ಕಳೆದವಾರ ನಡೆದ ಎರಡು ಘಟನೆಗಳಿಗೆ ಮಾಧ್ಯಮಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿದುವು.
1. ಸಾರ್ವಜನಿಕ ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾದ ಒಡಿಸ್ಸಾದ ಹಿರಿಯ ನಾಗರಿಕರೊಬ್ಬರು ಪೊಲೀಸರಿಗೆ ದೂರು ನೀಡುವ ಮೂಲಕ ಮೊದಲ ಘಟನೆ ಬೆಳಕಿಗೆ ಬಂತು. ಇವರಿಗೆ ಬೇರೆ ಬೇರೆ ಸಂಖ್ಯೆಯಿಂದ ಕರೆ ಬಂತು. ನಿಮ್ಮ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರ ಆಗಿದೆ ಮತ್ತು ನಿಮ್ಮ ಆಧಾರ್ ಲಿಂಕನ್ನು ಬಳಸಿಕೊಂಡು ವಂಚಕರು ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಎಂದು ಕರೆ ಮಾಡಿದವರು ಹೇಳಿದರು. ಮುಂಬೈ ಕ್ರೈಮ್ ಬ್ರಾಂಚ್ ನಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿದ ಆ ವ್ಯಕ್ತಿ, ಪ್ರಕರಣದಲ್ಲಿ ನಿಮಗೆ 7 ವರ್ಷಗಳ ವರೆಗೆ ಶಿಕ್ಷೆಯಾಗುತ್ತದೆ ಎಂದೂ ನಂಬಿಸಿದ. ಅವರ ಆಧಾರ್ ಸಂಖ್ಯೆಯನ್ನೂ ಹೇಳಿದ. ಇನ್ನೊಂದು ಕಡೆ, ಫೆಡೆಕ್ಸ್ ಎಂಬ ಕೊರಿಯರ್ ಸಂಸ್ಥೆಯಿಂದ ಎಂದು ಹೇಳಿಕೊಂಡು ಕರೆ ಬಂತು. ಅವರ ಹೆಸರಲ್ಲಿ ಮಾದಕ ಪದಾರ್ಥ ವ್ಯವಹಾರ ನಡೆಯುತ್ತಿರುವುದಾಗಿ ಕರೆ ಮಾಡಿದಾತ ಹೇಳಿದನಲ್ಲದೇ, ಭಾರೀ ಅಪಾಯ ಕಾದಿದೆ ಎಂಬಂತೆ ಬೆದರಿಸಿದ. ಈ ಹಿರಿಯರಿಗೆ ಭಯವಾಯಿತು. ಇಂಜಿನಿಯರ್ ಆಗಿ ಕೈತುಂಬಾ ಸಂಬಳ ಪಡೆದು ಆರಾಮವಾಗಿ ಬದುಕಿದ್ದ ಅವರ ಪಾಲಿಗೆ ಈ ಕರೆಗಳು ಅನಿರೀಕ್ಷಿತವಾಗಿತ್ತು. ನಿವೃತ್ತಿ ವೇತನ ಮತ್ತು ಉದ್ಯೋಗಸ್ಥೆಯಾಗಿದ್ದ ಪತ್ನಿಯ ದುಡಿಮೆಯೊಂದಿಗೆ ಆರಾಮವಾಗಿ ಬದುಕುವುದನ್ನು ಮಾತ್ರ ಯೋಚಿಸಿದ್ದ ಅವರನ್ನು ಈ ಕರೆಗಳು ಚಿಂತೆಗೆ ಹಚ್ಚಿತು. ಇತರರಿಗೆ ಗೊತ್ತು ಮಾಡುವುದಕ್ಕಿಂತ ಆದಷ್ಟು ಬೇಗ ಈ ಉರುಳಿನಿಂದ ಪಾರಾದರೆ ಸಾಕು ಎಂದು ಯೋಚಿಸಿದ ಅವರು ಕರೆ ಮಾಡಿದವರ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು. ತನ್ನ ಮತ್ತು ಪತ್ನಿಯ ಖಾತೆಯಿಂದ ಕರೆ ಮಾಡಿದವರು ನೀಡಿದ ಖಾತೆಗೆ ಒಟ್ಟು ಒಂದು ಕೋಟಿ 37 ಲಕ್ಪ ರೂಪಾಯಿಯನ್ನು ವರ್ಗಾಯಿಸಿದರು. ಮತ್ತೂ ಅವರು ಪೀಡಿಸಿದಾಗ ಇವರು ಪೊಲೀಸರಿಗೆ ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನಿತಾ ಮಲ್ಹೋತ್ರಾ ಮತ್ತು ಅನುರಾಗ್ ಮಲ್ಹೋತ್ರ ಎಂಬ ತಾಯಿ, ಮಗನನ್ನು ಬಂಧಿಸಿದರು. ಇವರ ಮೇಲೆ ಅದಾಗಲೇ ಇಂಥ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದನ್ನೂ ಪತ್ತೆ ಹಚ್ಚಿದರು.
