Wednesday, 18 October 2017

ಕಮ್ಯುನಿಸ್ಟ್ ನಾಡಿನ ದಲಿತ ಅರ್ಚಕ ಮತ್ತು ಬಿಜೆಪಿ ನಾಡಿನ ಮೀಸೆ ಚಳವಳಿ

      ಗುಜರಾತ್ ಮತ್ತು ಕೇರಳದಿಂದ ವರದಿಯಾಗಿರುವ ಸುದ್ದಿಗಳು `ಸಾಮಾಜಿಕ ನ್ಯಾಯ' ಮತ್ತು `ಸರ್ವರೂ ಸಮಾನರು' ಎಂಬ ಪರಿಕಲ್ಪನೆಯ ಸುತ್ತ ದೇಶದಲ್ಲಿ ಮತ್ತೊಂದು ಸುತ್ತಿನ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾದಷ್ಟು ಮಹತ್ವಪೂರ್ಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಳೆದವಾರ ಕೇರಳಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿ ನಡೆಯುತ್ತಿರುವ ರಾಜಕೀಯ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರು ಹೊರಟು ಹೋದ ಮರು ಘಳಿಗೆಯಲ್ಲೇ ಅಲ್ಲಿನ ನಿಜ ಸಮಸ್ಯೆ ಚರ್ಚೆಗೆ ಒಳಗಾಯಿತು. ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳ ಅರ್ಚಕ ಹುದ್ದೆಗಳಲ್ಲಿ 32% ದಷ್ಟು ಹುದ್ದೆಯನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಿಡುವ ರಾಜ್ಯ ಸರಕಾರದ ನಿರ್ಧಾರವನ್ನು ಅಲ್ಲಿನ ಬ್ರಾಹ್ಮಣ ಸಂಘಟನೆಯಾದ ನಂಬೂದರಿ ಯೋಗಕ್ಷೇಮ ಸಭಾವು ಖಂಡಿಸಿತು. ಹಾಗಂತೂ ಈ ವಿರೋಧವು ಕೇವಲ ಯೋಗಕ್ಷೇಮ ಸಭಾದ ವತಿಯಿಂದ ಮಾತ್ರ ಎದುರಾದುದಲ್ಲ. ಬೇರೆ ಬೇರೆ ಬ್ರಾಹ್ಮಣ ಸಂಘಗಳಿಂದಲೂ ಪ್ರತಿಭಟನೆ ಎದುರಾಯಿತು. ದಲಿತರ ಮೇಲೆ ಈ ಹಿಂದೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಹಲ್ಲೆಗಳೂ ಚರ್ಚೆಯ ವೇಳೆ ಉಲ್ಲೇಖಕ್ಕೆ ಒಳಗಾದುವು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ಗೆ ಭೇಟಿಕೊಟ್ಟರು. ಅವರ ಈ ಭೇಟಿಯ ಸಮಯದಲ್ಲಿ ಗುಜರಾತ್‍ನಲ್ಲಿ `ಮೀಸೆ ನನ್ನ ಹಕ್ಕು' ಅನ್ನುವ ಚಳವಳಿಯೊಂದು ನಡೆಯುತ್ತಿತ್ತು. ದಲಿತ ಸಮುದಾಯದ ಮಂದಿ ಮೀಸೆ ತಿರುವಿ ಸೆಲ್ಫಿ ತೆಗೆದುಕೊಳ್ಳುವ ಚಳುವಳಿಯೊಂದಕ್ಕೆ ಚಾಲನೆ ಕೊಟ್ಟಿದ್ದರು. ಇದಕ್ಕೆ ಕಾರಣ ಅದೇ ಮೇಲ್ವರ್ಗ. ಮೀಸೆ ಬೆಳೆಸಿದ ಕಾರಣಕ್ಕೆ ದಲಿತ ಯುವಕರನ್ನು ಥಳಿಸಿದುದೇ ಈ ಮೀಸೆ ಚಳುವಳಿಯ ಹುಟ್ಟಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾದ ಈ ಚಳುವಳಿಯ ಕಾವು ಬೆಳೆಯುತ್ತಾ ಜನಪ್ರಿಯಾಗತೊಡಗಿತು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಲೇಬೇಕಾದ ಅನಿವಾರ್ಯತೆಗೂ ಒಳಗಾದುವು. ಆದರೆ ಪ್ರಧಾನಿಯವರು ಈ ಮೀಸೆ ಚಳವಳಿಯ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಏನನ್ನೂ ಹೇಳಲಿಲ್ಲ. ಅವರೂ ಅಮಿತ್ ಷಾರಂತೆ ರಾಜಕೀಯವನ್ನಷ್ಟೇ ಆಡಿದರು.
