Wednesday, 27 April 2022

ಸನ್ಮಾರ್ಗಕ್ಕೆ 44: ಕಳಂಕಿತ ರಾಜ ಮತ್ತು ಶಿಸ್ತುಬದ್ಧ ನಾಗರಿಕನ ನಡುವಿನ ಆಯ್ಕೆ

 


ಒಂದು ಪತ್ರಿಕೆಯನ್ನು ಆರಂಭಿಸುವುದಕ್ಕೆ ಏನೆಲ್ಲ ಬೇಕು ಎಂಬ ಪ್ರಶ್ನೆಗೆ ತಕ್ಷಣಕ್ಕೆ ಲಭ್ಯವಾಗುವ ಉತ್ತರ- ಹಣ. ಆದರೆ ಹಣವೊಂದಿದ್ದರೆ ಪತ್ರಿಕೆಯೊಂದನ್ನು ಪ್ರಾರಂಭಿಸಿಬಿಡಬಹುದೇ ಎಂಬ ಮರು ಪ್ರಶ್ನೆಗೆ ಉತ್ತರ ಇಷ್ಟು ಸುಲಭ ಅಲ್ಲ. ಮನಸ್ಸು ಮಾಡಿದರೆ ನೂರು ಪತ್ರಿಕೆಗಳನ್ನು ಪ್ರಾರಂಭಿಸುವಷ್ಟು ಧನಿಕರು ಈ ಸಮಾಜದಲ್ಲಿದ್ದಾರೆ. ಆದರೆ ಧನಿಕರ ಸಂಖ್ಯೆಗೆ ಅನುಗುಣವಾಗಿ ಪತ್ರಿಕೆಗಳೇನೂ ಇಲ್ಲಿ ಪ್ರಾರಂಭವಾಗುತ್ತಿಲ್ಲ. ಯಾಕೆಂದರೆ ಹಣ; ಪತ್ರಿಕಾ ರಂಗದ ಪ್ರಧಾನ ಘಟಕವೇ ಹೊರತು ಹಣವೇ ಸರ್ವವೂ ಅಲ್ಲ. ಪತ್ರಿಕಾ ರಂಗವು ಹಣಬಲದ ಆಚೆಗೆ ಕೆಲವು ಅರ್ಹತೆಗಳನ್ನು ಬಯಸುತ್ತದೆ. ಈ ಅರ್ಹತೆಯ ಪಟ್ಟಿಯಲ್ಲಿ,

ವೃತ್ತಿ ಗೌರವ, ಮೌಲ್ಯನಿಷ್ಠೆ, ದೂರದೃಷ್ಟಿ, ವೈಚಾರಿಕ ಸ್ಪಷ್ಟತೆ, ಸಾಮಾಜಿಕ ಕಳಕಳಿ, ಮೌಲ್ಯಗಳೊಂದಿಗೆ ರಾಜಿಯಾಗದ ಗುಣ, ಏಳು- ಬೀಳುಗಳನ್ನು ಧೈರ್ಯದಿಂದ ಎದುರಿಸುವ ಛಾತಿ, ಹೊಗಳಿಕೆ ಮತ್ತು ತೆಗಳಿಕೆಯನ್ನು ಸಹಜವಾಗಿ ಸ್ವೀಕರಿಸುವ ಸ್ಥಿತಪ್ರಜ್ಞೆ, ಕೇಸುಗಳನ್ನು ಜಡಿಸಿಕೊಳ್ಳಲು ಸಿದ್ಧವಾಗಿರಬೇಕಾದುದು, ಓದುಗರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಮತ್ತು ಓದುಗರ ರುಚಿಯನ್ನು ಅರಿತುಕೊಂಡು ಮಾರ್ಪಾಡುಗಳನ್ನು ತರುವುದಕ್ಕೆ ಇರಬೇಕಾದ ಸೂಕ್ಷ್ಮ ದೃಷ್ಟಿ... ಇತ್ಯಾದಿ ಇತ್ಯಾದಿಗಳೂ ಇವೆ. ಪತ್ರಿಕೆಯೊಂದರ ಪ್ರಾರಂಭಕ್ಕೆ ಹಣ ಒಂದು ಘಟಕವಾದರೆ ಆ ಪತ್ರಿಕೆ ಬದುಕಿ ಉಳಿಯುವುದಕ್ಕೆ ಇನ್ನಿತರ ಹಲವು ಅಂಶಗಳೂ ಮುಖ್ಯವಾಗುತ್ತವೆ.

ಸನ್ಮಾರ್ಗಕ್ಕೆ 44 ವರ್ಷಗಳು ಪೂರ್ಣಗೊಂಡು 45ಕ್ಕೆ ಪಾದಾರ್ಪಣೆ ಮಾಡುವ ಈ ಹಂತದಲ್ಲಿ ಹಳತನ್ನೊಮ್ಮೆ ಅವಲೋಕಿಸುವಾಗ ಅಚ್ಚರಿ ಮತ್ತು ಅಭಿಮಾನ ಎರಡೂ ಜೊತೆಜೊತೆಗೇ ಉಂಟಾಗುತ್ತದೆ.

44 ವರ್ಷಗಳ ಹಿಂದೆ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದ ಪುಟ್ಟ ತಂಡದಲ್ಲಿ ಧನಿಕರು ಇರಲಿಲ್ಲ. ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡ ನಿಪುಣರೂ ಇರಲಿಲ್ಲ. ಪತ್ರಿಕೋದ್ಯಮದಲ್ಲಿ ಡಿಗ್ರಿಯ ಮೇಲೆ ಡಿಗ್ರಿ ಪಡೆದ ‘ಅರ್ಹರೂ’ ಇರಲಿಲ್ಲ. ಕೆ.ಎಂ. ಶರೀಫ್, ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾ ಮತ್ತು ಕೆಲವೇ ಕೆಲವು ಉತ್ಸಾಹಿ ಯುವಕರಲ್ಲಿದ್ದುದು ಕನಸು, ಛಲ, ಬದ್ಧತೆ ಮತ್ತು ಅಪಾರ ಧೈರ್ಯ ಮಾತ್ರ. ಆ ಕಾಲದಲ್ಲಿ ಇಸ್ಲಾಮ್ ಏನು ಎಂಬುದಾಗಿ ಹೇಳುವುದಕ್ಕೆ ಇಲ್ಲಿ ದಿನ ಪತ್ರಿಕೆಗಳಿದ್ದುವು ಮತ್ತು ಅವು ಏನು ಹೇಳುತ್ತಿತ್ತೋ ಅದುವೇ ನಿಜವಾದ ಇಸ್ಲಾಮ್ ಎಂದು ಓದುಗರು ಅಂದುಕೊಳ್ಳಲೇ ಬೇಕಾದ ವಾತಾವರಣವೂ ಇತ್ತು. ಯಾಕೆಂದರೆ, ಯಾವುದು ಇಸ್ಲಾಮ್ ಮತ್ತು ಯಾವುದು ಅಲ್ಲ ಎಂದು ಹೇಳುವುದಕ್ಕೆ ಮತ್ತು ದಿನ ಪತ್ರಿಕೆಗಳು ಹೇಳುತ್ತಿರುವ ಇಸ್ಲಾಮ್ ಎಷ್ಟು ಶೇಕಡಾ ನಿಜ ಎಂಬುದನ್ನು ವಿಶ್ಲೇಷಿಸುವುದಕ್ಕೆ ಇಲ್ಲಿ ಯಾವ ಮಾಧ್ಯ ಮವೂ ಇರಲಿಲ್ಲ. ಕನ್ನಡ ಬಲ್ಲ ಮುಸ್ಲಿಮರು, ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಮರು, ಮುಸ್ಲಿಮ್ ಬರಹಗಾರರು, ಶಿಕ್ಷಣ ತಜ್ಞರು, ವಿಶ್ಲೇಷಣಕಾರರ ಬಹುದೊಡ್ಡ ಕೊರತೆಯೂ ಆ ಕಾಲದಲ್ಲಿತ್ತು. ಇಸ್ಲಾಮ್ ಮಾತ್ರ ಅಲ್ಲ, ಮುಸ್ಲಿಮರೇ ಅಂದಿನ ಸಮಾಜದ ಪಾಲಿಗೆ ಅಪರಿಚಿತರಾಗಿದ್ದರು. ಮಸೀದಿಯಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಕನ್ನಡ ಬಳಕೆ ಮಾಡುವ ಮುಸ್ಲಿಮರ ಸಂಖ್ಯೆ ಬಹಳ ಕಡಿಮೆ ಇತ್ತು. ಇದರಿಂದಾಗಿ ಈ ನಾಡಿನ ಬಹುಸಂಖ್ಯಾತರಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ಇರುವ ಅವಕಾಶಗಳು ಬಹಳ ಸೀಮಿತವಾಗಿದ್ದುವು. ದಿನಪತ್ರಿಕೆಗಳು ಏನು ಹೇಳುತ್ತವೋ ಅದುವೇ ಇಸ್ಲಾಮ್ ಎಂದು ಅಂದುಕೊಳ್ಳುವುದರ ಹೊರತು ಅವರಲ್ಲಿ ಬೇರೆ ಆಯ್ಕೆಗಳಿರಲಿಲ್ಲ. ಮುಸ್ಲಿಮರ ರೀತಿ, ರಿವಾಜು, ಸಂಸ್ಕೃತಿ, ಭಾಷಾ ವೈವಿಧ್ಯ, ಪವಿತ್ರ ಕುರ್‌ಆನ್, ನಮಾಝ್, ಉಪವಾಸ, ಹಜ್ಜ್, ಪ್ರವಾದಿ ವಚನ... ಇತ್ಯಾದಿಗಳನ್ನು ವಿವರವಾಗಿ ತಿಳಿದುಕೊಳ್ಳುವುದಕ್ಕೆ ರಾಜ್ಯದ ಮಂದಿಯ ಪಾಲಿಗೆ ಯಾವ ಕನ್ನಡ ಮೂಲಗಳೂ ಇರಲಿಲ್ಲ. ಸನ್ಮಾರ್ಗ ಹುಟ್ಟಿಕೊಂಡದ್ದು ಇಂಥ ಸಂಕ್ರಮಣದ ಕಾಲದಲ್ಲಿ.

1978 ಎಪ್ರಿಲ್ 23ರಂದು ವಾರಪತ್ರಿಕೆಯಾಗಿ ಸನ್ಮಾರ್ಗದ ಪತ್ರಿಕಾ ರಂಗ ಪ್ರವೇಶವು ಸುಲಭದ್ದಾಗಿರಲಿಲ್ಲ. ಕನ್ನಡ ಬಲ್ಲ ರಾಜ್ಯದ ಮುಸ್ಲಿಮರಿಗೆ ಮತ್ತು ಮುಸ್ಲಿಮೇತರರಿಗೆ ಈ ಪತ್ರಿಕೆಯನ್ನು ತಲುಪಿಸುವುದು ಬಹುದೊಡ್ಡ ಸಾಹಸದ ಕೆಲಸವಾಗಿತ್ತು. ಇಂದಿನAತೆ ಸೋಶಿಯಲ್ ಮೀಡಿಯಾ, ಸ್ಮಾರ್ಟ್ ಫೋನ್, ಸಾರಿಗೆ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮತ್ತು ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ತಲುಪುವುದು ಬೆಟ್ಟ ಅಗೆದಷ್ಟೇ ತ್ರಾಸದಾಯಕ ವಾದ ಕೆಲಸವಾಗಿತ್ತು. ಈ ಹೊಣೆಗಾರಿಕೆಯನ್ನು ಇಬ್ರಾಹೀಮ್ ಸಈದ್‌ರಿಂದ ತೊಡಗಿ ಹಮೀದುಲ್ಲಾ, ಸಈದ್ ಇಸ್ಮಾಈಲ್ ಸಹಿತ ಹಲವು ಮಂದಿ ತಮ್ಮ ಹೆಗಲಿಗೇರಿಸಿಕೊಂಡರು. ರಾಜ್ಯಾದ್ಯಂತ ಪ್ರಯಾಣ ಬೆಳೆಸಿದರು. ಮನೆ ಮನೆ ತಲುಪಿ ಸನ್ಮಾರ್ಗವನ್ನು ಪರಿಚಯಿಸಿದರು. ಅಂದಹಾಗೆ,

ಸನ್ಮಾರ್ಗದ ಪ್ರಸಾರ ಹೆಚ್ಚಿದಂತೆಯೇ ಎರಡು ಪ್ರಮುಖ ಬೆಳವಣಿಗೆಗಳೂ ಅದರ ಜೊತೆಗೇ ನಡೆಯುತ್ತಾ ಬಂದುವು. 1. ಇಸ್ಲಾಮಿನ ಬಗ್ಗೆ ಸಾರ್ವಜನಿಕರಿಗಿದ್ದ ಅಜ್ಞಾನ ದೂರವಾಗುತ್ತಾ ಬಂದುದು. 2. ಪತ್ರಿಕಾ ಕಚೇರಿಗಳಲ್ಲಿ ಮತ್ತು ಪತ್ರಕರ್ತರಲ್ಲಿ ಇಸ್ಲಾಮಿನ ಕುರಿತು ಕವಿದಿದ್ದ ಗಾಢ ಕತ್ತಲೆಯಲ್ಲಿ ಬೆಳಕು ಮೂಡಲಾರಂಭಿಸಿದ್ದು.

