Friday, 10 July 2020

ಆಕ್ಸಿಜನ್ ಸೆಂಟರ್ ಆದ ಮಸೀದಿ, ಕ್ವಾರಂಟೈನ್ ಕೇಂದ್ರವಾದ ಹಜ್ ಭವನ: ಸುಳ್ಳೇ ಒಮ್ಮೆ ಶರಣಾಗು



ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್‍ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್‍ದೇವ್‍ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ  ಎಫ್‍ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ.  ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ  ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ  ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ  ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ  ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು.  ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು  ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್‍ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್‍ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ  ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು.  ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ.  ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ  ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು  ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು  ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ  ಮಂದಿಯನ್ನು ಇವತ್ತು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ  ಶಾಹೀನ್‍ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ  ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ  ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು  ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ  ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ  ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.

ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ  ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,

ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ  ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು.  ಆದರೆ,

ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್‍ದೇವ್‍ರ  ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.

ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ  ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.

Wednesday, 1 July 2020

ಪ್ರಶ್ನೆಗೊಳಗಾಗಬೇಕಾದದ್ದು ಯಾರು- ಪರವಾನಿಗೆ ಕೊಟ್ಟ ಸರಕಾರವೋ ಅಲ್ಲ, ಮಾಂಸವೃತ್ತಿಯಲ್ಲಿರುವ ಬಡಪಾಯಿಗಳೋ?


ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಮೂರೂ ಘಟನೆಗಳು ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟಕ್ಕೆ ಸಂಬಂಧಿಸಿದವು. ಹಾವೇರಿಯ  ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ಮಂಗಳೂರಿಗೆ ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದ ಮುಹಮ್ಮದ್ ಹನೀಫ್ ಎಂಬವರನ್ನು ಅವರದೇ ವಾಹನಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ನಡೆದ  ಬಳಿಕ ಇನ್ನೆರಡು ಇಂಥದ್ದೇ  ಘಟನೆಗಳು ನಡೆದುವು. ಇದರಲ್ಲಿ ಒಂದು ಸುಳ್ಯದಲ್ಲಿ ನಡೆದರೆ, ಇನ್ನೊಂದು ಮಂಗಳೂರಿನಲ್ಲಿ. ಮಂಗಳೂರಿನ ಪ್ರಾಣಿ ವಧಾಗೃಹದಿಂದ ಪಕ್ಕದ ಕಂಕನಾಡಿ ಮತ್ತು ಜೆಪ್ಪು  ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಶೀದ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ರಿಕ್ಷಾ ಟೆಂಪೋಗೆ ಹಾನಿ ಮಾಡಲಾಗಿದೆ.
ಇದೊಂದು ಬಗೆಯ ಕ್ರೌರ್ಯ. ವ್ಯವಸ್ಥೆಗೆ ಒಡ್ಡುವ ಸವಾಲು. ಕಾನೂನುಬದ್ಧ ವೃತ್ತಿಯನ್ನು ಅಪರಾಧಿ ಕೃತ್ಯದಂತೆ ಮತ್ತು ಆ ವೃತ್ತಿಯಲ್ಲಿ ತೊಡಗುವವರನ್ನು ಭೀತಿಗೆ ತಳ್ಳುವುದಕ್ಕೆ ಮಾಡುವ ಹುನ್ನಾರ.  ಮಂಗಳೂರಿನಲ್ಲಿರುವ ವಧಾಗೃಹಕ್ಕೆ ಪರವಾನಿಗೆ ಕೊಟ್ಟಿರುವುದು ನಿರ್ದಿಷ್ಟ ಧರ್ಮವೊಂದರ ಧರ್ಮಗುರುಗಳಲ್ಲ, ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದಾರೆ. 8 ಮಂದಿ ಶಾಸಕರ ಪೈಕಿ 7  ಮಂದಿಯೂ ಬಿಜೆಪಿಯವರೇ. ರಾಜ್ಯದಲ್ಲಿ ಬಿಜೆಪಿಯದ್ದೇ  ಆಡಳಿತವಿದೆ. ಮಂಗಳೂರು ನಗರದ ಸ್ಥಳೀಯಾಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟಿದ್ದೂ ಜಾನುವಾರು ಮತ್ತು ಮಾಂಸ ಸಾಗಾಟಗಾರರ  ಮೇಲೆ ಹಲ್ಲೆ ನಡೆಯುವುದೆಂದರೆ ಏನರ್ಥ? ಯಾಕೆ ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸುತ್ತಿಲ್ಲ? ಒಂದುಕಡೆ ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಣಿಕೆಗೆ  ಪರವಾನಿಗೆಯನ್ನು ಕೊಡುವುದು ಮತ್ತು ಇನ್ನೊಂದು ಕಡೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಮೌನವಾಗುವುದು- ಈ ದ್ವಂದ್ವವೇಕೆ?
ಮಾಂಸಾಹಾರದ ಬಗ್ಗೆ ಒಂದು ವರ್ಗದ ಜನರಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. 6 ಕೋಟಿ ಕನ್ನಡಗಿರುವ ಈ ರಾಜ್ಯದಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಭಿನ್ನ. ಆಹಾರ  ಕ್ರಮಗಳೂ ಭಿನ್ನ. ರಾಜಕೀಯ ಒಲವು, ಸಂಸ್ಕೃತಿ, ಧರ್ಮ, ರೂಢಿ-ಸಂಪ್ರದಾಯಗಳೂ ಏಕರೂಪದ್ದಲ್ಲ. ಈ ದೇಶದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಮತ್ತು ಅದರ ಪರ ಜನಜಾಗೃತಿಯನ್ನು  ಮೂಡಿಸುವ ಸ್ವಾತಂತ್ರ್ಯ ಇರುವಂತೆಯೇ ಮಾಂಸಾಹಾರವನ್ನು ಸೇವಿಸುವ ಮತ್ತು ಆ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವ ಸ್ವಾತಂತ್ರ್ಯವೂ ಇದೆ. ಇದು ಪ್ರತಿಯೊಬ್ಬರಿಗೂ ಸಂವಿಧಾನ ಒದಗಿಸಿರುವ  ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಲ್ಲಿ ಬದಲಾವಣೆ ತರುವುದಕ್ಕೆ ಅದರದ್ದೇ  ಆದ ದಾರಿಯಿದೆ. ಅದು ಬೀದಿ ದುಷ್ಕರ್ಮದಿಂದ ಆಗಬೇಕಾದುದಲ್ಲ. ಈ ದೇಶದಲ್ಲಿ ಮದ್ಯಪಾನದ ವಿರುದ್ಧ ಹಲವು ಚಳವಳಿಗಳಾಗಿವೆ.  ಪಾನ ನಿಷೇಧವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ವರ್ಷದ ಹಿಂದೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ವೀಣಾ ಭಟ್ ಅವರು ಮುಂಚೂಣಿಯಲ್ಲಿ ನಿಂತು ಈ  ಹೋರಾಟಕ್ಕೆ ಜೀವ ತುಂಬಿದ್ದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಆ ಬಳಿಕವೂ ಈ ಹೋರಾಟ ಮುಂದುವರಿದಿದೆ. ಆದರೆ, ಸರಕಾರ  ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನೊಡ್ಡಿ ಈ ಹೋರಾಟದಲ್ಲಿದ್ದ ಯಾರೂ ಮದ್ಯಸಾಗಾಟ ವಾಹನಗಳನ್ನು ಹಾನಿಗೈದ ಘಟನೆ ನಡೆದಿಲ್ಲ. ಚಾಲಕರ ಮೇಲೆ ದೌರ್ಜನ್ಯ ಎಸಗಿದ್ದೂ  ಇಲ್ಲ. ಹಾಗಂತ, ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕೆಂಬುದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಮಹಿಳೆಯರ ಮಾತ್ರ ಬೇಡಿಕೆಯಾಗಿರಲಿಲ್ಲ. ಈ ರಾಜ್ಯದ ಎಲ್ಲ ಧರ್ಮದ  ಧರ್ಮಗುರುಗಳು ಕೂಡ ಈ ಬೇಡಿಕೆಯ ಪರವಾಗಿ ಮಾತಾಡಿದ್ದರು. ಈ ಹೋರಾಟಕ್ಕೆ ಸ್ವಾಮೀಜಿಯವರೇ ಚಾಲನೆ ನೀಡಿದ್ದೂ ಇದೆ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯಪಾವನವು ಆತ್ಮಹತ್ಯೆ, ಹಲ್ಲೆ ಮತ್ತು ಹತ್ಯಾ ಪ್ರಕರಣಗಳಿಗೆ ಪ್ರಚೋದನೆ ನೀಡುತ್ತಿವೆ ಎಂಬುದಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ ತಜ್ಞರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಬೇಡಿಕೆಯನ್ನು ಬೆಂಬಲಿಸುವ  ದೊಡ್ಡದೊಂದು ಜನಸಮುದಾಯವೇ ಇದೆ. ಆದರೂ ಈ ಗುಂಪು ಹಿಂಸೆಗೆ ಇಳಿದಿಲ್ಲ. ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ಕಂಡಿಲ್ಲ. ಯಾಕೆಂದರೆ, ಅವರು ಆ ವೃತ್ತಿಯಲ್ಲಿರುವುದಕ್ಕೆ ಇಲ್ಲಿನ  ಆಡಳಿತವೇ ಕಾರಣ. ಸರಕಾರ ಪರವಾನಿಗೆ ಕೊಡದೇ ಇರುತ್ತಿದ್ದರೆ, ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ನೋಡಬಹುದಿತ್ತು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಅಷ್ಟಕ್ಕೂ,
ವಧಾಗೃಹ ನಡೆಸುವ ಪರವಾನಿಗೆಯನ್ನು ಸರಕಾರ ಯಾವುದಾದರೊಂದು ನಿರ್ದಿಷ್ಟ ಧರ್ಮದ ಜನರಿಗೆ ಮೀಸಲಾಗಿ ಇಟ್ಟಿಲ್ಲ. ಅದು ಏಲಂನಲ್ಲಿ ವಿತರಣೆಯಾಗುತ್ತದೆ. ಯಾರು ಹೆಚ್ಚು ಬೆಲೆಗೆ  ಕೊಂಡುಕೊಳ್ಳಲು ತಯಾರಾಗುತ್ತಾರೋ ಅವರಿಗೆ ಪರವಾನಿಗೆ ಸಿಗುತ್ತದೆ. ಅದೊಂದು ಮುಕ್ತ ಪರವಾನಿಗೆ. ವಧಾಗೃಹಕ್ಕೆ ಜಾನುವಾರು ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಮುಕ್ತವಾಗಿದೆ.  ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯಾರಿಗೂ ಅದು ಲಭಿಸುತ್ತದೆ. ವಧಾಗೃಹದಿಂದ ಮಾಂಸ ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಕೂಡ  ಮುಕ್ತವಾಗಿದೆ. ಆದ್ದರಿಂದ ಯಾರಿಗೆ ವಧಾಗೃಹದ ಮೇಲೆ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟದ ಮೇಲೆ ಭಿನ್ನಾಭಿಪ್ರಾಯ ಇದೆಯೋ ಅವರು ವಧಾಗೃಹದ ಮೇಲೆ ಮತ್ತು ಜಾನುವಾರು  ಸಾಗಾಟಗಾರರ ಮೇಲೆ ದಾಳಿ ಮಾಡಬೇಕಾದುದಲ್ಲ. ಹೀಗೆ ಮಾಡುವುದು ಪ್ರಭುತ್ವಕ್ಕೆ ಎಸೆಯುವ ಸವಾಲು. ಆದರೂ ಮತ್ತೆ ಮತ್ತೆ ಇಂಥ ದಾಳಿಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ  ಮತ್ತು ಈ ದಾಳಿಗಳ ಹಿಂದಿನ ಹುನ್ನಾರ ಬಿಚ್ಚಿಕೊಳ್ಳುವುದೂ ಈ ಪ್ರಶ್ನೆಯಿಂದಲೇ.
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ವ್ಯಾಪಾರದಲ್ಲಿ ನಿರ್ದಿಷ್ಟ ಧರ್ಮವೊಂದರ ಸಾಕಷ್ಟು ಅನುಯಾಯಿಗಳು ತೊಡಗಿಸಿಕೊಂಡಿದ್ದಾರೆ. ಕಾನೂನುಬದ್ಧ ವೃತ್ತಿ ಎಂಬ ನೆಲೆಯಲ್ಲಿ ಅದು  ಅವಹೇಳನಕ್ಕೋ, ಹಿಂಜರಿಕೆಗೋ, ಕೀಳರಿಮೆಗೋ ಒಳಗಾಗಬೇಕಾದ್ದೂ ಅಲ್ಲ. ಆದರೆ, ದಾಳಿಗಳ ಹಿಂದಿನ ಉದ್ದೇಶವೂ ಇದುವೇ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು, ಕಾನೂನುಬದ್ಧ  ವೃತ್ತಿಯ ಬಗ್ಗೆ ಕೀಳರಿಮೆಗೆ ಗುರಿಪಡಿಸುವುದು ಮತ್ತು ಮುಸ್ಲಿಮರು ಪರವಾನಿಗೆಯಿಲ್ಲದೇ ಮಾಂಸ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುಳ್ಳನ್ನು ಸದಾ ಜೀವಂತ ಇಟ್ಟುಕೊಳ್ಳುವುದು- ಇವು ಮತ್ತು  ಇಂಥ ಇನ್ನಿತರ ಉದ್ದೇಶಗಳೇ ಈ ದಾಳಿಗಳ ಹಿಂದಿವೆ. ಇಂಥ ದಾಳಿಗಳು ರಾಜಕೀಯವಾಗಿಯೂ ಲಾಭವನ್ನು ತಂದುಕೊಡುತ್ತದೆ. ವಧಾಗೃಹದಿಂದ ಹಿಡಿದು ಮಾಂಸ ಸಾಗಾಟದ ವರೆಗೆ ನಡೆಯುವ ಎಲ್ಲ  ಪ್ರಕ್ರಿಯೆಗಳಿಗೆ ಸರಕಾರವೇ ಪರವಾನಿಗೆ ನೀಡಿದ್ದರೂ ಈ ದಾಳಿಗಳ ಸಂದರ್ಭದಲ್ಲಿ ಇವು ಯಾವುವೂ ಚರ್ಚೆಗೆ ಒಳಗಾಗದಂತೆ ಜಾಣತನದಿಂದ ನೋಡಿಕೊಳ್ಳಲಾಗುತ್ತದೆ. ಅಲ್ಲದೇ, ದುಷ್ಕರ್ಮಿಗಳು ಬಂಧ ನಕ್ಕೀಡಾದ ಮರುಕ್ಷಣವೇ ಜಾಮೀನು ಪಡೆದು ಹೊರಬರುತ್ತಾರೆ. ಇದೊಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಈ ಆಟಕ್ಕೆ ಕೊನೆ ಹಾಡಲೇಬೇಕು. ರಾಜಕೀಯದ ಮಂದಿ ಆಡುತ್ತಿರುವ ಈ ಆಟಕ್ಕೆ ಕಾ ನೂನುಬದ್ಧವಾಗಿ ದುಡಿಯುತ್ತಿರುವ ಮಂದಿ ಪದೇಪದೇ ಬಲಿಯಾಗುವುದನ್ನು ನಾಗರಿಕರು ಸಹಿಸಬಾರದು. ಅಷ್ಟಕ್ಕೂ,
ಬರೇ ದಾಳಿ ನಡೆಸುವುದು ದುಷ್ಕರ್ಮಿಗಳ ಉದ್ದೇಶ ಅಲ್ಲ. ಎರಡೂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದೂ ಅವರ ಗುರಿಯಾಗಿದೆ. ಇದು ಗಂಭೀರ ಅಪರಾಧ. ಆದ್ದರಿಂದ  ದುಷ್ಕರ್ಮಿಗಳ ವಿರುದ್ಧ ಈ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಬೇಕು. ದುಷ್ಕರ್ಮಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರದಂತೆ ನೋಡಿಕೊಳ್ಳಬೇಕು. ಅಂದಹಾಗೆ,
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸಾಹಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ತಾಳುವುದು ಬೇರೆ ಹಾಗೂ ಕಾನೂನುಬದ್ಧ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಸುವುದು ಬೇರೆ.  ಇವೆರಡನ್ನೂ ಸಮಾನವಾಗಿ ಕಾಣಲಾಗದು, ಕಾಣಬಾರದು.

