Monday, 4 July 2016

ಕುದಿಯುವ ಜೋಡಿಗಳು ಮತ್ತು ನಿಡುಸುಯ್ಯುವ ರಸ್ತೆಗಳು

      ವಿವಾಹ ವಿಚ್ಛೇದನ ಮತ್ತು ರಸ್ತೆ ಅಪಘಾತ ಎಂಬೆರಡು ಪದಗಳಿಗೆ ಪಾರಂಪಾರಿಕ ನಂಟೇನೂ ಇಲ್ಲ. ಅಲ್ಲದೇ ಇವೆರಡೂ ಪದಗಳು ಪ್ರತಿನಿಧಿಸುವ ಕ್ಷೇತ್ರಗಳೇ ಬೇರೆ ಮತ್ತು ಇವು ಸಾಮಾಜಿಕವಾಗಿ ಬೀರುವ ಪರಿಣಾಮಗಳೇ ಬೇರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ಎಷ್ಟು ಹತ್ತಿರದ ಸಂಬಂಧವನ್ನು ಹೊಂದಿವೆಯೆಂದರೆ, ಇವು ಒಂದೇ ಮನೆಯ ಸದಸ್ಯರೋ ಎಂದು ಅನುಮಾನಿಸುವಷ್ಟೂ ನಿಕಟವಾಗಿವೆ. ಮಾಧ್ಯಮಗಳ ಒಂದು ಪುಟದಲ್ಲಿ ಅಪಘಾತದ ಸುದ್ದಿಯಿದ್ದರೆ ಇನ್ನೊಂದು ಪುಟದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಅಥವಾ ವಿವಾಹ ವಿಚ್ಛೇದನ ಪಡಕೊಂಡ ಸುದ್ದಿಯಿರುತ್ತದೆ. ಸದ್ಯ ಟೊಮೆಟೊ, ಬೇಳೆಕಾಳುಗಳ ಬೆಲೆ ಏರಿಕೆಗಳಿಗಿಂತಲೂ ವೇಗವಾಗಿ ಇವೆರಡರ ಅಂಕಿ-ಸಂಖ್ಯೆಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಅತ್ಯಂತ ಹೆಚ್ಚು ಪ್ರಗತಿ ದರವನ್ನು ದಾಖಲಿಸುತ್ತಿರುವ ಎರಡು ಕ್ಷೇತ್ರಗಳಿವು. 2015ರಲ್ಲಿ ಒಟ್ಟು 1,46,133 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮಂತ್ರಾಲಯ ಬಿಡುಗಡೆಗೊಳಿಸಿದ ವಿವರಗಳೇ ಹೇಳುತ್ತವೆ. 2014ರಲ್ಲಿ ಈ ಸಾವುಗಳ ಸಂಖ್ಯೆ 1,39,671. ಅಂದರೆ, ಒಂದೇ ವರ್ಷದಲ್ಲಿ 1462 ಮಂದಿ ಈ ಸಾವಿನ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾ ರೆ. ಪ್ರತಿದಿನ ಸುಮಾರು 400ರಷ್ಟು ಮಂದಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ 10ರಲ್ಲಿ 8 ಅಪಘಾತಗಳಿಗೆ ಚಾಲಕರೇ ಕಾರಣ ಎಂದು ವರದಿ ಹೇಳುತ್ತಿದೆ. ಇದರಲ್ಲಿ 62% ಅಪಘಾತಗಳಿಗೆ ಅತೀ ವೇಗವೇ ಕಾರಣವಾಗಿದೆ. ಹಾಗಂತ, ಈ ರಸ್ತೆ ಅಪಘಾತಕ್ಕೆ ಹೋಲಿಸಿದರೆ ಕೌಟುಂಬಿಕ ಅಪಘಾತ(ವಿಚ್ಛೇದನ)ಗಳ ವಿವರ ಕಡಿಮೆ ಆಘಾತಕಾರಿಯೇನೂ ಅಲ್ಲ. ಕೇವಲ ಕೇರಳ ರಾಜ್ಯವೊಂದರಲ್ಲಿಯೇ ವರ್ಷಕ್ಕೆ 47,525 ವಿಚ್ಛೇದನಗಳು ನಡೆಯುತ್ತಿವೆ ಎಂದು ಸ್ವತಃ ಕೇಂದ್ರ ಸರಕಾರವೇ ಲೋಕಸಭೆಗೆ ಮಾಹಿತಿ ನೀಡಿದೆ. ಅಲ್ಲಿ ಪ್ರತಿ ಗಂಟೆಗೆ 5 ವಿಚ್ಛೇದನ ಪ್ರಕರಣಗಳು ನಡೆಯುತ್ತವೆ. ದಿನಕ್ಕೆ 130 ವಿಚ್ಛೇದನ ಪ್ರಕರಣಗಳು!
  ಅಷ್ಟಕ್ಕೂ, ವಿವಾಹವಾಗುವುದೇ ವಿಚ್ಛೇದನ ಪಡಕೊಳ್ಳುವುದಕ್ಕೆ ಎಂಬ ರೀತಿಯ ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಏನು ಕಾರಣ? ನರಮೇಧವೇ ರಸ್ತೆಗಳ ಪ್ರಮುಖ ಉದ್ದೇಶವಾಗಿರುವುದೇಕೆ? ಕಳೆದವಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 8 ಪುಟ್ಟ ಶಾಲಾ ಮಕ್ಕಳ ‘ರಸ್ತೆಮೇಧ’ ನಡೆಯಿತು. ರಸ್ತೆಗಂಟಿದ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಟಿಫಿನು, ಬ್ಯಾಗುಗಳ ಬರೇ ಚಿತ್ರವನ್ನು ನೋಡಿದವರ ಕಣ್ಣುಗಳೂ ಆದ್ರ್ರವಾದುವು. ಹಾಗಂತ, ರಸ್ತೆಯನ್ನು ಶಿಕ್ಷಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದಲೇ, ಕುಂದಾಪುರದ ನಾಗರಿಕರು ಒಂದು ದಿನ ಬಂದ್ ಆಚರಿಸುವ ಮೂಲಕ ಸ್ವಯಂ ತಮ್ಮನ್ನೇ ಶಿಕ್ಷಿಸಿಕೊಂಡರು. ಈಗ ಎಲ್ಲವೂ ಸಹಜವಾಗಿದೆ. ರಸ್ತೆ ಇದ್ದಲ್ಲಿಯೇ ಇದೆ ಮತ್ತು ಇದ್ದಂತೆಯೇ ಇದೆ. ಮಕ್ಕಳು ಶಾಲೆಗೆ ಹೋಗತೊಡಗಿದ್ದಾರೆ. ವಾಹನಗಳ ವೇಗವೂ ಏರತೊಡಗಿದೆ. ಮಕ್ಕಳನ್ನು ಕಳಕೊಂಡ ಹೆತ್ತವರಿಗೆ ಸಕಲ ಸಂಕಟವನ್ನೂ ವರ್ಗಾಯಿಸಿ ಎಲ್ಲರೂ ಮುಂದೆ ಸಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಅಪಘಾತ ಮತ್ತು ವಿಚ್ಛೇದನಗಳ ನಡುವೆ ಇರುವ ದೊಡ್ಡ ಸಾಮ್ಯತೆ ಇದು. ಎರಡರಲ್ಲೂ ಅತೀವ ವೇದನೆಯಿದೆ. ಅಷ್ಟೇ ದೂರುಗಳೂ ಇವೆ. ಇವೆರಡೂ ಮನೆಯ ಸಂತಸವನ್ನು ಕಿತ್ತುಕೊಳ್ಳುತ್ತದೆ. ಒಂದಷ್ಟು ಮಂದಿಯನ್ನು ಅನಾಥರಾಗಿಸುತ್ತದೆ. ಆಸ್ಪತ್ರೆ-ಕೋರ್ಟು ಎಂದೆಲ್ಲಾ ಅಲೆದಾಡಿಸುತ್ತದೆ. ದುಡ್ಡಿನ ಜೊತೆಗೆ ನೆಮ್ಮದಿಯನ್ನೂ ಕಿತ್ತುಕೊಳ್ಳುತ್ತದೆ.
  ಭಾರತದಲ್ಲಿ ಮದುವೆಯನ್ನು ಜನ್ಮಾಂತರಗಳ ಸಂಬಂಧವಾಗಿ ಗೌರವಿಸಲಾಗುತ್ತದೆ. ಮದುವೆ ಬರೇ ಹೆಣ್ಣು-ಗಂಡಿನ ನಡುವಿನ ಖಾಸಗಿ ವ್ಯವಹಾರವಲ್ಲ. ಅದಕ್ಕೊಂದು ಸಾಮಾಜಿಕ ಆಯಾಮವಿದೆ. ಗಂಡು-ಹೆಣ್ಣಿಗೆ ಒಂದಷ್ಟು ಜವಾಬ್ದಾರಿಯನ್ನು ಅದು ವಹಿಸಿಕೊಡುತ್ತದೆ. ಅಪರಿಚಿತರಾಗಿರುವ ಎರಡು ಕುಟುಂಬಗಳನ್ನು ಪರಿಚಿತ ಮತ್ತು ಅನ್ಯೋನ್ಯಗೊಳಿಸುತ್ತದೆ. ಪರಸ್ಪರರಿಗಾಗಿ ಮರುಗುವ ಮತ್ತು ಸ್ಪಂದಿಸುವ ಸನ್ನಿವೇಶವನ್ನು ನಿರ್ಮಿಸುತ್ತದೆ. ಮದುವೆಯು ತನ್ನ ಒಡಲಲ್ಲಿ ಹುದುಗಿಸಿರುವ ಸಾಮಾಜಿಕ ಅಗತ್ಯಗಳನ್ನು ಪಟ್ಟಿ ಮಾಡುವುದಾದರೆ ಅದರಲ್ಲಿ ಹೆಣ್ಣು-ಗಂಡಿನ ದೈಹಿಕ ಆಕರ್ಷಣೆಗೆ ಮೊದಲ ಸ್ಥಾನ ಸಿಗುವ ಸಾಧ್ಯತೆಯೇನೂ ಇಲ್ಲ. ಪ್ರಾಯ ಸಹಜವಾದ ಆಕರ್ಷಣೆ ಎಂಬ ಕವಚದೊಳಗೆ ಹತ್ತಾರು ಜವಾಬ್ದಾರಿಗಳನ್ನು ತುಂಬಿ ಪ್ರಕೃತಿ ಹೆಣ್ಣು-ಗಂಡನ್ನು ಒಂದಾಗಿಸುತ್ತದೆ. ಆದರೆ ಇವತ್ತಿನ ಆಧುನಿಕ ಜೀವನ ಕ್ರಮಗಳು ಈ ಸೂತ್ರವನ್ನು ನಿರ್ಲಕ್ಷಿಸಲು ಪ್ರಚೋದಿಸುತ್ತಿವೆಯೇನೋ ಎಂಬ ಅನುಮಾನ ಮೂಡುತ್ತಿದೆ. ಇಲ್ಲಿ ಜವಾಬ್ದಾರಿಗಿಂತ ದೈಹಿಕ ಆಕರ್ಷಣೆಯೇ ಪ್ರಾಮುಖ್ಯತೆಯನ್ನು ಪಡೆಯುತ್ತಿರುವಂತೆ ತೋರುತ್ತಿದೆ. 2005ರಿಂದ 2010ರ ವರೆಗೆ ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ಅರ್ಜಿಗಳನ್ನು ತುರ್ತಾಗಿ ಬಗೆಹರಿಸುತ್ತಿರಲಿಲ್ಲ. ಮನವೊಲಿಸುವಿಕೆ, ಆಪ್ತ ಸಮಾಲೋಚನೆ ಮುಂತಾದುವುಗಳ ಮೂಲಕ ಪರಸ್ಪರರನ್ನು ಹತ್ತಿರ ತರಿಸುವ ಪ್ರಯತ್ನಗಳಿಗೆ ಆದ್ಯತೆಯನ್ನು ನೀಡುತ್ತಿತ್ತು. ಆದರೆ ಇವತ್ತು ಹೀಗೆ ಕಾಯುವ ಸಹನೆಯನ್ನು ಪತಿ-ಪತ್ನಿ ತೋರುತ್ತಿಲ್ಲ ಎಂಬ ದೂರಿದೆ. ತಾಳ್ಮೆಯೇ ಇಲ್ಲದ ಮತ್ತು ಕಾಯುವಿಕೆಗೆ ಒಪ್ಪದ ಎರಡು ಸಿಡಿಯುವ ಜೀವಗಳನ್ನು ಹೆಚ್ಚಿನ ಕುಟುಂಬ ನ್ಯಾಯಾಲಯಗಳು
ಎದುರಿಸಬೇಕಾಗುತ್ತವೆ. ಇವತ್ತೇ, ಈಗಲೇ ವಿಚ್ಛೇದನ ಬೇಕೆಂದು ಆಗ್ರಹಿಸಿ ನ್ಯಾಯಾಲಯಗಳ ಬಾಗಿಲು ತಟ್ಟುವ ಪ್ರಕರಣಗಳು ಅಧಿಕವಾಗುತ್ತಿರುವುದರಿಂದ ಒಂದೇ ಸಮನೆ ವಿಚ್ಛೇದನ ತೀರ್ಪುಗಳು ಹೊರಬೀಳುತ್ತಿವೆ ಎಂಬ ವಾದವೂ ಇದೆ. ಗಂಡು-ಹೆಣ್ಣು ಇಬ್ಬರೂ ದುಡಿಯಬೇಕಾದ ಒತ್ತಡ, ಮನೆ ನಿರ್ವಹಣೆಯಲ್ಲಿ ತಲೆದೋರುವ ಭಿನ್ನಾಭಿಪ್ರಾಯ, ವಾಟ್ಸ್ಯಾಪ್‍ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದಾಗಿ ಉಂಟಾಗುವ ಮನಸ್ತಾಪ, ಅಹಂ, ಸ್ವತಂತ್ರವಾಗಿ ಜೀವಿಸಲು ಧೈರ್ಯ ತುಂಬುವ ಉದ್ಯೋಗ ಭದ್ರತೆ.. ಇತ್ಯಾದಿ ಅನೇಕಾರು ಅಂಶಗಳು ಹೆಣ್ಣು-ಗಂಡನ್ನು ಪ್ರತ್ಯೇಕಿಸುವಲ್ಲಿ ಇವತ್ತು ಪ್ರಮುಖ ಪಾತ್ರ ವಹಿಸುತ್ತಿವೆ. ಇಂಥ ಸಂದರ್ಭಗಳಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕುವುದು ಮಕ್ಕಳು. ಅವರು ಈ ಜಗಳದಲ್ಲಿ ಬಹುತೇಕ ಕಾಲ್ಚೆಂಡು ಆಗುವುದೇ ಹೆಚ್ಚು. ವರ್ಷಂಪ್ರತಿ ಆಗುವ ಲಕ್ಷಾಂತರ ವಿಚ್ಛೇದನ ಪ್ರಕರಣಗಳಲ್ಲಿ ಸೃಷ್ಟಿಯಾಗುವ ಇಂಥ ಕಾಲ್ಚೆಂಡು ಮಕ್ಕಳ ಸಂಖ್ಯೆಯನ್ನೊಮ್ಮೆ ಊಹಿಸಿ. ಒಂದೋ ತಾಯಿಯ ಬಳಿ ಅಥವಾ ತಂದೆಯ ಬಳಿ ಅವರು ಇರಬೇಕಾಗುತ್ತದೆ. ತಂದೆ ಕರೆದಾಗ ಅತ್ತ ಹೋಗಬೇಕು. ನಿಗದಿತ ಅವಧಿಯೊಳಗೆ ತಾಯಿ ಬಳಿ ಬರಬೇಕು. ಇಂಥ ವಾತಾವರಣ ಮಗುವನ್ನು ಹೇಗೆ ತಯಾರುಗೊಳಿಸಬಹುದು? ಮಗುವಿನ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನೇನು?  
        ವಿಚ್ಛೇದನ ಮತ್ತು ಅಪಘಾತಗಳೆರಡೂ ಅಂತಿಮವಾಗಿ ಉಳಿಸಿ ಹೋಗುವುದು ಕೆಲವು ಕಹಿ ಸ್ಮರಣೆಗಳನ್ನು. ಆರೋಗ್ಯಪೂರ್ಣ ಸಮಾಜದ ದೃಷ್ಟಿಯಿಂದ ನೋಡುವುದಾದರೆ ಇವೆರಡೂ ಅತ್ಯಂತ ಅನಪೇಕ್ಷಿತ ಮತ್ತು ಬಹುತೇಕ ಮಾನವ ನಿರ್ಮಿತ ಸುದ್ದಿಗಳು. ರಸ್ತೆ ಹೇಗೆ ಮನುಷ್ಯರಿಗಾಗಿ ನಿರ್ಮಾಣಗೊಂಡಿದೆಯೋ ಹಾಗೆಯೇ ಮದುವೆ ಕೂಡ ಮನುಷ್ಯರ ಹಿತದೃಷ್ಟಿಯಿಂದಲೇ ರೂಪು ಪಡೆದಿದೆ. ಆದರೆ ಇವತ್ತು ಇವೆರಡೂ ಮನುಷ್ಯರ ನೆಮ್ಮದಿಗೆ ಭಂಗ ತರುವ ಕ್ಷೇತ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ. ಮನುಷ್ಯರೇ ತಮ್ಮಂತಹ ಇತರರ ‘ರಸ್ತೆಮೇಧ’ ನಡೆಸುತ್ತಿದ್ದಾರೆ. ಮನುಷ್ಯರೇ ತಮ್ಮ ನಡುವಿನ ಮನಸ್ತಾಪಕ್ಕೆ ಮಕ್ಕಳನ್ನು ಬಲಿ ಕೊಡುತ್ತಿದ್ದಾರೆ. ಮನುಷ್ಯ ರಸ್ತೆಯಲ್ಲಿ ಮಾಡುವ ಬೇಜವಾಬ್ದಾರಿಗೆ ಜೀವಗಳೇ ಹರಣವಾದರೆ ವೈವಾಹಿಕ ಜೀವನದಲ್ಲಿ ಮಾಡುವ ತಪ್ಪುಗಳಿಗೆ ಒಂದು ಪೀಳಿಗೆಯ ಭವಿಷ್ಯವೇ ಕಮರಿ ಹೋಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮನುಷ್ಯರೇ ಹುಟ್ಟು ಹಾಕಿರುವ ಮತ್ತು ಮಾನವ ನಿರ್ಮಿತ ಕಾರಣಗಳೇ ಅಧಿಕವಾಗಿರುವ ಈ ಎರಡೂ ಅಪಘಾತಗಳನ್ನು ತಡೆಗಟ್ಟುವ ಶ್ರಮ ತೀವ್ರಗತಿಯಲ್ಲಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮದುವೆಗೂ ಮತ್ತು ವಾಹನ ಸಂಚಾರಕ್ಕೂ ಜನರು ಹಿಂದೇಟು ಹಾಕುವಂತಹ ಸನ್ನಿವೇಶ ನಿರ್ಮಾಣವಾಗಬಹುದು ಅಥವಾ ಈಗಿನ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರಸ್ತೆ ಮತ್ತು ಮದುವೆ ಅಪಘಾತಗಳು ನಡೆಯಬಹುದು. ಉತ್ತಮ ಸಮಾಜದ ದೃಷ್ಟಿಯಿಂದ ಇವೆರಡೂ ಅಪಾಯಕಾರಿ.



