Tuesday, 20 June 2023

20 ಕೋಟಿ ಜನಸಂಖ್ಯೆಯನ್ನು ನಿರ್ಲಕ್ಷಿಸಬೇಡಿ

 

23-5- 2023

ರಾಜ್ಯ ಚುನಾವಣಾ ಫಲಿತಾಂಶದಿಂದ ಬಿಜೆಪಿ ಕಲಿತಿರುವ ಪಾಠವೇನು ಎಂಬುದಕ್ಕೆ ರಾಷ್ಟ್ರೀಯ ಮುಸ್ಲಿಮ್ ಮಂಚ್(MRM)ನ ಹೊಸ ನಡೆಯಲ್ಲಿ ಉತ್ತರವಿದೆ.

MRMನ ಮುಖ್ಯ ಉದ್ದೇಶವೇ ಮುಸ್ಲಿಮರನ್ನು ಬಿಜೆಪಿಯತ್ತ ಒಲಿಸುವುದು ಅಥವಾ ಮುಸ್ಲಿಮರಲ್ಲಿ ಸಂಘಪರಿವಾರದ ಬಗ್ಗೆ ಸದ್ಭಾವನೆಯನ್ನು ಮೂಡಿಸುವುದು. ರಾಜ್ಯ ಚುನಾವಣಾ ಫಲಿತಾಂಶದ ಮುನ್ನಾ ದಿನದವರೆಗೂ ಮೌನವಾಗಿದ್ದ ರಾಷ್ಟ್ರೀಯ ಮುಸ್ಲಿಮ್ ಮಂಚ್ ಇದೀಗ ಮೌನ ಮುರಿದಿದೆ. ರಾಜ್ಯದಲ್ಲಿ ಬಿಜೆಪಿಗೆ ಮುಖಭಂಗವಾಗಿರುವುದು ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳೆಲ್ಲ ಒಟ್ಟು ಸೇರಿ ಬಿಜೆಪಿಯನ್ನು ಎದುರಿಸುವ ಸೂಚನೆಗಳು ಕಾಣಿಸುತ್ತಿರುವುದರ ಬೆನ್ನಿಗೇ ‘ಏಕ ರಾಷ್ಟ್ರ, ಏಕ ಧ್ವಜ, ಏಕ ರಾಷ್ಟ್ರೀಯ ಗೀತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮುಸ್ಲಿಮರ ನಡುವೆ ಅಭಿಯಾನ ನಡೆಸಲು ಅದು ಸಿದ್ಧವಾಗಿದೆ. ‘ನಿಜವಾದ ಮುಸ್ಲಿಮ್ ಒಳ್ಳೆಯ ನಾಗರಿಕನಾಗಿರುತ್ತಾನೆ’ ಎಂಬುದು ಈ ಅಭಿಯಾನದ ಸಂದೇಶ. ಜೂನ್ 8ರಿಂದ 11ರ ವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ MRM ಸ್ವಯಂಸೇವಕರು ಮತ್ತು ಕಾರ್ಯಕರ್ತರಿಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ಆರೆಸ್ಸೆಸ್ ಕಾರ್ಯಕಾರೀ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್ ಇದರಲ್ಲಿ ಭಾಗವಹಿಸಲಿದ್ದಾರೆ. 2021ರ ಬಳಿಕ ಈವರೆಗೆ MRM ಸದಸ್ಯರಿಗೆ ತರಬೇತಿ ಶಿಬಿರವನ್ನೇ ಏರ್ಪಡಿಸಿಲ್ಲ ಎಂಬುದೂ ಮುಖ್ಯ. ನಿಜವಾಗಿ,

ಈ ಚುನಾವಣೆಯಲ್ಲಿ ಸ್ಪಷ್ಟವಾದ ಅಂಶವೇನೆಂದರೆ, ಬಿಜೆಪಿಯ ಸೋಲು ಮತ್ತು ಗೆಲುವಿನಲ್ಲಿ ಮುಸ್ಲಿಮರ ಪಾತ್ರ ಅತಿಪ್ರಧಾನವಾದುದು ಎಂಬುದು. ಸೋತ ಬಿಜೆಪಿಯ ಹಲವು ಪ್ರಮುಖ ನಾಯಕರು ಈ ಬಾರಿ ಮುಸ್ಲಿಮರ ವಿರುದ್ಧ ಬಹಿರಂಗ ಅಸಮಾಧಾನ ಸೂಚಿಸುತ್ತಿರುವುದೂ ಈ ಲೆಕ್ಕಾಚಾರವನ್ನು ಇನ್ನಷ್ಟು ನಿಚ್ಚಳಗೊಳಿಸುತ್ತದೆ.

ಬಿಜೆಪಿ ನಾಯಕರಾದ ಶ್ರೀರಾಮುಲು, ಕೊಡಗಿನ ಭೋಪಯ್ಯ, ಹಾಸನದ ಪ್ರೀತಂ ಗೌಡ, ಸಿ.ಟಿ. ರವಿ ಸಹಿತ ಬಿಜೆಪಿಯ ಹಲವು ಮುಖಂಡರ ಗೆಲುವಿನಲ್ಲಿ ಈವರೆಗೆ ಮುಸ್ಲಿಮರು ಅತಿ ಮುಖ್ಯ ಪಾತ್ರ ನಿಭಾಯಿಸುತ್ತಿದ್ದರು. ನಿರ್ದಿಷ್ಟ ಪ್ರಮಾಣದ ಮುಸ್ಲಿಮ್ ಮತಗಳು ತಮ್ಮ ಖಾತೆಗೆ ಬೀಳುತ್ತಿದೆ ಎಂಬುದು ಈ ಎಲ್ಲರಿಗೂ ಗೊತ್ತಿತ್ತು. ಆದರೆ ಬಿಜೆಪಿ ಪ್ರತಿಯಾಗಿ ಮುಸ್ಲಿಮರಿಗೆ ನೀಡಿದ್ದಾದರೂ ಏನು? ಅವಮಾನ, ಹಿಂಸೆ, ಕಿರುಕುಳ ಮತ್ತು ದಬ್ಬಾಳಿಕೆ. ಬೊಮ್ಮಾಯಿ ಸರಕಾರವಂತೂ ತನ್ನ ಬಂದೂಕನ್ನು ಮುಸ್ಲಿಮರತ್ತಲೇ ತಿರುಗಿಸಿ ಇಟ್ಟಿತ್ತು. ಒಂದರ ಮೇಲೆ ಒಂದು ಮುಸ್ಲಿಮ್ ವಿರೋಧಿ ಧೋರಣೆಗಳನ್ನು ಪ್ರತ್ಯಕ್ಷವೋ ಪರೋಕ್ಷವೋ ಅಳವಡಿಸುತ್ತಲೇ ಬಂತು. ತಮ್ಮ ಪಕ್ಷಕ್ಕೆ ಮುಸ್ಲಿಮರು ಮತ ಚಲಾಯಿಸುತ್ತಾರೆ ಎಂದು ಗೊತ್ತಿದ್ದೂ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ ಮತ್ತು ಕೊನೆಗೆ ಮೀಸಲಾತಿ ರದ್ಧತಿಗೆ ಮುಂದಾಗುವುದೆಂದರೆ ಅರ್ಥವೇನು? ನಿಮ್ಮ ಮತಗಳ ಅಗತ್ಯವಿಲ್ಲ ಎಂದಲ್ಲವೇ?

ಮುಸ್ಲಿಮರಿಗೆ ಹೋಲಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಅತ್ಯಂತ ಬಲಿಷ್ಠ ಮತ್ತು ಪ್ರಭಾವಿ. ಈ ಎರಡೂ ಸಮುದಾಯಗಳು ಈ ರಾಜ್ಯಕ್ಕೆ ಒಂದಕ್ಕಿಂತ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟಿವೆ. ಅತ್ಯಂತ ಪ್ರಮುಖ ಸಚಿವ ಪದವಿಗಳನ್ನು ಪಡೆದಿದೆ. ಲಿಂಗಾಯತ ಮತ್ತು ಒಕ್ಕಲಿಗ ಮಠಾಧೀಶರು ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಿಗಳು. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ರಂಥ ಪ್ರಭಾವಿ ಒಕ್ಕಲಿಗ ಮುಖಂಡರು ರಾಜ್ಯ ರಾಜಕಾರಣದಲ್ಲಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿಯಂಥ ಲಿಂಗಾಯತ ಪ್ರಮುಖರೂ ರಾಜ್ಯ ರಾಜಕಾರಣದ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಇದ್ದೂ ಅತಿ ದುರ್ಬಲ ಮತ್ತು ರಾಜಕೀಯವಾಗಿ ಯಾವ ಪ್ರಭಾವವೂ ಇಲ್ಲದ ಮುಸ್ಲಿಮ್ ಸಮುದಾಯದ 4% ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಬಿಜೆಪಿ ಸರಕಾರ ಹಂಚಲು ಕಾರಣವೇನು? ಈ ಬಾರಿಯ ವಿಧಾನಸಭೆಯಲ್ಲಿ ಮುಸ್ಲಿಮ್ ಶಾಸಕರ ಸಂಖ್ಯೆ ಬರೇ 9. ಅಲ್ಲದೇ ಇವರಾರೂ ಉಪಮುಖ್ಯಮಂತ್ರಿಯಾಗುವುದು ಬಿಡಿ, ಪ್ರಭಾವಿ ಖಾತೆಗಳನ್ನು ಪಡೆಯದಷ್ಟೂ ಹಿಂದಣ ಬೆಂಚಿನವರು. ಅದೇವೇಳೆ,

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸುಮಾರು 90ರಷ್ಟು ಶಾಸಕರು ಈಗಿನ ವಿಧಾನಸಭೆಯಲ್ಲಿದ್ದಾರೆ. ಬೊಮ್ಮಾಯಿ ಸರಕಾರ ಇದ್ದಾಗಲೂ ಈ ಎರಡು ಸಮುದಾಯಗಳೇ ವಿಧಾನಸಭೆಯಲ್ಲಿ ಪ್ರಭಾವಿಯಾಗಿದ್ದುವು. ಬಹುದೊಡ್ಡ ಶಾಸಕರ ಸಂಖ್ಯೆಯೂ ಇತ್ತು. ಇವೆಲ್ಲ ಬೊಮ್ಮಾಯಿ ಸರಕಾರಕ್ಕೆ ಗೊತ್ತಿಲ್ಲ ಎಂದಲ್ಲ. ಆದರೂ ಮುಸ್ಲಿಮರಲ್ಲಿ ಒಂದು ಮಾತನ್ನೂ ಕೇಳದೆ, ಅನಾಮತ್ತಾಗಿ ಮೀಸಲಾತಿಯನ್ನು ಕಿತ್ತರಲ್ಲ ಮತ್ತು ಅತ್ಯಂತ ಬಲಾಢ್ಯ ಸಮುದಾಯಗಳಿಗೆ ಅವನ್ನು ಹಂಚಿದರಲ್ಲ, ಅವರ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಈ ಬಗ್ಗೆ ಪ್ರಶ್ನಿಸಿದ್ದಾರಾ? ಮುಸ್ಲಿಮರು ತಮಗೆ ಮತ ಹಾಕಲಿಲ್ಲ ಎಂದು ಅಸಮಾಧಾನ ಸೂಚಿಸುತ್ತಿರುವವರು ಯಾಕೆ ಇಂಥ ಅನ್ಯಾಯದ ಸಂದರ್ಭದಲ್ಲಿ ಧ್ವನಿ ಎತ್ತಲಿಲ್ಲ? ಈ ನಿರ್ಧಾರದಿಂದ ತಮ್ಮ ಮತಬ್ಯಾಂಕ್ ಗಟ್ಟಿಯಾಗುತ್ತದೆ ಎಂಬ ಸ್ವರಕ್ಷಣಾ ತಂತ್ರವೇ ಈ ಮೌನಕ್ಕೆ ಕಾರಣವಾಗಿತ್ತಲ್ಲವೇ? ಅಂದಹಾಗೆ,

ಮುಸ್ಲಿಮರಿಗೆ ಸಂಬಂಧಿಸಿದಂತೆ ಬೊಮ್ಮಾಯಿ ಸರಕಾರದ ಯಾವ ನಿರ್ಧಾರವೂ ಪಕ್ಕಾ ಲೆಕ್ಕಾಚಾರದಿಂದಲೇ ಕೂಡಿತ್ತು. ಚುನಾವಣಾ ರಾಜಕೀಯವನ್ನು ಲೆಕ್ಕ ಹಾಕಿಕೊಂಡೇ ಅದು ಒಂದೊಂದೇ ಮುಸ್ಲಿಮ್ ವಿರೋಧಿ ದಾಳಗಳನ್ನು ಉರುಳಿಸತೊಡಗಿತ್ತು. ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸುವ ಮೂಲಕ ಹಿಂದೂ ಮತಬ್ಯಾಂಕನ್ನು ಧ್ರುವೀಕರಣಗೊಳಿಸುವುದು ಅವರ ಉದ್ದೇಶವಾಗಿತ್ತು. ಅದನ್ನು ಅವರು ಎಷ್ಟು ನಿರ್ಲಜ್ಜವಾಗಿ ಮಾಡಿದರೆಂದರೆ, ಪ್ರವೀಣ್ ನೆಟ್ಟಾರು ಮನೆಗೆ ಹೋದ ಮುಖ್ಯಮಂತ್ರಿಗಳು ಅಲ್ಲೇ ಪಕ್ಕದಲ್ಲಿದ್ದ ಮಸೂದ್ ಮನೆಗೆ ಭೇಟಿ ಕೊಡಲಿಲ್ಲ. ಪ್ರವೀಣ್ ನೆಟ್ಟಾರಿನಂಥದ್ದೇ ತಾಯಿ ಆ ಮನೆಯಲ್ಲೂ ಇದ್ದರು. ಮನೆಯ ಏಕೈಕ ಅನ್ನದ ಬಟ್ಟಲಾಗಿದ್ದ ಹರೆಯದ ಮಗನನ್ನು ಕಳಕೊಂಡು ಆ ತಾಯಿ ಧರಾಶಾಹಿಯಾಗಿದ್ದರು. ನೆಟ್ಟಾರು ಮನೆಗೆ ಬಂದ ಮುಖ್ಯಮಂತ್ರಿಗಳು ತನ್ನ ಮನೆಗೂ ಬರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಮುಖ್ಯಮಂತ್ರಿಗಳ ಭೇಟಿ ಮತ್ತು ಪರಿಹಾರ ಘೋಷಣೆ ರಾಜಕೀಯ ಉದ್ದೇಶವನ್ನು ಹೊಂದಿತ್ತೇ ಹೊರತು ಸಾಂತ್ವನವಲ್ಲ. ಅವರು ನೆಟ್ಟಾರು ಕುಟುಂಬಕ್ಕೆ 25 ಲಕ್ಷ ಪರಿಹಾರ, ಅವರ ಪತ್ನಿಗೆ ಉದ್ಯೋಗವನ್ನು ಘೋಷಿಸಿದರಲ್ಲದೇ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸಾಂತ್ವನವನ್ನಾಗಲಿ, ಪರಿಹಾರವನ್ನಾಗಲಿ, ಉದ್ಯೋಗವನ್ನಾಗಲಿ ಕೊನೆವರೆಗೂ ಘೋಷಿಸಲೇ ಇಲ್ಲ. ಅಲ್ಲದೇ, ಮುಖ್ಯಮಂತ್ರಿಗಳ ಈ ವರ್ತನೆಯನ್ನು ಅವರ ಸಂಪುಟದ ಸಚಿವರಾಗಲಿ, ಶಾಸಕರಾಗಲಿ ಅಥವಾ ಇವತ್ತು ಮುಸ್ಲಿಮರು ತಮಗೆ ಮತ ಹಾಕಿಲ್ಲ ಎಂದು ಅಸಮಾಧಾನ ಸೂಚಿಸುತ್ತಿರುವವರಾಗಲಿ ಯಾರೂ ವಿರೋಧಿಸಲೇ ಇಲ್ಲ.

ಈ ರಾಜ್ಯದಲ್ಲಿ ಮುಸ್ಲಿಮರು ಸುಮಾರು ಒಂದು ಕೋಟಿಯಷ್ಟಿದ್ದಾರೆ. ದೇಶದಲ್ಲಿ ಸುಮಾರು 20 ಕೋಟಿಯಷ್ಟಿದ್ದಾರೆ. ಇವೇನೂ ನಗಣ್ಯವಲ್ಲ. ಇಷ್ಟು ದೊಡ್ಡ ಸಂಖ್ಯೆಯನ್ನು ಸದಾ ಗೋಳು ಹೊಯ್ದುಕೊಂಡು ಚುನಾವಣೆಯನ್ನು ಗೆಲ್ಲಬಹುದು ಎಂಬ ಬಿಜೆಪಿ ಭಾವನೆಗೆ ಈ ಬಾರಿ ಬಲವಾದ ತಿರುಗೇಟು ಬಿದ್ದಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಮುಸ್ಲಿಮರು ಅತ್ಯಂತ ಯೋಜಿತವಾಗಿ ಮತ ಚಲಾಯಿಸಿದ್ದಾರೆ. ತಮ್ಮ ಹಕ್ಕುಗಳಿಗೆ ಬರೆ ಎಳೆಯುವುದನ್ನೇ ಆಡಳಿತ ನೀತಿಯಾಗಿಸಿಕೊಂಡಿರುವ ಬೊಮ್ಮಾಯಿ ಸರಕಾರಕ್ಕೆ ಮುಟ್ಟಿ ನೋಡುವ ಉತ್ತರವನ್ನು ನೀಡಿದ್ದಾರೆ. ಇತರ ಸಮುದಾಯಗಳ ಓಲೈಕೆಗಾಗಿ ಮುಸ್ಲಿಮರನ್ನು ನಿರ್ಲಕ್ಷಿಸುವುದು ರಾಜಕೀಯವಾಗಿ ಎಷ್ಟು ಅಪಾಯಕಾರಿ ಎಂಬುದನ್ನು ಸದ್ದಿಲ್ಲದೇ ಸಾರಿದ್ದಾರೆ. ಬಹುಶಃ ಬಿಜೆಪಿ ಪಾಲಿಗೆ ಮುಸ್ಲಿಮರ ಈ ಸಂದೇಶ ಬಲವಾಗಿ ನಾಟಿದೆ. ಮುಸ್ಲಿಮರನ್ನು ಖಳರಂತೆ ಸದಾ ಬಿಂಬಿಸುವುದರಿಂದ ತಿರುಗೇಟು ಬೀಳಬಹುದು ಎಂಬ ಜ್ಞಾನೋದಯವಾಗಿದೆ. ಆ ಕಾರಣದಿಂದ ಅದು ಈಗಿಂದೀಗಲೇ MRMನ್ನು ಕಣಕ್ಕಿಳಿಸಿದೆ. ಮುಸ್ಲಿಮ್ ಸಮುದಾಯದ ಮುನಿಸನ್ನು ಹೋಗಲಾಡಿಸಿ ರಾಷ್ಟ್ರೀಯತೆಯ ನೆಪದಲ್ಲಿ ಬಿಜೆಪಿಯತ್ತ ಸೆಳೆಯುವುದಕ್ಕೆ ಪಕ್ಕಾ ತಂತ್ರ ಹೆಣೆದಂತಿದೆ. ಮುಸ್ಲಿಮರು ಎಲ್ಲೆಲ್ಲಾ ನಿರ್ಣಾಯಕರಾಗಿರುತ್ತಾರೋ ಅಲ್ಲೆಲ್ಲಾ ಒಂದಕ್ಕಿಂತ ಹೆಚ್ಚು ಮುಸ್ಲಿಮ್ ಪಕ್ಷೇತರರನ್ನು ನಿಲ್ಲಿಸಿ ಮತ ವಿಭಜನೆಯಾಗುವಂತೆ ಮಾಡಿ ಗೆಲ್ಲುವುದು ಬಿಜೆಪಿ ಈ ವರೆಗೆ ಮಾಡಿಕೊಂಡು ಬಂದ ತಂತ್ರವಾಗಿತ್ತು. ಅಲ್ಲದೇ, ಇತರ ರಾಜಕೀಯ ಪಕ್ಷಗಳೂ ಇಂಥ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ವಿಭಜನೆಯಾಗುವುದಕ್ಕೆ ಕಾರಣವಾಗುತ್ತಿತ್ತು. ಆದರೆ,

ಕರ್ನಾಟಕ ಚುನಾವಣೆ ಈ ಮತ ವಿಭಜನೆಗೆ ತಿರುಗೇಟು ಕೊಟ್ಟಿದೆ. ಮುಸ್ಲಿಮರು ಅತ್ಯಂತ ಲೆಕ್ಕಾಚಾರದೊಂದಿಗೆ ಮತ ವಿಭಜನೆಯಾಗದಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಹೈಕಮಾಂಡನ್ನು ಬಹುಶಃ ಇದು ನಿದ್ದೆಗೆಡಿಸಿರಬೇಕು. ತಮ್ಮ ಬಹು ಯಶಸ್ವಿ ತಂತ್ರದ ಮರ್ಮವನ್ನು ಮುಸ್ಲಿಮರು ಅರಿತುಕೊಳ್ಳುತ್ತಿದ್ದಾರೆ ಎಂಬ ಆತಂಕ ಹೈಕಮಾಂಡ್‌ಗೆ ಎದುರಾಗಿರಬೇಕು. ಆದ್ದರಿಂದಲೇ ಅದು MRMಅನ್ನು ಕಣಕ್ಕಿಳಿಸಿರುವಂತಿದೆ. ನಿಜವಾಗಿ,

ಇದೊಂದು ಸಕಾರಾತ್ಮಕ ಬೆಳವಣಿಗೆ. ಚುನಾವಣಾ ರಾಜಕೀಯದಲ್ಲಿ ಮುಸ್ಲಿಮರೂ ನಿರ್ಣಾಯಕರು ಎಂದು ಬಿಜೆಪಿ ಒಪ್ಪಿಕೊಳ್ಳುವುದಾದರೆ ಅದು ಸ್ವಾಗತಾರ್ಹ. ಆದರೆ, ಅದು ತನ್ನ ಮಾತು, ವರ್ತನೆ, ನಡವಳಿಕೆ ಮತ್ತು ಧೋರಣೆಗಳಲ್ಲಿ ವ್ಯಕ್ತವಾಗಬೇಕು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯನ್ನು ಕಾರ್ಯತಃ ಮಾಡಿ ತೋರಿಸಬೇಕು. ಬಿಜೆಪಿ ಬದಲಾಗಲಿ.

ಸಂಸತ್ ಉದ್ಘಾಟನೆ ಹುಟ್ಟು ಹಾಕಿರುವ ಕೆಲವು ಪ್ರಶ್ನೆಗಳು..

 

29-5- 2023

ಪ್ರಧಾನಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನದ ಒಳಗೆ ಚೋಳ ರಾಜಪ್ರಭುತ್ವದ ಸಂಕೇತವಾದ ಸೆಂಗೋಲನ್ನು ಎತ್ತಿ ಹಿಡಿದು ನಡೆಯುತ್ತಿದ್ದಾಗ ಹೊರಗೆ ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದು ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳನ್ನು ನೆಲಕ್ಕೆ ಕೆಡಹುವಲ್ಲಿ ಪೊಲೀಸರು ನಿರತರಾಗಿದ್ದರು. ಸಂಸತ್ ಭವನದಲ್ಲಿ ಸೆಂಗೋಲ್‌ಗೆ ಮಾನ-ಸಮ್ಮಾನಗಳು ದೊರೆಯುತ್ತಿದ್ದಾಗ ಅದಕ್ಕಿಂತ ತುಸು ದೂರದಲ್ಲಿ ರಾಷ್ಟ್ರಧ್ವಜ ನೆಲಕ್ಕೆ ಬಿದ್ದು ಒದ್ದಾಡುತ್ತಿತ್ತು. ಅದನ್ನು ಎತ್ತಿ ಹಿಡಿದಿದ್ದ ಕುಸ್ತಿಪಟುಗಳನ್ನು ಬಲವಂತವಾಗಿ ಎತ್ತಿ ಒಯ್ಯಲಾಗುತ್ತಿತ್ತು. ನಿಜವಾಗಿ,

ಇದೊಂದು ರೂಪಕ. ಪ್ರಜಾತಂತ್ರದ ಮೇಲೆ ರಾಜಪ್ರಭುತ್ವ ಹಿಡಿತ ಸಾಧಿಸುತ್ತಿರುವುದರ ಸಂಕೇತ. ಈ ದೇಶದ ಪ್ರಜಾತಂತ್ರಕ್ಕೆ 75 ವರ್ಷಗಳಷ್ಟೇ ತುಂಬಿವೆ. ಆದರೆ, ಈ ದೇಶದ ರಾಜಪ್ರಭುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆ ಇತಿಸಾಹದಲ್ಲಿ ಪ್ರಜೆಗಳಿಗೆ ಪ್ರಭುತ್ವ ಇರಲಿಲ್ಲ. ರಾಜ ಮಾಡಿದ್ದೇ ಕಾನೂನು, ಹೇಳಿದ್ದೇ ನ್ಯಾಯ. ಆ ಇತಿಹಾಸ ಮರುಕಳಿಸಬಾರದು ಎಂಬ ಕಾರಣಕ್ಕಾಗಿಯೇ ಪ್ರಜಾತಂತ್ರವನ್ನು ಈ ದೇಶ ಒಪ್ಪಿಕೊಂಡಿತು. ಜನರೇ ಜನರನ್ನು ಆಳಬೇಕು ಮತ್ತು ಆಳುವವ ಪ್ರಶ್ನಾರ್ಹನಾಗಬೇಕು ಎಂಬ ಪ್ರಮುಖ ತತ್ವವೊಂದು ಪ್ರಜಾತಂತ್ರದಲ್ಲಿದೆ. ಪ್ರಜಾತಂತ್ರದ 75 ವರ್ಷಗಳ ಬಳಿಕ ಮರಳಿ ಈ ದೇಶವನ್ನು ರಾಜಪ್ರಭುತ್ವದ ಕಡೆಗೆ ಒಯ್ಯಲಾಗುತ್ತಿದೆಯೇನೋ ಎಂಬ ಸಂದೇಹವನ್ನು ಹೊಸ ಸಂಸತ್ ಭವನದ ಉದ್ಘಾಟನೆ ಮೂಡಿಸಿದೆ. ಅಷ್ಟಕ್ಕೂ,

ಡಿಸೆಂಬರ್ 10, 2020ರಂದು ಶಿಲಾನ್ಯಾಸಗೊಂಡ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಇದಕ್ಕಿಂತ ಉತ್ತಮವಾಗಿ ಮತ್ತು ಸರ್ವರನ್ನೂ ಒಳಗೊಳಿಸಿಕೊಂಡು ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆ ಬಹು ಮಹತ್ವದ್ದು. ಸಾವಿರಾರು ಕಾರ್ಮಿಕರು ಬೆವರು ಸುರಿಸಿ ನಿರ್ಮಿಸಿದ ಕಟ್ಟಡವನ್ನು ಇಷ್ಟೊಂದು ಏಕಮುಖವಾಗಿ ಉದ್ಘಾಟಿಸಬೇಕಿತ್ತೇ? ಪ್ರಮುಖ 20 ರಾಜಕೀಯ ಪಕ್ಷಗಳು ಈ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದುವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇ ಆಹ್ವಾನವನ್ನು ನೀಡಲಿಲ್ಲ. ಯಾಕೆ ಆಹ್ವಾನ ನೀಡಲಿಲ್ಲ ಎಂಬ ಸಹಜ ಪ್ರಶ್ನೆಗೆ ಕೇಂದ್ರದಿಂದ ಈವರೆಗೂ ಸಮರ್ಪಕ ಉತ್ತರ ಲಭ್ಯವಾಗಿಯೂ ಇಲ್ಲ. ರಾಷ್ಟ್ರಪತಿಯನ್ನೇ ಹೊರಗಿಟ್ಟು ಸಂಸತ್ ಭವನದ ಉದ್ಘಾಟನೆ ಮಾಡಬೇಕಾದ ಅಗತ್ಯ ಏನಿತ್ತು? ಅದರಲ್ಲೂ ಮುರ್ಮು ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ ಅಪರೂಪದ ಮಹಿಳೆ. ಸೆಂಗೋಲ್ ಅನ್ನು ಪ್ರಧಾನಿಗೆ ಹಸ್ತಾಂತರಿಸಿದ ತಮಿಳುನಾಡಿನ ಅಧೀನಮ್ ಪೀಠದ ಅರ್ಚಕರು ಮುರ್ಮು ಉಪಸ್ಥಿತಿಯ ಬಗ್ಗೆ ಆಕ್ಷೇಪ ಎತ್ತಿದ್ದರೆ ಅಥವಾ ಕೇಂದ್ರ ಸರಕಾರವೇ ಸ್ವಯಂಪ್ರೇರಿತವಾಗಿ ಇಂಥದ್ದೊಂದು ನಿರ್ಧಾರ ತಳೆಯಿತೇ ಅಥವಾ ಮುರ್ಮು ಅವರೇ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರೇ ಅಥವಾ ವಿಪಕ್ಷಗಳ ಬೇಡಿಕೆಗೆ ಮಣಿಯಲ್ಲ ಎಂಬ ಕೇಂದ್ರದ ಹಠಮಾರಿ ಧೋರಣೆಯೇ ಇವೆಲ್ಲದಕ್ಕೂ ಕಾರಣವಾಯಿತೇ… ಎಂಬೆಲ್ಲಾ ಪ್ರಶ್ನೆಗಳಿಗೆ ಮೋದಿಯವರ ಮೌನ ಅವಕಾಶ ಮಾಡಿಕೊಟ್ಟಿದೆ. ಅಷ್ಟಕ್ಕೂ,

ಆಧುನಿಕ ಆಲೋಚನೆ, ವಿನ್ಯಾಸ ಮತ್ತು ಸವಲತ್ತುಗಳನ್ನು ಒಳಗೊಂಡ ಕಟ್ಟಡವೊಂದರ ಉದ್ಘಾಟನೆಯನ್ನು ಇಷ್ಟೊಂದು ವಿವಾದ ಪೂರ್ಣವಾಗಿ ಮಾಡಲು ಕಾರಣ ಏನು? ಅದೇನೂ ಪ್ರಧಾನಿಯ ಖಾಸಗಿ ಕಟ್ಟಡವಲ್ಲ. ಇಂದು ಅಧಿಕಾರ ಅವರ ಕೈಯಲ್ಲಿದ್ದರೆ ನಾಳೆ ವಿಪಕ್ಷಗಳ ಕೈಗೂ ಹೋಗಬಹುದು. ಹೀಗಿರುವಾಗ ವಿಪಕ್ಷಗಳನ್ನೇ ನಿರಾಕರಿಸಿಕೊಂಡು ಸಂಸತ್ ಉದ್ಘಾಟನೆ ಮಾಡುವುದರ ಹಿಂದೆ ಬೇರೇನೋ ಉದ್ದೇಶಗಳಿದ್ದುವೇ? ಸಂಸತ್‌ನ ಸಂಪೂರ್ಣ ಕ್ರೆಡಿಟ್ಟು ತನಗೊಬ್ಬನಿಗೇ ಸಲ್ಲಬೇಕು ಎಂಬ ಉದ್ದೇಶವೇ ಈ ಎಲ್ಲಕ್ಕೂ ಕಾರಣವೇ? ಈ ಸಂಸತ್‌ನ ಮೂಲಕ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವ ತಂತ್ರವೂ ಅದರ ಹಿಂದಿತ್ತೇ? ಇಂಥ ಪ್ರಶ್ನೆಗಳಿಗೆ ಪೂರಕ ಉತ್ತರವನ್ನೇ ಉದ್ಘಾಟನಾ ಸಮಾರಂಭ ದೃಶ್ಯಗಳು ಸಾಕ್ಷಿ ಹೇಳುತ್ತಿವೆ.

ಉದ್ಘಾಟನೆ ಮತ್ತು ಆ ಬಳಿಕದ ಅಷ್ಟೂ ಸಮಯ ಕೇವಲ ಪ್ರಧಾನಿಯವರೇ ಎಲ್ಲೆಲ್ಲೂ ಕಾಣಿಸಿಕೊಂಡಿದ್ದರು. ಅವರನ್ನು ಕೇಂದ್ರೀಕರಿಸಿ ಮಾಧ್ಯಮಗಳು ದೃಶ್ಯಪ್ರಸಾರ ಮಾಡಿದ್ದುವು. ಅಧೀನಮ್ ಪೀಠದ ಅರ್ಚಕರ ಜೊತೆಗಿನ ದೃಶ್ಯ, ಸೆಂಗೋಲ್ ಹಿಡಿದು ನಡೆದಾಡಿದ ದೃಶ್ಯಗಳು, ಸೆಂಗೋಲ್‌ಗೆ ನಮಸ್ಕರಿಸುತ್ತಿರುವ ದೃಶ್ಯಗಳು, ಮಾತುಗಳು, ನಡವಳಿಕೆಗಳು, ಗೌರವಾರ್ಪಣೆ… ಹೀಗೆ ಪ್ರತಿಯೊಂದೂ ಮೋದಿಮಯವಾಗಿತ್ತು. ದೃಶ್ಯ ಮಾಧ್ಯಮಗಳಲ್ಲಂತೂ ಮೋದಿ ಇಲ್ಲದ ಸಂಸತ್ ಭವನವೇ ಇಲ್ಲ ಎಂಬಷ್ಟು ದೃಶ್ಯ ವೈಭವೀಕರಣ ನಡೆದಿತ್ತು. ಇವೆಲ್ಲ ಸಹಜವೇ ಅಥವಾ ಯೋಜನಾಬದ್ಧವಾಗಿ ಮತ್ತು ಕೇಂದ್ರದ ಸೂಚನೆಯ ಪ್ರಕಾರವೇ ನಡೆಯಿತೇ? ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸಿಕೊಂಡು ಅವುಗಳ ಮಾತುಗಳಿಗೂ ಬೆಲೆಕೊಟ್ಟು ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರೆ ಈ ಬಗೆಯ ವ್ಯಕ್ತಿ ವೈಭವಕ್ಕೆ ತೊಂದರೆಯಾಗಬಹುದು ಎಂಬ ಭೀತಿ ಪ್ರಧಾನಿಗಿತ್ತೇ? ಆದರೆ,

ಸಂಸತ್ ಭವನದ ಉದ್ಘಾಟನೆಯನ್ನು ಸಂಪೂರ್ಣವಾಗಿ ಮಸುಕುಗೊಳಿಸಿದ್ದು ಕುಸ್ತಿಪಟುಗಳ ಪ್ರತಿಭಟನೆ. ಈ ಪ್ರತಿಭಟನೆ ಸಂಸತ್ ಭವನ ಉದ್ಘಾಟನೆಯ ಸಡಗರವನ್ನೇ ಮಸುಕುಗೊಳಿಸಬಹುದು ಎಂದು ಪ್ರಧಾನಿ ನಿರೀಕ್ಷಿಸಿರುವ ಸಾಧ್ಯತೆ ಇಲ್ಲ. ಸಂಸತ್ ಉದ್ಘಾಟನೆ ಇಡೀ ದೇಶದ ಗಮನ ಸೆಳೆಯಬೇಕು ಮತ್ತು ಕೆಲವು ಸಮಯ ದೇಶದಲ್ಲಿ ಇದರ ಸುತ್ತಲೇ ಚರ್ಚೆಗಳಾಗಬೇಕು ಎಂದು ಪ್ರಧಾನಿ ಬಯಸಿರುವ ಸಾಧ್ಯತೆ ಇದೆ. ಅಂಥ ವಾತಾವರಣ ಸೃಷ್ಟಿಗಾಗಿ ವರ್ಷಗಳಿಂದ ತಯಾರಿ ನಡೆಸಿರುವುದಕ್ಕೂ ಅವಕಾಶ ಇದೆ. ಈ ನಡುವೆ ತಿಂಗಳ ಹಿಂದೆ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಿಳಿದರು. ತನ್ನನ್ನು ಪ್ರಶ್ನಿಸುವ ಯಾವುದೇ ಧ್ವನಿಯನ್ನೂ ತನ್ನ ವಿರೋಧಿ ಧ್ವನಿ ಎಂದು ಪರಿಗಣಿಸುವ ಪ್ರಧಾನಿ, ಇಲ್ಲೂ ಅದೇ ಧೋರಣೆ ತಳೆದರು. ಇದು ಅವರ ಮೊದಲ ತಪ್ಪು. ತನ್ನ ಸಂಸದ ಬೃಜ್‌ಭೂಷಣ್‌ರನ್ನು ರಾಷ್ಟ್ರೀಯ ಕುಸ್ತಿ ಫೆಡರೇಶನ್‌ಗೆ ರಾಜೀನಾಮೆ ಕೊಡಿಸಿ ತನಿಖೆ ಮುಗಿಯುವವರೆಗೆ ಪಕ್ಷದ ಚಟುವಟಿಕೆಯಿಂದ ದೂರ ಇಡುವುದು ಪ್ರಧಾನಿಗೆ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಹಾಗಂತ,

ಈ ಪ್ರತಿಭಟನೆಯೂ ದಿಢೀರ್ ಆಗಿರಲಿಲ್ಲ. ಮೂರು ತಿಂಗಳ ಹಿಂದೆ ಈ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದಿದ್ದರು. ಆಗ ಅವರಿಗೆ ಬೆಂಬಲವಾಗಿ ಕಮ್ಯುನಿಸ್ಟ್ ಪಕ್ಷದ ಬೃಂದಾ ಕಾರಾಟ್ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದರು. ಆದರೆ, ಈ ಕುಸ್ತಿಪಟುಗಳಿಗೆ ಪ್ರಧಾನಿ ಮೇಲೆ ಎಷ್ಟು ನಂಬಿಕೆ ಇತ್ತೆಂದರೆ, ಅವರನ್ನು ವೇದಿಕೆ ಹತ್ತದಂತೆ ತಡೆದಿದ್ದರು. ಇದು ರಾಜಕೀಯೇತರ ಪ್ರತಿಭಟನೆ ಎಂದು ಮುಲಾಜಿಲ್ಲದೇ ಹೇಳಿದ್ದರು. ಆ ಬಳಿಕ ಕೇಂದ್ರದ ಭರವಸೆಯೊಂದಿಗೆ ಅವರು ಪ್ರತಿಭಟನೆಯನ್ನೂ ಹಿಂಪಡೆದುಕೊಂಡಿದ್ದರು. ಆದರೆ, ಭರವಸೆಯಂತೆ ಕೇಂದ್ರ ನಡೆದುಕೊಂಡಿಲ್ಲ ಎಂಬ ಅಸಮಾಧಾನದಿಂದ ಅವರು ಮರಳಿ ಪ್ರತಿಭಟನೆಗಿಳಿದರು. ಆದ್ದರಿಂದ ಪ್ರಧಾನಿ ಇವರ ಮಾತುಗಳಿಗೆ ಕಿವಿಯಾಗಿ ಬೃಜ್‌ಭೂಷಣ್ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಅದರ ಬದಲು ಅವರ ಪಕ್ಷದ ಬೆಂಬಲಿಗರು ವಿವಿಧ ಸುಳ್ಳುಗಳನ್ನು ಈ ಪ್ರತಿಭಟನಾಕಾರರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹರಡತೊಡಗಿದರು. ಇದು ವಿಪರೀತ ಮಟ್ಟಕ್ಕೆ ತಲುಪಿದಾಗ ಸಂಸತ್ ಭವನದ ಎದುರು ಪ್ರತಿಭಟನೆ ಮಾಡುವುದಾಗಿ ಕುಸ್ತಿಪಟುಗಳು ಘೋಷಿಸಿದರು. ಒಂದುವೇಳೆ,

ಈ ಪ್ರತಿಭಟನೆಯಾಗಲಿ, ಪ್ರತಿಪಕ್ಷಗಳ ಬಹಿಷ್ಕಾರವಾಗಲಿ ನಡೆಯದೇ ಇರುತ್ತಿದ್ದರೆ ಸಂಸತ್ ಭವನದ ಉದ್ಘಾಟನೆ ಚಾರಿತ್ರಿಕವಾಗಿರುತ್ತಿತ್ತು. ಉದ್ಘಾಟನೆಗಿಂತ ಕುಸ್ತಿಪಟುಗಳೇ ಸೋಶಿಯಲ್ ಮೀಡಿಯಾದಲ್ಲಿ ತುಂಬಿಕೊಳ್ಳುವುದಕ್ಕೆ ಸಾಧ್ಯವೂ ಇರಲಿಲ್ಲ. ಸದ್ಯದ ಸ್ಥಿತಿ ಏನಾಗಿದೆಯೆಂದರೆ, ಸಂಸತ್ ಭವನದ ಚರ್ಚೆ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗಳಿಂದ ನಾ ಪತ್ತೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕುಸ್ತಿಪಟುಗಳಿಗೆ ಎಷ್ಟು ಅಮೋಘ ಬೆಂಬಲ ವ್ಯಕ್ತವಾಗಿದೆಯೆಂದರೆ, ಕುಸ್ತಿಪಟುಗಳ ಮೇ ಲಿನ ಹಲ್ಲೆ, ಅವರನ್ನು ಅಮಾನುಷವಾಗಿ ನಡೆಸಿಕೊಂಡ ಪೊಲೀಸರ ನಡೆ ಮತ್ತು ಇವೆಲ್ಲಕ್ಕೂ ಕಾರಣವಾಗಿರುವ ಮೋದಿ ಸರಕಾರದ ವೈ ಫಲ್ಯವನ್ನು ಟಿವಿ ಚಾನೆಲ್‌ಗಳೂ ಚರ್ಚಿಸಲೇಬೇಕಾದ ಒತ್ತಡಕ್ಕೆ ಒಳಗಾದುವು. ಕುಸ್ತಿಪಟುಗಳು ನೆಲದಲ್ಲಿ ಬಿದ್ದುಕೊಂಡಿರುವುದು ಮತ್ತು ಅವರ ಚೀರಾಟ, ರಾಷ್ಟ್ರಧ್ವಜ ಅನಾಥವಾಗಿರುವುದು ಎಲ್ಲವನ್ನೂ ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿದುವು. ಸೋಶಿಯಲ್ ಮೀಡಿಯವಂತೂ ಕುಸ್ತಿಪಟುಗಳ ಪ್ರತಿಭಟನೆಯಿಂದಲೇ ತುಂಬಿಕೊಂಡವು.

ಅಂದ ಹಾಗೆ, ಪ್ರಧಾನಿ ಯಾವ ಉದ್ದೇಶದೊಂದಿಗೆ ಮತ್ತು ತಯಾರಿಯೊಂದಿಗೆ ಸಂಸತ್ ಭವನದ ಉದ್ಘಾಟನೆಗೆ ಸಿದ್ಧರಾಗಿದ್ದರೋ ಆ ಎಲ್ಲವನ್ನೂ ಕುಸ್ತಿಪಟುಗಳ ಪ್ರತಿಭಟನೆ ಧರಾಶಾಹಿಗೊಳಿಸಿದೆ. ಲೈಂಗಿಕ ಕಿರುಕುಳಕ್ಕೊಳಗಾದವರು ಸಂಸತ್‌ನ ಹೊರಗೆ ಮತ್ತು ಕಿರುಕುಳ ಕೊಟ್ಟ ಆರೋಪಿ ಸಂಸತ್‌ನ ಒಳಗೆ ಇದ್ದ ದಾರುಣ ಸಂದರ್ಭವಾಗಿ ಸಂಸತ್ ಉದ್ಘಾಟನೆ ಗುರುತಿಸುವಂತಾಗಿದೆ. ಇದನ್ನು ಖಂಡಿತ ತಪ್ಪಿಸಬಹುದಾಗಿತ್ತು.

ಬಳಸು-ಬಿಸಾಕು ಹಂತಕ್ಕೆ ತಲುಪುತ್ತಿರುವ ಮದುವೆ

 6-6-2023

ಮದುವೆ ಮತ್ತು ವಿಚ್ಛೇದನ- ಇವೆರಡೂ ವಿರುದ್ಧ ಪದಗಳಂತಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ಜೋಡಿ ಪದಗಳಂತೆ ಗುರುತಿಸಿಕೊಳ್ಳುತ್ತಿವೆ. ‘ಮದುವೆಗಿಂತ ಗಂಟೆ ಮೊದಲು ವಧು ಅಥವಾ ವರ ಪರಾರಿ’, ‘ಮದುವೆ ಮಂಟಪದಲ್ಲೇ ವಿಚ್ಛೇದನ…’ ಇತ್ಯಾದಿ ಸುದ್ದಿಗಳು ಇವತ್ತು ಎಷ್ಟು ಸಹಜ ಅನ್ನಿಸಿಕೊಂಡಿವೆಯೆಂದರೆ, ಇಂಥ ಸುದ್ದಿಗಳನ್ನು ಸಮಾಜ ಆಘಾತಕಾರಿಯಾಗಿ ಸ್ವೀಕರಿಸುವ ಬದಲು ಮನೋರಂಜನೆಯಾಗಿ ಸ್ವೀಕರಿಸತೊಡಗಿವೆ.

ಮದುವೆಯನ್ನು ಏಳೇಳು ಜನುಮದ ಅನುಬಂಧವಾಗಿ ಕಟ್ಟಿಕೊಡುವ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಇವತ್ತು ವಿಚ್ಛೇದನೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿವೆ. ಮುಸ್ಲಿಮ್ ಸಮುದಾಯವೂ ಹಿಂದೆ ಬಿದ್ದಿಲ್ಲ. ದೇಶದಲ್ಲಿ 11 ಲಕ್ಷದ 40 ಸಾವಿರ ಪ್ರಕರಣಗಳು ಕುಟುಂಬ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ ಎಂದು ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು. ದೇಶದಲ್ಲಿ ಬರೇ 763 ಕುಟುಂಬ ನ್ಯಾಯಾಲಯಗಳಿದ್ದು, ಏರುತ್ತಿರುವ ಪ್ರಕರಣಗಳನ್ನು ನಿಭಾಯಿಸುವುದಕ್ಕೆ ಇವುಗಳಿಂದ ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿಶೇಷವಾಗಿ ಪ್ರಸ್ತಾಪಿಸಬೇಕಿಲ್ಲ. ಈ ಹಿಂದೆ ಪ್ರತಿ 1000 ಮಂದಿಗೆ ಒಂದು ವಿಚ್ಛೇದನ ಪ್ರಕರಣ ದಾಖಲಾಗುತ್ತಿದ್ದರೆ ಈಗ ಇವುಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿವೆ. ಹಾಗೆಯೇ ಸುಳ್ಳು ಪ್ರಕರಣ ದಾಖಲಾತಿಯಲ್ಲೂ ಏರಿಕೆಯಾಗುತ್ತಿವೆ. ವಿಚ್ಛೇದನ ಕೋರಿದ ಪತಿಯನ್ನು ಸತಾಯಿಸುವುದಕ್ಕಾಗಿ ವರದಕ್ಷಿಣೆ, ಗೃಹಹಿಂಸೆಯಂಥ ಸುಳ್ಳು ಕೇಸು ದಾಖಲಿಸುವುದೂ ನಡೆಯುತ್ತಿದೆ. ಇಂಥ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟು ಕಳೆದವಾರ ಮಹತ್ವದ ತೀರ್ಪಿತ್ತಿದೆ.

ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಪುಣೆಯ ಗೋಪಾಲ್ ಗುಂಡ್ಯಾಲ್ ಎಂಬವರು 2013ರಲ್ಲಿ ವಿವಾಹವಾಗಿದ್ದರು. ಆ ಬಳಿಕ, ‘ತನ್ನನ್ನು ಗಂಡ ನಿರ್ಲಕ್ಷಿಸಿದ, ಪುಣೆಗೆ ತನ್ನನ್ನು ಕರಕೊಂಡು ಹೋಗಿಲ್ಲ, ತನಗೆ ಹಿಂದಿ ಅಥವಾ ಮರಾಠಿ ಭಾಷೆ ತಿಳಿಯದೇ ಇರುವುದಕ್ಕಾಗಿ ಆತ ಹೀಗೆ ಮಾಡಿದ್ದಾನೆ…’ ಎಂದು ಸುಮಾ ಪೊಲೀಸರಲ್ಲಿ ದೂರಿದ್ದರು. ಅಲ್ಲದೇ, ಪುಣೆಯಲ್ಲಿರುವ ಪತಿಯ ಮನೆಗೆ ಹೋಗುವಂತೆ ಪತಿಯ ಸಂಬಂಧಿಕರು ತನ್ನನ್ನು ಬಲವಂತಪಡಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದರು. ಇದಾಗಿ 2018 ಡಿಸೆಂಬರ್‌ನಲ್ಲಿ ಪತಿ ಗೋಪಾಲ್ ಗುಂಡ್ಯಾಲ್ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯ ಪತ್ನಿ ಸುಮಾರಿಗೆ ನೋಟೀಸು ಜಾರಿ ಮಾಡಿತು. ಇದರಿಂದ ಕೆರಳಿದ ಸುಮಾ, ಪತಿ ಮತ್ತು ಸಂಬಂಧಿಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ವರದಕ್ಷಿಣೆ ಕಿರುಕುಳ ಮತ್ತು ಗೃಹಹಿಂಸೆಯ ದೂರು ದಾಖಲಿಸಿದರು. ಇದರನ್ವಯ ಪೊಲೀಸರು ಎಫ್‌ಐಆರ್ ಅನ್ನೂ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗುಂಡ್ಯಾಲ್ ಹೈಕೋರ್ಟ್ ಮೆಟ್ಟಲೇರಿದ್ದರು. ಇದೀಗ ಈ ಬಗ್ಗೆ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯವು, ವಿಚ್ಛೇದನ ನೋಟೀಸ್ ಬಂದ ಬಳಿಕ ಪತ್ನಿ ತನ್ನ ಪತಿ ಮತ್ತಿತರ ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ಅದನ್ನು ಪರಿಗಣಿಸಲಾಗದು ಎಂದಿದೆ. ಅಂದಹಾಗೆ,

ಇದು ಮದುವೆ ಮತ್ತು ವಿಚ್ಛೇದನದ ಒಂದು ಮುಖವಾದರೆ, ಇನ್ನೊಂದು ಮುಖಕ್ಕೆ ಕೇರಳದ ಹೈಕೋರ್ಟು ಇತ್ತೀಚೆಗೆ ಕನ್ನಡಿ ಹಿಡಿದಿತ್ತು.

