Thursday, 13 June 2019

ಪ್ರಧಾನಿಯವರ ಸಬ್‍ಕಾ ವಿಶ್ವಾಸ್ ಮತ್ತು ಸೇತುವೆಯಿಲ್ಲದ ಕಂದಕ


   
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಒಂದು ದಿನ ಮೊದಲು ನರೇಂದ್ರ ಮೋದಿಯವರು ಎನ್‍ಡಿಎ ಸಂಸದರನ್ನುದ್ದೇಶಿಸಿ ಮಾತಾಡುತ್ತಾ, ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಮತ್ತು ಸಬ್‍ಕಾ ವಿಶ್ವಾಸ್ ಎಂಬ ಧ್ಯೇಯವಾಕ್ಯವನ್ನು ಘೋಷಿಸಿದರು. ಈ ಭಾಷಣಕ್ಕಿಂತ ಎರಡು ವಾರಗಳ ಮೊದಲು ‘ಫೂಟ್ ಸೋಲ್ಜರ್ಸ್ ಆಫ್ ದ ಕಾನ್ಸ್‍ಟಿಟ್ಯೂಶನ್’ (ಸಂವಿಧಾನದ ಕಾಲಾಳು) ಎಂಬ ಕೃತಿಯ ಕನ್ನಡಾನುವಾದ ಬಿಡುಗಡೆಗೊಂಡಿತ್ತು. ಗುಜರಾತ್ ಹತ್ಯಾಕಾಂಡದ ಹಿನ್ನೆಲೆ ಮತ್ತು ಮುನ್ನೆಲೆಗಳನ್ನು ಟೀಸ್ಟಾ ಸೆಟಲ್ವಾಡ್ ಅವರು ಅತ್ಯಂತ ವಸ್ತುನಿಷ್ಠವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಗೋಧ್ರಾ ಹತ್ಯಾಕಾಂಡ ಮತ್ತು ಗೋಧ್ರೋತ್ತರ ನರಮೇಧಗಳನ್ನೇ ಕೇಂದ್ರವಾಗಿಟ್ಟುಕೊಂಡು ಬರೆದಿರುವ ಈ ಕೃತಿಯಲ್ಲಿ ಬೆಂದು ಹೋದ ಒಂದು ಸಮುದಾಯ ಮತ್ತು ಅದಕ್ಕೆ ಪಶ್ಚಾತ್ತಾಪ ಪಡದ ವ್ಯವಸ್ಥೆಯ ಕಥನವಿದೆ. ಆ ಇಡೀ ಘಟನೆಯ ದೃಕ್‍ಸಾಕ್ಷಿ ನರೇಂದ್ರ ಮೋದಿ. ಕಾನೂನಿನ ಕಣ್ಣಿನಲ್ಲಿ ಅವರು ಅಪರಾಧಿಯಲ್ಲ, ನಿಜ. ಆದರೆ ಆ ಇಡೀ ಘಟನೆಯಲ್ಲಿ ಅವರು ನಿರ್ವಹಿಸಿದ ಪಾತ್ರ ಕಳಂಕರಹಿತವಲ್ಲ ಅನ್ನುವ ಭಾವನೆ ಈ ದೇಶದ ಹೆಚ್ಚಿನ ಜನರಲ್ಲಿದೆ. ‘ರಾಜಧರ್ಮ ಪಾಲಿಸು’ ಎಂದು ಅಂದಿನ ಪ್ರಧಾನಿ ವಾಜಪೇಯಿಯವರು ಆದೇಶಿಸುವಷ್ಟು ಅಂದು ಪರಿಸ್ಥಿತಿ ಹದಗೆಟ್ಟಿತ್ತು ಎಂಬುದೂ ಐತಿಹಾಸಿಕ. ಅಂದಿನ ಮುಖ್ಯಮಂತ್ರಿ ಈಗ ಪ್ರಧಾನಿಯಾಗಿದ್ದಾರೆ. ಅಂದಿನ ಆ ಘಟನೆಗೆ ಇಂದು 16 ವರ್ಷಗಳೇ ಕಳೆದು ಹೋಗಿವೆ. 2002ರ ಬಳಿಕದ ಪೀಳಿಗೆಗೆ ಆ ನರಮೇಧದ ಬಗ್ಗೆ ಹೆಚ್ಚು ಗೊತ್ತಿರುವ ಸಾಧ್ಯತೆಯೂ ಇಲ್ಲ. ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಮತ್ತು ಸಬ್‍ಕಾ ವಿಶ್ವಾಸ್ ಎಂದು ಘೋಷಿಸುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು 16 ವರ್ಷಗಳ ಹಿಂದಿನ ಘಟನೆಯನ್ನು ಸ್ಮರಿಸಿಕೊಂಡಿರುವರೋ ಇಲ್ಲವೋ, ಆದರೆ 16 ವರ್ಷಗಳ ಹಿಂದೆ ನಡೆದ ಗೋಧ್ರೋತ್ತರ ಹಿಂಸೆಯನ್ನು ನಿರ್ವಹಿಸಿದ ರೀತಿ ಮತ್ತು