ಏಳೂವರೆ ವರ್ಷಗಳ ಹಿಂದೆ ಛತ್ತೀಸ್‍ಗಢದಲ್ಲಿ 17 ಮಂದಿ ಗ್ರಾಮಸ್ಥರ ಹತ್ಯೆ ನಡೆದಿತ್ತು. ಸತ್ತವರೆಲ್ಲ ನಕ್ಸಲೀಯರೆಂದು ಪೊಲೀಸರು ಹೇಳಿದ್ದರು. ನಕ್ಸಲೀಯರು ರಾತ್ರಿ ಸಭೆ ನಡೆಸುತ್ತಿದ್ದಾಗ ದಿಢೀರ್ ಆಗಿ ದಾಳಿ ಮಾಡಿದ ಡಿಐಜಿ ನೇತೃತ್ವದ ಎರಡು ತಂಡಗಳು ಗುಂಡು ಹಾರಿಸಿವೆ. ಪ್ರತಿಯಾಗಿ ನಕ್ಸಲೀಯರೂ ಗುಂಡು ಹಾರಿಸಿದ್ದಾರೆ. ಈ ಮುಖಾಮುಖಿಯಲ್ಲಿ (ಎನ್‍ಕೌಂಟರ್) ರಕ್ಷಣಾ ಪಡೆಯ ಆರು ಮಂದಿಗೂ ಗಾಯಗಳಾಗಿವೆ. ಇರುಳು ಸರಿದು ಹಗಲು ಮೂಡಿದ ಬಳಿಕ ಈ ಎಲ್ಲ 17 ಮಂದಿ ನಕ್ಸಲೀಯರ ಶವಗಳು ದೊರಕಿವೆ ಎಂದು ಈ ಕಾರ್ಯಾಚರಣೆ ನಡೆಸಿದ ಸಿ ಆರ್ ಪಿ ಎಫ್ ಮತ್ತು ಪೊಲೀಸ್ ತಂಡಗಳ ಜಂಟಿ ಹೇಳಿಕೆಗಳು ತಿಳಿಸಿದ್ದುವು. ಛತ್ತೀಸ್‍ಗಢದ ಬಿಜಾಪುರ್ ಮತ್ತು ಸುಕ್ಮಾ ಜಿಲ್ಲೆಯ ಸರ್ಕೇಗುಡ ಗ್ರಾಮದಲ್ಲಿ 2012, ಜೂನ್ 28-29ರ ರಾತ್ರಿ ಈ ಕಾರ್ಯಾಚರಣೆ ನಡೆದಿತ್ತು. ಛತ್ತೀಸ್‍ಗಢದಲ್ಲಿ ಆಗ ಅಧಿಕಾರದಲ್ಲಿದ್ದುದು ಬಿಜೆಪಿ. ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ಈ ಹತ್ಯೆಯ ಕುರಿತಂತೆ ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಆ ಎನ್‍ಕೌಂಟರ್ ನ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿತ್ತು. ಕೊನೆಗೆ ಮಧ್ಯಪ್ರದೇಶದ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ವಿ.ಕೆ. ಅಗರ್ವಾಲ್ ಅವರ ನೇತೃತ್ವದಲ್ಲಿ ಸರಕಾರವು ತನಿಖಾ ತಂಡವನ್ನು ನೇಮಿಸಿತು. ಇದೀಗ ಆ ತನಿಖಾ ವರದಿ ಬಹಿರಂಗವಾಗಿದೆ. ಆದರೆ, ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಎನ್‍ಕೌಂಟರ್ ನಲ್ಲಿ ಸಾಯಿಸಲಾದ ಎರಡ್ಮೂರು ದಿನಗಳ ಮೊದಲು ಬಹಿರಂಗವಾದ ಈ ವರದಿಯು ಎನ್‍ಕೌಂಟರ್ ಹತ್ಯೆಯನ್ನು ಸಂಭ್ರಮಿಸುವ ಸರ್ವರನ್ನೂ ಸ್ವವಿಮರ್ಶೆಗೆ ಒಡ್ಡುವಂತಿದೆ. ನಿಜವಾಗಿ,
