ಹಿಟ್ಟನ್ನು ರುಬ್ಬುತ್ತಿರುವ ವ್ಯಕ್ತಿಯು ತಾನು ರೊಟ್ಟಿ ತಯಾರಿಸುವುದಿಲ್ಲ ಮತ್ತು ಅದನ್ನು ಬಾಣಲೆಯಲ್ಲಿಟ್ಟು ಕಾಯಿಸಿ ತಿನ್ನಲು ಯೋಗ್ಯವಾಗುವಂತೆ ಮಾಡುವುದಿಲ್ಲ ಎಂದರೆ ಅದನ್ನು ಯಾರು ನಂಬಬಹುದು? ಹಿಟ್ಟನ್ನು ರುಬ್ಬುವುದೇ ರೊಟ್ಟಿ ತಯಾರಿಸುವುದಕ್ಕೆ. ರೊಟ್ಟಿ ತಯಾರಿಸುವ ಉದ್ದೇಶವೇ ಇಲ್ಲ ಎಂದಾದರೆ ಹಿಟ್ಟನ್ನು ರುಬ್ಬಬೇಕಾದ ಅಗತ್ಯವೇ ಇಲ್ಲ. ಇನ್ನು ತಯಾರಿಸಿದ ರೊಟ್ಟಿಯನ್ನು ಕಾಯಿಸದಿದ್ದರೆ ಅದನ್ನು ತಿನ್ನುವಂತೆಯೂ ಇಲ್ಲ. ಮಾತ್ರವಲ್ಲ ಅದರಿಂದಾಗಿ ಆ ಇಡೀ ಪ್ರಕ್ರಿಯೆಯೇ ವ್ಯರ್ಥವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆದರೆ, ಈ ದೇಶದ ನಾಗರಿಕರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಂದುಕೊಂಡಿರುವಂತಿದೆ. ಎನ್.ಆರ್.ಸಿ.ಯ ಕುರಿತು ಪಾರ್ಲಿಮೆಂಟಿನಲ್ಲಾಗಲಿ, ಸಚಿವ ಸಂಪುಟದ ಸಭೆಯಲ್ಲಾಗಲಿ ಚರ್ಚಿಸಿಯೇ ಇಲ್ಲ ಎಂದು ಪ್ರಧಆನಿ ಹೇಳಿದ್ದಾರೆ. ಎನ್‍ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಗೂ ಎನ್‍ಆರ್ ಸಿಗೂ ಸಂಬಂಧವೇ ಇಲ್ಲ ಎಂದು ಗೃಹಸಚಿವರು ಹೇಳುತ್ತಿದ್ದಾರೆ. ಮಾತ್ರವಲ್ಲ, 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಎನ್‍ಪಿಆರ್ ಕೈಗೊಂಡಿತ್ತು ಎಂದೂ ಸಮರ್ಥಿಸುತ್ತಿದ್ದಾರೆ. ನಿಜವಾಗಿ, ಇಲ್ಲಿ ಪ್ರಧಾನಿ ಮತ್ತು ಗೃಸಚಿವರು ಹೇಳದೇ ಅಡಗಿಸಿಟ್ಟಿರುವ ಎರಡು ಪ್ರಮುಖ ಅಂಶಗಳಿವೆ. ಅದರಲ್ಲಿ,
1. ಎನ್‍ಆರ್ ಸಿಯ ಕುರಿತು ಸಚಿವ ಸಂಪುಟ ಅಥವಾ ಪಾರ್ಲಿಮೆಂಟ್‍ನಲ್ಲಿ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ಹೇಳಿರುವರೇ ಹೊರತು ಎನ್‍ಆರ್ ಸಿಯನ್ನು ದೇಶವ್ಯಾಪಿಯಾಗಿ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಲೇ ಇಲ್ಲ.