ಪ್ರಧಾನಿಯಾಗಿ ಕಳೆದ ಐದು ವರ್ಷಗಳಲ್ಲಿ ಅವರ ಬೆಂಬಲಿಗರು ನಡೆದುಕೊಂಡ ವಿಧಾನವು ಅವರ ಈ ಘೋಷಣೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಈ ದೇಶದ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪP್ಷÀವನ್ನು ಸಂದೇಹದ ಮೊನೆಯಲ್ಲಿಟ್ಟಿರುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಗುಜರಾತ್ ನರಮೇಧವೂ ಒಂದು. ಅವರು ಪ್ರಧಾನಿಯಾಗಿದ್ದ ಕಳೆದ ಐದು ವರ್ಷಗಳಲ್ಲಿ ಈ ದೇಶದ ಸಹಿಷ್ಣುತೆಗೆ ಸವಾಲಾಗಬಲ್ಲಂಥ ಅನೇಕಾರು ಘಟನೆಗಳು ನಡೆದುವು. ಈ ದೇಶದ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳು ದೇಶದ ಗಡಿಯನ್ನೂ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೀಡಾದುವು. ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷದ ಹಲವು ನಾಯಕರು ಆಡಿದ ಮಾತುಗಳು ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್‍ಗೆ ಯಾವ ರೀತಿಯಲ್ಲೂ ಹೊಂದಿಕೆಯಾಗಿರಲಿಲ್ಲ. ಮೋದಿಯವರ ಚುನಾವಣಾ ಗೆಲುವಿನ ಬಳಿಕ ಮತ್ತು ಮೇ 30ರ ಪ್ರಮಾಣ ವಚನ ಸ್ವೀಕಾರಕ್ಕಿಂತ ಮೊದಲು ಮುಸ್ಲಿಮರನ್ನು ಹಿಂಸಿಸುವ ಒಂದಕ್ಕಿಂತ ಹೆಚ್ಚು ಘಟನೆಗಳು ನಡೆದುವು. ಹರ್ಯಾಣ, ಮಧ್ಯಪ್ರದೇಶ ಮತ್ತು ಬಿಹಾರಗಳು ಇದಕ್ಕೆ ಸಾಕ್ಷಿಯಾದುವು. ದಲಿತರ ಮದುವೆ ದಿಬ್ಬಣದ ಮೇಲೆ ಮೇಲ್ಜಾತಿಯ ಮಂದಿ ಹಲ್ಲೆ ನಡೆಸಿದ ಘಟನೆ ಸ್ವತಃ ಗುಜರಾತ್‍ನಲ್ಲಿಯೇ ನಡೆಯಿತು. ಗೋಡ್ಸೆಯನ್ನು ವೈಭವೀಕರಿಸುವ ಸನ್ನಿವೇಶಗಳು ಎರಡೆರಡು ಬಾರಿ ನಡೆದುವು. ಮಾಲೆಗಾಂವ್ ಸ್ಫೋಟದ ಶಂಕಿತ ಭಯೋತ್ಪಾದಕಿ ಪ್ರಜ್ಞಾಸಿಂಗ್ ಠಾಕೂರ್ ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಚುನಾವಣಾ ಪ್ರಚಾರದ ವೇಳೆ ಗೌರವಿಸಿದರೆ ಚುನಾವಣೆ ಮುಗಿದ ಬಳಿಕ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಅದೇ ಮಾತನ್ನು ಪುನರುಚ್ಚರಿಸಿದರು. ಹಾಗಂತ, ನರೇಂದ್ರ ಮೋದಿಯವರು ಇದನ್ನು ಸಮರ್ಥಿಸಿಲ್ಲ, ನಿಜ. ಮಾತ್ರವಲ್ಲ, ಪ್ರಜ್ಞಾ ಸಿಂಗ್ ಠಾಕೂರ್‍ಳನ್ನು ತಾನು ಎಂದೆಂದೂ ಕ್ಷಮಿಸಲ್ಲ ಎಂಬ ಕಟು ಮಾತನ್ನು ಆಡಿದ್ದೂ ನಿಜ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರಲ್ಲೇ  ಯಾಕೆ ಇಂಥ ಮನಸ್ಥಿತಿ ಇದೆ ಅನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್ ಅನ್ನುವ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರು ಆಡುವಾಗ ಅದಕ್ಕೆ ತೀರಾ ವಿರುದ್ಧವಾದ ಕೃತ್ಯಗಳಲ್ಲಿ ಅವರ ಬೆಂಬಲಿಗರು ಗುರುತಿಸಿಕೊಳ್ಳುವುದಕ್ಕೆ ಕಾರಣಗಳೇನು? ಮೇ 30ರಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ದ್ವಿತೀಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವಾಗ ಉಡುಪಿ ಜಿಲ್ಲೆಯ ಮಂದಿ ಹುಸೇನಬ್ಬರನ್ನು ಸ್ಮರಿಸಿಕೊಂಡರು. 2018 ಮೇ 30ರಂದು ಜೋಕಟ್ಟೆಯ ಹುಸೇನಬ್ಬ ಎಂಬ 62 ವರ್ಷದ ವೃದ್ಧನನ್ನು ಗೋಸಾಗಾಟದ ಆರೋಪದಲ್ಲಿ ಥಳಿಸಿ ಕೊಲ್ಲಲಾದ ಭೀಭತ್ಸ ಘಟನೆ ನಡೆಯಿತು. ಪ್ರಧಾನಿಯವರ ಪ್ರಮಾಣ ವಚನಕ್ಕಿಂತ ಎರಡ್ಮೂರು ದಿನಗಳ ಹಿಂದೆ ಗೋಮಾಂಸ ಸಾಗಾಟದ ಹೆಸರಲ್ಲಿ ಓರ್ವ ಮಹಿಳೆ ಮತ್ತು ಯುವಕನನ್ನು ಥಳಿಸುತ್ತಿರುವ ವೀಡಿಯೋ ವೈರಲ್ ಆಯಿತು. ಇದು ನಡೆದುದು ಮಧ್ಯಪ್ರದೇಶದಲ್ಲಿ. ಒಂದು ಕಡೆ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರನ್ನೂ ಜೊತೆಗೊಯ್ಯುವೆ ಎಂದು ಹೇಳುತ್ತಿರುವ ಪ್ರಧಾನಿ ಮತ್ತು ಇನ್ನೊಂದು ಕಡೆ ಅದೇ ಪ್ರಧಾನಿಯ ಬೆಂಬಲಿಗರೆಂದು ಗುರುತಿಸಿಕೊಂಡ ಮಂದಿ ಬೀದಿ ನ್ಯಾಯದಲ್ಲಿ ನಂಬಿಕೆಯಿಟ್ಟಿರುವುದು- ಇವೆರಡೂ ಏನನ್ನು ಸೂಚಿಸುತ್ತದೆ?
‘ಫೂಟ್ ಸೋಲ್ಜರ್ಸ್ ಆಫ್ ದ ಕಾನ್ಸ್‍ಟಿಟ್ಯೂಶನ್’ ಎಂಬ ಕೃತಿಯಲ್ಲಿ ದಾಖಲಾಗಿರುವ ವಿವರಗಳು ನರೇಂದ್ರ ಮೋದಿಯವರ ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್ ಮಂತ್ರಕ್ಕೆ ಖಂಡಿತ ಹೊಂದುತ್ತಿಲ್ಲ. ಆದರೆ, ಆ ಕಳಂಕದಿಂದ ಕಳಚಿಕೊಳ್ಳಬೇಕು ಮತ್ತು ಸರ್ವರ ವಿಶ್ವಾಸಾರ್ಹ ವ್ಯಕ್ತಿಯಾಗಿ ಮಾರ್ಪಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವೆಂದಾದರೆ, ಅವರು ತನ್ನ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಕಠಿಣ ಸೂಚನೆಗಳನ್ನು ನೀಡಬೇಕು. ಹರಕು ಬಾಯಿಯ ಸಂಸದರು ಮತ್ತು ಶಾಸಕರೊಂದಿಗೆ ನಿರ್ದಾಕ್ಷಿಣ್ಯವಾಗಿ ವರ್ತಿಸಬೇಕು. ಆಯ್ಕೆಯಾದ 303 ಬಿಜೆಪಿ ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿ ಇಲ್ಲ ಅನ್ನುವುದು ಸಣ್ಣ ಸಂಗತಿಯಲ್ಲ. ದೇಶದ 14%ರಷ್ಟಿರುವ ಬೃಹತ್ ಸಮುದಾಯದ ವಿಶ್ವಾಸವನ್ನು ಗಳಿಸಿಕೊಳ್ಳಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದೇ ಅದು ಕೊಡುವ ಸಂದೇಶ. ದೇಶವನ್ನಾಳುವ ಪಕ್ಷವಾಗಿ ಬಿಜೆಪಿಗೆ ಇದು ದೊಡ್ಡದೊಂದು ಹಿನ್ನಡೆ. ಮೋದಿಯವರ ಸಬ್‍ಕಾ ವಿಶ್ವಾಸ್ ಎಂಬ ಘೋಷಣೆಗೂ ವಾಸ್ತವಕ್ಕೂ ನಡುವೆ ಇರುವ ಕಂದಕವನ್ನು ಇದು ಹೇಳುತ್ತದೆ. ಈ ಕಂದಕ ಯಾಕೆ ಉಂಟಾಯಿತು ಮತ್ತು ಈ ಕಂದಕವನ್ನು ತೋಡಿದವರು ಯಾರು ಎಂಬುದು ಮೋದಿ ಮತ್ತು ಅವರ ಚಿಂತಕ ಛಾವಡಿಗೆ ಖಂಡಿತ ಗೊತ್ತಿದೆ. ಇಂಥದ್ದೊಂದು ಬಿರುಕು ದಿಢೀರ್ ಆಗಿ ಹುಟ್ಟಿಕೊಂಡದ್ದಲ್ಲ. ಈ ಬಿರುಕಿನ ಹಿಂದೆ ದೊಡ್ಡದೊಂದು ಕಥನವಿದೆ. ಬಿಜೆಪಿ ಸಾಗಿ ಬಂದ ಹಾದಿಯನ್ನು ಅವಲೋಕಿಸಿದರೆ ಈ ಬಿರುಕಿಗಿರುವ ಇಂಚಿಂಚೂ ಕಾರಣಗಳು ಮುಖಕ್ಕೆ ರಾಚುವಂತೆ ಎದ್ದು ಕಾಣುತ್ತದೆ. ಈ ಕಂದಕವನ್ನು ಉದ್ದೇಶಪೂರ್ವಕವಾಗಿ ತೋಡಲಾಗಿದೆ ಮತ್ತು ನಡುವೆ ಸೇತುವೆ ನಿರ್ಮಾಣವಾಗದಂತೆ ತಡೆಯಲಾಗಿದೆ. ಮಾತ್ರವಲ್ಲ, ಈ ಕಂದಕವನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕೆ ಮತ್ತು ಕಂದಕದ ಆಳ-ಅಗಲವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಪೂರಕವಾದ ತಂತ್ರವನ್ನು ಮತ್ತೆ ಮತ್ತೆ ಹೆಣೆಯುತ್ತಲೇ ಬರಲಾಗಿದೆ. ಅದರ ಫಲಿತಾಂಶವೇ ಥಳಿತಗಳು, ಹತ್ಯೆಗಳು. ಆ ಕಂದಕವನ್ನು ಮುಚ್ಚಿ ಬಿಡಬೇಕು ಎಂಬುದು ಪ್ರಧಾನಿಯವರ ಘೋಷಣೆಯ ಇಂಗಿತವೆಂದಾದರೆ ಖಂಡಿತ ಅದು ಸ್ವಾಗತಾರ್ಹ. ಆದರೆ, ಅದು ಮಾತಿನಿಂದ ಸಾಧ್ಯವಿಲ್ಲ. ಮಾತು ಕೃತಿಯಾಗಿ ಪರಿವರ್ತನೆಯಾಗಬೇಕು. ಇದಕ್ಕೆ ಮುನ್ನುಡಿ ಬರೆಯಬೇಕಾದುದೂ ಅವರೇ. ಅಲ್ಪಸಂಖ್ಯಾತ ವಿರೋಧಿ ಭಾವನೆಯನ್ನು ತುಂಬಿಸಿಕೊಂಡಿರುವ ತನ್ನ ಪಕ್ಷ  ಮತ್ತು ಅದರ ಕಾರ್ಯಕರ್ತರನ್ನು ಬುಡದಿಂದಲೇ ತಿದ್ದುವ ಮಹಾನ್ ಸ್ವಚ್ಛತಾ ಅಭಿಯಾನವೊಂದನ್ನು ಅವರು ಆಯೋಜಿಸಬೇಕು. ಉಲ್ಲಂಘಿಸಿದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಇದು ರಾತ್ರಿ ಬೆಳಗಾಗುವುದರೊಳಗೆ ಆಗುವ ಕೆಲಸ ಅಲ್ಲ. ಹಾಗಂತ, ಅಸಾಧ್ಯವೂ ಅಲ್ಲ.

No comments:

Post a Comment