‘ಕೇರಳವು ಮದುವೆಯನ್ನು ಯೂಸ್ ಆಂಡ್ ತ್ರೋ ಅಥವಾ ಬಳಸು-ಬಿಸಾಕು ಎಂಬ ರೀತಿಯಲ್ಲಿ ಪರಿಗಣಿಸುತ್ತಿವೆ’ ಎಂಬ ಆತಂಕವನ್ನು ಕಳೆದ ವರ್ಷದ ಕೊನೆಯಲ್ಲಿ ಕೇರಳ ಹೈಕೋರ್ಟು ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ಮುಹಮ್ಮದ್ ಮುಶ್ತಾಕ್ ಮತ್ತು ಸೋಪಿ ಥಾಮಸ್ ಅವರಿದ್ದ ಪೀಠ ಹೀಗೆ ಹೇಳುವುದಕ್ಕೆ ಒಂದು ಪ್ರಕರಣ ಕಾರಣವಾಗಿತ್ತು. ವ್ಯಕ್ತಿಯೋರ್ವ ವಿಚ್ಛೇದನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ. ತನ್ನ ಪತ್ನಿ ಅಸಹಜವಾಗಿ ವರ್ತಿಸುತ್ತಾಳೆ ಮತ್ತು ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿ ಗಲಾಟೆ ಮಾಡುತ್ತಾಳೆ ಎಂದೂ ಇದಕ್ಕೆ ಆತ ಕಾರಣವನ್ನು ಕೊಟ್ಟಿದ್ದ. ಪತ್ನಿ ಮತ್ತು ಮೂವರು ಮಕ್ಕಳ ಕುಟುಂಬವನ್ನು ತ್ಯಜಿಸಿ ಆತ ಇನ್ನೋರ್ವಳೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಈ ದ್ವಿಸದಸ್ಯ ಪೀಠ, ಆತನ ವಿಚ್ಛೇದನಾ ಬೇಡಿಕೆಯನ್ನು ತಿರಸ್ಕರಿಸಿತಲ್ಲದೇ, ವಿವಾಹೇತರ ಸಂಬಂಧವನ್ನು ಪತ್ನಿ ಪ್ರಶ್ನಿಸುವುದು ಅಸಹಜ ವರ್ತನೆ ಎನ್ನುವಂತಿಲ್ಲ ಮತ್ತು ಪತ್ನಿಯನ್ನು ಬಳಸಿ ಬಿಸಾಕುವ ವಸ್ತುವಾಗಿ ನೋಡುವಂತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತ್ತು. ಅಂದಹಾಗೆ,

ದೇಶದಲ್ಲಿಯೇ ಅತ್ಯಧಿಕ ವಿವಾಹ ವಿಚ್ಛೇದನ ಪ್ರಕರಣ ದಾಖಲಾಗುತ್ತಿರುವುದು ಕೇರಳದಲ್ಲಿ. ಪ್ರತಿದಿನ 10ಕ್ಕಿಂತ ಅಧಿಕ ವಿಚ್ಛೇದನ ಪ್ರಕರಣಗಳು ಕೇರಳದಲ್ಲಿ ದಾಖಲಾಗುತ್ತಿವೆ ಎಂಬುದು ಅಧಿಕೃತ ಮಾಹಿತಿ. ಕೇರಳದಲ್ಲಿ ಒಟ್ಟು 96 ಕೌಟುಂಬಿಕ ನ್ಯಾಯಾಲಯಗಳಿವೆ. ಇವುಗಳಲ್ಲಿ ದಾಖಲಾದ ಸಂಖ್ಯೆಯನ್ನೇ ಅಂತಿಮ ಎಂದು ಹೇಳುವಂತಿಲ್ಲ. ಇಲ್ಲಿ ದಾಖಲಾಗದೇ ಇರುವ ಪ್ರಕರಣಗಳೂ ಧಾರಾಳ ಇವೆ. ಮೌಖಿಕವಾಗಿ ಮತ್ತು ಇತರ ಸಾಂಪ್ರದಾಯಿಕ ರೀತಿಯಲ್ಲಿ ವಿಚ್ಛೇದನ ಪ್ರಕರಣಗಳು ಕೇರಳ ಸಹಿತ ದೇಶದೆಲ್ಲೆಡೆ ನಡೆಯುತ್ತಿವೆ. 2006ರಲ್ಲಿ ವಿಚ್ಛೇದನಕ್ಕಾಗಿ ಕೇರಳದ ಕೌಟುಂಬಿಕ ನ್ಯಾಯಾಲಯದಲ್ಲಿ 8,450 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ 2012ರಲ್ಲಿ ಇಂಥ ಅರ್ಜಿಗಳ ಸಂಖ್ಯೆ 44,238ಕ್ಕೆ ಏರಿತ್ತು. ಈ 2023ರಲ್ಲಂತೂ ಇದು ಲಕ್ಷವನ್ನೂ ಮೀರಿರಿರುವ ಸಾಧ್ಯತೆ ಇದೆ. ಕೇರಳದ ತಿರುವನಂತರಪುರ, ತ್ರಿಶ್ಶೂರ್, ಪತ್ತನಂತಿಟ್ಟ ಮತ್ತು ಎರ್ನಾಕುಲಂನಂಥ ಪ್ರದೇಶಗಳಲ್ಲಿ ಅತೀಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿದ್ದರೆ ಕಾಸರಗೋಡು ಮತ್ತು ವಯನಾಡುಗಳಲ್ಲಿ ಅತೀ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ದೇಶಕ್ಕೆ ಸಂಬಂಧಿಸಿ ಹೇಳುವುದಾದರೆ, ದೆಹಲಿ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ಲಕ್ನೋದಂಥ ನಗರಗಳಲ್ಲಿ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ಸಂಪ್ರದಾಯ, ಊರ ಸಂಸ್ಕೃತಿಯನ್ನು ಅತೀ ಹೆಚ್ಚಾಗಿ ಪಾಲಿಸುತ್ತಿರುವ ಬಿಹಾರ, ರಾಜಸ್ತಾನ, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅತೀ ಕಡಿಮೆ ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ.

ವಿಚ್ಛೇದನ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಅಧ್ಯಯನ ನಡೆಸಿದರೆ, ಬೇರೆ ಬೇರೆ ಕಾರಣಗಳು ಎದುರು ಬರುತ್ತವೆ. ಮಹಿಳಾ ಸಬಲೀಕರಣ ಇದರಲ್ಲಿ ಒಂದು. ಈ ಹಿಂದೆ ಪತಿ ದುಡಿಯುತ್ತಿದ್ದ ಮತ್ತು ಪತ್ನಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಳು. ಆಗ ಪತ್ನಿಯ ಮುಂದೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಪತಿ ಎಷ್ಟೇ ದೌರ್ಜನ್ಯ, ಹಿಂಸೆ ಎಸಗಿದರೂ ಮತ್ತು ಎಷ್ಟೇ ದುರಭ್ಯಾಸ ಹೊಂದಿದ್ದರೂ ಆತನೊಂದಿಗೇ ಜೀವನ ಮುಂದುವರಿಸಬೇಕಾದ ಅನಿವಾರ್ಯತೆ ಆಕೆಗಿತ್ತು. ಪತಿಯನ್ನು ಬಿಟ್ಟು ಹೊರಟು ಹೋದರೆ ಅತ್ತ ತವರು ಮನೆಯೂ ಸ್ವೀಕರಿಸಲ್ಲ ಮತ್ತು ಇತ್ತ ಸ್ವತಂತ್ರವಾಗಿ ಬದುಕುವುದಕ್ಕೆ ಬೇಕಾದ ಓದಾಗಲಿ ಉದ್ಯೋಗವಾಗಲಿ ಇಲ್ಲ ಎಂಬ ಸ್ಥಿತಿಯಿತ್ತು. ಆದರೆ ಈಗ ಹಾಗಲ್ಲ. ಪುರುಷರಿಗೆ ಸರಿಸಮಾನವಾಗಿ ಮಹಿಳೆಯೂ ಓದುತ್ತಿದ್ದಾಳೆ. ಉದ್ಯೋಗವನ್ನು ಪಡೆದು ಸ್ವಾವಲಂಬಿಯೂ ಆಗುತ್ತಿದ್ದಾಳೆ. ಆದ್ದರಿಂದ ಸುಖವೋ ದುಃಖವೋ ಪತಿಯೊಂದಿಗೇ ಇರಬೇಕು ಎಂಬ ಸಾಂಪ್ರದಾಯಿಕ ಅಸಹಾಯಕತೆಯನ್ನು ಮೀರಿ ಆಲೋಚಿಸತೊಡಗಿದ್ದಾಳೆ. ಅಂದಹಾಗೆ,

ಭಾರತದಲ್ಲಿ ಒಂದೆರಡು ದಶಕಗಳಿಂದೀಚೆಗೆ ವಿಚ್ಛೇದನ ಪ್ರಕರಣಗಳಲ್ಲಿ ಏರಿಕೆಯಾಗತೊಡಗಿದ್ದರೆ, ಪಾಶ್ಚಾತ್ಯ ರಾಷ್ಟ್ರ ಗಳಲ್ಲಂತೂ ಈ ಪ್ರಕ್ರಿಯೆ ಈ ಮೊದಲೇ ಆರಂಭವಾಗಿತ್ತು. ಇವತ್ತು ಸ್ವೀಡನ್‌ನಲ್ಲಿ ಪ್ರತಿ 100 ಮದುವೆಗಳಲ್ಲಿ 54 ಮದುವೆಗಳು ಇವತ್ತು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಅಮೇರಿಕಾವೂ ಇದೇ ಸರಾಸರಿಯನ್ನು ಕಾಯ್ದುಕೊಂಡಿವೆ. ಇದೇವೇಳೆ, ವಿಯೆಟ್ನಾಮ್‌ನಲ್ಲಿ ಪ್ರತಿ 1000 ಮದುವೆಯಲ್ಲಿ 0.2 ಮದುವೆ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದ್ದು, ಜಾಗತಿಕವಾಗಿ ಅತೀ ಕಡಿಮೆ ಎಂದು ದಾಖಲಾಗಿದೆ. ಹಾಗೆಯೇ ಶ್ರೀಲಂಕಾ, ಪೆರು, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳು ಅತಿ ಕಡಿಮೆ ವಿಚ್ಛೇದನಕ್ಕಾಗಿ ಗುರುತಿಸಿಕೊಂಡಿವೆ. ಅಂದಹಾಗೆ,

ಕೇರಳದ ಹೈಕೋರ್ಟು ಹೇಳಿರುವಂತೆ, ಮದುವೆಯನ್ನು ಬಳಸು-ಬಿಸಾಕು ಎಂಬ ಸ್ಥಿತಿಗೆ ತಂದಿರುವ ಆಧುನಿಕ ಜೀವನ ಪದ್ಧತಿಯು ಸಮಾಜದ ಪಾಲಿಗೆ ಅನುಕೂಲಕರವಾಗುವುದಕ್ಕಿಂತ ಅನಾಹುತಕಾರಿಯಾಗುವ ಸಾಧ್ಯತೆಯೇ ಹೆಚ್ಚು. ಇದರ ಬಹುದೊಡ್ಡ ಅಡ್ಡ ಪರಿಣಾಮವನ್ನು ಮಕ್ಕಳು ಮತ್ತು ವಿಚ್ಛೇದಿತ ಮಹಿಳೆಯು ಅನುಭವಿಸಬೇಕಾಗುತ್ತದೆ. ಅಮೇರಿಕದಲ್ಲಿ ಯುವ ಸಮುದಾಯ ಪ್ರಕ್ಷುಬ್ಧ ಮನಸ್ಥಿತಿ ಹೊಂದಿರುವುದಕ್ಕೆ ಇದುವೇ ಕಾರಣವೋ ಏನೋ?

ಹೆಣ್ಣನ್ನು ಭೋಗದ ವಸ್ತು ಎಂಬ ರೀತಿಯಲ್ಲಿ ನೋಡುವ ಮನಸ್ಥಿತಿಯನ್ನು ಆಧುನಿಕ ಜಗತ್ತು ಲಂಗುಲಗಾಮಿಲ್ಲದೇ ಪ್ರಚಾರ ಮಾಡುತ್ತಿವೆ. ಸುಖ ಬೇಕು, ಜವಾಬ್ದಾರಿ ಬೇಡ ಎಂಬಂಥ ಜೀವನ ಕ್ರಮ ಹೆಚ್ಚೆಚ್ಚು ಪ್ರಚಾರ ಪಡೆಯುತ್ತಲೂ ಇವೆ. ಇಂಥ ಭೋಗ ಮನಸ್ಥಿತಿ ಅಂತಿಮವಾಗಿ ಮದುವೆಯೆಂಬ ಪರಿಕಲ್ಪನೆಯನ್ನೇ ಅಪ್ರಿಯಗೊಳಿಸಿ ಬಿಡುವುದಕ್ಕೂ ಕಾರಣವಾಗಬಹುದು. ದೇವನು ಮದುವೆಯನ್ನು ಇಷ್ಟಪಡುತ್ತಾನೆ ಮತ್ತು ವಿಚ್ಛೇದನವನ್ನು ದ್ವೇಷಿಸುತ್ತಾನೆ ಎಂದು ಇಸ್ಲಾಮ್ ಹೇಳುತ್ತದೆ. ಇದರಾಚೆಗೆ ಏನೂ ಹೇಳಬೇಕಿಲ್ಲ.

ಗೋಹತ್ಯಾ ನಿಷೇಧದ ಹಿಂದೆ ಗೋಮಾಳ ನುಂಗುವ ಸಂಚು ಇತ್ತೇ?

 

12-6-2023

ಹಿಜಾಬ್ ನಿಷೇಧ, ಮುಸ್ಲಿಮ್ ಮೀಸಲಾತಿ ರದ್ದು, ಹತ್ಯೆಗೀಡಾದವರಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ, ಮಾರಲ್ ಪೊಲೀಸಿಂಗ್ ಮತ್ತು ಗುಂಪು ಥಳಿತದಲ್ಲಿ ಭಾಗಿಯಾದವರಿಗೆ ದುರ್ಬಲ ಸೆಕ್ಷನ್‌ನಡಿ ಕೇಸು ದಾಖಲಿಸಿ ಸುಲಭದಲ್ಲಿ ಜಾಮೀನು ಸಿಗುವಂತೆ ನೋಡಿಕೊಂಡದ್ದೂ ಸೇರಿದಂತೆ ಬಹಿರಂಗಕ್ಕೆ ಕಾಣುವ ಅನ್ಯಾಯಗಳ ಜೊತೆಜೊತೆಗೇ ಬೊಮ್ಮಾಯಿ ಸರಕಾರ ಆಂತರಿಕವಾಗಿ ಕನ್ನಡಿಗರಿಗೆ ಕಡು ಮೋಸವನ್ನೂ ಎಸಗಿದೆ ಎಂಬುದನ್ನು ಆರ್‌ಟಿಐ ಕಾರ್ಯಕರ್ತ ಮತ್ತು ದಿ ಫೈಲ್ ಜಾಲತಾಣ ಪತ್ರಿಕೆಯ ಜಿ. ಮಹಾಂತೇಶ್ ಪುರಾವೆ ಸಹಿತ ಬಹಿರಂಗಕ್ಕೆ ತಂದಿದ್ದಾರೆ. ಸಂಘಪರಿವಾರದ ಅಂಗಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್‌ಗಳಿಗೆ ಗೋಮಾಳ ಮತ್ತು ನಿವೇಶನಗಳನ್ನು ಬೊಮ್ಮಾಯಿ ಸರ್ಕಾರ ಜುಜುಬಿ ಮೊತ್ತಕ್ಕೆ ಪರಭಾರೆ ಮಾಡಿದೆ ಎಂಬುದು ಗೊತ್ತಾಗಿದೆ. ವಿಶೇಷ ಏನೆಂದರೆ,


ಈ ಮಾರಾಟಕ್ಕೆ ಸರಕಾರದ ಕಾನೂನು ಮತ್ತು ಆರ್ಥಿಕ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬೊಮ್ಮಾಯಿ ಸರಕಾರದ ಭ್ರಷ್ಟ ಮತ್ತು ಸಂಘ ಓಲೈಕೆ ನೀತಿಯು ಈ ವಿರೋಧವನ್ನು ಲೆಕ್ಕಿಸದಷ್ಟು ಕುರುಡಾಗಿತ್ತು ಎಂಬುದನ್ನು ಈ ಮಾರಾಟ ಪ್ರಕ್ರಿಯೆಯು ಸ್ಪಷ್ಟಪಡಿಸುತ್ತದೆ. ಆದ್ದರಿಂದಲೇ, ಬೊಮ್ಮಾಯಿ ಸರಕಾರದ ಕೊನೆಯ ಆರು ತಿಂಗಳ ಭೂಮಂಜೂರಾತಿ ಪ್ರಕರಣಗಳ ಕುರಿತು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕೆಲವು ಆಘಾತಕಾರಿ ಮಾಹಿತಿಗಳು ಹೀಗಿವೆ:

