬಹುದಲ್ಲ? ಹಿಂದೂಗಳು ಬಹುಸಂಖ್ಯಾತರಾಗಿರುವ ನೇಪಾಲವು ನಮ್ಮ ಪಕ್ಕದಲ್ಲೇ ಇದೆ. ಮೇಲಿನ ಮೂರು ರಾಷ್ಟ್ರಗಳಿಂದ ಬಂದ ಹಿಂದೂಗಳನ್ನು ನಾವು ಇಲ್ಲೇ ಯಾಕೆ ಉಳಿಸಿಕೊಳ್ಳಬೇಕು? ಅವರಿಗೆ ಇನ್ನೊಂದು ರಾಷ್ಟ್ರವಾಗಿ ನೇಪಾಲ ಇದೆಯಲ್ಲ? ಕ್ರೈಸ್ತರಿಗೆ ಹೋಗಲು ಜಗತ್ತಿನಾದ್ಯಾಂತ ಧಾರಾಳ ರಾಷ್ಟ್ರಗಳಿವೆ. ಅವರನ್ನೇಕೆ ಇಲ್ಲಿಯೇ ಉಳಿಸಿಕೊಳ್ಳಬೇಕು..? ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋಗಬಹುದು. ಮಾತ್ರವಲ್ಲ, ಇದಕ್ಕೆ ಸಮರ್ಪಕ ಉತ್ತರವನ್ನು ಕೊಡುವುದಕ್ಕೆ ಕೇಂದ್ರ ಸರಕಾರಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ,

ವಲಸೆ ಅನ್ನುವುದೇ ಅತಿ ದೊಡ್ಡ ಹಿಂಸೆ. ಒಂದು ರಾಷ್ಟ್ರದಲ್ಲಿ ಆನಂದದಿಂದ ಜೀವಿಸುವ ಯಾವ ಕುಟುಂಬವೂ ಇನ್ನೊಂದು ರಾಷ್ಟ್ರಕ್ಕೆ ತೆರಳಿ ಅಕ್ರಮವಾಗಿ ನೆಲೆಸಲು ಬಯಸುವುದಿಲ್ಲ. ಹುಟ್ಟಿ ಬೆಳೆದ ರಾಷ್ಟ್ರವನ್ನು ಬದಲಿಸುವುದೆಂದರೆ, ಬಟ್ಟೆ ಬದಲಿಸಿದಷ್ಟು ಸುಲಭವೂ ಅಲ್ಲ. ತಾನು ನೆಲೆಸುವ ಆ ಇನ್ನೊಂದು ರಾಷ್ಟ್ರದಲ್ಲಿ ಹೊಸದಾಗಿ ಮನೆ, ಉದ್ಯೋಗ, ಬದುಕು ಕಂಡುಕೊಳ್ಳಬೇಕು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಅಪರಿಚಿತರಾದ ಜನರೊಂದಿಗೆ ಸಂಬಂಧ ಬೆಳೆಸಬೇಕು. ಇವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿಕೊಂಡು ನೆಲೆಸ ಬಯಸುವವರು ಇದ್ದಾರೆಂದರೆ ಅವರು ತನ್ನ ಮೂಲ ರಾಷ್ಟ್ರದಲ್ಲಿ ಅದಕ್ಕಿಂತಲೂ ತೀವ್ರ ತೆರನಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದೇ ಅರ್ಥ. ಹೀಗಿರುವಾಗ ಇಂಥವರನ್ನು ಹಿಂದೂ-ಮುಸ್ಲಿಮ್, ಜೈನ ಎಂದು ಮುಂತಾಗಿ ವಿಭಜಿಸುವುದು ಸರಿಯೇ? ಇವರಲ್ಲಿ ಮುಸ್ಲಿಮರನ್ನು ಹೆಕ್ಕಿ ತೆಗೆದು ಹೊರಕ್ಕಟ್ಟುವುದು ನ್ಯಾಯವೇ? ಹಾಗಂತ,
