ಮದುವೆ ಮತ್ತು ವಿಚ್ಛೇದನ- ಇವೆರಡೂ ವಿರುದ್ಧ ಪದಗಳಂತಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ಜೋಡಿ ಪದಗಳಂತೆ ಗುರುತಿಸಿಕೊಳ್ಳುತ್ತಿವೆ. ‘ಮದುವೆಗಿಂತ ಗಂಟೆ ಮೊದಲು ವಧು ಅಥವಾ ವರ ಪರಾರಿ’, ‘ಮದುವೆ ಮಂಟಪದಲ್ಲೇ ವಿಚ್ಛೇದನ…’ ಇತ್ಯಾದಿ ಸುದ್ದಿಗಳು ಇವತ್ತು ಎಷ್ಟು ಸಹಜ ಅನ್ನಿಸಿಕೊಂಡಿವೆಯೆಂದರೆ, ಇಂಥ ಸುದ್ದಿಗಳನ್ನು ಸಮಾಜ ಆಘಾತಕಾರಿಯಾಗಿ ಸ್ವೀಕರಿಸುವ ಬದಲು ಮನೋರಂಜನೆಯಾಗಿ ಸ್ವೀಕರಿಸತೊಡಗಿವೆ.
ಮದುವೆಯನ್ನು ಏಳೇಳು ಜನುಮದ ಅನುಬಂಧವಾಗಿ ಕಟ್ಟಿಕೊಡುವ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಇವತ್ತು ವಿಚ್ಛೇದನೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿವೆ. ಮುಸ್ಲಿಮ್ ಸಮುದಾಯವೂ ಹಿಂದೆ ಬಿದ್ದಿಲ್ಲ. ದೇಶದಲ್ಲಿ 11 ಲಕ್ಷದ 40 ಸಾವಿರ ಪ್ರಕರಣಗಳು ಕುಟುಂಬ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ ಎಂದು ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು. ದೇಶದಲ್ಲಿ ಬರೇ 763 ಕುಟುಂಬ ನ್ಯಾಯಾಲಯಗಳಿದ್ದು, ಏರುತ್ತಿರುವ ಪ್ರಕರಣಗಳನ್ನು ನಿಭಾಯಿಸುವುದಕ್ಕೆ ಇವುಗಳಿಂದ ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿಶೇಷವಾಗಿ ಪ್ರಸ್ತಾಪಿಸಬೇಕಿಲ್ಲ. ಈ ಹಿಂದೆ ಪ್ರತಿ 1000 ಮಂದಿಗೆ ಒಂದು ವಿಚ್ಛೇದನ ಪ್ರಕರಣ ದಾಖಲಾಗುತ್ತಿದ್ದರೆ ಈಗ ಇವುಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿವೆ. ಹಾಗೆಯೇ ಸುಳ್ಳು ಪ್ರಕರಣ ದಾಖಲಾತಿಯಲ್ಲೂ ಏರಿಕೆಯಾಗುತ್ತಿವೆ. ವಿಚ್ಛೇದನ ಕೋರಿದ ಪತಿಯನ್ನು ಸತಾಯಿಸುವುದಕ್ಕಾಗಿ ವರದಕ್ಷಿಣೆ, ಗೃಹಹಿಂಸೆಯಂಥ ಸುಳ್ಳು ಕೇಸು ದಾಖಲಿಸುವುದೂ ನಡೆಯುತ್ತಿದೆ. ಇಂಥ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟು ಕಳೆದವಾರ ಮಹತ್ವದ ತೀರ್ಪಿತ್ತಿದೆ.
