ಯಾವುದೇ ಹೋರಾಟವನ್ನು ದಮನಿಸುವುದಕ್ಕೆ ಪ್ರಭುತ್ವ ಸಾಮಾನ್ಯವಾಗಿ ಎರಡು ತಂತ್ರಗಳನ್ನು ಹೆಣೆಯುತ್ತದೆ.
Thursday, 1 October 2020
ಇದರಾಚೆಗೆ ಏನೂ ಹೇಳಬೇಕಿಲ್ಲ
Thursday, 10 September 2020
ಅವಮಾನಿತನಾಗಬೇಕಾದವ ಆರಾಮವಾಗಿ ಇರುವಂಥ ಸ್ಥಿತಿ ಏಕೆ ನಿರ್ಮಾಣವಾಯಿತು?
ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್‍ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನ ವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು ಮುಸ್ಲಿಮರನ್ನು. ಸರಕಾರವು ಆಸ್ತಿ ಜಪ್ತಿ ಮಾಡಲು ಹೊರಟಿರುವುದು ಮುಸ್ಲಿಮರದ್ದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಖಳನಾಯಕರಂತೆ ಬಿಂಬಿಸುತ್ತಿರುವುದೂ ಮುಸ್ಲಿಮರನ್ನು. ಒಂದೇ ಒಂದು ಪೋಸ್ಟ್ ಒಂಡಿದೀ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕು? ನಿಜವಾಗಿ ತಲೆ ತಗ್ಗಿಸಬೇಕಾದದ್ದು ನವೀನ್. ಕ್ಷಮೆ ಕೇಳಬೇಕಾದದ್ದೂ ಆತನೇ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದಕ್ಕೆ ಯಾರು ಕಾರಣ? ಇದನ್ನು ಸರಿಪಡಿಸುವುದು ಹೇಗೆ?
ಶೃಂಗೇರಿಯಲ್ಲಿ ಶಂಕಾರಾಚಾರ್ಯರ ಪುತ್ಥಳಿಗೆ ಹಸಿರು ಧ್ವಜವನ್ನು ಹಾಕಲಾದ ಘಟನೆ ಬೆಳಕಿಗೆ ಬಂದ ತಕ್ಷಣ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನವನ್ನು ಅಲ್ಲಿನ ಮಾಜಿ ಶಾಸಕರೇ ಮಾಡಿದ್ದಾರೆ. ಪೋಲೀಸರನ್ನು ಬೀದಿಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಿಲಿಂದ್‍ನ ಬಂಧನವಾಗಿದೆ. ನಿಜವಾಗಿ, ಮಿಲಿಂದ್‍ನ ಬಂಧನದ ಬಳಿಕ ಮುಸ್ಲಿಮರ ಪ್ರತಿಕ್ರಿಯೆ ಏನು ಅನ್ನುವುದು ಬಹಳ ಮುಖ್ಯವಾಗಿತ್ತು. ಆ ಪ್ರತಿಕ್ರಿಯೆಯೇ ಮುಸ್ಲಿಮರನ್ನು ಅಳೆಯುವ ಮಾನದಂಡವಾಗಿತ್ತು. ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆದುಕೊಂಡ ಮುಸ್ಲಿಮ್ ಯುವಕರ ವರ್ತನೆಯು ಶೃಂಗೇರಿ ಘಟನೆಯ ಸಂದರ್ಭದಲ್ಲಿ ಹಸಿಹಸಿಯಾಗಿತ್ತು. ಅಲ್ಲದೇ, ಮುಸ್ಲಿಮರೇ ಅಪರಾಧಿಗಳು ಎಂದು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಷರಾ ಬರೆದು, ಬೆದರಿಕೆಯನ್ನೂ ಹಾಕಿದ್ದರು. ಆದರೆ, ಶೃಂಗೇರಿಯ ಮುಸ್ಲಿಮರು ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸಿದರೆಂದರೆ, ಇವತ್ತಿಗೂ ಅಲ್ಲಿ ಮಿಲಿಂದ್ ಖಳನಾಯಕನೇ ಹೊರತು ಮುಸ್ಲಿಮರಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಮುಸ್ಲಿಮರು ಹೇಳಬೇಕಾದುದನ್ನೆಲ್ಲ ಹೇಳಿದರು. ಅಲ್ಲಿಗೆ ಮಾಜಿ ಶಾಸಕರ ಬಣ್ಣ ಬಯಲಾಯಿತು. ಇದು ಶಾಸಕರಿಗೆ ಮಾತ್ರ ಸಂಬಂಧಿಸಿದ ಸಂಗತಿ ಅಲ್ಲ. ಅವರನ್ನು ಬೆಂಬಲಿಸುವವರು, ಅವರ ಪರವಾಗಿ ನಿಲುವುಳ್ಳವರು ಮತ್ತು ಅವರು ಪ್ರತಿನಿಧಿಸುವ ಪಕ್ಷದ ಹಿತೈಷಿಗಳು... ಎಲ್ಲರ ಪಾಲಿಗೂ ಮುಜುಗರ ತಂದಿಕ್ಕಿದ ಪ್ರಕರಣ. ಆರೋಪಿ ಯಾರು ಎಂಬುದು ಬಯಲಾಗುವ ಮೊದಲೇ ಆರೋಪಿ ಇಂಥವನೇ ಮತ್ತು ಇಂತಿಂಥ ಧರ್ಮಕ್ಕೆ ಸೇರಿದವನೇ ಎಂದು ಕಡ್ಡಿ ಮುರಿದಂತೆ ಹೇಳುವುದು ಎಷ್ಟು ಸಮರ್ಥನೀಯ ಎಂಬ ಅವಲೋಕನಕ್ಕೆ ಅವರೆಲ್ಲರನ್ನೂ ಖಂಡಿತ ಈ ಪ್ರಕರಣ ಒಳಪಡಿಸಿರಬಹುದು. ರಾಜಕೀಯಕ್ಕಾಗಿ ಸಮಾಜದ ಆರೋಗ್ಯವನ್ನು ಕೆಡಿಸುವುದನ್ನು ನಾವೇಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಅವರೊಳಗೆ ಮೂಡಿರಬಹುದು. ಇಂಥದ್ದೊಂದು ಮುಜುಗರ ಅವರಲ್ಲಿ ಉಂಟಾಗಿದ್ದರೆ ಅದಕ್ಕೆ ಕಾರಣ ಮಿಲಿಂದ್ ಅಲ್ಲ, ಮುಸ್ಲಿಮರು. ಮಿಲಿಂದ್ ಅಥವಾ ನವೀನ್ ಒಂದು ದಾಳ ಮಾತ್ರ. ಇಂಥವರ ಸಂಖ್ಯೆ ಸಾಕಷ್ಟಿರಬಹುದು. ಇವರನ್ನು ಹೀರೋ ಮಾಡಬೇಕೇ ಅಥವಾ ಖಳರನ್ನಾಗಿ ಪರಿವರ್ತಿಸಬೇಕೇ ಎಂಬುದು ಪ್ರತಿಕ್ರಿಯಿಸುವವರ ಬುದ್ಧಿವಂತಿಕೆಯನ್ನು ಹೊಂದಿಕೊಂಡಿದೆ.
ನವೀನ್ ಅನ್ನುವ ಏಕ ವ್ಯಕ್ತಿ ನಾಲ್ವರು ಯುವಕರ ಸಾವಿಗೆ, ನೂರಾರು ಮಂದಿಯ ಬಂಧನಕ್ಕೆ ಮತ್ತು ಕೋಟ್ಯಂತರ ರೂಪಾಯಿಯ ಆಸ್ತಿ ಜಪ್ತಿಯ ಭೀತಿಯನ್ನು ತಂದೊಡ್ಡುವುದಕ್ಕೆ ಹೇಗೆ ಸಫಲನಾದ? ಇವತ್ತು ನವೀನ್ ಸುದ್ದಿಯು ಕೇಂದ್ರವಲ್ಲ. ಆತನ ಆಸ್ತಿಯ ಜಪ್ತಿಯೂ ಆಗಲ್ಲ. ಪುಟ್ಟದೊಂದು ಮೊತ್ರವನ್ನು ಪಾವತಿಸಿ ಆತ ಜಾಮೀನು ಪಡೆದು ಹೊರಬರಬಲ್ಲ. ಇಷ್ಟೇ ಸರಳವಾಗಿ ಜೈಲಿಗೆ ಹೋದ ಮುಸ್ಲಿಮ್ ಯುವಕರ ಬಗ್ಗೆ ಹೇಳುವುದಕ್ಕೆ ಸಾಧ್ಯವೇ? ಆ ಅರೆಕ್ಷಣದ ಆವೇಶಕ್ಕೆ ತೆರಬೇಕಾದ ಮೊತ್ತ ಎಷ್ಟು? ಬಂಧಿತ ಒಬ್ಬೊಬ್ಬ ವ್ಯಕ್ತಿಗೂ ಖರ್ಚು ಮಾಡಬೇಕಾದ ಹಣವೆಷ್ಟು? ಜೈಲಲ್ಲಿರುವವರ ಕುಟುಂಬ-ಪತ್ನಿ-ಮಕ್ಕಳು ಅನುಭವಿಸುತ್ತಿರುವ ಸಂಕಟಗಳ ಭಾರ ಎಷ್ಟು? ಈ ಬಂಧಿತರಿಗಾಗಿ ಖರ್ಚಾಗುವ ಲಕ್ಷಾಂತರ ರೂಪಾಯಿಗಳು, ಕಾನೂನು ಪ್ರಕ್ರಿಯೆ, ಕೋರ್ಟು-ಕಚೇರಿಯೆಂದು ವ್ಯಯವಾಗುವ ಮಾನವ ಶ್ರಮಗಳನ್ನು ಒಟ್ಟು ಸೇರಿಸಿದರೆ ಅದರ ಪ್ರಮಾಣ ಎಷ್ಟಾಗಬಹುದು? ಇವೆಲ್ಲ ಅನಿವಾರ್ಯವಾಗಿತ್ತೇ? ಪ್ರವಾದಿಯನ್ನು ಓರ್ವ ಅವಮಾನಿಸಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಅವಮಾನಿಸಿದವನೇ ಹೊರತು ಅವಮಾನಕ್ಕೊಳಗಾದವರಲ್ಲ. ಆದರೆ, ಪದೇ ಪದೇ ಈ ಸರಳ ಸತ್ಯಕ್ಕೆ ಸೋಲಾಗುತ್ತಿದೆ. ನಿಂದಿಸಿದವರು ಆರಾಮವಾಗಿಯೂ ಆರಾಮವಾಗಿ ಇರಬೇಕಾದವರು ಅವಮಾನಿತರಾಗಿಯೂ ಮತ್ತೆ ಮತ್ತೆ ಗುರುತಿಗೀಡಾಗುತ್ತಿದ್ದಾರೆ. ಇದೊಂದು ವೈಫಲ್ಯ ಮತ್ತು ಯಾವುದೇ ವೈಫಲ್ಯ ದೀರ್ಘಕಾಲ ವೈಫಲ್ಯವಾಗಿಯೇ ಮುಂದುವರಿಯುವುದು ಆ ಸಮುದಾಯದ ಪಾಲಿಗೆ ಅತ್ಯಂತ ಅಪಾಯಕಾರಿ. ಸದ್ಯ ಇಂಥದ್ದೊಂದು ನಿರ್ಣಾಯಕ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯ ಇದೆ. ಈ ಸಮುದಾಯವನ್ನು ಪ್ರಚೋದಿಸಿ, ಗಲಭೆಗೆ ಹಚ್ಚುವುದು ಸುಲಭ ಎಂಬ ಭಾವನೆ ಸಮಾಜಘಾತುಕ ಶಕ್ತಿಗಳಲ್ಲಿ ಬಲವಾಗತೊಡಗಿದೆ. ಶೃಂಗೇರಿ ಘಟನೆಯ ಹಿಂದೆ ಈ ಧೈರ್ಯವೇ ಕೆಲಸ ಮಾಡಿರುವಂತಿದೆ. ಮುಸ್ಲಿಮರನ್ನು ಪ್ರಚೋದಿಸುವುದು, ಬೀದಿಗಿಳಿಸುವುದು ಮತ್ತು ಒರಟಾಗಿ ವರ್ತಿಸುವಂತೆ ಬಲವಂತಪಡಿಸುವುದು ಈ ಸಮಾಜ ದ್ರೋಹಿ ಶಕ್ತಿಗಳ ಆರಂಭಿಕ ಹಂತ. ಅದರಲ್ಲಿ ಅವರು ಯಶಸ್ವಿಯಾಗತೊಡಗಿದಂತೆಯೇ ಎರಡನೇ ಹಂತ ಜಾರಿಗೆ ಬರುತ್ತದೆ. ಮುಸ್ಲಿಮರು ಹೀಗೆಯೇ ಎಂದು ಪದೇಪದೇ ಸಮಾಜಕ್ಕೆ ಸಂದೇಶವನ್ನು ಕೊಡುವುದು, ಮುಸ್ಲಿಮರು ಒರಟರು, ಅವರು ಕಾನೂನನ್ನು ಪಾಲಿಸದವರು ಎಂಬ ಭಾವ ಸಾರ್ವತ್ರಿಕವಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾಯಿತೆಂದರೆ, ಆ ಬಳಿಕದ ಮೂರನೇ ಹಂತವನ್ನು ಜಾರಿಗೊಳಿಸುವುದು ಸುಲಭ. ನವೀನ್ ಮತ್ತು ಮಿಲಿಂದ್ ಆ ಮೂರನೇ ಹಂತದ ದಾಳಗಳು.