ಬಿಜೆಪಿ ನೇತೃತ್ವದ ಮೋದಿ ಸರಕಾರವು ಅತ್ಯಂತ ಅವಿವೇಕತನದಿಂದ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅದು ಆರಂಭದಿಂದಲೇ ವಿಭಜನವಾದಿ ಮತ್ತು ಭಾವಾವೇಶದ ರಾಜಕಾರಣವನ್ನು ಜೊತೆ ಸೇರಿಸಿಕೊಂಡೇ ಆಟ ಆಡುತ್ತಿದೆ. ಇದಕ್ಕೆ ಪ್ರಥಮ ಉದಾಹರಣೆ ಏನೆಂದರೆ, ರಾತ್ರೋರಾತ್ರಿ ನೋಟು ನಿಷೇಧ ಮಾಡಿದ ರೀತಿ. ಆ ಬಳಿಕ ಜಿಎಸ್‍ಟಿಯ ಹೇರಿಕೆ. ಅಚ್ಚರಿ ಏನೆಂದರೆ, ಈ ಎರಡಕ್ಕೂ ಪೂರ್ವ ತಯಾರಿ ಎಂಬುದು ಇರಲೇ ಇಲ್ಲ. ದೂರ ದೃಷ್ಟಿಯೂ ಇರಲಿಲ್ಲ. ಇನ್ನು, ಸರ್ವ ಸೌಲಭ್ಯಗಳಿಗೂ ಆಧಾರ್ ಸಂಪರ್ಕ ಕಲ್ಪಿಸಬೇಕೆಂಬ ಬಿಜೆಪಿ ಸರಕಾರದ ನಿರ್ದೇಶನವನ್ನಂತೂ ಸುಪ್ರೀಮ್ ಕೋರ್ಟೇ ತಳ್ಳಿ ಹಾಕಿತು. ತ್ರಿವಳಿ ತಲಾಕೂ ಇಂಥದ್ದೇ ಒಂದು ಎಡವಟ್ಟು. ಇದೀಗ ಒಂದೇ ವಾರದಲ್ಲಿ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮೋದಿ ಸರಕಾರ ಮಂಡಿಸಿದೆ. ಹಾಗಂತ, ಪೌರತ್ವ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬುದು ಬಿಜೆಪಿಗೆ ಗೊತ್ತಿರಲಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಸಾಹಸಕ್ಕೆ  ಕೈ ಹಾಕಿದೆ. ಯಾಕೆಂದರೆ, ಈ ಮಸೂದೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮುದಾಯವನ್ನು ಧ್ರುವೀಕರಿಸಬಹುದು. ಮುಸ್ಲಿಮರನ್ನು ದೇಶದಿಂದ ಹೊರಕ್ಕಟ್ಟುತ್ತಿದ್ದೇವೆ ಎಂಬ ಸಂದೇಶವನ್ನು ಸೂಚ್ಯವಾಗಿ ಸಾರಬಹುದು. ಒಂದು ವೇಳೆ,

ವಲಸಿಗರಿಗೆ ನೆಮ್ಮದಿಯನ್ನು ಕೊಡುವುದೇ ಬಿಜೆಪಿಯ ಉದ್ದೇಶವಾಗಿರುತ್ತಿದ್ದರೆ ಅದು 1985ರಲ್ಲಿ ಮಾಡಿಕೊಳ್ಳಲಾಗಿರುವ ಅಸ್ಸಾಂ ಒಪ್ಪಂದವನ್ನು ಯಥೋಚಿತವಾಗಿ ಜಾರಿಗೆ ತರುವುದಕ್ಕೆ ಮುಂದಾಗಬೇಕಿತ್ತು. ನಿಜವಾಗಿ, ವಲಸಿಗರ ಸಮಸ್ಯೆ ಇರುವುದೇ ಅಸ್ಸಾಮ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ. ಇವು ಪಾಕಿಸ್ತಾನ, ಬಾಂಗ್ಲಾ ಮತ್ತು ಅಫಘಾನಿಸ್ತಾನದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಗಡಿಯನ್ನು ಹಂಚಿಕೊಂಡಿರುವುದರಿಂದ ವಲಸಿಗರ ಸಮಸ್ಯೆ ಸ್ವಾಭಾವಿಕ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿಯೇ 1985ರಲ್ಲಿ ಅಸ್ಸಾಂ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ 1971ರ ಮಾರ್ಚ್ 31ರ ವರೆಗೆ  ಭಾರತಕ್ಕೆ ಬಂದು ನೆಲೆಸಿದ ಎಲ್ಲ ಹಿಂದೂ, ಮುಸ್ಲಿಮರೂ ಭಾರತೀಯ ಪೌರತ್ವಕ್ಕೆ ಅರ್ಹರು. ಆದರೆ ಈಗಿನ ಹೊಸ ಪೌರತ್ವ ಮಸೂದೆಯ ಪ್ರಕಾರ 1971 ಮಾರ್ಚ್‍ನ ನಂತರ 2014 ಡಿ. 