Thursday, 23 June 2016

ಚೂರಿಯನ್ನು ಜೇಬೊಳಗಿಟ್ಟವರು ಮತ್ತು ಪದೇ ಪದೇ ಇರಿತಕ್ಕೊಳಗಾಗುವವರು..


     ಕಳೆದವಾರ ಫ್ರಾನ್ಸ್ ನ ನೇತೃತ್ವದಲ್ಲಿ 29 ರಾಷ್ಟ್ರಗಳು ಒಟ್ಟು ಸೇರಿ ನಡೆಸಿದ ಸಭೆಯ ಬಗ್ಗೆ ಫೆಲೆಸ್ತೀನ್ ವ್ಯಕ್ತಪಡಿಸಿರುವ ನಿರಾಶಾಜನಕ ಪ್ರತಿಕ್ರಿಯೆಯೇ ಅದರ ಸದ್ಯದ ಸ್ಥಿತಿ-ಗತಿಯನ್ನು ಹೇಳುತ್ತದೆ. ಫೆಲೆಸ್ತೀನಿಯರು ಯಾರ ಮೇಲೂ ನಂಬಿಕೆ ಇಡದಷ್ಟು ವಿಶ್ವಾಸ ದ್ರೋಹಕ್ಕೆ ಒಳಗಾಗಿದ್ದಾರೆ. ಗೆಳೆಯರ ವೇಷ ತೊಟ್ಟವರಲ್ಲಿ ಹೆಚ್ಚಿನವರೂ ಇರಿದಿದ್ದಾರೆ. ‘ಶಾಂತಿ ಮಾತುಕತೆ’, ‘ಶಾಂತಿ ಸಭೆ’, ‘ಶಾಂತಿ ಒಪ್ಪಂದ’.. ಮುಂತಾದುವುಗಳೆಲ್ಲ ಅವರನ್ನು ಎಷ್ಟರ ಮಟ್ಟಿಗೆ ಸಿನಿಕತನಕ್ಕೆ ತಳ್ಳಿಬಿಟ್ಟಿದೆಯೆಂದರೆ, ಇವೆಲ್ಲ ಫೆಲೆಸ್ತೀನನ್ನು ಇಂಚಿಂಚಾಗಿ ಇಸ್ರೇಲಿಗೆ ಒಪ್ಪಿಸಿಬಿಡುವ ಪ್ರಕ್ರಿಯೆಯ ಜಾಣ ನಡೆ ಎಂದೇ ಅಂದುಕೊಳ್ಳುವಷ್ಟು. ಆದ್ದರಿಂದಲೇ, ಕಳೆದ ವಾರ ಫ್ರಾನ್ಸ್ ನೇತೃತ್ವದಲ್ಲಿ ನಡೆದ 29 ರಾಷ್ಟ್ರಗಳ ಸಭೆಯಲ್ಲಿ ಫೆಲೆಸ್ತೀನ್ ಭಾಗಿಯಾಗಿಲ್ಲ. ಫೆಲೆಸ್ತೀನ್‍ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವುದು, ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳಿಗೆ ಜೆರುಸಲೇಮ್ ಅನ್ನೇ ರಾಜಧಾನಿಯಾಗಿಸುವುದು ಹಾಗೂ ಈ ವರ್ಷದ ಕೊನೆಯಲ್ಲಿ ಇನ್ನೊಂದು ಸಭೆಯನ್ನು ಏರ್ಪಡಿಸುವ ಗುರಿಯೊಂದಿಗೆ ಸಭೆ ಮುಕ್ತಾಯವನ್ನು ಕಂಡಿದೆ.
      ನಿಜವಾಗಿ, ಫೆಲೆಸ್ತೀನ್‍ನ ಪಾಲಿಗೆ ಸಭೆ ಮತ್ತು ಮಾತುಕತೆ ಹೊಸತಲ್ಲ. ಇಸ್ರೇಲ್ ಸ್ಥಾಪಿತಗೊಂಡಂದಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ಬಾರಿಯೂ ಸಭೆಯ ಮೊದಲು ಅಪಾರ ನಿರೀಕ್ಷೆಯನ್ನು ವ್ಯಕ್ತಪಡಿಸುವುದು ಮತ್ತು ಸಭೆಯ ಬಳಿಕ ಆ ನಿರೀಕ್ಷೆಯ ವ್ಯಾಪ್ತಿಯು ಕಿರಿದಾಗುತ್ತಾ ಹೋಗುವುದು ಫೆಲೆಸ್ತೀನ್‍ಗೆ ಅಭ್ಯಾಸವಾಗಿಬಿಟ್ಟಿದೆ. ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಮಧ್ಯಸ್ಥಿಕೆದಾರರ ಮೂಲಕ ಅನೇಕ ಬಾರಿ ಮಾತುಕತೆ ನಡೆದಿದೆ. ಹೆಚ್ಚಿನ ಬಾರಿ ಮಧ್ಯಸ್ಥಿಕೆದಾರನೇ ಮನುಷ್ಯ ವೇಷದ ತೋಳ ಆಗಿದ್ದನ್ನೂ ಅದು ಗುರುತಿಸಿದೆ. ಯಾಸಿರ್ ಅರಾಫಾತ್‍ರು ಇಂಥ ತೋಳಗಳಿಂದ ಸಾಕಷ್ಟು ಅವಮಾನವನ್ನು ಎದುರಿಸಿದರು. ಸದ್ಯ 81 ವರ್ಷದ ಅಬ್ಬಾಸ್ ಇದ್ದಾರೆ. ‘ಇಸ್ರೇಲನ್ನು ಯಹೂದಿ ರಾಷ್ಟ್ರವೆಂದೂ ಮತ್ತು ಯಹೂದಿಗಳ ಮಾತೃಭೂಮಿ’ಯೆಂದೂ ಒಪ್ಪುವ ಫೆಲೆಸ್ತೀನ್ ಸರಕಾರದೊಂದಿಗೆ ಮಾತ್ರ ನೇರ ಮಾತುಕತೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳುತ್ತಿದ್ದಾರೆ. ನಿಜವಾಗಿ, ಫೆಲೆಸ್ತೀನ್‍ನೊಂದಿಗೆ ನೇರ ಮಾತುಕತೆ ಎಂಬುದೇ ಬೃಹತ್ ನಾಟಕ. ಇಸ್ರೇಲ್, ಬಲಿಷ್ಠ ರಾಷ್ಟ್ರ. ಇಡೀ ಪಶ್ಚಿಮೇಶ್ಯದಲ್ಲೇ  ಅಣ್ವಸ್ತ್ರ ಹೊಂದಿರುವ ಮತ್ತು ಅಮೇರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ಕೃಪಾಶೀರ್ವಾದ ಇರುವ ರಾಷ್ಟ್ರ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲನ್ನು ಖಂಡಿಸುವ ಯಾವ ನಿರ್ಣಯವನ್ನೂ ಅಂಗೀಕರಿಸಲು ಅಮೇರಿಕ ಈ ವರೆಗೆ ಅವಕಾಶ ಕೊಟ್ಟಿಲ್ಲ. ಡಜನ್‍ಗಟ್ಟಲೆ ವೀಟೋಗಳನ್ನು ಅದು ಇಸ್ರೇಲ್‍ನ ಕ್ರೌರ್ಯವನ್ನು ಮನ್ನಿಸುವುದಕ್ಕಾಗಿಯೇ ಚಲಾಯಿಸಿದೆ. ಶಾಂತಿ ಪ್ರಕ್ರಿಯೆಗೆ ಮರು ಚಾಲನೆ ಕೊಡಲು ಹೊರಟಿರುವ ಫ್ರಾನ್ಸ್ ಕೂಡಾ ಈ ವಿಷಯದಲ್ಲಿ ಹಿಂದೆಯೇನೂ ಅಲ್ಲ. ಕಳೆದ ಜನವರಿಯಲ್ಲಿ ಅದರ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಪ್ಯಾರಿಸ್ ಅವರು ಫೆಲೆಸ್ತೀನಿಯರಿಗೆ ಬೆಂಬಲವಾಗಿ ಹೇಳಿಕೆಯೊಂದನ್ನು ಕೊಟ್ಟರು. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಫ್ರಾನ್ಸ್ ಪರಿಗಣಿಸುತ್ತದೆಂದು ಅವರು ಅಭಿಪ್ರಾಯ ಪಟ್ಟರು. ಈ ಹೇಳಿಕೆಯ ಬಳಿಕ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ಬಳಿಕ ಈವರೆಗೆ ಸ್ವತಂತ್ರ ಫೆಲೆಸ್ತೀನ್‍ನ ಬಗ್ಗೆ ಫ್ರಾನ್ಸ್ ಈ ವರೆಗೆ ಹೇಳಿಕೆಯನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಅನುಕೂಲ ಇರುವ ಇಸ್ರೇಲ್ ಒಂದು ಕಡೆಯಾದರೆ, ಇನ್ನೊಂದು ಕಡೆ ರಾಷ್ಟ್ರದ ಸ್ಥಾನಮಾನವೂ ಇಲ್ಲದ ದುರ್ಬಲ ಫೆಲೆಸ್ತೀನ್. ಇಸ್ರೇಲ್ ಅನುಮತಿಸಿದರೆ ಮಾತ್ರ ಫೆಲೆಸ್ತೀನ್‍ಗೆ ವಿದ್ಯುತ್ ಇದೆ. ಇಸ್ರೇಲ್ ಒಪ್ಪಿದರೆ ಮಾತ್ರ ಆಹಾರ-ಸಾಮಗ್ರಿಗಳಿವೆ. ಪ್ರತಿಯೊಂದಕ್ಕೂ ಇಸ್ರೇಲ್‍ನ ಕೃಪೆಯನ್ನು ಅವಲಂಬಿಸಿಕೊಂಡಿರುವ ಫೆಲೆಸ್ತೀನ್ ಯಾವ ನೆಲೆಯಲ್ಲೂ ಇಸ್ರೇಲ್‍ಗೆ ಹೋಲಿಕೆಗೇ ಅರ್ಹವಲ್ಲ. ಇಂಥವರ ಮಧ್ಯೆ ನೇರ ಮಾತುಕತೆ ಅಂದರೇನು? ಅಂಥ ನೇರ ಮಾತುಕತೆಯಿಂದ ಆಗುವ ಪರಿಣಾಮಗಳು ಏನೇನು? ಅಲ್ಲಿಯ ನಿರ್ಣಯದಲ್ಲಿ ಯಾರ ಪ್ರಾಬಲ್ಯ ಇರಬಹುದು?
      ಇಸ್ರೇಲ್‍ನ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅನೇಕ ಬಾರಿ ನಿಯಮ ಉಲ್ಲಂಘನೆಗಳ ಪ್ರಸ್ತಾಪ ಆಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಅಮೇರಿಕದ ವೀಟೋ ಅದನ್ನು ರಕ್ಷಿಸುತ್ತಾ ಬಂದಿದೆ. ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ಗಂಭೀರ ಆರೋಪ ಅದರ ಮೇಲಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ವಿಧೇಯಕವನ್ನು ಪದೇ ಪದೇ ಉಲ್ಲಂಘಿಸಿ ಪಶ್ಚಿತ ದಂಡೆಯಲ್ಲಿ ಫೆಲೆಸ್ತೀನಿನ ಭೂಮಿಯನ್ನು ಅತಿಕ್ರಮಿಸುತ್ತಿರುವ ಆರೋಪವೂ ಇದೆ. ವಲಸಿಗ ಯಹೂದಿಯರಿಗಾಗಿ ವಸತಿಯನ್ನು ನಿರ್ಮಿಸುತ್ತಲೂ ಇದೆ. ಅಮೇರಿಕ ಸಹಿತ ಅದರ ಬೆಂಬಲಿಗ ರಾಷ್ಟ್ರಗಳ ವಿರೋಧದ ನಡುವೆಯೂ ಈ ವಸತಿ ನಿರ್ಮಾಣದಿಂದ ಅದು ಈಗಲೂ ಹಿಂದೆ ಸರಿದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಾನುಸಾರ ಇಸ್ರೇಲ್ ‘ಶಿಕ್ಷಾರ್ಹ’ ಅಪರಾಧಗಳನ್ನು ಎಸಗಿದೆ. ಹೀಗಿದ್ದೂ, ಇರಾನ್‍ನ ಮೇಲೆ ಮುಗಿಬಿದ್ದ ರಾಷ್ಟ್ರಗಳಾವುವೂ ಇಸ್ರೇಲ್‍ನ ಮೇಲೆ ಮುಗಿಬೀಳುತ್ತಿಲ್ಲವೇಕೆ? ಇರಾನ್‍ನ ಮೇಲೆ ಅಮೇರಿಕದ ನೇತೃತ್ವದಲ್ಲಿ ಹೇರಲಾದ ಒತ್ತಡಗಳ ಒಂದು ಶೇಕಡಾದಷ್ಟಾದರೂ ಇಸ್ರೇಲ್‍ನ ಮೇಲೆ ಹೇರಲು ಜಾಗತಿಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾದುದೇಕೆ? ವಿಶ್ವ ರಾಷ್ಟ್ರಗಳ ಒತ್ತಡ ಇರಾನ್‍ನ ಮೇಲೆ ಎಷ್ಟರ ಮಟ್ಟಿಗೆ ಇತ್ತೆಂದರೆ, ತನ್ನ ಉದ್ದೇಶಿತ  ಪರಮಾಣು ಚಟುವಟಿಕೆಯಲ್ಲಿ ಮೃದು ಧೋರಣೆಯನ್ನು ತಾಳಲೇಬೇಕಾದ ಅನಿವಾರ್ಯತೆಯೊಂದು ಅದಕ್ಕೆ ಎದುರಾಯಿತು. ತಾನು ವಿಶ್ವ ಭೂಪಟದಲ್ಲಿ ಒಂಟಿಯಾಗುವೆನೇ ಎಂದು ಭಯಪಡುವಷ್ಟು ಈ ಒತ್ತಡ ಇರಾನನ್ನು ಕಾಡಿತು. ವಿಶೇಷ ಏನೆಂದರೆ, ಈ ಒತ್ತಡ ಕಾರ್ಯಕ್ರಮದಲ್ಲಿ ಇರಾನ್‍ನ ಬೆಂಬಲಿಗ ರಾಷ್ಟ್ರಗಳಾದ ಚೀನಾ ಮತ್ತು ರಶ್ಯಾಗಳೇ ಅಮೇರಿಕದ ಜೊತೆ ಕೈ ಜೋಡಿಸಿದುವು. ಅಷ್ಟಕ್ಕೂ, ಇರಾನ್ ಅಣ್ವಸ್ತ್ರವನ್ನು ಉತ್ಪಾದಿಸಿಯೇ ಇರಲಿಲ್ಲ. ಅಣ್ವಸ್ತ್ರ ತಯಾರಿಸುವುದಕ್ಕೆ ಬೇಕಾಗುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಅದು ಅಭಿವೃದ್ಧಿಗೊಳಿಸುತ್ತಿದೆ ಎಂಬ ಆರೋಪವಷ್ಟೇ ಅದರ ಮೇಲಿತ್ತು. ಈ ನಡುವೆ ಇಸ್ರೇಲ್ ಅಭಿವೃದ್ಧಿಪಡಿಸಿರುವ ವೈರಸ್‍ಗಳು ಇರಾನ್‍ನ ಕೆಲವೊಂದು ಸೆಂಟ್ರಿಪ್ಯೂಜ್‍ಗಳನ್ನು ನಾಶ ಮಾಡುವಲ್ಲೂ ಯಶಸ್ವಿಯಾಗಿತ್ತು. ಇನ್ನೂ ಅಭಿವೃದ್ಧಿಪಡಿಸದ ಅಣ್ವಸ್ತ್ರದ ಹೆಸರಲ್ಲಿ ಇರಾನ್‍ನ ಮೇಲೆ ಒತ್ತಡ ಹೇರಲು ಮತ್ತು ಅದು ತನ್ನ ನೀತಿಯಲ್ಲಿ ಮೃದು ಧೋರಣೆಯನ್ನು ತಾಳುವಂತೆ ಮಾಡಲು ವಿಶ್ವ ರಾಷ್ಟ್ರಗಳಿಗೆ ಸಾಧ್ಯವಾಗುವುದಾದರೆ ಮತ್ತೇಕೆ ಫೆಲೆಸ್ತೀನಿನ ವಿಷಯದಲ್ಲಿ ಅದು ಸದಾ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಧೇಯಕವನ್ನು ಇಸ್ರೇಲ್ ಉಲ್ಲಂಘಿಸಿದಷ್ಟು ಸಂಖ್ಯೆಯಲ್ಲಿ ವಿಶ್ವದ ಇನ್ನಾವ ರಾಷ್ಟ್ರವೂ ಉಲ್ಲಂಘಿಸಿಲ್ಲ. ಪಶ್ಚಿಮೇಶ್ಯದಲ್ಲಿ ಅಣ್ವಸ್ತ್ರವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿರುವ ಏಕೈಕ ರಾಷ್ಟ್ರ ಅದೊಂದೇ. ಸಮೂಹನಾಶಕ ಅಸ್ತ್ರದ ಹೆಸರಲ್ಲಿ ಇರಾಕ್‍ನ ಮೇಲೆ ದಾಳಿ ನಡೆಸಿದ ಅಮೇರಿಕನ್ ನೇತೃತ್ವದ ವಿಶ್ವ ರಾಷ್ಟ್ರಗಳಿಗೆ ಇಸ್ರೇಲ್‍ನ ಮೇಲೆ ಕನಿಷ್ಠ ನಿರ್ಬಂಧವನ್ನೂ ಹೇರಲು ಅಸಾಧ್ಯವಾಗಿರುವುದು ಯಾಕೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಷ್ಟೇ ಎಚ್ಚರಿಕೆಯನ್ನು ಕೊಡಲಿ, ಅದಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲೇ ಹೊರತು ಸಿರಿಯಾವೋ ಅಫಘಾನೋ ಇರಾನೋ ಅಲ್ಲ. ಆದರೆ ಇಸ್ರೇಲ್ ಹೊರತುಪಡಿಸಿದ ಉಳಿದೆಲ್ಲ ರಾಷ್ಟ್ರಗಳ ಮೇಲೆ ಮತ್ತೆ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಉದಾಹರಣೆಗಳಷ್ಟೇ ಸಿಗುತ್ತಿರುವುದೇಕೆ?. ಇಷ್ಟೆಲ್ಲ ನಗ್ನ ಸತ್ಯಗಳಿದ್ದೂ ಅವೇ ಹಳಸಲು ಶಾಂತಿ ಮಾತುಕತೆಗಳೇಕೆ? ಇವು ಯಾರನ್ನು ಸಂತೃಪ್ತಿಪಡಿಸಲು? ನಿಜಕ್ಕೂ ಇಂಥ ಪ್ರಕ್ರಿಯೆಗಳ ಹಿಂದಿರುವುದು ಸಮಸ್ಯೆಯನ್ನು ಬಗೆಹರಿಸುವ ಕಾಳಜಿಯೋ ಅಥವಾ ಇಸ್ರೇಲ್‍ನ ನಿಯಮ ಉಲ್ಲಂಘನೆಗಳು ಚರ್ಚೆಗೆ ಬರದಂತೆ ತಡೆಯುವುದೋ? ರಾಜಿ ಪಂಚಾಯಿತಿಕೆಯ ನೇತೃತ್ವವನ್ನು ಒಮ್ಮೆ ಅಮೇರಿಕ ವಹಿಸಿಕೊಂಡರೆ ಇನ್ನೊಮ್ಮೆ ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ವಹಿಸಿಕೊಳ್ಳುತ್ತವೆ. ಪ್ರತಿ ಬಾರಿಯೂ ಫೆಲೆಸ್ತೀನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ ಇಸ್ರೇಲ್ ಅಕ್ರಮ ವಸತಿ ನಿರ್ಮಾಣವನ್ನು ವಿಸ್ತರಿಸುವ ಮೂಲಕ ತಿರುಗೇಟು ನೀಡುತ್ತಲೇ ಬಂದಿದೆ. ಎಲ್ಲಿಯ ವರೆಗೆ ಈ ನಾಟಕ? ಅಂದಹಾಗೆ,
       ವಿಶ್ವರಾಷ್ಟ್ರಗಳು ಫೆಲೆಸ್ತೀನ್‍ಗೆ ಇರಿದೂ ಇರಿದೂ ಸದ್ಯ ಇರಿಯಲು ಜಾಗವೇ ಇಲ್ಲದಷ್ಟು ಗಾಯಗಳನ್ನು ಈಗಾಗಲೇ ಮಾಡಿಟ್ಟಿದೆ. ಈ ಇರಿತದ ನೋವನ್ನು ಅನುಭವಿಸಿ ಅನುಭವಿಸಿ ದಡ್ಡುಗಟ್ಟಿದ ಫೆಲೆಸ್ತೀನಿಗರ ದೇಹ ಸದ್ಯ ಮುಲಾಮನ್ನೂ ಚೂರಿಯೆಂದೇ ನಂಬುವಲ್ಲಿಗೆ ತಲುಪಿಬಿಟ್ಟಿದೆ. ಆದ್ದರಿಂದಲೇ, ಅದು ಕಳೆದವಾರ ನಡೆದ ಫ್ರಾನ್ಸ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿಲ್ಲ. ಬಹುಶಃ ಅಲ್ಲಿ ಸೇರಿರುವ 29 ರಾಷ್ಟ್ರಗಳು ಅದರ ಪಾಲಿಗೆ 29 ಚೂರಿಗಳಾಗಿ ಕಾಣಿಸಿರುವ ಸಾಧ್ಯತೆ ಇದೆ. ಫೆಲೆಸ್ತೀನ್‍ಗಾಗಿರುವ ಇರಿತದ ಗಾಯಗಳನ್ನು ಎಣಿಸಿದರೆ ಅದರ ಈ ಗ್ರಹಿಕೆಯನ್ನು ಪ್ರಮಾದವೆನ್ನಲು ಸಾಧ್ಯವಿಲ್ಲ.