2. ಯುಪಿಎ ಅವಧಿಯಲ್ಲಿ ಎನ್‍ಪಿಆರ್ ಅನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಗೃಹಸಚಿವರು, ಆಗಿನ ಎನ್‍ಪಿಆರ್ ಗೂ ಈಗಿನ ಎನ್‍ಪಿಆರ್ ಗೂ ನಡುವೆ ಇರುವ ವ್ಯತ್ಯಾಸವೇನು ಎಂದು ಹೇಳುವುದೇ ಇಲ್ಲ. ಅಂದಹಾಗೆ,
ಎನ್‍ಪಿಆರ್ ಎಂಬುದು ದೇಶದ್ರೋಹಿಯೂ ಅಲ್ಲ, ಅಪಾಯಕಾರಿಯೂ ಅಲ್ಲ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಎನ್‍ಪಿಆರ್ ಸುಲಭಗೊಳಿಸುತ್ತದೆ. ಈ ದೇಶದಲ್ಲಿ ಎಷ್ಟು ನಾಗರಿಕರು ವಾಸವಿದ್ದಾರೆ, ಅವರ ಉದ್ಯೋಗ, ಮನೆಯ ಸ್ಥಿತಿ ಇತ್ಯಾದಿ ಸಾಮಾನ್ಯ ಮಾಹಿತಿಗಳನ್ನು ಸಂಗ್ರಹಿಸುವುದು ಎನ್‍ಪಿಆರ್ ನ ಉದ್ದೇಶ. ಆದರೆ, ದುರುದ್ದೇಶವುಳ್ಳ ವ್ಯಕ್ತಿಯೋರ್ವ ಈ ಎನ್‍ಪಿಆರ್ ನ ಮೂಲಕವೇ ತನ್ನ ಗುರಿಯನ್ನು ಸಾಧಿಸಿಕೊಳ್ಳಬಬಹುದು. ಅದಕ್ಕೆ ಬಹಳ ಶ್ರಮ ಪಡಬೇಕಾದ ಅಗತ್ಯವಿಲ್ಲ. ಎನ್‍ಪಿಆರ್ ನ ಮೂಲಕ ಯಾವೆಲ್ಲ ಮಾಹಿತಿಗಳನ್ನು ನಾಗರಿಕರಿಂದ ಸಂಗ್ರಹಿಸಲಾಗುತ್ತದೋ ಅವೇ ಮಾಹಿತಿಗಳ ಜೊತೆ ತಮ್ಮ ದುರುದ್ದೇಶಕ್ಕೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಿದರೂ ಸಾಕಾಗುತ್ತದೆ. ಅಮಿತ್ ಶಾರ ಎನ್‍ಪಿಆರ್ ಅಪಾಯಕಾರಿ ಎನಿಸಿರುವುದು ಈ ಕಾರಣಕ್ಕೆ. ಉದಾಹರಣೆ,
ಈ ಹಿಂದಿನ ಯಾವ ಎನ್‍ಪಿಆರ್ ನಲ್ಲೂ ತಂದೆ ಮತ್ತು ತಾಯಿ ಹುಟ್ಟಿದ ಸ್ಥಳದ ಮಾಹಿತಿ ಸಂಗ್ರಹ ಆಗಿರಲಿಲ್ಲ. ಕೇವಲ ಜನಸಂಖ್ಯಾ ನೋಂದಣಿಗೆ ಈ ಮಾಹಿತಿಯ ಅಗತ್ಯವೂ ಇಲ್ಲ. ಆದರೆ, ಕೇಂದ್ರದ ಹೊಸ ಎನ್‍ಪಿಆರ್ ನಲ್ಲಿ ಈ ಪ್ರಶ್ನೆಯೂ ಸೇರಿದಂತೆ ಐದಾರು ಹೊಸ ಪ್ರಶ್ನೆಗಳೂ ಇವೆ. ಎನ್‍ಆರ್ ಸಿಗೆ ಈ ಪ್ರಶ್ನೆಗಳು ಅಗತ್ಯವೇ ಹೊರತು ಎನ್‍ಪಿಆರ್ ಗಲ್ಲ. ಅಂದರೆ, ಎನ್‍ಆರ್ ಸಿಯನ್ನು