Thursday, 5 December 2019

ಸಂಚು, ಪಿತೂರಿ, ದುರುದ್ದೇಶ, ಸಂವಿಧಾನ ವಿರೋಧಿ ಮತ್ತೂ...



ಅಸ್ಸಾಮ್‍ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ಆದೇಶಿಸಿದ್ದು ಸುಪ್ರೀಮ್ ಕೋರ್ಟು. ಆ ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡದ್ದೇ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್. ಅಲ್ಲದೇ, ಕೇಂದ್ರ ಸರಕಾರ ಮತ್ತು ಅಸ್ಸಾಮ್‍ನ ರಾಜ್ಯ ಸರಕಾರಗಳು ಈ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಇವೆರಡೂ ಬಿಜೆಪಿ ಸರಕಾರಗಳೇ. ಇಷ್ಟಿದ್ದೂ ಅಸ್ಸಾಮ್‍ನಲ್ಲಿ ಪುನಃ NRC ನಡೆಸಲಾಗುವುದು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಅರ್ಥವೇನು? ಅವರು ಏನನ್ನು ಬಯಸುತ್ತಿದ್ದಾರೆ? ಒಂದುವೇಳೆ, ಕೇಂದ್ರದಲ್ಲಿ ಅಥವಾ ಅಸ್ಸಾಮ್‍ನಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಇದ್ದಿರುತ್ತಿದ್ದರೆ NRC ಬಗೆಗಿನ ಅಪಸ್ವರವನ್ನು ಪರಾಮರ್ಶೆಗೆ ಒಡ್ಡಬಹುದಿತ್ತು. ಆದರೆ, ಅದಕ್ಕೂ ಈಗ ಆಸ್ಪದವಿಲ್ಲ. ಹೀಗಿರುವಾಗ, ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ನಿರ್ಗಮನದ ಬಳಿಕ ಅಮಿತ್ ಶಾ ಹೀಗೆ ಹೇಳಿರುವುದನ್ನು ಏನೆಂದು ಅರ್ಥೈಸಬೇಕು?
ಅಸ್ಸಾಮ್‍ನಲ್ಲಿ ಓಖಅಯ ಅಂತಿಮ ಪಟ್ಟಿ ಬಿಡುಗಡೆಗೊಂಡು ತಿಂಗಳುಗಳೇ ಕಳೆದಿವೆ. 19 ಲಕ್ಷ ಮಂದಿಯ ಪೌರತ್ವವನ್ನು ಅಮಾನತಿನಲ್ಲಿ ಇಡಲಾಗಿದೆ. ಇದೀಗ ಮತ್ತೆ ಅಸ್ಸಾಮ್‍ನಲ್ಲಿ NRC ಕೈಗೊಳ್ಳುವುದೆಂದರೆ, ಸುಪ್ರೀಮ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆದ NRCಯನ್ನು ಅಸಮರ್ಪಕ ಎಂದು ಘೋಷಿಸಿದಂತಲ್ಲವೇ? ಇದು ಸುಪ್ರೀಮ್ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ? ಅಮಿತ್ ಶಾ ಅವರು ಈ ಹೇಳಿಕೆಯನ್ನು ಕೊಡುವುದಕ್ಕೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಹುದ್ದೆಯಿಂದ ನಿರ್ಗಮಿಸುವವರೆಗೆ ಕಾದದ್ದೇಕೆ?
ಅಸ್ಸಾಮ್‍ನ NRCಗೆ ದೀರ್ಘ ಹಿನ್ನೆಲೆಯಿದೆ. ಬಾಂಗ್ಲಾ ಮತ್ತು ಅಸ್ಸಾಮ್‍ಗಳು 1947ರ ವರೆಗೆ ಜೊತೆಯಾಗಿಯೇ ಇದ್ದ ಭೂಪ್ರದೇಶ. ಭಾರತ ಎಂಬ ಒಂದೇ ದೇಶದ ಪ್ರದೇಶಗಳಾಗಿ ಅವು ಅಸ್ತಿತ್ವದಲ್ಲಿದ್ದುವು. ಕರುಳಬಳ್ಳಿ ಸಂಬಂಧದೊಂದಿಗೆ ಅಲ್ಲಿಯ ಜನರು ಬದುಕುತ್ತಿದ್ದರು. 1947ರಲ್ಲಿ ಭಾರತವು ಹೇಗೆ ಇಬ್ಭಾಗವಾಯಿತೋ ಮತ್ತು ಇಬ್ಭಾಗವಾದ ಭೂಮಿ ಹೇಗೆ ಪಾಕಿಸ್ತಾನವಾಗಿ ಗುರುತಿಸಿಕೊಂಡಿತೋ ಆ ಪಾಕಿಸ್ತಾನದಲ್ಲಿ ಈಗಿನ ಬಾಂಗ್ಲಾವೂ ಇತ್ತು. ಹಾಗಂತ, ಒಂದೇ ಆಗಿದ್ದ ಭೂಮಿಯನ್ನು ಭಾರತ-ಪಾಕ್ ಎಂದು ವಿಭಜಿಸಿದ ತಕ್ಷಣ, ಜನರ ನಡುವಿನ ಸಂಬಂಧಗಳು ವಿಭಜನೆಗೊಳ್ಳುವುದಕ್ಕೆ ಸಾಧ್ಯವಿಲ್ಲ. ಅಣ್ಣ ಭಾರತದಲ್ಲಾದರೆ ಅಕ್ಕ ಪಾಕಿಸ್ತಾನದಲ್ಲಿ. ತಂದೆ-ತಾಯಿ ಭಾರತದಲ್ಲಾದರೆ, ಮಕ್ಕಳು ಪಾಕಿಸ್ತಾನದಲ್ಲಿ. ಮಾವ ಪಾಕಿಸ್ತಾನದಲ್ಲೂ ಅಳಿಯ ಭಾರತದಲ್ಲೂ ಇರುವಂತಹ ಸ್ಥಿತಿಯೂ ನಿರ್ಮಾಣವಾಯಿತು. ಕೊನೆಗೆ ಪಾಕಿಸ್ತಾನದಲ್ಲಾದ ರಾಜಕೀಯ ಸಂಘರ್ಷದ ಫಲಿತಾಂಶವಾಗಿ ಆ ಭೂಮಿಯೂ ವಿಭಜನೆಗೊಂಡು ಬಾಂಗ್ಲಾದೇಶವೆಂಬ ಸ್ವತಂತ್ರ ರಾಷ್ಟ್ರ ನಿರ್ಮಾಣವಾಯಿತು. ಆಗಲೂ ಜನರ ನಡುವೆ ಇದೇ ರೀತಿಯ ವಿಭಜನೆಗಳು ನಡೆದುವು. ನಿಜವಾಗಿ,
ಈ  ವಿಭಜನೆ, ಸಂಘರ್ಷ, ರಾಜಕೀಯ ಸ್ವಾರ್ಥಗಳನ್ನೆಲ್ಲ ಜನರ ಬೇಡಿಕೆ ಎಂದು ಹೇಳುವಂತಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶಗಳಿದ್ದುವು. ನಾಯಕರ ಸ್ವಾರ್ಥಗಳಿದ್ದುವು. ಸಾಮ್ರಾಜ್ಯಶಾಹಿ ಕುತಂತ್ರಗಳಿದ್ದುವು. ಆದರೆ ಈ ಎಲ್ಲದರ ಅಡ್ಡಪರಿಣಾಮವನ್ನು ಬಡಪಾಯಿ ಜನರೇ ಅನುಭವಿಸಬೇಕಾಯಿತು. ಅವರು ಸಂಘರ್ಷ ಭರಿತ ಪಾಕ್ ಮತ್ತು ಬಾಂಗ್ಲಾದಿಂದ ತಾವು ಈ ಹಿಂದೆ ವಾಸಿಸಿದ್ದ ಭೂಮಿಗೇ ಮರಳಿ ಬಂದರು. ಅಸ್ಸಾಮ್‍ನಲ್ಲಿರುವ ತಮ್ಮ ಬಂಧುಗಳು, ನೆರೆಕರೆಯವರೊಂದಿಗೆ ಸಹಜವಾಗಿ ಸೇರಿಕೊಂಡರು. ಭೂಮಿಗೆ ಬೇಲಿ ಬಿದ್ದಿದ್ದರೂ ಸಂಬಂಧಗಳಿಗೆ ಬೇಲಿ ಹಾಕಲು ಭೂಮಿಯನ್ನು ತುಂಡು ಮಾಡಿದವರಿಗೆ ಸಾಧ್ಯವಿರಲಿಲ್ಲ. ಆದರೆ,
ಈ ವಲಸೆ ಪ್ರಕ್ರಿಯೆಯು ಅಭೂತಪೂರ್ವ ಮಟ್ಟದಲ್ಲಿ ನಡೆದಾಗ ಮತ್ತು ಅಸ್ಸಾಮ್‍ನ ಜನಸಂಖ್ಯಾ ಲೆಕ್ಕಾಚಾರವನ್ನೇ ಬುಡಮೇಲುಗೊಳಿಸುವ ಭೀತಿ ವ್ಯಕ್ತವಾದಾಗ ಚಳವಳಿ ಹುಟ್ಟಿಕೊಂಡಿತು. ವಲಸಿಗರ ವಿರುದ್ಧ ಸ್ಥಳೀಯರ ಪ್ರತಿಭಟನೆ ಪ್ರಾರಂಭವಾಯಿತು. ಇವರೊಂದಿಗೆ ರಾಜಕೀಯವೂ ಸೇರಿಕೊಂಡು ಒಟ್ಟು ವಾತಾವರಣವೇ ಕಲುಷಿತಗೊಳ್ಳುವ ಸೂಚನೆ ಸಿಕ್ಕಿತು. ಇದರ ಪರಿಣಾಮವಾಗಿ 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಒಪ್ಪಂದಕ್ಕೆ ಬಂದುವು. 1971 ಮಾರ್ಚ್ 25ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಮತ್ತು ಆ ಬಗ್ಗೆ ಯಾರಲ್ಲಿ ದಾಖಲೆ ಪತ್ರಗಳು ಇವೆಯೋ ಅವರು ಭಾರತೀಯರು ಮತ್ತು ಉಳಿದವರು ಗಡೀಪಾರಿಗೆ ಅರ್ಹರು ಎಂದು ಒಪ್ಪಂದದಲ್ಲಿ ನಿರ್ಧರಿಸಲಾಯಿತು. ಅದನ್ನೇ ಆಧರಿಸಿ ಅಸ್ಸಾಮ್‍ನಲ್ಲಿ NRC ನಡೆದಿದೆ. ಸುಪ್ರೀಮ್ ಕೋರ್ಟೇ ಇದಕ್ಕೆ ನೇತೃತ್ವವನ್ನು ನೀಡಿದೆ. ಆದರೆ, ಇಷ್ಟೆಲ್ಲ ನಡೆದೂ ಈಗ ಪುನಃ ಅಸ್ಸಾಮ್‍ನಲ್ಲಿ NRC ನಡೆಸುವುದೆಂದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಇದೆ ಅನ್ನುವುದು ಸ್ಪಷ್ಟ. ಈ ದುರುದ್ದೇಶವನ್ನು ಅಮಿತ್ ಶಾ ಅಡಗಿಸಿಯೂ ಇಲ್ಲ. ‘ಪೌರತ್ವ ತಿದ್ದುಪಡಿ ಮಸೂದೆ’(CAB)ಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಿಕೊಂಡ ಬಳಿಕ ಅಸ್ಸಾಮ್‍ನಲ್ಲಿ ಮತ್ತು ಇಡೀ ದೇಶದಲ್ಲೂ NRC ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಎಂಬುದು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಖಾತರಿಪಡಿಸುವ ವ್ಯವಸ್ಥೆ. 2014ರ ಕೊನೆಯವರೆಗೆ ಬಾಂಗ್ಲಾ, ಪಾಕ್, ಅಫಘಾನ್‍ನಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಈ ಮಸೂದೆಯ ಉದ್ದೇಶ. ಈ ಮೇಲಿನ ಮೂರೂ ರಾಷ್ಟ್ರಗಳು ಮುಸ್ಲಿಮ್ ಬಹುಸಂಖ್ಯಾತವಾಗಿರುವುದರಿಂದ ಅಲ್ಲಿಂದ ಬಂದಿರುವ ಮುಸ್ಲಿಮರಿಗೆ ಈ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಿದ್ದರೆ ಬೌದ್ಧ ಬಹುಸಂಖ್ಯಾತವಾಗಿರುವ ಮ್ಯಾನ್ಮಾರ್ ನಿಂದ ಭಾರತಕ್ಕೆ ಬಂದ ಮುಸ್ಲಿಮರಿಗೆ ಯಾಕೆ ಈ ಪೌರತ್ವವನ್ನು ನೀಡಬಾರದು ಅನ್ನುವ ಪ್ರಶ್ನೆಗೆ ಈ ಸರಕಾರ ತೃಪ್ತಿದಾಯಕ ಉತ್ತರವನ್ನು ಈವರೆಗೂ ನೀಡಿಲ್ಲ. ನಿಜವಾಗಿ,
ಪೌರತ್ವ ತಿದ್ದುಪಡಿ ಮಸೂದೆ (CAB)ಯೇ ಸಂವಿಧಾನ ವಿರೋಧಿ. ಸಂವಿಧಾನದ 14ನೇ ಪರಿಚ್ಛೇದವು ನೀಡುವ ಸಮಾನತೆ ಮತ್ತು ಸಮಾನ ಸಂರಕ್ಷಣೆ ಎಂಬ ಖಾತರಿಯನ್ನು ಇದು ಸಂಪೂರ್ಣ ಉಲ್ಲಂಘಿಸುತ್ತದೆ. ಮುಸ್ಲಿಮರನ್ನು ಗುರಿ ಮಾಡುವುದೇ ಈ ಮಸೂದೆಯ ಉದ್ದೇಶ ಅನ್ನುವುದು ಸುಲಭವಾಗಿಯೇ ಗೊತ್ತಾಗುತ್ತದೆ. ಸಂವಿಧಾನ ವಿರೋಧಿ ಮಸೂದೆಯೊಂದನ್ನು ಹಿಡಿದುಕೊಂಡು ದೇಶದಾದ್ಯಂತ NRCಗೆ ಹೊರಡುವುದು ಬಹುತ್ವ ವಿರೋಧಿ, ಅತಾರ್ಕಿಕ ಮತ್ತು ಮನುಷ್ಯ ವಿರೋಧಿ. ಅಸ್ಸಾಮ್‍ನಲ್ಲಿ ಮರು NRCಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದೇ ಈ ಪ್ರಕ್ರಿಯೆ ಎಷ್ಟು ದೋಷಪೂರ್ಣ ಅನ್ನುವುದನ್ನು ಹೇಳುತ್ತದೆ. ಅಸ್ಸಾಮ್‍ನ ಅಂತಿಮ ಪೌರತ್ವ ಪಟ್ಟಯಿಂದ ಹೊರಗಿರುವ 19 ಲಕ್ಷದಲ್ಲಿ ಸುಮಾರು 13 ಲಕ್ಷ ಮಂದಿ ಹಿಂದೂ ವಲಸಿಗರು ಎಂಬುದು ಬಹಿರಂಗವಾಗಿದೆ. ಇವರೆಲ್ಲರನ್ನೂ ದೇಶರಹಿತರು ಎಂದು ಘೋಷಿಸಿಬಿಟ್ಟರೆ ತನ್ನ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಗುಲೀತು ಎಂಬ ಭಯದಿಂದ ಬಿಜೆಪಿಯು ಮರು ಓಖಅಗೆ ಮನಸು ಮಾಡಿದೆ. ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುವ ದೃಷ್ಟಿಯಿಂದ ಮೊದಲು ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಬಳಿಕ ಈ NRCಗೆ ಅದು ಮುಂದಾಗುವ ಸೂಚನೆ ನೀಡಿದೆ. ಕೇವಲ ಅಸ್ಸಾಮ್‍ನಲ್ಲಿ ಮಾತ್ರ ಮರು NRC ಮಾಡುವುದರಿಂದ ವ್ಯಕ್ತವಾಗಬಹುದಾದ ಟೀಕೆಗಳನ್ನು ತಪ್ಪಿಸುವುದಕ್ಕಾಗಿ ಇಡೀ ಭಾರತದಲ್ಲೇ NRC ಮಾಡಲಾಗುವುದು ಎಂಬ ಹೇಳಿಕೆಯನ್ನು ಅವರು ಕೊಟ್ಟಂತಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಒತ್ತಡವನ್ನು ಮೀರುವ ತಂತ್ರ. ದೇಶದಾದ್ಯಂತ NRC ಮಾಡುವಾಗ ಸಹಜವಾಗಿಯೇ ಅಸ್ಸಾಮ್‍ನಲ್ಲೂ NRC ಮಾಡಲಾಗುತ್ತದೆ ಎಂದು ಹೇಳಿ ಸುಪ್ರೀಮ್‍ನಲ್ಲಿ ದಕ್ಕಿಸಿಕೊಳ್ಳುವುದಕ್ಕೆ ಹೂಡಿರುವ ಸಂಚು. ನಿಜವಾಗಿ,
ದೇಶದಾದ್ಯಂತ NRC ಎಂಬುದೇ ಒಂದು ದುರುದ್ದೇಶದ ನಡೆ. ಪೌರತ್ವ ತಿದ್ದುಪಡಿ ಮಸೂದೆಯಂತೂ ಸಂವಿಧಾನ ವಿರೋಧಿ ಮತ್ತು ಸಮಾಜ ವಿರೋಧಿ. ಅಂದಹಾಗೆ, ಅಸ್ಸಾಮ್‍ನ NRCಗೆ ಸುಪ್ರೀಮ್ ಕೋರ್ಟೇ ಒಪ್ಪಿಕೊಂಡಿರುವ 1971 ಮಾರ್ಚ್ 25 ಎಂಬ ಅಂತಿಮ ದಿನಾಂಕವಾದರೂ (Cut off date) ಇದೆ. ಆದರೆ ಇಡೀ ದೇಶಕ್ಕೆ ಸಂಬಂಧಿಸಿ ಇಂಥ ದಿನಾಂಕವನ್ನು ನಿರ್ಧರಿಸುವುದು ಹೇಗೆ? ಯಾವ ರಾಜ್ಯಕ್ಕೆ ಯಾವ ದಿನಾಂಕ? ಅದರ ಮಾನದಂಡ ಏನು? ಇದು ಸುಲಭ ಅಲ್ಲ. ಕೇಂದ್ರದ ಈ ನಿರ್ಧಾರದಲ್ಲಿ ಪ್ರಾಮಾಣಿಕತೆಯೂ ಇಲ್ಲ.

