30-6-2022
2013 ಸೆಪ್ಟೆಂಬರ್ 15ರಂದು ಹರ್ಯಾಣದ ರೆವಾರಿಯಲ್ಲಿ ನಿವೃತ್ತ ಯೋಧರು ರ‍್ಯಾಲಿಯನ್ನು ಸಂಘಟಿಸಿದ್ದರು. ವನ್ ರ‍್ಯಾಂಕ್ ವನ್ ಪೆನ್ಶನ್ (ಸಮಾನ ಶ್ರೇಣಿ ಸಮಾನ ಪಿಂಚಣಿ) ಯೋಜನೆಯನ್ನು ಜಾರಿಗೆ ತರಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅಂದರೆ, ಸೇನೆಯಿಂದ ಈ ಹಿಂದೆ ನಿವೃತ್ತಿಯಾದವರಿಗೂ ಆ ಬಳಿಕ ನಿವೃತ್ತಿಯಾದವರಿಗೂ ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಬೇಡಿಕೆ. ಉದಾಹರಣೆಗೆ, ಯೋಧನಾಗಿ 1990ರಲ್ಲಿ ನಿವೃತ್ತಿಯಾದ ವ್ಯಕ್ತಿಗೂ 2020ರಲ್ಲಿ ಯೋಧನಾಗಿ ನಿವೃತ್ತಿಯಾದ ವ್ಯಕ್ತಿಗೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. ಯಾಕೆಂದರೆ, 1990ರಲ್ಲಿ ಓರ್ವ ಯೋಧನಿಗೆ ವೇತನ ಎಷ್ಟಿರುತ್ತದೋ 2020ರ ಯೋಧನಿಗೆ ವೇತನ ಅಷ್ಟೇ ಇರುವುದಿಲ್ಲ. ಪಿಂಚಣಿಗೆ ವೇತನ ಮಾನದಂಡ ಆಗಿರುವುದರಿಂದ 1990ರಲ್ಲಿ ನಿವೃತ್ತಿಯಾದ ಯೋಧ ಮತ್ತು 2020ರಲ್ಲಿ ನಿವೃತ್ತಿಯಾದ ಯೋಧ ಒಂದೇ ಶ್ರೇಣಿಯವರಾದರೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. 1990ರ ಯೋಧ ಕಡಿಮೆ ಪಿಂಚಣಿ ಪಡೆಯುವಾಗ 2020ರ ನಿವೃತ್ತ ಯೋಧ ಅಧಿಕ ಪಿಂಚಣಿ ಪಡೆಯುತ್ತಾನೆ. ಇದು ಯೋಧರ ನಡುವೆ ತಾರತಮ್ಯವಾಗಿದ್ದು, ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ರ‍್ಯಾಲಿನಿರತ ಯೋಧರ ಆಗ್ರಹವಾಗಿತ್ತು.
ಆಗ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು ಮತ್ತು 2014ರ ಲೋಕಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿತ್ತು. ನರೇಂದ್ರ ಮೋದಿಯವರು ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿತವಾಗಿದ್ದರು. ಅವರು ಈ ಯೋಧರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತ ನಾಡಿದರಲ್ಲದೇ, ಒಂದು ಶ್ರೇಣಿ, ಒಂದು ಪಿಂಚಣಿ ಎಂಬ ಬೇಡಿಕೆಗೆ ಬೆಂಬಲ ಸಾರಿದ್ದರು. ಇದಾಗಿ ಈಗ 9 ವರ್ಷಗಳೇ ಕಳೆದಿವೆ. ಈಗ ಅದೇ ನರೇಂದ್ರ ಮೋದಿಯವರು ಅಗ್ನಿಪಥ್ ಎಂಬ ಯೋಜನೆಯ ಮೂಲಕ ನೋ ರ‍್ಯಾಂಕ್ ನೋ ಪೆನ್ಶನ್ ಎಂದು ಘೋಷಿಸಿದ್ದಾರೆ. ಅಂದು ನಿವೃತ್ತ ಯೋಧರು ಬೀದಿಗಿಳಿದಿದ್ದರೆ ಇಂದು ಸೇನಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ರಕ್ಷಣಾ ತಜ್ಞರೇ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನೆಲ್ಲ ಬಿಜೆಪಿ ವಿರೋಧಿಯೆಂದೋ ವಿರೋಧ ಪಕ್ಷಗಳ ಪಿತೂರಿಯೆಂದೋ ಸಾರಾಸಗಟಾಗಿ ತಳ್ಳಿ ಹಾಕುವುದು ದೇಶದ ಹಿತದೃಷ್ಟಿಯಿಂದ ಅ ಪಾಯಕಾರಿ. ಒಂದುಕಡೆ, ಈ ದೇಶದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನವಿದೆ. ನೆರೆಕರೆಯ ದೇಶಗಳ ಜೊತೆಗೂ ಭಾರತದ ಸಂಬಂಧ ಉತ್ತಮವಾಗಿಲ್ಲ. ಚೀನಾ ಯಾವ ಸಂದರ್ಭದಲ್ಲೂ ಈ ರಾಷ್ಟ್ರಗಳನ್ನು ಬಳಸಿಕೊಂಡು ದೇಶದ ಮೇಲೆ ಆಕ್ರಮಣ ನಡೆಸುವುದಕ್ಕೆ ಅವಕಾಶವಿದೆ. ಇನ್ನೊಂದು ಕಡೆ, ಈಶಾನ್ಯ ಭಾರತದಲ್ಲಿ ಬಂಡಾಯ ಚಟುವಟಿಕೆಯಿದೆ. ಕಾಶ್ಮೀರವೂ ಸುಖವಾಗಿಲ್ಲ. ಇಂಥ ಸ್ಥಿತಿಯಲ್ಲಿ, ಅನುಭವಿ ಮತ್ತು ನಿಪುಣ ಯೋಧರ ಅಗತ್ಯ ಬಹಳವೇ ಇದೆ.
ಅಗ್ನಿಪಥ್ ಯೋಜನೆಯಂತೆ, 17ರಿಂದ 25 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಯೋಧರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಮೊದಲ ವರ್ಷ 46 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಿದ್ದು, ಈ ಆಯ್ಕೆ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯಲಿದೆ. ಪ್ರತಿ ವರ್ಷದಂತೆ ನಾಲ್ಕು ವರ್ಷಗಳವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸೇರ್ಪಡೆಯಾಗುವ ಯೋಧರಿಗೆ 12ನೇ ತರಗತಿಯ ಪ್ರಮಾಣ ಪತ್ರ ನೀಡಲಾಗುವುದು. ಮಾತ್ರವಲ್ಲ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವ ಯೋಧರು ಪೂರ್ಣಾವಧಿ ಸೇವೆಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಇವರಲ್ಲಿ 25% ಮಂದಿಯನ್ನು ಮಾತ್ರ ಪೂರ್ಣಾವಧಿಗೆ ಆಯ್ಕೆ ಮಾಡಲಾಗುತ್ತದೆ.