ಕೈಗೊಳ್ಳಲು ಕೇಂದ್ರ ಉತ್ಸುಕವಾಗಿಲ್ಲ ಎಂಬ ಸಂದೇಶವನ್ನು ಕೊಡುತ್ತಲೇ ಹಿಂಬಾಗಿಲ ಮೂಲಕ ಅದನ್ನು ಜಾರಿಯಲ್ಲಿಡುವ ಪ್ರಯತ್ನ ಇದು. ಎನ್‍ಪಿಆರ್ ಎಂಬುದು ಎನ್‍ಆರ್ ಸಿಯ ಪ್ರಾಥಮಿಕ ಮೆಟ್ಟಿಲು. ಎನ್‍ಪಿಆರ್ ಮೂಲಕ ಪಡೆದ ಮಾಹಿತಿಯನ್ನು ಎನ್‍ಆರ್ ಸಿಗಾಗಿ ಬಳಸಿಕೊಳ್ಳಲಾಗುತ್ತದೆ. ಆ ಬಳಿಕ ಸಿಎಎಯ ಆಧಾರದಲ್ಲಿ ಭಾರತೀಯರ ಪೌರತ್ವವನ್ನು ನಿರ್ಧರಿಸಲಾಗುತ್ತದೆ. ಇದನ್ನು ಇನ್ನಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವಿಧಾನ ಏನೆಂದರೆ, ಎನ್‍ಪಿಆರ್ ಎಂಬುದು ಹಿಟ್ಟು. ಎನ್‍ಆರ್ ಸಿ ಎಂಬುದು ರೊಟ್ಟಿ ಮತ್ತು ಸಿಎಎ ಎಂಬುದು ರೊಟ್ಟಿಯನ್ನು ಸುಡುವ ಕ್ರಿಯೆ. ಸದ್ಯ ಎನ್‍ಪಿಆರ್ ಎಂಬ ಹಿಟ್ಟನ್ನು ರುಬ್ಬುವ ಕೆಲಸಕ್ಕೆ ಕೇಂದ್ರ ಸರಕಾರ ಕೈಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ 6 ವರ್ಷಗಳ ಅವಧಿಯಲ್ಲೇ ಅತೀ ದೊಡ್ಡದಾದ ನಾಗರಿಕ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಪ್ರತಿರೋಧ ಆರಂಭವಾದದ್ದು ಅಸ್ಸಾಮ್‍ನಿಂದ. ಅನೇಕ ಸಂಕಟ, ಸವಾಲು, ಸಮಸ್ಯೆಗಳಿಗೆ ಮುಖಾಮುಖಿಯಾಗಿಯೂ ಎನ್‍ಆರ್‍ಸಿಗೆ ಸಹಕರಿಸಿದ್ದ ಅಸ್ಸಾಮ್‍ನ ಜನತೆಯು ಸಿಎಎಯನ್ನು ಕಂಡು ಹೌಹಾರಿತು. 1951ರಿಂದ 1971 ಮಾರ್ಚ್ 24ರ ಒಳಗೆ ಅಸ್ಸಾಮ್ ಪ್ರವೇಶಿಸಿರುವ ಎಲ್ಲ ವಲಸಿಗರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಆ ಬಳಿಕ ಅಸ್ಸಾಮ್ ಪ್ರವೇಶಿಸಿದ ಎಲ್ಲರಿಗೂ ಪೌರತ್ವ ನಿರಾಕರಿಸುವುದು ಅಸ್ಸಾಮ್ ಎನ್‍ಆರ್ ಸಿಯ ಗುರಿಯಾಗಿತ್ತು. ವಲಸಿಗರ ವಿರುದ್ಧ 70ರ ದಶಕದಲ್ಲಿ ಅಸ್ಸಾಮ್‍ನಲ್ಲಿ ಹುಟ್ಟಿಕೊಂಡ ಚಳವಳಿಯ ಬಯಕೆಯೂ ಇದುವೇ ಆಗಿತ್ತು. ಆದರೆ, ಕೇಂದ್ರ ಸರಕಾರ ಜಾರಿಗೆ ತಂದ ಸಿಎಎ (ಪೌರತ್ವ ತಿದ್ದುಪಡಿ ಕಾನೂನು) ಈ ಮೂಲ ಆಶಯದ ಮೇಲೆಯೇ ಸವಾರಿ ಮಾಡಿತು. 