Wednesday, 24 June 2020

ಜನಪ್ರತಿನಿಧಿಗಳೇ, ಪ್ರಶ್ನಿಸಲೇಬೇಕಾದ ಸಂದರ್ಭದಲ್ಲಿ ಯಾಕೆ ಮೌನವಾದಿರಿ?



ಕೊರೋನಾ ಲಾಕ್‍ಡೌನ್‍ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ಪೈಕಿ 175 ಮಂದಿಯನ್ನು ಬಾಡಿಗೆ ವಿಮಾನದಲ್ಲಿ ಊರಿಗೆ ಕಳುಹಿಸಿದ ಬಶೀರ್ ಸಾಗರ್ ಮತ್ತು ಅಲ್ತಾಫ್ ಉಳ್ಳಾಲ್ ಎಂಬ ಉದ್ಯಮಿಗಳು ರಾಜ್ಯಾದ್ಯಂತ ಶ್ಲಾಘನೆಗೆ ಒಳಗಾಗಿದ್ದಾರೆ. ಅವರು ನಡೆಸುತ್ತಿರುವ ಸಾಕೋ ಕಂಪೆನಿ ಕನ್ನಡಿಗರ ಮನೆಮಾತಾಗಿದೆ. ಅವರು ಬಾಡಿಗೆ ವಿಮಾನದ ವೆಚ್ಚವನ್ನು ಭರಿಸಿದ್ದಷ್ಟೇ ಅಲ್ಲ, ಪ್ರತಿಯೊಬ್ಬರ ಪ್ರಯಾಣ ವೆಚ್ಚವನ್ನೂ ಭರಿಸಿದ್ದಾರೆ. ಮಾತ್ರವಲ್ಲ, ಹೀಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಬಳಿಕ ನಡೆದ ಕೊರೋನಾ ಪರೀಕ್ಷಾ ಶುಲ್ಕ, ಕ್ವಾರಂಟೈನ್‍ಗೆ ಬೇಕಾದ ಕೊಠಡಿ ವ್ಯವಸ್ಥೆ, ಆಹಾರ ಎಲ್ಲವುಗಳ ವೆಚ್ಚವನ್ನೂ ಅವರೇ ಭರಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಲಾಕ್‍ಡೌನ್‍ನಿಂದಾಗಿ ಉದ್ಯಮಿಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಮಗೆ ಸಂಬಂಧಿಸಿಯೇ ಇಲ್ಲದ ಜನರಿಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವುದಕ್ಕೆ ವಿಶಾಲ ಹೃದಯ ಬೇಕು. ಒಂದುವೇಳೆ, ಈ ಸಾಹಸಕ್ಕೆ ಕೈ ಹಾಕದೇ ಇರುತ್ತಿದ್ದರೆ ಅವರು ಕಳಕೊಳ್ಳುವುದಕ್ಕೇನೂ ಇರಲಿಲ್ಲ. ಬದಲಾಗಿ ಈ ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿಗಳು ಅವರ ಪಾಲಿಗೆ ಉಳಿಕೆಯಾಗುತ್ತಿತ್ತು. ಆದ್ದರಿಂದಲೇ, 
\ರಾಜ್ಯದ ಮಂದಿ ಈ ಉದ್ಯಮಿಗಳನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಯವರೂ ಅಭಿನಂದಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.
ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇಂತಹ ಬೆಳವಣಿಗೆಯು ಇನ್ನಷ್ಟು ಸಮಾಜ ಸೇವಕರ ತಯಾರಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಇಂಥವರನ್ನು ನೋಡಿ ಬೆಳೆಯುವ ಯುವ ಪೀಳಿಗೆಯು ನಾವು ಹೀಗೆ ಇತರರಿಗೆ ನೆರವಾಗಬೇಕು ಎಂಬ ಬಯಕೆಯೊಂದನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಬೆಳೆಯುತ್ತವೆ. ಅವುಗಳು ಮುಂದೊಂದು ದಿನ ಫಲ ಕೊಡುವುದಕ್ಕೂ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರುಗಳ ಶ್ಲಾಘನೆ ಮತ್ತು ಗುರುತಿಸುವಿಕೆ ಅತ್ಯಂತ ಸಕಾಲಿಕ. ಆದರೆ,
 ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವಂತೆಯೇ ಕೆಡುಕನ್ನು ವಿರೋಧಿಸುವ ಮತ್ತು ಧರ್ಮಾತೀತವಾಗಿ ಖಂಡಿಸುವ ಪ್ರಕ್ರಿಯೆಗಳೂ ನಡೆಯಬೇಕು. ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಒಳಿತು ಹೇಗೆ ಪ್ರಚಾರಗೊಳ್ಳುತ್ತದೋ ಕೆಡುಕನ್ನು ವಿರೋಧಿಸಿ ಖಂಡಿಸುವುದರಿಂದ ಕೆಡುಕಿನ ಹರಡುವಿಕೆಗೂ ತಡೆ ಬೀಳುತ್ತದೆ. ಒಳಿತನ್ನು ಪ್ರೋತ್ಸಾಹಿಸುವ ಮತ್ತು ಕೆಡುಕನ್ನು ವಿರೋಧಿಸುವ ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯಬೇಕಾದವು. ವಿಷಾದ ಅನ್ನಿಸುವುದೂ ಇಲ್ಲೇ. 
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರು ಒಳಿತನ್ನು ಶ್ಲಾಘಿಸಿದ ರೀತಿಯಲ್ಲಿಯೇ ಕೆಡುಕನ್ನೂ ವಿರೋಧಿಸಬೇಕು ಎಂದು ರಾಜ್ಯದ ಮಂದಿ ಬಯಸುವುದು ಸಹಜ. ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಅವರಿಂದ ಇಂತಹ ಬಯಕೆಯನ್ನು ನಿರೀಕ್ಷಿಸುವುದು ಅಪರಾಧವೂ ಅಲ್ಲ. ಆದರೆ ಈ ನಿರೀಕ್ಷೆ ಈಡೇರುತ್ತಿಲ್ಲ ಅನ್ನುವ ಸಂಕಟ ಜನರಲ್ಲಿದೆ. ಸೌದಿಯಿಂದ 175 ಪ್ರಯಾಣಿಕರು ಮಂಗಳೂರು ತಲುಪಿದ ಎರಡು ದಿನಗಳಾದ ಬಳಿಕ ಇದೇ ಮಂಗಳೂರಿನಲ್ಲಿ ಮುಹಮ್ಮದ್ ಹನೀಫ್ ಎಂಬವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಕೈಯಲ್ಲಿ ರಾಡ್, ತಲವಾರು, ದೊಣ್ಣೆಗಳನ್ನು ಹಿಡಿದಿದ್ದ 20ರಿಂದ 25ರಷ್ಟಿದ್ದ ದುಷ್ಕರ್ಮಿಗಳ ಗುಂಪು ಮುಹಮ್ಮದ್ ಹನೀಫ್‍ರನ್ನು ಅವರ ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದೆ. ಪೊಲೀಸರು ಬಂದಾಗ ಈ ಗುಂಪು ಪರಾರಿಯಾಗಿದೆ. ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣ ಪತ್ರ’ವನ್ನು ಪಡೆದುಕೊಂಡು ಹಾವೇರಿಯ ಕೃಷಿ ಮಾರುಕಟ್ಟೆಯಿಂದ 4 ಎಮ್ಮೆಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇವೇಳೆ, ಬಂಧನಕ್ಕೀಡಾದ ಆರು ಮಂದಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾಗಂತ,
ಜಾನುವಾರು ಸಾಗಾಟದ ನೆಪದಲ್ಲಿ ಥಳಿತ, ಹಲ್ಲೆ, ಹತ್ಯೆ ಜಿಲ್ಲೆಗೆ ಹೊಸತಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಇಂಥ ಕ್ರೌರ್ಯಗಳು ನಡೆಯುವುದಕ್ಕೆ ಕಾರಣ ಏನು ಮತ್ತು ಈ ಕ್ರೌರ್ಯದಲ್ಲಿ ಭಾಗಿಯಾದವರು ತಕ್ಷಣ ಜಾಮೀನು ಪಡೆದು ಹೊರಬರುವುದರ ಹಿಂದಿನ ಗುಟ್ಟೇನು ಅನ್ನುವುದು ಅಲ್ತಾಫ್ ಮತ್ತು ಬಶೀರ್ ರನ್ನು ಕೊಂಡಾಡಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಜಿಲ್ಲೆಯ ಶಾಸಕರುಗಳಿಗೆ ತಿಳಿಯದ ವಿಷಯವೂ ಅಲ್ಲ. ಮುಹಮ್ಮದ್ ಹನೀಫ್ ಅವರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದರೆ, ಅದನ್ನು ನೋಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಇದೆ. ನ್ಯಾಯಾಲಯ ಇದೆ. ಅದರ ಹೊರತಾಗಿ ಯಾವ ಖಾಸಗಿ ಗುಂಪುಗಳಿಗೂ ಈ ಹೊಣೆಯನ್ನು ವಹಿಸಿಕೊಡಲಾಗಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಅನುಮಾನ ಮೂಡಿದರೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬಹುದಾದ ಅತಿಶ್ರೇಷ್ಟ ದೇಶಸೇವೆಯೆಂದರೆ, ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೊಡುವುದು. ಇದರ ಹೊರತಾಗಿ ಸ್ವಯಂ ಪೊಲೀಸರಾಗುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇದು ಅಲ್ತಾಫ್ ಮತ್ತು ಬಶೀರ್ ನ್ನು ಕೊಂಡಾಡಿದ ಜಿಲ್ಲೆಯ ಸಂಸದರು ಮತ್ತು ಶಾಸಕರಿಗೆ ಖಂಡಿತ ಗೊತ್ತಿದೆ. ಆದರೆ ಈವರೆಗೂ ಇವರಾರೂ ಈ ಅಮಾನವೀಯ ಕ್ರೌರ್ಯದ ವಿರುದ್ಧ ಮಾತಾಡಿಲ್ಲ. ಇದು ಸಾರುವ ಸಂದೇಶ ಏನು?
ಮೊನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 175 ಪ್ರಯಾಣಿಕರ ಪೈಕಿ ಸಾಕೋ ಕಂಪೆನಿಯ ಒಬ್ಬನೇ ಒಬ್ಬ ಸಿಬ್ಬಂದಿ ಅಥವಾ ಅವರ ಸಂಬಂಧಿಕರು ಇರಲಿಲ್ಲ. ಒಂದೇ ಧರ್ಮದವರೂ ಇರಲಿಲ್ಲ. ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಲಾಕ್‍ಡೌನ್ ಕಾರಣದಿಂದ ಸಿಲುಕಿಕೊಂಡ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು ಮುಂತಾದ ಮನುಷ್ಯರಷ್ಟೇ ಅವರಾಗಿದ್ದರು. ಅವರನ್ನು 61 ಹಿರಿಯ ನಾಗರಿಕರು, 55 ಗರ್ಭಿಣಿಯರು, 20 ಮಂದಿ ತುರ್ತು ಚಿಕಿತ್ಸೆ ಅಗತ್ಯವಿರುವವರು, 35 ಮಕ್ಕಳು- ಹೀಗೆ ಗುರುತಿಸಲಾಗಿತ್ತೇ ಹೊರತು ಅವರ ಧರ್ಮ, ಭಾಷೆ, ರಾಜಕೀಯ ಒಲವುಗಳು ಗುರುತಿಸುವಿಕೆಯ ಮಾನದಂಡವಾಗಿರಲೇ ಇಲ್ಲ. ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಮೆಚ್ಚಿಕೊಂಡೂ ಇದ್ದಾರೆ. ಆದ್ದರಿಂದಲೇ,
 ಈ ಸಂಸದರು ಮತ್ತು ಶಾಸಕರಿಂದ ರಾಜ್ಯದ ಜನರು ಇನ್ನಷ್ಟನ್ನು ನಿರೀಕ್ಷಿಸುವುದು. ಕೆಡುಕನ್ನು ಖಂಡಿಸುವ ವಿಚಾರದಲ್ಲೂ ಇವರು ಇದೇ ಮಾನದಂಡವನ್ನು ಅನುಸರಿಸಬೇಕು ಎಂದು ಬಯಸುವುದು. ಆದರೆ,
ಈ ಬಯಕೆ ಪದೇ ಪದೇ ವಿಫಲವಾಗುತ್ತಿದೆ. ಜಾನುವಾರು ಸಾಗಾಟದ ಹೆಸರಲ್ಲಿ, ಯುವಕ-ಯುವತಿಯರ ಮಾತುಕತೆಯ ಹೆಸರಲ್ಲಿ, ‘ಲವ್ ಜಿಹಾದ್’ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ  ಅನೇಕ ಥಳಿತದ ಘಟನೆಗಳು ನಡೆದಿವೆ, ಬೆತ್ತಲೆ ಮಾಡಲಾಗಿದೆ, ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ. ಹತ್ಯೆಯೂ ನಡೆದಿದೆ. ಆದರೆ, ಬಶೀರ್ ಮತ್ತು ಅಲ್ತಾಫ್ ಅವರ ಒಳಿತಿನ ಕೆಲಸವನ್ನು ಶ್ಲಾಘಿಸಿರುವ ಈ ಸಂಸದರಾಗಲಿ, ಶಾಸಕರಾಗಲಿ, ಇವಾವುದನ್ನೂ ಖಂಡಿಸಬೇಕಾದ ರೀತಿಯಲ್ಲಿ ಖಂಡಿಸಲೇ ಇಲ್ಲ. ಯಾಕೆ ಹೀಗೆ? ಥಳಿತಕ್ಕೊಳಗಾಗುತ್ತಿರುವವರು ಒಂದು ಧರ್ಮದವರು ಮತ್ತು ಥಳಿಸುವವರು ಇನ್ನೊಂದು ಧರ್ಮದವರು ಎಂಬುದು ಇದಕ್ಕೆ ಕಾರಣವೇ? ತನ್ನದಲ್ಲದ ಧರ್ಮದವರ ಮೇಲೆ ಅನ್ಯಾಯ ನಡೆಯುವುದು ಸಹ್ಯವೇ? ಅನ್ಯಾಯಕ್ಕೂ ಧರ್ಮಕ್ಕೂ ಏನು ಸಂಬಂಧ? ಕೆಡುಕಿಗೂ ಧರ್ಮಕ್ಕೂ ಏನು ಸಂಬಂಧ? ಒಂದುವೇಳೆ, 
ಒಳಿತನ್ನು ಧರ್ಮಾಧಾರಿತವಾಗಿ ಮಾಡುವುದಾಗಿದ್ದರೆ ಅದನ್ನು ಅಲ್ತಾಫ್ ಮತ್ತು ಬಶೀರ್ ಗೆ ಮಾಡಬಹುದಿತ್ತು. ಒಂದೇ ಧರ್ಮದವರನ್ನು ಹುಡುಕಿ ಊರಿಗೆ ಕಳುಹಿಸಬಹುದಿತ್ತು. ಅಲ್ಲದೇ ಅವರು ಜನಪ್ರತಿನಿಧಿಗಳೂ ಅಲ್ಲ, ಉದ್ಯಮಿಗಳು. ಜನಪ್ರತಿನಿಧಿಗಳಂತೆ ಜನರಿಗೆ ಅವರು ಉತ್ತರದಾಯಿಗಳೂ ಅಲ್ಲ. ಆದರೆ ಅವರು ಒಳಿತಿನ ವಿಚಾರದಲ್ಲಿ ಧರ್ಮವನ್ನು ನೋಡಲಿಲ್ಲ. ಅಲ್ಲಿ ಆಯ್ಕೆಗೆ ಕಷ್ಟವೇ ಮಾನದಂಡವಾಗಿತ್ತು. ಧರ್ಮವಲ್ಲ. ನಿಜವಾಗಿ, 
ಕೆಡುಕನ್ನು ವಿರೋಧಿಸುವುದಕ್ಕೂ ಇದುವೇ ಮಾನದಂಡವಾಗಬೇಕು. ಕೆಡುಕಿಗೆ ಧರ್ಮವಿಲ್ಲ. ಅದುವೇ ಒಂದು ಧರ್ಮ. ಆದರೆ, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಕೆಡುಕನ್ನು ಧರ್ಮದ ಆಧಾರದಲ್ಲಿ ನೋಡುತ್ತಿರುವಂತಿದೆ. ಆದ್ದರಿಂದಲೇ ಮುಹಮ್ಮದ್ ಹನೀಫ್‍ರ ಮೇಲಾದ ಹಲ್ಲೆಯನ್ನು ಖಂಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಕೇಸು ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿಲ್ಲ. ಇದು ವಿಷಾದನೀಯ. ಒಂದೆಡೆ ಒಳಿತನ್ನು ಶ್ಲಾಘಿಸಿದ ಅದೇ ಜನಪ್ರತಿನಿಧಿಗಳು ಇನ್ನೊಂದು ಕಡೆ ಕೆಡುಕನ್ನು ಕಂಡೂ ಮೌನವಾಗುತ್ತಾರೆಂದರೆ, ಅವರ ಶ್ಲಾಘನೆಯನ್ನೇ ಅನುಮಾನಿಸಬೇಕಾಗುತ್ತದೆ.