Thursday, 16 June 2016

ಮನುಷ್ಯರ ಪ್ರಾಮುಖ್ಯತೆಯನ್ನು ಬಿಜೆಪಿಗೆ ಪರಿಚಯಿಸಿದ ಬಿಹಾರದ ದನ

          ಪ್ರಾಣಿಗಳು ಮುಖ್ಯವೋ ಅಥವಾ ಮನುಷ್ಯರೋ ಎಂಬೊಂದು ಚರ್ಚೆಗೆ ಕೇಂದ್ರದ ಸಚಿವರಿಬ್ಬರು ಚಾಲನೆಯನ್ನು ಕೊಟ್ಟಿದ್ದಾರೆ. ಈ ವಿಷಯವಾಗಿ ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಪ್ರಕಾಶ್ ಜಾವಡೇಕರ್ ಪರಸ್ಪರ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಾರೆ. ಮೇನಕಾ ಗಾಂಧಿ ಪ್ರಾಣಿಗಳ ಪರ ನಿಂತರೆ ಜಾವಡೇಕರ್ ಮನುಷ್ಯರ ಪರ ನಿಂತಿದ್ದಾರೆ. ಕೃಷಿ ಬೆಳೆಗಳನ್ನು ತಿಂದು ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಪ್ರಾಣಿಗಳನ್ನು ಕೊಲ್ಲಬಹುದು ಎಂದು ಜಾವಡೇಕರ್ ವಾದಿಸಿದರೆ ಮೇನಕಾ ಅದನ್ನು ಖಂಡಿಸಿದ್ದಾರೆ. ಬಿಹಾರದಲ್ಲಿ ಕಾಡೆತ್ತು (ನೀಲ್‍ಗಾಯಿ), ಹಿಮಾಚಲ ಪ್ರದೇಶದಲ್ಲಿ ಮಂಗ, ಪಶ್ಚಿಮ ಬಂಗಾಲದಲ್ಲಿ ಆನೆ, ಗೋವಾದಲ್ಲಿ ನವಿಲುಗಳನ್ನು ಈ ಕಾರಣಕ್ಕಾಗಿ ಹತ್ಯೆ ನಡೆಸಲು ಜಾವಡೇಕರ್ ಅವರ ಪರಿಸರ ಮಂತ್ರಾಲಯ ಅನುಮತಿ ನೀಡಿದೆ ಎಂಬುದು ಮೇನಕಾರ ದೂರು. ಈ ಕಿತ್ತಾಟ ನಡೆದ ಮರುದಿನವೇ ಕೇಂದ್ರ ಸರಕಾರದ ಸ್ಯಾಂಪಲ್ ರಿಜಿಸ್ಟ್ರೇಶನ್ ಸರ್ವೆ(ಎಸ್.ಆರ್.ಎಸ್.)ಯು ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 71% ಮಾಂಸಾಹಾರಿಗಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್‍ನಲ್ಲಿ ಪ್ರತಿ ಐವರಲ್ಲಿ ಇಬ್ಬರು (40%) ಮಾಂಸಾಹಾರಿಗಳು. ತೆಲಂಗಾಣ ಮತ್ತು ಪಶ್ಚಿಮ ಬಂಗಾಲದಲ್ಲಿ ಬಹುತೇಕ 99% ಮಂದಿಯೂ ಮಾಂಸಾಹಾರವನ್ನೇ ಸೇವಿಸುತ್ತಿದ್ದಾರೆ. ಒಡಿಶಾದಲ್ಲಿ ಮಾಂಸಾಹಾರಿಗಳ ಸಂಖ್ಯೆ 98%ವಾದರೆ, ಕೇರಳದಲ್ಲಿ 97% ಮಂದಿ ಮಾಂಸಾಹಾರಿಗಳಿದ್ದಾರೆ.
  ನಿಜವಾಗಿ ಪ್ರಾಣಿಹತ್ಯೆ, ಮಾಂಸಾಹಾರ, ಸಸ್ಯಾಹಾರ.. ಮುಂತಾದುವುಗಳ ಬಗ್ಗೆ ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಲಿದೆ. ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ಎಂಬ ಪ್ರಾಯಸ್ಥರನ್ನು ಹತ್ಯೆ ನಡೆಸಿದ್ದು ಪ್ರಾಣಿ ಹತ್ಯೆಯ ಹೆಸರಲ್ಲಿ. ಆ ಇಡೀ ಕ್ರೌರ್ಯದ ನಾಯಕತ್ವವನ್ನು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ವಹಿಸಿಕೊಂಡಿದ್ದ. ಈ ದೇಶದಲ್ಲಿ ಪ್ರಾಣಿ ಸಾಗಾಟ ಮತ್ತು ಹತ್ಯೆಯ ಹೆಸರಲ್ಲಿ ಮನುಷ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆಗಳಲ್ಲಿ ಬಿಜೆಪಿಗೆ ಯಾವಾಗಲೂ ಒಂದು ಪಾತ್ರ ಇದ್ದೇ ಇರುತ್ತದೆ. ಅದರ ಕಾರ್ಯಕರ್ತರು ಪ್ರಾಣಿಗಳ ಹೆಸರಲ್ಲಿ ಮನುಷ್ಯರನ್ನು ಥಳಿಸುತ್ತಾರೆ, ಹತ್ಯೆ ನಡೆಸುತ್ತಾರೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿ ಈ ಹಲ್ಲೆಕೋರರ ವಕ್ತಾರನಂತೆ ಮಾತಾಡುತ್ತಲೂ ಇರುತ್ತದೆ. ಮನುಷ್ಯರನ್ನು ಕೊಂದಾದರೂ ಸರಿ, ಪ್ರಾಣಿಗಳನ್ನು ಉಳಿಸಿಕೊಳ್ಳಬೇಕು ಅನ್ನುವಷ್ಟು ಉಗ್ರ ಪ್ರಾಣಿ ಪ್ರೇಮವನ್ನು ಅದು ವ್ಯಕ್ತಪಡಿಸುತ್ತಲೂ ಇರುತ್ತದೆ. ಸಸ್ಯಾಹಾರದ ಪ್ರಯೋಜನ ಮತ್ತು ಮಾಂಸಾಹಾರದ ಅನಾಹುತಗಳನ್ನು ವಿವರಿಸುವ ಸಂದರ್ಭ ಎದುರಾದಾಗಲೆಲ್ಲ ಬಿಜೆಪಿ ಸಸ್ಯಾಹಾರದ ಪರ ನಿಲ್ಲುತ್ತದೆ. ಮಾಂಸಾಹಾರವು ಭಯೋತ್ಪಾದನೆಗೆ ಪ್ರೇರಕ ಎಂದು ಅದರ ಬೆಂಬಲಿಗರು ಹೇಳಿದ್ದೂ ಇದೆ. ದುರಂತ ಏನೆಂದರೆ, ಸಮಯ, ಸಂದರ್ಭ ಬಂದಾಗಲೆಲ್ಲ ಬಿಜೆಪಿಯ ಈ ನಿಲುವು ಕಸದ ಬುಟ್ಟಿಯನ್ನು ಸೇರಿಕೊಳ್ಳುತ್ತದೆ ಎಂಬುದು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಮಾಂಸಾಹಾರ ಅದರಲ್ಲೂ ಗೋಮಾಂಸವನ್ನು ಅತ್ಯಧಿಕವಾಗಿ ಪ್ರಶ್ನಾರ್ಹಗೊಳಿಸಿದ್ದು ಬಿಜೆಪಿಯೇ. ಗೋವುಗಳ ಸಾಧುತನದ ಬಗ್ಗೆ, ಅದರ ಹಾಲು, ಬೆಣ್ಣೆ, ಮೂತ್ರ, ಸೆಗಣಿ ಸಹಿತ ಸರ್ವಾಂತರ್ಯಾಮಿ ಉಪಯೋಗಗಳ ಬಗ್ಗೆ ಅದರ ನಾಯಕರು ಎಷ್ಟೆಷ್ಟು ಭಾಷಣಗಳನ್ನು ಬಿಗಿದರೆಂದರೆ, ಒಂದು ವೇಳೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಬಿಟ್ಟರೆ, ಕಸಾಯಿಖಾನೆಗಳೆಲ್ಲ ಗೋಶಾಲೆಗಳಾಗಿ ಮಾರ್ಪಾಡಾಗುತ್ತವೋ ಎಂದು ನಿರೀಕ್ಷಿಸುವಷ್ಟು. ಅಲ್ಲದೇ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಆಧ್ಯಾತ್ಮ ಗುರುಗಳಂತೂ ಸಸ್ಯಾಹಾರವೇ ಶ್ರೇಷ್ಠ ಆಹಾರ ಎಂಬ ರೀತಿಯಲ್ಲಿ ಪ್ರವಚನ ನೀಡತೊಡಗಿದರು. ಪ್ರಾಣಿಯ ರಕ್ತ ಹರಿಯುವುದನ್ನು ಅತ್ಯಾಚಾರಕ್ಕೆ, ಅನಾಹುತಕ್ಕೆ, ದೇಶದ ಸಕಲ ಸಮಸ್ಯೆಗಳಿಗೆ ಕಾರಣವಾಗಿಯೂ ಪ್ರಸ್ತಾಪಿಸಿದರು. ಆದರೆ, ಇದೀಗ ಅಧಿಕಾರ ದೊರೆತ ಬಿಜೆಪಿ ಕಾಂಗ್ರೆಸ್‍ನಂತೆಯೇ ವರ್ತಿಸುತ್ತಿದೆ. ಕಸಾಯಿಖಾನೆಗಳನ್ನು ಅದು ರದ್ದುಪಡಿಸುತ್ತಲೂ ಇಲ್ಲ. ವಿದೇಶಕ್ಕೆ ರಫ್ತಾಗುವ ಗೋಮಾಂಸಗಳ ಮೇಲೆ ನಿಷೇಧವನ್ನೂ ಹೇರುತ್ತಿಲ್ಲ. ಕನಿಷ್ಠ ದೇಶದೊಳಗಡೆಯಾದರೂ ಮಾಂಸಾಹಾರ ಅಲಭ್ಯವಾಗುವಂತೆ ಮತ್ತು ಸಸ್ಯಾಹಾರ ವ್ಯಾಪಕವಾಗುವಂತೆಯೂ ನೋಡಿಕೊಳ್ಳುತ್ತಿಲ್ಲ. ಒಂದು ಕಡೆ, ಅದು ಪ್ರಾಣಿಗಳ ರಕ್ತವನ್ನು ಹರಿಸುತ್ತಲೇ ಇನ್ನೊಂದು ಕಡೆ ಅಚ್ಛೇ ದಿನ್‍ನ ಭರವಸೆಯನ್ನೂ ನೀಡುತ್ತಿದೆ. ಈ ಸೈದ್ಧಾಂತಿಕ ಗೊಂದಲಕ್ಕೆ ಏನೆನ್ನಬೇಕು? ಒಂದು ವೇಳೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಾದರೂ ಮಾಂಸ ರಫ್ತಿನಲ್ಲಿ ಇಳಿಕೆಯಾಗಿದ್ದರೆ ಅಥವಾ ಮಾಂಸಾಹಾರಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದರೆ ಅದನ್ನಾದರೂ ದೇಶದ ಮುಂದೆ ಇಡಬೇಕಿತ್ತು. ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಬಿಜೆಪಿ ಅಭಿವೃದ್ಧಿಯನ್ನು ಆಹಾರದ ಜೊತೆಗೆ ಬೆರೆಸಿಯೇ ಈ ವರೆಗೆ ಮಾತಾಡಿದೆ. ಇಂಥ ಪಕ್ಷ ಇವತ್ತು ಮಾಂಸಾಹಾರವನ್ನು ಒಳಗೊಂಡ ಅಭಿವೃದ್ಧಿಯ ಜೊತೆ ಸಾಗುತ್ತದೆಂದರೆ ಅದು ಸೈದ್ಧಾಂತಿಕವಾಗಿ ಅತಿ ದೊಡ್ಡ ಬದಲಾವಣೆ. ಈ ಬದಲಾವಣೆಯನ್ನು ತನ್ನ ಬೆಂಬಲಿಗರಿಗೆ ತಿಳಿಸಲು ಅದೇಕೆ ಮಡಿವಂತಿಕೆ ತೋರಿಸುತ್ತಿದೆ? ಅಥವಾ ಅಧಿಕಾರದಲ್ಲಿರುವಾಗ ಒಂದು ನೀತಿ ಮತ್ತು ಅಧಿಕಾರ ವಂಚಿತಗೊಂಡಾಗ ಇನ್ನೊಂದು ನೀತಿ ಎಂಬ ದ್ವಿಮುಖ ಸಿದ್ಧಾಂತವನ್ನು ಬಿಜೆಪಿ ಅಳವಡಿಸಿಕೊಂಡಿದೆಯೇ? ರಾಮಮಂದಿರವೂ ಈ ನೀತಿಯ ಭಾಗವೇ
  ನಿಜವಾಗಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಬಳಿಕ ಮೇನಕ ಮತ್ತು ಜಾವಡೇಕರ್ ಎಂಬ ಎರಡು ಮನುಷ್ಯ ಪ್ರಾಣಿಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಮನುಷ್ಯ ಪ್ರಾಣಿಗಳು ಪ್ರತಿನಿಧಿಸುವ ಪಕ್ಷದ ಸಿದ್ಧಾಂತ ಅನೇಕ ಬಾರಿ ಮನುಷ್ಯ ವಿರೋಧಿಯಾಗಿ ಗುರುತಿಸಿಕೊಂಡಿರುವುದರಿಂದ ಈ ಮುಖಾಮುಖಿ ಅತ್ಯಂತ ಮಹತ್ವಪೂಣರ್ವಾಗಿತ್ತು. ಈ ಮುಖಾಮುಖಿಯಲ್ಲಿ ಮನುಷ್ಯ ಮುಖ್ಯವಾಗುತ್ತಾನೋ ಅಥವಾ ಪ್ರಾಣಿಯೋ ಎಂಬೊಂದು ಕುತೂಹಲವೂ ಇತ್ತು. ಆದರೆ, ಅಂತಿಮವಾಗಿ ಮನುಷ್ಯನನ್ನೇ ಪರಮ ಪ್ರಧಾನ ಎಂದು ಈ ಮುಖಾಮುಖಿ ಸಾಬೀತುಪಡಿಸಿದೆ. ಶರಫತ್ ಖಾನ್ ಎಂಬ ತಜ್ಞರ ನೇತೃತ್ವದಲ್ಲಿ ಬಿಹಾರದಲ್ಲಿ ನೂರಾರು ಕಾಡೆತ್ತುಗಳ (ನೀಲ್‍ಗಾಯಿ) ಹತ್ಯೆ ನಡೆದಿದೆ. ಸಾಮಾನ್ಯವಾಗಿ ಬಿಹಾರದಲ್ಲಿ ಈ ಕಾಡೆತ್ತುಗಳನ್ನು ಗಾಯಿ (ದನ) ಎಂದು ಕರೆಯಲಾಗುತ್ತದೆ. ಗೋವಿನಷ್ಟೇ ಅವು ತಮಗೆ ಪವಿತ್ರ ಎಂದೂ ಅಲ್ಲಿನ ರೈತರು ಹೇಳುತ್ತಾರೆ. ಆದ್ದರಿಂದಲೇ, ಈ ದನಗಳನ್ನು ಹತ್ಯೆ ನಡೆಸದೆಯೇ ಗದ್ದೆಗಳಿಂದ ತಡೆಯುವ ಹಲವು ಉಪಕ್ರಮಗಳನ್ನು ಅವರು ಕೈಗೊಂಡಿದ್ದರು. ಪೂಜೆ-ಪುನಸ್ಕಾರಗಳನ್ನು ನಡೆಸಿದ್ದರು. ಆದರೆ ಈ ದನಗಳು ಜಗ್ಗಲಿಲ್ಲ. ಲಕ್ಷಾಂತರ ರೂಪಾಯಿಗಳ ವರೆಗಿನ ಬೆಳೆಗಳು ನಾಶವಾದುವು. ಕೊನೆಗೆ ಹತ್ಯೆಗೆ ಅನುಮತಿ ನೀಡಬೇಕೆಂದು ಕೋರಿ ಕೇಂದ್ರ ಪರಿಸರ ಇಲಾಖೆಗೆ ಬಿಹಾರ ಸರಕಾರ ಪತ್ರ ಬರೆಯಿತು. ಒಂದು ರೀತಿಯಲ್ಲಿ, ಅಧಿಕಾರವಿಲ್ಲದೇ ಇದ್ದಾಗ ಬಿಜೆಪಿಗೆ ಅತ್ಯಂತ ಪವಿತ್ರವಾಗಿದ್ದ ಗೋವು ಅಧಿಕಾರಕ್ಕೇರಿದ ಬಳಿಕ ಬೆಳೆನಾಶಕ ಮತ್ತು ಹತ್ಯೆಗೆ ಅರ್ಹ ಪ್ರಾಣಿಯಾಗಿ ಮಾರ್ಪಾಟಾಯಿತು!
  ಏನೇ ಆಗಲಿ, ದೇಶದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಕೇವಲ 29% ಮಾತ್ರ ಇರುವುದು ಮತ್ತು ಪ್ರಾಣಿ ಹತ್ಯೆಯ ವಿಷಯದಲ್ಲಿ ಬಿಜೆಪಿ ತನ್ನ ಘೋಷಿತ ನಿಲುವಿನಿಂದ ಹಿಂದೆ ಸರಿದಿರುವುದು ನರೇಂದ್ರ ಮೋದಿಯವರ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ನಡೆದ ಪ್ರಮುಖ ಸೈದ್ಧಾಂತಿಕ ಬದಲಾವಣೆ ಎನ್ನಬಹುದು. ಇದು ವಾಸ್ತವ ರಾಜಕಾರಣದ ಪ್ರತಿಬಿಂಬ. ಅಗತ್ಯ ಬಂದಾಗ ಪ್ರಾಣಿಯನ್ನು - ಅದು ಗಾಯಿ ಆಗಿದ್ದರೂ - ಕೊಲ್ಲಬಹುದು ಎಂಬುದನ್ನು ಈ ಸರಕಾರ ಜಾವಡೇಕರ್ ಮೂಲಕ ಸಾರಿಬಿಟ್ಟಿದೆ. ಮಾಂಸಾಹಾರವು ಈ ದೇಶದ 71% ಜನರ ಅಗತ್ಯ. ಆದ್ದರಿಂದ, ಅವರ ಅಗತ್ಯವನ್ನು ನಿರಾಕರಿಸುವ ಅಥವಾ ತುಚ್ಛೀಕರಿಸುವ ಧಾಟಿಯಲ್ಲಿ ಮಾತಾಡುವುದು ಮತ್ತು ಹಲ್ಲೆ-ಹತ್ಯೆಗಳಂತಹ ಉಗ್ರ ಪ್ರಾಣಿಪ್ರೇಮವನ್ನು ತೋರುವುದು ಕೂಡ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ, ಆಹಾರದ ಅಗತ್ಯಕ್ಕಾಗಿ ಪ್ರಾಣಿ ಹತ್ಯೆಯನ್ನು ಕೇಂದ್ರ ಸರಕಾರ ಪರೋಕ್ಷವಾಗಿ ಮಾನ್ಯ ಮಾಡಿದಂತಾಗಿದೆ. ರೈತರ ಅಗತ್ಯಕ್ಕಾಗಿ ಗಾಯಿ ಅನ್ನು ಹತ್ಯೆ ನಡೆಸಬಹುದಾದರೆ, ಆಹಾರದ ಅಗತ್ಯಕ್ಕಾಗಿ ನಿರುಪಯುಕ್ತ ಜಾನುವಾರುಗಳ ಹತ್ಯೆ ಅಪರಾಧವಾಗುವುದಾದರೂ ಹೇಗೆ?
  ಬಿಜೆಪಿಗೆ ಮನುಷ್ಯರ ಅಗತ್ಯವನ್ನು ತಿಳಿಸಿಕೊಟ್ಟ ಬಿಹಾರದ ರೈತರು ಮತ್ತು ನೀಲ್‍ಗಾಯಿಗಳಿಗೆ ಅಭಿನಂದನೆಗಳು.