ಸಮಸ್ಯೆ ಇರುವುದೂ ಇಲ್ಲಿ. ಯೋಧರನ್ನು ದೇಶಸೇವೆ ಮಾಡುವವರು ಎಂದು ಗುರುತಿಸಲಾಗುತ್ತದೆಯೇ ಹೊರತು ವೃತ್ತಿನಿರತರೆಂದಲ್ಲ. ಭಾರತೀಯ ಸೇನೆ ಸೇರುವುದೆಂದರೆ, ಅದೊಂದು ಹೆಮ್ಮೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ ಮುಂತಾದ ರಾಜ್ಯಗಳು ಯುವಕರನ್ನು ದೊಡ್ಡ ಮಟ್ಟದಲ್ಲಿ ದೇಶಸೇವೆಗೆಂದು ಕಳಿಸುತ್ತಿದೆ. ಯೋಧನ ಕುಟುಂಬವೊಂದು ತಮ್ಮ ಗ್ರಾಮದಲ್ಲಿರುವುದನ್ನುಈ ಊರಿನವರು ಹೆಮ್ಮೆಯೆಂದು ಭಾವಿಸುವ ವಾತಾವರಣವಿದೆ. ದೇಶಸೇವೆಯ ನಡುವೆ ರಜೆಯಲ್ಲಿ ಊರಿಗೆ ಮರಳುವ ಯೋಧನಿಗೆ ಅಪಾರ ಗೌರವವೂ ಲಭ್ಯವಾಗುತ್ತದೆ. ಎಷ್ಟೋ ಬಾರಿ ಯೋಧರ ಸಾಹಸಪೂರ್ಣ ಸೇವೆಗಾಗಿ ಯೋಧರನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಊರೇ ಸಂಭ್ರಮಿಸುತ್ತದೆ. ಆದರೆ, ನಾಲ್ಕು ವರ್ಷಗಳ ಸೇವೆಯ ಬಳಿಕ ಯೋಧ ಎಂಬ ಹಣೆಪಟ್ಟಿಯನ್ನು ಕಳಚಿಟ್ಟು ಸರ್ಕಾರ ಕೊಡುವ 11 ಲಕ್ಷ ರೂಪಾಯಿಯನ್ನು ಪಡೆದುಕೊಂಡು ಮರಳುವವನಿಗೆ/ಳಿಗೆ ಈ ಗೌರವ ಲಭ್ಯವಾದೀತೇ ಎಂಬುದು ಮೊದಲ ಪ್ರಶ್ನೆ. ಹೀಗೆ ನಿವೃತ್ತರಾಗುವ ಯೋಧರಿಗೆ ಪಿಂಚಣಿಯಿಲ್ಲ. ಪೂರ್ಣಾವಧಿ ಯೋಧರಿಗೆ ಸಿಗುವ ಭೂಮಿ, ಶಿಕ್ಷಣ ಮೀಸಲಾತಿ, ಆರೋಗ್ಯ ರಿಯಾಯಿತಿಗಳೂ ಸಿಗಲ್ಲ. ಈ ನಾಲ್ಕು ವರ್ಷಗಳಲ್ಲಿ ಅವರ ಶಿಕ್ಷಣವೂ ಮೊಟಕುಗೊಳ್ಳುತ್ತದೆ. 12ನೇ ತರಗತಿಯ ಸರ್ಟಿಫಿಕೇಟನ್ನು ಮತ್ತು 11 ಲಕ್ಷವನ್ನು ಹಿಡಿದುಕೊಂಡು ಅವರು ತನ್ನೂರಿಗೆ ಮರಳುತ್ತಾರೆ. ಆ ಬಳಿಕ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕಾಗುತ್ತದೆ. ವೃತ್ತಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಅಂದಹಾಗೆ, ದೇಶದಲ್ಲಿ ಇವತ್ತು ನಿರುದ್ಯೋಗದ ಸಮಸ್ಯೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೊರೋನಾ ನೆಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೇನಾ ಭರ್ತಿ ನಡೆದೂ ಇಲ್ಲ. ಅಲ್ಲದೇ,