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ನಿರ್ಮಾಣಕ್ಕಾಗಿ 20.17 ಎಕರೆ ಜಮೀನನ್ನು ಮೀಸಲಿಡಲಾಗಿತ್ತು. ಈ ಜಮೀನಿನ ಪೈಕಿ 5 ಎಕರೆ ವಿಸ್ತೀರ್ಣದ ಜಮೀನನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲಾಗಿದೆ ಎಂದು ದಿ ಫೈಲ್ ಜಾಲತಾಣ ಪತ್ರಿಕೆ ಬಹಿರಂಗಪಡಿಸಿದೆ. ಜನಸೇವಾ ಟ್ರಸ್ಟ್ ಗೆ 2022 ಮತ್ತು 23ರಲ್ಲಿ ಒಟ್ಟು 35 ಎಕರೆ ಗೋಮಾಳವನ್ನು ಜುಜುಬಿ ಮೊತ್ತಕ್ಕೆ ನೀಡಿ ಬೊಮ್ಮಾಯಿ ಸರಕಾರ ಆದೇಶ ಹೊರಡಿಸಿತ್ತು. ಇದರಲ್ಲಿ 25 ಎಕರೆ ಗೋಮಾಳವನ್ನು ಆಗಿನ ಮಾರುಕಟ್ಟೆ ಮೌಲ್ಯದ 25% ದರಕ್ಕೆ ವಿತರಿಸಿತ್ತು. ಹಾಗೆಯೇ ಉಳಿದ 10 ಎಕರೆ ಗೋಮಾಳಕ್ಕೆ ಆಗಿನ ಮಾರುಕಟ್ಟೆ ದರಕ್ಕೆ ಸಮಾನವಾದ ದರ ನಿಗದಿಗೊಳಿಸಿ ಮಾರಾಟ ಮಾಡಿತ್ತು. ಆದರೆ, ಈ ಮೊತ್ತವನ್ನು ಕೊಡಲು ಅಸಾಧ್ಯ ಎಂದು ಜನಸೇವಾ ಟ್ರಸ್ಟ್ ಸರಕಾರದೊಂದಿಗೆ ಕೇಳಿಕೊಂಡಿತು. ಆಗ ಸರಕಾರ ತಕ್ಷಣ ಅದಕ್ಕೆ ಸ್ಪಂದಿಸಿತಲ್ಲದೇ, ಮಾರುಕಟ್ಟೆ ದರದ ಕೇವಲ 5% ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು ಎಂದು ದಿ ಫೈಲ್ ವರದಿ ಮಾಡಿದೆ. ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಗಳ ವಿವಿಧೆಡೆ ಸುಮಾರು 20 ಎಕರೆ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಸರಕಾರ ಮಾರಾಟ ಮಾಡಿರುವುದೂ ಬಹಿರಂಗಕ್ಕೆ ಬಂದಿದೆ. ಹಾಗೆಯೇ ಯಲಹಂಕ ತಾಲೂಕಿನ ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿದ್ದ 7 ಕೋಟಿ 45 ಲಕ್ಷ ರೂಪಾಯಿ ಬೆಲೆಬಾಳುವ ಗೋಮಾಳವನ್ನು ಕೇವಲ ಒಂದು ಕೋಟಿ 86 ಲಕ್ಷ ರೂಪಾಯಿಗೆ ರಾಷ್ಟ್ರೋತ್ಥಾನ ಪರಿಷತ್‌ಗೆ ಮಾರಿದೆ ಮತ್ತು ಈ ಮೂಲಕ ಬೊಕ್ಕಸಕ್ಕೆ 5 ಕೋಟಿ 59 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದೆ ಎಂದೂ ದಿ ಫೈಲ್ ವರದಿ ಮಾಡಿದೆ. ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ,

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಲ್ಲೇ ಜನಸೇವಾ ಟ್ರಸ್ಟ್ ಗೆ 35.33 ಎಕರೆ ಜಮೀನನ್ನು ಮಾರುಕಟ್ಟೆ ಮೌಲ್ಯದ ಬರೇ 5% ದರವನ್ನು ನಿಗದಿಗೊಳಿಸಿ ಮಾರಾಟ ಮಾಡಿರುವುದು. ಇದರಿಂದಾಗಿ ಬೊಕ್ಕಸಕ್ಕೆ 139 ಕೋಟಿ 25 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಒಂದುರೀತಿಯಲ್ಲಿ, 2020ರಿಂದ 2023ರ ನಡುವೆ ಸಂಘಪರಿವಾರದ ಅಂಗಸಂಸ್ಥೆಗಳಿಗೆ 81.23 ಎಕರೆ ವಿಸ್ತೀರ್ಣದ ಭೂಮಿ ಮತ್ತು ಮಾದಾರ ಚೆನ್ನಯ್ಯ ಗುರುಪೀಠಕ್ಕೆ 81.23 ವಿಸ್ತೀರ್ಣದ ಗೋಮಾಳವೂ ಸೇರಿದಂತೆ ಒಟ್ಟು 167.23 ಎಕರೆ ಭೂಮಿಯನ್ನು ಬೊಮ್ಮಾಯಿ ಸರಕಾರ ಮಂಜೂರು ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲ, ಈ ಮಾಹಿತಿ ಬಹಿರಂಗಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗುತ್ತಿರುವಂತೆಯೇ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಕ್ರಿಯರಾಗಿದ್ದಾರೆ. ಸಂಘಪರಿವಾರಕ್ಕೆ ಕೊಟ್ಟ ಭೂಮಿಯನ್ನು ವಾಪಸು ಪಡೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ಮೂಲಕ ದಿ ಫೈಲ್ ಬಹಿರಂಗಗೊಳಿಸಿರುವ ಮಾಹಿತಿ ಸತ್ಯದಿಂದ ಕೂಡಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂದಹಾಗೆ,

ಗೋಮಾಳ ಎಂಬುದು ಗೋವುಗಳಿಗೆ ಮೇಯಲು ಮೀಸಲಿಟ್ಟ ಸ್ಥಳ. ಒಂದು ಕಡೆ, ಇದೇ ಬೊಮ್ಮಾಯಿ ಸರಕಾರ ಗೋವುಗಳ ಮೇಲೆ ವಿಪರೀತ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಬಂದಿತ್ತಲ್ಲದೇ, ಗೋಹತ್ಯಾ ನಿಷೇಧ ಕಾಯ್ದೆಯನ್ನೂ ಜಾರಿಗೊಳಿಸಿತು. ಗೋವಿನ ಹೆಸರಲ್ಲಿ ನಡೆಯುತ್ತಿದ್ದ ಥಳಿತ ಮತ್ತು ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸುವ ಹಂತಕ್ಕೆ ಅವರ ಬೆಂಬಲಿಗರು ಇಳಿದಿದ್ದರು. ಇನ್ನೊಂದು ಕಡೆ,

ಇದೇ ಸರಕಾರ ಗೋಮಾಳವನ್ನೇ ಜುಜುಬಿ ಬೆಲೆಗೆ ತನ್ನದೇ ಪರಿವಾರಕ್ಕೆ ಮಾರಾಟವನ್ನೂ ಮಾಡಿದೆ. ಗೋವಿನ ಮೇಲೆ ಪ್ರೀತಿ ಇರುವ ಯಾವುದೇ ಸರಕಾರ ಗೋಮಾಳವನ್ನು ಮಾರಾಟ ಮಾಡುವುದು ಬಿಡಿ, ಅಂಥದ್ದೊಂದು ಆಲೋಚನೆಯನ್ನೂ ಮಾಡಲು ಸಾಧ್ಯವಿದೆಯೇ? ಒಂದುವೇಳೆ, ಮೇಯಲು ಹುಲುಸಾದ ಹುಲ್ಲು ಇಲ್ಲ ಅಥವಾ ಮೇಯಲು ದನಗಳನ್ನು ಅಟ್ಟುವ ಸಂಪ್ರದಾಯ ಈಗ ಕಡಿಮೆಯಾಗಿದೆ ಎಂಬ ತರ್ಕ ಸರಕಾರದ್ದಾದರೆ, ಅದಕ್ಕೆ ಪರಿಹಾರ ಏನು? ಬೆಲೆಬಾಳುವ ಭೂಮಿಯನ್ನು ಜುಜುಬಿ ಮೊತ್ತಕ್ಕೆ ಮಾರಾಟ ಮಾಡುವುದೇ ಅಥವಾ ಆ ಗೋಮಾಳವನ್ನು ಅಭಿವೃದ್ಧಿಗೊಳಿಸಿ ಹುಲ್ಲುಗಳು ಬೆಳೆಯುವಂತೆ ಮಾಡಿ ಮತ್ತು ಜನರು ತಮ್ಮ ಗೋವುಗಳನ್ನು ಅಲ್ಲಿಗೆ ಪುನಃ ಕಳುಹಿಸುವಂತೆ ಮಾಡುವುದೇ? ಗೋಮಾಳ ಪಾಳು ಬಿದ್ದಿದ್ದರೆ ಅದಕ್ಕೆ ಕಾರಣ ಜನರಲ್ಲ, ಸರಕಾರ.

ಈ ಹಿಂದೆ ರೈತರು ಗೋವುಗಳನ್ನು ಎರಡ್ಮೂರು ಉದ್ದೇಶಗಳಿಗಾಗಿ ಸಾಕುತ್ತಾ ಇದ್ದರು. ಬರೇ ಪುಣ್ಯಭಾವವೊಂದೇ ಈ ಸಾಕಾಣಿಕೆಯ ಉದ್ದೇಶ ಆಗಿರಲಿಲ್ಲ. ಹಾಲು, ಹೈನು, ಗೊಬ್ಬರ, ಉಳುಮೆ ಇತ್ಯಾದಿಗಳು ಈ ಸಾಕಾಣಿಕೆಗೆ ಒಂದು ಕಾರಣವಾದರೆ, ಇನ್ನೊಂದು, ಹಾಲು ಕೊಡದ ಮತ್ತು ದುಡಿಯುವ ಸಾಮರ್ಥ್ಯ ಕಳಕೊಂಡ ಬಳಿಕ ಅವುಗಳನ್ನು ಮಾರಾಟ ಮಾಡಿ ಹೊಸ ಕರು-ಎತ್ತುಗಳನ್ನು ಖರೀದಿಸುವುದು ಮತ್ತು ಆ ಮೂಲಕ ಈ ಸಾಕಾಣಿಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು. ಆದರೆ, ಬೊಮ್ಮಾಯಿ ಸರಕಾರ ಈ ಸಂಪ್ರದಾಯಕ್ಕೆ ಗೋಹತ್ಯಾ ನಿಷೇಧ ಕಾಯ್ದೆ ಮೂಲಕ ಕೊಡಲಿಯೇಟು ನೀಡಿತು. ಗೋವು-ಎತ್ತುಗಳನ್ನು ಮಾರಾಟ ಮಾಡುವುದಕ್ಕೆ ತಡೆ ವಿಧಿಸಿತಲ್ಲದೇ, ಹೀಗೆ ಮಾರುವವರನ್ನು ಧರ್ಮ ವಿರೋಧಿಗಳು ಮತ್ತು ಹೆತ್ತ ತಾಯಿಯನ್ನೇ ಕಸಾಯಿಖಾನೆಗೆ ಅಟ್ಟುವ ಅಪರಾಧಿಗಳು ಎಂಬಂತೆ ಸಾರ್ವಜನಿಕವಾಗಿ ಬಿಂಬಿಸಿ ಹೀಯಾಳಿಸತೊಡಗಿತು. ರೈತರಿಂದ ಇಂಥ ಜಾನುವಾರುಗಳನ್ನು ಖರೀದಿಸಿ ಸಾಗಿಸುವವರನ್ನು ಥಳಿಸುವ ಮತ್ತು ಹತ್ಯೆ ನಡೆಸುವ ಪ್ರಕ್ರಿಯೆಗಳೂ ಎಗ್ಗಿಲ್ಲದೇ ನಡೆದುವು. ಅದರ ಪರಿಣಾಮ ಏನೆಂದರೆ,

ರೈತರು ಗೋಸಾಕಾಣಿಕೆಗೆ ಬೆನ್ನು ಹಾಕತೊಡಗಿದರು. ಉಳುಮೆಗೆ ಟ್ರಾಕ್ಟರ್ ಅವಲಂಬನೆ ಹೆಚ್ಚಾಯಿತು. ಗೋವು, ಕರು, ಎತ್ತುಗಳಿದ್ದ ಹಟ್ಟಿಗಳು ನಿಧಾನಕ್ಕೆ ಬರಿದಾದುವು. ಹಸುವೊಂದು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕವೂ ಹತ್ತು ವರ್ಷಗಳ ವರೆಗೆ ಬದುಕಿರುತ್ತದೆ. ಉಳುಮೆಗೆ ಬಾರದ ಎತ್ತು ಕೂಡಾ ಅಷ್ಟೇ ಆಯುಷ್ಯವನ್ನು ಹೊಂದಿರುತ್ತದೆ. ಹೀಗಿರುವಾಗ, ಒಂದು ಹಟ್ಟಿಯಲ್ಲಿ ಇಂಥ ನಾಲ್ಕೈದು ಹಸು-ಎತ್ತುಗಳಿದ್ದರೆ ಏನಾದೀತು? ರೈತ ಅದನ್ನು ಹೇಗೆ ಸಾಕಬಲ್ಲ? ಅದನ್ನು ಹಸಿವಿಗೆ ದೂಡುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂಬ ಸ್ಥಿತಿಯಲ್ಲಿ ರೈತ ಏನು ಮಾಡಬಲ್ಲ? ಗೋವು-ಎತ್ತು ಸಾಕಾಣಿಕೆಯನ್ನು ಖೈದು ಮಾಡದೇ ಬೇರೆ ಯಾವ ಆಯ್ಕೆ ಆತನಿಗಿದೆ?

ಬಹುಶಃ, ಗೋಹತ್ಯಾ ನಿಷೇಧದ ಹಿಂದೆ ರಾಜ್ಯಾದ್ಯಂತ ಎಕರೆಗಟ್ಟಲೆ ಇರುವ ಹುಲುಸಾದ ಗೋಮಾಳವನ್ನು ಮಾರಾಟ ಮಾಡುವ ದುರುದ್ದೇಶವೂ ಸರಕಾರಕ್ಕೆ ಇತ್ತೇ ಎಂಬ ಅನುಮಾನ ಈಗ ಕಾಡುತ್ತಿದೆ. ಹೊರಗೆ ಗೋರಕ್ಷಕನ ಮುಖವಾಡ ತೊಟ್ಟು ಒಳಗೊಳಗೇ ಭೂಮಾರಾಟ ದಂಧೆ ನಡೆಸುವುದಕ್ಕೆ ಸರಕಾರ ಯೋಚಿಸಿತ್ತೇ? ತನ್ನದೇ ಪರಿವಾರಕ್ಕೆ ನೂರಾರು ಗೋಮಾಳ ಭೂಮಿಯನ್ನು ಮಾರಾಟ ಮಾಡುವುದಕ್ಕಾಗಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೆ ತರಲಾಯಿತೇ? ಇಲ್ಲದಿದ್ದರೆ, ಕನಿಷ್ಠ ಈ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ಗಳಾದರೂ ಈ ಗೋಮಾಳ ಭೂಮಿಯನ್ನು ತಿರಸ್ಕರಿಸಬೇಕಿತ್ತಲ್ಲವೇ? ಗೋವಿಗಾಗಿ ಮುಡಿಪಾಗಿಟ್ಟ ಭೂಮಿ ತನಗೆ ಬೇಡ ಎಂದು ಹೇಳಬೇಕಿದ್ದ ಅವುಗಳೂ ಯಾಕೆ ಜುಜುಬಿ ಮೊತ್ತಕ್ಕೆ ಖರೀದಿಸಿದುವು?

ಸಿದ್ದರಾಮಯ್ಯ ಸರಕಾರ ಮುಲಾಜು ಮತ್ತು ಸೇಡಿನ ಭಾವವಿಲ್ಲದೇ ತನಿಖೆ ಮಾಡಲಿ. ಗೋಮಾಳವನ್ನು ನುಂಗಿದವರಿಗೆ ನೀರು ಕುಡಿಸಲಿ.

ಸೌಜನ್ಯ ಪ್ರಕರಣ: ಸಂತೋಷ್ ಅಲ್ಲದಿದ್ದರೆ ಇನ್ನಾರು?


 

2012 ಅಕ್ಟೋಬರ್ 10ರಂದು ಶವವಾಗಿ ಪತ್ತೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ತೀರ್ಪು ಹೊರಬಿದ್ದಿದೆ. ಪ್ರಕರಣ ನಡೆದು 11 ವರ್ಷಗಳ ಬಳಿಕ ಹೊರಬಿದ್ದ ಈ ತೀರ್ಪನ್ನು ಸೌಜನ್ಯ ಕುಟುಂಬ ಸ್ವಾಗತಿಸಿದೆ. ಅಚ್ಚರಿ ಏನೆಂದರೆ, ಈ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಏಕೈಕ ಆರೋಪಿಯಾಗಿ 10 ವರ್ಷಗಳ ಕಾಲ ಜೈಲಲ್ಲಿದ್ದ ಸಂತೋಷ್ ರಾವ್ ಎಂಬವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದುದಕ್ಕೆ ಈ ಕುಟುಂಬದಿಂದ ಯಾವ ಆಕ್ಷೇಪವೇ ವ್ಯಕ್ತವಾಗಿಲ್ಲ. ಮಾತ್ರವಲ್ಲ, ಆತನ ಬಂಧನವನ್ನೇ ಈ ಕುಟುಂಬ ವಿರೋಧಿಸುತ್ತಾ ಬಂದಿತ್ತು. ಸೌಜನ್ಯಳನ್ನು ಹತ್ಯೆ ಮಾಡಿದವ ಈತನಲ್ಲ ಮತ್ತು ನಿಜ ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಈ ಬಡಪಾಯಿಯನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಈ ಕುಟುಂಬ ವಾದಿಸುತ್ತಲೇ ಬಂದಿತ್ತು. ಇದೀಗ ಸಿಬಿಐ ಕೂಡ ಸಂತೋಷ್ ರಾವ್‌ರನ್ನು ಆರೋಪ ಮುಕ್ತಗೊಳಿಸಿರುವುದರಿಂದ ಸೌಜನ್ಯಳನ್ನು ಕೊಂದವರಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

2012 ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಸೌಜನ್ಯ ಮನೆಗೆ ಬರದೇ ಇದ್ದಾಗ ಆಕೆಗಾಗಿ ಊರಿಗೆ ಊರೇ ಹುಡುಕಾಡಿತ್ತು. ಸುಮಾರು 2000 ಮಂದಿ ಮಧ್ಯರಾತ್ರಿ 2 ಗಂಟೆಯವರೆಗೆ ಈ ಹುಡುಕಾಟದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಮಳೆಯೂ ಸುರಿಯುತ್ತಿತ್ತು. ಸೌಜನ್ಯಳ ಮಾಹಿತಿ ಸಿಗದೇ ನಿರಾಶರಾಗಿ ಮರಳಿದ ಕುಟುಂಬಕ್ಕೆ ಮರುದಿನ ಬೆಳಿಗ್ಗೆ ಆಘಾತಕಾರಿ ಸುದ್ದಿ ಸಿಕ್ಕಿತ್ತು. ಮೊದಲ ದಿನ ಮಧ್ಯರಾತ್ರಿವರೆಗೆ ಅವರೆಲ್ಲ ಎಲ್ಲಿ ಹುಡುಕಾಡಿದ್ದರೋ ಅದೇ ಸ್ಥಳದಲ್ಲಿ ಸೌಜನ್ಯ ಶವವಾಗಿ ಮಲಗಿದ್ದಳು. ಆಕೆಯ ಕೈ ಕಟ್ಟಿದ ಸ್ಥಿತಿಯಲ್ಲಿತ್ತು. ದೇಹದಲ್ಲಿ ಹಿಂಸೆಯ ಕುರುಹುಗಳಿದ್ದುವು. ವಿಚಿತ್ರ ಏನೆಂದರೆ, ಆಕೆಯ ಬಟ್ಟೆಯಾಗಲಿ ಬ್ಯಾಗ್ ಆಗಲಿ ಅಥವಾ ಬ್ಯಾಗಿನೊಳಗಿದ್ದ ಪುಸ್ತಕಗಳಾಗಲಿ ಒದ್ದೆಯಾಗಿರಲಿಲ್ಲ. ಆದ್ದರಿಂದ ಇದು ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣವೆಂದು ಊರಿಗೆ ಊರೇ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಈ ಕೃತ್ಯದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಎಲ್ಲರಲ್ಲಿತ್ತು. ಆದರೆ ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗಲೇ ಈ ಸೌಜನ್ಯ ಕುಟುಂಬ ಆತ ನಿರಪರಾಧಿ ಎಂದು ಹೇಳಿತ್ತು. ಹಾಗೆಯೇ, 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ರೇಖಾ ಅವರು ಸಿಬಿಐ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ,

‘ಪೊಲೀಸರು ಸೌಜನ್ಯಳ ರಕ್ತದ ಮಾದರಿ ಮತ್ತು ಆರೋಪಿಯ ಬಟ್ಟೆಯ ಸಾಕ್ಷ್ಯ ಮಾದರಿಯನ್ನು ಸಂಗ್ರಹಿಸಲು ವಿಫಲರಾಗಿದ್ದಾರೆ’ ಎಂದು ಡಿಎನ್‌ಎ ತಜ್ಞ ಡಾ| ವಿನೋದ್ ಜೆ. ಲಕ್ಕಪ್ಪ ವಿಚಾರಣೆಯ ವೇಳೆ ಹೇಳಿದ್ದರು. ಸಿಬಿಐ ಅಧಿಕಾರಿಗಳು ತನಿಖೆಯ ವಿಷಯದಲ್ಲಿ ಗಂಭೀರವಾಗಿಲ್ಲ ಎಂಬ ರೀತಿಯಲ್ಲಿ ನ್ಯಾಯಾಧೀಶೆ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಿಜವಾಗಿ,

ಉತ್ತರ ಪ್ರದೇಶದ ಹತ್ರಾಸ್‌ನಂತೆ ಸೌಜನ್ಯ ಪ್ರಕರಣ ಕೂಡ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿತ್ತು. ಸರಣಿ ಹೋರಾಟಗಳು ನಡೆದಿದ್ದವು. ಕೇಮಾರು ಶ್ರೀ ಈಶವಿಠಲ ಸ್ವಾಮೀಜಿಯೇ ಈ ಹೋರಾಟದ ಮುಂಚೂಣಿಯಲ್ಲಿದ್ದರು. ಸೌಜನ್ಯಳ ತಾಯಿ ಕುಸುಮಾವತಿ ಮತ್ತು ತಂದೆ ಚಂದಪ್ಪ ಗೌಡ ಪ್ರತೀ ಹೋರಾಟ-ಧರಣಿ-ಹಕ್ಕೊತ್ತಾಯದಲ್ಲೂ ಭಾಗಿಯಾಗಿದ್ದರು. ಈ ಹೋರಾಟದ ಮುಂಚೂಣಿಯಲ್ಲಿದ್ದ ಯಾರಿಗೂ ಸಂತೋಷ್ ರಾವ್‌ನ ಮೇಲೆ ಅನುಮಾನ ಇರಲಿಲ್ಲ. ಆತನನ್ನು ಸಿಲುಕಿಸಲಾಗಿದೆ ಎಂದೇ ಅವರು ಹೇಳುತ್ತಿದ್ದರು. ಆತ ಮಾನಸಿಕ ಅಸ್ವಸ್ಥ ಎಂಬ ಅಭಿಪ್ರಾಯವೂ ಊರವರದ್ದಾಗಿತ್ತು. ಒಂದಕ್ಕಿಂತ ಹೆಚ್ಚು ಮಂದಿ ಸೇರಿಕೊಂಡು ಮಾಡಿರುವ ಕೃತ್ಯ ಎಂಬುದು ಆಕೆಯ ಒದ್ದೆಯಾಗದ ಬಟ್ಟೆ, ಶಾಲಾ ಬ್ಯಾಗು, ಪುಸ್ತಕಗಳು ಹೇಳುತ್ತಿವೆಯಾದರೂ ಸಂತೋಷ್ ರಾವ್‌ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ತನಿಖೆ ನಡೆಸಲು ಕಾರಣವೇನು ಎಂಬ ಪ್ರಶ್ನೆಯನ್ನು 2012ರಿಂದ ಇಂದಿನವರೆಗೆ ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಪ್ರಶ್ನಿಸುತ್ತಾ ಬಂದಿದ್ದಾರೆ. ಇದೀಗ ಅನುಮಾನ ನಿಜವಾಗಿದೆ. ಸಂತೋಷ್ ರಾವ್‌ನನ್ನು 10 ವರ್ಷ ಜೈಲಲ್ಲಿಟ್ಟ ಇದೇ ನ್ಯಾಯಾಲಯ ಆತ ನಿರ್ದೋಷಿ ಎಂದು ಹೇಳಿ ಕೈ ತೊಳೆದುಕೊಂಡಿದೆ. ಹಾಗಿದ್ದರೆ, ಸಂತೋಷ್ ರಾವ್‌ಗೆ ಕಳೆದು ಹೋದ 10 ವರ್ಷವನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಯ ಜೊತೆಗೇ ಸೌಜನ್ಯಳನ್ನು ಹತ್ಯೆಗೈದವರು ಯಾರು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಸೌಜನ್ಯ ಕುಟುಂಬ 2023 ಜನವರಿಯಲ್ಲಿ ಹೊಸ ಮನೆಯನ್ನು ನಿರ್ಮಿಸಿತ್ತು. ಮನೆಯ ಹೆಸರೇ ಸೌಜನ್ಯ. ಸೌಜನ್ಯ ಸಮಾಧಿಯಾದ ಸ್ಥಳದಲ್ಲೇ ಈ ಕುಟುಂಬ ಒಂದು ಗಿಡವನ್ನೂ ನೆಟ್ಟಿದೆ. ಅದೀಗ ಮರವಾಗಿದೆ. ಸೌಜನ್ಯಳನ್ನು ಸ್ಮರಿಸದ ಒಂದೇ ಒಂದು ದಿನ ನಮ್ಮ ಮನೆಯಲ್ಲಿಲ್ಲ ಎಂದು ತಾಯಿ ಹೇಳುತ್ತಾರೆ. ಸೌಜನ್ಯ ಕಾಣೆಯಾದ 2012 ಅಕ್ಟೋಬರ್ 9ರಂದು ಬೆಳಿಗ್ಗೆ ನಾನು ಅಡುಗೆಕೋಣೆಯಲ್ಲಿದ್ದೆ. ಕಾಲೇಜಿಗೆ ಹೊರಟು ಹೋಗುವಾಗ ಮಗಳಿಗೆ ಜಾಗ್ರತೆ ಎಂದು ಹೇಳುವುದಕ್ಕೂ ನನಗಾಗಿರಲಿಲ್ಲ… ಎಂದು ಆ ತಾಯಿ ಈ 11 ವರ್ಷಗಳ ಬಳಿಕವೂ ದುಃಖಿಸುತ್ತಾರೆ. ಸೌಜನ್ಯ ಹುಟ್ಟಿದ ದಿನವಾದ ಅಕ್ಟೋಬರ್ 18ರಂದು ಆಕೆಯ ಸಮಾಧಿ ಬಳಿ ಭಜನೆ ಮಾಡಲಾಗಿದೆ… ಒಂದು ರೀತಿಯಲ್ಲಿ,

ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧದ ಆಳ ಇದು. ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹತ್ಯೆಗೀಡಾದುದನ್ನು ಸಮಾಜ ನಿಧಾನಕ್ಕೆ ಮರೆಯಬಹುದು. ಆದರೆ, ಹೆತ್ತವರು ಮರೆಯಲಾರರು. ಅಷ್ಟಕ್ಕೂ, ಸೌಜನ್ಯ ಎಂದಲ್ಲ, 2020ರಲ್ಲಿ ನಡೆದ ಹತ್ರಾಸ್ ಪ್ರಕರಣವನ್ನೂ ಪ್ರಭುತ್ವ ದಿಕ್ಕು ತಪ್ಪಿಸಲು ಶತಾಯ ಗತಾಯ ಯತ್ನಿಸಿತ್ತು. ಆ ಹೆಣ್ಣು ಮಗಳ ಶವವನ್ನು ರಾತೋರಾತ್ರಿ ಕದ್ದು ಮುಚ್ಚಿ ದಹಿಸಲಾಗಿತ್ತು. ಕುಟುಂಬವನ್ನು ಅಕ್ಷರಶಃ ಹೊರಜಗತ್ತಿನಿಂದ ಬೇರ್ಪಡಿಸಿ ಇಡಲಾಗಿತ್ತು. ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕುಟುಂಬದ ಮೇಲೆ ಅಧಿಕಾರಿಗಳೇ ಒತ್ತಡ ಹೇರಿದುದನ್ನು ಸೋರಿಕೆಯಾದ ವೀಡಿಯೋಗಳೇ ಬಹಿರಂಗಪಡಿಸಿದ್ದುವು. ಇದಕ್ಕೆ ಕಾರಣ- ಆರೋಪಿಗಳೆಲ್ಲ ಮೇಲ್ಜಾತಿ ಯುವಕರು. ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ಯುವತಿ ದಲಿತ ಸಮುದಾಯದವಳು. ಪ್ರಕರಣ ದಾಖಲಿಸಿದುದಕ್ಕಾಗಿ ಆ ದಲಿತ ಕುಟುಂಬಕ್ಕೆ ಮೇಲ್ಜಾತಿ ಸಮುದಾಯ ಬಹಿಷ್ಕಾರ ವನ್ನು ಹೇರಿತ್ತು. ಪೊಲೀಸ್ ತನಿಖೆಯ ವಿಷಯದಲ್ಲೂ ಸಾಕಷ್ಟು ಆರೋಪಗಳಿದ್ದುವು. ಎಫ್‌ಐಆರ್ ದಾಖಲಿಸುವಲ್ಲೂ ವಿಳಂಬವಾಗಿತ್ತು. ಅಂತಿಮವಾಗಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ದರು. ಇವರಲ್ಲಿ ಮೂವರನ್ನು 2023ರಲ್ಲಿ ಕೋರ್ಟು ಖುಲಾಸೆಗೊಳಿಸಿ ಸಂದೀಪ್ ಸಿಸೋಡಿಯಾ ಎಂಬ ಓರ್ವನನ್ನು ಮಾತ್ರ ಅಪರಾಧಿ ಎಂದು ಘೋಷಿಸಿದೆ.

ಅತ್ಯಾಚಾರ ಎಂಬುದು ಕಳ್ಳತನ, ದರೋಡೆ, ಭ್ರಷ್ಟಾಚಾರದಂಥಲ್ಲ. ಅದರಲ್ಲಿ ಪುರುಷ ಅಹಂಕಾರ ಮಾತ್ರ ಇರುವುದಲ್ಲ, ಸಮಾಜ ನೈತಿಕವಾಗಿ ಎಷ್ಟು ಪತನಗೊಂಡಿದೆ ಎಂಬುದರ ಸೂಚನೆಯೂ ಇರುತ್ತದೆ. ಅತ್ಯಾಚಾರಗೈದವ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯನಾಗಿದ್ದರೆ ಕಾನೂನಿನ ಬಲೆಯೊಳಗೆ ಸಿಲುಕದಂತೆ ರಕ್ಷಿಸಿಕೊಳ್ಳುವುದಕ್ಕೆ ಆತನಿಗೆ ನೂರು ದಾರಿಗಳಿವೆ. ದುಬಾರಿ ಶುಲ್ಕ ತೆತ್ತು ನ್ಯಾಯವಾದಿಯನ್ನು ನೇಮಿಸಿಕೊಳ್ಳುವಲ್ಲಿಂದ ಹಿಡಿದು ಪೊಲೀಸರನ್ನು ಬಳಸಿಕೊಂಡು ತನಿಖೆ ಯನ್ನೇ ದಿಕ್ಕು ತಪ್ಪಿಸುವ ಮತ್ತು ಸಾಕ್ಷ್ಯವನ್ನೇ ನಾಶ ಮಾಡುವಲ್ಲಿ ವರೆಗೆ ಸಕಲ ಅವಕಾಶಗಳೂ ಆತನಿಗಾಗಿ ತೆರೆದಿರುತ್ತವೆ. ಇದಕ್ಕೆ ತಾಜಾ ಪುರಾವೆ ಬೇಕೆಂದರೆ, ದೆಹಲಿಯಲ್ಲಿ ನಡೆಯುತ್ತಿದ್ದ ಕುಸ್ತಿಪಟು ಗಳ ಪ್ರತಿಭಟನೆಯನ್ನು ಎತ್ತಿಕೊಳ್ಳಬಹುದು. ಪೋಕ್ಸೋ ಪ್ರಕರಣ ದಾಖಲಿಸಿದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. 7 ಮಂದಿ ಕುಸ್ತಿ ತಾರೆಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿಯೂ ಆರೋಪಿಯ ಕೂದಲೂ ಕೊಂಕಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪೋಕ್ಸೋ ಪ್ರಕರಣವನ್ನೇ ಹಿಂಪಡೆದು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದರು. ಒಂದುವೇಳೆ, ಓರ್ವ ಬಡಪಾಯಿ ಆರೋಪಿಯಾಗಿರುತ್ತಿದ್ದರೆ? ಪೋಕ್ಸೋ ಪ್ರಕರಣ ದಾಖಲಾದ ಕ್ಷಣದಲ್ಲೇ ಆತನನ್ನು ಕೈಕೋಲ ತೊಡಿಸಿ ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿ ಜೈಲಿಗೆ ಹಾಕಲಾಗುತ್ತಿತ್ತು. ಅಂದಹಾಗೆ,

ಈ ರೀತಿಯ ಆಕ್ರೋಶವೇ ಸೌಜನ್ಯ ಹೆತ್ತವರಲ್ಲೂ ಇದೆ. ಸೌಜನ್ಯ ಇಲ್ಲ ಎಂಬುದಕ್ಕಿಂತ ಆಕೆಯನ್ನು ಅತ್ಯಂತ ಕ್ರೂರವಾಗಿ ತಮ್ಮಿಂದ ಕಸಿದುಕೊಳ್ಳಲಾಗಿದೆ ಎಂಬ ನೋವು ಅವರನ್ನು ಇಂಚಿಂಚೂ ಕಾಡುತ್ತಿದೆ. ಸೌಜನ್ಯಳನ್ನು ಸ್ಮರಿಸಿಕೊಳ್ಳುವಾಗ 2012ರಲ್ಲಿ ಅವರು ಹೇಗೆ ಭಾವುಕರಾಗುತ್ತಿದ್ದರೋ ಈ 11 ವರ್ಷಗಳ ಬಳಿಕವೂ ಅದೇ ಭಾವದಲ್ಲಿದ್ದಾರೆ. 2012ರಲ್ಲಿ ಅವರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೋ ಈಗಲೂ ಅದೇ ಅನುಮಾನವನ್ನು ಪುನರಾವರ್ತಿಸುತ್ತಿದ್ದಾರೆ. ಆದ್ದರಿಂದ ಸೌಜನ್ಯ ಪ್ರಕರಣದ ಮರು ತನಿಖೆಯಾಗಬೇಕು. ಸಂತೋಷ್ ರಾವ್ ಅಲ್ಲದಿದ್ದರೆ ಇನ್ನಾರು ಎಂದು ಪ್ರಶ್ನಿಸುವ ಹಕ್ಕು ಆಕೆಯ ಕುಟುಂಬಕ್ಕಿದೆ. ಸರಕಾರ ಉತ್ತರಿಸಲಿ.

