Saturday, 17 July 2021

ಜೈಲಿನ ಕೋಣೆಯಲ್ಲೆಲ್ಲೋ ರೋಧಿಸುತ್ತಿರುವ ಸ್ಟ್ರಾ




 ‘ಪ್ರಜಾಸತ್ತಾತ್ಮಕ ಹೋರಾಟ ಮತ್ತು ಭಯೋತ್ಪಾದನೆ ಒಂದೇ ಅಲ್ಲ’ ಎಂದು ದೇಶದ ಪರಮೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟ ಮೂರು ವಾರಗಳ ಬಳಿಕ ಆ ಅಭಿಪ್ರಾಯವನ್ನೇ ವ್ಯಂಗ್ಯಗೊಳಿಸು ವಂತೆ ಸ್ಟ್ಯಾನ್ ಸ್ವಾಮಿ ಹೊರಟು ಹೋಗಿದ್ದಾರೆ. ದೇವಾಂಗನಾ ಕಲಿಟಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾರಿಗೆ ಜಾಮೀನು ನೀಡಿದುದನ್ನು ಸಮರ್ಥಿಸುತ್ತಾ ಕೋರ್ಟು ಈ ಅಭಿಪ್ರಾಯ ವನ್ನು ವ್ಯಕ್ತಪಡಿಸುವಾಗ, ಇವರೆಲ್ಲ ಈ ಮಾತನ್ನು ಆಲಿಸುವಷ್ಟು ಮತ್ತು ಅದನ್ನು ವಿಶ್ಲೇಷಿಸುವಷ್ಟು ಆರೋಗ್ಯವಂತರಾಗಿದ್ದರು. ಆದ್ದರಿಂದಲೇ, 

ಜಾಮೀನಿನಲ್ಲಿ ಬಿಡುಗಡೆಗೊಂಡು ಜೈಲಿನಿಂದ ಹೊರಬಂದ ತಕ್ಷಣ ಅವರು ಹೋರಾಟದ ಕೆಚ್ಚನ್ನು ಮರು ಪ್ರದರ್ಶಿಸಿದರು. ಯುಎಪಿಎ ಕಾಯ್ದೆಯ ವಿರುದ್ಧ ಮತ್ತು ಅದರ ಆಧಾರದಲ್ಲಿ ಬಂಧಿಸಲಾಗಿರುವ ತಮ್ಮ ಸಂಗಾತಿಗಳ ಬಿಡುಗಡೆಗಾಗಿ ಆಗ್ರಹಿಸಿ ಪ್ರತಿಭಟಿಸಿದರು. ಆದರೆ ಸ್ಟ್ಯಾನ್ ಸ್ವಾಮಿ ಅಜ್ಜ. ಅವರಿಗೆ ಆ ಸಾಮರ್ಥ್ಯ ಇರಲಿಲ್ಲ. ಅವರನ್ನು ಬಂಧಿಸಿದರೂ ಬಿಡುಗಡೆಗೊಳಿಸಿದರೂ ಏನೂ ವ್ಯತ್ಯಾಸವಾಗದಷ್ಟು ಅವರು ದಣಿದಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗುವಾಗ ಅವರಿಗೆ 83 ವರ್ಷ ಕಳೆದಿತ್ತು. ಪಾರ್ಕಿನ್ಸನ್ ಕಾಯಿಲೆಯಿತ್ತು. ಬದುಕಿನ ಸಂಧ್ಯಾ ಕಾಲದಲ್ಲಿದ್ದ ಅವರನ್ನು ನಮ್ಮ ಪ್ರಭುತ್ವ ಎಷ್ಟು ಕ್ರೂರವಾಗಿ ನಡೆಸಿಕೊಂಡಿತು ಅಂದರೆ, ಪಾನೀಯ ಸೇವನೆಗಾಗಿ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೂ ಅನುಮತಿ ನೀಡಲಿಲ್ಲ. ನಡುಗುತ್ತಿದ್ದ ಕೈಯಿಂದ ಗ್ಲಾಸ್ ಹಿಡಿಯಲು ಸಾಧ್ಯವಾಗದ ಸ್ಟ್ಯಾನ್ ಸ್ವಾಮಿ, ಸ್ಟ್ರಾ ಕೊಡಿಸಿ ಎಂದು ಕೋರ್ಟಿನ ಮುಂದೆ ಬೇಡಿಕೊಂಡರು. ಅವರಿಗೆ ಸ್ಟ್ರಾ  ಅಗತ್ಯ ಇದೆಯೋ ಇಲ್ಲವೋ ಎಂಬ ಬಗ್ಗೆ ಕೋರ್ಟಿಗೆ ಅಭಿಪ್ರಾಯ ತಿಳಿಸುವುದಕ್ಕೆ ರಾಷ್ಟ್ರೀಯ ತನಿಖಾ ದಳವು ಸುಮಾರು ಒಂದು ತಿಂಗಳ ಅವಧಿಯನ್ನು ತೆಗೆದುಕೊಂಡಿತು. ಅಂದಹಾಗೆ, 

ಓರ್ವ ವಯೋವೃದ್ಧನಿಗೆ ಒದಗಿಸಬೇಕಾದ ಸ್ಟ್ರಾಗೂ ಇಷ್ಟೊಂದು ತಡೆ ಒಡ್ಡುವ ಮನಸ್ಸು ಈ ತನಿಖಾ ದಳದಲ್ಲಿ ಇದೆಯೆಂದ ಮೇಲೆ, ಅವರು ಜೈಲು ಕೋಣೆಯಿಂದ ಜೀವಂತ ಹೊರಬರುವ ನಿರೀಕ್ಷೆಯನ್ನೇ ಅಪರಾಧವೆನ್ನಬೇಕಾಗುತ್ತದೆ. ಅಷ್ಟಕ್ಕೂ,

ಸ್ಟ್ರಾ ಅಂದರೆ ಬಂದೂಕು ಅಲ್ಲವಲ್ಲ. ಎಲ್ಲೊ  ನಗರದ ಚರ್ಚ್ ಒಳಗಡೆ ಆರಾಮವಾಗಿ ಇದ್ದಿರಬೇಕಾದ ಫಾದರ್ ಓರ್ವ ಅವೆಲ್ಲವನ್ನೂ ತೊರೆದು ಜಾರ್ಖಂಡ್ ಎಂಬ ಬುಡಕಟ್ಟುಗಳೇ ಅಧಿಕವಿರುವ ರಾಜ್ಯದಲ್ಲಿ ತಂಗಿದುದೇ ಒಂದು ವಿಸ್ಮಯ. ಬುಡಕಟ್ಟು-ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನೇ ಮನೆ ಮಾಡಿಕೊಂಡವರು. ಆದರೆ, ಆಧುನಿಕ ಅಭಿವೃದ್ಧಿ ಮಾದರಿಯಂತೂ ಈ ಕಾಡಿಗೇ ಕನ್ನ ಹಾಕುವ ಮನಸ್ಸಿನದ್ದು. ಅಭಿವೃದ್ಧಿಯ ಬುಲ್ಡೋಜರ್‌ಗೆ ಜನರು ಕಾಣಿಸುವುದಿಲ್ಲ. ಅವರ ಸಾಂಸ್ಕೃತಿಕ ವೈಶಿಷ್ಟ್ಯಗಳು ಅಮೂಲ್ಯ ಅನ್ನಿಸುವುದಿಲ್ಲ. ಕಾಡನ್ನು ಲೆಕ್ಕಿಸುವುದಿಲ್ಲ. ಕಾಡನ್ನು ಬಗೆದು ಸಂಪತ್ತನ್ನು ದೋಚುವುದು ಮತ್ತು ಕಾಡಲ್ಲಿರುವವರನ್ನು ಎತ್ತಂಗಡಿ ಮಾಡಿ ನಿರಾಶ್ರಿತರನ್ನಾಗಿಸುವುದರಲ್ಲಿ ನೈತಿಕ-ಅನೈತಿಕ ಪ್ರಶ್ನೆಯೂ ಕಾಡುವುದಿಲ್ಲ. ಸ್ಟ್ಯಾನ್ ಸ್ವಾಮಿ ಕಾಡು ನಿವಾಸಿಗಳ ಪರ ನಿಂತರು. ಅವರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಡಿದರು. ಆದಿವಾಸಿಗಳನ್ನು ಸಂಘಟಿಸಿ ಆಧುನಿಕ ಅಭಿವೃದ್ಧಿ ಮಾದರಿಗೆ ಆದಿವಾಸಿಗಳು ಬಲಿಯಾಗದಂತೆ ತಡೆಯಲು ಯತ್ನಿಸಿದರು. ಯಾವಾಗ ಆದಿವಾಸಿಗಳಿಗೆ ಭಾರತೀಯ ಕಾಯ್ದೆ-ಕಾನೂನುಗಳ ಅರಿವು ಮೂಡಿಸುವ ಪ್ರಯತ್ನ ನಡೆಯತೊಡಗಿತೋ ಮತ್ತು ಅವರನ್ನು ಸಂಘಟಿತಗೊಳಿಸಿ ಹಕ್ಕುಗಳ ಪರ ಹೋರಾಡುವ ಛಲವನ್ನು ತುಂಬಲಾಯಿತೋ ಪ್ರಭುತ್ವದ ಕಣ್ಣು ಸ್ಟ್ಯಾನ್ ಸ್ವಾಮಿ ಎಂಬ ಏಕವ್ಯಕ್ತಿಯ ಮೇಲೆ ಬಿದ್ದಿತು. ಇದರ ಆರಂಭವಾಗಿ ಅವರಿಗೂ ನಕ್ಸಲ್ ಉಗ್ರವಾದಿಗಳಿಗೂ ನಡುವೆ ನಂಟು ಕಲ್ಪಿಸಲಾಯಿತು. ನಕ್ಸಲರಿರುವುದೂ ಕಾಡಲ್ಲಿ. ಆದಿವಾಸಿಗಳದ್ದೂ ಕಾಡೇ ತವರು. ಸ್ಟ್ಯಾನ್ ಸ್ವಾಮಿ ಇರುವುದೂ ಅಲ್ಲೇ. ಆದ್ದರಿಂದ 

ಇಂಥದ್ದೊಂದು  ಆರೋಪ ಹೊರಿಸಿದರೆ ತಕ್ಷಣಕ್ಕೆ ‘ಆಗಿರಬಹುದು’ ಎಂಬ ಅನುಮಾನ ನಗರ ಪ್ರದೇಶದ ಮಂದಿಯಲ್ಲಿ ಉದ್ಭವವಾಗುವುದು ಸಹಜ. ಇದರ ಜೊತೆಗೇ ಅವರ ಮೇಲೆ ಇನ್ನೊಂದು ಗಂಭೀರ ಆರೋಪವನ್ನೂ ರಾಷ್ಟ್ರೀಯ ತನಿಖಾ ದಳವು ಹೊರಿಸಿತು. 2017 ಡಿಸೆಂಬರ್ 31ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದ ಸಭೆಯು ಹಿಂಸಾಚಾರದೊAದಿಗೆ ಕೊನೆಗೊಂಡಿತ್ತಲ್ಲದೇ, ಈ ಸಭೆಯನ್ನು ಆಯೋಜಿಸಿದ್ದ ಎಲ್ಗಾರ್ ಪರಿಷತ್‌ಗೂ ನಿಷೇಧಿತ ಮಾವೋವಾದಿಗಳಿಗೂ ಸಂಬAಧ ಇತ್ತು ಮತ್ತು ಅದರಲ್ಲಿ ಸ್ಟ್ಯಾನ್ ಸ್ವಾಮಿ ಕೂಡ ಒಬ್ಬರು ಎಂಬುದು ಈ ಆರೋಪವಾಗಿತ್ತು. ಎಲ್ಗಾರ್ ಪರಿಷತ್‌ನ ರೂವಾರಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಬಯಸಿದ್ದರು ಎಂಬ ಆರೋಪವನ್ನು ಹೊರಿಸಿ, ಆ ಆರೋಪಿಗಳ ಪೈಕಿ ಓರ್ವರಾಗಿ ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳವು ಬಿಂಬಿಸಿತು. ಮಾತ್ರವಲ್ಲ, ಯುಎಪಿಎ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತು. ವಿಷಾದ ಏನೆಂದರೆ,

2020 ಅಕ್ಟೋಬರ್‌ನಲ್ಲಿ ಬಂಧಿತರಾದ ಬಳಿಕ ಸಾಯುವ ವರೆಗೂ ಅವರಿಗೆ ಜಾಮೀನು ಸಿಕ್ಕಿಲ್ಲ. ಅವರು ಕೊನೆಯುಸಿರೆಳೆದದ್ದು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ. ಹಾಗಂತ,

ಅವರು ವಯೋವೃದ್ಧರೆಂಬುದು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಗೊತ್ತು. ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಗೊತ್ತು ಮತ್ತು ನ್ಯಾಯದಾನ ನೀಡಬೇಕಾದ ನ್ಯಾಯಾಧೀಶರಿಗೂ ಗೊತ್ತು. ಆದರೂ ಅವರು ಜಾಮೀನಿಗೆ ಅರ್ಹರಾಗಿಲ್ಲವೆಂದರೆ, ಅದಕ್ಕೆ ಕಾರಣ ಯುಎಪಿಎ ಕಾಯ್ದೆ. ಆರೋಪಿ ಯನ್ನು ಸತಾಯಿಸುವ ಮತ್ತು ಆರೋಪ ಹೊರಿಸುವ ಅಧಿಕಾರಿಗಳಿಗೆ ಅಪರಿಮಿತ ಅಧಿಕಾರವನ್ನು ನೀಡುವ ಈ ಕಾಯ್ದೆಯ ಕರಾಳ ಮುಖಕ್ಕೆ ಸ್ಟಾö್ಯನ್ ಸ್ವಾಮಿಯೇ ಅತ್ಯುತ್ತಮ ಉದಾಹರಣೆ. ಅವರು ಹೋರಾಡಿದ್ದು ಆದಿವಾಸಿಗಳ ಬದುಕುವ ಹಕ್ಕಿಗಾಗಿ. ಸಂವಿಧಾನ ಅವರಿಗೆ ನೀಡಿರುವ ಹಕ್ಕನ್ನು ಮರಳಿಸುವುದಕ್ಕಾಗಿ. ದುರಂತ ಏನೆಂದರೆ, ಸ್ಟ್ಯಾನ್ ಸ್ವಾಮಿಯ ಸರ್ವ ಹಕ್ಕುಗಳನ್ನೂ ಅದೇ ಸಂವಿಧಾನದ ಅಡಿಯಲ್ಲಿ ರೂಪಿಸಲಾದ ಕಾಯ್ದೆಯು ಕಸಿದುಕೊಂಡಿತು. ಜುಜುಬಿ ಸ್ಟ್ರಾ ಪಡೆಯುವ ಮೂಲಭೂತ ಹಕ್ಕನ್ನೂ ತಿಂಗಳ ಕಾಲ ಈ ಕಾಯ್ದೆ ಅವರಿಗೆ ನಿಷೇಧಿಸಿ ನಕ್ಕಿತು. ಏನೇ ಆಗಲಿ.