ಭಾರತೀಯ ಸೇನೆ ಸದ್ಯ ಒಂದು ಲಕ್ಷ ಯೋಧರ ಕೊರತೆಯನ್ನು ಎದುರಿಸುತ್ತಲೂ ಇದೆ. ಇಂಥ ಸ್ಥಿತಿಯಲ್ಲಿ ಪೂರ್ಣಾವಧಿ ಯೋಧರ ಬದಲು ನಾಲ್ಕು ವರ್ಷಗಳ ಗುತ್ತಿಗೆಯಾಧಾರಿತ ಯೋಧರ ಆಯ್ಕೆಯನ್ನು ದಿಢೀರ್ ಘೋಷಿಸಿದರೆ ಏನಾದೀತು? ಉತ್ತರ ಭಾರತದಲ್ಲಿ ಸೇನಾ ಆಯ್ಕೆಗೆ ತರಬೇತಿ ನೀಡಲೆಂದೇ ಅನೇಕ ಕೋಚಿಂಗ್ ಸೆಂಟರ್‌ಗಳಿವೆ. ಇಲ್ಲಿ ವರ್ಷಗಳಿಂದ ಯುವಕರು ದೈಹಿಕ ಕಸರತ್ತು ನಡೆಸುತ್ತಲೂ ಇದ್ದಾರೆ. ಜೀವನ ಭದ್ರತೆಯ ಜೊತೆಗೇ ಜೀವಿತ ಕಾಲದ ವರೆಗೆ ಯೋಧರೆಂಬ ಗೌರವ ಲಭಿಸುವ ನಿರೀಕ್ಷೆಯೇ ಅವರ ಸೇನಾ ಸೇರ್ಪಡೆಗೆ ಕಾರಣ. ಅಂದಹಾಗೆ,
ಅಗ್ನಿವೀರ್ ವಿಚಲಿತಗೊಳಿಸಿದ್ದು ಇಂಥ ಯುವ ಸಮೂಹವನ್ನು. ಅವರೆಲ್ಲರ ನಿರೀಕ್ಷೆಗಳನ್ನು ಅಗ್ನಿಪಥ್ ಯೋಜನೆ ಮಣ್ಣುಪಾಲು ಮಾಡಿದೆ. ದೇಶಸೇವೆಯೆಂಬ ಹೊಣೆಗಾರಿಕೆಯನ್ನು ಗುತ್ತಿಗೆಯಾಧಾರಿತ ವೃತ್ತಿಮಟ್ಟಕ್ಕೆ ಇಳಿಸಿರುವುದಕ್ಕೆ ಅವರಲ್ಲಿ ಆಕ್ರೋಶ ಇದೆ. 2013ರಲ್ಲಿ ಒಂದೇ ಶ್ರೇಣಿ ಒಂದೇ ಪಿಂಚಣಿಯನ್ನು ಬೆಂಬಲಿಸಿದ ಇದೇ ಮೋದಿಯವರು ಇವತ್ತು ಯೋಧರಿಗೆ ಪಿಂಚಣಿ ಕೊಡುವುದು ರಕ್ಷಣಾ ಇಲಾಖೆಗೆ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ. ಈಗಿನ ಬಜೆಟ್‌ನಲ್ಲಿ ಕೇವಲ ಯೋಧರ ಪಿಂಚಣಿಗಳಿಗೆ 1,19,696 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದ್ದರೆ, 1,63,453 ಕೋಟಿ ರೂಪಾಯಿಯನ್ನು ಯೋಧರ ವೇತ ನಕ್ಕಾಗಿ ಮೀಸಲಿರಿಸಲಾಗಿದೆ. ಇದು ಭಾರೀ ಹೊರೆ ಎಂದು ಸರ್ಕಾರ ವಾದಿಸುತ್ತಿದೆ. ಒಟ್ಟು ರಕ್ಷಣಾ ಬಜೆಟ್‌ನ ಪೈಕಿ 54%ದಷ್ಟು ಹಣವೂ ಕೇವಲ ಪಿಂಚಣಿ ಮತ್ತು ವೇತನಕ್ಕಾಗಿ ಖರ್ಚಾಗುತ್ತಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಮುಂದಿಡುತ್ತಿದೆ. ಈ ಖರ್ಚನ್ನು ತಗ್ಗಿಸುವುದಕ್ಕಾಗಿಯೇ ಯೋಧರನ್ನು ಗುತ್ತಿಗೆಯಾಧಾರಿತ ಕಾರ್ಮಿಕರಂತೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸರ್ಕಾರದ ಪರೋಕ್ಷ ಸಮರ್ಥನೆ. ಆದರೆ,
