9- 5-2023
'ದಿ ಕೇರಳ ಸ್ಟೋರಿ' ಸಿನಿಮಾ ಮೇ 5 ಶುಕ್ರವಾರದಂದು ಬಿಡುಗಡೆಯಾಗಿದ್ದು, ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಹೊಗಳಿದ್ದಾರೆ. ಭಯೋತ್ಪಾದನಾ ವಿರೋಧಿ ಹೋರಾಟದ ಭಾಗವಾಗಿ ಅವರು ಅದನ್ನು ಪರಿಭಾವಿಸಿದ್ದಾರೆ. ಇದಾಗಿ ದಿನಗಳ ಬಳಿಕ ಮಧ್ಯಪ್ರದೇಶದ ಬಿಜೆಪಿ ಸರಕಾರವು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಅಂದಹಾಗೆ, ಈ ಸಿನಿಮಾ ಬಿಡುಗಡೆಯಾದ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಮೆಚ್ಚಿಕೊಂಡು ಮಾತನಾಡುವುದು ಮತ್ತು ಮಧ್ಯಪ್ರದೇಶ ಸರ್ಕಾರ ಅದಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸುವುದರಲ್ಲೇ ಆ ಸಿನಿಮಾದ ತಿರುಳು ಸ್ಪಷ್ಟವಾಗುತ್ತದೆ.
ಈ ದೇಶದಲ್ಲಿ ಪ್ರತಿವಾರ ಸುಮಾರು 100ಕ್ಕಿಂತಲೂ ಅಧಿಕ ಸಿನಿಮಾ ಬಿಡುಗಡೆಯಾಗುತ್ತದೆ. ಆದರೆ ಪ್ರಧಾನಿ ಅವುಗಳ ಬಗ್ಗೆ ಮಾತನಾಡಿದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಬಿಜೆಪಿ ಸರಕಾರ ತೆರಿಗೆ ವಿನಾಯಿತಿ ಘೋಷಿಸಿದ್ದೂ ಇಲ್ಲ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬಿಜೆಪಿ ಸರಕಾರಗಳು ತೆರಿಗೆ ವಿನಾಯಿತಿ ಘೋಷಿಸಿದ್ದುವು. ಮಾತ್ರವಲ್ಲ, ಸಾರ್ವಜನಿಕ ವೀಕ್ಷಣೆಗಾಗಿ ಉಚಿತ ವ್ಯವಸ್ಥೆಯನ್ನೂ ಮಾಡಿದ್ದುವು. ಇದೀಗ 'ದಿ ಕೇರಳ ಸ್ಟೋರಿ' ಸಿನಿಮಾದ ಬಗ್ಗೆ ಪ್ರಧಾನಿ ಮತ್ತು ಅವರ ಪಕ್ಷಕ್ಕೆ ವಿಶೇಷ ಮಮಕಾರ ಬಂದಿದೆ. ವಿಶೇಷ ಏ ನೆಂದರೆ, 'ದಿ ಕಾಶ್ಮೀರ್ ಫೈಲ್ಸ್' ಆಗಲಿ, 'ದಿ ಕೇರಳ ಸ್ಟೋರಿ' ಆಗಲಿ ಎರಡರ ಕೇಂದ್ರ ಬಿಂದುವೂ ಮುಸ್ಲಿಮರೇ. ಇವೆರಡೂ ಪ್ರೊಪಗಂಡಾ ಸಿನಿಮಾಗಳು. ಇಸ್ಲಾಮ್ ಭೀತಿಯನ್ನು ಜನರಲ್ಲಿ ತುಂಬುವುದು ಮತ್ತು ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸಂದೇಶವನ್ನು ಹರಡುವುದೇ ಇವುಗಳ ಒಳ ಉದ್ದೇಶ.