ಆವರೆಗೆ ಇಸ್ಲಾಮನ್ನು ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪತ್ರಕರ್ತರು ಮತ್ತು ಸಾರ್ವಜನಿಕರ ಪಾಲಿಗೆ ಮಾಹಿತಿ ಮೂಲಗಳ ಕೊರತೆಯಿತ್ತು. ಅಲ್ಲಿ-ಇಲ್ಲಿ ಕೇಳಿದ್ದು ಮತ್ತು ಮುಸ್ಲಿಮರನ್ನು ನೋಡಿಕೊಂಡು ಅಂದುಕೊಂಡಿದ್ದನ್ನೇ ಇಸ್ಲಾಮ್ ಎಂದು ಬಗೆದು ಬರೆಯುತ್ತಿದ್ದ ಪತ್ರಕರ್ತರು ಮತ್ತು ಸುದ್ದಿಮನೆಯ ಸಂಪಾದಕರ ಪಾಲಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕಿರುವ ಮಾಹಿತಿ ಮೂಲವೊಂದು ಸನ್ಮಾರ್ಗದ ಮೂಲಕ ಲಭ್ಯವಾಯಿತು. ಹಾಗಂತ, ಸನ್ಮಾರ್ಗ ಪ್ರಕಟವಾಗಲಾರಂಭಿಸಿದ ಬಳಿಕ ಕನ್ನಡ ಪತ್ರಿಕೆಗಳು ಇಸ್ಲಾಮ್‌ನ ಬಗ್ಗೆ ಕಲ್ಪಿತ ಮತ್ತು ಕುತ್ಸಿತ ಸುದ್ದಿಗಳನ್ನು ಪ್ರಕಟಿಸಿಲ್ಲ ಎಂದಲ್ಲ. ಆದರೆ, ಸನ್ಮಾರ್ಗ ಪ್ರಕಟವಾಗಲು ಪ್ರಾರಂಭವಾದ ಬಳಿಕ ಕಲ್ಪಿತ ಸುದ್ದಿಗಳನ್ನು ಪ್ರಕಟಿಸುವ ಮೊದಲು ಪತ್ರಿಕೆಗಳು ಹಿಂದು-ಮುಂದು ನೋಡತೊಡಗಿದುವು. ಒಂದುವೇಳೆ, ಕುತ್ಸಿತ ಅಭಿಪ್ರಾಯಗಳನ್ನು ಪ್ರಕಟಿಸಿದರೆ ತಕ್ಷಣ ಅದನ್ನು ಪ್ರಶ್ನಿಸುವ ಜಾಗೃತ ಓದುಗರನ್ನು ಸನ್ಮಾರ್ಗ ತಯಾರು ಮಾಡಿತು. ಪತ್ರಿಕಾ ಕಚೇರಿಗೆ ಕರೆ ಮಾಡಿ ಸತ್ಯ ಏನು ಎಂಬುದನ್ನು ತಿಳಿಸುವ ಓದುಗರು ಸೃಷ್ಟಿಯಾದರು. ಇದೊಂದು ದೊಡ್ಡ ಸಾಧನೆ. ಸನ್ಮಾರ್ಗ ಪ್ರತಿವಾರ ತನ್ನ ಅಷ್ಟೂ ಪುಟಗಳಲ್ಲಿ ಕುರ್‌ಆನ್ ಪ್ರಸ್ತುತಪಡಿಸುವ ಇಸ್ಲಾಮೀ ಕುಟುಂಬ, ಮದುವೆ, ತಲಾಕ್, ಮಹ್ರ್, ಇಸ್ಲಾಮೀ ಆರ್ಥಿಕ ನೀತಿ, ಸಾಮಾಜಿಕ ಕೆಡುಕುಗಳು, ಇಸ್ಲಾಮಿನ ರಾಜಕೀಯ ನೀತಿ, ಶೈಕ್ಷಣಿಕ ನೀತಿ, ನ್ಯಾಯ, ದಾನ, ಸಮಾನತೆಯ ಪರಿಕಲ್ಪನೆಯ ಕುರಿತಂತೆ ವಿವರವಾಗಿ ಬರೆಯಲಾರಂಭಿಸಿತು. ಅರಬಿ ಭಾಷೆಯಲ್ಲಿರುವ ಕುರ್‌ಆನ್‌ನನ್ನು ಕನ್ನಡಕ್ಕೆ ಅನುವಾದಿಸಿ ಓದುಗರ ಮುಂದಿಟ್ಟಿತು. ಹಾಗೆಯೇ, ಜಿಹಾದ್, ಕಾಫಿರ್, ಝಕಾತ್ ಇತ್ಯಾದಿ ಪದಗಳ ಬಗ್ಗೆ ಮತ್ತು ಪವಿತ್ರ ಕುರ್‌ಆನ್‌ನಲ್ಲಿರುವ ಯುದ್ಧಕಾಲದ ವಚನಗಳು ಮತ್ತು ಅದರ ಅರ್ಥ ವ್ಯಾಪ್ತಿಯ ಬಗ್ಗೆ ವಿವರವಾಗಿ ವಿಶ್ಲೇಷಣೆ ನಡೆಸಿತು. ಒಂದುರೀತಿಯಲ್ಲಿ,

ಕನ್ನಡ ನಾಡಿನ ಪಾಲಿಗೆ ಅಜ್ಞಾತವಾಗಿದ್ದ ಇಸ್ಲಾಮನ್ನು ಪರಿಚಯಿಸಿದ್ದೇ ಸನ್ಮಾರ್ಗ. ಯಾಕೆಂದರೆ, 44 ವರ್ಷಗಳ ಹಿಂದೆ ಕನ್ನಡದಲ್ಲಿ ಸನ್ಮಾರ್ಗದಂಥ ಇನ್ನೊಂದು ಪತ್ರಿಕೆ ಇರಲಿಲ್ಲ. ಅರಬಿ ಮತ್ತು ಉರ್ದು ಭಾಷೆಯಲ್ಲಿದ್ದ ಇಸ್ಲಾಮೀ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಬೇರೆ ಮಾಹಿತಿ ಮೂಲಗಳೂ ಇರಲಿಲ್ಲ. ಹೀಗೆ ಸಾಗಿ ಬಂದ ಹಾದಿಗೆ ಈಗ 44 ವರ್ಷಗಳು ತುಂಬಿವೆ. ಹಾಗಂತ, ಈ ಹಾ ದಿಯೇನೂ ಸರಾಗವಾಗಿರಲಿಲ್ಲ. ದಾರಿಯುದ್ದಕ್ಕೂ ಕಲ್ಲು-ಮುಳ್ಳುಗಳು ಮತ್ತು ಅಡೆ-ತಡೆಗಳು ಸಹಜವಾಗಿಯೇ ಎದುರಾಗಿವೆ. ಕೇಸೂ ದಾಖಲಾಗಿವೆ. ಸಂಪಾದಕರು ಮತ್ತು ಮಂಡಳಿ ಸದಸ್ಯರು ವರ್ಷಗಟ್ಟಲೆ ಕೋರ್ಟು-ಕಚೇರಿ ಎಂದು ಅಲೆದದ್ದಿದೆ. ಸಂಪಾದಕರನ್ನೇ ಜೈಲಿಗೆ ತಳ್ಳಿದ್ದೂ ಇದೆ. ಆದರೆ ಇವಾವೂ ಸನ್ಮಾರ್ಗವನ್ನು ತನ್ನ ಘೋಷಿತ ಧ್ಯೇಯದಿಂದ ಹಿಂಜರಿಸಲು ಶಕ್ತವಾಗಿಲ್ಲ. ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರೆ ಪತ್ರಿಕಾ ರಂಗದಲ್ಲಿ ರಾಜನಂತೆ ಮೆರೆಯಬಹುದು ಎಂಬ ಈಗಿನ ವಾತಾವರಣದ ನಡುವೆ ಸನ್ಮಾರ್ಗ ಈ ಆಮಿಷಕ್ಕೆಂದೂ ಬಲಿಯಾಗಿಲ್ಲ. ಕಳಂಕಿತ ರಾಜನಿಗಿಂತ ಶಿಸ್ತುಬದ್ಧ ನಾಗರಿಕನಾಗಿರುವುದನ್ನೇ ಸನ್ಮಾರ್ಗ ತನ್ನ ಆಯ್ಕೆಯಾಗಿ ಎತ್ತಿ ಹಿಡಿದಿದೆ. ಮುಂದೆಯೂ ಎತ್ತಿ ಹಿಡಿಯಲಿದೆ. ಇನ್‌ಶಾ ಅಲ್ಲಾಹ್.

ಎಲ್ಲರಿಗೂ 45ನೇ ವರ್ಷದ ಶುಭಾಶಯಗಳು.

ದ್ವೇಷದ ಕ್ರಿಯೆಗೆ ಫಾತಿಮಾ ಎಂಬ ಪ್ರತಿಕ್ರಿಯೆ




ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಅಭಿಯಾನ ರೂಪದ ಕ್ರಿಯೆಗಳಿಗೆ  ತಮಿಳುನಾಡಿನಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳುನಾಡಿನ ಖ್ಯಾತ ಮೋಟಿವೇಶನಲ್ ಸ್ಪೀಕರ್ ಮತ್ತು ಸಾಮಾಜಿಕ  ಕಾರ್ಯಕರ್ತೆ ಶಬರಿಮಲ ಜಯಕಾಂತನ್ ಇಸ್ಲಾಮ್ ಸ್ವೀಕರಿಸಿದ್ದಾರೆ. ಸೌದಿ ಅರೇಬಿಯಾದ ಮಸ್ಜಿದುಲ್ ಹರಾಮ್‌ನಲ್ಲಿರುವ ಕಅಬಾದ ಎದುರು ಇಸ್ಲಾಮ್  ಸ್ವೀಕರಿಸಿದ ಅವರು ತನ್ನ ಹೆಸರನ್ನು ಫಾತಿಮಾ ಶಬರಿಮಲ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ತಾನೇಕೆ  ಇಸ್ಲಾಮ್ ಸ್ವೀಕರಿಸಿದೆ ಎಂಬುದನ್ನೂ ಹೀಗೆ ಸ್ಪಷ್ಟಪಡಿಸಿದ್ದಾರೆ-

‘ಪ್ರಪಂಚದಾದ್ಯಂತ  ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ ಮನಸ್ಸಿನಿಂದ ಕುರ್‌ಆನ್ ಓದಲು ಆರಂಭಿಸಿದೆ. ಹಾಗೆ ನಾನು ಈ ಸತ್ಯ ಅರ್ಥ ಮಾಡಿಕೊಂಡೆ. ನಿಜವಾಗಿ, ಮುಸ್ಲಿಮರ ಕೈಯಲ್ಲಿ ಕುರ್‌ಆನ್  ಎಂಬ ಅದ್ಭುತವಾದ ಗ್ರಂಥವಿದೆ. ಅವರು ಅದನ್ನು ತಮ್ಮಲ್ಲೇ  ಇಟ್ಟುಕೊಳ್ಳದೇ ಜಗತ್ತಿಗೆ ಹಂಚಬೇಕು...’ ಎಂದೂ ಸಲಹೆ ನೀಡಿದ್ದಾರೆ.  ಅಂದಹಾಗೆ,

ಕುರ್‌ಆನನ್ನು ಅಧ್ಯಯನ ಮಾಡಿ ಮತ್ತು ಅದರ ವಿಚಾರಧಾರೆಗೆ ಮನಸೋತು ಇಸ್ಲಾಮ್ ಸ್ವೀಕರಿಸಿದವರಲ್ಲಿ ಶಬರಿಮಲ ಜಯಕಾಂತನ್  ಮೊದಲಿಗರೇನೂ ಅಲ್ಲ. ಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಕೇರಳದ ಕಮಲಾದಾಸ್ ಅವರು ಕಮಲಾ ಸುರಯ್ಯ ಆಗಿ ರಾಷ್ಟ್ರ ಮಟ್ಟದಲ್ಲಿ  ಈ ಹಿಂದೆ ಸುದ್ದಿಗೀಡಾಗಿದ್ದರು. ಮಾತ್ರವಲ್ಲ, ಜಗತ್ತಿನಾದ್ಯಂತ ಜನರು ಇಸ್ಲಾಮನ್ನು ಅಧ್ಯಯನ ಮಾಡುವ ಮತ್ತು ಅದರ ಭಾಗವಾಗುವ  ಪ್ರಕ್ರಿಯೆಗಳು ನಡೆಯುತ್ತಲೂ ಇವೆ. ಅಚ್ಚರಿ ಏನೆಂದರೆ,

ಕುರ್‌ಆನನ್ನು ಮತ್ತು ಮುಸ್ಲಿಮರನ್ನು ಅವಮಾನಿಸುವ, ನಿಂದಿಸುವ ಮತ್ತು ಭೀಕರವಾಗಿ ವ್ಯಾಖ್ಯಾನಿಸುವ ಪ್ರಕ್ರಿಯೆಗಳು ಪ್ರತಿದಿನ  ನಡೆಯುತ್ತಿರುವಾಗಲೂ ಜನರೇಕೆ ಇಸ್ಲಾಮ್‌ನ ಭಾಗವಾಗುತ್ತಿದ್ದಾರೆ ಎಂಬುದು. ಕರ್ನಾಟಕವನ್ನೇ ಎತ್ತಿಕೊಳ್ಳಿ. ಕಳೆದ ಎರಡ್ಮೂರು ತಿಂಗಳಿನಿಂದ ಕುರ್‌ಆನನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿಕೊಂಡು ಏನೆಲ್ಲ ಚಟುವಟಿಕೆಗಳು ನಡೆಯುತ್ತಿಲ್ಲ? ಆಳುವ ಬಿಜೆಪಿ ಸರ್ಕಾರ  ಮತ್ತು ಅದರ ಬೆಂಬಲಿಗ ಪರಿವಾರಗಳು ಪ್ರತಿದಿನ ಒಂದಲ್ಲ ಒಂದು ನೆಪವನ್ನು ಮುಂದು ಮಾಡಿಕೊಂಡು ಮುಸ್ಲಿಮರನ್ನು ಪ್ರಚೋ ದಿಸುತ್ತಿದೆ. ಅಕ್ಷಯ ತೃತೀಯಕ್ಕೆ ಮುಸ್ಲಿಮರ ಒಡೆತನದ ಮಳಿಗೆಗಳಿಂದ ಚಿನ್ನ ಖರೀದಿಸಬೇಡಿ ಎಂಬುದು ಈ ಪ್ರಚೋದನೆಯ ಹೊಚ್ಚ  ಹೊಸ ಬೆಳವಣಿಗೆ. ಅಂದಹಾಗೆ, 

ಈ ಪ್ರಕ್ರಿಯೆ ಹಿಜಾಬ್‌ನೊಂದಿಗೆ ಆರಂಭವಾಯಿತು. ಆ ಬಳಿಕ ಮುಸ್ಲಿಮರಿಗೆ ಬಹಿಷ್ಕಾರದ ಕರೆ  ಕೊಡಲಾಯಿತು. ಬಳಿಕ ಹಲಾಲ್ ಆಹಾರ ಕ್ರಮವನ್ನು ಪ್ರಶ್ನಿಸಲಾಯಿತು. ಇದರ ನಡುವೆ ಆಳುವ ಸರ್ಕಾರದ ನಾಯಕ ಸಿ.ಟಿ. ರವಿ  ಮಾಧ್ಯಮಗಳ ಮುಂದೆ ಕುರ್‌ಆನ್ ಸೂಕ್ತಗಳನ್ನು ಓದಿ ಹೇಳಿದರು ಮತ್ತು ಇವು ಸಾಮರಸ್ಯಕ್ಕೆ ಕಂಟಕ ಎಂದು ಸಾರಿದರು. ನಬಿಸಾಬ್  ಎಂಬ ಬಿಜಾಪುರದ ಬಡ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ನೆಲಕ್ಕೆ ಜಜ್ಜಿ ನಾಶಪಡಿಸಿದ ಘಟನೆಯೂ ನಡೆಯಿತು. ಹಾಗಂತ,

ಈ ದ್ವೇಷದ ದಾಳಿ ಕೇವಲ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ದೇಶದಾದ್ಯಂತ ಹರಡಿದೆ. ಇತ್ತೀಚೆಗೆ ನಡೆದ ರಾಮ ನವಮಿ ಮತ್ತು ಹನುಮಾನ್ ಜಯಂತಿ ರ‍್ಯಾಲಿಯ ವೇಳೆ ಮುಸ್ಲಿಮರನ್ನು ಪ್ರಚೋದಿಸುವ ಹಲವು ಬೆಳವಣಿಗೆಗಳು ನಡೆದುವು. ಮಸೀದಿಗಳ ಎದುರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗುವ ಮತ್ತು ಅಲ್ಲಿ ನಿಂತು ನರ್ತನ ಮಾಡುವ ಸನ್ನಿವೇಶಗಳೂ  ಸೃಷ್ಟಿಯಾದುವು. ದೆಹಲಿಯ ಜಹಾಂಗೀರ್‌ಪುರ್ ಪ್ರದೇಶದಲ್ಲಂತೂ ಇದು ಬಟಾಬಯಲಾಯಿತು. ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಕಿರಣ್  ಮತ್ತು ರಾಜಾ ಎಂಬಿಬ್ಬರು ಇಂಡಿಯಾ ಟುಡೇ ಚಾನೆಲ್‌ಗೆ ಈ ಬಗ್ಗೆ ವಿವರವಾಗಿ ಮಾಹಿತಿ ಕೊಟ್ಟಿದ್ದರು ಮತ್ತು ತನ್ನ ರಹಸ್ಯ  ಕ್ಯಾಮರಾದಲ್ಲಿ ಅವೆಲ್ಲವನ್ನೂ ಚಾನೆಲ್ ವರದಿಗಾರ ಸೆರೆಹಿಡಿದಿದ್ದ. ಆ ಬಳಿಕ ಚಾನೆಲ್ ಅದರ ಪ್ರಸಾರವನ್ನೂ ಮಾಡಿತ್ತು. ಜಹಾಂಗೀರ್ ಪುರ್‌ನ ಮಸೀದಿ ಗೇಟ್‌ನ ಮುಂದೆ ರ‍್ಯಾಲಿಯನ್ನು ಸ್ಥಗಿತಗೊಳಿಸಿ ಘೋಷಣೆ ಕೂಗಿದ್ದು ಮತ್ತು ಅಲ್ಲಿ ನರ್ತನ ಮಾಡಿದ್ದನ್ನು ಅವರಿಬ್ಬರೂ  ಮುಕ್ತವಾಗಿ ಹೇಳಿಕೊಂಡಿದ್ದರು. ಮಾತ್ರವಲ್ಲ, ದೇಶದ ವಿವಿಧೆಡೆ ನಡೆದಿರುವ ಇಂತಹ ರ‍್ಯಾಲಿಗಳಲ್ಲಿ ಅತ್ಯಂತ ನಿಂದನೀಯ ಘೋಷಣೆಗಳು  ಕೂಗಲಾಗಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯೂ ಆಗಿದ್ದುವು. ಹುಬ್ಬಳ್ಳಿಯಲ್ಲಿ ಪಿಯುಸಿ  ವಿದ್ಯಾರ್ಥಿಯೋರ್ವ ಮುಸ್ಲಿಮರನ್ನು ಪ್ರಚೋದಿಸುವ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹಾಗಂತ,

ಇಂಥ ಬೆಳವಣಿಗೆಗಳಿಗೆ ನಕಾರಾತ್ಮಕ ಮುಖವೊಂದೇ ಇರುವುದಲ್ಲ ಮತ್ತು ತಾಳ್ಮೆರಹಿತ ಪ್ರತಿಕ್ರಿಯೆಯೊಂದೇ ಇದಕ್ಕೆ ಉತ್ತರವೂ ಅಲ್ಲ.  ಮುಸ್ಲಿಮರು ತಾಳ್ಮೆಗೆಡಬೇಕು ಎಂಬುದು ಪ್ರಚೋದಿಸುವವರ ಹುನ್ನಾರ. ತಾಳ್ಮೆಗೆಟ್ಟರೆ ಏನೇನು ಮಾಡಬೇಕು ಎಂಬ ಚಿತ್ರಕತೆಯನ್ನು ಪ್ರಚೋದಿಸುವವರು ಆ ಮೊದಲೇ ಸಿದ್ಧಪಡಿಸಿ ಇಟ್ಟಿರುತ್ತಾರೆ. ರಾಜ್ಯದ ಹುಬ್ಬಳ್ಳಿ, ಮಧ್ಯಪ್ರದೇಶದ ಕಾರ್ಗೋನ್, ದೆಹಲಿಯ  ಜಹಾಂಗೀರ್‌ಪುರ್‌ನ ಬೆಳವಣಿಗೆಗಳು ಇದನ್ನೇ ಸ್ಪಷ್ಟಪಡಿಸುತ್ತವೆ. ಅಭಿಷೇಕ್ ಹಿರೇಮಠ ಎಂಬ ಪಿಯು ವಿದ್ಯಾರ್ಥಿಯೋರ್ವನ  ಕುಚೋದ್ಯಕ್ಕೆ ತಾಳ್ಮೆಗೆಟ್ಟ ಹುಬ್ಬಳ್ಳಿಯ ಮುಸ್ಲಿಮ್ ಸಮುದಾಯದ ನೂರಾರು ಮಂದಿ ಇವತ್ತು ಜೈಲಲ್ಲಿದ್ದಾರೆ. ಕಾರ್ಗೋನ್‌ನಲ್ಲಿ ತಾಳ್ಮೆಗೆಟ್ಟ  ಮುಸ್ಲಿಮ್ ಸಮುದಾಯದ ಸುಮಾರು 175ರಷ್ಟು ಮಂದಿ ಜೈಲಲ್ಲಿದ್ದಾರೆ. ಅವರಲ್ಲಿ ಅನೇಕರ ಕಟ್ಟಡಗಳನ್ನು ಬುಲ್ಡೋಜರ್‌ನಿಂದ ನಾಶಪಡಿಸಲಾಗಿದೆ. ದೆಹಲಿಯ ಜಹಾಂಗೀರ್‌ಪುರ್‌ನಲ್ಲಿ ತಾಳ್ಮೆಗೆಟ್ಟ ಸಮುದಾಯಕ್ಕೆ ಉಡುಗೊರೆಯಾಗಿ ಲಭಿಸಿದ್ದೂ ಇದೇ ಜೈಲು ಮತ್ತು  ಬುಲ್ಡೋಜರ್. ಅಂದಹಾಗೆ,

ಪ್ರತಿ ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ  ಇರುತ್ತದೆ ಎಂಬುದು ಎಷ್ಟು ಸರಿಯೋ ಪ್ರತಿ ಕ್ರಿಯೆಯ ಉದ್ದೇಶವನ್ನು ಅರಿತುಕೊಂಡು ಮಾಡುವ  ಪ್ರತಿಕ್ರಿಯೆಯೇ ಅತ್ಯುತ್ತಮವಾದುದು ಎಂಬುದೂ ಅಷ್ಟೇ ಸರಿ. ಇಲ್ಲಿ ಸದ್ಯ ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಪ್ರತಿ  ಕ್ರಿಯೆಯ ಹಿಂದೆಯೂ ಕ್ರಿಯೆ ಎಂಬ ಎರಡಕ್ಷರಕ್ಕಿಂತ ಹೊರತಾದ ನಿರ್ದಿಷ್ಟ ಉದ್ದೇಶಗಳಿವೆ. ಇಲ್ಲಿನ ಯಾವ ಕ್ರಿಯೆಯೂ ತP್ಷÀಣದ ಮತ್ತು  ಅಚಾನಕ್ ಆಗಿ ವ್ಯಕ್ತವಾಗುವ ಕ್ರಿಯೆಗಳಲ್ಲ. ಇದರ ಹಿಂದೆ ಹುನ್ನಾರಗಳಿವೆ. ರಾಜಕೀಯ ದುರುದ್ದೇಶವಿದೆ. ಮುಸ್ಲಿಮರನ್ನು  ತಾಳ್ಮೆಗೆಡಿಸಲೇಬೇಕು ಎಂಬ ಸ್ಪಷ್ಟ ಚಿತ್ರಕತೆಯಿದೆ. ಆದ್ದರಿಂದಲೇ ಪ್ರತಿಕ್ರಿಯೆಯ ವೇಳೆ ಈ ಹುನ್ನಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.  ಪ್ರಚೋದಿಸುವವರು ತೋಡುವ ದ್ವೇಷವೆಂಬ ಕುಲುಮೆಗೆ ತಾಳ್ಮೆಗೆಟ್ಟು ಬೀಳುವುದು ಜಾಣತನವಲ್ಲ. ಅದು ಕುಲುಮೆ ತಯಾರಿಸಿಟ್ಟವರ  ಬಯಕೆ. ಅವರ ಈ ಬಯಕೆಯನ್ನು ವಿಫಲಗೊಳಿಸುವ ಜಾಣತನದ ದಾರಿಯನ್ನು ಮುಸ್ಲಿಮರು ಆರಿಸಿಕೊಳ್ಳಬೇಕು. ರಾಜ್ಯದಲ್ಲಿ ಹುಬ್ಬಳ್ಳಿ  ಪ್ರಕರಣವೊಂದನ್ನು ಬಿಟ್ಟರೆ ಉಳಿದಂತೆ ಎಲ್ಲ ಪ್ರಚೋದನಾತ್ಮಕ ಕ್ರಿಯೆಗಳಿಗೆ ಮುಸ್ಲಿಮರು ಅತ್ಯಂತ ಜಾಣತನದ ಮತ್ತು ಪ್ರಬುದ್ಧ  ಪ್ರತಿಕ್ರಿಯೆಯನ್ನು ನೀಡಿದ್ದಾರೆ. ದ್ವೇಷದ ಕುಲುಮೆಗೆ ಬಲಿಯಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಹಾಗಂತ,