ರಾಯಚೂರಿನ ದೇವದುರ್ಗದ ಸುಮಾ ಮತ್ತು ಖಾಸಗಿ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಪುಣೆಯ ಗೋಪಾಲ್ ಗುಂಡ್ಯಾಲ್ ಎಂಬವರು 2013ರಲ್ಲಿ ವಿವಾಹವಾಗಿದ್ದರು. ಆ ಬಳಿಕ, ‘ತನ್ನನ್ನು ಗಂಡ ನಿರ್ಲಕ್ಷಿಸಿದ, ಪುಣೆಗೆ ತನ್ನನ್ನು ಕರಕೊಂಡು ಹೋಗಿಲ್ಲ, ತನಗೆ ಹಿಂದಿ ಅಥವಾ ಮರಾಠಿ ಭಾಷೆ ತಿಳಿಯದೇ ಇರುವುದಕ್ಕಾಗಿ ಆತ ಹೀಗೆ ಮಾಡಿದ್ದಾನೆ…’ ಎಂದು ಸುಮಾ ಪೊಲೀಸರಲ್ಲಿ ದೂರಿದ್ದರು. ಅಲ್ಲದೇ, ಪುಣೆಯಲ್ಲಿರುವ ಪತಿಯ ಮನೆಗೆ ಹೋಗುವಂತೆ ಪತಿಯ ಸಂಬಂಧಿಕರು ತನ್ನನ್ನು ಬಲವಂತಪಡಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದೂ ಆರೋಪಿಸಿದ್ದರು. ಇದಾಗಿ 2018 ಡಿಸೆಂಬರ್‌ನಲ್ಲಿ ಪತಿ ಗೋಪಾಲ್ ಗುಂಡ್ಯಾಲ್ ಸೊಲ್ಲಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯ ಪತ್ನಿ ಸುಮಾರಿಗೆ ನೋಟೀಸು ಜಾರಿ ಮಾಡಿತು. ಇದರಿಂದ ಕೆರಳಿದ ಸುಮಾ, ಪತಿ ಮತ್ತು ಸಂಬಂಧಿಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ವರದಕ್ಷಿಣೆ ಕಿರುಕುಳ ಮತ್ತು ಗೃಹಹಿಂಸೆಯ ದೂರು ದಾಖಲಿಸಿದರು. ಇದರನ್ವಯ ಪೊಲೀಸರು ಎಫ್‌ಐಆರ್ ಅನ್ನೂ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗುಂಡ್ಯಾಲ್ ಹೈಕೋರ್ಟ್ ಮೆಟ್ಟಲೇರಿದ್ದರು. ಇದೀಗ ಈ ಬಗ್ಗೆ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯವು, ವಿಚ್ಛೇದನ ನೋಟೀಸ್ ಬಂದ ಬಳಿಕ ಪತ್ನಿ ತನ್ನ ಪತಿ ಮತ್ತಿತರ ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ, ಅದನ್ನು ಪರಿಗಣಿಸಲಾಗದು ಎಂದಿದೆ. ಅಂದಹಾಗೆ,
ಇದು ಮದುವೆ ಮತ್ತು ವಿಚ್ಛೇದನದ ಒಂದು ಮುಖವಾದರೆ, ಇನ್ನೊಂದು ಮುಖಕ್ಕೆ ಕೇರಳದ ಹೈಕೋರ್ಟು ಇತ್ತೀಚೆಗೆ ಕನ್ನಡಿ ಹಿಡಿದಿತ್ತು.
‘ಕೇರಳವು ಮದುವೆಯನ್ನು ಯೂಸ್ ಆಂಡ್ ತ್ರೋ ಅಥವಾ ಬಳಸು-ಬಿಸಾಕು ಎಂಬ ರೀತಿಯಲ್ಲಿ ಪರಿಗಣಿಸುತ್ತಿವೆ’ ಎಂಬ ಆತಂಕವನ್ನು ಕಳೆದ ವರ್ಷದ ಕೊನೆಯಲ್ಲಿ ಕೇರಳ ಹೈಕೋರ್ಟು ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ಮುಹಮ್ಮದ್ ಮುಶ್ತಾಕ್ ಮತ್ತು ಸೋಪಿ ಥಾಮಸ್ ಅವರಿದ್ದ ಪೀಠ ಹೀಗೆ ಹೇಳುವುದಕ್ಕೆ ಒಂದು ಪ್ರಕರಣ ಕಾರಣವಾಗಿತ್ತು. ವ್ಯಕ್ತಿಯೋರ್ವ ವಿಚ್ಛೇದನಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ. ತನ್ನ ಪತ್ನಿ ಅಸಹಜವಾಗಿ ವರ್ತಿಸುತ್ತಾಳೆ ಮತ್ತು ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿ ಗಲಾಟೆ ಮಾಡುತ್ತಾಳೆ ಎಂದೂ ಇದಕ್ಕೆ ಆತ ಕಾರಣವನ್ನು ಕೊಟ್ಟಿದ್ದ. ಪತ್ನಿ ಮತ್ತು ಮೂವರು ಮಕ್ಕಳ ಕುಟುಂಬವನ್ನು ತ್ಯಜಿಸಿ ಆತ ಇನ್ನೋರ್ವಳೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಈ ದ್ವಿಸದಸ್ಯ ಪೀಠ, ಆತನ ವಿಚ್ಛೇದನಾ ಬೇಡಿಕೆಯನ್ನು ತಿರಸ್ಕರಿಸಿತಲ್ಲದೇ, ವಿವಾಹೇತರ ಸಂಬಂಧವನ್ನು ಪತ್ನಿ ಪ್ರಶ್ನಿಸುವುದು ಅಸಹಜ ವರ್ತನೆ ಎನ್ನುವಂತಿಲ್ಲ ಮತ್ತು ಪತ್ನಿಯನ್ನು ಬಳಸಿ ಬಿಸಾಕುವ ವಸ್ತುವಾಗಿ ನೋಡುವಂತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತ್ತು. ಅಂದಹಾಗೆ,
ದೇಶದಲ್ಲಿಯೇ ಅತ್ಯಧಿಕ ವಿವಾಹ ವಿಚ್ಛೇದನ ಪ್ರಕರಣ ದಾಖಲಾಗುತ್ತಿರುವುದು ಕೇರಳದಲ್ಲಿ. ಪ್ರತಿದಿನ 10ಕ್ಕಿಂತ ಅಧಿಕ ವಿಚ್ಛೇದನ ಪ್ರಕರಣಗಳು ಕೇರಳದಲ್ಲಿ ದಾಖಲಾಗುತ್ತಿವೆ ಎಂಬುದು ಅಧಿಕೃತ ಮಾಹಿತಿ. ಕೇರಳದಲ್ಲಿ ಒಟ್ಟು 96 ಕೌಟುಂಬಿಕ ನ್ಯಾಯಾಲಯಗಳಿವೆ. ಇವುಗಳಲ್ಲಿ ದಾಖಲಾದ ಸಂಖ್ಯೆಯನ್ನೇ ಅಂತಿಮ ಎಂದು ಹೇಳುವಂತಿಲ್ಲ. ಇಲ್ಲಿ ದಾಖಲಾಗದೇ ಇರುವ ಪ್ರಕರಣಗಳೂ ಧಾರಾಳ ಇವೆ. ಮೌಖಿಕವಾಗಿ ಮತ್ತು ಇತರ ಸಾಂಪ್ರದಾಯಿಕ ರೀತಿಯಲ್ಲಿ ವಿಚ್ಛೇದನ ಪ್ರಕರಣಗಳು ಕೇರಳ ಸಹಿತ ದೇಶದೆಲ್ಲೆಡೆ ನಡೆಯುತ್ತಿವೆ. 2006ರಲ್ಲಿ ವಿಚ್ಛೇದನಕ್ಕಾಗಿ ಕೇರಳದ ಕೌಟುಂಬಿಕ ನ್ಯಾಯಾಲಯದಲ್ಲಿ 8,450 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ 2012ರಲ್ಲಿ ಇಂಥ ಅರ್ಜಿಗಳ ಸಂಖ್ಯೆ 44,238ಕ್ಕೆ ಏರಿತ್ತು. ಈ 2023ರಲ್ಲಂತೂ ಇದು ಲಕ್ಷವನ್ನೂ ಮೀರಿರಿರುವ ಸಾಧ್ಯತೆ ಇದೆ. ಕೇರಳದ ತಿರುವನಂತರಪುರ, ತ್ರಿಶ್ಶೂರ್, ಪತ್ತನಂತಿಟ್ಟ ಮತ್ತು ಎರ್ನಾಕುಲಂನಂಥ ಪ್ರದೇಶಗಳಲ್ಲಿ ಅತೀಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿದ್ದರೆ ಕಾಸರಗೋಡು ಮತ್ತು ವಯನಾಡುಗಳಲ್ಲಿ ಅತೀ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ದೇಶಕ್ಕೆ ಸಂಬಂಧಿಸಿ ಹೇಳುವುದಾದರೆ, ದೆಹಲಿ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ಲಕ್ನೋದಂಥ ನಗರಗಳಲ್ಲಿ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ಸಂಪ್ರದಾಯ, ಊರ ಸಂಸ್ಕೃತಿಯನ್ನು ಅತೀ ಹೆಚ್ಚಾಗಿ ಪಾಲಿಸುತ್ತಿರುವ ಬಿಹಾರ, ರಾಜಸ್ತಾನ, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅತೀ ಕಡಿಮೆ ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ.