ದಿ ಕೇರಳ ಸ್ಟೋರಿಯನ್ನೇ ತೆಗೆದುಕೊಳ್ಳಿ. ಕೇರಳದಿಂದ 32 ಸಾವಿರ ಮಂದಿ ಇಸ್ಲಾಮ್‌ಗೆ ಮತಾಂತರವಾಗಿ ಐಸಿಸ್ ಸೇರಿಕೊಂಡಿದ್ದಾರೆ ಎಂದು ಈ ಸಿನಿಮಾದ ಟೀಸರಲ್ಲಿ ಹೇಳಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದಾಗ ಮತ್ತು ಪುರಾವೆಯನ್ನು ಕೇಳಿದಾಗ ನಿರ್ದೇಶಕ ಸುದಿಪ್ತೋ ಸೇನ್ ಆರಂಭದಲ್ಲಿ ಸಮರ್ಥಿಸಿಕೊಂಡರು. ತನ್ನಲ್ಲಿ ದಾಖಲೆ ಇದೆ ಅಂದರು. ಕೇರಳದ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿಯವರ ಹೇಳಿಕೆಯೇ ಆಧಾರ ಎಂದು ಅವರು ಹೇಳಿಕೊಂಡರು. ಆದರೆ ಉಮ್ಮನ್ ಚಾಂಡಿ ಎಂದೂ ಕೂಡ ಹಾಗೆ ಹೇಳಿಯೇ ಇರಲಿಲ್ಲ. 2006ರಿಂದ 2012ರ ನಡುವೆ 2800 ರಿಂದ 3200ರಷ್ಟು ಮಂದಿ ಕೇರಳದಲ್ಲಿ ಇಸ್ಲಾಮ್‌ಗೆ ಮತಾಂತರವಾಗಿದ್ದಾರೆ ಎಂದವರು ಹೇಳಿದ್ದರು. ಆದರೆ ಈ ಮತಾಂತರಕ್ಕೂ ಐಸಿಸ್‌ಗೂ ಸಂಬಂಧ ಕಲ್ಪಿಸಿರಲಿಲ್ಲ. ಮತಾಂತರವಾದವರೆಲ್ಲ ಐಸಿಸ್ ಸೇರಿಕೊಳ್ಳುತ್ತಿದ್ದಾರೆ ಎಂದೂ ಹೇಳಿರಲಿಲ್ಲ.
ಆದರೆ, ಈ ಹೇಳಿಕೆಯನ್ನೇ ತಿರುಚಿದ ಸುದಿಪ್ತೋ ಸೇನ್ ಅವರು, ಕೇರಳದಲ್ಲಿ ಪ್ರತಿವರ್ಷ 2800 ಮಂದಿ ಮತಾಂತರವಾಗುತ್ತಿದ್ದಾರೆ ಮತ್ತು ಇದನ್ನು ಈ 2022ರ ವರೆಗೆ ಗುಣಿಸುತ್ತಾ ಹೋದರೆ 32 ಸಾವಿರವಾಗುತ್ತದೆ ಎಂದು ಹೇಳಿ ನಗೆಪಾಟಲಿಗೀಡಾದರು. ಮಾತ್ರವಲ್ಲ, ಬಳಿಕ ತನ್ನ ಟೀಸರ್‌ನಿಂದ 32 ಸಾವಿರವನ್ನು ಅಳಿಸಿ 3 ಮಂದಿಯ ಕತೆ ಇದು ಎಂದು ಬದಲಿಸಿಕೊಂಡರು. ಆದರೆ ಸಿನಿಮಾದ ಪಾತ್ರವೊಂದು ಕೇರಳದಿಂದ 50 ಸಾವಿರದವರೆಗೆ ಮತಾಂತರವಾಗಿ ಐಸಿಸ್ ಸೇರಿಕೊಂಡಿದ್ದಾರೆ ಎಂದು ಹೇಳುತ್ತದೆ. ಇದೇವೇಳೆ,
2019ರಲ್ಲಿ ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ನೀಡಿದ ಮಾಹಿತಿಯಂತೆ, ಭಾರತದಲ್ಲಿ ಐಸಿಸ್ ಪರ ಒಲವು ಇರುವ ಅಥವಾ ಅದರಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ 155 ಎಂದು ಹೇಳಿದೆ. 