ಯಾವುದೇ ನಕಾರಾತ್ಮಕ ಪ್ರಚೋದನೆಗೂ ಒಂದೇ ಮುಖ ಇರುವುದಲ್ಲ. ಕುರ್‌ಆನನ್ನು ಅಥವಾ ಯಾವುದೇ ಧರ್ಮಗ್ರಂಥವನ್ನು ಯಾರು  ಅಪಪ್ರಚಾರಕ್ಕೆ ಬಳಸುತ್ತಾರೋ ಅವರೇ ಪರೋಕ್ಷವಾಗಿ ಆಯಾ ಗ್ರಂಥಗಳ ಅಧ್ಯಯನಕ್ಕೆ ಜನರನ್ನು ಪ್ರೇರೇಪಿಸುತ್ತಾರೆ ಎಂಬುದೂ ಅಷ್ಟೇ  ನಿಜ. ಪ್ರಚೋದನೆಯ ಭಾಷೆಗೆ ತಾಳ್ಮೆ ಮತ್ತು ಬುದ್ಧಿವಂತಿಕೆಯ ಉತ್ತರದಲ್ಲೂ ಇದೇ ಗುಣವಿದೆ. ಅವರೇಕೆ ಇನ್ನೂ ತಾಳ್ಮೆಯಿಂದಿದ್ದಾರೆ  ಮತ್ತು ಪ್ರಚೋದಿತರಾಗುವುದಿಲ್ಲ ಎಂಬುದು ಜನರಲ್ಲಿ ಕುತೂಹಲವಾಗಿ ಮಾರ್ಪಟ್ಟು, ಇಸ್ಲಾಮ್‌ನ ಅಧ್ಯಯನಕ್ಕೆ ಪ್ರೇರಣೆಯಾಗುವುದಕ್ಕೂ  ಸಾಧ್ಯವಿದೆ. ಯಾವ ಕ್ರಿಯೆಗೂ ಏಕಮುಖವಿಲ್ಲ ಮತ್ತು ಈ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬರಿಗಿಂತ ಭಿನ್ನ. ಆಲೋಚನೆಯೂ  ಭಿನ್ನ. ಆದ್ದರಿಂದ ಕೆಲವರು ಕುರ್‌ಆನನ್ನೋ ಮುಸ್ಲಿಮರನ್ನೋ ನಿಂದಿಸಿದರೆ ಆ ನಿಂದನೆಯು ಸರ್ವರನ್ನೂ ನಕಾರಾತ್ಮಕ ರೂಪದಲ್ಲೇ   ತಲುಪಬೇಕೆಂದಿಲ್ಲ. ಇದಕ್ಕೆ ತಾಜಾ ಉದಾಹರಣೆ ಶಬರಿಮಲ ಜಯಕಾಂತನ್. ಶಿಕ್ಷಕಿಯಾಗಿದ್ದ ಮತ್ತು ನೀಟ್ ಪರೀಕ್ಷೆಯನ್ನು ವಿರೋಧಿಸಿ  ಹುದ್ದೆಗೆ ರಾಜೀನಾಮೆ ಕೊಟ್ಟು ಸಾಮಾಜಿಕ ಕಾರ್ಯಕರ್ತೆಯಾಗಿ, 6 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳಲ್ಲಿ ಸುರಕ್ಷತೆಯ ಅರಿವು  ಮೂಡಿಸಿರುವ ಈ ಮಹಿಳೆ ನಮ್ಮ ಪಕ್ಕದ ರಾಜ್ಯದವರು. ಅವರ ಮೇಲೆ ಮುಸ್ಲಿಮ್ ವಿರೋಧಿ ದ್ವೇಷ ಪ್ರಚಾರಗಳು ಸಕಾರಾತ್ಮಕ  ಪರಿಣಾಮವನ್ನು ಬೀರಿವೆ ಎಂಬುದಕ್ಕೆ ಅವರು ಫಾತಿಮ ಶಬರಿಮಲ ಆಗಿರುವುದೇ ಅತ್ಯುತ್ತಮ ನಿದರ್ಶನ. ನಿಜವಾಗಿ,

ದ್ವೇಷದ ಕ್ರಿಯೆಗೆ ಫಾತಿಮ ಅತ್ಯುತ್ತಮ ಪ್ರತಿಕ್ರಿಯೆ.

ಕನ್ನಡಿಗರನ್ನು ಯಾಮಾರಿಸಿದ ಸಮಾಜವಾದಿ ಬಟ್ಟೆ




ಜನಪ್ರಿಯತೆಯ ಸಮೀಕ್ಷೆಯೊಂದನ್ನು ನಡೆಸಿದರೆ ಫಲಿತಾಂಶ ಪಟ್ಟಿಯ ಅತ್ಯಂತ ಕೆಳತುದಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಕೋಮು ಹಿಂಸೆಗೆ ಪ್ರಚೋದನೆ ಕೊಡುವ ಸರಣಿ ಘಟನೆಗಳು ನಡೆಯುತ್ತಿವೆ. ಧಾರವಾಡದ ನುಗ್ಗಿಕೇರಿಯ ಹನುಮ ದೇವಾಲಯದ ಆವರಣದಲ್ಲಿ ಕಲ್ಲಂಗಡಿ ಮಾರಾಟಗಾರ ನಬಿಸಾಬ್ ಜೊತೆಗೆ ನಡೆದ ದುರ್ವರ್ತನೆ ಈ ಪ್ರಚೋದನಕಾರಿ ಕೃತ್ಯದ ತುತ್ತತುದಿಯಾದರೆ, ಹಿಜಾಬ್ ಇದರ ಆರಂಭ. ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆದಾಗ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ತುಟಿ ಬಿಚ್ಚಿದ್ದ ಮುಖ್ಯಮಂತ್ರಿಗಳು, ಆ ಬಳಿಕ ಮಾತಾಡಬೇಕಾದ ಸಂದರ್ಭಗಳಲ್ಲೆಲ್ಲಾ  ಮೌನಕ್ಕೆ ಜಾರಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರು ಪ್ರತಿದಿನವೆಂಬಂತೆ  ಹಿಂಸೆಗೆ ಗುರಿಯಾಗಿದ್ದಾರೆ. ಅವರದೇ ಪರಿವಾರ ದಿನಂಪ್ರತಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಅಷ್ಟಕ್ಕೂ,

ಅವರು ಈ ಹಿಂದೊಮ್ಮೆ ಧರಿಸಿ ಸದ್ಯ ಹ್ಯಾಂಗರ್‌ನಲ್ಲಿ ತೂಗಿ ಹಾಕಿರುವ ಸಮಾಜವಾದಿ ಬಟ್ಟೆಯನ್ನು ಬೊಟ್ಟು ಮಾಡಿಕೊಂಡು, ‘ಅವರು ಬಿಜೆಪಿಯಲ್ಲಿದ್ದರೂ ಮನುಷ್ಯ ವಿರೋಧಿ ಆಗಲಾರರು..’ ಎಂಬಂತಹ ಮೃದು ಮಾತುಗಳು ಮುಖ್ಯಮಂತ್ರಿ ಹುದ್ದೆ  ಸ್ವೀಕಾರದ ಸಂದರ್ಭದಲ್ಲಿ ಕೇಳಿಬಂದಿತ್ತು. ಆದರೆ ಈಗ ಈ ಕಳಚಿಟ್ಟ ಪೂರ್ವಕಾಲದ ಬಟ್ಟೆಯೇ ನೂರಾರು ಸಂದೇಹಗಳನ್ನು ಹುಟ್ಟು ಹಾಕುತ್ತಿವೆ. ಅವರು ಈ ಹಿಂದೆ ಧರಿಸಿಕೊಂಡಿದ್ದ ಸಮಾಜವಾದಿ ಬಟ್ಟೆ ನಕಲಿಯಾಗಿತ್ತೇ? ಅವರು ಹೊರಗಡೆ ಸಮಾಜವಾದಿಯಾಗಿ ಮತ್ತು ಒಳಗಡೆ ಅತ್ಯಂತ ಮನುಷ್ಯ ವಿರೋಧಿಯಾಗಿ- ಹೀಗೆ ದ್ವಿಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ? ಅವರ ಈ ದ್ವಿಮುಖ ಪಾತ್ರವನ್ನು ಚೆನ್ನಾಗಿ ಅರಿತುಕೊಂಡ ಕಾರಣಕ್ಕಾಗಿಯೇ ಬಿಜೆಪಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತೇ? ಇಲ್ಲದಿದ್ದರೆ ಜನತಾದಳದ ಕುಡಿಯೊಂದು ಬಿಜೆಪಿಗೆ ಹಾರಿದ ತಕ್ಷಣ ಬಿಜೆಪಿಯ ಕರ್ಮಠ ಅನುಯಾಯಿಗಿಂತಲೂ ತೀವ್ರವಾಗಿ ಅದರ ವಿಚಾರಧಾರೆಯನ್ನು ಸಹಿಸಿಕೊಂಡಿರಲು ಬೊಮ್ಮಾಯಿಗೆ ಹೇಗೆ ಸಾಧ್ಯವಾಯಿತು? ಇಂಥ ಪ್ರಶ್ನೆಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ನಿಜವಾಗಿ, 

ಹಿಜಾಬ್‌ಗೆ ಅವಕಾಶ ಕೊಡುವಂತೆ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮುಂದಿಟ್ಟ ಬೇಡಿಕೆಯನ್ನು ತಿರಸ್ಕರಿಸಿರುವುದರ ಹಿಂದೆ ಸಂಚು ಅಡಗಿತ್ತೇ ಎಂಬುದು ಆ ಬಳಿಕದ ಬೆಳವಣಿಗೆಗಳನ್ನು ನೋಡುವಾಗ ಸಂಶಯ ಎದುರಾಗುತ್ತದೆ. ಹಿಜಾಬ್ ಎಂಬುದು ಹಿಂದೂ-ಮುಸ್ಲಿಮ್ ಸಂಗತಿಯಲ್ಲ. ಇದು ಸರ್ಕಾರ ಮತ್ತು ವಿದ್ಯಾರ್ಥಿನಿಯರ ನಡುವಿನ ತಗಾದೆ. ಉಡುಪಿಯ ಕಾಲೇಜು ಆಡಳಿತ ಮಂಡಳಿ ಮತ್ತು ಮುಸ್ಲಿಮ್ ವಿದ್ಯಾರ್ಥಿನಿಯರ ನಡುವಿನ ವಿಷಯವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಉದ್ದೇಶದಿಂದಲೇ ಹಿಜಾಬ್ ಬೇಡಿಕೆಯನ್ನು ತಿರಸ್ಕರಿಸಲಾಯಿತೇ? ಸರ್ಕಾರದ ಸುತ್ತೋಲೆ ಸಮವಸ್ತ್ರದ ವಿರುದ್ಧವಾಗಿದ್ದರೂ ಶಾಲಾಭಿವೃದ್ಧಿ ಮಂಡಳಿಯು ಸಮವಸ್ತ್ರ ಕಡ್ಡಾಯಗೊಳಿಸಿರುವುದನ್ನು ಸರ್ಕಾರ ಪ್ರಶ್ನಿಸಲಿಲ್ಲವೇಕೆ? ‘ಯಾವುದಾದರೂ ಕಾಲೇಜು ಸುತ್ತೋಲೆ ಉಲ್ಲಂಘಿಸಿ ಸಮವಸ್ತ್ರ  ನಿಯಮ ಜಾರಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ..’ ಎಂದು ಸರ್ಕಾರದ ಸುತ್ತೋಲೆಯಲ್ಲೇ  ಇರುವಾಗ ಶಾಲಾಭಿವೃದ್ಧಿ ಮಂಡಳಿಯನ್ನು ತರಾಟೆಗೆತ್ತಿಕೊಳ್ಳುವ ಬದಲು ಸರ್ಕಾರ ವಿದ್ಯಾರ್ಥಿನಿಯರನ್ನೇ ಅಪರಾಧಿಗಳೆಂಬಂತೆ  ನಡೆಸಿಕೊಂಡಿತೇಕೆ? ಮತ್ತು ಶಾಲಾಭಿವೃದ್ಧಿ ಮಂಡಳಿಯ ಮಾನ ಕಾಪಾಡುವುದಕ್ಕಾಗಿ ಬಳಿಕ ಈ ಹಿಂದಿನ ಸುತ್ತೋಲೆಯನ್ನೇ ತಿದ್ದಿತೇಕೆ? ಎಲ್ಲ ಕಾಲೇಜುಗಳೂ ತಮ್ಮ ಶೈಕ್ಷಣಿಕ ವರ್ಷವನ್ನು ಆರಂಭಿಸಿದ್ದು, ‘ಸಮವಸ್ತ್ರ  ಇಲ್ಲ’ ಎಂಬ ಸರ್ಕಾರಿ ಸುತ್ತೋಲೆಯ ಆಧಾರದಲ್ಲಿ. ಹಾಗೆಯೇ ಉಡುಪಿ ವಿದ್ಯಾರ್ಥಿನಿಯರು ಹಿಜಾಬ್‌ನ ಬೇಡಿಕೆಯಿರಿಸಿದ್ದು ಶೈಕ್ಷಣಿಕ ವರ್ಷದ ಕೊನೆಯಲ್ಲಿ. ಅಲ್ಲಿವರೆಗೆ ಸಮವಸ್ತ್ರವೇ ತಪ್ಪು ಎಂದು ಹೇಳುತ್ತಿದ್ದ ಸರ್ಕಾರ, ಆ ಬಳಿಕ, ‘ಸಮವಸ್ತçದ ಭಾಗವಲ್ಲದಿರುವುದರಿಂದ ಹಿಜಾಬ್ ಧರಿಸುವಂತಿಲ್ಲ’ ಎಂಬ ಶಾಲಾಭಿವೃದ್ಧಿ ಮಂಡಳಿಯ ಮಾತಿಗೆ ಪೂರಕವಾಗಿ ಆ ಸುತ್ತೋಲೆಯನ್ನೇ ತಿದ್ದಿರುವುದರ ಅರ್ಥವೇನು? ಈ ಸಮಸ್ಯೆಯನ್ನು ದೀರ್ಘಕಾಲ ಎಳೆಯುವುದು ಸರ್ಕಾರದ ಉದ್ದೇಶವಾಗಿತ್ತೇ? ಆ ಮೂಲಕ ಹಿಂದೂ-ಮುಸ್ಲಿಮ್ ಆಗಿ ರಾಜ್ಯವನ್ನು ಒಡೆಯುವ ಹುನ್ನಾರ ನಡೆದಿತ್ತೇ? ಅದರ ಭಾಗವಾಗಿಯೇ ಕೇಸರಿ ಶಾಲು ರಂಗಕ್ಕಿಳಿಯಿತೇ? ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಈ ಹಿಜಾಬ್ ಮತ್ತು ಕೇಸರಿ ಶಾಲುಗಳ ಮರೆಯಲ್ಲಿ ಅಡಗಿಸಿಡುವುದು ಇದರ ಹಿಂದಿನ ತಂತ್ರವಾಗಿತ್ತೇ? ಅಂದಹಾಗೆ,