ಆರೆಸ್ಸೆಸ್ ಸಂವಾದ: ಜಮಾಅತೆ ಇಸ್ಲಾಮಿಯ ನಿಲುವೇನು?

 



ಸನ್ಮಾರ್ಗ ವಿಶೇಷ ಸಂಪಾದಕೀಯ 

‘RSS makes fresh minority outreach, key leaders meet Muslim representatives - ಮುಸ್ಲಿಮ್ ಪ್ರತಿನಿಧಿಗಳನ್ನು ಭೇಟಿಯಾದ ಆರೆಸ್ಸೆಸ್ ನಾಯಕರು -’ ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆ 2023 ಜನವರಿ 26ರಂದು ಮೂರು ಕಾಲಮ್‌ನಲ್ಲಿ ಸಾಕಷ್ಟು ಮಹತ್ವ ಕೊಟ್ಟೇ ಮತ್ತು ವಿವರವಾಗಿಯೇ ಸುದ್ದಿಯನ್ನು ಪ್ರಕಟಿಸಿತ್ತು. ದೆಹಲಿ ಕೇಂದ್ರಿತ ಮುಖ್ಯವಾಹಿನಿಯ ಇನ್ನಿತರ ಟೈಮ್ಸ್ ಆಫ್  ಇಂಡಿಯಾ ಸಹಿತ  ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದ್ದುವು. ಜಾಮಿಯಾ ಮಿಲ್ಲಿಯಾ ವಿವಿಯ ಮಾಜಿ ಉಪಕುಲಪತಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ದೆಹಲಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಆರೆಸ್ಸೆಸ್ ಕಡೆಯಿಂದ ಇಂದ್ರೇಶ್ ಕುಮಾರ್ ಮತ್ತು ರಾಮ್ ಲಾಲ್ ಕೃಷ್ಣಕುಮಾರ್ ಭಾಗವಹಿಸಿದ್ದರೆ, ಮುಸ್ಲಿಮ್ ಮುಖಂಡರಾಗಿ ಜಮಾಅತೆ ಇಸ್ಲಾಮೀ ಹಿಂದ್ ಅಖಿಲ ಭಾರತ ಕಾರ್ಯದರ್ಶಿ ಮಲಿಕ್ ಮುಅತಸಿಮ್ ಖಾನ್, ಜಮೀಅತೆ ಉಲಮಾಯೆ ಹಿಂದ್‌ನ ಮುಖಂಡರಾದ ಮೌಲಾನಾ ನಿಯಾಜ್  ಅಹ್ಮದ್ ಫಾರೂಖಿ, ಮೌಲಾನಾ ಫಝಲರ‍್ರಹ್ಮಾನ್ ಮತ್ತು ಅರ್ಶದ್ ಮದನಿ, ಅಜ್ಮೀರ್ ದರ್ಗಾದ ಸಲ್ಮಾನ್ ಚಿಶ್ತಿ ಮತ್ತಿತರರು ಭಾಗವಹಿಸಿದ್ದರು. ಅಲ್ಲದೇ, 

2022 ಆಗಸ್ಟ್ ನಲ್ಲಿ  ಮುಸ್ಲಿಮ್ ಮುಖಂಡರೊಂದಿಗೆ  ಆರೆಸ್ಸೆಸ್ ಇಂಥದ್ದೇ  ಸಭೆಯನ್ನು ನಡೆಸಿತ್ತು. ಅದರಲ್ಲಿ ಭಾಗಿಯಾಗಿದ್ದ ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ, ಪತ್ರಕರ್ತ ಶಾಹಿದ್ ಸಿದ್ದೀಕಿ ಮತ್ತಿತರ ಮುಖಂಡರೂ  ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಬೆನ್ನಿಗೇ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಮಲಿಕ್ ಮುಅತಸಿಮ್ ಖಾನ್‌ರು ಸಭೆಯ ವಿವರಗಳನ್ನು ವೀಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಇದಾಗಿ,

ಮೂರೂವರೆ ವಾರಗಳ ಬಳಿಕ ಜಮಾಅತೆ ಇಸ್ಲಾಮೀ ಹಿಂದನ್ನು ಕಟಕಟೆಯಲ್ಲಿ ನಿಲ್ಲಿಸುವ,  ಕದ್ದು ಮುಚ್ಚಿ ಮಾಡಿದ ಸಭೆ ಅನ್ನುವ ಮತ್ತು ಸಮುದಾಯ ದ್ರೋಹಿಯಂತೆ ಬಿಂಬಿಸುವ ಚರ್ಚೆಗಳು ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಫೇಸ್‌ಬುಕ್ ಹೇಳಿಕೆಯನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ. ಸಭೆಯ ವಿವರವನ್ನು ಜಮಾಅತೆ ಇಸ್ಲಾಮೀ ಹಿಂದ್ ಬಹಿರಂಗಪಡಿಸಬೇಕು ಮತ್ತು ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಹಕ್ಕನ್ನು ಜಮಾಅತ್‌ಗೆ ಕೊಟ್ಟವರು ಯಾರು ಎಂಬುದು ಪಿಣರಾಯಿ ಅವರ ಪ್ರಶ್ನೆ. ತಮಾಷೆ ಏನೆಂದರೆ,

ಪಿಣರಾಯಿ ವಿಜಯನ್‌ರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವವರ ವರೆಗೆ, ಯಾರೂ ಕೂಡಾ ಆ ಸಭೆಯಲ್ಲಿ ಭಾಗಿಯಾದ ಇತರ ಮುಸ್ಲಿಮ್ ಸಂಘಟನೆಗಳು ಮತ್ತು ಮುಖಂಡರ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡುತ್ತಿಲ್ಲ.

1919ರಲ್ಲಿ ಸ್ಥಾಪನೆಯಾದ ಮತ್ತು ಭಾರತೀಯ ಮುಸ್ಲಿಮರ ವಿಷಯದಲ್ಲಿ ಸದಾ ಧ್ವನಿಯೆತ್ತುತ್ತಿರುವ ಜಮೀಯತೆ ಉಲಮಾಯೆ ಹಿಂದ್‌ನ ಮೂವರು ಉನ್ನತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಒಂದು ಕೋಟಿಗಿಂತಲೂ ಅಧಿಕ ಸದಸ್ಯರಿರುವ ಮತ್ತು ಅದಕ್ಕಿಂತಲೂ ಹೆಚ್ಚು ಅನುಯಾಯಿಗಳಿರುವ ದೇವಬಂದಿ ಪರಂಪರೆಯ ಈ ವಿದ್ವಾಂಸರ ವೇದಿಕೆಗೆ ದೇಶಾದ್ಯಂತ ಬಲವಾದ ಹಿಡಿತ ಇದೆ ಮತ್ತು ಈ ಸಂಘಟನೆಯನ್ನು ಹೊರಗಿಟ್ಟು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗದಷ್ಟು ಇದು ವರ್ಚಸ್ಸನ್ನು ಹೊಂದಿದೆ. ಮುಸ್ಲಿಮ್ ಸಂಘಟನೆ ಗಳಲ್ಲೇ  ಅತ್ಯಂತ ಸಶಕ್ತ ಮತ್ತು ಪರಿಣಾಮಕಾರಿ ಲೀಗಲ್ ಸೆಲ್ ಅನ್ನು ಹೊಂದಿರುವ ಸಂಘಟನೆ ಇದು. ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೀಡಾಗುತ್ತಿರುವ ದುರ್ಬಲ ಮುಸ್ಲಿಮ್ ಆರೋಪಿಗಳು ಮತ್ತು ಅವರ ಕುಟುಂಬಕ್ಕೆ ಕಾನೂನಾತ್ಮಕವಾಗಿ ನೆರವಾಗುತ್ತಿರುವ ಸಂಘಟನೆಯೂ ಇದುವೇ. ಟಾಡಾ, ಯುಎಪಿಎ ಕಾಯ್ದೆಯಡಿ ಬಂಧನಕ್ಕೀಡಾದ ಸುಮಾರು 175ಕ್ಕಿಂತಲೂ ಅಧಿಕ ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸುವಲ್ಲಿ ಈ ಜಮೀಅತೆ ಉಲೆಮಾಯೆ ಹಿಂದ್ ಯಶಸ್ವಿಯಾಗಿದೆ. ಇದರ ಹೊರತಾಗಿ ಈ ದೇಶದ ಪ್ರಮುಖ ದರ್ಗಾವಾದ ಅಜ್ಮೀರ್ ಶರೀಫ್‌ನ ಹೊಣೆಗಾರರೂ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲ ವಿವರವನ್ನು ಜನವರಿ 26ರ ದಿ ಹಿಂದೂ ಮತ್ತು ಇತರ ಪತ್ರಿಕೆಗಳೂ ಪ್ರಕಟಿಸಿವೆ. ಹಾಗಿದ್ದೂ ಇವೆಲ್ಲವುಗಳನ್ನು ಅಡಗಿಸಿಟ್ಟು ಕೇವಲ ಜಮಾಅತೆ ಇಸ್ಲಾಮಿಯನ್ನು ಮಾತ್ರ ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುವುದರ ಉದ್ದೇಶವೇನು? ಅಜ್ಮೀರ್ ಚಿಶ್ತಿಯನ್ನು ಯಾಕೆ ಇವರು ಪ್ರಶ್ನಿಸುತ್ತಿಲ್ಲ? ಜಮೀಅತೆ ಉಲೆಮಾಯೆ ಹಿಂದನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವುದಕ್ಕೆ ಜಮೀಅತೆ ಉಲೆಮಾಯೆ ಹಿಂದ್‌ಗೆ ಏನರ್ಹತೆಯಿದೆ, ಚಿಶ್ತಿಗೆ ಏನು ಹಕ್ಕು ಇದೆ ಎಂದೇಕೆ ಯಾರೂ ಪ್ರಶ್ನಿಸುತ್ತಿಲ್ಲ? ಸತ್ಯವನ್ನು ಅಡಗಿಸುತ್ತಿರುವವರು ಯಾರು? ಸಭೆಯ ಬಗ್ಗೆ ಸುಳ್ಳುಮಿಶ್ರಿತ ಮತ್ತು ಅನುಮಾನಿತ ಸುದ್ದಿಯನ್ನು ಹರಡಿ ಸಮುದಾಯ ದ್ರೋಹಿಯಂತೆ ವರ್ತಿಸುತ್ತಿರುವವರು ಯಾರು? ಈ ಸಭೆಯ ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡ  ಬಳಿಕವೂ ಮತ್ತು ಮಾಧ್ಯಮಗಳು ಸುದ್ದಿ ಪ್ರಕಟಿಸಿದ ಹೊರತಾಗಿಯೂ ಜಮಾಅತ್ ರಹಸ್ಯವಾಗಿ ಸಭೆ ನಡೆಸಿದೆ ಮತ್ತು ಆರೆಸ್ಸೆಸ್ ಪ್ರಭಾವದಿಂದಾಗಿಯೇ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿಲ್ಲ ಎಂದೆಲ್ಲ ಹೇಳುವುದರಲ್ಲಿ ದುರುದ್ದೇಶವಲ್ಲದೇ ಇನ್ನೇನಿದೆ? ಅಂದಹಾಗೆ,

ಜಮಾಅತೆ ಇಸ್ಲಾಮೀ ಹಿಂದ್ ಸಂವಾದದಲ್ಲಿ ನಂಬಿಕೆಯಿರಿಸಿರುವ ಆಂದೋಲನ. ಅದು ವಿಚಾರಗಳನ್ನು ವಿರೋಧಿಸುತ್ತದೆಯೇ ಹೊರತು ಅದನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನಲ್ಲ. ಸಮಸ್ಯೆಯ ಪರಿಹಾರಕ್ಕೆ ಇರುವ ಹಲವು ದಾರಿಗಳಲ್ಲಿ ಸಂವಾದವೂ ಒಂದು ಎಂದು ಜಮಾಅತ್ ಬಲವಾಗಿ ನಂಬಿದೆ.

ಈ ಜಗತ್ತಿನ ಫ್ಯಾಸಿಸ್ಟ್ ಗಳ  ಗುರುವಾಗಿರುವ ಫರೋವನ ಬಳಿಗೆ ಪ್ರವಾದಿ ಮೂಸಾ(ಅ)ರನ್ನು ಕಳುಹಿಸಿದ ಅಲ್ಲಾಹನ ಗ್ರಂಥದ ಮೇಲೆ ಅದು ಅಚಂಚಲ ವಿಶ್ವಾಸವನ್ನು ಇರಿಸಿದೆ. ಆ ಫ್ಯಾಸಿಸ್ಟ್ ನ ಜೊತೆ ನಿರರ್ಗಳವಾಗಿ ಮಾತಾಡುವಂತಾಗಲು ತನ್ನ ನಾಲಗೆಯ ತೊಡಕನ್ನು ನೀಗಿಸು...’ ಎಂದಷ್ಟೇ ಮೂಸಾ(ಅ) ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಫರೋವನ ಶಿಷ್ಯನಂತಿದ್ದ 6ನೇ ಶತಮಾನದ ಫ್ಯಾಸಿಸ್ಟ್ ನಾಯಕ ಅಬೂಜಹಲ್‌ನ ಬಳಿಗೆ ಪ್ರವಾದಿ ಮುಹಮ್ಮದರು(ಸ) ನೂರಾರು ಬಾರಿ ಹೋಗಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜಮಾಅತ್ ಈ ಪರಂಪರೆಯನ್ನು ಮುಂದುವರಿಸಲು ಬಯಸುತ್ತದೆ ಮತ್ತು ಸಂವಾದದ ಬಾಗಿಲು ಯಾರಿಗೂ ಯಾವತ್ತೂ ಮುಚ್ಚಿಕೊಳ್ಳಬಾರದೆಂದು ದೃಢವಾಗಿ ಪ್ರತಿಪಾದಿಸುತ್ತದೆ. ಈ ಕಾರಣದಿಂದಾಗಿಯೇ ಜಮಾಅತ್ ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗಿಯಾಗಿದೆ ಮತ್ತು ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ಮುಂದೆಯೂ ಸಂವಾದದ ಸಂದರ್ಭ ಎದುರಾದಾಗಲೆಲ್ಲ ಪರಿಸ್ಥಿತಿಯನ್ನು ಅನುಸರಿಸಿಕೊಂಡು ಸಮುದಾಯದ ಹಿತದೃಷ್ಟಿಯಿಂದ ಆರೆಸ್ಸೆಸ್ ಸಹಿತ ಎಲ್ಲರ ಜೊತೆಗೂ ಸಂವಾದ ನಡೆಸಲು ಜಮಾಅತ್ ಸಿದ್ಧವಾಗಿದೆ. ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದ ಜೊತೆ ಸಂವಾದ ನಡೆಸುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ಅಪರಾಧವಾಗಿ ಎಂದೂ ಪರಿಗಣಿಸಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಸಂದರ್ಭಾನುಸಾರ ಯಾವುದು ಸೂಕ್ತವೋ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅದು ಹಿಂಜರಿಯುವುದೂ ಇಲ್ಲ. ಅಷ್ಟಕ್ಕೂ,

