ನರೇಶ್ ಕೊಂಚ್ ಎಂಬ ಬಾಂಗ್ಲಾ ನಿರಾಶ್ರಿತ ಬಡವನನ್ನು ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ (ಬಯಲು ಬಂಧೀಖಾನೆ) ಕೂಡಿ ಹಾಕಿ ಕಳೆದವಾರ ಸಾವನ್ನು ಕರುಣಿಸಲಾಗಿದೆ. ಈತ ಕಳೆದ 35 ವರ್ಷಗಳಿಂದ ಈ ದೇಶವನ್ನೇ ತನ್ನ ತಾಯ್ನಾಡಾಗಿ ಪರಿಗಣಿಸಿದ್ದ. ಇಲ್ಲೇ ದುಡಿದು ಬದುಕುತ್ತಿದ್ದ. ಹಾಗಂತ, ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಸಾವಿಗೀಡಾದವರಲ್ಲಿ ಈತ ಮೊದಲನೆಯವನಲ್ಲ. ಕಳೆದ 3 ವರ್ಷಗಳಲ್ಲಿ 28 ಮಂದಿ ಡಿಟೆನ್ಶನ್ ಸೆಂಟರ್ ಎಂಬ ಸಾವಿನ ಕೂಪದಲ್ಲಿ ತಮ್ಮ ಪ್ರಾಣವನ್ನು ಕಳಕೊಂಡಿದ್ದಾರೆ. ಇವರಲ್ಲಿ ಸುಬೋದ್ ಡೇ ಎಂಬ ನತದೃಷ್ಟನೂ ಒಬ್ಬ. ದುಲಾಲ್ ಚಂದ್ ಇನ್ನೊಬ್ಬ. ಗೂಡಂಗಡಿ ಚಹಾ ಮಾರಾಟಗಾರನಾದ ಸುಬೋದ್ ಡೇಯ ಹೆಸರನ್ನು ಸುಬ್ರತ್ ಡೇ ಎಂದು ತಪ್ಪಾಗಿ ಬರೆದುಕೊಂಡ ಎನ್‍ಆರ್ ಸಿ ಅಧಿಕಾರಿಗಳು ಆತನನ್ನು ವಿದೇಶಿ ಪ್ರಜೆ ಎಂದು ಘೋಷಿಸಿದರು. ಬಳಿಕ ಡಿಟೆನ್ಶನ್ ಸೆಂಟರ್‍ಗೆ ಆತನನ್ನು ತಳ್ಳಲಾಯಿತು. ಆ ಬಳಿಕ ಆತ ಹೊರಬಂದದ್ದು ಹೆಣವಾಗಿ. ಅವನ ಪತ್ನಿ ಕಾಮಿನಿ ಡೇ ಅವರ ಪ್ರಕಾರ, 1951ರ ಪೌರತ್ವ ಪಟ್ಟಿಯಲ್ಲಿ ಅವರ ಕುಟುಂಬಸ್ಥರ ಹೆಸರೂ ಇದೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಸುಬೋದ್ ಡೇಯು ಸುಬ್ರತ್ ಡೇ ಆಗಿ ಬಯಲು ಬಂಧೀಖಾನೆಗೆ ತಳ್ಳಲ್ಪಟ್ಟು ಕೊರಗಿ ಕೊರಗಿ ಸಾವಿಗೀಡಾಗುತ್ತಾನೆ. ದುಲಾಲ್ ಚಂದ್‍ನ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಆತ ನಿರಾಶ್ರಿತ ಅನ್ನುವುದನ್ನು ಬಿಟ್ಟರೆ ಉಳಿದಂತೆ ಈ ದೇಶದಲ್ಲೇ ತುತ್ತು ಅನ್ನಕ್ಕೆ ದಾರಿಯನ್ನು ಕಂಡಕೊಂಡವ. ಆದ್ದರಿಂದ,
