ನೋಟು ನಿಷೇಧ ಮಾಡಿದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚತುರ ಅರ್ಥ ತಜ್ಞನಾಗಿ ಮತ್ತು ಚಾಣಕ್ಯನಿಗೆ ಸಮವಾಗಿ ಕಂಡವರು ಹಾಗೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರ ಮಾತುಗಳನ್ನು ತಮಾಷೆ ಮಾಡಿದವರಲ್ಲಿ ಹೆಚ್ಚಿನವರು ಈಗ ತತ್ವಜ್ಞಾನಿಗಳಂತೆ ಆಡತೊಡಗಿದ್ದಾರೆ. ಅತ್ತ ನರೇಂದ್ರ
ಮೋದಿಯವರನ್ನು ಬಿಡಲೂ ಆಗದ ಇತ್ತ ಅವರ `ಅರ್ಥಕ್ರಾಂತಿ’ಯನ್ನು ಬೆಂಬಲಿಸಲೂ ಆಗದ ಸ್ಥಿತಿಗೆ
ತಲುಪಿದ್ದಾರೆ. ಭಾರತೀಯ ಸ್ಟೇಟ್‍ಬ್ಯಾಂಕ್ (ಎಸ್‍ಬಿಐ) ದೀರ್ಘ ಸಮಯದ ಬಳಿಕ ಮೌನ
ಮುರಿದಿದೆ. ನೋಟು ಬದಲಾಯಿಸುವುದಕ್ಕಾಗಿ ಸರತಿ ಸಾಲಲ್ಲಿ ನಿಂತು ತನ್ನ ಗ್ರಾಹಕರು ಸಾವಿಗೆ
ತುತ್ತಾಗಲೂ ಮಾತಾಡದಿದ್ದ ಎಸ್‍ಬಿಐ ಇದೀಗ ಜಿಡಿಪಿ ಕುಸಿತಕ್ಕೆ ತನ್ನ ನೇರ
ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಸರಕಾರ ಹೇಳುತ್ತಿರುವಂತೆ `ಇದು ತಾಂತ್ರಿಕ
ದೋಷವಲ್ಲ, ವಾಸ್ತವಿಕ ಸಂಗತಿ’ ಎಂದು ಕಟುವಾಗಿ ಹೇಳಿದೆ. ಇದರ ನಡುವೆ ಬಿಜೆಪಿಗೆ
ಆಪ್ತರಾಗಿರುವ ಮತ್ತು ಸದಾ ಬಿಜೆಪಿ ಪರ ವಕಾಲತ್ತು ವಹಿಸುವ ಡಾ| ಸುಬ್ರಹ್ಮಣಂ ಸ್ವಾಮಿ
ಮತ್ತು ಎಸ್. ಗುರು ಮೂರ್ತಿಯವರು ಮೊದಲ ಬಾರಿ ಮನ್‍ಮೋಹನ್ ಸಿಂಗ್‍ರ ಭಾಷೆಯಲ್ಲಿ
ಮಾತಾಡಿದ್ದಾರೆ. ಇಬ್ಬರಿಗೂ ದೇಶದ ಅರ್ಥವ್ಯವಸ್ಥೆ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ
ಇದೆ. `ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದತ್ತ ಸಾಗುತ್ತಿದೆ’ ಎಂಬ ಭಯ ಸುಬ್ರಹ್ಮಣ್ಯಂ
ಸ್ವಾಮಿಯವರದ್ದು. ಇದು ಹೀಗೆ ಮುಂದುವರಿದರೆ ಬ್ಯಾಂಕ್‍ಗಳು ಕುಸಿಯಬಹುದು, ಕೈಗಾರಿಕೆಗಳು
ಮುಚ್ಚಬಹುದು ಮತ್ತು ದೇಶ ‘ಬಿಕ್ಕಟ್ಟಿನತ್ತ ಸಾಗಬಹುದು..’ ಎಂದೂ ಅವರು ಹೇಳಿದ್ದಾರೆ.
