Monday, 6 January 2025

ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ ಮತ್ತು 2024ರ ಭಾರತ




2025ನ್ನು ಕೋಮು ಸೌಹಾರ್ದದ ವರ್ಷವಾಗಿ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜಮಾಅತೆ  ಇಸ್ಲಾಮೀ ಹಿಂದ್ ಆಗ್ರಹಿಸಿರುವಂತೆಯೇ, 2024ರ ಭಾರತದ ಚಿತ್ರಣವನ್ನು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್  ಸೆಕ್ಯುಲರಿಸಂ ಎಂಬ ಸರಕಾರೇತರ ಸಂಸ್ಥೆಯೊಂದು ದೇಶದ ಮುಂದಿಟ್ಟಿದೆ. 2024ರಲ್ಲಿ ಒಟ್ಟು 59 ಕೋಮು ಘರ್ಷಣೆಗಳು  ನಡೆದಿದ್ದು, ಸಾವಿಗೀಡಾದ 13 ಮಂದಿಯಲ್ಲಿ 10 ಮಂದಿ ಮುಸ್ಲಿಮರಾಗಿದ್ದರೆ ಮೂರು ಮಂದಿ ಹಿಂದೂಗಳು ಎಂದು  ವರದಿ ಹೇಳುತ್ತದೆ. ಗುಂಪು ಥಳಿತದ ಒಟ್ಟು 12 ಪ್ರಕರಣಗಳು ನಡೆದಿದ್ದು, ಸಾವಿಗೀಡಾದ 10 ಮಂದಿಯಲ್ಲಿ 8 ಮಂದಿ  ಮುಸ್ಲಿಮರಾಗಿದ್ದಾರೆ. ಇನ್ನುಳಿದ ಇಬ್ಬರಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಕ್ರೈಸ್ತರಾಗಿದ್ದಾರೆ. 2021ರಲ್ಲಿ ಗುಂಪು  ಥಳಿತದಿಂದಾಗಿ 21 ಮಂದಿ ಹತ್ಯೆಗೀಡಾಗಿದ್ದರು ಎಂಬುದನ್ನು ಪರಿಗಣಿಸಿದರೆ, 2024 ಪರಿಸ್ಥಿತಿ ಒಂದಷ್ಟು ಸುಧಾರಿಸಿ  ಎಂದು ಹೇಳಬಹುದು. ಅದೇವೇಳೆ, 2023ರಲ್ಲಿ 32 ಕೋಮು ಘರ್ಷಣೆ ಪ್ರಕರಣಗಳು ನಡೆದಿದ್ದರೆ, 2024ರಲ್ಲಿ 59  ಪ್ರಕರಣಗಳು ನಡೆದಿವೆ ಎಂಬುದು ಅಷ್ಟೇ ಆತಂಕದ ಸಂಗತಿಯೂ ಹೌದು. ಅಂದಹಾಗೆ,

ಕೋಮು ಘರ್ಷಣೆ ಮತ್ತು ಗುಂಪು ಥಳಿತ ಎಂಬ ಕ್ರೌರ್ಯದ ಈ ಎರಡು ವಿಭಿನ್ನ ಮಾದರಿಗಳು ಮನುಷ್ಯರು ಮತ್ತು  ಪ್ರಾಣಿಗಳ ನಡುವೆ ನಡೆಯುತ್ತಿಲ್ಲ ಅಥವಾ ಮನುಷ್ಯರು ಮತ್ತು ಅನ್ಯಗೃಹ ಜೀವಿಗಳ ನಡುವೆಯೂ ನಡೆಯುತ್ತಿಲ್ಲ. ತ ನ್ನಂತೆಯೇ ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲು ಸಹಿತ ಸರ್ವ ಅಂಗಗಳೂ ಸಮಾನವಾಗಿರುವ ವ್ಯಕ್ತಿಯ ಮೇಲೆ  ಆತನ ಧರ್ಮ, ಆಹಾರ, ಸಂಸ್ಕೃತಿ ಬೇರೆ ಎಂಬ ಕಾರಣಕ್ಕಾಗಿ ಓರ್ವ ವ್ಯಕ್ತಿ ಅಮಾನುಷವಾಗಿ ನಡಕೊಳ್ಳುವುದನ್ನೇ  ಇವೆರಡೂ ಸಂಕೇತಿಸುತ್ತವೆ. ಹೆಚ್ಚಿನೆಲ್ಲ ಕೋಮು ಘರ್ಷಣೆಗಳು ಧಾರ್ಮಿಕ ಸಭೆ ಮತ್ತು ಮೆರವಣಿಗೆಗಳ ಸಂದರ್ಭದಲ್ಲಿಯೇ  ನಡೆದಿದೆ. ಪ್ರಶ್ನೆ ಇರುವುದೂ ಇಲ್ಲೇ.