ಕೆಲವು ಪ್ರಶ್ನೆಗಳಿಗೆ ಈ ದೇಶದ ನಾಗರಿಕರು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಈ ದೇಶದಲ್ಲಿ ಡಿಟೆನ್ಶನ್ ಸೆಂಟರೇ ಇಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಿಂದ ಹೆಣವಾಗಿ ಬಂದ ನರೇಶ್ ಕೊಂಚ್- ಈ ಇಬ್ಬರಲ್ಲಿ ಯಾರು ನಿಜ? ನರೇಶ್ ಕೊಂಚ್ ಸತ್ತಿಲ್ಲವೇ? ಆತನನ್ನು ಡಿಟೆನ್ಶನ್ ಸೆಂಟರ್ ಗೆ ದಾಖಲಿಸಿರಲಿಲ್ಲವೇ? ಅಸ್ಸಾಮ್‍ನಲ್ಲಿ ಕಳೆದ 3 ವರ್ಷಗಳಿಂದ 29 ಮಂದಿ ನಿರಾಶ್ರಿತರು ಡಿಟೆನ್ಶನ್ ಸೆಂಟರ್‍ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಮ್‍ನ ಬಿಜೆಪಿ ಸರಕಾರವೇ ದಾಖಲೆ ಸಮೇತ ಪಟ್ಟಿ ಬಿಡುಗಡೆಗೊಳಿಸಿರುವುದು ಸುಳ್ಳೇ? ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಸಾವಿರದಷ್ಟು ಮಂದಿ ಈಗಲೂ ಇದ್ದಾರೆ ಎಂಬ ಅಸ್ಸಾಮ್ ಸರಕಾರದ ವಿವರಣೆ ಸುಳ್ಳೇ? ಸಿಎಎಯು ಪೌರತ್ವವನ್ನು ಕಸಿಯುವ ಕಾಯ್ದೆ ಅಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರವು ಕಸಿಯುತ್ತಿರುವುದೇನನ್ನು- ಪ್ರಾಣವನ್ನೇ? ‘ಸಿಎಎಯು ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವ ಕಾನೂನು’ ಎಂದು ಭಾರತೀಯರನ್ನು ನಂಬಿಸುತ್ತಿರುವವರು ನರೇಶ್ ಕೊಂಚ್‍ಗೆ ಪೌರತ್ವ ಕೊಡದೇ ಡಿಟೆನ್ಶನ್ ಸೆಂಟರ್ ನಲ್ಲಿಟ್ಟು ಸಾಯಿಸಿದ್ದೇಕೆ? ಸುಬೋದ್ ಡೇಯನ್ನು ಸುಬ್ರತ್ ಡೇಯೆಂದು ಕರೆದು ಪ್ರಾಣ ಕಸಿದುಕೊಂಡದ್ದೇಕೆ? ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಮುಸ್ಲಿಮೇತರರನ್ನೇ ಕೂಡಿಟ್ಟು ಸಾಯಿಸುತ್ತಾ- ಸಿಎಎಯು ಮುಸ್ಲಿಮೇತರರಿಗೆ ಪೌರತ್ವ ಕೊಡುವ ಕಾಯ್ದೆ ಎಂದು ಹೇಳುತ್ತೀರಲ್ಲ, ಸುಳ್ಳಲ್ಲವೇ?
ಈ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ- ಸಿಎಎನೂ ಅಲ್ಲ, ಎನ್‍ಆರ್ ಸಿನೂ ಅಲ್ಲ. ನಿರುದ್ಯೋಗ, ಕಂಪೆನಿಗಳ ಮುಚ್ಚುಗಡೆ, ಬಂಡವಾಳ ಹೂಡಿಕೆ ಹಿಂತೆಗೆತ, ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಪಾಕ್-ಬಾಂಗ್ಲಾಗಳ ಜಿಡಿಪಿಗಿಂತ ಅರ್ಧಕ್ಕಿಳಿದಿರುವ ಭಾರತದ ಜಿಡಿಪಿ ಮಟ್ಟ ಇತ್ಯಾದಿ ಇತ್ಯಾದಿಗಳು ನಿಜವಾದ ಸಮಸ್ಯೆ. ಸರಕಾರಕ್ಕೆ ಉದ್ಯೋಗ ಸೃಷ್ಟಿಸಲಾಗದ ಹತಾಶೆ ಒಂದು ಕಡೆಯಾದರೆ, ನೋಟ್ ಬ್ಯಾನ್ ಮತ್ತು ಜಿಎಸ್‍ಟಿಯಿಂದಾಗಿ ಬಾಗಿಲು ಮುಚ್ಚುತ್ತಿರುವ ಕಂಪೆನಿಗಳು ಇನ್ನೊಂದು ಕಡೆ. ಇದರಿಂದಾಗಿ ಕೋಟ್ಯಂತರ ಉದ್ಯೋಗಿಗಳು ನಿರುದ್ಯೋಗಿಗಳ ಪಟ್ಟಿ ಸೇರಿಕೊಂಡರು. ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಕರವಿನಾಯಿತಿ ಘೋಷಿಸಿದರೂ ನಿರೀಕ್ಷಿತ ಪರಿಣಾಮ ಬೀರುತ್ತಿಲ್ಲ. ಬಂಡವಾಳ ಹೂಡುವ ಬದಲು ಹೂಡಿಕೆ ಹಿಂತೆಗೆತದ ಸದ್ದೇ ಜೋರಾಗಿ ಬಿಟ್ಟಿದೆ. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ನಾಗರಿಕ ಕಂಗಾಲಾಗಿದ್ದಾನೆ. ತೈಲ ಬೆಲೆಯಲ್ಲಿ ದಿನಂಪ್ರತಿ ಏರಿಕೆಯಾಗುತ್ತಿದೆ. ಇದು ಈ ದೇಶದ ಸದ್ಯದ ಸ್ಥಿತಿ. ಇದಕ್ಕೆ ನೆರೆಯ ಮೂರು ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ಬಡ ನಾಗರಿಕರು ಕಾರಣ ಅಲ್ಲ. ಮೈಮುರಿದು ದುಡಿದು ಬದುಕುತ್ತಿರುವ ಇವರನ್ನು ಕಳ್ಳರಂತೆ ಚಿತ್ರಿಸಿ ಡಿಟೆನ್ಶನ್ ಸೆಂಟರ್ ಗೆ ಅಟ್ಟುವುದು ಇದಕ್ಕೆ ಪರಿಹಾರವೂ ಅಲ್ಲ. ಯಾರಾದರೂ,
ಎನ್‍ಪಿಆರ್, ಎನ್‍ಆರ್ ಸಿ ಮತ್ತು ಸಿಎಎಯ ಜಾರಿಯೇ ಈಗಿನ ತುರ್ತು ಅಗತ್ಯ ಎಂದು ವಾದಿಸುವುದಾದರೆ ಅವರು ಈ ದೇಶವನ್ನು ಮನಸಾರೆ ದ್ವೇಷಿಸುತ್ತಿದ್ದಾರೆ ಎಂದೇ ಅರ್ಥ. ಆಫ್ರಿಕನ್ ಖಂಡದ ಬಡ ರಾಷ್ಟ್ರಗಳಾದ ನೈಜೀರಿಯಾ, ಜಿಂಬಾಬ್ವೆ, ಕೀನ್ಯಾಗಳ ಸಾಲಿಗೆ ಭಾರತವನ್ನು ಸೇರಿಸಬೇಕೆಂದು ಸಂಚು ಹೂಡಿರುವವರು ಮಾತ್ರ ಇಂಥ ಮಾತುಗಳನ್ನು ಆಡಲು ಸಾಧ್ಯ. ಈ ದೇಶದ ಈಗಿನ ತುರ್ತು ಅಗತ್ಯ ಏನೆಂದರೆ, ಕುಸಿದಿರುವ ಅರ್ಥ ವ್ಯವಸ್ಥೆಗೆ ಬಲ ತುಂಬುವುದು. ಉದ್ಯೋಗ ಸೃಷ್ಟಿಸುವುದು. ಮುಚ್ಚಿರುವ ಮತ್ತು ಮುಚ್ಚುತ್ತಿರುವ ಸಾವಿರಾರು ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳ ಸಮಸ್ಯೆಗಳಿಗೆ ಕಿವಿಯಾಗಿ ಬಾಗಿಲು