ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಯೋಜನೆಯ ಆಘಾತಕಾರಿ ಮತ್ತು ಅವಮಾನಕಾರಿ ಮುಖವೊಂದನ್ನು ಕಾರ್ಗಿಲ್ ಯೋಧ ಸನಾವುಲ್ಲಾ ಈ ದೇಶದ ಮುಂದಿಟ್ಟಿದ್ದಾರೆ. ಅಸ್ಸಾಮ್‍ನಲ್ಲಿ ನೆಲೆಸಿರುವವರಲ್ಲಿ ವಿದೇಶಿಯರೆಷ್ಟು ಮತ್ತು ಸ್ವದೇಶಿಯರೆಷ್ಟು ಎಂಬುದನ್ನು ಪತ್ತೆ ಹಚ್ಚುವುದಕ್ಕೆಂದು ಆರಂಭಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ ಮರೆಯಲ್ಲಿ ಎಂತೆಂಥ ಸಂಚುಗಳು ನಡೆಯಬಹುದು ಎಂಬ ಚರ್ಚೆಯೊಂದಕ್ಕೂ ಈ ಸನಾವುಲ್ಲಾ ವೇದಿಕೆಯನ್ನು ಒದಗಿಸಿದ್ದಾರೆ. ನಿಜವಾಗಿ, ಬಂಧನದಿಂದಾಗಿ ಸನಾವುಲ್ಲಾರಿಗೆ ವೈಯಕ್ತಿಕವಾಗಿ ತೊಂದರೆಯಾಗಿರಬಹುದಾದರೂ ಸಮುಷ್ಠಿ ಹಿತದ ದೃಷ್ಟಿಯಿಂದ ನೋಡುವುದಾದರೆ ಆ ಬಂಧನವನ್ನು ನಾವು ಸ್ವಾಗತಿಸಬೇಕು. ವಿದೇಶಿಯರೆಂದು ಮುದ್ರೆಯೊತ್ತಲ್ಪಟ್ಟವರನ್ನು ಬಂಧನದಲ್ಲಿರಿಸಿ, ಅವರನ್ನು ಗಡೀಪಾರುಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸುವ ಈಗಿನ ಒಟ್ಟು ಸನ್ನಿವೇಶದ ಔಚಿತ್ಯವನ್ನೇ ಅವರ ಬಂಧನ ಮತ್ತು ಆ ಬಳಿಕದ ಬೆಳವಣಿಗೆಗಳು ಚರ್ಚೆಗೆ ಒಳಪಡಿಸಿವೆ. ಸನಾವುಲ್ಲಾರಂತೆ ಅದೆಷ್ಟು ಮಂದಿ ವಿದೇಶಿ ಎಂಬ ಸುಳ್ಳು ಹಣೆಪಟ್ಟಿಯೊಂದಿಗೆ ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರಬಹುದು ಅನ್ನುವ ಪ್ರಶ್ನೆಯನ್ನು ಈ ಬಂಧನ ಹುಟ್ಟುಹಾಕಿದೆ. ಒಂದುವೇಳೆ, ಸನಾವುಲ್ಲಾರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಯೋಧ ಆಗಿಲ್ಲದೇ ಇರುತ್ತಿದ್ದರೆ ಕೇವಲ ಎರಡೇ ವಾರದೊಳಗೆ ಬಂಧನ ಮತ್ತು ಬಿಡುಗಡೆಯ ಸನ್ನಿವೇಶ ನಿರ್ಮಾಣವಾಗುತ್ತಿತ್ತೇ? ಓರ್ವ ಕಾರ್ಗಿಲ್ ಯೋಧನೇ ಅಸ್ಸಾಮ್‍ನಲ್ಲಿ ವಿದೇಶಿ ಎಂಬ ಗುರುತಿಗೆ ಒಳಪಡುವನೆಂದಾದರೆ, ಇನ್ನು ಸಾಮಾನ್ಯ ನಾಗರಿಕನೋರ್ವನ ಸ್ಥಿತಿ ಏನಿರಬಹುದು?
