ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್ |
ನಿಜವಾಗಿ ಈ ದ್ವಂದ್ವ ಇಲ್ಲಿಗೇ ಮುಗಿಯುವುದಿಲ್ಲ. 2014ರ ಆರಂಭದಲ್ಲಿ ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಕೂಟವು ನೋಟು ರದ್ಧತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದು ಅದರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಮಾಧ್ಯಮಗಳೂ ಚರ್ಚೆ ನಡೆಸಿದ್ದುವು. ಆಗ ಈ ಚಿಂತನೆಗೆ ಪ್ರಬಲ ವಿರೋಧ ವ್ಯಕ್ತವಾದದ್ದೇ ಬಿಜೆಪಿಯಿಂದ. ಆಗ ಪಕ್ಷದ ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ನೋಟು ರದ್ಧತಿ ಚಿಂತನೆಯನ್ನು `ಬಡವ ವಿರೋಧಿ ನಿಲುವು’ ಎಂದೇ ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ಮರಳಿ ತರಬೇಕೆಂಬ ಅಗ್ರಹವನ್ನು ಮರೆಸಲು ಯುಪಿಎ ಕೂಟವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ್ದ ವೀಡಿಯೋ ಕಳೆದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನೊಂದು ಆಧಾರ್ ಕಾರ್ಡ್. ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನು ಖಂಡಿಸಿದ್ದರು. ದುರಂತ ಏನೆಂದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಮೂರೂ ವಿಷಯಗಳ ಮೇಲೆ ಗಾಢ ವಿಸ್ಮøತಿಯನ್ನು ತೋರಿದೆ. ಅಧಿಕಾರದಲ್ಲಿರುವಾಗ ಒಂದು ನಿಲುವು ಮತ್ತು ಅಧಿಕಾರ ಕೈ ತಪ್ಪಿದಾಗ ಇನ್ನೊಂದು ನಿಲುವು-ಇದಕ್ಕೆ ಸಂದರ್ಭ ಸಾಧಕತನ ಅನ್ನುವುದಕ್ಕಿಂತ ಉತ್ತಮ ಹೆಸರು ಬೇರೆ ಯಾವುದಿದೆ? ಒಂದು ವೇಳೆ, ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅದು ಟಿಪ್ಪು ಜಯಂತಿ ಯನ್ನು ಸರಕಾರದ ಮತ್ತು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಘೋಷಿಸದೆಂದು ಹೇಗೆ ಹೇಳು ವುದು? ಟಿಪ್ಪು ಜಯಂತಿಯ ಪ್ರಯುಕ್ತ ಸರಕಾರಿ ರಜೆ ಸಾರದೆಂದು ಹೇಗೆ ನಂಬುವುದು?
ನಿಜವಾಗಿ ಬಿಜೆಪಿಗೆ ಸದ್ಯ ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಇಶ್ಯೂವೊಂದರ ಅಗತ್ಯ ಇದೆ. ಟಿಪ್ಪು ಅದಕ್ಕೆ ಸೂಕ್ತ ವ್ಯಕ್ತಿ ಎಂದು ಅನಿಸಿದೆ. ಈ ಮೂಲಕ ಕೆಲವು ದಿನಗಳ ಮಟ್ಟಿಗೆ ಸುದ್ದಿಯಲ್ಲಿರುವುದನ್ನು ಅದು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು- ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಟಿಪ್ಪುವಿನ ನಿಜ ಇತಿಹಾಸವನ್ನು ಸಮಾಜದ ಮುಂದಿಡುವುದು. ಇನ್ನೊಂದು- ಟಿಪ್ಪುವಿನ ಕುರಿತಂತೆ ಯಾವುದೇ ಕಾರ್ಯಕ್ರಮ, ರಾಲಿ, ಚರ್ಚೆಗಳನ್ನು ಏರ್ಪಡಿಸದೇ ಮೌನವಾಗಿರುವುದು. ಟಿಪ್ಪು ಚರ್ಚೆಗೊಳಗಾಗಬೇಕಾದದ್ದು ಬಿಜೆಪಿಯ ಸದ್ಯದ ಅಗತ್ಯ. ಅದು ಸಕಾರಾತ್ಮಕವೋ ನಕಾರಾತ್ಮಕವೋ ಎಂಬುದು ಮುಖ್ಯ ಅಲ್ಲ. ಟಿಪ್ಪು ಚರ್ಚೆಯಲ್ಲಿರಬೇಕು ಮತ್ತು ಆ ಚರ್ಚೆಯ ಮರೆಯಲ್ಲಿ ಹಿಂದೂ ಧ್ರುವೀಕರಣ ನಡೆಸಬೇಕು. ಬಿಜೆಪಿ ಸಂಕಷ್ಟದಲ್ಲಿರುವಾಗಲೆಲ್ಲ ಅದನ್ನು ಪಾರುಗೊಳಿಸುತ್ತಿರುವುದು ಇಂಥ ಕೃತಕ ವಿಷಯಗಳೇ. ನೋಟು ರದ್ಧತಿ, ಜಿಎಸ್‍ಟಿ ಮತ್ತು ಉದ್ಯೋಗ ಕುಸಿತದ ಕಾರಣದಿಂದ ದೇಶದ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಈ ಸಮಯದಲ್ಲಿ ಅದು ತಾಜ್‍ಮಹಲ್ ಅನ್ನು ಚರ್ಚೆಗೆತ್ತಿಕೊಂಡಿದೆ. ಹಾಗಂತ ತಾಜ್‍ಮಹಲ್‍ನ ಇತಿಹಾಸ ಅದಕ್ಕೆ ಗೊತ್ತಿಲ್ಲ ಎಂದಲ್ಲ. ಅದೊಂದು ತಂತ್ರಗಾರಿಕೆ. ಬಿಜೆಪಿಗೆ ಇಂಥ ದೊಡ್ಡ ಇತಿಹಾಸವೇ ಇದೆ. ಆದ್ದರಿಂದ ಬಿಜೆಪಿ ತೋಡಿದ ಹಳ್ಳಕ್ಕೆ ಬೀಳದಂತೆ ಸಮಾಜ ಎಚ್ಚರಿಕೆ ವಹಿಸಬೇಕು. ಟಿಪ್ಪುವಿನ ಬಗ್ಗೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೊದಲು ಇದು ಎಷ್ಟು ಅಗತ್ಯ ಅನ್ನುವ ಬಗ್ಗೆ ಗಂಭೀರ ಅವಲೋಕನ ನಡೆಸಬೇಕು. ಟಿಪ್ಪುವಿನ ಇತಿಹಾಸವನ್ನು ಸಮಾಜಕ್ಕೆ ಪರಿಚಯಿಸಬೇಕು ಎಂಬ ಉಮೇದಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅಂತಿಮವಾಗಿ ಬಿಜೆಪಿ ಲಾಭ ಮಾಡಿ ಕೊಡಬಲ್ಲುದೇ ಎಂಬುದೂ ಚರ್ಚೆಗೆಗೊಳಗಾಗ ಬೇಕು. ಟಿ.ವಿ. ಚಾನೆಲ್‍ಗಳು ತಮ್ಮ ಒಂದಷ್ಟು ಪ್ರೈಮ್‍ಟೈಂ ಅನ್ನು ಟಿಪ್ಪು ಚರ್ಚೆಗಾಗಿ ಮೀಸಲಿಡಬೇಕೆಂದು ಬಿಜೆಪಿ ಮನಸಾರೆ ಬಯಸುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ ಧಾರಾಳ ಲೇಖನ ಮತ್ತು ಸುದ್ದಿಗಳು ಬರುವುದನ್ನು ಅದು ನಿರೀಕ್ಷಿಸುತ್ತಿದೆ. ಈ ಬಯಕೆ ಮತ್ತು ನಿರೀಕ್ಷೆಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುವುದೆಂದರೆ, ಅದು ಬಿಜೆಪಿಯ ಸೋಲು ಮತ್ತು ಟಿಪ್ಪುವಿನ ಗೆಲುವು. ಇದು ಸದ್ಯದ ಅಗತ್ಯವೂ ಹೌದು.
No comments:
Post a Comment