Thursday, 28 November 2019

ಮಹಾರಾಷ್ಟ್ರ: ಸಿದ್ಧಾಂತ-ವಿಚಾರಧಾರೆಗಳೆಲ್ಲ ಮಣ್ಣು-ಮಸಿ ಎಂದು ಅರ್ಥವೇ?



ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯು ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ.
1. ತದ್ವಿರುದ್ಧ ವಿಚಾರಧಾರೆಯುಳ್ಳ ಪಕ್ಷಗಳು ಅಧಿಕಾರಕ್ಕಾಗಿ ಜೊತೆಗೂಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?
2. ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಆಯುಷ್ಯ ಎಷ್ಟು ಸಮಯ?
ಅಜಿತ್ಮ ಪವಾರ್ ರನ್ನು ಸೆಳೆದು ಸರಕಾರ ರಚಿಸಿದ ಬಿಜೆಪಿ ನಡೆ ಎಷ್ಟು ನೈತಿಕ?
ಹಾರಾಷ್ಟ್ರದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ವಿಚಿತ್ರ ಮತ್ತು ನಂಬಲಸಾಧ್ಯವಾದದ್ದು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯು ಎರಡು ಮೈತ್ರಿಕೂಟಗಳ ನಡುವಿನ ಹೋರಾಟವಾಗಿತ್ತು. ಬಿಜೆಪಿ ಮತ್ತು ಶಿವಸೇನೆಯದ್ದು ಒಂದು ಕೂಟವಾದರೆ ಕಾಂಗ್ರೆಸ್ ಮತ್ತು ಎನ್‍ಸಿಪಿಯದ್ದು ಇನ್ನೊಂದು ಕೂಟ. ನಿಜವಾಗಿ, ಇವೆರಡೂ ಬರೇ ಮೈತ್ರಿಕೂಟಗಳಷ್ಟೇ ಅಲ್ಲ, ಎರಡು ವಿಚಾರಧಾರೆ ಮತ್ತು ಸಿದ್ಧಾಂತದ ಪ್ರತಿನಿಧಿಗಳಾಗಿಯೂ ಗುರುತಿಸಿಕೊಂಡಿದ್ದುವು. ಬಿಜೆಪಿ ಮತ್ತು ಶಿವಸೇನೆಯು ಹಿಂದುತ್ವ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುವ ಮೈತ್ರಿಕೂಟವಾದರೆ, ಕಾಂಗ್ರೆಸ್-ಎನ್‍ಸಿಪಿಗಳು ಸೆಕ್ಯುಲರ್ ವಿಚಾರಧಾರೆಯನ್ನು ನೆಚ್ಚಿಕೊಂಡ ಮೈತ್ರಿಕೂಟ. ಈ ನಾಲ್ಕೂ ಪಕ್ಷಗಳು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆಯನ್ನು ಎದುರಿಸಿದ್ದುವು. ಮತದಾರರು ಶಿವಸೇನಾ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದರು. ಸೆಕ್ಯುಲರ್ ಮೈತ್ರಿಕೂಟವನ್ನು ತಿರಸ್ಕರಿಸಿದರು. ಇದು ಅತ್ಯಂತ ಸ್ಪಷ್ಟ. ಆದರೆ,
ಆ ಬಳಿಕ ಮಹಾರಾಷ್ಟ್ರದಲ್ಲಿ ನಡೆದಿರುವುದು ದಂಗುಬಡಿಸುವ ರಾಜಕೀಯ ಬೆಳವಣಿಗೆ. ಶಿವಸೇನೆಯು ತನ್ನ ಕಟು ಹಿಂದುತ್ವ ಸಿದ್ಧಾಂತವನ್ನು ತೊರೆಯದೆಯೇ ಮತ್ತು ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವ ಸೂಚನೆಯನ್ನು ನೀಡದೆಯೇ ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಜೊತೆಸೇರಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸಿತು. ಮಾತುಕತೆ ನಡೆಸಿತು ಮತ್ತು ಬಹುತೇಕ ಅದು ಕೈಗೂಡುವ ಸಾಧ್ಯತೆಯೂ ಇದೆ. ಹಾಗಂತ, ಬಿಜೆಪಿಯೊಂದಿಗಿನ ಸಂಬಂಧವನ್ನು ಶಿವಸೇನೆ ಕಡಿದುಕೊಂಡಿರುವುದಕ್ಕೆ ಸಿದ್ಧಾಂತ ಕಾರಣ ಅಲ್ಲ. ಬಿಜೆಪಿಗಿಂತಲೂ ಕಟುವಾದ ಹಿಂದುತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷ ಶಿವಸೇನೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದುದು ತನ್ನ ಕಾರ್ಯಕರ್ತರು ಎಂದು ಅದು ಹೆಮ್ಮೆಯಿಂದ ಹೇಳುತ್ತದೆ. ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರ ಅತ್ಯಂತ ಘಾತಕ ರೂಪದ್ದು ಅನ್ನುವುದನ್ನು ಶ್ರೀಕೃಷ್ಣ ಆಯೋಗ ಸ್ಪಷ್ಟಪಡಿಸಿದೆ. ಬಾಳಾಠಾಕ್ರೆಯನ್ನು ಅದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಮರಾಠಿ ಅಸ್ಮಿತೆಯನ್ನು ಎತ್ತಿ ಹಿಡಿದು ಮರಾಠೇತರರನ್ನು ಹೊರದಬ್ಬುವ ಅಭಿಯಾನ ಕೈಗೊಂಡ ಕರಾಳ ಇತಿಹಾಸವೂ ಶಿವಸೇನೆಗಿದೆ. ಹಾಗಂತ,
ಶಿವಸೇನೆಯ ಈ ರಾಜಕೀಯ ಸಿದ್ಧಾಂತ ಮತ್ತು ವಿಚಾರಧಾರೆಯ ಕುರಿತು ಬಿಜೆಪಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಈ ಸಿದ್ಧಾಂತದ ಪ್ರಬಲ ವಿರೋಧಿಗಳು. ಆದ್ದರಿಂದಲೇ ಕಾಂಗ್ರೆಸ್-ಎನ್‍ಸಿಪಿ ಜೊತೆಸೇರಿ ಶಿವಸೇನೆಯು ರಚಿಸುವ ಸರಕಾರ ಎಷ್ಟು ನೈತಿಕ ಅನ್ನುವ ಪ್ರಶ್ನೆ ಮುಖ್ಯವಾಗುವುದು. ಸರಕಾರ ರಚಿಸದಂತೆ ಬಿಜೆಪಿಯನ್ನು ತಡೆಯುವ ಏಕೈಕ ಉದ್ದೇಶದಿಂದ ರಚಿತವಾಗಿರುವ ಈ ಮೈತ್ರಿಕೂಟ ಎಲ್ಲಿಯವರೆಗೆ ಸುರಕ್ಷಿತ? ಎನ್‍ಸಿಪಿ ಮತ್ತು ಕಾಂಗ್ರೆಸ್ ಎರಡೂ ಕೂಡ ಬಿಜೆಪಿ-ಶಿವಸೇನಾ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಅಖಾಡದಲ್ಲಿವೆ. ಹೀಗಿರುವಾಗ, ಈ ಮೈತ್ರಿಯಿಂದ ನಾಗರಿಕರ ಮೇಲೆ ಆಗುವ ಪರಿಣಾಮ ಏನು? ಈ ಪಕ್ಷಗಳ ಕಾರ್ಯಕರ್ತರು ಈ ಬೆಳವಣಿಗೆಯನ್ನು ಹೇಗೆ ಜೀರ್ಣಿಸಿಕೊಳ್ಳಬಹುದು? ‘ಸಮಾನ ಕನಿಷ್ಠ ಕಾರ್ಯಕ್ರಮವನ್ನು ರಚಿಸಿ ತಾವು ಅಧಿಕಾರ ಚಲಾಯಿಸುತ್ತೇವೆ’ ಎಂದು ಈ ಮೈತ್ರಿಕೂಟ ಹೇಳಿಕೊಂಡಿದ್ದರೂ ಅದು ಅಷ್ಟು ಸುಲಭ ಅಲ್ಲ. ಸಮಾನ ಕನಿಷ್ಠ ಕಾರ್ಯಕ್ರಮವಿದ್ದೂ ಸಮಾನ ವಿಚಾರಧಾರೆಯ ಪಕ್ಷಗಳೇ ಪರಸ್ಪರ ಕಚ್ಚಾಡಿಕೊಂಡು ಅಧಿಕಾರದಂದ ನಿರ್ಗಮಿಸಿರುವಾಗ ಈ ಅಸಮಾನ ವಿಚಾರಧಾರೆಯ ಕೂಡಾವಳಿಗೆ ದೀರ್ಘ ಆಯುಷ್ಯವನ್ನು ನಿರೀಕ್ಷಿಸುವುದು ಹೇಗೆ? ಈ ಮೈತ್ರಿಕೂಟವನ್ನು ಅಧಿಕಾರದಿಂದ ಹೊರದಬ್ಬುವುದಕ್ಕೆ ಬಿಜೆಪಿ ಸಹಜವಾಗಿಯೇ ತಂತ್ರಗಳನ್ನು ಹೆಣೆಯಬಹುದು. ಹಿಂದುತ್ವಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಶಿವಸೇನೆಯನ್ನು ಸೈದ್ಧಾಂತಿಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳನ್ನು ಹೆಣೆಯಬಹುದು. ಆಗೆಲ್ಲ ಸಮಾನ ಕನಿಷ್ಠ ಕಾರ್ಯಕ್ರಮಕ್ಕೆ ಅಂಟಿಕೂರಲು ಶಿವಸೇನೆ ಪ್ರಯತ್ನಿಸಿದರೆ ಕಾರ್ಯಕರ್ತರನ್ನು ಕಳಕೊಳ್ಳಬೇಕಾಗುತ್ತದೆ. ಆಗ ಶಿವಸೇನೆಯನ್ನು ಅಧಿಕಾರ ದಾಹಿಯಂತೆ ಮತ್ತು ಹಿಂದುತ್ವ ವಿರೋಧಿಯಂತೆ ಬಿಂಬಿಸಲು ಬಿಜೆಪಿಗೆ ಸುಲಭವಾಗುತ್ತದೆ. ಇದೇವೇಳೆ, ಕಾಂಗ್ರೆಸ್-ಎನ್‍ಸಿಪಿಯನ್ನು ಮುಜುಗರಕ್ಕೆ ತಳ್ಳುವುದೂ ಕಷ್ಟ ಅಲ್ಲ. ಈ ಎರಡೂ ಪಕ್ಷಗಳ ಸೆಕ್ಯುಲರ್ ನೀತಿಗೆ ಸವಾಲಾಗಬಲ್ಲ ಬೆಳವಣಿಗೆಯನ್ನು ಮಹಾರಾಷ್ಟ್ರದಲ್ಲಿ ನಿರ್ಮಿಸುವುದು ಬಿಜೆಪಿಗೆ ಸುಲಭ. ಅತ್ತ ಶಿವಸೇನೆಯನ್ನು ಒತ್ತಡಕ್ಕೆ ಸಿಲುಕಿಸಿದಂತೆಯೇ ಇತ್ತ ಎನ್‍ಸಿಪಿ-ಕಾಂಗ್ರೆಸನ್ನು ಒತ್ತಡಕ್ಕೆ ಸಿಲುಕಿಸಿ ಅವುಗಳಿಗೆ ಇದ್ದ ಬದ್ಧ ಸಾರ್ವಜನಿಕ ಬೆಂಬಲವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಬಹುದು. ಆದ್ದರಿಂದಲೇ,
ಶಿವಸೇನೆ, ಎನ್‍ಸಿಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸುವುದರಿಂದ ಬಿಜೆಪಿಗೆ ಆರಂಭಿಕ ಹಿನ್ನಡೆ ಉಂಟಾಗಬಹುದೇ ಹೊರತು ಶಾಶ್ವತ ಅಲ್ಲ. ಅದು ಶಿವಸೇನೆಯನ್ನು ವಚನಭ್ರಷ್ಟವಾಗಿ ಮತ್ತು ಸಿದ್ಧಾಂತಕ್ಕೆ ಇರಿದ ಪಕ್ಷವಾಗಿ ಬಿಂಬಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಜೆಡಿಎಸ್‍ನೊಂದಿಗೆ ಸೇರಿ ಸರಕಾರ ರಚಿಸಿದ ಬಳಿಕ ಹೇಗೆ ಆ ಇಡೀ ಪ್ರಕ್ರಿಯೆಯನ್ನು ತನ್ನ ಪರವಾಗಿ ಬಿಜೆಪಿ ತಿರುಗಿಸಿಕೊಂಡಿತೋ ಅಂಥದ್ದೇ ಒಂದು ಸ್ಥಿತಿ ಮಹಾರಾಷ್ಟ್ರದಲ್ಲೂ ನಿರ್ಮಾಣವಾಗಬಹುದು. ಜೆಡಿಎಸ್ ಅನ್ನು ವಚನಭ್ರಷ್ಟ ಪಕ್ಷಎಂದು ಘೋಷಿಸಿಯೇ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ.
ಕಾಂಗ್ರೆಸ್-ಎನ್‍ಸಿಪಿಯೊಂದಿಗೆ ಶಿವಸೇನೆಯು ಮೈತಿ ಮಾಡಿಕೊಳ್ಳುವುದೆಂದರೆ, ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಂತೆ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ನಡುವೆ ಎತ್ತಿ ಹೇಳಬಹುದಾದ ಸೈದ್ಧಾಂತಿಕ ಭಿನ್ನತೆಗಳೇ ಇಲ್ಲ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಡುವೆಯೂ ಇದೇ ಸ್ಥಿತಿ ಇದೆ. ರಾಜಕೀಯ ಮತ್ತು ಸ್ಥಳೀಯ ಕಾರಣಗಳು ಎನ್‍ಸಿಪಿ ಮತ್ತು ಜೆಡಿಎಸ್‍ಗಳ ಹುಟ್ಟಿಗೆ ಕಾರಣವೇ ಹೊರತು ಸೆಕ್ಯುಲರ್ ಸಿದ್ಧಾಂತದ ಮೇಲಿನ ದ್ವೇಷವಲ್ಲ. ಆದರೆ ಶಿವಸೇನೆ ಹಾಗಲ್ಲ. ಅದು ಹುಟ್ಟಿಕೊಂಡದ್ದೇ ಸೆಕ್ಯುಲರ್ ಸಿದ್ಧಾಂತವನ್ನು ವಿರೋಧಿಸಿಕೊಂಡು. ಸಂವಿಧಾನ ಪ್ರತಿಪಾದಿಸುವ ಬಹುತ್ವದ ಭಾರತದೊಂದಿಗೆ ಅದಕ್ಕೆ ತಕರಾರಿದೆ. ಅದು ಇವತ್ತು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದರೆ ಅದಕ್ಕೆ ಅದರ ಅಸ್ತಿತ್ವದ ಭಯ ಕಾರಣವೇ ಹೊರತು ಸಿದ್ಧಾಂತ ಅಲ್ಲ. ಬಿಜೆಪಿ ನಿಧಾನವಾಗಿ ತನ್ನನ್ನು ಆಪೋಶನ ಪಡಕೊಳ್ಳುತ್ತಿದೆ ಅನ್ನುವ ಭಯ ಅದನ್ನು ಆವರಿಸಿದೆ. ತನ್ನ ಪಕ್ಷದ ಭದ್ರ ಕೋಟೆಗಳನ್ನು ಮತ್ತು ಬೆಂಬಲಿಗರನ್ನು ಬಿಜೆಪಿ ನಿಧಾನಕ್ಕೆ ತನ್ನ ತೆಕ್ಕೆಗೆ ಪಡೆದುಕೊಳ್ಳುತ್ತಿದೆ ಅನ್ನುವ ಸಂಕಟ ಅದರದು. ಇದು ಹೀಗೆಯೇ ಮುಂದುವರಿದರೆ ಶಿವಸೇನೆಯ ಬದಲು ಜನರು ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಾರು ಎಂಬುದು ಅದಕ್ಕೆ ಅರಿವಾಗಿದೆ. ಅಲ್ಲದೇ, ತನ್ನ ಜೊತೆ ಮೈತ್ರಿ ಮಾಡಿಕೊಂಡ ಯಾವ ಸ್ಥಳೀಯ ಪಕ್ಷವನ್ನೂ ಬಿಜೆಪಿ ಬೆಳೆಯಲು ಬಿಟ್ಟಿಲ್ಲ. ಇದನ್ನು ಮನಗಂಡೇ ಶಿವಸೇನೆ ಬಿಜೆಪಿಯನ್ನು ತೊರೆದು ಹೊಸ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಇದು ಅನುಕೂಲ ಸಿಂಧು ಮೈತ್ರಿಯೇ ಹೊರತು ಇನ್ನೇನಲ್ಲ. ಕಾಂಗ್ರೆಸ್-ಎನ್‍ಸಿಪಿಗಳು ಶಿವಸೇನೆಯೊಂದಿಗೆ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ. ಶಿವಸೇನೆಗೆ ಸರಕಾರ ರಚನೆಯ ಅನಿವಾರ್ಯತೆ ಇರಬಹುದು. ಆದರೆ ಎನ್‍ಸಿಪಿ-ಕಾಂಗ್ರೆಸ್‍ಗೆ ಆ ಅನಿವಾರ್ಯತೆ ಇಲ್ಲ. ಮತದಾರರು ಈ ಮೈತ್ರಿಕೂಟವನ್ನು ಬೆಂಬಲಿಸಿಯೂ ಇಲ್ಲ. ಅಂದಹಾಗೆ,
ಅಧಿಕಾರ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಎದುರಾದಾಗ ಸಿದ್ಧಾಂತ ಮುಖ್ಯವಾಗಬೇಕೇ ಹೊರತು ಅಧಿಕಾರ ಅಲ್ಲ. ಒಂದುವೇಳೆ, ಇವತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರತಳ್ಳುವುದಕ್ಕಾಗಿ ಶಿವಸೇನೆಯ ಜೊತೆ ಕಾಂಗ್ರೆಸ್-ಎನ್‍ಸಿಪಿಗಳು ಕೈಜೋಡಿಸಬಹುದಾದರೆ ನಾಳೆ ಶಿವಸೇನೆಯನ್ನು ಹೊರಗಿಡುವುದಕ್ಕಾಗಿ ಬಿಜೆಪಿ ಜೊತೆ ಕೈ ಜೋಡಿಸಲೂ ಕಾಂಗ್ರೆಸ್-ಎನ್‍ಸಿಪಿಗಳು ಒಂದಾಗಬಹುದು. ಹಾಗಿದ್ದ ಮೇಲೆ ಜನಸಾಮಾನ್ಯರ ಮುಂದಿರುವ ಆಯ್ಕೆಯಾದರೂ ಏನು? ಸಿದ್ಧಾಂತ, ವಿಚಾರಧಾರೆ ಇತ್ಯಾದಿಗಳೆಲ್ಲ ಮಣ್ಣು-ಮಸಿ ಆಗಲಾರದೇ?