Thursday, 9 June 2016

  ಅಖ್ಲಾಕ್ ನ ಫ್ರಿಡ್ಜ್ ನಲ್ಲಿ ಮಾಂಸ ಹುಡುಕುವ ಬಿಜೆಪಿಯಿಂದ ಮಥುರಾದಲ್ಲಿ ಜೋಗುಳ

         1. ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್ ಮತ್ತು 60 ಲೀಟರ್ ಡೀಸೆಲ್ ಲಭ್ಯವಾಗಬೇಕು.
  2. ಚಿನ್ನದ ನಾಣ್ಯಗಳನ್ನು  ಮತ್ತೆ ಚಲಾವಣೆಗೆ ತರಬೇಕು.
  3. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿಯ ನಿಯಮ ಪುಸ್ತಕವನ್ನು ಭಾರತೀಯ ಕಾನೂನಾಗಿ ಮತ್ತು ಆಡಳಿತ ನಿಯಮವಾಗಿ ಪರಿಗಣಿಸಬೇಕು.
  4. ರೂಪಾಯಿ ಬದಲು ಆಝಾದಿ ಹಿಂದ್ ಫೌಜ್ ಎಂಬ ಕರೆನ್ಸಿ  ಚಾಲ್ತಿಗೆ ತರಬೇಕು. .
  5. ದೇಶಾದ್ಯಂತ ಮಾಂಸಾಹಾರವನ್ನು ನಿಷೇಧಿಸಬೇಕು. ಉಲ್ಲಂಘಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
  6. ಜವಾಹರ್ ಪಾರ್ಕನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕು..
  7. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ರದ್ದು ಮಾಡಬೇಕು.....
          ಎಂದು ಮುಂತಾದ ತಲೆತಿರುಕ ಬೇಡಿಕೆಯೊಂದಿಗೆ ಸುಮಾರು 3 ಸಾವಿರದಷ್ಟಿರುವ ಮಂದಿಯ ಗುಂಪು ಉತ್ತರ ಪ್ರದೇಶ ಸರಕಾರದ ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ಮತ್ತು 270 ಎಕರೆಯಷ್ಟು ವಿಸ್ತಾರವಾದ ಜವಾಹರ್ ಬಾಘ್ ಪಾರ್ಕ್ ಅನ್ನು ಸೇರಿಕೊಳ್ಳುವುದು ಮತ್ತು ಎರಡು ವರ್ಷಗಳ ವರೆಗೆ ಅಲ್ಲಿ ಕಾನೂನುಬಾಹಿರವಾಗಿ ತಂಗುವುದೆಲ್ಲ ಏನು? ಸ್ವಾಧೀನ್ ಭಾರತ್ ಸುಭಾಷ್ ಸೇನಾ ಎಂಬ ಗುಂಪನ್ನು ಕಟ್ಟಿಕೊಂಡ ರಾಮ್ ವೃಕ್ಷ ಯಾದವ್ ಮತ್ತು ಆತನ ಅನುಯಾಯಿಗಳಿಗೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು? ಉತ್ತರ ಪ್ರದೇಶದ ಮಥುರಾದಲ್ಲಿ ಕಳೆದ ವಾರ ನಡೆದ ಘಟನೆ ಈ ಪ್ರಶ್ನೆಯನ್ನು ನಮ್ಮೆದುರು ಮತ್ತೆ ಮತ್ತೆ ಮುಂದಿಡುತ್ತದೆ. ಒಂದು ವೇಳೆ, 2014 ಎಪ್ರಿಲ್‍ನಲ್ಲಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಿಂದ ಹೊರಟ ಸ್ವಾಧೀನ್ ಭಾರತ್ ವಿದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ತಂಡದ ನಾಯಕನ ಹೆಸರು ರಾಮ್ ವೃಕ್ಷ ಯಾದವ್ ಎಂಬುದರ ಬದಲು ಓರ್ವ ಮುಸ್ಲಿಮನದ್ದಾಗಿರುತ್ತಿದ್ದರೆ ಮತ್ತು ಆತ ಸುಭಾಷ್‍ರ ಬದಲು ಅಬ್ದುಲ್ ಕಲಾಮ್ ಆಝಾದ್‍ರ ಅನುಯಾಯಿಯಾಗಿ ಗುರುತಿಸಿ ಜವಾಹರ್ ಪಾರ್ಕ್‍ನಲ್ಲಿ ತನ್ನ ಗುಂಪಿನೊಂದಿಗೆ ಎರಡು ವರ್ಷಗಳ ವರೆಗೆ ತಂಗಿ, ಕೊನೆಗೆ ವ್ಯವಸ್ಥೆಯೊಂದಿಗೆ ಶಸ್ತ್ರಾಸ್ತ್ರ ಕಾದಾಟಕ್ಕೆ ಇಳಿದಿದ್ದರೆ ಆ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಹೇಗಿರುತ್ತಿದ್ದುವು? ಈ ಪ್ರಶ್ನೆ ತುಸು ಉತ್ಪ್ರೇಕ್ಷೆಯದ್ದಾಗಿ ಕಂಡರೂ ಇವತ್ತಿನ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಅಸಂಬದ್ಧವೇನೂ ಅಲ್ಲ. 2014ರಲ್ಲಿ ಮಧ್ಯಪ್ರದೇಶದಿಂದ ಹೊರಟ ಸ್ವಾಧೀನ್ ಭಾರತ್ ಸೇನಾ ಎಂಬ ಈ ಗುಂಪು ಮಥುರಾದ ಜವಾಹರ್ ಪಾರ್ಕ್‍ನಲ್ಲಿ ಕೇವಲ ಎರಡು ದಿನಗಳ ಕಾಲ ತಂಗುವುದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆದುಕೊಂಡಿತ್ತು. ಅವರ ಆಧ್ಯಾತ್ಮ ಗುರು ಬಾಬಾ ಜೈ ಗುರುದೇವ್‍ರು 2012ರಲ್ಲಿ ಮೃತಪಟ್ಟಿದ್ದು, ಅವರು ಸುಮಾರು 12 ಸಾವಿರ ಕೋಟಿ ಆಸ್ತಿಯನ್ನು ಬಿಟ್ಟು ಹೋಗಿದ್ದರು. ಈ ಕುರಿತಂತೆ ರಾಮ್ ವೃಕ್ಷ ಯಾದವ್ ಸಹಿತ ಬಾಬಾರ ಮೂವರು ಪ್ರಮುಖ ಅನುಯಾಯಿ ನಾಯಕರಲ್ಲಿ ವಿವಾದವೂ ಬೆಳೆದಿತ್ತು. ಆದ್ದರಿಂದ ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆಸಲಿರುವ ಪ್ರತಿಭಟನೆಗಿಂತ ಮೊದಲು ಪಾರ್ಕ್‍ನಲ್ಲಿ ಎರಡು ದಿನಗಳ ಕಾಲ ತಂಗಿ ಹೋಗುವುದಾಗಿ ಈ ಗುಂಪು ಹೇಳಿಕೊಂಡಿತ್ತು. ಆದರೆ ಬಳಿಕ  ಈ ಗುಂಪು ಅಲ್ಲಿಂದ ಕದಲಲೇ ಇಲ್ಲ. ಜವಾಹರ್ ಪಾರ್ಕನ್ನು ವಾಸಯೋಗ್ಯಗೊಳಿಸುವುದಕ್ಕಾಗಿ 2400 ಮರಗಳನ್ನು ಅದು ಸುಟ್ಟು ಹಾಕಿತು. ತೋಟಗಾರಿಕಾ ಇಲಾಖೆಯ ಸಿಬಂದಿಗಳನ್ನು ಓಡಿಸಿತು. ಆ ಪಾರ್ಕ್‍ನೊಳಗೆ ಪ್ರವೇಶಿಸಲು ಬಯಸುವವರನ್ನು ಬಲವಂತದಿಂದ ಹೊರಹಾಕತೊಡಗಿತು. ಕ್ರಮೇಣ ಪರ್ಯಾಯ ಸರಕಾರವೇ ಅಲ್ಲಿ ಸ್ಥಾಪಿತವಾಯಿತು.ತಮ್ಮದೇ ಸ್ವಂತ ಕಾನೂನು, ಕಾರಾಗ್ರಹ, ಕೋರ್ಟು ತಲೆ ಎತ್ತಿತು. ಸಾವಿರ ಮಂದಿಯ ಪ್ರತ್ಯೇಕ ಸೇನೆ ತಯಾರಾಯಿತು. ಈ ಸಾಮ್ರಾಜ್ಯದ ಒಳಗಿರುವ ಪ್ರತಿ ವ್ಯಕ್ತಿಗೆ ಗುರುತಿನ ಚೀಟಿಯನ್ನು ನೀಡಲಾಯಿತಲ್ಲದೆ , ಇಲ್ಲಿಂದ ಹೊರಹೋಗಬೇಕಾದರೆ ಎಕ್ಸಿಟ್ ಪಾಸ್ ಪಡಕೊಳ್ಳುವುದು ಕಡ್ದಾಯವಾಯಿತು. ಈ ಕುರಿತಂತೆ ವಿಜಯಪಾಲ್ ಸಿಂಗ್ ತೋಮರ್ ಎಂಬವರು 2014ರಲ್ಲೇ ಕೋರ್ಟ್ ಮೆಟ್ಟಿಲೇರಿದ್ದರು. ಮಾತ್ರವಲ್ಲ, 2015 ಮೇ 20ರಂದೇ ಅಲಹಾಬಾದ್ ಹೈಕೋರ್ಟ್ ಈ ಗುಂಪನ್ನು ಆ ಪಾರ್ಕ್‍ನಿಂದ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿಯೂ ಇತ್ತು. ಇದಾಗಿ ಒಂದು ವರ್ಷದ ಬಳಿಕ ಕಳೆದ ವಾರ ಉತ್ತರ ಪ್ರದೇಶದ ಸರಕಾರ ಈ ಸ್ವಾಧೀನ್ ಭಾರತ್ ತಂಡವನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸಲು ಮುಂದಾಯಿತು. ಆದರೆ ಅತಿಕ್ರಮಣಕೋರರು ಯಾವ ಮಟ್ಟದಲ್ಲಿ ಆಯುಧಧಾರಿಗಳಾಗಿದ್ದರೆಂದರೆ, ಅದು ಭಯೋತ್ಪಾದಕರ ಅಡಗುತಾಣವಾಗಿತ್ತೇನೋ ಎಂದು ಭಯಪಡುವಷ್ಟು. ಭಾರೀ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಯಿತು. ಅಚ್ಚರಿಯ ಸಂಗತಿ ಏನೆಂದರೆ, ಕಳೆದ ಎರಡು ವರ್ಷಗಳಿಂದ 3 ಸಾವಿರ ಮಂದಿಯ ಗುಂಪು ಶಸ್ತ್ರಾಸ್ತ್ರಗಳ ಸಹಿತ ಸರಕಾರಿ ಉದ್ಯಾನದಲ್ಲಿ ಅಕ್ರಮವಾಗಿ ನೆಲೆಸಿದ್ದರೂ ಯಾವ ರಾಜಕೀಯ ಪಕ್ಷವೂ ಆ ಬಗ್ಗೆ ಮಾತನ್ನೇ ಆಡದಿರುವುದು.ಈ ನಡುವೆ ಲೋಕಸಭಾ ಚುನಾವಣೆ ನಡೆದಿದೆ. ರಾಜ್ಯ ವಿಧಾನಸಭೆಯು ಚುನಾವಣೆಯ ತಯಾರಿಯಲ್ಲಿದೆ. ಯಾಕೆ ಯಾವ ಪಕ್ಷಕ್ಕೂ ಇದು ಇಶ್ಯೂ ಆಗಿ ಕಾಣಲಿಲ್ಲ? ಒಂದು ವೇಳೆ ಸುಭಾಷ್ ಸೇನಾದ ಬದಲು ಅಬ್ದುಲ್ ಕಲಾಮ್ ಆಝಾದ್ ಸೇನಾ ಆಗಿರುತ್ತಿದ್ದರೆ ಪಕ್ಷಗಳು ಈ ಮಟ್ಟದಲ್ಲಿ ಮೌನ ವಹಿಸುತ್ತಿದ್ದುವೇ? ದಾದ್ರಿಯ ಅಖ್ಲಾಕ್ ಮನೆಯ ಫ್ರಿಡ್ಜ್ ನಲ್ಲಿದ್ದ  ಮಾಂಸದ ಬಗ್ಗೆ  ಇನ್ನೂ ಕುತೂಹಲ ವ್ಯಕ್ತಪಡಿಸುತ್ತಿರುವ ಮತ್ತು ಆ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿರುವ ಬಿಜೆಪಿಯ ನಿಲುವು ಏನಿರುತ್ತಿತ್ತು? ಮಾರಕ ಆಯುಧಗಳನ್ನು ಹೊಂದಿದ ಆಝಾದ್ ಗುಂಪನ್ನು ಅದು ದೇಶವಿರೋಧಿಯಾಗಿ ಕಾಣುತ್ತಿರಲಿಲ್ಲವೇ? ಪಾಕ್‍ನ ಐಎಸ್‍ಐನೊಂದಿಗೂ ಇರಾಕ್ ಮತ್ತು ಸಿರಿಯಾಗಳಲ್ಲಿರುವ ಐಎಸ್‍ಐನೊಂದಿಗೂ ಇಂಡಿಯನ್ ಮುಜಾಹಿದೀನ್‍ನೊಂದಿಗೂ ಈ ಗುಂಪಿಗಿರುವ ಸಂಬಂಧವನ್ನು ಅದು ಪತ್ತೆ ಹಚ್ಚುತ್ತಿರಲಿಲ್ಲವೇ? ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಮುಖ್ಯ ವಿಷಯವಾಗಿ ಅದು ಈ ವಿಷಯವನ್ನೇ ಎತ್ತಿಕೊಳ್ಳುತ್ತಿರಲಿಲ್ಲವೇ? ಮುಸ್ಲಿಮರ ಒರಟುತನಕ್ಕೆ, ಅವರ ಭಯೋತ್ಪಾದಕ ಮನಸ್ಥಿತಿಗೆ, ದೇಶವಿರೋಧಿ ನಿಲುವಿಗೆ ಪುರಾವೆಯಾಗಿ ಈ ಘಟನೆಯನ್ನು ಉದಾಹರಿಸಿಕೊಂಡು ಎಷ್ಟು ಟಿ.ವಿ. ಡಿಬೆಟ್‍ಗಳು ನಡೆಯುತ್ತಿರಲಿಲ್ಲ? ಎಷ್ಟು ಲೇಖನಗಳು ಪ್ರಕಟವಾಗುತ್ತಿರಲಿಲ್ಲ? ಎಷ್ಟೆಷ್ಟು ಪತ್ರಿಕಾ ಹೇಳಿಕೆಗಳು, ಭಾಷಣಗಳು ನಡೆಯುತ್ತಿರಲಿಲ್ಲ?
  ನಿಜವಾಗಿ, 2012ರಲ್ಲಿ ಮೃತಪಟ್ಟ ಬಾಬಾ ಜೈ ಗುರುದೇವ್‍ರ ಅನುಯಾಯಿಗಳ ಪಟ್ಟಿಯಲ್ಲಿ ರಾಜನಾಥ್ ಸಿಂಗ್, ಮುಲಾಯಂ ಸಿಂಗ್‍ರಿಂದ ಹಿಡಿದು ಇಂದಿರಾ ಗಾಂಧಿಯ ವರೆಗೆ ಎಲ್ಲರೂ ಇದ್ದಾರೆ. ಅಧ್ಯಾತ್ಮ ಕ್ಷೇತ್ರವು ಈ ದೇಶದಲ್ಲಿ ಎಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಅನ್ನುವುದು ಪ್ರತಿದಿನದ ಬೆಳವಣಿಗೆಗಳು ಇಲ್ಲಿ ಸ್ಪಷ್ಟಪಡಿಸುತ್ತಲೇ ಇವೆ. ಸ್ವಘೋಷಿತ ದೇವಮಾನವರು, ಗುರುಗಳೆಲ್ಲ ತಮ್ಮ ಅನುಯಾಯಿಗಳ ಪಟ್ಟಿಯಲ್ಲಿ ರಾಜಕಾರಣಿಗಳನ್ನು ತಪ್ಪದೇ ಸೇರಿಸಿಕೊಳ್ಳುತ್ತಿರುತ್ತಾರೆ. ರಾಜಕಾರಣಿ ಮತ್ತು ಆಧ್ಯಾತ್ಮ ಗುರುಗಳ ನಡುವಿನ ಸಂಪರ್ಕ ಬಲಗೊಂಡಷ್ಟೂ ವಂಚನೆಗೆ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅಧ್ಯಾತ್ಮದ ಹೆಸರಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಉಡಾಫೆ ನಿಲುವು ಅನೇಕರಲ್ಲಿದೆ. ಅದಕ್ಕೆ ಪೂರಕವಾಗಿ ರಾಜಕಾರಣಿಗಳನ್ನು ಈ ಕ್ಷೇತ್ರ ಬಳಸಿಕೊಳ್ಳುತ್ತಿರುತ್ತದೆ. ಇಲ್ಲದಿದ್ದರೆ ಈ ಸ್ವಾಧೀನ್ ಭಾರತ್ ಗುಂಪನ್ನು ಜವಾಹರ್ ಪಾರ್ಕ್‍ನಿಂದ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ 2015ರಲ್ಲೇ ಆದೇಶಿಸಿದ್ದರೂ ಮತ್ತೂ ಒಂದು ವರ್ಷದ ವರೆಗೆ ಮಥುರಾ ಜಿಲ್ಲಾಡಳಿತ ಮೌನವಾದದ್ದು ಯಾಕೆ?  ಸರಕಾರಿ ಭೂಮಿಯಲ್ಲಿ ಸೋಗೆ ಮಾಡಿ ಗುಡಿಸಲನ್ನು ಕಟ್ಟಿಕೊಂಡ ಬಡವನ ಬಗ್ಗೆ ಜಿಲ್ಲಾಡಳಿತ ಇಷ್ಟು ಸಹನೆ ವಹಿಸುತ್ತಿತ್ತೇ?
  ಏನೇ ಆಗಲಿ, ಮಥುರಾದ ಜವಾಹರ್ ಉದ್ಯಾನವು ಈ ದೇಶವನ್ನಾಳುವ ಬಿಜೆಪಿಯ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಬಿಜೆಪಿಯೇ ಯಾಕೆ ಮುಖ್ಯ ಅಂದರೆ, ಬಿಜೆಪಿಯಷ್ಟು ಪ್ರಚ್ಛನ್ನವಾಗಿ
ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಬೇರೆ ರಾಷ್ಟ್ರೀಯ ಪಕ್ಷಗಳಿಲ್ಲ ಎಂಬುದರಿಂದ. ಮುಝಫ್ಫರ್ ನಗರಕ್ಕೆ ಬೆಂಕಿ ಕೊಟ್ಟು ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಗೆ ಜವಾಹರ್ ಪಾರ್ಕ್‍ಗೆ ಬೆಂಕಿ ಕೊಟ್ಟು ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಕಷ್ಟವೇನೂ ಇರಲಿಲ್ಲ. ಆದರೆ ಮುಝಫ್ಫರ್ ನಗರಕ್ಕಿದ್ದ ಹಿಂದೂ-ಮುಸ್ಲಿಮ್ ವಿಶೇಷತೆ ಜವಾಹರ್ ಪಾರ್ಕ್‍ಕೆ ಇಲ್ಲ ಎಂಬುದೇ ಬಿಜೆಪಿಯ ಪಾಲಿನ ಬಹುದೊಡ್ಡ ಹಿನ್ನಡೆ. ಆದ್ದರಿಂದಲೇ ಅದು ಸ್ವಾಧೀನ್ ಭಾರತ್ ಗುಂಪಿನ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳ ಬಗ್ಗೆಯಾಗಲಿ, ಎರಡು ವರ್ಷಗಳ ವರೆಗೆ ಅಕ್ರಮವಾಗಿ ನೆಲೆಸಿರುವ ಬಗ್ಗೆಯಾಗಲಿ ಗಂಭೀರವಾಗಿ ಮಾತಾಡುತ್ತಲೇ ಇಲ್ಲ. ಅದನ್ನು ದೇಶದ್ರೋಹವಾಗಿಯೂ ಅದು ಕಾಣುತ್ತಿಲ್ಲ. ಸ್ವಾದೀನ್ ಭಾರತ್ ಗುಂಪನ್ನು ಖಂಡಿಸಲು ಬಿಜೆಪಿ ಬಳಸಿರುವ ಪದಗಳಲ್ಲಿ ಎಷ್ಟು ಮೃದುತನವಿದೆಯೆಂದರೆ, ಅವು ಜೋಗಳದಷ್ಟೇ ಇಂಪಾಗಿವೆ. ಈ ಬಗೆಯ ದ್ವಂದ್ವಕ್ಕೆ ಧಿಕ್ಕಾರವನ್ನಲ್ಲದೇ ಇನ್ನೇನು ತಾನೇ ಹೇಳಲು ಸಾಧ್ಯ?

