11-4-2023
ಮೀಡಿಯಾ ವನ್ ಚಾನೆಲ್ ಮೇಲಿನ ನಿಷೇಧವನ್ನು ತೆರವುಗೊಳಿಸುತ್ತಾ ಸುಪ್ರೀಮ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಖುರೇಶಿ ಅವರಿದ್ದ ಪೀಠ ಉಲ್ಲೇಖಿಸಿರುವ ಅಂಶಗಳು ಕೇಂದ್ರ ಸರಕಾರಕ್ಕೆ ನಡುಬೀದಿಯಲ್ಲಿ ಬಾರಿಸಿದ ತಪರಾಕಿಯಂತಿದೆ. ತಾನೇಕೆ ಮೀಡಿಯಾ ವನ್ ಚಾನೆಲನ್ನು 2022 ಜನವರಿ 31ರಂದು ನಿಷೇಧಿಸಿರುವೆ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್‌ಗೆ ಕಾರಣಗಳನ್ನು ತಿಳಿಸಿತ್ತು. ಸುಪ್ರೀಮ್ ಕೋರ್ಟ್ ಈ ಮುಚ್ಚಿದ ಲಕೋಟೆ ನೀತಿಯನ್ನೇ ಪ್ರಶ್ನಿಸಿದೆ. ಈ ನೀತಿ ಸಹಜ ನ್ಯಾಯದ ಉಲ್ಲಂಘನೆ ಮತ್ತು ಮೀಡಿಯಾ ವನ್ ಸಂಸ್ಥೆಯನ್ನು ಕತ್ತಲಿಗೆ ದೂಡುವ ಶ್ರಮ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.
ತನ್ನ ಮೇಲಿನ ನಿಷೇಧವನ್ನು ಪ್ರಶ್ನಿಸಿ ಮೀಡಿಯಾ ವನ್ ಚಾನೆಲ್ ಮೊದಲು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಕಾರಣಗಳನ್ನು ನೀಡಿ ಮೀಡಿಯಾ ವನ್ ಚಾನೆಲನ್ನು ಕತ್ತಲಲ್ಲಿಡುವ ಪ್ರಯತ್ನ ಮಾಡಿತ್ತು. ಕೇರಳ ಹೈಕೋರ್ಟ್ ಕೇಂದ್ರದ ನಿಷೇಧವನ್ನು ಎತ್ತಿ ಹಿಡಿದ ಕಾರಣದಿಂದ ಮೀಡಿಯಾ ವನ್ ಸುಪ್ರೀಮ್ ಕೋರ್ಟಿನ ಬಾಗಿಲು ತಟ್ಟಿತು. ಕೇಂದ್ರ ಸರ್ಕಾರ ಅಲ್ಲೂ ಕೂಡ ಮುಚ್ಚಿದ ಲಕೋಟೆ ನೀತಿಯನ್ನು ಮುಂದುವರಿಸಿತು ಮತ್ತು ಇದೊಂದು ರಾಷ್ಟ್ರೀಯ ಭದ್ರತೆಯ ವಿಷಯ ಎಂಬಂತೆ ಪೀಠವನ್ನು ಪ್ರಭಾವಿಸಲು ಶ್ರಮಿಸಿತು. ಎನ್‌ಆರ್‌ಸಿ, ಸಿಎಎ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಸಂಬಂಧಿಸಿದ ವಿಮರ್ಶೆಗಳನ್ನೇ ತನ್ನ ನಿಷೇಧಕ್ಕೆ ಕೇಂದ್ರ ಕಾರಣವಾಗಿ ನೀಡಿತ್ತು. ಈ ಬಗ್ಗೆ ಚಾನೆಲ್ ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಪಟ್ಟಿ ಮಾಡಿರುವುದನ್ನೇ ಕೇಂದ್ರ ತನ್ನ ಮುಚ್ಚಿದ ಲಕೋಟೆಯಲ್ಲಿ ಆಧಾರವಾಗಿ ನೀಡಿತ್ತು. ಆದರೆ,
ಸುಪ್ರೀಮ್ ಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆಯಲ್ಲದೇ, ಈ ಕಾರ್ಯಕ್ರಮಗಳಲ್ಲಿ ಭದ್ರತೆಗೆ ಬೆದರಿಕೆಯೋ ಭಯೋತ್ಪಾದನೆಗೆ ಪೂರಕವೋ ಆಗಿರುವ ಏನೇನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತು ಮತ್ತು ಸರ್ಕಾರದ ನೀತಿಯ ವಿರುದ್ಧ ಮಾಧ್ಯಮಗಳು ವಿಮರ್ಶಾತ್ಮಕ ನಿಲುವನ್ನು ಹೊಂದುವುದು ವ್ಯವಸ್ಥೆಗೆ ಸಾರುವ ಬಂಡಾಯವಾಗುವುದಿಲ್ಲ ಎಂದೂ ಕಟುವಾಗಿಯೇ ನುಡಿಯಿತು. ಅಲ್ಲದೇ, ಹೀಗೇನಾದರೂ ನಾವು ವಾದಿಸಿದರೆ ಆ ಬಳಿಕ ಮಾಧ್ಯಮಗಳು ಸರ್ಕಾರದ ಪರ ಮಾತ್ರ ಕೆಲಸ ಮಾಡಬೇಕು ಎಂದು ಹೇಳಿದಂತಾಗುತ್ತದೆ ಎಂದೂ ಪಾಠ ಮಾಡಿತು. ಅಷ್ಟಕ್ಕೂ,
ಮೀಡಿಯಾ ವನ್ ಟಿ.ವಿ. ಚಾನೆಲ್ ಮೇಲೆ ಕೇಂದ್ರ ಸರಕಾರದ ಕಾಕದೃಷ್ಟಿ ಬೀಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾದುದು. ಇದು ಮಲಯಾಳಂ ಭಾಷೆಯ ಚಾನೆಲ್. ಈ ದೇಶದ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳು ರಾಜಧಾನಿ ದೆಹಲಿಯಿಂದ ಪ್ರಸಾರವಾಗುತ್ತಿರುವಾಗ ಮತ್ತು ಅಲ್ಲೇ ಮುಖ್ಯ ಕಚೇರಿಯನ್ನು ಹೊಂದಿರುವಾಗ, ಮೀಡಿಯಾ ವನ್ ಕೇಂದ್ರ ಕಚೇರಿಯಿರುವುದು ಕೇರಳದಲ್ಲಿ. ಕೇರಳ ಬಹಳ ಚಿಕ್ಕ ರಾಜ್ಯ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಿರುವ ವೀಕ್ಷಕರಿಗೆ ಹೋಲಿಸಿದರೆ ಮಲಯಾಳಂ ಭಾಷೆಯ ವೀಕ್ಷಕರು ಅವಕ್ಕೆ ಸ್ಪರ್ಧೆ ಕೊಡುವಷ್ಟೇನೂ ಇಲ್ಲ. ಹೀಗೆ ತೀರಾ ಸ್ಥಳೀಯವಾಗಿರುವ ಚಾನೆಲ್ ಒಂದರ ಮೇಲೆ ಕೇಂದ್ರ ಸರಕಾರ ಇಷ್ಟು