ಈ ಹಿಜಾಬ್‌ನ ಬಳಿಕದಿಂದ ಧಾರಾವಾಡದ ನಬಿಸಾಬ್ ವರೆಗಿನ ಬೆಳವಣಿಗೆಗಳನ್ನು ನೋಡಿದರೆ ಸಂಶಯಿಸುವುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ. ಹಿಜಾಬ್ ವಿವಾದವು ಎರಡ್ಮೂರು ತಿಂಗಳವರೆಗೆ ರಾಜ್ಯದ ಗಮನವನ್ನು ಶಾಲಾ ಕ್ಯಾಂಪಸ್ಸು ಮತ್ತು ಕೋರ್ಟು ಕಲಾಪದ ಕಡೆಗೆ ಸೆಳೆಯಿತು. ನ್ಯಾಯಾಲಯದ ವಿಚಾರಣೆಯನ್ನು ಟಿ.ವಿ. ಚಾನೆಲ್‌ಗಳು ಲೈವ್ ಆಗಿ ಬಿತ್ತರಿಸಿದುವು. ಚರ್ಚೆಯ ಮೇಲೆ ಚರ್ಚೆ. ಆ ಬಳಿಕ ತೀರ್ಪು ಬಂತು ಮತ್ತು ಮುಸ್ಲಿಮರು ತೀರ್ಪಿಗೆ ಅಸಮಾಧಾನ ಸೂಚಿಸಿ ಸ್ವಯಂ ಪ್ರೇರಿತ ಬಂದ್ ಆಚರಿಸಿದರು. ಈ ಇಡೀ ಬೆಳವಣಿಗೆ ಮುಸ್ಲಿಮರು, ಸರ್ಕಾರ ಮತ್ತು ಕೋರ್ಟಿಗೆ ಸಂಬಂಧಿಸಿದುದೇ ಹೊರತು ಹಿಂದೂ ಮತ್ತು ಮುಸ್ಲಿಮ್ ಸಂಗತಿಯೇ ಅಲ್ಲ. ಆದರೆ ಸರ್ಕಾರದ ಸಚಿವರು ಮತ್ತು ಬೆಂಬಲಿಗರು ಈ ಇಡೀ ಬೆಳವಣಿಗೆಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದರು. ಮುಸ್ಲಿಮರಿಗೆ ಬಹಿಷ್ಕಾರ ಪರ್ವ ಆರಂಭವಾಯಿತು. ಹಲಾಲ್ ಚರ್ಚೆಯನ್ನು ಮುನ್ನೆಲೆಗೆ ತರಲಾಯಿತು. ಕುರ್‌ಆನನ್ನು ಪ್ರಶ್ನೆಗೊಳಪಡಿಸಲಾಯಿತು. ಲೌಡ್ ಸ್ಪೀಕರ್‌ನಲ್ಲಿ ಕೊಡುವ ಬಾಂಗನ್ನು ಪ್ರಶ್ನಿಸಲಾಯಿತು. ಅಂದಹಾಗೆ, ಸರ್ಕಾರಿ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿನಿಯರ ನಡುವಿನ ಖಾಸಗಿ ಸ್ವರೂಪದ ಸಂಗತಿಯೊಂದು  ಈ ಹಂತಕ್ಕೆ ಬಂದು ನಿಂತಿರುವುದನ್ನು ಹೇಗೆ ಸಹಜ ಎಂದು ಒಪ್ಪಿಕೊಳ್ಳುವುದು? ಅಷ್ಟಕ್ಕೂ,

ಹಿಜಾಬ್ ವಿವಾದಕ್ಕಿಂತ ಮೊದಲು ರಾಜ್ಯ ಸರ್ಕಾರ ನಾಲ್ಕೂ ಕಡೆಯಿಂದ ಪ್ರಶ್ನೆಗೆ ಒಳಗಾಗಿತ್ತು. ಹಿಜಾಬ್ ಬೇಡಿಕೆಯ ಸಮಯದಲ್ಲಿ ಪಂಚರಾಜ್ಯಗಳಲ್ಲಿ ಚುನಾವಣಾ ತಯಾರಿ ನಡೆಯುತ್ತಿದ್ದುದರಿಂದ ತೈಲ ಬೆಲೆ ಏರಿಕೆಯೂ ಸ್ಥಗಿತಗೊಂಡಿತ್ತು. ಗ್ಯಾಸ್ ಸಿಲಿಂಡರೂ ತಣ್ಣಗಾಗಿತ್ತು. ಆಗ ರಾಜ್ಯ ಸರ್ಕಾರದ ವೈಫಲ್ಯಗಳೇ ಚರ್ಚೆಯ ಮುನ್ನೆಲೆಯಲ್ಲಿತ್ತು. ಆದರೆ ಇದೀಗ ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಚುನಾವಣೆಯ ಉದ್ದೇಶದಿಂದಲೇ ದೀರ್ಘ ನಾಲ್ಕೂವರೆ ತಿಂಗಳ ಕಾಲ ತೈಲ ಮತ್ತು ಗ್ಯಾಸ್ ಬೆಲೆಯನ್ನು ಏರಿಸದೇ ಸ್ಥಿರತೆ ಕಾಪಾಡಿಕೊಂಡಿದ್ದ ಕೇಂದ್ರ ಸರ್ಕಾರ, ಕಳೆದ ಎರಡೂವರೆ ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 10 ರೂಪಾಯಿಗಿಂತಲೂ ಅಧಿಕ ಏರಿಸಿದೆ. ಅಡುಗೆ ಅನಿಲದ ಬೆಲೆಯನ್ನು ಒಮ್ಮೆಲೇ 50 ರೂಪಾಯಿಗೆ ಏರಿಸಿದ ಕೇಂದ್ರ ಸರ್ಕಾರ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ 250 ರೂಪಾಯಿಯನ್ನು ಹೆಚ್ಚಿಸಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲಾಗುತ್ತಿದೆ. ಹೊಟೇಲುಗಳು ತಮ್ಮ ತಿನಿಸುಗಳ ಮೇಲೆ 10% ಬೆಲೆ ಹೆಚ್ಚಿಸಿದೆ. ತೈಲ ಬೆಲೆಯೇರಿಕೆಯಿಂದಾಗಿ ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 100 ರೂಪಾಯಿಯನ್ನೂ ದಾಟಿ ಮುಂದುವರಿದಿದೆ. ಆದರೆ, ರಾಜ್ಯದಲ್ಲಿ ಮಾತ್ರ ಹಿಂದೂ-ಮುಸ್ಲಿಮ್ ವಿಷಯಗಳೇ ಮುಖ್ಯ ಚರ್ಚಾ ವಿಷಯವಾಗಿದೆ. ದಿನಬೆಳಗಾದರೆ ಸಿ.ಟಿ. ರವಿಯಿಂದ ಹಿಡಿದು ಬಿಜೆಪಿ ಬೆಂಬಲಿಗ ಪರಿವಾರದ ಮುಖಂಡರ ಮತ್ತು ಕೆಲವು ಸ್ವಾಮೀಜಿಗಳ ವರೆಗೆ ಮುಸ್ಲಿಮ್ ಮತ್ತು ಇಸ್ಲಾಮ್ ವಿರೋಧಿ ಹೇಳಿಕೆಗಳೇ ಸುದ್ದಿಯಲ್ಲಿವೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿ, ಸುಡುವ ಹೊಟೇಲು ತಿನಿಸುಗಳಾಗಲಿ ಯಾವುದೂ ಸಾರ್ವಜನಿಕ ಚರ್ಚೆಗೆ ಒಳಗಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನೆಲ್ಲ ಸಹಜ ಎಂದು ಹೇಗೆ ನಂಬುವುದು? ಸರ್ಕಾರವೊಂದು ತನ್ನ ವೈಫಲ್ಯದ ಭಾರಕ್ಕೆ ಕುಸಿದು ಕುಳಿತಿರುವಾಗ ಆ ಬಗ್ಗೆ ಒಂದೇ ಒಂದು ಪ್ರಶ್ನೆ ಹುಟ್ಟದಂತೆ ಮಾಡುವ ಹುನ್ನಾರದ ಭಾಗವೇ ಹಿಜಾಬ್‌ನಿಂದ ಈ ನಬಿಸಾಬ್ ವರೆಗಿನ ಬೆಳವಣಿಗೆ ಎಂದು ಹೇಗೆ ವಾದಿಸದೇ ಇರುವುದು?

ಬೊಮ್ಮಾಯಿ ಹಿಂದೆಯೂ ಸಮಾಜವಾದಿ ಆಗಿರಲಿಲ್ಲ. ಈಗಲೂ ಅಲ್ಲ. ಅವರು ಸಮಾಜವಾದಿ ಬಟ್ಟೆಯನ್ನಷ್ಟೇ ತೊಟ್ಟಿದ್ದರು. ಆದರೆ ಕನ್ನಡಿಗರು ಆ ಬಟ್ಟೆಯನ್ನು ನೋಡಿಕೊಂಡು ಇದುವೇ ನಿಜವಾದ ಬೊಮ್ಮಾಯಿ ಅಂದುಕೊಂಡರು. ತಪ್ಪು ಕನ್ನಡಿಗರದ್ದು. ಅಷ್ಟೇ.

Tuesday, 12 April 2022

ಸ್ಕಾರ್ಫ್ ವಿವಾದ: ನಿರುಪದ್ರವಿ ಸಂಕೇತಗಳು ಮತ್ತು ಅಪಾಯಕಾರಿ ವ್ಯಾಖ್ಯಾನಗಳು



ಸನ್ಮಾರ್ಗ ಸಂಪಾದಕೀಯ 

ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣು ಮಾರುತ್ತಾ ತಿರುಗಾಡಿದ ದ.ಕ. ಜಿಲ್ಲೆಯ ಮಂಗಳೂರಿನ ರಸ್ತೆಗೆ ಅವರದೇ ಹೆಸರಿಡಲು ಜಿಲ್ಲಾಡಳಿತ  ನಿರ್ಧರಿಸಿದ ಅದೇ ಸಮಯದಲ್ಲಿ ಪಕ್ಕದ ಉಡುಪಿ ಜಿಲ್ಲೆಯಲ್ಲಿ ಹಾಜಬ್ಬರದೇ ಸಮುದಾಯ ಧರಿಸುವ ಸ್ಕಾರ್ಫ್ ವಿವಾದದಲ್ಲಿದೆ. ಇಲ್ಲಿನ  ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಸ್ಕಾರ್ಫ್ ಧರಿಸುವ ಅನುಮತಿಗಾಗಿ ಕಾಯುತ್ತಿದ್ದಾರೆ. ಸುಮಾರು  10ರಷ್ಟು ವಿದ್ಯಾರ್ಥಿನಿಯರು ತರಗತಿಗೆ ಸ್ಕಾರ್ಫ್ ಧರಿಸಿಕೊಂಡು ಹೋಗಿರುವುದು ಮತ್ತು ಪ್ರಾಂಶುಪಾಲರು ಅದಕ್ಕೆ ಅನುಮತಿ  ನಿರಾಕರಿಸಿರುವುದು ರಾಜ್ಯಮಟ್ಟದಲ್ಲಿ ಚರ್ಚೆಗೀಡಾಗಿದೆ. ಪದ್ಮಶ್ರೀ ಹಾಜಬ್ಬರ ಮನೆ ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಮೌಲಾನಾರ ಮನೆ  ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಅಷ್ಟೇ ಅಲ್ಲ, ಶಿಕ್ಷಕ, ಇಂಜಿನಿಯರ್, ವೈದ್ಯ, ಉದ್ಯಮಿ, ಕಾರ್ಮಿಕ, ಶ್ರೀಮಂತ ಸಹಿತ ಎಲ್ಲ ಮುಸ್ಲಿಮ್  ಮನೆಗಳ ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಇದಕ್ಕೆ ಅಪವಾದಗಳು ಶೂನ್ಯ ಅನ್ನುವಷ್ಟು ಕಡಿಮೆ. ಯಾಕೆಂದರೆ, ಸ್ಕಾರ್ಫ್ ಗೆ   ಸಾಂಸ್ಕೃತಿಕವಾದ ಹಿನ್ನೆಲೆ ಮಾತ್ರ ಇರುವುದಲ್ಲ, ಬಹುಮುಖ್ಯವಾಗಿ ಧಾರ್ಮಿಕ ಮಹತ್ವ ಇದೆ. ಆದ್ದರಿಂದಲೇ,

ಕಡು ಬಡವರ ಮನೆಯ ಮಕ್ಕಳೂ ಅತಿ ಶ್ರೀಮಂತ ಮನೆಯ ಮಕ್ಕಳೂ ಏಕಪ್ರಕಾರವಾಗಿ ಸ್ಕಾರ್ಫ್ ಧರಿಸುತ್ತಾರೆ. ಆದರೆ ಬುರ್ಖಾದ  ಬಗ್ಗೆ ಹೀಗೆ ಹೇಳುವ ಹಾಗಿಲ್ಲ. ಅದೊಂದು ಮೇಲುಡುಗೆ. ಐಚ್ಛಿಕ. ಆದರೆ ತಲೆಗೂದಲನ್ನು ಮರೆಮಾಚುವ ಸ್ಕಾರ್ಫ್ ಗೆ  ಧಾರ್ಮಿಕವಾಗಿ  ಈ ರಿಯಾಯಿತಿಗಳಿಲ್ಲ. ಆದ್ದರಿಂದ ಉಡುಪಿ ವಿದ್ಯಾರ್ಥಿನಿಯರ ಸ್ಕಾರ್ಫ್ ಬೇಡಿಕೆಯನ್ನು ಮಾಮೂಲು ಬುರ್ಖಾ ಮತ್ತು ಮುಖ  ಮುಚ್ಚುವ ನಕಾಬ್‌ನ ಪಟ್ಟಿಯಲ್ಲಿಟ್ಟು ವಿಶ್ಲೇಷಿಸುವುದು ತಪ್ಪಾಗುತ್ತದೆ.

ಬುರ್ಖಾ ಮತ್ತು ನಕಾಬ್ ಧರಿಸುವ ಬಗ್ಗೆ ಮುಸ್ಲಿಮ್ ಸಮುದಾಯದ ಒಳಗಡೆಯೇ ಭಿನ್ನ ಭಿನ್ನ ನಿಲುವುಗಳಿವೆ. ಬುರ್ಖಾ  ಧರಿಸುವವರು ಇರುವಂತೆಯೇ ಧರಿಸದವರೂ ಇದ್ದಾರೆ. ನಕಾಬ್‌ಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ವಿಶೇಷ ಏನೆಂದರೆ, ಉಡುಪಿ ವಿದ್ಯಾರ್ಥಿನಿಯರ ಬೇಡಿಕೆಗೆ ಸಂಬಂಧಿಸಿ ಚರ್ಚಿಸುವ ಹೆಚ್ಚಿನವರಲ್ಲಿ ಈ ಕುರಿತಂತೆ ಸ್ಪಷ್ಟತೆಯ ಕೊರತೆ ಬಹಳವೇ  ಇದೆ. ತಲೆ ಮುಚ್ಚುವ ಶಿರವಸ್ತ್ರದ ಬಗ್ಗೆ ಸಾಕಷ್ಟು ಮಂದಿ ಅಪಾರ್ಥ ಮಾಡಿಕೊಂಡಿದ್ದಾರೆ. ಸ್ಕಾರ್ಫನ್ನು ಮೈಮುಚ್ಚುವ ಕಪ್ಪು ಬುರ್ಖಾ  ಮತ್ತು ಮುಖ ಮುಚ್ಚುವ ನಕಾಬ್ ಎಂದು ಭಾವಿಸಿದ್ದಾರೆ ಮತ್ತು ಈ ತಪ್ಪಾದ ಅರಿವಿನ ಮೇಲೆಯೇ ತಮ್ಮ ಅಭಿಪ್ರಾಯವನ್ನೂ ಅವರು  ವ್ಯಕ್ತಪಡಿಸುತ್ತಿದ್ದಾರೆ. ಬುರ್ಖಾ ಧರಿಸಿ, ಮುಖ ಮುಚ್ಚಿ ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿನಿಯರನ್ನು ಕಲ್ಪಿಸಿಕೊಂಡು ಅವರು  ತಮ್ಮ ವಿರೋಧಕ್ಕೆ ಆಧಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಒಟ್ಟು ಚರ್ಚೆಯಲ್ಲಿ ಕಂಡು ಬರುತ್ತಿರುವ ಒಂದು ಸಮಸ್ಯೆಯಾದರೆ, ಇನ್ನೊಂದು ಹಿಂದೂ ಸಮುದಾಯ ಪಾಲಿಸಿಕೊಂಡು ಬರುತ್ತಿರುವ ಹಣೆಬೊಟ್ಟು, ಕೈ ಬಳೆಗೆ ಈ ಸ್ಕಾರ್ಫನ್ನು ತುಲನೆ ಮಾಡಿ  ವಿಶ್ಲೇಷಿಸುವುದು.

ಸ್ಕಾರ್ಫ್ ಗೂ  ಹಿಂದೂ ಸಮುದಾಯದ ಮಹಿಳೆಯರು ಧರಿಸುವ ಬಿಂದಿ ಮತ್ತು ಕೈಬಳೆಗೂ  ಏಕ ಪ್ರಕಾರವಾದ ಮಹತ್ವ ಇದೆ ಎಂದು  ಹೇಳುವ ಹಾಗಿಲ್ಲ. ಹಿಂದೂ ಸಮುದಾಯದಲ್ಲಿ ಬಿಂದಿ, ಕೈಬಳೆ ಇತ್ಯಾದಿಗಳನ್ನು ಒಂದು ರೀತಿಯಲ್ಲಿ ಐಚ್ಛಿಕವೆಂಬಂತೆ  ಬಳಸಲಾಗುತ್ತಿದೆ.  ಸಾಮಾಜಿಕ ಬದುಕಿನಲ್ಲಿ ಇವುಗಳನ್ನು ಧರಿಸುವವರ ಸಂಖ್ಯೆಯಷ್ಟೇ ಧರಿಸದವರ ಸಂಖ್ಯೆಯೂ ಇದೆ. ಇವುಗಳನ್ನು ಒಂದು ಕಡ್ಡಾಯ  ಧಾರ್ಮಿಕ ಪದ್ಧತಿಯಾಗಿ ಸ್ವೀಕರಿಸುವವರ ಸಂಖ್ಯೆ ಬಹಳ ಕಡಿಮೆಯಿರುವಂತೆ ಕಾಣಿಸುತ್ತಿದೆ. ಹಿಂದೂ ಧಾರ್ಮಿಕ ಆಚಾರ ಪದ್ಧತಿಯಲ್ಲಿ  ಬಿಂದಿ, ಕೈಬಳೆಗಳಿಗೆ ಎಷ್ಟು ಮಹತ್ವವಿದೆ ಎಂಬುದು ಸ್ಪಷ್ಟವಿಲ್ಲದಿದ್ದರೂ ಇವುಗಳನ್ನು ಧಾರ್ಮಿಕ ಪದ್ಧತಿಯಾಗಿ ಬಳಸುವವರ ಸಂಖ್ಯೆ  ತೀರಾ ಕಡಿಮೆ. ಆದರೆ
ಸ್ಕಾರ್ಫ್ ಹಾಗಲ್ಲ. ಅದು ಇವತ್ತಿಗೂ ಮುಸ್ಲಿಮ್ ಸಮುದಾಯದ ಅವಿಭಾಜ್ಯ ಅಂಗ. ಬುರ್ಖಾ ಮತ್ತು ನಕಾಬನ್ನು ಧರಿಸದವರೂ ಸ್ಕಾ ರ್ಫನ್ನು ಧರಿಸುವುದಕ್ಕೆ ಕಾರಣವೂ ಇದುವೇ. ಆದ್ದರಿಂದ ತರಗತಿಯಲ್ಲಿ ಸ್ಕಾರ್ಫ್ ಧರಿಸುವುದಕ್ಕೆ ಅನುಮತಿಸಬೇಕೋ ಬೇಡವೋ ಎಂದು  ನಿರ್ಧರಿಸುವ ಮೊದಲು ಮತ್ತು ಸರ್ವರಿಗೂ ಸಮಾನ ನಿಯಮ ಎಂದು ಒಂದು ವಾಕ್ಯದಲ್ಲಿ ಹೇಳಿ ಮುಗಿಸುವ ಮೊದಲು ಈ ಎಲ್ಲ  ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವ ಸಾವಧಾನವನ್ನು ಎಲ್ಲರೂ ಪ್ರದರ್ಶಿಸುವ ಅಗತ್ಯ ಇದೆ.

ಧರ್ಮ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಈ ವಾಸ್ತವವನ್ನು ತಿರಸ್ಕರಿಸಿಯೋ ಅದಕ್ಕೆ ಬೆನ್ನು ಹಾಕಿಯೋ ಮಾತಾಡುವುದರಿಂದ  ಯಾವ ಪ್ರಯೋಜನವೂ ಇಲ್ಲ ಮತ್ತು ಯಾರದೇ ಸಾಧನೆಗೂ ಯಾರದೇ ಕಲಿಕೆಗೂ ಧರ್ಮ ಅಡ್ಡ ಬಂದದ್ದೂ ಇಲ್ಲ. ಇದಕ್ಕೆ ಅತ್ಯುತ್ತಮ  ಉದಾಹರಣೆ, ಹರೇಕಳ ಹಾಜಬ್ಬ. ಅವರು ನಮಾಜ್, ಉಪವಾಸ ಸೇರಿದಂತೆ ಧಾರ್ಮಿಕ ಆಚಾರ-ವಿಚಾರಗಳನ್ನು ಪಾಲಿಸುತ್ತಾರೆ.  ಸದಾ ಬಿಳಿ ಲುಂಗಿ ಮತ್ತು ಬಿಳಿ ಷರಟಿನಲ್ಲೇ  ಕಿತ್ತಳೆ ಹಣ್ಣು ಮಾರುತ್ತಾರೆ. ಆದರೆ ಅವರನ್ನು ಓರ್ವ ಅಮೋಘ ಸಾಧಕನನ್ನಾಗಿ  ಮಾಡುವುದಕ್ಕೆ ಈ ನಮಾಜ್, ಉಪವಾಸ, ಬಿಳಿ ಲುಂಗಿ, ಷರಟುಗಳು ಯಾವ ತಡೆಯನ್ನೂ ಒಡ್ಡಿಲ್ಲ. ಸಮಸ್ಯೆ ಏನೆಂದರೆ, ಧರ್ಮವನ್ನು  ತಪ್ಪಾಗಿ ಆಚರಿಸುವವರು ಮತ್ತು ಆಡುವವರನ್ನು ಕಂಡು ಇದುವೇ ನಿಜ ಧರ್ಮ ಎಂದು ಅಂದುಕೊಳ್ಳುವುದು. ಅವರ ಮಾತಿನ  ಮೇಲೆಯೇ ಧರ್ಮಕ್ಕೆ ವ್ಯಾಖ್ಯಾನವನ್ನು ಕಟ್ಟುವುದು. ಧಾರ್ಮಿಕ ನಾಯಕರೆನಿಸಿಕೊಂಡ ಯಾವುದೇ ಧರ್ಮದ ವ್ಯಕ್ತಿ ವೇದಿಕೆ ಏರಿಯೋ  ಸೋಶಿಯಲ್ ಮೀಡಿಯಾದ ಮೂಲಕವೋ ತನ್ನ ವಿಚಾರಧಾರೆಯನ್ನು ಧರ್ಮದ ವಿಚಾರಧಾರೆಯೆಂದು ತಿರುಚಿ ಹೇಳುತ್ತಾ  ತಿರುಗಾಡುತ್ತಿರುವುದೇ ಇಲ್ಲಿನ ನಿಜವಾದ ಸಮಸ್ಯೆ.

