Saturday, 1 June 2019

ರಾಜಕೀಯದ ಮೃತ ಮನಃಸ್ಥಿತಿಗೆ ಎರಡು ಉದಾಹರಣೆಗಳು


 

ಲೋಕಸಭೆಗೆ ಕೊನೆಯ ಹಂತದ ಮತದಾನ ನಡೆಯುವುದಕ್ಕಿಂತ ಮೂರು ದಿನಗಳ ಮೊದಲು ಮಾಧ್ಯಮಗಳು ಎರಡು ಸುದ್ದಿಗಳಿಗೆ ಬಹಳ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸಿದುವು. 
1. ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡಲು ನಿರಾಕರಿಸಿದ್ದಕ್ಕಾಗಿ  ಗುಜರಾತ್‍ನ ಗ್ರಾಮವೊಂದರ ದಲಿತರ ಮೇಲೆ ಮೇಲ್ಜಾತಿಯ ಮಂದಿ ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದು ಮತ್ತು ಕುದುರೆ ಮೇಲೇರಿ ಬಂದ ದಲಿತ ವರನಿಗೆ ಮಧ್ಯಪ್ರದೇಶದ ಮಹೂ ನಗರದಲ್ಲಿ ಥಳಿಸಿದ್ದು. 
2. ಎಂ.ಎ. ರಾಜ್ಯಶಾಸ್ತ್ರದಲ್ಲಿ ಮೊದಲ  ರ್ಯಾಂಕ್ ಗಳಿಸಿದವರು ಮತ್ತು ನಾಲ್ಕನೇ ರಾಂಕ್ ಪಡೆದವರೂ ಸೇರಿ ಐವರು ಸ್ನಾತಕೋತ್ತರ ಪದವೀಧರರು ಮತ್ತು ಎಂಟು ಮಂದಿ ಪದವೀಧರರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ನರೇಗಾ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
 

ವಿಷಾದ ಏನೆಂದರೆ, ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಯಾವ ಹಂತದಲ್ಲೂ ದಲಿತರು ಮತ್ತು ನಿರುದ್ಯೋಗ ಚರ್ಚೆಗೇ ಒಳಗಾಗಿಲ್ಲ. ಅದರ ಬದಲು ಅಪರಾಧಿಯೆಂದು ಘೋಷಿಸಲ್ಪಟ್ಟು ಗಲ್ಲು ಶಿಕ್ಷೆಗೆ ಗುರಿಯಾದ ಗೋಡ್ಸೆ ಚರ್ಚೆಗೆ  ಒಳಗಾದ. ಮಹಾತ್ಮಾಗಾಂಧಿ ಯಾವ ರಾಷ್ಟ್ರದ ರಾಷ್ಟ್ರಪಿತ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕಲಾಯಿತು. ಹುತಾತ್ಮ ಕರ್ಕರೆಯನ್ನು ಗೋರಿಯಿಂದ ಎಳೆದು ತಂದು ಅವಮಾನಿಸಲಾಯಿತು. ರಾಜೀವ್ ಗಾಂಧಿಯನ್ನೂ ಬಿಡಲಿಲ್ಲ. ಅವರನ್ನೂ ಅವಮಾನಿಸಲಾಯಿತು. ಪುಲ್ವಾಮದಲ್ಲಿ ಹುತಾತ್ಮರಾದ ಯೋಧರನ್ನು ಚುನಾವಣಾ ಸಭೆಗಳಲ್ಲಿ ಉಲ್ಲೇಖಿಸಿ ದೇಶವನ್ನಾಳುವ ಪಕ್ಷವು ಮತ ಯಾಚಿಸಿತು. ಬಾಲಾಕೋಟನ್ನು ಪ್ರಸ್ತಾಪಿಸಿತು... ಈ ಪಟ್ಟಿ ಇನ್ನೂ ಉದ್ದ ಇದೆ. ಆದರೆ, ನಮ್ಮ ನಡುವೆ ಇಲ್ಲದ ಗಾಂಧಿ,  ಗೋಡ್ಸೆ, ಕರ್ಕರೆ ಮುಂತಾದವರ ಬಗ್ಗೆ ಚುನಾವಣಾ ಸಭೆಗಳಲ್ಲಿ ಮಾತಾಡಿದ ರಾಜಕೀಯ ಪಕ್ಷಗಳು ಜೀವಂತ ಇರುವ ದಲಿತರ ಬಗ್ಗೆ ಏನನ್ನೂ ಮಾತಾಡದಿರುವುದಕ್ಕೆ ಕಾರಣವೇನು? ಸ್ನಾತಕೋತ್ತರ ಪದವೀಧರರು ನರೇಗಾ ಕೂಲಿ ಕಾರ್ಮಿಕರಾಗಿ  ದುಡಿಯುವಂತಹ ಸ್ಥಿತಿ ಯಾಕೆ ಬಂತು ಎಂಬ ಪ್ರಶ್ನೆಯೇಕೆ ಚುನಾವಣಾ ಸಭೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ? ನಿಜವಾಗಿ, ದಲಿತ ದೌರ್ಜನ್ಯ ಮತ್ತು ನಿರುದ್ಯೋಗ-ಇವೆರಡೂ ಈ ದೇಶದ ಎರಡು ಬಹುಮುಖ್ಯ ಸವಾಲುಗಳು. ವರ್ಷಕ್ಕೆ ಎರಡು ಕೋಟಿ  ಉದ್ಯೋಗ ಸೃಷ್ಟಿಸುತ್ತೇನೆ ಎಂಬ ಭರವಸೆಯನ್ನು ಕೊಟ್ಟೇ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆದ್ದರಿಂದ, ಸ್ನಾತ್ತಕೋತ್ತರ ಪದವೀಧರರ ನಿರುದ್ಯೋಗ ಸಮಸ್ಯೆಗೆ ಉತ್ತರ ಹೇಳಬೇಕಾದುದು ನರೇಂದ್ರ ಮೋದಿಯವರೇ.  ಹಾಗಂತ ಬಳ್ಳಾರಿಯ ಹೂವಿನಹಡಗಲಿ ಎಂಬುದು ಒಂದು ಬಿಡಿ ಉದಾಹರಣೆ ಅಷ್ಟೇ. ಇಂಥ ಸ್ಥಿತಿ ಈ ದೇಶಾದ್ಯಾಂತ ಇದೆ. ಒಂದು ಕಡೆ, ಪ್ರತಿವರ್ಷ ಲಕ್ಷಾಂತರ ಮಂದಿ ಪದವೀಧರರಾಗಿ ಶಿಕ್ಷಣ ಸಂಸ್ಥೆಗಳಿಂದ ಹೊರಬರುತ್ತಿದ್ದಾರೆ. ಇನ್ನೊಂದು ಕಡೆ, ಈ ಗುಂಪಿಗೆ ಚುನಾವಣಾ ಸಭೆಗಳಲ್ಲಾಗಲಿ, ಸರಕಾರದ ನೀತಿಗಳಲ್ಲಾಗಲಿ ಯಾವ ಮನ್ನಣೆಯೂ ಸಿಗುತ್ತಿಲ್ಲ. ವರ್ಷಕ್ಕೆ ಎರಡು  ಕೋಟಿ ಉದ್ಯೋಗ ಸೃಷ್ಟಿಸುವೆ ಎಂದ ನರೇಂದ್ರ ಮೋದಿಯವರು ಆ ಬಳಿಕ ಪಕೋಡ ಮಾರುವುದನ್ನೇ ಉದ್ಯೋಗ ಎಂದು ಹೇಳುತ್ತಾರೆಂದರೆ, ಅದು ಶಿಕ್ಷಿತರಿಗೆ ಮಾಡುವ ಅವಮಾನ ಅಷ್ಟೇ ಅಲ್ಲ, ಅರ್ಹತೆಗೆ ತಕ್ಕ ಉದ್ಯೋಗವನ್ನು ಸೃಷ್ಟಿಸಲು ತಾನು  ವಿಫಲವಾಗಿದ್ದೇನೆ ಎಂಬ ಶರಣಾಗತಿಯೂ ಹೌದು. ಅಂದಹಾಗೆ, ಹಾರೆ, ಗುದ್ದಲಿ, ಸಲಿಕೆಗಳನ್ನು ಹಿಡಿದು ಹೂವಿನಹಡಗಲಿಯ ಮಲ್ಲನ ಕೆರೆ ಗ್ರಾಮದ ಕೆರೆ ಅಂಗಳದಲ್ಲಿ ಕೂಲಿ ಕೆಲಸ ಮಾಡುವ ಈ ಪದವೀಧರರು ಈ ದೇಶದ ಸದ್ಯದ ಉದ್ಯೋಗ  ಸ್ಥಿತಿಯ ಸಂಕೇತವಾದರೆ, ಈಗಾಗಲೇ ಮಗಿದ ಚುನಾವಣೆಯು ಈ ದೇಶದ ರಾಜಕೀಯ ಪಕ್ಷಗಳ ಮನಃಸ್ಥಿತಿಯ ಸಂಕೇತ. ಆದರೆ, ನಿರುದ್ಯೋಗಕ್ಕೂ ತನಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಆಡಳಿತ ಪಕ್ಷವೊಂದು ವರ್ತಿಸ ತೊಡಗಿದರೆ ಅದು ದೇಶದ ಮೇಲೆ ಬೀರುವ ಪರಿಣಾಮಗಳೇನು? ಯಾಕೆ ಇದು ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೊಳಗಾಗುತ್ತಿಲ್ಲ? ಇಲ್ಲಿ ಇನ್ನೂ ಒಂದು ಪ್ರಶ್ನೆಯಿದೆ. ದಲಿತರು ಮತ್ತು ಹಿಂದುಳಿದವರು ಬಹುಸಂಖ್ಯಾತರಿದ್ದೂ ಯಾಕೆ ಪದೇ  ಪದೇ ಅವರನ್ನು ಅವಮಾನಿಸುವ ಘಟನೆಗಳು ನಡೆಯುತ್ತವೆ? ದಲಿತರಿಗೆ ಬಹಿಷ್ಕಾರ, ದಲಿತ ವರನಿಗೆ ಥಳಿತ, ದಲಿತ ಯುವತಿಯ ಅತ್ಯಾಚಾರ-ಹತ್ಯೆ, ದಲಿತರಿಗೆ ಕ್ಷೌರ ನಿರಾಕರಣೆ, ಅಡುಗೆಯವಳು ದಲಿತಳೆಂಬ ಕಾರಣಕ್ಕೆ ಬಿಸಿಯೂಟ ಸೇವಿಸಲು  ಮೇಲ್ಜಾತಿ ವಿದ್ಯಾರ್ಥಿಗಳ ಅಸಮ್ಮತಿ... ಇತ್ಯಾದಿ ಇತ್ಯಾದಿಗಳು ನಿತ್ಯದ ಸುದ್ದಿಯಾಗುತ್ತಿರುವುದು ಯಾಕಾಗಿ? ಕನಿಷ್ಠ ಈ ಇಶ್ಯೂವನ್ನು ಎತ್ತಿಕೊಂಡು ಚುನಾವಣೆಯಲ್ಲಿ ಮಾತಾಡಬಹುದಲ್ಲ? ದಲಿತರ ಮೇಲಿನ ದೌರ್ಜನ್ಯವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡು ಎಷ್ಟು ಚುನಾವಣಾ ಸಭೆಗಳು ಈ ಬಾರಿ ನಡೆದಿವೆ? ಏಳು ಹಂತದ ಚುನಾವಣೆಯಲ್ಲಿ ನೂರಾರು ಸಣ್ಣ ಮತ್ತು ಬೃಹತ್ ಸಭೆಗಳಾಗಿವೆ. ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ ವಿವಿಧ ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಮಾತುಗಳನ್ನಾಡಿದ್ದಾರೆ. ಆದರೆ, ದಲಿತರು ಚುನಾವಣಾ ಸಭೆಗಳ ವಿಷಯವಾದುದು ಮತ್ತು ಅದನ್ನೊಂದು ಗಂಭೀರ ವಿಷಯವಾಗಿ ಎತ್ತಿಕೊಂಡು ಮಾತಾಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಇನ್ನು, ದಲಿತ ದೌರ್ಜನ್ಯದ ಹೆಸರಲ್ಲಿ ವಿವಿಧ ಪೊಲೀಸು ಠಾಣೆಗಳಲ್ಲಿ  ದಾಖಲಿಸಿಕೊಳ್ಳಲಾಗುತ್ತಿರುವ ಕೇಸುಗಳ ಸ್ಥಿತಿಗತಿ ಏನು ಅನ್ನುವುದನ್ನು ಹುಡುಕಲು ಹೊರಟರೆ ಲಭ್ಯವಾಗುವುದು ಗಾಢ ನಿರಾಶೆ. ದಲಿತರ ದೂರುಗಳನ್ನು