ಅತ್ಯಾಚಾರ ಮತ್ತು ಬರ್ಬರ ಅತ್ಯಾಚಾರ ಎಂಬೆರಡು ಪ್ರಬೇಧಗಳಲ್ಲಿ ಬರ್ಬರ ಅತ್ಯಾಚಾರಕ್ಕೆ ಮಾತ್ರ ಇವತ್ತು ಒಂದೆರಡು ದಿನವಾದರೂ ಚರ್ಚೆಯಲ್ಲಿ ಉಳಿಯುವ ಭಾಗ್ಯ ಲಭ್ಯವಾಗುತ್ತಿದೆ. ಬರೇ ಅತ್ಯಾಚಾರವು ಈ ಚರ್ಚಾವ್ಯಾಪ್ತಿಯಿಂದ ಈಗಾಗಲೇ ಹೊರಬಿದ್ದಿದೆ. ಇದಕ್ಕೆ ಕಾರಣ ಏನೆಂದರೆ, ಅತ್ಯಾಚಾರವೆಂಬುದು ಕಿಸೆಗಳ್ಳತನ, ದರೋಡೆ, ಬೀದಿ ಜಗಳ, ವಂಚನೆ ಇತ್ಯಾದಿಗಳಂತೆ ಸಾಮಾನ್ಯ ಅನ್ನಿಸಿಕೊಂಡಿರುವುದು. ಆತಂಕ, ಆಘಾತ, ಭಯ, ಸಂಕಟ ಇತ್ಯಾದಿ ಇತ್ಯಾದಿ ಭಾವಗಳನ್ನು ಹುಟ್ಟು ಹಾಕಬೇಕಾದ ಮತ್ತು ಮನುಷ್ಯರೆಲ್ಲರೂ ಬೀದಿಯಲ್ಲಿ ನಿಂತು ರಕ್ಷಣೆ ಕೋರಬೇಕಾದ ಸಂಗತಿಯೊಂದು ಹೀಗೆ ‘ಸಾಮಾನ್ಯ ಸ್ಥಿತಿ’ಗೆ ತಲುಪಿರುವುದು ಅತ್ಯಂತ ಅಪಾಯಕಾರಿ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರದ ಸುದ್ದಿಯನ್ನು ಪ್ರಕಟಿಸಿರುವ ಹೆಚ್ಚಿನ ಪತ್ರಿಕೆಗಳು, ಆ ಸುದ್ದಿಯ ಜೊತೆಜೊತೆಗೇ ದೇಶದ ಬೇರೆ ಬೇರೆ ಕಡೆ ನಡೆದ ಐದಾರು ಅತ್ಯಾಚಾರ ಪ್ರಕರಣಗಳ ಕುರಿತೂ ಬರೆದಿದ್ದುವು. ಅದರಲ್ಲಿ ಕೇರಳದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವೂ ಒಂದು. ಹುಟ್ಟು ಹಬ್ಬದ ಸಂತಸದಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ನಿಜವಾಗಿ,
ಇದೊಂದು ಕಾಯಿಲೆ. ಅತ್ಯಂತ ಅಪಾಯಕಾರಿ ಮಾನಸಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾದವರು ಎರಡು ರೀತಿಯಲ್ಲಿ ಗುರುತಿಸಿಕೊಳ್ಳುತ್ತಾರೆ.
1. ಸಾಮಾನ್ಯ ಡ್ರೆಸ್ ತೊಟ್ಟು ಸಾಮಾನ್ಯರಂತೆ ಬದುಕುವವರು.
2. ಒರಟಾಗಿ ಡ್ರೆಸ್ ತೊಟ್ಟು ಒರಟಾಗಿಯೇ ಬದುಕುವವರು.