ಇನ್ನೊಂದು ಘಟನೆ, ವಿಜಯ ಕುಮಾರ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯದ್ದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ TRAIಯ ಅಧಿಕಾರಿಗಳೆಂದು ಗುರುತಿಸಿಕೊಂಡ ವ್ಯಕ್ತಿಗಳು ಇವರಿಗೆ ಕರೆ ಮಾಡಿದರು. ನಿಮ್ಮ ಮೊಬೈಲ್ ಸಿಮ್ ಹಣಕಾಸು ಅವ್ಯವಹಾರಗಳಿಗೆ ಬಳಕೆಯಾಗಿದೆ ಎಂದು ಹೇಳಿದರು. ಬಳಿಕ ವೀಡಿಯೋ ಕರೆಗೆ ಬರುವಂತೆ ಆಹ್ವಾನಿಸಿದರು. ಇವರು ವೀಡಿಯೋ ಕರೆ ಮಾಡುವ ಆ್ಯಪ್ ಡೌನ್‌ಲೋಡ್ ಮಾಡಿ ಸ್ಪಂದಿಸಿದರು. ಅಲ್ಲಿಂದ ಭಯ ಹುಟ್ಟಿಸುವ ಪ್ರಕ್ರಿಯೆ ಆರಂಭವಾಯಿತು. ನೀವು ತನಿಖೆಯಲ್ಲಿದ್ದೀರಿ ಮತ್ತು ನಿಮ್ಮ ಆಧಾರ್ ಕಾರ್ಡ್ ಬಳಸಿ ರಾಷ್ಟ್ರೀಯ ಬ್ಯಾಂಕ್ ನಿಂದ 6 ಕೋಟಿ ರೂಪಾಯಿಯ ಅವ್ಯವಹಾರ ಮಾಡಲಾಗಿದೆ ಎಂದು ನಂಬಿಸಿದರು. ಬೆದರಿದ ವಿಜಯ ಕುಮಾರ್, ಕರೆ ಮಾಡಿದವರು ಹೇಳಿದಂತೆ ನಡಕೊಳ್ಳಲು ಪ್ರಾರಂಭಿಸಿದರು. ಒಟ್ಟು 11 ಖಾತೆಯಿಂದ 12 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾಯಿಸಿದರು. ದುರಂತ ಏನೆಂದರೆ, ಈ ಇಡೀ ಪ್ರಕ್ರಿಯೆಯನ್ನು ಮನೆಯವರಿಂದ ಮತ್ತು ಗೆಳೆಯರಿಂದ ಅವರು ಮುಚ್ಚಿಟ್ಟಿದ್ದರು. ಕೊನೆಗೆ ಗತ್ಯಂತರವಿಲ್ಲದೇ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂತು. ಅಂದಹಾಗೆ,
ಡಿಜಿಟಲ್ ಅರೆಸ್ಟ್ ಎಂಬ ಹೊಸ ಪದವೊಂದು ಹುಟ್ಟಿಕೊಂಡದ್ದೇ ಈ ಬಗೆಯ ವಂಚನೆಗಳ ಹಿನ್ನೆಲೆಯಲ್ಲಿ. ತಾಂತ್ರಿಕವಾಗಿ ಹೊಸ ಹೊಸ ಸಂಶೋಧನೆಗಳಾದಂತೆಯೇ ವಂಚನೆ, ಮೋಸಗಳಲ್ಲೂ ಹೊಸ ಹೊಸ ಶೋಧನೆಗಳಾಗುತ್ತವೆ ಎಂಬುದನ್ನು ಇವು ಮತ್ತು ಇಂಥ ಹತ್ತು-ಹಲವು ಬಗೆಯ ವಂಚನಾ ಘಟನೆಗಳು ಹೇಳುತ್ತಿವೆ. ಅಲ್ಲದೇ, ಇದೀಗ ಮೊಬೈಲ್ ಕರೆಗಳ ಮೊದಲು ಡಿಜಿಟಲ್ ಅರೆಸ್ಟಿನ ಬಗ್ಗೆ ಎಚ್ಚರಿಸುವ ಮಾಹಿತಿಗಳನ್ನು ಕೇಂದ್ರ ಸರಕಾರ ಹಂಚಿಕೊಳ್ಳತೊಡಗಿದೆ. ನೀವು ಯಾರಿಗಾದರೂ ಕರೆ ಮಾಡುವ ಉದ್ದೇಶದಿಂದ ಡಯಲ್ ಮಾಡಿದರೆ ಆ ಕಡೆಯ ವ್ಯಕ್ತಿ ಕರೆ ಸ್ವೀಕರಿಸುವ ವರೆಗೂ ಈ ಮಾಹಿತಿ ನಿಮ್ಮನ್ನು ಪದೇ ಪದೇ ಎಚ್ಚರಿಸುತ್ತಲೇ ಇರುತ್ತದೆ. ಈ ಹಿಂದೆ ಕೊರೋನಾ ಕಾಲದಲ್ಲಿ ಇಂಥದ್ದೇ ಎಚ್ಚರಿಕೆಯನ್ನು ಆಲಿಸಿ ಆಲಿಸಿ ಅದು ಬಾಯಿಪಾಠವೇ ಆಗಿತ್ತು. ಅಂಥದ್ದೇ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂಬುದನ್ನೇ ಈಗಿನ ಬೆಳವಣಿಗೆಗಳು ಹೇಳುತ್ತಿವೆ. ನಿಜವಾಗಿ,
ಕಾನೂನಿನ ಭಯ ಮತ್ತು ದೇವಭಯ- ಎರಡೂ ಇಲ್ಲವಾದಾಗ ಮನುಷ್ಯ ಅತ್ಯಂತ ಕ್ರೂರಿಯಾಗಬಲ್ಲ. ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆಯಾಗಿರುವುದು ಇಲ್ಲಿನ ಒಂದು ಲೋಪವಾದರೆ, ಸತ್ಯ-ನ್ಯಾಯ- ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳು ಸಾಮಾಜಿಕ ಬದುಕಿನಿಂದ ದೂರವಾಗುತ್ತಿರುವುದು ಇನ್ನೊಂದು ಲೋಪ. ಭಾರತೀಯ ಕಾನೂನುಗಳು ಎಷ್ಟೇ ಪ್ರಬಲವಾಗಿರಲಿ, ಅದನ್ನು ಜಾರಿ ಮಾಡುವ ವಿವಿಧ ಹಂತದ ಅಧಿಕಾರಿಗಳು ಭ್ರಷ್ಟರಾದರೆ, ಕಾನೂನು ಹಲ್ಲಿಲ್ಲದ ಹಾವಾಗಬೇಕಾಗುತ್ತದೆ. ಯಾವುದೇ ಅಪರಾಧವನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸುವುದು ಪೊಲೀಸರನ್ನು ಹೊಂದಿಕೊಂಡಿರುತ್ತದೆ. ಅವರು ಪ್ರಕರಣ ದಾಖಲು ಮಾಡುವುದು, ಸಾಕ್ಷ್ಯ ಸಂಗ್ರಹ, ಪೂರಕ ಸಾಕ್ಷ್ಯಗಳು ಮತ್ತು ಪ್ರಬಲ ಎಫ್‌ಐಆರ್ ಅನ್ನು ದಾಖಲಿಸಿದರೆ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸುಲಭ ಅಲ್ಲ. ಬಳಿಕ ನ್ಯಾಯಾಧೀಶರ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ, ಅಪರಾಧವನ್ನು ದಾಖಲಿಸುವ ಪ್ರಾಥಮಿಕ ಹಂತವೇ ನಮ್ಮ ದೇಶದಲ್ಲಿ ತೀರಾ ದುರ್ಬಲವಾಗಿದೆ. ಬಡವರಿಗೊಂದು ನೀತಿ, ಶ್ರೀಮಂತರಿಗೊಂದು, ರಾಜಕಾರಣಿಗಳಿಗೊಂದು, ಪ್ರಭಾವಿಗಳಿಗೊಂದು ನೀತಿ ಎಂಬಂತೆ ನಮ್ಮಲ್ಲಿನ ಹೆಚ್ಚಿನ ಪೊಲೀಸ್ ಠಾಣೆಗಳು ವರ್ತಿಸುತ್ತವೆ. ನೀವು ಶ್ರೀಮಂತರಾಗಿದ್ದು, ಹಣ ನೀಡಲು ತಯಾರಿದ್ದೀರೆಂದರೆ ಎಂಥದ್ದೇ ಅಪರಾಧವನ್ನೂ ಮುಚ್ಚಿ ಹಾಕಲು ಸಾಧ್ಯವಿದೆ ಎಂಬ ವಾತಾವರಣವೊಂದು ದೇಶದಲ್ಲಿ ನಿರ್ಮಾಣವಾಗಿಬಿಟ್ಟಿದೆ. ಆದ್ದರಿಂದಲೇ, ಮೇಲಿನ ಎರಡೂ ಘಟನೆಗಳ ವ್ಯಕ್ತಿಗಳು ಲಂಚ ಕೊಟ್ಟು ಪ್ರಕರಣದಿಂದ ಪಾರಾಗುವ ದಾರಿಯನ್ನು ಕಂಡುಕೊಳ್ಳಲು ಯತ್ನಿಸಿದ್ದರು.
ಇನ್ನೊಂದು ಕಡೆ,
ಧರ್ಮವು ಬಾಹ್ಯ ಸಂಕೇತಗಳಿಗಷ್ಟೇ ಸೀಮಿತಗೊಳ್ಳತೊಡಗಿದೆ. ಧರ್ಮವೆಂದರೆ, ಮೌಲ್ಯಗಳ ಗೋದಾಮು ಎಂದರ್ಥ. ಪೊಲೀಸರು, ಸಿಸಿಟಿವಿಗಳು, ನ್ಯಾಯಾಲಗಳು ಮತ್ತು ಕಾನೂನುಗಳು ಇಲ್ಲದೇ ಇರುವ ಸಮಯದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯಸಂಧ ಬದುಕನ್ನು ನಡೆಸಲು ಪ್ರೇರಣೆ ನೀಡುವುದಕ್ಕೆ ವ್ಯಕ್ತಿಯನ್ನು ತರಬೇತುಗೊಳಿಸುವುದೇ ಧರ್ಮ. ಸುಳ್ಳು ಹೇಳಿದರೆ, ವಂಚಿಸಿದರೆ, ಅನ್ಯಾಯ ಎಸಗಿದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ... ಇತ್ಯಾದಿ ಸರ್ವ ಕೆಡುಕುಗಳಿಗೂ ದೇವನು ಶಿಕ್ಷೆ ನೀಡುತ್ತಾನೆ ಎಂಬ ಪ್ರಜ್ಞೆಯೊಂದಿಗೆ ಬದುಕುವುದನ್ನೇ ಧರ್ಮಗಳು ಕಲಿಸಿಕೊಡುತ್ತವೆ. ವಿಶೇಷ ಏನೆಂದರೆ,
