15- 5 2023
ಆಡಳಿತಾತ್ಮಕ ವೈಫಲ್ಯವನ್ನು ಧರ್ಮದ ಅಮಲು ತಿನ್ನಿಸಿ ದಕ್ಕಿಸಿಕೊಳ್ಳಬಹುದು ಎಂಬ ಕೇಂದ್ರ ಬಿಜೆಪಿ ನಾಯಕತ್ವದ ಅಹಂಗೆ ಕನ್ನಡಿಗರು ಏಟು ಕೊಟ್ಟಿದ್ದಾರೆ. ಈ ಏಟಿನ ತೀವ್ರತೆ ಎಷ್ಟು ಆಳವಾಗಿದೆ ಎಂದರೆ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾ ಪುರ, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಒಂದೂ ಸ್ಥಾನ ಸಿಕ್ಕಿಲ್ಲ.
ಹಾಗೆಯೇ, ವಿಜಯಪುರ, ಹಾವೇರಿ, ಮೈಸೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ವಿಜಯ ನಗರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸ್ಥಾನವಷ್ಟೇ ಬಿಜೆಪಿಗೆ ದಕ್ಕಿದೆ. ಪ್ರಧಾನಿ ಮೋದಿ 16 ರ‍್ಯಾಲಿಗಳನ್ನು ನಡೆಸಿದ್ದಾರೆ, ಅಮಿತ್ ಶಾ 30 ರ‍್ಯಾಲಿಗಳನ್ನು ನಡೆಸಿದ್ದಾರೆ. ಇವರಲ್ಲದೇ, ಯೋಗಿ ಆದಿತ್ಯನಾಥ್, ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ, ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾಣ್ ಸಹಿತ ಬಿಜೆಪಿ ನಾಯಕರ ದಂಡೇ ರಾಜ್ಯದಲ್ಲಿ ಪ್ರಚಾರ ಅಭಿಯಾನ ನಡೆಸಿತ್ತು. ಆದರೂ ಬಿಜೆಪಿಯ ಹೀನಾಯ ಸೋಲನ್ನು ತಪ್ಪಿಸಲಾಗಲಿಲ್ಲ.
ರಾಜ್ಯದಲ್ಲಿ ಟಿಕೆಟ್ ಹಂಚುವ ಮೊದಲು ದೆಹಲಿಯಲ್ಲಿ 14 ಸಭೆಗಳು ನಡೆದಿದ್ದುವು. ಈ ಸಭೆ ಗಳಲ್ಲಿ ರಾಜ್ಯದಿಂದ ಸಕ್ರಿಯವಾಗಿ ಭಾಗವಹಿಸಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಆದರೆ, ಅವರನ್ನೇ ಮತದಾರರು ಸೋಲಿಸಿದರು. ಬಿಜೆಪಿ ಹೈಕಮಾಂಡ್‌ನಲ್ಲಿ ಒಂದೇ ದೇಶ, ಒಂದೇ ಭಾಷೆ, ಒಂದೇ ಕಾನೂನು ಎಂಬ ದಾರ್ಷ್ಟ್ಯತನವಿದೆ. ಹಿಂದಿಯನ್ನು ದಕ್ಷಿಣ ರಾಜ್ಯಗಳ ಮೇಲೆ ಹೇರುವುದರ ಹಿಂದಿರುವುದೂ ಇದೇ ದಾರ್ಷ್ಟ್ಯತನ. ಹಿಂದಿಯೇತರ ನಾಡು-ನುಡಿ-ಭಾವಲಹರಿಗೆ ಯಾವ ರೀತಿಯ ಬೆಲೆಯನ್ನೂ ಕೊಡದೇ ಉತ್ತರ ಭಾರತದ ಭಾಷಾ ಸಂಸ್ಕೃತಿ ಮತ್ತು ಯೋಚನಾ ರೀತಿಯನ್ನು ಹಿಂದಿಯೇತರರ ಮೇಲೆ ಹೇರುವ ನೀತಿಯೂ ಇದೇ ದಾರ್ಷ್ಟ್ಯತನದ ಭಾಗ. ಆ ಕಾರಣದಿಂದಲೇ, ಗುಜರಾತ್‌ನಲ್ಲಿ ಏನೆಲ್ಲ ಪ್ರಯೋಗಗಳನ್ನು ಮಾಡಲಾಗಿದೆಯೋ ಅದನ್ನು ಯಥಾಪ್ರಕಾರ ಕರ್ನಾಟಕದಲ್ಲೂ ಬಿಜೆಪಿ ಹೈಕಮಾಂಡ್ ಅಳವಡಿಸಿತು. ಗುಜರಾತ್‌ನಲ್ಲಿ ಚುನಾವಣೆಗಿಂತ ಮೊದಲು ಮುಖ್ಯಮಂತ್ರಿಯನ್ನು ಬದಲಾಯಿಸಿದರಲ್ಲದೇ 45 ಹಾಲಿ ಶಾಸಕರಿಗೆ ಟಿಕೆಟನ್ನೂ ನಿರಾಕರಿಸಿತು.