ಈ ದೇಶದಲ್ಲೇ ಹುಟ್ಟಿದ್ದರೂ ಮತ್ತು ಇಲ್ಲೇ ಜೀವನಕ್ಕೊಂದು ದಾರಿ ಕಂಡುಕೊಂಡಿದ್ದರೂ ಸರಿಯಾದ ದಾಖಲೆ ಪತ್ರಗಳನ್ನು ಕಾಪಿಟ್ಟುಕೊಳ್ಳದ ಅಸಂಖ್ಯ ಮಂದಿ ಈ ದೇಶದಲ್ಲಿದ್ದಾರೆ. ಇದಕ್ಕೆ ಕಾರಣ- ವಿದ್ಯಾಭ್ಯಾಸದ ಕೊರತೆ ಮತ್ತು ಸರಕಾರಿ ಕಚೇರಿಗಳೊಂದಿಗೆ ವ್ಯವಹರಿಸುವಲ್ಲಿ ಇರುವ ಭಯ. ಅಧಿಕಾರಿಗಳ ಮುಂದೆ ನಿಂತು ಮಾತನಾಡಲು ಗೊತ್ತಿಲ್ಲದ, ಅಧಿಕಾರಿಗಳೆಂದರೆ ಹೆದರುವ ಮತ್ತು ದಾಖಲೆ ಪತ್ರಗಳ ಮಹತ್ವವನ್ನು ತಿಳಿದಿಲ್ಲದ ಸಾಮಾನ್ಯ ನಾಗರಿಕರು ನಮ್ಮ ನಡುವೆ ಧಾರಾಳ ಇದ್ದಾರೆ. ಅವರಿಗೆ- ಪೌರತ್ವ, ಅದಕ್ಕಿರುವ ಮಹತ್ವ ಮತ್ತು ಅದನ್ನು ಹೊಂದುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಹೇಳುವವರೂ ಕಡಿಮೆ. ಪಡಿತರ ಚೀಟಿಗಾಗಿಯೋ ಆಧಾರ್ ಕಾರ್ಡ್ ಮಾಡಲೋ ತಮ್ಮ ನಿತ್ಯದ ಕೂಲಿ ಕೆಲಸಕ್ಕೆ ಬಿಡುವು ಮಾಡಿಕೊಳ್ಳುವುದನ್ನು ಅವರು ಅನಗತ್ಯ ಎಂದೇ ಭಾವಿಸುತ್ತಾರೆ. ಅಲ್ಲದೇ, ಇಂಥ ಕೆಲಸರಹಿತ ದಿನಗಳು ಅವರ ತುತ್ತಿಗೆ ಬರುವ ಅಡ್ಡಿಗಳಾಗಿಯೇ ಪರಿಗಣಿತವಾಗಿರುತ್ತದೆ. ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ ಬಲಿಪಶುಗಳಲ್ಲಿ ಇಂಥ ಅಮಾಯಕ ನಾಗರಿಕರ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಸನಾವುಲ್ಲಾ ಗಂಭೀರವಾಗಿ ಯೋಚಿಸುವಂತೆ ಮಾಡಿದ್ದಾರೆ. ಅವರ ಬಂಧನದ ಎರಡು ವಾರಗಳಲ್ಲಿ ಇಂಥದ್ದೇ ಎಡವಟ್ಟುಗಳ ಹಲವು ಸುದ್ದಿಗಳು ಹೊರಬಿದ್ದಿವೆ. ಇದರಲ್ಲಿ 59 ವರ್ಷದ ವಿಧವೆ ಮಧುಬಾಲ ಮಂಡಲ್ ಎಂಬವರೂ ಒಬ್ಬರು. ಅವರು ವಿದೇಶಿ ಎಂಬ ಅನುಮಾನದೊಂದಿಗೆ ಮೂರು ವರ್ಷಗಳನ್ನು ಬಂಧನ ಕೇಂದ್ರದಲ್ಲಿ ಕಳೆದಿದ್ದಾರೆ. ಇದ್ದೊಬ ಮಗಳು ವಿಕಲಚೇತನೆ. 