ಈ ದೇಶದಲ್ಲಿ ಧರ್ಮಿಷ್ಠರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಮಸೀದಿಗಳಡಿ ಮಂದಿರವನ್ನು ಹುಡುಕುವಷ್ಟು ಮತ್ತು ಅನಾಥ ಆರಾಧನಾಲಯಗಳನ್ನು ಪುನರುಜ್ಜೀವನಗೊಳಿಸಿ ಆರಾಧನೆಗೆ ಅರ್ಹ ಮಾಡುವಷ್ಟು ಧಾರ್ಮಿಕತನ ಇಲ್ಲಿ ಕಾಣಿಸುತ್ತಿದೆ. ಹಿಂ ದಿಗಿಂತ ಹೆಚ್ಚಾಗಿ ಇವತ್ತು ಜನರು ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿದ್ದಾರೆ. ಆದರೆ, ಧರ್ಮ ಕಲಿಸುವ ಮೌಲ್ಯಗಳ ಪಾಲನೆಯಲ್ಲಿ ಮಾತ್ರ ದಿನೇ ದಿನೇ ಸೋರಿಕೆ ಹೆಚ್ಚಾಗುತ್ತಿದೆ. ಅತೀವ ಧರ್ಮನಿಷ್ಠ ಎಂದು ಗುರುತಿಸಿಕೊಂಡವರೇ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದನ್ನೂ ಮತ್ತು ಯಾವ ಅಪರಾಧಿ ಪ್ರಜ್ಞೆಯೂ ಇಲ್ಲದೆ ವರ್ತಿಸುವುದನ್ನೂ ನಾವು ನೋಡುತ್ತಿದ್ದೇವೆ.
ಇಸ್ಲಾಮ್ ಮನುಷ್ಯ ಸಂಬಂಧವನ್ನು ದೇವನೊಂದಿಗೆ ಜೋಡಿಸುತ್ತದೆ. ಮನುಷ್ಯನ ಪ್ರತಿ ಕ್ರಿಯೆಯೂ ದಾಖಲಿಸಲ್ಪಡುತ್ತದೆ ಮತ್ತು ಮರಣಾನಂತರ ದೇವನು ಅವನ್ನು ಎದುರಿಟ್ಟು ವಿಚಾರಿಸುತ್ತಾನೆ ಎಂಬು ದಾಗಿ ಇಸ್ಲಾಮ್ ಹೇಳುತ್ತದೆ. ಆದ್ದರಿಂದ ದೇವ ನೋಡುತ್ತಿದ್ದಾನೆ ಎಂಬ ಪ್ರಜ್ಞೆಯಿಂದಲೇ ಇಹಲೋಕ ದಲ್ಲಿ ಜೀವಿಸಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ವ್ಯಕ್ತಿ ಸುಧಾರಣೆಯಲ್ಲಿ ದೇವಭಯವನ್ನು ಪ್ರಬಲ ಅಸ್ತçವಾಗಿ ಪ್ರತಿಪಾದಿಸುವ ಇಸ್ಲಾಮ್, ಅಪರಾಧವನ್ನು ತಡೆಯುವುದಕ್ಕೆ ಇದನ್ನೇ ಪ್ರಬಲ ಆಯುಧವಾಗಿಯೂ ಪರಿಚಯಿಸುತ್ತದೆ. ಕಾನೂನುಗಳ ದೌರ್ಬಲ್ಯವನ್ನು ದುರುಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ‘ದೇವ ನೋಡುತ್ತಿದ್ದಾನೆ’ ಎಂಬ ಎಚ್ಚರಿಕೆಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ ಅಗತ್ಯ ಇದೆ.

No comments:
Post a Comment