Tuesday, 16 June 2020

ನಮ್ಮೊಳಗಿನ ದುಷ್ಟತನಕ್ಕೆ ಕನ್ನಡಿ ಹಿಡಿದ ಎರಡು ಘಟನೆಗಳು



ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ಪ್ರಾಣಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಎಂಬ ಪ್ರಾಣಿ ಈ ಎರಡೂ ಘಟನೆಗಳಿಗೆ ಸ್ಪಂದಿಸಿದ ರೀತಿ ಮತ್ತು ವ್ಯಕ್ತಪಡಿಸಿದ ಅಭಿ ಪ್ರಾಯಗಳಲ್ಲಿ ಎದ್ದು ಕಾಣುತ್ತಿದ್ದ ಪಕ್ಷಪಾತದ ಧ್ವನಿ, ಧಾರ್ಮಿಕ ದ್ವೇಷ, ಕ್ರೌರ್ಯ ಮನೋಭಾವ ಜಿಗುಪ್ತೆ ತರುವಂಥದ್ದು.
1. ಪಟಾಕಿ ತುಂಬಿಸಿಟ್ಟಿದ್ದ ಅನಾನಸು ಹಣ್ಣನ್ನು ತಿಂದು ಕೇರಳದ ಪಾಲಕ್ಕಾಡಿನಲ್ಲಿ ಆನೆಯೊಂದು ಸಾವಿಗೀಡಾದದ್ದು.
2. ಹಿಮಾಚಲ ಪ್ರದೇಶದ ಬಿಲಸ್ಪುರ ಜಿಲ್ಲೆಯಲ್ಲಿ ಪಟಾಕಿ ಸಿಡಿತದಿಂದ ಹುಲ್ಲು ಮೇಯುತ್ತಿದ್ದ ಹಸುವಿನ ದವಡೆ ಮುರಿದು ರಕ್ತ ಸೋರುತ್ತಿರುವುದು. ಹಸುವನ್ನು ಕೊಲ್ಲುವ ಉದ್ದೇಶದಿಂದ ನೆರೆಮನೆಯಾತ  ಇಂಥದ್ದೊಂದು  ಕೃತ್ಯ ನಡೆಸಿದ್ದಾನೆ ಅನ್ನುವ ದೂರು.
ಅನಾನಸಿನ ಒಳಗಡೆ ಪಟಾಕಿ ಇಟ್ಟಿರಬಹುದು ಎಂದು ಆಲೋಚಿಸುವ ಸಾಮರ್ಥ್ಯ  ಆನೆಗಿಲ್ಲ, ಹಸುವಿಗೂ ಇಲ್ಲ. ಆದರೆ ಮನುಷ್ಯನಿಗಿದೆ. ಮಾತ್ರವಲ್ಲ, ಆನೆ ಮತ್ತು ಹಸುವನ್ನು ಪೀಡಿಸಿದ ಊರು  ಯಾವುದು, ಅಲ್ಲಿ ಯಾವ ಧರ್ಮದವರ ಜನಸಂಖ್ಯೆ ಹೆಚ್ಚಿದೆ, ಯಾವ ರಾಜಕೀಯ ಪಕ್ಷದ ಆಡಳಿತವಿದೆ, ಆರೋಪಿಗಳು ಯಾರು... ಅನ್ನುವುದನ್ನೆಲ್ಲ ಅವಲೋಕಿಸಿ ಪ್ರತಿಕ್ರಿಯಿಸುವ ಸಾಮಥ್ರ್ಯವೂ ಮ ನುಷ್ಯನಿಗಿದೆ. ಮನುಷ್ಯ ಸ್ವಭಾವತಃ ದುಷ್ಟನಲ್ಲ, ಪರಿಸ್ಥಿತಿ, ಸನ್ನಿವೇಶ ಮತ್ತು ಸ್ವಾರ್ಥಗಳು ಆತನನ್ನು ದುಷ್ಟನನ್ನಾಗಿಯೋ ದುಷ್ಟತನದ ಪರೋಕ್ಷ ಬೆಂಬಲಿಗನನ್ನಾಗಿಯೋ ಮಾಡಿಬಿಡುತ್ತದೆ ಎಂದು  ಹೇಳಲಾಗುತ್ತದೆ. ಇಲ್ಲದಿದ್ದರೆ ಯಾವ್ಯಾವುದೋ ನೆಪದಲ್ಲಿ ಬೀದಿಯಲ್ಲಿ ಅಟ್ಟಾಡಿಸಿ ಥಳಿಸಿ ಕೊಲ್ಲುತ್ತಿರುವುದನ್ನು ಸಮರ್ಥಿಸಲು ಓರ್ವ ಮನುಷ್ಯನಿಗೆ ಹೇಗೆ ಸಾಧ್ಯ? ಆ ಕ್ರೌರ್ಯಕ್ಕೆ ಮೌನವಾಗಿರಲು ಹೇಗೆ  ಸಾಧ್ಯ ಅಥವಾ ಇನ್ನಾವುದೋ ಕಾರಣ ಕೊಟ್ಟು ಆ ಹತ್ಯೆಯ ಪರೋಕ್ಷ ಬೆಂಬಲಿಗನಾಗಲು ಹೇಗೆ ಸಾಧ್ಯ? ಅಖ್ಲಾಕ್‍ನಿಂದ ಹಿಡಿದು ತಬ್ರೇಜ್ ನ ವರೆಗೆ, ಊನಾದಿಂದ ಹಿಡಿದು ನಮ್ಮ ಅಕ್ಕ-ಪಕ್ಕದ ಬೀ ದಿಯ ವರೆಗೆ ಎಷ್ಟೊಂದು ಥಳಿತ, ಹತ್ಯೆಗಳಾಗಿವೆ? ಈ ಯಾವ ಘಟನೆಗಳಲ್ಲೂ ಪ್ರಾಣಿಗಳಿಗೆ ಯಾವ ಪಾತ್ರವೂ ಇಲ್ಲ. ಥಳಿಸುವವರೂ ಮನುಷ್ಯರೇ. ಥಳಿತಕ್ಕೊಳಗಾಗುವವರೂ ಮನುಷ್ಯರೇ. ಆದರೆ,  ಇಲ್ಲೆಲ್ಲಾ  ಸ್ಪಷ್ಟವಾಗಿ ಎದ್ದು ಕಾಣುವ ಒಂದು ಸತ್ಯ ಇದೆ. ಅದೇನೆಂದರೆ, ಥಳಿಸುವವರ ಧರ್ಮ ಅಥವಾ ಜಾತಿ ಮತ್ತು ಥಳಿತಕ್ಕೊಳಗಾಗುವವರ ಧರ್ಮ ಅಥವಾ ಜಾತಿ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ  ಪರವಾಗಿರುವವರು ಥಳಿಸುವುದು ಮತ್ತು ನಿರ್ದಿಷ್ಟ ಧರ್ಮಾನುಯಾಯಿಗಳು ಥಳಿತಕ್ಕೊಳಗಾಗುವುದು- ಇವೆರಡೂ ಏನನ್ನು ಸೂಚಿಸುತ್ತವೆ? ಥಳಿಸುವವರು ಸದಾಕಾಲ ದುಷ್ಟರೇ? ಹಾಗೆ ಮಾಡುವುದಕ್ಕೆ  ಅವರ ತತ್ವಸಿದ್ಧಾಂತ ಕಾರಣವೇ ಮತ್ತು ಅವರು ತಮ್ಮ ಪ್ರತಿಪಾದನೆಯಲ್ಲಿ ನಿಜಕ್ಕೂ ಪ್ರಾಮಾಣಿಕರೇ ಎಂದು ಪ್ರಶ್ನಿಸುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಆಘಾತಕಾರಿಯಾಗಿರುತ್ತದೆ. ಗುಜರಾತ್  ಹತ್ಯಾಕಾಂಡವನ್ನು ಉಲ್ಲೇಖಿಸಿದರೆ ಮತ್ತು ಹಸಿ ಭ್ರೂಣವನ್ನು ಕತ್ತಿಯ ಮೊನೆಗೆ ಸಿಲುಕಿಸಿ ವಿಕೃತ ಸಂತೋಷಪಟ್ಟ ದುಷ್ಟತನವನ್ನು ಪ್ರಸ್ತಾಪಿಸಿದರೆ, ಆ ಬಗ್ಗೆ ಯಾವ ಖಂಡನೆಯನ್ನಾಗಲಿ, ವಿಷಾದವನ್ನಾಗಲಿ  ವ್ಯಕ್ತಪಡಿಸದೆಯೇ ಅದಕ್ಕೂ ಮೊದಲಿನ ಗೋಧ್ರಾ ರೈಲು ದುರ್ಘಟನೆಯನ್ನು ಎತ್ತುತ್ತಾರೆ. ಅದೊಂದು ರೀತಿಯ ಪಲಾಯನವಾದ. ಖಂಡಿಸಲೇ ಬೇಕಾದ ಸಂದರ್ಭವೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ  ಅಡ್ಡ ದಾರಿಯನ್ನು ಹಿಡಿಯುವುದು. ಪ್ರಶ್ನೆ- ಕ್ರೌರ್ಯವೊಂದನ್ನು ಖಂಡಿಸದೇ ಇರುವುದಲ್ಲ. ಅಂಥದ್ದೊಂದು  ದುಷ್ಟತನ ವ್ಯಕ್ತಿಯೊಳಗಡೆ ಅಡರಿಕೊಳ್ಳುವುದು ಹೇಗೆ? ಗುಜರಾತ್ ಹತ್ಯಾಕಾಂಡವನ್ನು  ಉಲ್ಲೇಖಿಸಿದ ಕೂಡಲೇ ಅದನ್ನು ಖಂಡಿಸದೆಯೇ ಅದಕ್ಕೆ ಪ್ರತಿಯಾಗಿ ದೆಹಲಿ ಸಿಕ್ಖ್ ಹತ್ಯಾಕಾಂಡವನ್ನು ಎತ್ತುವುದು ಅಥವಾ ಗೋಧ್ರಾ ರೈಲು ದಹನದಂಥ ಕ್ರೌರ್ಯಗಳನ್ನು ಉಲ್ಲೇಖಿಸುವುದು ದುಷ್ಟತನದ  ಪ್ರತಿಬಿಂಬ. ದೆಹಲಿಯಲ್ಲಾಗಲಿ, ಗುಜರಾತ್‍ನಲ್ಲಾಗಲಿ, ಗೋಧ್ರಾದಲ್ಲಾಗಲಿ ನಡೆದಿರುವುದು ಮಾನವ ಹತ್ಯೆಗಳೇ ಹೊರತು ಇನ್ನೇನಲ್ಲ. ನಿಶ್ಚಲವಾದ ಆ ಜೀವಗಳನ್ನು ಹಿಂದೂ-ಮುಸ್ಲಿಮ್, ಸಿಕ್ಖ್ ಎಂದು  ವಿಭಜಿಸುವುದರಿಂದ ಸಂತ್ರಸ್ತಗೊಂಡ ಆ ಕುಟುಂಬಗಳ ನೋವಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಸಾಯಿಸಿದವರು ನಿರ್ದಿಷ್ಟ ಉದ್ದೇಶದಿಂದಲೇ ಸಾಯಿಸಿದ್ದಾರೆ. ಹಿಂದೂ-ಮುಸ್ಲಿಮ್-ಸಿಖ್ ರ  ಸಾವಿನಲ್ಲಿ ತಂತಮ್ಮ ತತ್ವ ಸಿದ್ಧಾಂತದನುಸಾರ ಆನಂದವನ್ನೂ ಪಟ್ಟಿದ್ದಾರೆ. ಆದ್ದರಿಂದ,
ಈ ದುಷ್ಟತನವನ್ನು ಧರ್ಮಾತೀತವಾಗಿ ಮತ್ತು ಪಕ್ಷಾತೀತವಾಗಿ ಖಂಡಿಸುವುದಕ್ಕೆ ಸಾಧ್ಯವಾಗದೇ ಹೋಗಿರುವ ದೇಶದಲ್ಲಿ ಆನೆ ಮತ್ತು ಹಸು ಪ್ರಕರಣದಲ್ಲಿ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದೇ  ದೊಡ್ಡ ತಮಾಷೆ. ಆನೆಯ ಘಟನೆ ಕೇರಳದಲ್ಲಿ ನಡೆದಿದೆ ಅನ್ನುವುದೇ ಒಂದು ನಿರ್ದಿಷ್ಟ ವರ್ಗದ ಪಾಲಿಗೆ ದೊಡ್ಡ ಸಂಭ್ರಮ. ಅಲ್ಲಿ ಎಡಪಕ್ಷದ ಆಡಳಿತವಿದೆ. ಆದ್ದರಿಂದ ಬಲಪಕ್ಷಕ್ಕೆ ಅದೊಂದು ರಾಷ್ಟ್ರಮಟ್ಟದ  ಇಶ್ಶೂ. ಕೇರಳಿಗರು ಎಂಥ ಕ್ರೂರಿಗಳು ಅನ್ನುವುದನ್ನು ಎತ್ತಿ ಹೇಳುವುದಕ್ಕೂ ಆ ಘಟನೆಯನ್ನು ಎಗ್ಗಿಲ್ಲದೇ ಬಲಪಕ್ಷದವರು ಮತ್ತು ಅವರಿಂದ ಪ್ರೇರಿತರಾದ ಸಾಮಾನ್ಯರೂ ಬಳಸಿಕೊಂಡರು. ಹೀಗೆ ಆನೆ  ಮೇಲೆ ಕರುಣೆ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ದೇಶದಾದ್ಯಂತ ಥಳಿತ ಘಟನೆಗಳಾಗುತ್ತಿದ್ದಾಗ, ಅದರಿಂದಾಗಿ ಸಾವುಗಳು ಸಂಭವಿಸುತ್ತಿದ್ದಾಗ, ಗುಜರಾತ್-ಮುಝಫ್ಫರ್‍ ನಗರ್ ಹತ್ಯಾಕಾಂಡಗಳಾಗುವಾಗ  ಮೌನಿಗಳಾಗಿದ್ದರು ಎಂಬುದು ಸ್ಪಷ್ಟ. ಆ ಕ್ರೌರ್ಯಗಳ ಕುರಿತಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಪ್ರಶ್ನೆಗೆ ಪ್ರತಿಯಾಗಿ ಇನ್ನೊಂದು ಪ್ರಶ್ನೆಯನ್ನು  ಎತ್ತುತ್ತಾರೆಯೇ ಹೊರತು ಅದು ಖಂಡನಾರ್ಹ ಎಂಬ ಮಾತೂ ಹೊರಡುವುದಿಲ್ಲ. ಅದೇವೇಳೆ,
ಹಿಮಾಚಲ ಪ್ರದೇಶದಲ್ಲಿ ದವಡೆ ಹರಿದುಕೊಂಡು ರಕ್ತ ಸುರಿಸುತ್ತಾ ಸಂಕಟಪಡುತ್ತಿರುವ ಹಸು, ಕೇರಳದ ಆನೆಯಂತೆ ಯಾವ ಕಾಳಜಿಯನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಕೇರಳದ ಆನೆಗೆ ಭಯಂಕರವಾಗಿ  ಮಿಡಿದವರಲ್ಲಿ ಸಣ್ಣ ಸಂಖ್ಯೆಯೊಂದನ್ನು ಬಿಟ್ಟರೆ ಉಳಿದವರ್ಯಾರೂ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವುದು ಬಲಪಕ್ಷ ಮತ್ತು ಹಸುವಿಗೆ ಪಟಾಕಿ ತಿನ್ನಿಸಿದವನು ಈ ಬಲಪಕ್ಷ ಪ್ರತಿನಿಧಿಸುವ ಧರ್ಮದ ಅನುಯಾಯಿ.
ಅನ್ಯಾಯವನ್ನು ಯಾವ ಧರ್ಮವೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಿಲ್ಲ. ಅನ್ಯಾಯವೆಂದರೆ, ಅನ್ಯಾಯ ಅಷ್ಟೇ. ದುಷ್ಟತನವೆಂದರೆ ದುಷ್ಟತನ ಅಷ್ಟೇ. ಕ್ರೌರ್ಯದಲ್ಲಿ ಹಿಂದೂ-ಮುಸ್ಲಿಮ್ ಕ್ರೌರ್ಯ  ಎಂಬ ಬೇಧವಿಲ್ಲ. ಆನೆ ಮತ್ತು ಹಸು ಇವೆರಡೂ ಮೂಕ ಪ್ರಾಣಿಗಳು. ಅವುಗಳ ಮೇಲೆ ದೌರ್ಜನ್ಯ ಎಸಗಿದವರು ದುಷ್ಟರೇ ಹೊರತು ಅವರಲ್ಲಿ ಹಿಂದೂ ದುಷ್ಟ-ಮುಸ್ಲಿಮ್ ದುಷ್ಟ, ಎಡ ದುಷ್ಟ, ಬಲ  ದುಷ್ಟ ಎಂಬ ವ್ಯತ್ಯಾಸ ಮಾಡುವುದು ಧರ್ಮ ವಿರೋಧಿ. ಇದು ಪ್ರಾಣಿಗಳಿಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಮನುಷ್ಯರ ಮೇಲಿನ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿಯೂ ಇವೇ ಮಾನದಂಡವನ್ನು  ಅಳವಡಿಸಬೇಕು. ಅನ್ಯಾಯ- ಹಿಂದೂ ಎಸಗಿದರೂ ಮುಸ್ಲಿಮ್ ಎಸಗಿದರೂ ಅನ್ಯಾಯವೇ. ನೋವು- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ನೋವೇ. ಪ್ರಾಮಾಣಿಕತೆ- ಹಿಂದೂವಿನದ್ದಾದರೂ  ಮುಸ್ಲಿಮನದ್ದಾದರೂ ಪ್ರಾಮಾಣಿಕತೆಯೇ. ಕೆಡುಕು ಮತ್ತು ಒಳಿತು ಯಾವ ಧರ್ಮದ ಖಾಸಗಿ ಸೊತ್ತೂ ಅಲ್ಲ. ಯಾರು ಅದನ್ನು ಕೈವಶ ಮಾಡಿಕೊಳ್ಳುತ್ತಾರೋ ಅವರದು. ಆನೆ ಮತ್ತು ಹಸು ಪ್ರಕರಣಗಳು  ನಮ್ಮೊಳಗಿನ ದುಷ್ಟತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ದುಷ್ಟತನವನ್ನು ಖಂಡಿಸುವ ಬದಲು ದುಷ್ಟತನ ಎಲ್ಲಿ ನಡೆದಿದೆ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನೋಡಿಕೊಂಡು  ಪ್ರತಿಕ್ರಿಯಿಸುವ ಅತೀ ದುಷ್ಟತನವೊಂದು ನಮ್ಮೊಳಗೆ ಇದೆ. ಆನೆ ಮತ್ತು ಹಸು ನಮ್ಮಲ್ಲಿನ ಈ ದುಷ್ಟತನಕ್ಕೆ ಕನ್ನಡಿ ಹಿಡಿದಿದೆ, ಅಷ್ಟೇ.