ಸ್ಟ್ಯಾನ್ ಸ್ವಾಮಿ ಈಗ ಹೊರಟು ಹೋಗಿದ್ದಾರೆ. ಅವರು ಬಿಟ್ಟು ಹೋಗಿರುವ ಒಂದೇ ಒಂದು ಕುರುಹು ಏನೆಂದರೆ ದುರ್ಬಲ ಸ್ಟ್ರಾ. ಅದೊಂದು ಸಂಕೇತ. ಪ್ರಭುತ್ವದ ಕೈಯಲ್ಲಿ ಕಾನೂನುಗಳು ಹೇಗೆ ದುರುಪಯೋಗಕ್ಕೀಡಾಗಬಹುದು ಎಂಬುದನ್ನು ಸೂಚಿಸುವ ಸಂಕೇತ. ಅಷ್ಟಕ್ಕೂ,

ಉತ್ತರ ಕೊರಿಯ, ಸಿರಿಯಾ, ಮ್ಯಾನ್ಮಾರ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ಈ ಯುಎಪಿಎ ಕಾಯ್ದೆ ರಚನೆಯಾಗಿರುತ್ತಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಆದರೆ, ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಅದೂ ಮಾನವ ಹಕ್ಕುಗಳಿಗೆ ವಿಪರೀತ ಆದ್ಯತೆ ನೀಡುವ ರಾಷ್ಟçದಲ್ಲಿ ಯುಎಪಿಎಯಂಥ ಕಾಯ್ದೆ ರಚನೆಯಾಗಿರುವುದೇ ಚೋದ್ಯದ ಸಂಗತಿ. ಈ ದೇಶದ ಸಂವಿಧಾನ ರಚನೆಯಾಗುವಾಗ ಮಾನವ ಹಕ್ಕುಗಳಿಗೆ ಭಾರೀ ಮಹತ್ವ ನೀಡಲಾಗಿತ್ತು. ದಲಿತರೆಂಬ ಶೋಷಿತ ಸಮುದಾಯವು ಹಕ್ಕುಗಳನ್ನೆಲ್ಲಾ ಕಳಕೊಂಡು ಬಲಿತರ ಗುಲಾಮರಂತೆ ಬದುಕುತ್ತಿದ್ದುದನ್ನು ತಡೆಯುವುದಕ್ಕಾಗಿಯೇ ಮಾನವ ಹಕ್ಕುಗಳಿಗೆ ಮಹತ್ವವನ್ನು ಕಲ್ಪಿಸುವ ಮತ್ತು ವ್ಯಕ್ತಿ ಸ್ವಾತಂತ್ರ‍್ಯವನ್ನು ಮೂಲಭೂತ ಹಕ್ಕುಗಳಾಗಿ ಒಪ್ಪಿಕೊಳ್ಳುವ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ಆ ಸಂವಿಧಾನಕ್ಕೆ 7 ದಶಕಗಳು ಸಂದ ಈ ಹೊತ್ತಿನಲ್ಲಿ ಒಂದು ಸ್ಟ್ರಾ ಜೈಲಿನ ಕೋಣೆಯಲ್ಲೆಲ್ಲೋ  ಅನಾಥವಾಗಿ ರೋಧಿಸುತ್ತಿದೆ. ಇದೇ ಸಂವಿಧಾನದ ಮೂಗಿನಡಿಯಲ್ಲೇ  ರಚಿತವಾದ ಯುಎಪಿಎ ಎಂಬ ಕಾಯ್ದೆ ರೋಧಿಸುತ್ತಿರುವ ಆ ಸ್ಟ್ರಾವನ್ನೂ ಮತ್ತು 7 ದಶಕಗಳ ಹಿಂದಿನ ಆ ಸಂವಿಧಾನವನ್ನೂ ನೋಡುತ್ತಾ ವಿಕಟ ನಗು ಬೀರುತ್ತಿದೆ. ಆ ಸ್ಟ್ರಾದಲ್ಲಿ ಶಕ್ತಿಯಿಲ್ಲ. ಜನಸಾಮಾನ್ಯರಲ್ಲೂ ಶಕ್ತಿಯಿಲ್ಲ. ಆದರೆ ಅವರು ಆರಿಸಿ ಕಳುಹಿಸಿದ ಪ್ರತಿನಿಧಿಗಳು ಶಕ್ತಿವಂತರಾಗುತ್ತಿದ್ದಾರೆ. ಅವರ ಅಣತಿಯಂತೆ ಕಾಯ್ದೆಗಳು ರಚನೆಗೊಳ್ಳತೊಡಗಿವೆ. ಪ್ರಜೆಗಳೇ ಪ್ರಭುಗಳಾಗಬೇಕೆಂಬ ಸಂವಿಧಾನದ ಬಯಕೆ ತಿರುವು ಮುರುವಾಗುತ್ತಿದೆ. ಆರಿಸಿದವ ಅಡಿಯಾಳಾಗಿ ಮತ್ತು ಗೆದ್ದವ ದೊರೆಯಾಗಿ ಮಾರ್ಪಡುತ್ತಿದ್ದಾರೆ.

 ಸ್ಟ್ಯಾನ್ ಸ್ವಾಮಿ ಬಿಟ್ಟು ಹೋಗಿರುವ ಸ್ಟ್ರಾ ಬಹುಶಃ ಅನ್ಯಾಯವನ್ನು ಪ್ರಶ್ನಿಸುವ ಈ ದೇಶದ ಪ್ರತಿಯೊಬ್ಬ ನಾಗರಿಕನ ಗುರುತು. ಆತ ಈ ಯುಎಪಿಎ ಎದುರು ಆ ಸ್ಟ್ರಾದಷ್ಟೇ ದುರ್ಬಲ.

--

Tuesday, 6 July 2021

ಉಡುಪಿ ಕಲ್ಮತ್ ಮಸೀದಿ: ಏನಾಗಬಾರದು?

 


ಸನ್ಮಾರ್ಗ ಸಂಪಾದಕೀಯ 


ಉಡುಪಿ ಜಿಲ್ಲೆಯಲ್ಲಿ ಮಸೀದಿಯೊಂದನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಲಾಗಿದೆ. ಹಾಗಂತ,

ಈ ಮಸೀದಿಯನ್ನು ಅಪರಾಧಿ ಎಂದು ಯಾರು ಹೇಳಬೇಕಿತ್ತೋ ಅವರು ಹೇಳಿಲ್ಲ. ಯಾವುದು ಹೇಳಬೇಕಿತ್ತೋ ಅದೂ ಹೇಳಿಲ್ಲ. ಆದರೆ ಸಂಕಲನ-ವ್ಯವಕಲನದಲ್ಲಿ ನಿಪುಣರಾದ ರಾಜಕಾರಣಿಗಳು ಈ ಮಸೀದಿಯ ಸುತ್ತ ಭಾವುಕ ಚಿತ್ರಕತೆಯೊಂದನ್ನು ಹೆಣೆದು ಸಾರ್ವಜನಿಕರಿಗೆ ಹಂಚುತ್ತಿದ್ದಾರೆ. ಸದ್ಯದ ಅಗತ್ಯ ಏನೆಂದರೆ, ಸಾರ್ವಜನಿಕರು ವಿವೇಚನೆಯಿಂದ ನಡೆದುಕೊಳ್ಳುವುದು. ರಾಜಕಾರಣ ಪ್ರಣೀತ ಕತೆ ಮತ್ತು ವಾಸ್ತವವನ್ನು ಯಾವ ಪೂರ್ವಾಗ್ರಹವೂ ಇಲ್ಲದೇ ಮುಖಾಮುಖಿಯಾಗಿಸಿ, ಸತ್ಯವನ್ನು ಒರೆಗೆ ಹಚ್ಚುವುದು. ಹಾಗಿದ್ದೂ, ಸತ್ಯ ಅಸ್ಪಷ್ಟ ಎಂದು ಅನಿಸಿದರೆ, ಸ್ಪಷ್ಟವಾಗುವ ವರೆಗೆ ತಾಳ್ಮೆ ವಹಿಸುವುದು ಮತ್ತು ಆ ವರೆಗೆ ಯಾವ ರಾಜಕಾರಣಿಯೂ ಈ ಮಸೀದಿ ವಿಷಯದಲ್ಲಿ ತಲೆ ಹಾಕದಂತೆ ಧರ್ಮ-ರಾಜಕೀಯ ಬೇಧ ಮರೆತು ಗಟ್ಟಿ ಧ್ವನಿಯಲ್ಲಿ ಹೇಳುವುದು. ಇನ್ನೊಬ್ಬರ ಹಕ್ಕನ್ನು ಕಬಳಿಸಬಾರದು ಎಂಬ ಸಾರ್ವಕಾಲಿಕ ಮೌಲ್ಯಕ್ಕೆ ಬದ್ಧವಾಗುವೆವು ಎಂದು ಪ್ರತಿಜ್ಞೆ ಮಾಡುವುದು.

ಉಡುಪಿ ತಾಲೂಕಿನ ಕೊಡವೂರು ಗ್ರಾಮದ 67 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ ಕಲ್ಮತ್ ಜುಮಾ ಮಸೀದಿಯಿದೆ. ಇದಕ್ಕೆ 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಇದರ ಕಾರ್ಯ ನಿರ್ವಹಣೆಗಾಗಿ ಸ್ವಾತಂತ್ರ‍್ಯ ಪೂರ್ವದಿಂದಲೂ ಸರ್ಕಾರದಿಂದ ತಸ್ದೀಕ್ ಬರುತ್ತಿದೆ ಎಂಬುದಕ್ಕೆ ದಾಖಲೆಗಳಿವೆ. ಅಲ್ಲದೇ, 1993ರಲ್ಲೇ  ಈ ಮಸೀದಿ ಮತ್ತು ಅದರ ಆಸ್ತಿಯು ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾಗಿದೆ. ಅಲ್ಲದೇ, 2020ರಲ್ಲಿ ಗಝಟೆಡ್ ನೋಟಿಫಿಕೇಶನ್ ಕೂಡ ಆಗಿದೆ. ಹಾಗಂತ,

ಈ ಕಲ್ಮತ್ ಜುಮಾ ಮಸೀದಿಯ ಬಗ್ಗೆ ಯಾವ ತಗಾದೆಯೂ ಇರಲಿಲ್ಲ ಎಂದಲ್ಲ. 2008ರಲ್ಲಿ ಈ ಮಸೀದಿಯ ಜಮೀನಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಬ್ಬಿಣದ ಶೆಡ್ ನಿರ್ಮಿಸಿದ್ದು ಮತ್ತು ಅಂದಿನ ಉಡುಪಿ ಜಿಲ್ಲಾಧಿಕಾರಿಯು ಆ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿ, ನ್ಯಾಯಾಲಯದ ತೀರ್ಪು ಬರುವವರೆಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದ್ದು ಕೂಡಾ ನಡೆದಿದೆ. ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ ಮತ್ತು ಅಂತಿಮ ತೀರ್ಪು ಇನ್ನೂ ಬಂದಿಲ್ಲ. ಈ ನಡುವೆಯೇ ಕೆಲವು ದಿಢೀರ್ ಬೆಳವಣಿಗೆಗಳು ನಡೆದಿದ್ದು, ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಿಂದ ಮಸೀದಿಯ ಹೆಸರನ್ನು ಕಿತ್ತು ಹಾಕಿ ಅದು ಸರಕಾರಿ ಜಮೀನು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾದ ಮಸೀದಿ ಮತ್ತು ಅದರ ಭೂಮಿಯ ಮೇಲೆ ಸರಕಾರ ಹೀಗೆ ಏಕಾಏಕಿ ಮಧ್ಯಪ್ರವೇಶಿಸಿರುವುದು ಮತ್ತು ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯುವಷ್ಟು ಸಹನೆ ಇಲ್ಲದಿರುವುದು ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ವಿವಾದದಲ್ಲಿ ಕಂದಾಯ ಇಲಾಖೆ ದಿಢೀರ್ ಮಧ್ಯಪ್ರವೇಶಿಸಿರುವುದೇಕೆ ಎಂಬ ಅನುಮಾನ ನಾಗರಿಕರಲ್ಲಿದೆ. ಅಲ್ಲದೇ ಸ್ಥಳೀಯ ಬಿಜೆಪಿ ಶಾಸಕ ಮತ್ತು ಅವರ ಬೆಂಬಲಿಗರ ಭಾರೀ ಮುತುವರ್ಜಿಯೂ ಇದರ ಹಿಂದಿದೆ. ಬಾಹ್ಯನೋಟಕ್ಕೆ ಈಗಿನ ಜಿಲ್ಲಾಧಿಕಾರಿಗಳ ಟಿಪ್ಪಣಿಯನ್ನು ಈ ಎಲ್ಲ ಬೆಳವಣಿಗೆಗೆ ಆಧಾರವಾಗಿ ತೋರಿಸಲಾಗುತ್ತಿದ್ದರೂ ಈ ಎಲ್ಲವುಗಳ ಹಿಂದೆ ರಾಜಕೀಯದ ದಟ್ಟ ಪ್ರಭಾವ ಇರುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದ್ದರಿಂದಲೇ,

ಉಡುಪಿಯಲ್ಲಿ ಈ ಬಗ್ಗೆ ಒಂದಕ್ಕಿಂತ  ಹೆಚ್ಚು ಪ್ರತಿಭಟನೆಗಳು ನಡೆದಿವೆ. ಪತ್ರಿಕಾಗೋಷ್ಠಿ ನಡೆದಿದೆ. ಮಸೀದಿಯ ಜಮೀನನ್ನು ಸರಕಾರ ಪಹಣಿ ಪತ್ರದಲ್ಲಿ ತಿದ್ದಿ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬುದಕ್ಕೆ ಆಧಾರವಾಗಿ ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. ಮುಸ್ಲಿಮರು ಮಾತ್ರವಲ್ಲ, ಮುಸ್ಲಿಮೇತರರೂ ಸರಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ಅಂದಹಾಗೆ,

ಈ ದೇಶದ ಮುಸ್ಲಿಮರು, ಅವರ ಮಸೀದಿಗಳು, ಅವರ ಧಾರ್ಮಿಕ ರೀತಿ-ರಿವಾಜು, ಕಟ್ಟಳೆಗಳೆಲ್ಲ ಬಿಜೆಪಿಯ ಪಾಲಿಗೆ ಚಿನ್ನದ ಮೊಟ್ಟೆಗಳಾಗಿ ಪರಿವರ್ತಿತವಾಗಿ ಕೆಲವು ವರ್ಷಗಳೇ ಕಳೆದಿವೆ. ನಿಜವಾಗಿ, ಅಭಿವೃದ್ಧಿ ರಾಜಕಾರಣಕ್ಕಿಂತ ಧರ್ಮ ರಾಜಕಾರಣ ಬಹಳ ಸುಲಭ. ಈ ಧರ್ಮ ರಾಜಕಾರಣದಲ್ಲೂ ಬಹುಸಂಖ್ಯಾತ ಧರ್ಮ ರಾಜಕಾರಣ ಅತ್ಯಂತ ಲಾಭದಾಯಕ. ಧರ್ಮ ಅಮಲಲ್ಲ ಮತ್ತು ಅಪಾಯಕಾರಿಯೂ ಅಲ್ಲ. ಆದರೆ ಅದನ್ನು ಅಮಲಾಗಿ ಮತ್ತು ಅಪಾಯಕಾರಿಯಾಗಿ ಪರಿವರ್ತಿಸುವುದಕ್ಕೆ ಅವಕಾಶಗಳಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಹೆಸರಲ್ಲಿ ಅವರಲ್ಲಿರುವ ಸಾತ್ವಿಕ ಗುಣವನ್ನು ಪ್ರಚೋದಿಸಿ, ಇತರರ ವಿರುದ್ಧ ಆಕ್ರೋಶವಾಗಿ ಪರಿವರ್ತಿಸುವುದು ರಾಜಕೀಯ ತಂತ್ರಗಾರಿಕೆ. ನ್ಯಾಯವೋ ಅನ್ಯಾಯವೋ ಯಾವುದೇ ಸ್ಥಿತಿಯಲ್ಲೂ ಬಹುಸಂಖ್ಯಾತರ ಪರ ನಿಲ್ಲುವುದರಿಂದ ಯಶಸ್ಸು ಶತಸಿದ್ಧ ಎಂಬುದನ್ನು ತಿಳಿದುಕೊಂಡು ಈ ಸೂತ್ರವನ್ನು ಯಾವ ಪಾಪ ಪ್ರಜ್ಞೆಯೂ ಇಲ್ಲದೇ ಬಳಸಿಕೊಳ್ಳಲು ಮುಂದಾಗುವ ರಾಜಕಾರಣಿ- ರಕ್ತದ ರುಚಿ ಹತ್ತಿದ ಹುಲಿಯಂತೆ. ಇವರು ಸಮಾಜದ ಪಾಲಿಗೆ ಅತ್ಯಂತ ಅಪಾಯಕಾರಿ. ಅಷ್ಟಕ್ಕೂ,