ದೇಶಸೇವೆ ಎಂಬುದು ಗುತ್ತಿಗೆ ಆಧಾರಿತ ವೃತ್ತಿಯಲ್ಲ. ಅದೊಂದು ಗೌರವ, ಹೆಮ್ಮೆ. ಬಿಜೆಪಿ ಈ ಯೋಧರನ್ನೇ ತೋರಿಸಿ ಮತ ಯಾಚಿಸಿದ ಪಕ್ಷ. ದೇಶಪ್ರೇಮ, ದೇಶಭಕ್ತಿ ಎಂಬುದು ಬಿಜೆಪಿಯ ಅನುದಿನದ ಸ್ಲೋಗನ್. ಇಂಥ ಪಕ್ಷವೊಂದು ಯೋಧರ ಪಿಂಚಣಿಯ ನ್ನು ಹೊರೆ ಎಂದು ಪರಿಗಣಿಸುವುದು ಮತ್ತು ಅವರ ಸೇವೆಯನ್ನು ವೃತ್ತಿಯೆಂದು ತೃಣೀಕರಿಸುವುದು ಅಪ್ಪಟ ದೇಶದ್ರೋಹದ ಕೃತ್ಯ. ಶಾಸಕರು, ಸಂಸದರು ಜೀವನಪೂರ್ತಿ ಪಡೆಯುವ ಪಿಂಚಣಿಯನ್ನು ಹೊರೆ ಎಂದು ಪರಿಗಣಿಸದ ಮತ್ತು ಅದಕ್ಕೆ ಯಾವ ವಿರೋಧವ ನ್ನೂ ವ್ಯಕ್ತಪಡಿಸದ ಬಿಜೆಪಿ, ಯೋಧರ ಪಿಂಚಣಿಯನ್ನು ಮಾತ್ರ ಹೊರೆ ಎಂದು ಪರಿಗಣಿಸಿರುವುದು ಅದರ ಯೋಧ ದ್ರೋಹಕ್ಕೆ ಅತ್ಯುತ್ತಮ ಉದಾಹರಣೆ.
ಯೋಧರು ಎಂದೂ ಈ ದೇಶಕ್ಕೆ ಹೊರೆಯಲ್ಲ, ಅವರು ಈ ದೇಶದ ಆಸ್ತಿ. ಕೈಯಲ್ಲಿ 11 ಲಕ್ಷ ರೂಪಾಯಿಯನ್ನು ಕೊಟ್ಟು ನಾಲ್ಕು ವರ್ಷಗಳ ಬಳಿಕ ಮನೆಗೆ ಅಟ್ಟುವುದು ಸಣ್ಣ ಸಂಗತಿಯಲ್ಲ. ಇಂಥ ಬೆಳವಣಿಗೆ ಅವರನ್ನು ವಿಚಲಿತಗೊಳಿಸುವ ಸಾಧ್ಯತೆಯಿದೆ. ಬಳಿಕ ಉದ್ಯೋಗದ ಸಮಸ್ಯೆಯೂ ಅವರನ್ನು ಕಾಡಲಿದೆ. ಇಂಥ ವಿಚಲಿತ ಮತ್ತು ಆಕ್ರೋಶಿತ ನಿರುದ್ಯೋಗಿ ಯುವ ಸಮೂಹವನ್ನು ರಾಜಕೀಯ ಮತ್ತು ಸಮಾಜದ್ರೋಹಿ ಶಕ್ತಿಗಳು ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದು. ರುವಾಂಡ ಮತ್ತು ಯುಗೋಸ್ಲಾವಿಯಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಾಂಗ ಹತ್ಯೆಯಲ್ಲಿ ಮಿಲಿಟರಿ ಪಡೆಯ ದೊಡ್ಡ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಾಲ್ಕು ವರ್ಷಗಳ ವೃತ್ತಿಯ ಬಳಿಕ ಸೇನೆಯಿಂದ ಮನೆಗೆ ಮರಳುವವರಲ್ಲಿ ಇಂಥ ಜನಾಂಗ ದ್ವೇಷವನ್ನು ತುಂಬಿ ಸಮಾಜಘಾತುಕರು ದುರು ಪಯೋಗಪಡಿಸುವುದಕ್ಕೂ ಸಾಧ್ಯವಿದೆ. ಆದ್ದರಿಂದ, ಅಗ್ನಿಪಥ್ ಯೋಜನೆ ಮರುಪರಿಶೀಲನೆ ಬಹಳ ಅಗತ್ಯ. ದೇಶ ಕಾಯುವ ಯೋಧರನ್ನು ದಯವಿಟ್ಟು ಅವಮಾನಿಸಬೇಡಿ.
No comments:
Post a Comment