ಸದ್ಯ ಮುಸ್ಲಿಮ್ ಸಮುದಾಯದ ಜವಾಬ್ದಾರಿ ಏನೆಂದರೆ, ಸಮಾಜ ಘಾತುಕ ಶಕ್ತಿಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದು. ಶೃಂಗೇರಿಯ ಮುಸ್ಲಿಮರು ಮಾಡಿರುವಂತೆ ಅತ್ಯಂತ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದು. ಯಾವುದೇ ಸಂದರ್ಭದಲ್ಲೂ ಆವೇಶಕ್ಕೋ ಪ್ರಚೋದನೆಗೋ ಒಳಗಾಗದೆಯೇ ಪ್ರತಿಕ್ರಿಯಿಸಲು ಕಲಿಯುವುದು. ಹಾಗಂತ, ಇವೇನೂ ಬಹಳ ಸವಾಲಿನ ಕೆಲಸ ಅಲ್ಲ. ಈ ಸಮುದಾಯಕ್ಕೆ ಗಲ್ಲಿಗೊಂದರಂತೆ ಮಸೀದಿಗಳಿವೆ. ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಧಾರ್ಮಿಕ, ಸಾಮಾಜಿಕ ಮುಖಂಡರಿದ್ದಾರೆ. ಸಂಘಟನೆಗಳಿವೆ. ಪ್ರತಿ ಶುಕ್ರವಾರ ಮಸೀದಿಗಳು ಸಮುದಾಯವನ್ನು ತಿದ್ದುವ ಕೇಂದ್ರವಾಗಿ ಬದಲಾಗಬೇಕು. ಧಾರ್ಮಿಕ ಸಂಘಟನೆಗಳು ಮುಸ್ಲಿಮ್ ಸಮುದಾಯದ ಗಲ್ಲಿಗಲ್ಲಿಗೆ ತೆರಳಿ ಅಲ್ಲಿಯ ಸಮಸ್ಯೆಗಳಿಗೆ ಕಣ್ಣಾಗುವ ಮತ್ತು ಗಾಂಜಾದಂಥ ವ್ಯಸನಗಳಿಗೆ ತುತ್ತಾಗಿರುವ ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮುಸ್ಲಿಮ್ ಸಮುದಾಯದ ಕೇರಿಗಳು ಮೂಲಭೂತ ಸೌಲಭ್ಯಗಳನ್ನು ಹೊಂದುವಂತೆ ಮಾಡುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವ ದೀರ್ಘಕಾಲಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಕೇಂದ್ರಗಳ ಸ್ಥಾಪನೆಗೆ, ಕೌಶಲ್ಯ ಅಭಿವೃದ್ಧಿಯಂತಹ ಯೋಜನೆಗಳಿಗೆ ಕಾಳಜಿ ತೋರಬೇಕು. ಆಯಾ ಪ್ರದೇಶಕ್ಕೆ ತಕ್ಕಂತೆ ಅತ್ಯಂತ ಪರಿಣಾಮಕಾರಿ ನೀಲನಕಾಶೆಯನ್ನು ತಯಾರಿಸಿ ಮುಂದಡಿಯಿಟ್ಟರೆ ಯಶಸ್ಸು ಅಸಾಧ್ಯವಿಲ್ಲ. ಒಂದುವೇಳೆ, ಇಂಥ ದೂರದೃಷ್ಟಿಯಿಂದ ಸಮುದಾಯ ಸಂಘಟನೆಗಳು, ನಾಯಕರು ಮ್ತು ಧಾರ್ಮಿಕ ಮುಖಂಡರು ಕಾರ್ಯಪ್ರವೃತ್ತವಾದರೆ ಓರ್ವ ನವೀನ್ ಬಿಡಿ, ನೂರಾರು ನವೀನ್‍ರೂ ಈ ಸಮುದಾಯಕ್ಕೆ ಸವಾಲು ಆಗಲಾರರು. ಅವರಿಗೆ ಯಶಸ್ಸು ಸಿಗಲಾರದು. ಪ್ರವಾದಿಯನ್ನು ನಿಂದಿಸಿದರೆ ಅದಕ್ಕೆ ಪ್ರತಿಯಾಗಿ ಪ್ರವಾದಿ ಸಂದೇಶವನ್ನು ಸಾರುವ ಲಕ್ಷಾಂತರ ಯುವಕರು ತಯಾರಾಗಬಹುದು. ಅವರನ್ನು ಕಂಡು ನವೀನ್ ಮತ್ತು ಅವನ ಹಿಂದಿರುವಂಥ ಸಮಾಜ ಘಾತುಕರು ಅವಮಾನದಿಂದ ತಲೆ ತಗ್ಗಿಸುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಇಂದಿನ ತುರ್ತು ಅಗತ್ಯ.
Wednesday, 19 August 2020
ಹಾಗೇನಾದರೂ ಆಗಿಬಿಟ್ಟರೆ ಅವರು ಹೂಡಿರುವ ಕೋಟ್ಯಂತರ ರೂಪಾಯಿಯ ಪಾಡೇನು?
ಕೊರೋನಾ ಏನು, ಅದರಿಂದ ಹಾನಿ ಎಷ್ಟು ಮತ್ತು ನಾಗರಿಕರು ಏನೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಂಬಲರ್ಹ ಹಾಗೂ ಅಧಿಕೃತ ಮಾಹಿತಿಗಳಿಗಿಂತ ನೂರು ಪಟ್ಟು ಹೆಚ್ಚು ನಂಬಲನರ್ಹ ಮತ್ತು ಅನಧಿಕೃತ ಮಾಹಿತಿಗಳು ಸಾರ್ವಜನಿಕವಾಗಿ ಇವತ್ತು ಲಭ್ಯವಿವೆ. ಕೊರೋನಾ ಸುತ್ತ ಹುಟ್ಟು ಹಾಕಲಾಗಿರುವ ಭಯವೇ ರೋಗಿಗಳ ಪಾಲಿಗೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂಬ ಮಾತು ತಜ್ಞರಿಂದಲೇ ಕೇಳಿ ಬರುತ್ತಿದೆ. ಕೊರೋನಾ ಇವತ್ತು ಬಿಂಬಿಸಲಾಗುತ್ತಿರುವಷ್ಟು ಅಪಾಯಕಾರಿಯೇ, ಔಷಧಕ್ಕೆ ಬಗ್ಗದಷ್ಟು ಮಾರಣಾಂತಿಕವೇ ಅಥವಾ ಅದನ್ನು ಅಗತ್ಯಕ್ಕಿಂತ ಹೆಚ್ಚು ಉಬ್ಬಿಸಲಾಗುತ್ತಿದೆಯೇ ಎಂಬಲ್ಲಿಂದ ಹಿಡಿದು, ಕೊರೋನಾದ ನೆಪದಲ್ಲಿ ಮೆಡಿಕಲ್ ಮಾಫಿಯಾ ಸಕ್ರಿಯವಾಗಿದೆಯೇ ಎಂಬಲ್ಲಿ ವರೆಗೆ ಸಾರ್ವಜನಿಕ ಚರ್ಚೆಗಳೂ ಅಲ್ಲಲ್ಲಿ ನಡೆಯತೊಡಗಿವೆ. ಹಾಗಂತ,
ಇಂಥ ಬೆಳವಣಿಗೆಗಳು ಶೂನ್ಯದಿಂದ ಹುಟ್ಟಿಕೊಂಡಿರುವುದಲ್ಲ. ದೇಶದಾದ್ಯಂತದ ವಿವಿಧ ಪ್ರಕರಣಗಳು ಇಂಥ ಅನುಮಾನಗಳಿಗೆ ಪ್ರೇರಣೆಯನ್ನು ಒದಗಿಸುತ್ತಿವೆ.