ಪೊಲೀಸರು ಮೊದಲ ಯತ್ನದಲ್ಲಿ ಸ್ವೀಕರಿಸುವುದು ಬಹಳ ಕಡಿಮೆ. ದೌರ್ಜನ್ಯಕ್ಕೀಡಾದ ದಲಿತ  ತುಸು ಧೈರ್ಯವಂತನಾದರೆ ಮತ್ತು ಸಂಘಟನೆಗಳ ಸಂಪರ್ಕ ಉಳ್ಳವನಾದರೆ ಮಾತ್ರ ಕೇಸು ನೋಂದಣಿಯಾಗುತ್ತದೆ. ಹೀಗೆ ನೋಂದಣಿಯಾಗುವ ಕೇಸುಗಳನ್ನೂ ಬಹಳ ಬುದ್ಧಿವಂತಿಕೆಯಿಂದ ಹೆಣೆಯಲಾಗುತ್ತದೆ. ಆರೋಪಿಗಳಿಗೆ ಸುಲಭವಾಗಿ  ಜಾಮೀನು ಸಿಗಬಲ್ಲ ರೀತಿಯಲ್ಲಿ ದುರ್ಬಲ ಸೆಕ್ಷನ್‍ಗಳಡಿ ಕೇಸು ದಾಖಲಿಸಿಕೊಳ್ಳಲಾಗುವುದೇ ಹೆಚ್ಚು. ಅಷ್ಟಕ್ಕೇ ಮುಗಿಯುವುದಿಲ್ಲ. ಆ ಬಳಿಕ ಆರೋಪಿಗಳ ಬೆದರಿಕೆ ಪ್ರಾರಂಭವಾಗುತ್ತದೆ. ಕೇಸನ್ನು ಹಿಂತೆಗೆಯುವಂತೆ, ಸಾಕ್ಷ್ಯ ಹೇಳದಂತೆ ಅಥವಾ  ಸಾಕ್ಷಿದಾರ ತಿರುಗಿ ಬೀಳುವಂತೆ ಒತ್ತಡ ಹೇರಲಾಗುತ್ತದೆ. ಕಂಬಾಲಪಲ್ಲಿಯ ಘಟನೆ ಇದಕ್ಕೊಂದು ಸಾರ್ವಕಾಲಿಕ ನಿದರ್ಶನ.
ಚುನಾವಣೆ ಮುಗಿದಿರುವ ಈ ಹೊತ್ತಿನಲ್ಲಿ ತಾವು ಹೇಗೆ ಚುನಾವಣಾ ಸಭೆಗಳನ್ನು ನಿರ್ವಹಿಸಿದ್ದೇವೆ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಆತ್ಮಾವಲೋಕನವನ್ನು ನಡೆಸಬೇಕು. ತಾವು ಚುನಾವಣೆಯಲ್ಲಿ ಎತ್ತಿರುವ ವಿಷಯಗಳು ಮತ್ತು ಎತ್ತದಿರುವ  ವಿಷಯಗಳ ಮೇಲೆ ಅಧ್ಯಯನ ನಡೆಸಬೇಕು. ಗೋಡ್ಸೆ, ಗಾಂಧೀಜಿ, ಕರ್ಕರೆ, ನೆಹರೂ, ರಾಜೀವ್ ಗಾಂಧಿ... ಇವರೆಲ್ಲ ಚುನಾವಣಾ ಪ್ರಚಾರದ ಭಾಗವಾಗುವುದರಿಂದ ನಿರುದ್ಯೋಗ ಸಮಸ್ಯೆಗೆ ಮತ್ತು ದಲಿತ ದೌರ್ಜನ್ಯಕ್ಕೆ ಪರಿಹಾರ  ದೊರಕಿಸಿಕೊಡಬಹುದೇ ಎಂದು ಪ್ರಶ್ನಿಸಿಕೊಳ್ಳಬೇಕು. ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ನಡೆದ ಚುನಾವಣೆ ಮತ್ತು ಅದರ ಭಾಗವಾಗಿ ನಡೆದ ಸಭೆಗಳಲ್ಲಿ ಮೃತಪಟ್ಟವರೇ ಹೆಚ್ಚು ಚರ್ಚೆಗೊಳಗಾಗುತ್ತಾರೆಂದರೆ, ರಾಜಕೀಯ ಪಕ್ಷಗಳ  ಮನಃಸ್ಥಿತಿ ಸತ್ತ ಸ್ಥಿತಿಯಲ್ಲಿದೆ ಎಂದರ್ಥ. ರಾಜಕೀಯ ಪಕ್ಷಗಳ ಈ ಮೃತ ಸ್ಥಿತಿಗೆ ತಾಜಾ ಉದಾಹರಣೆ. ಹೂವಿನಹಡಗಲಿಯ ಪದವೀಧರ ಕೂಲಿ ಕಾರ್ಮಿಕರು ಮತ್ತು ಗುಜರಾತ್ ಹಾಗೂ ಮಧ್ಯ ಪ್ರದೇಶದ ದಲಿತರು.

No comments:

Post a Comment