2020ರಲ್ಲಿ ಅಮೇರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ಪ್ರಕಾರ, ಭಾರತದಿಂದ ಐಸಿಸ್ ಸೇರಿಕೊಂಡಿರುವವರ ಸಂಖ್ಯೆ 66. ಒಂದುವೇಳೆ, 32 ಸಾವಿರ ಮಂದಿ ಭಾರತೀಯರು ಐಸಿಸ್ ಸೇರಿಕೊಂಡಿದ್ದರೆ ಅದು ಭಾರತ ಸರಕಾರಕ್ಕೆ, ಗೃಹ ಇಲಾಖೆಗೆ ಮತ್ತು ಗುಪ್ತಚರ ಸಂಸ್ಥೆಗೆ ತಿಳಿಯದಿರಲೇ ಬೇಕಿತ್ತು ಅಥವಾ ಭಾರತದ ಸರಕಾರದ ಬಹುದೊಡ್ಡ ಆಡಳಿತಾತ್ಮಕ ವೈಫಲ್ಯವಾಗಿ ಇದನ್ನು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಪ್ರಧಾನಿಯವರು ಈ ಸಿನಿಮಾವನ್ನು ಹೊಗಳುತ್ತಾರೆಂದರೆ, ತನ್ನದೇ ಸರಕಾರದ ವೈಫಲ್ಯವನ್ನು ಸಾರುತ್ತಿದ್ದಾರೆ ಎಂದೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ,
ವಿಶ್ವಸಂಸ್ಥೆಯ ಬಂಧನದಲ್ಲಿರುವ ಭಾರತದ ಐಸಿಸ್ ಮಹಿಳೆ ತನ್ನ ಸ್ಟೋರಿಯನ್ನು ಹೇಳುವ ಮೂಲಕ ಈ ಸಿನಿಮಾ ಆರಂಭಗೊಳ್ಳುತ್ತದೆ. ತಾನು ಇಸ್ಲಾಮ್‌ಗೆ ಮತಾಂತರವಾದದ್ದು ಮತ್ತು ಐಸಿಸ್‌ಗೆ ಸೇರ್ಪಡೆಗೊಂಡ ಹಿನ್ನೆಲೆಯನ್ನು ಈ ಪಾತ್ರ ಹೇಳುತ್ತಾ ಹೋಗುವುದು ಕತೆಯ ಆರಂಭ. ಕೇರಳದಲ್ಲಿ ಇಸ್ಲಾಮೀಕರಣ ಆಗುತ್ತಾ ಇದೆ ಮತ್ತು ಹೀಗಾದರೆ ಅಲ್ಲಿ ಹಿಂದೂಗಳೇ ಉಳಿಯಲ್ಲ ಎಂದು ಸಿನಿಮಾದ ಆರಂಭದಲ್ಲಿಯೇ ಹೇಳುವ ಮೂಲಕ ಈ ಸಿನಿಮಾದ ಉದ್ದೇಶವನ್ನೂ ನಿರ್ದೇಶಕ ಸ್ಪಷ್ಟವಾಗಿ ಹೇಳಿಬಿಡುತ್ತಾರೆ. ಶಾಲಿನಿ ಉಣ್ಣಿಕೃಷ್ಣನ್ ಎಂಬ ಹೆಣ್ಣುಮಗಳು ಉನ್ನತ ಶಿಕ್ಷಣಕ್ಕಾಗಿ ಕಾಸರಗೋಡಿಗೆ ಬರುತ್ತಾರೆ. ಅಲ್ಲಿ ಹಾಸ್ಟೆಲ್‌ನಲ್ಲಿ ತಂಗುತ್ತಾಳೆ. ಆ ಸಂದರ್ಭದಲ್ಲಿ ಗೀತಾಂಜಲಿ ಎಂಬ ನಾಸ್ತಿಕ ವಿದ್ಯಾರ್ಥಿನಿ, ಸೀಮಾ ಎಂಬ ಕ್ರೈಸ್ತ ವಿದ್ಯಾರ್ಥಿನಿ ಮತ್ತು ಆಸಿಫಾ ಎಂಬವರನ್ನು ಭೇಟಿಯಾಗುತ್ತಾರೆ. ಈ ಆಸಿಫಾ ಐಸಿಸ್‌ಗೆ ಜನರನ್ನು ಸೇರಿಸುವ ಕೆಲಸ ಮಾಡುವವಳು. ಹೀಗೆ ಈ ನಾಲ್ಕು ಮಂದಿಯ ಸುತ್ತ ಸಿನಿಮಾ ತಯಾರಾಗಿದೆ. ಈ ಶಾಲಿನಿ ಉಣ್ಣಿಕೃಷ್ಣನ್ ಇಸ್ಲಾಮ್‌ಗೆ ಮತಾಂತರವಾಗಿ ಫಾತಿಮಾ ಆಗುತ್ತಾಳೆ ಮತ್ತು ಅಫ್ಘಾನ್‌ಗೆ ತೆರಳಿ ಅಲ್ಲಿಂದ ಸಿರಿಯಾ ಗಡಿಗೆ ಹೋಗಿ ಅಲ್ಲಿ ಪಟ್ಟ ಪಾಡಿನ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ನಿಜವಾಗಿ,