ಬಾಬರಿ: ಆಕ್ಷೇಪ ಮುಕ್ತ ತೀರ್ಪು ಸಾಧ್ಯವಿತ್ತೇ?



ವಿಶೇಷ ಸಂಪಾದಕೀಯ
ಅಯೋಧ್ಯೆಯ 2.77 ಎಕರೆ ನಿವೇಶನದ ವಿವಾದವನ್ನು ಸುಪ್ರೀಮ್ ಕೋರ್ಟು ಇತ್ಯರ್ಥಪಡಿಸಿರುವ ರೀತಿಗೆ ವ್ಯಕ್ತವಾಗಿರುವ ಆಕ್ಷೇಪಗಳನ್ನು ತಕ್ಷಣದ  ಆವೇಶವೆಂದೋ ಭಾವುಕತೆಯೆಂದೋ ಕಡೆಗಣಿಸಿ  ಬಿಡುವುದು ಸಲ್ಲ. ಹಾಗಂತ, ಉಭಯ ಕಕ್ಷಿಗಳನ್ನೂ ಸಮಾನವಾಗಿ ತೃಪ್ತಿಪಡಿಸಬಲ್ಲ ಇತ್ಯರ್ಥ ಸಾಧ್ಯವಿತ್ತೇ ಎಂಬ ಪ್ರಶ್ನೆ ಸಹಜವಾದುದು. ಒಂದುವೇಳೆ, ಅದು ಸಾಧ್ಯವಿರುತ್ತಿದ್ದರೆ 2010ರಲ್ಲಿ ಅಲಹಾಬಾದ್  ಹೈಕೋರ್ಟ್ ನೀಡಿದ ತೀರ್ಪಿಗೆ ಪ್ರಕರಣ ಮುಕ್ತಾಯವನ್ನು ಕಾಣಬೇಕಿತ್ತು. ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಕ್ಕೆ ಈ ವಿವಾದಿತ 2.77 ಎಕರೆ ಭೂಮಿಯನ್ನು ಅಲಹಾಬಾದ್  ಹೈಕೋರ್ಟ್ ಸಮಾನವಾಗಿ ಹಂಚುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸಿತ್ತು. ಆಗಲೂ ಆಕ್ಷೇಪ ವ್ಯಕ್ತವಾಗಿತ್ತು. ಮೂರೂ ಕಕ್ಷಿಗಳೂ ಈ ಇತ್ಯರ್ಥ ಕ್ರಮವನ್ನು ಒಪ್ಪಿರಲಿಲ್ಲ. ಹಾಗಂತ, 
ಈಗಿನ ತೀರ್ಪೂ ಆಕ್ಷೇಪ ರಹಿತವೋ ವಿವಾದ ರಹಿತವೋ ಆಗಿಲ್ಲ. ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಅನೇಕ ದಾಖಲೆಗಳನ್ನು  ಪರಿಶೀಲಿಸಿದ್ದಾರೆ. ಕ್ರಿಸ್ತಪೂರ್ವ ರಾಮಾಣಯದ ಕಾಲದಿಂದ ಹಿಡಿದು ಮೀರ್ ಬಾಖಿ 1528ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿರುವಲ್ಲಿವರೆಗೆ, ಅಲ್ಲಿಂದ ಪ್ರಥಮ ಹಿಂದೂ-ಮುಸ್ಲಿಮ್ ಘರ್ಷಣೆ ನಡೆದ 1558ರ ವರೆಗೆ, ಅಲ್ಲಿಂದ 1949ರಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳನ್ನು ಬಾಬರಿ ಮಸೀದಿಯ ಒಳಗಡೆ ಸ್ಥಾಪಿಸಿದ ಘಟನೆಯ ವರೆಗೆ ಮತ್ತು ಅಲ್ಲಿಂದ 1992ರ ಮಸೀದಿ ಧ್ವಂಸ ಕೃತ್ಯದ ವರೆಗೆ  ಎಲ್ಲವನ್ನೂ ಪರಿಶೀಲಿಸಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ನಿವೇಶನವು ಸರ್ಕಾರಿ ಭೂಮಿ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಬಾಬರಿ ಮಸೀದಿಯನ್ನು ಕಟ್ಟಲು ದೇವಾಲಯವನ್ನು  ಕೆಡವಲಾಗಿದೆಯೆಂಬ ವಾದವನ್ನು ಭಾರತೀಯ ಪುರಾತತ್ವ ಇಲಾಖೆಯು ದೃಢಪಡಿಸಿಲ್ಲ ಎಂಬುದು ಈ ವೇಳೆ ಸ್ಪಷ್ಟವಾಗಿದೆ. ಅದೇವೇಳೆ, ಮಸೀದಿ ಇರುವ ಸ್ಥಳ ತಮಗೆ ಮಾತ್ರ ಸೇರಿತ್ತೆಂಬುದನ್ನು  ನಿರೂಪಿಸಲು ಸುನ್ನಿ ವಕ್ಫ್ ಮಂಡಳಿ ವಿಫಲವಾಗಿರುವುದನ್ನೂ ನ್ಯಾಯಾಲಯ ಕಂಡುಕೊಂಡಿದೆ. ಹಾಗೆಯೇ, ವಿವಾದಿತ ನಿವೇಶನದ ಹೊರ ಆವರಣವು ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲು ಹಿಂದೂ ಕಕ್ಷಿದಾರರು ಯಶಸ್ವಿಯಾಗಿರುವುದನ್ನು ನ್ಯಾಯಾಧೀಶರು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಅನ್ನುವುದಕ್ಕೆ ಪುರಾವೆಗಳಿರುವುದೂ ಗೊತ್ತಾಗಿದೆ.  ಬಹುಶಃ, ಮುಖ್ಯ ಪ್ರಶ್ನೆ ಎದುರಾಗುವುದೂ ಇಲ್ಲೇ. ಬಾಬರಿ ಮಸೀದಿಯ ಮೂರು ಗುಮ್ಮಟಗಳ ಪೈಕಿ ಮಧ್ಯದ ಗುಮ್ಮಟದ ಕೆಳಗಡೆ ಶ್ರೀರಾಮನ ಜನನವಾಗಿದೆಯೆಂಬುದು ಹಿಂದೂ ಕಕ್ಷಿಗಳ ವಾದ. 1992ರಲ್ಲಿ ಮಸೀದಿಯನ್ನು ಧ್ವಂಸಗೈದು ಶ್ರೀರಾಮದ ವಿಗ್ರಹವನ್ನು ಈ ಗುಂಬಜದ ಕೆಳಗಡೆ ಸ್ಥಾಪಿಸಲಾಗಿತ್ತು. ಆದರೆ, 
ಈ ನಿರ್ದಿಷ್ಟ ಜಾಗದಲ್ಲೇ ಶ್ರೀರಾಮನ ಜನನವಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸುಲಭ ಸಾಧ್ಯವಲ್ಲ. ಬಹುಶಃ, ಅಲಹಾಬಾದ್ ಹೈಕೋರ್ಟು 2010ರಲ್ಲಿ ಈ ನಿವೇಶನವನ್ನು ಮೂರು ಪಾಲು ಮಾಡಿ ಹಂಚಲು ನಿರ್ಧರಿಸಿದುದಕ್ಕೆ ಇದುವೇ ಕಾರಣ ಇರಬೇಕು. ಸುಪ್ರೀಮ್  ಕೋರ್ಟ್‍ನ ಮುಂದೆಯೂ ಇದೇ ಸಮಸ್ಯೆ ಎದುರಾಗಿರುವಂತಿದೆ. ಆದ್ದರಿಂದ, ಅದು ಸತ್ಯಾಂಶ, ಸಾಕ್ಷ್ಯ, ಮೌಖಿಕ ವಾದಗಳನ್ನಷ್ಟೇ ತನ್ನ ತೀರ್ಪಿಗೆ ಆಧಾರವಾಗಿ ಬಳಸಿಕೊಳ್ಳದೇ ಇತಿಹಾಸ, ಪುರಾತತ್ವ ಶಾಸ್ತ್ರ,  ಧರ್ಮ ಮತ್ತು ನಂಬಿಕೆಗಳನ್ನೂ ಆಧಾರವಾಗಿ ಪರಿಗಣಿಸಿರುವಂತಿದೆ. ಅದಕ್ಕಾಗಿ ವಾಲ್ಮೀಕಿ ರಾಮಾಯಣವನ್ನು ಅದು ಪರಿಶೀಲಿಸಿದೆ. ಸ್ಕಂದ ಪುರಾಣದ ವೈಷ್ಣವ ಕಾಂಡದಲ್ಲಿ ಆಧಾರವನ್ನು ಹುಡುಕಿದೆ.  ವೈಷ್ಣವ ಕಾಂಡದ ಶ್ಲೋಕಗಳನ್ನು ಎತ್ತಿಕೊಂಡು ರಾಮನ ಜನನ ಸ್ಥಾನವು ಯಾವ ದಿಕ್ಕಿನಲ್ಲಿ ಬರುತ್ತದೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಒಂದು ರೀತಿಯಲ್ಲಿ, ವಿವಾದಿತ ನಿವೇಶನವನ್ನು ನಿರ್ದಿಷ್ಟವಾಗಿ  ಇಂಥವರಿಗೇ ಎಂದು ಹಂಚಲು ಅಸಾಧ್ಯವೆಂದು ಅನಿಸಿದಾಗ ಹಿಂದೂ ಧರ್ಮೀಯರ ನಂಬಿಕೆ, ವಿಶ್ವಾಸ, ಆಚರಣೆಗಳನ್ನು ಹೆಚ್ಚುವರಿ ಪುರಾವೆಗಳಾಗಿ ಇಲ್ಲಿ ಅವಲಂಬಿಸುವ ಅನಿವಾರ್ಯತೆ ಎದುರಾಯಿತು  ಅನ್ನುವ ಭಾವ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ. ಹಿಂದೂಗಳ ನಂಬಿಕೆ ಮತ್ತು ವಿಶ್ವಾಸಗಳನ್ನು ತೀರ್ಪಿನ ವೇಳೆ ಪರಿಗಣಿಸಲಾಗಿರುವುದನ್ನು ತೀರ್ಪಿನಲ್ಲೇ ಹೇಳಿರುವುದರಿಂದ ಇದು ಸ್ಪಷ್ಟ. ನಿಜವಾಗಿ, 