ಬಾಹ್ಯನೋಟಕ್ಕೆ ಈ ರಾಜಕಾರಣಿಗಳು ಬಹುಸಂಖ್ಯಾತರ ಪರ ಎಂದು ಅನಿಸಿದರೂ ಇದು ಸಂಪೂರ್ಣ ನಿಜ ಅಲ್ಲ. ರಾಜಕೀಯ ಯಶಸ್ಸಿಗಾಗಿ ಅವರು ಆ ವೇಶವನ್ನು ಹಾಕಿಕೊಳ್ಳುತ್ತಾರೆ. ಅವರ ಅಂತಿಮ ಗುರಿ ರಾಜಕೀಯ ಯಶಸ್ಸೇ ಹೊರತು ಸಾರ್ವಜನಿಕ ಕಾಳಜಿಯಲ್ಲ. ಯಾವಾಗ ಇದೇ ಜನರು ಅವರನ್ನು ಪ್ರಶ್ನಿಸತೊಡಗುತ್ತಾರೋ ಮತ್ತು ಅವರ ಬದಲು ಇನ್ನೊಬ್ಬರನ್ನು ಆಯ್ಕೆ ಮಾಡುತ್ತಾರೋ ಆಗ ಅವರು ಅದೇ ಜನರ ಪರಮ ವಿರೋಧಿಗಳಾಗಿಯೂ ಮಾರ್ಪಡುತ್ತಾರೆ. ಧರ್ಮ ರಾಜಕಾರಣದ ದುರಂತ ಮುಖ ಇದು. ಆದ್ದರಿಂದಲೇ,

ನಾಗರಿಕ ವಿವೇಚನೆಗೆ ಅತ್ಯಂತ ಪ್ರಾಮುಖ್ಯತೆ ಲಭ್ಯವಾಗುವುದು. ರಾಜಕಾರಣಿಗಳು ನೆಲದಲ್ಲಿ ನಡೆಯುವುದು ಕಡಿಮೆ. ಕಾರು, ಹೆಲಿಕಾಪ್ಟರ್, ವಿಮಾನಗಳಲ್ಲಿ ಊರಿಂದೂರಿಗೆ ಸಾಗುತ್ತಾ, ರಾಜಕೀಯ ಲಾಭವಾಗುವ ಕಡೆ ದಿಢೀರನೆ ಪ್ರತ್ಯಕ್ಷರಾಗುತ್ತಾ, ನಾಲ್ಕು ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟು ಮಾಯವಾಗುವವರು. ಆದರೆ ನಾಗರಿಕರು ಹಾಗಲ್ಲ. ರಾಜಕಾರಣಿ ಬಂದ ಮೇಲೂ ಹೋದ ಮೇಲೂ ಇರುವಲ್ಲೇ  ಇದ್ದು ಬದುಕಬೇಕಾದವರು ಅವರು. ಅವರ ಊರಿನ ಪರಿಸ್ಥಿತಿ ಕೆಟ್ಟರೆ ಅದು ರಾಜಕಾರಣಿಯ ಪಾಲಿಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ಅವರು ಎಲ್ಲೋ  ಇದ್ದು ಆರಾಮವಾಗಿರುತ್ತಾರೆ. ಆದರೆ, ಕೆಟ್ಟ ಪರಿಸ್ಥಿತಿಯ ಫಲಿತಾಂಶವನ್ನು ಅನುಭವಿಸಬೇಕಾದವರು ಸ್ಥಳೀಯರು. ಈ ಸತ್ಯ ನಾಗರಿಕ ಪ್ರಜ್ಞೆಯನ್ನು ಯಾವಾಗ ಎಚ್ಚರಿಸುತ್ತೋ ಆವಾಗ ನಾಡು ಸುರಕ್ಷಿತವಾಗಿರುತ್ತದೆ. ನಿಜವಾಗಿ,

ಕಲ್ಮತ್ ಜುಮಾ ಮಸೀದಿ ಎಂಬುದು ಕೊಡವೂರು ಗ್ರಾಮವೆಂಬ ಪುಟ್ಟ ಊರಿನಲ್ಲಿರುವ ಆರಾಧನಾ ಕೇಂದ್ರ. ಈ ಆರಾಧನಾ ಕೇಂದ್ರದ ಸುತ್ತ ಸುತ್ತಿಕೊಂಡಿರುವ ವಿವಾದ ಏನೇ ಇರಲಿ, ಅದು ಆ ಊರಿನ ನಾಗರಿಕರು ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಮಾತುಕತೆಯಲ್ಲಿ ಬಗೆಹರಿಯದ ವಿವಾದವನ್ನು ಬಗೆಹರಿಸುವುದಕ್ಕೆಂದೇ ನ್ಯಾಯಾಲಯವಿದೆ. ರಾಜಕಾರಣಿ ನ್ಯಾಯಾಧೀಶನಲ್ಲ. ಯಾವಾಗ ಆತ ನ್ಯಾಯಾಧೀಶನ ಪಾತ್ರ ನಿಭಾಯಿಸಲು ಹೊರಡುತ್ತಾನೋ ಆಗ ನ್ಯಾಯ ಸಾವಿಗೀಡಾಗುತ್ತದೆ. ಅನ್ಯಾಯ ಮೆರೆದಾಡುತ್ತದೆ. ಸದ್ಯದ ಅಗತ್ಯ ಏನೆಂದರೆ, ಕಲ್ಮತ್ ಜುಮಾ ಮಸೀದಿಯ ವಿವಾದವನ್ನು ನ್ಯಾಯಾಲಯಕ್ಕೆ ಬಿಟ್ಟು ಕೊಡುವುದು ಮತ್ತು ಅದು ಕೇವಲ ಕೊಡವೂರು ಗ್ರಾಮದ ನಾಗರಿಕರ ನಡುವಿನ ಜಮೀನು ವಿವಾದವಾಗಿಯಷ್ಟೇ ಗುರುತಿಸಿಕೊಳ್ಳುವುದು. ಕೊಡವೂರಿನ ಬೇಲಿ ದಾಟಿ ಈ ವಿವಾದ ಹೊರ ಹೋಗುವುದರಿಂದ ಅಪಾಯ ಹೆಚ್ಚು. ಹಾಗೇನಾದರೂ ಆದರೆ, ಸಮಾಜ ಘಾತುಕ ಶಕ್ತಿಗಳು ಈ ವಿವಾದವನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ರಾಜಕಾರಣಿಗಳು ಮಧ್ಯಪ್ರವೇಶಿಸಿ ಸತ್ಯ ನಾಶ ಮಾಡಬಹುದು. ಅದರಿಂದಾಗಿ ಕೊಡವೂರು ನಾಗರಿಕರು ನಿತ್ಯ ನೆಮ್ಮದಿಯನ್ನು ಕಳೆದುಕೊಂಡು ಬದುಕಬೇಕಾದ ಸ್ಥಿತಿ ಎದುರಾಗಬಹುದು. ಈಗಾಗಲೇ ಇಂಥ ಸ್ಥಿತಿ ದೇಶದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಕೇಸುಗಳನ್ನು ಜಡಿಸಿಕೊಳ್ಳುವವರು ಸ್ಥಳೀಯರು. ಕೋರ್ಟು-ಕಚೇರಿಯೆಂದು ಅಲೆಯ ಬೇಕಾದವರು ಸ್ಥಳೀಯರು. ವಿವಾದಕ್ಕೆ ಬೆಂಕಿ ಕೊಟ್ಟು ಆ ಬೆಂಕಿಯನ್ನು ಊರೆಲ್ಲಾ ಹರಡುವವರು ಆ ಬಳಿಕ ಎಲ್ಲೋ ದೂರದಲ್ಲಿ ಹಾಯಾಗಿರುತ್ತಾರೆ. ಆದ್ದರಿಂದ, 

ನಾಗರಿಕರು ಎಚ್ಚರಿಕೆಯಿಂದ ಇರಬೇಕು. ವಿವೇಚನೆಯಿಂದ ವರ್ತಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿರುತ್ತಾ ಪಹಣಿ ಪತ್ರದಲ್ಲಿ ಮಾಡಲಾಗಿರುವ ಬದಲಾವಣೆಯನ್ನು ನ್ಯಾಯದ ತಕ್ಕಡಿಯಲ್ಲಿಟ್ಟು ತೂಗಬೇಕು. ಮಸೀದಿಯಾಗಲಿ, ಮಂದಿರವಾಗಲಿ ನ್ಯಾಯಕ್ಕಿಂತ ಮೇಲಲ್ಲ. ನ್ಯಾಯ ಯಾವುದರ ಪರ ಇದೆಯೋ ಅದನ್ನು ಒಪ್ಪುವ ಹಾಗೂ ಈ ಸತ್ಯವನ್ನು ಒಪ್ಪದೇ ತೋಳ್ಬಲವನ್ನೇ ನ್ಯಾಯ ಎಂದು ಪ್ರತಿಪಾದಿಸುವವರನ್ನು ಪ್ರಶ್ನಿಸುವ ಛಾತಿಯನ್ನು ನಾಗರಿಕರು ತೋರಬೇಕು. ಇದು ಸಾಧ್ಯವಾದ ದಿನ ಈ ದೇಶದ ಮಸೀದಿ ಮತ್ತು ಮಂದಿರಗಳ ವಿಷಯದಲ್ಲಿ ಯಾವ ರಾಜಕಾರಣಿಯೂ ತಲೆ ಹಾಕುವುದಿಲ್ಲ.

x

Tuesday, 29 June 2021

ತೈಲ, ಅನಿಲ, ಅಗತ್ಯ ವಸ್ತುಗಳು, ಸ್ವಿಸ್ ಬ್ಯಾಂಕ್ ಮತ್ತು 2014ರ ಸುಳ್ಳುಗಳು




ಕಳೆದವಾರ ಒಂದೇ ದಿನ ಎರಡು ಸುದ್ದಿಗಳು ಪ್ರಕಟವಾದುವು. ಒಂದು- ಜನಸಾಮಾನ್ಯರಿಗೆ ಸಂಬಂಧಿಸಿದರೆ, ಇನ್ನೊಂದು- ಗೌತಮ್  ಅದಾನಿಗೆ ಸಂಬಂಧಿಸಿದ್ದು. ಅಂದಹಾಗೆ,


ಜನಸಾಮಾನ್ಯರಿಗೆ ಇಲ್ಲದ ಹಲವು ಅನುಕೂಲತೆಗಳು ಅದಾನಿಗೆ ಇರುವುದರಿಂದ ಯಾವುದೇ ಸವಾಲನ್ನೂ ಎದುರಿಸುವುದು ಸುಲಭ.  ಪ್ರಧಾನಿಯೊಂದಿಗೆ ನೇರವಾಗಿ ಮಾತನಾಡುವ ಸಾಮರ್ಥ್ಯ  ಅದಾನಿಗಿದೆ. ಕೇಂದ್ರದ ಸಚಿವರು, ಸಂಸದರು, ಶಾಸಕರುಗಳೆಲ್ಲ ಒಂದು  ಫೋನ್ ಕಾಲ್‍ಗೆ ಸಿಗುವಷ್ಟು ಮತ್ತು ತಕ್ಷಣ ಸ್ಪಂದಿಸುವಷ್ಟು ಅವರ ಹತ್ತಿರವಿದ್ದಾರೆ. ಅದಾನಿಯನ್ನು ಈ ದೇಶದ ಸಂಪತ್ತು ಎಂದು ಪ್ರಭುತ್ವ  ಪರಿಗಣಿಸಿರುವುದರಿಂದ, ಪ್ರಭುತ್ವದ ಹಲವಾರು ರಿಯಾಯಿತಿಗಳು ಅವರಿಗೆ ಸುಲಭವಾಗಿ ದಕ್ಕಬಲ್ಲುದು. ಅವರ ಪ್ರಯಾಣ ವಿಮಾನದಲ್ಲಿ  ಮತ್ತು ದುಬಾರಿ ಕಾರುಗಳಲ್ಲಿ. ಕೋಟು-ಬೂಟು-ಸೂಟುಗಳಲ್ಲಿ ಸದಾ ಮಿನುಗುವ ಇವರಿಗೆ ಸಕಲ ಸರ್ಕಾರಿ ಮರ್ಯಾದೆಗಳೂ  ಲಭ್ಯವಾಗುತ್ತಲೇ ಇರುತ್ತವೆ. ಅದಾನಿಯವರ ಅಧಿಕಾರಿಯೋರ್ವ ಸರ್ಕಾರಿ ಕಚೇರಿ, ಬ್ಯಾಂಕು ಇತ್ಯಾದಿಗಳಲ್ಲಿ ಗಿಟ್ಟಿಸಿಕೊಳ್ಳುವ ಗೌರವದ  ಒಂದು ಶೇಕಡವನ್ನೂ ಜನಸಾಮಾನ್ಯ ಪಡೆಯುವುದಿಲ್ಲ. ಇಂಥ ಅನುಕೂಲತೆಗಳು ಅದಾನಿಯ ಪಾಲಿಗೆ ಸದಾ  ಲಭ್ಯವಾಗುತ್ತಿರುವುದರಿಂದಲೇ,
ಕಳೆದ ಒಂದೇ ವಾರದಲ್ಲಿ ತಮ್ಮ ಸಂಪತ್ತಿನಲ್ಲಿ ಸುಮಾರು 95 ಸಾವಿರ ಕೋಟಿ ರೂಪಾಯಿಯನ್ನು ಅವರು ಕಳಕೊಂಡಿರುವುದು  ಸಾರ್ವಜನಿಕರನ್ನು ಚಿಂತೆಗೀಡು ಮಾಡಿರುವುದಕ್ಕೆ ಸಾಧ್ಯವಿಲ್ಲ. ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದ ಅಲ್ಬುಲಾ ಇನ್ವೆಸ್ಟ್‍ಮೆಂಟ್, ಕ್ರೆಸ್ಟಾ  ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‍ಮೆಂಟ್ ಫಂಡ್ ಎಂಬ ಮೂರು ವಿದೇಶಿ ಫಂಡ್‍ಗಳ ವಿರುದ್ಧ ನ್ಯಾಶನಲ್ ಸೆಕ್ಯುರಿಟೀಸ್ ಡೆಪಾಸಿಟ್  ಲಿಮಿಟೆಡ್ ಕ್ರಮ ಕೈಗೊಂಡ ನಂತರ ಅದಾನಿ ಕಂಪೆನಿಯ ಷೇರುಗಳು ಸತತವಾಗಿ ಕುಸಿದು ಒಂದೇ ವಾರದಲ್ಲಿ ಅವರಿಗೆ 95 ಸಾವಿರ  ಕೋಟಿ ರೂಪಾಯಿ ನಷ್ಟವಾಗಿದೆ. ಈ ಸುದ್ದಿ ಪ್ರಕಟವಾದ ದಿನವೇ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿರುವುದು ಕೂಡಾ ಸು ದ್ದಿಯಾಗಿದೆ. ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಗದಗ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು,  ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಡಿಕೇರಿ, ಮಂಡ್ಯ, ಚಾಮರಾಜನಗರ ಮತ್ತು ಇನ್ನಿತರ ಹಲವು ಪ್ರದೇಶಗಳು ಕೂಡ ಪೆಟ್ರೋಲ್  ಬೆಲೆಯನ್ನು ಶತಕದ ಮೇಲೇರಿಸಿ ಕೂತಿವೆ. ಮುಂದಿನ ವಾರದೊಳಗೆ ರಾಜ್ಯದ ಎಲ್ಲ ಕಡೆ ಪೆಟ್ರೋಲ್ ಬೆಲೆ ನೂರು ರೂಪಾಯಿಯನ್ನು  ದಾಟುವುದು ನಿಶ್ಚಿತವಾಗಿದೆ. ದುರಂತ ಏನೆಂದರೆ,

ತೈಲ ಬೆಲೆ ಏರಿಕೆಯನ್ನು ಮುಖ್ಯ ವಿಷಯವಾಗಿಸಿ 2014ರಲ್ಲಿ ಚುನಾವಣೆಯನ್ನು ಎದುರಿಸಿ ಅಧಿಕಾರಕ್ಕೆ ಬಂದ ಬಿಜೆಪಿಯೇ ಜನರ  ಮೇಲೆ ಈ ಕ್ರೌರ್ಯವನ್ನು ಎಸಗುತ್ತಿದೆ ಎಂಬುದು.