ಯಾವುದೇ ಧರ್ಮಕ್ಕೆ ಅದರದ್ದೇ  ಆದ ಪ್ರತ್ಯೇಕತೆಯಿದೆ. ಆಚರಣೆ, ಆರಾಧನೆ, ಗ್ರಂಥ, ವ್ಯಾಖ್ಯಾನ, ವಿಶಿಷ್ಟ ಪದಗಳು ಮತ್ತು  ಇವುಗಳಿಗಿರುವ ಐತಿಹಾಸಿಕ ಹಿನ್ನೆಲೆಗಳು, ಅರ್ಥೈಸುವಿಕೆಯ ರೀತಿ, ನಿಯಮ ನಿರ್ದೇಶಗಳು ಇತ್ಯಾದಿ ಅನೇಕ ಸಂಗತಿಗಳಲ್ಲಿ ಧರ್ಮ- ಧರ್ಮಗಳ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದ ಬೌದ್ಧ ಧರ್ಮವನ್ನಾಗಲಿ, ಬಸವ ಪಂಥವನ್ನಾಗಲಿ ಸಂಪೂರ್ಣ ಮನನ ಮಾಡಿಕೊಳ್ಳಬೇಕಾದರೆ ಕೇವಲ ತ್ರಿಪಿಟಿಕವನ್ನು ಓದುವುದರಿಂದಲೋ ಬಸವ ವಚನಗಳನ್ನು ಕಲಿಸುವುದರಿಂದಲೋ  ಸಾಧ್ಯವಿಲ್ಲ. ಯಾವುದೇ ವಚನಕ್ಕೂ ಅದರದ್ದೇ  ಆದ ಹಿನ್ನೆಲೆಯಿರುತ್ತದೆ. ಅದು ತಿಳಿದಾಗ ಆ ವಚನದ ಅರ್ಥ ಮತ್ತು ನಿಜ ಉದ್ದೇಶ  ಸ್ಪಷ್ಟವಾಗುತ್ತದೆ. ಗೌತಮ ಬುದ್ಧನ ಹುಟ್ಟು ಮತ್ತು ಸಾವಿನ ವರೆಗಿನ ಯಾವ ಬೆಳವಣಿಗೆಗಳನ್ನೂ ತಿಳಿದಿಲ್ಲದ ವ್ಯಕ್ತಿಯೋರ್ವ ತ್ರಿಪಿಟಿಕವನ್ನು  ಓದಿ ಅರ್ಥೈಸುವುದಕ್ಕೂ ಬುದ್ಧನ ಬಗ್ಗೆ ಸಂಪೂರ್ಣ ತಿಳುವಳಿಕೆಯಿರುವ ವ್ಯಕ್ತಿಯೋರ್ವ ತ್ರಿಪಿಟಿಕವನ್ನು ಓದಿ ಅರ್ಥೈಸುವುದಕ್ಕೂ ಹಗಲು  ರಾತ್ರಿಯಷ್ಟು ವ್ಯತ್ಯಾಸವಿರುತ್ತದೆ. ಕುರ್‌ಆನ್‌ನನ್ನಾಗಲಿ, ವೇದ, ಬೈಬಲ್, ಗ್ರಂಥ ಸಾಹೇಬನ್ನಾಗಲಿ ಓದುವಾಗ ಮತ್ತು ಈ ಗ್ರಂಥಗಳು ಪ್ರತಿನಿಧಿಸುವ ಧರ್ಮವನ್ನು ವಿಶ್ಲೇಷಿಸುವಾಗ ನಮ್ಮಲ್ಲಿ ಇರಬೇಕಾದ ಎಚ್ಚರಿಕೆಗಳಿವು. ದುರಂತ ಏನೆಂದರೆ,ಈ ಎಚ್ಚರಿಕೆಗಳನ್ನೆಲ್ಲ ಕಡೆಗಣಿಸಿ ಮಾಡುವ ಚರ್ಚಾ ವಿಧಾನವೊಂದು ಸಾರ್ವಜನಿಕವಾಗಿ ಇವತ್ತು ಚಾಲ್ತಿಯಲ್ಲಿದೆ. ಇದು ಅತ್ಯಂತ ಅಪಾಯಕಾರಿ. ಈ ಮಾದರಿಯ ಚರ್ಚೆಗೆ ಧರ್ಮದ ಆಳ ಅಧ್ಯಯನದ ಅಗತ್ಯವಿಲ್ಲ. ಬಾಹ್ಯವಾಗಿ ಏನು ಕಾಣುತ್ತದೋ ಅದುವೇ ಧರ್ಮ  ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಏನು ಸಿಗುತ್ತದೋ ಅದುವೇ ಧರ್ಮದ ವ್ಯಾಖ್ಯಾನ. ಆದ್ದರಿಂದಲೇ, ಸ್ಕಾರ್ಫ್ ಗೂ  ವಿರೋಧ  ವ್ಯಕ್ತವಾಗುತ್ತದೆ. ಕೇಸರಿ ಬಣ್ಣವನ್ನೂ  ಅನುಮಾನದಿಂದ ನೋಡಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧವಾಗುವ ವೇದಿಕೆಗಳೂ   ಭಯ ಮೂಡಿಸುತ್ತವೆ. ಪ್ರತಿಯೊಂದರಲ್ಲೂ ಮತಾಂತರದ್ದೋ  ಆಮಿಷದ್ದೋ  ಸಂಚಿನದ್ದೋ ಸಂದೇಹಗಳನ್ನು ಹರಡಲಾಗುತ್ತದೆ. ಈ ಬಗ್ಗೆ  ಬೀದಿ ವ್ಯಾಖ್ಯಾನಗಳು ನಡೆಯುತ್ತವೆ. ಪ್ರತಿಭಟನೆ, ಬೈಗುಳ-ನಿಂದನೆಗಳು ಪ್ರಾರಂಭವಾಗುತ್ತವೆ. ನಿಜವಾಗಿ,

ತರಗತಿಯಲ್ಲಿ ಸರ್ವರೂ ಸಮಾನರು ಎಂಬ ನಿಯಮವನ್ನು ಜಾರಿಗೊಳಿಸುವುದೆಂದರೆ, ಅದು ಧಾರ್ಮಿಕ ಸಂಕೇತಗಳನ್ನೆಲ್ಲ  ಸಾಯಿಸಿಯೇ ಆಗಬೇಕಿಲ್ಲ. ಜನರ ಬದುಕಿನ ಭಾಗವೇ ಆಗಿರುವ ಮತ್ತು ಯಾರ ಪಾಲಿಗೂ ಉಪದ್ರವಕಾರಿಯಾಗಿಲ್ಲದ ಸಂಕೇತಗಳನ್ನು  ತರಗತಿಯಿಂದ ಬಹಿಷ್ಕರಿಸಿ ಸಮಾನತಾ ತತ್ವವನ್ನು ಪಾಲಿಸಿದ್ದೇ ವೆ ಎಂದು ಬೀಗಬೇಕಾಗಿಯೂ ಇಲ್ಲ. ನಿರುಪದ್ರವಿ ಸಂಕೇತಗಳು  ತರಗತಿಯೊಳಗಿನ ಸೌಂದರ್ಯವೇ ಹೊರತು ಅಸಮಾನತೆ ಅಲ್ಲ.

6ನೇ ತರಗತಿ ಮಕ್ಕಳಿಗೆ ಅನ್ವಯವಾಗುವ ದೇಶದ್ರೋಹ ಇವರಿಗೇಕಿಲ್ಲ?





ಹರಿದ್ವಾರದ ‘ಧರ್ಮಸಂಸದ್’ನಲ್ಲಿ ಮಾಡಲಾದ ದ್ವೇಷ ಭಾಷಣವು ದೇಶದ ಗಡಿಯನ್ನೂ ಮೀರಿ ಜಾಗತಿಕ ಗಮನ ಸೆಳೆದಿರುವುದು  ಒಂದೆಡೆಯಾದರೆ, ಇನ್ನೊಂದೆಡೆ ಸಂಸದ ತೇಜಸ್ವಿ ಸೂರ್ಯ ಉಡುಪಿ ಮಠದಲ್ಲಿ ಅತ್ಯಂತ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ.  ಇದರ ನಡುವೆ ಅಲ್ಲಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ಗುರಿಯಾಗಿಸಿ ಹಲ್ಲೆ ಮತ್ತು ಹಿಂಸಾಚಾರಗಳು ದಿನನಿತ್ಯವೆಂಬಂತೆ  ನಡೆಯುತ್ತಿವೆ.  ಮತಾಂತರ ನಿಷೇಧ ವಿಧೇಯಕವನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವುದಕ್ಕಿಂತ  ಮೊದಲು ರಾಜ್ಯದಲ್ಲಿ ಕ್ರೈಸ್ತರ ಮೇಲೆ ದಾಳಿ  ಆರಂಭವಾಯಿತು. ಇದಕ್ಕೆ ಅಧಿಕೃತ ಚಾಲನೆಯನ್ನು ಕೊಟ್ಟದ್ದು ಶಾಸಕ ಗೂಳಿಹಟ್ಟಿ ಶೇಖರ್. ತನ್ನ ತಾಯಿ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ  ಎಂದು ಅವರು ವಿಧಾನಸಭೆಯಲ್ಲಿ ಹೇಳುವ ಮೂಲಕ ಮತಾಂತರ ವಿರೋಧಿ ವಿಧೇಯಕದ ಅನಿವಾರ್ಯತೆಯನ್ನು ಸಾರುವ  ವಾತಾವರಣವನ್ನು ಹುಟ್ಟು ಹಾಕಿದರು. ಆ ಬಳಿಕದಿಂದ ಕ್ರೈಸ್ತ ಪ್ರಾರ್ಥನಾಲಯ ಮತ್ತು ಚರ್ಚ್ಗಳ ಮೇಲೆ ನಿರಂತರ ದಾಳಿಗಳು  ನಡೆಯತೊಡಗಿದುವು. ಇದೀಗ ಸ್ವತಃ ಗೂಳಿಹಟ್ಟಿ ಶೇಖರ್ ಅವರೇ ತನ್ನ ಮಾತನ್ನು ನುಂಗಿಕೊಂಡಿದ್ದಾರೆ. ತನ್ನ ತಾಯಿ ಕ್ರೈಸ್ತ ಧರ್ಮ  ಸ್ವೀಕರಿಸಿದ್ದಾರೋ ಇಲ್ಲವೋ ಎಂಬುದು ತನಗೆ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ,

 ಅವರು ವಿಧಾನಸಭೆಯಲ್ಲಿ ಕಣ್ಣೀರಿಳಿಸಿ  ಹೇಳಿದ್ದು ಸುಳ್ಳೇ? ತನ್ನ ತಾಯಿಯ ಮತಾಂತರದ ಬಗ್ಗೆಯೇ ಖಚಿತವಾಗಿ ಹೇಳಲು ಓರ್ವ ಶಾಸಕನಿಗೆ ಆಗುತ್ತಿಲ್ಲ ಎಂದ ಮೇಲೆ, ಈ  ದಾಳಿ ಮಾಡುವ ಖಾಸಗಿ ಪಡೆಗಳಿಗೆ ಮತಾಂತರದ ಬಗ್ಗೆ ಎಷ್ಟು ಗೊತ್ತಿರಬಹುದು? ಇವರ ಆರೋಪಗಳೂ ಗೂಳಿಹಟ್ಟಿ  ಶೇಖರ್‌ರಂಥದ್ದೇ  ನಕಲಿಯೇ? ಕ್ರೈಸ್ತರನ್ನು ಗುರಿ ಮಾಡಲು ಬೊಮ್ಮಾಯಿ ಸರ್ಕಾರವೇ ಗೂಳಿಹಟ್ಟಿ ಶೇಖರ್‌ರನ್ನು ದಾಳವಾಗಿ  ಬಳಸಿಕೊಂಡಿತೇ? ಕ್ರಿಸ್‌ಮಸ್ ಆಚರಣೆಯ ಹೆಸರಲ್ಲಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಹಲವು ಕಡೆ ಕ್ರೈಸ್ತರ ಶಾಲೆ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಲಾಗಿದೆ. ಕ್ರೈಸ್ತರನ್ನು ಭೀತಿಯಲ್ಲಿ ಕೆಡಹುವುದು ಇದರ ಒಂದು ಭಾಗವಾದರೆ, ಮುಸ್ಲಿಮರನ್ನು ಪ್ರಚೋದಿಸುವುದು ದ್ವೇಷ ಭಾಷಣಗಳ ಗುರಿಯಾಗಿದೆ. ನಿಜವಾಗಿ,