ಸುಪ್ರೀಮ್  ಕೋರ್ಟಿನ ತೀರ್ಪು 2019 ನವೆಂಬರ್ 9ರ ಶನಿವಾರದಂದು ಹುಟ್ಟಿಕೊಂಡು ಅಂದೇ ಅಂತ್ಯ ಕಾಣುವ ಒಂದಲ್ಲ. ಈ ತೀರ್ಪು ಮುಂದೆ ಇಂಥದ್ದೇ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮತ್ತೆ  ಮತ್ತೆ ಉಲ್ಲೇಖಕ್ಕೆ ಒಳಗಾಗಬಹುದು. ನ್ಯಾಯಾಲಯದಲ್ಲಿ ನಡೆಯುವ ವಾದಗಳ ಸಂದರ್ಭದಲ್ಲಿ ಈ ತೀರ್ಪು ಆಧಾರವಾಗಿ ಬಳಸಲ್ಪಡಬಹುದು. ಅಲ್ಲದೆ, ಯಾವುದೇ ವಾದವನ್ನು ಮಾಡುವಾಗ ಅದಕ್ಕೆ ಪೂರಕವಾಗಿ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವುದು ಕೋರ್ಟು-ಕಲಾಪಗಳಲ್ಲಿ ಸಾಮಾನ್ಯ ರೂಢಿ. ಹೀಗಿರುವಾಗ,  ನಂಬಿಕೆ-ವಿಶ್ವಾಸಗಳ ಆಧಾರದಲ್ಲಿ ಕೋರ್ಟಿನಲ್ಲಿ ವಾದಿಸುವವರಿಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಆಧಾರವಾಗಿ ಬಳಕೆಯಾಗದೇ? ಅಂಥ ಸಂದರ್ಭದಲ್ಲಿ ನ್ಯಾಯಾಲಯ ಏನು ಮಾಡಬಹುದು. ಅಂದಹಾಗೆ, 
ಬಾಬರಿ ಮಸೀದಿ ಇರುವ 2.77 ಎಕರೆ ನಿವೇಶನವೊಂದೇ ಈ ದೇಶದ ಏಕೈಕ ವಿವಾದಿತ ಪ್ರದೇಶ ಅಲ್ಲ. ಬಾಬರಿಯ ಮೇಲೆ ಹಕ್ಕು ಸ್ಥಾಪಿಸಿ ಕೋರ್ಟು ಮೆಟ್ಟಿಲೇರಿದ ಮಂದಿ ಇಂಥ ಇನ್ನಿತರ  ಸ್ಥಳಗಳ ಪಟ್ಟಿಗಳನ್ನೂ ಹೊಂದಿದ್ದಾರೆ. ಈ ಹಿಂದೆ ಅಸಂಖ್ಯ ಬಾರಿ ಅದನ್ನು ದೇಶದ ಮುಂದೆ ಸ್ಪಷ್ಟಪಡಿಸಿಯೂ ಇದ್ದಾರೆ. ಇವಲ್ಲದೇ, ಬಹುಧರ್ಮೀಯ ಈ ದೇಶದ ಉದ್ದಕ್ಕೂ ಇಂಥ ಇನ್ನಷ್ಟು ವಿವಾದಗಳು ಅನೇಕ ಇರಬಹುದು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮ ಈ ದೇಶವನ್ನು ಪ್ರವೇಶಿಸುವ ಮೊದಲೇ ಈ ದೇಶದಲ್ಲಿ ಅನೇಕ ವಿವಾದಗಳಿದ್ದುವು. ಬೌದ್ಧರು, ಜೈನರು ಇಲ್ಲಿದ್ದರು. ಅವರಿಗೂ  ಇಲ್ಲಿನ ಇತರ ಪಂಥಗಳಿಗೂ ನಡುವೆ ಘರ್ಷಣೆ ನಡೆದಿರುವುದು ಮತ್ತು ಬೌದ್ಧರು ನಿಧಾನಕ್ಕೆ ನೆಲೆ ಕಳಕೊಂಡಿರುವುದೂ ಇಲ್ಲಿನ ಇತಿಹಾಸವಾಗಿ ಗುರುತಿಗೀಡಾಗಿದೆ. ಅದೇಷ್ಟೋ ಬಸದಿಗಳು, ಬೌದ್ಧ  ವಿಹಾರಗಳು ಇನ್ನಾರದೋ ಪಾಲಾಗಿವೆ. ಮಾತ್ರವಲ್ಲ, ಅವು ಇನ್ನೊಂದು ಧರ್ಮದ ಆರಾಧನಾ ಕ್ಷೇತ್ರವಾಗಿ ಪರಿವರ್ತನೆಗೊಂಡದ್ದೂ ಇದೆ. ಒಂದುವೇಳೆ, ಸುಪ್ರೀಮ್ ಕೋರ್ಟಿನ ಈ ತೀರ್ಪನ್ನೇ  ಆಧಾರವಾಗಿಸಿಕೊಂಡು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸಗಳ ಹೆಸರಲ್ಲಿ ಹಕ್ಕು ಸ್ಥಾಪನೆಗೆ ಹೊರಡುವ ಪ್ರಯತ್ನಗಳು ಉಂಟಾದರೆ ಅದನ್ನು ಹೇಗೆ ನಿಭಾಯಿಸಬಹುದು? ಅಂದಹಾಗೆ,
ಈ ವಿಷಯದಲ್ಲಿ ಸುಪ್ರೀಮ್ ಕೋರ್ಟು ಯಾವ ತೀರ್ಪನ್ನು ನೀಡುತ್ತಿದ್ದರೂ ಅದು ಆಕ್ಷೇಪ ಮುಕ್ತವಾಗಿರುತ್ತಿರಲಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳುತ್ತಲೇ ಹಿಂದೂಗಳ ನಂಬಿಕೆ, ವಿಶ್ವಾಸವನ್ನು ತೀರ್ಪಿಗೆ  ಆಧಾರವಾಗಿಸಿಕೊಂಡಿರುವ ಕೋರ್ಟಿನ ನಡೆಯು ಇತ್ಯರ್ಥದ ಒಟ್ಟು ಗೌರವಕ್ಕೆ ಕುಂದುಂಟು ಮಾಡಿದೆ ಎನ್ನಬೇಕಾಗುತ್ತದೆ. ಅಷ್ಟಕ್ಕೂ, ಈ ತೀರ್ಪು ಆಕ್ಷೇಪ ಮುಕ್ತವೋ ಎಂಬ ಜಿಜ್ಞಾಸೆಯ ಆಚೆಗೆ ದೀರ್ಘ ವಿವಾದವೊಂದರಿಂದ ದೇಶವನ್ನು ಮುಕ್ತಗೊಳಿಸಿದ ಸಂದರ್ಭವೆಂಬ ನೆಲೆಯಲ್ಲಿ ಸುಪ್ರೀಮ್ ಕೋರ್ಟಿನ ಈ ತೀರ್ಪನ್ನು ಪರಿಗಣಿಸಬೇಕಾಗಿದೆ. ನಿಜವಾಗಿ, 
ಸುಪ್ರೀಮ್ ಕೋರ್ಟು ನೀಡುವ ಯಾವುದೇ ತೀ ರ್ಪು ಗೌರವಾರ್ಹವಾದುದು ಮತ್ತು ನ್ಯಾಯಾಂಗದ ದೃಷ್ಟಿಯಲ್ಲಿ ಅಂತಿಮವಾದುದು. ಇದರರ್ಥ ತೀರ್ಪು ಪ್ರಶ್ನಾತೀತ ಎಂದಲ್ಲ. ಪ್ರಶ್ನಿಸುತ್ತಲೇ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಬೇಕಾದ ಸಾಂವಿಧಾನಿಕ  ಪ್ರಬುದ್ಧತೆಯನ್ನು ಭಾರತೀಯರು ತೋರಬೇಕಾಗಿದೆ ಮತ್ತು ಬಾಬರಿ ತೀರ್ಪುಗೆ ಸಂಬಂಧಿಸಿ ಅದನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಭಾರತೀಯರು ತೋರಿಸಿಯೂ ಇದ್ದಾರೆ. ಬಾಬರಿ ತೀರ್ಪಿನ ಬಳಿಕ ಈ  ದೇಶದ ಮುಸ್ಲಿಮರು ಮತ್ತು ಹಿಂದೂಗಳು ತೋರಿದ ಸಂಯಮ, ಕಾನೂನಿಗೆ ವ್ಯಕ್ತಪಡಿಸಿದ ನಿಷ್ಠೆ ಮತ್ತು ತೋರಿದ ಶಾಂತಿಪ್ರಿಯತೆಯು ಶ್ಲಾಘನಾರ್ಹವಾದುದು. ತೀರ್ಪು ತನ್ನ ಪರವಿದ್ದರೂ  ವಿರುದ್ಧವಿದ್ದರೂ ತಾನು ತೀರ್ಪನ್ನು ಗೌರವಿಸುತ್ತೇನೆ ಅನ್ನುವ ಪ್ರಬುದ್ಧ ಸಂದೇಶವನ್ನು ಈ ದೇಶದ ಮುಸ್ಲಿಮರು ರವಾನಿಸಿದ್ದಾರೆ. ವಿಜಯೋತ್ಸವ ಆಚರಿಸದೇ ಹಿಂದೂಗಳೂ ಸಂಯಮ ಪಾಲಿಸಿದ್ದಾರೆ.  ಇದುವೇ ಈ ದೇಶದ ಸೌಂದರ್ಯ. ಇದು ಸದಾಕಾಲ ಉಳಿಯಲಿ. ಅಶಾಂತಿ ಅಳಿಯಲಿ.