Friday, 3 June 2016

ಕಲ್ಯಾಣ ರಾಷ್ಟ್ರದ ಪ್ರಣಾಳಿಕೆ ಮತ್ತು ಟ್ರಾಫಿಕ್ ಲೈಟು

          ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಸ್ವರೂಪ ಯಾವುದು? ಪ್ರಚಲಿತದಲ್ಲಿರುವ ಕಾನೂನುಗಳು, ನಿಯಮ ಸಂಹಿತೆಗಳು ಮತ್ತು ರೀತಿ-ರಿವಾಜುಗಳನ್ನೆಲ್ಲ ಅನಾಮತ್ತಾಗಿ ರದ್ದುಪಡಿಸಿ, ಬೇರೆಯದೇ ಆದ ಅಮಾನುಷ ನಿಯಮಗಳನ್ನು ಹೇರುವುದು ಅದರ ರೀತಿಯೇ? ಯಾಕೆ ಇಂಥದ್ದೊಂದು ಪ್ರಶ್ನೆ ಎದುರಾಗುತ್ತದೆಂದರೆ, ಸಾಮಾನ್ಯವಾಗಿ ಇಸ್ಲಾಮೀ ಕಾನೂನು ಅಂದ ತಕ್ಷಣ ಶರೀಅತ್ ಎಂಬೊಂದು ಆಕೃತಿ ಪ್ರತ್ಯಕ್ಷಗೊಳ್ಳುತ್ತದೆ. ಈ ಆಕೃತಿಗೆ ಸಮಾಜ ಇವತ್ತು ಎಷ್ಟು ಕರ್ರಗಿನ ಬಣ್ಣವನ್ನು ಬಳಿದಿದೆಯೆಂದರೆ, ಈ ಆಕೃತಿ ಅಸ್ತಿತ್ವದಲ್ಲಿರುವುದೇ ಜನರ ತಲೆ ಕಡಿಯಲು, ಕಲ್ಲೆಸೆದು ಕೊಲ್ಲಲು, ಶೋಷಕರನ್ನು ರಕ್ಷಿಸಲು, ಹೆಣ್ಣನ್ನು ಗುಲಾಮಳನ್ನಾಗಿಸಲು, ಮಾನವ ಹಕ್ಕುಗಳನ್ನೆಲ್ಲ ಸಾರಾಸಗಟು ಉಲ್ಲಂಘಿಸಲು.. ಇತ್ಯಾದಿ ಇತ್ಯಾದಿಗಳಿಗಾಗಿ ಎಂದು ಅಂದುಕೊಳ್ಳುವಷ್ಟು. ಇಸ್ಲಾಮ್‍ಗೆ ಮತ್ತು ಅದು ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರದ ಪ್ರಣಾಳಿಕೆಗೆ ಸಂಬಂಧಿಸಿ ಸಾಕಷ್ಟು ಮಂದಿಯಲ್ಲಿ ಇಂಥ ತಿರುಚಿದ ಅಭಿಪ್ರಾಯಗಳಿವೆ. ಶರೀಅತ್ ಎಂಬುದು ಅವರ ಮಟ್ಟಿಗೆ ಅತ್ಯಂತ ಹಿಂಸಾತ್ಮಕ ಮತ್ತು ಬರ್ಬರವಾದುದು. ಕಲ್ಯಾಣ ರಾಷ್ಟ್ರವನ್ನು ಪರಿಚಯಿಸಲು ಇಸ್ಲಾಮ್‍ಗೆ ಸಾಧ್ಯವೇ ಇಲ್ಲ ಎಂದು ಪ್ರಾಮಾಣಿಕವಾಗಿ ನಂಬುವವರೂ ಈ ವರ್ಗದಲ್ಲಿದ್ದಾರೆ. ಹಾಗಂತ, ಈ ವರ್ಗದ ಈ ಬಗೆಯ ಅಭಿಪ್ರಾಯಗಳಿಗೆ ಅವರನ್ನೇ ಹೊಣೆಯಾಗಿಸುವುದು ಸಂಪೂರ್ಣ ಸರಿಯಾಗುವುದೂ ಇಲ್ಲ. ಇಸ್ಲಾಮ್‍ನ ಅನುಯಾಯಿಗಳೆಂದು ಗುರುತಿಸಿಕೊಂಡವರ ವರ್ತನೆಗೂ ಇದರಲ್ಲಿ ಪಾಲಿದೆ. ಅವರ ಕೆಲವು ಅಮಾನುಷ ಕೃತ್ಯಗಳು ಇಸ್ಲಾಮ್‍ನ ಟ್ಯಾಗ್‍ಲೈನ್‍ನೊಂದಿಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ನಾವು ಈ ಅಭಿಪ್ರಾಯದ ಜೊತೆಗಿಟ್ಟು ನೋಡಲೇಬೇಕಾಗುತ್ತದೆ. ನಿಜಕ್ಕೂ ಇಸ್ಲಾಮ್ ಪ್ರಸ್ತುಪಡಿಸುವ ಕಲ್ಯಾಣ ರಾಷ್ಟ್ರವು ಭೀಕರವೇ, ಮನುಷ್ಯ ವಿರೋಧಿಯೇ ಅಥವಾ ಸರ್ವರ ಹಿತಾಕಾಂಕ್ಷಿಯೇ? ಅದು ಮುಂದಿಡಬಯಸುವ ಪ್ರಣಾಳಿಕೆ ಯಾವುದು?
        ಇಸ್ಲಾಮ್ ಪ್ರಸ್ತುತಪಡಿಸುವ ಕಲ್ಯಾಣ ರಾಷ್ಟ್ರವೆಂದರೆ, ಪ್ರಸ್ತುತ ಇರುವ ನಿಯಮಗಳನ್ನೆಲ್ಲ ರದ್ದುಪಡಿಸುವುದರ ಹೆಸರಲ್ಲ ಬದಲು ನಿಯಮಗಳಿಗೆ ಬದ್ಧವಾಗಿ ಬದುಕುವ ನಾಗರಿಕರನ್ನು ತಯಾರಿಸುವುದು. ಸರಿ ಮತ್ತು ತಪ್ಪುಗಳ ಬಗ್ಗೆ ಅತ್ಯಂತ ವಿವೇಚನೆಯಿಂದ ನಡಕೊಳ್ಳುವ ಸಮಾಜವನ್ನು ನಿರ್ಮಿಸುವುದು. ಟ್ರಾಫಿಕ್‍ನಲ್ಲಿ ಒಂದು ನಿಯಮವಿದೆ. ಕೆಂಪು ಲೈಟು ಉರಿದಾಗ ವಾಹನಗಳು ನಿಲ್ಲಬೇಕು. ಹಸಿರು ಲೈಟು ಉರಿದಾಗ ಚಲಿಸಬೇಕು. ನಿಯಮಕ್ಕೆ ಬದ್ಧವಾಗುವುದೆಂದರೆ ಹೀಗೆ. ಟ್ರಾಫಿಕ್ ಲೈಟ್ ಇಲ್ಲಿ ಒಂದು ಸಂಕೇತ ಮಾತ್ರ. ಪ್ರತಿ ವಿಷಯಕ್ಕೂ ಈ ನಿಯಮ ಅನ್ವಯಿಸುತ್ತದೆ. ಕಾನೂನಿಗೆ ಬದ್ಧವಾಗಿ, ನಿಯಮಗಳಿಗೆ ಅಧೀನವಾಗಿ ಬದುಕುವ ಒಂದು ಸಮಾಜದ ಹೆಸರೇ ಕಲ್ಯಾಣ ರಾಷ್ಟ್ರ. ದುರಂತ ಏನೆಂದರೆ, ಇಸ್ಲಾಮ್‍ಗೆ ಸಂಬಂಧಿಸಿ ಹೇಳುವಾಗ ಇಂಥ ನಿಯಮಗಳನ್ನು ಉಲ್ಲಂಘಿಸುವುದೇ ಅದರ ನಿಜ ಸ್ವರೂಪ ಎಂದು ಹೇಳಲಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಯಾವುದೆಲ್ಲ ಕಲ್ಯಾಣಕಾರಿ ನಿಯಮಗಳು ಇವೆಯೋ ಅವೆಲ್ಲವನ್ನೂ ಇಸ್ಲಾಮ್‍ನ ನಾಗರಿಕ ನಿಯಮಗಳು ಅಮಾನ್ಯಗೊಳಿಸುತ್ತವೆ ಎಂದೇ ನಂಬಿಬಿಡಲಾಗಿದೆ. ಈ ಅಪಾರ್ಥದ ಮಟ್ಟ ಹೇಗಿದೆಯೆಂದರೆ, ಟ್ರಾಫಿಕ್‍ನಲ್ಲಿ ಕೆಂಪು ಲೈಟು ಉರಿದರೆ ನಿಲ್ಲುವ ಬದಲು ಇಸ್ಲಾಮೀ ಪ್ರಣಾಳಿಕೆಯು ಚಲಿಸಲು ಹೇಳುತ್ತದೆ ಎಂದು ಹೇಳುವಷ್ಟು. ಪ್ರಸ್ತುತ ಅಸ್ತಿತ್ವದಲ್ಲಿರುವ ಸರ್ವ ನಿಯಮಗಳಿಗೆ ವಿರುದ್ಧವಾದುದೇ ಇಸ್ಲಾಮೀ ನಿಯಮಗಳು ಎಂದು ಅಂದುಕೊಳ್ಳಲಾಗಿದೆ. ನಿಜವಾಗಿ, ಇಸ್ಲಾಮ್ ಅತ್ಯಂತ ಪ್ರಗತಿಪರ ಅಥವಾ ಭಾರತೀಯ ಭಾಷೆಯಲ್ಲಿ ಹೇಳುವುದಾದರೆ ಅತ್ಯಂತ ಸೆಕ್ಯುಲರ್ ಪ್ರಣಾಳಿಕೆಯನ್ನು ಸಮಾಜದ ಮುಂದಿಡುತ್ತದೆ. ಅದು ಕೆಂಪು ಲೈಟು ಉರಿಯುವಾಗ ಚಲಿಸಲು ಆದೇಶಿಸುವ ಪ್ರಣಾಳಿಕೆಯಲ್ಲ. ಕೆಂಪು ಲೈಟು ಸೂಚಿಸುವ ನಿಯಮಕ್ಕೆ ಬದ್ಧವಾಗಿ ಬದುಕುವಂತೆ ಸಮಾಜವನ್ನು ತಿದ್ದುವ ಪ್ರಣಾಳಿಕೆ. ಕಾನೂನನ್ನು ಪ್ರೀತಿಸುವ ಮತ್ತು ಕಾನೂನು ಉಲ್ಲಂಘನೆಯನ್ನು ಇಷ್ಟಪಡದ ನಾಗರಿಕರನ್ನು ತಯಾರಿಸುವ ಪ್ರಣಾಳಿಕೆ. ಅದು ನಾಗರಿಕರನ್ನು ಶಿಕ್ಷಿಸಬಯಸುವ ಪ್ರಣಾಳಿಕೆಯಲ್ಲ, ನಾಗರಿಕರನ್ನು ಸಂಸ್ಕರಿಸ ಬಯಸುವ ಪ್ರಣಾಳಿಕೆ.
         ಈ ಪ್ರಣಾಳಿಕೆಯ ಕುರಿತಂತೆ ಅಸ್ತಿತ್ವದಲ್ಲಿರುವ ಸುಳ್ಳುಗಳಿಗೆ ಸೋಲಾಗಲಿ ಎಂದೇ ಪ್ರಾರ್ಥಿಸೋಣ.