ಕೊರೋನಾ ಪುರಾತನ ಕಾಲದ ಕಾಯಿಲೆಯಲ್ಲ. 2019 ಡಿಸೆಂಬರ್‍ನಲ್ಲಿ ಚೀನಾ ಈ ಕಾಯಿಲೆಯ ಉಪಸ್ಥಿತಿಯ ಕುರಿತಂತೆ ಅಧಿಕೃತವಾಗಿ ಘೋಷಿಸುವಾಗ ಈ ಜಗತ್ತಿನ 600 ಕೋಟಿ ಜನಸಂಖ್ಯೆಯನ್ನು ಒಂದೇ ಬಾರಿ ಸಾಯಿಸಿ ಬಿಡಬಹುದಾದಷ್ಟು ಅಣುಬಾಂಬುಗಳನ್ನು ಕೇವಲ ಒಂದೇ ರಾಷ್ಟ್ರ ತನ್ನ ಗೋದಾಮಿನಲ್ಲಿ ಪೇರಿಸಿಟ್ಟಿರುವ ವಾಸ್ತವ ಕೂಡ ಈ ಜಗತ್ತಿಗೆ ಗೊತ್ತಿತ್ತು. ಮಾನವ ಹತ್ಯೆಯ ಹೊರತಾಗಿ ಈ ಅಣುಬಾಂಬುಗಳಿಗೆ ಬೇರೆ ಯಾವ ಉದ್ದೇಶವೂ ಇಲ್ಲ. ಈ ಅಣುಬಾಂಬಿಗೆ ಬಲಿಯಾಗುವವರು ಸಾಯಿಸಲೇಬೇಕಾದ ಅಪರಾಧಿಗಳೂ ಅಲ್ಲ. ಯಾರದೋ ಹುಚ್ಚಿಗೆ, ತಪ್ಪಿಗೆ ಅಥವಾ ಅಹಂಕಾರಕ್ಕೆ ಪ್ರತಿಯಾಗಿ ಈ ಅಣುಬಾಂಬುಗಳು ಇನ್ನಾರನ್ನೋ ಸಾಯಿಸುತ್ತವೆ. ಕೊರೋನಾವೂ ಅಷ್ಟೇ. ಯಾವುದೋ ಪ್ರಯೋಗಾಲಯದ ತಪ್ಪಿನಿಂದಲೋ ಅಥವಾ ಪ್ರಕೃತಿ ಸಹಜವಾಗಿಯೋ ಹುಟ್ಟಿಕೊಂಡ ಕೊರೋನಾವು ಇವತ್ತು ಅಪರಾಧಿ, ನಿರಪರಾಧಿ ಎಂಬ ವರ್ಗೀಕರಣವನ್ನೇ ಮಾಡದೇ ಸರ್ವರನ್ನೂ ಕಾಡತೊಡಗಿದೆ. ದುರಂತ ಏನೆಂದರೆ,
ಜಗತ್ತಿನ ಅಷ್ಟೂ ಮಂದಿಯನ್ನು ಸಾಯಿಸಿಬಿಡಬಹುದಾದಷ್ಟು ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರುವ ಜಗತ್ತೇ ಯಕಶ್ಚಿತ್ ಒಂದು ಜ್ವರಕ್ಕೆ ಮಂಡಿಯೂರಿ ಬಿಟ್ಟಿರುವುದು.
ಇದು ಪುರಾತನ ಕಾಲವಲ್ಲ. ಚೀನಾದ ಯಾವುದೋ ಭೂಗರ್ಭದಲ್ಲಿ ನಡೆಯುವ ಸಂಶೋಧನೆಯನ್ನು ಅಲ್ಲಿಂದ ಲಕ್ಷಾಂತರ ಕಿಲೋಮೀಟರ್ ದೂರದ ಇನ್ನಾವುದೋ ಪ್ರದೇಶದಲ್ಲಿ ನಿಂತು ಗ್ರಹಿಸಬಹುದಾದ ಕಾಲ. ಕೊರೋನಾ 20ನೇ ಶತಮಾನದ ಕಾಯಿಲೆ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ಗಳ ಕಾಲಕ್ಕೆ ಹೋಲಿಸಿದರೆ, ಕೊರೋನಾದ ಕಾಲ ಅತ್ಯಂತ ಆಧುನಿಕವಾದುದು. ಕೊರೋನಾ ಕಾಯಿಲೆಯ ಲಕ್ಷಣಗಳು ಏನೇನು ಮತ್ತು ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದರೆ ಅದನ್ನು ಅನ್ಯಗೊಳಿಸಬಹುದು ಎಂಬ ಮಾಹಿತಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಜನರಿಗೆ ತಲುಪಿಸಬಹುದಾದಷ್ಟು ತಂತ್ರಜ್ಞಾನಗಳು ಆವಿಷ್ಕಾರಗೊಂಡಿರುವ ಕಾಲ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ನಂಥ ಸಾಂಕ್ರಾಮಿಕ ರೋಗಗಳು ಈ ಜಗತ್ತಿನ ಮೇಲೆ ದಾಳಿ ಮಾಡಿದ ಕಾಲದಲ್ಲಿ ಈ ಅವಕಾಶಗಳು ಇರಲಿಲ್ಲ. ಒಂದು ಪ್ರದೇಶಕ್ಕೆ ಪ್ಲೇಗ್ ಬಂದಿದೆಯೆಂಬುದು ಇನ್ನೊಂದು ಪ್ರದೇಶಕ್ಕೆ ತಿಳಿಯುವುದಕ್ಕೆ ಬೇಕಾದ ವ್ಯವಸ್ಥೆಯಿರಲಿಲ್ಲ. ಪ್ಲೇಗ್‍ನ ಲಕ್ಷಣಗಳೇನು ಮತ್ತು ಅದಕ್ಕಿರುವ ಔಷಧಿಗಳೇನು ಎಂಬಂತಹ ಬಹುಮುಖ್ಯ ಮಾಹಿತಿಗಳೂ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದಾರಿಗಳಿರಲಿಲ್ಲ. ಆದರೆ ಕೊರೋನಾ ಹಾಗಲ್ಲ. ಕೊರೋನಾ ವೈರಸ್‍ನ ಚಿತ್ರದಿಂದ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರ ವರೆಗೆ ಮತ್ತು ಪಿಪಿಇ ಕಿಟ್ ಧರಿಸಿದ ಶುಶ್ರೂಕರಿಂದ ಆರಂಭವಾಗಿ ಮನೆ ಮದ್ದುಗಳ ಪಟ್ಟಿಯ ವರೆಗೆ ಪ್ರತಿಯೊಂದೂ ಜನರ ಬೆರಳಿಗೆ ದಕ್ಕುವ ಸ್ಥಿತಿಯಿದೆ. ಹೀಗಿದ್ದೂ ಕೊರೋನಾ ಕುರಿತು ಸತ್ಯಕ್ಕಿಂತ ಭೀತಿಯೇ ಮತ್ತು ಅವಾಸ್ತವವೇ ಮೇಲುಗೈ ಪಡೆದಿರಲು ಕಾರಣವೇನು? ಮೃತದೇಹದೊಂದಿಗೆ ಅತ್ಯಂತ ಅನಾಗರಿಕವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯೇನು? ಅಂದಹಾಗೆ,
ಕೊರೋನಾ ಪೀಡಿತರನ್ನು ಮತ್ತು ಕೊರೋನಾದಿಂದಾಗಿ ಸಾವಿಗೀಡಾದವರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿರುವುದು ಜನಸಾಮಾನ್ಯರಲ್ಲ. ಪಿಪಿಇ ಕಿಟ್ ಧರಿಸಿರುವ ಮತ್ತು ಕೊರೋನಾದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರುವವರೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೊಂದು ಒಗಟು. ಈ ಒಗಟನ್ನು ಬಿಡಿಸುವುದು ಹೇಗೆ? ಜನರನ್ನು ಎಜುಕೇಟ್ ಮಾಡಬೇಕಾಕಿದ್ದ ತಂತ್ರಜ್ಞಾನಗಳು, ಅದಕ್ಕಿಂತಲೂ ಹೆಚ್ಚಾಗಿ ಭೀತಿಗೆ ಮತ್ತು ಅಸತ್ಯಗಳ ಪ್ರಸಾರಕ್ಕೆ ಬಳಕೆಯಾಗುತ್ತಿವೆಯೇ ಎಂಬುದನ್ನು ಈ ದುರಿತ ಕಾಲದಲ್ಲಿ ವಿಶ್ಲೇಷಿಸಬೇಕಿದೆ. ಅದೇವೇಳೆ,
ಸಾರ್ವಜನಿಕವಾಗಿ ಇರುವ ಭೀತಿಗೂ ಕೊರೋನಾಕ್ಕೂ ನಡುವೆ ಏನು ಸಂಬಂಧ ಮತ್ತು ಎಷ್ಟು ವಾಸ್ತವ ಅನ್ನುವ ಚರ್ಚೆ-ಸಂವಾದಗಳು ಆರಂಭಗೊಂಡಿರುವುದು ಸ್ವಾಗತಾರ್ಹ. ಇದು ಮುಂದುವರಿಯಬೇಕು. ಕೊರೋನಾ ಪ್ರಕೃತಿ ಸಹಜವೋ ಅಥವಾ ಮಾನವ ಎಡವಟ್ಟೋ ಅನ್ನುವ ಸಂದೇಹದಂತೆಯೇ ಕೊರೋನಾ ಕಾಲದ ಬೆಳವಣಿಗೆಗಳ ಸುತ್ತಲೂ ಸಂದೇಹವೊಂದನ್ನು ಇಟ್ಟುಕೊಳ್ಳುವುದು ಮತ್ತು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವುದು ಅತ್ಯಂತ ಅಗತ್ಯ. ಈ ಕಾಯಿಲೆಯು ಸಾಮುದಾಯಿಕ ಹರಡುವಿಕೆಯನ್ನು ಪ್ರಾರಂಭಿಸಿದೆ. ಹಾಗೆಯೇ ಅತ್ಯಂತ ದುಬಾರಿ ಯಂತ್ರಗಳು ಆಸ್ಪತ್ರೆಗಳ ಕೋಣೆ ಸೇರಿಕೊಳ್ಳತೊಡಗಿವೆ. ಕೊರೋನಾ ಪರೀಕ್ಷೆಯ ದೃಷ್ಟಿಯಿಂದ ಅವುಗಳು ಎಷ್ಟು ಅಗತ್ಯವೋ ಆ ಯಂತ್ರಕ್ಕೆ ಸುರಿದಿರಬಹುದಾದ ಮೊತ್ತವನ್ನು ರೋಗಿಗಳಿಂದ ಭರಿಸಿಕೊಳ್ಳಬೇಕಾದುದೂ ಆಸ್ಪತ್ರೆಗಳ ಅಗತ್ಯ. ನಿಜವಾಗಿ,
ಈ ಜಗತ್ತಿನ ಎಲ್ಲ ಕಾಯಿಲೆಗಳೂ ಮಾನವ ದ್ರೋಹಿಯಾದುದು ಆ ಕಾಯಿಲೆಗಳಿಗಿಂತ ಹೆಚ್ಚಾಗಿ ಆ ಕಾಯಿಲೆಯ ಹೆಸರಲ್ಲಿ ನಡೆಯುವ ಪರೀಕ್ಷೆಗಳು, ಔಷಧಗಳು ಮತ್ತು ಅದಕ್ಕೆ ತಗಲುವ ದುಬಾರಿ ವೆಚ್ಚಗಳಿಂದಾಗಿದೆ. ಕೊರೋನಾಕ್ಕೆ ಮದ್ದು ಕಂಡು ಹಿಡಿಯುವ ಪೈಪೋಟಿ ಇವತ್ತು ಜಾಗತಿಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಇದೊಂದು ಬಹು ದುಬಾರಿ ಪ್ರಕ್ರಿಯೆ. ಸಂಶೋಧನೆಗೆಂದು ಕೋಟಿ ಕೋಟಿ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಸಂಶೋಧಿತ ಔಷಧವನ್ನು ಜನರ ಮೇಲೆ ಪ್ರಯೋಗಿಸುವುದು, ಔಷಧ ಪರಿಣಾಮಕಾರಿಯೆಂದು ದೃಢಪಡಿಸಿಕೊಳ್ಳುವುದು ಹಾಗೂ ಔಷಧ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು-ಇತ್ಯಾದಿ ಪ್ರಕ್ರಿಯೆಗಳಿಗೆ ದೀರ್ಘ ಸಮಯ ಹಿಡಿಯುತ್ತದೆ. ಇದು ಕೇವಲ ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿದ ಔಷಧವೂ ಇಂಥ ಪ್ರಕ್ರಿಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಲೇಬೇಕು. ಒಂದುವೇಳೆ,
ಇಂಥ ಸಂಶೋಧನಾ ಪ್ರಕ್ರಿಯೆಗಳು ನಡೆಯುವ ಸಂದರ್ಭದಲ್ಲೇ ಆ ಕಾಯಿಲೆಯು ಪ್ರಾಕೃತಿಕ ಕಾರಣದಿಂದಲೋ ಅಥವಾ ನಾಟಿ ಔಷಧಗಳಿಗೆ ಶರಣಾಗಿಯೋ ಕಾಣೆಯಾದರೆ, ಈ ಸಂಶೋಧನೆಗೆ ಸುರಿದ ಕೋಟಿಗಟ್ಟಲೆ ರೂಪಾಯಿಗಳ ಪಾಡೇನು? ಇದು ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಉದ್ಭವವಾಗಿರುವ ಪ್ರಶ್ನೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿ ಮಾಡಲಾಗುವ ಸಂಶೋಧನೆಯೂ ಇಂಥz್ದÉೂಂದು ಅಪಾಯವನ್ನು ಎದುರಿಸಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಒಂದೋ ಈ ಔಷಧ ಸಂಶೋಧನಾ ನಿರತ ರಾಷ್ಟ್ರಗಳು ಆ ಕಾಯಿಲೆಯನ್ನು ಮತ್ತಷ್ಟು ಅವಧಿ ವರೆಗೆ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು ಅಥವಾ ತಾವು ಸಂಶೋಧನೆಗೆಂದು ಹೂಡಿಕೆ ಮಾಡಿರುವ ಹಣದ ಬಗ್ಗೆ ಚಿಂತೆ ಬಿಡಬೇಕು. ಆದ್ದರಿಂದಲೇ, ಇವತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆ ಅ ನುಮಾನ ಮೂಡುವುದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಮತ್ತು ಹಳೆ ಕಾಯಿಲೆಗಳು ಮತ್ತಷ್ಟು ವೃದ್ಧಿಗೊಂಡು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದ ನ್ನು ಸಂದೇಹದಿಂದ ನೋಡುವುದು. ಇವೆಲ್ಲ ಸಹಜವೇ, ಅಸಹಜವೇ? ಔಷಧ ಮಾಫಿಯಾ ಇದರ ಹಿಂದಿರಬಹುದೇ? ಕೊರೋನಾದ ಸುತ್ತ ನಡೆಯುತ್ತಿರುವ ಬೆಳವಣಿಗೆಯನ್ನು ಇದೇ ಕನ್ನಡಕವನ್ನಿಟ್ಟು ನೋಡಬಹುದೇ?