2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದವರು ನರೇಂದ್ರ ಮೋದಿ. ಆಗಿನ್ನೂ ಅವರು  ಗುಜರಾತಿನ ಮುಖ್ಯಮಂತ್ರಿಯಷ್ಟೇ ಆಗಿದ್ದರು. ಈ ಸಮಯದಲ್ಲಿ ಪೆಟ್ರೋಲ್ ಬೆಲೆ 70-75 ರೂಪಾಯಿ ಆಸುಪಾಸಿನಲ್ಲಷ್ಟೇ ಇತ್ತು.  ಮುಖ್ಯಮಂತ್ರಿ ನರೇಂದ್ರ ಮೋದಿಯವರು ಈ ಬೆಲೆಯನ್ನೇ ಜನಸಾಮಾನ್ಯರ ಪಾಲಿನ ಹೊರಲಾಗದ ಹೊರೆ ಎಂದು ಬಾರಿ ಬಾರಿಗೂ  ಭಾಷಣಗಳಲ್ಲಿ ಹೇಳಿದ್ದರು. ಈ ಸ್ಥಿತಿಗೆ ಮನಮೋಹನ್ ಸಿಂಗ್ ಸರ್ಕಾರದ ಅಸಮರ್ಥ ಆಡಳಿತವೇ ಕಾರಣ ಎಂದು ಆಪಾದಿಸಿದ್ದರು.  ಬಿಜೆಪಿ ಅಧಿಕಾರಕ್ಕೆ ಬಂದರೆ, ಈ ಬೆಲೆ ಏರಿಕೆಯ ಬವಣೆಯಿಂದ ಜನರನ್ನು ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ಹೀಗೆ  ಹೇಳುವಾಗ ಅಪ್ಪಿ-ತಪ್ಪಿಯೂ ಅವರು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗಿನ ಕಚ್ಚಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 125  ಡಾಲರ್ ಇದೆ ಎಂದು ಹೇಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಮೋದಿಯವರು ಸ್ವಿಸ್ ಬ್ಯಾಂಕ್‍ನಲ್ಲಿರುವ ಸಂಪತ್ತಿನ  ಮೂಟೆಯ ಬಗ್ಗೆಯೂ ಮಾತಾಡಿದ್ದರು. ಅಲ್ಲಿರುವ ಹಣವೆಲ್ಲ ಕಾಂಗ್ರೆಸಿಗರದ್ದು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿರುವ ಹಣವನ್ನು  ಭಾರತಕ್ಕೆ ಮರಳಿ ತರಲಾಗುವುದು ಎಂದೂ ಹೇಳಿದ್ದರು. ನೆಹರೂರಿಂದ ಹಿಡಿದು ಸೋನಿಯಾ ಗಾಂಧಿಯ ವರೆಗೆ ಕಾಂಗ್ರೆಸಿಗರೆಲ್ಲ ಸ್ವಿಸ್  ಬ್ಯಾಂಕ್‍ನಲ್ಲಿ ಹಣವನ್ನು ತುಂಬಿಸಿಟ್ಟಿz್ದÁರೆ ಎಂಬ ಭಾವವನ್ನು ಸೃಷ್ಟಿಸುವಲ್ಲಿ ಬಿಜೆಪಿ ಸಾಕಷ್ಟು ಶ್ರಮಿಸಿತ್ತು. ಅಲ್ಲದೇ,
ಸುಶ್ಮಾ ಸ್ವರಾಜ್‍ರಿಂದ ಹಿಡಿದು ಬಿಜೆಪಿಯ ಪ್ರಮುಖ ನಾಯಕರು ಖಾಲಿ ಸಿಲಿಂಡರ್‍ಗಳನ್ನು ಪ್ರದರ್ಶಿಸಿ, ಬಟಾಟೆ, ನೀರುಳ್ಳಿಯಂಥ ಅಗತ್ಯ  ವಸ್ತುಗಳ ಹಾರವನ್ನು ಕೊರಳಿಗೆ ಹಾಕಿ ಜನಸಾಮಾನ್ಯರ ಬವಣೆಗಳನ್ನು ಸರ್ಕಾರದ ಎದುರು ಇಟ್ಟಿದ್ದರು. ಹಾಗಂತ,
ಒಂದು ಜಾಗೃತ ವಿರೋಧ ಪP್ಷÀವಾಗಿ ಬಿಜೆಪಿಯ ಈ ನಡೆಯನ್ನು ಶ್ಲಾಘಿಸಬೇಕು. ಹಾಗೆಯೇ, ಈ ಪ್ರತಿಭಟನೆ ಜನಸಾಮಾನ್ಯರ ಪಾಲಿಗೆ  ಇನ್ನೊಂದು ಸಂತಸದ ಸಂದೇಶವನ್ನೂ ರವಾನಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳು ಅಗ್ಗವಾಗುತ್ತವೆ ಮತ್ತು ತೈಲ,  ಗ್ಯಾಸ್ ಸಿಲಿಂಡರ್ ಸಹಿತ ನಿತ್ಯ ಬಳಕೆಯ ವಸ್ತುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂಬುದೇ ಆ ಸಂದೇಶ. ಆದರೆ  ಮುಖ್ಯಮಂತ್ರಿ ಮೋದಿಯವರು ಪ್ರಧಾನಿ ಮೋದಿಯಾಗಿ ಈಗ 7 ವರ್ಷಗಳು ಕಳೆದಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ  ತೈಲದ ಬೆಲೆ ಬ್ಯಾರಲ್ ಒಂದಕ್ಕೆ 125 ಡಾಲರ್‍ನಿಂದ ಇಳಿದು 35ಕ್ಕೆ ಇಳಿದದ್ದಿದೆ. ಈಗ 70 ಡಾಲರ್‍ನ ಆಸು-ಪಾಸಿನಲ್ಲಿದೆ. ಹೀಗಿದ್ದೂ,

ತೈಲ ಬೆಲೆಯಲ್ಲಿ ಯಾಕೆ ಇಳಿಕೆಯಾಗುತ್ತಿಲ್ಲ? ಗ್ಯಾಸ್ ಸಿಲಿಂಡರ್‍ನ ಬೆಲೆ 850 ರೂಪಾಯಿಗಿಂತಲೂ ಅಧಿಕ ಏರಿರುವುದೇಕೆ? ಮ ನ್‍ಮೋಹನ್ ಸಿಂಗ್ ಅವಧಿಯಲ್ಲಿ 350-400 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರನ್ನು ಇದೀಗ ಪ್ರಧಾನಿ ಮೋದಿಯವರು ಜ ನಸಾಮಾನ್ಯರ ಕೈಗೆ ಸಿಗದಷ್ಟು ಎತ್ತರದಲ್ಲಿ ಇರಿಸಿರುವುದೇಕೆ? ಅಗತ್ಯ ವಸ್ತುಗಳ ಬೆಲೆಯಂತೂ ಮನ್‍ಮೋಹನ್ ಕಾಲಕ್ಕೆ ಹೋಲಿಸಿದರೆ  ಮೂರು ಪಟ್ಟು ಅಧಿಕವಾಗಿದೆ. ಹಾಗೆಯೇ,

ಜನಸಾಮಾನ್ಯರ ಆದಾಯದಲ್ಲಿ ಏರಿಕೆಯಾಗುವ ಬದಲು ವರ್ಷಂಪ್ರತಿ ಇಳಿಕೆಯಾಗುತ್ತಿದೆ. ಈ ಇಳಿಕೆಯ ಪರ್ವ ಆರಂಭವಾದದ್ದು  2017ರ ನೋಟ್‍ಬ್ಯಾನ್‍ನಿಂದ. ಕಳೆದೆರಡು ವರ್ಷಗಳ ಮಟ್ಟಿಗೆ ಹೇಳುವುದಾದರೆ, ಸುಮಾರು 4 ಕೋಟಿಯಷ್ಟು ಉದ್ಯೋಗಗಳು  ನಷ್ಟವಾಗಿವೆ. ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಮುಚ್ಚಿವೆ. ಉದ್ಯೋಗಿಗಳಿಗೆ ಅರ್ಧ ವೇತನವಷ್ಟೇ  ಲಭ್ಯವಾಗುತ್ತಿದೆ. ನಾಲ್ಕು ಮಂದಿ ಕೆಲಸಗಾರರಿದ್ದ ಕಡೆ ಇಬ್ಬರನ್ನು ಉಳಿಸಿಕೊಂಡು ಇನ್ನಿಬ್ಬರನ್ನು ಕೈ ಬಿಡಲಾಗುತ್ತಿದೆ. ಇದೇವೇಳೆ, ಸ್ವಿಸ್  ಬ್ಯಾಂಕ್‍ನಲ್ಲಿ ಕಳೆದ 13 ವರ್ಷಗಳಲ್ಲೇ  ಅತ್ಯಧಿಕ ಹಣವನ್ನು 2020ರಲ್ಲಿ ಭಾರತೀಯರು ಇಟ್ಟಿರುವ ಮಾಹಿತಿಯು ಕಳೆದವಾರದಲ್ಲಿ  ಪ್ರಕಟವಾಗಿದೆ. 2020ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯರ ಹಣ ಸುಮಾರು 2,076 ಕೋಟಿಗೆ ಏರಿದೆ. ಈ ಮಾಹಿತಿಯನ್ನು  ನೀಡಿರುವುದೇ ಸ್ವಿಸ್ ಬ್ಯಾಂಕ್. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಸ್ವಿಸ್ ಬ್ಯಾಂಕ್‍ಗಳಿಂದ ಹೆಚ್ಚಿನ ಮಾಹಿತಿಯನ್ನೂ ಕೇಳಿದೆ. ನಿಜವಾಗಿ,

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಯಾವ ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದಿತ್ತೋ ಆ ಎಲ್ಲ  ಭರವಸೆಗಳನ್ನೂ ಅವರ ಅಧಿಕಾರಾವಧಿಯ 7 ವರ್ಷಗಳು ಸಂಪೂರ್ಣ ನುಚ್ಚುನೂರುಗೊಳಿಸಿವೆ ಎಂಬುದನ್ನು ಇವೆಲ್ಲ ಸಾರಿ ಸಾರಿ  ಹೇಳುತ್ತಿವೆ. 2014ರಲ್ಲಿ ಭಾರತೀಯರ ಪರಿಸ್ಥಿತಿ ಈ 2021ಕ್ಕಿಂತ ಖಂಡಿತ ಉತ್ತಮವಿತ್ತು. ತೈಲ, ಅನಿಲ, ಅಗತ್ಯವಸ್ತುಗಳು  ದುಬಾರಿಯಾಗಿದ್ದರೂ ಈ 2021ಕ್ಕೆ ಹೋಲಿಸಿದರೆ ಅದೂ ನಿಜಕ್ಕೂ ಅಗ್ಗವಾಗಿತ್ತು. ಸ್ವಿಸ್ ಬ್ಯಾಂಕ್‍ನಿಂದ ಈ 7 ವರ್ಷಗಳಲ್ಲಿ ಒಂದೇ  ಒಂದು ಪೈಸೆಯನ್ನೂ ಮರಳಿ ತರಲು ಪ್ರಧಾನಿ ಮೋದಿಯವರಿಗೆ ಸಾಧ್ಯವಾಗದೇ ಇರುವುದೇ ಅವರು ಆ ಬ್ಯಾಂಕಿನ ಬಗ್ಗೆ ಮತ್ತು  ಕಾಂಗ್ರೆಸ್ಸಿಗರ ಬಗ್ಗೆ ಸುಳ್ಳು ಹೇಳಿದ್ದರು ಎಂಬುದಕ್ಕೆ ಸಾಕ್ಷಿ. ಇದೀಗ ಪ್ರಧಾನಿ ಮೋದಿಯವರ ಕಣ್ಣೆದುರಲ್ಲೇ  ಸ್ವಿಸ್ ಬ್ಯಾಂಕ್‍ನಲ್ಲಿ ಈ  ಹಿಂದೆಂದಿಗಿಂತಲೂ ಅಧಿಕ ಠೇವಣಿ ಜಮೆಯಾಗಿದೆ. ಇವೆಲ್ಲ ಏನು? ಇದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ಬದಲಿಸಿ ನರೇಂದ್ರ  ಮೋದಿಯನ್ನು ತರಬೇಕಾದ ಅಗತ್ಯ ಇತ್ತೇ?

Tuesday, 22 June 2021

ಇಲ್ಲ, ಬದಲಾಗಲೇಬೇಕು





1. ಯಾರು ತನ್ನನ್ನು ಪರಿಶುದ್ಧಗೊಳಿಸುವರೋ ಅವರಿಗೆ ಸ್ವರ್ಗವಿದೆ- ಅಧ್ಯಾಯ: ತಾಹಾ, ವಚನ: 26.
2. ಧರ್ಮನಿಷ್ಠರಿಗೆ ದುರಾಲೋಚನೆ ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ- ಅಧ್ಯಾಯ: ಅಲ್ ಅಅï‌ರಾಫ್,  ವಚನ: 201
3. ಫಿರ್‌ಔನ್‌ನೊಡನೆ ಪ್ರವಾದಿ ಮೂಸಾ(ಅ) ಕೇಳಿದ ಪ್ರಶ್ನೆ: ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?- ಅಧ್ಯಾಯ: ಅನ್ನಾಝಿಯಾತ್,  ವಚನ: 18.
4. ನಿಷ್ಕಳಂಕ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ- ಅಧ್ಯಾಯ: ಅ ಶ್ಶುಅರಾ, ವಚನ: 88, 89
5. ಯಾರು ಆತ್ಮವನ್ನು ಸಂಸ್ಕರಿಸಿಕೊಂಡರೋ ಅವರು ವಿಜಯಿಯಾದರು- ಅಧ್ಯಾಯ: ಅಶ್ಶಮ್ಸ್, ವಚನ: 9.
6. ಪಾವಿತ್ರ‍್ಯವನ್ನು ಕೈಗೊಂಡವನು ಯಶಸ್ವಿಯಾದನು.- ಅಧ್ಯಾಯ: ಅಲ್ ಅಅï‌ಲಾ, ವಚನ: 14.

ಈ ಎಲ್ಲ ವಚನಗಳೂ ಒಂದು ಮುಖ್ಯ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಅದುವೇ ಪರಿಶುದ್ಧತೆ. ಆತ್ಮವನ್ನು ಪರಿ ಶುದ್ಧಗೊಳಿಸುವುದು, ಹೃದಯವನ್ನು ನಿಷ್ಕಳಂಕಗೊಳಿಸುವುದು, ತನ್ನನ್ನು ಪರಿಶುದ್ಧಗೊಳಿಸುವುದು ಎಂಬಿತ್ಯಾದಿಯಾಗಿ ಈ ಮೇಲಿನ ವಚ ನಗಳಲ್ಲಿ ಎತ್ತಿ ಹೇಳಲಾಗಿದೆ. ನಿಷ್ಕಳಂಕ ಹೃದಯ, ಪರಿಶುದ್ಧ ಆತ್ಮ ಎಂಬಿವುಗಳು ಮನುಷ್ಯನ ಇಹ-ಪರದ ವಿಜಯದ ಮಾನದಂಡ  ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಆದ್ದರಿಂದಲೇ,
ಫಿರ್‌ಔನನ ಬಳಿಗೆ ತೆರಳಿ ಪ್ರವಾದಿ ಮೂಸಾ ಪ್ರಶ್ನಿಸಿದ್ದು ಹೀಗೆ: ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?