Friday, 27 May 2016

ತಲಾಕ್: ಚಲಾವಣೆಯಲ್ಲಿರುವ ಸುಳ್ಳು ಮತ್ತು ನಿದ್ದೆಯಲ್ಲಿರುವ ಸತ್ಯ

       ಮುಸ್ಲಿಮರಿಗೆ ಸಂಬಂಧಿಸಿ ಈ ದೇಶದಲ್ಲಿ ಕೆಲವು ಕುತೂಹಲಕಾರಿ ಅಭಿಪ್ರಾಯಗಳಿವೆ. ವರ್ಷಪೂರ್ತಿ ಚರ್ಚಿಸಿದರೂ ಆಸಕ್ತಿಗೆ ಭಂಗ ಉಂಟಾಗದಷ್ಟು ಅಪಾರ ವಿಷಯ ಸಂಪತ್ತನ್ನು ಈ ಸಮುದಾಯ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದು ಪ್ರಾಮಾಣಿಕವಾಗಿ ನಂಬಿದವರು ಈ ದೇಶದಲ್ಲಿದ್ದಾರೆ. ಜಿಹಾದ್, ನಿಕಾಹ್, ತಲಾಕ್, ಖುಲಾ, ಫಸ್ಕ್, ಶರೀಅತ್, ಅಲ್ಲಾಹು, ಮದ್ರಸ, ಮಸೀದಿ, ಕುರ್‍ಆನ್, ಪ್ರವಾದಿ ಮುಹಮ್ಮದ್(ಸ).. ಮುಂತಾದುವುಗಳೆಲ್ಲ ಅವರ ಪಾಲಿಗೆ ಇನ್ನೂ ಗೋಣಿಚೀಲದೊಳಗಡೆಯೇ ಇದೆ. ಅವರಿಗೆ ಯಾರೂ ಅದನ್ನು ಸರಿಯಾಗಿ ಕಟ್ಟು ಬಿಚ್ಚಿ ತೋರಿಸಿಲ್ಲ ಅಥವಾ ಅವರು ನೋಡಲು ಬಯಸುತ್ತಿಲ್ಲ. ಕೆಲವರು ಗೋಣಿಚೀಲದೊಳಗೆ ಏನೇನಿವೆ ಮತ್ತು ಅವು ಎಷ್ಟು ಅಪಾಯಕಾರಿ ಎಂಬುದಾಗಿ ಹೊರಗಡೆಯಿಂದಲೇ ವಿವರಿಸುತ್ತಾರೆ. ಇನ್ನೂ ಕೆಲವರು ಭಾಗಶಃ ಕಟ್ಟನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ ಮತ್ತು ತಾವು ಕಂಡಿರುವುದಕ್ಕಿಂತ ಕಾಣದಿರುವುದರ ಮೇಲೆಯೇ ಕುತೂಹಲಕಾರಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು, ಈ ಗೋಣಿಚೀಲದ ಕಟ್ಟನ್ನು ಅಧಿಕೃತವಾಗಿ ಬಿಚ್ಚ ಬೇಕಾದವರು ಮತ್ತು ಅದರೊಳಗಡೆ ಇರುವುದನ್ನೆಲ್ಲ ಸಮಾಜದ ಮುಂದೆ ಪ್ರದರ್ಶಿಸಬೇಕಾದವರಲ್ಲೂ ಹಿಂಜರಿಕೆಯೋ ಜಿಪುಣತೆಯೋ ಏನೋ ಒಂದು ಕಾಣಿಸುತ್ತದೆ. ಅವರ ಮಾತುಗಳಲ್ಲಿ ಅಸ್ಪಷ್ಟತೆ ಇಣುಕುತ್ತದೆ. ಕಾಲ, ಪರಿಸ್ಥಿತಿ, ಸನ್ನಿವೇಶಗಳಿಗೆ ಸಂಪೂರ್ಣ ಬೆನ್ನು ಹಾಕಿಕೊಂಡು ಅವರು ಕೊಡುವ ಕೆಲವೊಂದು ವಿವರಗಳು ಇಡೀ ಗೋಣಿಚೀಲವನ್ನೆ ಡೈನೋಸರ್‍ನಂತೆ ಬಿಂಬಿಸುತ್ತಿವೆ. ಅದರೊಳಗಡೆಯಿರುವ ವಸ್ತುಗಳನ್ನು ಟೈಂಬಾಂಬ್‍ನಂತೆ ಪರಿಚಯಿಸುತ್ತಿವೆ. ಈ ಗೊಂದಲಕಾರಿ ವಾತಾವರಣದ ಕಾರಣದಿಂದಾಗಿಯೇ ಜೈಪುರದ ಅಫ್ರೀನ್ ರಹ್ಮಾನ್ ಎಂಬ ಮಹಿಳೆ ಕಳೆದವಾರ ಸುದ್ದಿಗೀಡಾಗಿದ್ದಾಳೆ. ತನ್ನ ಗಂಡ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ ತಲಾಕ್ ತಲಾಕ್ ತಲಾಕ್ ಅನ್ನು ಪ್ರಶ್ನಿಸಿ ಆಕೆ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾಳೆ. ‘ಈ ತಲಾಕ್ (ವಿಚ್ಛೇದನ) ಅಸಿಂಧು, ಅಧರ್ಮ, ಅಸ್ವೀಕಾರಾರ್ಹ..’ ಎಂದಾಕೆ ವಾದಿಸಿದ್ದಾಳೆ. ನಿಜವಾಗಿ, ಆಕೆಯ ವಾದದಲ್ಲಿ ಕುತೂಹಲಕಾರಿಯಾದುದೇನೂ ಇಲ್ಲ. ನಿಕಾಹ್ (ಮದುವೆ) ಎಂಬ ಇಸ್ಲಾಮೀ ಕಾನೂನುಬದ್ಧ ಒಪ್ಪಂದವು ಒಂದು ಸ್ಪೀಡ್ ಪೋಸ್ಟ್ ನಲ್ಲಿ ಮುರಿಯುವಷ್ಟು ದುರ್ಬಲವಲ್ಲ. ನಿಕಾಹ್‍ಗೆ ಷರತ್ತುಗಳಿವೆ. ತಲಾಕ್‍ಗೂ ಷರತ್ತುಗಳಿವೆ. ಈ ಷರತ್ತುಗಳನ್ನು ಪುರುಷ ಹೇಗೆ ಬೇಕಾದರೂ ಉಲ್ಲಂಘಿಸಬಹುದು ಎಂಬ ಉದಾರ ನಿಲುವು ಇಸ್ಲಾಮೀ ವಿವಾಹ ಸಂಹಿತೆಯಲ್ಲಿ ಎಲ್ಲೂ ಇಲ್ಲ. ನಿಜವಾಗಿ, ವಿಚ್ಛೇದನದ ವಿಷಯದಲ್ಲಿ ಇಸ್ಲಾಮ್ ಅತ್ಯಂತ ಉದಾರ ನೀತಿಯನ್ನು ತಳೆದಿರುವುದು ಮಹಿಳೆಯರ ಬಗ್ಗೆಯೇ. ಮಾತ್ರವಲ್ಲ, ಇಸ್ಲಾಮೀ ವಿವಾಹ ಸಂಹಿತೆಯನ್ನು ಮಹಿಳಾ ಪರ ಎಂದೂ ಹೇಳಬಹುದು. ಅಂದಹಾಗೆ, ಪತಿಯು ವಿವಾಹ ವಿಚ್ಛೇದನ ನೀಡುವುದಕ್ಕೆ ‘ತಲಾಕ್’ ಎಂದು ಹೇಳುವಾಗ, ಪತ್ನಿಯು ಪತಿಯಿಂದ ವಿವಾಹ ವಿಚ್ಛೇದನವನ್ನು ಕೋರುವುದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಇಲ್ಲಿ, ಬಹುಮುಖ್ಯವಾದ ವಿಷಯವೊಂದಿದೆ. ಪುರುಷನು ಮೂರು ಬಾರಿ ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿಬಿಡುವ ಪದ್ಧತಿಯನ್ನು ಪವಿತ್ರ ಕುರ್‍ಆನ್ ಎಲ್ಲೂ ಪ್ರಸ್ತುತಪಡಿಸಿಯೇ ಇಲ್ಲ. ಅದು ವಿಚ್ಛೇದನಕ್ಕೆ ಅತ್ಯಂತ ಪ್ರಾಯೋಗಿಕ ಮತ್ತು ಪ್ರಾಕೃತಿಕವೆನ್ನಬಹುದಾದ ಮಾನದಂಡಗಳನ್ನು ನಿಶ್ಚಯಿಸಿದೆ. ಪುರುಷನು ಒಮ್ಮೆಗೆ ಒಂದು ತಲಾಕನ್ನು ಮಾತ್ರ ಹೇಳಬಹುದು. ಈ ತಲಾಕ್‍ಗಿಂತಲೂ ಮೊದಲು ಅವರಿಬ್ಬರ (ಪತಿ-ಪತ್ನಿ) ನಡುವೆ ಎರಡೂ ಕಡೆಯವರಿಂದ ರಾಜಿ ಪಂಚಾಯಿತಿಕೆಗಳು ನಡೆಯಬೇಕು. ಮಾತುಕತೆ, ಸಮಜಾಷಿಕೆಗಳು ಏರ್ಪಡಬೇಕು. ಇದರಿಂದಲೂ ಆತ ತೃಪ್ತನಾಗದಿದ್ದರೆ ಒಂದು ತಲಾಕ್ ಹೇಳಬೇಕು. ಹಾಗೆ ಹೇಳುವುದರಿಂದ ಪತಿ-ಪತ್ನಿಯರ ನಡುವೆ ವಿವಾಹ ವಿಚ್ಛೇದನವೇನೂ ಆಗುವುದಿಲ್ಲ. ಹಾಗೆ ತಲಾಕ್ ಹೇಳಿಕ ಬಳಿಕವೂ ಪತಿ-ಪತ್ನಿ ಒಂದೇ ಮನೆಯಲ್ಲಿ ಉಳಿಯಬೇಕು. ಪತಿ-ಪತ್ನಿಯರಾಗಿಯೇ ಬಾಳಬೇಕು. ಹೀಗೆ ಮುಟ್ಟಿನ ಅವಧಿಯ ವರೆಗೆ (ಒಂದು ತಿಂಗಳು) ಮುಂದುವರಿದರೆ ಮತ್ತು ಆತ ತನ್ನ ನಿಲುವಿನಲ್ಲಿ ಸ್ಥಿರವಾಗಿದ್ದರೆ ಎರಡನೇ ತಲಾಕ್ ಹೇಳಬೇಕು. ಒಂದು ವೇಳೆ ಈ ಅವಧಿಯ ಒಳಗೆ ಅವರಿಬ್ಬರ ನಡುವೆ ಅನುರಾಗ ಉಂಟಾಗಿ, ದೈಹಿಕ ಸಂಪರ್ಕ ಏರ್ಪಟ್ಟರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಹೀಗೆ ಸಾಗುವ ಈ ವಿಚ್ಛೇದನ ಪ್ರಕ್ರಿಯೆಗೆ  ಕನಿಷ್ಠವೆಂದರೆ 3 ತಿಂಗಳಾದರೂ ಬೇಕು. ಗರಿಷ್ಠ ಎಷ್ಟೂ ಆಗಬಹುದು. (ಅಧ್ಯಾಯ ಅನ್ನಿಸಾ ಮತ್ತು ಅತ್ತಲಾಕ್)
  ಅದೇ ವೇಳೆ, ಪತಿಯಿಂದ ವಿಚ್ಛೇದನವನ್ನು (ಖುಲಾ) ಕೋರುವ ಪತ್ನಿಯ ಮುಂದೆ ಇಷ್ಟೊಂದು ಕಠಿಣ ನಿಯಮಾವಳಿಗಳು ಇಲ್ಲವೇ ಇಲ್ಲ. ಅದು ತೀರಾ ಸರಳ ಮತ್ತು ಸರಾಗ. ತನಗೆ ಪತಿ ಇಷ್ಟವಾಗದಿದ್ದರೆ ವಿಚ್ಛೇದನ (ಖುಲಾ) ಕೊಡುವಂತೆ ಆಕೆ ಆತನಲ್ಲಿ ಕೋರಬಹುದು. ಆತ ಒಪ್ಪದಿದ್ದರೆ ನೇರವಾಗಿ ಖಾಝಿಯ ಬಳಿಗೆ ತೆರಳಿ ವಿವಾಹವನ್ನು ರದ್ದು(ಫಸ್ಕ್)ಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಗೆ ಗಂಟೆ, ದಿನ, ತಿಂಗಳು ಏನನ್ನೂ ನಿರ್ಧರಿಸಲಾಗಿಲ್ಲ. ವಿಷಾದ ಏನೆಂದರೆ, ತಲಾಕನ್ನು ಮಹಿಳಾ ವಿರೋಧಿ ಎಂದು ಹೇಳುವ ಮತ್ತು ಈ ವಾದವನ್ನು  ಸಮರ್ಥಿಸುವುದಕ್ಕಾಗಿ ಪುಟಗಟ್ಟಲೆ ಬರೆಯುವ ಯಾರೂ ಕೂಡ ಈ ಸತ್ಯವನ್ನು ಎಲ್ಲೂ ಹೇಳುತ್ತಲೇ ಇಲ್ಲ. ನಿಜವಾಗಿ, ಬೀದಿಗಿಳಿಯಬೇಕಾದದ್ದು ಹೆಣ್ಣಲ್ಲ, ಗಂಡು. ಪುರುಷನ ಪಾಲಿಗೆ ಅತಿ ಕಠಿಣ ಷರತ್ತುಗಳನ್ನು ಒಳಗೊಂಡಿರುವ ತಲಾಕ್ ಕ್ರಮವನ್ನು ಇವತ್ತು ಹೇಗೆ ತಿರುಚಿ ಬಿಡಲಾಗಿದೆಯೆಂದರೆ, ಈ ಭೂಮಿಯ ಮೇಲೆ ಮತ್ತು ಆಕಾಶದ ಕೆಳಗೆ ಇರುವ ಅತಿ ನೀಚ ಮಹಿಳಾ ಶೋಷಕ ಕಾನೂನು ಇಸ್ಲಾಮ್‍ನಲ್ಲಿದೆ ಎಂಬುದಾಗಿ. ಹಾಗಂತ, ಈ ತಪ್ಪು ತಿಳುವಳಿಕೆಗೆ ಮುಸ್ಲಿಮರ ಕೊಡುಗೆ ಖಂಡಿತ ಇದೆ. ತಲಾಕ್‍ನ ಅತ್ಯಂತ ಸುಂದರ ರೂಪವನ್ನು ಗೋಣಿಚೀಲದಲ್ಲಿ ಅವರು ಬಚ್ಚಿಟ್ಟಿದ್ದಾರೆ ಮತ್ತು ಅದರ ನಾಮಧಾರಿ ಅನುಯಾಯಿಗಳು ತಲಾಕ್‍ನ ಅತ್ಯಂತ ಕರಾಳ ರೂಪವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಸಂಗತಿ ಏನೆಂದರೆ, ಈ ಕರಾಳ ರೂಪವನ್ನೇ ತಲಾಕ್‍ನ ಅಧಿಕೃತ ರೂಪ ಮತ್ತು ಅತ್ಯಂತ ಸರಿಯಾದ ರೂಪ ಎಂದು ಕೆಲವರು ಪತ್ರಿಕೆಗಳಲ್ಲೂ ಟಿ.ವಿ.ಗಳಲ್ಲೂ ವೇದಿಕೆಗಳಲ್ಲೂ ಅತ್ಯಂತ ತಾರಕ ಧ್ವನಿಯಲ್ಲಿ ಘೋಷಿಸುತ್ತಿರುವುದು. ಇದೇ ಮಂದಿ ಸಮಾಜದ ಇನ್ನಿತರ ಘಟನೆಗಳಿಗೆ ಸಂಬಂಧಿಸಿ ಇಷ್ಟೊಂದು ಉಡಾಫೆಯ ನಿಲುವನ್ನು ಎಂದೂ ತಾಳುವುದಿಲ್ಲ. ಅವರು ಆ ಘಟನೆ ಅಧಿಕೃತವೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸಿಕೊಳ್ಳುತ್ತಾರೆ. ಆ ಘಟನೆಗಿರುವ ಕಾರಣಗಳನ್ನು ಪತ್ತೆಹಚ್ಚಲು ಶ್ರಮಿಸುತ್ತಾರೆ. ಅಧ್ಯಯನ ನಡೆಸುತ್ತಾರೆ. ಆದರೆ ತಲಾಕ್‍ನ ವಿಷಯದಲ್ಲಿ ಮಾತ್ರ ಇವರೆಲ್ಲ ಅಪ್ಪಟ ಸೋಮಾರಿಗಳಂತೆ ವರ್ತಿಸುತ್ತಾರೆ. ಆದ್ದರಿಂದಲೇ, ಈ ಬಗ್ಗೆ ಅನುಮಾನ ಮೂಡುವುದು. ಇತರ ಸಂದರ್ಭಗಳಲ್ಲಿ ಪಾದರಸದ ಚುರುಕುತನವನ್ನು ಪ್ರದರ್ಶಿಸುವ ಈ ಗುಂಪು, ತಲಾಕ್‍ನಂತಹ ಇಸ್ಲಾಮೀ ಪಾರಿಭಾಷಿಕಗಳ ವಿಷಯದಲ್ಲಿ ಮಾತ್ರ ಈ ಸೋಮಾರಿತನ ಪ್ರದರ್ಶಿಸುತ್ತಿರುವುದೇಕೆ? ನಿಜಕ್ಕೂ, ಇದು ಸೋಮಾರಿತನವೋ ಅಥವಾ ಉದ್ದೇಶಪೂರ್ವಕ ಅಸಡ್ಡೆಯೋ? ಹಾಗಂತ,
  ದುರುಪಯೋಗಕ್ಕೆ ಒಳಗಾಗುತ್ತಿರುವುದು ಬರೇ ತಲಾಕ್ ಮಾತ್ರವೇ? ಈ ದೇಶದಲ್ಲಿ ದುರುಪಯೋಗಕ್ಕೊಳಗಾಗದ ಕಾನೂನುಗಳಾದರೂ ಎಷ್ಟಿವೆ? ವರದಕ್ಷಿಣೆಯನ್ನು ಕಾನೂನುಬಾಹಿರವೆಂದು ಸಾರುವ ಕಾನೂನು ಈ ದೇಶದಲ್ಲಿದೆ. ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಬಾಲ್ಯವಿವಾಹವನ್ನು ಕಾನೂನು ವಿರೋಧಿಯೆಂದು ಸಾರಲಾಗಿದೆ. 14 ವರ್ಷಕ್ಕಿಂತ ಕೆಳಗಿನವರ ದುಡಿತವನ್ನು ಇಲ್ಲಿನ ಕಾನೂನು ಅಪರಾಧವೆಂದು ಸಾರಿದೆ. ಭ್ರಷ್ಟಾಚಾರ ಅಪರಾಧವಾಗಿದೆ. ಅತ್ಯಾಚಾರ, ಕಳ್ಳತನ, ಗೃಹಹಿಂಸೆ, ತೆರಿಗೆ ವಂಚನೆ, ನಕಲಿ ಮತದಾನ, ನಕಲಿ ಪದವಿ.. ಎಲ್ಲವನ್ನೂ ಇಲ್ಲಿನ ಕಾನೂನು ಶಿಕ್ಷಾರ್ಹವೆಂದು  ಸಾರಿದೆ. ಆದರೆ ಈ ಕಾನೂನುಗಳನ್ನೆಲ್ಲ ಉಲ್ಲಂಘಿಸಲಾಗುತ್ತಿಲ್ಲವೇ? ವರದಕ್ಷಿಣೆ ವಿರೋಧಿ ಕಾನೂನಿನ ಹೊರತಾಗಿಯೂ ಇಲ್ಲಿ ವರದಕ್ಷಿಣೆ ಸಂಪ್ರದಾಯ ಅಸ್ತಿತ್ವದಲ್ಲಿದೆ ಎಂಬ ಕಾರಣವನ್ನು ಮುಂದೊಡ್ಡಿ ಆ ಕಾನೂನನ್ನೇ ಅಪರಾಧಿಗೊಳಿಸಬಹುದೇ? ಅತ್ಯಾಚಾರ ಪ್ರಕರಣಗಳನ್ನು ಕಾರಣವಾಗಿ ತೋರಿಸಿ ಅತ್ಯಾಚಾರಕ್ಕೆ ಸಂಬಂಧಿಸಿದ ಸರ್ವ ಪರಿಚ್ಛೇದಗಳನ್ನೂ ನಾಲಾಯಕ್ಕು ಎಂದು ಘೋಷಿಸಿಬಿಡಬಹುದೇ? ಅತ್ಯಾಚಾರಕ್ಕೆ ಪ್ರಚಲಿತ ಕಾನೂನೇ ಕಾರಣ ಎಂದು ಷರಾ ಬರೆದು ಬಿಡಬಹುದೇ? ಏರುತ್ತಿರುವ ಭ್ರಷ್ಟಾಚಾರ, ಗೃಹಹಿಂಸೆ, ಭಯೋತ್ಪಾದನೆ, ಕೋಮುವಾದ.. ಮುಂತಾದುವುಗಳನ್ನೆಲ್ಲ ನಾವು ಏನೆಂದು ವ್ಯಾಖ್ಯಾನಿಸಬಹುದು? ಅವುಗಳ ಹೊಣೆಯನ್ನು ಆಯಾ ಕಾನೂನುಗಳ ಮೇಲೆ ಹೊರಿಸಬಹುದೇ? ಅವನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಬಹುದೇ? ಅಷ್ಟಕ್ಕೂ,
  ಕಾನೂನುಗಳ ದುರುಪಯೋಗಕ್ಕೆ ಹೊಣೆಯಾಗಿಸಬೇಕಾದುದು ಆಯಾ ಕಾನೂನುಗಳನ್ನೋ ಅಥವಾ ದುರುಪಯೋಗಿಸಿದವರನ್ನೋ? ತಲಾಕ್‍ಗೆ ಸಂಬಂಧಿಸಿ ಆಗುವ ಚರ್ಚೆಗಳೆಲ್ಲ ಯಾಕೆ ಯಾವಾಗಲೂ ದಿಕ್ಕು ತಪ್ಪುತ್ತಿವೆ? ದುರುಪಯೋಗಿಸಿದವರ ಬದಲು ಕಾನೂನನ್ನೇ ಯಾಕೆ ಅಪರಾಧಿಯಾಗಿ ಕಾಣಲಾಗುತ್ತಿದೆ?  ತಲಾಕ್ ಸಹಿತ ಇಸ್ಲಾಮೀ ಪಾರಿಭಾಷಿಕಗಳ ಕುರಿತಂತೆ ತೋಚಿದಂತೆ ಹೇಳುವ ಉಡಾಫೆತನ ಯಾಕೆ ಸೃಷ್ಟಿಯಾಗಿದೆ? ಇದಕ್ಕೆ ನಾಮಧಾರಿ ಮುಸ್ಲಿಮರು ಮತ್ತು ಮಾಧ್ಯಮದವರ ಕೊಡುಗೆಗಳು ಏನೆಲ್ಲ? ಈ ಬಗ್ಗೆ ಗಂಭೀರ ಅವಲೋಕನ ನಡೆಯಲಿ.

