Thursday, 27 July 2017

ದಲಿತ್ ಮೀಸಲಾತಿಗಿರುವ ಬೆಂಬಲ ಮುಸ್ಲಿಮರಿಗೇಕಿಲ್ಲ?

ಅಮಾನತುಗೊಂಡ ಬಿಜೆಪಿ ಶಾಸಕರು
     ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ದಲಿತರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವಾಗ ಕಾಣಿಸಿಕೊಳ್ಳದ ಪ್ರತಿಭಟನೆಯು ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಕಾಣಿಸಿಕೊಳ್ಳುವುದೇಕೆ? ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂಬುದಕ್ಕೆ ‘ಮುಸ್ಲಿಮರನ್ನು ಹೊರತುಪಡಿಸಿ’ ಎಂಬರ್ಥವಿದೆಯೇ? ತೆಲಂಗಾಣ ರಾಜ್ಯದಲ್ಲಿ ಸದ್ಯ ಮೀಸಲಾತಿಗೆ ಸಂಬಂಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ 12% ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೆಲಂಗಾಣ ಸರಕಾರ ಜಾರಿಗೊಳಿಸುವ ಇರಾದೆ ವ್ಯಕ್ತಪಡಿಸಿರುವುದೇ ಈ ಪ್ರತಿಭಟನೆಗೆ ಕಾರಣ. ಬಿಜೆಪಿಯ ಎಲ್ಲ ಐವರು ಶಾಸಕರೂ ವಿಧಾನಸಭಾ ಕಲಾಪದಿಂದ ಅಮಾನತುಗೊಂಡಿದ್ದಾರೆ. ಮೀಸಲಾತಿಯು ತೆಲಂಗಾಣದಲ್ಲಿ ಇನ್ನೋರ್ವ ಯೋಗಿ ಆದಿತ್ಯನಾಥ್‍ರನ್ನು ಸೃಷ್ಟಿಸುವುದಕ್ಕೆ ಕಾರಣವಾಗಬಹುದು ಎಂದು ಆ ಪಕ್ಷ ಬೆದರಿಕೆ ಹಾಕಿದೆ. ಹಾಗಂತ, ಮುಸ್ಲಿಮರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವ ಯೋಜನೆಯು ದಿಢೀರ್ ಘೋಷಣೆಯಾದುದಲ್ಲ. 3 ವರ್ಷಗಳ ಹಿಂದೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿದ್ದರು. ನಿಜವಾಗಿ, ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಯನ್ನು ಜಾರಿಗೊಳಿಸಲು ಮೂರು ವರ್ಷ ತಡ ಮಾಡಿದುದಕ್ಕೆ ಬಿಜೆಪಿ ಪ್ರತಿಭಟನೆ ವ್ಯಕ್ತಪಡಿಸಬೇಕಾಗಿತ್ತೇ ಹೊರತು ಜಾರಿಯ ವಿರುದ್ಧ ಅಲ್ಲ. ಒಂದು ಕಡೆ, ಬಿಜೆಪಿ ಸಬ್‍ಕಾ ವಿಕಾಸ್ ಎಂಬ ಮಂತ್ರವನ್ನು ಜಪಿಸುತ್ತಿದೆ. ಸಬಲ ಸಮುದಾಯವಾಗಿ ಗುರುತಿಸಿಕೊಂಡಿರುವ ಜಾಟರಿಗೆ ಮೀಸಲಾತಿ ಒದಗಿಸುವುದಕ್ಕೂ ಉಮೇದು ತೋರಿಸುತ್ತಿದೆ. ಇನ್ನೊಂದು ಕಡೆ, ದೇಶದ ಅತ್ಯಂತ ಹಿಂದುಳಿದ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದನ್ನು ವಿರೋಧಿಸುತ್ತಿದೆ. ಏನಿದರ ಅರ್ಥ? ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮರ ಸ್ಥಿತಿ-ಗತಿ ಹೇಗಿದೆ ಎಂಬುದು ದೇಶವನ್ನಾಳುವ ಪಕ್ಷವಾಗಿ ಬಿಜೆಪಿಗೆ ಚೆನ್ನಾಗಿ ಗೊತ್ತು. ಪರಿಶಿಷ್ಟ ಜಾತಿ-ಪಂಗಡಗಳಿಗೆ ಸರಿಸಮಾನವಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿ ಮುಸ್ಲಿಮರದ್ದು ಎಂಬುದನ್ನು ಸಾಚಾರ್ ಸಮಿತಿ ಹೇಳಿದೆ. ಸಾಚಾರ್ ಸಮಿತಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿ 10 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಮತ್ತು ಕೇಂದ್ರದಲ್ಲಿ ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಘೋಷಣೆಯಲ್ಲಿ ನಂಬಿಕೆಯಿರಿಸಿರುವ ಸರಕಾರ ಇದೆ ಎಂಬ ನೆಲೆಯಲ್ಲಿ ಮುಸ್ಲಿಮರು ತಮ್ಮ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಸರಕಾರಗಳಿಂದ ನಿರೀಕ್ಷಿಸುವುದು ಅಪರಾಧವೇನೂ ಅಲ್ಲ. ಅಂದಹಾಗೆ, ಶೈಕ್ಷಣಿಕವಾಗಿ ತಳಮಟ್ಟದಲ್ಲಿರುವ ಸಮುದಾಯದಿಂದ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ. ಪರಿಶಿಷ್ಟ ಜಾತಿ-ಪಂಗಡಗಳಿಗೂ ಈ ಮಾತು ಅನ್ವಯ. ಆದ್ದರಿಂದ, ಯಾವುದೇ ಸರಕಾರ ಈ ಹಿಂದುಳಿದವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರೆ ಅದು ಚಪ್ಪಾಳೆ ತಟ್ಟಿ ಸ್ವಾಗತಿಸಬೇಕಾದಷ್ಟು ಮಹತ್ವಪೂರ್ಣವಾಗಬೇಕು. ಆದರೆ, ಬಿಜೆಪಿ ಮಾತ್ರ ಮುಸ್ಲಿಮರನ್ನು ಈ ಅಭಿವೃದ್ಧಿ ಪಥದಿಂದ ಹೊರಗಿಡಲು ಬಯಸುತ್ತಿದೆ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದರಿಂದ ಯಾಕೆ ಯೋಗಿ ಆದಿತ್ಯನಾಥ್‍ರು ಸೃಷ್ಟಿಯಾಗಬೇಕು? ದಲಿತರಿಗೆ ಮೀಸಲಾತಿ ಕೊಡುವಾಗ ಯಾಕೆ ಅವರು ಹುಟ್ಟುವುದಿಲ್ಲ? ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಒದಗಿಸುವುದು ಯಾಕೆ ಬಿಜೆಪಿಯನ್ನು ಕೆರಳಿಸುವುದಿಲ್ಲ? ಇದು ಪಕ್ಷಪಾತಿ ನೀತಿಯಲ್ಲವೇ?
     ಈ ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ 20 ಕೋಟಿಯಷ್ಟಿದೆ. ಅವರಲ್ಲಿ ಶಿಕ್ಷಣ ತಜ್ಞರಿದ್ದಾರೆ. ಉದ್ಯಮಿಗಳಿದ್ದಾರೆ. ವಿಜ್ಞಾನಿಗಳಿದ್ದಾರೆ. ಸಾಹಿತಿಗಳಿದ್ದಾರೆ. ಮಂತ್ರಿಗಳಿದ್ದಾರೆ. ಕೃಷಿಕರಿದ್ದಾರೆ. ಈ ದೇಶಕ್ಕೆ ಅತ್ಯಂತ ಹೆಚ್ಚು ವಿದೇಶಿ ವಿನಿಮಯವನ್ನು ಒದಗಿಸುವ ಸಮುದಾಯ ಕೂಡ ಇದುವೇ. ಒಂದು ವೇಳೆ, ಈ 20 ಕೋಟಿ ಜನಸಂಖ್ಯೆಯಲ್ಲಿ ಎಲ್ಲರೂ ಈ ದೇಶದಲ್ಲಿಯೇ ಉದ್ಯೋಗವನ್ನರಸುವ ಸ್ಥಿತಿಗೆ ತಲುಪಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಒಂದೆಡೆ ಶೈಕ್ಷಣಿಕವಾಗಿ ಈ ಸಮುದಾಯ ಹಿಂದೆ. ಇನ್ನೊಂದೆಡೆ ಈ ಸಮುದಾಯಕ್ಕೆ ಉದ್ಯೋಗವನ್ನು ಒದಗಿಸಿಕೊಡಬೇಕಾದ ಅನಿವಾರ್ಯತೆ.. ಇವೆರಡರಿಂದ ಸರಕಾರದ ಮೇಲೆ ಬೀಳಬಹುದಾದ ಹೊರೆಯನ್ನೊಮ್ಮೆ ಊಹಿಸಿ. ಬಹುಶಃ, ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ ಮುಸ್ಲಿಮರದ್ದು. ಈ ದೇಶದ 80% ಮಂದಿ ಈ ದೇಶದಲ್ಲೇ ಉದ್ಯೋಗವನ್ನು ಅರಸುವಾಗ ಅಥವಾ ಅವರಿಗೆ ಉದ್ಯೋಗ ಒದಗಿಸಬೇಕಾದ ಒತ್ತಡದಲ್ಲಿ ಸರಕಾರವಿದ್ದಾಗ ಆ ಹೊರೆಯನ್ನು ಕಡಿಮೆಗೊಳಿಸಿದ್ದು ಮುಸ್ಲಿಮರು. ಅವರು ಸರಕಾರಗಳ ಮೇಲೆ ಭಾರವನ್ನು ಹೇರದೇ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಆ ಮೂಲಕ ಸರಕಾರಗಳಿಗೆ ವಿದೇಶಿ ವಿನಿಮಯವನ್ನು ಒದಗಿಸುವ ಆದಾಯ ಮೂಲವೂ ಆದರು. ತಮ್ಮ ಕುಟುಂಬವನ್ನೂ ಸಬಲಗೊಳಿಸಿದರು. ಸರಕಾರಗಳ ಪ್ರೋತ್ಸಾಹದ ಕೊರತೆಯಿಂದಾಗಿ ಶಿಕ್ಷಣವನ್ನು ಮುಂದುವರಿಸಲಾಗದೆ ಹೊಟ್ಟೆಪಾಡಿಗಾಗಿ ಗಲ್ಫ್ ಗೆ ತೆರಳಿ ಸಣ್ಣ-ಪುಟ್ಟ ಉದ್ಯೋಗ ಮಾಡಿಕೊಂಡು ತಮ್ಮನ್ನೂ ತಮ್ಮ ಕುಟುಂಬಿಕರನ್ನೂ ಮಾತ್ರವಲ್ಲ, ಅವರು ದೇಶದ ಆದಾಯ ಮೂಲವೇ ಆಗಿ ಬದಲಾಗಿರುವುದು ಸಣ್ಣ ಸಾಧನೆ ಅಲ್ಲ. ಇಂಥದ್ದೊಂದು ಸಾಧನೆಯನ್ನು ಈ ದೇಶದ ಇನ್ನಾವ ಸಮುದಾಯವೂ ಮಾಡಿಲ್ಲ. ಜಾತಿ ಶ್ರೇಣಿಯಲ್ಲಿ ಉನ್ನತವಾಗಿರುವ ಮತ್ತು ಆರ್ಥಿಕವಾಗಿ ಸಬಲವಾಗಿರುವ ಸಮುದಾಯದ ಮಂದಿ ಉನ್ನತ ಶಿಕ್ಷಣ ಪಡೆದು ಅಮೇರಿಕದಲ್ಲೋ ಬ್ರಿಟನ್-ಕೆನಡದಲ್ಲೋ ಉದ್ಯೋಗಕ್ಕೆ ಸೇರುವುದು ವಿಶೇಷ ಏನಲ್ಲ. ಅಲ್ಲದೇ ಕೊನೆಗೆ ಅವರು ಆ ದೇಶದ ಪೌರತ್ವವನ್ನು ಪಡೆದು ಅಲ್ಲಿಯವರೇ ಆಗುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ಈ ದೇಶದ ಮುಸ್ಲಿಮರು ಅತ್ಯಂತ ದೇಶನಿಷ್ಠೆಯುಳ್ಳವರು. ಸರಕಾರಗಳ ನಿರ್ಲಕ್ಷ್ಯದ ನಡುವೆಯೂ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಯತ್ನಿಸಿದ್ದಾರೆ. ಈ ದೇಶದ ಅಭಿವೃದ್ಧಿಗೆ ಕೊಡುಗೆಯನ್ನೂ ನೀಡುತ್ತಿದ್ದಾರೆ. ಇಂಥವರ ಅಭಿವೃದ್ಧಿಗೆ ಸರಕಾರ ಯೋಜನೆಯನ್ನು ರೂಪಿಸುವುದೆಂದರೆ ಅದು ವಿರೋಧಕ್ಕೆ ಕಾರಣವಾಗಬೇಕಾದ ಯಾವ ಅಗತ್ಯವೂ ಇಲ್ಲ. ಮುಸ್ಲಿಮ್ ಸಮುದಾಯದ ಮಂದಿ ಇವತ್ತು ಸರಕಾರಿ ಉದ್ಯೋಗ ರಂಗದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂಕಿ-ಅಂಶಗಳ ತುಲನೆ ಮಾಡಿ ನೋಡುವುದಾದರೆ ಅವರ ಸ್ಥಾನ ದಲಿತರಿಗಿಂತಲೂ ಕೆಳಗಡೆ ಇದೆ. 20 ಕೋಟಿಯಲ್ಲಿ ತೀರಾ ತೀರಾ ಸಣ್ಣದೊಂದು ವಿಭಾಗ ಗಲ್ಫ್ ನಲ್ಲಿ ದುಡಿಯುತ್ತಿರುವಾಗ ದೊಡ್ಡ ಭಾಗವು ಈ ದೇಶದಲ್ಲಿ ಅತಿ ಕಡಿಮೆ ಆದಾಯದ ಕೆಲಸಗಳಲ್ಲಿ ದಿನದೂಡುತ್ತಿವೆ. ಇವರನ್ನು ನಿರ್ಲಕ್ಷಿಸಿಕೊಂಡು ದೇಶ ಮುಂದುವರಿಯಲು ಸಾಧ್ಯವಿಲ್ಲ. ಇವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳು ಪ್ರಕಟವಾಗಬೇಕು. ದಲಿತ-ಹಿಂದುಳಿದ ವರ್ಗಗಳಂತೆಯೇ ಇವರಿಗೂ ಮೀಸಲಾತಿ ಮತ್ತಿತರ ಸೌಲಭ್ಯಗಳು ಲಭ್ಯವಾಗಬೇಕು. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್‍ನಿಂದ ಮುಸ್ಲಿಮರನ್ನು ಹೊರತಳ್ಳುವುದೆಂದರೆ ಅದು ಅಭಿವೃದ್ಧಿಪಥದಿಂದ ದೇಶವನ್ನೇ ಹೊರತಳ್ಳಿದಂತೆ. ಹಾಗೆ ಒತ್ತಾಯಿಸುವವರು ಯಾರೇ ಆದರೂ ಅವರು ಜನದ್ರೋಹಿಗಳು. ಖಂಡನಾರ್ಹರು.

ಅವರ ಆತ್ಮಹತ್ಯೆಗೆ ಕಾರಣ ವಿಷ ಮಾತ್ರವೇ?

ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು
      ಆತ್ಮಹತ್ಯೆಯ ಬಗ್ಗೆ ಒಂದು ಬಗೆಯ ಉಡಾಫೆತನ ನಮ್ಮಲ್ಲಿದೆ. ಆತ್ಮಹತ್ಯೆಯು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂಬುದು ಇದಕ್ಕಿರುವ ಕಾರಣಗಳಲ್ಲಿ ಒಂದಾದರೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಧ್ಯಮ ವರ್ಗ ಮತ್ತು ಬಡ ವರ್ಗದವರೇ ಹೆಚ್ಚಿರುವುದು ಇನ್ನೊಂದು. ಅತ್ತ 7 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಬ್ಯಾಂಕುಗಳಿಗೆ ಬಾಕಿ ಇರಿಸಿಕೊಂಡೂ ವಿಜಯ್ ಮಲ್ಯ ಆರಾಮವಾಗಿ ಲಂಡನ್‍ನಲ್ಲಿ ಜೀವನ ನಡೆಸುತ್ತಿರುವಾಗ ಇತ್ತ, ಜುಜುಬಿ ಸಾವಿರ, ಲಕ್ಷ ರೂಪಾಯಿ ಸಾಲ ಮಾಡಿಕೊಂಡ ರೈತರು ಮತ್ತು ಮಧ್ಯಮ ವರ್ಗದ ಮಂದಿ ಮರ್ಯಾದೆಗೋ ಬೆದರಿಕೆಗೋ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ವಿಜಯ್ ಮಲ್ಯಗೆ ಇಲ್ಲದ ಮರ್ಯಾದೆಯ ಭಯ ಜುಜುಬಿ ಮೊತ್ತವನ್ನು ಬಾಕಿ ಉಳಿಸಿಕೊಂಡವರಿಗೆ ಯಾಕೆ ಎದುರಾಗುತ್ತದೆ ಎಂಬ ಪ್ರಶ್ನೆಯ ಜೊತೆಜೊತೆಗೇ ಇಂಥ ಆತ್ಮಹತ್ಯೆಗಳನ್ನು ತಡೆಯುವುದಕ್ಕೆ ಪರಿಣಾಮಕಾರಿ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯನ್ನೂ ನಾವಿಲ್ಲಿ ಎತ್ತಬೇಕಾಗುತ್ತದೆ. ಕಳೆದ ವಾರ ಎರಡು ಸಾಮೂಹಿಕ ಆತ್ಮಹತ್ಯಾ ಪ್ರಕರಣಗಳು ನಡೆದುವು. ಒಂದು ಉಡುಪಿಯ ಪಡುಬೆಳ್ಳೆಯಲ್ಲಿ ನಡೆದರೆ ಇನ್ನೊಂದು ಕಲಬುರ್ಗಿಯಲ್ಲಿ. ಎರಡೂ ಮನೆಗಳು ಇವತ್ತು ಸ್ಮಶಾನವಾಗಿವೆ. ಮನೆಯ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳಕೊಂಡಂತೆಯೇ ಕಲಬುರ್ಗಿಯ ಪ್ರಕರಣದಲ್ಲೂ ಸಂಭವಿಸಿದೆ. ಬಾಳಿ, ಬದುಕಿ ಸಾಧನೆ ಮಾಡಬೇಕಾದ ಹರೆಯದ ನಾಲ್ಕೂ ಮಕ್ಕಳು ಈ ಆತ್ಮಹತ್ಯೆಯ ಭಾಗವಾಗಿದ್ದಾರೆ. ಈ ಮಕ್ಕಳು ಸ್ವಇಚ್ಛೆಯಿಂದ ಆತ್ಮಹತ್ಯೆಯಲ್ಲಿ ಭಾಗಿಯಾದರೋ ಅಥವಾ ಹೆತ್ತವರು ಇವರನ್ನು ವಂಚಿಸಿದರೋ ಗೊತ್ತಿಲ್ಲ. ಇವು ಏನೇ ಇದ್ದರೂ ಸತ್ತವರನ್ನು ಮರಳಿ ಕರೆತರಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇನ್ನಷ್ಟು ಆತ್ಮಹತ್ಯೆಗಳಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿದೆ.
     ಆತ್ಮಹತ್ಯೆಗೂ ಸಹಜ ಸಾವಿಗೂ ನಡುವೆ ಒಂದು ಕಳವಳಕಾರಿ ವ್ಯತ್ಯಾಸ ಇದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಏನನ್ನೋ ಹೇಳ ಬಯಸಿ ಹೋಗಿರುತ್ತಾನೆ. ಒಂದು ಆತ್ಮಹತ್ಯೆಯಲ್ಲಿ ‘ಆತ್ಮಹತ್ಯೆ’ ಎಂಬ ನಾಲ್ಕಕ್ಷರದಲ್ಲಿ ಕೊನೆಗೊಳಿಸಿ ಬಿಡುವುದಕ್ಕಿಂತ ಹೆಚ್ಚಿನ ಅಂಶಗಳಿರುತ್ತವೆ. ಆತನ/ಕೆ/ಯ ಸಾವಿಗೆ ಸಮಾಜ ಕಾರಣವಾಗಿರಬಹುದು ಅಥವಾ ವ್ಯವಸ್ಥೆ ಕಾರಣವಾಗಿರಬಹುದು. ಆದ್ದರಿಂದ ಆತ್ಮಹತ್ಯೆಗಳು ಉಡಾಫೆತನದ ಪ್ರತಿಕ್ರಿಯೆಗಿಂತ ಹೊರಗೆ ನಮ್ಮನ್ನು ಕೊಂಡೊಯ್ಯಬೇಕು. ಉಡುಪಿಯ ಆತ್ಮಹತ್ಯೆ ಪ್ರಕರಣದಲ್ಲಿ ಬ್ಯಾಂಕ್‍ನ ಸಾಲ ಮತ್ತು ಸಾಲ ಪಡೆಯಲು ಅನುಸರಿಸಲಾದ ಕ್ರಮಗಳು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಇದು ಅಲ್ಲದೆಯೂ ಇರಬಹುದು. ಒಂದು ವೇಳೆ ಇದುವೇ ನಿಜವಾದ ಕಾರಣ ಎಂದಾದರೆ, ಆ ಇಡೀ ಪ್ರಕರಣದಲ್ಲಿ ಆ ಕುಟುಂಬದ ಎಲ್ಲರ ಪಾತ್ರ ಇರುವ ಸಾಧ್ಯತೆ ಖಂಡಿತ ಇಲ್ಲ. ಇನ್ನು ಆ ಕುಟುಂಬದ ಹೊರಗಿನ ವ್ಯಕ್ತಿಗಳ ನೆರವಿಲ್ಲದೇ ಅಂಥ ಸಾಲ ಮಂಜೂರಾತಿ ನಡೆಯುವುದಕ್ಕೂ ಸಾಧ್ಯವಿಲ್ಲ. ಬ್ಯಾಂಕ್‍ನ ಸಾಲ, ಅದರ ಬಡ್ಡಿ ಮತ್ತು ಮತ್ತದರ ಪಾವತಿಯಲ್ಲಿ ಒಂದು ಪುಟ್ಟ ಕುಟುಂಬ ಮಾತ್ರ ಅಪರಾಧಿ ಭಾವದಲ್ಲೋ ಮರ್ಯಾದೆಗೆ ಅಂಜಿಯೋ ಬದುಕು ಕೊನೆಗೊಳಿಸುವುದು ಯಾವ ಕೋನದಲ್ಲಿ ವ್ಯಾಖ್ಯಾನಕ್ಕೆ ಒಳಗಾಗಬೇಕು? ಬ್ಯಾಂಕ್‍ಗಳು ಸಾಲ ಕೊಡುವಾಗ ಮುಖ್ಯವಾಗಿ ಚರ್ಚೆಗೆ ಬರುವುದೇ ಬಡ್ಡಿ. ಪಡಕೊಳ್ಳುವ ಸಾಲಕ್ಕೆ ಎಷ್ಟು ಶೇಕಡಾ ಬಡ್ಡಿ ವಿಧಿಸಲಾಗುತ್ತದೆ ಎಂಬುದರ ಆಧಾರದಲ್ಲಿ ಯಾವ ಬ್ಯಾಂಕ್‍ನಿಂದ ಸಾಲ ಪಡೆಯಬೇಕು ಎಂಬುದು ನಿರ್ಧಾರವಾಗುತ್ತದೆ. ಇದಲ್ಲದೇ ಖಾಸಗಿ ಹಣಕಾಸು ಸಂಸ್ಥೆಗಳೂ ಸಾಲ ಕೊಡುತ್ತವೆ. ಕೈಗಡ ನೀಡುವವರೂ ಇದ್ದಾರೆ. ಇವಕ್ಕೆಲ್ಲಾ ಬಡ್ಡಿಯೇ ಷರತ್ತಾಗಿರುತ್ತದೆ. ಒಂದು ವೇಳೆ, ಸಾಲ ಪಡಕೊಂಡ ವ್ಯಕ್ತಿಯ ನಿರೀಕ್ಷೆಗೆ ತಕ್ಕಂತೆ ಆ ಬಳಿಕದ ಬೆಳವಣಿಗೆಗಳು ನಡೆಯದೇ ಹೋದರೆ, ಅದರ ಹೊಣೆಯನ್ನು ಯಾವ ಸಾಲ ಸಂಸ್ಥೆಗಳೂ ವಹಿಸಿಕೊಳ್ಳುವುದಿಲ್ಲ. ಸಾಲವಾಗಿ ಪಡೆದುಕೊಂಡ ದುಡ್ಡನ್ನು ಓರ್ವ ಗದ್ದೆಗೆ ಸುರಿಯಬಹುದು. ಇನ್ನೋರ್ವ ವ್ಯಾಪಾರಕ್ಕೆ ಹೂಡಿಕೆ ಮಾಡಬಹುದು. ಮತ್ತೋರ್ವ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಒಂದು ವೇಳೆ, ಗದ್ದೆ ನಿರೀಕ್ಷಿತ ಫಸಲು ಕೊಡದೇ ಹೋದರೆ, ಆ ಬಳಿಕದ ಸರ್ವ ಸವಾಲುಗಳನ್ನೂ ರೈತನೇ ಹೊತ್ತುಕೊಳ್ಳಬೇಕು. ಒಂದು ಕಡೆ ತಿಂಗಳು ತಿಂಗಳು ಸಾಲದ ಮೊತ್ತವನ್ನು ಬ್ಯಾಂಕ್‍ಗೆ ಸಂದಾಯ ಮಾಡಬೇಕಾಗುತ್ತದೆ. ಇನ್ನೊಂದು ಕಡೆ, ಸಂಸಾರದ ಮೇಲೆ ಭಾರ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಂತ ಸುಮ್ಮನೆ ಕೂರುವಂತಿಲ್ಲ. ಮತ್ತೆ ಗz್ದÉಯಲ್ಲಿ ಉಳುಮೆ ಮಾಡಿ ಬೀಜ ಬಿತ್ತಬೇಕಾಗುತ್ತದೆ. ಪುನಃ ಹಣ ಹೊಂದಿಸಬೇಕಾಗುತ್ತದೆ. ಸಾಲ ಮಾಡಬೇಕಾಗುತ್ತದೆ. ದುರಂತ ಏನೆಂದರೆ, ಸಾಲ ನೀಡಿ ಬೇಸಾಯಕ್ಕೆ ಉತ್ತೇಜನ ನೀಡಿದ ಬ್ಯಾಂಕ್ ಅ ಬಳಿಕದ ಈ ಎಲ್ಲ ಸವಾಲುಗಳ ಸಂದರ್ಭದಲ್ಲೂ ಅತ್ಯಂತ ನಿರ್ದಯವಾಗಿ ವರ್ತಿಸುತ್ತದೆ. ಸಾಲ ಪಡಕೊಂಡವನಿಗೂ ತನಗೂ ಮಾನವೀಯವಾದ ಯಾವ ಸಂಬಂಧವೂ ಇಲ್ಲ ಎಂಬಂತೆ ನಡಕೊಳ್ಳುತ್ತದೆ. ಫಸಲು ಬರಲಿ, ಬರದೇ ಇರಲಿ ಬಡ್ಡಿ ಸಹಿತ ಸಾಲ ಮರುಪಾವತಿ ಮಾಡದೇ ಇರುವುದನ್ನು ಅದು ದಂಡನಾತ್ಮಕ ಅಪರಾಧವಾಗಿ ಪರಿಗಣಿಸುತ್ತದೆ. ಇದೊಂದು ಉದಾಹರಣೆಯಷ್ಟೇ. ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ಯಾವುದೋ ಧೈರ್ಯ, ಸಾಂತ್ವನ, ಮಾನವೀಯ ಸ್ಪರ್ಶಗಳನ್ನು ಬಯಸಿ, ಅದು ಸಿಗದೆ ನಿರಾಶವಾಗಿ ಮಾಡಿಕೊಂಡವು ಅನ್ನುವುದು ಸ್ಪಷ್ಟ. ರೈತ ಆತ್ಮಹತ್ಯೆಗಳಲ್ಲಂತೂ ಇದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕ್‍ಗಳು ನಿಷ್ಠುರವಾದಂತೆಲ್ಲಾ  ಸಾಲ ಪಡಕೊಂಡ ರೈತ ದುರ್ಬಲವಾಗುತ್ತಾ ಹೋಗುತ್ತಾನೆ. ಆತನ ಎದುರು ನಿರೀಕ್ಷೆಯ ದಾರಿಗಳೆಲ್ಲ ಮುಚ್ಚಿಕೊಳ್ಳುತ್ತಾ ಹೋಗತೊಡಗುತ್ತವೆ. ಪಡೆದ ಸಾಲಕ್ಕಿಂತ ಬಡ್ಡಿಯ ಮೊತ್ತವೇ ಹೆಚ್ಚಾಗುವುದನ್ನು ಪ್ರಶ್ನಿಸಲಾಗದೇ ಮತ್ತು ಬಡ್ಡಿರಹಿತ ಮಾನವೀಯ ಸಾಲ ಯೋಜನೆಗಳೆಂಬ ಪರ್ಯಾಯವು ಇಲ್ಲದೇ ಆತ ಕುಸಿಯತೊಡಗುತ್ತಾನೆ. ಅದೇ ವೇಳೆ, ಕೋಟ್ಯಾಂತರ ಲೆಕ್ಕದಲ್ಲಿ ಸಾಲ ಪಡೆಯುವ ಬೃಹತ್ ಶ್ರೀಮಂತ ವರ್ಗವು ಆಡಳಿತಗಾರರೊಂದಿಗೆ ಸಲುಗೆಯನ್ನು ಬೆಳೆಸಿಕೊಂಡು ತಮಗೆ ಪೂರಕವಾದ ನೀತಿಗಳನ್ನು ಜಾರಿಗೆ ಬರುವಂತೆ ನೋಡಿಕೊಳ್ಳುತ್ತಾ, ಸಾಲ ಮನ್ನಾ ಮಾಡಿಸಿಕೊಳ್ಳುತ್ತಾ ಬದುಕುತ್ತವೆ.
     ಆತ್ಮಹತ್ಯೆ ಯಾವ ಕಾರಣಕ್ಕೂ ಯಾವ ಸಮಸ್ಯೆಗೂ ಪರಿಹಾರ ಅಲ್ಲ. ಹಾಗಂತ, ಆತ್ಮಹತ್ಯೆಯ ಬಗ್ಗೆ ಉಡಾಫೆತನ ತೋರುವುದೂ ತಪ್ಪು. ಇವತ್ತು ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯು ಆತ್ಮಹತ್ಯೆಯನ್ನು ಒಂದು ಆಯ್ಕೆಯಾಗಿಯೂ ಜನರ ಮುಂದೆ ಇಟ್ಟಿದೆ. ಮರ್ಯಾದೆ, ಸ್ವಾಭಿಮಾನ, ಘನತೆಯಿಂದ ಬದುಕುವ ಮಂದಿಯನ್ನು ಅದು ಆಮಿಷಕ್ಕೆ ಕೆಡವಿ ಕೊನೆಗೆ ತತ್ತರಿಸುವಂತೆ ಮಾಡುತ್ತಿದೆ. ಆದ್ದರಿಂದ ನೇಣು ಬಿಗಿದುಕೊಂಡ ರೀತಿಯ ಸಾವು ಬಾಹ್ಯನೋಟಕ್ಕೆ ನಮಗೆ ಆತ್ಮಹತ್ಯೆಯಂತೆ ಕಂಡರೂ ವಾಸ್ತವ ಹಾಗಿರಬೇಕಿಲ್ಲ. ಅಲ್ಲೊಬ್ಬ ಕೊಲೆಗಾರ ಇರುತ್ತಾನೆ. ಆತ ಬರಿಗಣ್ಣಿಗೆ ಕಾಣಿಸುವುದಿಲ್ಲ. ಸದ್ಯ ಆತನನ್ನು ಜನರ ಮುಂದಿಟ್ಟು ಚರ್ಚಿಸುವ ಗಂಭೀರ ಪ್ರಯತ್ನಗಳಾಗಬೇಕಾಗಿದೆ. ಉಡುಪಿ ಮತ್ತು ಕಲಬುರ್ಗಿ ಪ್ರಕರಣಗಳು ಅಂಥ ಚರ್ಚೆಗೆ ಇನ್ನೊಂದು ಅವಕಾಶವನ್ನು ಒದಗಿಸಿದೆ.


Friday, 21 July 2017

ಗೋ ಹಿಂಸೆಗೆ ರೂಪಕವಾಗಬಹುದಾದ ಹಿಟ್ಲರ್ ನ ಕುಂಚ

      ನಾಲ್ಕು ದಿನಗಳ ನಡುವೆ ಲಂಡನ್‍ನಲ್ಲಿ ಎರಡು ಬೆಳವಣಿಗೆಗಳು ನಡೆದುವು. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕನಾಗಿ ಮತ್ತು ಹಿಂಸಾಪ್ರೇಮಿಯಾಗಿ ಗುರುತಿಸಿಕೊಂಡಿರುವ ಜರ್ಮನಿಯ ಅಡಾಲ್ಫ್ ಹಿಟ್ಲರ್‍ನ 5 ವರ್ಣ ಚಿತ್ರಗಳನ್ನು ಹರಾಜು ಹಾಕುವ ಬಗ್ಗೆ ಲಂಡನಿನ ಮುಲ್ಲೋಕ್ ಏಲಂ ಹೌಸ್ ನೀಡಿದ ಪ್ರಕಟಣೆ ಇದರಲ್ಲಿ ಒಂದಾದರೆ, ಈ ಪ್ರಕಟನೆಯ ನಾಲ್ಕು ದಿನಗಳ ಮೊದಲು ಇದೇ ಲಂಡನ್ ನಗರವು ಪ್ರತಿಭಟನೆಯೊಂದಕ್ಕೆ ಸಾಕ್ಷ್ಯ ವಹಿಸಿದ್ದು ಇನ್ನೊಂದು.  ಹಾಗಂತ, ಆ ಪ್ರತಿಭಟನೆಗೂ ಲಂಡನ್‍ಗೂ ಯಾವ ಸಂಬಂಧವೂ ಇರಲಿಲ್ಲ. ಜುನೈದ್ ಖಾನ್, ಪೆಹ್ಲೂ ಖಾನ್ ಎಂಬೆರಡು ಹೆಸರಿನ ಪರಿಚಯ ಈ ನಗರಕ್ಕೆ ಗೊತ್ತಿರುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು. ಯಾಕೆಂದರೆ ಇವರಿಬ್ಬರು ಭಾರತದ ಹರ್ಯಾಣಕ್ಕೆ ಸೇರಿದವರು. ಪೆಹ್ಲೂ ಖಾನ್‍ರನ್ನು ಗೋರಕ್ಷಕರೆಂದು ಕರೆಸಿಕೊಂಡಿರುವ ದುಷ್ಕರ್ಮಿಗಳ ಗುಂಪು ರಾಜಸ್ಥಾನದಲ್ಲಿ ಥಳಿಸಿ ಕೊಂದಿದ್ದರೆ, 16 ವರ್ಷದ ಜುನೈದ್ ಖಾನ್‍ನನ್ನು `ಮಾಂಸ ಸೇವಕ' ಎಂಬ ಕಾರಣಕೊಟ್ಟು ದೆಹಲಿಯಲ್ಲಿ ರೈಲಿನಲ್ಲಿ ಹತ್ಯೆ ಮಾಡಲಾಗಿತ್ತು. ಗೋವಿನ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯಗಳನ್ನು ಮತ್ತು ಈ ಎರಡು ಹತ್ಯೆಗಳನ್ನು ಖಂಡಿಸಿ ಕಳೆದವಾರ ಒಂದೇ ದಿನ ಒಟ್ಟು 16 ನಗರಗಳಲ್ಲಿ ಪ್ರತಿಭಟನೆಗಳು ನಡೆದುವು. ದೆಹಲಿ, ಮುಂಬೈ, ಲಕ್ನೋ, ಬೆಂಗಳೂರು, ಲಂಡನ್, ಟೊರೆಂಟೊ ಮತ್ತು ಕರಾಚಿಗಳು ಇವುಗಳಲ್ಲಿ ಕೆಲವು. ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜುನೈದ್ ಮತ್ತು ಪೆಹ್ಲೂ ಖಾನ್‍ರ ಕುಟುಂಬಗಳು ಭಾಗವಹಿಸಿದುವು. `ಸ್ವರ್ಗದಿಂದ- ಜುನೈದ್ ತನ್ನ ತಾಯಿಗೆ'- ಎಂಬ ಶೀರ್ಷಿಕೆಯ ಕವನವನ್ನು ಜುನೈದ್‍ನ ಚಿಕ್ಕಪ್ಪನ ಮಗ ವಾಚಿಸಿದ. `ಅಮ್ಮಾ, ನೀನು ಈದ್‍ನ ಖರೀದಿಗೆ ನನ್ನನ್ನು ದೆಹಲಿಗೆ ಕಳುಹಿಸಿದೆ. ಆದರೆ ನಾನು ಸ್ವರ್ಗ ಸೇರಿಕೊಂಡೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹೋದರರೆಂದು ನೀನು ನನಗೆ ಕಲಿಸಿರುವುದು ಸುಳ್ಳಮ್ಮಾ. ನನ್ನನ್ನು ಸಾಯುವಂತೆ ಹೊಡೆಯುಲಾಗುತ್ತಿದ್ದರೂ ಎಲ್ಲರೂ ಬರೇ ವೀಕ್ಷಿಸಿದರು. ವೀಡಿಯೋ ಮಾಡಿದರು. ತಮ್ಮ ಕಣ್ಣೆದುರೇ ತಮ್ಮ ಸಹೋದರನನ್ನು ಸಾಯಲು ಯಾರು ಬಿಡುತ್ತಾರಮ್ಮಾ...' ಈ ಹಾಡಿಗೆ ಪ್ರತಿಭಟನಾಕಾರರ ಕಣ್ಣುಗಳು ಹನಿಯಾದುವು. ಇದರ ನಾಲ್ಕು ದಿನಗಳ ಬಳಿಕ ಹಿಟ್ಲರ್‍ನ ಐದು ವರ್ಣ ಚಿತ್ರಗಳನ್ನು ತಲಾ 5 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜು ಕೋರುವ ಪ್ರಕಟಣೆ ಹೊರಬಿತ್ತು. ಹಿಟ್ಲರ್‍ನು ವರ್ಣಚಿತ್ರ ಕಲಾವಿದ ಆಗಿದ್ದ. ಈ ವರ್ಣ ಚಿತ್ರಗಳ ಪೈಕಿ ನಾಲ್ಕರಲ್ಲೂ ಆತನ ಸಹಿ ಇದೆ. ಗಡಿಯಾರದ ಚಿತ್ರ, ತಾನು ಹುಟ್ಟಿದೂರಾದ ಆಸ್ಟ್ರೀಯಾದ ನಗರದ ಗೇಟ್‍ನ ವರ್ಣಚಿತ್ರವೂ ಇದರಲ್ಲಿ ಸೇರಿದೆ. ನಿಜವಾಗಿ, ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯು ಪ್ರಕಟಿಸಿರುವ ಈ ಸುದ್ದಿ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು- ಕ್ರೌರ್ಯವನ್ನು ಪ್ರತಿಭಟಸಿ ಸಭೆ ನಡೆಸಲಾದ ಲಂಡನ್‍ನಿಂದಲೇ ಈ ವರ್ಣಚಿತ್ರಗಳ ಏಲಂನ ಸುದ್ದಿಯೂ ಪ್ರಕಟವಾಗಿದೆ ಎಂಬುದಾದರೆ, ಭಾರತದ ಈ ದುಷ್ಕರ್ಮಿಗಳೂ ಹಿಟ್ಲರ್‍ನ `ಹಿಂಸಾ ಪ್ರೇಮಿ' ಮನಃಸ್ಥಿತಿಯನ್ನು ಬಹಳವಾಗಿ ಪ್ರತಿನಿಧಿಸುತ್ತಿದ್ದಾರೆಂಬುದು ಇನ್ನೊಂದು ಹಿಟ್ಲರ್ ಒಂದು ಕಡೆ ಕ್ರೌರ್ಯ ಎಸಗುವುದಕ್ಕೇ ಜನಿಸಿರುವವನಂತೆ ವರ್ತಿಸುತ್ತಿದ್ದರೂ ಇನ್ನೊಂದು ಕಡೆ ಕಲಾವಿದನ ಮನಸ್ಸನ್ನೂ ಹೊಂದಿದ್ದ. ಆದರೆ ಆತನೊಳಗಿರುವ ಕಲಾವಿದನ ಮನಸ್ಸನ್ನು ಆತ ಪೋಷಿಸುವ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಹಿಂಸಕ ಮನಸ್ಸನ್ನು ಪೋಷಿಸಿದ. ಇವತ್ತು ಲಂಡನ್‍ನಲ್ಲಿ ಏಲಂಗೆ ಇಡಲಾಗಿರುವ ವರ್ಣಚಿತ್ರಗಳ ಬಗ್ಗೆ ಯಾರಾದರೂ ಆಸಕ್ತಿ ವಹಿಸುವುದಾದರೆ, ಮತ್ತು ಆ ಏಲಂಗೆ ವ್ಯಾಪಕ ಪ್ರಚಾರ ಲಭ್ಯವಾಗುವುದಾದರೆ, ಅದು ಕಲಾವಿದ ಹಿಟ್ಲರ್‍ನಿಂದಾಗಿ ಅಲ್ಲ. ಹಿಂಸಾಪ್ರೇಮಿ ಹಿಟ್ಲರ್‍ನಿಂದಾಗಿ. ಆ ವರ್ಣಚಿತ್ರಗಳು ಆತನ ಕ್ರೌರ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ. ಕಲಾವಿದನಾಗಿರಬೇಕಾಗಿದ್ದ ಈತ ಯಾಕಾಗಿ ನರಮೇಧಿಯಾದ ಎಂದು ಆ ವರ್ಣಚಿತ್ರಗಳನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಶ್ನಿಸಬಹುದು. ಆ ವರ್ಣಚಿತ್ರಗಳಲ್ಲಿ ಕ್ರೌರ್ಯದ ಅಂಶವಿದೆಯೇ ಎಂದು ಪರೀಕ್ಷಿಸಬಹುದು. ಸದ್ಯ, ನಮ್ಮ ದೇಶದಲ್ಲಿ ಬಹುತೇಕ ಹಿಟ್ಲರ್‍ನ ಮನಃಸ್ಥಿತಯನ್ನೇ ಹೋಲುವ ಒಂದು ಗುಂಪು ಇದೆ. ಹಿಟ್ಲರ್ ಪ್ರಶ್ನಾತೀತನಾಗಿದ್ದ. ಆದರೆ ಈ ಮಂದಿ ಆ ಮಟ್ಟಕ್ಕೆ ತಲುಪಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಇವರ ಮಾತು, ವರ್ತನೆ, ದೇಹ ಭಾಷೆಗಳು ಹಿಟ್ಲರ್‍ನನ್ನೇ ಹೋಲುತ್ತಿವೆ. ಹಿಟ್ಲರ್‍ನ ಕೈಯಲ್ಲಿ ಕುಂಚ ಇತ್ತು. ಆದರೆ ಆ ಕುಂಚ ಎಷ್ಟು ದುರ್ಬಲ ಆಗಿತ್ತು ಅಂದರೆ, ತನ್ನೊಳಗಿನ ಕ್ರೌರ್ಯವನ್ನು ಬಿಡಿಸುವ ಧೈರ್ಯ ತೋರದಷ್ಟು. ಸಾಮೂಹಿಕ ನರಮೇಧಗಳು ಆತನ ಕುಂಚದಲ್ಲಿ ಚಿತ್ರಗಳಾಗಿ ಪಡಿಮಾಡಿಲ್ಲ. ದ್ವೇಷದ ಭಾಷಣಗಳು ವರ್ಣಚಿತ್ರಗಳಾಗಿಲ್ಲ. ಆರ್ಯಶ್ರೇಷ್ಠತೆಯ ಅಮಲಿಗೆ ಸಿಲುಕಿ ನಜ್ಜು ಗುಜ್ಜಾದ ಮಹಿಳೆ, ಮಕ್ಕಳು, ವೃದ್ಧರನ್ನು ಆ ಕುಂಚ ಸ್ಪರ್ಶಿಸಿಲ್ಲ. ಇದು ಹಿಟ್ಲರ್‍ನೊಳಗಿನ ಕಲಾವಿದನ ಅಸಹಾಯಕತೆಯನ್ನಷ್ಟೇ ದಾಖಲಿಸುವುದಿಲ್ಲ, ಆ ಕಲಾವಿದ ಆತನೊಳಗೆ ನಿಜಕ್ಕೂ ಇದ್ದನೋ ಅಥವಾ ತನ್ನ ಕ್ರೌರ್ಯದ ಮುಖವನ್ನು ಅಡಗಿಸುವ ಉದ್ದೇಶದಿಂದ ಕುಂಚವನ್ನು ದುರುಪಯೋಗಿಸಿದನೋ ಅನ್ನುವ ಅನುಮಾನವನ್ನು ಹುಟ್ಟು ಹಾಕುತ್ತದೆ. ಹಿಟ್ಲರ್ ಕ್ರೂರಿಯಲ್ಲ, ಆತನೊಳಗೆ ಓರ್ವ ಕಲಾವಿದನಿದ್ದ ಎಂದು ಜಗತ್ತು ನಂಬಲಿ ಎಂಬ ಕಾರಣಕ್ಕಾಗಿ ಆತ ಕುಂಚ ಪ್ರೇಮಿಯಂತೆ ನಟಿಸಿದನೋ ಎಂದು ಸಂದೇಹಪಡುವುದಕ್ಕೆ ಆತನ ವ್ಯಕ್ತಿತ್ವ ಅವಕಾಶವನ್ನು ಕೊಡುತ್ತದೆ. ನಿಜವಾಗಿ ಹಿಟ್ಲರ್‍ನ ಕೈಯಲ್ಲಿ ಕುಂಚ ಇರುವಂತೆಯೇ ನಮ್ಮ ದೇಶದ ದುಷ್ಕರ್ಮಿಗಳ ಬಾಯಲ್ಲಿ ಗೋವು ಇದೆ. ಆದರೆ ಈ ಗೋವು ಎಷ್ಟು ದುರ್ಬಲ ಅಂದರೆ, ಪ್ರತಿದಿನ ಬೃಹತ್ ಕಂಪೆನಿಗಳಲ್ಲಿ ಹತ್ಯೆಯಾಗುವ ಮತ್ತು ವಿದೇಶಗಳಿಗೆ ಮಾಂಸವಾಗಿ ರವಾನೆಯಾಗುವ ಗೋವುಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದಷ್ಟು. ಪ್ರತಿದಿನ ಈ ದೇಶದ ಹಾದಿ-ಬೀದಿಗಳಲ್ಲಿ, ಗೋಶಾಲೆಗಳಲ್ಲಿ ಹಸಿವಿನಿಂದ ಸಾಯುವ ಗೋವುಗಳ ಬಗ್ಗೆ ಒಂದು ತುಂಡು ಹೇಳಿಕೆಯನ್ನೂ ಕೊಡದಷ್ಟು. ಕನಿಷ್ಠ ತಂತಮ್ಮ ಮನೆಯಲ್ಲಿ ಒಂದು ಗೋವನ್ನೂ ಸಾಕದಷ್ಟು. ಆದ್ದರಿಂದ ಇವರ ಬಾಯಲ್ಲಿರುವ ಗೋವು ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಕಾಣಿಸುತ್ತದೆ. ಹಿಟ್ಲರ್ ತನ್ನ ಹಿಂಸಕ ಮನಸ್ಸು ಚರ್ಚೆಗೊಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಕುಂಚ ಬಳಸಿದ್ದರೆ ಈ ದುಷ್ಕರ್ಮಿಗಳು ತಮ್ಮ ಕೊಲೆಗಾರ ಮನಸ್ಸನ್ನು ಅಡಗಿಸುವುದಕ್ಕಾಗಿ ಗೋವನ್ನು ಬಳಸುತ್ತಿದ್ದಾರೆ. ಗೋವು ಅವರ ಮನಸ್ಸಲಿಲ್ಲ. ಗೋವನ್ನು ಪುಕ್ಕಟೆಯಾಗಿ ಕೊಟ್ಟರೂ ಸಾಕುವ ಉಮೇದು ಅವರಲ್ಲಿರುವುದಕ್ಕೆ ಸಾಧ್ಯವೂ ಇಲ್ಲ. ಅವರ ದುಷ್ಕೃತ್ಯಗಳು ಗೋವಿನ ಸಂರಕ್ಷಣೆಗಾಗಿಯೂ ಅಲ್ಲ. ಅವರೊಳಗೊಂದು ವಿಕೃತ ಭಾವವಿದೆ. ದ್ವೇಷವಿದೆ. ಈ ದ್ವೇಷ ಗೋವಿನ ಮೇಲಿನ ಪ್ರೇಮದಿಂದಾಗಿ ಹುಟ್ಟಿಕೊಂಡದ್ದಲ್ಲ. ಒಂದುವೇಳೆ ಗೋವಿನ ಮೇಲಿನ ಪ್ರೇಮವೇ ಅವರ ದುಷ್ಕೃತ್ಯಗಳಿಗೆ ಕಾರಣವೆಂದಾದರೆ, ಅವರ ಪ್ರತಿ ಗುರಿಯೂ ಮುಸ್ಲಿಮರೇ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಅವರು ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗೋಮಾಂಸ ಸೇವಕರು ಈ ದೇಶದಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಿದ್ದರೂ ಅವರು ಕೈಗೆ ಪ್ರತಿಬಾರಿಯೂ ಜುನೈದ್‍ಗಳೂ, ಪೆಹ್ಲೂ ಖಾನ್‍ರೇ ಸಿಗುತ್ತಾರೆ.
     ನಿಜವಾಗಿ, ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಈ ದೇಶದಲ್ಲಿ ಥಳಿಸಿ ಕೊಲ್ಲುವವರ ಬಾಯಲ್ಲಿ ಗೋವು ಇದೆ. ಉಳಿದಂತೆ ಕುಂಚ ಹಿಡಿದ ಕೈ ಮತ್ತು ಗೋವಿನ ಸ್ಮರಣೆ ಮಾಡುವ ಬಾಯಿ ಎರಡರ ಮನಸ್ಸೂ ಒಂದೇ. ಅದೇನೆಂದರೆ, ನಿರ್ದಿಷ್ಟ ಧರ್ಮದ ಜನರನ್ನು ಬೇಟೆಯಾಡುವುದು. ಲಂಡನ್‍ನಲ್ಲಿ ಹರಾಜಿಗಿಟ್ಟಿರುವ ವರ್ಣ ಚಿತ್ರಗಳು ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗುತ್ತದೆ. ಅದೊಂದು ರೂಪಕ. ಈ ರೂಪಕವು ನಮ್ಮ ನಡುವಿನ ಗೋರಕ್ಷಕರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ದ.ಕ. ಜಿಲ್ಲೆಯ ಅಶಾಂತಿಗೆ ಪರಿಹಾರ ಹೇಗೆ?