ಈ ಸಿನಿಮಾದ ಉದ್ದೇಶ ಸಿನಿಮಾ ಅಲ್ಲ, ಪ್ರೊಪಗಾಂಡಾ ಅನ್ನುವುದಕ್ಕೆ 32 ಸಾವಿರದಿಂದ 3ಕ್ಕೆ ಇಳಿದಿರುವುದೇ ಒಂದು ಉದಾಹರಣೆ. ಇನ್ನೊಂದು, ಪ್ರಧಾನಿ ಮತ್ತು ಅವರ ಬೆಂಬಲಿಗರ ನಡವಳಿಕೆ. ತನ್ನದೇ ಸರಕಾರದ ವೈಫಲ್ಯವನ್ನು ಹೇಳುವ ಸಿನಿಮಾವನ್ನು ಪ್ರಧಾನಿ ಮತ್ತು ಅವರ ಬೆಂಬಲಿಗರು ಮೆಚ್ಚಿಕೊಳ್ಳುತ್ತಾರೆಂದರೆ, ಅವರು ಯಾವ ಸಂದೇಶವನ್ನು ಕೊಡಲು ಬಯಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇಂಥದ್ದೇ ಡಾಕ್ಯುಮೆಂಟರಿಯೊಂದು ಇತ್ತೀಚೆಗೆ ಬಿಬಿಸಿ ಬಿಡುಗಡೆಗೊಳಿಸಿತ್ತು. ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿಯವರ ಪಾತ್ರವನ್ನು ಹೇಳುವ ಆ ಡಾಕ್ಯುಮೆಂಟರಿಯನ್ನು ಕೇಂದ್ರ ಸರಕಾರ ನಿಷೇಧಿಸಿತ್ತೇ ಹೊರತು ಮೆಚ್ಚಿಕೊಂಡಿರಲಿಲ್ಲ. ಈ ಹಿಂದೆ ಫರ್ಝಾನಿಯಾ ಎಂಬ ಸಿನಿಮಾ ಬಿಡುಗಡೆಗೊಂಡಾಗಲೂ ಬಿಜೆಪಿ ಸರಕಾರಗಳು ಇವೇ ನಿಷೇಧ ನಿಲುವನ್ನು ಪ್ರಕಟಿಸಿತ್ತು. ಗುಜರಾತ್ ಹತ್ಯಾಕಾಂಡದ ಸುತ್ತ ಹೆಣೆದ ಈ ಸಿನಿಮಾದ ಪ್ರದರ್ಶನಕ್ಕೆ ಗುಜರಾತ್‌ನಲ್ಲಿ ಅವಕಾಶವನ್ನೇ ನೀಡಲಾಗಿರಲಿಲ್ಲ. ಅಲ್ಲದೇ, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯ ಸರಕಾರಗಳೂ ಇದಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿರಲಿಲ್ಲ. ಪ್ರಧಾನಿ ಮೋದಿಯಿಂದ ಹಿಡಿದು ಅವರ ಬೆಂಬಲಿಗರ ಉದ್ದೇಶ ಶುದ್ಧಿಯನ್ನು ಅನುಮಾನಿಸುವುದಕ್ಕೆ ಮತ್ತು ಇಸ್ಲಾಮ್‌ನ ಬಗ್ಗೆ ಅವರ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಈ ದ್ವಂದ್ವಗಳೇ ಧಾರಾಳ ಸಾಕು. ಅಂದಹಾಗೆ,
ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ದಿ ಕೇರಳ ಸ್ಟೋರಿ ತನ್ನನ್ನು ಪರಿಚಯಿಸಿಕೊಳ್ಳುತ್ತದೆ. ನೈಜ ಘಟನೆ ಎಂದ ಮೇಲೆ 32 ಸಾವಿರವು 3ಕ್ಕೆ ಇಳಿಯಬೇಕಿರಲಿಲ್ಲ ಮತ್ತು ಉಮ್ಮನ್ ಚಾಂಡಿ ಹೇಳಿಕೆಯನ್ನು ತಿರುಚಿ ಲೆಕ್ಕ ಕೊಡಬೇಕಿರಲಿಲ್ಲ. ಕೇಂದ್ರ ಗೃಹ ಇಲಾಖೆಯಾಗಲಿ, ಎನ್‌ಐಎ ಆಗಲಿ ಅಥವಾ ಭಯೋತ್ಪಾದನಾ ವಿರೋಧಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಅಮೇರಿಕವೇ ಆಗಲಿ ಹೇಳದೇ ಇರುವ ಸಂಖ್ಯೆಯನ್ನು ದಿ ಕೇರಳ ಸ್ಟೋರಿ ಹೇಳಿಕೊಳ್ಳಬೇಕಿರಲಿಲ್ಲ. ಆದ್ದರಿಂದ ಇಸ್ಲಾಮ್ ಭೀತಿಯನ್ನು ಹರಡುವುದು ಮತ್ತು ಹಿಂದೂ ಧ್ರುವೀಕರಣ ಮಾಡುವುದೇ ಈ ಸಿನಿಮಾದ ಮುಖ್ಯ ಗುರಿ. ಒಂದುವೇಳೆ, ಈ ಸಿನಿಮಾ ಬಿಂಬಿಸಿದಂತೆ ಕೇರಳದಲ್ಲಿ ಈ ರೀತಿಯಾಗಿ ಮತಾಂತರ ಪ್ರಕರಣಗಳು ನಡೆಯುತ್ತಿದ್ದರೆ, ಇದಕ್ಕಿಂತ ಎಷ್ಟೋ ಶತಮಾನಗಳ ಮೊದಲೇ ಕೇರಳ ಮುಸ್ಲಿಮ್ ರಾಜ್ಯ ಆಗಿರಬೇಕಿತ್ತು. ಇಸ್ಲಾಮ್ ಮೊದಲು ಆಗಮಿಸಿದ್ದು ಕೇರಳಕ್ಕೆ. ಕೇರಳ ಇಸ್ಲಾಮ್‌ಗೆ ಸುಮಾರು 1400 ವರ್ಷಕ್ಕಿಂತಲೂ ಮೊದಲಿನ ಇತಿಹಾಸವಿದೆ. ಹೀಗಿದ್ದೂ, 2011ರ ಜನಗಣತಿ ಪ್ರಕಾರ ಕೇರಳದಲ್ಲಿ ಮುಸ್ಲಿಮರ ಜನಸಂಖ್ಯೆ 27%. ಅದೇವೇಳೆ, ಹಿಂದೂಗಳು ಶೇ. 54ರಷ್ಟಿದ್ದರೆ, 18% ಕ್ರೈಸ್ತರಿದ್ದಾರೆ. 'ದಿ ಕೇರಳ ಸ್ಟೋರಿ' ನಿರ್ದೇಶಕರ ಲೆಕ್ಕಾಚಾರದಂತೆ ಪ್ರತಿವರ್ಷ 2800ರಿಂದ 3200 ಮಂದಿ ಇಸ್ಲಾಮ್‌ಗೆ ಮತಾಂತರವಾಗಿರುತ್ತಿದ್ದರೆ ಈಗ ಕೇರಳ ಹೇಗಿರಬೇಕಿತ್ತು! ಒಬ್ಬನೇ ಒಬ್ಬ ಮುಸ್ಲಿಮೇತರ ವ್ಯಕ್ತಿ ಅಲ್ಲಿ ಇರಲು ಸಾಧ್ಯವಿತ್ತೇ?
ಹಾಗಂತ, ಮತಾಂತರಕ್ಕೆ ಸಂಬಂಧಿಸಿ ಈ ದೇಶದಲ್ಲಿ ಕಾನೂನಿದೆ. ಯಾವುದು ಮತಾಂತರ ಮತ್ತು ಯಾವುದು ಅಲ್ಲ ಎಂಬ ಬಗ್ಗೆಯೂ ಇಲ್ಲಿಯ ಕಾನೂನಿನಲ್ಲಿ ಸ್ಪಷ್ಟತೆಯಿದೆ. ನಿಜವಾಗಿ, ತನಗಿಷ್ಟ ಬಂದ ವಿಚಾರಧಾರೆ ಸ್ವೀಕರಿಸುವುದಕ್ಕೆ ಈ ದೇಶದ ಪ್ರತಿಯೋರ್ವರಿಗೂ ಸಾಂವಿಧಾನಿಕ ಹಕ್ಕಿದೆ. ಉಳಿದದ್ದೆಲ್ಲವೂ ಪ್ರೊಪಗಾಂಡಾ ಅಷ್ಟೇ.
No comments:
Post a Comment