ತೆರೆಸುವುದು. ಆದರೆ ನಮ್ಮನ್ನಾಳುವವರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದು ಗೊತ್ತಿದೆಯೇ ಹೊರತು ಪರಿಹರಿಸುವುದನ್ನಲ್ಲ. ತಮಾಷೆ ಏನೆಂದರೆ, ನೀರುಳ್ಳಿ ತುಟ್ಟಿಯಾದುದನ್ನು ಭಾರತೀಯರು ಪ್ರಶ್ನಿಸತೊಡಗಿದಾಗ- ‘ನಾನು ನೀರುಳ್ಳಿ ತಿನ್ನುವವಳಲ್ಲ’ ಎಂದು ಹೇಳುವುದು ಅರ್ಥಮಂತ್ರಿಯ ಪರಿಹಾರ ಸೂತ್ರ. ಎನ್‍ಆರ್ ಸಿಯ ಮೂಲಕ ಅಸ್ಸಾಮ್ ಒಂದರಲ್ಲೇ ಸಾವಿರದಷ್ಟು ಮಂದಿಯನ್ನು ಡಿಟೆನ್ಶನ್ ಸೆಂಟರ್ ನಲ್ಲಿ ಕೂಡಿ ಹಾಕಿರುವುದರ ಹೊರತಾಗಿಯೂ ‘ದೇಶದಲ್ಲಿ ಡಿಟೆನ್ಶನ್ ಸೆಂಟರೇ ಇಲ್ಲ’ ಎಂದು ಹೇಳುವುದು ಪ್ರಧಾನಿಯವರ ಎನ್‍ಆರ್ ಸಿ ಪರಿಹಾರ ಸೂತ್ರ. ನರೇಶ್ ಕೊಂಚ್‍ನ ಶವವನ್ನು ಕಣ್ಣೀರಿನೊಂದಿಗೆ ಅವರ ಕುಟುಂಬ ಸ್ವೀಕರಿಸುತ್ತಿರುವ ಸಂಕಟವನ್ನು ಈ ದೇಶ ಗಮನಿಸುತ್ತಿದ್ದರೂ ‘ಸಿಎಎಯಿಂದ ಹಿಂದೂಗಳಿಗೆ ತೊಂದರೆಯಿಲ್ಲ’ ಎಂದು ಹೇಳುವುದು ಗೃಹಮಂತ್ರಿಯವರ ಸಿಎಎ ಪರಿಹಾರ ಸೂತ್ರ. ಉದ್ಯೋಗ ಕೊಡಿ ಎಂದ ಯುವ ಪ್ರತಿಭೆಗಳಿಗೆ ‘ಪಕೋಡ ಮಾರಿ ಬದುಕಿಕೊಳ್ಳಿ’ ಎನ್ನುತ್ತಾರೆ ನಮ್ಮ ಪ್ರಧಾನಿಗಳು. ಸಿಎಎ ವಿರುದ್ಧ ಸಂವಿಧಾನಬದ್ಧ ಪ್ರತಿಭಟನಾ ಹಕ್ಕನ್ನು ಚಲಾಯಿಸುವವರನ್ನು ‘ಪಾಕಿಸ್ತಾನಕ್ಕೆ ಹೋಗಿ’ ಎಂಬ ಪರಿಹಾರವನ್ನು ತೋರಿಸುತ್ತದೆ ಈ ಸರಕಾರ. ಇದೂ ಒಂದು ಆಡಳಿತ ನೀತಿಯೇ?
ಸಿಎಎ ಮತ್ತು ಎನ್‍ಆರ್ ಸಿ- ಈ ಎರಡೂ ಈ ದೇಶದ ಈಗಿನ ಅಗತ್ಯ ಅಲ್ಲವೇ ಅಲ್ಲ. ಹಾಗೆಯೇ, ಈ ಕಾಯ್ದೆಯು ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆ ಕೊಡುವ ಮತ್ತು ಮುಸ್ಲಿಮೇತರರನ್ನು ಸುರಕ್ಷಿತ ವಲಯದಲ್ಲಿ ಕೂರಿಸುವ ಒಂದೂ ಅಲ್ಲ. ಈ ದೇಶದಲ್ಲಿ 30 ಕೋಟಿಯಷ್ಟು ಭೂಹೀನರಿದ್ದಾರೆ ಎಂಬ ವರದಿಯಿದೆ. 1 ಕೋಟಿ 70 ಲಕ್ಷದಷ್ಟು ಮನೆ ರಹಿತರೂ, 25 ಕೋಟಿಯಷ್ಟು ಅಲೆಮಾರಿಗಳೂ 8 ಕೋಟಿಯಷ್ಟು ಆದಿವಾಸಿಗಳೂ ಮತ್ತು ಕೋಟ್ಯಾಂತರ ಮಂದಿ ಅನಕ್ಷರಸ್ಥರೂ ಈ ದೇಶದಲ್ಲಿದ್ದಾರೆ. ಈಗಲೂ ಈ ದೇಶದ 50ರಿಂದ 60%ದಷ್ಟು ಮಂದಿಯಲ್ಲಿ ಮಾತ್ರ ಜನನ ಪ್ರಮಾಣ ಪತ್ರ ಇದೆ. 