ಇವರಲ್ಲಿ ಒಂದನೇ ವರ್ಗ ಅತ್ಯಾಚಾರವನ್ನಷ್ಟೇ ಮಾಡುವುದಲ್ಲ, ಆ ಕ್ರೌರ್ಯವನ್ನು ಮೊಬೈಲ್‍ಗಳಲ್ಲಿ ಸೆರೆ ಹಿಡಿದಿರುತ್ತದೆ. ಅತ್ಯಾಚಾರಕ್ಕೆ ತುತ್ತಾದವಳನ್ನು ಆ ವೀಡಿಯೋ ತೋರಿಸಿ ಬೆದರಿಕೆ ಹಾಕುತ್ತದೆ. ಪೋಲೀಸರಿಗೆ ದೂರು ನೀಡಿದರೆ ವೀಡಿಯೋವನ್ನು ಬಹಿರಂಗಪಡಿಸುವುದಾಗಿ ಹೆದರಿಕೆ ಹುಟ್ಟಿಸುತ್ತದೆ. ಸಂತ್ರಸ್ತೆ ದುರ್ಬಲೆ ಎಂದಾದರೆ, ಆ ಕ್ರೌರ್ಯದ ಬಳಿಕವೂ ಆ ವೀಡಿಯೋದ ಹೆಸರಲ್ಲಿ ಬೆದರಿಸಿ ಮತ್ತೂ ಬಳಸಿಕೊಳ್ಳುತ್ತದೆ ಮತ್ತು ಹೊರ ಜಗತ್ತಿನ ಪಾಲಿಗೆ ಎಂದೂ ಗೊತ್ತಾಗದೇ ಆ ಕ್ರೌರ್ಯ ಸತ್ತು ಹೋಗುತ್ತದೆ. ಎರಡನೇ ವರ್ಗದಲ್ಲಿ ಇಷ್ಟು ತಾಳ್ಮೆಯಿಲ್ಲ. ಅವರ ಜೀವನ ಕ್ರಮಕ್ಕೆ ತಕ್ಕಂತೆ ವರ್ತನೆಯೂ ಒರಟೇ. ಅದು ವೀಡಿಯೋವನ್ನೂ ಮಾಡಲ್ಲ. ಸಂತ್ರಸ್ತೆಯನ್ನು ಜೀವ ಸಹಿತ ಉಳಿಸುವುದೂ ಇಲ್ಲ. ಅತ್ಯಂತ ಬರ್ಬರವಾಗಿ ಅವು ತಮ್ಮ ಆಸೆಯನ್ನು ತೀರಿಸಿಕೊಳ್ಳುತ್ತವೆ. ದೆಹಲಿಯ ನಿರ್ಭಯ ಪ್ರಕರಣ ಮತ್ತು ಅದರಲ್ಲಿ ಭಾಗಿಯಾದ ಆರೋಪಿಗಳ ಹಿನ್ನೆಲೆ, ಉದ್ಯೋಗಗಳನ್ನು ನೋಡುವಾಗಲೂ ಹಾಗೂ ಹೈದರಾಬಾದ್‍ನ ಪಶುವೈದ್ಯೆಯ ಮೇಲಿನ ಕ್ರೌರ್ಯದಲ್ಲಿ ಭಾಗಿಯಾದವರ ಹಿನ್ನೆಲೆ ಮತ್ತು ಉದ್ಯೋಗಗಳನ್ನು ನೋಡುವಾಗಲೂ ಇದು ಸ್ಪಷ್ಟವಾಗುತ್ತದೆ. ಅಂದಹಾಗೆ,
2012ರ ನಿರ್ಭಯ ಪ್ರಕರಣದಿಂದ 2019ರ ಈ ಪಶುವೈದ್ಯೆಯ ಪ್ರಕರಣದ ನಡುವೆ ಇಂಥ ಇನ್ನೊಂದಿಷ್ಟು ಬರ್ಬರ ಪ್ರಕರಣಗಳು ನಡೆದಿವೆ. ಇವುಗಳ ಸಂಖ್ಯೆ ಭಾರೀ ಅನ್ನುವಷ್ಟು ಇಲ್ಲ. ಆದರೆ ಈ 2012-19ರ ನಡುವೆ ಭಾರೀ ಅನ್ನುವಷ್ಟು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ನಡೆದಿವೆ. ಕೆಲವು ಸುದ್ದಿಗೀಡಾಗಿವೆ ಮತ್ತು ಹಲವು ಸುದ್ದಿಗೀಡಾಗದೇ ಸತ್ತು ಹೋಗಿವೆ. ಆದ್ದರಿಂದ ಈ ಎರಡೂ ಬಗೆಯ ಸ್ಥಿತಿಗಳೂ ಅತ್ಯಂತ ಗಹನ ಚರ್ಚೆಗೆ ಒಳಪಡಬೇಕು.