ಆ ಕಾರಣದಿಂದಲೇ, ಇಲ್ಲಿಯೂ ಯಡಿಯೂರಪ್ಪರನ್ನು ಯಾವ ಕಾರಣವೂ ಇಲ್ಲದೇ ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಹೈಕಮಾಂಡ್ ಕೆಳಗಿಳಿಸಿದ್ದಲ್ಲದೇ, ಬೊಮ್ಮಾಯಿಯವರನ್ನು ಕೂರಿಸಿ ದೆಹಲಿಯಿಂದಲೇ ಆಡಳಿತ ನಡೆಸಿತು. ಮೇಲುನೋಟಕ್ಕೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಆದರೆ ನಿಜವಾದ ಮುಖ್ಯಮಂತ್ರಿ ಹೈಕಮಾಂಡ್ ಆಗಿತ್ತು. ಅತ್ಯಂತ ಅನರ್ಥಕಾರಿ ತೀರ್ಮಾನಗಳನ್ನು ಅವರು ಕೈಗೊಳ್ಳುವುದರ ಹಿಂದೆ ದೆಹಲಿ ದೊರೆಗಳ ಒತ್ತಡವಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಯಾಗಿಲ್ಲದ ಸಮಯದ ಬೊಮ್ಮಾಯಿ ನಡುವೆ ಆನೆ ಮತ್ತು ಇಲಿಯಷ್ಟು ವ್ಯತ್ಯಾಸ ಕಾಣುತ್ತಿರುವುದಕ್ಕೆ ಇದುವೇ ಕಾರಣ. ಹೈಕಮಾಂಡ್ ಮತ್ತು ರಾಜ್ಯ ಆಡಳಿತದ ನಡುವೆ ತಾಳ-ಮೇಳ ಇರಲಿಲ್ಲ. ಹಲಾಲ್, ಹಿಜಾಬ್, ವ್ಯಾಪಾರ ನಿಷೇಧ, ಪಠ್ಯಪುಸ್ತಕ ಪರಿಷ್ಕರಣೆ, ಉರಿ-ನಂಜೇಗೌಡ, ಮೀಸಲಾತಿ ಇತ್ಯಾದಿ ಗಳನ್ನು ಬೊಮ್ಮಾಯಿ ನಿಭಾಯಿಸಿದ ರೀತಿಯೇ ಅವರ ಕೈ ಕಟ್ಟಲಾಗಿರುವುದನ್ನು ಸೂಚಿಸುತ್ತದೆ. ಸಂವೇದನೆ ಇರುವ ಯಾವುದೇ ಮುಖ್ಯಮಂತ್ರಿ ಅಥವಾ ಸರಕಾರ ಈ ಸಂದರ್ಭಗಳಲ್ಲಿ ಇಷ್ಟು ನಿರ್ಲಜ್ಜವಾಗಿ ವರ್ತಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಕರ್ನಾಟಕವನ್ನು ಆಳುತ್ತಿದ್ದುದು ದೆಹಲಿಯ ಹೈಕಮಾಂಡ್ ಆಗಿತ್ತು. ಅದಕ್ಕೆ ಗೊತ್ತಿರುವುದು ಹಿಂದಿ ಭಾಷೆ ಮತ್ತು ಹಿಂದಿ ರಾಜ್ಯಗಳ ನಾಡಿಮಿಡಿತ. ಅದೇ ನೀತಿಯನ್ನು ಕರ್ನಾಟಕಕ್ಕೂ ಅಳವಡಿಸುವ ದುಸ್ಸಾಹಸಕ್ಕೆ ಇಳಿಯಿತು. ಮುಸ್ಲಿಮರನ್ನು ಸತಾಯಿಸುವುದು ಮತ್ತು ಆ ಮೂಲಕ ಮತ ಧ್ರುವೀಕರಣ ನಡೆಸುವುದು ಬಿಜೆಪಿ ಹೈಕಮಾಂಡ್‌ನ ಏಕಸೂತ್ರ.
ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಲಿಂಗಾಯತ ಮತ್ತು ಒಕ್ಕ ಲಿಗರಿಗೆ ಹಂಚಲಾಯಿತು. ಈ ಹಂಚಿಕೆಯನ್ನು ಈ ಎರಡೂ ಸಮುದಾಯಗಳು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತವೆ ಎಂದು ಹೈಕಮಾಂಡ್ ನಂಬಿತ್ತು. ಜೊತೆಗೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು 3%ದಿಂದ 7%ಕ್ಕೆ ಹೆಚ್ಚಿಸಿದ್ದಲ್ಲದೇ ಒಳಮೀಸಲಾತಿ ಕಲ್ಪಿಸಿತು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು 51 ಮೀಸಲು ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಇವುಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಮೀಸಲಾತಿ ಹೆಚ್ಚಿಸಿ ಮರು ಹಂಚಿಕೆ ಮಾಡುವ ಮೂಲಕ ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದು ಮತ್ತು ಲಿಂಗಾಯತ-ಒಕ್ಕಲಿಗರನ್ನು ಒಲಿಸಿಕೊಂಡು ಸುಮಾರು 100ರಷ್ಟು ಸ್ಥಾನಗಳನ್ನು ಖಚಿತಪಡಿಸಿಕೊಳ್ಳುವುದು ಬಿಜೆಪಿಯ ತಂತ್ರವಾಗಿತ್ತು. ಆದರೆ, ಮುಸ್ಲಿಮರಿಂದ ಕಿತ್ತು ಕೊಟ್ಟ ಮೀಸಲಾತಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ನಿರೀಕ್ಷಿತ ಸ್ವಾಗತ ಲಭಿಸಲಿಲ್ಲ. ದಲಿತ ಸಮುದಾಯಗಳ ನಡುವೆ ಮೀಸಲಾತಿ ಮರು ಹಂಚಿಕೆಯಿಂದಾಗಿ ಬಂಜಾರ, ಭೋವಿ, ಲಂಬಾಣಿ ಸಮುದಾಯಗಳು ತಿರುಗಿ ಬಿದ್ದುವು. ಅಲ್ಲದೇ, ಮೀಸಲಾತಿ ಹೆಚ್ಚಳದ ಬಗ್ಗೆ ರಾಜ್ಯ ಸರಕಾರದಲ್ಲಿ ಯಾವ ಸ್ಪಷ್ಟತೆಯೂ ಇರಲಿಲ್ಲ. ಹಾಗೆಯೇ ಮುಸ್ಲಿಮರಿಂದ ಕಿತ್ತು ಕೊಡಲಾದ 