Friday, 12 June 2020

ಅವರು ಗಾಳ ಎಸೆದರು, ಇವರು ಗಾಳವನ್ನೇ ನುಂಗಿ ಪ್ರೀತಿಸಿದರು: ನನ್ನ ಭಾರತವೇ, ಒಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟು...


ಸನ್ಮಾರ್ಗ ಸಂಪಾದಕೀಯ

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿಯ ನಾಲ್ವರು ಮುಸ್ಲಿಮ್ ಯುವಕರು ಇವತ್ತು ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರನ್ನು ಟಿ.ವಿ. ಚಾನೆಲ್‍ಗಳು ಮಾತಾಡಿಸುತ್ತಿವೆ. ಬೈಟ್ ಪಡಕೊಳ್ಳುತ್ತಿವೆ. ಪತ್ರಿಕೆಗಳು ಅವರನ್ನು ಗುರುತಿಸಿ ಕೊಂಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರು ತುಂಬಿಹೋಗಿದ್ದಾರೆ. ಕರಾವಳಿ ಭಾಗದ ಪ್ರತಿ ಮನೆಯೂ ಅವರ ಬಗ್ಗೆ ಮಾತಾಡುತ್ತಿದೆ. ಘಟನೆ ಇಷ್ಟೇ-

ಆತ್ಮಹತ್ಯೆ ಮಾಡಲೆಂದು ನಿಶಾಂತ್ ಎಂಬ ತರುಣ ಇಲ್ಲಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಈದ್‍ನ ಸಂಭ್ರಮದಲ್ಲಿದ್ದ ಈ ಯುವಕರಿಗೆ ಸುದ್ದಿ ತಲುಪಿದ ತಕ್ಷಣ ಹಿಂದು-ಮುಂದು ನೋಡದೇ ಜೀವದ ಹಂಗು ತೊರೆದು ನದಿಗೆ ಹಾರಿದ್ದಾರೆ. ನಿಶಾಂತ್‍ನನ್ನು ದಡಕ್ಕೆ ತಂದಿದ್ದಾರೆ. ಈ ನಾಲ್ವರ ಪೈಕಿ ಆರಿಫ್ ಎಂಬ ತರುಣನಂತೂ ಕೊರೋನಾ ಭೀತಿಯನ್ನೂ ಲೆಕ್ಕಿಸದೆಯೇ ನಿಶಾಂತ್‍ನ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದ್ದಾರೆ. ನಿಶಾಂತ್ ನ ಹೊಟ್ಟೆ ಸೇರಿದ್ದ ನೀರನ್ನು ತನ್ನ ಬಾಯಲ್ಲಿ ಹೀರಿ ಹೊರಚೆಲ್ಲಿದ್ದಾರೆ. ಆದರೂ ನಿಶಾಂತ್ ಬದುಕುಳಿದಿಲ್ಲ. ನಿಜವಾಗಿ,

ನೇತ್ರಾವತಿ ಸೇತುವೆಗೆ ತಾಗಿಕೊಂಡಿರುವ ಈ ಗೂಡಿನಬಳಿ ಎಂಬ ಪುಟ್ಟ ಊರಿನಲ್ಲಿ ಇಂಥ ಸಾಹಸಿ ಮುಸ್ಲಿಂ ಯುವಕರ ಬಳಗವೇ ಇದೆ. ಸೇತುವೆಯಿಂದ ಯಾರಾದರೂ ಧುಮುಕಿದರೆ, ಇನ್ನೇನಾದರೂ ಅನಾಹುತವಾದರೆ ಈ ಯುವಕರು ತಮ್ಮನ್ನೇ ಮರೆತು ನದಿಗೆ ಹಾರುತ್ತಾರೆ. ಧುಮುಕಿದವರನ್ನು ಬದುಕಿಸಿ ದಡ ಸೇರಿಸುತ್ತಾರೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಇದು ಅವರ ಉದ್ಯೋಗ ಅಲ್ಲ, ಸಹಜ ಬದುಕು. ಹೀಗಿದ್ದೂ, ಈ ಘಟನೆ ಭಾರೀ ಪ್ರಚಾರ ಪಡೆದುಕೊಳ್ಳಲು ಕಾರಣವೇನು ಎಂದು ಅನ್ವೇಷಿಸಿದರೆ ಮೂರು ಮುಖ್ಯ ಕಾರಣಗಳು ಕಾಣಿಸುತ್ತವೆ.

1. ‘ಕೊರೋನಾ ಭಾರತದಲ್ಲಿ’ ಮಾಧ್ಯಮಗಳು ಮತ್ತು ಪ್ರಭುತ್ವ ಪೋಷಿತ ವ್ಯಕ್ತಿಗಳು ಮುಸ್ಲಿಮರ ಮೇಲೆ ಮಾಡಿದ ನಿರಂತರ ದಾಳಿ, ಹೀನಾತಿಹೀನ ನಿಂದನೆ; ಅವಮಾನ, ಬೈಗುಳ. ಆದರೆ ಇದಕ್ಕೆ ಪ್ರತಿಯಾಗಿ ಮುಸ್ಲಿಮರಿಂದ ಸೇವೆಯ ಮೂಲಕ ಪ್ರತಿಕ್ರಿಯೆ.

2. ಕೆಡುಕಿಗೆ ಧರ್ಮವಿಲ್ಲ ಮತ್ತು ಜನಾಂಗೀಯ ದ್ವೇಷ ಅಪಾಯಕಾರಿ ಎಂಬುದನ್ನು ಅರಿತುಕೊಂಡಿರುವ ಈ ನಾಡಿನ ಸದ್ಗುಣಪ್ರೇಮಿ ಜನರು ಈ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಸಾರಬೇಕೆಂದು ಬಯಸಿದ್ದು.