ಹಗೆತನದ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೇ ಅದರ ಕಂಟೆಂಟ್. ಮುಖ್ಯವಾಹಿನಿಯ ಚಾನೆಲ್‌ಗಳು ಕೇಂದ್ರ ಸರಕಾರದ ತುತ್ತೂರಿಯಂತೆ ವರ್ತಿಸುತ್ತಿರುವಾಗ ಅದಕ್ಕೆ ತೀರಾ ಭಿನ್ನವಾಗಿ ಕೆಂಡದುಂಡೆಯಂಥ ಪ್ರಶ್ನೆಗಳೊಂದಿಗೆ ಕೇಂದ್ರ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದುದು ಇದೇ ಮೀಡಿಯಾ ವನ್. ಅದು ಪ್ರಭುತ್ವದೊಂದಿಗೆ ಕೇಳದ ಪ್ರಶ್ನೆಗಳಿಲ್ಲ. ಪ್ರಸಾರ ಮಾಡದ ಕಾರ್ಯಕ್ರಮಗಳಿಲ್ಲ. ಅದರ ಡಿಬೇಟ್ ಅತ್ಯಂತ ಸಹಜವಾಗಿರುತ್ತಿತ್ತು. ಬಿಜೆಪಿ ಮತ್ತು ಸಂಘಪರಿವಾರದ ಅತಿಥಿಗಳು ವಿಷಯದ ಮೇಲೆ ಚರ್ಚಿಸುವುದಕ್ಕಿಂತ ಆ್ಯಂಕರ್‌ಗಳ ಮೇಲೆಯೇ ಉರಿದು ಬೀಳುವುದು ಆಗಾಗ ನಡೆಯುತ್ತಿತ್ತು. ತೀಕ್ಷ್ಣ ದಾಖಲೆ ಸಹಿತ ವಾದಗಳು ಮತ್ತು ಮುಖ ನೋಡದೇ ಮಾಡುವ ವಿಶ್ಲೇಷಣೆಗಳು ಪ್ರಭುತ್ವಕ್ಕೆ ಸವಾಲುಗಳಾಗಿ ಪರಿಣಮಿಸಿತ್ತು. ಈ ಬಗ್ಗೆ ಕೇರಳ ಬಿಜೆಪಿ ಕೇಂದ್ರ ಸರಕಾರಕ್ಕೆ ಮಾಹಿತಿಗಳನ್ನು ಒದಗಿಸುತ್ತಿದ್ದಿರಬಹುದು. ಆ ಕಾರಣದಿಂದಲೇ,
ದೆಹಲಿ ಹಿಂಸಾಚಾರದ ಸಮಯದಲ್ಲಿ ಮಾಡಿದ ವರದಿಯನ್ನು ಎತ್ತಿಕೊಂಡು ಇದೇ ಚಾನೆಲನ್ನು 2020 ಮಾರ್ಚ್ ನಲ್ಲಿ 48 ಗಂಟೆಗಳ ಕಾಲ ಕೇಂದ್ರ ಸರಕಾರ ನಿಷೇಧಿಸಿತ್ತು. ಇದಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ನಿಷೇಧಕ್ಕೆ ಕೇಂದ್ರ ಸರಕಾರ ಯಾವ ಕಾರಣವನ್ನು ಕೊಟ್ಟಿತ್ತೋ ಅದು ಎಷ್ಟು ಬಾಲಿಶವಾಗಿತ್ತೆಂದರೆ, ಆ ವರದಿಯಲ್ಲಿ ದೇಶವಿರೋಧಿಯಂಥ ಮತ್ತು ಭದ್ರತೆಗೆ ಸವಾಲಾಗುವಂಥ ಏನೊಂದು ಇರಲಿಲ್ಲ. ಸಿಎಎ ಬೆಂಬಲಿಗರ ವಿರುದ್ಧ ನಡೆದಿರುವ ದೌರ್ಜನ್ಯವನ್ನು ಚಾನೆಲ್ ಪದೇಪದೇ ತೋರಿಸಿದೆ, ಆರೆಸ್ಸೆಸನ್ನು ಪ್ರಶ್ನಿಸಿದೆ ಮತ್ತು ದೆಹಲಿ ಪೊಲೀಸರ ನಿಷ್ಕ್ರೀಯತೆಯನ್ನು ಪ್ರಶ್ನೆ ಮಾಡಿದೆ ಎಂದು ನಿಷೇಧಕ್ಕೆ ಕೇಂದ್ರ ಕಾರಣವನ್ನಾಗಿ ಕೊಟ್ಟಿತ್ತು. ಅಲ್ಲದೇ, ಮುಸ್ಲಿಮರೇ ಹೆಚ್ಚಿರುವ ಚಾಂದ್‌ಬಾಗ್‌ಗೆ ತನ್ನ ಕ್ಯಾಮರಾವನ್ನು ಮೀಡಿಯಾ ವನ್ ಕೇಂದ್ರೀಕರಿಸಿತ್ತು ಮತ್ತು ಆ ಪ್ರದೇಶದಲ್ಲಿ ಆಗಿರುವ ಹಿಂಸೆ, ಅನ್ಯಾಯ ಮತ್ತು ನಾಶ-ನಷ್ಟಗಳನ್ನು ಆದ್ಯತೆಯಾಗಿ ಪ್ರಸಾರ ಮಾಡಿತ್ತು ಎಂಬು ದಾಗಿ ಈ 48 ಗಂಟೆಗಳ ಪ್ರಸಾರ ನಿಷೇಧಕ್ಕೆ ಕಾರಣವನ್ನಾಗಿ ನೀಡಿತ್ತು. ಆದರೆ,
ಈ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕೂಡಲೇ ಅವಧಿಗಿಂತ ಮೊದಲೇ ಕೇಂದ್ರ ಸರಕಾರ ನಿಷೇಧವನ್ನು ವಾಪಾಸು ಪಡೆದಿತ್ತು. ಆ ಬಳಿಕ 2022 ಜನವರಿ 31ರಂದು ಕೇಂದ್ರ ಸರ್ಕಾರ ಚಾನೆಲ್‌ನ ಪರವಾನಿಗೆಯನ್ನು ನವೀಕರಣ ಮಾಡಲು ಒಪ್ಪಲಿಲ್ಲ. ದೇಶದ ಭದ್ರತೆಗೆ ಅಪಾಯವಿದೆ ಎಂಬ ಕಾರಣವನ್ನು ಕೊಟ್ಟು ನವೀಕರಣಕ್ಕೆ ತಡೆ ಹೇರಿತ್ತು. ಆ ಮೂಲಕ ಚಾನೆಲ್‌ಗೆ ನಿಷೇಧ ಹೇರಲಾಯಿತು. ಅಂದಹಾಗೆ,
ಇಲ್ಲಿ ಎರಡು ಸಂಗತಿಗಳಿವೆ. ನಿರ್ಭಿಡೆಯ ವರದಿಗಾರಿಕೆ ಮತ್ತು ರಾಜಿರಹಿತ ಪತ್ರಿಕೋದ್ಯಮಕ್ಕೆ ಪ್ರಭುತ್ವ ಎಷ್ಟು ಭಯಪಡುತ್ತದೆ ಎಂಬುದು ಇದರಲ್ಲಿ ಒಂದಾದರೆ, ಸರ್ವಾಧಿಕಾರಿ ಮನಸ್ಥಿತಿಯ ಪ್ರಭುತ್ವ ಅಂಥ ಮಾಧ್ಯಮದ ಕತ್ತು ಹಿಸುಕಲು ಏನೆಲ್ಲ ತಂತ್ರಗಳನ್ನು ಹೆಣೆಯುತ್ತದೆ ಎಂಬುದು ಇನ್ನೊಂದು. ರಾಷ್ಟ್ರೀಯ ಭದ್ರತೆ ಎಂಬುದು ಬೆದರು ಬೊಂಬೆ ಅಷ್ಟೇ. ನಿಜವಾದ ಉದ್ದೇಶ ತನ್ನ ವಿರುದ್ಧದ ಟೀಕೆಯನ್ನು ತಡೆಯುವುದು. 