ಆ 17 ಮಂದಿಯನ್ನು ಎನ್‍ಕೌಂಟರ್ ಮೂಲಕ ಹತ್ಯೆಗೈಯಲಾಗಿದೆ ಎಂಬ ಪೊಲೀಸ್ ವರದಿಯನ್ನು ಪೋಸ್ಟ್ ಮಾರ್ಟಮ್ ವರದಿ ಒಪ್ಪುವುದೇ ಇಲ್ಲ. ಈ 17 ಮಂದಿಯ ಪೈಕಿ 10 ಮಂದಿಯನ್ನೂ ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಅವರು ಓಡುತ್ತಿರುವ ಸ್ಥಿತಿಯಲ್ಲಿ ಗುಂಡಿಕ್ಕಲಾಗಿದೆ ಎಂಬುದು ಪೋಸ್ಟ್ ಮಾರ್ಟಮ್ ವರದಿಯಿಂದ ಸ್ಪಷ್ಟವಾಗುವುದಾಗಿ ತನಿಖಾ ತಂಡವು ವಿವರಿಸಿದೆ. ಅವರೆಲ್ಲರ ಬೆನ್ನಿನಲ್ಲಿ ಗುಂಡಿನ ಗಾಯವಿತ್ತೇ ಹೊರತು ಮುಂಭಾಗದಲ್ಲಿ ಅಲ್ಲ. ಸರ್ಕೆಗುಡದಲ್ಲಿ ಗುಂಡಿನ ಚಕಮಕಿ ನಡೆದಿರಲಿಲ್ಲ ಮತ್ತು ಏಕಮುಖವಾಗಿ ಗುಂಡು ಹಾರಿಸಿ ಆ ಗ್ರಾಮಸ್ಥರನ್ನು ಕೊಲ್ಲಲಾಗಿದೆ ಎಂಬ ಅಭಿಪ್ರಾಯಕ್ಕೆ ತನಿಖಾ ತಂಡವು ಬಂದಿದೆ. ಪ್ರತಿದಾಳಿ ನಡೆಸುವ ಸಾಮಥ್ರ್ಯ ಇಲ್ಲದ ಗ್ರಾಮಸ್ಥರನ್ನು ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ಮಾತ್ರವಲ್ಲ, ಮೃತದೇಹದಲ್ಲಿ ಬಂದೂಕಿನಿಂದ ತಿವಿದ ಗಾಯಗಳೂ ಇರುವುದರಿಂದ ಕೊಲ್ಲುವ ಮೊದಲು ದೈಹಿಕ ಹಿಂಸೆಯನ್ನೂ ನೀಡಲಾಗಿದೆ ಎಂಬ ಅಭಿಪ್ರಾಯವನ್ನು ತನಿಖಾ ತಂಡವು ವ್ಯಕ್ತಪಡಿಸಿದೆ. ಸತ್ತವರಲ್ಲಿ ತೀರಾ ಹತ್ತಿರದಿಂದ ಹಣೆಗೆ ಗುಂಡೇಟು ಬಿದ್ದು ಸತ್ತವರೂ ಇದ್ದಾರೆ. ಅಲ್ಲದೇ ಸತ್ತವರಲ್ಲಿ 6 ಮಂದಿ ಅಪ್ರಾಪ್ತರು. ಗುಂಡಿನ ಚಕಮಕಿ ನಡೆಯದ ಮತ್ತು ಸ್ವರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಎಂಬ ಪೊಲೀಸ್ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಕ್ಷ್ಯಗಳು ಲಭ್ಯವಾಗದ ಹತ್ಯೆ ಇದು ಎಂಬ ನಿಲುವು ತನಿಖಾ ತಂಡದ್ದು. ಪೊಲೀಸರಿಗಾದ ಗಾಯಕ್ಕೆ ಫ್ರೆಂಡ್ಲೀ ಫೈರ್ (ತಮ್ಮವರ ಗುಂಡಿನಿಂದಲೇ ಆದ ಗಾಯ) ಕಾರಣವೇ ಹೊರತು ಎದುರಿನವರ ದಾಳಿಯಲ್ಲ ಎಂಬ ಅಭಿಪ್ರಾಯಕ್ಕೂ ತನಿಖಾ ತಂಡ ಬಂದಿದೆ. ವಿಶೇಷ ಏನೆಂದರೆ, 2012ರಲ್ಲಿ ಈ ಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಧ್ವನಿಯೆತ್ತಿದ ಕಾಂಗ್ರೆಸ್ ಪಕ್ಷವು 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನೆಂದರೆ, ಪೊಲೀಸಧಿಕಾರಿ ಕಲ್ಲೂರಿ ಅವರಿಗೆ ಭಡ್ತಿಯನ್ನು ದಯಪಾಲಿಸಿದ್ದು. 2018ರಲ್ಲಿ ಸೋರಿಕೆಯಾಗಿರುವ ಸಿಬಿಐ ತನಿಖಾ ವರದಿಯ ಪ್ರಕಾರ, ಸರ್ಕೆಗುಡ ಕಾರ್ಯಾಚರಣೆ ಮತ್ತು ತಡಮೇಟ್ಲ ಕಾರ್ಯಾಚರಣೆ- ಈ ಎರಡರಲ್ಲೂ ಇವರು ತಪ್ಪಿತಸ್ಥರು. ಅಂದಹಾಗೆ,
ಸರ್ಕೆಗುಡ ಗ್ರಾಮದಲ್ಲಿ ಆ ರಾತ್ರಿ ನಡೆದ ಗ್ರಾಮಸ್ಥರ ಸಭೆಯು ಸಂಪೂರ್ಣ ನಕ್ಸಲ್ ಮುಕ್ತವಾಗಿತ್ತು ಎಂಬುದು ತನಿಖಾ ತಂಡದ ಅಭಿಪ್ರಾಯವಲ್ಲ. ಕ್ರಿಮಿನಲ್ ಹಿನ್ನೆಲೆಯವರು ಆ ಸಭೆಯಲ್ಲಿ ಭಾಗವಹಿಸಿರುವ ಸಾಧ್ಯತೆಯನ್ನು ವರದಿ ಅಲ್ಲಗಳೆಯುವುದೂ ಇಲ್ಲ. ನಾಟಿ ಹಬ್ಬದ ಹಿನ್ನೆಲೆಯಲ್ಲಿ ಆ ಸಭೆಯನ್ನು ಆಯೋಜಿಸಲಾಗಿತ್ತು. ನಕ್ಸಲರು ಆ ಸಭೆಯಲ್ಲಿ ಭಾಗವಹಿಸುತ್ತಾರೆ ಅನ್ನುವ ಮಾಹಿತಿ ಆ ಗ್ರಾಮಸ್ಥರಲ್ಲಿ ಇದ್ದಿರಲಾರದು ಎಂದು ಹೇಳುವಂತೆಯೂ ಇಲ್ಲ. ಹಾಗಂತ, ಆ ಸಭೆಯನ್ನು ನಿರ್ಲಕ್ಷಿಸಿ ಬದುಕುವುದು ಅವರ ಪಾಲಿಗೆ ಸುರಕ್ಷಿತವೂ ಆಗಿರಲಿಲ್ಲ. ಒಂದುಕಡೆ, ನಕ್ಸಲೀಯರು ಮತ್ತು ಇನ್ನೊಂದು ಕಡೆ ಶರಣಾಗತ ನಕ್ಸಲರನ್ನೇ ಸೇರಿಸಿಕೊಂಡು ಸರಕಾರ ಕಟ್ಟಿರುವ ಸಲ್ವಾಜುಡುಂ ಎಂಬ ನಕ್ಸಲ್ ವಿರೋಧಿ ಪಡೆ- ಈ ಎರಡರ ನಡುವೆ ಏಗುವುದು ಗ್ರಾಮಸ್ಥರಿಗೆ ಸುಲಭವಾಗಿರಲಿಲ್ಲ. ನಕ್ಸಲರಲ್ಲಾಗಲಿ, ಸಲ್ವಾಜುಡುಮ್‍ನಲ್ಲಾಗಲಿ- ಎರಡರಲ್ಲೂ ಬಂದೂಕು ಇದೆ. ಬಾಯಿಗಿಂತ ಹೆಚ್ಚು ಬಂದೂಕಿನಿಂದ ಮಾತಾಡುವ ಈ ಎರಡೂ ಪಡೆಗಳನ್ನು ಎದುರು ಹಾಕಿಕೊಳ್ಳುವುದೆಂದರೆ ಸಾವಿಗೆ ಮುಖಾಮುಖಿಯಾದಂತೆ. ಹಾಗಂತ, ಈ ಇಬ್ಬರ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಕೂಡಾ ಎರಡು ದೋಣಿಗೆ ಕಾಲಿಟ್ಟಂತೆ. ಗ್ರಾಮಸ್ಥರನ್ನು ಕಾಡುವ ಈ ಸಾವು-ಬದುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಗ್ರಾಮಸ್ಥರೇಕೆ ನಕ್ಸಲರಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಲಭಿಸುತ್ತದೆ.
ಪೊಲೀಸರು ತಮ್ಮ ಸ್ವರಕ್ಷಣೆಗಾಗಿ ಹಾರಿಸಿದ ಗುಂಡು ತಾಗಿ ಉಂಟಾಗುವ ಸಾವನ್ನು ‘ಎನ್‍ಕೌಂಟರ್‍ಗೆ ಬಲಿ’ ಎಂದು ಹೇಳಲಾಗುತ್ತದೆಯೇ ವಿನಃ ನಿರಾಯುದ್ಧ ಅಥವಾ ಪ್ರತಿರೋಧ ತೋರದ ವ್ಯಕ್ತಿಯ ಮೇಲೆ ಗುಂಡು ಹಾರಿಸುವುದನ್ನಲ್ಲ. ಅದು ಅಪರಾಧ. ವ್ಯಕ್ತಿಯನ್ನು ಅಪರಾಧಿಯೋ ನಿರಪರಾಧಿಯೋ ಎಂದು ತೀರ್ಮಾನಿಸಬೇಕಾದುದು ನ್ಯಾಯಾಲಯ. ಪೊಲೀಸರು ಆ ಹೊಣೆಗಾರಿಕೆಯನ್ನು ವಹಿಸಿಕೊಂಡರೆ ಏನಾಗಬಹುದು ಅನ್ನುವುದಕ್ಕೆ ಸರ್ಕೆಗುಡದ 17 ಮಂದಿ ಗ್ರಾಮಸ್ಥರೇ ಉತ್ತಮ ಪುರಾವೆ. ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದಾಗ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸಿದವರು ಭಾವುಕತೆಯಿಂದ ಹೊರಬಂದು ಆಲೋಚಿಸಬೇಕಾದ ಸಂದರ್ಭ ಇದು. ಆರೋಪಿಯನ್ನು ಆರೋಪಮುಕ್ತಗೊಳಿಸುವುದು ಅಥವಾ ಅಪರಾಧಿಯನ್ನಾಗಿಸುವುದು ನ್ಯಾಯಾಲಯದಿಂದ ಸಾಧ್ಯವೇ ಹೊರತು ಪೊಲೀಸರಿಂದಲ್ಲ. ಪೊಲೀಸರು ಒದಗಿಸುವ ಸಾಕ್ಷ್ಯ ಎಷ್ಟು ನ್ಯಾಯಬದ್ಧ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯ ತೀರ್ಪು ನೀಡುತ್ತದೆ. ಕೆಲವೊಮ್ಮೆ ಬಾಹ್ಯ ಒತ್ತಡದಿಂದಾಗಿ ಪೊಲೀಸರಿಂದಲೇ ತಪ್ಪುಗಳು ಸಂಭವಿಸುವುದಿದೆ. ಅತ್ಯಾಚಾರದ ದೂರನ್ನೇ ಪೊಲೀಸರು