ಒಂದುಕಡೆ, ಮುಸ್ಲಿಮ್ ರಾಷ್ಟ್ರಗಳೆಂದೇ ಅಧಿಕೃತವಾಗಿ ಗುರುತಿಸಿಕೊಂಡಿರುವ ಮತ್ತು ಮುಸ್ಲಿಮರೇ ಆಡಳಿತ ನಡೆಸುತ್ತಿರುವ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತಕ್ಕೆ ಉತ್ತಮ ಸಂಬಂಧ ಇದೆ. ಯುಎಇ, ಸೌದಿ, ಈಜಿಪ್ಟ್, ಬಹರೈನ್ ಸಹಿತ ವಿವಿಧ ಮುಸ್ಲಿಮ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿಯನ್ನೂ ನೀಡಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭೇಟಿ ನೀಡಿದ ರಾಷ್ಟçಗಳೂ ಇವೆ. ಕಳೆದ 43 ವರ್ಷಗಳಲ್ಲೇ ಭಾರತದ ಯಾವೊಬ್ಬ ಪ್ರಧಾನಿಯೂ ಭೇಟಿ ನೀಡದ ಕುವೈಟ್‌ಗೆ ಮೋದಿ ಭೇಟಿ ನೀಡುವ ಮೂಲಕ ಇತಿಹಾಸವನ್ನೂ ನಿರ್ಮಿಸಿz್ದÁರೆ. ಈ ಹಿಂದೆ ಪ್ರಿನ್ಸ್ ಚಾರ್ಲ್ಸ್, ಕ್ಲಿಂಟನ್, ಜಾರ್ಜ್ ಬುಶ್‌ಗೆ ನೀಡಲಾಗಿರುವ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಗೆ ನೀಡುವ ಮೂಲಕ ಕುವೈಟ್ ಉನ್ನತವಾಗಿಯೇ ಗೌರವಿಸಿದೆ. ಇಷ್ಟೇ ಅಲ್ಲ,
ಬಹುದೊಡ್ಡ ಸಂಖ್ಯೆಯ ಭಾರತೀಯರಿಗೆ ಈ ರಾಷ್ಟ್ರಗಳು ಉದ್ಯೋಗವನ್ನೂ ನೀಡಿ ಪೊರೆದಿವೆ. ಕೇವಲ ಯುಎಇ ಒಂದೇ ಸುಮಾರು 36 ಲಕ್ಷದಷ್ಟು ಭಾರತೀಯರಿಗೆ ಉದ್ಯೋಗ ನೀಡಿದೆ. ಇವರಲ್ಲಿ 9 ಲಕ್ಷ ಮಂದಿ ಹಿಂದೂಗಳು. 24 ಲಕ್ಷ ಮಂದಿ ಭಾರತೀಯರಿಗೆ ಉದ್ಯೋಗ ನೀಡಿರುವ ಸೌದಿಯು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ 24 ಲಕ್ಷದಲ್ಲಿ 7 ಲಕ್ಷ ಮಂದಿ ಹಿಂದೂ ಗಳಿದ್ದಾರೆ. ಕುವೈಟ್ 10 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿದ್ದರೆ, ಒಮಾನ್ ಸುಮಾರು 7 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿದೆ. ಕತಾರ್ ಸುಮಾರು ಒಂದು ಲಕ್ಷ ಮಂದಿ ಭಾರತೀಯರಿಗೆ ಜೀವನಾಧಾರ ನೀಡಿದ್ದರೆ, ಬಹರೈನ್ ಸುಮಾರು ಮೂರೂವರೆ ಲಕ್ಷ ಮಂದಿಗೆ ಜೀವನಾಧಾರ ನೀಡಿದೆ. ಇದರಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ ಹಿಂದೂಗಳಿದ್ದಾರೆ. ಹಾಗಂತ,
ಮುಸ್ಲಿಮ್ ಎಂದೇ ತಮ್ಮನ್ನು ಕರೆಸಿಕೊಳ್ಳುತ್ತಿರುವ ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈ ರಾಷ್ಟ್ರಗಳಲ್ಲಿ ಧರ್ಮ, ಆಹಾರ, ಆರಾಧನೆಯ ಕಾರಣಕ್ಕಾಗಿ ಒಬ್ಬನೇ ಒಬ್ಬ ಹಿಂದೂ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಅಲ್ಲಿನ ಹಿಂದೂಗಳ ಮೇಲೆ ಸಾಮೂಹಿಕ ಥಳಿತ ನಡೆಯುತ್ತಿಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿಂದೂ ವ್ಯಕ್ತಿಯನ್ನು ಎತ್ತಿಕೊಂಡು ಅಲ್ಲಿರುವ ಇಡೀ ಹಿಂದೂಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸನ್ನಿವೇಶಗಳೂ ನಡೆದಿಲ್ಲ. ಹಿಂದೂಗಳ ವಿರುದ್ಧ ಯಾರೂ ಭಾಷಣ ಮಾಡುವುದಿಲ್ಲ. ಭಗವದ್ಗೀತೆಯನ್ನೋ ಹಿಂದೂ ಪುರಾಣಗಳನ್ನೋ ಎತ್ತಿಕೊಂಡು ಯಾರೂ ಅವಮಾನಕರ ಹೇಳಿಕೆ ನೀಡುವುದಿಲ್ಲ. ಇವುಗಳ ಇಷ್ಟನೇ ಪುಟದಲ್ಲಿರುವ ಇಂತಿಂಥ ಶ್ಲೋಕಗಳು ಮತ್ತು ಮಾಹಿತಿಗಳು ಹೇಗೆ ಇಸ್ಲಾಮ್ ವಿರೋಧಿ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಿಲ್ಲ. ಹಿಂದೂ ವಿರೋಧಿ ಅಭಿಯಾನವನ್ನು ಯಾರೂ ಕೈಗೊಳ್ಳುವುದಿಲ್ಲ. ಹಿಂದೂಗಳಿಗೆ ಮನೆ ನೀಡುವುದಿಲ್ಲ, ಹಿಂದೂಗಳಿಗೆ ಉದ್ಯೋಗ ನೀಡುವುದಿಲ್ಲ, ಹಿಂದೂಗಳೊಂದಿಗೆ ವ್ಯಾಪಾರ ನಡೆಸುವು ದಿಲ್ಲ.. ಎಂದೆಲ್ಲಾ ಯಾರೂ ಹೇಳುವುದೂ ಇಲ್ಲ. ಅಲ್ಲಿಯ ಧರ್ಮಗುರುಗಳು ಹಿಂದೂ ವಿರೋಧಿ ಭಾಷಣ ಮಾಡುವುದಿಲ್ಲ. ಶಾಲೆಯಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ, ಸರಕಾರಿ ಕಚೇರಿಗಳಲ್ಲಾಗಲಿ ಅಥವಾ ನ್ಯಾಯಾಲಯಗಳಲ್ಲೇ ಆಗಲಿ, ಹಿಂದೂ-ಮುಸ್ಲಿಮ್ ಎಂಬ ಬೇಧವನ್ನೂ ಮಾಡುವುದಿಲ್ಲ. ನಿಜವಾಗಿ,
ಇವೆಲ್ಲ ಔದಾರ್ಯವಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕಾದ ಜವಾಬ್ದಾರಿ ಆಯಾ ರಾಷ್ಟ್ರಗಳ ಬಹುಸಂಖ್ಯಾತರದ್ದು. ಒಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತತೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದರೆ, ಅದು ಅಲ್ಲಿನ ಬಹುಸಂಖ್ಯಾತರ ವೈಫಲ್ಯವಾಗಿ ಮತ್ತು ಅವರ ಪಾಲಿನ ನಾಚಿಕೆಗೇಡಿನ ಸಂಗತಿಯಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾತ ಹಿಂದೂಗಳಿಗೆ ಸಂಬಂಧಿಸಿಯೂ ಇವೇ ಮಾತು ನೂರು ಶೇಕಡಾ ಅನ್ವಯವಾಗುತ್ತದೆ. ಆದರೆ,
ಪಾಕಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು ಸುರಕ್ಷಿತವಾಗಿರಬೇಕೆಂದು ಬಯ ಸುವ ಮತ್ತು ಅದಕ್ಕಾಗಿ ಧ್ವನಿಯೆತ್ತುವ ಮೋದಿ ಸರಕಾರ, ಭಾರತದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರ ಬಗ್ಗೆ ಅಸಹನೆಯಿಂದ ವರ್ತಿಸುತ್ತಿದೆ. ಹರ್ಯಾಣದ ಅರ್ಮಾನ್ ಖಾನ್ ಸೇರಿದಂತೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ಪ್ರತಿ ನಿತ್ಯವೆಂಬಂತೆ ದೌರ್ಜನ್ಯ ನಡೆಸುತ್ತಿರುವ ದುಷ್ಕರ್ಮಿಗಳ ಗುಂಪನ್ನು ಪ್ರಚೋದಿ ಸುತ್ತಿರುವ ಚಿಂತನೆ ಯಾವುದು ಎಂಬುದು ರಹಸ್ಯವೇನಲ್ಲ. ಈ ದುಷ್ಕರ್ಮಿಗಳು ಯಾವ ರಾಜಕೀಯ ಪಕ್ಷದ ಬೆಂಬಲಿಗರು ಎಂಬುದೂ ರಹಸ್ಯವಲ್ಲ. ದ್ವೇಷ ಭಾಷಣ ಮಾಡುವ, ಕುರ್‌ಆನನ್ನು ಮತ್ತು ಪ್ರವಾದಿಯನ್ನು(ಸ) ಸಾರ್ವಜನಿಕವಾಗಿಯೇ ಅವಮಾನಿಸುವ ಮತ್ತು ಮಸೀದಿಗಳ ಅಡಿಯಲ್ಲಿ ಮಂದಿರ ವನ್ನು ಹುಡುಕುವವರಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನ್ನು ಫಾಲೋ ಮಾಡುವವರು ಎಂಬುದೂ ರಹಸ್ಯವಲ್ಲ. ಸ್ವತಃ ಪ್ರಧಾನಿಯವರೇ ಚುನಾವಣೆಯ ಸಮಯದಲ್ಲಿ ಈ ದುಷ್ಕರ್ಮಿಗಳ ಭಾಷೆಯಲ್ಲೇ ಮಾತಾಡಿದ್ದೂ ಇದೆ. ಕುವೈಟ್ ಸರಕಾರದಿಂದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡ ಇದೇ ಪ್ರಧಾನಿಯ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವರೂ ಇಲ್ಲ. ಲೋಕಸಭೆಯಲ್ಲಿರುವ ಇವರ ಪಕ್ಷದ 243 ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನೂ ಇಲ್ಲ. ಪೂರ್ಣ ಬಹುಮತದೊಂದಿಗೆ 13 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಒಂದೇ ಒಂದು ರಾಜ್ಯದಲ್ಲಿ ಮುಸ್ಲಿಮರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂದು ಮಾತ್ರವಲ್ಲ, ಸಂಪುಟಕ್ಕೂ ಸೇರಿಸಿಕೊಂಡಿಲ್ಲ. ಇವೆಲ್ಲ ಕುವೈಟ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿಗೆ ಗೊತ್ತಿರಲೇಬೇಕು. ವಿಷಾದ ಏನೆಂದರೆ,
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯವನ್ನು ಮೋದಿ ಸರಕಾರ ಅಧಿಕೃತವಾಗಿಯೇ ಪ್ರಶ್ನಿಸುತ್ತದೆ. ತನ್ನ ಪ್ರತಿನಿಧಿಯನ್ನೂ ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟು ಪ್ರತಿಭಟನೆ ಸಲ್ಲಿಸುತ್ತದೆ. ಹಾಗಂತ, ಇದು ತಪ್ಪು ಎಂದಲ್ಲ. ಇದು ಆಗಲೇಬೇಕು. ಆದರೆ, ತನ್ನದೇ ನೆಲದ ಅಲ್ಪಸಂಖ್ಯಾತರನ್ನು ದೌರ್ಜನ್ಯಕ್ಕೆ ತುತ್ತಾಗಲು ಬಿಟ್ಟು ಮತ್ತು ದುಷ್ಕರ್ಮಿಗಳಿಗೆ ರಾಜಕೀಯ ಆಶ್ರಯವನ್ನು ನೀಡುತ್ತಾ ಇನ್ನೊಂದು ರಾಷ್ಟ್ರದ ಅಲ್ಪಸಂಖ್ಯಾತರಿಗಾಗಿ ಧ್ವನಿಯೆತ್ತುವುದು ಮಾತ್ರ ದ್ವಂದ್ವವಾಗಿ ಕಾಣುತ್ತದೆ. ಇತರ ರಾಷ್ಟ್ರಗಳು ಮತ್ತು