ಧರ್ಮಸಂಸದ್‌ನಲ್ಲಿ ಇನ್ನೊಂದು ಧರ್ಮೀಯರನ್ನು ಕಡಿಯುವ, ಕೊಲ್ಲುವ ಮತ್ತು ಅವರ ವಿರುದ್ಧ ಶಸ್ತ್ರ  ಎತ್ತುವಂತಹ ಆಗ್ರಹ ಕೇಳಿ  ಬರುವುದೇ ಆಘಾತಕಾರಿ. ಧರ್ಮಸಂಸದ್ ಸಭೆ ನಡೆದ ಉತ್ತರಾಖಂಡದ ಹರಿದ್ವಾರವು ಆ ಸಭೆ ನಡೆಯುವುದಕ್ಕಿಂತ ಮೊದಲೇನೂ ಅಶಾಂತವಾಗಿರಲಿಲ್ಲ. ಹಿಂದೂ-ಮುಸ್ಲಿಮ್ ಘರ್ಷಣೆಗಳೂ ನಡೆದಿರಲಿಲ್ಲ. ಹೀಗಿರುವಾಗ, ಮುಸ್ಲಿಮರನ್ನು ಕಡಿಯಲು ಮತ್ತು ಕೊಲ್ಲಲು ಕರೆ  ಕೊಡುವ ಭಾಷಣಗಳು ಹರಿದ್ವಾರದ ಧರ್ಮಸಂಸದ್‌ನಲ್ಲಿ ಏಕೆ ನಡೆದುವು? ಯಾವ ಪ್ರಚೋದನೆಯೂ ಇಲ್ಲದೇ ಪ್ರಚೋದನಾತ್ಮಕ  ಭಾಷಣಗಳು ನಡೆಯುವುದೇಕೆ? ಅದರಲ್ಲೂ ಧಾರ್ಮಿಕ ಮುಖಂಡರೇ ಇಂಥ ಧರ್ಮದ್ವೇಷದ ಮಾತುಗಳನ್ನು ಪುಂಖಾನುಪುಂಖವಾಗಿ  ಹರಿಯಬಿಟ್ಟರೇಕೆ? ಯಾಕೆ  ಸಬ್ಕಾ ಸಾಥ್ ಎನ್ನುವ ಪ್ರಧಾನಿಯಾಗಲಿ, ಸರ್ವರಿಗೂ ಸಮಾನ ನ್ಯಾಯ ನೀಡಬೇಕಾದ ಉತ್ತರಾಖಂಡ  ಸರ್ಕಾರವಾಗಲಿ ಏನನ್ನೂ ಹೇಳುತ್ತಿಲ್ಲ? ಸುಮಾರು 20 ಕೋಟಿಯಷ್ಟಿರುವ ಸಮುದಾಯದ ವಿರುದ್ಧ ದಾಳಿಗೆ ಬಹಿರಂಗ ಕರೆ ಕೊಟ್ಟ  ಬೆಳವಣಿಗೆಯ ಬಳಿಕವೂ ಯಾಕೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ? ನಾಟಕ ಪ್ರದರ್ಶಿಸಿದ ಬೀದರ್‌ನ 6ನೇ  ತರಗತಿಯ ಮಕ್ಕಳು ಮತ್ತು ಹೆತ್ತವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವ ದೇಶವೊಂದರಲ್ಲಿ ಅಥವಾ ಹಾಸ್ಯಗೋಷ್ಠಿ ನಡೆಸುವ  ಕಾಮೆಡಿಯನ್‌ಗಳ ಮೇಲೆ ಯುಎಪಿಎ ಹೊರಿಸುವ ದೇಶದಲ್ಲಿ ಯಾಕೆ ನರಮೇಧಕ್ಕೆ ಕರೆ ಕೊಡುವುದು ದೇಶದ ಭದ್ರತೆಗೆ ಸವಾಲು ಅನ್ನಿಸುವುದಿಲ್ಲ? ಧರ್ಮಸಂಸದ್‌ನ ದ್ವೇಷ ಭಾಷಣದ ನಾಲ್ಕು ದಿನಗಳ ಬಳಿಕ ನಾರಾಯಣ್ ಸಿಂಗ್ ತ್ಯಾಗಿ ಎಂಬ ವಸೀಮ್ ರಿಝ್ವಿಯ  ಮೇಲೆ ತಕ್ಷಣ ಪ್ರಕರಣ ದಾಖಲಿಸಿಕೊಂಡದ್ದನ್ನು ಬಿಟ್ಟರೆ ಉಳಿದವರ ಬಗ್ಗೆ ವಿಳಂಬ ಮಾಡಲಾಗಿದೆ? ಒಂದುಕಡೆ, 

ಇದೇ ಸಂಘಪರಿವಾರ ಲವ್  ಜಿಹಾದ್‌ನ ಮಾತಾಡುತ್ತಿರುತ್ತದೆ. ಮುಸ್ಲಿಮ್ ಯುವಕರು ಹಿಂದೂ ಯುವತಿಯನ್ನು ಪ್ರೇಮಿಸಿ ಮದುವೆಯಾಗಿ ಬಳಿಕ ಭಯೋತ್ಪಾದನಾ  ಕೃತ್ಯಗಳಿಗೆ ಬಳಸುತ್ತಾರೆ ಎಂಬ ಮಾತನ್ನೂ ಅದು ಹೇಳುತ್ತಿರುತ್ತದೆ. ಹಾಗಿದ್ದರೆ,
ವಸೀಮ್ ರಿಝ್ವಿಯನ್ನು ಅದು ನಡೆಸಿಕೊಂಡದ್ದು ಹೇಗೆ? ಈ ಶಿಯಾ ನಾಯಕ ಇತ್ತೀಚೆಗಷ್ಟೇ ಹಿಂದೂ ಧರ್ಮಕ್ಕೆ ಮತಾಂತರವಾಗಿ ತನ್ನ  ಹೆಸರನ್ನು ನಾರಾಯಣ ಸಿಂಗ್ ತ್ಯಾಗಿ ಎಂದು ಬದಲಿಸಿಕೊಂಡರು ಮತ್ತು ಆ ಬಳಿಕ ಹರಿದ್ವಾರದ ಧರ್ಮಸಂಸದ್‌ನಲ್ಲಿ ಭಾಗವಹಿಸಿದರು.  ಇತರ ಅತಿಥಿಗಳಂತೆ ಅವರೂ ಭಾಷಣ ಮಾಡಿದರು. ಆದರೆ ಮುಸ್ಲಿಮರ ವಿರುದ್ಧ ಶಸ್ತ್ರ  ಎತ್ತುವಂತೆ ಕರೆಕೊಟ್ಟ ಇತರೆಲ್ಲರ ಬಗ್ಗೆಯೂ ಮೃದು ನೀತಿ ತೋರಿ ಕೇವಲ ರಿಝ್ವಿಯ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿರುವುದೇಕೆ? ಏನಿದರ ಅರ್ಥ? ರಿಝ್ವಿಯನ್ನು ಬಲಿಪಶು  ಮಾಡುವುದಕ್ಕಾಗಿಯೇ ಮತಾಂತರಗೊಳಿಸಲಾಯಿತೇ? ನಿಜವಾಗಿ,

ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿರುವಂತೆ ಕಾಣಿಸುತ್ತಿಲ್ಲ. ಅದೊಂದು ಅಸ್ತ್ರ  ಅಷ್ಟೇ. ಗೋಹತ್ಯಾ ನಿಷೇಧ ಕಾಯ್ದೆಯಂತೆ ಇದೂ ಒಂದು ನೆಪ. ಇವೆರಡರ ನಿಜವಾದ ಉದ್ದೇಶ- ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ  ಹಗೆ-ಧಗೆಯನ್ನು ಚಾಲ್ತಿಯಲ್ಲಿಡುವುದು. ಈಗಾಗಲೇ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆಯಿಂದ ಆಗಿರುವ ಲಾಭವೇನು  ಎಂದು ಪ್ರಶ್ನಿಸಿದರೆ ಸಮರ್ಪಕ ಉತ್ತರ ಯಾರಲ್ಲೂ ಇಲ್ಲ. ಗೋಮಾಂಸ ರಾಜ್ಯದ ಎಲ್ಲೆಡೆ ಲಭ್ಯವಿದೆ. ಗೋಮಾಂಸ ಅಲಭ್ಯತೆಯ ಬಗ್ಗೆ  ಹೊಟೇಲುಗಳೋ ನಾಗರಿಕರೋ ದೂರಿಕೊಂಡದ್ದು ಎಲ್ಲೂ ನಡೆದಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಗಿಂತ ಮೊದಲಿನ ಸ್ಥಿತಿ ಹೇಗಿತ್ತೋ  ಹಾಗೆಯೇ ಈಗಿನ ಸ್ಥಿತಿಯೂ ಇದೆ. ಹಾಗಿದ್ದರೆ, ಈ ಕಾಯ್ದೆಯನ್ನು ಜಾರಿಗೊಳಿಸುವುದರ ಉದ್ದೇಶವೇನಿತ್ತು? ಉದ್ದೇಶ ಒಂದೇ-  ಸರ್ಕಾರಕ್ಕೆ ತನ್ನ ಬೆಂಬಲಿಗರನ್ನು ತೃಪ್ತಿಪಡಿಸುವ ಅಗತ್ಯವಿತ್ತೇ ಹೊರತು ನಿರುಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯುವುದಲ್ಲ.  ಹಾಗೇನಾದರೂ ಮಾಡಿದರೆ ಇಡೀ ರೈತ ಸಮೂಹವೇ ತಂತಮ್ಮ ನಿರುಪಯುಕ್ತ ಜಾನುವಾರುಗಳನ್ನು ಅಟ್ಟಿಕೊಂಡು ಬಿಜೆಪಿ ಜನಪ್ರತಿನಿಧಿಗಳ ಮನೆ ಮುಂದೆ ನಿಲ್ಲಿಸಿಯಾರು ಎಂಬ ಭೀತಿ ಸರ್ಕಾರಕ್ಕೆ ಈಗಲೂ ಇದೆ. ಈ ಮತಾಂತರ ನಿಷೇಧ ಕಾಯ್ದೆಯ ಹಿಂದಿರುವುದೂ  ಇಂಥದ್ದೇ  ಒತ್ತಡ ನಿವಾರಣಾ ತಂತ್ರ. ತನ್ನ ಬೆಂಬಲಿಗರನ್ನು ತೃಪ್ತಿಪಡಿಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಅದಕ್ಕಾಗಿ ಕಾಯ್ದೆಯನ್ನು  ರೂಪಿಸಿ ಜಾರಿಗೆ ತರಲೇಬೇಕಿದೆ. ಹಾಗೆ ಮಾಡುವುದರಿಂದ ಆಗುವ ಲಾಭ ಏನೆಂದರೆ, 

ಮುಸ್ಲಿಮ್ ಮತ್ತು ಕ್ರೈಸ್ತರತ್ತ ಜನರ ಗಮನ  ಹರಿಯುತ್ತದೆ. ಸಂಘಪರಿವಾರದ ಮಂದಿ ಸರ್ಕಾರದ ವೈಫಲ್ಯದ ಕುರಿತು ಅಸಮಾಧಾನದ ಮಾತುಗಳನ್ನು ತಮ್ಮೊಳಗೇ ಹಂಚಿಕೊಂಡು   ಬುಸುಗುಡುತ್ತಾ ತಿರುಗುವುದನ್ನು ತಪ್ಪಿಸಿದಂತಾಗುತ್ತದೆ. ಈಗಾಗಲೇ ಬಿಜೆಪಿಯ ಒಳಗಡೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ  ಬದಲಾವಣೆಗೆ ಒತ್ತಡಗಳು ಹೆಚ್ಚುತ್ತಿವೆ. ಸರ್ಕಾರ ಪ್ರತಿ ಕ್ಷೇತ್ರದಲ್ಲೂ ವಿಫಲಗೊಂಡಿದೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿದೆ.  ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ತಮ್ಮವ ಎಂದು ಒಪ್ಪಿಕೊಳ್ಳಲು ಮೂಲ ನಿವಾಸಿ ಬಿಜೆಪಿಗರು ಈಗಲೂ ತಯಾರಿಲ್ಲ. ಮುಂದಿನ  ವಿಧಾನಸಭಾ ಚುನಾವಣೆಗಿಂತ ಮೊದಲು ಮುಖ್ಯಮಂತ್ರಿ ಬದಲಾವಣೆಯಾಗಬೇಕು ಎಂಬ ಒತ್ತಾಯ ಬಿಜೆಪಿಯ ಒಂದು ಗುಂಪಿನಿಂದ  ಬಲವಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಇನ್ನೊಂದೆಡೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು  ರಾಜ್ಯ ಸರ್ಕಾರದ ವಿರುದ್ಧ 40% ಕಮಿಶನ್ ಸಹಿತ ವಿವಿಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಸಕ್ರಿಯವಾಗಿದೆ. ಹೀಗಿರುವಾಗ,  ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ  ಎದುರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬಂಥ  ಮಾತುಗಳೂ  ಬಿಜೆಪಿಯೊಳಗೆ ಬಲವಾಗಿಯೇ ಕೇಳಿಬರುತ್ತಿವೆ. ಹೀಗಿರುವಾಗ,

ಈ ಎಲ್ಲ ಜಂಜಾಟಗಳಿಂದ  ಪಾರಾಗಬೇಕಾದರೆ ಜನರ ಗಮನ ಸೆಳೆಯಬಲ್ಲ ಮತ್ತು ಒಟ್ಟು ಚರ್ಚಾ ವಿಷಯವನ್ನೇ ಪಲ್ಲಟಗೊಳಿಸಬಲ್ಲ  ವಸ್ತುವೊಂದನ್ನು ಹುಡುಕುವುದು ಬಿಜೆಪಿಯ ಪಾಲಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ ಅದು ಮತಾಂತರ ನಿಷೇಧ ಕಾಯ್ದೆಯನ್ನು  ಜಾರಿಗೊಳಿಸುವ ತರಾತುರಿಯಲ್ಲಿ ಇದ್ದಂತಿದೆ. ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ಸಾರ್ವಜನಿಕ  ಚರ್ಚೆಯೊಂದನ್ನು ಹುಟ್ಟು ಹಾಕುವುದು ಅದರ ಉದ್ದೇಶ. ಇದಕ್ಕೆ ಪೂರಕವಾಗಿ ಬೇರೆಬೇರೆ ವ್ಯಕ್ತಿಗಳಿಂದ ಮುಸ್ಲಿಮ್ ಮತ್ತು ಕ್ರೈಸ್ತ  ವಿರೋಧಿ ಹೇಳಿಕೆಗಳನ್ನು ಹೊರಡಿಸುವುದು ಅದರ ಗುರಿ. ಈ ಚರ್ಚೆಯ ಕಾವು ಮುಗಿಯುವ ವೇಳೆಗೆ ಲವ್ ಜಿಹಾದ್ ಮಸೂದೆಯ ನ್ನು ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಬಹುದು. ಅದರ ಮೇಲೆ ಮತ್ತೊಂದಿಷ್ಟು ಚರ್ಚೆ. ಆಗ ಚುನಾವಣೆಯ ಸಮಯ ಬಂದಿರುತ್ತದೆ. ಹೀಗೆ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಗೆಲ್ಲಬಹುದು ಎಂಬುದು ಸರ್ಕಾರದ ತಂತ್ರ. ಅದರ ಭಾಗವೇ ಈ ತೇಜಸ್ವಿ  ಸೂರ್ಯ ಎಂದು ಹೇಳಬಹುದು.