ಚರ್ಚೆಗಳು ನಡೆಯಲಿ.
Friday, 10 July 2020
ಆಕ್ಸಿಜನ್ ಸೆಂಟರ್ ಆದ ಮಸೀದಿ, ಕ್ವಾರಂಟೈನ್ ಕೇಂದ್ರವಾದ ಹಜ್ ಭವನ: ಸುಳ್ಳೇ ಒಮ್ಮೆ ಶರಣಾಗು
ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್‍ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್‍ದೇವ್‍ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ. ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು. ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್‍ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್‍ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು. ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ. ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ ಮಂದಿಯನ್ನು ಇವತ್ತು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ ಶಾಹೀನ್‍ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.
ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,
ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು. ಆದರೆ,
ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್‍ದೇವ್‍ರ ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.
ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.
Wednesday, 1 July 2020
ಪ್ರಶ್ನೆಗೊಳಗಾಗಬೇಕಾದದ್ದು ಯಾರು- ಪರವಾನಿಗೆ ಕೊಟ್ಟ ಸರಕಾರವೋ ಅಲ್ಲ, ಮಾಂಸವೃತ್ತಿಯಲ್ಲಿರುವ ಬಡಪಾಯಿಗಳೋ?
ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಮೂರೂ ಘಟನೆಗಳು ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟಕ್ಕೆ ಸಂಬಂಧಿಸಿದವು. ಹಾವೇರಿಯ ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ಮಂಗಳೂರಿಗೆ ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದ ಮುಹಮ್ಮದ್ ಹನೀಫ್ ಎಂಬವರನ್ನು ಅವರದೇ ವಾಹನಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ನಡೆದ ಬಳಿಕ ಇನ್ನೆರಡು ಇಂಥದ್ದೇ ಘಟನೆಗಳು ನಡೆದುವು. ಇದರಲ್ಲಿ ಒಂದು ಸುಳ್ಯದಲ್ಲಿ ನಡೆದರೆ, ಇನ್ನೊಂದು ಮಂಗಳೂರಿನಲ್ಲಿ. ಮಂಗಳೂರಿನ ಪ್ರಾಣಿ ವಧಾಗೃಹದಿಂದ ಪಕ್ಕದ ಕಂಕನಾಡಿ ಮತ್ತು ಜೆಪ್ಪು ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಶೀದ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ರಿಕ್ಷಾ ಟೆಂಪೋಗೆ ಹಾನಿ ಮಾಡಲಾಗಿದೆ.
ಇದೊಂದು ಬಗೆಯ ಕ್ರೌರ್ಯ. ವ್ಯವಸ್ಥೆಗೆ ಒಡ್ಡುವ ಸವಾಲು. ಕಾನೂನುಬದ್ಧ ವೃತ್ತಿಯನ್ನು ಅಪರಾಧಿ ಕೃತ್ಯದಂತೆ ಮತ್ತು ಆ ವೃತ್ತಿಯಲ್ಲಿ ತೊಡಗುವವರನ್ನು ಭೀತಿಗೆ ತಳ್ಳುವುದಕ್ಕೆ ಮಾಡುವ ಹುನ್ನಾರ. ಮಂಗಳೂರಿನಲ್ಲಿರುವ ವಧಾಗೃಹಕ್ಕೆ ಪರವಾನಿಗೆ ಕೊಟ್ಟಿರುವುದು ನಿರ್ದಿಷ್ಟ ಧರ್ಮವೊಂದರ ಧರ್ಮಗುರುಗಳಲ್ಲ, ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದಾರೆ. 8 ಮಂದಿ ಶಾಸಕರ ಪೈಕಿ 7 ಮಂದಿಯೂ ಬಿಜೆಪಿಯವರೇ. ರಾಜ್ಯದಲ್ಲಿ ಬಿಜೆಪಿಯದ್ದೇ ಆಡಳಿತವಿದೆ. ಮಂಗಳೂರು ನಗರದ ಸ್ಥಳೀಯಾಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟಿದ್ದೂ ಜಾನುವಾರು ಮತ್ತು ಮಾಂಸ ಸಾಗಾಟಗಾರರ ಮೇಲೆ ಹಲ್ಲೆ ನಡೆಯುವುದೆಂದರೆ ಏನರ್ಥ? ಯಾಕೆ ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸುತ್ತಿಲ್ಲ? ಒಂದುಕಡೆ ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಣಿಕೆಗೆ ಪರವಾನಿಗೆಯನ್ನು ಕೊಡುವುದು ಮತ್ತು ಇನ್ನೊಂದು ಕಡೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಮೌನವಾಗುವುದು- ಈ ದ್ವಂದ್ವವೇಕೆ?
ಮಾಂಸಾಹಾರದ ಬಗ್ಗೆ ಒಂದು ವರ್ಗದ ಜನರಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. 6 ಕೋಟಿ ಕನ್ನಡಗಿರುವ ಈ ರಾಜ್ಯದಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಭಿನ್ನ. ಆಹಾರ ಕ್ರಮಗಳೂ ಭಿನ್ನ. ರಾಜಕೀಯ ಒಲವು, ಸಂಸ್ಕೃತಿ, ಧರ್ಮ, ರೂಢಿ-ಸಂಪ್ರದಾಯಗಳೂ ಏಕರೂಪದ್ದಲ್ಲ. ಈ ದೇಶದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಮತ್ತು ಅದರ ಪರ ಜನಜಾಗೃತಿಯನ್ನು ಮೂಡಿಸುವ ಸ್ವಾತಂತ್ರ್ಯ ಇರುವಂತೆಯೇ ಮಾಂಸಾಹಾರವನ್ನು ಸೇವಿಸುವ ಮತ್ತು ಆ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವ ಸ್ವಾತಂತ್ರ್ಯವೂ ಇದೆ. ಇದು ಪ್ರತಿಯೊಬ್ಬರಿಗೂ ಸಂವಿಧಾನ ಒದಗಿಸಿರುವ ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಲ್ಲಿ ಬದಲಾವಣೆ ತರುವುದಕ್ಕೆ ಅದರದ್ದೇ ಆದ ದಾರಿಯಿದೆ. ಅದು ಬೀದಿ ದುಷ್ಕರ್ಮದಿಂದ ಆಗಬೇಕಾದುದಲ್ಲ. ಈ ದೇಶದಲ್ಲಿ ಮದ್ಯಪಾನದ ವಿರುದ್ಧ ಹಲವು ಚಳವಳಿಗಳಾಗಿವೆ. ಪಾನ ನಿಷೇಧವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ವರ್ಷದ ಹಿಂದೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ವೀಣಾ ಭಟ್ ಅವರು ಮುಂಚೂಣಿಯಲ್ಲಿ ನಿಂತು ಈ ಹೋರಾಟಕ್ಕೆ ಜೀವ ತುಂಬಿದ್ದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಆ ಬಳಿಕವೂ ಈ ಹೋರಾಟ ಮುಂದುವರಿದಿದೆ. ಆದರೆ, ಸರಕಾರ ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನೊಡ್ಡಿ ಈ ಹೋರಾಟದಲ್ಲಿದ್ದ ಯಾರೂ ಮದ್ಯಸಾಗಾಟ ವಾಹನಗಳನ್ನು ಹಾನಿಗೈದ ಘಟನೆ ನಡೆದಿಲ್ಲ. ಚಾಲಕರ ಮೇಲೆ ದೌರ್ಜನ್ಯ ಎಸಗಿದ್ದೂ ಇಲ್ಲ. ಹಾಗಂತ, ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕೆಂಬುದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಮಹಿಳೆಯರ ಮಾತ್ರ ಬೇಡಿಕೆಯಾಗಿರಲಿಲ್ಲ. ಈ ರಾಜ್ಯದ ಎಲ್ಲ ಧರ್ಮದ ಧರ್ಮಗುರುಗಳು ಕೂಡ ಈ ಬೇಡಿಕೆಯ ಪರವಾಗಿ ಮಾತಾಡಿದ್ದರು. ಈ ಹೋರಾಟಕ್ಕೆ ಸ್ವಾಮೀಜಿಯವರೇ ಚಾಲನೆ ನೀಡಿದ್ದೂ ಇದೆ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯಪಾವನವು ಆತ್ಮಹತ್ಯೆ, ಹಲ್ಲೆ ಮತ್ತು ಹತ್ಯಾ ಪ್ರಕರಣಗಳಿಗೆ ಪ್ರಚೋದನೆ ನೀಡುತ್ತಿವೆ ಎಂಬುದಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ ತಜ್ಞರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಬೇಡಿಕೆಯನ್ನು ಬೆಂಬಲಿಸುವ ದೊಡ್ಡದೊಂದು ಜನಸಮುದಾಯವೇ ಇದೆ. ಆದರೂ ಈ ಗುಂಪು ಹಿಂಸೆಗೆ ಇಳಿದಿಲ್ಲ. ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ಕಂಡಿಲ್ಲ. ಯಾಕೆಂದರೆ, ಅವರು ಆ ವೃತ್ತಿಯಲ್ಲಿರುವುದಕ್ಕೆ ಇಲ್ಲಿನ ಆಡಳಿತವೇ ಕಾರಣ. ಸರಕಾರ ಪರವಾನಿಗೆ ಕೊಡದೇ ಇರುತ್ತಿದ್ದರೆ, ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ನೋಡಬಹುದಿತ್ತು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಅಷ್ಟಕ್ಕೂ,
ವಧಾಗೃಹ ನಡೆಸುವ ಪರವಾನಿಗೆಯನ್ನು ಸರಕಾರ ಯಾವುದಾದರೊಂದು ನಿರ್ದಿಷ್ಟ ಧರ್ಮದ ಜನರಿಗೆ ಮೀಸಲಾಗಿ ಇಟ್ಟಿಲ್ಲ. ಅದು ಏಲಂನಲ್ಲಿ ವಿತರಣೆಯಾಗುತ್ತದೆ. ಯಾರು ಹೆಚ್ಚು ಬೆಲೆಗೆ ಕೊಂಡುಕೊಳ್ಳಲು ತಯಾರಾಗುತ್ತಾರೋ ಅವರಿಗೆ ಪರವಾನಿಗೆ ಸಿಗುತ್ತದೆ. ಅದೊಂದು ಮುಕ್ತ ಪರವಾನಿಗೆ. ವಧಾಗೃಹಕ್ಕೆ ಜಾನುವಾರು ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಮುಕ್ತವಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯಾರಿಗೂ ಅದು ಲಭಿಸುತ್ತದೆ. ವಧಾಗೃಹದಿಂದ ಮಾಂಸ ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಕೂಡ ಮುಕ್ತವಾಗಿದೆ. ಆದ್ದರಿಂದ ಯಾರಿಗೆ ವಧಾಗೃಹದ ಮೇಲೆ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟದ ಮೇಲೆ ಭಿನ್ನಾಭಿಪ್ರಾಯ ಇದೆಯೋ ಅವರು ವಧಾಗೃಹದ ಮೇಲೆ ಮತ್ತು ಜಾನುವಾರು ಸಾಗಾಟಗಾರರ ಮೇಲೆ ದಾಳಿ ಮಾಡಬೇಕಾದುದಲ್ಲ. ಹೀಗೆ ಮಾಡುವುದು ಪ್ರಭುತ್ವಕ್ಕೆ ಎಸೆಯುವ ಸವಾಲು. ಆದರೂ ಮತ್ತೆ ಮತ್ತೆ ಇಂಥ ದಾಳಿಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ ಮತ್ತು ಈ ದಾಳಿಗಳ ಹಿಂದಿನ ಹುನ್ನಾರ ಬಿಚ್ಚಿಕೊಳ್ಳುವುದೂ ಈ ಪ್ರಶ್ನೆಯಿಂದಲೇ.
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ವ್ಯಾಪಾರದಲ್ಲಿ ನಿರ್ದಿಷ್ಟ ಧರ್ಮವೊಂದರ ಸಾಕಷ್ಟು ಅನುಯಾಯಿಗಳು ತೊಡಗಿಸಿಕೊಂಡಿದ್ದಾರೆ. ಕಾನೂನುಬದ್ಧ ವೃತ್ತಿ ಎಂಬ ನೆಲೆಯಲ್ಲಿ ಅದು ಅವಹೇಳನಕ್ಕೋ, ಹಿಂಜರಿಕೆಗೋ, ಕೀಳರಿಮೆಗೋ ಒಳಗಾಗಬೇಕಾದ್ದೂ ಅಲ್ಲ. ಆದರೆ, ದಾಳಿಗಳ ಹಿಂದಿನ ಉದ್ದೇಶವೂ ಇದುವೇ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು, ಕಾನೂನುಬದ್ಧ ವೃತ್ತಿಯ ಬಗ್ಗೆ ಕೀಳರಿಮೆಗೆ ಗುರಿಪಡಿಸುವುದು ಮತ್ತು ಮುಸ್ಲಿಮರು ಪರವಾನಿಗೆಯಿಲ್ಲದೇ ಮಾಂಸ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುಳ್ಳನ್ನು ಸದಾ ಜೀವಂತ ಇಟ್ಟುಕೊಳ್ಳುವುದು- ಇವು ಮತ್ತು ಇಂಥ ಇನ್ನಿತರ ಉದ್ದೇಶಗಳೇ ಈ ದಾಳಿಗಳ ಹಿಂದಿವೆ. ಇಂಥ ದಾಳಿಗಳು ರಾಜಕೀಯವಾಗಿಯೂ ಲಾಭವನ್ನು ತಂದುಕೊಡುತ್ತದೆ. ವಧಾಗೃಹದಿಂದ ಹಿಡಿದು ಮಾಂಸ ಸಾಗಾಟದ ವರೆಗೆ ನಡೆಯುವ ಎಲ್ಲ ಪ್ರಕ್ರಿಯೆಗಳಿಗೆ ಸರಕಾರವೇ ಪರವಾನಿಗೆ ನೀಡಿದ್ದರೂ ಈ ದಾಳಿಗಳ ಸಂದರ್ಭದಲ್ಲಿ ಇವು ಯಾವುವೂ ಚರ್ಚೆಗೆ ಒಳಗಾಗದಂತೆ ಜಾಣತನದಿಂದ ನೋಡಿಕೊಳ್ಳಲಾಗುತ್ತದೆ. ಅಲ್ಲದೇ, ದುಷ್ಕರ್ಮಿಗಳು ಬಂಧ ನಕ್ಕೀಡಾದ ಮರುಕ್ಷಣವೇ ಜಾಮೀನು ಪಡೆದು ಹೊರಬರುತ್ತಾರೆ. ಇದೊಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಈ ಆಟಕ್ಕೆ ಕೊನೆ ಹಾಡಲೇಬೇಕು. ರಾಜಕೀಯದ ಮಂದಿ ಆಡುತ್ತಿರುವ ಈ ಆಟಕ್ಕೆ ಕಾ ನೂನುಬದ್ಧವಾಗಿ ದುಡಿಯುತ್ತಿರುವ ಮಂದಿ ಪದೇಪದೇ ಬಲಿಯಾಗುವುದನ್ನು ನಾಗರಿಕರು ಸಹಿಸಬಾರದು. ಅಷ್ಟಕ್ಕೂ,
ಬರೇ ದಾಳಿ ನಡೆಸುವುದು ದುಷ್ಕರ್ಮಿಗಳ ಉದ್ದೇಶ ಅಲ್ಲ. ಎರಡೂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದೂ ಅವರ ಗುರಿಯಾಗಿದೆ. ಇದು ಗಂಭೀರ ಅಪರಾಧ. ಆದ್ದರಿಂದ ದುಷ್ಕರ್ಮಿಗಳ ವಿರುದ್ಧ ಈ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಬೇಕು. ದುಷ್ಕರ್ಮಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರದಂತೆ ನೋಡಿಕೊಳ್ಳಬೇಕು. ಅಂದಹಾಗೆ,
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸಾಹಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ತಾಳುವುದು ಬೇರೆ ಹಾಗೂ ಕಾನೂನುಬದ್ಧ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಸುವುದು ಬೇರೆ. ಇವೆರಡನ್ನೂ ಸಮಾನವಾಗಿ ಕಾಣಲಾಗದು, ಕಾಣಬಾರದು.
Wednesday, 24 June 2020
ಜನಪ್ರತಿನಿಧಿಗಳೇ, ಪ್ರಶ್ನಿಸಲೇಬೇಕಾದ ಸಂದರ್ಭದಲ್ಲಿ ಯಾಕೆ ಮೌನವಾದಿರಿ?
ಕೊರೋನಾ ಲಾಕ್‍ಡೌನ್‍ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ಪೈಕಿ 175 ಮಂದಿಯನ್ನು ಬಾಡಿಗೆ ವಿಮಾನದಲ್ಲಿ ಊರಿಗೆ ಕಳುಹಿಸಿದ ಬಶೀರ್ ಸಾಗರ್ ಮತ್ತು ಅಲ್ತಾಫ್ ಉಳ್ಳಾಲ್ ಎಂಬ ಉದ್ಯಮಿಗಳು ರಾಜ್ಯಾದ್ಯಂತ ಶ್ಲಾಘನೆಗೆ ಒಳಗಾಗಿದ್ದಾರೆ. ಅವರು ನಡೆಸುತ್ತಿರುವ ಸಾಕೋ ಕಂಪೆನಿ ಕನ್ನಡಿಗರ ಮನೆಮಾತಾಗಿದೆ. ಅವರು ಬಾಡಿಗೆ ವಿಮಾನದ ವೆಚ್ಚವನ್ನು ಭರಿಸಿದ್ದಷ್ಟೇ ಅಲ್ಲ, ಪ್ರತಿಯೊಬ್ಬರ ಪ್ರಯಾಣ ವೆಚ್ಚವನ್ನೂ ಭರಿಸಿದ್ದಾರೆ. ಮಾತ್ರವಲ್ಲ, ಹೀಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಬಳಿಕ ನಡೆದ ಕೊರೋನಾ ಪರೀಕ್ಷಾ ಶುಲ್ಕ, ಕ್ವಾರಂಟೈನ್‍ಗೆ ಬೇಕಾದ ಕೊಠಡಿ ವ್ಯವಸ್ಥೆ, ಆಹಾರ ಎಲ್ಲವುಗಳ ವೆಚ್ಚವನ್ನೂ ಅವರೇ ಭರಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಲಾಕ್‍ಡೌನ್‍ನಿಂದಾಗಿ ಉದ್ಯಮಿಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಮಗೆ ಸಂಬಂಧಿಸಿಯೇ ಇಲ್ಲದ ಜನರಿಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವುದಕ್ಕೆ ವಿಶಾಲ ಹೃದಯ ಬೇಕು. ಒಂದುವೇಳೆ, ಈ ಸಾಹಸಕ್ಕೆ ಕೈ ಹಾಕದೇ ಇರುತ್ತಿದ್ದರೆ ಅವರು ಕಳಕೊಳ್ಳುವುದಕ್ಕೇನೂ ಇರಲಿಲ್ಲ. ಬದಲಾಗಿ ಈ ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿಗಳು ಅವರ ಪಾಲಿಗೆ ಉಳಿಕೆಯಾಗುತ್ತಿತ್ತು. ಆದ್ದರಿಂದಲೇ,
\ರಾಜ್ಯದ ಮಂದಿ ಈ ಉದ್ಯಮಿಗಳನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಯವರೂ ಅಭಿನಂದಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.
ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇಂತಹ ಬೆಳವಣಿಗೆಯು ಇನ್ನಷ್ಟು ಸಮಾಜ ಸೇವಕರ ತಯಾರಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಇಂಥವರನ್ನು ನೋಡಿ ಬೆಳೆಯುವ ಯುವ ಪೀಳಿಗೆಯು ನಾವು ಹೀಗೆ ಇತರರಿಗೆ ನೆರವಾಗಬೇಕು ಎಂಬ ಬಯಕೆಯೊಂದನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಬೆಳೆಯುತ್ತವೆ. ಅವುಗಳು ಮುಂದೊಂದು ದಿನ ಫಲ ಕೊಡುವುದಕ್ಕೂ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರುಗಳ ಶ್ಲಾಘನೆ ಮತ್ತು ಗುರುತಿಸುವಿಕೆ ಅತ್ಯಂತ ಸಕಾಲಿಕ. ಆದರೆ,
ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವಂತೆಯೇ ಕೆಡುಕನ್ನು ವಿರೋಧಿಸುವ ಮತ್ತು ಧರ್ಮಾತೀತವಾಗಿ ಖಂಡಿಸುವ ಪ್ರಕ್ರಿಯೆಗಳೂ ನಡೆಯಬೇಕು. ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಒಳಿತು ಹೇಗೆ ಪ್ರಚಾರಗೊಳ್ಳುತ್ತದೋ ಕೆಡುಕನ್ನು ವಿರೋಧಿಸಿ ಖಂಡಿಸುವುದರಿಂದ ಕೆಡುಕಿನ ಹರಡುವಿಕೆಗೂ ತಡೆ ಬೀಳುತ್ತದೆ. ಒಳಿತನ್ನು ಪ್ರೋತ್ಸಾಹಿಸುವ ಮತ್ತು ಕೆಡುಕನ್ನು ವಿರೋಧಿಸುವ ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯಬೇಕಾದವು. ವಿಷಾದ ಅನ್ನಿಸುವುದೂ ಇಲ್ಲೇ.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರು ಒಳಿತನ್ನು ಶ್ಲಾಘಿಸಿದ ರೀತಿಯಲ್ಲಿಯೇ ಕೆಡುಕನ್ನೂ ವಿರೋಧಿಸಬೇಕು ಎಂದು ರಾಜ್ಯದ ಮಂದಿ ಬಯಸುವುದು ಸಹಜ. ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಅವರಿಂದ ಇಂತಹ ಬಯಕೆಯನ್ನು ನಿರೀಕ್ಷಿಸುವುದು ಅಪರಾಧವೂ ಅಲ್ಲ. ಆದರೆ ಈ ನಿರೀಕ್ಷೆ ಈಡೇರುತ್ತಿಲ್ಲ ಅನ್ನುವ ಸಂಕಟ ಜನರಲ್ಲಿದೆ. ಸೌದಿಯಿಂದ 175 ಪ್ರಯಾಣಿಕರು ಮಂಗಳೂರು ತಲುಪಿದ ಎರಡು ದಿನಗಳಾದ ಬಳಿಕ ಇದೇ ಮಂಗಳೂರಿನಲ್ಲಿ ಮುಹಮ್ಮದ್ ಹನೀಫ್ ಎಂಬವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಕೈಯಲ್ಲಿ ರಾಡ್, ತಲವಾರು, ದೊಣ್ಣೆಗಳನ್ನು ಹಿಡಿದಿದ್ದ 20ರಿಂದ 25ರಷ್ಟಿದ್ದ ದುಷ್ಕರ್ಮಿಗಳ ಗುಂಪು ಮುಹಮ್ಮದ್ ಹನೀಫ್‍ರನ್ನು ಅವರ ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದೆ. ಪೊಲೀಸರು ಬಂದಾಗ ಈ ಗುಂಪು ಪರಾರಿಯಾಗಿದೆ. ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣ ಪತ್ರ’ವನ್ನು ಪಡೆದುಕೊಂಡು ಹಾವೇರಿಯ ಕೃಷಿ ಮಾರುಕಟ್ಟೆಯಿಂದ 4 ಎಮ್ಮೆಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇವೇಳೆ, ಬಂಧನಕ್ಕೀಡಾದ ಆರು ಮಂದಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾಗಂತ,
ಜಾನುವಾರು ಸಾಗಾಟದ ನೆಪದಲ್ಲಿ ಥಳಿತ, ಹಲ್ಲೆ, ಹತ್ಯೆ ಜಿಲ್ಲೆಗೆ ಹೊಸತಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಇಂಥ ಕ್ರೌರ್ಯಗಳು ನಡೆಯುವುದಕ್ಕೆ ಕಾರಣ ಏನು ಮತ್ತು ಈ ಕ್ರೌರ್ಯದಲ್ಲಿ ಭಾಗಿಯಾದವರು ತಕ್ಷಣ ಜಾಮೀನು ಪಡೆದು ಹೊರಬರುವುದರ ಹಿಂದಿನ ಗುಟ್ಟೇನು ಅನ್ನುವುದು ಅಲ್ತಾಫ್ ಮತ್ತು ಬಶೀರ್ ರನ್ನು ಕೊಂಡಾಡಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಜಿಲ್ಲೆಯ ಶಾಸಕರುಗಳಿಗೆ ತಿಳಿಯದ ವಿಷಯವೂ ಅಲ್ಲ. ಮುಹಮ್ಮದ್ ಹನೀಫ್ ಅವರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದರೆ, ಅದನ್ನು ನೋಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಇದೆ. ನ್ಯಾಯಾಲಯ ಇದೆ. ಅದರ ಹೊರತಾಗಿ ಯಾವ ಖಾಸಗಿ ಗುಂಪುಗಳಿಗೂ ಈ ಹೊಣೆಯನ್ನು ವಹಿಸಿಕೊಡಲಾಗಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಅನುಮಾನ ಮೂಡಿದರೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬಹುದಾದ ಅತಿಶ್ರೇಷ್ಟ ದೇಶಸೇವೆಯೆಂದರೆ, ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೊಡುವುದು. ಇದರ ಹೊರತಾಗಿ ಸ್ವಯಂ ಪೊಲೀಸರಾಗುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇದು ಅಲ್ತಾಫ್ ಮತ್ತು ಬಶೀರ್ ನ್ನು ಕೊಂಡಾಡಿದ ಜಿಲ್ಲೆಯ ಸಂಸದರು ಮತ್ತು ಶಾಸಕರಿಗೆ ಖಂಡಿತ ಗೊತ್ತಿದೆ. ಆದರೆ ಈವರೆಗೂ ಇವರಾರೂ ಈ ಅಮಾನವೀಯ ಕ್ರೌರ್ಯದ ವಿರುದ್ಧ ಮಾತಾಡಿಲ್ಲ. ಇದು ಸಾರುವ ಸಂದೇಶ ಏನು?
ಮೊನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 175 ಪ್ರಯಾಣಿಕರ ಪೈಕಿ ಸಾಕೋ ಕಂಪೆನಿಯ ಒಬ್ಬನೇ ಒಬ್ಬ ಸಿಬ್ಬಂದಿ ಅಥವಾ ಅವರ ಸಂಬಂಧಿಕರು ಇರಲಿಲ್ಲ. ಒಂದೇ ಧರ್ಮದವರೂ ಇರಲಿಲ್ಲ. ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಲಾಕ್‍ಡೌನ್ ಕಾರಣದಿಂದ ಸಿಲುಕಿಕೊಂಡ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು ಮುಂತಾದ ಮನುಷ್ಯರಷ್ಟೇ ಅವರಾಗಿದ್ದರು. ಅವರನ್ನು 61 ಹಿರಿಯ ನಾಗರಿಕರು, 55 ಗರ್ಭಿಣಿಯರು, 20 ಮಂದಿ ತುರ್ತು ಚಿಕಿತ್ಸೆ ಅಗತ್ಯವಿರುವವರು, 35 ಮಕ್ಕಳು- ಹೀಗೆ ಗುರುತಿಸಲಾಗಿತ್ತೇ ಹೊರತು ಅವರ ಧರ್ಮ, ಭಾಷೆ, ರಾಜಕೀಯ ಒಲವುಗಳು ಗುರುತಿಸುವಿಕೆಯ ಮಾನದಂಡವಾಗಿರಲೇ ಇಲ್ಲ. ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಮೆಚ್ಚಿಕೊಂಡೂ ಇದ್ದಾರೆ. ಆದ್ದರಿಂದಲೇ,