31ರ ವರೆಗೆ ವಲಸೆ ಬಂದ ಮುಸ್ಲಿಮೇತರ ವಲಸಿಗರು ಮಾತ್ರ ಪೌರತ್ವಕ್ಕೆ ಅರ್ಹರಾಗುತ್ತಾರೆ. ಈಶಾನ್ಯ ರಾಜ್ಯಗಳ ಪ್ರತಿಭಟನೆಗೆ ಮುಖ್ಯ ಕಾರಣವೇ ಇದು. 1971 ಮಾರ್ಚ್ 31ರ ನಂತರ ಬಂದ ಯಾರಿಗೂ ಪೌರತ್ವ ನೀಡಬಾರದು ಎಂಬುದು ಅವುಗಳ ಬೇಡಿಕೆ. ಹಾಗೆ ಪೌರತ್ವ ಕೊಡುವುದರಿಂದ ಅಲ್ಲಿನ ಪ್ರಾದೇಶಿಕ ಅಸ್ಮಿತೆ ಮತ್ತು ಸ್ಥಳೀಯತೆಗೆ ಧಕ್ಕೆ ಬರಬಹುದು, ಬುಡುಕಟ್ಟು ಸಮುದಾಯಗಳ ಬದುಕು-ಭಾವಕ್ಕೆ ಅಪಾಯ ಒದಗಬಹುದು ಎಂಬುದು ಅವುಗಳ ವಾದ. ಅಂದಹಾಗೆ,
ಈ ಮಸೂದೆ ವಿಭಜನವಾದಿ ರಾಜಕಾರಣದ ಕೂಸು ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಅಷ್ಟಕ್ಕೂ, ಪ್ರತಿಭಟನೆಗಿಳಿದಿರುವ ಈಶಾನ್ಯದ ನಾಲ್ಕೈದು ಪುಟ್ಟ ರಾಜ್ಯಗಳಲ್ಲಿ ರಾಜಕೀಯವಾಗಿ ಬಿಜೆಪಿ ಕಳಕೊಳ್ಳುವಂಥದ್ದೇನೂ ಇಲ್ಲ. ಅಲ್ಲಿರುವ ಒಟ್ಟು ಲೋಕಸಭಾ ಸ್ಥಾನಗಳು ಒಂದು ಉತ್ತರ ಪ್ರದೇಶದಷ್ಟೂ ಇಲ್ಲ. ಆದ್ದರಿಂದ ಅಲ್ಲಿನ ಮತದಾರರ ಭಾವನೆಗಳಿಗೆ ಬೆಲೆಕೊಡುವುದಕ್ಕಿಂತ ಉಳಿದ ಭಾರತವನ್ನು ಕೈವಶಮಾಡಿಕೊಳ್ಳುವುದಕ್ಕೆ ಪೂರಕವಾದ ಕ್ರಮ ಕೈಗೊಳ್ಳುವುದೇ ಉತ್ತಮ ಎಂದು ಬಿಜೆಪಿ ಭಾವಿಸಿದೆ. ಪೌರತ್ವ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ತರಾತುರಿಯಿಂದ ಮಂಡಿಸಿ ಪಾಸು ಮಾಡಿಕೊಂಡಿರುವುದು ಇದೇ ಕಾರಣಕ್ಕೆ. ಮುಸ್ಲಿಮರನ್ನು ನಗಣ್ಯರಾಗಿ ಮತ್ತು ಅವಮಾನಿತರಾಗಿ ನಡೆಸಿಕೊಂಡಷ್ಟೂ ತನ್ನ ಓಟ್ ಬ್ಯಾಂಕ್ ವೃದ್ಧಿಸುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿ ಈಗಲೂ ಇದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅತ್ಯಂತ ಕೆಟ್ಟದಾದ ಮತ್ತು ಮುಸ್ಲಿಮ್ ಕುಟುಂಬಗಳ ವಿಭಜನೆಗೆ ಕಾರಣವಾಗಬಹುದಾದ ಕಾನೂನನ್ನು ರಚಿಸಿ ಸುಗ್ರೀವಾಜ್ಞೆಯೊಂದಿಗೆ ಜಾರಿಗೊಳಿಸಿರುವುದೂ ಇದೇ ನಂಬಿಕೆಯ ಕಾರಣದಿಂದ.