3. ಕಲ್ಲಡ್ಕ ಎಂಬ ಊರು ಈ ಘಟನಾ ಸ್ಥಳಕ್ಕಿಂತ ಕೂಗಳತೆಯ ದೂರದಲ್ಲಷ್ಟೇ ಇರುವುದು.

ಕೊರೋನಾ ಈ ದೇಶವನ್ನು ಪ್ರವೇಶಿಸಿದಾಗ ಅದನ್ನು ಎದುರಿಸುವುದಕ್ಕೆ ದೇಶದ ಆಡಳಿತ ಮಾಡಿಕೊಂಡಿರುವ ತಯಾರಿ ಅತ್ಯಂತ ದುರ್ಬಲವಾಗಿತ್ತು. ಭಾರತದಲ್ಲಿ ಲಾಕ್‍ಡೌನ್ ಘೋಷಣೆಯಾದದ್ದು ಮಾರ್ಚ್ 23ರಂದು. ಅದೂ ದಿಢೀರ್ ಆಗಿ. ಆದರೆ ಕೊರೋನಾದ ಇರುವಿಕೆಯನ್ನು 2019 ಡಿಸೆಂಬರ್ 19ರಂದೇ ಚೀನಾ ಜಗತ್ತಿನ ಮುಂದೆ ತೆರೆದಿಟ್ಟು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊರೋನಾ ಚೀನಾದಿಂದ ದಕ್ಷಿಣ ಕೊರಿಯಾ, ಇರಾನ್, ಇಟಲಿ, ಸ್ಪೈನ್, ಅಮೇರಿಕ ಇತ್ಯಾದಿ ರಾಷ್ಟ್ರಗಳಲ್ಲಿ ಸುತ್ತಾಡಿ ಭಾರತಕ್ಕೆ ಲಗ್ಗೆ ಹಾಕುವಾಗ ಎರಡ್ಮೂರು ತಿಂಗಳುಗಳೇ ಕಳೆದಿತ್ತು. ಆದರೆ, ಕೊರೋನಾ ಪೀಡಿತ ರಾಷ್ಟ್ರಗಳನ್ನು ನೋಡಿ ಭಾರತೀಯ ಸ್ಥಿತಿಗತಿಗೆ ಪೂರಕವಾದ ಕೊರೋನಾ ವಿರೋಧಿ ಯೋಜನೆಗಳನ್ನು ರೂಪಿಸಬೇಕಾಗಿದ್ದ ಪ್ರಭುತ್ವ ಈ ದಿಸೆಯಲ್ಲಿ ಎಂಥ ವೈಫಲ್ಯಕ್ಕೆ ಒಳಗಾಯಿತೆಂದರೆ, ಕೋಟ್ಯಂತರ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಯಾವ ಪರಿಜ್ಞಾನವೂ ಇಲ್ಲದೇ ದಿಢೀರ್ ಲಾಕ್‍ಡೌನ್ ಘೋಷಿಸಿತು. ಇಟಲಿ, ಇರಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳ ಸ್ಥಿತಿ-ಗತಿ ಏನೋ ಅದುವೇ ಭಾರತದ್ದು ಅನ್ನುವ ರೀತಿಯಲ್ಲಿ ಪ್ರಭುತ್ವ ವರ್ತಿಸಿತು. ನಿಜವಾಗಿ,

ಭಾರೀ ಜನಸಂಖ್ಯೆಯಿರುವ ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಯಲು ಹೋಗುವ ಕಾರ್ಮಿಕರ ಬೃಹತ್ ಸಂಖ್ಯೆಯು ಇನ್ನಾವ ರಾಷ್ಟ್ರದಲ್ಲೂ ಇರುವ ಸಾಧ್ಯತೆ ಇಲ್ಲ. ಆದ್ದರಿಂದಲೇ, ಕೊರೋನಾವನ್ನು ಎದುರಿಸುವುದಕ್ಕೆ ಭಾರತ ಕೈಗೊಳ್ಳಬೇಕಾದ ಕ್ರಮಗಳು ಅಮೇರಿಕದ್ದೋ  ಇಟಲಿಯದ್ದೋ  ತದ್ರೂಪಿ ಆಗಬಾರದಿತ್ತು. ದಿಢೀರ್ ಲಾಕ್‍ಡೌನ್ ಭಾರತಕ್ಕೆಷ್ಟು ಸೂಕ್ತ ಎಂಬುದಾಗಿ ವಲಸೆ ಕಾರ್ಮಿಕರನ್ನು ಎದುರಿಟ್ಟು ಆಲೋಚಿಸಬೇಕಿತ್ತು. ಆದರೆ ಈ ವಿಷಯದಲ್ಲಾದ ಭಾರೀ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ಪ್ರಭುತ್ವ ಮತ್ತು ಅದರ ಕೃಪಾಪೋಷಿತ ಮಾಧ್ಯಮ ಸಂಸ್ಥೆಗಳು ಆಯ್ಕೆ ಮಾಡಿಕೊಂಡದ್ದೇ ಮುಸ್ಲಿಮರನ್ನು. ಇಲ್ಲಸಲ್ಲದ ಆರೋಪ, ನಕಲಿ ವೀಡಿಯೋ, ನಿಂದನೆ, ಬೈಗುಳ, ಬಹಿಷ್ಕಾರ ಇತ್ಯಾದಿಗಳನ್ನು ಮುಸ್ಲಿಮರ ಮೇಲೆ ಹೇರಿ ಕೊರೋನಾದ ಬದಲು ಮುಸ್ಲಿಮರ ವಿರುದ್ಧ ಹೋರಾಟವನ್ನು ಕೈಗೊಳ್ಳಲಾಯಿತು. ವಿಶೇಷ ಏನೆಂದರೆ, ಈ ಎಲ್ಲ ದ್ವೇಷಪೂರಿತ ದಾಳಿಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ.

ಭಾರತೀಯ ಇತಿಹಾಸದಲ್ಲಿಯೇ ದಪ್ಪಕ್ಷರಗಳಲ್ಲಿ ದಾಖಲಿಸಿಡಬೇಕಾದಷ್ಟು ವಿವೇಕಯುತವಾದ ಮತ್ತು ಅತ್ಯಂತ ಮಾನವೀಯವಾದ ಉತ್ತರವನ್ನು ಮುಸ್ಲಿಮ್ ಸಮುದಾಯ ಇದಕ್ಕೆ ಪ್ರತಿಯಾಗಿ ನೀಡಿತು. ಕೊರೋನೋತ್ತರ ಭಾರತ ಎಂದೂ ನೆನಪಿಸಬಹುದಾದಂತಹ ಮಾನವೀಯ ಸೇವಾ ಕಾರ್ಯವನ್ನು ಮುಸ್ಲಿಮ್ ಸಮುದಾಯ ಮುಂಚೂಣಿಯಲ್ಲಿ ನಿಂತು ನೆರವೇರಿಸಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ಮತ್ತು ರಾಜಕೀಯವಾಗಿಯೂ ಅತ್ಯಂತ ದುರ್ಬಲವಾಗಿರುವ ಮುಸ್ಲಿಮ್ ಸಮುದಾಯವು ಕೊರೋನಾ ಪೀಡಿತ ಭಾರತದಲ್ಲಿ ಗೈದಿರುವ ಸೇವೆಯು ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿರುವ ಯಾವುದೇ ಸಮುದಾಯ ಮಾಡಿರುವ ಸೇವೆಗಿಂತಲೂ ಎಷ್ಟೋ ಪಟ್ಟು ಮಿಗಿಲಾದುದು. ಮುಸ್ಲಿಮ್ ಸಮುದಾಯದ ಅತಿ ಸಣ್ಣ ಸಂಘಟನೆಯಿಂದ ಹಿಡಿದು ರಾಷ್ಟ್ರಮಟ್ಟದ ಸಂಘಟನೆಗಳವರೆಗೆ ಎಲ್ಲವೂ ಜಿದ್ದಿಗೆ ಬಿದ್ದು ಜನರ ಸೇವೆಗೆ ಇಳಿದುವು. ಧರ್ಮ ನೋಡದೆಯೇ ಮನೆ ಮನೆಗೆ ಆಹಾರ ವಸ್ತುಗಳನ್ನು ವಿತರಿಸಿದುವು. ವಿದೇಶದಿಂದ ಆಗಮಿಸಿದವರಿಗೆ ತಮ್ಮ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು, ಮದುವೆ ಸಭಾಂಗಣ, ಆಸ್ಪತ್ರೆ, ಮದರಸ ಮತ್ತು ಮಸೀದಿಯನ್ನೂ ಕ್ವಾರೆಂಟೈನ್‍ಗಾಗಿ ಬಿಟ್ಟುಕೊಟ್ಟಿತು. ಕೊರೋನಾ ಪೀಡಿತ ಮುಸ್ಲಿಮೇತರ ವ್ಯಕ್ತಿಗಳ ಶವಸಂಸ್ಕಾರ ನಡೆಸಿತು. ವಲಸೆ ಕಾರ್ಮಿಕರ ಪಾಲಿಗೆ ಆಪದ್ಭಾಂಧವರಾಗಿ ಕೆಲಸ ಮಾಡಿದ್ದು ಇದೇ ಮುಸ್ಲಿಮ್ ಸಮುದಾಯವೇ. ಪ್ರತಿ ಮಸೀದಿಗಳೂ ತಮ್ಮ ವ್ಯಾಪ್ತಿಯ ಮನೆಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಅಂದಹಾಗೆ,

ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯವೊಂದು ಕೊರೋನಾ ಪೀಡಿತ ಭಾರತದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಿದ್ದು ದೇಶವೇ ಎದ್ದು ನಿಂತು ಚಪ್ಪಾಳೆ ತಟ್ಟಬೇಕಾದಷ್ಟು ಮಹತ್ವಪೂರ್ಣವಾದುದು. ವಿಶೇಷ ಏನೆಂದರೆ, ದೇಶದ ಮುಖ್ಯವಾಹಿನಿಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಪ್ರಭುತ್ವ ಬೆಂಬಲಿತ ನಾಯಕರು ಹೀನಾತಿಹೀನವಾಗಿ ನಿಂದಿಸುತ್ತಿರುವ ಮತ್ತು ಅವಮಾನಿಸುತ್ತಿರುವ ಸಂದರ್ಭದಲ್ಲೇ  ಮುಸ್ಲಿಮರಿಂದ ಇಂಥದ್ದೊಂದು ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬುದು. ದ್ವೇಷದ ಯಾವ ಪ್ರಚಾರಕ್ಕೂ ಮುಸ್ಲಿಮರು ಹತಾಶರಾಗಲಿಲ್ಲ. ಬೈಗುಳಕ್ಕೆ ಜಗ್ಗಲಿಲ್ಲ. ಪ್ರಭುತ್ವವೇ ತೋಳೇರಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಹೊರಟಾಗಲೂ ಮುಸ್ಲಿಮರು ಹಿಂಜರಿಯಲಿಲ್ಲ. ಅವರು ನಿಂದನೆಗೆ ಪ್ರತಿಯಾಗಿ ಮುಗುಳ್ನಕ್ಕರು. ಬೈಗುಳಕ್ಕೆ ಪ್ರತಿಯಾಗಿ ಪ್ರೀತಿಸಿದರು. ಸುಳ್ಳಿಗೆ ಪ್ರತಿಯಾಗಿ ಪ್ರತಿ ಸುಳ್ಳನ್ನು ಉತ್ಪಾದಿಸದೆಯೇ ಸತ್ಯವನ್ನು ನಿರೀಕ್ಷಿಸಿದರು.
ಹಾಗಂತ,

ಹೀಗೆ ಪ್ರತಿಕ್ರಿಯಬೇಕಾದುದು ಅವರ ಅನಿವಾರ್ಯತೆಯೇನೂ ಆಗಿರಲಿಲ್ಲ. ಅವರಿಗೂ ಪ್ರತಿನಿಂದೆ, ಪ್ರತಿ ಸುಳ್ಳು, ಪ್ರತಿ ಬೈಗುಳ ಸುರಿಸಿಕೊಂಡು ಸುಮ್ಮನಿರಬಹುದಿತ್ತು. ನಯಾ ಪೈಸೆಯನ್ನೂ ಖರ್ಚು ಮಾಡದೇ ಪ್ರಭುತ್ವದೊಂದಿಗೆ ಅಸಹಕಾರ ತೋರಬಹುದಿತ್ತು. ಸಂಕಷ್ಟ ಭಾರತದ ಚಿತ್ರಗಳು ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ನಕಾರಾತ್ಮಕವಾಗಿ ಮಾತ್ರ ಆಲೋಚಿಸಬಹುದಿತ್ತು. ಆದರೆ ಇಲ್ಲಿನ ಮಾಧ್ಯಮಗಳು ಮತ್ತು ಪ್ರಭುತ್ವ ಬೀಸಿದ ಗಾಳಕ್ಕೆ ಮುಸ್ಲಿಮ್ ಸಮುದಾಯ ಸಿಲುಕಿಕೊಳ್ಳದೇ ಸ್ವತಃ ಆ ಗಾಳವನ್ನೇ ನುಂಗಿತಲ್ಲದೇ ಪ್ರತಿಯಾಗಿ ನಗು ಚೆಲ್ಲಿತು. ಗಾಳದ ಮೊನೆಯು ಅವರ ಹೊಟ್ಟೆಯಲ್ಲಿ ಇಂಚಿಂಚೂ ಗಾಯ ಮಾಡುತ್ತಿದ್ದರೂ ಮುಸ್ಲಿಮರು ಅದನ್ನು ತೋರಗೊಡಲೇ ಇಲ್ಲ. ಅವರು ಎಸೆದ ಗಾಳಗಳನ್ನೆಲ್ಲ ಮುಸ್ಲಿಮರು ನುಂಗುತ್ತಾ ಹೋದರು. ಗಾಳ ದೇಹದಲ್ಲಿ ಮಾಡುತ್ತಿರುವ ಗಾಯಗಳನ್ನೆಲ್ಲ ಸಹಿಸುತ್ತಾ ಹೋದರು. ಎಂಥ ಸಂದರ್ಭ ಬಂದರೂ ನೋವಿಗೆ ಪ್ರತಿಯಾಗಿ ನೋವನ್ನೇ ಮರಳಿಸಲಾರೆವು ಎಂದು ಪಣ ತೊಟ್ಟರು. ಅವುಡುಗಚ್ಚಿ ಪ್ರೀತಿಯನ್ನು ಹಂಚಿದರು. ಗೂಡಿನಬಳಿಯ ಘಟನೆಯೂ ಇದರಲ್ಲಿ ಒಂದು. "ಕಲ್ಲಡ್ಕದ" ಮುಸ್ಲಿಮ್ ದ್ವೇಷಿ ಭಾಷಣವು ನಿಶಾಂತ್‍ನಿಗಾಗಿ ಮರುಗದಂತೆ ಮತ್ತು ಆತನನ್ನು ಬದುಕಿಸಲಿಕ್ಕಾಗಿ ನೀರಿಗೆ ಹಾರದಂತೆ  ಆ ಯುವಕನನ್ನು ತಡೆಯಲಿಲ್ಲ. ಆದ್ದರಿಂದಲೇ, ದೇಶದಾದ್ಯಂತ ಮುಸ್ಲಿಮರು ಇವತ್ತು ಶ್ಲಾಘನೆಗೆ ಒಳಗಾಗುತ್ತಿದ್ದಾರೆ, ಅವರ ಸೇವಾಕಾರ್ಯಗಳನ್ನು ನಿಂದನೆಗೈದವರೇ ಒಳಗೊಳಗೇ ಮೆಚ್ಚಿಕೊಂಡು ಆಡುತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳನ್ನು ಎದುರಿಸಿಯೂ ಈ ಮಟ್ಟದಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಮುಸ್ಲಿಮರಿಗೆ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿಪಡುತ್ತಿದ್ದಾರೆ.