ಇಲ್ಲಿ ಫಿರ್‌ಔನ್ ಪರಿಶುದ್ಧನಾಗಿಲ್ಲ ಎಂಬುದನ್ನು ನೇರವಾಗಿ ಹೇಳಲಾಗಿದೆ. ಹಾಗಿದ್ದರೆ ಈ ಪರಿಶುದ್ಧತೆಯ ಮಾನದಂಡ ಯಾವುದು?  ಆತನ ಬಟ್ಟೆಯೇ? ಆತನ ಸಿಂಹಾಸನವೇ? ಆತನ ದೇಹವೇ? ಆತನ ಪರಿಸರವೇ? ಆತನ ರಾಜಭವನವೇ? ಅಲ್ಲ ಎಂಬುದು ಮೂಸಾ (ಅ) ಮತ್ತು ಫಿರ್‌ಔನರ ನಡುವಿನ ದೀರ್ಘ ಮಾತುಕತೆ ಮತ್ತು ಆ ಬಳಿಕದ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ. ಫಿರ್‌ಔನ್  ಅಹಂಕಾರಿಯಾಗಿದ್ದ. ಪ್ರಕೃತಿ ನಿಯಮದಂತೆ ಅಧಿಕಾರ ಚಲಾಯಿಸಲು ಮತ್ತು ದೇವ ನಿಯಮ ವನ್ನು ಒಪ್ಪಲು ನಿರಾಕರಿಸುತ್ತಿದ್ದ.  ಅಹಂಕಾರ ಎಂಬುದು ಪರಿಶುದ್ಧತೆಯೆಡೆಗಿನ ಬಲುದೊಡ್ಡ ತೊಡಕು. ಪವಿತ್ರ ಕುರ್‌ಆನ್ ಪ್ರಸ್ತುತಪಡಿಸುವ ಮನುಷ್ಯನ ಚಹರೆ  ಹೇಗಿದೆಯೆಂದರೆ, ಪಾರದರ್ಶಕ ಗಾಜಿನ ಲೋಟದಂತೆ. ಆ ಲೋಟದಲ್ಲಿ ಮರೆಗಳಿರುವು ದಿಲ್ಲ. ಬಾಹ್ಯ ಹೇಗೆಯೋ ಆಂತರಿಕವೂ  ಹಾಗೆಯೇ. ಅದರಲ್ಲಿ ನೀರು ತುಂಬಿದರೆ ಆ ಲೋಟ ತನ್ನ ಬಣ್ಣವನ್ನು ಬದಲಿಸುವುದಿಲ್ಲ. ನೀರಿನ ಬಣ್ಣ ಏನೇ ಆಗಿರಲಿ ಆ ಬಣ್ಣವನ್ನು  ಅದು ಎತ್ತಿ ತೋರಿಸುತ್ತದೆಯೇ ಹೊರತು ತಾನೂ ಆ ಬಣ್ಣದಂತೆ ಬದಲಿಸಿಕೊಳ್ಳುವುದಿಲ್ಲ. ನೀರು ಸುರಿಯುವ ಮೊದಲು ಹೇಗಿತ್ತೋ  ಹಾಗೆಯೇ ನೀರನ್ನು ಆ ಲೋಟದಿಂದ ಹೊರ ಚೆಲ್ಲಿದಾಗಲೂ ಇರುತ್ತದೆ. ಆ ಲೋಟದ ಮೇಲೆ ನಿಮಗೆ ಎಲ್ಲೂ ಯಾವ  ಸಂದರ್ಭದಲ್ಲೂ ವಿಶ್ವಾಸ ಇಡಬಹುದು. ಯಾರು ಯಾವ ಬಣ್ಣದ್ದೇ  ನೀರು ಸುರುವಿದರೂ ಮತ್ತು ತಾತ್ಕಾಲಿಕವಾಗಿ ಆ ಲೋಟಕ್ಕೆ  ಬಣ್ಣವಿದೆಯೆಂದು ಭ್ರಮೆಗೊಳ ಪಡಿಸಲು ಯಾರಾದರೂ ಯಶಸ್ವಿಯಾದರೂ ತಕ್ಷಣವೇ ಅದು ತನ್ನ ನಿಜರೂಪವನ್ನು ಸಾಬೀತು ಪಡಿಸಬಲ್ಲುದು. ಪವಿತ್ರ ಕುರ್‌ಆನ್ ಮನುಷ್ಯನನ್ನು ಇಂಥದ್ದೊಂದು ಲೋಟದಂತಾಗಲು ಬಯಸುತ್ತದೆ. ಪ್ರವಾದಿಗಳು ಹಾಗೆಯೇ  ಬದುಕಿದ್ದರು. ಗಾಜಿನ ಲೋಟದಂಥ ಅವರ ವ್ಯಕ್ತಿತ್ವದ ಮೇಲೆ ಯಾರೆಷ್ಟೇ ಬಣ್ಣದ ನೀರು ಎರಚಿದರೂ ಅವು ಎರಚಿದಷ್ಟೇ ವೇಗವಾಗಿ  ನೆಲ ಸೇರಿತೇ ಹೊರತು ಅವರ ಪಾರದರ್ಶಕತೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಪ್ರವಾದಿ(ಸ)ರ ಮೇಲೆ ಬಳಸದಿರುವ  ಯಾವ ನಿಂದನಾತ್ಮಕ ಪದಗಳೂ ಇಲ್ಲ. ಹೊರಿಸದ ಆರೋಪಗಳಿಲ್ಲ. ಮಾಡದ ಹಿಂಸೆಗಳಿಲ್ಲ. ಆದರೂ ಅವಾವುವೂ ಅವರ ವ್ಯಕ್ತಿತ್ವವನ್ನು  ಕಳಂಕಗೊಳಿಸಲಿಲ್ಲ. ಅವರನ್ನು ನಿಂದಿಸಿದವರೇ ಆ ಬಳಿಕ ಅವರ ವ್ಯಕ್ತಿತ್ವಕ್ಕೆ ಮಾರು ಹೋದರು. ಪ್ರೀತಿಸಿದರು. ಅಂದಹಾಗೆ,

ಅತ್ಯಂತ  ಪಾರದರ್ಶಕ ಮತ್ತು ಪರಿಶುದ್ಧ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಲಿಕ್ಕಿರುವ ಏಕೈಕ ದಾರಿ- ಆತ್ಮ ವಿಮರ್ಶೆ. ಪ್ರತಿದಿನ ರಾತ್ರಿಯ ವೇಳೆ  ಅಥವಾ ರಾತ್ರಿಯ ನಿದ್ದೆಯ ಬಳಿಕ ಎಚ್ಚೆತ್ತು ಅಲ್ಲಾಹನ ಮುಂದೆ ಬಾಗಿ ಸ್ವವಿಮರ್ಶೆ ಮಾಡಿಕೊಳ್ಳುವುದು. ಪ್ರವಾದಿ(ಸ) ಪ್ರತಿ ದಿನ 100  ಬಾರಿ ತೌಬಾ ಮಾಡುತ್ತಿದ್ದರು ಎಂಬುದು ನಮಗೆ ಗೊತ್ತು. ಆತ್ಮವಿಮರ್ಶೆಯು ಸಹಜವಾಗಿ ನಮ್ಮನ್ನು ತೌಬಾದೆಡೆಗೆ ಕೊಂಡೊಯ್ಯುತ್ತದೆ.  ತೌಬಾವು ನಮಗೆ ವಿನೀತಭಾವವನ್ನು ಮತ್ತು ತಪ್ಪುಗಳಿಂದ ದೂರ ಉಳಿಯುವುದನ್ನು ಕಲಿಸಿಕೊಡುತ್ತದೆ. ಸ್ವವಿಮರ್ಶೆ ಅಥವಾ  ಆತ್ಮಾವಲೋಕನವನ್ನು ನಾವು ಪ್ರತಿದಿನ ರೂಢಿಸಿಕೊಂಡರೆ ನಮ್ಮ ವ್ಯಕ್ತಿತ್ವವೂ ಗಾಜಿನ ಲೋಟದಂತಾಗಬಹುದು. ಕುರ್‌ಆನ್ ಬಯಸುವ  ಪರಿಶುದ್ಧ ಆತ್ಮ, ನಿಷ್ಕಳಂಕ ಹೃದಯ ನಮ್ಮದಾಗಬಹುದು.

ಗಾಜಿನ ಲೋಟದಂಥ ವ್ಯಕ್ತಿತ್ವವನ್ನು ಹೊಂದುವ ಉದ್ದೇಶದಿಂದಲೇ ಈ ಬಾರಿಯ ಉಪವಾಸ ವ್ರತವನ್ನು ಆಚರಿಸೋಣ.

Thursday, 1 April 2021

ಬಂಧನದಲ್ಲಿಡಬೇಕಾದುದು ಮಂದಿರಗಳನ್ನಲ್ಲ...