ಪೌರತ್ವ ಮಸೂದೆಯ ಮೂಲಕ ಬಿಜೆಪಿ ತಾನು ಬಹುಸಂಸ್ಕೃತಿಯ  ದೇಶವನ್ನಾಳಲು ಅಸಮರ್ಥ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Thursday, 10 January 2019

ತ್ರಿವಳಿ ತಲಾಕ್‍, ಶಬರಿಮಲೆ, ಸುಪ್ರೀಂ ಕೋರ್ಟ್ ಮತ್ತು ನಂಬಿಕೆ



ಶಬರಿಮಲೆ ಮತ್ತು ತ್ರಿವಳಿ ತಲಾಕ್‍ನ ವಿಷಯದಲ್ಲಿ ಕೇಂದ್ರ ಸರಕಾರದ ಉದ್ದೇಶಶುದ್ಧಿಯನ್ನು ಶಂಕಿತಗೊಳಿಸುವ ಮತ್ತು ಅದರ ನಿಲುವನ್ನು ಪ್ರಶ್ನಾರ್ಹಗೊಳಿಸುವ ಸಂದರ್ಭಗಳು ಸೃಷ್ಟಿಯಾಗುತ್ತಲೇ ಇವೆ. ಶಬರಿಮಲೆ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರ ತಂಡದಲ್ಲಿ ಇಂದೂ ಮಲ್ಹೋತ್ರ ಎಂಬ ಮಹಿಳೆಯೂ ಇದ್ದರು. ಅವರು ಈ ಪ್ರಕರಣವನ್ನು ನಂಬಿಕೆಯ ದೃಷ್ಟಿಕೋನದಿಂದ ನೋಡಿದರು. ನಂಬಿಕೆಯ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸದಿರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಆದರೆ ಈ ನಿಲುವನ್ನು ಉಳಿದ ನ್ಯಾಯಾಧೀಶರು ಮಾನ್ಯ ಮಾಡಲಿಲ್ಲ. ಆದ್ದರಿಂದ, ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳಬಹುದು ಎಂಬ ತೀರ್ಪು ಸುಪ್ರೀಮ್ ಕೋರ್ಟಿನಿಂದ ಹೊರಬಿತ್ತು. ಇದಕ್ಕಿಂತ ಒಂದು ವರ್ಷ ಮೊದಲು ತ್ರಿವಳಿ ತಲಾಕ್‍ಗೆ ಸಂಬಂಧಿಸಿಯೂ ಸುಪ್ರೀಮ್ ಕೋರ್ಟು ಇಂಥದ್ದೊಂದು  ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ದೂರು ದಾಖಲಿಸಿದ್ದು ಶಾಯರಾಬಾನು. ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಐವರು ನ್ಯಾಯಾಧೀಶರ ಪೈಕಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರು. ಈ ವಿಷಯದಲ್ಲಿ ಕೋರ್ಟಿನ ಮಧ್ಯಪ್ರವೇಶವನ್ನು ಅವರಿಬ್ಬರೂ ಬಯಸಲಿಲ್ಲ. ಆದರೆ ಉಳಿದ ಮೂವರು ನ್ಯಾಯಾಧೀಶರು ಈ ಅಭಿಪ್ರಾಯಕ್ಕೆ ವಿರುದ್ಧವಿದ್ದುದರಿಂದ ತ್ರಿವಳಿ ತಲಾಕನ್ನು ಅಂತಿಮವಾಗಿ ಅಸಾಂವಿಧಾನಿಕ ಮತ್ತು ಅನೂರ್ಜಿತವೆಂದು ಘೋಷಿಸಲಾಯಿತು. ಇದರರ್ಥ ಏನೆಂದರೆ, ತ್ರಿವಳಿ ತಲಾಕ್ ಸಂವಿಧಾನಬದ್ಧವಲ್ಲ. ಯಾರಾದರೂ ತ್ರಿವಳಿ ತಲಾಕ್ ಹೇಳಿದರೆ ಅದರಿಂದ ವಿಚ್ಛೇದನ ಏರ್ಪಡುವುದೂ ಇಲ್ಲ. ತ್ರಿವಳಿ ತಲಾಕ್ ಹೇಳುವುದರಿಂದ ಪತಿ-ಪತ್ನಿ ಸಂಬಂಧಕ್ಕೆ ಮತ್ತು ಅವರ ಸ್ಥಾನಮಾನಕ್ಕೆ ಧಕ್ಕೆ ಬರುವುದೂ ಇಲ್ಲ. ಆದ್ದರಿಂದ, ಇನ್ನು ವಿಚ್ಛೇದನಕ್ಕೆ ಯಾರೂ ಈ ಕ್ರಮವನ್ನು ಅನುಸರಿಸುವಂತಿಲ್ಲ... ಸುಪ್ರೀಮ್ ಕೋರ್ಟು ಹೇಳಿದ್ದು ಇಷ್ಟೇ. ಆದರೆ,
ಈ ತೀರ್ಪಿನ ಆರಂಭದಿಂದ ಕೊನೆಯ ವರೆಗೆ ಕಣ್ಣಿಗೆ ಎಣ್ಣೆ ಬಿಟ್ಟು ಪರಿಶೀಲಿಸಿದರೂ ಎಲ್ಲೂ ತ್ರಿವಳಿ ತಲಾಕನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಬೇಕೆಂದು ಕೋರ್ಟು ಹೇಳಿದ್ದು ಎಲ್ಲೂ ಸಿಗುವುದಿಲ್ಲ. ತ್ರಿವಳಿ ತಲಾಕ್ ಹೇಳುವ ಪುರುಷನನ್ನು ಮೂರು ವರ್ಷಗಳ ವರೆಗೆ ಜೈಲಿಗೆ ತಳ್ಳುವಂತಹ ‘ತಲಾಕ್ ಮಸೂದೆಯನ್ನು’ ಜಾರಿಗೊಳಿಸಿ ಎಂದು ಕೇಂದ್ರ ಸರಕಾರಕ್ಕಾಗಲಿ, ಪಾರ್ಲಿಮೆಂಟ್‍ಗಾಗಲಿ ಕೋರ್ಟು ಆದೇಶಿಸಿಲ್ಲ. ಪಾರ್ಲಿಮೆಂಟ್‍ನಲ್ಲಿ ಇಂಥದ್ದೊಂದು  ಮಸೂದೆ ಅಂಗೀಕಾರಗೊಳ್ಳದಿದ್ದರೆ ಸುಗ್ರೀವಾಜ್ಞೆಯ ಮೂಲಕವಾದರೂ ಜಾರಿಗೆ ತನ್ನಿ ಎಂದೂ ಅದು ಹೇಳಿಲ್ಲ. ತ್ರಿವಳಿ ತಲಾಕ್ ಕ್ರಮವನ್ನು ಅದು ಅಸಾಂವಿಧಾನಿಕ ಎಂದಷ್ಟೇ ಹೇಳಿದೆ. ಹಾಗೆ ತಲಾಕ್ ಹೇಳುವುದಕ್ಕೆ ಕಾನೂನಿನ ಪ್ರಕಾರ ಮಾನ್ಯತೆ ಇಲ್ಲ ಎಂದು ಇದರರ್ಥ. ಹೀಗಿರುವಾಗ, ಇದನ್ನು ಕ್ರಿಮಿನಲ್ ಅಪರಾಧವಾಗಿ ಕೇಂದ್ರ ಸರಕಾರ ಪರಿವರ್ತಿಸಿದ್ದು ಏಕೆ? ಮುಸ್ಲಿಮ್ ಸಮುದಾಯದ ಮಹಿಳೆಯರ ಮೇಲೆ ಸುಪ್ರೀಮ್ ಕೋರ್ಟಿಗಿಂತಲೂ ಹೆಚ್ಚಾಗಿ ಕೇಂದ್ರ ಸರಕಾರಕ್ಕೆ ‘ಕಾಳಜಿ’ ಮೂಡಲು ಕಾರಣವೇನು? ತ್ರಿವಳಿ ತಲಾಕ್‍ಗೊಳಗಾದ ಮಹಿಳೆ ನ್ಯಾಯ ಕೇಳಿದ್ದು