ಗುರುಮೂರ್ತಿಯವರ ಆತಂಕವೂ ಇದಕ್ಕಿಂತ ಕಡಿಮೆಯದ್ದಲ್ಲ. ಮನ್‍ಮೋಹನ್ ಸಿಂಗ್‍ರಂತೂ ನೋಟು
ನಿಷೇಧದ ಆರಂಭದಲ್ಲಿಯೇ ಅದನ್ನು ಅನಗತ್ಯ ಮತ್ತು ಅಪಾಯಕಾರಿ ನಡೆ’ ಎಂದೇ
ವ್ಯಾಖ್ಯಾನಿಸಿದ್ದರು. ಚಿದಂಬರಂ ಅವರೂ ನೋಟು ನಿಷೇಧವನ್ನು ‘ವಿಫಲ ಕ್ರಾಂತಿ’ ಎಂದು
ಕರೆದಿದ್ದರು. ಆದರೆ ಸಾರ್ವಜನಿಕವಾಗಿ ಈ ಇಬ್ಬರು ಅರ್ಥ ತಜ್ಞರ ಮಾತುಗಳಿಗೆ ಭಾರೀ ಮಹತ್ವ
ಲಭ್ಯವಾಗಿರಲಿಲ್ಲ. ಅವರ ಮಾತುಗಳಲ್ಲಿದ್ದ ಸಹಜ ಆತಂಕವನ್ನು ಬಿಜೆಪಿ ಮತ್ತು ಅದರ ಬೆಂಬಲಿಗ
ಮಾಧ್ಯಮಗಳು ‘ವಿರೋಧ ಪಕ್ಷದ ಟೀಕೆ’ಯಾಗಿ ಕಡೆಗಣಿಸಿದುವು. ವ್ಯಂಗ್ಯಕ್ಕೂ ಬಳಸಿಕೊಂಡವು.
ನೋಟು ನಿಷೇಧದ ಸುತ್ತ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಮಾಡಿರುವ ವರದಿ, ಚರ್ಚೆ ಮತ್ತು
ವಿಶ್ಲೇಷಣೆಗಳು ಎಷ್ಟು ಏಕಮುಖವಾಗಿತ್ತು ಅಂದರೆ, ಬ್ಯಾಂಕ್‍ಗಳ ಎದುರು ಸರತಿ ಸಾಲಲ್ಲಿ
ನಿಂತು ಸಾವಿಗೀಡಾದ ಪ್ರಕರಣಗಳನ್ನು ಕೂಡಾ ತೀರಾ ಹಗುರವಾಗಿ ಕಾಣಲಾಯಿತು. ‘ದೇಶಕ್ಕಾಗಿ,
ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮತ್ತು ನಕಲಿ ನೋಟಿನ
ಚಲಾವಣೆಯನ್ನು ತಡೆಯುವುದಕ್ಕಾಗಿ..’ ಎಂದೆಲ್ಲಾ ಸರಕಾರದ ನುಡಿಮುತ್ತನ್ನು ಮಾಧ್ಯಮಗಳು
ಅಧ್ಯಯನಾತ್ಮಕ ವರದಿಯಂತೆ ಮಂಡಿಸಿದುವು. ಕಾಶ್ಮೀರದ ಕಲ್ಲೆಸೆತಕ್ಕೆ ನಕಲಿ ನೋಟುಗಳು ಕಾರಣ
ಅಂದಿತು ಸರಕಾರ. ನಕ್ಸಲರನ್ನೂ ಅದೇ ಹಣ ಸಾಕುತ್ತಿದೆ ಅಂದಿತು. ಪಾಕಿಸ್ತಾನಕ್ಕೆ
ಆಘಾತವಾಗಿದೆ ಎಂಬಂತೆ ಹೇಳಿಕೊಂಡಿತು. ನೋಟು ನಿಷೇಧದ ಸಮಯದಲ್ಲಿ 50 ದಿನಗಳ ಅವಧಿಯನ್ನು
ಭಾರತೀಯರಿಂದ ಅಪೇಕ್ಷಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆ 50 ದಿನವನ್ನು ದಾಟಿ 150
ದಿನಗಳಾದರೂ ಯಾವ ಅಚ್ಛೇ ದಿನವನ್ನೂ ನೀಡದಿದ್ದಾಗ ಮತ್ತು ಕನಿಷ್ಠ ನೋಟು ನಿಷೇಧಕ್ಕಾಗಿ
ಪಶ್ಚಾತ್ತಾಪವನ್ನೂ ಪಡದಿದ್ದಾಗ ಚಿದಂಬರಂ, ಮನಮೋಹನ್‍ರ ಮಾತುಗಳನ್ನು ಸಮಾಜ