Monday, 11 November 2019

ಸಫಾ ಬೆಟ್ಟದಿಂದ ಅರಫಾ ಮೈದಾನದ ವರೆಗೆ



ಯಶಸ್ಸಿನ ದಾರಿ ಯಾವುದು?
ಈ ಪ್ರಶ್ನೆ ಸದಾ ಕಾಲ ಜೀವಂತ. ಜಗತ್ತಿನ ಶ್ರೇಷ್ಠ ಸಂಶೋಧಕರಲ್ಲಿ ಅನೇಕರು ಪ್ರವಾದಿ ಮುಹಮ್ಮದ್(ಸ)ರನ್ನು ಮೆಚ್ಚಿಕೊಂಡಿದ್ದು- ಹೃಸ್ವ ಅವಧಿಯಲ್ಲಿ ಅವರು ಸಾಧಿಸಿದ ಯಶಸ್ಸಿಗಾಗಿ. ಹಾಗಂತ, ಪ್ರವಾದಿವರ್ಯರಿಗೆ(ಸ) ಅನಾಯಾಸವಾಗಿ ಈ ಯಶಸ್ಸು ಒದಗಿ ಬಂದಿತ್ತು ಎಂದಲ್ಲ. ಅವರು ಯಶಸ್ಸನ್ನು ಹುಡುಕುತ್ತಾ ಹೊರಟರು. ಯಶಸ್ಸಿನ ತುತ್ತ ತುದಿಯನ್ನು ತಲುಪುದಕ್ಕೆ ಅಂದಿನ ಕಾಲದ ಸರ್ವ ವಿಧಾನಗಳನ್ನೂ ಬಳಸಿಕೊಂಡರು. ಇದರಲ್ಲಿ 3 ಪ್ರಮುಖ ಅಂಶಗಳಿವೆ:
1. ಸಂವಹನ, 2. ಮಾನವೀಯ ಕಾಳಜಿ, 3. ಒಪ್ಪಂದ ಅಥವಾ ಮೈತ್ರಿ.
ಸತ್ಯದ ಕಡೆಗೆ ಕರೆ ನೀಡುವವರಾಗಿ ನಿಮ್ಮನ್ನು ಕಳುಹಿಸಿದ್ದೇನೆ (133: 45-46) ಎಂದು ಪವಿತ್ರ ಕುರ್ ಆನ್ ಪ್ರವಾದಿಯವರನ್ನು ಪರಿಚಯಿಸಿದೆಯೇ ಹೊರತು ಆ ಸತ್ಯವನ್ನು ತಲುಪಿಸುವುದಕ್ಕೆ ಅವರು  ಯಾವೆಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಪಟ್ಟಿ ಮಾಡಿ ಹೇಳಲಿಲ್ಲ. ಅದು ಪ್ರವಾದಿಯವರ ಸ್ವಾತಂತ್ರ್ಯವಾಗಿತ್ತು. ಅಂದಿನ ಕಾಲದಲ್ಲಿ ಸತ್ಯದ ಕರೆಯನ್ನು ತಲಪಿಸುವುದಕ್ಕೆ ಯಾವೆಲ್ಲ  ಮಾಧ್ಯಮಗಳಿದ್ದುವೋ ಅವೆಲ್ಲವನ್ನೂ ಪ್ರವಾದಿ(ಸ) ಬಳಸಿದರು. ಸಫಾ ಬೆಟ್ಟ ಅದರ ಒಂದು ತುದಿಯಾದರೆ, ಮಕ್ಕಾದ 14 ಸಣ್ಣ ಪುಟ್ಟ ಮಾರುಕಟ್ಟೆಗಳು ಅದರ ಇನ್ನೊಂದು ತುದಿ. ರಾತ್ರಿ ಭೋಜನದ  ಮೂಲಕ, ಕಾಬಾದ ಬಾಗಿಲಿಗೆ ಸಂದೇಶ ನೇತು ಹಾಕುವ ಮೂಲಕ ಮತ್ತು ಮಕ್ಕಾಕ್ಕೆ ಬರುವ ವ್ಯಾಪಾರಿ ತಂಡಗಳ ಜೊತೆಗೆ ಸಂವಾದದ ಮೂಲಕ... ಹೀಗೆ ಅಂದಿನ ಲಭ್ಯ ಮಾಧ್ಯಮಗಳನ್ನು ಪ್ರವಾದಿ(ಸ)  ತನ್ನ ಗುರಿಯೆಡೆಗೆ ತಲುಪುವ ಪರಿಕರಗಳಾಗಿ ಬಳಸಿಕೊಂಡರು. ಇದೇ ವೇಳೆ, ಇನ್ನೊಂದು ಪ್ರಶ್ನೆಯೂ ಎದುರಾಯಿತು. ಸತ್ಯದ ಕರೆ ಕೊಡುವಾತ ಹೇಗಿರಬೇಕು ಮತ್ತು ಆತನ ಐಡೆಂಟಿಟಿ ಏನಿರಬೇಕು  ಎಂಬುದೇ ಆ ಪ್ರಶ್ನೆ. ಪ್ರವಾದಿ ಮುಹಮ್ಮದ್(ಸ)ರ ಯಶಸ್ಸಿನ ಗುಟ್ಟು ಇರುವುದೂ ಇಲ್ಲೇ. ತನ್ನ ಸತ್ಯವನ್ನು ಒಪ್ಪಿಕೊಂಡವರು ಮತ್ತು ಒಪ್ಪಿಕೊಳ್ಳದವರು ಎಂಬ ನೆಲೆಯಲ್ಲಿ ಸಮಾಜವನ್ನು ವಿಭಜಿಸಿ, ತನ್ನ  ಕರೆಯನ್ನು ಒಪ್ಪಿಕೊಂಡವರಿಗೆ ಮಾತ್ರ ನ್ಯಾಯ, ಕರುಣೆ, ಮಾನವೀಯ ಕಾಳಜಿಯನ್ನು ವಿತರಿಸುವ ಸಣ್ಣತನವನ್ನು ಪ್ರವಾದಿ ಎಂದೂ ತೋರಲಿಲ್ಲ. ಅವರು ಪ್ರದರ್ಶಿಸಿದ ಮಾನವೀಯ ಕಾಳಜಿ  ಅಮೋಘವಾದುದು. ಅವರು ದರಿದ್ರರ ಪರ, ಅನಾಥರ ಪರ (ಪವಿತ್ರ ಕುರ್ ಆನ್: 107) ಧ್ವನಿಯೆತ್ತಿದರು. ಅಬೂಜಹಲ್ ಮಕ್ಕಾದಲ್ಲಿ ಅತ್ಯಂತ ಪ್ರಬಲನಾಗಿದ್ದಾಗ ಮತ್ತು ತಾನು ಮಕ್ಕಾದಲ್ಲಿ ಏನೇನೂ  ಆಗಿಲ್ಲದಾಗಲೂ ಪ್ರವಾದಿಯವರು(ಸ) ನ್ಯಾಯ ವಂಚಿತರ ಪರ ನಿಂತರು. ತನಗೆ ಸಲ್ಲಬೇಕಾದ ಮೊತ್ತವನ್ನು ಅಬೂಜಹಲ್ ನೀಡುತ್ತಿಲ್ಲವೆಂದು ವ್ಯಕ್ತಿಯೋರ್ವನು ಬಂದು ಪ್ರವಾದಿಯವರ(ಸ) ಜೊತೆ  ದೂರಿಕೊಂಡಾಗ ಅವರು ತಕ್ಷಣ ಸ್ಪಂದಿಸಿದರು. ಅಬೂಜಹಲ್‍ನ ಬಳಿ ತೆರಳಿ ಹಣ ವಸೂಲಿ ಮಾಡಿಸಿದರು. ಹಾಗಂತ, ಹಾಗೆ ದೂರಿಕೊಂಡವ ಅವರ ಸತ್ಯದ ಕರೆಯನ್ನು ಸ್ವೀಕರಿಸಿದವನಾಗಿರಲಿಲ್ಲ. ಸತ್ಯದ  ಕರೆ ಕೊಡುವಾತ ದುರ್ಬಲರು, ದರಿದ್ರರು, ಹಕ್ಕು ವಂಚಿತರು ಮುಂತಾದವರ ಪರ ಅತ್ಯಂತ ಗಟ್ಟಿಯಾಗಿ ನಿಲ್ಲಬೇಕು ಮತ್ತು ಅವರ ಪರ ಬಹಿರಂಗವಾಗಿ ಮಾತಾಡಬೇಕು ಎಂಬುದು ಅವರ  ಇಂಗಿತವಾಗಿತ್ತು. ಇಂಥ ಸನ್ನಿವೇಶಗಳಲ್ಲಿ `ಸಂತ್ರಸ್ತರಿಂದ ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸಬಾರದು' (ಪವಿತ್ರ ಕುರ್ ಆನ್- 76: 9) ಎಂಬ ನಿಯಮವನ್ನು ಅವರು ಸ್ವಯಂ  ಹಾಕಿಕೊಂಡಿದ್ದರು. ಅವರ ಯಶಸ್ಸಿನಲ್ಲಿ ಈ ನಿಯಮಕ್ಕೆ ಬಹುದೊಡ್ಡ ಪಾತ್ರ ಇದೆ. ಅವರು ಸತ್ಯಕ್ಕೆ ವಿಧೇಯರಾಗಿರುವ ಜನಕೂಟವೊಂದನ್ನು ನಿರ್ಮಿಸ ಹೊರಟಿದ್ದರೇ ಹೊರತು ವ್ಯಕ್ತಿ ವಿಧೇಯತ್ವವನ್ನು  ತಿರಸ್ಕರಿಸಿದ್ದರು. ಬಡವರು, ದುರ್ಬಲರು, ಹಕ್ಕು ವಂಚಿತರು ಮತ್ತು ನ್ಯಾಯ ನಿರಾಕರಣೆಗೆ ಒಳಗಾದವರನ್ನೆಲ್ಲ ಅವರು ಆದರಿಸಿದರು. ಎಲ್ಲಿಯ ವರೆಗೆಂದರೆ, ಮದೀನಾದಲ್ಲಿ ವಿವಿಧ ಬುಡಕಟ್ಟು ಗುಂಪುಗಳೊಂದಿಗೆ ಸುಮಾರು 12 ರಷ್ಟು ಒಪ್ಪಂದಗಳನ್ನು ಮಾಡಿಕೊಂಡರು. ತನ್ನ ಸತ್ಯದ ಕರೆಯನ್ನು ಸ್ವೀಕರಿಸಲೇಬೇಕು ಮತ್ತು ಸ್ವೀಕರಿಸದೇ ಇರುವುದು ಯುದ್ಧಕ್ಕೆ ಕಾರಣವಾಗುತ್ತದೆ ಎಂಬುದು ಈ ಒಪ್ಪಂದಗಳ ಮೂಲಭೂತ ಷರತ್ತು ಆಗಿರಲಿಲ್ಲ. ಶಾಂತಿ, ನ್ಯಾಯ, ನೆಮ್ಮದಿಯ ಬದುಕನ್ನು ದೃಢಪಡಿಸಿಕೊಳ್ಳುವುದು ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ಪರಸ್ಪರ ಸಹಕಾರ ನೀಡುವುದು ಈ ಒಪ್ಪಂದಗಳ  ಮುಖ್ಯ ಉದ್ದೇಶವಾಗಿತ್ತು. ಸತ್ಯದ ಕರೆಗೆ ಸ್ಪಂದಿಸಬೇಕಾದರೆ ನ್ಯಾಯಪೂರ್ಣವಾದ ಮತ್ತು ಶಾಂತಿಯುತವಾದ ವಾತಾವರಣವೊಂದು ನೆಲೆಗೊಂಡಿರಬೇಕಾದುದು ಬಹಳ ಅಗತ್ಯ. ಪ್ರವಾದಿ(ಸ) ಅದನ್ನು ಚೆನ್ನಾಗಿ ಮನಗಂಡಿದ್ದರು. ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಆದ್ದರಿಂದ,
ಮಕ್ಕಾ ಪ್ರವೇಶಿಸಿದ ಯಶಸ್ವೀ ಪ್ರವಾದಿಯನ್ನಷ್ಟೇ ನಾವಿಂದು ನೋಡಬೇಕಾದುದಲ್ಲ. ಅರಫಾ ಬೆಟ್ಟವೇರಿದ ಪ್ರವಾದಿಯನ್ನೂ ನಾವು ನೋಡಬೇಕು. ಮದೀನದಲ್ಲಿ ಬುಡಕಟ್ಟುಗಳೊಂದಿಗೆ ಒಪ್ಪಂದ  ಮಾಡಿಕೊಂಡ ಪ್ರವಾದಿಯನ್ನೂ ನೋಡಬೇಕು. ಅರಫಾ ಮೈದಾನದಲ್ಲಿ ಅವರು ಮಾಡಿದ ವಿದಾಯ ಭಾಷಣವನ್ನೂ ನೋಡಬೇಕು. ಇಲ್ಲೆಲ್ಲಾ ಒಟ್ಟು ಮೊತ್ತವಾಗಿ ಸಿಗುವ ಪ್ರವಾದಿಯೇ ನಿಜವಾದ ಪ್ರವಾದಿ(ಸ). ಅಲ್ಲಿಂದ ಪಡಕೊಳ್ಳುವ ಸ್ಫೂರ್ತಿಯೇ ಯಶಸ್ಸಿಗೆ ದಾರಿ.