2014 ಡಿಸೆಂಬರ್ 31ರೊಳಗೆ ಅಸ್ಸಾಮ್ ಸಹಿತ ದೇಶಕ್ಕೆ ವಲಸೆ ಬಂದವರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಪೌರತ್ವ ಕೊಡುವ ಸಿಎಎ ಕಾಯ್ದೆಯನ್ನು ಜಾರಿಗೆ ತಂದಿತು. ಇದು ಅಸ್ಸಾಮಿಗರ ಬೇಡಿಕೆಯಲ್ಲ. 1971 ಮಾರ್ಚ್ 24ರ ಬಳಿಕ ಅಸ್ಸಾಮ್ ಪ್ರವೇಶಿಸಿದ ಎಲ್ಲರನ್ನೂ ಹೊರಹಾಕುವುದು ಅವರ ಗುರಿ. ಅಲ್ಲದೇ, ಪೌರತ್ವ ನೀಡುವ ಅಂತಿಮ ದಿನಾಂಕವನ್ನು 1971 ಮಾರ್ಚ್ 24ರ ಬದಲು 2014 ಡಿಸೆಂಬರ್ 31ರ ವರೆಗೆ ಕೇಂದ್ರ ಸರಕಾರ ವಿಸ್ತರಿಸಿದ್ದೂ ಅಸ್ಸಾಮಿಗರನ್ನು ಕೆರಳಿಸಿತು. ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ, ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ ಮತ್ತು ಅಸೊಮ್ ಜಾತಿಯ ತಾಬಡಿ ಯುವ ಛಾತ್ರಾ ಪರಿಷದ್ ಸೇರಿದಂತೆ ಸುಮಾರು 30ರಷ್ಟು ಪ್ರಮುಖ ಸಂಘಟನೆಗಳು ಬೀದಿಗಿಳಿದುವು. ಇದರಲ್ಲಿ ಚಹಾ ಕಾರ್ಮಿಕ ಬುಡಕಟ್ಟು ಸಂಘಟನೆಗಳು, ಸರ್ಕಾರಿ ಉದ್ಯೋಗಿ ಸಂಘಟನೆಗಳು ಮತ್ತು ಅಲ್ಪಸಂಖ್ಯಾತ ಸಂಘಟನೆಗಳೂ ಭಾಗಿಯಾದುವು. ಇದೇವೇಳೆ, ಸಿಎಎಯನ್ನು ಸಮರ್ಥಿಸುವುದಕ್ಕೆ ಸಂಘಪರಿವಾರ ಪ್ರಾರಂಭಿಸಿದ ತಕ್ಷಣವೇ ಪ್ರತಿಭಟನಾಕಾರರು ಅವರ ವಿರುದ್ಧ ತಿರುಗಿ ಬಿದ್ದರು. ಆರೆಸ್ಸೆಸ್ ಕಚೇರಿಯನ್ನೇ ಧ್ವಂಸಗೊಳಿಸಿದರು. ಎಲ್ಲಿಯ ವರೆಗೆಂದರೆ, ಅದರ ಕಾರ್ಯಕರ್ತರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ತಪ್ಪಿಸಿಕೊಂಡರು. ಸಿಎಎ ಪರ ಒಂದು ರಾಲಿ ನಡೆಸಿದ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಆ ಬಳಿಕ ಆಂತರಿಕ ಸಂಘರ್ಷ ಸ್ಫೋಟಿಸಿತು. ಅನೇಕ ನಾಯಕರು ಎಬಿವಿಪಿಯನ್ನು ತ್ಯಜಿಸಿದರು. ನಿಜವಾಗಿ,