48 ಗಂಟೆಗಳ ನಿಷೇಧದೊಂದಿಗೆ ಕೇಂದ್ರ ಸರಕಾರ ಮೀಡಿಯಾ ವನ್‌ಗೆ ಪ್ರಥಮ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಆ ಬಳಿಕವೂ ತನ್ನ ಪತ್ರಿಕೋದ್ಯಮದಲ್ಲಿ ರಾಜಿ ಮಾಡಲು ಮೀಡಿಯಾ ವನ್ ಒಪ್ಪದೇ ಹೋದಾಗ, ಪೂರ್ಣ ಪ್ರಮಾಣದ ನಿಷೇಧಕ್ಕೂ ಕೇಂದ್ರ ಸರಕಾರ ಧೈರ್ಯ ತೋರಿತು. ರಾಷ್ಟ್ರೀಯ ಭದ್ರತೆ ಎಂಬ ಅಸ್ತ್ರದ ಮೂಲಕ ತನ್ನ ಕ್ರಮವನ್ನು ಸಮರ್ಥಿಸುವ ಹುಂಬ ಧೈರ್ಯವನ್ನೂ ಮಾಡಿತು. ಮೊದಲ ಹಂತದಲ್ಲಿ ಈ ತಂತ್ರ ಯಶಸ್ವಿಯೂ ಆಯಿತು. ಕೇರಳ ಹೈಕೋರ್ಟ್ ಈ ನಿಷೇಧವನ್ನು ಎತ್ತಿ ಹಿಡಿಯಿತು. ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರಕಾರ ಸಲ್ಲಿಸಿದ ಕಾರಣಗಳನ್ನು ಅದು ಒಪ್ಪಿಕೊಂಡಿತು. ನಿಜವಾಗಿ, ಪ್ರಭುತ್ವ ಹೇಗೆ ನ್ಯಾಯಾಲಯಗಳನ್ನೇ ಯಾಮಾರಿಸಿಬಿಡುತ್ತವೆ ಎಂಬುದಕ್ಕೆ ಕೇರಳ ಹೈಕೋರ್ಟಿಈ ತೀರ್ಪೇ ಒಂದು ಉದಾಹರಣೆ. ಗಟ್ಟಿಯಾದ ಯಾವ ಆಧಾರಗಳನ್ನು ಕೊಡಲು ಕೇಂದ್ರ ವಿಫಲವಾಗಿದ್ದರೂ ಕೇರಳ ಹೈಕೋರ್ಟ್ ಅವನ್ನೇ ನಿಷೇಧಕ್ಕೆ ತಕ್ಕುದಾದ ಆಧಾರಗಳು ಎಂದು ಒಪ್ಪಿಕೊಂಡು ನಿಷೇಧವನ್ನು ಎತ್ತಿ ಹಿಡಿದಿರುವುದು ಅಪಾಯದ ಸೂಚನೆಯೂ ಹೌದು. ಇದೇವೇಳೆ,
ಚಂದ್ರಚೂಡ್ ಮತ್ತು ಹಿಮಾ ಖುರೇಶಿ ಅವರಿದ್ದ ಪೀಠ ಈ ಪ್ರಕರಣದಲ್ಲಿ ತೀರ್ಪು ನೀಡುತ್ತಾ ಹೇಳಿರುವ ಸಂಗತಿಗಳೂ ಗಮನಾರ್ಹ. ಅದು ಪ್ರಭುತ್ವಕ್ಕೆ ನೀಡಿದ ಚಾಟಿಯೇಟಿನಂತಿತ್ತು. ರಾಷ್ಟ್ರೀಯ ಭದ್ರತೆಯ ಮರೆಯಲ್ಲಿ ಪತ್ರಿಕಾ ಸ್ವಾತಂತ್ರ‍್ಯವನ್ನು ದಮನಿಸುವ ಯತ್ನಕ್ಕೆ ಅದು ಅಸಂತೋಷವನ್ನು ವ್ಯಕ್ತಪಡಿಸಿತು. ಇದುವೇ ಭರವಸೆ. ಸುಪ್ರೀಮ್ ಕೋರ್ಟ್‌ನ ತೀರ್ಪುಗಳ ಬಗ್ಗೆ ಸಾರ್ವಜನಿಕ ವಿಶ್ವಾಸ ದುರ್ಬಲವಾಗುತ್ತಿರುವ ಹೊತ್ತಿನಲ್ಲೇ ಪ್ರಕಟವಾಗಿರುವ ಈ ತೀರ್ಪು ಪತ್ರಿಕಾ ಸ್ವಾತಂತ್ರ‍್ಯ ಮತ್ತು ನ್ಯಾಯಾ ಲಯಗಳ ಮೇಲಿನ ನಂಬಿಕೆಯ ದೃಷ್ಟಿಯಿಂದ ಬಹಳ ಮಹತ್ವದ್ದು. ಸುಪ್ರೀಮ್‌ಗೆ ಧನ್ಯವಾದಗಳು.
No comments:
Post a Comment