ಜಮಾಅತ್ ಏಕವ್ಯಕ್ತಿ ಆಂದೋಲನವಲ್ಲ. ಅದು ಶೂರಾ ಅಥವಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದೆ. ಇಂಥ ಪಾರ್ಲಿಮೆಂಟ್ ವ್ಯವಸ್ಥೆ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ  ವರೆಗೆ ಅತ್ಯಂತ ಕ್ರಮಬದ್ಧವಾಗಿ ನಡೆಯುತ್ತಲೂ ಇದೆ. ಕೇಂದ್ರ ಪಾರ್ಲಿಮೆಂಟ್‌ಗೆ ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗವಹಿಸುವುದೂ ಸೇರಿದಂತೆ ಈ ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದು ಜಮಾಅತೆ ಇಸ್ಲಾಮೀ ಹಿಂದ್ ತನ್ನ ಕಾರ್ಯಚಟುವಟಿಕೆಗೆ ಆಯ್ದುಕೊಂಡಿರುವ ದಾರಿ. ಹಾಗಂತ,
ತಾನು ಪ್ರತಿಪಾದಿಸುತ್ತಿರುವ ಪರಿಹಾರ ಕ್ರಮವೇ ಅಂತಿಮ ಮತ್ತು ಅದಕ್ಕಿಂತ ಭಿನ್ನ ರೀತಿಯ ಪರಿಹಾರ ಮಾರ್ಗವನ್ನು ಪ್ರತಿಪಾದಿಸುವವರೆಲ್ಲ ಸಮುದಾಯ ದ್ರೋಹಿಗಳು ಎಂದು ಜಮಾಅತೆ ಇಸ್ಲಾಮೀ ಹಿಂದ್ ಎಂದೂ ಘೋಷಿಸಿಲ್ಲ. ಮುಸ್ಲಿಮ್ ಸಮುದಾಯ ಸದ್ಯ ಎದುರಿಸುತ್ತಿರುವ ಸವಾಲುಗಳು ಮತ್ತು ಆತಂಕಗಳ ನಿವಾರಣೆಯಲ್ಲಿ ಒಂದಕ್ಕಿಂತ  ಹೆಚ್ಚು ಪರಿಹಾರ ದಾರಿಗಳು ಇರಬಹುದು ಎಂಬುದರಲ್ಲಿ ಜಮಾಅತ್‌ಗೆ ಆಕ್ಷೇಪವೂ ಇಲ್ಲ. ತನ್ನ ನಿಲುವಿನೊಂದಿಗೆ ಯಾರಿಗೆಲ್ಲ ಸಹಮತ ಇದೆಯೋ ಅವರನ್ನು ಸೇರಿಸಿಕೊಂಡು ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಕೆಲಸ ಮಾಡುವುದೇ ಜಮಾಅತ್‌ನ ಗುರಿ. ಹಾಗಂತ,

ತನ್ನ ಜೊತೆ ಸೇರುವಂತೆ ಮತ್ತು ತನ್ನ ನಿಲುವನ್ನೇ ಪ್ರತಿಪಾದಿಸುವಂತೆ ಯಾರನ್ನೂ ಯಾವ ಸಂಘಟನೆಯನ್ನೂ ಅದು ಬಲವಂತಪಡಿಸುತ್ತಿಲ್ಲ. ತಾನು ನೆಚ್ಚಿಕೊಂಡ ಆದರ್ಶದಂತೆ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಾ ಮತ್ತು ಭಿನ್ನ ನಿಲುವುಗಳನ್ನು ಭಿನ್ನಮತದ ಜೊತೆಗೇ ಗೌರವಿಸುವುದನ್ನೇ ಅದು ಧೋರಣೆಯಾಗಿ ಪಾಲಿಸಿಕೊಂಡೂ ಬಂದಿದೆ, ಮುಂದೆಯೂ ಹಾಗೆಯೇ.  ಅಂದಹಾಗೆ,

ಕಳೆದ 75 ವರ್ಷಗಳ ದೀರ್ಘ ಅನುಭವದಲ್ಲಿ ಈ ಸಮಾಜ ಮತ್ತು ಈ ಸಮುದಾಯ ಏನು ಎಂಬುದನ್ನು ಜಮಾಅತ್ ಚೆನ್ನಾಗಿಯೇ ಅರಿತಿದೆ ಮತ್ತು ಪರಿಹಾರ ದಾರಿಗಳ ಬಗ್ಗೆಯೂ ಅದಕ್ಕೆ ಸ್ಪಷ್ಟತೆಯಿದೆ. ಹಾಗೆಯೇ, ಸತ್ಯವನ್ನು ಅಡಗಿಸುವ ಮತ್ತು ಸುಳ್ಳನ್ನು ವಿಜೃಂಭಿಸಿ ಹೇಳುವ ಸಂಚುಗಳೂ  ಹಿಂದೆ ನಡೆದಿದೆ. ಅಲ್ಲಾಹನ ಅನುಗ್ರಹದಿಂದ ಅವನ್ನು ಯಶಸ್ವಿಯಾಗಿ ಎದುರಿಸಿದ ಇತಿಹಾಸವೂ ಜಮಾಅತ್‌ಗಿದೆ. ಆರೆಸ್ಸೆಸ್ ಜೊತೆಗಿನ ಸಂವಾದವನ್ನೂ ಜಮಾಅತ್ ಸಕಾರಾತ್ಮಕವಾಗಿಯೇ ಪರಿಗಣಿಸುತ್ತದೆ ಮತ್ತು ದುರುದ್ದೇಶ ರಹಿತ ಅಭಿಪ್ರಾಯಗಳನ್ನು ಅಷ್ಟೇ ಸಕಾರಾತ್ಮಕವಾಗಿ ಸ್ವೀಕರಿಸುತ್ತದೆ.

Saturday, 8 October 2022

ಸಲ್ಲಲ್ಲಾಹು ಅಲೈಹಿ ವ ಸಲ್ಲಮ್




ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು  ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು. 

ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ  ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅ ನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ  ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ  ಅದರ ಅನುಯಾಯಿಗಳ ನಡವಳಿಕೆಗಳೇ ಚರ್ಚೆಗೊಳಗಾಗುವುದು ಹೆಚ್ಚು.  ಹೀಗೆ ತಾವು ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವವರು ಎಂದು ಹೇಳಿಕೊಳ್ಳುತ್ತಲೇ ಆ ಸಿದ್ಧಾಂತದ ಬಹು ಅಂಶವನ್ನು ಕೈಬಿಟ್ಟು  ಬದುಕುತ್ತಿರುವವರು ಒಂದು ಕಡೆಯಾದರೆ, ತಮ್ಮ ಸಿದ್ಧಾಂತವೇ ಪರಮ ಸತ್ಯ ಮತ್ತು ಅದರ ಅನುಸರಣೆಯೇ ಇಹ-ಪರ ಯಶಸ್ಸಿನ  ಹಾದಿ ಎಂದು ನಂಬಿ ಬದುಕುತ್ತಿರುವವರು ಇನ್ನೊಂದು ಕಡೆ. ಪ್ರವಾದಿ ಮುಹಮ್ಮದ್(ಸ-ಸಲ್ಲಲ್ಲಾಹು ಅಲೈಹಿ ವ ಸಲ್ಲಮ್- ಅವರ  ಮೇಲೆ ಅಲ್ಲಾಹನ ಕರುಣೆ ಇರಲಿ) ಮತ್ತು ಅವರ ಅನುಯಾಯಿಗಳು ಈ ಎರಡನೇ ಗುಂಪಿನಲ್ಲಿದ್ದಾರೆ.

63 ವರ್ಷಗಳ ವರೆಗೆ ಬದುಕಿದ ಪ್ರವಾದಿ(ಸ), ಎಲ್ಲೂ ತನ್ನ ಚಿತ್ರವನ್ನು ಬಿಡಿಸಲು ಅನುಮತಿಸಿಲ್ಲ. ಎಲ್ಲಿ ಆರಾಧನೆಗೆ ಒಳಪಡುತ್ತೇನೋ  ಎಂಬ ಭೀತಿಯೇ ಇದಕ್ಕೆ ಕಾರಣ ಇರಬೇಕು. ಹೀಗೆ ತನ್ನ ಚಿತ್ರವನ್ನು ಬಿಡಿಸಲು ಒಪ್ಪದ ಪ್ರವಾದಿಯ ಚಿತ್ರವನ್ನು ಅವರು ಕಾಲವಾಗಿ  1500 ವರ್ಷಗಳೇ ಸಂದ ಬಳಿಕವೂ ಅವರ ಅನುಯಾಯಿಗಳು ಅವರ ಚಿತ್ರವನ್ನು ಬಿಡಿಸದೇ ಅನುಸರಿಸುತ್ತಿದ್ದಾರೆ. ಅವರು ಕಲಿಸಿದ  ನಮಾಝï, ಉಪವಾಸ, ಹಜ್ಜ್, ಝಕಾತ್ ಇತ್ಯಾದಿ ಮೂಲಭೂತ ಆರಾಧನಾ ರೀತಿಯನ್ನು ಅವರು ಕಲಿಸಿದಂತೆಯೇ ಇವತ್ತೂ ಅ ನುಸರಿಸುತ್ತಿದ್ದಾರೆ. ಅವರು ಕರಿಯ ಮತ್ತು ಬಿಳಿಯರನ್ನು, ಶ್ರೀಮಂತ ಮತ್ತು ಬಡವರನ್ನು, ರಾಜ ಮತ್ತು ಪ್ರಜೆಯನ್ನು, ಗುರು ಮತ್ತು  ಶಿಷ್ಯನನ್ನು, ವಿದ್ವಾಂಸ ಮತ್ತು ಸಾಮಾನ್ಯನನ್ನು ಭುಜಕ್ಕೆ ಭುಜ ತಾಗಿಸಿ ನಮಾಝï‌ನಲ್ಲಿ ಸರತಿಯಲ್ಲಿ ನಿಲ್ಲಬೇಕೆಂದು ಕಲಿಸಿದ್ದನ್ನು ಅವರ  ಅನುಯಾಯಿಗಳು ಇವತ್ತಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರು ಕಲಿಸಿದ ಅದೇ ರೀತಿಯಲ್ಲಿ ಉಪವಾಸವನ್ನು  ಆಚರಿಸುತ್ತಿದ್ದಾರೆ. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳಾದ ರಮಝಾನಿನಲ್ಲಿಯೇ ಮತ್ತು ಅದೂ ಮುಂಜಾನೆಯಿಂದ ಮುಸ್ಸಂಜೆಯ  ವರೆಗೆ ಈಗಲೂ ಅವರು ಉಪವಾಸ ಆಚರಿಸುತ್ತಿದ್ದಾರೆ. ಹಜ್ಜ್ ಕರ್ಮವನ್ನು ಕೂಡ ಚಾಂದ್ರಮಾನ ಕ್ಯಾಲೆಂಡರಿನ 12ನೇ ತಿಂಗಳಲ್ಲೇ   ನಿರ್ವಹಿಸುತ್ತಾರೆ ಮತ್ತು ಪ್ರವಾಹ, ಸಾಂಕ್ರಾಮಿಕ ರೋಗ, ಆರ್ಥಿಕ ಹಿಂಜರಿತ, ಯುದ್ಧ ಇತ್ಯಾದಿ ಸಹಜ ಕಾರಣಗಳನ್ನು ಮುಂದೊಡ್ಡಿ  10ನೇ ತಿಂಗಳಲ್ಲೋ  ಅಥವಾ 5ನೇ ತಿಂಗಳಲ್ಲೋ  ಹಜ್ಜ್ ನಿರ್ವಹಿಸುವುದಿಲ್ಲ. ಉಪವಾಸಕ್ಕೆ ಸಂಬಂಧಿಸಿಯೂ ಇವೇ ಮಾತುಗಳು ಅನ್ವಯಿಸುತ್ತವೆ. ಆವರೆಗೆ ಮಕ್ಕಾದ ಕಾಬಾ ಭವನಕ್ಕೆ ಪ್ರವೇಶ ನಿಷಿದ್ಧಗೊಂಡಿದ್ದ ಕರಿಯರನ್ನು ಸಮಾನತೆಯ ದಾರದಲ್ಲಿ ಪೋಣಿಸುವ  ಕ್ರಾಂತಿಕಾರಿ ಘೋಷಣೆಯ ದ್ಯೋತಕವಾಗಿ ಅವರು ಬಿಲಾಲ್ ಎಂಬ ಆಫ್ರಿಕನ್ ನೀಗ್ರೋವನ್ನು ಕಾಬಾ ಭವನದ ಮೇಲ್ಛಾವಣಿಗೆ ಹತ್ತಿಸಿ  ಪ್ರಾರ್ಥನಾ ಕರೆಯನ್ನು ಮೊಳಗಿಸಿದರು. ಅರಬರಿಗೆ ಅರಬೇತರರಿಗಿಂತ, ಬಿಳಿಯರಿಗೆ ಕರಿಯರಿಗಿಂತ, ವಿದ್ವಾಂಸರಿಗೆ ಸಾಮಾನ್ಯರಿಗಿಂತ,  ಶ್ರೀಮಂತರಿಗೆ ಬಡವರಿಗಿಂತ ಮನುಷ್ಯರೆಂಬ ನೆಲೆಯಲ್ಲಿ ಯಾವುದೇ ಮೇಲ್ಮೆಯಾಗಲಿ, ಹೆಚ್ಚುಗಾರಿಕೆಯಾಗಲಿ ಇಲ್ಲ ಎಂದು ಸಾರಿದರು.  ಇವತ್ತಿಗೂ ಈ ಸಮಾನತೆಯ ಸಿದ್ಧಾಂತವನ್ನು ಚಾಚೂ ತಪ್ಪದೇ ಮುಸ್ಲಿಮರು ಪಾಲಿಸುತ್ತಿದ್ದಾರೆ. ಹೆಣ್ಣಿಗೆ ಆಸ್ತಿಯಲ್ಲಿ ಪಾಲು, ವಧುವಿಗೆ  ವಿವಾಹ ಧನ, ವಿಧವೆಗೆ ವಿವಾಹ, ಹೆಣ್ಣು-ಗಂಡಿಗಿಬ್ಬರಿಗೂ ವಿಚ್ಛೇದನ ಸ್ವಾತಂತ್ರ‍್ಯ, ಹೆತ್ತವರನ್ನು ಆರೈಕೆ ಮಾಡುವ ಮಕ್ಕಳಿಗೆ ಸ್ವರ್ಗವಿದೆ  ಎಂಬ ಬೋಧನೆಯ ಅನುಸರಣೆ, ಮದ್ಯಪಾನ ಮತ್ತು ಬಡ್ಡಿಯ ಬಗ್ಗೆ ತಿರಸ್ಕಾರ.. ಇತ್ಯಾದಿ ಪ್ರವಾದಿ ಮೌಲ್ಯಗಳನ್ನು 1500 ವರ್ಷಗಳ  ಬಳಿಕ ಇವತ್ತೂ ಮುಸ್ಲಿಮರು ಸಣ್ಣ-ಪುಟ್ಟ ಲೋಪಗಳ ಹೊರತಾಗಿಯೂ ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ನಿಜವಾಗಿ,

ಸಿದ್ಧಾಂತಕ್ಕೆ ಬದ್ಧವಾದ ಮತ್ತು ಪ್ರವಾದಿಗೆ ನಿಷ್ಠವಾದ ಇಂಥದ್ದೊಂದು  ಅನುಯಾಯಿ ವರ್ಗ ಈ ಜಗತ್ತಿನ ಇನ್ನಾವ ಸಿದ್ಧಾಂತಕ್ಕಾಗಲಿ,  ವ್ಯಕ್ತಿಗಳಿಗಾಗಲಿ ಇಲ್ಲ. ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದರ(ಸ) ಹೊರತಾಗಿ ಅನೇಕ ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳು  ಬಂದು ಹೋಗಿದ್ದಾರೆ. ಅವರೆಲ್ಲರನ್ನೂ ಪ್ರೀತಿಸುವ ಮತ್ತು ಸ್ಮರಿಸುವ ವ್ಯಕ್ತಿಗಳು ಇವತ್ತಿಗೂ ಇದ್ದಾರೆ. ಆದರೆ, ಅವರು ಮಂಡಿಸಿದ  ವಿಚಾರಧಾರೆಯನ್ನು ಅನುಸರಿಸುವ ವಿಷಯಕ್ಕೆ ಬಂದರೆ, ಇವರಲ್ಲಿ ಹೆಚ್ಚಿನವರು ಅನುತ್ತೀರ್ಣರಾಗುತ್ತಾರೆ. ಆದ್ದರಿಂದಲೇ,

ಪ್ರವಾದಿ(ಸ) ಮುಖ್ಯವಾಗುತ್ತಾರೆ. ಅವರು ಮತ್ತು ಅವರು ಮಂಡಿಸಿದ ವಿಚಾರಧಾರೆಗಳು ಈ ಸಮಾಜದಲ್ಲಿ ಪ್ರತಿನಿತ್ಯ ವಿಮರ್ಶೆ, ಟೀಕೆ,  ಪ್ರಶ್ನೆ, ಮೆಚ್ಚುವಿಕೆಗೆ ಪಾತ್ರವಾಗುತ್ತಿರುವುದೇ ಅದು ಜೀವಂತ ಸಿದ್ಧಾಂತ ಎಂಬುದಕ್ಕೆ ಸಾಕ್ಷಿ. ಸಲ್ಲಲ್ಲಾಹು ಅಲೈಹಿ ವ ಸಲ್ಲಮ್.