Thursday, 31 October 2019

RCEP: ತನ್ನ ಬೆಂಬಲಿಗರಿಗೇ ಕೈ ಕೊಟ್ಟರೇ ಪ್ರಧಾನಿ? ಅಡಿಕೆ ಬೆಳೆಗಾರರಲ್ಲಿ ಆತಂಕ



ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರೇ ಹೆಚ್ಚಾಗಿರುವ ಅಡಿಕೆ ಬೆಳೆಗಾರರಲ್ಲಿ ಮಂಕು ಕವಿದಿದೆ. ಇದಕ್ಕೆ ಕಾರಣ- ಆಗ್ನೇಯ ಏಷ್ಯಾದ 16 ದೇಶಗಳ ನಡುವೆ ಆಗಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವೆಂಬ (RCEP) ಒಪ್ಪಂದ. ಈ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲವಾದರೂ ಈ ಒಪ್ಪಂದದ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಾದ ಮತ್ತು ಒಪ್ಪಂದದ ಜೊತೆ ನಿಲ್ಲಲೇಬೇಕಾದ ಮುಲಾಜಿನ ಧೋರಣೆಯೊಂದನ್ನು ಕೇಂದ್ರ ಸರಕಾರ ಪ್ರದರ್ಶಿಸುತ್ತಿದೆ. ದಕ್ಷಿಣೇಶ್ಯ ರಾಷ್ಟ್ರಗಳ ಸಂಘಟನೆ(ASEAN)ಯಲ್ಲಿರುವ 10 ರಾಷ್ಟ್ರಗಳೂ ಸೇರಿದಂತೆ ಭಾರತ, ಚೀನಾ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಮುಕ್ತ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವ ಈ RCEP ಒಪ್ಪಂದವು ಒಂದುವೇಳೆ ಜಾರಿಯಾದರೆ, ಭಾರತದ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರಗಳ ಮೇಲೆ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಅಡಿಕೆ ಮಾರುಕಟ್ಟೆಗೆ ಈಗಾಗಲೇ ಬಿಸಿ ತಟ್ಟಿರುವುದು ಇದಕ್ಕೊಂದು ಪುರಾವೆ ಅಷ್ಟೇ. ನವೆಂಬರ್ 4ರಂದು ಥಾಯ್ಲೆಂಡ್‍ನ ಬ್ಯಾಂಕಾಕ್‍ನಲ್ಲಿ ಈ ರಾಷ್ಟ್ರಗಳ ನಾಯಕರುಗಳ ಸಭೆ ನಡೆಯಲಿದೆ. ಅದಕ್ಕಿಂತ ಮೊದಲು ಒಪ್ಪಂದದ ಕರಡು ರಚನೆಯಾಗಬೇಕಾಗುತ್ತದೆ. ನವೆಂಬರ್ 4ರ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬಂದು ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಈ 16 ರಾಷ್ಟ್ರಗಳಲ್ಲಿ ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರರಿರುವುದರಿಂದ ಒಂದುವೇಳೆ ಈ ಒಪ್ಪಂದ ಜಾರಿಗೆ ಬಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ವ್ಯತ್ಯಾಸವಾಗಬಹುದೆಂಬ ಅಂದಾಜೂ ಇದೆ. ನಿಜವಾಗಿ,
ಸಮಸ್ಯೆ ಇರುವುದು ಈ ಒಪ್ಪಂದ ಯಾವಾಗ ಜಾರಿಗೆ ಬರುತ್ತದೆ ಎಂಬುದರಲ್ಲಲ್ಲ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕುವುದಾದರೆ, ಆ ಸಹಿಯಿಂದಾಗಿ ಈ ದೇಶದ ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕಾ ಕ್ಷೇತ್ರದ ಮೇಲೆ ಅದು ತಂದೊಡ್ಡಬಹುದಾದ ಅಪಾಯಗಳನ್ನು ಎದುರಿಸಲು ಏನು ಮಾಡುತ್ತದೆ ಅನ್ನುವುದು. ಮುಖ್ಯವಾಗಿ RCEP ಎಂಬ ಪರಿಕಲ್ಪನೆಯ ಬಗ್ಗೆ ಮತ್ತು ಅದು ಪ್ರಸ್ತುತಪಡಿಸುವ ವ್ಯಾಪಾರ ನೀತಿಯ ಬಗ್ಗೆ ಜನಸಾಮಾನ್ಯರಿಗೆ ಇನ್ನೂ ಗೊತ್ತಿಲ್ಲ. ಅದನ್ನು ವಿವರಿಸಿಕೊಡುವ ಶ್ರಮಗಳೂ ದೊಡ್ಡ ಮಟ್ಟದಲ್ಲಿ ನಡೆದಿಲ್ಲ. ನವೆಂಬರ್ 4ಕ್ಕೆ ಇನ್ನಿರುವುದು ಕೆಲವೇ ದಿನಗಳು. ಈ ದಿನಗಳೊಳಗೆ RCEP ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುವ ಮತ್ತು ದೇಶವ್ಯಾಪಿ RCEP ಪರಿಕಲ್ಪನೆಯನ್ನು ಜನರಿಗೆ ಮುಟ್ಟಿಸುವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಕೇಂದ್ರ ಸರಕಾರ RCEPಗೆ ಸಹಿ ಹಾಕದೇ ಇರಬೇಕಾದರೆ ದೇಶೀಯವಾಗಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಬಲ ಚಳವಳಿಗಳು ನಡೆಯಬೇಕು. ಆ ಪರಿಕಲ್ಪನೆಯಲ್ಲಿರುವ ನಿಯಮ-ನಿರ್ದೇಶನಗಳು ಮತ್ತು ರೈತ ವಿರೋಧಿ ಷರತ್ತುಗಳ ಮೇಲೆ ಚರ್ಚೆ-ಸಂವಾದಗಳು ನಡೆಯಬೇಕು. ಸರಕಾರಕ್ಕೆ ಮನವಿ ಸಲ್ಲಿಕೆಯಾಗಬೇಕು. ಈ ಒಪ್ಪಂದದ ಪ್ರಕಾರ, ಒಪ್ಪಂದ ವ್ಯಾಪ್ತಿಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ ಭಾರೀ ಸುಂಕ ವಿನಾಯಿತಿಯನ್ನು ನೀಡಬೇಕಾಗುತ್ತದೆ. ಮುಖ್ಯವಾಗಿ, ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾಗಳಿಂದ ಆಮದಾಗುವ ವಸ್ತುಗಳಿಗೆ 86% ಸುಂಕ ವಿನಾಯಿತಿಯನ್ನು ನೀಡಬೇಕಾಗುತ್ತದೆ. ASEANನ 10 ರಾಷ್ಟ್ರಗಳು ಮತ್ತು ಜಪಾನ್, ಕೊರಿಯಾಗಳಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ 90% ರಿಯಾಯಿತಿ ನೀಡಬೇಕಾಗುತ್ತದೆ. ಮುಖ್ಯವಾಗಿ ಉಕ್ಕು ಇಂಜಿನಿಯರಿಂಗ್, ಕೆಮಿಕಲ್ ವಸ್ತುಗಳ ಸುಂಕವನ್ನು ಶೂನ್ಯಕ್ಕೆ ಇಳಿಸಬೇಕಾದ ಅನಿವಾರ್ಯತೆ ಇದೆ.
ಅಂದಹಾಗೆ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‍ಗಳು ಹೈನುತ್ಪನ್ನಕ್ಕೆ ಹೆಸರುವಾಸಿ. ಅಲ್ಲಿಂದ ಬಹುತೇಕ ಶೂನ್ಯ ಸುಂಕದೊಂದಿಗೆ ಹೈನುತ್ಪನ್ನಗಳು ಭಾರತಕ್ಕೆ ಲಗ್ಗೆ ಇಡುವುದೆಂದರೆ, ಹಾಲಿನಲ್ಲಿ ಹಾಲಾಹಲ ಸೃಷ್ಟಿಯಾಗುವುದೆಂದೇ ಅರ್ಥ. ಹಾಲು ಮತ್ತು ಹಾಲಿನ ಉತ್ಪನ್ನಗಳು ಈ ಎರಡು ರಾಷ್ಟ್ರಗಳಿಂದ ತೀರಾ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರಿಂದಾಗಿ ಸ್ಥಳೀಯ ಹೈನುದ್ಯಮದ ಮೇಲೆ ಅತಿ ಕೆಟ್ಟ ಪರಿಣಾಮ ಬೀರಲಿದೆ. ಈ ಹಿಂದೆ ಅಡಿಕೆ ಮಾರುಕಟ್ಟೆಯ ಮೇಲೆ ಇಂಥದ್ದೇ ಅಡ್ಡ ಪರಿಣಾಮ ಬಿದ್ದಿತ್ತು. ಅಡಿಕೆಯ ಬೆಲೆ ಕ್ವಿಂಟಾಲ್‍ಗೆ 1ಲಕ್ಷ ರೂಪಾಯಿಯಷ್ಟು ಏರಿಕೆಯಾದಾಗ ಸ್ಥಳೀಯ ವರ್ತಕರು ಶ್ರೀಲಂಕಾದಿಂದ ಅಡಿಕೆಯನ್ನು ಆಮದು ಮಾಡಲು ನಿರ್ಧರಿಸಿದರು. ಅಲ್ಲಿ 15 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಅಡಿಕೆ ದೊರೆಯುತ್ತಿತ್ತು. ಇದರಿಂದಾಗಿ ದೇಶೀಯ ಅಡಿಕೆಗೆ ಬೇಡಿಕೆ ಕುಸಿದು ರೈತರು ಕಂಗಾಲಾದರು. ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವು ಆಮದು ಅಡಿಕೆಗೆ ಸುಂಕವನ್ನು ಹೆಚ್ಚಿಸಿ ಅಡಿಕೆ ಧಾರಣೆಯಲ್ಲಿ ಸ್ಥಿರತೆಯನ್ನು ತರುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದೀಗ ಈ 16 ರಾಷ್ಟ್ರಗಳ ಪಟ್ಟಿಯಲ್ಲಿರುವ ಲಾವೋಸ್, ಇಂಡೋನೇಶ್ಯಾ ಮಲೇಶ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಬ್ರೂನೈ, ಕಾಂಬೋಡಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಅಡಿಕೆ ಬೆಳೆಯುವ ರಾಷ್ಟ್ರಗಳೂ ಇವೆ. ಮುಖ್ಯವಾಗಿ ಚೀನಾ ಮತ್ತು ಮ್ಯಾನ್ಮಾರ್ ಗ ಳು ಅಡಿಕೆ ಬೆಳೆಗೆ ಪ್ರಸಿದ್ಧವಾಗಿವೆ. ಹೀಗಿರುವಾಗ, ಮ್ಯಾನ್ಮಾರ್ ನಿಂದ ಅಗ್ಗದ ಬೆಲೆಗೆ ಅಥವಾ ಸುಂಕ ರಹಿತವಾಗಿ ಭಾರತದ ಮಾರುಕಟ್ಟೆಗೆ ದಾಳಿಯಿಡುವ ಅಡಿಕೆಯಿಂದ ಸ್ಥಳೀಯ ಅಡಿಕೆ ಬೆಳೆಗಾರರಿಗೆ ಸವಾಲು ಎದುರಾಗುವುದು ಖಂಡಿತ. ಈ ಭಯದಿಂದಾಗಿ ಕಳೆದ ವಾರವೇ ಅಡಿಕೆ ಧಾರಣೆಯಲ್ಲಿ ಕ್ವಿಂಟಲ್ ಒಂದಕ್ಕೆ 3 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದು ಒಪ್ಪಂದಕ್ಕಿಂತ ಮೊದಲೇ ಉಂಟಾದ ಸಂಚಲನೆ. ಮುಖ್ಯವಾಗಿ ದೇಶದಲ್ಲಿ ಬೆಳೆಯಲಾಗುವ ಒಟ್ಟು ಅಡಿಕೆಯ ಪೈಕಿ 60% ಅಡಿಕೆಯು ಕರ್ನಾಟಕವೊಂದರಲ್ಲೇ ಉತ್ಪಾದಿಸಲಾಗುತ್ತದೆ ಎಂಬ ಅಂಶವೂ ಇಲ್ಲಿ ಗಮನೀಯ. ರಾಜ್ಯದಲ್ಲಿ ಪ್ರತಿವರ್ಷ 4 ಟನ್ ಅಡಿಕೆ ಉತ್ಪಾದಿಸಲಾಗುತ್ತದೆ ಎಂಬ ಲೆಕ್ಕಾಚಾರವಿದೆ. ಅದರಲ್ಲೂ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಕೃಷಿ ಸಮೃದ್ಧವಾಗಿದೆ. ಆದ್ದರಿಂದ ರಾಜ್ಯದ ಜನಪ್ರತಿನಿಧಿಗಳು ಈ RCEP ಒಪ್ಪಂದದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಬೇಕು. ಹೈನುದ್ಯಮ ಮತ್ತು ಅಡಿಕೆ ಉದ್ಯಮಕ್ಕೆ ಮಾರಕವಾಗಬಹುದಾದ ಷರತ್ತುಗಳನ್ನು ಕರಡು ಪ್ರತಿಯಿಂದ ಕಿತ್ತು ಹಾಕುವುದಕ್ಕೆ ಮತ್ತು ಸ್ಥಳೀಯ ಕೃಷಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಹಾಗಂತ, ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಆಗುವ ಕೆಲಸ ಇದಲ್ಲ. ಹೈನು ಮತ್ತು ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಸಂಘಟಿಸಿ ಅವರಿಗೆ ಮುಂಬರುವ ಕರಾಳ ಪರಿಸ್ಥಿತಿಯನ್ನು ವಿವರಿಸಿಕೊಡಬಹುದಾದ ಜನ ಚಳವಳಿಗಳು ತುರ್ತಾಗಿ ನಡೆಯಬೇಕು. ಸಾಮಾಜಿಕ ಸಂಘಟನೆಗಳು ಮತ್ತು ತಜ್ಞರು ಈ ಕರಡು ಒಪ್ಪಂದದಲ್ಲಿರಬಹುದಾದ ರೈತ ವಿರೋಧಿ ಅಂಶಗಳನ್ನು ಎತ್ತಿ ಹೇಳಿ ಸಾರ್ವಜನಿಕರ ಗಮನ ಸೆಳೆಯಬೇಕು. ಅಮೇರಿಕವು RCEP ಒಪ್ಪಂದದಿಂದ ಚೀನಾವನ್ನು ಹೊರಗಿಟ್ಟ ಸೇಡನ್ನು ತೀರಿಸಲು ಚೀನಾದ ಮುತುವರ್ಜಿಯಿಂದ ಈ ಒಪ್ಪಂದ ಏರ್ಪಡಿಸಲಾಗುತ್ತಿದೆ ಎನ್ನಲಾಗುತ್ತದೆ. ಅಮೇರಿಕ ಮತ್ತು ಚೀನಾಗಳ ನಡುವೆ ವ್ಯಾಪಾರ ಬಿಕ್ಕಟ್ಟು ನಡೆಯುತ್ತಿರುವ ಈ ಹೊತ್ತಿನಲ್ಲೇ ಜಾರಿಯಾಗಲಿರುವ ಈ ಒಪ್ಪಂದವು ಭಾರತಕ್ಕೆ ಚೀನಾದ ಜೊತೆ ಸೇರಲೇಬೇಕಾದ ಅನಿವಾರ್ಯತೆಯನ್ನೂ ತಂದೊಡ್ಡಿದೆ. ಇದು ಚೀನಾ ಹೆಣೆದ ತಂತ್ರದ ಭಾಗವಾಗಿರಲೂ ಬಹುದು. ಈ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸಗಳು ಆಗಬೇಕಾಗಿದೆ.

Thursday, 24 October 2019

ದಂಡನೆಗೆ ಒಳಗಾಗಬೇಕಾದ ಅಧಿಕಾರಿಗಳ ಸಂಖ್ಯೆ 68,900, ದಂಡನೆಗೊಳಗಾದದ್ದು ಬರೇ 2091: ಇದುವೇ ಆರ್ ಟಿ ಐ