ಸುಪ್ರೀಮ್ ಕೋರ್ಟಿನಲ್ಲಿ. ತಾನು ತ್ರಿವಳಿ ತಲಾಕ್‍ನ ಸಂತ್ರಸ್ತೆ ಎಂದು ಶಾಯರಾ ಬಾನು ಕೋರ್ಟಿನ ಮುಂದೆ ನಿವೇದಿಸಿಕೊಂಡಿದ್ದರು. ನ್ಯಾಯಾಧೀಶರೆಂದರೆ ರಾಜಕಾರಣಿಗಳಲ್ಲವಲ್ಲ. ಯಾವುದೇ ದೂರನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡುವ ಪರಿಪಾಠವೂ ನ್ಯಾಯಾಧೀಶರಿಗಿಲ್ಲ, ಇರಬಾರದು ಕೂಡ. ದೂರುದಾರೆಯ ದೂರಿನಲ್ಲಿರುವ ಅಂಶ ನ್ಯಾಯಾಂಗೀಯ ಪರಿಧಿಗೆ ಒಳಪಡುತ್ತದೋ ಇಲ್ಲವೋ, ದೂರು ಸಮರ್ಪಕವೋ ಅಲ್ಲವೋ, ದೂರಿನ ಮೇಲೆ ವಿಚಾರಣೆ ನಡೆಸಬೇಕೋ ಬೇಡವೋ, ದೂರಿನ ಮೇಲಿನ ವಿಚಾರಣೆಯನ್ನು ಯಾವ ವಿಚಾರಣಾ ಪೀಠಕ್ಕೆ ಒಪ್ಪಿಸಬೇಕು, ಆ ಪೀಠದಲ್ಲಿ ಯಾವ ನ್ಯಾಯಾಧೀಶರಿರಬೇಕು, ಹೆಣ್ಣೆಷ್ಟು-ಗಂಡೆಷ್ಟು ಇತ್ಯಾದಿ ಇತ್ಯಾದಿಗಳು ಕೋರ್ಟಿಗೆ ಮುಖ್ಯವಾಗುತ್ತದೆಯೇ ಹೊರತು ಇನ್ನೇನೂ ಅಲ್ಲ. ದೂರುದಾರರು ಸಂತ್ರಸ್ತರು ಎಂದು ಸಾಬೀತಾದರೆ ಅವರಿಗೆ ನ್ಯಾಯದಾನ ಮಾಡಬೇಕು, ಅನ್ಯಾಯ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು... ನ್ಯಾಯಾಲಯದಲ್ಲಿ ನಡೆಯುವ ನ್ಯಾಯ ಪ್ರಕ್ರಿಯೆಯ ಮೂಲ ಉದ್ದೇಶ ಇದು. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಶಾಯರಾ ಬಾನು ಅವರ ದೂರನ್ನು ವಿಚಾರಣೆಗೆ ಎತ್ತಿಕೊಂಡಿದೆ. ಅವರ ಅಹವಾಲನ್ನು ಆಲಿಸಿದೆ. ಬಳಿಕ ನ್ಯಾಯವನ್ನೂ ನೀಡಿದೆ. ಹಾಗಾದರೆ, ಈ ನ್ಯಾಯ ವಿಧಾನ ಸರಿಯಲ್ಲ ಅನ್ನುವುದು ಕೇಂದ್ರ ಸರಕಾರದ ವಾದವೇ? ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷ ಜೈಲಿಗಟ್ಟುವ ಸುಗ್ರೀವಾಜ್ಞೆಯು ಕೊಡುವ ಸಂದೇಶವಾದರೂ ಏನು? ಸುಪ್ರೀಮ್ ಕೋರ್ಟು ಇಡೀ ಪ್ರಕರಣವನ್ನು ನೋಡಿದ್ದು ಸಿವಿಲ್ ಪ್ರಕರಣದ ರೂಪದಲ್ಲಿ. ಆದರೆ ಕೇಂದ್ರ ಸರಕಾರ ಅದಕ್ಕೆ ಕ್ರಿಮಿನಲ್ ಸ್ವರೂಪವನ್ನು ನೀಡಿತು. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ಒಂದುವೇಳೆ, ಅದುವೇ ಬಯಕೆಯಾಗಿದ್ದರೆ, ತೀರ್ಪಿನಲ್ಲಿ ಅದನ್ನೂ ಹೇಳಬೇಕಿತಲ್ಲವೇ? ತ್ರಿವಳಿಯನ್ನು ನಿಗ್ರಹಿಸುವುದಕ್ಕಾಗಿ ಶಿಕ್ಷಾ ಕಾನೂನೊಂದನ್ನು ಜಾರಿಗೊಳಿಸಿ ಎಂದು ಆದೇಶಿಸಬೇಕಿತ್ತಲ್ಲವೇ? ಅಂದಹಾಗೆ,
ತ್ರಿವಳಿಯನ್ನು ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಸುಪ್ರೀಮ್ ಕೋರ್ಟು ಸ್ಪಷ್ಟವಾಗಿ ಹೇಳಿರುವಾಗ ಇಷ್ಟು ಸಾಕಾಗಲ್ಲ ಎಂದು ಕೇಂದ್ರ ಸರಕಾರ ತೀರ್ಮಾನಿಸಿದುದು ಯಾವ ಕಾರಣಕ್ಕೆ? ಯಾರ ಹಿತಾಸಕ್ತಿಯನ್ನು ಕಾಪಾಡಲು? ಅಲ್ಲದೇ, ತ್ರಿವಳಿ ತಲಾಕನ್ನು ಖಂಡಿಸಿ ಪ್ರತಿಭಟಿಸಿದ ಯಾವ ಮುಸ್ಲಿಮ್ ಮಹಿಳೆಯರೂ ಅದನ್ನು ಕ್ರಿಮಿನಲ್ ಪ್ರಕರಣವಾಗಿಸಬೇಕೆಂದು ಬೇಡಿಕೆಯಿಟ್ಟಿರಲಿಲ್ಲ. ಪತಿಯನ್ನು ಜೈಲಿಗಟ್ಟುವ ಕಾನೂನು ಜಾರಿಗೆ ತನ್ನಿ ಎಂದು ಒತ್ತಾಯಿಸಿರಲಿಲ್ಲ. ಸ್ವತಃ ಶಾಯರಾ ಬಾನು ಕೂಡ ಇಂಥದ್ದೊಂದು ಬೇಡಿಕೆಯನ್ನು ಇಟ್ಟಿರಲಿಲ್ಲ. ಹಾಗಂತ, ಯಾರೂ ಬೇಡಿಕೆ ಇಟ್ಟಿರದಿದ್ದರೂ ಮತ್ತು ಮುಸ್ಲಿಮ್ ಮಹಿಳೆಯರ ಬಯಕೆ ಅದಾಗಿರದಿದ್ದರೂ ಅದರ ಅಗತ್ಯ ಇದೆ ಎಂದು ಸುಪ್ರೀಮ್ ಕೋರ್ಟಿಗೆ ಅನಿಸಿದ್ದಿದ್ದರೆ ಖಂಡಿತ ಅಂಸಾವಿಧಾನಿಕ ಮತ್ತು ಅನೂರ್ಜಿತ ಎಂದು ಹೇಳುವುದರ ಜೊತೆಜೊತೆಗೇ ‘ಇಷ್ಟು ವರ್ಷಗಳ ಶಿಕ್ಷಾರ್ಹ ಅಪರಾಧ’ ಎಂದೂ ಹೇಳುತ್ತಿತ್ತು. ಆದರೆ ಸುಪ್ರೀಮ್ ಕೋರ್ಟು ಹಾಗೆ ತೀರ್ಪು ನೀಡುವುದು ಬಿಡಿ, ಸೂಚ್ಯವಾಗಿಯೂ ಹೇಳಲಿಲ್ಲ. ಇದರರ್ಥವೇನು? ತ್ರಿವಳಿ ತಲಾಕ್ ಕ್ರಮವನ್ನು ಮುಸ್ಲಿಮ್ ಸಮುದಾಯ ತಿರಸ್ಕರಿಸಬೇಕು ಮತ್ತು ವಿಚ್ಛೇದನದ ಸಾಂವಿಧಾನಿಕ ರೂಪಕ್ಕೆ ಮರಳಬೇಕು ಎಂದು ಸುಪ್ರೀಮ್ ಕೋರ್ಟು ಬಯಸಿದೆ ಎಂದೇ ಅಲ್ಲವೇ? ಸಮುದಾಯದ ಒಳಗೆ ಈ ಬಗೆಯ ಜಾಗೃತಿ ಮೂಡಲಿ ಮತ್ತು ಸ್ವತಃ ಸಮುದಾಯವೇ ಈ ತೀರ್ಪಿನ ಆಧಾರದಲ್ಲಿ ಸುಧಾರಣೆಗೊಳ್ಳಲಿ ಎಂದಲ್ಲವೇ?