1970ರ ಕಾಲದಲ್ಲಿ ಸುಮಾರು 60%ದಷ್ಟು ಅಕ್ಷರಸ್ಥರಷ್ಟೇ ಇದ್ದರು ಎಂಬುದೇ ಆ ಕಾಲದಲ್ಲಿ ಜನಿಸಿದವರ ದಾಖಲೆ ಪ್ರಮಾಣ ಪತ್ರಗಳು ಹೇಗಿರಬಹುದು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದ್ದರಿಂದ,
ಭೂಮಿಯೇ ಇಲ್ಲದವರು, ಜನನ ದಿನಾಂಕವೇ ಗೊತ್ತಿಲ್ಲದವರು, ಮನೆ ಇಲ್ಲದವರು, ಅಲೆಮಾರಿಗಳು, ಬುಡಕಟ್ಟುಗಳು, ಕೋಟ್ಯಾಂತರ ಬಡವರು, ದಲಿತರು, ಅನಕ್ಷರಸ್ಥರು ಎನ್‍ಆರ್‍ಸಿಯ ಸಂದರ್ಭದಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದೂ ಅಲೆದೂ ಸುಸ್ತಾಗಬೇಕಾಗುತ್ತದೆ. ಇವರೆಲ್ಲರೂ ತಮ್ಮ ಪೌರತ್ವ ಸಾಬೀತಿಗಾಗಿ ಭೂದಾಖಲೆ, ಜನನ ದಿನಾಂಕ, ವಾಸ್ತವ್ಯ ದಾಖಲೆ ಇತ್ಯಾದಿ ಇತ್ಯಾದಿಗಳನ್ನು ಅಧಿಕಾರಿಗಳಿಗೆ ಒಪ್ಪಿಸಲೇ ಬೇಕಾಗುತ್ತದೆ. ಈ ದಾಖಲೆಗಳು ಇಲ್ಲದವರ ಹಣೆಬರಹವನ್ನು ತೀರ್ಮಾನಿಸುವುದು ಎನ್‍ಆರ್ ಸಿ ಅಧಿಕಾರಿ. ಈ ದೇಶದ ಶ್ರೀಮಂತರು ಎನ್‍ಆರ್ ಸಿಯಿಂದ ಸುಲಭದಲ್ಲಿ ಪಾರಾಗಬಹುದು. ಆದರೆ ಎಲ್ಲ ಧರ್ಮಕ್ಕೆ ಸೇರಿರುವ ಬಹುಸಂಖ್ಯಾತ ಬಡವರು ಎನ್‍ಆರ್ ಸಿಯಿಂದ ಸುರಕ್ಷಿತವಾಗಿ ಪಾರಾಗುವುದು ಸುಲಭ ಅಲ್ಲ. ಅವರು ತಮ್ಮ ದಾಖಲೆಗಳನ್ನು ಪಡಕೊಳ್ಳುವುದಕ್ಕಾಗಿ ದಿನಗಟ್ಟಲೆ ಸರಕಾರಿ ಕಚೇರಿಗಳ ಮುಂದೆ ಸರತಿಯಲ್ಲಿ ನಿಲ್ಲಬೇಕಾದೀತು. ಲಂಚ ಕೊಡಬೇಕಾದೀತು. ದಾಖಲೆಗಳನ್ನು ಒದಗಿಸುವುದಕ್ಕಾಗಿ ಮಧ್ಯವರ್ತಿಗಳು ಹುಟ್ಟಿಕೊಂಡಾರು. ಒಂದೊಂದು ಕಾಗದ ಪತ್ರವೂ ಲಕ್ಷಾಂತರ ಬೆಲೆಬಾಳುವ ಹಂತಕ್ಕೆ ತಲುಪೀತು. ಲಂಚ ಕೊಡಲು ಸಾಧ್ಯವಿಲ್ಲದ ಕೋಟ್ಯಂತರ ಭಾರತೀಯರು ಅಂತಿಮವಾಗಿ ಡಿಟೆನ್ಶನ್ ಸೆಂಟರ್ ನತ್ತ ತೆರಳಬೇಕಾದೀತು. ಇದು ಬರೇ ಊಹೆಯಲ್ಲ. ನರೇಶ್ ಕೊಂಚ್, ಸುಬೋದ್ ಡೇ, ದುಲಾಲ್ ಚಂದ್ ಅವರೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.