Thursday, 19 May 2016

 ಭಿನ್ನಾಭಿಪ್ರಾಯಗಳ ನಡುವೆಯೂ ಇಷ್ಟವಾದ ನರೇಂದ್ರ ಮೋದಿ

        
      ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ಹಿರಿಯರ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡುವಲ್ಲಿ ಮಹಾತ್ಮಾ ಗಾಂಧಿಯವರ ಮೊಮ್ಮಗ ಕಾನೂಭಾಯಿ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಮೇ 16ರಂದು ಹೆಚ್ಚಿನ ಪತ್ರಿಕೆಗಳಲ್ಲಿ ಎರಡು ಪೋಟೋಗಳು ಪ್ರಕಟವಾಗಿವೆ. ಒಂದು, ಕಾನೂಭಾಯಿ ರಾಮದಾಸ್ ಗಾಂಧಿಯವರು ಪ್ರಧಾನಿ ನರೇಂದ್ರ  ಮೋದಿಯವರೊಂದಿಗೆ ಮೊಬೈಲ್‍ನಲ್ಲಿ ಮಾತಾಡುವುದಾದರೆ ಇನ್ನೊಂದು, ನರೇಂದ್ರ ಮೋದಿಯವರು ತಮ್ಮ ವೃದ್ಧ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ತಮ್ಮ ಮನೆಯ ಉದ್ಯಾನವನದಲ್ಲಿ ಸುತ್ತಾಡಿಸುವುದು. ತಾಯಿಗೆ ಉದ್ಯಾನವನದ ಸೌಂದರ್ಯವನ್ನು ವಿವರಿಸಿಕೊಡುವ ಮಗನಾಗಿ ನರೇಂದ್ರ ಮೋದಿಯವರು ಇಷ್ಟವಾಗುತ್ತಾರೆ. ಈ ಇಷ್ಟಕ್ಕೆ ಇನ್ನೊಂದು ಕಾರಣವೂ ಇದೆ. ಮೇ 14ರಂದು ದಿ ಹಿಂದೂ ಪತ್ರಿಕೆಯು ತನ್ನ ಮುಖಪುಟದಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಮಹಾತ್ಮಾ ಗಾಂಧಿಯವರ ಮೊಮ್ಮಗ (ಮಗ ಮೋಹನ್‍ದಾಸ್‍ರ ಮಗ) 87 ವರ್ಷದ ಕಾನೂಭಾಯಿ ಗಾಂಧಿ ಮತ್ತು ಅವರ ಪತ್ನಿ 85 ವರ್ಷದ ಶಿವಲಕ್ಷ್ಮಿ ಗಾಂಧಿಯವರು ದೆಹಲಿಯ ಗುರು ವಿಶ್ರಾಮ್ ಎಂಬ ವೃದ್ಧಾಶ್ರಮವನ್ನು ಸೇರಿಕೊಂಡಿದ್ದಾರೆ ಎಂಬುದೇ ಆ ಸುದ್ದಿ. ಈ ಸುದ್ದಿಗೆ ಪೂರಕವಾಗಿ ಅದು ವಿಸ್ತೃತ ವರದಿಯನ್ನೂ ಪ್ರಕಟಿಸಿತ್ತು. 125 ವೃದ್ಧರಿರುವ ಈ ಆಶ್ರಮದಲ್ಲಿ ಹೆಚ್ಚಿನವರಲ್ಲಿ ಒಂದೋ ಮಾನಸಿಕ ಅಸ್ವಸ್ಥರು ಅಥವಾ ಮರೆವು ರೋಗಕ್ಕೆ (ಅಲ್‍ಜೈಮರ್) ತುತ್ತಾದವರು. ಇವರಿಗೆ ಹೋಲಿಸಿದರೆ ಕಾನೂಭಾಯಿ ಮತ್ತು ಲಕ್ಷ್ಮೀ ಅತ್ಯಂತ ಆರೋಗ್ಯವಂತರು. ಬದುಕಿನ 40 ವರ್ಷಗಳನ್ನು ಇವರಿಬ್ಬರೂ ಅಮೇರಿಕದಲ್ಲಿ ಕಳೆದಿದ್ದಾರೆ. MIT ಪದವೀಧರರಾದ ಕಾನೂಭಾಯಿ ಅವರು ಅಮೇರಿಕದ ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ರಕ್ಷಣಾ ಇಲಾಖೆಯಲ್ಲಿ ದುಡಿದಿದ್ದಾರೆ. ಲಕ್ಷ್ಮಿಯವರ ಜೀವನಾನುಭವ ಕೂಡ ಬಹಳ ದೊಡ್ಡದು. ಬೋಸ್ಟನ್‍ನಲ್ಲಿ ಉಪನ್ಯಾಸಕಿಯಾಗಿ ಬಳಿಕ ಸಂಶೋಧಕಿಯಾಗಿ ಕೆಲಸ ಮಾಡಿದ್ದಾರೆ. ಇಸ್ರೇಲ್‍ನ ಈಗಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಕಾನೂಭಾಯಿಯವರು ಸಹಪಾಠಿಗಳು. ಇತ್ತೀಚೆಗೆ ಇವರಿಬ್ಬರನ್ನೂ ನೇತನ್ಯಾಹು ಅವರು ಇಸ್ರೇಲ್‍ಗೆ ಕರೆಸಿಕೊಂಡಿದ್ದರು. ನಾಥೂರಾಮ್ ಗೋಡ್ಸೆಯ ಗುಂಡಿಗೆ ಮಹಾತ್ಮಾ ಗಾಂಧಿ ಬಲಿಯಾಗುವಾಗ ಕಾನೂಭಾಯಿಗೆ 17 ವರ್ಷ. ಆದರೆ ಈ ಕಾನೂಭಾಯಿ ಪುಟ್ಟ ಹುಡುಗನಿದ್ದಾಗಲೇ ತನ್ನ ತುಂಟತನದಿಂದಾಗಿ ಈ ದೇಶಕ್ಕೆ ಪರಿಚಿತನಾಗಿದ್ದ. ಮಹಾತ್ಮಾ ಗಾಂಧಿಯವರು ಸಮುದ್ರ ದಂಡೆಯಲ್ಲಿ ನಡೆಯುತ್ತಿದ್ದಾಗ ಅವರ ಊರುಗೋಲನ್ನು ಕಿತ್ತು ಓಡಿದ ಬಾಲಕನಾಗಿ ಈ ದೇಶ ಅವನನ್ನು ಗುರುತಿಸಿತ್ತು. ಮಕ್ಕಳಿಲ್ಲದ ಈ ದಂಪತಿ 2014ರಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದರು. ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ವಿವಿಧ ವೃದ್ಧಾಶ್ರಮಗಳಲ್ಲಿ ಆಯುಷ್ಯ ಕಳೆದರು. ಕಳೆದ ವಾರ ದೆಹಲಿಯ ವೃದ್ಧಾಶ್ರಮಕ್ಕೆ ಸೇರಿಕೊಂಡಿರುವುದನ್ನು ದಿ ಹಿಂದೂ ಪತ್ತೆ ಹಚ್ಚಿದ ಕೂಡಲೇ ರಾಜಕೀಯ ನಾಯಕರು ಚುರುಕಾದರು. ಕೇಜ್ರಿವಾಲ್‍ರು ಈ ದಂಪತಿಗಳಿಗೆ ಸಕಲ ನೆರವನ್ನೂ ನೀಡುವ ಭರವಸೆ ನೀಡಿದರು. ನರೇಂದ್ರ ಮೋದಿಯವರಂತೂ ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಕಾನೂಭಾಯಿಯವರೊಂದಿಗೆ ಮೊಬೈಲ್‍ನಲ್ಲಿ ಗುಜರಾತಿ ಭಾಷೆಯಲ್ಲಿ ಮಾತಾಡಿದರು. ಹಾಗಂತ, ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ಆಶ್ರಮದಲ್ಲಿರುವಾಗ ಮಾತಾಡದ ನರೇಂದ್ರ ಮೋದಿಯವರಲ್ಲಿ ಈಗೇಕೆ ದಿಢೀರ್ ಆಗಿ ಪ್ರೇಮ ಉಕ್ಕಿತು ಎಂಬ ಪ್ರಶ್ನೆ ಸಹಜವಾದರೂ ಸದ್ಯಕ್ಕೆ ಈ ಪ್ರಶ್ನೆಯನ್ನು ಪಕ್ಕಕ್ಕಿಟ್ಟು, ಒಟ್ಟು ಬೆಳವಣಿಗೆಯನ್ನು ನೋಡಿದರೆ ಖುಷಿಯಾಗುತ್ತದೆ. ನರೇಂದ್ರ ಮೋದಿಯವರು ತನ್ನ ತಾಯಿಯನ್ನು ಸುತ್ತಾಡಿಸುವ ಪೋಟೋ ಮತ್ತು ಕಾನೂಭಾಯಿ ಮೊಬೈಲ್‍ನಲ್ಲಿ ಮಾತಾಡುವ ಪೋಟೋ ಎರಡೂ ಒಂದೇ ದಿನ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದರ ಹಿಂದೆ ರಾಜಕೀಯ ತಂತ್ರ ಇರಬಹುದಾದರೂ ಮೋದಿಯವರ ಪೋಟೋ ಅದರಾಚೆಗೂ ನಮ್ಮನ್ನು ಕೊಂಡೊಯ್ಯುತ್ತದೆ. ಓರ್ವ ವಿಧೇಯ ಮತ್ತು ಅತ್ಯಂತ ಪ್ರೇಮಮಯಿ ಮಗನಾಗಿ ಮೋದಿ ಥಟ್ಟನೆ ನಮ್ಮೊಳಗನ್ನು ಕಾಡುತ್ತಾರೆ. ಮೋದಿಯವರ ಬಗ್ಗೆ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ ಅದು ಅವರ ಒಳ್ಳೆಯ ಗುಣವನ್ನು ಟೀಕಿಸುವುದಕ್ಕೆ ಕಾರಣವಾಗಬೇಕಾದ ಅಗತ್ಯವಿಲ್ಲ.
  ಈ ದೇಶದಲ್ಲಿ ಹಿರಿಯರ ಬಗ್ಗೆ ಆಧುನಿಕ ತಲೆಮಾರಿನ ಆಲೋಚನೆಗಳು ಏನು ಮತ್ತು ಅವು ಎಷ್ಟು ಕಳವಳಕಾರಿ ಎಂಬುದು ಆಗಾಗ ಈ ದೇಶಕ್ಕೆ ಪರಿಚಯವಾಗುತ್ತಲೇ ಇದೆ. ಕಾನೂಭಾಯಿ ದಂಪತಿ ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೆ. ಅಷ್ಟಕ್ಕೂ, ಈ ದಂಪತಿಗೆ ಮಕ್ಕಳಿರಲಿಲ್ಲ ಎಂಬುದು ಅವರು ವೃದ್ಧಾಶ್ರಮ ಸೇರಿಕೊಂಡಿರುವುದಕ್ಕೆ ಸಮರ್ಥನೆ ಆಗುವುದಿಲ್ಲ. ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು, ಮಕ್ಕಳದ್ದು ಮಾತ್ರವೇ? ಮಕ್ಕಳೇ ಇಲ್ಲದಿದ್ದರೆ ಅವರನ್ನು ಸಾಕಬೇಕಾದದ್ದು ಯಾರು? ಅಂದಹಾಗೆ, ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ವೃದ್ಧಾಶ್ರಮಗಳನ್ನು ಕಟ್ಟಿಕೊಡಬಹುದು. ಅಲ್ಲಿ ಸವಲತ್ತುಗಳೂ ಇರಬಹುದು. ಆದರೆ ಇವು ವೃದ್ಧ ಜೀವಿಗಳನ್ನು ತೃಪ್ತಿಪಡಿಸಬಲ್ಲುದೇ? ಕಾನೂಭಾಯಿ ದಂಪತಿ ಸೇರಿಕೊಂಡಿರುವ ದೆಹಲಿಯ ಗುರುವಿಶ್ರಾಮ್ ಆಶ್ರಮವೇ ಇದಕ್ಕೆ ಸರಿಯಾದ ಉತ್ತರ. ಅಲ್ಲಿರುವ ಹೆಚ್ಚಿನವರು ಮಾನಸಿಕ ಸ್ಥಿಮಿತವನ್ನು ಕಳಕೊಂಡು ಬದುಕುತ್ತಿದ್ದಾರೆ. ಒಂದು ವೇಳೆ ಇದಕ್ಕಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆದರೆ, ಆ ವೃದ್ಧರ ಮಕ್ಕಳು ಅಥವಾ ಕುಟುಂಬಿಕರು ಮುಖ್ಯ ಅಪರಾಧಿಗಳಾಗಿ ಗುರುತಿಸಿಕೊಂಡಾರು.
   ನಿಜವಾಗಿ, ಹೆತ್ತವರು ತಮ್ಮ ಮಗುವಿನ ಸೇವೆಯನ್ನು ಗರ್ಭಧರಿಸಿದಂದಿನಿಂದಲೇ ಪ್ರಾರಂಭಿಸುತ್ತಾರೆ. ಪ್ರಸವಾನಂತರದ ಎರಡು ತಿಂಗಳ ಕಾಲ ಓರ್ವ ತಾಯಿ ಪಡುವ ಪಾಡು ಮತ್ತು ತನ್ನ ಮಗುವಿಗಾಗಿ ವಹಿಸುವ ಎಚ್ಚರಿಕೆಗಳು ಅನನ್ಯವಾದುದು. ಮಗುವಿನ ಅಳುವಿನಲ್ಲೇ  ಅದರ ಬೇಕು-ಬೇಡಗಳನ್ನು ತಿಳಿಯುವಷ್ಟು ತಾಯಿ ಚುರುಕಾಗುತ್ತಾಳೆ. ಮಗುವಿನೊಂದಿಗೆ ಮೌನದಲ್ಲಿ ಸಂಭಾಷಿಸುವಷ್ಟು ಹೃದಯ ಸಂಬಂಧವನ್ನು ಬೆಳೆಸುತ್ತಾಳೆ. ಮಗು ನಕ್ಕರೆ ಅದಕ್ಕೆ ವ್ಯಾಖ್ಯಾನ ಕೊಡುವುದು ತಾಯಿ. ಮಗು ಅತ್ತರೂ ತಾಯಿಯಲ್ಲೇ  ಉತ್ತರವಿರುತ್ತದೆ. ಮಗು ಕೆಮ್ಮಿದರೆ, ಹಠ ಹಿಡಿದರೆ, ಕಂಕುಳಲ್ಲೋ  ಕೆನ್ನೆ, ಕತ್ತಿನಲ್ಲೋ  ದದ್ದುಗಳು ಕಾಣಿಸಿಕೊಂಡರೆ, ವಾಂತಿ ಮಾಡಿದರೆ ಎಲ್ಲದಕ್ಕೂ ತಾಯಿಯಲ್ಲಿ ವಿವರಣೆಗಳಿರುತ್ತವೆ. ಇದು ಹೇಗೆ ಸಾಧ್ಯ ಎಂದರೆ, ತಾಯಿಗೆ ಮಗುವಿನೊಂದಿಗಿರುವ ಅಂತಃಕರಣದ ಸಂಬಂಧ. ಅಲ್ಲಿ ತಾಯಿ ಮತ್ತು ಮಗು ಬೇರೆ ಬೇರೆ ಆಗಿರುವುದಿಲ್ಲ. ಜೀವ ಎರಡಾದರೂ ದೇಹ ಒಂದೇ ಎಂಬಷ್ಟು ಆತ್ಮೀಯತೆ ಅಲ್ಲಿರುತ್ತದೆ. ಇಂಥ ಭಾವನಾತ್ಮಕ ಸಂಬಂಧದೊಂದಿಗೆ ಬೆಳೆವ ಮಗು ಮುಂದೆ ಎಷ್ಟೇ ದೊಡ್ಡದಾಗಲಿ ಮತ್ತು ಯಾವ ಹುದ್ದೆಯನ್ನೇ ಏರಲಿ, ತಂದೆ ಮತ್ತು ತಾಯಿಗೆ ಅದು ಮಗುವೇ. ದೂರದಲ್ಲೆಲ್ಲೋ ಇರುವ ಮಗು ಕರೆ ಮಾಡಿದರೆ ತಾಯಿ ಮತ್ತು ತಂದೆ ಮೊದಲು ವಿಚಾರಿಸುವುದು ಮಗುವಿನ ಆರೋಗ್ಯವನ್ನು. ಮೊಮ್ಮಕ್ಕಳನ್ನು. ಯಾಕೆಂದರೆ ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧ ಗಣಿತ ಪುಸ್ತಕದಂತೆ ಅಲ್ಲ. ಅದು ವ್ಯಾವಹಾರಿಕತೆಯಿಂದ ಹೊರತಾದುದು. ಅಲ್ಲಿ ಪರಸ್ಪರ ಸಹಕಾರ, ಸೇವೆ, ನಗು, ಹರಟೆಗಳಿರುತ್ತವೆ. ಹೆತ್ತವರು ತಮ್ಮ ವೃದ್ಧಾಪ್ಯದಲ್ಲಿ ಇವನ್ನು ಅನುಭವಿಸಿ, ಆನಂದಿಸಿಕೊಂಡು ಬದುಕುತ್ತಿರುತ್ತಾರೆ. ಒಂದು ವೇಳೆ, ನಾವು ಅವರನ್ನು ವೃದ್ಧಾಪ್ಯದ ಕಾರಣಕ್ಕಾಗಿ ಈ ವಾತಾವರಣದಿಂದ ಹೊರದಬ್ಬಿದರೆ ವೃದ್ಧಾಶ್ರಮಗಳೇನೋ ಆಶ್ರಯ ಕೊಟ್ಟಾವು. ಆದರೆ ಅವು ಮಾನಸಿಕ ನೆಮ್ಮದಿಯನ್ನು ಎಂದೂ ಕೊಡಲಾರವು. ಆದ್ದರಿಂದಲೇ, ವೃದ್ಧಾಶ್ರಮಗಳು ಮತ್ತು ಅದರಲ್ಲಿರುವ ಹಿರಿಯ ಜೀವಗಳ ಬಗ್ಗೆ ಸಮಾಜ ತೆರೆದ ಮನಸ್ಸಿನಿಂದ ಆಲೋಚಿಸಬೇಕು. ವೃದ್ಧಾಶ್ರಮಗಳಿಗೆ ವೃದ್ಧರ ಸೇರ್ಪಡೆ ಹೆಚ್ಚಾಗುತ್ತಿರುವುದರಲ್ಲಿ ಮಕ್ಕಳ ಪಾತ್ರ ಏನು? ಮಕ್ಕಳಿಲ್ಲದ ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು? ಕುಟುಂಬಿಕರ ಹೊಣೆಗಾರಿಕೆಗಳು ಏನೇನು? ಪವಿತ್ರ ಕುರ್‍ಆನ್ ವೃದ್ಧ ಹೆತ್ತವರನ್ನು ನಿರ್ಲಕ್ಷಿಸುವುದರ ವಿರುದ್ಧ ಅತ್ಯಂತ ಕಟು ಭಾಷೆಯಲ್ಲಿ ಮಾತಾಡಿದೆ. ಅವರ ವಿರುದ್ಧ ‘ಛೇ’ ಎಂಬ ಪದ ಬಳಸುವುದು ಕೂಡಾ ಅತ್ಯಂತ ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಹೆತ್ತವರ ಕೋಪಕ್ಕೆ ತುತ್ತಾದ ಮಗ ಎಷ್ಟೇ ಧರ್ಮಬೀರುವಾಗಿದ್ದರೂ ಸ್ವರ್ಗ ಪ್ರವೇಶಿಸಲಾರ ಎಂದು ಎಚ್ಚರಿಸಿದೆ. ‘ಶಿಶುಪ್ರಾಯದಲ್ಲಿ ನನ್ನ ಮೇಲೆ ಅವರು ಕರುಣೆ ತೋರಿದಂತೆ ವೃದ್ಧಾಪ್ಯದಲ್ಲಿರುವ ಅವರ ಮೇಲೆ ನೀನು ಕರುಣೆ ತೋರು..’ ಎಂದು ದೇವನಲ್ಲಿ ಪ್ರಾರ್ಥಿಸಬೇಕೆಂದು ಮಕ್ಕಳಿಗೆ ಆಜ್ಞಾಪಿಸಿದೆ.   
ಕಾನೂಭಾಯಿ ಗಾಂಧಿ

          ಮನುಷ್ಯ ಸಂಬಂಧ ಎಂಬುದು ಅತ್ಯಂತ ಪವಿತ್ರವಾದುದು. ಆರೋಗ್ಯ ಉತ್ತಮವಾಗಿರುವಾಗ ಸಂಬಂಧ ಚೆನ್ನಾಗಿರುವುದು ಮತ್ತು ಆರೋಗ್ಯ ಕೈ ಕೊಟ್ಟಾಗ ಸಂಬಂಧ ಹದಗೆಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮಕ್ಕಳು ಮತ್ತು ಹೆತ್ತವರ ನಡುವೆಯಂತೂ ಇಂಥ ಸಂಬಂಧ ಹೀನವಾದುದು. ಹೆತ್ತವರು ನಮ್ಮೆಲ್ಲ ಭೌತಿಕ ಲೆಕ್ಕಾಚಾರಗಳಿಗಿಂತ ಮಿಗಿಲಾದವರು. ಅವರನ್ನು ಹೊರೆ ಎಂದು ಭಾವಿಸುವ ಮಕ್ಕಳು ಮನುಷ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಅರ್ಹರೇ ಅಲ್ಲ. ಈ ಎಲ್ಲ ಕಾರಣಗಳಿಂದಲೇ ನರೇಂದ್ರ ಮೋದಿಯವರ ಆ ತಾಯಿ ಪ್ರೇಮ ಇಷ್ಟವಾಗುತ್ತದೆ. ತಾಯಿಯನ್ನು ಗಾಲಿ ಕುರ್ಚಿಯಲ್ಲಿ ತಳ್ಳುತ್ತಾ ಹೋಗುವ ಓರ್ವ ವಿನೀತ ಮಗನಾಗಿ ಮೋದಿ ಈ ದೇಶದ ಸರ್ವ ಮಕ್ಕಳಿಗೂ ಮಾದರಿಯಾಗಲಿ. ವೃದ್ಧ ಹೆತ್ತವರನ್ನು ಪ್ರೀತಿಸುವುದಕ್ಕೆ ಆ ಪೋಟೋ ಎಲ್ಲ ಮಕ್ಕಳಿಗೂ ಪ್ರೇರಕವಾಗಲಿ.