ದೇಶದಾದ್ಯಂತ ಸುನಾಮಿಯ ರೂಪದಲ್ಲಿ ಎದ್ದಿರುವ ಪ್ರತಿಭಟನೆಗೆ ಕೇಂದ್ರ ಸರಕಾರ ಭಯಪಟ್ಟಿದೆ. ಆದ್ದರಿಂದಲೇ, ಎನ್‍ಆರ್ ಸಿಯ ಬಗ್ಗೆ ಎಲ್ಲೂ ಚರ್ಚಿಸಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಪ್ರತಿಭಟನಾಕಾರರಿಗೆ ದಕ್ಕಿದ ಮೊದಲ ಅಭೂತಪೂರ್ವ ಜಯ ಇದು. ನೋಟು ನಿಷೇಧ ಮತ್ತು ಜಿಎಸ್‍ಟಿ ತಂದ ಸಂಕಟವನ್ನು ನುಂಗಿಕೊಂಡು ಬದುಕಿದ ಭಾರತೀಯರ ಸಹನೆಯನ್ನು ಕೇಂದ್ರ ಸರಕಾರ ಅತ್ಯಂತ ತಪ್ಪಾಗಿ ಅರ್ಥೈಸಿತ್ತು. ನಾಗರಿಕರ ಸಹನೆಯನ್ನು ತನಗೆ ತಪ್ಪು ನಡೆಗೆ ಸಿಕ್ಕ ಸಮ್ಮತಿ ಎಂದು ಅಂದುಕೊಂಡಿತ್ತು. ಆ ಧೈರ್ಯವೇ ದೇಶದಲ್ಲಿ ಎನ್‍ಆರ್‍ಸಿ ಮತ್ತು ಸಿಎಎಯ ಜಾರಿಗೆ ಕಾರಣವೂ ಆಗಿತ್ತು. ಆದರೆ ಇಂದು ಭಾರತದ ಚಿತ್ರಣವೇ ಬದಲಾಗಿದೆ. ನೋಟು ನಿಷೇಧ ಮತ್ತು ಜಿಎಸ್‍ಟಿಯನ್ನು ನಡೆಸಿದ ನಾಗರಿಕರು ಇನ್ನು ಸಹಿಸಲ್ಲ ಎಂದು ಬೀದಿಗಿಳಿದಿದ್ದಾರೆ. ಈ ಜನಾಕ್ರೋಶಕ್ಕೆ ಹೆದರಿ ಕೇಂದ್ರ ಸರಕಾರ ಅಡ್ಡಡ್ಡ ಮಾತಾಡುತ್ತಿದೆ. ಒಂದುವೇಳೆ, ಜನರ ಧ್ವನಿ ಹೀಗೆಯೇ ಮುಂದುವರಿದರೆ ಕೇಂದ್ರವು ತನ್ನ ವಿಭಜನವಾದಿ ನೀತಿಯನ್ನು ಸಂಪೂರ್ಣವಾಗಿ ಕೈ ಬಿಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಎನ್‍ಆರ್ ಸಿ, ಸಿಎಎಗಳನ್ನು ರದ್ದುಗೊಳಿಸಬಹುದಲ್ಲದೇ, ಎನ್‍ಪಿಆರ್ ನಿಂದ ವಿವಾದಿತ ಅಂಶಗಳನ್ನು ಕೈಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಬಹುದು. ಸದ್ಯದ ಅಗತ್ಯ ಇದು. ಪ್ರತಿಭಟನೆಗಳು ಚಿರಾಯುವಾಗಲಿ.
No comments:
Post a Comment