ದಾಖಲಿಸಿಕೊಳ್ಳದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುವುದಕ್ಕೆ ಇಂಥ ಒತ್ತಡ, ರಾಜಕೀಯ ಪ್ರಭಾವಗಳೇ ಮೂಲ ಕಾರಣ. ಪ್ರಭಾವಿಗಳ ತೋಳ್ಬಲ-ಹಣ ಬಲದಿಂದಾಗಿ ನಿಜ ಪ್ರಕರಣವೊಂದು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಆದರೆ, ಇದಕ್ಕೆ ಎನ್‍ಕೌಂಟರ್ ಹತ್ಯೆ ಪರಿಹಾರ ಅಲ್ಲ. ಎನ್‍ಕೌಂಟರ್ ಗೆ ಸಾರ್ವಜನಿಕರಿಂದ ಬೆಂಬಲ ಗಿಟ್ಟುತ್ತಾ ಹೋದರೆ ರಾಜಕಾರಣಿಗಳು, ಪ್ರಭಾವಿಗಳು ಮತ್ತು ಕ್ರಿಮಿನಲ್‍ಗಳು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ತಮಗಾಗದವರನ್ನು ಮುಗಿಸಲು ಎನ್‍ಕೌಂಟರನ್ನು ದುರುಪಯೋಗಿಸಬಹುದು. ಎನ್‍ಕೌಂಟರ್ ಕತೆ ಕಟ್ಟಿ ಪೊಲೀಸರ ಮೂಲಕ ನಿರಪರಾಧಿಗಳ ಹತ್ಯೆ ನಡೆಸಬಹುದು. ಮಾತ್ರವಲ್ಲ, ಅಂಥ ಹತ್ಯೆಗಿಂತ ಮೊದಲು ಆ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಧ್ಯಮಗಳ ಮೂಲಕ ತೇಲಿಬಿಟ್ಟು ಸಾರ್ವಜನಿಕರ ಬೆಂಬಲವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಯತ್ನಿಸಬಹುದು. ಆದ್ದರಿಂದಲೇ,
ಹೈದರಾಬಾದ್ ಎನ್‍ಕೌಂಟರ್ ಗೆ ಲಭ್ಯವಾದ ಬೆಂಬಲ ಮತ್ತು ಸಂಭ್ರಮವನ್ನು ನಾವು ಆತಂಕದಿಂದ ನೋಡಬೇಕಾಗಿದೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಒತ್ತಾಯಿಸುವುದು ಬೇರೆ, ಪೊಲೀಸರೇ ಗಲ್ಲಿಗೇರಿಸುವುದು ಬೇರೆ. ಗಲ್ಲಿಗೇರಿಸುವವರೇ ಗಲ್ಲಿಗೇರಿಸಲಿ ಮತ್ತು ತನಿಖೆ ನಡೆಸುವವರೇ ತನಿಖೆ ನಡೆಸಲಿ. ಈ ಕರ್ತವ್ಯ ನಿರ್ವಹಣೆಯಲ್ಲಿ ಉಲ್ಲಂಘನೆ ನಡೆದರೆ, ಆಗಬಾರದ ಅನಾಹುತಗಳು ನಡೆಯುವುದಕ್ಕೆ ಅವಕಾಶ ಇದೆ. ಸರ್ಕೆಗುಡ ಅದಕ್ಕೆ ಇರುವ ಹಲವು ಉದಾಹರಣೆಗಳಲ್ಲಿ ಒಂದು ಉದಾಹರಣೆ ಮಾತ್ರ.
No comments:
Post a Comment