ವಿಚ್ಛೇದನ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ಅಧ್ಯಯನ ನಡೆಸಿದರೆ, ಬೇರೆ ಬೇರೆ ಕಾರಣಗಳು ಎದುರು ಬರುತ್ತವೆ. ಮಹಿಳಾ ಸಬಲೀಕರಣ ಇದರಲ್ಲಿ ಒಂದು. ಈ ಹಿಂದೆ ಪತಿ ದುಡಿಯುತ್ತಿದ್ದ ಮತ್ತು ಪತ್ನಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಳು. ಆಗ ಪತ್ನಿಯ ಮುಂದೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಪತಿ ಎಷ್ಟೇ ದೌರ್ಜನ್ಯ, ಹಿಂಸೆ ಎಸಗಿದರೂ ಮತ್ತು ಎಷ್ಟೇ ದುರಭ್ಯಾಸ ಹೊಂದಿದ್ದರೂ ಆತನೊಂದಿಗೇ ಜೀವನ ಮುಂದುವರಿಸಬೇಕಾದ ಅನಿವಾರ್ಯತೆ ಆಕೆಗಿತ್ತು. ಪತಿಯನ್ನು ಬಿಟ್ಟು ಹೊರಟು ಹೋದರೆ ಅತ್ತ ತವರು ಮನೆಯೂ ಸ್ವೀಕರಿಸಲ್ಲ ಮತ್ತು ಇತ್ತ ಸ್ವತಂತ್ರವಾಗಿ ಬದುಕುವುದಕ್ಕೆ ಬೇಕಾದ ಓದಾಗಲಿ ಉದ್ಯೋಗವಾಗಲಿ ಇಲ್ಲ ಎಂಬ ಸ್ಥಿತಿಯಿತ್ತು. ಆದರೆ ಈಗ ಹಾಗಲ್ಲ. ಪುರುಷರಿಗೆ ಸರಿಸಮಾನವಾಗಿ ಮಹಿಳೆಯೂ ಓದುತ್ತಿದ್ದಾಳೆ. ಉದ್ಯೋಗವನ್ನು ಪಡೆದು ಸ್ವಾವಲಂಬಿಯೂ ಆಗುತ್ತಿದ್ದಾಳೆ. ಆದ್ದರಿಂದ ಸುಖವೋ ದುಃಖವೋ ಪತಿಯೊಂದಿಗೇ ಇರಬೇಕು ಎಂಬ ಸಾಂಪ್ರದಾಯಿಕ ಅಸಹಾಯಕತೆಯನ್ನು ಮೀರಿ ಆಲೋಚಿಸತೊಡಗಿದ್ದಾಳೆ. ಅಂದಹಾಗೆ,
ಭಾರತದಲ್ಲಿ ಒಂದೆರಡು ದಶಕಗಳಿಂದೀಚೆಗೆ ವಿಚ್ಛೇದನ ಪ್ರಕರಣಗಳಲ್ಲಿ ಏರಿಕೆಯಾಗತೊಡಗಿದ್ದರೆ, ಪಾಶ್ಚಾತ್ಯ ರಾಷ್ಟ್ರ ಗಳಲ್ಲಂತೂ ಈ ಪ್ರಕ್ರಿಯೆ ಈ ಮೊದಲೇ ಆರಂಭವಾಗಿತ್ತು. ಇವತ್ತು ಸ್ವೀಡನ್‌ನಲ್ಲಿ ಪ್ರತಿ 100 ಮದುವೆಗಳಲ್ಲಿ 54 ಮದುವೆಗಳು ಇವತ್ತು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಅಮೇರಿಕಾವೂ ಇದೇ ಸರಾಸರಿಯನ್ನು ಕಾಯ್ದುಕೊಂಡಿವೆ. ಇದೇವೇಳೆ, ವಿಯೆಟ್ನಾಮ್‌ನಲ್ಲಿ ಪ್ರತಿ 1000 ಮದುವೆಯಲ್ಲಿ 0.2 ಮದುವೆ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದ್ದು, ಜಾಗತಿಕವಾಗಿ ಅತೀ ಕಡಿಮೆ ಎಂದು ದಾಖಲಾಗಿದೆ. ಹಾಗೆಯೇ ಶ್ರೀಲಂಕಾ, ಪೆರು, ದಕ್ಷಿಣ ಆಫ್ರಿಕಾ ಮುಂತಾದ ರಾಷ್ಟ್ರಗಳು ಅತಿ ಕಡಿಮೆ ವಿಚ್ಛೇದನಕ್ಕಾಗಿ ಗುರುತಿಸಿಕೊಂಡಿವೆ. ಅಂದಹಾಗೆ,
ಕೇರಳದ ಹೈಕೋರ್ಟು ಹೇಳಿರುವಂತೆ, ಮದುವೆಯನ್ನು ಬಳಸು-ಬಿಸಾಕು ಎಂಬ ಸ್ಥಿತಿಗೆ ತಂದಿರುವ ಆಧುನಿಕ ಜೀವನ ಪದ್ಧತಿಯು ಸಮಾಜದ ಪಾಲಿಗೆ ಅನುಕೂಲಕರವಾಗುವುದಕ್ಕಿಂತ ಅನಾಹುತಕಾರಿಯಾಗುವ ಸಾಧ್ಯತೆಯೇ ಹೆಚ್ಚು. ಇದರ ಬಹುದೊಡ್ಡ ಅಡ್ಡ ಪರಿಣಾಮವನ್ನು ಮಕ್ಕಳು ಮತ್ತು ವಿಚ್ಛೇದಿತ ಮಹಿಳೆಯು ಅನುಭವಿಸಬೇಕಾಗುತ್ತದೆ. ಅಮೇರಿಕದಲ್ಲಿ ಯುವ ಸಮುದಾಯ ಪ್ರಕ್ಷುಬ್ಧ ಮನಸ್ಥಿತಿ ಹೊಂದಿರುವುದಕ್ಕೆ ಇದುವೇ ಕಾರಣವೋ ಏನೋ?
ಹೆಣ್ಣನ್ನು ಭೋಗದ ವಸ್ತು ಎಂಬ ರೀತಿಯಲ್ಲಿ ನೋಡುವ ಮನಸ್ಥಿತಿಯನ್ನು ಆಧುನಿಕ ಜಗತ್ತು ಲಂಗುಲಗಾಮಿಲ್ಲದೇ ಪ್ರಚಾರ ಮಾಡುತ್ತಿವೆ. ಸುಖ ಬೇಕು, ಜವಾಬ್ದಾರಿ ಬೇಡ ಎಂಬಂಥ ಜೀವನ ಕ್ರಮ ಹೆಚ್ಚೆಚ್ಚು ಪ್ರಚಾರ ಪಡೆಯುತ್ತಲೂ ಇವೆ. ಇಂಥ ಭೋಗ ಮನಸ್ಥಿತಿ ಅಂತಿಮವಾಗಿ ಮದುವೆಯೆಂಬ ಪರಿಕಲ್ಪನೆಯನ್ನೇ ಅಪ್ರಿಯಗೊಳಿಸಿ ಬಿಡುವುದಕ್ಕೂ ಕಾರಣವಾಗಬಹುದು. ದೇವನು ಮದುವೆಯನ್ನು ಇಷ್ಟಪಡುತ್ತಾನೆ ಮತ್ತು ವಿಚ್ಛೇದನವನ್ನು ದ್ವೇಷಿಸುತ್ತಾನೆ ಎಂದು ಇಸ್ಲಾಮ್ ಹೇಳುತ್ತದೆ. ಇದರಾಚೆಗೆ ಏನೂ ಹೇಳಬೇಕಿಲ್ಲ.
No comments:
Post a Comment