ಶಬರಿಮಲೆಯನ್ನು ನಂಬಿಕೆಯ ಪ್ರಶ್ನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಅದಕ್ಕಾಗಿ ನ್ಯಾಯಾಧೀಶೆ ಇಂದು ಮಲ್ಹೋತ್ರಾ ಅವರ ಅಭಿಪ್ರಾಯದ ಮೇಲೆ ಹೆಚ್ಚಿನ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲ ದರ್ಶನಕ್ಕೆ ಅರ್ಹರು’ ಎಂಬ ಕೋರ್ಟಿನ ತೀರ್ಪನ್ನು ವಿರೋಧಿಸುತ್ತಿರುವ ಬಿಜೆಪಿಯ ನಡೆಯನ್ನು ಅವರು ಈ ಮೂಲಕ ಸಮರ್ಥಿಸಿಕೊಂಡಿz್ದÁರೆ. ಆದರೆ, ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅವರು ಈ ಮಾನದಂಡವನ್ನು ಅಳವಡಿಸಿಕೊಳ್ಳುವುದೇ ಇಲ್ಲ. ತ್ರಿವಳಿ ತಲಾಕನ್ನು ಧಾರ್ಮಿಕ ಚೌಕಟ್ಟಿನಲ್ಲಿಟ್ಟು ನೋಡಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ಅಬ್ದುಲ್ ನಝೀರ್‍ ರ ಅಭಿಪ್ರಾಯಗಳ ಮೇಲೆ ಇನ್ನಷ್ಟು ಚರ್ಚೆ ನಡೆಯಬೇಕೆಂದು ಅವರು ಎಲ್ಲೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಒಳಗೆ ಈ ಬಗ್ಗೆ ಜಾಗೃತಿ ನಡೆಯಲಿ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿಲ್ಲ. ಅದರ ಬದಲು ಸುಪ್ರೀಮ್ ಕೋರ್ಟಿನ ಆಶಯವನ್ನೇ ತಪ್ಪಾಗಿ ವ್ಯಾಖ್ಯಾನಿಸುವ ಸಾಹಸಕ್ಕೆ ಅವರು ಮುಂದಾಗಿದ್ದಾರೆ. ಸುಪ್ರೀಮ್ ಕೋರ್ಟು ಬಯಸದೇ ಇರುವ ಕ್ರಿಮಿನಲ್ ಕಾನೂನೊಂದನ್ನು ಏಕಪಕ್ಷೀಯವಾಗಿ ರೂಪಿಸಿ ಸುಗ್ರೀವಾಜ್ಞೆಯ ಮೂಲಕ ಅವರು ಅನುಷ್ಠಾನಕ್ಕೆ ತಂದಿದ್ದಾರೆ. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ದೂರುದಾರೆ ಶಾಯರಾ ಬಾನು ಅವರ ಬಯಕೆಯೂ ಅಲ್ಲ. ಮುಸ್ಲಿಮ್ ಸಮುದಾಯದ ಬೇಡಿಕೆಯೂ ಅಲ್ಲ. ಆದ್ದರಿಂದ ಇದು ಸಂಚು, ದಾಷ್ಟ್ರ್ಯತನ, ದುರುದ್ದೇಶ ನೀತಿ, ಕ್ರೌರ್ಯ, ಅರಾಜಧರ್ಮ, ಇಬ್ಬಂದಿತನ.
   ಪ್ರಧಾನಿ ಮೋದಿಯವರು ರಾಜಧರ್ಮವನ್ನು ಪಾಲಿಸುತ್ತಿಲ್ಲ ಅನ್ನುವುದಕ್ಕೆ ಶಬರಿಮಲೆ ಮತ್ತು ತ್ರಿವಳಿ ತಲಾಕ್ ಮತ್ತೊಂದು ಪುರಾವೆ.