ಈ ಸಂಸದರು ಮತ್ತು ಶಾಸಕರಿಂದ ರಾಜ್ಯದ ಜನರು ಇನ್ನಷ್ಟನ್ನು ನಿರೀಕ್ಷಿಸುವುದು. ಕೆಡುಕನ್ನು ಖಂಡಿಸುವ ವಿಚಾರದಲ್ಲೂ ಇವರು ಇದೇ ಮಾನದಂಡವನ್ನು ಅನುಸರಿಸಬೇಕು ಎಂದು ಬಯಸುವುದು. ಆದರೆ,
ಈ ಬಯಕೆ ಪದೇ ಪದೇ ವಿಫಲವಾಗುತ್ತಿದೆ. ಜಾನುವಾರು ಸಾಗಾಟದ ಹೆಸರಲ್ಲಿ, ಯುವಕ-ಯುವತಿಯರ ಮಾತುಕತೆಯ ಹೆಸರಲ್ಲಿ, ‘ಲವ್ ಜಿಹಾದ್’ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅನೇಕ ಥಳಿತದ ಘಟನೆಗಳು ನಡೆದಿವೆ, ಬೆತ್ತಲೆ ಮಾಡಲಾಗಿದೆ, ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ. ಹತ್ಯೆಯೂ ನಡೆದಿದೆ. ಆದರೆ, ಬಶೀರ್ ಮತ್ತು ಅಲ್ತಾಫ್ ಅವರ ಒಳಿತಿನ ಕೆಲಸವನ್ನು ಶ್ಲಾಘಿಸಿರುವ ಈ ಸಂಸದರಾಗಲಿ, ಶಾಸಕರಾಗಲಿ, ಇವಾವುದನ್ನೂ ಖಂಡಿಸಬೇಕಾದ ರೀತಿಯಲ್ಲಿ ಖಂಡಿಸಲೇ ಇಲ್ಲ. ಯಾಕೆ ಹೀಗೆ? ಥಳಿತಕ್ಕೊಳಗಾಗುತ್ತಿರುವವರು ಒಂದು ಧರ್ಮದವರು ಮತ್ತು ಥಳಿಸುವವರು ಇನ್ನೊಂದು ಧರ್ಮದವರು ಎಂಬುದು ಇದಕ್ಕೆ ಕಾರಣವೇ? ತನ್ನದಲ್ಲದ ಧರ್ಮದವರ ಮೇಲೆ ಅನ್ಯಾಯ ನಡೆಯುವುದು ಸಹ್ಯವೇ? ಅನ್ಯಾಯಕ್ಕೂ ಧರ್ಮಕ್ಕೂ ಏನು ಸಂಬಂಧ? ಕೆಡುಕಿಗೂ ಧರ್ಮಕ್ಕೂ ಏನು ಸಂಬಂಧ? ಒಂದುವೇಳೆ,
ಒಳಿತನ್ನು ಧರ್ಮಾಧಾರಿತವಾಗಿ ಮಾಡುವುದಾಗಿದ್ದರೆ ಅದನ್ನು ಅಲ್ತಾಫ್ ಮತ್ತು ಬಶೀರ್ ಗೆ ಮಾಡಬಹುದಿತ್ತು. ಒಂದೇ ಧರ್ಮದವರನ್ನು ಹುಡುಕಿ ಊರಿಗೆ ಕಳುಹಿಸಬಹುದಿತ್ತು. ಅಲ್ಲದೇ ಅವರು ಜನಪ್ರತಿನಿಧಿಗಳೂ ಅಲ್ಲ, ಉದ್ಯಮಿಗಳು. ಜನಪ್ರತಿನಿಧಿಗಳಂತೆ ಜನರಿಗೆ ಅವರು ಉತ್ತರದಾಯಿಗಳೂ ಅಲ್ಲ. ಆದರೆ ಅವರು ಒಳಿತಿನ ವಿಚಾರದಲ್ಲಿ ಧರ್ಮವನ್ನು ನೋಡಲಿಲ್ಲ. ಅಲ್ಲಿ ಆಯ್ಕೆಗೆ ಕಷ್ಟವೇ ಮಾನದಂಡವಾಗಿತ್ತು. ಧರ್ಮವಲ್ಲ. ನಿಜವಾಗಿ,
ಕೆಡುಕನ್ನು ವಿರೋಧಿಸುವುದಕ್ಕೂ ಇದುವೇ ಮಾನದಂಡವಾಗಬೇಕು. ಕೆಡುಕಿಗೆ ಧರ್ಮವಿಲ್ಲ. ಅದುವೇ ಒಂದು ಧರ್ಮ. ಆದರೆ, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಕೆಡುಕನ್ನು ಧರ್ಮದ ಆಧಾರದಲ್ಲಿ ನೋಡುತ್ತಿರುವಂತಿದೆ. ಆದ್ದರಿಂದಲೇ ಮುಹಮ್ಮದ್ ಹನೀಫ್‍ರ ಮೇಲಾದ ಹಲ್ಲೆಯನ್ನು ಖಂಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಕೇಸು ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿಲ್ಲ. ಇದು ವಿಷಾದನೀಯ. ಒಂದೆಡೆ ಒಳಿತನ್ನು ಶ್ಲಾಘಿಸಿದ ಅದೇ ಜನಪ್ರತಿನಿಧಿಗಳು ಇನ್ನೊಂದು ಕಡೆ ಕೆಡುಕನ್ನು ಕಂಡೂ ಮೌನವಾಗುತ್ತಾರೆಂದರೆ, ಅವರ ಶ್ಲಾಘನೆಯನ್ನೇ ಅನುಮಾನಿಸಬೇಕಾಗುತ್ತದೆ.
Tuesday, 16 June 2020
ನಮ್ಮೊಳಗಿನ ದುಷ್ಟತನಕ್ಕೆ ಕನ್ನಡಿ ಹಿಡಿದ ಎರಡು ಘಟನೆಗಳು
ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ಪ್ರಾಣಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಎಂಬ ಪ್ರಾಣಿ ಈ ಎರಡೂ ಘಟನೆಗಳಿಗೆ ಸ್ಪಂದಿಸಿದ ರೀತಿ ಮತ್ತು ವ್ಯಕ್ತಪಡಿಸಿದ ಅಭಿ ಪ್ರಾಯಗಳಲ್ಲಿ ಎದ್ದು ಕಾಣುತ್ತಿದ್ದ ಪಕ್ಷಪಾತದ ಧ್ವನಿ, ಧಾರ್ಮಿಕ ದ್ವೇಷ, ಕ್ರೌರ್ಯ ಮನೋಭಾವ ಜಿಗುಪ್ತೆ ತರುವಂಥದ್ದು.
1. ಪಟಾಕಿ ತುಂಬಿಸಿಟ್ಟಿದ್ದ ಅನಾನಸು ಹಣ್ಣನ್ನು ತಿಂದು ಕೇರಳದ ಪಾಲಕ್ಕಾಡಿನಲ್ಲಿ ಆನೆಯೊಂದು ಸಾವಿಗೀಡಾದದ್ದು.
2. ಹಿಮಾಚಲ ಪ್ರದೇಶದ ಬಿಲಸ್ಪುರ ಜಿಲ್ಲೆಯಲ್ಲಿ ಪಟಾಕಿ ಸಿಡಿತದಿಂದ ಹುಲ್ಲು ಮೇಯುತ್ತಿದ್ದ ಹಸುವಿನ ದವಡೆ ಮುರಿದು ರಕ್ತ ಸೋರುತ್ತಿರುವುದು. ಹಸುವನ್ನು ಕೊಲ್ಲುವ ಉದ್ದೇಶದಿಂದ ನೆರೆಮನೆಯಾತ ಇಂಥದ್ದೊಂದು ಕೃತ್ಯ ನಡೆಸಿದ್ದಾನೆ ಅನ್ನುವ ದೂರು.
ಅನಾನಸಿನ ಒಳಗಡೆ ಪಟಾಕಿ ಇಟ್ಟಿರಬಹುದು ಎಂದು ಆಲೋಚಿಸುವ ಸಾಮರ್ಥ್ಯ ಆನೆಗಿಲ್ಲ, ಹಸುವಿಗೂ ಇಲ್ಲ. ಆದರೆ ಮನುಷ್ಯನಿಗಿದೆ. ಮಾತ್ರವಲ್ಲ, ಆನೆ ಮತ್ತು ಹಸುವನ್ನು ಪೀಡಿಸಿದ ಊರು ಯಾವುದು, ಅಲ್ಲಿ ಯಾವ ಧರ್ಮದವರ ಜನಸಂಖ್ಯೆ ಹೆಚ್ಚಿದೆ, ಯಾವ ರಾಜಕೀಯ ಪಕ್ಷದ ಆಡಳಿತವಿದೆ, ಆರೋಪಿಗಳು ಯಾರು... ಅನ್ನುವುದನ್ನೆಲ್ಲ ಅವಲೋಕಿಸಿ ಪ್ರತಿಕ್ರಿಯಿಸುವ ಸಾಮಥ್ರ್ಯವೂ ಮ ನುಷ್ಯನಿಗಿದೆ. ಮನುಷ್ಯ ಸ್ವಭಾವತಃ ದುಷ್ಟನಲ್ಲ, ಪರಿಸ್ಥಿತಿ, ಸನ್ನಿವೇಶ ಮತ್ತು ಸ್ವಾರ್ಥಗಳು ಆತನನ್ನು ದುಷ್ಟನನ್ನಾಗಿಯೋ ದುಷ್ಟತನದ ಪರೋಕ್ಷ ಬೆಂಬಲಿಗನನ್ನಾಗಿಯೋ ಮಾಡಿಬಿಡುತ್ತದೆ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಯಾವ್ಯಾವುದೋ ನೆಪದಲ್ಲಿ ಬೀದಿಯಲ್ಲಿ ಅಟ್ಟಾಡಿಸಿ ಥಳಿಸಿ ಕೊಲ್ಲುತ್ತಿರುವುದನ್ನು ಸಮರ್ಥಿಸಲು ಓರ್ವ ಮನುಷ್ಯನಿಗೆ ಹೇಗೆ ಸಾಧ್ಯ? ಆ ಕ್ರೌರ್ಯಕ್ಕೆ ಮೌನವಾಗಿರಲು ಹೇಗೆ ಸಾಧ್ಯ ಅಥವಾ ಇನ್ನಾವುದೋ ಕಾರಣ ಕೊಟ್ಟು ಆ ಹತ್ಯೆಯ ಪರೋಕ್ಷ ಬೆಂಬಲಿಗನಾಗಲು ಹೇಗೆ ಸಾಧ್ಯ? ಅಖ್ಲಾಕ್‍ನಿಂದ ಹಿಡಿದು ತಬ್ರೇಜ್ ನ ವರೆಗೆ, ಊನಾದಿಂದ ಹಿಡಿದು ನಮ್ಮ ಅಕ್ಕ-ಪಕ್ಕದ ಬೀ ದಿಯ ವರೆಗೆ ಎಷ್ಟೊಂದು ಥಳಿತ, ಹತ್ಯೆಗಳಾಗಿವೆ? ಈ ಯಾವ ಘಟನೆಗಳಲ್ಲೂ ಪ್ರಾಣಿಗಳಿಗೆ ಯಾವ ಪಾತ್ರವೂ ಇಲ್ಲ. ಥಳಿಸುವವರೂ ಮನುಷ್ಯರೇ. ಥಳಿತಕ್ಕೊಳಗಾಗುವವರೂ ಮನುಷ್ಯರೇ. ಆದರೆ, ಇಲ್ಲೆಲ್ಲಾ ಸ್ಪಷ್ಟವಾಗಿ ಎದ್ದು ಕಾಣುವ ಒಂದು ಸತ್ಯ ಇದೆ. ಅದೇನೆಂದರೆ, ಥಳಿಸುವವರ ಧರ್ಮ ಅಥವಾ ಜಾತಿ ಮತ್ತು ಥಳಿತಕ್ಕೊಳಗಾಗುವವರ ಧರ್ಮ ಅಥವಾ ಜಾತಿ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪರವಾಗಿರುವವರು ಥಳಿಸುವುದು ಮತ್ತು ನಿರ್ದಿಷ್ಟ ಧರ್ಮಾನುಯಾಯಿಗಳು ಥಳಿತಕ್ಕೊಳಗಾಗುವುದು- ಇವೆರಡೂ ಏನನ್ನು ಸೂಚಿಸುತ್ತವೆ? ಥಳಿಸುವವರು ಸದಾಕಾಲ ದುಷ್ಟರೇ? ಹಾಗೆ ಮಾಡುವುದಕ್ಕೆ ಅವರ ತತ್ವಸಿದ್ಧಾಂತ ಕಾರಣವೇ ಮತ್ತು ಅವರು ತಮ್ಮ ಪ್ರತಿಪಾದನೆಯಲ್ಲಿ ನಿಜಕ್ಕೂ ಪ್ರಾಮಾಣಿಕರೇ ಎಂದು ಪ್ರಶ್ನಿಸುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಆಘಾತಕಾರಿಯಾಗಿರುತ್ತದೆ. ಗುಜರಾತ್ ಹತ್ಯಾಕಾಂಡವನ್ನು ಉಲ್ಲೇಖಿಸಿದರೆ ಮತ್ತು ಹಸಿ ಭ್ರೂಣವನ್ನು ಕತ್ತಿಯ ಮೊನೆಗೆ ಸಿಲುಕಿಸಿ ವಿಕೃತ ಸಂತೋಷಪಟ್ಟ ದುಷ್ಟತನವನ್ನು ಪ್ರಸ್ತಾಪಿಸಿದರೆ, ಆ ಬಗ್ಗೆ ಯಾವ ಖಂಡನೆಯನ್ನಾಗಲಿ, ವಿಷಾದವನ್ನಾಗಲಿ ವ್ಯಕ್ತಪಡಿಸದೆಯೇ ಅದಕ್ಕೂ ಮೊದಲಿನ ಗೋಧ್ರಾ ರೈಲು ದುರ್ಘಟನೆಯನ್ನು ಎತ್ತುತ್ತಾರೆ. ಅದೊಂದು ರೀತಿಯ ಪಲಾಯನವಾದ. ಖಂಡಿಸಲೇ ಬೇಕಾದ ಸಂದರ್ಭವೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಡ್ಡ ದಾರಿಯನ್ನು ಹಿಡಿಯುವುದು. ಪ್ರಶ್ನೆ- ಕ್ರೌರ್ಯವೊಂದನ್ನು ಖಂಡಿಸದೇ ಇರುವುದಲ್ಲ. ಅಂಥದ್ದೊಂದು ದುಷ್ಟತನ ವ್ಯಕ್ತಿಯೊಳಗಡೆ ಅಡರಿಕೊಳ್ಳುವುದು ಹೇಗೆ? ಗುಜರಾತ್ ಹತ್ಯಾಕಾಂಡವನ್ನು ಉಲ್ಲೇಖಿಸಿದ ಕೂಡಲೇ ಅದನ್ನು ಖಂಡಿಸದೆಯೇ ಅದಕ್ಕೆ ಪ್ರತಿಯಾಗಿ ದೆಹಲಿ ಸಿಕ್ಖ್ ಹತ್ಯಾಕಾಂಡವನ್ನು ಎತ್ತುವುದು ಅಥವಾ ಗೋಧ್ರಾ ರೈಲು ದಹನದಂಥ ಕ್ರೌರ್ಯಗಳನ್ನು ಉಲ್ಲೇಖಿಸುವುದು ದುಷ್ಟತನದ ಪ್ರತಿಬಿಂಬ. ದೆಹಲಿಯಲ್ಲಾಗಲಿ, ಗುಜರಾತ್‍ನಲ್ಲಾಗಲಿ, ಗೋಧ್ರಾದಲ್ಲಾಗಲಿ ನಡೆದಿರುವುದು ಮಾನವ ಹತ್ಯೆಗಳೇ ಹೊರತು ಇನ್ನೇನಲ್ಲ. ನಿಶ್ಚಲವಾದ ಆ ಜೀವಗಳನ್ನು ಹಿಂದೂ-ಮುಸ್ಲಿಮ್, ಸಿಕ್ಖ್ ಎಂದು ವಿಭಜಿಸುವುದರಿಂದ ಸಂತ್ರಸ್ತಗೊಂಡ ಆ ಕುಟುಂಬಗಳ ನೋವಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಸಾಯಿಸಿದವರು ನಿರ್ದಿಷ್ಟ ಉದ್ದೇಶದಿಂದಲೇ ಸಾಯಿಸಿದ್ದಾರೆ. ಹಿಂದೂ-ಮುಸ್ಲಿಮ್-ಸಿಖ್ ರ ಸಾವಿನಲ್ಲಿ ತಂತಮ್ಮ ತತ್ವ ಸಿದ್ಧಾಂತದನುಸಾರ ಆನಂದವನ್ನೂ ಪಟ್ಟಿದ್ದಾರೆ. ಆದ್ದರಿಂದ,
ಈ ದುಷ್ಟತನವನ್ನು ಧರ್ಮಾತೀತವಾಗಿ ಮತ್ತು ಪಕ್ಷಾತೀತವಾಗಿ ಖಂಡಿಸುವುದಕ್ಕೆ ಸಾಧ್ಯವಾಗದೇ ಹೋಗಿರುವ ದೇಶದಲ್ಲಿ ಆನೆ ಮತ್ತು ಹಸು ಪ್ರಕರಣದಲ್ಲಿ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದೇ ದೊಡ್ಡ ತಮಾಷೆ. ಆನೆಯ ಘಟನೆ ಕೇರಳದಲ್ಲಿ ನಡೆದಿದೆ ಅನ್ನುವುದೇ ಒಂದು ನಿರ್ದಿಷ್ಟ ವರ್ಗದ ಪಾಲಿಗೆ ದೊಡ್ಡ ಸಂಭ್ರಮ. ಅಲ್ಲಿ ಎಡಪಕ್ಷದ ಆಡಳಿತವಿದೆ. ಆದ್ದರಿಂದ ಬಲಪಕ್ಷಕ್ಕೆ ಅದೊಂದು ರಾಷ್ಟ್ರಮಟ್ಟದ ಇಶ್ಶೂ. ಕೇರಳಿಗರು ಎಂಥ ಕ್ರೂರಿಗಳು ಅನ್ನುವುದನ್ನು ಎತ್ತಿ ಹೇಳುವುದಕ್ಕೂ ಆ ಘಟನೆಯನ್ನು ಎಗ್ಗಿಲ್ಲದೇ ಬಲಪಕ್ಷದವರು ಮತ್ತು ಅವರಿಂದ ಪ್ರೇರಿತರಾದ ಸಾಮಾನ್ಯರೂ ಬಳಸಿಕೊಂಡರು. ಹೀಗೆ ಆನೆ ಮೇಲೆ ಕರುಣೆ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ದೇಶದಾದ್ಯಂತ ಥಳಿತ ಘಟನೆಗಳಾಗುತ್ತಿದ್ದಾಗ, ಅದರಿಂದಾಗಿ ಸಾವುಗಳು ಸಂಭವಿಸುತ್ತಿದ್ದಾಗ, ಗುಜರಾತ್-ಮುಝಫ್ಫರ್ ನಗರ್ ಹತ್ಯಾಕಾಂಡಗಳಾಗುವಾಗ ಮೌನಿಗಳಾಗಿದ್ದರು ಎಂಬುದು ಸ್ಪಷ್ಟ. ಆ ಕ್ರೌರ್ಯಗಳ ಕುರಿತಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಪ್ರಶ್ನೆಗೆ ಪ್ರತಿಯಾಗಿ ಇನ್ನೊಂದು ಪ್ರಶ್ನೆಯನ್ನು ಎತ್ತುತ್ತಾರೆಯೇ ಹೊರತು ಅದು ಖಂಡನಾರ್ಹ ಎಂಬ ಮಾತೂ ಹೊರಡುವುದಿಲ್ಲ. ಅದೇವೇಳೆ,
ಹಿಮಾಚಲ ಪ್ರದೇಶದಲ್ಲಿ ದವಡೆ ಹರಿದುಕೊಂಡು ರಕ್ತ ಸುರಿಸುತ್ತಾ ಸಂಕಟಪಡುತ್ತಿರುವ ಹಸು, ಕೇರಳದ ಆನೆಯಂತೆ ಯಾವ ಕಾಳಜಿಯನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಕೇರಳದ ಆನೆಗೆ ಭಯಂಕರವಾಗಿ ಮಿಡಿದವರಲ್ಲಿ ಸಣ್ಣ ಸಂಖ್ಯೆಯೊಂದನ್ನು ಬಿಟ್ಟರೆ ಉಳಿದವರ್ಯಾರೂ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವುದು ಬಲಪಕ್ಷ ಮತ್ತು ಹಸುವಿಗೆ ಪಟಾಕಿ ತಿನ್ನಿಸಿದವನು ಈ ಬಲಪಕ್ಷ ಪ್ರತಿನಿಧಿಸುವ ಧರ್ಮದ ಅನುಯಾಯಿ.
ಅನ್ಯಾಯವನ್ನು ಯಾವ ಧರ್ಮವೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಿಲ್ಲ. ಅನ್ಯಾಯವೆಂದರೆ, ಅನ್ಯಾಯ ಅಷ್ಟೇ. ದುಷ್ಟತನವೆಂದರೆ ದುಷ್ಟತನ ಅಷ್ಟೇ. ಕ್ರೌರ್ಯದಲ್ಲಿ ಹಿಂದೂ-ಮುಸ್ಲಿಮ್ ಕ್ರೌರ್ಯ ಎಂಬ ಬೇಧವಿಲ್ಲ. ಆನೆ ಮತ್ತು ಹಸು ಇವೆರಡೂ ಮೂಕ ಪ್ರಾಣಿಗಳು. ಅವುಗಳ ಮೇಲೆ ದೌರ್ಜನ್ಯ ಎಸಗಿದವರು ದುಷ್ಟರೇ ಹೊರತು ಅವರಲ್ಲಿ ಹಿಂದೂ ದುಷ್ಟ-ಮುಸ್ಲಿಮ್ ದುಷ್ಟ, ಎಡ ದುಷ್ಟ, ಬಲ ದುಷ್ಟ ಎಂಬ ವ್ಯತ್ಯಾಸ ಮಾಡುವುದು ಧರ್ಮ ವಿರೋಧಿ. ಇದು ಪ್ರಾಣಿಗಳಿಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಮನುಷ್ಯರ ಮೇಲಿನ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿಯೂ ಇವೇ ಮಾನದಂಡವನ್ನು ಅಳವಡಿಸಬೇಕು. ಅನ್ಯಾಯ- ಹಿಂದೂ ಎಸಗಿದರೂ ಮುಸ್ಲಿಮ್ ಎಸಗಿದರೂ ಅನ್ಯಾಯವೇ. ನೋವು- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ನೋವೇ. ಪ್ರಾಮಾಣಿಕತೆ- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ಪ್ರಾಮಾಣಿಕತೆಯೇ. ಕೆಡುಕು ಮತ್ತು ಒಳಿತು ಯಾವ ಧರ್ಮದ ಖಾಸಗಿ ಸೊತ್ತೂ ಅಲ್ಲ. ಯಾರು ಅದನ್ನು ಕೈವಶ ಮಾಡಿಕೊಳ್ಳುತ್ತಾರೋ ಅವರದು. ಆನೆ ಮತ್ತು ಹಸು ಪ್ರಕರಣಗಳು ನಮ್ಮೊಳಗಿನ ದುಷ್ಟತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ದುಷ್ಟತನವನ್ನು ಖಂಡಿಸುವ ಬದಲು ದುಷ್ಟತನ ಎಲ್ಲಿ ನಡೆದಿದೆ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನೋಡಿಕೊಂಡು ಪ್ರತಿಕ್ರಿಯಿಸುವ ಅತೀ ದುಷ್ಟತನವೊಂದು ನಮ್ಮೊಳಗೆ ಇದೆ. ಆನೆ ಮತ್ತು ಹಸು ನಮ್ಮಲ್ಲಿನ ಈ ದುಷ್ಟತನಕ್ಕೆ ಕನ್ನಡಿ ಹಿಡಿದಿದೆ, ಅಷ್ಟೇ.