ನೆನಪಿಸತೊಡಗಿತು. ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚು ಕಲ್ಲೆಸೆತ
ಮತ್ತು ಹಿಂಸಾಚಾರ ಪ್ರಕರಣಗಳು ನಡೆದುವು. ಸತತ 100ಕ್ಕಿಂತಲೂ ಅಧಿಕ ದಿನಗಳ ವರೆಗೆ
ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆದುವು. ನಕ್ಸಲರು ಸೇನೆಯ ವಿರುದ್ಧ ಅತ್ಯಂತ ಪ್ರಬಲ
ದಾಳಿಗಳನ್ನು ಸಂಘಟಿಸಿದರು. ನೋಟು ನಿಷೇಧವು ಕಾಶ್ಮೀರದ ಬೆಳವಣಿಗೆಗಳ ಮೇಲೆ ಪರಿಣಾಮ
ಬೀರಿಲ್ಲ ಮತ್ತು ನಕ್ಸಲರನ್ನು ಅದು ಈ ಹಿಂದಿಗಿಂತಲೂ ಹೆಚ್ಚು ಚುರುಕುಗೊಳಿಸಿದೆ ಎಂಬ
ಅಂಶಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗತೊಡಗಿದಾಗ ಸರಕಾರವು ನೋಟು ನಿಷೇಧಕ್ಕೆ
ಇನ್ನೊಂದು ಕಾರಣವನ್ನು ಮುಂದಿಟ್ಟಿತು. ತೆರಿಗೆ ವಂಚಕರನ್ನು ಪತ್ತೆ ಹಚ್ಚುವುದು ಅದರ
ಗುರಿಯಾಗಿತ್ತು ಅಂದಿತು. ಇದಾಗಿ ಕೆಲವೇ ಸಮಯದಲ್ಲಿ ಆರ್‍ಬಿಐ ಹೊರಡಿಸಿದ ಹೇಳಿಕೆಯು
ಕೇಂದ್ರವನ್ನು ಮತ್ತೊಂದು ಆಘಾತ ತಳ್ಳಿತು. ನಿಷೇಧಿತ ನೋಟುಗಳಲ್ಲಿ 99% ನೋಟುಗಳೂ
ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಅದು ಹೇಳಿತು. ಈ ಮುಖಾಂತರ ನೋಟು ನಿಷೇಧ ಎಂಬ
ಪ್ರಕ್ರಿಯೆಯೇ ಅತೀ ದೊಡ್ಡ ವಿಫಲ ಪ್ರಯೋಗ ಎಂಬುದಾಗಿ ಸಾಬೀತಾಯಿತು. ಇದರ ಬೆನ್ನಿಗೇ
ಕೇಂದ್ರ ಸರಕಾರವು ಜಿಎಸ್‍ಟಿ ತೆರಿಗೆ ಪದ್ಧತಿಯನ್ನು ಜನರ ಮೇಲೆ ಹೇರಿತು. ಸದ್ಯ ನೋಟು
ನಿಷೇಧ ಮತ್ತು ಜಿಎಸ್‍ಟಿಗಳು ಸೇರಿಕೊಂಡು ದೇಶದ ಅರ್ಥವ್ಯವಸ್ಥೆಯನ್ನೇ ಅಲುಗಾಡಿಸುವ
ಹಂತಕ್ಕೆ ತಲುಪಿಬಿಟ್ಟಿದೆ. ಈ ವರೆಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ‘ಅಚ್ಛೇ ದಿನ್’
ಅನ್ನು ಕನವರಿಸುತ್ತಿದ್ದ ಮತ್ತು ಒಳಗೊಳಗೇ ಸುಖಿಸುತ್ತಿದ್ದವರಲ್ಲಿ ಅನೇಕರು ತಮ್ಮ
ನಿರಾಶೆಯನ್ನು ಒಬ್ಬೊಬ್ಬರಾಗಿ ಹಂಚಿಕೊಳ್ಳತೊಡಗಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳು,
ಉದ್ದಿಮೆದಾರರು ನೋಟು ನಿಷೇಧದ ಆರಂಭದಲ್ಲಿಯೇ ಅದರ ಪರಿಣಾಮವನ್ನು ಎದುರಿಸತೊಡಗಿದ್ದರು.
ಇವರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿಲ್ಲದ ಮಂದಿ
ಆರಂಭದಲ್ಲೇ ತಮ್ಮ ಆತಂಕವನ್ನು ಸಂದರ್ಭಾನುಸಾರ ಹಂಚಿಕೊಂಡೂ ಇದ್ದರು. ಆದರೆ, ಮೋದಿ
ಬೆಂಬಲಿಗ ವರ್ತಕರು ಮತ್ತು ಜನಸಾಮಾನ್ಯರು ಅಷ್ಟು ಬೇಗ ಒಪ್ಪಿಕೊಳ್ಳಲು
ಸಿದ್ಧರಾಗಿರಲಿಲ್ಲ. ವ್ಯಾಪಾರ-ವಹಿವಾಟುಗಳ ಮೇಲೆ ನೋಟು ನಿಷೇಧದಿಂದ ಅಡ್ಡ ಪರಿಣಾಮ
ಉಂಟಾಗಿದ್ದರೂ ಮತ್ತು ವ್ಯವಹಾರಗಳಲ್ಲಿ ತೀವ್ರ ಹಿನ್ನಡೆ ಎದುರಾಗಿದ್ದರೂ ಅದನ್ನು
ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಅವರು ಹಿಂಜರಿಕೆ ತೋರಿದ್ದರು. ಇದಕ್ಕೆ ಇರುವ
ಇನ್ನೊಂದು ಕಾರಣ, ಭ್ರಮೆ. ಮಾಧ್ಯಮಗಳು ಮೋದಿಯವರ ಸುತ್ತ ಅಂಥದ್ದೊಂದು ಭ್ರಮೆಯನ್ನು
ಹುಟ್ಟು ಹಾಕಿದ್ದುವು. ಅಳೆದೂ ತೂಗಿ ಆಡುವ ಮನ್‍ಮೋಹನ್ ಸಿಂಗ್‍ರ ಮಾತಿಗಿಂತ
ವಾಚಾಳಿಯಾಗಿರುವ ಮೋದಿಯವರನ್ನು ಅವು ಭಾರತದ ವಿಮೋಚಕನಂತೆ ಬಿಂಬಿಸಿದುವು. ಕಾಂಗ್ರೆಸ್‍ಗೆ
60 ವರ್ಷಗಳನ್ನು ಕೊಟ್ಟು ಕೆಟ್ಟೆವು ಎಂದು ಜನರು ಅಂದುಕೊಳ್ಳುವಷ್ಟರ ಮಟ್ಟಿಗೆ ದೇಶ
ಭ್ರಮೆಯಲ್ಲಿ ತೇಲತೊಡಗಿತು. ಹೀಗೆ ಭ್ರಮೆ ಮತ್ತು ನಿರೀಕ್ಷೆಗಳ ಮೇಲೆ ಬದುಕತೊಡಗಿದ
ಜನರನ್ನು ಅರ್ಥತಜ್ಞನೂ ಅಲ್ಲದ, ಪ್ರಬಲ ವೈಚಾರಿಕ ನೆಲೆಗಟ್ಟನ್ನೂ ಹೊಂದಿಲ್ಲದ ಮತ್ತು
ಆರ್ಥಿಕ ಒಳ-ಹೊರಗನ್ನು ವಿಶ್ಲೇಷಣೆಗೆ ಒಳಪಡಿಸಲೂ ಶಕ್ತರಲ್ಲದ ಮೋದಿಯವರು ಪ್ರಯೋಗಕ್ಕೆ
ಒಡ್ಡಿದರು.
ಇದೀಗ ಆ ಭ್ರಮೆಯಲ್ಲಿ ನಿಧಾನಕ್ಕೆ ಬಿರುಕುಗಳು ಮೂಡತೊಡಗಿವೆ. ಕವಿದ ಪೊರೆ ಕಳಚಿಕೊಂಡು ವಾಸ್ತವ ಭಾರತ ಕಾಣತೊಡಗಿದೆ. ಸಣ್ಣ ಉದ್ದಿಮೆಗಳು ಈಗಲೂ ಸಾಧ್ಯವಾಗದೇ ಒದ್ದಾಡುತ್ತಿವೆ. ಕೈಗಾರಿಕೆಗಳಿಗೆ ಬಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ವ್ಯಾಪಾರ-ವಹಿವಾಟುಗಳಲ್ಲಿ ಕಾಣಿಸಿಕೊಂಡಿದ್ದ ನಿಧಾನತೆ ಹಾಗೆಯೇ ಮುಂದುವರಿದಿದೆ. ಉತ್ಪಾದನೆ ಕುಂಠಿತಗೊಂಡಿದೆ. ರಫ್ತು ವ್ಯವಹಾರಗಳಲ್ಲಿ ಕಾಣಿಸಿಕೊಂಡಿದ್ದ ಇಳಿಮುಖದಲ್ಲಿ ಏನೇನೂ ಬದಲಾವಣೆಯಾಗಿಲ್ಲ. ಸಣ್ಣ-ಪುಟ್ಟ ಬ್ಯಾಂಕ್‍ಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಭಯಮಿಶ್ರಿತ ಮಾತುಗಳೂ ಸಾರ್ವಜನಿಕವಾಗಿ ಕೇಳಿ ಬರತೊಡಗಿವೆ. ಸುಬ್ರಹ್ಮಣ್ಯ ಸ್ವಾಮಿಯವರ ಹೇಳಿಕೆಯೂ ಇಂಥ ಸಾಧ್ಯತೆಯೆಡೆಗೇ ಬೊಟ್ಟು ಮಾಡುತ್ತಿವೆ. ಆದ್ದರಿಂದ ಕೇಂದ್ರ ಸರಕಾರವು ಆಗಿರುವ ವೈಫಲ್ಯವನ್ನು ಒಪ್ಪಿಕೊಂಡು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗಿಮಿಕ್‍ಗಳು ಜನರನ್ನು ಮರುಳುಗೊಳಿಸಬಹುದು, ಆದರೆ ದೇಶವನ್ನಲ್ಲ. ದೇಶವೆಂಬ ವ್ಯವಸ್ಥೆ ಗಿಮಿಕ್‍ಗಳಾಚೆಗಿನ ವಾಸ್ತವ. ಈ ವಾಸ್ತವಕ್ಕೆ ಮುಖಾಮುಖಿಯಾಗಬೇಕಾದುದು ಇಂದಿನ ಅಗತ್ಯ.
ಇದೀಗ ಆ ಭ್ರಮೆಯಲ್ಲಿ ನಿಧಾನಕ್ಕೆ ಬಿರುಕುಗಳು ಮೂಡತೊಡಗಿವೆ. ಕವಿದ ಪೊರೆ ಕಳಚಿಕೊಂಡು ವಾಸ್ತವ ಭಾರತ ಕಾಣತೊಡಗಿದೆ. ಸಣ್ಣ ಉದ್ದಿಮೆಗಳು ಈಗಲೂ ಸಾಧ್ಯವಾಗದೇ ಒದ್ದಾಡುತ್ತಿವೆ. ಕೈಗಾರಿಕೆಗಳಿಗೆ ಬಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ವ್ಯಾಪಾರ-ವಹಿವಾಟುಗಳಲ್ಲಿ ಕಾಣಿಸಿಕೊಂಡಿದ್ದ ನಿಧಾನತೆ ಹಾಗೆಯೇ ಮುಂದುವರಿದಿದೆ. ಉತ್ಪಾದನೆ ಕುಂಠಿತಗೊಂಡಿದೆ. ರಫ್ತು ವ್ಯವಹಾರಗಳಲ್ಲಿ ಕಾಣಿಸಿಕೊಂಡಿದ್ದ ಇಳಿಮುಖದಲ್ಲಿ ಏನೇನೂ ಬದಲಾವಣೆಯಾಗಿಲ್ಲ. ಸಣ್ಣ-ಪುಟ್ಟ ಬ್ಯಾಂಕ್‍ಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಭಯಮಿಶ್ರಿತ ಮಾತುಗಳೂ ಸಾರ್ವಜನಿಕವಾಗಿ ಕೇಳಿ ಬರತೊಡಗಿವೆ. ಸುಬ್ರಹ್ಮಣ್ಯ ಸ್ವಾಮಿಯವರ ಹೇಳಿಕೆಯೂ ಇಂಥ ಸಾಧ್ಯತೆಯೆಡೆಗೇ ಬೊಟ್ಟು ಮಾಡುತ್ತಿವೆ. ಆದ್ದರಿಂದ ಕೇಂದ್ರ ಸರಕಾರವು ಆಗಿರುವ ವೈಫಲ್ಯವನ್ನು ಒಪ್ಪಿಕೊಂಡು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗಿಮಿಕ್‍ಗಳು ಜನರನ್ನು ಮರುಳುಗೊಳಿಸಬಹುದು, ಆದರೆ ದೇಶವನ್ನಲ್ಲ. ದೇಶವೆಂಬ ವ್ಯವಸ್ಥೆ ಗಿಮಿಕ್‍ಗಳಾಚೆಗಿನ ವಾಸ್ತವ. ಈ ವಾಸ್ತವಕ್ಕೆ ಮುಖಾಮುಖಿಯಾಗಬೇಕಾದುದು ಇಂದಿನ ಅಗತ್ಯ.
No comments:
Post a Comment