ಕೊರೋನೋತ್ತರ ಭಾರತವು ಮುಸ್ಲಿಮರ ಈ ವಿವೇಕಪೂರ್ಣ ಮತ್ತು ಪ್ರಬುದ್ಧ ವರ್ತನೆಯನ್ನು ಖಂಡಿತ ಬಹುಕಾಲ ನೆನಪಿನಲ್ಲಿಡಲಿದೆ.


Monday, 25 May 2020

ಅವರನ್ನು ಬೀದಿಯಲ್ಲಿಟ್ಟು ನಮಗೆ ಗಾಳಿಪಟ ಹಾರಿಸಲು ಸಾಧ್ಯವೇ? ಈದ್: ಒಂದು ಆತ್ಮ ಸಂವಾದ







ಈದ್‍ನ ಪರೋಕ್ಷ ಅರ್ಥ ಖುಷಿ, ಸಂಭ್ರಮ, ಸಂತೋಷ. ಈದ್ ಎಂಬುದು ಯಾವುದಾದರೊಂದು ದೇಶಕ್ಕೆ, ರಾಜ್ಯಕ್ಕೆ ಅಥವಾ ಯಾವುದಾದರೊಂದು ಜಿಲ್ಲೆಗೆ ಸೀಮಿತವಾದ ಒಂದಲ್ಲ. ದಿನದ ವ್ಯತ್ಯಾಸದೊಂದಿಗೆ ಜಾಗತಿಕವಾಗಿ ಆಚರಿಸುವ ಹಬ್ಬ. ಒಂದು ತಿಂಗಳ ಕಾಲದ ಉಪವಾಸದಿಂದ ಬಿಡುಗಡೆಗೊಂಡ ಸಂಭ್ರಮವನ್ನು ಹರ್ಷೋಲ್ಲಾಸದಿಂದ ಅನುಭವಿಸುವ ದಿನ. ವಿಶೇಷ ಏನೆಂದರೆ, ಈದ್‍ನ ದಿನ ಬಡವರಲ್ಲಿ ಬಡವರಾದ ಕುಟುಂಬ ಕೂಡ ಆನಂದ ಪಡಬೇಕು ಅನ್ನುವ ಗುರಿಯನ್ನು ಈದ್ ಹೊಂದಿದೆ. ಇವತ್ತಿನ ಬಂಡವಾಳಶಾಹಿ ಜಗತ್ತು ಪ್ರಸ್ತುತ ಪಡಿಸುವ ಆನಂದದ ನಿಯಮ ಏನೆಂದರೆ, ಉಳ್ಳವರ ಸಂಭ್ರಮದಲ್ಲಿ ಇಲ್ಲದವನಿಗೆ ಪಾಲಿಲ್ಲ. ಬಡವ ಆನಂದಲ್ಲಿದ್ದಾನೋ ಇಲ್ಲವೋ ಎಂಬುದನ್ನು ಪರಿಗಣಿಸಿ ಧನಿಕ ಆನಂದಪಡುವುದಲ್ಲ. ಆನಂದ ಆತನ ಹಕ್ಕು, ಅದಕ್ಕೂ ಬಡವನಿಗೂ ಸಂಬಂಧ ಇಲ್ಲ. ಬಡವ ಹಬ್ಬವನ್ನು ಹೇಗೆ ಬೇಕಾದರೂ ಆಚರಿಸಲಿ, ಧನಿಕ ಆ ಬಗ್ಗೆ ಚಿಂತಿಸಬೇಕಾಗಿಲ್ಲ. ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಶ್ರೀಮಂತ  ಬಹುದೊಡ್ಡ ಭಾಗ್ಯವಂತ. ಆತನ ಶ್ರೀಮಂತಿಕೆಯಲ್ಲಿ ಬಡವನ ಬೆವರು ಎಷ್ಟೇ ಸುರಿದಿದ್ದರೂ ಆ ಬೆವರಿಗೆ ವೇತನ ನೀಡಿದರೆ, ಅಲ್ಲಿಗೆ ಆತನಿಗೂ ಆ ಬೆವರಿಗೂ ಸಂಬಂಧ ಮುಕ್ತಾಯಗೊಳ್ಳುತ್ತದೆ.

ಇವತ್ತು ವಲಸೆ ಕಾರ್ಮಿಕರು ಪಡುತ್ತಿರುವ ದಾರುಣ ಸ್ಥಿತಿಯ ಹಿಂದಿರುವುದೂ ಇದೇ ಮನಸ್ಥಿತಿ. ನಗರವನ್ನು ಸುಂದರಗೊಳಿಸಬೇಕು ಅನ್ನುವುದು ಸರಕಾರದ ಬಯಕೆ. ಆ ಬಯಕೆ ಪೂರ್ತಿಗೊಳ್ಳಬೇಕಾದರೆ ಈ ಕಾರ್ಮಿಕರು ಬೇಕು. ಅದಕ್ಕಾಗಿ ಅವರನ್ನು ಅತ್ಯಂತ ಕನಿಷ್ಠ ಸೌಲಭ್ಯದೊಂದಿಗೆ ನಗರಗಳಲ್ಲಿ ಉಳಿಸಿಕೊಳ್ಳಲಾಯಿತು. ಅವರ ರಕ್ತವನ್ನು ಬಸಿದು ನಗರವನ್ನೂ ಕಟ್ಟಲಾಯಿತು. ಇಂಥ ವಲಸೆ ಕಾರ್ಮಿಕರು 8 ಕೋಟಿಗಿಂತಲೂ ಅಧಿಕ ಇದ್ದಾರೆ ಎಂಬುದು ಕೇಂದ್ರ ಸರಕಾರವೇ ಒದಗಿಸಿದ ಮಾಹಿತಿ. ಇವರು ವಲಸಿಗಾರರಾಗಿರುವುದರಿಂದ ಇವರಲ್ಲಿ ಪಡಿತರ ಚೀಟಿಯೂ ಇಲ್ಲ. ಆದ್ದರಿಂದ ರಾಜ್ಯ ಸರಕಾರಗಳು ಉಚಿತವಾಗಿ ಹಂಚುವ ಅಕ್ಕಿ-ದವಸ ಧಾನ್ಯಗಳು ಇವರಿಗೆ ಲಭ್ಯವಾಗುತ್ತಲೂ ಇಲ್ಲ. ಕಳೆದ ವಾರ ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‍ವರ್ಕ್ ಎಂಬ ಸ್ವಯಂ ಸೇವಾ ಸಂಸ್ಥೆಯು 12,248 ವಲಸೆ ಕಾರ್ಮಿಕರನ್ನು ವಿವಿಧ ರೂಪದಲ್ಲಿ ಸಂಪರ್ಕಿಸಿದಾಗ ಸಿಕ್ಕ ಮಾಹಿತಿ ಅತ್ಯಂತ ಆಘಾತಕಾರಿಯಾದದು. ಇವರಲ್ಲಿ 82% ಮಂದಿಗೂ ಸರಕಾರ ವಿತರಿಸಿರುವ ಪಡಿತರ ಸಿಕ್ಕಿಲ್ಲ. ಸಂಪರ್ಕಿಸಲಾದ 9,981 ಮಂದಿಯ ಪೈಕಿ 64%  ಮಂದಿಯಲ್ಲಿ 100 ರೂಪಾಯಿಯೂ ಇಲ್ಲ. ನಮ್ಮ ನಗರವನ್ನು ಸುಂದರವಾಗಿಸುವುದಕ್ಕಾಗಿ ದುಡಿದೂ ದುಡಿದೂ ತಮ್ಮ ದೇಹವನ್ನು ಎಲುಬುಗೂಡನ್ನಾಗಿಸಿಕೊಂಡ ಈ ಮಂದಿಯನ್ನು ಅವರ ಕಷ್ಟಕಾಲದಲ್ಲಿ ಬೀದಿಗೆ ತಳ್ಳುವುದೆಂದರೆ, ಅದು ಯಾವ ಮನಸ್ಥಿತಿ?

ಮಾರ್ಚ್ 24 ರಂದು ಭಾರತದಲ್ಲಿ ಕೇವಲ 536 ಕೊರೋನಾ ಪಾಸಿಟಿವ್ ಪ್ರಕರಣಗಳಷ್ಟೇ ಇತ್ತು. ಕೇವಲ 10 ಮಂದಿ ಸಾವಿಗೀಡಾಗಿದ್ದರು. ಈ ಸಮಯದಲ್ಲೇ ವಿದೇಶದಲ್ಲಿದ್ದ ಶ್ರೀಮಂತರ ಮಕ್ಕಳು-ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರವೇ ವಿಮಾನ ಕಳುಹಿಸಿ ಉಚಿತವಾಗಿ ಕರೆಸಿಕೊಂಡಿತ್ತು. ಲಾಕ್‍ಡೌನ್ ಘೋಷಿಸುವಾಗ ರಾಜಸ್ಥಾನದ ಕೋಟಾದಲ್ಲಿ ವಿವಿಧ ರಾಜ್ಯಗಳ ಸುಮಾರು 30 ಸಾವಿರ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಐಐಟಿ ತರಬೇತಿಗೆ ಪ್ರಸಿದ್ಧವಾಗಿರುವ ಕೋಟಾದಿಂದ ಈ ವಿದ್ಯಾರ್ಥಿಗಳನ್ನು ಎಪ್ರಿಲ್‍ನಲ್ಲಿ ಆಯಾ ಸರಕಾರಗಳೇ ಬಸ್ ಕಳುಹಿಸಿ ತಂತಮ್ಮ ರಾಜ್ಯಗಳಿಗೆ ಕರೆಸಿಕೊಂಡಿತು. ಕೇವಲ ಉತ್ತರ ಪ್ರದೇಶವೊಂದೇ ಒಂದೇ ಬಾರಿಗೆ 175 ಬಸ್‍ಗಳನ್ನು ಕಳುಹಿಸಿಕೊಟ್ಟಿತು. ಆದರೆ, ಲಾಕ್‍ಡೌನ್‍ಗೆ 50 ದಿನಗಳು ತುಂಬಿರುವ ಈ ಹೊತ್ತಿನಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ತೀರ್ಮಾನಿಸುವಾಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲಕ್ಷದ ಹತ್ತಿರವಾಗಿದೆ. ಸಾವು 3 ಸಾವಿರಕ್ಕೆ ಸಮೀಪವಿದೆ. ಇವತ್ತು ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವುದು ಮಾರ್ಚ್ 24ರಂದು ಕಳುಹಿಸುವುದಕ್ಕಿಂತ 100 ಪಟ್ಟು ಹೆಚ್ಚು ಅಪಾಯಕಾರಿ. ಈಗ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಾರ್ಮಿಕರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದೂ ಕಷ್ಟ. ಅಲ್ಲದೇ, ಪ್ರಯಾಣದ ದುಡ್ಡನ್ನು ಅವರೇ ಪಾವತಿಸಬೇಕು. ಇದು ಕ್ರೌರ್ಯ. ಬಡವರಿಗೂ, ಸರಕಾರಕ್ಕೂ ಅಥವಾ ಅವರನ್ನು ದುಡಿಸಿ ಕೊಂಡವರಿಗೂ ಆಳು ಮತ್ತು ದಣಿ ಅನ್ನುವ ಸಂಬಂಧಕ್ಕಿಂತ ಹೊರತಾದ ಇನ್ನಾವ ಹಕ್ಕು-ಕರ್ತವ್ಯಗಳೂ ಇಲ್ಲ ಅನ್ನುವುದನ್ನು ಸಾರಿ ಸಾರಿ ಹೇಳಿದ ಸಂದರ್ಭ.

ಈದ್ ಇದಕ್ಕಿಂತ ಭಿನ್ನ. ಈದ್- ಹಬ್ಬ ಅಷ್ಟೇ ಅಲ್ಲ, ಅದು ನೀತಿ ಸಂಹಿತೆಯೊಂದನ್ನು ಶ್ರೀಮಂತರಿಗೂ ಬಡವರಿಗೂ ಮರು ನೆನಪಿಸುವ ಸಂದರ್ಭ. ಈದ್‍ನ ದಿನ ಮಸೀದಿ, ನಮಾಝï, ಪ್ರವಚನ, ಹೊಸಬಟ್ಟೆ ಯಾವುದೂ ಕಡ್ಡಾಯವಲ್ಲ. ಆದರೆ, ಒಂದು ದಿನಕ್ಕಾಗುವಷ್ಟು ಆಹಾರ ಧಾನ್ಯಗಳನ್ನು ತನ್ನ ಮನೆಯಲ್ಲಿ ಹೊಂದಿರುವ ವ್ಯಕ್ತಿ, ಅದಿಲ್ಲದ ಮನೆಗೆ ಆಹಾರ ವಸ್ತುಗಳನ್ನು ತಲುಪಿಸಬೇಕಾದುದು ಕಡ್ಡಾಯ. ಈ ಕಡ್ಡಾಯ ನಿಮಯವನ್ನು ಉಲ್ಲಂಘಿಸಿದರೆ, ಆತನ ಉಪವಾಸ ಪೂರ್ತಿಯಾಗುವುದಿಲ್ಲ. ಇದಕ್ಕಿಂತಲೂ ಬಹುಮುಖ್ಯವಾದುದು ಝಕಾತ್ ಎಂಬ ಪರಿಕಲ್ಪನೆ. ಉಳ್ಳವರು ತಮ್ಮ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಬಡವರ ಕಲ್ಯಾಣಕ್ಕಾಗಿ ವ್ಯಯಿಸಲೇಬೇಕು. ಹಾಗೆ ಮಾಡದಿದ್ದರೆ ಆತ ಅಪರಾಧಿಯಾಗುತ್ತಾನೆ. ಅದಕ್ಕಾಗಿ ದೇವನು ಆತನಿಗೆ ಶಿಕ್ಷೆ ಕೊಡುತ್ತಾನೆ. ಈ ಶ್ರೀಮಂತನ ಹಣವನ್ನು ಪಡೆದ ಬಡವ್ಯಕ್ತಿ ಆ ಮೊತ್ತವನ್ನು ಸ್ವಉದ್ಯೋಗಕ್ಕೆ ಬಳಸಿಕೊಂಡು ಆತನೂ ಸಬಲನಾದರೆ, ಮುಂದೆ ಆತ ತನ್ನ ಸಂಪತ್ತಿನಿಂದ ಕಡ್ಡಾಯವಾಗಿ ದಾನ ನೀಡಲೇಬೇಕಾಗುತ್ತದೆ. ಇದೊಂದು ಬಗೆಯ ಸರಪಳಿ ಸಿದ್ಧಾಂತ. ಈ ಸರಪಳಿಯು ಶ್ರೀಮಂತ ಮತ್ತು ಬಡವ ಎಲ್ಲರನ್ನೂ ಜೊತೆಗೇ ಕೊಂಡೊಯ್ಯುತ್ತದೆ ಮತ್ತು ಜೋಡಿಸಿಡುತ್ತದೆ. ಬಡವನ ಕಷ್ಟಕ್ಕೆ ನೆರವಾಗುವುದು ತನ್ನ ಮೇಲಿನ ಧಾರ್ಮಿಕ ಹೊಣೆಗಾರಿಕೆ ಎಂದು ಓರ್ವ ಶ್ರೀಮಂತ ಅಂದುಕೊಳ್ಳುವುದಕ್ಕೂ ಆ ಹೊಣೆಗಾರಿಕೆಯ ಪ್ರಜ್ಞೆಯಿಲ್ಲದೇ ಬದುಕುವುದಕ್ಕೂ ಆಕಾಶ-ಭೂಮಿಯ ಅಂತರ ಇದೆ. ಉಪವಾಸದ ತಿಂಗಳಲ್ಲಿ ಝಕಾತ್ ಎಂಬ ಕಡ್ಡಾಯ ದಾನ ಜಾಗತಿಕವಾಗಿಯೇ ಅತ್ಯಧಿಕ ಸಂಖ್ಯೆಯಲ್ಲಿ ಸಂಗ್ರಹವಾಗುತ್ತಿರುವುದಕ್ಕೆ ಶ್ರೀಮಂತರಲ್ಲಿರುವ ಈ ಕಡ್ಡಾಯ ಪ್ರಜ್ಞೆಯೇ ಕಾರಣ.

ಕೊರೋನಾ ಕಾಲದಲ್ಲಿ ಈದ್ ಒಂದು ಸವಾಲು. ತಂತಮ್ಮ ಮನೆಯಲ್ಲಿ ಈದ್ ಆಚರಿಸಬೇಕಾದ ಅಸಂಖ್ಯ ಮಂದಿ ಇವತ್ತು ಬೀದಿಯಲ್ಲಿದ್ದಾರೆ. ಮನೆಯಲ್ಲಿದ್ದವರೂ ಉದ್ಯೋಗವಿಲ್ಲದೇ, ವ್ಯಾಪಾರವಿಲ್ಲದೇ ಸಂಕಟದಲ್ಲಿದ್ದಾರೆ. ಇಂಥದ್ದೊಂದು ಸ್ಥಿತಿಯನ್ನು ಈಗ ಜೀವಂತವಿರುವ ಯಾರೂ ತಮ್ಮ ಜೀವಮಾನದಲ್ಲಿ ನೋಡಿರುವ ಸಾಧ್ಯತೆ ಇಲ್ಲ. ಇದು ಹೊಸಬಟ್ಟೆ ಧರಿಸಿ ಗಾಳಿಪಟ ಹಾರಿಸುವ ಅಥವಾ ನೆಂಟರಿಷ್ಟರ ಮನೆಗೆ ಭೇಟಿ ಕೊಡುವ ಸಂದರ್ಭ ಅಲ್ಲ. ಮನೆಯಲ್ಲೇ  ಇದ್ದು ಈದ್‍ನ ಖುಷಿಯನ್ನು ಹಂಚಿಕೊಳ್ಳಬೇಕು. ಅದೇವೇಳೆ, ಬಡವರ ರಕ್ತ ಹೀರಿ ಅಸಹಾಯಕವಾಗಿಸಿ ರಸ್ತೆಗೆ ಬಿಡುವ ಬಂಡವಾಳಶಾಹಿ ಮನಸ್ಥಿತಿ ನಮ್ಮದಾಗದಂತೆ ಗರಿಷ್ಠ ಜಾಗರೂಕತೆ ಪಾಲಿಸಬೇಕು. ಹೊಸಬಟ್ಟೆ ಧರಿಸದಿದ್ದರೂ ಮಸೀದಿಗೆ ಹೋಗದಿದ್ದರೂ ಪರ್ಫ್ಯೂಮ್ ಪೂಸದಿದ್ದರೂ ಚಿಂತಿಲ್ಲ. ಈದ್‍ನ ದಿನ ಬಡವರ ಮನೆಯಲ್ಲಿ ಸೂತಕ ಮೌನ ಆವರಿಸದಂತೆ ನೋಡಿಕೊಳ್ಳಬೇಕು. ಅದು ಪ್ರತಿ ಉಪವಾಸಿಗನ ಕರ್ತವ್ಯ.

ಕೊರೋನಾ ಒಂದು ಕಾಯಿಲೆ ಅಷ್ಟೇ. ಅದನ್ನು ಮಣಿಸಬಹುದು. ಆದರೆ ಮನುಷ್ಯನೊಳಗಿರುವ ಅಮಾನವೀಯತೆ, ದ್ವೇಷ, ಸ್ಪಂದನಾ ರಹಿತ ಮನೋಭಾವವು ಮಣಿಸಲಾಗದ ಕಾಯಿಲೆಯಾಗಿ ಜಗತ್ತಿನಲ್ಲಿ ಉಳಿದುಕೊಂಡಿದೆ. ಕೋಟ್ಯಾಂತರ ಮಂದಿಯನ್ನು ಇದು ಬಲಿ ಪಡೆದಿದೆ. ವಲಸೆ ಕಾರ್ಮಿಕರ ಸ್ಥಿತಿ ಅದರದ್ದೇ  ಒಂದು ಭಾಗ. ಈದ್ ಈ ಮನಸ್ಥಿತಿಯನ್ನು ಪ್ರಶ್ನಿಸುವ ಹಬ್ಬವಾಗಲಿ. ಮನುಷ್ಯರನ್ನು ಪರಸ್ಪರ ಜೋಡಿಸುವ ಮತ್ತು ಸ್ಪಂದಿಸುವ ಸಂಕೇತವಾಗಲಿ. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ(ಸ) ನುಡಿಗೆ ಬದ್ಧವಾಗಿ ಬದುಕುವ ಪ್ರತಿಜ್ಞಾ ದಿನವಾಗಲಿ.

Thursday, 21 May 2020

ನಾವು ಮಣಿಸಬೇಕಾಗಿರುವ ನಮ್ಮೊಳಗಿನ ವೈರಸ್ಸು




ಮನುಷ್ಯನಿಗೆ ಸಂಬಂಧಿಸಿ ಅತಿ ಹೆಚ್ಚು ಅಮಾನವೀಯವಾಗಿ ನಡೆದುಕೊಂಡಿರುವುದು ಯಾರು ಅನ್ನುವ ಬಹುಮುಖ್ಯವಾದ ಪ್ರಶ್ನೆಗೆ ಕೊರೋನಾ ಮತ್ತೊಮ್ಮೆ ಜೀವವನ್ನು ಕೊಟ್ಟಿದೆ. ಮನುಷ್ಯರ ಪ್ರಾಣಗಳಿಗೆ ಎರಡು ವಿಧದಲ್ಲಿ ಅಪಾಯಗಳು ಎದುರಾಗುತ್ತವೆ.

 ಒಂದು- ನಿಸರ್ಗದತ್ತವಾದುದು.

ಎರಡು- ಮಾನವ ಜನ್ಯವಾದುದು.

ಸಾಂಕ್ರಾಮಿಕ ರೋಗಗಳು, ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿಗಳು ಮಾನವ ನಿಯಂತ್ರಣವನ್ನು ಮೀರಿದ್ದಾಗಿದೆ. ಇವುಗಳಲ್ಲಿ ಮನುಷ್ಯನ ನೇರಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಮನುಷ್ಯ ನೇರವಾಗಿ ಸುನಾಮಿಯನ್ನು ಉತ್ಪಾದಿಸುವುದಿಲ್ಲ. ಭೂಕಂಪನವನ್ನು ಹುಟ್ಟುಹಾಕಿ ಸಂಭ್ರಮಿಸುವುದಿಲ್ಲ. ಕೊರೋನಾವಾಗಲಿ, ಪ್ಲೇಗ್, ಸ್ಪಾನಿಶ್ ಫ್ಲೂ, ನಿಫಾ ಯಾವುದೇ ಇರಲಿ, ಮನುಷ್ಯ ಉದ್ದೇಶಪೂರ್ವಕವಾಗಿ ಅದನ್ನು ಉತ್ಪಾದಿಸಿ ಹಂಚುವುದಿಲ್ಲ. ಹಾಗಂತ,

ಇವುಗಳಲ್ಲಿ ಮನುಷ್ಯನ ಪರೋಕ್ಷ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸುವ ಹಾಗೆಯೇ ಇಲ್ಲ. ನಿಸರ್ಗದ ಮೇಲೆ ಮನುಷ್ಯ ನಡೆಸುವ ಅತ್ಯಾಚಾರವಾಗಲಿ, ಪ್ರವಾಹ, ಭೂಕಂಪ, ಸುನಾಮಿ ಇತ್ಯಾದಿಗಳಿಗೆ ಕಾರಣ ಎಂದು ತಜ್ಞರು ಹೇಳುವುದಿದೆ. ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಗಣಿಗಾರಿಕೆಗಾಗಿ ಭೂಮಿಯನ್ನು ಕೊರೆಯಲಾಗುತ್ತದೆ. ಸ್ಫೋಟಕಗಳನ್ನು ಸಿಡಿಸಲಾಗುತ್ತದೆ. ನಗರ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗುತ್ತದೆ. ಗುಡ್ಡಗಳನ್ನು ಕಡಿದು ಬೇಕಾಬಿಟ್ಟಿ ರೆಸಾರ್ಟ್‍ಗಳನ್ನು ನಿರ್ಮಿಸಿರುವುದಕ್ಕೂ ಕೊಡಗಿನ ಪ್ರವಾಹಕ್ಕೂ ಸಂಬಂಧ ಇದೆ ಎಂಬ ವಾದ ಇದೆ. ಜಾಗತಿಕ ತಾಪಮಾನವನ್ನು ಏರಿಸಿರುವುದರಲ್ಲಿ, ಪರಿಸರವನ್ನು ಕೆಡಿಸಿರುವುದರಲ್ಲಿ ಮತ್ತು ಅಣುಬಾಂಬ್‍ಗಳಂತಹ ಮಾರಕ ಸಮೂಹ ನಾಶಕ ಅಸ್ತ್ರಗಳ ಪರೀಕ್ಷೆಯಲ್ಲಿ- ಹೀಗೆ ಮಾನವ ಅನೂಚಾನೂಚವಾಗಿ ಪ್ರಕೃತಿಯ ಮೇಲೆ ಹಸ್ತಕ್ಷೇಪ ನಡೆಸುತ್ತಾ ಬಂದಿರುವುದರ ಒಟ್ಟು ಫಲಿತಾಂಶವೇ ನಿಸರ್ಗದತ್ತ ಅವಗಢಗಳು ಎಂದು ಹೇಳುವುದಿದೆ. ಇವು ಏನೇ ಇದ್ದರೂ,

ಈ ಎಲ್ಲ ಕೃತ್ಯಗಳಲ್ಲಿ ಬಹುತೇಕ ಎಲ್ಲ ಮನುಷ್ಯರ ಪಾತ್ರ ಇರುತ್ತದೆ. ಇದರಲ್ಲಿ ಕೆಲವರು ದೊಡ್ಡ ಪಾತ್ರವನ್ನು ನಿರ್ವಹಿಸಿದ್ದರೆ, ಬಹುಸಂಖ್ಯಾತರು ಇದಕ್ಕೆ ಸಣ್ಣ ಕೊಡುಗೆಯನ್ನಾದರೂ ನೀಡಿರುತ್ತಾರೆ. ಅಧಿಕಾರಕ್ಕೆ ಬಂದರೆ ಹೈಡ್ರೋಜನ್ ಬಾಂಬ್ ತಯಾರಿಸುವೆ ಎಂದು ಘೋಷಿಸುವ ಪಕ್ಷಕ್ಕೆ ಮತ ಹಾಕುವುದೂ ಈ ಕೊಡುಗೆಗಳಲ್ಲಿ ಒಂದು. ಗಣಿಗಾರಿಕೆಗೆ ದಿಕ್ಕು ದೆಸೆಯಿಲ್ಲದೇ ಅನುಮತಿ ಕೊಡುವ, ಅಭಿವೃದ್ಧಿ ಹೆಸರಲ್ಲಿ ಕಾಡುಗಳನ್ನೇ ಕಡಿಯುವ, ಪ್ರಕೃತಿದತ್ತವಾದ ನೆರೆ ಇತ್ಯಾದಿ ಜಲಮೂಲಗಳ ಮೇಲೆ ಬುಲ್ಡೋಜರ್ ಹರಿಸಿ ಕಾಂಕ್ರೀಟು ಕಟ್ಟಡ ಕಟ್ಟುವ ಸರಕಾರವನ್ನು ಬೆಂಬಲಿಸುವುದು ಕೂಡ ಈ ಪಾತ್ರದಲ್ಲಿ ಸೇರುತ್ತದೆ. ಆದ್ದರಿಂದಲೋ ಏನೋ ನಿಸರ್ಗದತ್ತವಾದ ಅನಾಹುತಗಳು ನಿರ್ದಿಷ್ಟ ಧರ್ಮ, ಜಾತಿ, ವ್ಯಕ್ತಿ, ಹುದ್ದೆಗಳಲ್ಲಿರುವವರನ್ನು ಹುಡುಕಿಕೊಂಡು ಬರುವುದಿಲ್ಲ. ಕೊರೋನಾ ದಾಳಿಗೆ ಸಿಲುಕಿದವರಲ್ಲಿ ಸಂಸತ್ ಸದಸ್ಯರೂ ಇದ್ದಾರೆ, ಮಂತ್ರಿಗಳೂ ಇದ್ದಾರೆ, ವೈದ್ಯರೂ ಇದ್ದಾರೆ, ದೇಶದ ಉಪಾಧ್ಯಕ್ಷರೂ ಇದ್ದಾರೆ, ಸೆಲೆಬ್ರಿಟಿಗಳು, ಕ್ರೀಡಾಳುಗಳು ಎಲ್ಲರೂ ಇದ್ದಾರೆ. ಸುನಾಮಿಯ ರಭಸಕ್ಕೆ ಸಿಲುಕಿದವರು ಧರ್ಮದ ಆಧಾರದಲ್ಲಿ ವಿಭಜಿಸಲಾಗದಷ್ಟು ಏಕರೂಪದಲ್ಲಿರುತ್ತಾರೆ. ಸಾಂಕ್ರಾಮಿಕ ರೋಗಗಳು, ಭೂಕಂಪ ಮುಂತಾದುವುಗಳು ಮನುಷ್ಯರನ್ನು ಸಮಾನವಾಗಿ ನೋಡುತ್ತವೆ. ಧರ್ಮ ಜಾತಿಗಳ ಹಂಗಿಲ್ಲದೇ ಆಕ್ರಮಿಸುತ್ತವೆ. ಮಸೀದಿ, ಮಂದಿರ, ಚರ್ಚ್, ಗುರುದ್ವಾರ ಎಲ್ಲವೂ ಏಕಪ್ರಕಾರವಾಗಿ ಅದಕ್ಕೆ ಪ್ರತಿಕ್ರಿಯಿಸುತ್ತವೆ. ಆದರೆ,