      ದ.ಕ. ಜಿಲ್ಲೆಯ ಕುರಿತಂತೆ ಜಿಲ್ಲೆಯ ಹೊರಗೆ ಕೆಲವು ಮೆಚ್ಚುಗೆಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ಕೇಂದ್ರಗಳಿವೆ, ಉನ್ನತ ದರ್ಜೆಯ ಹಲವು ಆಸ್ಪತ್ರೆಗಳಿವೆ, ಜನರ ಜೀವನ ಮಟ್ಟವೂ ಸಾಕಷ್ಟು ಉತ್ತಮವಾಗಿದೆ, ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ.. ಇತ್ಯಾದಿ ಇತ್ಯಾದಿ. ಹಾಗಂತ, ಇವನ್ನೆಲ್ಲ ತಿರಸ್ಕರಿಸಬೇಕಿಲ್ಲ. ಇದರ ಜೊತೆಗೇ ಇಲ್ಲಿ ಸುಡುವ ಬಿಸಿಲಿದೆ, ಧಾರಾಕಾರ ಮಳೆಯಿದೆ, ಬೆಂಗಳೂರಿಗೆ ಸರಿಗಟ್ಟುವಷ್ಟು ಎರಡು ಬೃಹತ್ ಮಾಲ್‍ಗಳಿವೆ, ಬಹುತೇಕ ಎಲ್ಲ ದೈನಿಕಗಳ ಬ್ಯೂರೋಗಳಿವೆ, ಟಿವಿ ಚಾನೆಲ್‍ಗಳ ಕಚೇರಿಗಳಿವೆ, ಇತರೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಸಂಘ ಸಂಸ್ಥೆಗಳಿವೆ, ಜಿಲ್ಲೆಯ ಮಂದಿ ಕನಿಷ್ಠ 5 ಭಾಷೆಯಲ್ಲಿ ಸಂವಹನ ನಡೆಸುವಷ್ಟು ಸಮರ್ಥರಿದ್ದಾರೆ.. ಇತ್ಯಾದಿಗಳೂ ನಿಜವೇ. ಈ ಮೆಚ್ಚುಗೆ ಮತ್ತು ವಿಶೇಷತೆಗಳ ಆಚೆಗೆ ಜಿಲ್ಲೆಯನ್ನು ಕಾಡುವ ಕೆಲವು ಪ್ರಶ್ನೆಗಳಿವೆ. ಇಲ್ಲಿ ಯಾಕಿಷ್ಟು ರಕ್ತದಾಹ? ಇಲ್ಲಿನ ಹಿಂದುಗಳು ಮುಸ್ಲಿಮರನ್ನು ಸಹಿಸುವುದಿಲ್ಲವೇ ಅಥವಾ ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುತ್ತಾರಾ? ಇಲ್ಲಿನ ವ್ಯಾಪಾರ-ವಹಿವಾಟುಗಳು ಹೇಗಿವೆ? ವಿಶೇಷ ಏನೆಂದರೆ, ಸದ್ಯ ಜಿಲ್ಲೆಯಲ್ಲಿ ಆಗಿರುವ ಎರಡು ಹತ್ಯೆ ಮತ್ತು ಹಲವು ಇರಿತ ಪ್ರಕರಣಗಳಿಗೆ ಮೂಲ ಕಾರಣವೆಂದು ನಂಬಲಾಗಿರುವ ಘಟನೆ ಚುಡಾವಣೆಯದ್ದಲ್ಲ. ‘ಗೋ ಸಾಗಾಟ ಮತ್ತು ಥಳಿತ’ ಎಂಬ ಪಟ್ಟಿಗೆ ಸೇರಿದ್ದೂ ಅಲ್ಲ. `ಲವ್ ಜಿಹಾದ್’ ಎಂಬ ಅತಿ ವಿಶೇಷ ಕೆಟಗರಿಯಲ್ಲೂ ಇದಕ್ಕೆ ಸ್ಥಾನವಿಲ್ಲ. ಕಲ್ಲಡ್ಕ ಎಂಬ ಅತಿ ಸಣ್ಣ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರ ನಡುವೆ ನಡೆದ ಘಟನೆಯನ್ನೇ ಇದಕ್ಕೆ ಕಾರಣವಾಗಿ ಕೊಡಲಾಗುತ್ತಿದೆ. ಅವರಿಬ್ಬರೂ ಅಷ್ಟು ಪ್ರಭಾವಿಗಳೇ? ಜಿಲ್ಲೆ ಅಷ್ಟೂ ಸೆನ್ಸಿಟಿವ್ ಆಗಿದೆಯೇ? ಆ ಒಂದು ಘಟನೆಯನ್ನು ವಾರಗಳ ತನಕ ತಲೆಯಲ್ಲಿ ಹೊತ್ತು ತಿರುಗುವಷ್ಟು ಮತ್ತು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡು ಹತ್ಯೆ, ಹಲ್ಲೆಗಳಲ್ಲಿ ಏರ್ಪಡುವಷ್ಟು ಜಿಲ್ಲೆ ಬೌದ್ಧಿಕ ದಾರಿದ್ರ್ಯಕ್ಕೆ ಒಳಪಟ್ಟಿದೆಯೇ? ಒಂದು ವೇಳೆ, ಯಾರಾದರೂ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಲು ಮುಂದಾಗುವುದಾದರೆ, ಅವರಿಗೆ ಅಚ್ಚರಿಯಾಗುವ ಸಾಧ್ಯತೆಯೇ ಹೆಚ್ಚು. ಜಿಲ್ಲೆ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿಲ್ಲ. ವ್ಯಾಪಾರ-ವಹಿವಾಟುಗಳು ನಾವು-ಅವರಾಗಿ ಮಾರ್ಪಾಟಾಗಿಲ್ಲ. ಅದೇ ಮೀನು ಮಾರುಕಟ್ಟೆ, ಅದೇ ಧಕ್ಕೆ. ತರಕಾರಿ ಮಾರುವವರಲ್ಲಿ ಅವರೂ-ಇವರೂ ಇದ್ದಾರೆ. ದಿನಸಿ ಅಂಗಡಿಗಳ ಗಿರಾಕಿಗಳಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರೆ. ಮೀನು ಹಿಡಿಯುವವರಲ್ಲೂ ಅವರು ಇದ್ದಾರೆ. ಮಾರುವವರಲ್ಲೂ ಅವರು ಇದ್ದಾರೆ. ಇವರೂ ಇದ್ದಾರೆ. ತರಕಾರಿಯನ್ನು ಬೆಳೆದು ಮಾರುಕಟ್ಟೆಗೆ ತರುವವರು, ಮಾರುವವರು ಮತ್ತು ಅದನ್ನು ಖರೀದಿಸುವವರು ಹಿಂದೂ-ಮುಸ್ಲಿಮ್ ಆಗಿ ಬೇರ್ಪಟ್ಟಿಲ್ಲ. ಮಂಗಳೂರಿನ ಕೇಂದ್ರ ಮಾರುಕಟ್ಟೆ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿರುವ ಸಣ್ಣ ಪುಟ್ಟ ಮಾರುಕಟ್ಟೆಗಳು ಈಗಲೂ ಮನುಷ್ಯರಲ್ಲಿಯೇ ಇವೆ. ಅವರ್ಯಾರೂ ಧರ್ಮದ ಕಾರಣಕ್ಕಾಗಿ ಭಾರೀ ಸಂಖ್ಯೆಯಲ್ಲಿ ಅಂಗಡಿಗಳನ್ನು ಬದಲಿಸಿಕೊಂಡಿಲ್ಲ. ಇಲ್ಲಿ ಸಾಲಗಳ ವಹಿವಾಟೂ ಈ ಹಿಂದಿನಂತೆಯೇ ನಡೆಯುತ್ತಿದೆ. ಹೊಟೇಲುಗಳಲ್ಲಿ ಅವೇ ತಮಾಷೆಯ ಮಾತುಗಳು ವಿನಿಮಯವಾಗುತ್ತಿವೆ. ಕೆಲವು ಕಡೆ ಒಂದಷ್ಟು ವ್ಯತಿರಿಕ್ತ ಬೆಳವಣಿಗೆಗಳಾಗಿವೆಯಾದರೂ ಉದ್ದೇಶಪೂರ್ವಕವಾಗಿ ಹಿಂದೂ ಕಾಲನಿ ಮತ್ತು ಮುಸ್ಲಿಮ್ ಕಾಲನಿಗಳು ತಲೆಯೆತ್ತಿಲ್ಲ. ಆದರೂ ಜಿಲ್ಲೆಯ ಜನರು ತಮ್ಮ ಮಾತುಕತೆಗೆ ಒಂದು ಅಘೋಷಿತ ಮಿತಿಯನ್ನು ಅಳವಡಿಸಿಕೊಂಡಿರುವುದು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಲೇ ಇವೆ. ಅದು ರಾಜಕೀಯ. ಮಾತುಕತೆಗಳ ನಡುವೆ ರಾಜಕೀಯ ನುಸುಳದಂತೆ ಬಲವಂತದ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಹಿಂದೆ ಈ ಮಡಿವಂತಿಕೆ ಇರಲಿಲ್ಲ. ಬಹುಶಃ ಜಿಲ್ಲೆಯ ರಕ್ತದಾಹಕ್ಕೆ ಕಾರಣಗಳು ಇಲ್ಲೇ ಇರುವ ಸಾಧ್ಯತೆಯೇ ಹೆಚ್ಚು. ಜನರು ಯಾವುದರ ಬಗ್ಗೆ ಮಾತಾಡಲು ಹೆಚ್ಚು ಭಯಪಡುತ್ತಾರೋ ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದೋ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಥವಾ ಹಾಗೇ ಮಾತಾಡುವುದರಿಂದ ಅಪಾಯ ಇದೆ. ಸದ್ಯ ಈ ಎರಡನೇ ಕಾರಣವೇ ಒಟ್ಟು ಬೆಳವಣಿಗೆಯ ಮೂಲವೆನ್ನಬಹುದು. ಈ ಸಂಭಾವ್ಯ ಅಪಾಯವನ್ನು ಪರಿಗಣಿಸಿಯೇ ಜನಸಾಮಾನ್ಯರು ತಮ್ಮ ಮಾತುಕತೆಗಳ ವೇಳೆ ರಾಜಕೀಯವನ್ನು ದೂರ ಇಡುತ್ತಿದ್ದಾರೆ. ಜಿಲ್ಲೆಯ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹೆಚ್ಚು ಒತ್ತು ಕೊಡಬೇಕಾದ ಜಾಗ ಇದು. ಮೂಲ ಕಾರಣ ಏನೆಂದು ಸ್ಪಷ್ಟವಾದರೆ ಆ ಬಳಿಕ ಪರಿಹಾರದ ದಾರಿಗಳನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಆದ್ದರಿಂದ, ಸದ್ಯ ರಾಜಕೀಯ ಉದ್ದೇಶ ಇಲ್ಲದ ಜಿಲ್ಲೆಯ ಎಲ್ಲ ಸಂಘಸಂಸ್ಥೆಗಳು ಒಟ್ಟು ಸೇರಬಹುದಾದ ಸಂದರ್ಭವೊಂದನ್ನು ತುರ್ತಾಗಿ ಸೃಷ್ಟಿಸಿಕೊಳ್ಳಬೇಕು. ಹಿಂದೂ ಮತ್ತು ಮುಸ್ಲಿಮ್ ಸಂಘಸಂಸ್ಥೆಗಳು ಈ ವಿಷಯದಲ್ಲಿ ಮಡಿವಂತಿಕೆ ತೋರದೇ ಒಂದೇ ಕಡೆ ಸೇರಬೇಕು. ಸಮಿತಿ ರಚಿಸಬೇಕು. ಪ್ರಥಮವಾಗಿ- ಸೂಕ್ಷ್ಮವೆಂದು ನಂಬಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಂಘಸಂಸ್ಥೆಗಳನ್ನು ಜೊತೆ ಸೇರಿಸಿಕೊಂಡು ಪ್ರತಿ ಮನೆ ಮನೆಯ ಬಾಗಿಲಿಗೂ ಹೋಗಬೇಕು. ಅವರೊಂದಿಗೆ ಮಾತಾಡಬೇಕು. ರಾಜಕೀಯದ ಒಳ ಉದ್ದೇಶಗಳನ್ನು ಯಾವ ಮುಲಾಜೂ ಇಲ್ಲದೇ ಮಾತಾಡುವಷ್ಟು ರಾಜಕೀಯೇತರ ಧ್ವನಿಯಾಗಿ ಈ ಸಮಿತಿಗಳು ಹೊರ ಹೊಮ್ಮಬೇಕು. ಪ್ರತಿ ಮನೆಯ ಸಮಸ್ಯೆಗಳಿಗೆ ಕಿವಿಯಾಗಬೇಕು. ಈ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲೆಯಲ್ಲಿ ಶಾಂತಿ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಸಬೇಕು. ಎರಡನೆಯದಾಗಿ, ಇರಿತದಲ್ಲಿ ಭಾಗಿಯಾದ ಆರೋಪಿಗಳ ಮನೆಗಳಿಗೆ ಭೇಟಿ ಕೊಡಬೇಕು. ಆ ಮನೆಯವರಿಗೆ ವಾಸ್ತವವನ್ನು ತಿಳಿ ಹೇಳಬೇಕು. ಸಾಧ್ಯವಾದರೆ, ಆರೋಪಿಗಳನ್ನು ಭೇಟಿಯಾಗುವುದು ಬಹಳ ಬಹಳ ಪ್ರಯೋಜನಕಾರಿ. ಅವರನ್ನು ಭೇಟಿಯಾಗುವುದರಿಂದ ಆಗುವ ಇನ್ನೊಂದು ಲಾಭ ಏನೆಂದರೆ, ಅವರ ವಿಚಾರಧಾರೆಗಳೇನು ಎಂಬುದು ಗೊತ್ತಾಗುತ್ತದೆ. ಇನ್ನಷ್ಟು ಯುವಕರು ಅಂಥ ವಿಚಾರಧಾರೆಯೊಂದಿಗೆ ಬೆಳೆಯದಂತೆ ನೋಡಿಕೊಳ್ಳುವುದಕ್ಕೆ ರೂಪು-ರೇಷೆಯನ್ನು ಸಿದ್ಧಪಡಿಸುವುದಕ್ಕೆ ಅವಕಾಶವಾಗುತ್ತದೆ. ಇದೇ ವೇಳೆ, ಆರೋಪಿಗಳ ಮನೆಗೆ ನೀಡುವ ಭೇಟಿಯನ್ನು ಚಿತ್ರೀಕರಿಸಿಕೊಳ್ಳುವುದು ಬಹಳ ಅಗತ್ಯ. ಅವರ ಹೆತ್ತವರು, ಒಡಹುಟ್ಟಿದವರು ಮತ್ತಿತರರ ಮಾತುಗಳನ್ನು ಸಮಾಜದ ಮುಂದೆ ಇಡುವುದರಿಂದ ಸಾಕಷ್ಟು ಪ್ರಯೋಜನ ಇದೆ. ಸಾಧ್ಯವಾದರೆ ದೃಶ್ಯ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಿಸುವುದಕ್ಕೆ ಅದರಿಂದ ಅನುಕೂಲವಾಗುತ್ತದೆ. ಜಿಲ್ಲೆಯ ಜನರನ್ನು ಅಂಥ ವೀಡಿಯೋಗಳು ಖಂಡಿತ ಪ್ರಭಾವಿತಗೊಳಿಸಬಹುದು. ವಾಟ್ಸ್ಯಾಪ್ ಮಾಧ್ಯಮವನ್ನೂ ಇದರ ಪ್ರಸಾರಕ್ಕಾಗಿ ಬಳಸಿಕೊಳ್ಳಬಹುದು. ಸಂತ್ರಸ್ತರು ಮತ್ತು ಆರೋಪಿ ಕುಟುಂಬಗಳ ಪ್ರತಿ ಮಾತು-ತುಡಿಗಳು ಸಮಾಜಕ್ಕೆ ಬಹಳ ದೊಡ್ಡ ಸಂದೇಶವನ್ನು ನೀಡಬಲ್ಲುದು.
     ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಆಯ್ಕೆಯ ಪ್ರಶ್ನೆ ಬಂದರೆ ಯಾರೇ ಆಗಲಿ ಆರೋಗ್ಯವನ್ನೇ ಇಷ್ಟಪಡುತ್ತಾರೆ. ದ.ಕ. ಜಿಲ್ಲೆಯ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಅನಾರೋಗ್ಯ ಪೀಡಿತ ಜಿಲ್ಲೆಯಿಂದ ಯಾರಿಗೂ ಸುಖ ಇಲ್ಲ. ಮಕ್ಕಳೂ ಸುಖವಾಗಿರಲ್ಲ. ಇದನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನ ನಡೆಯಬೇಕಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳು ತುರ್ತಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ.

Thursday, 6 July 2017

.ತುಮಕೂರಿನ 37 ಹಸುಗಳು ಮತ್ತು ಗೋರಕ್ಷಣೆ

      ಕಳೆದವಾರ ತುಮಕೂರಿನಲ್ಲಿ ನಡೆದ ರೈತ ಪ್ರತಿಭಟನೆಯು ಸ್ವಘೋಷಿತ ಗೋರಕ್ಷಕರ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ತಮಿಳುನಾಡಿನ ಈರೋಡ್‍ನಿಂದ ಹೈನುಗಾರಿಕೆಗೆಂದು 37 ಜರ್ಸಿ ಹಸುಗಳು ಮತ್ತು ಎರಡು  ಎಮ್ಮೆಗಳನ್ನು ಖರೀದಿಸಿ ಬೆಳಗಾವಿಗೆ ತರುತ್ತಿದ್ದ ವೇಳೆ ಮೇ 24ರಂದು ತುಮಕೂರಿನಲ್ಲಿ ಸ್ವಘೋಷಿತ ಗೋರಕ್ಷಕರು ದಾಳಿ ನಡೆಸಿದರು. ಸುಮಾರು 200ರಷ್ಟಿದ್ದ ಗೋರಕ್ಷಕರು ರೈತರನ್ನು ಮತ್ತು ಲಾರಿ ಚಾಲಕರನ್ನು ಥಳಿಸಿದರು. ಪೊಲೀಸರು ರೈತರ ಮೇಲೆ ಮೊಕದ್ದಮೆ ದಾಖಲಿಸಿದರು. ಎಮ್ಮೆ ಮತ್ತು ಹಸುಗಳನ್ನು ಗುಬ್ಬಿ ತಾಲೂಕಿನಲ್ಲಿರುವ ಧ್ಯಾನ್ ಫೌಂಡೇಶನ್ ಗೋರಕ್ಷಕ್ ಟ್ರಸ್ಟ್‍ಗೆ ಹಸ್ತಾಂತರಿಸಿದರು. ರೈತರು ಕಂಗಾಲಾದರು. ತಲಾ 50 ಸಾವಿರ ರೂಪಾಯಿಯನ್ನು ತೆತ್ತು 37 ಹಸು ಮತ್ತು ಎರಡು ಎಮ್ಮೆಗಳನ್ನು ಖರೀದಿಸಿದ್ದ ರೈತರು, ಅದಕ್ಕಾಗಿ ಸಂಸ್ಥೆಗಳಿಂದ ಸಾಲಗಳನ್ನೂ ಪಡೆದಿದ್ದರು. ಅಲ್ಲದೇ 37 ಹಸುಗಳೂ ಗರ್ಭ ಧರಿಸಿದ್ದುವು. ಕಳೆದ ಜೂನ್ 5ರಂದು ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯವು, ಮುಟ್ಟುಗೋಲು ಹಾಕಲಾದ ಜಾನುವಾರುಗಳನ್ನು ರೈತರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿತು. ಮಾತ್ರವಲ್ಲ, ತಲಾ 50 ರೂಪಾಯಿಯಂತೆ 39 ಜಾನುವಾರುಗಳಿಗೂ ಪ್ರತಿದಿನದ ನಿರ್ವಹಣಾ ವೆಚ್ಚವಾಗಿ ಪಾವತಿಸಬೇಕೆಂದೂ ರೈತರಿಗೆ ನಿರ್ದೇಶಿಸಿತು. ಆದರೆ ಧ್ಯಾನ್ ಟ್ರಸ್ಟ್ ಜಾನುವಾರುಗಳನ್ನು ಹಿಂದಿರುಗಿಸಲು ಒಪ್ಪುತ್ತಿಲ್ಲ. ತಲಾ 1.7 ಲಕ್ಷ ರೂಪಾಯಿಯಂತೆ 39 ಜಾನುವಾರಿಗಳಿಗೆ ಪಾವತಿಸಿದರೆ ಮಾತ್ರ ಬಿಟ್ಟು ಕೊಡುವುದಾಗಿ ಅದು ಹೇಳಿಕೊಂಡಿದೆ.
      ಇಲ್ಲಿ ಕೆಲವು ಪ್ರಶ್ನೆಗಳಿವೆ. ನಿಜಕ್ಕೂ ಗೋರಕ್ಷಕರೆಂದರೆ ಯಾರು? ಅವರ ನಿಯಂತ್ರಣ ಯಾರ ಕೈಯಲ್ಲಿದೆ?  ಇತ್ತೀಚೆಗಷ್ಟೇ ತಮಿಳುನಾಡು ಸರಕಾರದ ಆದೇಶದಂತೆ ರಾಜಸ್ಥಾನದಿಂದ ಖರೀದಿಸಿ ತರಲಾಗುತ್ತಿದ್ದ ಜಾನುವಾರುಗಳನ್ನು ತಡೆಹಿಡಿದ ಘಟನೆ ರಾಜಸ್ಥಾನದಲ್ಲೇ ನಡೆಯಿತು. ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಯಿತು. ಮಾಂಸ ಸಾಗಿಸುತ್ತಿರುವರೆಂಬ ಆರೋಪದಲ್ಲಿ ಯುವಕನನ್ನು ಇರಿದು ಕೊಂದ ಘಟನೆ ಕಳೆದವಾರ ದೆಹಲಿಯಲ್ಲಿ ನಡೆದಿದೆ. ಪೆಹ್ಲೂಖಾನ್, ಅಖ್ಲಾಕ್ ಹತ್ಯಾ ಘಟನೆಗಳು ಜನರ ನೆನಪಿನಿಂದ ಮಾಸುವ ಮೊದಲೇ ಅಂಥದ್ದೇ ಸರಣಿ ಕ್ರೌರ್ಯಗಳು ನಡೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಹಾಗಂತ, ಗೋರಕ್ಷಣೆಯ ಹೆಸರಲ್ಲಿ ಥಳಿಸುವ ಗುಂಪಿನ ಮನಸ್ಥಿತಿ ಎಷ್ಟು ಭೀಭತ್ಸಕರ ಎನ್ನುವುದಕ್ಕೆ ಪುರಾವೆಯಾಗಿ ನಿರ್ದಿಷ್ಟ ಘಟನೆಗಳನ್ನು ಉಲ್ಲೇಕಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಪ್ರತಿ ಘಟನೆಯೂ ಅದಕ್ಕೆ ಸಾಕ್ಷಿಯೇ. ಪ್ರತಿ ಹಿಂಸಾತ್ಮಕ ಘಟನೆಯನ್ನೂ ಚಿತ್ರೀಕರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಿಗೆ ರವಾನಿಸಿ ತೃಪ್ತಿಪಡುವುದರಲ್ಲಿಯೇ ಆ ಮನಸ್ಥಿತಿ ಎಷ್ಟು ಭೀಕರ ಎಂಬುದನ್ನು ಸಾರಿ ಹೇಳುತ್ತದೆ. ಸಾಮಾನ್ಯವಾಗಿ, ಅತ್ಯಾಚಾರ ಪ್ರಕರಣಗಳಲ್ಲಿ ಇಂಥ ಚಿತ್ರೀಕರಣಗಳು ನಡೆಯುವುದಿದೆ. ಸಂತ್ರಸ್ತೆಯನ್ನು ಬೆದರಿಸುವುದಕ್ಕೆ ಅಂಥ ಚಿತ್ರೀಕರಣಗಳನ್ನು ಬಳಸಲಾಗುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಅಂಥ ಚಿತ್ರೀಕರಣವನ್ನು ರವಾನಿಸಲು ಅಂಥವರು ಧೈರ್ಯ ತೋರುವುದು ತೀರಾ ತೀರಾ ಕಡಿಮೆ. ಒಂದು ಕಡೆ ಶಿಕ್ಷೆಯ ಭೀತಿಯಿದ್ದರೆ ಇನ್ನೊಂದು ಕಡೆ ಸಹಜ ಅಳುಕು ಇರುತ್ತದೆ. ತಾವು ಅಪರಾಧ ಎಸಗಿದ್ದೇವೆ ಎಂಬ ತಪ್ಪಿತಸ್ಥ ಭಾವ. ನಿಜವಾಗಿ ಗೋರಕ್ಷಕರ ಕ್ರೌರ್ಯ ಅತ್ಯಾಚಾರಕ್ಕಿಂತ ತೀರಾ ಭಿನ್ನವೇನೂ ಅಲ್ಲ. ಅತ್ಯಾಚಾರವು ಓರ್ವ ಹೆಣ್ಣು ಮಗಳನ್ನು ದೈಹಿಕವಾಗಿ ಹಿಂಸಿಸುವುದಕ್ಕಿಂತ ಹೆಚ್ಚು ಮಾನಸಿಕವಾಗಿ ಇರಿಯುತ್ತದೆ. ಸದಾ ಬದುಕಿನುದ್ದಕ್ಕೂ ಅದು ಕಾಡುತ್ತಲೂ ಇರುತ್ತದೆ. ಸಾಮಾಜಿಕವಾಗಿಯೂ ಅದು ಅಡ್ಡ ಪರಿಣಾಮವನ್ನು ಬೀರುತ್ತದೆ. ‘ಅತ್ಯಾಚಾರದ ಸಂತ್ರಸ್ತೆ’ ಎಂಬುದು ಈ ದೇಶದಲ್ಲಿ ಗೌರವದ ಪದವಾಗಿಯೇನೂ ಉಳಿದಿಲ್ಲ. ಮದುವೆ ಸಂದರ್ಭದಲ್ಲಿ ಅದು ತೊಂದರೆ ಕೊಡಬಹುದು. ಸಮಾರಂಭಗಳಲ್ಲಿ ಅದು ಮುಜುಗರಕ್ಕೆ ಒಳಪಡಿಸಬಹುದು. ಅನುಕಂಪ, ತ್ಚು ತ್ಚು ತ್ಚು ಮಾತುಗಳ ಮೂಲಕ ಮತ್ತೆ ಮತ್ತೆ ಕಂಡ ಕಂಡವರಿಂದ ಸಂತ್ರಸ್ತೆಯಾಗುತ್ತಲೇ ಇರುವ ಸನ್ನಿವೇಶಕ್ಕೂ ದೂಡಬಹುದು. ಗೋರಕರಿಂದ ಥಳಿತಕ್ಕೆ ಒಳಗಾಗುವವರ ಪರಿಸ್ಥಿತಿಯೂ ಬಹುತೇಕ ಹೀಗೆಯೇ. ಆವರೆಗೆ ಅತ್ಯಂತ ಪ್ರಾಮಾಣಿಕ ರೈತ, ಹೈನುದ್ಯಮಿ, ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದವ ಒಂದು ಬೆಳಗಾತ ದಿಢೀರನೇ ಕಳ್ಳನಾಗಿ ಬಿಡುತ್ತಾನೆ. ಥಳಿಕ್ಕೆ ಒಳಗಾಗುತ್ತಾನೆ. ಅಟ್ಟಾಡಿಸಿ ಹೊಡೆಯುವ, ಬಡಿಯುವ ವೀಡಿಯೋಗಳು ಆತನ ಪತ್ನಿ, ಮಕ್ಕಳಿಂದ ಹಿಡಿದು ಎಲ್ಲರಿಗೂ ಲಭ್ಯವಾಗುತ್ತದೆ. ಮೊಬೈಲ್‍ನಿಂದ ಮೊಬೈಲ್‍ಗೆ ಮತ್ತೆ ಮತ್ತೆ ರವಾನೆಯಾಗುತ್ತಲೂ ಇರುತ್ತದೆ. ಓರ್ವ ವ್ಯಕ್ತಿ ಥಳಿತದ ನೋವಿಗಿಂತಲೂ ಹೆಚ್ಚು ನೋವು ಅನುಭವಿಸುವ ಸಂದರ್ಭ ಇದು. ಒಂದು ಕಡೆ ಸಾರ್ವಜನಿಕವಾಗಿ ತನ್ನ ಪ್ರಾಮಾಣಿಕತೆಗೆ ಬಿದ್ದಿರುವ ಏಟು ಮತ್ತು ಇನ್ನೊಂದು ಕಡೆ ಮನೆಯಲ್ಲಿ ಇದ್ದಿರಬಹುದಾದ ಅಪ್ಪ ಅಥವಾ ಅಣ್ಣ ಎಂಬ ವರ್ಚಸ್ವೀ ವ್ಯಕ್ತಿತ್ವಕ್ಕೆ ನಡುಬೀದಿಯಲ್ಲಿ ಆಗುತ್ತಿರುವ ಅವಮಾನ.. ಇವೆರಡೂ ಸದಾಕಾಲ ಆತನನ್ನು ಖಂಡಿತ ಕಾಡುತ್ತಿರುತ್ತದೆ. ಅಂದಹಾಗೆ, ಅತ್ಯಾಚಾರದ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿ ಇಡುವ ವ್ಯವಸ್ಥೆಯಾದರೂ ಇದೆ. ಆದರೆ ಗೋರಕ್ಷಕರ ಥಳಿತಕ್ಕೆ ಒಳಗಾಗುವ ವ್ಯಕ್ತಿಯ ಮಟ್ಟಿಗೆ ಹೆಸರು ಮಾತ್ರವಲ್ಲ, ವೀಡಿಯೋಗಳು ಜೊತೆಜೊತೆಗೇ ಬಹಿರಂಗವಾಗುವ ಸ್ಥಿತಿ ಇದೆ. ವ್ಯಕ್ತಿ ಎಷ್ಟೇ ಪ್ರಾಮಾಣಿಕನಾಗಿರಲಿ, ತನಗಾಗಿರುವ ಅವಮಾನ ಮತ್ತು ತನ್ನ ಅಸಹಾಯಕ ವರ್ತನೆಯನ್ನು ತನ್ನ ಪತ್ನಿ, ಮಕ್ಕಳು, ಕುಟುಂಬ ಅಥವಾ ಸಮಾಜ ವೀಕ್ಷಿಸುವುದನ್ನು
ಇಷ್ಟಪಡುವುದಿಲ್ಲ. ಆದ್ದರಿಂದಲೇ ಅತ್ಯಾಚಾರದ ಸಂತ್ರಸ್ತೆಯಂತೆ ‘ಗೋರಕ್ಷಕ ಸಂತ್ರಸ್ತ’ರನ್ನೂ ಯಾಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು? ಗೋರಕ್ಷಕರ ಕ್ರೌರ್ಯ ಯಾವ ನೆಲೆಯಲ್ಲೂ ಅತ್ಯಾಚಾರಿಗಳ ಕ್ರೌರ್ಯಕ್ಕಿಂತ ಕಡಿಮೆಯದಲ್ಲ. ಈ ಗೋರಕ್ಷಕರಿಗೆ ಯಾವ ನೀತಿ ನಿಯಮಗಳೂ ಇಲ್ಲ. ಅಕ್ರಮ ಮತ್ತು ಸಕ್ರಮ ಸಾಗಾಟಗಳ ಬಗ್ಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಅವರದು ವಿಕೃತ ಮನಸ್ಥಿತಿ. ಆ ಮನಸ್ಥಿತಿಯ ಸ್ವಭಾವ ಏನೆಂದರೆ, ಇತರರನ್ನು ಹಿಂಸಿಸಿ ಆನಂದ ಪಡುವುದು. ಆಕಳನ್ನು ಸ್ವತಃ ಅದರ ಮಾಲಿಕನೇ ಗದ್ದೆಗೆ ಅಟ್ಟಿಕೊಂಡು ಹೋದರೂ ಥಳಿಸುವಷ್ಟು ಈ ಮನಸ್ಥಿತಿ ವಿಕೃತವಾದುದು. ದುರಂತ ಏನೆಂದರೆ, ಈ ಮನಸ್ಥಿತಿಯ ಅಟ್ಟಹಾಸ ದಿನೇ ದಿನೇ ಪ್ರಬಲಗೊಳ್ಳುತ್ತಿದ್ದರೂ ಸಮಾಜ ಎಚ್ಚೆತ್ತುಕೊಳ್ಳುತ್ತಿಲ್ಲ. ನಿರ್ಭಯ ಪ್ರಕರಣದಲ್ಲಿ ಈ ದೇಶ ತೋರಿದ ಒಗ್ಗಟ್ಟನ್ನು ಈ ಕ್ರೌರ್ಯ ಮತ್ತೆ ಮತ್ತೆ ಬಯಸುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಅಂಥದ್ದೊಂದು ಜಾಗೃತಿ ಇನ್ನೂ ರೂಪುಪಡೆದಿಲ್ಲ. ಉನಾ ಪ್ರಕರಣದಲ್ಲಿ ಈ ಜಾಗೃತಿ ಪ್ರಜ್ಞೆ ಅಲ್ಪ ಮಟ್ಟದಲ್ಲಿ ಕಾಣಿಸಿಕೊಂಡದ್ದನ್ನು ಬಿಟ್ಟರೆ ಉಳಿದಂತೆ ಸಮಾಜ ವೀಕ್ಷಕನ ಪಾತ್ರ ನಿರ್ವಹಿಸಿದ್ದೇ ಹೆಚ್ಚು. ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲದ ದೇಶವೊಂದರಲ್ಲಿ ಪ್ರಾಮಾಣಿಕರನ್ನೂ ರೈತರನ್ನೂ ಕಳ್ಳರ ಪಟ್ಟಿಗೆ ಸೇರಿಸುವ ಕ್ರೌರ್ಯವೊಂದು ಸಮಾಜದ ಮೌನ ಸಮ್ಮತಿಯೊಂದಿಗೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾದುದು. ಇದರ ವಿರುದ್ಧ ಸಮಾಜ ಪ್ರತಿ ಚಳವಳಿ ನಡೆಸಬೇಕು. ಗೋರಕ್ಷಕರ ವೇಷದಲ್ಲಿರುವ ಕ್ರಿಮಿನಲ್‍ಗಳನ್ನು ‘ಅತ್ಯಾಚಾರಿ’ಗಳಂತೆ ನಡೆಸಿಕೊಳ್ಳಬೇಕು. ಅವರಿಗೆ ಸಾರ್ವಜನಿಕವಾಗಿ ಮಾನ್ಯತೆ ಲಭ್ಯವಾಗದಂತೆ ನೋಡಿಕೊಳ್ಳಬೇಕು. ಕಾನೂನುಬಾಹಿರವಾಗಿ ಗೋಹತ್ಯೆ ನಡೆಸುವವರಿಗೆ ಶಿಕ್ಷೆ ವಿಧಿಸುವ ನಿಯಮಗಳನ್ನು ರೂಪಿಸಿರುವ ಮಾದರಿಯಲ್ಲೇ ಗೋರಕ್ಷಣೆಯ ಹೆಸರಲ್ಲಿ ಬೀದಿ ನ್ಯಾಯ ನೀಡುವವರ ವಿರುದ್ಧವೂ ಕಠಿಣ ನಿಯಮಗಳನ್ನು ರಚಿಸಬೇಕು. ಅಕ್ರಮ ಮತ್ತು ಸಕ್ರಮವನ್ನು ಪತ್ತೆ ಹಚ್ಚುವುದು ಸರಕಾರದ ಕರ್ತವ್ಯ. ಆ ಕೆಲಸವನ್ನು ಸರಕಾರ ನಿರ್ವಹಿಸಲಿ. ಸ್ವಘೋಷಿತ ರಕ್ಷಕರಿಗೆ ಅತ್ಯಾಚಾರಿಗಳ ಸ್ಥಾನ-ಮಾನ ಸಿಗಲಿ. ತುಮಕೂರು ಪ್ರಕರಣವು ಇಂಥದ್ದೊಂದು ಒತ್ತಾಯಕ್ಕೆ ಮತ್ತೊಮ್ಮೆ ಅವಕಾಶವನ್ನು ಒದಗಿಸಿದೆ.

Friday, 30 June 2017

ಪೇಜಾವರ ಶ್ರೀ ಇಫ್ತಾರ್ ಕೂಟ: ಪರ- ವಿರೋಧಗಳ ಆಚೆ..

      ಸೌಹಾರ್ದತೆಯ ಕುರಿತಂತೆ ವಿವಿಧ ಅಭಿಪ್ರಾಯಗಳು ಸಮಾಜದಲ್ಲಿವೆ. ವಿಗ್ರಹವನ್ನು ಪೂಜಿಸದ ಮತ್ತು ವಿಗ್ರಹಾರಾಧನೆಯನ್ನು ಒಪ್ಪದ ವ್ಯಕ್ತಿಯೋರ್ವ ವಿಗ್ರಹಕ್ಕೆ ಪೂಜೆ ಸಲ್ಲಿಸುವುದನ್ನು ‘ಸೌಹಾರ್ದತೆ’ಯಾಗಿ ಕಾಣುವವರಿದ್ದಾರೆ. ಮುಸ್ಲಿಮ್ ಜೋಡಿಯೊಂದು ಹಿಂದೂ ವಿಧಿ-ವಿಧಾನದಂತೆ ಮದುವೆಯಾಗುವುದು, ಆರತಿ ಎತ್ತುವುದನ್ನು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿ ಪರಿಗಣಿಸುವವರಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮುಸ್ಲಿಮರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲೂ ಇಂಥ ಘಟನೆಗಳು ಸುದ್ದಿಯಲ್ಲಿರುತ್ತವೆ. ಹಾಗಂತ, ಇದು ಸರ್ವರೂ ಒಪ್ಪುವ ಮಾದರಿ ಎಂದು ಹೇಳುವಂತಿಲ್ಲ. ಇದನ್ನು ಧಾರ್ಮಿಕ ಭ್ರಷ್ಟತನವಾಗಿ ಕಾಣುವವರೂ ಇದ್ದಾರೆ. ಪ್ರತಿ ಧರ್ಮಕ್ಕೂ ಅದರದ್ದೇ  ಆದ ಆಚರಣಾ ವಿಧಾನಗಳಿವೆ. ನಿಯಮ ಸಂಹಿತೆಗಳಿವೆ. ಯಾವುದು ಪೂಜೆ, ಯಾಕೆ ಪೂಜೆ, ಹೇಗೆ ಪೂಜೆ, ಯಾವುದು ಪೂಜೆಯಲ್ಲ.. ಇತ್ಯಾದಿ ಇತ್ಯಾದಿಗಳ ಬಗ್ಗೆ ಪ್ರತಿ ಧರ್ಮದಲ್ಲೂ ಸ್ಪಷ್ಟವಾದ ಉಲ್ಲೇಖಗಳಿವೆ. ಹೀಗಿರುವಾಗ, ವಿಗ್ರಹ ಪೂಜೆಯನ್ನೇ ಮಾಡದ ವ್ಯಕ್ತಿ ಸೌಹಾರ್ದತೆಯ ಹೆಸರಲ್ಲಿ ವಿಗ್ರಹ ಪೂಜೆ ಮಾಡುವುದೆಂದರೆ ಒಂದೋ ಆತ ಆತ್ಮವಂಚನೆ ಮಾಡಿಕೊಳ್ಳುತ್ತಾನೆ ಅಥವಾ ತನ್ನ ಧರ್ಮದ ನಿಲುವುಗಳು ಅಪರಿಪೂರ್ಣ ಎಂದು ಸಾರುತ್ತಾನೆ. ಸೌಹಾರ್ದತೆ ಎಂಬುದು ತನ್ನ ಧರ್ಮದ ಮೌಲ್ಯಗಳನ್ನು ಭ್ರಷ್ಟಗೊಳಿಸಿಕೊಂಡು ಮಾಡುವ ಕರ್ಮದ ಹೆಸರೇ ಅನ್ನುವ ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಓರ್ವ ವ್ಯಕ್ತಿ ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಸೌಹಾರ್ದಮಯಿ ಆಗಲು ಸಾಧ್ಯವಿಲ್ಲವೇ? ಇದೆ ಎಂದಾದರೆ ಅದರ ಮಾದರಿಗಳು ಯಾವುವು? ಮುಸ್ಲಿಮರು ಮತ್ತು ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿರುವ ಭಾರತದಲ್ಲಿ ಇರಬೇಕಾದ ಸೌಹಾರ್ದತೆಯ ಪರಿಕಲ್ಪನೆಗಳು ಏನೇನು ಎಂದು ಮುಂತಾದ ಪ್ರಶ್ನೆಗಳಿಗೆ ಪುಟ್ಟದೊಂದು ಉತ್ತರವನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು ನೀಡಿವೆ.
 ಮೂರು ವಾರಗಳ ಹಿಂದೆ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಏರ್ಪಡಿಸಲಾದ ಇಫ್ತಾರ್ ಕೂಟದಲ್ಲಿ (ಉಪವಾಸ ತೊರೆಯುವ ಕಾರ್ಯಕ್ರಮ) ಸುಮಾರು 500ರಷ್ಟು ಮಂದಿ ಭಾಗವಹಿಸಿದ್ದರು. ಕಳೆದ ವಾರ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟದಲ್ಲೂ ನೂರಾರು ಮಂದಿ ಭಾಗವಹಿಸಿದರು. ದೇವಳ  ಮತ್ತು ಮಠದ  ಸಂಪ್ರದಾಯದಂತೆ ಎಲ್ಲೂ ಮಾಂಸಾಹಾರದ ಬಳಕೆ ಮಾಡಿರಲಿಲ್ಲ. ಎಲ್ಲವೂ ಶಾಖಾಹಾರ. ಹಾಗಂತ ಮುಸ್ಲಿಮರು ಮಾಂಸಾಹಾರ ಸೇವಿಸುತ್ತಾರೆ ಎಂಬ ಕಾರಣ ಕೊಟ್ಟು ತನ್ನ ಶಾಖಾಹಾರ ಸಂಪ್ರದಾಯದಲ್ಲಿ ಇವು ರಾಜಿ ಮಾಡಿಕೊಳ್ಳಬಹುದಿತ್ತು ಮತ್ತು ಮಾಂಸಾಹಾರವನ್ನು ಬಡಿಸಬಹುದಿತ್ತು. ಮಾತ್ರವಲ್ಲ, ಸೌಹಾರ್ದತೆಯ ಹೆಸರಲ್ಲಿ ಅದನ್ನು ಸಮರ್ಥಿಸುವುದಕ್ಕೂ ಅವಕಾಶ ಇತ್ತು. ಆದರೆ, ತನ್ನ ಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಸೌಹಾರ್ದಯುತವಾಗಿ ಬದುಕಬಹುದು ಮತ್ತು ಎಲ್ಲರನ್ನೂ ಒಗ್ಗೂಡಿಸಬಲ್ಲ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ದೇವಳ ಮತ್ತು ಮಠ ಸಾರಿ ಹೇಳಿದೆ. ಸದ್ಯ ನಮ್ಮ ನಡುವೆ ಅಭಾವ ಇರುವುದು ಇಂಥ ಸಭೆಗಳನ್ನು ಏರ್ಪಡಿಸುವ ವಿಷಯದಲ್ಲೇ.  ಧರ್ಮದ ಕುರಿತಂತೆ ಸಾಮಾಜಿಕವಾಗಿ ಎರಡು ವಿಭಿನ್ನ ನಿಲುವುಗಳಿವೆ. ಒಂದು ಅತ್ಯಂತ ಉದಾರಿ ನಿಲುವಾದರೆ ಇನ್ನೊಂದು ಅತ್ಯಂತ ಕರ್ಮಠ ನಿಲುವು. ಇವುಗಳ ನಡುವೆ ಒಂದು ಸಂತುಲಿತ ದಾರಿಯನ್ನು ಹುಡುಕಬೇಕಾದ ಅಗತ್ಯ ಬಹಳವೇ ಇದೆ.
     ನಿಜವಾಗಿ, ಈ ದೇಶದಲ್ಲಿ ಶಾಲೆ-ಆಸ್ಪತ್ರೆಗಳಿಗಿಂತ ಹೆಚ್ಚು ಮಸೀದಿ-ಮಂದಿರಗಳಿವೆ. ಮಾತ್ರವಲ್ಲ, ಅವು ಸಮಾಜದಲ್ಲಿ ಎಷ್ಟು ಗೌರವಪೂರ್ಣ ಸ್ಥಾನವನ್ನು ಪಡಕೊಂಡಿವೆ ಎಂದರೆ, ಓರ್ವರು ಎಸೆದ ಕಲ್ಲು ಗುರಿ ತಪ್ಪಿ ಇವುಗಳ ಮೇಲೆ ಬಿದ್ದರೂ ಸಮಾಜದಲ್ಲಿ ತಳಮಳ ಉಂಟಾಗುತ್ತದೆ. ಹಂದಿಯದ್ದೋ ದನದ್ದೋ ಅಥವಾ ಇನ್ನಾವುದಾದರೂ ಪ್ರಾಣಿಯದ್ದೋ ತಲೆಗಳು ಯಾಕೆ ಮಸೀದಿ-ಮಂದಿರದ ಮುಂದೆ ಕಾಣಿಸಿಕೊಳ್ಳುತ್ತದೆಂದರೆ, ಈ ಕ್ಷೇತ್ರಗಳು ಅಷ್ಟು ಪ್ರಭಾವಶಾಲಿ ಎಂಬುದರಿಂದ. ಅದರಿಂದ ಸಮಾಜ ಉದ್ವಿಗ್ನಗೊಳ್ಳುತ್ತದೆ. ಘರ್ಷಣೆಯ ಹಂತಕ್ಕೆ ಜಾರುತ್ತದೆ. ಹಾಗಂತ, ಒಂದು ಮನೆಯ ಎದುರು ಇಂಥ ತಲೆಗಳನ್ನು ಹಾಕಿದರೆ ಇಂಥದ್ದೊಂದು ಪ್ರತಿಕ್ರಿಯೆ ಸಿಗಬಹುದೇ? ಮನೆಯಲ್ಲಿರುವವರು ಎಷ್ಟೇ ನಿಷ್ಠಾವಂತ ಧರ್ಮಿಷ್ಠರೇ ಆಗಿರಲಿ, ಮಸೀದಿ ಅಥವಾ ಮಂದಿರದೆದುರು ಹಾಕಿದ ತಲೆಯಷ್ಟು ಸುದ್ದಿಯನ್ನು ಈ ತಲೆ ಮಾಡಲಾರದು. ಧಾರ್ಮಿಕ ಕೇಂದ್ರಗಳು ಭಾರತದಲ್ಲಿ ಪಡೆದುಕೊಂಡಿರುವ ಸ್ಥಾನಮಾನವಿದು. ಸದ್ಯ ಈ ಗೌರವಾರ್ಹ ಕ್ಷೇತ್ರಗಳ ಸದುಪಯೋಗವನ್ನು ಪಡಕೊಳ್ಳುವ ಪ್ರಯತ್ನಗಳು ಗಂಭೀರವಾಗಿ ನಡೆಯಬೇಕಾಗಿದೆ. ವಿವಿಧ ಧರ್ಮೀಯರನ್ನು ಒಟ್ಟುಗೂಡಿಸುವ ತಾಣಗಳನ್ನಾಗಿ ಈ ದೇಶದ ಪ್ರತಿ ಹಳ್ಳಿ-ಗ್ರಾಮ-ಪಟ್ಟಣಗಳಲ್ಲಿರುವ ಮಸೀದಿಗಳು ಮತ್ತು ಮಠ, ಮಂದಿರ, ದೇವಸ್ಥಾನ, ದೈವಸ್ಥಾನಗಳನ್ನು ಮಾಡುವ ರೂಪು-ರೇಷೆಗಳನ್ನು ತಯಾರಿಸಬೇಕಾಗಿದೆ. ಪರಸ್ಪರ ಮಾತಾಡಿದಷ್ಟೂ ಅನುಮಾನಗಳು ಕರಗುತ್ತವೆ. ಬೆರೆತಷ್ಟೂ ಗೆಳೆತನದಲ್ಲಿ ವೃದ್ಧಿಯಾಗುತ್ತದೆ. ಇವತ್ತಿನ ಬಹುದೊಡ್ಡ ಕೊರತೆ ಏನೆಂದರೆ, ವಿವಿಧ ಧರ್ಮೀಯರು ಬೆರೆಯಬಹುದಾದ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತಿರುವುದು. ಹಿಂದೂ ಮಹಿಳೆಯರು ಮತ್ತು ಮುಸ್ಲಿಮ್ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಒಂದೇ ಕಡೆ ಬೆರೆಯುವ ಮತ್ತು ಪರಸ್ಪರ ಮುಖ ಕೊಟ್ಟು ಮಾತಾಡಿಕೊಳ್ಳುವ ಸಂದರ್ಭವನ್ನೊಮ್ಮೆ ಊಹಿಸಿ. ಪುರುಷರಿಗೂ ಇದು ಅನ್ವಯಿಸುತ್ತದೆ. ಅದರ ಪರಿಣಾಮ ಏನಾಗಬಹುದು? ದ್ವೇಷಿಸುವುದಕ್ಕೆ ಕಾರಣಗಳೇ ಸಿಗದಿರಬಹುದು. ಯಾರೋ ಹೇಳಿರುವುದರ ಮೇಲೆ ಅಭಿಪ್ರಾಯವನ್ನು ರೂಪಿಸಿಕೊಂಡ ವ್ಯಕ್ತಿ ತಾನೆಷ್ಟು ಮೂರ್ಖ ಎಂದು ತಿದ್ದಿಕೊಳ್ಳಬಹುದು. ಹಾಗಿದ್ದೂ ಇಂಥ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಲು ಯಾಕೆ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ? ಎಲ್ಲೆಲ್ಲ ಮಸೀದಿ ಮತ್ತು ಮಂದಿರಗಳಿವೆಯೋ ಅಲ್ಲೆಲ್ಲ ಚೌತಿ, ಕೃಷ್ಣಾಷ್ಟಮಿ, ಉಪವಾಸ, ಈದ್‍ಗಳಂಥ ಸಂದರ್ಭಗಳನ್ನು ನೆಪ ಮಾಡಿಕೊಂಡು ಪರಸ್ಪರರನ್ನು ಒಟ್ಟು ಸೇರಿಸುವ ಸಭೆಗಳೇಕೆ ನಡೆಯಬಾರದು? ಧಾರ್ಮಿಕ ಕ್ಷೇತ್ರವೊಂದರಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ಭವ್ಯ ಕಲಾಭವನದಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ನಡುವೆ ಧಾರಾಳ ವ್ಯತ್ಯಾಸ ಇದೆ. ಧಾರ್ಮಿಕ ಕ್ಷೇತ್ರಕ್ಕೆ ಬರುವಾಗ ಎಲ್ಲರೂ ಅವರವರ ಧರ್ಮಕ್ಕೆ ನಿಷ್ಠಾವಂತರಾಗಿರುತ್ತಾರೆ. ಭಯ-ಭಕ್ತಿಗಳಿರುತ್ತವೆ. ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಇನ್ನೊಂದು ಧರ್ಮದ ಶ್ರದ್ಧಾಕೇಂದ್ರದಲ್ಲಿ ತುಸು ಸಮಯವನ್ನು ಕಳೆಯುವುದು ಮತ್ತು ಆ ಧರ್ಮದ ಅನುಯಾಯಿಗಳೊಂದಿಗೆ ಬೆರೆಯುವುದು ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬಹುದು. ಎರಡೂ ಧರ್ಮಗಳ ಮಂದಿ ಮತ್ತೆ ಮತ್ತೆ ಒಂದು ಸೇರುವ ಸಂದರ್ಭಗಳು ಸೃಷ್ಟಿಯಾಗುವುದರಿಂದ ಅನುಮಾನಗಳಷ್ಟೇ ಹೊರಟು ಹೋಗುವುದಲ್ಲ, ಅನುಮಾನವನ್ನು ಉಳಿಸಿ ಬೆಳೆಸಬೇಕೆಂದು ಬಯಸುವವರೂ ಹೊರಟು ಹೋಗುತ್ತಾರೆ.
     ಸೌಹಾರ್ದತೆ ಎಂಬುದು ಧರ್ಮಭ್ರಷ್ಟವಾಗಿ ಮಾಡಬೇಕಾದ ಒಂದು ಆಚರಣೆ ಅಲ್ಲ. ಧರ್ಮಿಷ್ಟರಾಗಿದ್ದುಕೊಂಡೇ ಪ್ರಸ್ತುತ ಮತ್ತು ಪ್ರಾಯೋಗಿಕಗೊಳ್ಳಬೇಕಾದ ಮೌಲ್ಯ ಅದು. ಹಾಗಂತ, ಇದು ಅಸಾಧ್ಯವೂ ಅಲ್ಲ. ಆದರೆ ನಾವೆಲ್ಲ ಸೇರಿಕೊಂಡು ಅದನ್ನು
ಶ್ರೀ ನರಸಿಂಹ ಮೂರ್ತಿ ದೇವಳ
ಅಸಾಧ್ಯವೋ ಎಂದು ಭಾವಿಸುವಂತಹ ಸ್ಥಿತಿಗೆ ತಂದು ಮುಟ್ಟಿಸಿದ್ದೇವೆ. ಮಸೀದಿ ಮತ್ತು ಮಂದಿರಗಳು ಬಹುತೇಕ ಸಮಯ ಖಾಲಿ ಬಿದ್ದಿದ್ದರೂ ಮತ್ತು ಇವುಗಳ ಹೊರಗಿನ ಪ್ರಪಂಚ ಧರ್ಮದ ಹೆಸರಿನ ಜಗಳದಲ್ಲಿ ಬ್ಯುಝಿಯಾಗಿದ್ದರೂ ಇವನ್ನು ಬಳಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗುತ್ತಿಲ್ಲ. ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು  ಈ ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣ. ಹಿಂದೂ-ಮುಸ್ಲಿಮರನ್ನು ಒಟ್ಟು ಸೇರಿಸುವ ಇಂಥ ಪ್ರಯತ್ನಗಳು ಮಸೀದಿ ಮತ್ತು ಮಂದಿರಗಳಲ್ಲಿ ಮತ್ತೆ ಮತ್ತೆ ನಡೆಯಲಿ. ಜನರ ನಡುವೆ ಸಂಬಂಧಗಳು ಗಟ್ಟಿಯಾಗಲಿ. ಆ ಮೂಲಕ ಸೌಹಾರ್ದತೆ ನೆಲೆಗೊಳ್ಳಲಿ.



Tuesday, 27 June 2017

ಕಲ್ಲಡ್ಕ: ಭಟ್ ಬಂಧನವನ್ನು ಬಯಸುತ್ತಿರುವ ಬಿಜೆಪಿ

        ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಕೋಮು ಘರ್ಷಣೆಗೆ ಇರುವ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಸಾರ್ವಜನಿಕರಲ್ಲಿ ವಿವಿಧ ಅಭಿಪ್ರಾಯಗಳಿವೆ. ಆದ್ದರಿಂದಲೇ, ಪ್ರಭಾಕರ ಭಟ್ಟರ ಬಂಧನವೇ ಸೂಕ್ತ ಪರಿಹಾರ ಎಂಬ ಅಭಿಪ್ರಾಯದ ಆಚೆಗೂ ಈ ಚರ್ಚೆಯನ್ನು ವಿಸ್ತರಿಸಿ ನೋಡಬೇಕಾದ ಅಗತ್ಯವೂ ಇದೆ. ಕಲ್ಲಡ್ಕದ ಅಶಾಂತಿಯಲ್ಲಿ ಪ್ರಭಾಕರ ಭಟ್ ಕೇಂದ್ರ ಬಿಂದು ಆಗಿರಬಹುದು. ಆದರೆ ಅವರ ಬಂಧನವನ್ನು ಬಯಸುತ್ತಿರುವವರ ಪಟ್ಟಿಯಲ್ಲಿ ಶಾಂತಿ ಪ್ರಿಯರು ಮಾತ್ರವೇ ಇದ್ದಾರೆಯೇ ಅಥವಾ ಅಶಾಂತಿಯ ವಾಹಕರ ಮುಖ್ಯ ಉದ್ದೇಶವೂ ಇದುವೇ ಆಗಿರಬಹುದೇ? 1990ರ ಕೊನೆಯಲ್ಲಿ ರಥಯಾತ್ರೆಯನ್ನು ಕೈಗೊಂಡ ಅಡ್ವಾಣಿಯವರಿಗೆ, ಈ ರಥಯಾತ್ರೆಗೆ ಯಾವ ರಾಜ್ಯದಲ್ಲಿ ವಿಘ್ನ ಎದುರಾಗಬಹುದು ಅನ್ನುವ ಪೂರ್ವ ಸೂಚನೆ ಖಂಡಿತ ಇತ್ತು. ವಿಘ್ನ ಎದುರಾಗುವ ರಾಜ್ಯದಲ್ಲಿ ರಥಯಾತ್ರೆಯನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆಯೂ ಅವರ ಮುಂದಿತ್ತು. ಬರೇ ರಥಯಾತ್ರೆಯೊಂದು ಈ ದೇಶದ ಜನಸಾಮಾನ್ಯರ ಗಮನ ಸೆಳೆಯಲು ಸಾಧ್ಯವಿಲ್ಲ. ರಾಮಚಂದ್ರಾಪುರ ಮಠದ ಗೋಯಾತ್ರೆಯಷ್ಟೇ ಅದರ ವ್ಯಾಪ್ತಿ ಸೀಮಿತ. ಬಿಹಾರದ ಮುಖ್ಯಮತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್‍ರು ಅಡ್ವಾಣಿಯವರ ರಥಯಾತ್ರೆಯನ್ನು ತಡೆಹಿಡಿದಾಗ ಅತ್ಯಂತ ಹೆಚ್ಚು ಸಂತಸ ಪಟ್ಟವರಲ್ಲಿ ಅಡ್ವಾಣಿಯವರು ಮೊದಲಿಗರಾಗಿರುವ ಸಾಧ್ಯತೆಯೇ ಹೆಚ್ಚು. ಆ ತಡೆಯು ರಥಯಾತ್ರೆಗೆ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿತು. ಬಿಜೆಪಿಯ ಮತದಾರರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳಕ್ಕೂ ಅದು ಕಾರಣವಾಯಿತು. ಸದ್ಯ ಬಾಬರಿ ಮಸೀದಿಯನ್ನು ಉರುಳಿಸಿದ ಸಂಚಿನಲ್ಲಿ ಆರೋಪಿಯೆಂದು ಸಿಬಿಐ ಹೆಸರಿಸಿರುವ ಅಡ್ವಾಣಿಯವರು 2019ರ ಲೋಕಸಭಾ ಚುನಾವಣೆಯ ವೇಳೆ ಬಂಧನಕ್ಕೆ ಒಳಗಾಗುವುದನ್ನು ಸ್ವತಃ ಬಿಜೆಪಿಯೇ ಇವತ್ತು ಎದುರು ನೋಡುತ್ತಿದೆ. ಹಾಗೇನಾದರೂ ಆದರೆ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಇಶ್ಯೂಗಳ ಅಗತ್ಯ ಇಲ್ಲ. ಅಡ್ವಾಣಿಯೇ ಇಶ್ಯೂ.
       ಸದ್ಯ ಕರ್ನಾಟಕದಲ್ಲಿ ಬಿಜೆಪಿಯು ನಿರ್ವಾತ ಸ್ಥಿತಿಯಲ್ಲಿದೆ. ಪಕ್ಷವನ್ನು ಮಂದಿನ ಚುನಾವಣೆಯಲ್ಲಿ ಎದ್ದು ನಿಲ್ಲಿಸಬಲ್ಲ ವರ್ಚಸ್ವಿ ನಾಯಕರಾಗಲೀ, ಪ್ರಬಲ ಇಶ್ಯೂವಾಗಲೀ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲೂ ಕಾಂಗ್ರೆಸ್‍ನ ಪ್ರತಿನಿಧಿಗಳೇ ಇದ್ದಾರೆ. ಇವುಗಳನ್ನು ಮರಳಿ ಪಡೆಯಬೇಕಾದರೆ ಯಡಿಯೂರಪ್ಪರನ್ನೋ ಜಗದೀಶ್ ಶೆಟ್ಟರನ್ನೋ ಜಿಲ್ಲೆಗೆ ಕರೆಸಿ ಭಾಷಣ ಮಾಡಿಸುವುದರಿಂದ ಸಾಧ್ಯವಿಲ್ಲ ಎಂಬುದು ಇಡೀ ಜಿಲ್ಲೆಗೇ ಗೊತ್ತು. ಜಿಲ್ಲೆಯ ದೇರಳಕಟ್ಟೆ ಎಂಬಲ್ಲಿ ಕಾರ್ತಿಕ್ ರಾಜ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ಕೊಟ್ಟಿರುವ ಹೇಳಿಕೆಯ ಮುಜುಗರದಿಂದ ಬಿಜೆಪಿ ಇನ್ನೂ ಹೊರಬಂದಿಲ್ಲ. ಆದ್ದರಿಂದ ಬಿಜೆಪಿಗೆ ತಕ್ಪಣಕ್ಕೊಂದು ಗ್ಲುಕೋಸ್ ಬೇಕಾಗಿದೆ. ಪ್ರಭಾಕರ ಭಟ್ಟರ ಬಂಧನದಿಂದ ಈ ಗ್ಲೂಕೋಸ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಚಿಂತಕ ಚಾವಡಿ ಗಂಭೀರವಾಗಿಯೇ ಭಾವಿಸಿದೆ. ಈ ಭಾವನೆಗೆ ಇರುವ ಇನ್ನೊಂದು ಕಾರಣ, ಪ್ರಭಾಕರ ಭಟ್ಟರಿಗೆ ಇರುವ ‘ಹಿಂದೂ ಧರ್ಮ ರಕ್ಷಕ’ ಎಂಬ ಇಮೇಜ್. ಅವರ ಬಂಧನವಾದರೆ ಅವರು ಬಿಡುಗಡೆಗೊಳ್ಳುವ ವರೆಗೆ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳನ್ನು ಸರಣಿ ಕ್ರಮದಲ್ಲಿ ಹಮ್ಮಿಕೊಳ್ಳಬಹುದು. ಅಮಿತ್ ಶಾರಿಂದ ಹಿಡಿದು ಸಾಕ್ಷಿ ಮಹಾರಾಜ್‍ರ ವರೆಗೆ ಪ್ರಖರ ನಾಲಗೆಯ ನಾಯಕರನ್ನು ಜಿಲ್ಲೆಗೆ ಕರೆತರಬಹುದು ಮತ್ತು ಅವರಿಂದ ಉಗ್ರ ಭಾಷಣ ಮಾಡಿಸಬಹುದು. ಕಾರಣವಿಲ್ಲದೇ ಉಗ್ರ ಭಾಷಣ ಮಾಡುವುದಕ್ಕೂ ಬಂಧನದ ಹಿನ್ನೆಲೆಯಲ್ಲಿ ಭಾಷಣ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾಷಣವನ್ನು ಉಗ್ರತನದಿಂದ ಅತ್ಯುಗ್ರತನಕ್ಕೆ ಒಯ್ಯಲು ಇಂಥ ಸಂದರ್ಭಗಳ ಹೊರತು ಅಸಾಧ್ಯ. ಆದ್ದರಿಂದಲೇ ಕಲ್ಲಡ್ಕವನ್ನು ಮತ್ತೆ ಮತ್ತೆ ಕುಲುಮೆ ಮಾಡಲಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೇಲೆ ಒತ್ತಡಗಳು ಹೆಚ್ಚಾದಂತೆಲ್ಲ ಭಟ್ಟರ ಪಾಳಯಕ್ಕೆ ಎರಡು ರೀತಿಯಲ್ಲಿ ಲಾಭಗಳಿವೆ. ಒಂದು ರಮಾನಾಥ ರೈ ನಾಲಾಯಕ್ಕು ಅನ್ನುವ ಸಂದೇಶ ಜಿಲ್ಲೆಯಾದ್ಯಂತ ರವಾನೆಯಾಗುವುದು ಅಥವಾ ಹಾಗೇ ರವಾನೆಯಾಗುವಂತೆ ನೋಡಿಕೊಳ್ಳುವುದು. ಇನ್ನೊಂದು, ಈ ಸಂದೇಶಕ್ಕೆ ಕುದಿಗೊಂಡು ಸ್ವತಃ ರಮಾನಾಥ ರೈಯವರೇ ದುಡುಕಿನ ಕ್ರಮಕ್ಕೆ ಮುಂದಾಗುವುದು. ಈ ಎರಡೂ ಭಟ್ಟರ ಪಾಲಿಗೆ ಅನುಕೂಲಕರವೇ. ಇದೀಗ ಈ ಎರಡೂ ಉದ್ದೇಶಗಳು ಬಹುತೇಕ ಈಡೇರುತ್ತಿರುವ ಸ್ಥಿತಿಯಿದೆ. ಕಲ್ಲಡ್ಕ ಭಟ್ಟರನ್ನು ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸುವಂತೆ ಜಿಲ್ಲಾ ಎಸ್ಪಿ ಭೂಷಣ್ ಕುಮಾರ್ ಬೊರಸೆಯವರಿಗೆ ರೈಯವರು ನಿರ್ದೇಶನ ನೀಡುವ ವೀಡಿಯೋವೊಂದು ಬಿಡುಗಡೆಗೊಂಡಿದೆ. ತಕ್ಷಣ ಯಡಿಯೂರಪ್ಪರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಎಲ್ಲರೂ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ಬಗೆಯ ಪ್ರತಿಭಟನಾ ಸಿದ್ಧತೆಗಳೂ ನಡೆಯುತ್ತಿವೆ. ನಿಜವಾಗಿ, ಇದು ಬಿಜೆಪಿಯ ಒಳತಂತ್ರ. ಪ್ರಭಾಕರ ಭಟ್ಟರನ್ನು ಬಂಧಿಸುವುದೆಂದರೆ ಜಿಲ್ಲೆಯ ನಾಡಿ-ಮಿಡಿತವನ್ನು ಒಂದಷ್ಟು ಅವಧಿಗೆ ಬಲವಂತದಿಂದಲಾದರೂ ಸ್ಥಬ್ಧಗೊಳಿಸುವುದು ಎಂದರ್ಥ. ಅವರ ಬಂಧನದ ಹೆಸರಲ್ಲಿ ಜಿಲ್ಲೆಯನ್ನು ಮತ್ತೆ ಅಶಾಂತಿಗೆ ತಳ್ಳಬಹುದು. ಅಲ್ಲಲ್ಲಿ ಇರಿತ, ಕಲ್ಲು ತೂರಾಟ, ಹತ್ಯಾ ಯತ್ನಗಳೂ ನಡೆಯಬಹುದು. ಇವಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಅಲ್ಪಸಂಖ್ಯಾತ ತುಷ್ಟೀಕರಣವೇ ಕಾರಣ ಎಂದೂ ಸಮರ್ಥಿಸಿಕೊಳ್ಳಬಹುದು.
      ನಿಜವಾಗಿ, ಕಲ್ಲಡ್ಕವನ್ನು ಮತ್ತು ಆ ಮೂಲಕ ಜಿಲ್ಲೆಯನ್ನು ಗಲಭೆ ರಹಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆವೇಶದ ಹೇಳಿಕೆ ಮತ್ತು ದುಡುಕಿನ ನಿರ್ಧಾರಗಳು ಪರಿಹಾರ ಅಲ್ಲ. ಕಲ್ಲಡ್ಕದ ಘರ್ಷಣೆಗೆ ಬಿಜೆಪಿ ಒಂದು ಪರಿಹಾರವನ್ನು ತಯಾರಿಸಿ ಇಟ್ಟಿದೆ. ಆಗಾಗ ಘರ್ಷಣೆಗಳು ಆಗುತ್ತಿರಬೇಕು ಮತ್ತು ಅಂತಿಮವಾಗಿ ತಾವು ರೂಪಿಸಿರುವ ಪರಿಹಾರವನ್ನೇ ಉಸ್ತುವಾರಿ ಸಚಿವರು ಪರಿಹಾರವಾಗಿ ಆಯ್ದುಕೊಳ್ಳಬೇಕು ಎಂದೂ ಅದು ನಿರೀಕ್ಷಿಸುತ್ತಿದೆ. ಅದುವೇ ಭಟ್ಟರ ಬಂಧನ. ಈ ಖೆಡ್ಡಾಕ್ಕೆ ಉಸ್ತುವಾರಿ ಸಚಿವರು ಬಿದ್ದರೆ ಬಳಿಕ ಇಡೀ ಜಿಲ್ಲೆಯನ್ನೇ ತಮ್ಮ ಖೆಡ್ಡಾಕ್ಕೆ ಬೀಳಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದ್ದರಿಂದ ಜಿಲ್ಲೆಯ ಆರೋಗ್ಯದ ದೃಷ್ಟಿಯಿಂದ ಹೊಸ ರಣತಂತ್ರವನ್ನು ರೂಪಿಸಬೇಕಾಗಿದೆ. ಗಲಭೆ ಹುಟ್ಟುಹಾಕುವವರ ಮಾಹಿತಿ ಕಲೆ ಹಾಕುವ ಪ್ರಬಲ ತಂಡವೊಂದನ್ನು ಸರಕಾರ ರೂಪಿಸಬೇಕಾಗಿದೆ. ಈ ತಂಡ ಅತ್ಯಂತ ರಹಸ್ಯವಾಗಿ ತನ್ನ ಚಟುವಟಿಕೆಯಲ್ಲಿ ತೊಡಗಬೇಕು ಮತ್ತು ಗಲಭೆಗಿಂತ ಮೊದಲೇ ಅಂಥವರನ್ನು ವಶಕ್ಕೆ ಪಡೆದು ಸರಿಪಡಿಸುವ ಕೆಲಸಗಳಾಗಬೇಕು. ಗಲಭೆ ಹುಟ್ಟುಹಾಕುವವರ ಮೇಲೆ ಕಠಿಣ ಪರಿಚ್ಛೇದಗಳಡಿಯಲ್ಲಿ ಮೊಕದ್ದಮೆ ದಾಖಲಿಸುವಂತಾಗಬೇಕು. ಗೂಂಡಾ ಕಾಯ್ದೆಯನ್ನು ಹೇರಿ ಗಡೀಪಾರು ಮಾಡುವುದಕ್ಕೂ ಹಿಂಜರಿಕೆ ತೋರಬಾರದು. ಅದೇ ವೇಳೆ, ‘ಮೆದುಳು ತೊಳೆಯಲಾದ’ ಯುವಕರ ಸಂಭಾವ್ಯ ಪಟ್ಟಿಯನ್ನು ತಯಾರಿಸಿ ಅವರ ಹೆತ್ತವರೊಂದಿಗೆ ಮಾತುಕತೆ ನಡೆಸಬೇಕಲ್ಲದೇ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಬೇಕು. ಒಂದು ಕಡೆ ಗಲಭೆಯನ್ನು ಹುಟ್ಟುಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಲೇ ಇನ್ನೊಂದು ಕಡೆ ‘ತೊಳೆದ ಮೆದುಳಿನ’ ಯುವಕರಲ್ಲಿ ಕಾನೂನಿನ ಭಯ ಮತ್ತು ಅವರ ಹೆತ್ತವರಿಗೆ ಎಚ್ಚರಿಕೆ ರವಾನಿಸುವ ಎರಡೂ ಕ್ರಮಗಳು ಜೊತೆ ಜೊತೆಯಾಗಿ ನಡೆಯಬೇಕು. ಬದ್ಧತೆಯಿಂದ ದುಡಿಯುವ ಅಧಿಕಾರಿಗಳಿಂದ ಇದು ಖಂಡಿತ ಸಾಧ್ಯ. ಹೀಗಾದರೆ ಬಿಜೆಪಿಯ ಷಡ್ಯಂತ್ರಕ್ಕೆ ಸೋಲಾಗುತ್ತದೆ. ಭಟ್ಟರೂ ಸೋಲುತ್ತಾರೆ. ಆದರೆ ಕಲ್ಲಡ್ಕ ಗೆಲ್ಲುತ್ತದೆ. ಜಿಲ್ಲೆಯೂ ಗೆಲ್ಲುತ್ತದೆ.