ಕಳೆದವಾರ ಎರಡು ಘಟನೆಗಳು ನಡೆದುವು.
1. ಸರಕಾರಿ ಶಾಲೆಯ ಮಕ್ಕಳನ್ನು ಮುಖ್ಯೋಪಾಧ್ಯಾಯರು ಮಸೀದಿಯ ಭೋಜನಕ್ಕೆ ಕಳುಹಿಸಿದ್ದು.
2. ಉತ್ತರಾಖಂಡದಲ್ಲಿ 150ಕ್ಕಿಂತಲೂ ಅಧಿಕ ದೇವಾಲಯಗಳ ಆವರಣದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್ ತೂಗು  ಹಾಕಿದ್ದು.
ಈ ಎರಡೂ ಬೆಳವಣಿಗೆಗಳ ಹಿಂದೆ ಆಂತರಿಕವಾದ ಸಂಬಂಧವೊಂದಿದೆ-
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ಹೊಸ ಮಸೀದಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಮತ್ತು ಶಾಲೆಯ ಮಕ್ಕಳನ್ನು  ಮಧ್ಯಾಹ್ನದ ಭೋಜನಕ್ಕೆ ಕಳುಹಿಸಿ ಕೊಡುವಂತೆ ಸ್ಥಳೀಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯದಲ್ಲಿ ಮಸೀದಿ ಆಡಳಿತ  ಸಮಿತಿಯವರು ಕೇಳಿಕೊಂಡರು. ಬ್ರಾಹ್ಮಣರೇ ಊಟ ತಯಾರಿಯ ಹೊಣೆ ಹೊತ್ತಿರುವುದನ್ನೂ ಅವರು ತಿಳಿಸಿದ್ದರು. ಆ ವಿನಂತಿಯನ್ನು  ಮುಖ್ಯೋಪಾಧ್ಯಾಯರು ಸಹಜವೆಂಬಂತೆ ಸ್ವೀಕರಿಸಿ ಮಕ್ಕಳನ್ನು ಕಳುಹಿಸಿಯೂ ಕೊಟ್ಟಿದ್ದರು. ಆದರೆ ಆ ಬಳಿಕ ಮುಖ್ಯೋಪಾಧ್ಯಾಯರನ್ನು ಸಂಘಪರಿವಾರದ ವ್ಯಕ್ತಿ ತರಾಟೆಗೆ ತೆಗೆದುಕೊಂಡರು. ಸೋರಿಕೆಯಾದ ಆ ಫೋನ್ ಸಂಭಾಷಣೆ ಜಿಲ್ಲೆಯಲ್ಲಿ ಚರ್ಚಾ  ವಿಷಯವಾಯಿತು. ಮುಖ್ಯೋಪಾಧ್ಯಾಯರು ಭಯದಿಂದ ಕ್ಷಮೆ ಯಾಚಿಸಿದರು. ಪ್ರತಿಭಟನೆಯಂಥ ಉಗ್ರ ನಿರ್ಧಾರ ತಳೆಯಬೇಡಿ  ಎಂದು ಬೇಡಿಕೊಂಡರು. ತನ್ನಿಂದ ತಪ್ಪಾಯ್ತು ಎಂದು ಬಾರಿಬಾರಿಗೂ ಹೇಳುತ್ತಾ ಹೋದರು. ಹಾಗಂತ,
ಒಂದು ಖಾಸಗಿ ಭೋಜನ ಕೂಟಕ್ಕೆ ಸರಕಾರಿ ಶಾಲೆಯ ಮಕ್ಕಳನ್ನು ಕಳುಹಿಸಿಕೊಡುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆ  ತಪ್ಪಲ್ಲ. ಊರ ಸಹಜ ಬಾಂಧವ್ಯದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಸರಿ-ತಪ್ಪುಗಳ ಜಿಜ್ಞಾಸೆಗೆ ಬೀಳದೇ ಮಕ್ಕಳನ್ನು  ಕಳುಹಿಸಿಕೊಟ್ಟಿರಬಹುದು. ಅಲ್ಲದೇ, ಒಂದು ದಿನ ಮೊದಲೇ ಮಕ್ಕಳಲ್ಲಿ ಆ ಬಗ್ಗೆ ಅವರು ಹೇಳಿಯೂ ಇದ್ದರು. ಮನೆಯಲ್ಲಿ ಒಪ್ಪಿಗೆ  ಕೊಟ್ಟವರು ಮಾತ್ರ ಭೋಜನಕ್ಕೆ ಹೋಗಬಹುದು, ಅಲ್ಲದವರು ಟಿಫಿನ್ ತರಬಹುದು ಎಂದೂ ಹೇಳಿದ್ದರು. ಇವೆಲ್ಲವನ್ನೂ ಕಾನೂನಿ ನಾಚೆಗಿನ ಮಾನವ ಸಹಜ ಸಂಬಂಧದ ದೃಷ್ಟಿಯಿಂದ ನೋಡಿದರೆ ಯಾವ ಸಮಸ್ಯೆಯೂ ಇಲ್ಲ. ಒಂದುವೇಳೆ, ಕಾನೂನು ಪ್ರಕಾರವೇ  ವಿಶ್ಲೇಷಿಸುವುದಿದ್ದರೂ ತಪ್ಪಿಲ್ಲ. ಆದರೆ, ಮುಖ್ಯೋಪಾಧ್ಯಾಯರನ್ನು ಕರೆ ಮಾಡಿ ತರಾಟೆಗೆ ತೆಗೆದುಕೊಂಡವರ ಸಮಸ್ಯೆ ಭೋಜನ ಆಗಿರಲಿಲ್ಲ. ಮಸೀದಿಯಾಗಿತ್ತು ಮತ್ತು ಮುಸ್ಲಿಮರಾಗಿದ್ದರು. ಲವ್ ಜಿಹಾದ್, ಹಿಂದೂ ಹೆಣ್ಮಕ್ಕಳ ರಕ್ಷಣೆ, ಮುಸ್ಲಿಮರಿಗೆ ಹರಿದು ಬರುವ ಹಣ  ಇತ್ಯಾದಿಗಳ ಮೂಲಕವೇ ಆ ವ್ಯಕ್ತಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಜೊತೆಗೇ ಉತ್ತರಾಖಂಡದ ಡೆಹ್ರಾಡೂನ್‌ನ 150 ಮಂದಿರಗಳು ತೂಗು ಹಾಕಿರುವ ಬ್ಯಾನರ್‌ಗಳನ್ನೂ ಇಟ್ಟು ನೋಡಬೇಕು.
ದೇಶ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವಾಗ ಮತ್ತು ನಿರುದ್ಯೋಗದಿಂದ ಸಾಮಾಜಿಕ ವಾತಾವರಣ ಕಳವಳಕಾರಿ ಮಟ್ಟಕ್ಕೆ  ಮುಟ್ಟಿರುವಾಗ, ಪ್ರಭುತ್ವವನ್ನು ಬೆಂಬಲಿಸುವವರ ಪಾಲಿಗೆ ಇವಲ್ಲದೇ ಅನ್ಯದಾರಿಯಿಲ್ಲ ಎಂದಷ್ಟೇ ಇಂಥ ಬೆಳವಣಿಗೆಗಳಿಗೆ ಷರಾ  ಬರೆಯಬೇಕಾಗಿದೆ. ಇಂಥ ಬೆಳವಣಿಗೆಗಳನ್ನು ಸೃಷ್ಟಿ ಮಾಡದೇ ಹೋದರೆ ಜನರು ಪ್ರಭುತ್ವದ ವೈಫಲ್ಯಗಳ ಬಗ್ಗೆ ಮಾತಾಡತೊಡಗುತ್ತಾರೆ.  ಅನ್ನ, ಉದ್ಯೋಗಕ್ಕಾಗಿ ಆಗ್ರಹಿಸುತ್ತಾರೆ. ಒಂದು ಕಡೆ ರೈತ ಪ್ರತಿಭಟನೆ 4 ತಿಂಗಳನ್ನೂ ದಾಟಿ ಮುಂದುವರಿಯುತ್ತಿದೆ. ಬ್ಯಾಂಕ್ ಸಿಬಂದಿಗಳು ಈಗಷ್ಟೇ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ. ಸರಕಾರವೇ ಖಾಸಗೀಕರಣವಾಗಿ ಬಿಡುತ್ತೋ ಎಂಬ ಮಾತುಗಳು ಕೇಳಿ ಬರುವಷ್ಟು  ಒಂದೊಂದನ್ನೇ ಖಾಸಗಿಗೆ ಮಾರಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಜನಾಕ್ರೋಶ ಬೀದಿಗೆ ಬರದಂತೆ ತಡೆಯುವುದಕ್ಕಿರುವ ಜನಪ್ರಿಯ ದಾರಿ  ಒಂದೇ- ಹಿಂದೂ-ಮುಸ್ಲಿಮ್ ವಿಭಜನೆ. ಮುಸ್ಲಿಮರನ್ನು ದ್ವೇಷಿಸುವ ಮತ್ತು ಅವರ ಸುತ್ತ ಸುಳ್ಳುಗಳನ್ನು ಹಬ್ಬಿಸಿ ಚರ್ಚೆಯಾಗುವಂತೆ  ನೋಡಿಕೊಳ್ಳುವುದು. ಇಲ್ಲದಿದ್ದರೆ,
ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರನ್ನು ಮಂದಿರಗಳು ಯಾಕಾದರೂ ತೂಗು ಹಾಕಬೇಕು? ಮುಸ್ಲಿಮ್ ಆಗಿದ್ದುಕೊಂಡು ಮಂದಿರ  ಪ್ರವೇಶಿಸಬಾರದೇ? ಅದರಿಂದ ಆಗುವ ಹಾನಿಯೇನು? ಮಂದಿರ, ಮಸೀದಿ, ಚರ್ಚ್, ಸ್ತೂಪ ಇವೆಲ್ಲ ಆಯಾ ಧರ್ಮದ ಸಂಕೇತಗಳು.  ಅವು ಆಯಾ ಧರ್ಮಗಳ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಪೂಜೆ, ಗರ್ಭಗುಡಿ, ಹಿಂದೂ ಸಂಪ್ರದಾಯ, ಭಜನೆ, ಅರ್ಚಕರು, ಆರತಿ,  ಸಂಸ್ಕೃತ ಶ್ಲೋಕಗಳು ಇತ್ಯಾದಿಗಳ ಬಗ್ಗೆ ಮುಸ್ಲಿಮನಿಗೆ ಸುಲಭವಾಗಿ ಅರಿತುಕೊಳ್ಳುವುದಕ್ಕೆ ಮಂದಿರ ಒಂದು ಸುಲಭ ತಾಣ. ಬಾಯಿಯಲ್ಲಿ  ಹೇಳುವುದಕ್ಕೂ ಕಣ್ಣಾರೆ ಕಾಣುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಸಂಶೋಧನಾ ನಿರತ ಮುಸ್ಲಿಮ್ ವಿದ್ಯಾರ್ಥಿಯೋರ್ವ ಮಂದಿರಕ್ಕೆ  ಭೇಟಿ ನೀಡದೇ ಹೇಗೆ ವಿಷಯ ಮಂಡಿಸಬಹುದು? ಮಂದಿರ ಹಿಂದೂಗಳಿಗೆ ಸಂಬಂಧಿಸಿದ್ದೇ ಆಗಿರಬಹುದು. ಆದರೆ, ಇತರ  ಧರ್ಮೀಯರಿಗೆ ಬಾಗಿಲು ಮುಚ್ಚುವುದರಿಂದ ಅದು ಸ್ವಯಂ ಅಡಗಿಕೊಂಡಂತಾಗುತ್ತದೆ. ಸಂಸ್ಕೃತದ ಇಂದಿನ ಸ್ಥಿತಿಗೆ ಅದನ್ನು ಇತರರಿಂದ  ಅಡಗಿಸಿಟ್ಟುದುದೇ ಕಾರಣ ಎಂಬುದು ಎಲ್ಲರಿಗೂ ಗೊತ್ತು.
ಮುಸ್ಲಿಮರು ಮತ್ತು ಹಿಂದೂಗಳ ನಡುವೆ ದ್ವೇಷಭಾವವನ್ನು ಬೆಳೆಸುವುದರಿಂದ ಯಾರಿಗೆ ಲಾಭ ಎಂಬ ಬಗ್ಗೆ ಉಭಯ ಧರ್ಮೀಯರೂ  ಸ್ವಯಂ ಆತ್ಮಾವಲೋಕನ ನಡೆಸಬೇಕಾದ ಅಗತ್ಯ ಇದೆ. ಮುಸ್ಲಿಮರ ಊಟ, ಮುಸ್ಲಿಮರ ಸ್ನೇಹ, ಮುಸ್ಲಿಮರಿಂದ ವ್ಯಾಪಾರ, ಮಸೀದಿ,  ಆಝಾನ್... ಮುಂತಾದುವುಗಳೆಲ್ಲ ನಿಷೇಧದ ಪಟ್ಟಿಗೆ ಬೀಳುವುದಕ್ಕಿಂತ ಮೊದಲು ಉಭಯ ಧರ್ಮೀಯರೂ ಎಚ್ಚೆತ್ತುಕೊಳ್ಳಬೇಕು.  ಯಾವುದಾದರೊಂದು ನೆಪದಲ್ಲಿ ನಾಳೆ ಇನ್ನೇನಕ್ಕೋ ನಿಷೇಧ ಹೇರುವ ಬೆಳವಣಿಗೆ ನಡೆಯಬಹುದು. ಗೋವಿನ ತಲೆಯಿಂದ ಅ ಪವಿತ್ರಗೊಳ್ಳುತ್ತಿದ್ದ ಮಂದಿರಗಳು ಈಗ ಮುಸ್ಲಿಮರ ಪ್ರವೇಶದಿಂದಲೇ ಅಪವಿತ್ರಗೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ಇದೊಂದು ಅ ಪಾಯಕಾರಿ ಬೆಳವಣಿಗೆ. ಈ ದೇಶದ ಯಾವ ಮಸೀದಿಗಳೂ ಹಿಂದೂಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡನ್ನು ಈವರೆಗೂ ತೂಗು  ಹಾಕಿಲ್ಲ. ಹಾಕಲೂ ಬಾರದು. ಕ್ರೈಸ್ತ ಅನುಯಾಯಿಗಳಿಗೆ ಪ್ರವಾದಿ ಮುಹಮ್ಮದರು(ಸ) ಮಸೀದಿಯಲ್ಲೇ  ಪ್ರಾರ್ಥನೆಗೆ ಅವಕಾಶ  ಮಾಡಿಕೊಟ್ಟ ಚರಿತ್ರೆ ಇದೆ. ಮಸೀದಿಯೊಳಗೆ ಮೂತ್ರ ಮಾಡಿದವನನ್ನು ತಿಳಿಹೇಳಿ ಕಳುಹಿಸಿಕೊಟ್ಟ ಇತಿಹಾಸ ಇದೆ. ಸಾಧ್ಯವಾದರೆ ಪ್ರತಿ  ಮಸೀದಿಗಳೂ ಹಿಂದೂಗಳಿಗೆ ಸ್ವಾಗತ ಎಂಬ ಬೋರ್ಡನ್ನು ನೇತು ಹಾಕುವ ಮತ್ತು ಇತರ ಧರ್ಮೀಯರಿಗೆ ಮಸೀದಿಯಲ್ಲಿ ನಡೆಯುವ  ಚಟುವಟಿಕೆ, ನಮಾಝï, ಪ್ರಾರ್ಥನೆ, ಅಂಗಶುದ್ಧಿ ಇತ್ಯಾದಿಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಳ್ಳಿ  ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ಇಂಥ ಕಾರ್ಯಕ್ರಮಗಳು ಅಭಿಯಾನದಂತೆ ನಡೆಯಬೇಕು. ಹಿಂದೂ ಸಮುದಾಯದ ಪ್ರಮುಖರನ್ನು, ಬಿಜೆಪಿ,  ಕಾಂಗ್ರೆಸ್ಸು, ಜೆಡಿಎಸ್ಸು ಎಂಬ ರಾಜಕೀಯ ಬೇಧವಿಲ್ಲದೇ ಮತ್ತು ಸಂಘಪರಿವಾರ ಎಂಬ ಅಂತರ ಕಾಯ್ದುಕೊಳ್ಳದೇ ಸರ್ವರನ್ನೂ ಆಹ್ವಾ ನಿಸುವ ಪ್ರಯತ್ನ ನಡೆಯಬೇಕು. ಮಸೀದಿ, ಮದ್ರಸಗಳ ಕುರಿತು ಚಾಲ್ತಿಯಲ್ಲಿರುವ ಸುಳ್ಳು ಸುದ್ದಿಗಳಿಗೆ ಏಟು ಕೊಡುವುದಕ್ಕೂ ಇದರಿಂದ  ಸಾಧ್ಯವಾಗಬಹುದು.
ಈ ದೇಶದ ಇಂದಿನ ಗಂಭೀರ ಸಮಸ್ಯೆ ಧರ್ಮ ಅಲ್ಲ. ಅದು ಸಮಸ್ಯೆಯೇ ಅಲ್ಲ. ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ದೇಶದ  ಏಕತೆ, ಸಮಗ್ರತೆ, ವೈವಿಧ್ಯತೆಗೆ ತೊಡಕೂ ಅಲ್ಲ. ಮಸೀದಿಗಳು ತಮ್ಮ ಪಾಡಿಗಿವೆ ಮತ್ತು ಮಂದಿರಗಳೂ ಕೂಡ. ಭಕ್ತಿಯಿಂದ  ಬಂದವರಿಗೂ ದ್ವೇಷದಿಂದ ಬಂದವರಿಗೂ ಅವು ಒಳಿತನ್ನೇ ಬಯಸುತ್ತವೆ. ಜನರು ಮಸೀದಿಗೋ ಮಂದಿರಕ್ಕೋ ತೆರಳುವುದು- ನೆಮ್ಮ ದಿ, ಶಾಂತಿಯನ್ನು ಬಯಸಿಕೊಂಡು. ಧ್ಯಾನ ಸ್ಥಿತಿಗೆ ತಲುಪುವುದಕ್ಕೆ ಅವು ಉತ್ತಮ ತಾಣ. ಅಂಥ ತಾಣಗಳನ್ನೇ ಬೇಲಿ ಹಾಕಿ ಬಂಧನದಲ್ಲಿಡುವುದು ಅತ್ಯಂತ ಖೇದಕರ. ಹಿಂದೂ ಧರ್ಮದ ಬೆಳವಣಿಗೆ ಮತ್ತು ಸೌಂದರ್ಯವು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು  ದ್ವೇಷಿಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ. ಆದರೆ ಈ ಸತ್ಯವನ್ನೇ ಮರೆಮಾಚಲಾಗುತ್ತಿದೆ. ಇದು ವಿಷಾದನೀಯ.

Thursday, 25 March 2021

ಆಸಿಫ್: ಏರುಗತಿಯಲ್ಲಿರುವ ದ್ವೇಷಭಾವದ ಜಿಡಿಪಿ




ನಿಜಕ್ಕೂ ಆ ಬಾಲಕ ಥಳಿತಕ್ಕೆ ಅರ್ಹನೇ? ನೀರು ಕುಡಿಯುವುದು ಥಳಿಸಬೇಕಾದಷ್ಟು ಕ್ರೂರ ಅಪರಾಧವೇ? ಬಾಲಕನ ತಂದೆಯ ಪ್ರ ಶ್ನೆಯೂ ಇಲ್ಲಿ ಊರ್ಜಿತ- ನೀರಿಗೆ ಧರ್ಮವನ್ನು ಬೆರೆಸಿದವರು ಯಾರು? ಮಂದಿರದಿಂದ ಓರ್ವ ಮುಸ್ಲಿಮ್ ಬಾಲಕ ನೀರು  ಕುಡಿಯುವುದು ಅಪರಾಧ ಏಕಾಗಬೇಕು? ಇಂಜಿನಿಯರ್ ಆಗಿರುವ ಶೃಂಗಿ ಯಾದವ್‌ಗೆ ಇಷ್ಟು ಪರಿಜ್ಞಾನವೂ ಇಲ್ಲವೇ? ಬೇಡ, ಆತ ನೊಳಗೆ ದ್ವೇಷ ತುಂಬಿಕೊಂಡಿದೆಯೆಂದೇ  ಹೇಳೋಣ ಮತ್ತು ತನ್ನ ಪರಿವಾರದಲ್ಲಿ ಹೀರೋಯಿಸಂ ತೋರ್ಪಡಿಸಲು ಅಥವಾ ಪ್ರಚಾರದ  ಗೀಳಿಗಾಗಿ ಆ ಬಾಲಕನನ್ನು ಥಳಿಸಿದನೆಂದೇ ಒಪ್ಪೋಣ. ಆದರೆ, ಆ ಮಂದಿರದ ಆಡಳಿತ ಸಮಿತಿಗೇನಾಗಿದೆ? ಇಡೀ ಬೆಳವಣಿಗೆಯನ್ನು  ಸಾವಧಾನದಿಂದ ಪರಿಶೀಲಿಸಿ ಹೇಳಿಕೆ ನೀಡುವುದಕ್ಕೆ ಅವಕಾಶವಿದ್ದೂ ಅದು ಮಾಡಿದ್ದೇನು? ಶೃಂಗಿ ಯಾದವ್‌ನ ಬೆಂಬಲಕ್ಕೆ ಅದು  ನಿಂತದ್ದೇಕೆ? ಆತನ ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಅದು ಘೋಷಿಸಿದ್ದೇಕೆ? ಆ ಬಾಲಕ ನೀರು ಕುಡಿದದ್ದನ್ನು  ಸಂಚು ಎಂದು ಹೇಳುವಷ್ಟು, ಸ್ಥಳೀಯ ವಾತಾವರಣವನ್ನು ಕೆಡಿಸಲು ಮಾಡಲಾದ ಯತ್ನವೆಂದು ವಾದಿಸುವಷ್ಟು ಮತ್ತು ಆ ಬಾಲಕ  ಒಂಟಿಯಲ್ಲ, ಆತನ ಹಿಂದೆ ಸಂಚುಕೋರರಿದ್ದಾರೆ ಎಂದು ಸಮರ್ಥಿಸುವಷ್ಟು ಹೀನ ಹಂತಕ್ಕೆ ತಲುಪಿದ್ದೇಕೆ? ನಿಜವಾಗಿ,

ಆಸಿಫ್ ಎಂಬ ಆ ಬಾಲಕನಿಗೆ ಥಳಿಸಿರುವುದಕ್ಕಿಂತಲೂ ಮಂದಿರದ ಈ ಸಮರ್ಥನೆ ಹೆಚ್ಚು ಆಘಾತಕಾರಿ. ಉತ್ತರ ಪ್ರದೇಶದ  ಘಾಸಿಯಾಬಾದ್‌ನಲ್ಲಿರುವ ದಾಸ್ನಾದೇವಿ ಮಂದಿರದಲ್ಲಿ ಯತಿಯಾಗಿರುವ ನರಸಿಂಗಾನಂದ್  ಸರಸ್ವತಿ ಮತ್ತು ಅವರ ಶಿಷ್ಯನಾಗಿ  ಗುರುತಿಸಿಕೊಂಡಿರುವ ಆರೋಪಿ ಶೃಂಗಿ ಯಾದವ್ ಇಬ್ಬರೂ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡವರು. ಶೃಂಗಿ ಯಾದವ್ ಈ  ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ಫೋಟೋಗಳು ಈಗ ಮುನ್ನೆಲೆಗೆ ಬರುತ್ತಿವೆ. ಚೂರಿ, ಬಂದೂಕು ಮತ್ತು  ಇನ್ನಿತರ ಆಯುಧಗಳನ್ನು ಹಿಡಿದ ಫೋಟೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಪ್ರಚೋದನಾತ್ಮಕ ಮತ್ತು ತೀವ್ರ  ಬಲಪಂಥೀಯ ಮಾತುಗಳಿಂದ ನರಸಿಂಗಾನಂದ್  ಸರಸ್ವತಿ ಪರಿಚಿತರು ಎಂದು ಇಂಡಿಯನ್ ಎಕ್ಸ್ ಪ್ರೆಸ್  ವರದಿ ಮಾಡಿದೆ. ಒಂದು  ಕೋಣೆಯ ಪುಟ್ಟ ಗೂಡಿನಂಥ ಮನೆಯಲ್ಲಿ ವಾಸಿಸುವ ಆಸಿಫ್ ಮತ್ತು ಆತನ ಹೆತ್ತವರು ನೀರು ಕುಡಿದು ಮಾಡುವ ಸಂಚಾದರೂ ಏ ನು? ಮನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕೆಲಸ ಮಾಡುವ ಈ ಬಾಲಕನನ್ನು ಥಳಿಸಿರುವುದನ್ನು ಒಂದು ಮಂದಿರ ಸಮಿತಿ  ಬೆಂಬಲಿಸುವುದೆಂದರೆ, ನಿಜಕ್ಕೂ ಅದಕ್ಕೆ ಧಾರ್ಮಿಕ ದ್ವೇಷವಲ್ಲದೇ ಬೇರೇನಾದರೂ ಕಾರಣ ಇದ್ದೀತೆ? ದೇಶದಲ್ಲಿ ಉಳಿದೆಲ್ಲ ಕ್ಷೇತ್ರಗಳು  ಸಂಪೂರ್ಣ ಧರಾಶಾಹಿಯಾಗಿರುವಾಗಲೂ ಈ ಧರ್ಮದ್ವೇಷದ ಜಿಡಿಪಿಯಲ್ಲಿ ಈ ಮಟ್ಟದ ಏರಿಕೆಯಾಗಿರುವುದು ಏನನ್ನು ಸೂಚಿಸುತ್ತದೆ?