ಅಲ್ಲಿನ ನಾಗರಿಕರು ನ್ಯಾಯದ ಪರ ನಿಲ್ಲಬೇಕು ಮತ್ತು ನ್ಯಾಯಯುತವಾಗಿ ನಡಕೊಳ್ಳಬೇಕು ಎಂದು ಬಯಸುವ ಪ್ರಭುತ್ವವೊಂದು ಸ್ವಯಂ ಅನ್ಯಾಯವಾಗಿ ನಡಕೊಳ್ಳುತ್ತದೆಂದರೆ ಮತ್ತು ತನ್ನ ಬೆಂಬಲಿಗರನ್ನು ಅನ್ಯಾಯಕ್ಕೆ ಪ್ರಚೋದಿಸುತ್ತದೆಂದರೆ, ಅದನ್ನು ಬೂಟಾಟಿಕೆಯೆಂದಲ್ಲದೇ ಇನ್ನೇನೆಂದು ಕರೆಯಬೇಕು? ಅಂದಹಾಗೆ,
ಯಾವುದೇ ರಾಷ್ಟ್ರ ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕಾದರೆ ಆ ದೇಶದ ನಾಗರಿಕರು ಭಯರಹಿತ ಮತ್ತು ಸುರಕ್ಷಿತ ಭಾವವ ನ್ನು ಹೊಂದಬೇಕಾದುದು ಬಹಳ ಅಗತ್ಯ. ಸದಾ ಘರ್ಷಣೆಯ ವಾತಾವರಣ ಇರುವ ಮತ್ತು ಅಸುರಕ್ಷಿತವಾಗಿರುವ ಯಾವ ದೇಶದಲ್ಲೂ ಯಾವ ಕಂಪೆನಿಗಳೂ ಹೂಡಿಕೆ ಮಾಡುವುದಿಲ್ಲ. ಯಾವುದೇ ಉದ್ಯಮಿ ಹಣ ಹೂಡುವ ಮೊದಲು ಆ ರಾಷ್ಟ್ರ ಸುರಕ್ಷಿತವಾಗಿದೆಯೇ ಎಂಬುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಯುಎಇ, ಕತಾರ್, ಸೌದಿ, ಕುವೈಟ್‌ಗಳೆಲ್ಲ ಇವತ್ತು ಅತ್ಯಂತ ವೇಗವಾಗಿ ಬೆಳೆದಿರುವ ಮತ್ತು ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ಬದಲಾಗಿರುವುದರ ಹಿಂದೆ ಈ ಸುರಕ್ಷಿತ ವಾತಾವರಣಕ್ಕೆ ಮೊದಲ ಸ್ಥಾನವಿದೆ. ಅಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತ ನಡೆಸುವುದಿಲ್ಲ. ಕೋಮುಗಲಭೆಗಳಿಗೆ ಜಾಗವಿಲ್ಲ. ದ್ವೇಷ ಭಾಷಣಕ್ಕೆ ಅವಕಾಶವೇ ಇಲ್ಲ. ಧರ್ಮ ನೋಡದೇ ದುಷ್ಕರ್ಮಿಗಳು ಮತ್ತು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಅಲ್ಲಿನ ಪ್ರಭುತ್ವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ಆ ಕಾರಣದಿಂದಲೇ ಹಿಂದೂಗಳೂ ಮುಸ್ಲಿಮರೂ ಈ ರಾಷ್ಟçಗಳಲ್ಲಿ ಉದ್ಯೋಗ ಮಾಡುವುದನ್ನು ಬಯಸುತ್ತಾರೆ. ಕಂಪೆನಿಗಳೂ ಇಂಥದ್ದೇ ವಾತಾವಣವನ್ನು ಬಯಸುತ್ತವೆ. ಆದ್ದರಿಂದ,
ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕೆಂದು ಬಯಸುವ ಭಾರತವು ಮೊದಲಾಗಿ ಇಲ್ಲಿನ ಧರ್ಮದ್ವೇಷಿಗಳನ್ನು ಮಟ್ಟ ಹಾಕಬೇಕಾಗಿದೆ. ದುಷ್ಕಮಿಗಳಿಗೆ ಧರ್ಮ ಇಲ್ಲ ಎಂಬ ಪ್ರಬಲ ಸಂದೇಶವನ್ನು ಸಾರಬೇಕಾಗಿದೆ. ಕುವೈಟ್‌ನಿಂದ ಪ್ರಶಸ್ತಿ ಸ್ವೀಕರಿಸಿಕೊಂಡು ಮರಳಿರುವ ಪ್ರಧಾನಿ ಮೋದಿಯವರ ಕಣ್ಣು ತೆರೆಸಲು ಅರ್ಮಾನ್ ಖಾನ್ ಯಶಸ್ವಿಯಾಗಲಿ ಎಂದು ಹಾರೈಸೋಣ.
.jpg)
No comments:
Post a Comment