     ದೇಶವನ್ನಾಳುವ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿಯವರು ಎರಡು ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಡುವುದು ಮತ್ತು ಆ ಭೇಟಿಯ ವೇಳೆ ಆ ಎರಡೂ ರಾಜ್ಯಗಳಲ್ಲಿ ಇರುವ ಅಸ್ಪøಶ್ಯ ಮನಸ್ಥಿತಿಗಳ ಕುರಿತು ಏನನ್ನೂ ಆಡದಿರುವುದರ ಹಿನ್ನೆಲೆ ಏನು? `ಸರ್ವರೂ ಸಮಾನರು' ಅನ್ನುವ ಸಂವಿಧಾನ ಜಾರಿಯಾಗಿ 70 ವರ್ಷಗಳು ಕಳೆದ ಬಳಿಕವೂ ಕೆಲವರು ಹೆಚ್ಚು ಸಮಾನರಾಗಿರುವುದು ಯಾಕೆ ರಾಜಕೀಯ ಭಾಷಣಗಳಲ್ಲಿ ಪ್ರಾಮುಖ್ಯತೆ ಪಡಕೊಳ್ಳುವುದಿಲ್ಲ? ಓರ್ವ ವ್ಯಕ್ತಿಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದುದು ಏನೆಂದರೆ, ಘನತೆ, ಗೌರವ, ಸ್ವಾಭಿಮಾನ, ಹಕ್ಕು, ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ. ಯಾರೂ ಇದಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬಾರದು. ಸಂವಿಧಾನಕ್ಕಿಂತ ಮೊದಲು ಈ ದೇಶದಲ್ಲಿ ಆಚರಣೆಯಲ್ಲಿದ್ದ ಎಲ್ಲ ಅಸ್ಪೃಶ್ಯ ಪದ್ಧತಿಗಳನ್ನೂ ಸಂವಿಧಾನ ಅಮಾನ್ಯಗೊಳಿಸಿದೆ. ಮನುಷ್ಯರನ್ನು ಧರ್ಮ, ಚರ್ಮ, ಭಾಷೆ, ಹೆಸರು, ಜಾತಿ, ಆಹಾರ, ಆರಾಧನೆ, ಲಿಂಗದ ಹೆಸರಲ್ಲಿ ಅಸಮಾನವಾಗಿ ಕಾಣುವುದನ್ನು ಅನಾಗರಿಕವಾಗಿ ಕಾಣಲಾಗಿದೆ. ಅಚ್ಚರಿ ಏನೆಂದರೆ ಸಂವಿಧಾನ ಜಾರಿಯಾಗುವಾಗ ಇದ್ದ ತಲೆಮಾರು ಇವತ್ತು ಬಹುತೇಕ ನಿಧನ ಪಟ್ಟಿ ಸೇರಿಕೊಂಡಿದೆ ಅಥವಾ ವೃದ್ಧಾಪ್ಯ ಪಟ್ಟಿಯಲ್ಲಿದೆ. ಈಗ ದಲಿತ ಅರ್ಚಕರನ್ನು ವಿರೋಧಿಸುವುದು ಅಥವಾ ದಲಿತರು ಮೀಸೆ ಬೆಳೆಸುವುದಕ್ಕೆ ಅಡ್ಡಿಪಡಿಸುವುದು ಆ ಹಳೆ ತಲೆಮಾರು ಅಲ್ಲ. ಹೊಸ ಪೀಳಿಗೆ. ಆದ್ದರಿಂದ ಈ ಪೀಳಿಗೆಗೆ ಸಂವಿಧಾನ ಗೊತ್ತಿಲ್ಲ ಎಂದು ಹೇಳುವ ಹಾಗಿಲ್ಲ. ಇಷ್ಟಿದ್ದೂ ಈ ವರ್ಗ ಮನುಷ್ಯರಲ್ಲೇ ಕೆಲವರನ್ನು `ಅಸ್ಪೃಶ್ಯ'ರಾಗಿ ಕಾಣುತ್ತಾರಲ್ಲಾ, ಏನಿದರ ಮರ್ಮ? ಭಾರತೀಯ ರಾಜಕೀಯ ಚಟುವಟಿಕೆಗಳಿಗೂ ಇದರಲ್ಲಿ ಪಾತ್ರ ಇರಬಹುದೇ? ಯಾಕೆಂದರೆ, ರಾಜಕಾರಣಿಗಳು ಅಸ್ಪøಶ್ಯ ಆಚರಣೆಯನ್ನು ಖಂಡಿಸಿ ಅಥವಾ ಅದನ್ನೇ ಕೇಂದ್ರೀಯ ವಸ್ತುವಾಗಿಸಿಕೊಂಡು ಮಾತಾಡುವುದು ತೀರಾ ತೀರಾ ಕಡಿಮೆ. ಸ್ವಾತಂತ್ರ್ಯದ ಆರಂಭ ಕಾಲದಲ್ಲಿ ಇಂಥ ಭಾಷಣಗಳು ಆಗಿವೆಯೇ ಏನೋ. ಆದರೆ, ಬರ ಬರುತ್ತಾ ರಾಜಕಾರಣವೆಂಬುದು ಮತ ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತನೆ ಹೊಂದುತ್ತಲೇ, ಭಾಷಣಗಳ ಧಾಟಿಯೂ ಬದಲಾಯಿತು. ಅಜೆಂಡಾಗಳೂ ಬರಲಾದುವು. ಅಸ್ಪøಶ್ಯತೆಯನ್ನು ನಿವಾರಿಸುವುದಕ್ಕಿಂತ ಉಳಿಸಿಕೊಳ್ಳುವುದರಲ್ಲಿಯೇ ಲಾಭವನ್ನು ಕಂಡುಕೊಳ್ಳಲಾಯಿತು. ತಾತ್ಕಾಲಿಕ ಕೊಡುಗೆಗಳ ಮೂಲಕ ಅಸ್ಪøಶ್ಯರನ್ನು ತೃಪ್ತಿಪಡಿಸುವುದು ಮತ್ತು ಅಸ್ಪೃಶ್ಯತೆಯನ್ನು ಆಚರಿಸುವವರೊಂದಿಗೆ ಹೊಂದಿಕೊಂಡು ನಡೆಯುವುದನ್ನು ರಾಜಕೀಯ ಸ್ಟ್ರಾಟಜಿಯಾಗಿ ಕಂಡುಕೊಳ್ಳಲಾಯಿತು. ಅಮಿತ್ ಷಾರ ಕೇರಳ ಭೇಟಿಯಲ್ಲಿ ವ್ಯಕ್ತವಾಗಿರುವುದೂ ಇದುವೇ. ಅವರು ಕೇರಳಕ್ಕೆ ಭೇಟಿ ಕೊಡುವುದಕ್ಕಿಂತ ಮೊದಲೇ ಅರ್ಚಕ ಹುದ್ದೆಗೆ ಸಂಬಂಧಿಸಿ ಕೇರಳ ಸರಕಾರವು ತೀರ್ಮಾನವನ್ನು ಕೈಗೊಂಡಿತ್ತು. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಅದೊಂದು ಐತಿಹಾಸಿಕ ನಿರ್ಧಾರ. ರಾಷ್ಟ್ರವನ್ನಾಳುವ ಪಕ್ಷದ ಅಧ್ಯಕ್ಷ ಎಂಬ ನೆಲೆಯಲ್ಲಿ ಆ ಬಗ್ಗೆ ಮಾತಾಡುವುದು ಅಮಿತ್ ಷಾರ ಹೊಣೆಯಾಗಿತ್ತು. `ದಲಿತರು ಮತ್ತು ಬ್ರಾಹ್ಮಣರು' ಸಮಾನರು ಎಂಬುದನ್ನು ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯ ಘೋಷಿಸುವುದೆಂದರೆ, ಅದು ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಸಂಘರ್ಷಕ್ಕಿಂತ ಎಷ್ಟೋ ಪಾಲು ದೊಡ್ಡದು. ಒಂದು ರೀತಿಯಲ್ಲಿ ಪರಸ್ಪರ ಹೋಲಿಕೆಗೆ ಒಳಗಾಗಬಾರದಷ್ಟು ದೊಡ್ಡದು. ಒಂದು ದೊಡ್ಡ ಸಮುದಾಯ ಸಮಾನತೆಯ ಸ್ವಾತಂತ್ರ್ಯವನ್ನು ಅನುಭವಿಸುವುದನ್ನು ರಾಜಕೀಯ ಮರೆತು ಶ್ಲಾಘಿಸಬೇಕಾದುದು ಮುತ್ಸದ್ದಿ ನಡೆ. ಒಂದು ವೇಳೆ, ಇದು ನಡೆಯುತ್ತಿದ್ದರೆ, ನಂಬೂದರಿ ಯೋಗಕ್ಷೇಮ ಸಭಾವು ಅಕ್ಷೇಪ ವ್ಯಕ್ತಪಡಿಸುವ ಧೈರ್ಯ ತೋರುತ್ತಿರಲಿಲ್ಲವೇನೋ. ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿಯೂ ಹೇಳಬಹುದು. ರಾಹುಲ್ ಗಾಂಧಿಗೂ ಇದೇ ಮಾತನ್ನು ಅನ್ವಯಿಸಬಹುದು. ದಮನಿತ ಸಮುದಾಯವೊಂದು ಘನತೆ, ಸ್ವಾಭಿಮಾನವನ್ನು ಆಗ್ರಹಿಸಿ `ಮೀಸೆ ಚಳವಳಿ' ನಡೆಸುತ್ತಿರುವಾಗ, ಅಲ್ಲೇ ಇದ್ದೂ ಆ ಬಗ್ಗೆ ಏನನ್ನೂ ಆಡದೇ ಇರುವುದೆಂದರೇನು? ಯಾಕೆ ನರೇಂದ್ರ ಮೋದಿಯವರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ನಿರ್ಲಕ್ಷಿಸಿದರು? ಪ್ರಧಾನಿ ಎಂಬ ನೆಲೆಯಲ್ಲಿ ಅವರ ಮಾತಿಗೆ ವಿಶೇಷ ನೆಲೆ-ಬೆಲೆಯಿದೆ. ಅದು ರವಾನಿಸುವ ಸಂದೇಶಕ್ಕೆ ಮಹತ್ವ ಇದೆ. ಇದು ಪ್ರಧಾನಿಯವರಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದೂ ಅವರೇಕೆ ಬರೇ ರಾಜಕೀಯವನ್ನಷ್ಟೇ ಮಾತಾಡಿದರು? ಒಂದು ಸಮುದಾಯದ ಸ್ವಾಭಿಮಾನದ ಪ್ರಶ್ನೆಯನ್ನು ಯಾಕೆ ಅವರು ನಿರ್ಲಕ್ಷಿಸಿದರು?
     ಕೇರಳವೇ ಇರಲಿ, ಗುಜರಾತೇ ಇರಲಿ, ದಲಿತರಿಗೆ ಸಂಬಂಧಿಸಿ ಮೇಲ್ವರ್ಗದ ನಿಲುವಿನಲ್ಲಿ ಭಾರೀ ವ್ಯತ್ಯಾಸವೇನೂ ಇಲ್ಲ ಅನ್ನುವುದನ್ನು ಅರ್ಚಕ ಮತ್ತು ಮೀಸೆ ಚಳವಳಿ ಸ್ಪಷ್ಟಪಡಿಸಿದೆ. ದಲಿತರನ್ನು ಈ ದೇಶ ಈಗಲೂ ಹೊರಗಿಟ್ಟೇ ನೋಡುತ್ತಿದೆ. ಈ ಬಗ್ಗೆ ರಾಜಕಾರಣಿಗಳಲ್ಲಿ ಗಾಢ ನಿರ್ಲಕ್ಷ್ಯವೂ ಇದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾರು ಇದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

No comments:

Post a Comment