ಧರ್ಮದ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳೇಕೆ ಮನುಷ್ಯ ವಿರೋಧಿ ಸ್ವರೂಪವನ್ನು ಪಡಕೊಳ್ಳ ತೊಡಗಿವೆ? ಧಾರ್ಮಿಕ  ಕಾರ್ಯಕ್ರಮಗಳೆಂದರೆ ಆಯಾ ಧರ್ಮದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಸಂದರ್ಭವಾಗಿ ಬಳಕೆಯಾಗಬೇಕು.  ಗಣೇಶ ಚತುರ್ಥಿ ಎಂಬುದು ಗಣೇಶನನ್ನು ನಂಬುವ ಮತ್ತು ನಂಬದ ಜನರಿಗೆ ಮಾಹಿತಿಯನ್ನು ಮುಟ್ಟಿಸುವ ಮತ್ತು  ಸಿಹಿಯಾದ ಸನ್ನಿವೇಶವನ್ನು ಅನುಭವಿಸುವ ಘಳಿಗೆ. ತನ್ನನ್ನು ನಂಬದವರ ಮೇಲೆ ಗಣೇಶ ಬಲವಂತದಿAದ ತನ್ನ  ವಿಚಾರವನ್ನು ಹೇರಿದ ಯಾವ ಕುರುಹೂ ಹಿಂದೂ ಪುರಾಣದಲ್ಲಿ ಇಲ್ಲ. ಕೃಷ್ಟಾಷ್ಟಮಿಗೆ ಸಂಬAಧಿಸಿಯೂ ಇವೇ ಮಾತನ್ನು  ಹೇಳ ಬಹುದು. ಈದ್‌ಗೆ ಸಂಬAಧಿಸಿಯೂ ಇವೇ ಮಾತುಗಳನ್ನು ಹೇಳಬಹುದು. ಈ ದೇಶದಲ್ಲಿ 20 ಕೋಟಿಯಷ್ಟು  ಮುಸ್ಲಿಮರಿದ್ದಾರೆ. ಇದರ ಹೊರತಾಗಿ ಕ್ರೈಸ್ತರು, ಸಿಕ್ಖರು, ಬೌದ್ಧರು, ಫಾರ್ಸಿಗಳು ಸಹಿತ ಹಿಂದೂ ಮತ್ತು ಇಸ್ಲಾಮ್  ಧರ್ಮಗಳಲ್ಲಿ ಗುರುತಿಸಿಕೊಳ್ಳದ ಕೋಟ್ಯಂತರ ಜನರಿದ್ದಾರೆ. ಇವರೆಲ್ಲರಿಗೆ ಹಿಂದೂ ಧರ್ಮವನ್ನು ಪರಿಚಯಿಸುವ  ಹೊಣೆಗಾರಿಕೆ ಆ ಧರ್ಮದ ವಕ್ತಾರರ ಮೇಲಿದೆ. ಯಾವುದೇ ಧರ್ಮದ ಬಗ್ಗೆ ಸದ್ಭಾವನೆ ಮೂಡುವುದು ಮತ್ತು ಆ  ಧರ್ಮದ ಕಡೆಗೆ ಜನರು ಆಕರ್ಷಿತರಾಗುವುದು, ಆ ಧರ್ಮದ ಅನುಯಾಯಿಗಳ ವರ್ತನೆ ಮತ್ತು ಬದುಕಿನ ರೀತಿ- ನೀತಿಯಿಂದ. ವಿಷಾದ ಏನೆಂದರೆ,

ಈ ದೇಶದ ಬಹುಸಂಖ್ಯಾತರ ಒಂದು ಗುಂಪು ದಿನೇ ದಿನೇ ಹಿಂದೂ ಧರ್ಮದ ಐಕಾನ್‌ಗಳ ಬಗ್ಗೆ ಮತ್ತು ಹಿಂದೂ  ಧರ್ಮದ ಮೌಲ್ಯಗಳ ಬಗ್ಗೆ ಹಿಂದೂಯೇತರರಿಗೆ ಅತ್ಯಂತ ನಕಾರಾತ್ಮಕ ಸಂದೇಶವನ್ನು ರವಾನಿಸುತ್ತಾ ಇದೆ. ಹಾಗಂತ, ಈ  ಗುಂಪಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇರುವುದಲ್ಲ. ಧರ್ಮಗುರುಗಳು, ಸ್ವಾಮೀಜಿಗಳು, ಮುಖಂಡರು ಸಹಿತ  ಪ್ರಭಾವಶಾಲಿಗಳೂ ಇದ್ದಾರೆ. ಇವರೆಲ್ಲ ಹಿಂದೂ ಧರ್ಮವನ್ನು ಪ್ರಚಾರ ಮಾಡುವ ಮತ್ತು ಅದರ ಮೌಲ್ಯಗಳನ್ನು  ಸಾರ್ವಜನಿಕವಾಗಿ ಹಂಚಿಕೊಳ್ಳುವ ಬದಲು ಹಿಂದೂಯೇತರ ಧರ್ಮಗಳನ್ನು ಅದರಲ್ಲೂ ಮುಖ್ಯವಾಗಿ ಇಸ್ಲಾಮನ್ನು  ತೆಗಳಲು ಸಮಯ ವಿನಿಯೋಗಿಸುತ್ತಾರೆ. ಅಪ್ಪಟ ಧಾರ್ಮಿಕ ಸಭೆಗಳಲ್ಲೂ ಮುಸ್ಲಿಮ್ ದ್ವೇಷ ಭಾಷಣಗಳು ನಡೆಯುತ್ತವೆ.  ಧಾರ್ಮಿಕ ಮೆರವಣಿಗೆಗಳಂತೂ ಮಸೀದಿಗಳ ಮುಂದೆ ಸ್ಥಗಿತಗೊಂಡು ಕೂಗಬಾರದ ಘೋಷಣೆಗಳನ್ನು ಕೂಗುವುದು  ಮತ್ತು ಕುಣಿತ ಮತ್ತು ಬ್ಯಾಂಡುಗಳನ್ನು ಬಡಿಯುವುದನ್ನೆಲ್ಲ ಮಾಡಲಾಗುತ್ತದೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ  ಮೆರವಣಿಗೆಗಳು ಸಾಗುವಾಗಲಂತೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗುತ್ತದೆ. ಅವಮಾನಕಾರಿಯಾಗಿ ನಿಂದಿಸಲಾಗುತ್ತದೆ. ಕಲ್ಲು ತೂರಾಟ ಮತ್ತು ಪ್ರಚೋದನಾತ್ಮಕ ಆಂಗಿಕ ಅಭಿನಯಗಳೂ ನಡೆಯುತ್ತವೆ. ವಿಷಾದ ಏನೆಂದರೆ,

ಇಂಥ  ಬೆಳವಣಿಗೆಗಳನ್ನು ಪ್ರಶ್ನಿಸಬೇಕಾದವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ ಎಂಬುದು. ಇದು ಹಿಂದೂ ಧರ್ಮದ  ವರ್ಚಸ್ಸಿಗೆ ಹಾನಿಯನ್ನುಂಟು ಮಾಡುವುದಕ್ಕೆ ಪರೋಕ್ಷ ಕೊಡುಗೆಯನ್ನು ನೀಡುತ್ತದೆ. ಯಾರು ಹಿಂದೂ ಧರ್ಮದ  ರಕ್ಷಕರಂತೆ ಬಿಂಬಿಸಿಕೊಂಡು  ಧರ್ಮ ದ್ವೇಷದ ಮಾತನ್ನಾಡುತ್ತಾರೋ ಮತ್ತು ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕವಾಗಿ  ನಡಕೊಳ್ಳುತ್ತಾರೋ ಅದರ ಪ್ರಭಾವ ಅವರಿಗಷ್ಟೇ ಮತ್ತು ಅವರಿರುವ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅವರು  ಆಡಿರುವ ಪ್ರತಿ ಮಾತು ಮತ್ತು ಪ್ರತಿ ವರ್ತನೆಯೂ ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ ದೇಶದೆಲ್ಲೆಡೆಗೆ  ಹರಡುತ್ತದೆ. ಇದು ಹಿಂದೂ ಧರ್ಮದ ನಿಜ ಮೌಲ್ಯದ ಮೇಲೆ ಮಸುಕನ್ನು ಮೂಡಿಸುತ್ತಲೇ ಹೋಗುತ್ತದೆ. ಸಂಭಾವಿತರು  ಇಂಥ ಮಾತುಗಳಿಂದ ಅಂತರ ಕಾಯ್ದುಕೊಳ್ಳುತ್ತಾ ತಮ್ಮಷ್ಟಕ್ಕೇ ತಾವಿದ್ದರೆ, ಪ್ರಚೋದಕರ ಮಾತು-ಕೃತಿಯಿಂದ  ಪ್ರಭಾವಿತರಾದವರು ಅದಕ್ಕೆ ಇನ್ನಷ್ಟು ಉಪ್ಪು-ಖಾರ ಸೇರಿಸಿ ಇನ್ನಷ್ಟು ಉಗ್ರವಾಗಿ ನಡಕೊಳ್ಳತೊಡಗುತ್ತಾರೆ. ಮುಸ್ಲಿಮರ  ವಿರುದ್ಧ ಮತ್ತು ಅವರ ಆಚಾರ-ವಿಚಾರಗಳ ವಿರುದ್ಧ ಹೇಳಿಕೆಗಳನ್ನು ನೀಡತೊಡಗುತ್ತಾರೆ. ಸಂದರ್ಭ-ಸನ್ನಿವೇಶಗಳು ಸಿಕ್ಕರೆ  ಅಥವಾ ಅಂಥವುಗಳನ್ನು ಸ್ವಯಂ ಸೃಷ್ಟಿಸಿಕೊಂಡೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಥಳಿತಗಳಲ್ಲಿ ಭಾಗಿಯಾಗುತ್ತಾರೆ. ಹೀಗೆ  ಹಿಂದೂ ಧರ್ಮದ ನಿಜ ಮೌಲ್ಯ ಪ್ರತಿಪಾದಕರು ಒಂದು ಕಡೆ ಮೌನವಾಗುತ್ತಾ ಸಾಗಿದಾಗ, ಹಿಂದೂ ಧರ್ಮವನ್ನು ತಪ್ಪಾಗಿ  ಪ್ರತಿನಿಧಿಸುವ ಗುಂಪು ಸದ್ದು ಮಾಡುತ್ತಾ ತಿರುಗುತ್ತಿರುತ್ತದೆ. ಇದರಿಂದಾಗಿ ಹಿಂದೂ ಧರ್ಮವು ದಿನೇ ದಿನೇ ತನ್ನ ವರ್ಚಸ್ಸ ನ್ನು ಕಳಕೊಳ್ಳುತ್ತಾ ಸಾಗುತ್ತಿರುತ್ತದೆ. ಸದ್ಯ ಅಂಥದ್ದೊಂದು  ವಾತಾವರಣ ದೇಶದೆಲ್ಲೆಡೆ ಇದೆ ಎಂಬುದೇ ನಿಜ.  ಒಂದು ರೀತಿಯಲ್ಲಿ,

ಈ ಬಗೆಯ ವಾತಾವರಣ ಈ ದೇಶದ ಅಭಿವೃದ್ಧಿಗೂ ಮತ್ತು ಆರೋಗ್ಯಕ್ಕೂ ಹಾನಿಕಾರಕ. ಈ ದೇಶದಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದದ ಬದುಕಿಗೆ ಸಾವಿರ ವರ್ಷಗಳ ಇತಿಹಾಸವಿದೆ. ವಿದೇಶದಿಂದ ಬಂದ ಅರಬ್ ವರ್ತಕರನ್ನು ಈ  ದೇಶದ ಹಿಂದೂಗಳು ಪ್ರೀತಿಯಿಂದ ಬರಮಾಡಿ ಕೊಂಡಿದ್ದಾರೆ. ಅವರು ಇಲ್ಲೇ  ನೆಲೆಸುವುದಕ್ಕೂ ವೈವಾಹಿಕ ಸಂಬಂಧ ಬೆಳೆಸುವುದಕ್ಕೂ ಅವಕಾಶ ನೀಡಿದ್ದಾರೆ.  ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದದ ಬೆಸುಗೆಯನ್ನು ಕಟ್ಟಿದ ಮಹಾನುಭಾವರಾದ ಅನೇಕರು ಈ ನೆಲದಲ್ಲಿ ಆಗಿ  ಹೋಗಿದ್ದಾರೆ. ಮಸೀದಿ ಮತ್ತು ಮಂದಿರಗಳು ಧರ್ಮ ಸೌಹಾರ್ದದ ಸಂಕೇತಗಳಾಗಿ ನೂರಾರು ವರ್ಷಗಳಿಂದ ಈ ದೇ ಶದಲ್ಲಿ ಗುರುತಿಸಿಕೊಂಡು ಬಂದಿವೆ. ಅವು ಹಾಗೆಯೇ ಉಳಿಯಬೇಕಾದುದು ಈ ದೇಶದ ಒಳಿತು ಮತ್ತು ಅಭಿವೃದ್ಧಿಯ  ದೃಷ್ಟಿಂಯಿಂದ  ಅನಿವಾರ್ಯ. ಆದ್ದರಿಂದ,