ಕಳೆದ ಒಂದು ವರ್ಷದಲ್ಲಿ 10,113 ಕಂಪೆನಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ  ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದನ್ನು ಪ್ರತಿದಿನದ  ಬೆಳವಣಿಗೆಗಳೇ ಹೇಳುತ್ತಿವೆ. ರಾಜ್ಯದ ಜಿಎಸ್‌ಟಿ ಪಾಲನ್ನು ನೀಡದೇ ಇರುವುದರಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿ ಎದುರಾಗಿದೆ.  ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ದಿನನಿತ್ಯವೆಂಬಂತೆ ಏರಿಕೆಯಾಗುತ್ತಿದೆ. ನಿರುದ್ಯೋಗದ  ಪ್ರಮಾಣವಂತೂ ಸ್ಫೋಟಕ ಸ್ಥಿತಿಯಲ್ಲಿದೆ. 14 ವರ್ಷದ ಆಸಿಫ್‌ನನ್ನು ಥಳಿಸಿದ ಶೃಂಗಿ ಯಾದವ್‌ನೂ ನಿರುದ್ಯೋಗಿ. ಎಂಜಿನಿಯರ್  ಆಗಿದ್ದೂ ಕೆಲಸ ಸಿಗದೇ ಕೊನೆಗೆ ದಾಸ್ನಾದೇವಿ ಮಂದಿರ ಸೇರಿಕೊಂಡವ. ಕೊರೋನಾ ಲಾಕ್‌ಡೌನ್‌ಗಿಂತ ಮೊದಲು ಯಾರ‍್ಯಾರು  ಯಾವೆಲ್ಲ ಉದ್ಯೋಗದಲ್ಲಿದ್ದರೋ ಅವರಲ್ಲಿ ಅರ್ಧಾಂಶದಷ್ಟು ಮಂದಿ ಇವತ್ತು ನಿರುದ್ಯೋಗಿಗಳಾಗಿ ಕಷ್ಟಪಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ದಿಂದ ತೊಡಗಿ ಶಿಕ್ಷಣ, ಕಾರ್ಪೊರೇಟ್ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಊಹಿಸದಷ್ಟು ಪ್ರಮಾಣದಲ್ಲಿ ನಡೆದಿದೆ. ತಮ್ಮ  ಉದ್ಯೋಗವನ್ನು ನಂಬಿಕೊಂಡು ಮನೆ, ವಾಹನ, ಜಾಗ ಇತ್ಯಾದಿಗಳಿಗಾಗಿ ಬ್ಯಾಂಕಿನಿಂದ ಸಾಲ ಪಡೆದವರು ಈ ಅನಿರೀಕ್ಷಿತ  ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ತಿಂಗಳು ತಿಂಗಳು ಕಟ್ಟಬೇಕಾದ ಇಎಂಐ ಭೂತ ಅವರನ್ನು ಪ್ರತಿದಿನವೂ ಕಾಡುತ್ತಿದೆ.  ಒಂದುರೀತಿಯಲ್ಲಿ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಡಲಾಗುತ್ತಿರುವ ಸುಳ್ಳುಗಳೇ ಜನರನ್ನು ಇನ್ನೂ ತಾಳ್ಮೆಯಿಂದಿರುವಂತೆ  ಮಾಡಿದೆ.  ಆರ್ಥಿಕ ಸ್ಥಿತಿಯ ಬಗ್ಗೆ ಮತ್ತು ದೇಶದ ಬಗ್ಗೆ ಪ್ರಭುತ್ವದ ಕಾಲಾಳುಗಳು ಹರಿಬಿಡುತ್ತಿರುವ ವೈಭವೀಕೃತ ಸುಳ್ಳುಗಳು ಜನರನ್ನು ಭ್ರಮಾಧೀ ನರನ್ನಾಗಿ ಮಾಡಿದೆ. ಒಂದುವೇಳೆ ಈ ಮಾಧ್ಯಮ ಇಲ್ಲದೇ ಹೋಗಿರುತ್ತಿದ್ದರೆ ಈಗಾಗಲೇ ಜನಾಕ್ರೋಶಕ್ಕೆ ದೇಶ ತತ್ತರಿಸಿ ಹೋಗಿರುತ್ತಿತ್ತು.  ದುರಂತ ಏನೆಂದರೆ,

ಈ ಎಲ್ಲ ಕುಸಿತಗಳ ನಡುವೆಯೂ ಮುಸ್ಲಿಮ್ ದ್ವೇಷವೆಂಬ ಕ್ರೌರ್ಯಭಾವದ ಅಭಿವೃದ್ಧಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು.  ಅಂದಹಾಗೆ, ಒಂದು ವ್ಯವಸ್ಥಿತ ಸಂಚಿನ ಹೊರತು ಈ ದ್ವೇಷಭಾವವನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀರು  ಕುಡಿದ ಬಾಲಕನನ್ನು ಸಂಚುಕೋರ ಎಂದು ಮಂದಿರ ಸಮಿತಿಯೇ ಹೇಳುತ್ತದೆಂದರೆ, ಏನೆಂದು ಹೇಳುವುದು? ನಿಜವಾಗಿ, ಸಂಚಿರುವುದು  ಆ ಬಾಲಕನಲ್ಲಲ್ಲ, ಆತನನ್ನು ಥಳಿಸಿದವನಲ್ಲಿ. ಹಾಗೆ ಥಳಿಸುವಂತೆ ಪ್ರಚೋದನೆ ನೀಡಿದವರಲ್ಲಿ ಮತ್ತು ಇಂಥ ಥಳಿತದಲ್ಲೇ  ತಮ್ಮ ಅಸ್ತಿತ್ವವಿದೆ  ಎಂದು ನಂಬಿಕೊಂಡವರಲ್ಲಿ.
ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸದಾ ದ್ವೇಷಿಸುತ್ತಾ ಬದುಕಬೇಕೆಂದು ಯಾವುದೇ ಪ್ರಭುತ್ವ  ಬಯಸುವುದಾದರೆ, ಅದಕ್ಕೆ ಎರಡು ಕಾರಣಗಳಿವೆ.
 1. ದೀರ್ಘಕಾಲೀನ ರಾಜಕೀಯ ಅಧಿಕಾರದ ಬಯಕೆ.
 2. ಸರಕಾರಿ ವೈಫಲ್ಯವನ್ನು  ಮುಚ್ಚಿಡುವುದು. 
ಸದ್ಯದ ವಾತಾವರಣ ಈ ಎರಡನ್ನೂ ಸಮರ್ಥಿಸುವಂತಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಇನ್ನೊಂದೆಡೆ  ಅಧಿಕಾರವನ್ನು ಬಿಟ್ಟು ಕೊಡುವುದಕ್ಕೆ ಈಗಿನ ಪ್ರಭುತ್ವಕ್ಕೆ ಸುತಾರಾಂ ಇಷ್ಟವಿಲ್ಲ. ಹಾಗಂತ, ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಇರುವ  ಪ್ರಾಮಾಣಿಕ ದಾರಿಯೆಂದರೆ ಅಭಿವೃದ್ಧಿ. ಜನರಿಗೆ ನೆಮ್ಮದಿಯ ಬದುಕನ್ನು ನೀಡುವುದರಿಂದ ಜನರು ಮತ್ತೆ ಅದೇ ಸರಕಾರವನ್ನು  ಆರಿಸುತ್ತಾರೆಂಬುದು ವಾಡಿಕೆ. ಆದರೆ, ಸೌಖ್ಯ ರಾಷ್ಟ್ರವನ್ನು ಕಟ್ಟುವಲ್ಲಿ ಯಾವುದೇ ಪ್ರಭುತ್ವ ವಿಫಲವಾದರೆ ಅದು ಏನು ಮಾಡಬಹುದು?  ಈ ಪ್ರಶ್ನೆಗೆ ಉತ್ತರವೇ ದ್ವೇಷ. ಜನರು ಈ ವೈಫಲ್ಯವನ್ನು ಚರ್ಚಿಸದಂತೆ ನೋಡಿಕೊಳ್ಳುವುದು. ಇದು ಸಾಧ್ಯವಾಗಬೇಕೆಂದರೆ, ಜನರನ್ನು  ಧಾರ್ಮಿಕವಾಗಿ ವಿಭಜಿಸುವುದು. ಅವರ ನಡುವೆ ಅನುಮಾನ, ಸಂದೇಹ, ದ್ವೇಷಭಾವವನ್ನು ಬಿತ್ತುವುದು ಮತ್ತು ತನ್ನನ್ನು ಧರ್ಮೋದ್ಧಾರಕ  ಎಂದು ಬಿಂಬಿಸಿಕೊಂಡು  ಹುಸಿ ವರ್ಚಸ್ಸನ್ನು ಸೃಷ್ಟಿಸಿಕೊಳ್ಳುವುದು. ಧರ್ಮ ಅಪಾಯದಲ್ಲಿದೆ ಎಂದು ನಂಬಿಸಿಬಿಟ್ಟು ಅದುವೇ ದಿನೇ ದಿನೇ  ಚರ್ಚೆಯಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾದರೆ ಆ ಬಳಿಕ ಅದು ಅಫೀಮಿನಂತೆ ಜನರನ್ನು ಭ್ರಮೆಯಲ್ಲಿ ತೇಲಿಸಿ  ಬಿಡುತ್ತದೆ. ಪ್ರತಿ ಘಟನೆಯೂ ಧರ್ಮದ ದೃಷ್ಟಿಯಲ್ಲಿ ಚರ್ಚೆಗೊಳಗಾಗುತ್ತದೆ. ಪ್ರಭುತ್ವವನ್ನು ವಿಮರ್ಶಿಸುವ ಯಾವ ಬರಹ, ಭಾಷಣ,  ಕತೆಗಳೂ ಧರ್ಮವಿರೋಧಿಯೆಂದೋ ಸಂಚೆಂದೊ  ಗುರುತಿಸಲ್ಪಟ್ಟು ಧರ್ಮ ಧ್ರುವೀಕರಣಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ. ಸದ್ಯ  ನಡೆಯುತ್ತಿರುವುದೂ ಇದುವೇ. ನಿಜವಾಗಿ,

ದಾಸ್ನಾದೇವಿ ಮಂದಿರವು ಆ ಬಾಲಕನ ಪರ ನಿಲ್ಲಬೇಕಿತ್ತು. ಮಂದಿರದ ಒಳಗಡೆ ಇರುವ ನೀರಿನ ಟ್ಯಾಪನ್ನು ಮಂದಿರದ ಹೊರಗಡೆಗೂ  ವಿಸ್ತರಿಸಿ ನೀರು ಎಲ್ಲರಿಗಾಗಿ ಎಂದು ಘೋಷಿಸಬೇಕಿತ್ತು. ಶೃಂಗಿ ಯಾದವ್‌ನನ್ನು ಮಂದಿರದಿಂದ  ಹೊರಹಾಕಿ ಪ್ರತೀಕಾರ ತೀರಿಸಬೇಕಿತ್ತು.  ಆಸಿಫ್ ಕುಟುಂಬವನ್ನು ಮಂದಿರಕ್ಕೆ ಕರೆದು ವಿಶ್ವಾಸ ತುಂಬಬೇಕಿತ್ತು. ಆದರೆ ಇವಾವುವೂ ಆಗಿಲ್ಲ ಎಂಬುದಕ್ಕೆ ವಿಷಾದವಿದೆ.

Monday, 15 March 2021

ಆಯಿಷಾ: ಚರ್ಚೆಗೆ ಎತ್ತಿಕೊಳ್ಳಬೇಕಾದ್ದು ಯಾವುದನ್ನು?