ಕೇಂದ್ರ ಮಾಹಿತಿ ಹಕ್ಕು ಆಯೋಗವು ರಚನೆಯಾಗಿ 14 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಆಯೋಗದ ಅಧ್ಯಕ್ಷರು ಶಾಲು ಹೊದಿಸಿ ಸ್ವಾಗತಿಸುತ್ತಿರುವ ಚಿತ್ರವನ್ನು ಮಾಧ್ಯಮಗಳು ಕಳೆದವಾರ ಪ್ರಕಟಿಸಿವೆ. ಇದಕ್ಕಿಂತ ವಾರದ ಮೊದಲು ಕಾಶ್ಮೀರಕ್ಕೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಲಾದ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯವು ನೀಡಿದ ಉತ್ತರವನ್ನು ಮಾಧ್ಯಮಗಳು ಪ್ರಕಟಿಸಿದ್ದುವು. ಕಾಶ್ಮೀರದಲ್ಲಿ ಬಂಧನಕ್ಕೀಡಾದ ರಾಜಕೀಯ ನಾಯಕರುಗಳ ವಿವರಗಳು ಮತ್ತು ದೂರವಾಣಿ, ಇಂಟರ್ ನೆಟ್ ಮತ್ತು ಸಂಚಾರಕ್ಕೆ ಹೇರಲಾದ ನಿಯಂತ್ರಣದ ಕುರಿತಂತೆ ಮಾಹಿತಿಯನ್ನು ಅಪೇಕ್ಷಿಸಿ ಸಲ್ಲಿಸಲಾದ ಆ ಅರ್ಜಿಗೆ ಗೃಹ ಸಚಿವಾಲಯವು ‘ಮಾಹಿತಿಯಿಲ್ಲ’ ಎಂಬ ಅತ್ಯಂತ ಉಡಾಫೆಯ ಮತ್ತು ಸರ್ವಾಧಿಕಾರಿ ಸ್ವರೂಪದ ಉತ್ತರವನ್ನು ನೀಡಿತ್ತು. ಇದರ ಜೊತೆಗೇ ಇನ್ನೊಂದು ಮಾಹಿತಿಯನ್ನೂ ಇಲ್ಲಿ ಹಂಚಿಕೊಳ್ಳುವುದು ಸೂಕ್ತವೆನಿಸುತ್ತದೆ. ಕಳೆದ ಜುಲೈಯಲ್ಲಿ ಕೇಂದ್ರ ಸರಕಾರವು ಮಾಹಿತಿ ಹಕ್ಕು ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು. ನಿಜವಾಗಿ,
ಆ ಮಸೂದೆಗೆ ಹಲವು ಆರ್ ಟಿ ಐ  ಪರಿಣತರೇ ವಿರೋಧ ವ್ಯಕ್ತಪಡಿಸಿದ್ದರು. ಈ ಮಸೂದೆಯು ಆರ್ ಟಿ ಐ ಯನ್ನು ದುರ್ಬಲಗೊಳಿಸುತ್ತದೆ ಮತ್ತು ಅದರ ಉಗುರು-ಹಲ್ಲುಗಳನ್ನು ಕಿತ್ತುಕೊಂಡು ಸಾಧು ಪ್ರಾಣಿಯಾಗಿಸುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಇದೀಗ ಆ ಟೀಕೆಯನ್ನು ಸಮರ್ಥಿಸುವ ಅಂಕಿ ಅಂಶಗಳು ಬಿಡುಗಡೆಗೊಂಡಿವೆ. ಮಾಹಿತಿಯನ್ನು ಅಪೇಕ್ಷಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ಗೌಪ್ಯತೆಯ ಹೆಸರಲ್ಲೋ ವಿನಾಕಾರಣವೋ ತಿರಸ್ಕರಿಸುವ ಅಥವಾ ತಡೆದಿರಿಸುವ ಪ್ರಕರಣಗಳಲ್ಲಿ ಭಾರೀ ಸಂಖ್ಯೆಯ ಏರಿಕೆಯಾಗಿದೆ ಎಂಬ ಅಂಶ ಬಯಲಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಅರ್ಜಿಗೆ ನೀಡಲಾದ ಉತ್ತರವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು. ‘ಭಾರತದ ಮಾಹಿತಿ ಆಯೋಗದ ಕಾರ್ಯ ನಿರ್ವಹಣೆಯ ಮೇಲಿನ ರಿಪೋರ್ಟ್ ಕಾರ್ಡ್’ (Report card on the performance of information commission in India) ಎಂಬ ಹೆಸರಲ್ಲಿ ‘ಸ್ಟಾರ್ಕ್ ನಾಗರಿಕ್ ಸಂಘಟನ್’ ಮತ್ತು ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್’ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಈ ಅಧ್ಯಯನ ವರದಿಯಲ್ಲಿ ಆರ್ ಟಿ ಐಯನ್ನು ಹೇಗೆ ನಿಧಾನವಾಗಿ ಸಾಯಿಸುತ್ತಾ ಬರಲಾಗುತ್ತಿದೆ ಎಂಬ ದಂಗುಬಡಿಸುವ ವಿವರಗಳಿವೆ. ರಾಜ್ಯ ಮತ್ತು ಕೇಂದ್ರದ ಒಟ್ಟು 22 ಮಾಹಿತಿ ಹಕ್ಕು ಆಯೋಗಗಳ ಕಾರ್ಯ ನಿರ್ವಹಣೆಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. 2018 ಜನವರಿಯಿಂದ 2019 ಮಾರ್ಚ್ ವರೆಗೆ ದಾಖಲಾದ ಒಟ್ಟು ಅರ್ಜಿಗಳ ಪೈಕಿ 1.17 ಲಕ್ಷ ಅರ್ಜಿಗಳನ್ನು ಈ ಅಧ್ಯಯನವು ಪರಿಶೀಲನೆಗೆ ಒಳಪಡಿಸಿದ್ದು, ಫಲಿತಾಂಶ ಅತ್ಯಂತ ನಿರಾಶಾಜನಕವಾದುದು.
ಆರ್.ಟಿ.ಐ. ಕಲಂ 20ರ ಪ್ರಕಾರ 68,900 ಪ್ರಕರಣಗಳಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆಯು ಕಠಿಣ ದಂಡನೆಗೆ ಅರ್ಹವಾಗಿದ್ದರೂ ಕೇವಲ 2091 ಪ್ರಕರಣಗಳಲ್ಲಿ ಮಾತ್ರ ದಂಡನಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿದೆ. ಈ ಅನುಪಾತ ಎಷ್ಟು ಜುಜುಬಿ ಎಂದರೆ, ಬರೇ 3%. ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ನಿರ್ಲಕ್ಷ್ಯ ತಾಳುವುದು, ವಿನಾಕಾರಣ ತಿರಸ್ಕರಿಸುವುದು ಮತ್ತು ಅವಧಿಗಿಂತ ಹೆಚ್ಚು ಕಾಲ ತಡೆದಿರಿಸುವುದು ಆರ್.ಟಿ.ಐ. ಕಾಯ್ದೆಯ ಪ್ರಕಾರ ದಂಡನಾರ್ಹ ಅಪರಾಧ. ಆದರೆ 2018ರ ಬಳಿಕ ಈ ದಂಡ ವಿಧಿಸುವ ಪ್ರಕ್ರಿಯೆ ಎಷ್ಟು ನಿಧಾನಗೊಂಡಿದೆಯೆಂದರೆ, ಅಧಿಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ತ್ರಿಪುರ, ತಮಿಳುನಾಡು, ಸಿಕ್ಕಿಮ್ ಮತ್ತು ಮಿಜೋರಾಮ್‍ಗಳಲ್ಲಿ ಕಾನೂನು ಉಲ್ಲಂಘಿಸಿದ ಒಬ್ಬನೇ ಒಬ್ಬ ಮಾಹಿತಿ ಹಕ್ಕು ಆಯೋಗದ ಅಧಿಕಾರಿಯ ವಿರುದ್ಧ ದಂಡನಾಕ್ರಮ ಕೈಗೊಳ್ಳಲಾಗಿಲ್ಲ. ನಿಜವಾಗಿ, ಈ ಬಗೆಯ ನಿರ್ಲಕ್ಷ್ಯವು ಅಧಿಕಾರಿಗಳಲ್ಲಿ ಉಡಾಫೆ ಭಾವವನ್ನು ಸೃಷ್ಟಿಸತೊಡಗಿದೆ. ಮಾಹಿತಿ ಕೋರಿ ಬರುವ ಯಾವುದೇ ಅರ್ಜಿಯನ್ನು ನಿರ್ಲಕ್ಷಿಸುವ ಮನೋಭಾವವನ್ನು ಅಧಿಕಾರಿಗಳಲ್ಲಿ ಬೆಳೆಸುವುದಕ್ಕೆ ಇದು ಕಾರಣವಾಗುತ್ತಿದೆ. ಅಂದಹಾಗೆ,
ಆರ್.ಟಿ.ಐ.ಯ ಯಶಸ್ಸು-ವೈಫಲ್ಯ ಅಡಗಿಕೊಂಡಿರುವುದೇ ಅದರ ಕಾಯ್ದೆ-ಕಲಂಗಳಲ್ಲಿ. ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿರ್ದಿಷ್ಟ ಅವಧಿಯೊಳಗೆ ವಿಲೇವಾರಿ ಮಾಡಲೇಬೇಕು ಎಂಬ ಕಠಿಣ ಷರತ್ತು ಆ ಕಾಯ್ದೆಯನ್ನು ಜನಪರಗೊಳಿಸಿದೆ. ಅರ್ಜಿದಾರರ ಮಾಹಿತಿ ಪಡೆಯುವ ಹಕ್ಕನ್ನು ಎತ್ತಿ ಹಿಡಿಯುವ ಮತ್ತು ಯಾವ ಶ್ರಮ ಪಟ್ಟಾದರೂ ಮಾಹಿತಿಯನ್ನು ಒದಗಿಸುವ ಅನಿವಾರ್ಯತೆಯನ್ನು ಕಾಯ್ದೆಯ ನಿಯಮಗಳು ಉಂಟು ಮಾಡುತ್ತವೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ. ವಿಷಾದ ಏನೆಂದರೆ,
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರ್‍ಟಿಐಗೆ ನಿಧಾನ ಸಾವನ್ನು ಕರುಣಿಸಲು ಪ್ರಯತ್ನಿಸುತ್ತಿದೆ ಅನ್ನುವುದು. ಆರ್.ಟಿ.ಐ. ಕಾಯ್ದೆಯನ್ನು ಉಲ್ಲಂಘಿಸುವ ಅಥವಾ ಮಾಹಿತಿ ಕೋರಿ ಸಲ್ಲಿಸಲಾದ ಅರ್ಜಿಗೆ ಚಿಕ್ಕಾಸಿನ ಬೆಲೆಯನ್ನೂ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಈ ಸಾಯಿಸುವ ಆಟದ ಬಹುಮುಖ್ಯ ಭಾಗ. ಜುಲೈಯಲ್ಲಿ ಜಾರಿಗೆ ತರಲಾದ ಆರ್.ಟಿ.ಐ. ತಿದ್ದುಪಡಿ ಮಸೂದೆಯನ್ನೂ ಇದೇ ಪಟ್ಟಿಯಲ್ಲಿಟ್ಟು ನೋಡಬೇಕು. ಮಾಹಿತಿ ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೇವಲ 2018ರಲ್ಲಿ 1.85 ಲಕ್ಷ ಅರ್ಜಿಗಳು ವಿಲೇವಾರಿಯಾಗದೇ ಬಿದ್ದುಕೊಂಡಿವೆ ಎಂದು ವರದಿಯಲ್ಲಿದೆ. ಅಲ್ಲದೇ ಕೇವಲ ಕೇಂದ್ರ ಮಾಹಿತಿ ಆಯೋಗವೊಂದರಲ್ಲೇ 2019 ಅಕ್ಟೋಬರ್ 11ರ ವರೆಗೆ 35 ಸಾವಿರ ಅರ್ಜಿಗಳು ವಿಲೇವಾರಿಯಾಗದೇ ಬಿದ್ದುಕೊಂಡಿವೆ. ಇದರ ಜೊತೆಜೊತೆಗೇ ಇನ್ನೊಂದು ವಿಷಾದಕರ ಸಂಗತಿಯೂ ಇದೆ. 11 ಕೇಂದ್ರ ಮಾಹಿತಿ ಆಯೋಗಗಳ ಪೈಕಿ 4 ಆಯೋಗಗಳ ಖಾಲಿ ಹುದ್ದೆಗಳನ್ನೇ ಇನ್ನೂ ತುಂಬಲಾಗಿಲ್ಲ.
ಮನ್‍ಮೋಹನ್ ಸಿಂಗ್ ಸರಕಾರದ ಬಹುಯಶಸ್ವಿ ಮತ್ತು ಕ್ರಾಂತಿಕಾರಿ ಕ್ರಮಗಳಲ್ಲಿ ಒಂದೆನಿಸಿರುವ ಮಾಹಿತಿ ಹಕ್ಕು ಕಾಯ್ದೆಯು ಆಡಳಿತವನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಬಹುಮುಖ್ಯವಾದದ್ದು. ನಾಗರಿಕನೋರ್ವ ತನಗೆ ಬೇಕಾದ ಯಾವುದೇ ಮಾಹಿತಿಯನ್ನು ಸರಕಾರದಿಂದ ಕೇಳಿ ಪಡೆದುಕೊಳ್ಳುವುದನ್ನು ಸಾಂವಿಧಾನಿಕ ಹಕ್ಕಾಗಿ ಈ ಕಾಯ್ದೆ ಪರಿಗಣಿಸುತ್ತದೆ. ನಾಗರಿಕರು ಕೇಳಿದ ಮಾಹಿತಿಯನ್ನು ಕೊಡಲೇಬೇಕಾದ ಒತ್ತಡವೊಂದನ್ನು ಅಧಿಕಾರಿಗಳ ಮೇಲೆ ಹೇರುತ್ತದೆ. ತಪ್ಪಿದರೆ ದಂಡ ಪ್ರಯೋಗಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ,
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸುವ ಸಲುವಾಗಿ ಆಯಾ ಅಧಿಕಾರಿಗಳು ಶ್ರಮ ಪಡಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ನಿಜವಾಗಿ, ಆರ್‍ಟಿಐ ಕಾರ್ಯಕರ್ತರ ಜೀವ ಅಪಾಯಕ್ಕೆ ಸಿಲುಕತೊಡಗಿದ್ದು ಈ ಕಾರಣದಿಂದಲೇ. ಕಳೆದ ಜುಲೈಯಲ್ಲಿ ಕೇಂದ್ರ ಸರಕಾರವು ಆರ್‍ಟಿಐ ಕಾಯ್ದೆಗೆ ತಂದ ತಿದ್ದುಪಡಿಯು ಆಯೋಗದ ಈ ಸ್ವಾಯತ್ತ ಗುಣಕ್ಕೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಸರಕಾರದ ವಿವಿಧ ಟೆಂಡರ್ ಗಳು, ಕಾಮಗಾರಿಗಳು, ವಿವಿಧ ಯೋಜನೆಗಳು, ಒಪ್ಪಂದಗಳು ಸಹಿತ ಪ್ರತಿಯೊಂದರ ಮೇಲೆಯೂ ಮಾಹಿತಿಯನ್ನು ಅಪೇಕ್ಷಿಸಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಉತ್ತರವನ್ನು ಕೊಡುವುದೆಂದರೆ, ಅದು ಸರಳ ಅಲ್ಲ. ಹಾಗೆ ಕೊಡುವ ಉತ್ತರವು ಬಹುದೊಡ್ಡ ಅವ್ಯವಹಾರ ಮತ್ತು ಹಗರಣವನ್ನು ಬಹಿರಂಗಕ್ಕೆ ತರುವ ಸಾಧ್ಯತೆಯೂ ಇರುತ್ತದೆ. ನಾಗರಿಕನೋರ್ವ ಅತ್ಯಂತ ಕಡಿಮೆ ಖರ್ಚಿನಲ್ಲಿ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳುವ ವ್ಯವಸ್ಥೆ ಇದು. ಆದ್ದರಿಂದಲೇ, ಈ ಕಾಯ್ದೆ ಅತ್ಯಂತ ಜನಪ್ರಿಯವಾಯಿತು. ನಾಗರಿಕರು ತಮಗೆ ಬೇಕಾದ ಮಾಹಿತಿಯನ್ನು ಸಾಂವಿಧಾನಿಕ ಹಕ್ಕು ಎಂಬ ರೀತಿಯಲ್ಲಿ ಕೇಳಿ ಕೇಳಿ ಪಡೆಯತೊಡಗಿದರು. ಆದರೆ ಇದು ಹೀಗೆಯೇ ಮುಂದುವರಿದರೆ ಅಧಿಕಾರಕ್ಕೆ ಸಂಚಕಾರ ತರಬಹುದು ಎಂದು ಆಡಳಿತ ಭಾವಿಸಿರಬೇಕು. ಆದ್ದರಿಂದಲೇ,
ಮಾಹಿತಿ ಆಯೋಗದ ಅಧಿಕಾರಿಗಳಿಂದ ಅಸಹಕಾರ ಚಳವಳಿಯೊಂದು ಅನೌಪಚಾರಿಕವಾಗಿ ಆರಂಭವಾಗಿದೆ. ಆರ್.ಟಿ.ಐ. ಅರ್ಜಿದಾರರನ್ನು ಸುಸ್ತು ಹೊಡೆಸಿ, ನಿಧಾನಕ್ಕೆ ಅವರನ್ನು ಈ ದಾರಿಯಿಂದ ದೂರವಾಗಿಸುವ ಶ್ರಮ ನಡೆಯುತ್ತಿದೆ. ಇದು ಅತ್ಯಂತ ವಿಷಾದನೀಯ ಮತ್ತು ಖಂಡನಾರ್ಹ. 14ನೇ ವರ್ಷದ ಸಮಾರಂಭವು ಮಾಹಿತಿ ಆಯೋಗದ ಶ್ರದ್ಧಾಂಜಲಿ ಸಭೆ ಆಗದಿರಲಿ ಎಂದು ಹಾರೈಸೋಣ.

Saturday, 19 October 2019

49 ಮಂದಿ ‘ದೇಶದ್ರೋಹಿ’ಗಳ ಕತೆ: ತಿಲಕರೂ ದೇಶದ್ರೋಹಿಯಾಗಿದ್ದರು...


ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ತರುವಾಯ ಪಂಜಾಬ್‍ನ ಸಿನಿಮಾ ಮಂದಿರದ ಹೊರಗಡೆ ಕೆಲವು ಸಿಕ್ಖ್ ಯುವಕರು ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ರಾಜ್ ಕರೇಗಾ ಖಾಲ್ಸಾ’ ಎಂಬಂತಹ ಘೋಷಣೆಗಳನ್ನು ಕೂಗಿದ್ದರು. ಪಂಜಾಬ್ ಸರಕಾರ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿತ್ತು. 1995ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟು ಪ್ರಕರಣವನ್ನು ವಜಾಗೊಳಿಸಿ ಯುವಕರನ್ನು ದೋಷಮುಕ್ತಗೊಳಿಸಿತ್ತು. ‘ಬರೇ ಘೋಷಣೆಯನ್ನು ದೇಶದ್ರೋಹವಾಗಿ ಪರಿಗಣಿಸಲಾಗದು’ ಎಂದು ಕೋರ್ಟು ಅಭಿಪ್ರಾಯಪಟ್ಟಿತ್ತು. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಹುಟ್ಟು ಹಾಕದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಘೋಷಣೆಯು ದೇಶದ್ರೋಹವಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.
2013ರಲ್ಲೂ ಇಂಥದ್ದೇ ಒಂದು ಬೆಳವಣಿಗೆ ನಡೆಯಿತು. ಲಲಿತ್ ಕುಮಾರಿ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸುಪ್ರೀಮ್ ಕೋರ್ಟು ವಜಾಗೊಳಿಸಿತ್ತು. ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ಕೊಡುವ ಮೊದಲು ಮ್ಯಾಜಿಸ್ಟ್ರೇಟರಿಗೆ ಆ ಬಗ್ಗೆ ಮನವರಿಕೆಯಾಗಬಹುದಾದ ಮಾಹಿತಿಗಳು ಪೊಲೀಸ್ ತನಿಖೆಯ ಮೂಲಕ ಲಭ್ಯವಾಗಿರಬೇಕು ಎಂದು ಅದಕ್ಕೆ ಕಾರಣವನ್ನು ಕೊಟ್ಟಿತ್ತು. ಕೇವಲ ದೂರಿನ ಆಧಾರದಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ಸೂಚಿಸುವಂತಿಲ್ಲ ಎಂಬ ಸಂದೇಶ ಆ ತೀರ್ಪಿನಲ್ಲಿತ್ತು. ಇದೀಗ ದೇಶದ್ರೋಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಓರ್ವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಕ್ಕೆ ಏನೆಲ್ಲ ಆಧಾರಗಳು ಬೇಕು, ಬರೇ ಹೇಳಿಕೆಯೊಂದು ದೇಶದ್ರೋಹವಾಗುತ್ತದೆಯೇ ಎಂಬಲ್ಲಿಂದ ಹಿಡಿದು ರಾಜಪ್ರಭುತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ  17ನೇ ಶತಮಾನದಲ್ಲಿ ಬ್ರಿಟಿಷರು ರಚಿಸಿದ ದೇಶದ್ರೋಹದ ಕಾನೂನನ್ನು ನಾವು ಇನ್ನೂ ಉಳಿಸಿಕೊಳ್ಳುವುದು ಎಷ್ಟು ಸರಿ ಎಂಬಲ್ಲಿವರೆಗೆ ಚರ್ಚೆ ತೀವ್ರಗತಿಯನ್ನು ಪಡೆದುಕೊಂಡಿದೆ. ಅಂದಹಾಗೆ,
ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿರುವುದು ಬಿಹಾರದ ಮುಝಫ್ಪರ್‍ಪುರ್ ನ  ಪೊಲೀಸ್ ಠಾಣೆಯೊಂದಕ್ಕೆ ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನೀಡಿರುವ ಸೂಚನೆ. ದೇಶದ ಪ್ರಸಿದ್ಧ ವ್ಯಕ್ತಿತ್ವಗಳಾದ ಶ್ಯಾಮ್ ಬೆನಗಲ್, ಅಡೂರು ಗೋಪಾಲ ಕೃಷ್ಣನ್, ಅಪರ್ಣಾ ಸೇನ್, ರಾಮಚಂದ್ರ ಗುಹಾ ಸೇರಿದಂತೆ 49 ಮಂದಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಕೋರಿ ಸ್ಥಳೀಯ ನ್ಯಾಯವಾದಿ ಸುಧೀರ್ ಕುಮಾರ್ ಓಜಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಗುಂಪು ಹತ್ಯೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ಜುಲೈಯಲ್ಲಿ ಈ ಪ್ರಮುಖರು ಬರೆದ ಬಹಿರಂಗ ಪತ್ರವನ್ನು ಈ ನ್ಯಾಯವಾದಿ ದೇಶದ್ರೋಹದ ಕೃತ್ಯ ಎಂದು ಕೋರ್ಟ್‍ನಲ್ಲಿ ಹೇಳಿಕೊಂಡಿದ್ದರು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿದ್ದರು. ಅದನ್ನು ಪರಿಗಣಿಸಿ ಎಫ್.ಐ.ಆರ್. ದಾಖಲಿಸುವಂತೆ ಮುಝಫ್ಫರ್ ನಗರ್ ಪೊಲೀಸ್ ಠಾಣೆಗೆ ಮ್ಯಾಜಿಸ್ಟ್ರೇಟ್ ಸೂಚನೆಯನ್ನು ನೀಡಿದರು. ಇದೀಗ ಈ ಇಡೀ ಪ್ರಕ್ರಿಯೆಯ ಕುರಿತೇ ಪ್ರಶ್ನೆಗಳೆದ್ದಿವೆ. ಸುಪ್ರೀಮ್ ಕೋರ್ಟ್‍ನ ಈ ಹಿಂದಿನ ಎರಡು ತೀರ್ಪುಗಳನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿದೆಯೇ ಎಂಬ ಚರ್ಚೆಗೆ ಇದು ಚಾಲನೆಯನ್ನು ನೀಡಿದೆ. ಸಾರ್ವಜನಿಕ ಶಾಂತಿಗೆ ಭಂಗ ತಾರದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಪತ್ರವೊಂದನ್ನು ದೇಶದ್ರೋಹದ ಕೃತ್ಯವೆಂದು ವ್ಯಾಖ್ಯಾನಿಸುವುದನ್ನು ಒಪ್ಪಲಾಗದು ಎಂದು ಸಂವಿಧಾನ ತಜ್ಞರು ವಾದಿಸುತ್ತಿದ್ದಾರೆ. (ಇದೀಗ ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದರೂ ಅದನ್ನು ಪ್ರತಿಭಟಿಸಿ ಓಜಾ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.) ನಿಜವಾಗಿ,
ಇದೊಂದು ದಮನ ತಂತ್ರ. ಪ್ರಜಾತಂತ್ರದ ಅತಿದೊಡ್ಡ ಗುಣ ಏನೆಂದರೆ, ಟೀಕೆ, ಪ್ರಶ್ನೆ, ಪ್ರತಿಭಟನೆಗೆ ಸದಾ ತನ್ನನ್ನು ತೆರೆದಿಟ್ಟಿರುವುದು. ರಾಜಪ್ರಭುತ್ವಕ್ಕೂ ಪ್ರಜಾಪ್ರಭುತ್ವಕ್ಕೂ ನಡುವೆ ಇರುವ ವ್ಯತ್ಯಾಸ ಇದು. 17ನೇ ಶತಮಾನದಲ್ಲಿ ಬ್ರಿಟನ್‍ನಲ್ಲಿ ರಾಜಪ್ರಭುತ್ವ ಇತ್ತು. ಪ್ರಶ್ನೆ ಮಾಡುವ ಸ್ವಾತಂತ್ರ್ಯವನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟರೆ ಅಧಿಕಾರಕ್ಕೆ ಸಂಚಕಾರ ಬರಬಹುದು ಎಂಬುದನ್ನು ಮನಗಂಡು ಟೀಕೆಯನ್ನು ದೇಶದ್ರೋಹವಾಗಿ ಕಾಣುವ ಕಾನೂನನ್ನು ರಚಿಸಲಾಯಿತು. 1870ರಲ್ಲಿ ಅದೇ ಕಾನೂನನ್ನು ಬ್ರಿಟಿಷರು ಭಾರತಕ್ಕೂ ತಂದರು. ಅದೇ ಕಾನೂನಿನಡಿಯಲ್ಲೇ 1897ರಲ್ಲಿ ಬಾಲಗಂಗಾಧರ ತಿಲಕ್‍ರನ್ನು ಬಂಧಿಸಿದರು. ದುರಂತ ಏನೆಂದರೆ, ಈ ಪ್ರಕರಣ ನಡೆದು ನೂರು ವರ್ಷಗಳೇ ಕಳೆದುಹೋಗಿವೆ. ಭಾರತದಲ್ಲಿ ಬ್ರಿಟಿಷ್ ರಾಜಪ್ರಭುತ್ವ ಹೊರಟು ಹೋಗಿ ಪ್ರಜಾತಂತ್ರ ನೆಲೆಗೊಂಡಿದೆ. ಆದರೂ ಈ ಪುರಾತನ ಕಾನೂನಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಷ್ಟಕ್ಕೂ,
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಂತೂ ದೇಶದ್ರೋಹ ಎಂಬ ಪದ ಹೇಗೆಲ್ಲ ಮತ್ತು ಎಷ್ಟೆಲ್ಲ ಬಾರಿ ದುರುಪಯೋಗಕ್ಕೆ ಈಡಾಗಿದೆಯೆಂದರೆ, ಪ್ರತಿದಿನ ಒಬ್ಬರ ಮೇಲಾದರೂ ಈ ಹಣೆಪಟ್ಟಿಯನ್ನು ಅಂಟಿಸಲಾಗುತ್ತಿದೆ. ಬಿಜೆಪಿ ನಾಯಕರು ಅಥವಾ ಆ ಪಕ್ಷದ ಬೆಂಬಲಿಗರು ಟೀಕೆಯನ್ನೇ ಸಹಿಸುತ್ತಿಲ್ಲ. ಪ್ರಧಾನಿ ಮೋದಿಯವರ ವಿರುದ್ಧದ ಯಾವುದೇ ದನಿಯನ್ನು ದೇಶದ್ರೋಹದ ಹೇಳಿಕೆಯಾಗಿ ವ್ಯಾಖ್ಯಾನಿಸಿ ಬೆದರಿಸುವ ಶ್ರಮಗಳು ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ.
ಪ್ರಜಾತಂತ್ರದಲ್ಲಿ ಯಾರೂ ಪ್ರಶ್ನಾತೀತರಲ್ಲ. ಪ್ರಧಾನಿ ಮೋದಿಯವರೂ ಅವರಲ್ಲಿ ಒಬ್ಬರು. ನಾಳೆ ರಾಹುಲ್ ಗಾಂಧಿಯೋ ಅಥವಾ ಇನ್ನಾರೋ ಪ್ರಧಾನಿಯಾದರೂ ಅವರಿಗೂ ಈ ನಿಯಮ ಅನ್ವಯಿಸುತ್ತದೆ. ಪ್ರಶ್ನಾತೀತ ಅನ್ನುವುದು ಸರ್ವಾಧಿಕಾರಿ ಪ್ರಭುತ್ವದ ಮನಸ್ಥಿತಿಯೇ ಹೊರತು ಪ್ರಜಾತಂತ್ರದ ಭಾಗವಲ್ಲ. ಅಡೂರ್ ಗೋಪಾಲಕೃಷ್ಣನ್ ಸೇರಿದಂತೆ 49 ಮಂದಿ ಪ್ರಮುಖರು ಬರೆದ ಪತ್ರದಲ್ಲಿ ಈ ದೇಶದ ಸ್ಥಿತಿಗತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಗುಂಪು ಥಳಿತ ಮತ್ತು ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸೆಗಳನ್ನು ತಡೆಯುವಂತೆ ಪ್ರಧಾನಿಯವರನ್ನು ಆಗ್ರಹಿಸಲಾಗಿದೆ. ಅಂದಹಾಗೆ, ಹೀಗೆ ಪತ್ರ ಬರೆಯುವುದೇ ಅಪರಾಧ ಎಂದಾದರೆ, ಪ್ರಜಾತಂತ್ರಕ್ಕೆ ಅರ್ಥವಾದರೂ ಏನು? ನಿಜವಾಗಿ,
ದೇಶದ ರಾಜಕೀಯ ವಾತಾವರಣವು ಹೊಸ ಆಯಾಮದೆಡೆಗೆ ಹೊರಳುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ತಂಡದ ಆಡಳಿತವನ್ನು ಪ್ರಶ್ನಿಸದಂತೆ ಅತ್ಯಂತ ಯೋಜನಾಬದ್ಧವಾಗಿ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಟೀಕೆಯನ್ನು ದೇಶವಿರೋಧಿಯಾಗಿ ಪರಿವರ್ತಿಸಲಾಗುತ್ತಿದೆ. ಟೀಕಾಕಾರರ ವಿರುದ್ಧ ಮಾತು ಮತ್ತು ಬರಹಗಳ ಮೂಲಕ ಮುಗಿಬಿದ್ದು ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರು ಪ್ರಶ್ನಾತೀತರು ಎಂಬ ಭಾವನೆಯನ್ನು ಸಾರ್ವಜನಿಕವಾಗಿ ಬಿಂಬಿಸುವ ಶ್ರಮದ ಭಾಗವಿದು. ಇನ್ನೊಂದೆಡೆ,
ಅರ್ಥವ್ಯವಸ್ಥೆ ತೀವ್ರಗತಿಯಲ್ಲಿ ಕುಸಿತವನ್ನು ಕಾಣುತ್ತಿದೆ. ನಿರುದ್ಯೋಗದ ಪ್ರಮಾಣವಂತೂ ಕಳೆದ 45 ವರ್ಷಗಳಲ್ಲೇ ಅತೀ ದಾರುಣ ಹಂತಕ್ಕೆ ಕುಸಿದು ಹೋಗಿದೆ. ‘ಉದ್ಯೋಗ ನಷ್ಟ ಮತ್ತು ಆರ್ಥಿಕ ಕುಸಿತವು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ’ ಎಂದು ಆರ್‍ಬಿಐ ಬಿಡುಗಡೆಗೊಳಿಸಿದ ಸಮೀಕ್ಷೆಗಳೇ ಹೇಳುತ್ತಿವೆ. ನೋಟು ಅಮಾನ್ಯೀಕರಣದ ದುಷ್ಪರಿಣಾಮದಿಂದ ದೇಶ ಇನ್ನೂ ಮೇಲೆದ್ದಿಲ್ಲ. ಜನರಲ್ಲಿ ಖರೀದಿಸುವ ಸಾಮಥ್ರ್ಯ ಕಡಿಮೆಯಾಗಿದೆ. ವಾಹನ ಉದ್ಯಮದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸವನ್ನು ಕಳಕೊಳ್ಳತೊಡಗಿದೆ. ಜನರಲ್ಲಿ ಒಂದು ಬಗೆಯ ಹತಾಶೆ, ಸಿಟ್ಟು, ಅಸಹನೆ ರೂಪುಪಡೆಯತೊಡಗಿದೆ. ಇಂಥ ಸ್ಥಿತಿಯಲ್ಲಿ ವಿರೋಧದ ದನಿಗೆ ಬೇರು ಮಟ್ಟದಲ್ಲೇ ಕಡಿವಾಣ ಹಾಕದಿದ್ದರೆ ಅದು ಸ್ಫೋಟಗೊಂಡು ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂಬ ಭಯ ಕೇಂದ್ರ ಸರಕಾರದ ಬೆಂಬಲಿಗರನ್ನು ಕಾಡತೊಡಗಿರುವಂತಿದೆ. ಅದರ ಭಾಗವಾಗಿ ಇಂಥ ಬೆಳವಣಿಗೆಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಆದ್ದರಿಂದ,
ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಆ ಮೂಲಕ ದೇಶಕ್ಕೆ ಪ್ರಬಲ ಸಂದೇಶವನ್ನು ರವಾನಿಸಬೇಕು.