ಧರ್ಮವನ್ನು ದ್ವೇಷದ ಸಾಧನವಾಗಿ ಬಳಸುವ ಗುಂಪುಗಳನ್ನು ತಡೆಯಬೇಕಾದುದು ಆಯಾ ಧರ್ಮಗಳ ಹೊಣೆಗಾರರ  ಕರ್ತವ್ಯವಾಗಿದೆ. ಹಿಂಸಾತ್ಮಕ ಮನೋಭಾವವುಳ್ಳವರ ಕೈಯ ಆಯುಧವಾಗಿ ಧರ್ಮ ಬಳಕೆಯಾಗಬಾರದು. ಧರ್ಮಕ್ಕೆ  ಸಂಬಂಧಿಸಿದ ರ‍್ಯಾಲಿಗಳು, ಮೆರವಣಿಗೆಗಳು, ಭಾಷಣಗಳೆಲ್ಲ ಆಯಾ ಧರ್ಮದ ಮೌಲ್ಯವನ್ನು ಸಾರುವುದಕ್ಕಿರುವ  ಸಂದರ್ಭಗಳಾಗಬೇಕೇ ಹೊರತು ಇನ್ನೊಂದು ಧರ್ಮವನ್ನು ಅವಮಾನಿಸುವ ಮತ್ತು ಧರ್ಮದ್ವೇಷದ ಮಾತುಗಳ ನ್ನಾಡುವುದಕ್ಕಿರುವ ಸಂದರ್ಭವಾಗಿ ಬಳಕೆಯಾಗಬಾರದು. ಇದು ಸಾಧ್ಯವಾಗುವುದು ಧರ್ಮದ ನಿಜ ಅನುಯಾಯಿಗಳು  ಮೌನ ಮುರಿದಾಗ. ರಾಜಕೀಯಕ್ಕಾಗಿ ಧರ್ಮದ ದುರುಪಯೋಗಿಸುವವರನ್ನು ಪ್ರಬಲವಾಗಿ ವಿರೋಧಿಸುವ  ವಾತಾವರಣವನ್ನು ಹುಟ್ಟು ಹಾಕಬೇಕಾಗಿದೆ. ಹಿಂದೂ ಧರ್ಮವು ಮುಸ್ಲಿಮ್ ವಿರೋಧಿಯಲ್ಲ ಮತ್ತು ಧರ್ಮದ ಹೆಸರಲ್ಲಿ  ಮಾಡುವ ಅನ್ಯಾಯ, ಹಲ್ಲೆ-ಹತ್ಯೆಗಳು ಸ್ವೀಕಾರಾರ್ಹವಲ್ಲ ಎಂಬುದನ್ನು ಪ್ರಬಲವಾಗಿ ಸಾರುವ ಸನ್ನಿ ವೇಶಗಳು  ನಿರ್ಮಾಣವಾಗಬೇಕು. 2025 ಆ ಕಾರಣಕ್ಕಾಗಿ ಗುರುತಿಗೀಡಾಗಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಹಾರೈಸಿದೆ. ಧರ್ಮದ್ವೇಷದ ಭಾಷಣ, ಲಿಂಚಿಂಗ್ , ಪ್ರಭುತ್ವ ತಾರತಮ್ಯದಂಥ ಅನ್ಯಾಯಗಳು ಕೊನೆಯಾಗಲಿ ಎಂದೂ ಆಗ್ರಹಿಸಿದೆ. ಜೊತೆಗೆ ಬಜೆಟ್ ಗೆ ಸಂಬಂಧಿಸಿ ಹದಿನಾರು ಅಂಶಗಳ ಬೇಡಿಕೆ ಪಟ್ಟಿಯನ್ನೂ ಮುಂದಿಟ್ಟಿದೆ. ಎಲ್ಲವೂ ನಿರೀಕ್ಷಿಸಿದಂತೆ ಸಾಗಿದರೆ 2025 ಭಾರತದ ಪಾಲಿಗೆ ಸ್ಮರಣೀಯ ವರ್ಷವಾಗಲಿದೆ.

No comments:

Post a Comment