4% ಮೀಸಲಾತಿಯನ್ನು ಸುಪ್ರೀಮ್‌ನಲ್ಲಿ ಸಮರ್ಥಿಸುವುದಕ್ಕೂ ಸರಕಾರ ಹೆಣಗಾಡ ತೊಡಗಿತು. ಮೀಸಲು ಹಂಚಿಕೆಯಲ್ಲಿ ರಾಜ್ಯ ಸರಕಾರದ ಎಡವಟ್ಟು ಮತ್ತು 4% ಮೀಸಲಾತಿ ರದ್ಧತಿ ಬಗ್ಗೆ ಇರುವ ಅಸ್ಪಷ್ಟತೆಯು ಬಿಜೆಪಿ ಹೈಕಮಾಂಡ್‌ನ ತಂತ್ರವನ್ನು ನುಚ್ಚುನೂರುಗೊಳಿಸಿತು. ಆದ್ದರಿಂದ,
ಕಳೆದ ಬಾರಿ 51 ಮೀಸಲು ಕ್ಷೇತ್ರಗಳ ಪೈಕಿ 21 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಕೇವಲ 11 ಸ್ಥಾನಗಳನ್ನಷ್ಟೇ ಪಡೆಯಿತು. ಇದೇವೇಳೆ, ಕಳೆದ ಬಾರಿ 22 ಮೀಸಲು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ಈ ಬಾರಿ 36 ಕ್ಷೇತ್ರಗಳಲ್ಲಿ ಜಯ ಗಳಿಸಿತು. ಒಂದು ಕಡೆ ಲಿಂಗಾಯತರು ಮತ್ತು ಒಕ್ಕಲಿಗರು ಕೈಕೊಟ್ಟರು. ಇನ್ನೊಂದು ಕಡೆ, ದಲಿತರು ಕೈಕೊಟ್ಟರು. ಹಾಗೆಯೇ, ಗುಜರಾತ್ ಮಾಡೆಲ್‌ನ ಭಾಗವಾಗಿ ರಾಜ್ಯದಲ್ಲಿ 75 ಮಂದಿ ಹೊಸಬರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಹಂಚಿತ್ತು. ಇವರಲ್ಲಿ ಕೇವಲ 14 ಮಂದಿ ಮಾತ್ರ ಜಯಗಳಿಸಿದರು. ತಿಂಗಳುಗಳ ಹಿಂದೆ ಗುಜರಾತ್ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ 45 ಮಂದಿ ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿತ್ತು ಮತ್ತು ಅವರಲ್ಲಿ ಬಹುತೇಕರೂ ಜಯಗಳಿಸಿದ್ದರು. ಅದೇರೀತಿ,
ಸ್ಥಾನೀಯ ನಾಯಕರನ್ನು ನಗಣ್ಯಗೊಳಿಸಿ ಮೋದಿ-ಅಮಿತ್ ಶಾ ಸವಾರಿ ಮಾಡುವುದೇ ಬಿಜೆಪಿಯ ಚುನಾವಣಾ ತಂತ್ರ. ಇಲ್ಲೂ ಅದನ್ನೇ ಪ್ರಯೋಗಿಸಿತು. ಬೊಮ್ಮಾಯಿ ತಮ್ಮ ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆಲ್ಲೂ ಕಾಣಸಿಗಲಿಲ್ಲ. ಬಿಜೆಪಿಯ ಸ್ಥಳೀಯ ನಾಯಕರು ಮೋದಿ- ಅಮಿತ್ ಶಾರ ನೆರಳಿನಂತೆ ಅಲ್ಲಲ್ಲಿ ಕಾಣಿಸಿಕೊಂಡರೇ ಹೊರತು ಸಿದ್ದರಾಮಯ್ಯ, ಡಿಕೆಶಿ, ಖರ್ಗೆಯಂತೆ ಎಲ್ಲೂ ತಾವೇ ಪ್ರಖರ ನಾಯಕತ್ವ ಅಳವಡಿಸಿಕೊಳ್ಳಲೇ ಇಲ್ಲ ಅಥವಾ ಹೈಕಮಾಂಡ್ ಅವರ ಮೇಲೆ ವಿಶ್ವಾಸವನ್ನೇ ತಾಳಲಿಲ್ಲ. ಕಾಂಗ್ರೆಸ್ ರಾಜ್ಯ ಕೇಂದ್ರಿತವಾಗಿ ಚರ್ಚಿಸಿದರೆ, ಬಿಜೆಪಿ ಬರೇ ಮೋದಿಯನ್ನಷ್ಟೇ ತೋರಿಸುತ್ತಿತ್ತು. ಮೋದಿಯವರಾದರೋ ಕಾಂಗ್ರೆಸ್ ಎತ್ತಿದ ನಂದಿನಿ-ಅಮುಲ್ ವಿಲೀನ, ಪೇಸಿಎಂ, 40% ಕಮಿಶನ್, ವ್ಯಾಪಾರ ನಿಷೇಧ, ಭ್ರಷ್ಟಾಚಾರ, ಮೀಸಲಾತಿ, 5 ಗ್ಯಾರಂಟಿಗಳು, ಲಿಂಗಾಯತರ ಕಡೆಗಣನೆ... ಇತ್ಯಾದಿ ಸ್ಥಳೀಯ ಪ್ರಶ್ನೆಗಳಿಗೆ ಮಹತ್ವವನ್ನೇ ಕೊಡದೆ ಜೈ ಭಜರಂಗಬಲಿ ಎನ್ನುತ್ತಾ ಮತ್ತು ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಎಂದು ಕರೆ ಕೊಡುತ್ತಾ ಸಂವೇದನಾ ರಹಿತರಂತೆ ಕಂಡರು. ಬರ ಮತ್ತು ನೆರೆ ಹಾನಿಯ ವೇಳೆ ರಾಜ್ಯಕ್ಕೆ ಕಾಲಿಡದ ಪ್ರಧಾನಿಯ ಪ್ರಾಮಾಣಿಕತೆ ಮತ್ತು ಉದ್ದೇಶಶುದ್ಧಿಯನ್ನು ಕಾಂಗ್ರೆಸ್ ಹೋದಲೆಲ್ಲ ಪ್ರಶ್ನಿಸಿತು. ರಾಜ್ಯಕ್ಕೆ ಅನುದಾನ ನೀಡಲು ಹಿಂಜರಿದ ಮೋದಿ ನೀತಿಯನ್ನೂ ಸಮರ್ಪಕವಾಗಿ ಜನರ ಮುಂದಿಟ್ಟಿತು. ತನ್ನ ಅಷ್ಟೂ ಚುನಾವಣಾ ವೇದಿಕೆಗಳಲ್ಲಿ 5 ಗ್ಯಾರಂಟಿಗಳ ಬಗ್ಗೆ ವಿವರಿಸುತ್ತಾ ಮತ್ತು ಜನರಿಗೆ ಮನವರಿಕೆ ಮಾಡಿಸುತ್ತಾ ಕಾಂಗ್ರೆಸ್ ಜನರಿಗೆ ಹತ್ತಿರವಾಯಿತು. 51 ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ 36 ಸ್ಥಾನಗಳನ್ನು ಪಡೆ ದಿರುವುದಕ್ಕೆ ಈ ಗ್ಯಾರಂಟಿಗಳ ಪಾತ್ರಕ್ಕೆ ಬಹುಮುಖ್ಯ ಪಾತ್ರ ಇದೆ.
ಮೋದಿ, ಅಮಿತ್ ಶಾರಿಂದ ಹಿಡಿದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ವರೆಗೆ ಎಲ್ಲರೂ ಈ 5 ಗ್ಯಾರಂಟಿಯನ್ನು ಲೇವಡಿ ಮಾಡಿದರೇ ಹೊರತು ಅದಕ್ಕೆ ಪರ್ಯಾಯವಾಗಿ ನಾವು ಏನೇನು ಮಾಡಬಲ್ಲವು ಎಂಬುದನ್ನು ಹೇಳಲೇ ಇಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆಗಿಂತ ಎರಡ್ಮೂರು ತಿಂಗಳ ಮೊದಲೇ ಗ್ಯಾರಂಟಿಗಳನ್ನು ಒಂದೊಂದಾಗಿ ಬಿಡುಗಡೆಗೊಳಿಸುತ್ತಾ ಸಾಗಿದುದೂ ಮಹತ್ವ ಪೂರ್ಣ ಅಂಶ. ಇದು ಬುದ್ಧಿವಂತಿಕೆಯ ನಡೆ. ಈ ಗ್ಯಾರಂಟಿಗಳನ್ನು ಜನರ ಆಡು ಮಾತಾಗಿಸುವುದಕ್ಕೆ ಈ ನಡೆ ಬಹಳ ಪ್ರಯೋಜನಕಾರಿಯಾಯಿತು. ಕೊನೆಗೆ ಉಚಿತ ಹಾಲು, 3 ಗ್ಯಾಸ್ ಸಿಲಿಂಡರು, 5 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಬಿಜೆಪಿ ನೀಡಲೇಬೇಕಾದಷ್ಟು ಕಾಂಗ್ರೆಸ್‌ನ 5 ಗ್ಯಾರಂಟಿಗಳು ಒತ್ತಡವನ್ನು ಹೇರಿದುವು. ಒಂದುಕಡೆ ಉಚಿತವನ್ನು ತಮಾಷೆ ಮಾಡುತ್ತಲೇ ಇನ್ನೊಂದು ಕಡೆ ಉಚಿತ ಭರವಸೆ ನೀಡುವ ಪಕ್ಷಕ್ಕಿಂತ ದ್ವಂದ್ವ ಇಲ್ಲದ ಕಾಂಗ್ರೆಸ್‌ನ ಮೇಲೆಯೇ ಮತದಾರರು ನಂಬಿಕೆಯಿರಿಸಿದರು. ಅಂದಹಾಗೆ,
ಕಾಂಗ್ರೆಸ್‌ನ ಗೆಲುವಿನಲ್ಲಿ ಬಿಜೆಪಿಯ ದುರಾಡಳಿತವೊಂದೇ ಕಾರಣ ಅಲ್ಲ, ಡಿಕೆಶಿಯ ಶ್ರಮ, ಸಿದ್ದರಾಮಯ್ಯರ ಜನಪ್ರಿಯತೆ ಮತ್ತು ಸುರ್ಜೇವಾಲ ಅವರ ಸೂತ್ರಗಳೂ ಪರಿಣಾಮಕಾರಿ ಕೆಲಸ ಮಾಡಿದುವು. ಮುಖ್ಯವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯರ ನಡುವಿನ ಒಗ್ಗಟ್ಟು ಮತದಾರರ ಮೇಲೆ ಸಾಕಷ್ಟು ಧನಾತ್ಮಕ ಪರಿಣಾಮ ಬೀರಿದೆ. ಹಾಗೆಯೇ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಗರಡಿಯಲ್ಲಿ ಪಳಗಿದ್ದ ಸುನೀಲ್ ಕನುಗೋಲು ಅವರ ತಂತ್ರಗಾರಿಕೆ ಮತ್ತು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದ ಚುನಾವಣಾ ವಾರ್ ರೂಂನ ಚಟುವಟಿಕೆ ಈ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸಿದೆ. 40% ಕಮಿಶನ್ ಸರಕಾರ, ಪೇ ಸಿಎಂ ಮತ್ತು ಬಜೆಟ್‌ನ ವೇಳೆ ಕಾಂಗ್ರೆಸ್ ಶಾಸಕರೆಲ್ಲ ಕಿವಿಗೆ ಹೂ ಇಟ್ಟು ಪ್ರತಿಭಟಿಸಿದ್ದು- ಈ ಎಲ್ಲದರ ಹಿಂದೆ ಸುನಿಲ್ ಮತ್ತು ಸೆಂಥಿಲ್ ತಂಡದ ಮೆದುಳು ಕೆಲಸ ಮಾಡಿತ್ತು. ಹಾಗೆಯೇ,
ಪಿಎಫ್‌ಐ ಜೊತೆ ಭಜರಂಗ ದಳದ ಹೆಸರನ್ನು ಪ್ರಣಾಳಿಕೆಯಲ್ಲೇ ಉಲ್ಲೇಖಿಸುವಷ್ಟು ಸಮರ್ಥಿಸುವಷ್ಟು ಕಾಂಗ್ರೆಸ್ ಆಕ್ರಮಣಕಾರಿಯಾದದ್ದು ಮತ್ತು ಬಿಜೆಪಿಯನ್ನು ಸಂಪೂರ್ಣ ರಕ್ಷಣಾತ್ಮಕ ಪ್ರತಿಕ್ರಿಯೆಗೆ ಸೀಮಿತಗೊಳಿಸಿದ್ದೂ ಕಾಂಗ್ರೆಸ್‌ನ ಗೆಲುವಿಗೆ ಕೊಡುಗೆಯನ್ನು ನೀಡಿದೆ. ‘ಭಜರಂಗ ನಿಷೇಧ’ ಎಂಬ ಪ್ರಚಾರವು ಎಸ್‌ಡಿಪಿಐ ಮತ್ತು ಜೆಡಿಎಸ್‌ಗೆ ಹೋಗುತ್ತಿದ್ದ ಮತವನ್ನು ಕಾಂಗ್ರೆಸ್‌ನತ್ತ ಸೆಳೆಯಲು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಭಜರಂಗ ದಳದಿಂದ ಬೇಸತ್ತಿದ್ದ ಗೋವು ಸಾಕಾಣೆದಾರರು ಮತ್ತು ಮಾಂಸಾಹಾರಿಗಳು ಕಾಂಗ್ರೆಸ್ ಬೆನ್ನಿಗೆ ಬಲವಾಗಿ ನಿಂತರು ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ. ಇದಕ್ಕೆ ಆಧಾರವಾಗಿ 2018ರಲ್ಲಿ 18.36% ಮತ ಪಡೆದಿದ್ದ ಜೆಡಿಎಸ್ ಈ ಬಾರಿ 13.3%ಕ್ಕೆ ಕುಸಿದಿರುವುದನ್ನು ತೋರಿಸಲಾಗು ತ್ತಿದೆ. 2018ರಲ್ಲಿ 38% ಮತ ಪಡೆದಿದ್ದ ಕಾಂಗ್ರೆಸ್ ಈ ಬಾರಿ 43% ಮತವನ್ನು ಪಡೆದಿದೆ. ಜೆಡಿಎಸ್‌ನ 5% ಮತಗಳು ಕಾಂಗ್ರೆಸ್ ಪಾಲಾಗಿರುವುದನ್ನು ಅಂಕಿ-ಅಂಶಗಳು ಸೂಚಿಸುತ್ತಿವೆ.
ಏನೇ ಆಗಲಿ,
ಆಡಳಿತಾತ್ಮಕ ವೈಫಲ್ಯವನ್ನು ಧರ್ಮದ ಅಮಲಿನಿಂದ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂಬ ಬಹುಮುಖ್ಯ ಪಾಠವನ್ನು ಈ ಚುನಾವಣೆ ಘಂಟಾಘೋಷವಾಗಿ ಸಾರಿದೆ. ಸರ್ವ ಜನಾಂಗದ ಶಾಂತಿಯ ತೋಟ ಭರವಸೆಗೆ ಕಾಂಗ್ರೆಸ್ ನಿಷ್ಠವಾಗಿರಲಿ ಎಂದು ಹಾರೈಕೆ.
No comments:
Post a Comment