ಮಾನವ ಜನ್ಯವಾದ ಅಪಾಯಗಳು ಹೀಗಲ್ಲ. ಕೊರೋನಾ ಈ ದೇಶಕ್ಕೆ ಪ್ರವೇಶಿಸುವುದಕ್ಕಿಂತ ಮೊದಲು ಈ ದೇಶದ ರಾಜಧಾನಿಯಲ್ಲಿ ಮಾನವ ಜನ್ಯ ಹಿಂಸಾಚಾರವೊಂದು ನಡೆಯಿತು. ಸುಮಾರು 50ರಷ್ಟು ಪ್ರಾಣಗಳು ಅದಕ್ಕೆ ಎರವಾದುವು. ಇವುಗಳಲ್ಲಿ ಹಿಂದೂಗಳ ಪ್ರಾಣ ಎಷ್ಟು ಮತ್ತು ಮುಸ್ಲಿಮರ ಪ್ರಾಣ ಎಷ್ಟು ಎಂಬುದನ್ನು ಆ ಬಳಿಕ ಮಾಧ್ಯಮಗಳು ಹೆಸರು ಸಮೇತ ಪ್ರಕಟಿಸಿದುವು. ಮಾನವಜನ್ಯ ಅಪಾಯಗಳು ಎಷ್ಟು ಅಮಾನವೀಯ ಅನ್ನುವುದಕ್ಕೆ ಈ ಹೆಸರುಗಳ ವರ್ಗೀಕರಣವೇ ಅತ್ಯುತ್ತಮ ಪುರಾವೆ. ಇಲ್ಲಿ ಎರವಾದ ಪ್ರಾಣಗಳೆಲ್ಲ ಒಂದೋ ಮುಸ್ಲಿಮ್ ಆದುದಕ್ಕಾಗಿ ಇಲ್ಲವೇ ಹಿಂದೂ ಆದುದಕ್ಕಾಗಿ ಆಗಿವೆಯೇ ಹೊರತು ಇನ್ನಾವ ಅಪರಾಧಕ್ಕಾಗಿಯೂ ಅಲ್ಲ. ಇದೇವೇಳೆ,

ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ನರಳುತ್ತಿರುವವರು, ಅತ್ಯಾಚಾರಕ್ಕೋ ದೈಹಿಕ ಹಿಂಸೆಗೋ ಒಳಗಾದವರು, ಅಪ್ಪನನ್ನು ಕಳಕೊಂಡ ಮಕ್ಕಳು, ಮಕ್ಕಳನ್ನು ಕಳಕೊಂಡ ವೃದ್ಧ ಹೆತ್ತವರು, ವಿಧವೆಯಾದ ಪತ್ನಿ, ವಿದುರನಾದ ಪತಿ, ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರವನ್ನೂ, ನೆರಳಾಗಿದ್ದ ಮನೆಯನ್ನೂ- ಹೀಗೆ ಎಲ್ಲವನ್ನೂ ಕಳಕೊಂಡು ಹತಾಶೆಯಲ್ಲಿರುವವರು ಇವೆಲ್ಲಕ್ಕೂ ಇನ್ನೊಂದು ಧರ್ಮದ ಮನುಷ್ಯರನ್ನು ಹೊಣೆ ಮಾಡುತ್ತಾರೆ. ಸಂಕಟದಲ್ಲಿರುವವರೂ ಮನುಷ್ಯರೇ, ಅದಕ್ಕೆ ಕಾರಣರಾದವರೂ ಮನುಷ್ಯರೇ. ಇವೆಲ್ಲಕ್ಕೂ ಕಾರಣ ಏನೆಂದರೆ, ಧರ್ಮ, ಜಾತಿ, ರಾಜಕೀಯ ಇತ್ಯಾದಿಗಳು. ಹಾಗಂತ,

ನಿಸರ್ಗದತ್ತ ಅಪಾಯಗಳ ಸಂದರ್ಭದಲ್ಲೂ ಮನುಷ್ಯ ಇಂಥದ್ದೇ ಸಂಕಟಕ್ಕೆ ಒಳಗಾಗುತ್ತಾನೆ. ತನ್ನವರನ್ನು ಕಳಕೊಳ್ಳುತ್ತಾನೆ. ಮನೆ-ಮಠ, ವ್ಯಾಪಾರ ಕೇಂದ್ರಗಳೆಲ್ಲವೂ ಆತನ ಕಣ್ಣೆದುರೇ ಕಳೆದು ಹೋಗುವುದಿದೆ. ಆದರೆ, ಆತ ಅದಕ್ಕಾಗಿ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವುದಿಲ್ಲ. ಆ ಸಂದರ್ಭದಲ್ಲಿ ಧರ್ಮಜಾತಿಗಳು ಅಡ್ಡ ಗೋಡೆಗಳಾಗಿ ನಿಲ್ಲುವುದೂ ಇಲ್ಲ. ಅಪಾಯದಲ್ಲಿರುವವರ ನೆರವಿಗೆ ಮಸೀದಿ, ಮಂದಿರಗಳ ಹಂಗಿಲ್ಲದೇ ಮತ್ತು ಧರ್ಮ-ಜಾತಿಗಳ ಸೋಂಕು ತಗಲದೇ ಸರ್ವರೂ ಧಾವಿಸುತ್ತಾರೆ. ಮಸೀದಿಯಲ್ಲೂ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ನೆರವು ಸಂಗ್ರಹವಾಗುತ್ತದೆ. ಮಂದಿರ, ಚರ್ಚ್‍ಗಳಲ್ಲೂ ಇದೇ ವಾತಾವರಣ ಇರುತ್ತದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎಂಬ ಬೇಧವಿಲ್ಲದೇ ಎಲ್ಲರೂ ಪೀಡಿತರ ನೆರವಿಗೆ ಧಾವಿಸುತ್ತಾರೆ. ನಿಸರ್ಗದ ವೈಶಿಷ್ಟ್ಯ ಇದು. ಅದು ಮನುಷ್ಯರನ್ನು ಒಂದುಗೂಡಿಸುತ್ತದೆ. ಅದರ ಜಾತ್ಯತೀತ ಗುಣವೇ ಇದಕ್ಕೆ ಕಾರಣ. ಕೊರೋನಾ ಇವತ್ತು ಭಾರತೀಯರನ್ನು ಒಂದುಗೂಡಿಸಿದೆ. ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಎಂಬ ಭಾವವಿಲ್ಲದೇ ಎಲ್ಲರೂ ಕೊರೋನಾ ವಿರುದ್ಧ ಹೋರಾಟದಲ್ಲಿ ಜೊತೆಜೊತೆಯಾಗಿ ಸಾಗುತ್ತಿದ್ದಾರೆ. ಕಾಯಿಲೆ ಪೀಡಿತರು ಹಿಂದೂವೋ ಮುಸ್ಲಿಮೋ ಎಂದು ಯಾರೂ ವಿಭಜಿಸಿ ನೋಡುವುದಿಲ್ಲ. ಮನುಷ್ಯ ಎಂಬ ಏಕೈಕ ಗುರುತನ್ನು ಕೊರೋನಾ ಎಲ್ಲ ಮಾನವರಿಗೂ ನೀಡಿಬಿಟ್ಟಿದೆ. ಆದರೆ,

ಮಾನವ ಜನ್ಯ ಅಪಾಯಗಳಿಗೆ ಈ ಗುಣ ಇಲ್ಲ. ಅದು ಮೊಟ್ಟಮೊದಲಾಗಿ ಮನುಷ್ಯರನ್ನು ವಿಭಜಿಸುತ್ತದೆ. ಅದು ಹುಟ್ಟು ಪಡೆಯುವುದೇ ಧರ್ಮ ಮತ್ತು ರಾಜಕೀಯ ವಿಚಾರಧಾರೆಯ ವಿಭಜನೆಯಲ್ಲಿ. ಇಲ್ಲಿ ಪೀಡಿತರಾದವರಿಗೆ ನೆರವು ಸಂಗ್ರಹಿಸುವ ವಿಧಾನದಲ್ಲೂ ನಾವು ಮತ್ತು ಅವರು ಎಂಬ ವಿಭಜನೆಯಿರುತ್ತದೆ. ಸಂಕಷ್ಟದಲ್ಲಿರುವವರ ಸಂಕಟಕ್ಕೂ ಧರ್ಮವನ್ನು ಅಂಟಿಸಿ ಬಿಟ್ಟು ನಮ್ಮವರು ಮತ್ತು ಅನ್ಯರು ಎಂದು ಪ್ರತ್ಯೇಕಿಸುವುದು ಮಾನವ ಜನ್ಯ ಅಪಾಯಗಳ ಅತಿ ಭೀಕರ ಮುಖಗಳಲ್ಲಿ ಒಂದು. ನಿಸರ್ಗದತ್ತ ಅಪಾಯಗಳಿಗೆ ಈ ದುರ್ಗುಣ ಇಲ್ಲ. ಆದ್ದರಿಂದಲೇ, ಮಾನವ ಜನ್ಯ ಅಪಾಯಗಳಲ್ಲಿ ಅಮಾನವೀಯತೆ ಅತಿಹೆಚ್ಚು. ಮಾತ್ರವಲ್ಲ, ನಿಸರ್ಗದತ್ತ ಅಪಾಯಗಳಿಗೆ ಹೋಲಿಸಿದರೇ ಮಾನವಜನ್ಯ ಅಪಾಯಗಳೇ ಮನುಷ್ಯರ ಪ್ರಾಣಕ್ಕೆ ಅತಿಹೆಚ್ಚು ಹಾನಿ ಮಾಡಿರುವುದು. ಇತಿಹಾಸದ ಉದ್ದಕ್ಕೂ ಇದಕ್ಕೆ ರಾಶಿಗಟ್ಟಲೆ ಸಾಕ್ಷ್ಯಗಳು ಲಭಿಸುತ್ತವೆ. ರಾಜರು, ಚಕ್ರವರ್ತಿಗಳು, ಸರ್ವಾಧಿಕಾರಿಗಳು ಈ ಮಾನವ ಪ್ರಾಣಗಳ ಹರಣದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಹಿಟ್ಲರ್, ಮುಸೋಲೋನಿಯಂತವರು ಮನುಷ್ಯರ ಧರ್ಮ, ಭಾಷೆ, ವಿಚಾರಧಾರೆಯನ್ನು ನೋಡಿ ಸಂಹಾರ ನಡೆಸಿದ್ದಾರೆ. ಭಾರತ-ಪಾಕ್ ವಿಭಜನೆಯಾದಾಗ ಹಿಂದೂ-ಮುಸ್ಲಿಮ್ ರಕ್ತಪಾತ ನಡೆಯಿತು. ಆ ಬಳಿಕವೂ ಇದು ನಿಲ್ಲಲಿಲ್ಲ. ದೆಹಲಿ ಸಿಕ್ಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡಗಳ ಸಹಿತ ಧರ್ಮದ ಆಧಾರದಲ್ಲಿ ಮನುಷ್ಯರ ಪ್ರಾಣಗಳು ಆಹುತಿಯಾಗುತ್ತಲೇ ಹೋದುವು. ಆಫ್ರಿಕಾದ ಹುಟು ಮತ್ತು ತುತ್ಸಿ ಜನಾಂಗಗಳು ಪರಸ್ಪರ ಕಾದಾಡಿಕೊಂಡು ಹರಿಸಿದ ರಕ್ತಕ್ಕೆ ಎಣೆಯಿಲ್ಲ.

ನಿಸರ್ಗ ಮತ್ತು ಮಾನವ ಇವೆರಡರಲ್ಲಿ ಮಾನವ ಕುಲಕ್ಕೆ ಅತ್ಯಂತ ಹೆಚ್ಚು ಹಾನಿ ಮಾಡಿರುವುದು ಯಾರು ಎಂದು ಪ್ರಶ್ನಿಸಿದರೆ, ಅದಕ್ಕೆ ಸರಿಯಾದ ಉತ್ತರ ಮಾನವ ಎಂಬುದಾಗಿದೆ. ಹೆಚ್ಚು ಅಮಾನವೀಯವಾದುದೂ ಮಾನವ ನಿರ್ಮಿತ ಅಪಾಯಗಳೇ. ಕೊರೋನಾದ ಈ ಸಂದರ್ಭದಲ್ಲಿ ನಾವೆಲ್ಲ ನಮ್ಮೊಳಗನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳಬೇಕಿದೆ. ಕೊರೋನಾವನ್ನು ನಾವು ಮಣಿಸಬಹುದು. ಆದರೆ, ನಮ್ಮೊಳಗಿನ ವೈರಸನ್ನು ನಾವು ಎಂದು ಮಣಿಸಬಲ್ಲೆವು? ಕೊರೋನಾ ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಳಪಡಿಸಲಿ.