Friday, 3 January 2020

ತಿದ್ದುಪಡಿಗೊಳಗಾಗಬೇಕಾದ ಕಾನೂನು ಯಾವುದು?



ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಬಿಜೆಪಿ ನೀಡುತ್ತಿರುವ ಸಮರ್ಥನೆ ಎಷ್ಟು ನಯವಂಚಕತನದ್ದು ಮತ್ತು ಮೋಸದ್ದು ಅನ್ನುವುದಕ್ಕೆ ಕಾಶ್ಮೀರವೊಂದೇ ಧಾರಾಳ ಸಾಕು. ಕಾಶ್ಮೀರದ ಸಾಂಸ್ಕೃತಿಕ ಮತ್ತು ಭಾಷಿಕ ಅನನ್ಯತೆಗೆ ರಕ್ಷಾಕವಚದಂತಿದ್ದ 370ನೇ ವಿಧಿಯನ್ನು ಕಳೆದ ಆಗಸ್ಟ್ ನಲ್ಲಿ ರದ್ದುಪಡಿಸುವಾಗ ಅದಕ್ಕೆ ಕೇಂದ್ರ ಸರಕಾರ ಕೊಟ್ಟ ಕಾರಣ ಹೀಗಿತ್ತು:
ಒಂದು ದೇಶ ಮತ್ತು ಸಮಾನ ಕಾನೂನು.
ಕಾಶ್ಮೀರಕ್ಕೆ ಸಾಂವಿಧಾನಿಕವಾಗಿ ನೀಡಲಾಗಿರುವ 370ನೇ ವಿಧಿ ಮತ್ತು ಆ ಮೂಲಕ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸಾಂಸ್ಕೃತಿಕ ಭದ್ರತೆಯನ್ನು ಗೃಹಸಚಿವ ಅಮಿತ್ ಶಾ ಅವರು ಸಂವಿಧಾನಕ್ಕೆ ಅಪಚಾರವೆಂಬಂತೆ ಚಿತ್ರಿಸಿದ್ದರು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವು ಭಾರತಕ್ಕೆ ಸೇರ್ಪಡೆಗೊಂಡಿತು ಎಂದು ಅವರು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲ, ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಬೇರ್ಪಡಿಸಿದ್ದರು. ಆದರೆ ಈಗ ಅದೇ ಅಮಿತ್ ಶಾರ ಮುತುವರ್ಜಿಯಲ್ಲಿ ಕಾನೂನಾಗಿ ಪರಿವರ್ತನೆಯಾದ ಪೌರತ್ವ ತಿದ್ದುಪಡಿ ಮಸೂದೆಯು ಈ ಏಕದೇಶ ಮತ್ತು ಸಮಾನ ಕಾನೂನು ಎಂಬುದಕ್ಕೆ ಗೌರವವನ್ನೇ ಕೊಟ್ಟಿಲ್ಲ. ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ಅರುಣಾಚಲ, ನಾಗಾಲ್ಯಾಂಡ್ ಮತ್ತು ಅಸ್ಸಾಂಗಳಿಗೆ ಈ ಕಾನೂನಿನಲ್ಲಿ ವಿಶೇಷ ರಿಯಾಯಿತಿ ಇದೆ. ಅವರ ಸಾಂಸ್ಕೃತಿಕ ಅನನ್ಯತೆಗೆ ಭಂಗ ಬರದಂತೆ ನೋಡಿಕೊಳ್ಳುವುದಕ್ಕೆ ಅಲ್ಲಿನ ಬುಡಕಟ್ಟು ಪ್ರದೇಶಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 371ನೇ ವಿಧಿಯ ಪ್ರಕಾರ ಈಶಾನ್ಯ ಭಾಗದ ರಾಜ್ಯಗಳು ಅನುಭವಿಸುತ್ತಿರುವ ವಿಶೇಷ ಸ್ವಾಯತ್ತ ಹಕ್ಕನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಬುಡಕಟ್ಟು ಸಂಸ್ಕೃತಿ ಮತ್ತು ಭಾಷಿಕ ವೈವಿಧ್ಯತೆಗೆ ಭಂಗ ಉಂಟಾಗದಂತೆ ನೋಡಿಕೊಳ್ಳುವುದಾಗಿ ಅಮಿತ್ ಶಾ ಪದೇ ಪದೇ ಭರವಸೆಯನ್ನೂ ನೀಡುತ್ತಿದ್ದಾರೆ. ಅಂದರೆ, 370ನೇ ವಿಧಿಯ ಪ್ರಕಾರ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸ್ವಾಯತ್ತತೆ ತಪ್ಪು, ಆದರೆ ಈಶಾನ್ಯ ರಾಜ್ಯಗಳು 371ನೇ ವಿಧಿ ಪ್ರಕಾರ ಪಡೆಯುತ್ತಿರುವ ಸ್ವಾಯತ್ತತೆ ಸರಿ. ಕಾಶ್ಮೀರಿಗಳಿಗೆ ಪ್ರತ್ಯೇಕ ಸ್ಥಾನಮಾನ ಮತ್ತು ಕಾನೂನುಗಳು ತಪ್ಪು, ಆದರೆ ಪೌರತ್ವ ತಿದ್ದುಪಡಿ ಕಾನೂನಿನಿಂದಲೂ ಈಶಾನ್ಯ ಭಾಗದ ರಾಜ್ಯಗಳ ಕೆಲವು ಪ್ರದೇಶಗಳಿಗೆ ವಿನಾಯಿತಿ ನೀಡುವುದು ಸರಿ. ಕಾನೂನು ಕಾಶ್ಮೀರಿಗಳಿಗೂ ಕೇರಳಿಗರಿಗೂ ಸಮಾನ ಎಂದಾದರೆ ಮತ್ತು ಇದುವೇ ಏಕ ಭಾರತದ ಸರಿಯಾದ ಪರಿಕಲ್ಪನೆ ಎಂದಾದರೆ ಈಶಾನ್ಯ ಭಾಗದ ರಾಜ್ಯಗಳಲ್ಲೇಕೆ ಇನ್ನೂ 371ನೇ ವಿಧಿಯನ್ನು ಉಳಿಸಿಕೊಳ್ಳಲಾಗಿದೆ? ಅಲ್ಲಿನ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯನ್ನು ಕೇಂದ್ರ ಸರಕಾರ ಮಾನ್ಯ ಮಾಡುತ್ತದೆಂದಾದರೆ, ಕಾಶ್ಮೀರಿಗಳೇಕೆ ಅಮಾನ್ಯರಾಗುತ್ತಾರೆ? ಭಿನ್ನ ಸಂಸ್ಕೃತಿಯ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾನೂನು ಕಾಶ್ಮೀರಿಗಳಿಗೆ ಅನ್ವಯಿಸುತ್ತದೆಂದರೆ, ಈಶಾನ್ಯ ರಾಜ್ಯಗಳಿಗೇಕೆ ಅದು ಏಕಪ್ರಕಾರವಾಗಿ ಅನ್ವಯಿಸುವುದಿಲ್ಲ? ಅವರಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಿ ಪೌರತ್ವ ತಿದ್ದುಪಡಿ ಕಾನೂನಿನಿಂದ ವಿನಾಯಿತಿ ತೋರುವುದು ಯಾಕಾಗಿ? ಒಂದೇ ದೇಶ ಮತ್ತು ಸಮಾನ ಕಾನೂನು ಅನ್ನುವುದು ಮುಸ್ಲಿಮರನ್ನು ಕಂಡಾಗ ಮಾತ್ರ ಕೆರಳುವುದು ಮತ್ತು ಉಳಿದವರ ಬಗ್ಗೆ ಶಾಂತವಾಗುವುದು ಏನನ್ನು ಸೂಚಿಸುತ್ತದೆ?
ಕಳೆದವಾರ 300ರಷ್ಟು ದಲಿತರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಟ್ಟಿಕೊಂಡ ಎಂಬಲ್ಲಿಂದ ನಾಲ್ಕು ಕಿಲೋಮೀಟರ್ ನಷ್ಟು ದೂರ ಮೆರವಣಿಗೆಯಲ್ಲಿ ಸಾಗಿ ಹೂಸೂರು ಎಂಬಲ್ಲಿಯ ವೀರಭದ್ರ ಸ್ವಾಮಿ ದೇಗುಲವನ್ನು ಪ್ರವೇಶಿಸಿದರು. ಈ ಮೆರವಣಿಗೆ ಮತ್ತು ದೇಗುಲ ಪ್ರವೇಶವು ಮಾಧ್ಯಮ ಸುದ್ದಿಗೂ ಒಳಗಾಯಿತು. ಸಹಜ ಸ್ಥಿತಿಯಲ್ಲಿ ಯಾರೂ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಹೋಗುವುದಿಲ್ಲ. ಆದರೆ ಗ್ರಾಮದ ದಲಿತರಿಗೆ ಕಳೆದ 200 ವರ್ಷಗಳಿಂದ ಈ ದೇಗುಲ ಪ್ರವೇಶದಿಂದ ತಡೆಯಲಾಗಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಗ್ರಾಮದ ದಲಿತರು ಇದನ್ನು ಪ್ರತಿಭಟಿಸಿದರು. ದೇಗುಲದ ಹಬ್ಬದ ಸಮಿತಿಯಲ್ಲಿ ತಮ್ಮನ್ನೂ ಸೇರಿಸಬೇಕೆಂದು ಪಟ್ಟು ಹಿಡಿದರು. ಈ ಕಾರಣಕ್ಕಾಗಿ ಮೇಲ್ಜಾತಿಗಳು ಮತ್ತು ದಲಿತರ ಮಧ್ಯೆ ಘರ್ಷಣೆ, ಹೊೈಕೈಗಳೂ ನಡೆದುವು. ಅದು ಮಾಧ್ಯಮಗಳ ಗಮನ ಸೆಳೆಯಿತಲ್ಲದೆ, ದಲಿತರ ಮೇಲೆ ಆ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕು ನಿರಾಕರಣೆಯ ಕುರಿತಾದ ಸಂಗತಿಗಳ ಬಹಿರಂಗಕ್ಕೂ ಬಂತು. ಆ ಬಳಿಕ ಜಿಲಾಧಿಕಾರಿಗಳು ಸಭೆ ಸೇರಿಸಿದರು. ದಲಿತರ ದೇಗುಲ ಪ್ರವೇಶಕ್ಕೆ ಮೇಲ್ಜಾತಿಗಳನ್ನು ಒಪ್ಪಿಸುವುದಕ್ಕಾಗಿ ನಾಲ್ಕು ಸಭೆಗಳು ಬೇಕಾದುವು. ಕೊನೆಗೆ ಕಳೆದವಾರ ದಲಿತರು ತಮಗೆ ಸಿಕ್ಕ ಪ್ರವೇಶಾಧಿಕಾರವನ್ನು ಹಬ್ಬದಂತೆ ಆಚರಿಸಿದರು. ನಿಜವಾಗಿ,
ಪೌರತ್ವವನ್ನು ಸಾಬೀತುಪಡಿಸುವಂತೆ ಮುಸ್ಲಿಮರನ್ನು ಒತ್ತಾಯಿಸುವುದಕ್ಕಿಂತ ಮೊದಲು ಈ ದೇಶದ ಮೂಲ ನಿವಾಸಿಗಳಾದ ದಲಿತರಿಗೆ ಘನತೆಯ ಮತ್ತು ಸ್ವಾಭಿಮಾನದ ಬದುಕನ್ನು ಖಾತರಿಪಡಿಸುವುದು ಕೇಂದ್ರ ಸರಕಾರದ ಆದ್ಯತೆಯ ವಿಷಯವಾಗಬೇಕಿತ್ತು. ಈ ದೇಶದಲ್ಲಿ ಅಕ್ರಮ ವಾಸಿಗಳು ಇದ್ದಾರೋ ಅನ್ನುವುದಕ್ಕಿಂತ ಸಕ್ರಮ ವಾಸಿಗಳು ಕ್ಷೇಮವಾಗಿದ್ದಾರೋ ಅನ್ನುವುದು ಮುಖ್ಯ. ದಲಿತರು ಶತಮಾನಗಳಿಂದ ಈ ದೇಶದ ನಾಗರಿಕರು. ಅವರಿಲ್ಲದ ಭಾರತವನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಹೆಚ್ಚಿನ ಮುಸ್ಲಿಮರ ಮೂಲ ಬೇರನ್ನು ಹುಡುಕುತ್ತಾ ಹೊರಟರೆ ಅದು ಕೊನೆಗೊಳ್ಳುವುದು ದಲಿತ ಕೇರಿಗಳಲ್ಲಿ. ಆದರೂ ಅವರನ್ನು ನಾಗರಿಕವಾಗಿ ನಡೆಸಿಕೊಳ್ಳುವುದಕ್ಕೆ ನಮ್ಮ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ದಲಿತ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ಮುಂದಾದಾಗ ಮರುಪರಿಶೀಲನಾ ಅರ್ಜಿ ಹಾಕುವುದಕ್ಕೆ ಮೀನ-ಮೇಷ ಎಣಿಸಿದ ಸರಕಾರ ಇದು. ದಲಿತರಿಗೆ ಗೌರವಾರ್ಹ ಮತ್ತು ಮಾನ್ಯ ಬದುಕನ್ನು ಒದಗಿಸಲು ಕಾನೂನು ರೂಪಿಸುವುದನ್ನೋ ಅಥವಾ ಇರುವ ಕಾನೂನಿಗೆ ತಿದ್ದುಪಡಿಯನ್ನು ತರುವುದನ್ನೋ ಮಾಡದ ಕೇಂದ್ರ ಸರಕಾರವು ಮುಸ್ಲಿಮರನ್ನು ನಾಗರಿಕ ರಹಿತರನ್ನಾಗಿ ಮಾಡುವುದು ಹೇಗೆ ಎಂದು ಚಿಂತಿಸುತ್ತದೆಂದರೆ ಅದರ ಅರ್ಥವೇನು? ಈ ದೇಶದ ಮೂಲ ನಿವಾಸಿಗಳಾದ ಹೂಸೂರಿನ ದಲಿತರು ದೇಗುಲ ಪ್ರವೇಶಿಸುವುದಕ್ಕೆ 200 ವರ್ಷಗಳಷ್ಟು ದೀರ್ಘ ಅವಧಿಯ ವರೆಗೆ ಕಾಯಬೇಕಾದ ಮತ್ತು ಸಭೆಗಳ ಮೇಲೆ ಸಭೆ ನಡೆಸಿ ಕೊನೆಗೂ ಪ್ರವೇಶಾನುಮತಿ ಗಿಟ್ಟಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿರುವಾಗ, ತಿದ್ದುಪಡಿಗೊಳ್ಳಬೇಕಾದ ಕಾನೂನಾದರೂ ಯಾವುದು? ಪೌರತ್ವ ಕಾನೂನೋ ಅಥವಾ ದಲಿತ ಕಾನೂನೋ? ದಲಿತರ ಕ್ಷೇಮಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕಾನೂನನ್ನು ಬಿಗಿಗೊಳಿಸುವುದನ್ನು ಬಿಟ್ಟು ಪೌರತ್ವ ಕಾನೂನಿಗೆ ತಿದ್ದುಪಡಿ ತರುವುದೆಂದರೆ ಏನು? ಕೇಂದ್ರ ಸರಕಾರ ದಲಿತರನ್ನು ಮತ್ತು ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿರುವುದಕ್ಕೆ ಇದು ಪುರಾವೆಯಾಗದೇ? ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸಾಮಾಜಿಕ ಮನಸ್ಥಿತಿಯನ್ನು ಹಾಗೆಯೇ ಇರಗೊಟ್ಟು ಅಥವಾ ಕಾನೂನನ್ನು ಬಲಗೊಳಿಸದೆಯೇ ಮುಸ್ಲಿಮರನ್ನು ಕಾನೂನಿನ ಮೂಲಕ ದಲಿತರದೇ ಸ್ಥಿತಿಗೆ ದೂಡುವ ಸಂಚು ಇದಲ್ಲವೇ? ಮುಸ್ಲಿಮರನ್ನು ಅಕ್ರಮ ವಲಸಿಗರಂತೆ ಬಿಂಬಿಸುವ ಮೂಲಕ ದಲಿತರಂತೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗುವಂತೆ ಮಾಡುವುದಕ್ಕೆ ಈ ಪೌರತ್ವ ತಿದ್ದುಪಡಿ ಕಾನೂನಿನ ಮರೆಯಲ್ಲಿ ಪ್ರಯತ್ನ ಮಾಡಲಾಗಿದೆಯೇ?
ಪೌರತ್ವ ತಿದ್ದುಪಡಿ ಕಾನೂನು ಮತ್ತು ಹೂಸೂರಿನ ದಲಿತರ ದೇಗುಲ ಪ್ರವೇಶ- ಇವೆರಡೂ ಸಮಾನ ರೇಖೆಗಳಲ್ಲ. ಇವು ಎಲ್ಲೋ ಒಂದು ಕಡೆ ಸಂದಿಸುತ್ತದೆ. ಮುಸ್ಲಿಮರಲ್ಲಿ ಭಯ ಹುಟ್ಟು ಹಾಕುವ ಮತ್ತು ಅವರಲ್ಲಿ ದ್ವಿತೀಯ ದರ್ಜೆಯ ನಾಗರಿಕ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ಒಂದು ಕಡೆ ಪ್ರಾರಂಭವಾಗಿದ್ದರೆ ಇನ್ನೊಂದು ಕಡೆ, ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿರುವ ದಲಿತರನ್ನು ಹಾಗೆಯೇ ಉಳಿಸಿಕೊಳ್ಳುವುದು ಅಥವಾ ಅವರ ಕ್ಷೇಮಕ್ಕಾಗಿ ಆದ್ಯತೆಯನ್ನು ಕೊಡದಿರುವುದು- ಇವೆರಡನ್ನೂ ಮಾಡಲಾಗುತ್ತಿದೆ. ಎಚ್ಚೆತ್ತುಕೊಳ್ಳುವ ಸರದಿ ಎಲ್ಲರದು.

Thursday, 2 January 2020

ಅವರೆಲ್ಲರ ಬೆನ್ನಿಗೆ ಗುಂಡು ಹಾರಿಸಲಾಗಿತ್ತು... ಒಂದು ಎನ್‍ಕೌಂಟರ್ ಕತೆ



ಏಳೂವರೆ ವರ್ಷಗಳ ಹಿಂದೆ ಛತ್ತೀಸ್‍ಗಢದಲ್ಲಿ 17 ಮಂದಿ ಗ್ರಾಮಸ್ಥರ ಹತ್ಯೆ ನಡೆದಿತ್ತು. ಸತ್ತವರೆಲ್ಲ ನಕ್ಸಲೀಯರೆಂದು ಪೊಲೀಸರು ಹೇಳಿದ್ದರು. ನಕ್ಸಲೀಯರು ರಾತ್ರಿ ಸಭೆ ನಡೆಸುತ್ತಿದ್ದಾಗ ದಿಢೀರ್ ಆಗಿ ದಾಳಿ ಮಾಡಿದ ಡಿಐಜಿ ನೇತೃತ್ವದ ಎರಡು ತಂಡಗಳು ಗುಂಡು ಹಾರಿಸಿವೆ. ಪ್ರತಿಯಾಗಿ ನಕ್ಸಲೀಯರೂ ಗುಂಡು ಹಾರಿಸಿದ್ದಾರೆ. ಈ ಮುಖಾಮುಖಿಯಲ್ಲಿ (ಎನ್‍ಕೌಂಟರ್) ರಕ್ಷಣಾ ಪಡೆಯ ಆರು ಮಂದಿಗೂ ಗಾಯಗಳಾಗಿವೆ. ಇರುಳು ಸರಿದು ಹಗಲು ಮೂಡಿದ ಬಳಿಕ ಈ ಎಲ್ಲ 17 ಮಂದಿ ನಕ್ಸಲೀಯರ ಶವಗಳು ದೊರಕಿವೆ ಎಂದು ಈ ಕಾರ್ಯಾಚರಣೆ ನಡೆಸಿದ ಸಿ ಆರ್ ಪಿ ಎಫ್ ಮತ್ತು ಪೊಲೀಸ್ ತಂಡಗಳ ಜಂಟಿ ಹೇಳಿಕೆಗಳು ತಿಳಿಸಿದ್ದುವು. ಛತ್ತೀಸ್‍ಗಢದ ಬಿಜಾಪುರ್ ಮತ್ತು ಸುಕ್ಮಾ ಜಿಲ್ಲೆಯ ಸರ್ಕೇಗುಡ ಗ್ರಾಮದಲ್ಲಿ 2012, ಜೂನ್ 28-29ರ ರಾತ್ರಿ ಈ ಕಾರ್ಯಾಚರಣೆ ನಡೆದಿತ್ತು. ಛತ್ತೀಸ್‍ಗಢದಲ್ಲಿ ಆಗ ಅಧಿಕಾರದಲ್ಲಿದ್ದುದು ಬಿಜೆಪಿ. ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ಈ ಹತ್ಯೆಯ ಕುರಿತಂತೆ ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಆ ಎನ್‍ಕೌಂಟರ್ ನ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿತ್ತು. ಕೊನೆಗೆ ಮಧ್ಯಪ್ರದೇಶದ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ವಿ.ಕೆ. ಅಗರ್ವಾಲ್ ಅವರ ನೇತೃತ್ವದಲ್ಲಿ ಸರಕಾರವು ತನಿಖಾ ತಂಡವನ್ನು ನೇಮಿಸಿತು. ಇದೀಗ ಆ ತನಿಖಾ ವರದಿ ಬಹಿರಂಗವಾಗಿದೆ. ಆದರೆ, ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಎನ್‍ಕೌಂಟರ್ ನಲ್ಲಿ ಸಾಯಿಸಲಾದ ಎರಡ್ಮೂರು ದಿನಗಳ ಮೊದಲು ಬಹಿರಂಗವಾದ ಈ ವರದಿಯು ಎನ್‍ಕೌಂಟರ್ ಹತ್ಯೆಯನ್ನು ಸಂಭ್ರಮಿಸುವ ಸರ್ವರನ್ನೂ ಸ್ವವಿಮರ್ಶೆಗೆ ಒಡ್ಡುವಂತಿದೆ. ನಿಜವಾಗಿ,
ಆ 17 ಮಂದಿಯನ್ನು ಎನ್‍ಕೌಂಟರ್ ಮೂಲಕ ಹತ್ಯೆಗೈಯಲಾಗಿದೆ ಎಂಬ ಪೊಲೀಸ್ ವರದಿಯನ್ನು ಪೋಸ್ಟ್ ಮಾರ್ಟಮ್ ವರದಿ ಒಪ್ಪುವುದೇ ಇಲ್ಲ. ಈ 17 ಮಂದಿಯ ಪೈಕಿ 10 ಮಂದಿಯನ್ನೂ ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಅವರು ಓಡುತ್ತಿರುವ ಸ್ಥಿತಿಯಲ್ಲಿ ಗುಂಡಿಕ್ಕಲಾಗಿದೆ ಎಂಬುದು ಪೋಸ್ಟ್ ಮಾರ್ಟಮ್ ವರದಿಯಿಂದ ಸ್ಪಷ್ಟವಾಗುವುದಾಗಿ ತನಿಖಾ ತಂಡವು ವಿವರಿಸಿದೆ. ಅವರೆಲ್ಲರ ಬೆನ್ನಿನಲ್ಲಿ ಗುಂಡಿನ ಗಾಯವಿತ್ತೇ ಹೊರತು ಮುಂಭಾಗದಲ್ಲಿ ಅಲ್ಲ. ಸರ್ಕೆಗುಡದಲ್ಲಿ ಗುಂಡಿನ ಚಕಮಕಿ ನಡೆದಿರಲಿಲ್ಲ ಮತ್ತು ಏಕಮುಖವಾಗಿ ಗುಂಡು ಹಾರಿಸಿ ಆ ಗ್ರಾಮಸ್ಥರನ್ನು ಕೊಲ್ಲಲಾಗಿದೆ ಎಂಬ ಅಭಿಪ್ರಾಯಕ್ಕೆ ತನಿಖಾ ತಂಡವು ಬಂದಿದೆ. ಪ್ರತಿದಾಳಿ ನಡೆಸುವ ಸಾಮಥ್ರ್ಯ ಇಲ್ಲದ ಗ್ರಾಮಸ್ಥರನ್ನು ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ಮಾತ್ರವಲ್ಲ, ಮೃತದೇಹದಲ್ಲಿ ಬಂದೂಕಿನಿಂದ ತಿವಿದ ಗಾಯಗಳೂ ಇರುವುದರಿಂದ ಕೊಲ್ಲುವ ಮೊದಲು ದೈಹಿಕ ಹಿಂಸೆಯನ್ನೂ ನೀಡಲಾಗಿದೆ ಎಂಬ ಅಭಿಪ್ರಾಯವನ್ನು ತನಿಖಾ ತಂಡವು ವ್ಯಕ್ತಪಡಿಸಿದೆ. ಸತ್ತವರಲ್ಲಿ ತೀರಾ ಹತ್ತಿರದಿಂದ ಹಣೆಗೆ ಗುಂಡೇಟು ಬಿದ್ದು ಸತ್ತವರೂ ಇದ್ದಾರೆ. ಅಲ್ಲದೇ ಸತ್ತವರಲ್ಲಿ 6 ಮಂದಿ ಅಪ್ರಾಪ್ತರು. ಗುಂಡಿನ ಚಕಮಕಿ ನಡೆಯದ ಮತ್ತು ಸ್ವರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಎಂಬ ಪೊಲೀಸ್ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಕ್ಷ್ಯಗಳು ಲಭ್ಯವಾಗದ ಹತ್ಯೆ ಇದು ಎಂಬ ನಿಲುವು ತನಿಖಾ ತಂಡದ್ದು. ಪೊಲೀಸರಿಗಾದ ಗಾಯಕ್ಕೆ ಫ್ರೆಂಡ್ಲೀ ಫೈರ್ (ತಮ್ಮವರ ಗುಂಡಿನಿಂದಲೇ ಆದ ಗಾಯ) ಕಾರಣವೇ ಹೊರತು ಎದುರಿನವರ ದಾಳಿಯಲ್ಲ ಎಂಬ ಅಭಿಪ್ರಾಯಕ್ಕೂ ತನಿಖಾ ತಂಡ ಬಂದಿದೆ. ವಿಶೇಷ ಏನೆಂದರೆ, 2012ರಲ್ಲಿ ಈ ಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಧ್ವನಿಯೆತ್ತಿದ ಕಾಂಗ್ರೆಸ್ ಪಕ್ಷವು 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನೆಂದರೆ, ಪೊಲೀಸಧಿಕಾರಿ ಕಲ್ಲೂರಿ ಅವರಿಗೆ ಭಡ್ತಿಯನ್ನು ದಯಪಾಲಿಸಿದ್ದು. 2018ರಲ್ಲಿ ಸೋರಿಕೆಯಾಗಿರುವ ಸಿಬಿಐ ತನಿಖಾ ವರದಿಯ ಪ್ರಕಾರ, ಸರ್ಕೆಗುಡ ಕಾರ್ಯಾಚರಣೆ ಮತ್ತು ತಡಮೇಟ್ಲ ಕಾರ್ಯಾಚರಣೆ- ಈ ಎರಡರಲ್ಲೂ ಇವರು ತಪ್ಪಿತಸ್ಥರು. ಅಂದಹಾಗೆ,
ಸರ್ಕೆಗುಡ ಗ್ರಾಮದಲ್ಲಿ ಆ ರಾತ್ರಿ ನಡೆದ ಗ್ರಾಮಸ್ಥರ ಸಭೆಯು ಸಂಪೂರ್ಣ ನಕ್ಸಲ್ ಮುಕ್ತವಾಗಿತ್ತು ಎಂಬುದು ತನಿಖಾ ತಂಡದ ಅಭಿಪ್ರಾಯವಲ್ಲ. ಕ್ರಿಮಿನಲ್ ಹಿನ್ನೆಲೆಯವರು ಆ ಸಭೆಯಲ್ಲಿ ಭಾಗವಹಿಸಿರುವ ಸಾಧ್ಯತೆಯನ್ನು ವರದಿ ಅಲ್ಲಗಳೆಯುವುದೂ ಇಲ್ಲ. ನಾಟಿ ಹಬ್ಬದ ಹಿನ್ನೆಲೆಯಲ್ಲಿ ಆ ಸಭೆಯನ್ನು ಆಯೋಜಿಸಲಾಗಿತ್ತು. ನಕ್ಸಲರು ಆ ಸಭೆಯಲ್ಲಿ ಭಾಗವಹಿಸುತ್ತಾರೆ ಅನ್ನುವ ಮಾಹಿತಿ ಆ ಗ್ರಾಮಸ್ಥರಲ್ಲಿ ಇದ್ದಿರಲಾರದು ಎಂದು ಹೇಳುವಂತೆಯೂ ಇಲ್ಲ. ಹಾಗಂತ, ಆ ಸಭೆಯನ್ನು ನಿರ್ಲಕ್ಷಿಸಿ ಬದುಕುವುದು ಅವರ ಪಾಲಿಗೆ ಸುರಕ್ಷಿತವೂ ಆಗಿರಲಿಲ್ಲ. ಒಂದುಕಡೆ, ನಕ್ಸಲೀಯರು ಮತ್ತು ಇನ್ನೊಂದು ಕಡೆ ಶರಣಾಗತ ನಕ್ಸಲರನ್ನೇ ಸೇರಿಸಿಕೊಂಡು ಸರಕಾರ ಕಟ್ಟಿರುವ ಸಲ್ವಾಜುಡುಂ ಎಂಬ ನಕ್ಸಲ್ ವಿರೋಧಿ ಪಡೆ- ಈ ಎರಡರ ನಡುವೆ ಏಗುವುದು ಗ್ರಾಮಸ್ಥರಿಗೆ ಸುಲಭವಾಗಿರಲಿಲ್ಲ. ನಕ್ಸಲರಲ್ಲಾಗಲಿ, ಸಲ್ವಾಜುಡುಮ್‍ನಲ್ಲಾಗಲಿ- ಎರಡರಲ್ಲೂ ಬಂದೂಕು ಇದೆ. ಬಾಯಿಗಿಂತ ಹೆಚ್ಚು ಬಂದೂಕಿನಿಂದ ಮಾತಾಡುವ ಈ ಎರಡೂ ಪಡೆಗಳನ್ನು ಎದುರು ಹಾಕಿಕೊಳ್ಳುವುದೆಂದರೆ ಸಾವಿಗೆ ಮುಖಾಮುಖಿಯಾದಂತೆ. ಹಾಗಂತ, ಈ ಇಬ್ಬರ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಕೂಡಾ ಎರಡು ದೋಣಿಗೆ ಕಾಲಿಟ್ಟಂತೆ. ಗ್ರಾಮಸ್ಥರನ್ನು ಕಾಡುವ ಈ ಸಾವು-ಬದುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಗ್ರಾಮಸ್ಥರೇಕೆ ನಕ್ಸಲರಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಲಭಿಸುತ್ತದೆ.
ಪೊಲೀಸರು ತಮ್ಮ ಸ್ವರಕ್ಷಣೆಗಾಗಿ ಹಾರಿಸಿದ ಗುಂಡು ತಾಗಿ ಉಂಟಾಗುವ ಸಾವನ್ನು ‘ಎನ್‍ಕೌಂಟರ್‍ಗೆ ಬಲಿ’ ಎಂದು ಹೇಳಲಾಗುತ್ತದೆಯೇ ವಿನಃ ನಿರಾಯುದ್ಧ ಅಥವಾ ಪ್ರತಿರೋಧ ತೋರದ ವ್ಯಕ್ತಿಯ ಮೇಲೆ ಗುಂಡು ಹಾರಿಸುವುದನ್ನಲ್ಲ. ಅದು ಅಪರಾಧ. ವ್ಯಕ್ತಿಯನ್ನು ಅಪರಾಧಿಯೋ ನಿರಪರಾಧಿಯೋ ಎಂದು ತೀರ್ಮಾನಿಸಬೇಕಾದುದು ನ್ಯಾಯಾಲಯ. ಪೊಲೀಸರು ಆ ಹೊಣೆಗಾರಿಕೆಯನ್ನು ವಹಿಸಿಕೊಂಡರೆ ಏನಾಗಬಹುದು ಅನ್ನುವುದಕ್ಕೆ ಸರ್ಕೆಗುಡದ 17 ಮಂದಿ ಗ್ರಾಮಸ್ಥರೇ ಉತ್ತಮ ಪುರಾವೆ. ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದಾಗ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸಿದವರು ಭಾವುಕತೆಯಿಂದ ಹೊರಬಂದು ಆಲೋಚಿಸಬೇಕಾದ ಸಂದರ್ಭ ಇದು. ಆರೋಪಿಯನ್ನು ಆರೋಪಮುಕ್ತಗೊಳಿಸುವುದು ಅಥವಾ ಅಪರಾಧಿಯನ್ನಾಗಿಸುವುದು ನ್ಯಾಯಾಲಯದಿಂದ ಸಾಧ್ಯವೇ ಹೊರತು ಪೊಲೀಸರಿಂದಲ್ಲ. ಪೊಲೀಸರು ಒದಗಿಸುವ ಸಾಕ್ಷ್ಯ ಎಷ್ಟು ನ್ಯಾಯಬದ್ಧ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯ ತೀರ್ಪು ನೀಡುತ್ತದೆ. ಕೆಲವೊಮ್ಮೆ ಬಾಹ್ಯ ಒತ್ತಡದಿಂದಾಗಿ ಪೊಲೀಸರಿಂದಲೇ ತಪ್ಪುಗಳು ಸಂಭವಿಸುವುದಿದೆ. ಅತ್ಯಾಚಾರದ ದೂರನ್ನೇ ಪೊಲೀಸರು ದಾಖಲಿಸಿಕೊಳ್ಳದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುವುದಕ್ಕೆ ಇಂಥ ಒತ್ತಡ, ರಾಜಕೀಯ ಪ್ರಭಾವಗಳೇ ಮೂಲ ಕಾರಣ. ಪ್ರಭಾವಿಗಳ ತೋಳ್ಬಲ-ಹಣ ಬಲದಿಂದಾಗಿ ನಿಜ ಪ್ರಕರಣವೊಂದು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಆದರೆ, ಇದಕ್ಕೆ ಎನ್‍ಕೌಂಟರ್ ಹತ್ಯೆ ಪರಿಹಾರ ಅಲ್ಲ. ಎನ್‍ಕೌಂಟರ್ ಗೆ  ಸಾರ್ವಜನಿಕರಿಂದ ಬೆಂಬಲ ಗಿಟ್ಟುತ್ತಾ ಹೋದರೆ ರಾಜಕಾರಣಿಗಳು, ಪ್ರಭಾವಿಗಳು ಮತ್ತು ಕ್ರಿಮಿನಲ್‍ಗಳು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ತಮಗಾಗದವರನ್ನು ಮುಗಿಸಲು ಎನ್‍ಕೌಂಟರನ್ನು ದುರುಪಯೋಗಿಸಬಹುದು. ಎನ್‍ಕೌಂಟರ್ ಕತೆ ಕಟ್ಟಿ ಪೊಲೀಸರ ಮೂಲಕ ನಿರಪರಾಧಿಗಳ ಹತ್ಯೆ ನಡೆಸಬಹುದು. ಮಾತ್ರವಲ್ಲ, ಅಂಥ ಹತ್ಯೆಗಿಂತ ಮೊದಲು ಆ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಧ್ಯಮಗಳ ಮೂಲಕ ತೇಲಿಬಿಟ್ಟು ಸಾರ್ವಜನಿಕರ ಬೆಂಬಲವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಯತ್ನಿಸಬಹುದು. ಆದ್ದರಿಂದಲೇ,
ಹೈದರಾಬಾದ್ ಎನ್‍ಕೌಂಟರ್ ಗೆ  ಲಭ್ಯವಾದ ಬೆಂಬಲ ಮತ್ತು ಸಂಭ್ರಮವನ್ನು ನಾವು ಆತಂಕದಿಂದ ನೋಡಬೇಕಾಗಿದೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಒತ್ತಾಯಿಸುವುದು ಬೇರೆ, ಪೊಲೀಸರೇ ಗಲ್ಲಿಗೇರಿಸುವುದು ಬೇರೆ. ಗಲ್ಲಿಗೇರಿಸುವವರೇ ಗಲ್ಲಿಗೇರಿಸಲಿ ಮತ್ತು ತನಿಖೆ ನಡೆಸುವವರೇ ತನಿಖೆ ನಡೆಸಲಿ. ಈ ಕರ್ತವ್ಯ ನಿರ್ವಹಣೆಯಲ್ಲಿ ಉಲ್ಲಂಘನೆ ನಡೆದರೆ, ಆಗಬಾರದ ಅನಾಹುತಗಳು ನಡೆಯುವುದಕ್ಕೆ ಅವಕಾಶ ಇದೆ. ಸರ್ಕೆಗುಡ ಅದಕ್ಕೆ ಇರುವ ಹಲವು ಉದಾಹರಣೆಗಳಲ್ಲಿ ಒಂದು ಉದಾಹರಣೆ ಮಾತ್ರ.

ಅತ್ಯಾಚಾರ: ಮರಣ ದಂಡನೆ ಎಂಬ ಔಷಧ ಮತ್ತು ಅದರಾಚೆಗಿನ ಸತ್ಯ



ಅತ್ಯಾಚಾರ ಮತ್ತು ಬರ್ಬರ ಅತ್ಯಾಚಾರ ಎಂಬೆರಡು ಪ್ರಬೇಧಗಳಲ್ಲಿ ಬರ್ಬರ ಅತ್ಯಾಚಾರಕ್ಕೆ ಮಾತ್ರ ಇವತ್ತು ಒಂದೆರಡು ದಿನವಾದರೂ ಚರ್ಚೆಯಲ್ಲಿ ಉಳಿಯುವ ಭಾಗ್ಯ ಲಭ್ಯವಾಗುತ್ತಿದೆ. ಬರೇ ಅತ್ಯಾಚಾರವು ಈ ಚರ್ಚಾವ್ಯಾಪ್ತಿಯಿಂದ ಈಗಾಗಲೇ ಹೊರಬಿದ್ದಿದೆ. ಇದಕ್ಕೆ ಕಾರಣ ಏನೆಂದರೆ, ಅತ್ಯಾಚಾರವೆಂಬುದು ಕಿಸೆಗಳ್ಳತನ, ದರೋಡೆ, ಬೀದಿ ಜಗಳ, ವಂಚನೆ ಇತ್ಯಾದಿಗಳಂತೆ ಸಾಮಾನ್ಯ ಅನ್ನಿಸಿಕೊಂಡಿರುವುದು. ಆತಂಕ, ಆಘಾತ, ಭಯ, ಸಂಕಟ ಇತ್ಯಾದಿ ಇತ್ಯಾದಿ ಭಾವಗಳನ್ನು ಹುಟ್ಟು ಹಾಕಬೇಕಾದ ಮತ್ತು ಮನುಷ್ಯರೆಲ್ಲರೂ ಬೀದಿಯಲ್ಲಿ ನಿಂತು ರಕ್ಷಣೆ ಕೋರಬೇಕಾದ ಸಂಗತಿಯೊಂದು ಹೀಗೆ ‘ಸಾಮಾನ್ಯ ಸ್ಥಿತಿ’ಗೆ ತಲುಪಿರುವುದು ಅತ್ಯಂತ ಅಪಾಯಕಾರಿ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರದ ಸುದ್ದಿಯನ್ನು ಪ್ರಕಟಿಸಿರುವ ಹೆಚ್ಚಿನ ಪತ್ರಿಕೆಗಳು, ಆ ಸುದ್ದಿಯ ಜೊತೆಜೊತೆಗೇ ದೇಶದ ಬೇರೆ ಬೇರೆ ಕಡೆ ನಡೆದ ಐದಾರು ಅತ್ಯಾಚಾರ ಪ್ರಕರಣಗಳ ಕುರಿತೂ ಬರೆದಿದ್ದುವು. ಅದರಲ್ಲಿ ಕೇರಳದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವೂ ಒಂದು. ಹುಟ್ಟು ಹಬ್ಬದ ಸಂತಸದಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ನಿಜವಾಗಿ,
ಇದೊಂದು ಕಾಯಿಲೆ. ಅತ್ಯಂತ ಅಪಾಯಕಾರಿ ಮಾನಸಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾದವರು ಎರಡು ರೀತಿಯಲ್ಲಿ ಗುರುತಿಸಿಕೊಳ್ಳುತ್ತಾರೆ.
1. ಸಾಮಾನ್ಯ ಡ್ರೆಸ್ ತೊಟ್ಟು ಸಾಮಾನ್ಯರಂತೆ ಬದುಕುವವರು.
2. ಒರಟಾಗಿ ಡ್ರೆಸ್ ತೊಟ್ಟು ಒರಟಾಗಿಯೇ ಬದುಕುವವರು.
ಇವರಲ್ಲಿ ಒಂದನೇ ವರ್ಗ ಅತ್ಯಾಚಾರವನ್ನಷ್ಟೇ ಮಾಡುವುದಲ್ಲ, ಆ ಕ್ರೌರ್ಯವನ್ನು ಮೊಬೈಲ್‍ಗಳಲ್ಲಿ ಸೆರೆ ಹಿಡಿದಿರುತ್ತದೆ. ಅತ್ಯಾಚಾರಕ್ಕೆ ತುತ್ತಾದವಳನ್ನು ಆ ವೀಡಿಯೋ ತೋರಿಸಿ ಬೆದರಿಕೆ ಹಾಕುತ್ತದೆ. ಪೋಲೀಸರಿಗೆ ದೂರು ನೀಡಿದರೆ ವೀಡಿಯೋವನ್ನು ಬಹಿರಂಗಪಡಿಸುವುದಾಗಿ ಹೆದರಿಕೆ ಹುಟ್ಟಿಸುತ್ತದೆ. ಸಂತ್ರಸ್ತೆ ದುರ್ಬಲೆ ಎಂದಾದರೆ, ಆ ಕ್ರೌರ್ಯದ ಬಳಿಕವೂ ಆ ವೀಡಿಯೋದ ಹೆಸರಲ್ಲಿ ಬೆದರಿಸಿ ಮತ್ತೂ ಬಳಸಿಕೊಳ್ಳುತ್ತದೆ ಮತ್ತು ಹೊರ ಜಗತ್ತಿನ ಪಾಲಿಗೆ ಎಂದೂ ಗೊತ್ತಾಗದೇ ಆ ಕ್ರೌರ್ಯ ಸತ್ತು ಹೋಗುತ್ತದೆ. ಎರಡನೇ ವರ್ಗದಲ್ಲಿ ಇಷ್ಟು ತಾಳ್ಮೆಯಿಲ್ಲ. ಅವರ ಜೀವನ ಕ್ರಮಕ್ಕೆ ತಕ್ಕಂತೆ ವರ್ತನೆಯೂ ಒರಟೇ. ಅದು ವೀಡಿಯೋವನ್ನೂ ಮಾಡಲ್ಲ. ಸಂತ್ರಸ್ತೆಯನ್ನು ಜೀವ ಸಹಿತ ಉಳಿಸುವುದೂ ಇಲ್ಲ. ಅತ್ಯಂತ ಬರ್ಬರವಾಗಿ ಅವು ತಮ್ಮ ಆಸೆಯನ್ನು ತೀರಿಸಿಕೊಳ್ಳುತ್ತವೆ. ದೆಹಲಿಯ ನಿರ್ಭಯ ಪ್ರಕರಣ ಮತ್ತು ಅದರಲ್ಲಿ ಭಾಗಿಯಾದ ಆರೋಪಿಗಳ ಹಿನ್ನೆಲೆ, ಉದ್ಯೋಗಗಳನ್ನು ನೋಡುವಾಗಲೂ ಹಾಗೂ ಹೈದರಾಬಾದ್‍ನ ಪಶುವೈದ್ಯೆಯ ಮೇಲಿನ ಕ್ರೌರ್ಯದಲ್ಲಿ ಭಾಗಿಯಾದವರ ಹಿನ್ನೆಲೆ ಮತ್ತು ಉದ್ಯೋಗಗಳನ್ನು ನೋಡುವಾಗಲೂ ಇದು ಸ್ಪಷ್ಟವಾಗುತ್ತದೆ. ಅಂದಹಾಗೆ,
2012ರ ನಿರ್ಭಯ ಪ್ರಕರಣದಿಂದ 2019ರ ಈ ಪಶುವೈದ್ಯೆಯ ಪ್ರಕರಣದ ನಡುವೆ ಇಂಥ ಇನ್ನೊಂದಿಷ್ಟು ಬರ್ಬರ ಪ್ರಕರಣಗಳು ನಡೆದಿವೆ. ಇವುಗಳ ಸಂಖ್ಯೆ ಭಾರೀ ಅನ್ನುವಷ್ಟು ಇಲ್ಲ. ಆದರೆ ಈ 2012-19ರ ನಡುವೆ ಭಾರೀ ಅನ್ನುವಷ್ಟು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ನಡೆದಿವೆ. ಕೆಲವು ಸುದ್ದಿಗೀಡಾಗಿವೆ ಮತ್ತು ಹಲವು ಸುದ್ದಿಗೀಡಾಗದೇ ಸತ್ತು ಹೋಗಿವೆ. ಆದ್ದರಿಂದ ಈ ಎರಡೂ ಬಗೆಯ ಸ್ಥಿತಿಗಳೂ ಅತ್ಯಂತ ಗಹನ ಚರ್ಚೆಗೆ ಒಳಪಡಬೇಕು.
ಹೈದರಾಬಾದ್ ಪ್ರಕರಣದ ನಾಲ್ವರು ಆರೋಪಿಗಳ ಚಿತ್ರವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅವರೇನೂ ಅನ್ಯಗೃಹದ ಜೀವಿಗಳಲ್ಲ. ನಮ್ಮದೇ ಸಮಾಜದ ಉತ್ಪನ್ನಗಳು. ಅವರಿಗೆ ಮನೆ ಇದೆ, ತಂದೆ-ತಾಯಿ ಇದ್ದಾರೆ. ಪತ್ನಿ (ಎಲ್ಲರಿಗಿಲ್ಲ) ಇದ್ದಾಳೆ. ಒಟ್ಟಿನಲ್ಲಿ ಕುಟುಂಬ ಅನ್ನುವ ಚೌಕಟ್ಟು ಇದೆ. ಆದರೆ, ಸಭ್ಯ ನಾಗರಿಕರಾಗಿ ಅವರನ್ನು ಬೆಳೆಸುವುದಕ್ಕೆ ಇವಿಷ್ಟೇ ಸಾಕಾಗುವುದಿಲ್ಲ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮನ್ನಣೆ, ಲೈಂಗಿಕ ಸಹಿತ ಇತರ ಆಶಯಗಳನ್ನು ಸರ್ವಮಾನ್ಯ ರೀತಿಯಲ್ಲಿ ತೀರಿಸಿಕೊಳ್ಳುವುದಕ್ಕಿರುವ ಅವಕಾಶ ಇತ್ಯಾದಿ ಇತ್ಯಾದಿಗಳೂ ಅವರನ್ನು ಸಭ್ಯಗೊಳಿಸುವಲ್ಲಿ ಪಾತ್ರವಹಿಸುತ್ತವೆ. ನಿರ್ಭಯ ಪ್ರಕರಣದಲ್ಲಾಗಲಿ ಅಥವಾ ಹೈದರಾಬಾದ್ ಪ್ರಕರಣದಲ್ಲಾಗಲಿ ಈ ಎರಡರಲ್ಲೂ ಆರೋಪಿಗಳು ಅತ್ಯಂತ ಒರಟು ವೃತ್ತಿಯಲ್ಲಿ ತೊಡಗಿಸಿಕೊಂಡವರು. ಅವರ ಉದ್ಯೋಗಕ್ಕೆ ಭದ್ರತೆ ಇಲ್ಲ. ಸರಿಯಾದ ಶಿಕ್ಷಣ ಇಲ್ಲ. ಸರಿಯಾದ ಸಮಯಕ್ಕೆ ಮನೆ ಸೇರುವಂತಹ ಉದ್ಯೋಗವೂ ಅದಲ್ಲ. ಇನ್ನು, ಮನೆಯೂ ಅಷ್ಟೇ. ಬಿಡುವಿನ ಸಮಯದಲ್ಲಿ ದಣಿವಾರಿಸಿಕೊಳ್ಳುವುದಕ್ಕೆ ಇರುವ ಒಂದು ತಾಣವೆಂಬುದರ ಹೊರತಾಗಿ ಮನೆಗೂ ಈ ಮನುಷ್ಯರಿಗೂ ಸಂಬಂಧವೂ ಅಷ್ಟಕ್ಕಷ್ಟೇ ಇರುತ್ತದೆ. ಹೆಂಡ, ಮಾದಕ ದ್ರವ್ಯ ಮತ್ತು ದೇಹದ ಅತೃಪ್ತ ಆಸೆಗಳನ್ನು ಕೆರಳಿಸಿ ಹುಚ್ಚುಚ್ಚಾಗಿ ಯೋಚಿಸುವಂತೆ ಮಾಡುವ ವೀಡಿಯೋಗಳನ್ನು ನೋಡುತ್ತಾ ಅವರು ದಿನ ಕಳೆಯುತ್ತಿರುತ್ತಾರೆ. ನಾಳೆಯ ಬಗ್ಗೆ ಚಿಂತಿಸದ ಮತ್ತು ಇಂದಿನ ಸುಖಕ್ಕಾಗಿ ತವಕಿಸುವ ಇವರಲ್ಲಿ ಎಲ್ಲರೂ ಅತ್ಯಾಚಾರಿಗಳಾಗುತ್ತಾರೆ ಎಂದಲ್ಲ. ಆದರೆ ಬರ್ಬರ ಅತ್ಯಾಚಾರಗಳಲ್ಲಿ ಭಾಗಿಯಾಗುವವರಲ್ಲಿ ಇಂಥವರೇ ಹೆಚ್ಚಿರುತ್ತಾರೆ. ಇವರಲ್ಲಿ ಶಿಕ್ಷೆಯ ಭಯ ಕಡಿಮೆ. ತನ್ನ ಸುತ್ತಮುತ್ತಲಿನ ಸೌಂದರ್ಯ-ಬೆಡಗು-ಬಿನ್ನಾಣಗಳನ್ನು ಕಂಡು, ತನ್ನ ಹತ್ತಿಕ್ಕಿದ ಆಸೆಗಳಿಗೆ ಜೀವ ಕೊಡುತ್ತಾ ಸಂದರ್ಭ ಸಿಕ್ಕಾಗ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡೇ ತಮ್ಮ ಆಸೆಗಳನ್ನು ಪೂರೈಸುವುದಕ್ಕೆ ಮುಂದಾಗುವ ಇವರನ್ನು ಮರಣ ದಂಡನೆಯೊಂದೇ ನಿಯಂತ್ರಿಸಬಲ್ಲುದು ಎಂದು ಹೇಳುವ ಹಾಗಿಲ್ಲ. ಮದ್ಯ ಮತ್ತು ಮಾದಕದ ನಶೆಯು ಎಂಥವರನ್ನೂ ಮೃಗೀಯವಾಗಿ ಯೋಚಿಸುವಂತೆ ಮಾಡುತ್ತದೆ. ಅವರನ್ನು ಮೊದಲು ಆ ನಶೆಯಿಂದ ಹೊರತರುವ ಪ್ರಯತ್ನಗಳಾಗಬೇಕು. ಹಾಗೆ ಆಗಬೇಕಾದರೆ, ಆ ಗುಂಪಿನ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಯಬೇಕು. ಅವರ ಯೋಚನೆ, ಯೋಜನೆ, ಕೌಟುಂಬಿಕ ಬದುಕು, ಮನೆಯ ವಾತಾವರಣ, ಉದ್ಯೋಗ ಭದ್ರತೆ ಇತ್ಯಾದಿ ಇತ್ಯಾದಿಗಳು ಪರಿಶೀಲನೆಗೆ ಒಳಪಡಬೇಕು. ಸರಕಾರೇತರ ಸಂಸ್ಥೆಗಳ ಮೂಲಕ ಅವರನ್ನು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು.
ಅತ್ಯಾಚಾರ ಈ ದೇಶದ ಸಮಸ್ಯೆಯಷ್ಟೇ ಅಲ್ಲ. ಅದೊಂದು ಜಾಗತಿಕ ಪಿಡುಗು. ಅಂದಹಾಗೆ, ಹೆಣ್ಣು ಮತ್ತು ಗಂಡು ಬೇರೆ ಬೇರೆ ಗೃಹಗಳಲ್ಲಿ ಬದುಕುವ ಮತ್ತು ಪರಸ್ಪರ ಅಚಾನಕ್ಕಾಗಿ ಭೇಟಿಯಾಗುವ ಜೀವಿಗಳಲ್ಲ. ಬಹುತೇಕ ಎಲ್ಲ ಮನೆಗಳಲ್ಲೂ ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾರೆ. ಆದ್ದರಿಂದ ಹೆಣ್ಣು ಯಾವ ಗಂಡಿಗೂ ಅಪರಿಚಿತಳಲ್ಲ. ಆಕೆಯ ಬದುಕು, ಭಾವವನ್ನು ಕಂಡೇ ಗಂಡು ಬೆಳೆಯುತ್ತಾನೆ. ಆಕೆಯ ಪ್ರೀತಿ, ಮಮತೆಯನ್ನು ಅನುಭವಿಸಿಯೇ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಆತ ಇನ್ನೋರ್ವ ಹೆಣ್ಣನ್ನು ಅತ್ಯಂತ ಬರ್ಬರವಾಗಿ ನಡೆಸಿಕೊಳ್ಳುವುದನ್ನು ಸಹಜಸ್ಥಿತಿ ಎಂದು ಹೇಳುವಂತಿಲ್ಲ. ಅಂಥ ಕ್ರೌರ್ಯಕ್ಕೆ ಬೇರೆಯದೇ ಆದ ಹಿನ್ನಲೆ ಇರಬೇಕು. ಹೆಣ್ಣಿನ ಬಗ್ಗೆ, ಆಕೆಯ ನಗು, ನಡೆಗಳ ಬಗ್ಗೆ ಅತ್ಯಂತ ತಪ್ಪಾದ ಮತ್ತು ಮನುಷ್ಯ ವಿರೋಧಿಯಾದ ಅಭಿಪ್ರಾಯಗಳು ಅವರಲ್ಲಿರುವ ಸಾಧ್ಯತೆ ಇದೆ. ಅದಕ್ಕೆ ಸಿನಿಮಾದ ತುಂಡು ದೃಶ್ಯಗಳೋ, ಅವರು ಮೊಬೈಲ್‍ನಲ್ಲಿ ವೀಕ್ಷಿಸುವ ವೀಡಿಯೋಗಳೋ ಪ್ರಚೋದಕವಾಗಿ ಕೆಲಸ ಮಾಡಿರುವುದಕ್ಕೂ ಅವಕಾಶ ಇದೆ. ಇದರ ಜೊತೆ ಮದ್ಯ-ಮಾದಕಗಳ ನಶೆಯೂ ಸೇರಿಕೊಂಡರೆ
ಅವರು ಮೃಗಗಳಾಗಿ ಪರಿವರ್ತನೆಯಾಗುವುದು ಕಷ್ಟಕರವಲ್ಲ. ಆದ್ದರಿಂದ, ‘ಮರಣ ದಂಡನೆ’ ಎಂಬ ಶಿಕ್ಷೆಯ ಭೀತಿಯನ್ನು ಸಾಮಾಜಿಕವಾಗಿ ಹರಡುವುದರ ಜೊತೆಜೊತೆಗೇ ಹೆಣ್ಣಿನ ಬಗ್ಗೆ ಗಂಡು ಸಮಾಜದಲ್ಲಿ ಇರಬಹುದಾದ ತಪ್ಪಭಿಪ್ರಾಯಗಳನ್ನೂ ನೀಗಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪ್ರತಿ ಮನೆಯಲ್ಲೂ ಹೆಣ್ಣಿನ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ಹೆತ್ತವರು ಸದಾ ರವಾನಿಸುತ್ತಿರಬೇಕು. ಮನೆಯ ಗಂಡು ಮಕ್ಕಳ ಮುಂದೆ ‘ಸಾಧಕ ಹೆಣ್ಣು ಮಕ್ಕಳ’ ಬಗ್ಗೆ ಹೆತ್ತವರು ಪ್ರಸ್ತಾವಿಸುತ್ತಿರಬೇಕು. ಹೆಣ್ಣು ಮತ್ತು ಗಂಡಿನಲ್ಲಿ ಯಾರು ಮೇಲೂ ಅಲ್ಲ, ಕೀಳೂ ಅಲ್ಲ ಅನ್ನುವ ಸಂದೇಶವನ್ನು ಮಕ್ಕಳಿಗೆ ತಲುಪಿಸುತ್ತಿರಬೇಕು. ಒಂದು ಚಳವಳಿ ರೂಪದಲ್ಲಿ ನಡೆಯಬೇಕಾದ ಕ್ರಮ ಇದು. ಅಲ್ಲದೇ, ಬರೇ ಮರಣ ದಂಡನೆಯೊಂದೇ ಪರಿಸ್ಥಿತಿಯನ್ನು ಬದಲಿಸದು.

Thursday, 5 December 2019

ಸಂಚು, ಪಿತೂರಿ, ದುರುದ್ದೇಶ, ಸಂವಿಧಾನ ವಿರೋಧಿ ಮತ್ತೂ...



ಅಸ್ಸಾಮ್‍ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ಆದೇಶಿಸಿದ್ದು ಸುಪ್ರೀಮ್ ಕೋರ್ಟು. ಆ ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡದ್ದೇ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್. ಅಲ್ಲದೇ, ಕೇಂದ್ರ ಸರಕಾರ ಮತ್ತು ಅಸ್ಸಾಮ್‍ನ ರಾಜ್ಯ ಸರಕಾರಗಳು ಈ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಇವೆರಡೂ ಬಿಜೆಪಿ ಸರಕಾರಗಳೇ. ಇಷ್ಟಿದ್ದೂ ಅಸ್ಸಾಮ್‍ನಲ್ಲಿ ಪುನಃ NRC ನಡೆಸಲಾಗುವುದು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಅರ್ಥವೇನು? ಅವರು ಏನನ್ನು ಬಯಸುತ್ತಿದ್ದಾರೆ? ಒಂದುವೇಳೆ, ಕೇಂದ್ರದಲ್ಲಿ ಅಥವಾ ಅಸ್ಸಾಮ್‍ನಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಇದ್ದಿರುತ್ತಿದ್ದರೆ NRC ಬಗೆಗಿನ ಅಪಸ್ವರವನ್ನು ಪರಾಮರ್ಶೆಗೆ ಒಡ್ಡಬಹುದಿತ್ತು. ಆದರೆ, ಅದಕ್ಕೂ ಈಗ ಆಸ್ಪದವಿಲ್ಲ. ಹೀಗಿರುವಾಗ, ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ನಿರ್ಗಮನದ ಬಳಿಕ ಅಮಿತ್ ಶಾ ಹೀಗೆ ಹೇಳಿರುವುದನ್ನು ಏನೆಂದು ಅರ್ಥೈಸಬೇಕು?
ಅಸ್ಸಾಮ್‍ನಲ್ಲಿ ಓಖಅಯ ಅಂತಿಮ ಪಟ್ಟಿ ಬಿಡುಗಡೆಗೊಂಡು ತಿಂಗಳುಗಳೇ ಕಳೆದಿವೆ. 19 ಲಕ್ಷ ಮಂದಿಯ ಪೌರತ್ವವನ್ನು ಅಮಾನತಿನಲ್ಲಿ ಇಡಲಾಗಿದೆ. ಇದೀಗ ಮತ್ತೆ ಅಸ್ಸಾಮ್‍ನಲ್ಲಿ NRC ಕೈಗೊಳ್ಳುವುದೆಂದರೆ, ಸುಪ್ರೀಮ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆದ NRCಯನ್ನು ಅಸಮರ್ಪಕ ಎಂದು ಘೋಷಿಸಿದಂತಲ್ಲವೇ? ಇದು ಸುಪ್ರೀಮ್ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ? ಅಮಿತ್ ಶಾ ಅವರು ಈ ಹೇಳಿಕೆಯನ್ನು ಕೊಡುವುದಕ್ಕೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಹುದ್ದೆಯಿಂದ ನಿರ್ಗಮಿಸುವವರೆಗೆ ಕಾದದ್ದೇಕೆ?
ಅಸ್ಸಾಮ್‍ನ NRCಗೆ ದೀರ್ಘ ಹಿನ್ನೆಲೆಯಿದೆ. ಬಾಂಗ್ಲಾ ಮತ್ತು ಅಸ್ಸಾಮ್‍ಗಳು 1947ರ ವರೆಗೆ ಜೊತೆಯಾಗಿಯೇ ಇದ್ದ ಭೂಪ್ರದೇಶ. ಭಾರತ ಎಂಬ ಒಂದೇ ದೇಶದ ಪ್ರದೇಶಗಳಾಗಿ ಅವು ಅಸ್ತಿತ್ವದಲ್ಲಿದ್ದುವು. ಕರುಳಬಳ್ಳಿ ಸಂಬಂಧದೊಂದಿಗೆ ಅಲ್ಲಿಯ ಜನರು ಬದುಕುತ್ತಿದ್ದರು. 1947ರಲ್ಲಿ ಭಾರತವು ಹೇಗೆ ಇಬ್ಭಾಗವಾಯಿತೋ ಮತ್ತು ಇಬ್ಭಾಗವಾದ ಭೂಮಿ ಹೇಗೆ ಪಾಕಿಸ್ತಾನವಾಗಿ ಗುರುತಿಸಿಕೊಂಡಿತೋ ಆ ಪಾಕಿಸ್ತಾನದಲ್ಲಿ ಈಗಿನ ಬಾಂಗ್ಲಾವೂ ಇತ್ತು. ಹಾಗಂತ, ಒಂದೇ ಆಗಿದ್ದ ಭೂಮಿಯನ್ನು ಭಾರತ-ಪಾಕ್ ಎಂದು ವಿಭಜಿಸಿದ ತಕ್ಷಣ, ಜನರ ನಡುವಿನ ಸಂಬಂಧಗಳು ವಿಭಜನೆಗೊಳ್ಳುವುದಕ್ಕೆ ಸಾಧ್ಯವಿಲ್ಲ. ಅಣ್ಣ ಭಾರತದಲ್ಲಾದರೆ ಅಕ್ಕ ಪಾಕಿಸ್ತಾನದಲ್ಲಿ. ತಂದೆ-ತಾಯಿ ಭಾರತದಲ್ಲಾದರೆ, ಮಕ್ಕಳು ಪಾಕಿಸ್ತಾನದಲ್ಲಿ. ಮಾವ ಪಾಕಿಸ್ತಾನದಲ್ಲೂ ಅಳಿಯ ಭಾರತದಲ್ಲೂ ಇರುವಂತಹ ಸ್ಥಿತಿಯೂ ನಿರ್ಮಾಣವಾಯಿತು. ಕೊನೆಗೆ ಪಾಕಿಸ್ತಾನದಲ್ಲಾದ ರಾಜಕೀಯ ಸಂಘರ್ಷದ ಫಲಿತಾಂಶವಾಗಿ ಆ ಭೂಮಿಯೂ ವಿಭಜನೆಗೊಂಡು ಬಾಂಗ್ಲಾದೇಶವೆಂಬ ಸ್ವತಂತ್ರ ರಾಷ್ಟ್ರ ನಿರ್ಮಾಣವಾಯಿತು. ಆಗಲೂ ಜನರ ನಡುವೆ ಇದೇ ರೀತಿಯ ವಿಭಜನೆಗಳು ನಡೆದುವು. ನಿಜವಾಗಿ,
ಈ  ವಿಭಜನೆ, ಸಂಘರ್ಷ, ರಾಜಕೀಯ ಸ್ವಾರ್ಥಗಳನ್ನೆಲ್ಲ ಜನರ ಬೇಡಿಕೆ ಎಂದು ಹೇಳುವಂತಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶಗಳಿದ್ದುವು. ನಾಯಕರ ಸ್ವಾರ್ಥಗಳಿದ್ದುವು. ಸಾಮ್ರಾಜ್ಯಶಾಹಿ ಕುತಂತ್ರಗಳಿದ್ದುವು. ಆದರೆ ಈ ಎಲ್ಲದರ ಅಡ್ಡಪರಿಣಾಮವನ್ನು ಬಡಪಾಯಿ ಜನರೇ ಅನುಭವಿಸಬೇಕಾಯಿತು. ಅವರು ಸಂಘರ್ಷ ಭರಿತ ಪಾಕ್ ಮತ್ತು ಬಾಂಗ್ಲಾದಿಂದ ತಾವು ಈ ಹಿಂದೆ ವಾಸಿಸಿದ್ದ ಭೂಮಿಗೇ ಮರಳಿ ಬಂದರು. ಅಸ್ಸಾಮ್‍ನಲ್ಲಿರುವ ತಮ್ಮ ಬಂಧುಗಳು, ನೆರೆಕರೆಯವರೊಂದಿಗೆ ಸಹಜವಾಗಿ ಸೇರಿಕೊಂಡರು. ಭೂಮಿಗೆ ಬೇಲಿ ಬಿದ್ದಿದ್ದರೂ ಸಂಬಂಧಗಳಿಗೆ ಬೇಲಿ ಹಾಕಲು ಭೂಮಿಯನ್ನು ತುಂಡು ಮಾಡಿದವರಿಗೆ ಸಾಧ್ಯವಿರಲಿಲ್ಲ. ಆದರೆ,
ಈ ವಲಸೆ ಪ್ರಕ್ರಿಯೆಯು ಅಭೂತಪೂರ್ವ ಮಟ್ಟದಲ್ಲಿ ನಡೆದಾಗ ಮತ್ತು ಅಸ್ಸಾಮ್‍ನ ಜನಸಂಖ್ಯಾ ಲೆಕ್ಕಾಚಾರವನ್ನೇ ಬುಡಮೇಲುಗೊಳಿಸುವ ಭೀತಿ ವ್ಯಕ್ತವಾದಾಗ ಚಳವಳಿ ಹುಟ್ಟಿಕೊಂಡಿತು. ವಲಸಿಗರ ವಿರುದ್ಧ ಸ್ಥಳೀಯರ ಪ್ರತಿಭಟನೆ ಪ್ರಾರಂಭವಾಯಿತು. ಇವರೊಂದಿಗೆ ರಾಜಕೀಯವೂ ಸೇರಿಕೊಂಡು ಒಟ್ಟು ವಾತಾವರಣವೇ ಕಲುಷಿತಗೊಳ್ಳುವ ಸೂಚನೆ ಸಿಕ್ಕಿತು. ಇದರ ಪರಿಣಾಮವಾಗಿ 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಒಪ್ಪಂದಕ್ಕೆ ಬಂದುವು. 1971 ಮಾರ್ಚ್ 25ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಮತ್ತು ಆ ಬಗ್ಗೆ ಯಾರಲ್ಲಿ ದಾಖಲೆ ಪತ್ರಗಳು ಇವೆಯೋ ಅವರು ಭಾರತೀಯರು ಮತ್ತು ಉಳಿದವರು ಗಡೀಪಾರಿಗೆ ಅರ್ಹರು ಎಂದು ಒಪ್ಪಂದದಲ್ಲಿ ನಿರ್ಧರಿಸಲಾಯಿತು. ಅದನ್ನೇ ಆಧರಿಸಿ ಅಸ್ಸಾಮ್‍ನಲ್ಲಿ NRC ನಡೆದಿದೆ. ಸುಪ್ರೀಮ್ ಕೋರ್ಟೇ ಇದಕ್ಕೆ ನೇತೃತ್ವವನ್ನು ನೀಡಿದೆ. ಆದರೆ, ಇಷ್ಟೆಲ್ಲ ನಡೆದೂ ಈಗ ಪುನಃ ಅಸ್ಸಾಮ್‍ನಲ್ಲಿ NRC ನಡೆಸುವುದೆಂದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಇದೆ ಅನ್ನುವುದು ಸ್ಪಷ್ಟ. ಈ ದುರುದ್ದೇಶವನ್ನು ಅಮಿತ್ ಶಾ ಅಡಗಿಸಿಯೂ ಇಲ್ಲ. ‘ಪೌರತ್ವ ತಿದ್ದುಪಡಿ ಮಸೂದೆ’(CAB)ಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಿಕೊಂಡ ಬಳಿಕ ಅಸ್ಸಾಮ್‍ನಲ್ಲಿ ಮತ್ತು ಇಡೀ ದೇಶದಲ್ಲೂ NRC ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಎಂಬುದು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಖಾತರಿಪಡಿಸುವ ವ್ಯವಸ್ಥೆ. 2014ರ ಕೊನೆಯವರೆಗೆ ಬಾಂಗ್ಲಾ, ಪಾಕ್, ಅಫಘಾನ್‍ನಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಈ ಮಸೂದೆಯ ಉದ್ದೇಶ. ಈ ಮೇಲಿನ ಮೂರೂ ರಾಷ್ಟ್ರಗಳು ಮುಸ್ಲಿಮ್ ಬಹುಸಂಖ್ಯಾತವಾಗಿರುವುದರಿಂದ ಅಲ್ಲಿಂದ ಬಂದಿರುವ ಮುಸ್ಲಿಮರಿಗೆ ಈ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಿದ್ದರೆ ಬೌದ್ಧ ಬಹುಸಂಖ್ಯಾತವಾಗಿರುವ ಮ್ಯಾನ್ಮಾರ್ ನಿಂದ ಭಾರತಕ್ಕೆ ಬಂದ ಮುಸ್ಲಿಮರಿಗೆ ಯಾಕೆ ಈ ಪೌರತ್ವವನ್ನು ನೀಡಬಾರದು ಅನ್ನುವ ಪ್ರಶ್ನೆಗೆ ಈ ಸರಕಾರ ತೃಪ್ತಿದಾಯಕ ಉತ್ತರವನ್ನು ಈವರೆಗೂ ನೀಡಿಲ್ಲ. ನಿಜವಾಗಿ,
ಪೌರತ್ವ ತಿದ್ದುಪಡಿ ಮಸೂದೆ (CAB)ಯೇ ಸಂವಿಧಾನ ವಿರೋಧಿ. ಸಂವಿಧಾನದ 14ನೇ ಪರಿಚ್ಛೇದವು ನೀಡುವ ಸಮಾನತೆ ಮತ್ತು ಸಮಾನ ಸಂರಕ್ಷಣೆ ಎಂಬ ಖಾತರಿಯನ್ನು ಇದು ಸಂಪೂರ್ಣ ಉಲ್ಲಂಘಿಸುತ್ತದೆ. ಮುಸ್ಲಿಮರನ್ನು ಗುರಿ ಮಾಡುವುದೇ ಈ ಮಸೂದೆಯ ಉದ್ದೇಶ ಅನ್ನುವುದು ಸುಲಭವಾಗಿಯೇ ಗೊತ್ತಾಗುತ್ತದೆ. ಸಂವಿಧಾನ ವಿರೋಧಿ ಮಸೂದೆಯೊಂದನ್ನು ಹಿಡಿದುಕೊಂಡು ದೇಶದಾದ್ಯಂತ NRCಗೆ ಹೊರಡುವುದು ಬಹುತ್ವ ವಿರೋಧಿ, ಅತಾರ್ಕಿಕ ಮತ್ತು ಮನುಷ್ಯ ವಿರೋಧಿ. ಅಸ್ಸಾಮ್‍ನಲ್ಲಿ ಮರು NRCಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದೇ ಈ ಪ್ರಕ್ರಿಯೆ ಎಷ್ಟು ದೋಷಪೂರ್ಣ ಅನ್ನುವುದನ್ನು ಹೇಳುತ್ತದೆ. ಅಸ್ಸಾಮ್‍ನ ಅಂತಿಮ ಪೌರತ್ವ ಪಟ್ಟಯಿಂದ ಹೊರಗಿರುವ 19 ಲಕ್ಷದಲ್ಲಿ ಸುಮಾರು 13 ಲಕ್ಷ ಮಂದಿ ಹಿಂದೂ ವಲಸಿಗರು ಎಂಬುದು ಬಹಿರಂಗವಾಗಿದೆ. ಇವರೆಲ್ಲರನ್ನೂ ದೇಶರಹಿತರು ಎಂದು ಘೋಷಿಸಿಬಿಟ್ಟರೆ ತನ್ನ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಗುಲೀತು ಎಂಬ ಭಯದಿಂದ ಬಿಜೆಪಿಯು ಮರು ಓಖಅಗೆ ಮನಸು ಮಾಡಿದೆ. ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುವ ದೃಷ್ಟಿಯಿಂದ ಮೊದಲು ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಬಳಿಕ ಈ NRCಗೆ ಅದು ಮುಂದಾಗುವ ಸೂಚನೆ ನೀಡಿದೆ. ಕೇವಲ ಅಸ್ಸಾಮ್‍ನಲ್ಲಿ ಮಾತ್ರ ಮರು NRC ಮಾಡುವುದರಿಂದ ವ್ಯಕ್ತವಾಗಬಹುದಾದ ಟೀಕೆಗಳನ್ನು ತಪ್ಪಿಸುವುದಕ್ಕಾಗಿ ಇಡೀ ಭಾರತದಲ್ಲೇ NRC ಮಾಡಲಾಗುವುದು ಎಂಬ ಹೇಳಿಕೆಯನ್ನು ಅವರು ಕೊಟ್ಟಂತಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಒತ್ತಡವನ್ನು ಮೀರುವ ತಂತ್ರ. ದೇಶದಾದ್ಯಂತ NRC ಮಾಡುವಾಗ ಸಹಜವಾಗಿಯೇ ಅಸ್ಸಾಮ್‍ನಲ್ಲೂ NRC ಮಾಡಲಾಗುತ್ತದೆ ಎಂದು ಹೇಳಿ ಸುಪ್ರೀಮ್‍ನಲ್ಲಿ ದಕ್ಕಿಸಿಕೊಳ್ಳುವುದಕ್ಕೆ ಹೂಡಿರುವ ಸಂಚು. ನಿಜವಾಗಿ,
ದೇಶದಾದ್ಯಂತ NRC ಎಂಬುದೇ ಒಂದು ದುರುದ್ದೇಶದ ನಡೆ. ಪೌರತ್ವ ತಿದ್ದುಪಡಿ ಮಸೂದೆಯಂತೂ ಸಂವಿಧಾನ ವಿರೋಧಿ ಮತ್ತು ಸಮಾಜ ವಿರೋಧಿ. ಅಂದಹಾಗೆ, ಅಸ್ಸಾಮ್‍ನ NRCಗೆ ಸುಪ್ರೀಮ್ ಕೋರ್ಟೇ ಒಪ್ಪಿಕೊಂಡಿರುವ 1971 ಮಾರ್ಚ್ 25 ಎಂಬ ಅಂತಿಮ ದಿನಾಂಕವಾದರೂ (Cut off date) ಇದೆ. ಆದರೆ ಇಡೀ ದೇಶಕ್ಕೆ ಸಂಬಂಧಿಸಿ ಇಂಥ ದಿನಾಂಕವನ್ನು ನಿರ್ಧರಿಸುವುದು ಹೇಗೆ? ಯಾವ ರಾಜ್ಯಕ್ಕೆ ಯಾವ ದಿನಾಂಕ? ಅದರ ಮಾನದಂಡ ಏನು? ಇದು ಸುಲಭ ಅಲ್ಲ. ಕೇಂದ್ರದ ಈ ನಿರ್ಧಾರದಲ್ಲಿ ಪ್ರಾಮಾಣಿಕತೆಯೂ ಇಲ್ಲ.

Thursday, 28 November 2019

ಮಹಾರಾಷ್ಟ್ರ: ಸಿದ್ಧಾಂತ-ವಿಚಾರಧಾರೆಗಳೆಲ್ಲ ಮಣ್ಣು-ಮಸಿ ಎಂದು ಅರ್ಥವೇ?



ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯು ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ.
1. ತದ್ವಿರುದ್ಧ ವಿಚಾರಧಾರೆಯುಳ್ಳ ಪಕ್ಷಗಳು ಅಧಿಕಾರಕ್ಕಾಗಿ ಜೊತೆಗೂಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?
2. ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಆಯುಷ್ಯ ಎಷ್ಟು ಸಮಯ?
ಅಜಿತ್ಮ ಪವಾರ್ ರನ್ನು ಸೆಳೆದು ಸರಕಾರ ರಚಿಸಿದ ಬಿಜೆಪಿ ನಡೆ ಎಷ್ಟು ನೈತಿಕ?
ಹಾರಾಷ್ಟ್ರದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ವಿಚಿತ್ರ ಮತ್ತು ನಂಬಲಸಾಧ್ಯವಾದದ್ದು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯು ಎರಡು ಮೈತ್ರಿಕೂಟಗಳ ನಡುವಿನ ಹೋರಾಟವಾಗಿತ್ತು. ಬಿಜೆಪಿ ಮತ್ತು ಶಿವಸೇನೆಯದ್ದು ಒಂದು ಕೂಟವಾದರೆ ಕಾಂಗ್ರೆಸ್ ಮತ್ತು ಎನ್‍ಸಿಪಿಯದ್ದು ಇನ್ನೊಂದು ಕೂಟ. ನಿಜವಾಗಿ, ಇವೆರಡೂ ಬರೇ ಮೈತ್ರಿಕೂಟಗಳಷ್ಟೇ ಅಲ್ಲ, ಎರಡು ವಿಚಾರಧಾರೆ ಮತ್ತು ಸಿದ್ಧಾಂತದ ಪ್ರತಿನಿಧಿಗಳಾಗಿಯೂ ಗುರುತಿಸಿಕೊಂಡಿದ್ದುವು. ಬಿಜೆಪಿ ಮತ್ತು ಶಿವಸೇನೆಯು ಹಿಂದುತ್ವ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುವ ಮೈತ್ರಿಕೂಟವಾದರೆ, ಕಾಂಗ್ರೆಸ್-ಎನ್‍ಸಿಪಿಗಳು ಸೆಕ್ಯುಲರ್ ವಿಚಾರಧಾರೆಯನ್ನು ನೆಚ್ಚಿಕೊಂಡ ಮೈತ್ರಿಕೂಟ. ಈ ನಾಲ್ಕೂ ಪಕ್ಷಗಳು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆಯನ್ನು ಎದುರಿಸಿದ್ದುವು. ಮತದಾರರು ಶಿವಸೇನಾ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದರು. ಸೆಕ್ಯುಲರ್ ಮೈತ್ರಿಕೂಟವನ್ನು ತಿರಸ್ಕರಿಸಿದರು. ಇದು ಅತ್ಯಂತ ಸ್ಪಷ್ಟ. ಆದರೆ,
ಆ ಬಳಿಕ ಮಹಾರಾಷ್ಟ್ರದಲ್ಲಿ ನಡೆದಿರುವುದು ದಂಗುಬಡಿಸುವ ರಾಜಕೀಯ ಬೆಳವಣಿಗೆ. ಶಿವಸೇನೆಯು ತನ್ನ ಕಟು ಹಿಂದುತ್ವ ಸಿದ್ಧಾಂತವನ್ನು ತೊರೆಯದೆಯೇ ಮತ್ತು ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವ ಸೂಚನೆಯನ್ನು ನೀಡದೆಯೇ ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಜೊತೆಸೇರಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸಿತು. ಮಾತುಕತೆ ನಡೆಸಿತು ಮತ್ತು ಬಹುತೇಕ ಅದು ಕೈಗೂಡುವ ಸಾಧ್ಯತೆಯೂ ಇದೆ. ಹಾಗಂತ, ಬಿಜೆಪಿಯೊಂದಿಗಿನ ಸಂಬಂಧವನ್ನು ಶಿವಸೇನೆ ಕಡಿದುಕೊಂಡಿರುವುದಕ್ಕೆ ಸಿದ್ಧಾಂತ ಕಾರಣ ಅಲ್ಲ. ಬಿಜೆಪಿಗಿಂತಲೂ ಕಟುವಾದ ಹಿಂದುತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷ ಶಿವಸೇನೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದುದು ತನ್ನ ಕಾರ್ಯಕರ್ತರು ಎಂದು ಅದು ಹೆಮ್ಮೆಯಿಂದ ಹೇಳುತ್ತದೆ. ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರ ಅತ್ಯಂತ ಘಾತಕ ರೂಪದ್ದು ಅನ್ನುವುದನ್ನು ಶ್ರೀಕೃಷ್ಣ ಆಯೋಗ ಸ್ಪಷ್ಟಪಡಿಸಿದೆ. ಬಾಳಾಠಾಕ್ರೆಯನ್ನು ಅದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಮರಾಠಿ ಅಸ್ಮಿತೆಯನ್ನು ಎತ್ತಿ ಹಿಡಿದು ಮರಾಠೇತರರನ್ನು ಹೊರದಬ್ಬುವ ಅಭಿಯಾನ ಕೈಗೊಂಡ ಕರಾಳ ಇತಿಹಾಸವೂ ಶಿವಸೇನೆಗಿದೆ. ಹಾಗಂತ,
ಶಿವಸೇನೆಯ ಈ ರಾಜಕೀಯ ಸಿದ್ಧಾಂತ ಮತ್ತು ವಿಚಾರಧಾರೆಯ ಕುರಿತು ಬಿಜೆಪಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಈ ಸಿದ್ಧಾಂತದ ಪ್ರಬಲ ವಿರೋಧಿಗಳು. ಆದ್ದರಿಂದಲೇ ಕಾಂಗ್ರೆಸ್-ಎನ್‍ಸಿಪಿ ಜೊತೆಸೇರಿ ಶಿವಸೇನೆಯು ರಚಿಸುವ ಸರಕಾರ ಎಷ್ಟು ನೈತಿಕ ಅನ್ನುವ ಪ್ರಶ್ನೆ ಮುಖ್ಯವಾಗುವುದು. ಸರಕಾರ ರಚಿಸದಂತೆ ಬಿಜೆಪಿಯನ್ನು ತಡೆಯುವ ಏಕೈಕ ಉದ್ದೇಶದಿಂದ ರಚಿತವಾಗಿರುವ ಈ ಮೈತ್ರಿಕೂಟ ಎಲ್ಲಿಯವರೆಗೆ ಸುರಕ್ಷಿತ? ಎನ್‍ಸಿಪಿ ಮತ್ತು ಕಾಂಗ್ರೆಸ್ ಎರಡೂ ಕೂಡ ಬಿಜೆಪಿ-ಶಿವಸೇನಾ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಅಖಾಡದಲ್ಲಿವೆ. ಹೀಗಿರುವಾಗ, ಈ ಮೈತ್ರಿಯಿಂದ ನಾಗರಿಕರ ಮೇಲೆ ಆಗುವ ಪರಿಣಾಮ ಏನು? ಈ ಪಕ್ಷಗಳ ಕಾರ್ಯಕರ್ತರು ಈ ಬೆಳವಣಿಗೆಯನ್ನು ಹೇಗೆ ಜೀರ್ಣಿಸಿಕೊಳ್ಳಬಹುದು? ‘ಸಮಾನ ಕನಿಷ್ಠ ಕಾರ್ಯಕ್ರಮವನ್ನು ರಚಿಸಿ ತಾವು ಅಧಿಕಾರ ಚಲಾಯಿಸುತ್ತೇವೆ’ ಎಂದು ಈ ಮೈತ್ರಿಕೂಟ ಹೇಳಿಕೊಂಡಿದ್ದರೂ ಅದು ಅಷ್ಟು ಸುಲಭ ಅಲ್ಲ. ಸಮಾನ ಕನಿಷ್ಠ ಕಾರ್ಯಕ್ರಮವಿದ್ದೂ ಸಮಾನ ವಿಚಾರಧಾರೆಯ ಪಕ್ಷಗಳೇ ಪರಸ್ಪರ ಕಚ್ಚಾಡಿಕೊಂಡು ಅಧಿಕಾರದಂದ ನಿರ್ಗಮಿಸಿರುವಾಗ ಈ ಅಸಮಾನ ವಿಚಾರಧಾರೆಯ ಕೂಡಾವಳಿಗೆ ದೀರ್ಘ ಆಯುಷ್ಯವನ್ನು ನಿರೀಕ್ಷಿಸುವುದು ಹೇಗೆ? ಈ ಮೈತ್ರಿಕೂಟವನ್ನು ಅಧಿಕಾರದಿಂದ ಹೊರದಬ್ಬುವುದಕ್ಕೆ ಬಿಜೆಪಿ ಸಹಜವಾಗಿಯೇ ತಂತ್ರಗಳನ್ನು ಹೆಣೆಯಬಹುದು. ಹಿಂದುತ್ವಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಶಿವಸೇನೆಯನ್ನು ಸೈದ್ಧಾಂತಿಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳನ್ನು ಹೆಣೆಯಬಹುದು. ಆಗೆಲ್ಲ ಸಮಾನ ಕನಿಷ್ಠ ಕಾರ್ಯಕ್ರಮಕ್ಕೆ ಅಂಟಿಕೂರಲು ಶಿವಸೇನೆ ಪ್ರಯತ್ನಿಸಿದರೆ ಕಾರ್ಯಕರ್ತರನ್ನು ಕಳಕೊಳ್ಳಬೇಕಾಗುತ್ತದೆ. ಆಗ ಶಿವಸೇನೆಯನ್ನು ಅಧಿಕಾರ ದಾಹಿಯಂತೆ ಮತ್ತು ಹಿಂದುತ್ವ ವಿರೋಧಿಯಂತೆ ಬಿಂಬಿಸಲು ಬಿಜೆಪಿಗೆ ಸುಲಭವಾಗುತ್ತದೆ. ಇದೇವೇಳೆ, ಕಾಂಗ್ರೆಸ್-ಎನ್‍ಸಿಪಿಯನ್ನು ಮುಜುಗರಕ್ಕೆ ತಳ್ಳುವುದೂ ಕಷ್ಟ ಅಲ್ಲ. ಈ ಎರಡೂ ಪಕ್ಷಗಳ ಸೆಕ್ಯುಲರ್ ನೀತಿಗೆ ಸವಾಲಾಗಬಲ್ಲ ಬೆಳವಣಿಗೆಯನ್ನು ಮಹಾರಾಷ್ಟ್ರದಲ್ಲಿ ನಿರ್ಮಿಸುವುದು ಬಿಜೆಪಿಗೆ ಸುಲಭ. ಅತ್ತ ಶಿವಸೇನೆಯನ್ನು ಒತ್ತಡಕ್ಕೆ ಸಿಲುಕಿಸಿದಂತೆಯೇ ಇತ್ತ ಎನ್‍ಸಿಪಿ-ಕಾಂಗ್ರೆಸನ್ನು ಒತ್ತಡಕ್ಕೆ ಸಿಲುಕಿಸಿ ಅವುಗಳಿಗೆ ಇದ್ದ ಬದ್ಧ ಸಾರ್ವಜನಿಕ ಬೆಂಬಲವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಬಹುದು. ಆದ್ದರಿಂದಲೇ,
ಶಿವಸೇನೆ, ಎನ್‍ಸಿಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸುವುದರಿಂದ ಬಿಜೆಪಿಗೆ ಆರಂಭಿಕ ಹಿನ್ನಡೆ ಉಂಟಾಗಬಹುದೇ ಹೊರತು ಶಾಶ್ವತ ಅಲ್ಲ. ಅದು ಶಿವಸೇನೆಯನ್ನು ವಚನಭ್ರಷ್ಟವಾಗಿ ಮತ್ತು ಸಿದ್ಧಾಂತಕ್ಕೆ ಇರಿದ ಪಕ್ಷವಾಗಿ ಬಿಂಬಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಜೆಡಿಎಸ್‍ನೊಂದಿಗೆ ಸೇರಿ ಸರಕಾರ ರಚಿಸಿದ ಬಳಿಕ ಹೇಗೆ ಆ ಇಡೀ ಪ್ರಕ್ರಿಯೆಯನ್ನು ತನ್ನ ಪರವಾಗಿ ಬಿಜೆಪಿ ತಿರುಗಿಸಿಕೊಂಡಿತೋ ಅಂಥದ್ದೇ ಒಂದು ಸ್ಥಿತಿ ಮಹಾರಾಷ್ಟ್ರದಲ್ಲೂ ನಿರ್ಮಾಣವಾಗಬಹುದು. ಜೆಡಿಎಸ್ ಅನ್ನು ವಚನಭ್ರಷ್ಟ ಪಕ್ಷಎಂದು ಘೋಷಿಸಿಯೇ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ.
ಕಾಂಗ್ರೆಸ್-ಎನ್‍ಸಿಪಿಯೊಂದಿಗೆ ಶಿವಸೇನೆಯು ಮೈತಿ ಮಾಡಿಕೊಳ್ಳುವುದೆಂದರೆ, ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಂತೆ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ನಡುವೆ ಎತ್ತಿ ಹೇಳಬಹುದಾದ ಸೈದ್ಧಾಂತಿಕ ಭಿನ್ನತೆಗಳೇ ಇಲ್ಲ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಡುವೆಯೂ ಇದೇ ಸ್ಥಿತಿ ಇದೆ. ರಾಜಕೀಯ ಮತ್ತು ಸ್ಥಳೀಯ ಕಾರಣಗಳು ಎನ್‍ಸಿಪಿ ಮತ್ತು ಜೆಡಿಎಸ್‍ಗಳ ಹುಟ್ಟಿಗೆ ಕಾರಣವೇ ಹೊರತು ಸೆಕ್ಯುಲರ್ ಸಿದ್ಧಾಂತದ ಮೇಲಿನ ದ್ವೇಷವಲ್ಲ. ಆದರೆ ಶಿವಸೇನೆ ಹಾಗಲ್ಲ. ಅದು ಹುಟ್ಟಿಕೊಂಡದ್ದೇ ಸೆಕ್ಯುಲರ್ ಸಿದ್ಧಾಂತವನ್ನು ವಿರೋಧಿಸಿಕೊಂಡು. ಸಂವಿಧಾನ ಪ್ರತಿಪಾದಿಸುವ ಬಹುತ್ವದ ಭಾರತದೊಂದಿಗೆ ಅದಕ್ಕೆ ತಕರಾರಿದೆ. ಅದು ಇವತ್ತು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದರೆ ಅದಕ್ಕೆ ಅದರ ಅಸ್ತಿತ್ವದ ಭಯ ಕಾರಣವೇ ಹೊರತು ಸಿದ್ಧಾಂತ ಅಲ್ಲ. ಬಿಜೆಪಿ ನಿಧಾನವಾಗಿ ತನ್ನನ್ನು ಆಪೋಶನ ಪಡಕೊಳ್ಳುತ್ತಿದೆ ಅನ್ನುವ ಭಯ ಅದನ್ನು ಆವರಿಸಿದೆ. ತನ್ನ ಪಕ್ಷದ ಭದ್ರ ಕೋಟೆಗಳನ್ನು ಮತ್ತು ಬೆಂಬಲಿಗರನ್ನು ಬಿಜೆಪಿ ನಿಧಾನಕ್ಕೆ ತನ್ನ ತೆಕ್ಕೆಗೆ ಪಡೆದುಕೊಳ್ಳುತ್ತಿದೆ ಅನ್ನುವ ಸಂಕಟ ಅದರದು. ಇದು ಹೀಗೆಯೇ ಮುಂದುವರಿದರೆ ಶಿವಸೇನೆಯ ಬದಲು ಜನರು ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಾರು ಎಂಬುದು ಅದಕ್ಕೆ ಅರಿವಾಗಿದೆ. ಅಲ್ಲದೇ, ತನ್ನ ಜೊತೆ ಮೈತ್ರಿ ಮಾಡಿಕೊಂಡ ಯಾವ ಸ್ಥಳೀಯ ಪಕ್ಷವನ್ನೂ ಬಿಜೆಪಿ ಬೆಳೆಯಲು ಬಿಟ್ಟಿಲ್ಲ. ಇದನ್ನು ಮನಗಂಡೇ ಶಿವಸೇನೆ ಬಿಜೆಪಿಯನ್ನು ತೊರೆದು ಹೊಸ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಇದು ಅನುಕೂಲ ಸಿಂಧು ಮೈತ್ರಿಯೇ ಹೊರತು ಇನ್ನೇನಲ್ಲ. ಕಾಂಗ್ರೆಸ್-ಎನ್‍ಸಿಪಿಗಳು ಶಿವಸೇನೆಯೊಂದಿಗೆ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ. ಶಿವಸೇನೆಗೆ ಸರಕಾರ ರಚನೆಯ ಅನಿವಾರ್ಯತೆ ಇರಬಹುದು. ಆದರೆ ಎನ್‍ಸಿಪಿ-ಕಾಂಗ್ರೆಸ್‍ಗೆ ಆ ಅನಿವಾರ್ಯತೆ ಇಲ್ಲ. ಮತದಾರರು ಈ ಮೈತ್ರಿಕೂಟವನ್ನು ಬೆಂಬಲಿಸಿಯೂ ಇಲ್ಲ. ಅಂದಹಾಗೆ,
ಅಧಿಕಾರ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಎದುರಾದಾಗ ಸಿದ್ಧಾಂತ ಮುಖ್ಯವಾಗಬೇಕೇ ಹೊರತು ಅಧಿಕಾರ ಅಲ್ಲ. ಒಂದುವೇಳೆ, ಇವತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರತಳ್ಳುವುದಕ್ಕಾಗಿ ಶಿವಸೇನೆಯ ಜೊತೆ ಕಾಂಗ್ರೆಸ್-ಎನ್‍ಸಿಪಿಗಳು ಕೈಜೋಡಿಸಬಹುದಾದರೆ ನಾಳೆ ಶಿವಸೇನೆಯನ್ನು ಹೊರಗಿಡುವುದಕ್ಕಾಗಿ ಬಿಜೆಪಿ ಜೊತೆ ಕೈ ಜೋಡಿಸಲೂ ಕಾಂಗ್ರೆಸ್-ಎನ್‍ಸಿಪಿಗಳು ಒಂದಾಗಬಹುದು. ಹಾಗಿದ್ದ ಮೇಲೆ ಜನಸಾಮಾನ್ಯರ ಮುಂದಿರುವ ಆಯ್ಕೆಯಾದರೂ ಏನು? ಸಿದ್ಧಾಂತ, ವಿಚಾರಧಾರೆ ಇತ್ಯಾದಿಗಳೆಲ್ಲ ಮಣ್ಣು-ಮಸಿ ಆಗಲಾರದೇ?

ಬಾಬರಿ: ಆಕ್ಷೇಪ ಮುಕ್ತ ತೀರ್ಪು ಸಾಧ್ಯವಿತ್ತೇ?



ವಿಶೇಷ ಸಂಪಾದಕೀಯ
ಅಯೋಧ್ಯೆಯ 2.77 ಎಕರೆ ನಿವೇಶನದ ವಿವಾದವನ್ನು ಸುಪ್ರೀಮ್ ಕೋರ್ಟು ಇತ್ಯರ್ಥಪಡಿಸಿರುವ ರೀತಿಗೆ ವ್ಯಕ್ತವಾಗಿರುವ ಆಕ್ಷೇಪಗಳನ್ನು ತಕ್ಷಣದ  ಆವೇಶವೆಂದೋ ಭಾವುಕತೆಯೆಂದೋ ಕಡೆಗಣಿಸಿ  ಬಿಡುವುದು ಸಲ್ಲ. ಹಾಗಂತ, ಉಭಯ ಕಕ್ಷಿಗಳನ್ನೂ ಸಮಾನವಾಗಿ ತೃಪ್ತಿಪಡಿಸಬಲ್ಲ ಇತ್ಯರ್ಥ ಸಾಧ್ಯವಿತ್ತೇ ಎಂಬ ಪ್ರಶ್ನೆ ಸಹಜವಾದುದು. ಒಂದುವೇಳೆ, ಅದು ಸಾಧ್ಯವಿರುತ್ತಿದ್ದರೆ 2010ರಲ್ಲಿ ಅಲಹಾಬಾದ್  ಹೈಕೋರ್ಟ್ ನೀಡಿದ ತೀರ್ಪಿಗೆ ಪ್ರಕರಣ ಮುಕ್ತಾಯವನ್ನು ಕಾಣಬೇಕಿತ್ತು. ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಕ್ಕೆ ಈ ವಿವಾದಿತ 2.77 ಎಕರೆ ಭೂಮಿಯನ್ನು ಅಲಹಾಬಾದ್  ಹೈಕೋರ್ಟ್ ಸಮಾನವಾಗಿ ಹಂಚುವ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸಿತ್ತು. ಆಗಲೂ ಆಕ್ಷೇಪ ವ್ಯಕ್ತವಾಗಿತ್ತು. ಮೂರೂ ಕಕ್ಷಿಗಳೂ ಈ ಇತ್ಯರ್ಥ ಕ್ರಮವನ್ನು ಒಪ್ಪಿರಲಿಲ್ಲ. ಹಾಗಂತ, 
ಈಗಿನ ತೀರ್ಪೂ ಆಕ್ಷೇಪ ರಹಿತವೋ ವಿವಾದ ರಹಿತವೋ ಆಗಿಲ್ಲ. ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಅನೇಕ ದಾಖಲೆಗಳನ್ನು  ಪರಿಶೀಲಿಸಿದ್ದಾರೆ. ಕ್ರಿಸ್ತಪೂರ್ವ ರಾಮಾಣಯದ ಕಾಲದಿಂದ ಹಿಡಿದು ಮೀರ್ ಬಾಖಿ 1528ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿರುವಲ್ಲಿವರೆಗೆ, ಅಲ್ಲಿಂದ ಪ್ರಥಮ ಹಿಂದೂ-ಮುಸ್ಲಿಮ್ ಘರ್ಷಣೆ ನಡೆದ 1558ರ ವರೆಗೆ, ಅಲ್ಲಿಂದ 1949ರಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳನ್ನು ಬಾಬರಿ ಮಸೀದಿಯ ಒಳಗಡೆ ಸ್ಥಾಪಿಸಿದ ಘಟನೆಯ ವರೆಗೆ ಮತ್ತು ಅಲ್ಲಿಂದ 1992ರ ಮಸೀದಿ ಧ್ವಂಸ ಕೃತ್ಯದ ವರೆಗೆ  ಎಲ್ಲವನ್ನೂ ಪರಿಶೀಲಿಸಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ನಿವೇಶನವು ಸರ್ಕಾರಿ ಭೂಮಿ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ. ಬಾಬರಿ ಮಸೀದಿಯನ್ನು ಕಟ್ಟಲು ದೇವಾಲಯವನ್ನು  ಕೆಡವಲಾಗಿದೆಯೆಂಬ ವಾದವನ್ನು ಭಾರತೀಯ ಪುರಾತತ್ವ ಇಲಾಖೆಯು ದೃಢಪಡಿಸಿಲ್ಲ ಎಂಬುದು ಈ ವೇಳೆ ಸ್ಪಷ್ಟವಾಗಿದೆ. ಅದೇವೇಳೆ, ಮಸೀದಿ ಇರುವ ಸ್ಥಳ ತಮಗೆ ಮಾತ್ರ ಸೇರಿತ್ತೆಂಬುದನ್ನು  ನಿರೂಪಿಸಲು ಸುನ್ನಿ ವಕ್ಫ್ ಮಂಡಳಿ ವಿಫಲವಾಗಿರುವುದನ್ನೂ ನ್ಯಾಯಾಲಯ ಕಂಡುಕೊಂಡಿದೆ. ಹಾಗೆಯೇ, ವಿವಾದಿತ ನಿವೇಶನದ ಹೊರ ಆವರಣವು ತಮ್ಮ ಸ್ವಾಧೀನದಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲು ಹಿಂದೂ ಕಕ್ಷಿದಾರರು ಯಶಸ್ವಿಯಾಗಿರುವುದನ್ನು ನ್ಯಾಯಾಧೀಶರು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಸ್ಲಿಮರು ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಅನ್ನುವುದಕ್ಕೆ ಪುರಾವೆಗಳಿರುವುದೂ ಗೊತ್ತಾಗಿದೆ.  ಬಹುಶಃ, ಮುಖ್ಯ ಪ್ರಶ್ನೆ ಎದುರಾಗುವುದೂ ಇಲ್ಲೇ. ಬಾಬರಿ ಮಸೀದಿಯ ಮೂರು ಗುಮ್ಮಟಗಳ ಪೈಕಿ ಮಧ್ಯದ ಗುಮ್ಮಟದ ಕೆಳಗಡೆ ಶ್ರೀರಾಮನ ಜನನವಾಗಿದೆಯೆಂಬುದು ಹಿಂದೂ ಕಕ್ಷಿಗಳ ವಾದ. 1992ರಲ್ಲಿ ಮಸೀದಿಯನ್ನು ಧ್ವಂಸಗೈದು ಶ್ರೀರಾಮದ ವಿಗ್ರಹವನ್ನು ಈ ಗುಂಬಜದ ಕೆಳಗಡೆ ಸ್ಥಾಪಿಸಲಾಗಿತ್ತು. ಆದರೆ, 
ಈ ನಿರ್ದಿಷ್ಟ ಜಾಗದಲ್ಲೇ ಶ್ರೀರಾಮನ ಜನನವಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸುಲಭ ಸಾಧ್ಯವಲ್ಲ. ಬಹುಶಃ, ಅಲಹಾಬಾದ್ ಹೈಕೋರ್ಟು 2010ರಲ್ಲಿ ಈ ನಿವೇಶನವನ್ನು ಮೂರು ಪಾಲು ಮಾಡಿ ಹಂಚಲು ನಿರ್ಧರಿಸಿದುದಕ್ಕೆ ಇದುವೇ ಕಾರಣ ಇರಬೇಕು. ಸುಪ್ರೀಮ್  ಕೋರ್ಟ್‍ನ ಮುಂದೆಯೂ ಇದೇ ಸಮಸ್ಯೆ ಎದುರಾಗಿರುವಂತಿದೆ. ಆದ್ದರಿಂದ, ಅದು ಸತ್ಯಾಂಶ, ಸಾಕ್ಷ್ಯ, ಮೌಖಿಕ ವಾದಗಳನ್ನಷ್ಟೇ ತನ್ನ ತೀರ್ಪಿಗೆ ಆಧಾರವಾಗಿ ಬಳಸಿಕೊಳ್ಳದೇ ಇತಿಹಾಸ, ಪುರಾತತ್ವ ಶಾಸ್ತ್ರ,  ಧರ್ಮ ಮತ್ತು ನಂಬಿಕೆಗಳನ್ನೂ ಆಧಾರವಾಗಿ ಪರಿಗಣಿಸಿರುವಂತಿದೆ. ಅದಕ್ಕಾಗಿ ವಾಲ್ಮೀಕಿ ರಾಮಾಯಣವನ್ನು ಅದು ಪರಿಶೀಲಿಸಿದೆ. ಸ್ಕಂದ ಪುರಾಣದ ವೈಷ್ಣವ ಕಾಂಡದಲ್ಲಿ ಆಧಾರವನ್ನು ಹುಡುಕಿದೆ.  ವೈಷ್ಣವ ಕಾಂಡದ ಶ್ಲೋಕಗಳನ್ನು ಎತ್ತಿಕೊಂಡು ರಾಮನ ಜನನ ಸ್ಥಾನವು ಯಾವ ದಿಕ್ಕಿನಲ್ಲಿ ಬರುತ್ತದೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಒಂದು ರೀತಿಯಲ್ಲಿ, ವಿವಾದಿತ ನಿವೇಶನವನ್ನು ನಿರ್ದಿಷ್ಟವಾಗಿ  ಇಂಥವರಿಗೇ ಎಂದು ಹಂಚಲು ಅಸಾಧ್ಯವೆಂದು ಅನಿಸಿದಾಗ ಹಿಂದೂ ಧರ್ಮೀಯರ ನಂಬಿಕೆ, ವಿಶ್ವಾಸ, ಆಚರಣೆಗಳನ್ನು ಹೆಚ್ಚುವರಿ ಪುರಾವೆಗಳಾಗಿ ಇಲ್ಲಿ ಅವಲಂಬಿಸುವ ಅನಿವಾರ್ಯತೆ ಎದುರಾಯಿತು  ಅನ್ನುವ ಭಾವ ಈ ತೀರ್ಪಿನಲ್ಲಿ ವ್ಯಕ್ತವಾಗಿದೆ. ಹಿಂದೂಗಳ ನಂಬಿಕೆ ಮತ್ತು ವಿಶ್ವಾಸಗಳನ್ನು ತೀರ್ಪಿನ ವೇಳೆ ಪರಿಗಣಿಸಲಾಗಿರುವುದನ್ನು ತೀರ್ಪಿನಲ್ಲೇ ಹೇಳಿರುವುದರಿಂದ ಇದು ಸ್ಪಷ್ಟ. ನಿಜವಾಗಿ, 
ಸುಪ್ರೀಮ್  ಕೋರ್ಟಿನ ತೀರ್ಪು 2019 ನವೆಂಬರ್ 9ರ ಶನಿವಾರದಂದು ಹುಟ್ಟಿಕೊಂಡು ಅಂದೇ ಅಂತ್ಯ ಕಾಣುವ ಒಂದಲ್ಲ. ಈ ತೀರ್ಪು ಮುಂದೆ ಇಂಥದ್ದೇ ವಿವಾದಗಳ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮತ್ತೆ  ಮತ್ತೆ ಉಲ್ಲೇಖಕ್ಕೆ ಒಳಗಾಗಬಹುದು. ನ್ಯಾಯಾಲಯದಲ್ಲಿ ನಡೆಯುವ ವಾದಗಳ ಸಂದರ್ಭದಲ್ಲಿ ಈ ತೀರ್ಪು ಆಧಾರವಾಗಿ ಬಳಸಲ್ಪಡಬಹುದು. ಅಲ್ಲದೆ, ಯಾವುದೇ ವಾದವನ್ನು ಮಾಡುವಾಗ ಅದಕ್ಕೆ ಪೂರಕವಾಗಿ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವುದು ಕೋರ್ಟು-ಕಲಾಪಗಳಲ್ಲಿ ಸಾಮಾನ್ಯ ರೂಢಿ. ಹೀಗಿರುವಾಗ,  ನಂಬಿಕೆ-ವಿಶ್ವಾಸಗಳ ಆಧಾರದಲ್ಲಿ ಕೋರ್ಟಿನಲ್ಲಿ ವಾದಿಸುವವರಿಗೆ ಮುಂದಿನ ದಿನಗಳಲ್ಲಿ ಈ ತೀರ್ಪು ಆಧಾರವಾಗಿ ಬಳಕೆಯಾಗದೇ? ಅಂಥ ಸಂದರ್ಭದಲ್ಲಿ ನ್ಯಾಯಾಲಯ ಏನು ಮಾಡಬಹುದು. ಅಂದಹಾಗೆ, 
ಬಾಬರಿ ಮಸೀದಿ ಇರುವ 2.77 ಎಕರೆ ನಿವೇಶನವೊಂದೇ ಈ ದೇಶದ ಏಕೈಕ ವಿವಾದಿತ ಪ್ರದೇಶ ಅಲ್ಲ. ಬಾಬರಿಯ ಮೇಲೆ ಹಕ್ಕು ಸ್ಥಾಪಿಸಿ ಕೋರ್ಟು ಮೆಟ್ಟಿಲೇರಿದ ಮಂದಿ ಇಂಥ ಇನ್ನಿತರ  ಸ್ಥಳಗಳ ಪಟ್ಟಿಗಳನ್ನೂ ಹೊಂದಿದ್ದಾರೆ. ಈ ಹಿಂದೆ ಅಸಂಖ್ಯ ಬಾರಿ ಅದನ್ನು ದೇಶದ ಮುಂದೆ ಸ್ಪಷ್ಟಪಡಿಸಿಯೂ ಇದ್ದಾರೆ. ಇವಲ್ಲದೇ, ಬಹುಧರ್ಮೀಯ ಈ ದೇಶದ ಉದ್ದಕ್ಕೂ ಇಂಥ ಇನ್ನಷ್ಟು ವಿವಾದಗಳು ಅನೇಕ ಇರಬಹುದು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮ ಈ ದೇಶವನ್ನು ಪ್ರವೇಶಿಸುವ ಮೊದಲೇ ಈ ದೇಶದಲ್ಲಿ ಅನೇಕ ವಿವಾದಗಳಿದ್ದುವು. ಬೌದ್ಧರು, ಜೈನರು ಇಲ್ಲಿದ್ದರು. ಅವರಿಗೂ  ಇಲ್ಲಿನ ಇತರ ಪಂಥಗಳಿಗೂ ನಡುವೆ ಘರ್ಷಣೆ ನಡೆದಿರುವುದು ಮತ್ತು ಬೌದ್ಧರು ನಿಧಾನಕ್ಕೆ ನೆಲೆ ಕಳಕೊಂಡಿರುವುದೂ ಇಲ್ಲಿನ ಇತಿಹಾಸವಾಗಿ ಗುರುತಿಗೀಡಾಗಿದೆ. ಅದೇಷ್ಟೋ ಬಸದಿಗಳು, ಬೌದ್ಧ  ವಿಹಾರಗಳು ಇನ್ನಾರದೋ ಪಾಲಾಗಿವೆ. ಮಾತ್ರವಲ್ಲ, ಅವು ಇನ್ನೊಂದು ಧರ್ಮದ ಆರಾಧನಾ ಕ್ಷೇತ್ರವಾಗಿ ಪರಿವರ್ತನೆಗೊಂಡದ್ದೂ ಇದೆ. ಒಂದುವೇಳೆ, ಸುಪ್ರೀಮ್ ಕೋರ್ಟಿನ ಈ ತೀರ್ಪನ್ನೇ  ಆಧಾರವಾಗಿಸಿಕೊಂಡು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸಗಳ ಹೆಸರಲ್ಲಿ ಹಕ್ಕು ಸ್ಥಾಪನೆಗೆ ಹೊರಡುವ ಪ್ರಯತ್ನಗಳು ಉಂಟಾದರೆ ಅದನ್ನು ಹೇಗೆ ನಿಭಾಯಿಸಬಹುದು? ಅಂದಹಾಗೆ,
ಈ ವಿಷಯದಲ್ಲಿ ಸುಪ್ರೀಮ್ ಕೋರ್ಟು ಯಾವ ತೀರ್ಪನ್ನು ನೀಡುತ್ತಿದ್ದರೂ ಅದು ಆಕ್ಷೇಪ ಮುಕ್ತವಾಗಿರುತ್ತಿರಲಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳುತ್ತಲೇ ಹಿಂದೂಗಳ ನಂಬಿಕೆ, ವಿಶ್ವಾಸವನ್ನು ತೀರ್ಪಿಗೆ  ಆಧಾರವಾಗಿಸಿಕೊಂಡಿರುವ ಕೋರ್ಟಿನ ನಡೆಯು ಇತ್ಯರ್ಥದ ಒಟ್ಟು ಗೌರವಕ್ಕೆ ಕುಂದುಂಟು ಮಾಡಿದೆ ಎನ್ನಬೇಕಾಗುತ್ತದೆ. ಅಷ್ಟಕ್ಕೂ, ಈ ತೀರ್ಪು ಆಕ್ಷೇಪ ಮುಕ್ತವೋ ಎಂಬ ಜಿಜ್ಞಾಸೆಯ ಆಚೆಗೆ ದೀರ್ಘ ವಿವಾದವೊಂದರಿಂದ ದೇಶವನ್ನು ಮುಕ್ತಗೊಳಿಸಿದ ಸಂದರ್ಭವೆಂಬ ನೆಲೆಯಲ್ಲಿ ಸುಪ್ರೀಮ್ ಕೋರ್ಟಿನ ಈ ತೀರ್ಪನ್ನು ಪರಿಗಣಿಸಬೇಕಾಗಿದೆ. ನಿಜವಾಗಿ, 
ಸುಪ್ರೀಮ್ ಕೋರ್ಟು ನೀಡುವ ಯಾವುದೇ ತೀ ರ್ಪು ಗೌರವಾರ್ಹವಾದುದು ಮತ್ತು ನ್ಯಾಯಾಂಗದ ದೃಷ್ಟಿಯಲ್ಲಿ ಅಂತಿಮವಾದುದು. ಇದರರ್ಥ ತೀರ್ಪು ಪ್ರಶ್ನಾತೀತ ಎಂದಲ್ಲ. ಪ್ರಶ್ನಿಸುತ್ತಲೇ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಬೇಕಾದ ಸಾಂವಿಧಾನಿಕ  ಪ್ರಬುದ್ಧತೆಯನ್ನು ಭಾರತೀಯರು ತೋರಬೇಕಾಗಿದೆ ಮತ್ತು ಬಾಬರಿ ತೀರ್ಪುಗೆ ಸಂಬಂಧಿಸಿ ಅದನ್ನು ಅತ್ಯಂತ ಗರಿಷ್ಠ ಮಟ್ಟದಲ್ಲಿ ಭಾರತೀಯರು ತೋರಿಸಿಯೂ ಇದ್ದಾರೆ. ಬಾಬರಿ ತೀರ್ಪಿನ ಬಳಿಕ ಈ  ದೇಶದ ಮುಸ್ಲಿಮರು ಮತ್ತು ಹಿಂದೂಗಳು ತೋರಿದ ಸಂಯಮ, ಕಾನೂನಿಗೆ ವ್ಯಕ್ತಪಡಿಸಿದ ನಿಷ್ಠೆ ಮತ್ತು ತೋರಿದ ಶಾಂತಿಪ್ರಿಯತೆಯು ಶ್ಲಾಘನಾರ್ಹವಾದುದು. ತೀರ್ಪು ತನ್ನ ಪರವಿದ್ದರೂ  ವಿರುದ್ಧವಿದ್ದರೂ ತಾನು ತೀರ್ಪನ್ನು ಗೌರವಿಸುತ್ತೇನೆ ಅನ್ನುವ ಪ್ರಬುದ್ಧ ಸಂದೇಶವನ್ನು ಈ ದೇಶದ ಮುಸ್ಲಿಮರು ರವಾನಿಸಿದ್ದಾರೆ. ವಿಜಯೋತ್ಸವ ಆಚರಿಸದೇ ಹಿಂದೂಗಳೂ ಸಂಯಮ ಪಾಲಿಸಿದ್ದಾರೆ.  ಇದುವೇ ಈ ದೇಶದ ಸೌಂದರ್ಯ. ಇದು ಸದಾಕಾಲ ಉಳಿಯಲಿ. ಅಶಾಂತಿ ಅಳಿಯಲಿ.

Monday, 11 November 2019

ಸಫಾ ಬೆಟ್ಟದಿಂದ ಅರಫಾ ಮೈದಾನದ ವರೆಗೆ



ಯಶಸ್ಸಿನ ದಾರಿ ಯಾವುದು?
ಈ ಪ್ರಶ್ನೆ ಸದಾ ಕಾಲ ಜೀವಂತ. ಜಗತ್ತಿನ ಶ್ರೇಷ್ಠ ಸಂಶೋಧಕರಲ್ಲಿ ಅನೇಕರು ಪ್ರವಾದಿ ಮುಹಮ್ಮದ್(ಸ)ರನ್ನು ಮೆಚ್ಚಿಕೊಂಡಿದ್ದು- ಹೃಸ್ವ ಅವಧಿಯಲ್ಲಿ ಅವರು ಸಾಧಿಸಿದ ಯಶಸ್ಸಿಗಾಗಿ. ಹಾಗಂತ, ಪ್ರವಾದಿವರ್ಯರಿಗೆ(ಸ) ಅನಾಯಾಸವಾಗಿ ಈ ಯಶಸ್ಸು ಒದಗಿ ಬಂದಿತ್ತು ಎಂದಲ್ಲ. ಅವರು ಯಶಸ್ಸನ್ನು ಹುಡುಕುತ್ತಾ ಹೊರಟರು. ಯಶಸ್ಸಿನ ತುತ್ತ ತುದಿಯನ್ನು ತಲುಪುದಕ್ಕೆ ಅಂದಿನ ಕಾಲದ ಸರ್ವ ವಿಧಾನಗಳನ್ನೂ ಬಳಸಿಕೊಂಡರು. ಇದರಲ್ಲಿ 3 ಪ್ರಮುಖ ಅಂಶಗಳಿವೆ:
1. ಸಂವಹನ, 2. ಮಾನವೀಯ ಕಾಳಜಿ, 3. ಒಪ್ಪಂದ ಅಥವಾ ಮೈತ್ರಿ.
ಸತ್ಯದ ಕಡೆಗೆ ಕರೆ ನೀಡುವವರಾಗಿ ನಿಮ್ಮನ್ನು ಕಳುಹಿಸಿದ್ದೇನೆ (133: 45-46) ಎಂದು ಪವಿತ್ರ ಕುರ್ ಆನ್ ಪ್ರವಾದಿಯವರನ್ನು ಪರಿಚಯಿಸಿದೆಯೇ ಹೊರತು ಆ ಸತ್ಯವನ್ನು ತಲುಪಿಸುವುದಕ್ಕೆ ಅವರು  ಯಾವೆಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಪಟ್ಟಿ ಮಾಡಿ ಹೇಳಲಿಲ್ಲ. ಅದು ಪ್ರವಾದಿಯವರ ಸ್ವಾತಂತ್ರ್ಯವಾಗಿತ್ತು. ಅಂದಿನ ಕಾಲದಲ್ಲಿ ಸತ್ಯದ ಕರೆಯನ್ನು ತಲಪಿಸುವುದಕ್ಕೆ ಯಾವೆಲ್ಲ  ಮಾಧ್ಯಮಗಳಿದ್ದುವೋ ಅವೆಲ್ಲವನ್ನೂ ಪ್ರವಾದಿ(ಸ) ಬಳಸಿದರು. ಸಫಾ ಬೆಟ್ಟ ಅದರ ಒಂದು ತುದಿಯಾದರೆ, ಮಕ್ಕಾದ 14 ಸಣ್ಣ ಪುಟ್ಟ ಮಾರುಕಟ್ಟೆಗಳು ಅದರ ಇನ್ನೊಂದು ತುದಿ. ರಾತ್ರಿ ಭೋಜನದ  ಮೂಲಕ, ಕಾಬಾದ ಬಾಗಿಲಿಗೆ ಸಂದೇಶ ನೇತು ಹಾಕುವ ಮೂಲಕ ಮತ್ತು ಮಕ್ಕಾಕ್ಕೆ ಬರುವ ವ್ಯಾಪಾರಿ ತಂಡಗಳ ಜೊತೆಗೆ ಸಂವಾದದ ಮೂಲಕ... ಹೀಗೆ ಅಂದಿನ ಲಭ್ಯ ಮಾಧ್ಯಮಗಳನ್ನು ಪ್ರವಾದಿ(ಸ)  ತನ್ನ ಗುರಿಯೆಡೆಗೆ ತಲುಪುವ ಪರಿಕರಗಳಾಗಿ ಬಳಸಿಕೊಂಡರು. ಇದೇ ವೇಳೆ, ಇನ್ನೊಂದು ಪ್ರಶ್ನೆಯೂ ಎದುರಾಯಿತು. ಸತ್ಯದ ಕರೆ ಕೊಡುವಾತ ಹೇಗಿರಬೇಕು ಮತ್ತು ಆತನ ಐಡೆಂಟಿಟಿ ಏನಿರಬೇಕು  ಎಂಬುದೇ ಆ ಪ್ರಶ್ನೆ. ಪ್ರವಾದಿ ಮುಹಮ್ಮದ್(ಸ)ರ ಯಶಸ್ಸಿನ ಗುಟ್ಟು ಇರುವುದೂ ಇಲ್ಲೇ. ತನ್ನ ಸತ್ಯವನ್ನು ಒಪ್ಪಿಕೊಂಡವರು ಮತ್ತು ಒಪ್ಪಿಕೊಳ್ಳದವರು ಎಂಬ ನೆಲೆಯಲ್ಲಿ ಸಮಾಜವನ್ನು ವಿಭಜಿಸಿ, ತನ್ನ  ಕರೆಯನ್ನು ಒಪ್ಪಿಕೊಂಡವರಿಗೆ ಮಾತ್ರ ನ್ಯಾಯ, ಕರುಣೆ, ಮಾನವೀಯ ಕಾಳಜಿಯನ್ನು ವಿತರಿಸುವ ಸಣ್ಣತನವನ್ನು ಪ್ರವಾದಿ ಎಂದೂ ತೋರಲಿಲ್ಲ. ಅವರು ಪ್ರದರ್ಶಿಸಿದ ಮಾನವೀಯ ಕಾಳಜಿ  ಅಮೋಘವಾದುದು. ಅವರು ದರಿದ್ರರ ಪರ, ಅನಾಥರ ಪರ (ಪವಿತ್ರ ಕುರ್ ಆನ್: 107) ಧ್ವನಿಯೆತ್ತಿದರು. ಅಬೂಜಹಲ್ ಮಕ್ಕಾದಲ್ಲಿ ಅತ್ಯಂತ ಪ್ರಬಲನಾಗಿದ್ದಾಗ ಮತ್ತು ತಾನು ಮಕ್ಕಾದಲ್ಲಿ ಏನೇನೂ  ಆಗಿಲ್ಲದಾಗಲೂ ಪ್ರವಾದಿಯವರು(ಸ) ನ್ಯಾಯ ವಂಚಿತರ ಪರ ನಿಂತರು. ತನಗೆ ಸಲ್ಲಬೇಕಾದ ಮೊತ್ತವನ್ನು ಅಬೂಜಹಲ್ ನೀಡುತ್ತಿಲ್ಲವೆಂದು ವ್ಯಕ್ತಿಯೋರ್ವನು ಬಂದು ಪ್ರವಾದಿಯವರ(ಸ) ಜೊತೆ  ದೂರಿಕೊಂಡಾಗ ಅವರು ತಕ್ಷಣ ಸ್ಪಂದಿಸಿದರು. ಅಬೂಜಹಲ್‍ನ ಬಳಿ ತೆರಳಿ ಹಣ ವಸೂಲಿ ಮಾಡಿಸಿದರು. ಹಾಗಂತ, ಹಾಗೆ ದೂರಿಕೊಂಡವ ಅವರ ಸತ್ಯದ ಕರೆಯನ್ನು ಸ್ವೀಕರಿಸಿದವನಾಗಿರಲಿಲ್ಲ. ಸತ್ಯದ  ಕರೆ ಕೊಡುವಾತ ದುರ್ಬಲರು, ದರಿದ್ರರು, ಹಕ್ಕು ವಂಚಿತರು ಮುಂತಾದವರ ಪರ ಅತ್ಯಂತ ಗಟ್ಟಿಯಾಗಿ ನಿಲ್ಲಬೇಕು ಮತ್ತು ಅವರ ಪರ ಬಹಿರಂಗವಾಗಿ ಮಾತಾಡಬೇಕು ಎಂಬುದು ಅವರ  ಇಂಗಿತವಾಗಿತ್ತು. ಇಂಥ ಸನ್ನಿವೇಶಗಳಲ್ಲಿ `ಸಂತ್ರಸ್ತರಿಂದ ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸಬಾರದು' (ಪವಿತ್ರ ಕುರ್ ಆನ್- 76: 9) ಎಂಬ ನಿಯಮವನ್ನು ಅವರು ಸ್ವಯಂ  ಹಾಕಿಕೊಂಡಿದ್ದರು. ಅವರ ಯಶಸ್ಸಿನಲ್ಲಿ ಈ ನಿಯಮಕ್ಕೆ ಬಹುದೊಡ್ಡ ಪಾತ್ರ ಇದೆ. ಅವರು ಸತ್ಯಕ್ಕೆ ವಿಧೇಯರಾಗಿರುವ ಜನಕೂಟವೊಂದನ್ನು ನಿರ್ಮಿಸ ಹೊರಟಿದ್ದರೇ ಹೊರತು ವ್ಯಕ್ತಿ ವಿಧೇಯತ್ವವನ್ನು  ತಿರಸ್ಕರಿಸಿದ್ದರು. ಬಡವರು, ದುರ್ಬಲರು, ಹಕ್ಕು ವಂಚಿತರು ಮತ್ತು ನ್ಯಾಯ ನಿರಾಕರಣೆಗೆ ಒಳಗಾದವರನ್ನೆಲ್ಲ ಅವರು ಆದರಿಸಿದರು. ಎಲ್ಲಿಯ ವರೆಗೆಂದರೆ, ಮದೀನಾದಲ್ಲಿ ವಿವಿಧ ಬುಡಕಟ್ಟು ಗುಂಪುಗಳೊಂದಿಗೆ ಸುಮಾರು 12 ರಷ್ಟು ಒಪ್ಪಂದಗಳನ್ನು ಮಾಡಿಕೊಂಡರು. ತನ್ನ ಸತ್ಯದ ಕರೆಯನ್ನು ಸ್ವೀಕರಿಸಲೇಬೇಕು ಮತ್ತು ಸ್ವೀಕರಿಸದೇ ಇರುವುದು ಯುದ್ಧಕ್ಕೆ ಕಾರಣವಾಗುತ್ತದೆ ಎಂಬುದು ಈ ಒಪ್ಪಂದಗಳ ಮೂಲಭೂತ ಷರತ್ತು ಆಗಿರಲಿಲ್ಲ. ಶಾಂತಿ, ನ್ಯಾಯ, ನೆಮ್ಮದಿಯ ಬದುಕನ್ನು ದೃಢಪಡಿಸಿಕೊಳ್ಳುವುದು ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ಪರಸ್ಪರ ಸಹಕಾರ ನೀಡುವುದು ಈ ಒಪ್ಪಂದಗಳ  ಮುಖ್ಯ ಉದ್ದೇಶವಾಗಿತ್ತು. ಸತ್ಯದ ಕರೆಗೆ ಸ್ಪಂದಿಸಬೇಕಾದರೆ ನ್ಯಾಯಪೂರ್ಣವಾದ ಮತ್ತು ಶಾಂತಿಯುತವಾದ ವಾತಾವರಣವೊಂದು ನೆಲೆಗೊಂಡಿರಬೇಕಾದುದು ಬಹಳ ಅಗತ್ಯ. ಪ್ರವಾದಿ(ಸ) ಅದನ್ನು ಚೆನ್ನಾಗಿ ಮನಗಂಡಿದ್ದರು. ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಆದ್ದರಿಂದ,
ಮಕ್ಕಾ ಪ್ರವೇಶಿಸಿದ ಯಶಸ್ವೀ ಪ್ರವಾದಿಯನ್ನಷ್ಟೇ ನಾವಿಂದು ನೋಡಬೇಕಾದುದಲ್ಲ. ಅರಫಾ ಬೆಟ್ಟವೇರಿದ ಪ್ರವಾದಿಯನ್ನೂ ನಾವು ನೋಡಬೇಕು. ಮದೀನದಲ್ಲಿ ಬುಡಕಟ್ಟುಗಳೊಂದಿಗೆ ಒಪ್ಪಂದ  ಮಾಡಿಕೊಂಡ ಪ್ರವಾದಿಯನ್ನೂ ನೋಡಬೇಕು. ಅರಫಾ ಮೈದಾನದಲ್ಲಿ ಅವರು ಮಾಡಿದ ವಿದಾಯ ಭಾಷಣವನ್ನೂ ನೋಡಬೇಕು. ಇಲ್ಲೆಲ್ಲಾ ಒಟ್ಟು ಮೊತ್ತವಾಗಿ ಸಿಗುವ ಪ್ರವಾದಿಯೇ ನಿಜವಾದ ಪ್ರವಾದಿ(ಸ). ಅಲ್ಲಿಂದ ಪಡಕೊಳ್ಳುವ ಸ್ಫೂರ್ತಿಯೇ ಯಶಸ್ಸಿಗೆ ದಾರಿ.