2016ರಲ್ಲಿ ಆಕೆಯನ್ನು ಅಸ್ಸಾಮ್‍ನ ಕೊಕ್ರಾಜಾರ್‍ನಲ್ಲಿರುವ ಬಂಧನ ಕೇಂದ್ರಕ್ಕೆ ತಳ್ಳಲಾಗಿತ್ತು. ನಿಜವಾಗಿ, ಆಕೆ ವಿದೇಶಿ ಅಲ್ಲ. ಮಧುಮಲ ಎಂಬ ಮಹಿಳೆಯ ಕುರಿತು ಅಸ್ಸಾಮ್‍ನ ಗಡಿಕಾವಲು ಪೊಲೀಸರಿಗೆ ಸಂದೇಹ ಉಂಟಾಗಿತ್ತು. ಅಸ್ಸಾಮ್‍ನಲ್ಲಿರುವ ವಿದೇಶಿಯರನ್ನು ಪತ್ತೆ ಹಚ್ಚುವ, ತನಿಖಿಸುವ ಮತ್ತು ಬಂಧನಕ್ಕೆ ಒಳಪಡಿಸುವ ಹೊಣೆಯನ್ನು ಅಸ್ಸಾಮ್ ಗಡಿ ಪೊಲೀಸರು ನಿರ್ವಹಿಸುತ್ತಿದ್ದಾರೆ. ಅವರು 2008ರಲ್ಲಿ ನೀಡಿದ ವರದಿಯನ್ನು ಆಧರಿಸಿ ‘ವಿದೇಶಿ ನ್ಯಾಯಾಧಿಕರಣ ಸಮಿತಿ’ಯು ಮಧುಮಲ ಎಂಬ ಮಹಿಳೆಗೆ 2016ರಲ್ಲಿ ನೋಟೀಸು ಜಾರಿಗೊಳಿಸುತ್ತದೆ. ಆದರೆ ಪೊಲೀಸರು ಮಧುಮಲ ಎಂಬ ಮಹಿಳೆಯರ ಬದಲು ಭಾರತೀಯ ಪೌರತ್ವ ಹೊಂದಿರುವ ಮಧುಬಾಲ ಮಂಡಲ್‍ಳನ್ನು ಬಂಧಿಸುತ್ತಾರೆ ಮತ್ತು ಬಂಧನ ಕೇಂದ್ರಕ್ಕೆ ತಳ್ಳುತ್ತಾರೆ. ದುರಂತ ಏನೆಂದರೆ, ವಿದೇಶಿ ಎಂಬ ಹಣೆಪಟ್ಟಿಯೊಂದಿಗೆ ಅಸ್ಸಾಮ್‍ನ ಬಂಧನ ಕೇಂದ್ರದಲ್ಲಿರುವ ಅಸಂಖ್ಯ ಮಂದಿಗೆ ತಮ್ಮನ್ನು ಭಾರತೀಯರೆಂದು ಸಾಬೀತುಪಡಿಸುವುದು ಹೇಗೆಂದೇ ಗೊತ್ತಿಲ್ಲ. ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದ ಬಂಧನ ಕೇಂದ್ರದಲ್ಲಿ ಶಂಕಿತ ಭಯೋತ್ಪಾದಕರಂತೆ ಅವರು ಬದುಕುತ್ತಿದ್ದಾರೆ. ಕಾನೂನು ನೆರವನ್ನು ಪಡಕೊಳ್ಳುವ ಸಾಮರ್ಥ್ಯವಾಗಲಿ ತಿಳುವಳಿಕೆಯಾಗಲಿ ಅವರಿಗಿಲ್ಲ... ಈ ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದು ಸನಾವುಲ್ಲಾರೇ. ಅವರ ಬಂಧನವಂತೂ ಇಡೀ ಪೌರತ್ವ ನೋಂದಣಿ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿದೆ. ಅಸ್ಸಾಮ್‍ನಿಂದ ಮುಸ್ಲಿಮರನ್ನು ಹೊರತಳ್ಳಲು ಪೌರತ್ವ ನೋಂದಣಿ ಯೋಜನೆಯ ಮರೆಯಲ್ಲಿ ಸಂಚನ್ನು ಹೆಣೆಯಲಾಗಿದೆಯೇ ಎಂಬ ಸಂದೇಹಕ್ಕೆ ಅವರ ಬಂಧನ ಎಡೆಮಾಡಿಕೊಟ್ಟಿದೆ. ಸಬ್ ಇನ್ಸ್ ಪೆಕ್ಟರ್ ಚಂದ್ರಮಲ್ ದಾಸ್ ಅವರ ವರದಿಯನ್ನು ಆಧರಿಸಿ ಸನಾವುಲ್ಲಾರನ್ನು ಮೇ 23ರಂದು ಬಂಧಿಸಿ ಬಂಧನ ಕೇಂದ್ರದೊಳಕ್ಕೆ ತಳ್ಳಲಾಗಿತ್ತು. ಸನಾವುಲ್ಲಾ ಅವರು ವಿದೇಶಿ ಎಂಬುದಕ್ಕೆ ಪುರಾವೆಯಾಗಿ ಸೋಭಾನ್ ಅಲಿ, ಅಜ್ಮಲ್ ಅಲಿ ಮತ್ತು ಕುರ್ಬಾನ್ ಅಲಿ ಎಂಬವರ ಹೇಳಿಕೆಯನ್ನು ಈ ಚಂದ್ರಮಲ್ ದಾಸ್‍ರು ‘ವಿದೇಶಿ ನ್ಯಾಯಾಧೀಕರಣ ಸಮಿತಿ’ಯ ಮುಂದೆ ಮಂಡಿಸಿದ್ದರು. ಆದರೆ, ಆ ಇಡೀ ವರದಿಯೇ ಸುಳ್ಳು ಅನ್ನುವುದನ್ನು ಆ ಮೂವರೂ ಘೋಷಿಸಿದ್ದಾರೆ. ತಮ್ಮನ್ನು ಚಂದ್ರಮಲ್ ದಾಸ್ ಭೇಟಿಯಾಗಿಯೇ ಇಲ್ಲ ಎಂದೂ ಹೇಳಿದ್ದಾರೆ. ಮಾತ್ರವಲ್ಲ, ದಾಸ್‍ರ ವಿರುದ್ಧ ಪೊಲೀಸು ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ನಿಜವಾಗಿ, ಸನಾವುಲ್ಲಾ ಒಂದು ತೋರುಗಲ್ಲು. ಅವರ ಬಂಧನದಿಂದಾಗಿ ಪೌರತ್ವ ನೋಂದಣಿ ಎಂಬ ಯೋಜನೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಡವಟ್ಟುಗಳು, ಸಂಚುಗಳು ಮತ್ತು ಉದ್ದೇಶಪೂರ್ವಕವೋ ಎಂದು ಅನುಮಾನಿಸಬೇಕಾದ ತಪ್ಪುಗಳು ಬೆಳಕಿಗೆ ಬಂದುವು. ಒಮ್ಮೆ ಓರ್ವರು ಬಂಧನ ಕೇಂದ್ರಕ್ಕೆ ತಳ್ಳಲ್ಪಟ್ಟರೆಂದರೆ ಬಳಿಕ ಅವರನ್ನು ಬಿಡಿಸಿಕೊಳ್ಳುವ ವಿಧಾನ ಸುಲಭದ್ದಲ್ಲ. ನ್ಯಾಯವಾದಿಗಳನ್ನು ನೇಮಿಸಬೇಕು. ತಾವು ಭಾರತೀಯರೆಂದು ಸಾಬೀತುಪಡಿಸುವುದಕ್ಕೆ ಮತ್ತೆ ಮತ್ತೆ ನ್ಯಾಯಾಧೀಕರಣ ಸಮಿತಿ ಮುಂದೆ ಪುರಾವೆಗಳನ್ನು ಮಂಡಿಸಬೇಕು. ನ್ಯಾಯವಾದಿಗಳಿಗೆ ಹಣ ಖರ್ಚು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಬಂಧನದಿಂದಾಗಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದು. ಅಪ್ಪನಿಲ್ಲದ ಮನೆ, ಅಮ್ಮನಿಲ್ಲದ ಮನೆ, ಅಪ್ಪ-ಅಮ್ಮ ಇಬ್ಬರೂ ಬಂಧನ ಕೇಂದ್ರದಲ್ಲಿ ಮತ್ತು ಮಕ್ಕಳು ಶಂಕೆಯ ಮೊನೆಯಲ್ಲಿ ಎಂಬ ಸ್ಥಿತಿ ನಿರ್ಮಾಣವಾಗಬಹುದು. ಭಾರತೀಯ ನಾಗರಿಕಳಾಗಿದ್ದೂ ಬಂಧನಕ್ಕೀಡಾಗಿ 3 ವರ್ಷ ಜೈಲಲ್ಲಿ ಕೊಳೆತ ಮಧುಬಾಲ ಕುಟುಂಬದ ಸ್ಥಿತಿ ಏನಾಗಿರಬಹುದು? ಓರ್ವ ಕಾರ್ಗಿಲ್ ಯೋಧನೆಂಬ ಹೆಮ್ಮೆಯಲ್ಲಿದ್ದ ಮತ್ತು ಆ ಕಾರಣಕ್ಕಾಗಿಯೇ ಸಾಮಾಜಿಕ ಮನ್ನಣೆಯನ್ನು ಪಡೆದುಕೊಂಡಿದ್ದ ಸನಾವುಲ್ಲಾರ ಎರಡು ವಾರಗಳ ಯಾತನೆ ಏನಾಗಿರಬಹುದು? ದೈಹಿಕ ನೋವಿಗಿಂತ ಮಾನಸಿಕ ನೋವು ಹೆಚ್ಚು ಭಾರವಾದುದು. ತಾವು ಆವರೆಗೆ ಸಂಪಾದಿಸಿದ ಸಕಲ ಗೌರವ-ಮಾನ್ಯತೆಗಳನ್ನೂ ವಿದೇಶಿ ನ್ಯಾಯಾಧಿಕರಣ ಸಮಿತಿಯ ಒಂದು ತಪ್ಪು ನಿರ್ಧಾರವು ಮಣ್ಣು ಮಾಡಬಹುದು. ಆದ್ದರಿಂದ, ಅಸ್ಸಾಮ್‍ನ ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರುವ ಅಷ್ಟೂ ಮಂದಿಯ ಕುರಿತು ಮರು ಅವಲೋಕನವೊಂದು ನಡೆಯಬೇಕಾದ ಅಗತ್ಯ ಇದೆ. ಮಾಧ್ಯಮದ ಮಂದಿ ಈ ಬಗ್ಗೆ ಆಸಕ್ತಿ ವಹಿಸಬೇಕು. ಬಂಧಿತರ ಕುಟುಂಬವನ್ನು ಭೇಟಿಯಾಗಿ ಸತ್ಯಾಸತ್ಯಗಳನ್ನು ಬಹಿರಂಗಕ್ಕೆ ತರುವ ಶ್ರಮ ನಡೆಸಬೇಕು. ಈ ಬಗ್ಗೆ ಯೋಚಿಸುವಂತೆ ಮಾಡಿದ ಸನಾವುಲ್ಲಾರಿಗೆ ಮತ್ತು ಅವರನ್ನು ಬಂಧಿಸಿದ ವ್ಯವಸ್ಥೆಗೆ ಮತ್ತೊಮ್ಮೆ ಅಭಿನಂದನೆಗಳು.
No comments:
Post a Comment