ಹೈದರಾಬಾದ್ ಪ್ರಕರಣದ ನಾಲ್ವರು ಆರೋಪಿಗಳ ಚಿತ್ರವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅವರೇನೂ ಅನ್ಯಗೃಹದ ಜೀವಿಗಳಲ್ಲ. ನಮ್ಮದೇ ಸಮಾಜದ ಉತ್ಪನ್ನಗಳು. ಅವರಿಗೆ ಮನೆ ಇದೆ, ತಂದೆ-ತಾಯಿ ಇದ್ದಾರೆ. ಪತ್ನಿ (ಎಲ್ಲರಿಗಿಲ್ಲ) ಇದ್ದಾಳೆ. ಒಟ್ಟಿನಲ್ಲಿ ಕುಟುಂಬ ಅನ್ನುವ ಚೌಕಟ್ಟು ಇದೆ. ಆದರೆ, ಸಭ್ಯ ನಾಗರಿಕರಾಗಿ ಅವರನ್ನು ಬೆಳೆಸುವುದಕ್ಕೆ ಇವಿಷ್ಟೇ ಸಾಕಾಗುವುದಿಲ್ಲ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮನ್ನಣೆ, ಲೈಂಗಿಕ ಸಹಿತ ಇತರ ಆಶಯಗಳನ್ನು ಸರ್ವಮಾನ್ಯ ರೀತಿಯಲ್ಲಿ ತೀರಿಸಿಕೊಳ್ಳುವುದಕ್ಕಿರುವ ಅವಕಾಶ ಇತ್ಯಾದಿ ಇತ್ಯಾದಿಗಳೂ ಅವರನ್ನು ಸಭ್ಯಗೊಳಿಸುವಲ್ಲಿ ಪಾತ್ರವಹಿಸುತ್ತವೆ. ನಿರ್ಭಯ ಪ್ರಕರಣದಲ್ಲಾಗಲಿ ಅಥವಾ ಹೈದರಾಬಾದ್ ಪ್ರಕರಣದಲ್ಲಾಗಲಿ ಈ ಎರಡರಲ್ಲೂ ಆರೋಪಿಗಳು ಅತ್ಯಂತ ಒರಟು ವೃತ್ತಿಯಲ್ಲಿ ತೊಡಗಿಸಿಕೊಂಡವರು. ಅವರ ಉದ್ಯೋಗಕ್ಕೆ ಭದ್ರತೆ ಇಲ್ಲ. ಸರಿಯಾದ ಶಿಕ್ಷಣ ಇಲ್ಲ. ಸರಿಯಾದ ಸಮಯಕ್ಕೆ ಮನೆ ಸೇರುವಂತಹ ಉದ್ಯೋಗವೂ ಅದಲ್ಲ. ಇನ್ನು, ಮನೆಯೂ ಅಷ್ಟೇ. ಬಿಡುವಿನ ಸಮಯದಲ್ಲಿ ದಣಿವಾರಿಸಿಕೊಳ್ಳುವುದಕ್ಕೆ ಇರುವ ಒಂದು ತಾಣವೆಂಬುದರ ಹೊರತಾಗಿ ಮನೆಗೂ ಈ ಮನುಷ್ಯರಿಗೂ ಸಂಬಂಧವೂ ಅಷ್ಟಕ್ಕಷ್ಟೇ ಇರುತ್ತದೆ. ಹೆಂಡ, ಮಾದಕ ದ್ರವ್ಯ ಮತ್ತು ದೇಹದ ಅತೃಪ್ತ ಆಸೆಗಳನ್ನು ಕೆರಳಿಸಿ ಹುಚ್ಚುಚ್ಚಾಗಿ ಯೋಚಿಸುವಂತೆ ಮಾಡುವ ವೀಡಿಯೋಗಳನ್ನು ನೋಡುತ್ತಾ ಅವರು ದಿನ ಕಳೆಯುತ್ತಿರುತ್ತಾರೆ. ನಾಳೆಯ ಬಗ್ಗೆ ಚಿಂತಿಸದ ಮತ್ತು ಇಂದಿನ ಸುಖಕ್ಕಾಗಿ ತವಕಿಸುವ ಇವರಲ್ಲಿ ಎಲ್ಲರೂ ಅತ್ಯಾಚಾರಿಗಳಾಗುತ್ತಾರೆ ಎಂದಲ್ಲ. ಆದರೆ ಬರ್ಬರ ಅತ್ಯಾಚಾರಗಳಲ್ಲಿ ಭಾಗಿಯಾಗುವವರಲ್ಲಿ ಇಂಥವರೇ ಹೆಚ್ಚಿರುತ್ತಾರೆ. ಇವರಲ್ಲಿ ಶಿಕ್ಷೆಯ ಭಯ ಕಡಿಮೆ. ತನ್ನ ಸುತ್ತಮುತ್ತಲಿನ ಸೌಂದರ್ಯ-ಬೆಡಗು-ಬಿನ್ನಾಣಗಳನ್ನು ಕಂಡು, ತನ್ನ ಹತ್ತಿಕ್ಕಿದ ಆಸೆಗಳಿಗೆ ಜೀವ ಕೊಡುತ್ತಾ ಸಂದರ್ಭ ಸಿಕ್ಕಾಗ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡೇ ತಮ್ಮ ಆಸೆಗಳನ್ನು ಪೂರೈಸುವುದಕ್ಕೆ ಮುಂದಾಗುವ ಇವರನ್ನು ಮರಣ ದಂಡನೆಯೊಂದೇ ನಿಯಂತ್ರಿಸಬಲ್ಲುದು ಎಂದು ಹೇಳುವ ಹಾಗಿಲ್ಲ. ಮದ್ಯ ಮತ್ತು ಮಾದಕದ ನಶೆಯು ಎಂಥವರನ್ನೂ ಮೃಗೀಯವಾಗಿ ಯೋಚಿಸುವಂತೆ ಮಾಡುತ್ತದೆ. ಅವರನ್ನು ಮೊದಲು ಆ ನಶೆಯಿಂದ ಹೊರತರುವ ಪ್ರಯತ್ನಗಳಾಗಬೇಕು. ಹಾಗೆ ಆಗಬೇಕಾದರೆ, ಆ ಗುಂಪಿನ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಯಬೇಕು. ಅವರ ಯೋಚನೆ, ಯೋಜನೆ, ಕೌಟುಂಬಿಕ ಬದುಕು, ಮನೆಯ ವಾತಾವರಣ, ಉದ್ಯೋಗ ಭದ್ರತೆ ಇತ್ಯಾದಿ ಇತ್ಯಾದಿಗಳು ಪರಿಶೀಲನೆಗೆ ಒಳಪಡಬೇಕು. ಸರಕಾರೇತರ ಸಂಸ್ಥೆಗಳ ಮೂಲಕ ಅವರನ್ನು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು.
ಅವರು ಮೃಗಗಳಾಗಿ ಪರಿವರ್ತನೆಯಾಗುವುದು ಕಷ್ಟಕರವಲ್ಲ. ಆದ್ದರಿಂದ, ‘ಮರಣ ದಂಡನೆ’ ಎಂಬ ಶಿಕ್ಷೆಯ ಭೀತಿಯನ್ನು ಸಾಮಾಜಿಕವಾಗಿ ಹರಡುವುದರ ಜೊತೆಜೊತೆಗೇ ಹೆಣ್ಣಿನ ಬಗ್ಗೆ ಗಂಡು ಸಮಾಜದಲ್ಲಿ ಇರಬಹುದಾದ ತಪ್ಪಭಿಪ್ರಾಯಗಳನ್ನೂ ನೀಗಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪ್ರತಿ ಮನೆಯಲ್ಲೂ ಹೆಣ್ಣಿನ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ಹೆತ್ತವರು ಸದಾ ರವಾನಿಸುತ್ತಿರಬೇಕು. ಮನೆಯ ಗಂಡು ಮಕ್ಕಳ ಮುಂದೆ ‘ಸಾಧಕ ಹೆಣ್ಣು ಮಕ್ಕಳ’ ಬಗ್ಗೆ ಹೆತ್ತವರು ಪ್ರಸ್ತಾವಿಸುತ್ತಿರಬೇಕು. ಹೆಣ್ಣು ಮತ್ತು ಗಂಡಿನಲ್ಲಿ ಯಾರು ಮೇಲೂ ಅಲ್ಲ, ಕೀಳೂ ಅಲ್ಲ ಅನ್ನುವ ಸಂದೇಶವನ್ನು ಮಕ್ಕಳಿಗೆ ತಲುಪಿಸುತ್ತಿರಬೇಕು. ಒಂದು ಚಳವಳಿ ರೂಪದಲ್ಲಿ ನಡೆಯಬೇಕಾದ ಕ್ರಮ ಇದು. ಅಲ್ಲದೇ, ಬರೇ ಮರಣ ದಂಡನೆಯೊಂದೇ ಪರಿಸ್ಥಿತಿಯನ್ನು ಬದಲಿಸದು.
No comments:
Post a Comment