ಅಹ್ಮದಾಬಾದ್‌ನ ಆಯಿಷಾ ಎಂಬ ಯುವತಿಯ ಆತ್ಮಹತ್ಯೆಯು ಮುಸ್ಲಿಮ್ ಸಮುದಾಯದ ಒಳಗೆ ಚರ್ಚಿತವಾಗುತ್ತಿದೆ. ಇಬ್ಬರು  ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ, ಸಮುದಾಯದ ಮಂದಿ ಒಂದೆಡೆ ಕಲೆತಾಗ ಪ್ರಸ್ತಾಪವಾಗುವಷ್ಟು ಆ ಘಟನೆ ಸಮುದಾಯದ  ಮೇಲೆ ಪರಿಣಾಮ ಬೀರಿದೆ. ಉತ್ತರ ಪ್ರದೇಶದ ಅಗ್ರಾದ ವಿದ್ವಾಂಸರು ಮತ್ತು ಮುಸ್ಲಿಮರು ಈ ಕೆಡುಕಿನ ವಿರುದ್ಧ ಸಮರ ಸಾರುವ  ಪ್ರತಿಜ್ಞೆ ಮಾಡಿದ್ದಾರೆ. ಅಷ್ಟಕ್ಕೂ,
ವರದಕ್ಷಿಣೆ ಎಂಬುದು ಮುಸ್ಲಿಮ್ ಸಮುದಾಯಕ್ಕೆ ಅಪರಿಚಿತ ಪದ ಅಲ್ಲ. ಇಂಥ ಪದ ಭಾರತೀಯ ಮುಸ್ಲಿಮರಿಗೆ ಪರಿಚಿತವಾಗಿ  ಹಲವು ದಶಕಗಳೇ ಕಳೆದಿವೆ. ಆಯಿಷಾರಂಥ ಹಲವು ಜೀವಗಳು ಈ ಕೆಡುಕಿಗೆ ಬಲಿಯಾಗಿವೆ. ಆಯಿಷಾ ಸ್ವತಃ ತನ್ನ ಬದುಕನ್ನು  ಕೈಯಾರೆ ಮುಗಿಸಿಕೊಂಡರೆ, ಇನ್ನಷ್ಟು ಆಯಿಷಾರು ಪತಿ ಮನೆಯವರ ಸೀಮೆ ಎಣ್ಣೆಗೋ, ವಂಚನೆಯ ಹತ್ಯೆಗೋ ಬಲಿಯಾಗಿದ್ದಾರೆ.  ಈ ಕೆಡುಕಿಗೆ ಸಿಲುಕಿ ಕಣ್ಣೀರಾದ ಹೆತ್ತವರ ಸಂಖ್ಯೆ ಅಗಾಧವಿದೆ. ಇದೀಗ ಅಹ್ಮದಾಬಾದ್‌ನ ಆಯಿಷಾ ಈ ಪಿಡುಗಿನ ಕುರಿತಂತೆ ನಮ್ಮ  ಪ್ರಜ್ಞೆಯನ್ನು ಮತ್ತೊಮ್ಮೆ ಕೆದಕಿದ್ದಾರೆ. ಅಷ್ಟಕ್ಕೂ,
ಓರ್ವ ಹೆಣ್ಣು ಮಗಳ ಮತ್ತು ಆಕೆಯ ಹೆತ್ತವರ ಸಂಕಟವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಬಲಿಯೊಂದರ ಅಗತ್ಯವಿತ್ತೇ ಎಂಬ  ಪ್ರಶ್ನೆ ಗಮನಾರ್ಹ. ಇದೇ ಸಂದರ್ಭದಲ್ಲಿ ಪ್ರತಿ ಪ್ರಶ್ನೆಯೂ ಮೂಡುತ್ತದೆ. ಆಕೆ ಹಾಗೆ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದೇ  ಹೋಗಿರುತ್ತಿದ್ದರೆ ವರದಕ್ಷಿಣೆಯ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿರುವ ಇವತ್ತಿನ ತಲ್ಲಣ ಮತ್ತು ಸಂಕಟ  ವ್ಯಕ್ತವಾಗುವುದಕ್ಕೆ ಸಾಧ್ಯವಿತ್ತೇ? ಹಾಗಂತ, ಆಕೆಗೆ ಆತ್ಮಹತ್ಯೆಗೆ ಹೊರತಾದ ಇನ್ನಷ್ಟು ದಾರಿಗಳಿದ್ದುವು ಎಂಬ ಸಮರ್ಥನೆಗೆ ಅರ್ಥವಿದೆ.  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಮಸೀದಿ ಕಮಿಟಿಯನ್ನು ಸಂಪರ್ಕಿಸಿ ಪರಿಹಾರ ಕೋರಬಹುದಿತ್ತು. ಮತ್ತೂ  ಪರಿಹಾರ ಕಾಣಲಿಲ್ಲವೆಂದರೆ ಹಣದಾಹದ ಪತಿಯಿಂದ ಖುಲಾ ಕೇಳಬಹುದಿತ್ತು ಮತ್ತು ಆತ ಅದಕ್ಕೂ ನಿರಾಕರಿಸಿದರೆ ಫಸ್ಕ್  ಮಾಡಿಕೊಳ್ಳಬಹುದಿತ್ತು. ಆತ್ಮಹತ್ಯೆಯನ್ನು ಪಾಪ ಎಂದು ಪರಿಗಣಿಸುವ ಧರ್ಮದ ಹೆಣ್ಣೊಬ್ಬಳ ಆತ್ಮಹತ್ಯೆಯು ತಪ್ಪಾದ ಆಯ್ಕೆಯತ್ತ  ಇತರರನ್ನು ಪ್ರಚೋದಿಸಬಹುದು ಎಂಬ ಆತಂಕದಲ್ಲಿ ಕಾಳಜಿಯೂ ಇದೆ.
ಇವೆಲ್ಲ ಒಪ್ಪಿತವೇ ಆದರೆ,
ಎರಡ್ಮೂರು ದಶಕಗಳ ಹಿಂದಿನ ಸಾಮಾಜಿಕ ವಾತಾವರಣಕ್ಕೂ ಇಂದಿಗೂ ಆನೆ-ಇಲಿಯಷ್ಟು ವ್ಯತ್ಯಾಸವಿದೆ. ಈ ಹಿಂದಿನ ಕಾಲದಲ್ಲೂ  ವರದಕ್ಷಿಣೆ ಇತ್ತು ಮತ್ತು ಸಾಮಾಜಿಕ ಸಂಯಮವೂ ಇತ್ತು. ಶೈಕ್ಷಣಿಕವಾಗಿ ಹೆಣ್ಮಕ್ಕಳು ಹಿಂದುಳಿದಿದ್ದರು. ಸಕಲ ಸಂಕಷ್ಟಗಳನ್ನೂ  ಹಿಂಸೆ, ಅವಮಾನಗಳನ್ನೂ ಅವುಡುಗಟ್ಟಿ ಸಹಿಸಿಕೊಳ್ಳುವ ಅಪಾರ ಸಂಯಮ ಅವರಲ್ಲಿತ್ತು. ಶಿಕ್ಷಣ ವಂಚಿತರಾಗಿದ್ದ ಹೆಣ್ಮಕ್ಕಳಲ್ಲಿ  ಪ್ರಶ್ನಿಸುವ ಧೈರ್ಯವೂ ಕಡಿಮೆ ಇತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಪ್ರಶ್ನಿಸಿದ ಹೆಣ್ಮಕ್ಕಳಿದ್ದಾರೆ. ಅವರ ಸಂಖ್ಯೆ ಅಪರೂಪದ್ದಾಗಿದ್ದರೂ  ಅವರ ಪ್ರಶ್ನೆಯು ಆ ಬಳಿಕ ಸಮುದಾಯದಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನದಂಥ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ.  ಇದೊಂದು ಹಂತ. ಈ ಹಂತವನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಬೆಳವಣಿಗೆಯನ್ನು ನಾವು ಪರಾಮರ್ಶೆಗೆ ಒಡ್ಡಬೇಕು.
ಇದು ಮಾಧ್ಯಮ ಕ್ರಾಂತಿಯ ಕಾಲ. ಬೆರಳಿನ ತುದಿಯಲ್ಲೇ  ಇವತ್ತು ಎಲ್ಲವೂ ಇದೆ. ಮಾನವ ಸಹಜವಾಗಿ ಇರಬೇಕಾದ  ಸಂಯಮವನ್ನು ಬಹುತೇಕ ಧರಾಶಾಹಿಗೊಳಿಸಿದ್ದೇ  ಇಂದಿನ ಮಾಧ್ಯಮ ಕ್ರಾಂತಿ. ಮೊಬೈಲ್ ಎಂಬುದು ಚಟವಾಗಿ ಬಿಟ್ಟಿದೆ.  ಪ್ರತಿಯೊಬ್ಬರಿಗೂ ಐಡೆಂಟಿಟಿಯನ್ನು ಕೊಡಮಾಡಬಲ್ಲ ಶಕ್ತಿ ಇದಕ್ಕಿದೆ. ತನಗೇನು ಹೇಳಬೇಕು, ಯಾರೊಂದಿಗೆ ಹೇಳಬೇಕು, ಎಷ್ಟು  ಹೇಳಬೇಕು, ಹೇಗೆ ಹೇಳಬೇಕು ಇತ್ಯಾದಿಗಳನ್ನು ನಿರ್ಬಿಢೆಯಿಂದ ತೀರ್ಮಾನಿಸಿ ಅದನ್ನು ವ್ಯಕ್ತಗೊಳಿಸುವುದಕ್ಕೆ ಇವತ್ತು ಕಷ್ಟವಲ್ಲ.  ಆಯಿಷಾಳಂತೆ ಕಷ್ಟಪಟ್ಟವರು ಎರಡ್ಮೂರು ದಶಕಗಳ ಹಿಂದೆ ಖಂಡಿತ ಇದ್ದಿರಬಹುದು. ಆದರೆ, ಅವರಾರೂ ನಮ್ಮ ಗಮನದಲ್ಲಿರದೇ  ಇರಲು ಏಕೈಕ ಕಾರಣ- ಆಯಿಷಾಳಲ್ಲಿದ್ದಂತಹ ಸಂವಹನ ಮಾಧ್ಯಮ ಅವರಲ್ಲಿದ್ದಿರಲಿಲ್ಲ ಎಂಬುದು ಮಾತ್ರ. ಇದೇವೇಳೆ,
ಈ ಸಂವಹನ ಮಾಧ್ಯಮವು ಆಯಿಷಾರಂಥ ಕೋಟ್ಯಂತರ ಮಂದಿಯಿಂದ  ಸಹನೆಯೆಂಬ ಬಹುಮೂಲ್ಯ ಶಕ್ತಿಯನ್ನೂ  ಕಸಿದುಕೊಂಡಿದೆ. ಇವತ್ತಿನ ಪೀಳಿಗೆಗೆ ದೀರ್ಘ ಲೇಖನವೋ ಭಾಷಣವೋ ಪ್ರಬಂಧವೋ ಬೋರು ಬೋರು. ಅಂಥದ್ದನ್ನು ಮೆಚ್ಚದ  ಒಂದು ಪೀಳಿಗೆ ಇವತ್ತು ತಯಾರಾಗಿದ್ದರೆ ಅದರ ಹಿಂದೆ ಈ ಮೊಬೈಲು ಕೆಲಸ ಮಾಡಿದೆ. ಯುವ ಪೀಳಿಗೆಯಿಂದ ಸಂಯಮವನ್ನೇ  ಕಸಿದುಕೊಂಡು ಆ ಜಾಗದಲ್ಲಿ ಅಸಹನೆಯನ್ನು ಊರಿದೆ. ವಿವೇಚನೆಯಿಲ್ಲದೇ ನಿರ್ಧಾರ ಕೈಗೊಳ್ಳುವ, ಪ್ರತಿಕ್ರಿಯಿಸುವ, ಧುಮುಕುವ  ಪೀಳಿಗೆಯನ್ನು ತಯಾರು ಅದು ಮಾಡಿದೆ. ಆಯಿಷಾಳ ನಿರ್ಧಾರದಲ್ಲಿ ಇಂಥದ್ದೊಂದು ಸಾಧ್ಯತೆಯನ್ನು ಅಲ್ಲಗಳೆಯಲಾಗದು.  ಆತ್ಮಹತ್ಯೆಗಿಂತ ಹೊರತಾದ ಹಲವು ದಾರಿಗಳು ಮುಕ್ತವಾಗಿದ್ದರೂ ಆಕೆ ಅವನ್ನು ಆಯ್ಕೆ ಮಾಡಿಕೊಳ್ಳದೇ ಇರುವುದರಲ್ಲಿ ಈ  ಸಂಯಮರಾಹಿತ್ವಕ್ಕೆ ಪಾಲು ಇರಬಹುದು. ಹಾಗಂತ,
ಆತ್ಮಹತ್ಯೆಯನ್ನು ಉಲ್ಲೇಖಿಸಿಕೊಂಡು ಆಕೆ ಎತ್ತಿರುವ ಪ್ರಶ್ನೆ ಮತ್ತು ರವಾನಿಸಿರುವ ಸಂದೇಶವನ್ನು ನಗಣ್ಯವಾಗಿ ಕಾಣುವುದು  ಅತಿದೊಡ್ಡ ಪಾಪವಾಗಬಹುದು. ಆಕೆ ಪ್ರತಿಭಟನೆಯೊಂದನ್ನು ಸಲ್ಲಿಸಿ ಹೋಗಿದ್ದಾಳೆ. ಅದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿರುವ ದಾರಿ  ಸರಿಯೋ ತಪ್ಪೋ ಎಂಬುದರ ಆಚೆಗೆ ಆಕೆ ಎತ್ತಿರುವ ಪ್ರಶ್ನೆ ಸಮುದಾಯದಲ್ಲಿ ಚರ್ಚೆಗೊಳಗಾಗಬೇಕು. ಇಸ್ಲಾಮಿನಲ್ಲಿ ಅತಿ  ವಿಶಿಷ್ಟವಾದ ಮತ್ತು ಮಹಿಳಾ ಪರವಾದ ವಧುದನ ಎಂಬ ನಿಯಮವೊಂದಿದೆ ಎಂದು ವಾದಿಸುವುದರಿಂದ ‘ವಧು’ವಿನ ಸಂಕಟ  ಕೊನೆಯಾಗಲಾರದು. ನಿಯಮವೊಂದು ಜನಪರವೋ ಜನದ್ರೋಹಿಯೋ ಆಗುವುದು ಅದು ಕಟ್ಟುನಿಟ್ಟಾಗಿ ಜಾರಿಗೊಂಡಾಗ.  ವಧುಧನ ಅಥವಾ ಮಹ್ರ್ ವಧುವಿನ ಸೊತ್ತು. ವಧುವಿಗೆ ಈ ಮೊತ್ತವನ್ನು ಪಾವತಿಸುವ ಮೂಲಕ ವರನು ಆ ವಧುವನ್ನು ಜೋ ಪಾನವಾಗಿ ನೋಡಿಕೊಳ್ಳುವ, ಆಕೆಯ ಸಕಲ ಹಕ್ಕುಗಳನ್ನು ಗೌರವಿಸುವ ಮತ್ತು ತವರು ಮನೆಯಲ್ಲಿ ಏನೆಲ್ಲ ಸವಲತ್ತುಗಳಿದ್ದುವೋ  ಅವೆಲ್ಲವನ್ನೂ ತನ್ನ ಮನೆಯಲ್ಲೂ ಆಕೆಗೆ ಒದಗಿಸುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಇದೊಂದು ಬಲವಾದ ಕರಾರು. ಓರ್ವನು ತನ್ನ  ನಿಕಾಹ್‌ಗಿಂತ ಮೊದಲೇ ಈ ಮಹ್ರನ್ನು ತನ್ನ ವಧುವಿಗೆ ತಿಳಿಸಬೇಕು. ಅದನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಸ್ವಾತಂತ್ರ‍್ಯ  ಅವಳದ್ದು. ಆದರೆ,
ಇವತ್ತು ಮಹ್ರ್ ಪರಿಕಲ್ಪನೆ ದುರ್ಬಲವಾಗಿ ವರದಕ್ಷಿಣೆ ಬಲ ಪಡೆದಿರುವುದಕ್ಕೆ ಧಾರ್ಮಿಕ ಅಜ್ಞಾನವೊಂದೇ ಕಾರಣ ಅಲ್ಲ, ಧಾರ್ಮಿಕ  ವಿದ್ವಾಂಸರ ಅಖಚಿತ ನಿಲುವುಗಳಿಗೂ ಈ ಪಾಪದಲ್ಲಿ ಪಾಲಿದೆ. ವರದಕ್ಷಿಣೆಯನ್ನು ಖಂಡಿಸುವ ಮತ್ತು ವರದಕ್ಷಿಣೆಯ ಮದುವೆಯಲ್ಲಿ  ಪಾಲ್ಗೊಳ್ಳದೇ ಇರುವ ನಿಷ್ಠುರ ನಿಲುವನ್ನು ವಿದ್ವಾಂಸ ವಲಯ ಒಕ್ಕೊರಳಿನಿಂದ ಕೈಗೊಳ್ಳುತ್ತಿದ್ದರೆ ಈ ಪಿಡುಗು ಈ ಮಟ್ಟದಲ್ಲಿ  ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಮಸೀದಿ ಕಮಿಟಿಗಳ ನಿರ್ಲಕ್ಷ್ಯ  ಧೋರಣೆಗೂ ಈ ಪಾಪದಲ್ಲಿ ಪಾಲಿದೆ. ಸದ್ಯ ಸಮುದಾಯದ ಗುರಿ  ಏನೆಂದರೆ, ಆಗಿಹೋದ ಪಾಪಗಳಿಗೆ ದೇವನಲ್ಲಿ ಕ್ಷಮೆ ಯಾಚಿಸುತ್ತಾ ವರದಕ್ಷಿಣೆಯ ವಿರುದ್ಧ ಕಠಿಣ ನಿಲುವನ್ನು ಪ್ರತಿ ಮಸೀದಿಯ  ವಿದ್ವಾಂಸರೂ ಕೈಗೊಳ್ಳುವುದು.
ವರದಕ್ಷಿಣೆಯನ್ನು ಇವತ್ತು ನೇರವಾಗಿ ಕೇಳುವ ಪದ್ಧತಿಯಿಲ್ಲ. ನನ್ನ ಮಗಳಿಗೆ ಇಷ್ಟು ಚಿನ್ನ ಹಾಕಿರುವೆ ಅಥವಾ ನನ್ನ ಮಗನಿಗೆ  ಇಂತಿಂಥ  ಕಾರು ಇಷ್ಟ ಎಂಬಲ್ಲಿಂದ  ಹಿಡಿದು ಬೇರೆ ಬೇರೆ ಪರೋಕ್ಷ  ರೂಪದಲ್ಲಿ ಅದು ಜಾರಿಯಲ್ಲಿದೆ. ಇಂಥ ಸರ್ವ ಪಿಡುಗಿನ  ವಿರುದ್ಧವೂ ಪ್ರಬಲ ಹೋರಾಟ ಸಂಘಟಿಸಬೇಕಾದುದು ಬಹು ಅಗತ್ಯ. ಆಗಿ ಹೋದ ತಪ್ಪುಗಳನ್ನು ಮತ್ತೆ ಮತ್ತೆ ಕೆದಕುತ್ತಾ  ಗಾಯವನ್ನು ವ್ರಣವಾಗಿಸುವುದಕ್ಕಿಂತ ಮುಂದಿನ ದಿನಗಳ ಕಡೆಗೆ ಸಕಾರಾತ್ಮಕವಾಗಿ ಚಿಂತಿಸುವುದೇ ಇಂದಿನ ಅನಿವಾರ್ಯತೆ. ತಪ್ಪು  ಮಾನವ ಸಹಜ. ಅದರಲ್ಲಿ ಗಟ್ಟಿಯಾಗಿ ನಿಲ್ಲುವುದಷ್ಟೇ ಕ್ರೌರ್ಯ.
ಆಯಿಷಾಳ ಕೃತ್ಯವನ್ನು ವಿಮರ್ಶಿಸುವುದಕ್ಕಾಗಿ ನಮ್ಮ ಸಮಯ, ಧಾರ್ಮಿಕ ಜ್ಞಾನ, ಮೊಬೈಲ್ ಜಿಬಿಯನ್ನು ವ್ಯಯಿಸುವುದಕ್ಕಿಂತ ಆಕೆ  ಎತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ವ್ಯಯಿಸಿದರೆ ಸಮುದಾಯದ ಹೆಣ್ಮಕ್ಕಳ ಮತ್ತು ಹೆಣ್ಣು ಹೆತ್ತವರ ಪ್ರಾರ್ಥನೆ  ನಮ್ಮ ಮೇಲಿದ್ದೀತು.