ಮಂಡ್ಯದ ಸಾತನೂರು ಬಳಿ ವಾಹನ ಚಾಲಕ ಇದ್ರೀಸ್ ಪಾಶಾ ಎಂಬವರ ಹತ್ಯೆಯಾಗಿದೆ. ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪುನೀತ್ ಕೆರೆಹಳ್ಳಿ ಎಂಬವನ ನೇತೃತ್ವದ ತಂಡ ಇದ್ರೀಸ್ ಪಾಶಾರನ್ನು ಹತ್ಯೆ ನಡೆಸಿದೆ ಎಂಬ ಆರೋಪ ಇದೆ. ಇದ್ರೀಸ್ ಪಾಶಾ ಜೊತೆ ಇದ್ದ ಇನ್ನಿಬ್ಬರು ಈ ದರೋಡೆ ತಂಡದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇದ್ರೀಸ್ ಪಾಶಾರಿಗೆ ವಿದ್ಯುತ್ ಶಾಕ್ ಕೊಟ್ಟು, ಥಳಿಸಿ ಹತ್ಯೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೇವೇಳೆ, ಇದ್ರೀಸ್ ಪಾಶಾ ಅವರಿದ್ದ ವಾಹನವನ್ನು ಜಾನುವಾರು ಸಮೇತ ಪೊಲೀಸ್ ಠಾಣೆಯ ಮುಂಭಾಗಕ್ಕೆ ತರುತ್ತಿರುವ ವೀಡಿಯೋವನ್ನು ಸ್ವತಃ ಪುನೀತ್ ಕೆರೆಹಳ್ಳಿಯೇ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾನೆ. ವಾಹನದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ ಮತ್ತು ನಮ್ಮ ತಂಡದ ಮಂದಿ ಬೆನ್ನಟ್ಟಿದ್ದಾರೆ ಎಂದೂ ಆ ವೀಡಿಯೋದಲ್ಲಿ ಆತ ಹೇಳಿದ್ದಾನೆ. ಅಲ್ಲದೇ, ಕಾನೂನನ್ನು ಕೈಗೆತ್ತಿಕೊಂಡು ಜಾನುವಾರು ಸಾಗಾಟಗಾರರಿಗೆ ಹಿಂಸೆ ನೀಡಿದ, ಬ್ಯಾಟು-ವಿಕೆಟ್ ಹಿಡಿದುಕೊಂಡು ರಸ್ತೆಯಲ್ಲಿ ಗುಂಪಾಗಿ ಗಸ್ತು ತಿರುಗುತ್ತಿರುವ ವೀಡಿಯೋಗಳೂ ಆತನ ಫೇಸ್ ಬುಕ್ ಪುಟದಲ್ಲಿ ಧಾರಾಳ ಇವೆ. ಇದ್ರೀಸ್ ಪಾಶಾ ಹತ್ಯೆಯ ಬಳಿಕ ಅದನ್ನು ಡಿಲೀಟ್ ಮಾಡಿರು ವುದೇ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವಾಗಿದೆ. ಅಂದಹಾಗೆ,
ಈ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದೇವೇಳೆ, ಕಸಾಯಿಖಾನೆಗಳನ್ನು ಏಲಂ ಮಾಡಿ ಇದೇ ಸರಕಾರ ಹಂಚುತ್ತಲೂ ಇದೆ. ಈ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸಲು ಬೇಕಾದ ವ್ಯವಸ್ಥೆಯನ್ನೂ ಇದೇ ಸರಕಾರ ಮಾಡಿದೆ. ಅದಕ್ಕಾಗಿ ಪರವಾನಿಗೆಯನ್ನೂ ನೀಡುತ್ತಿದೆ. ಅಲ್ಲದೇ, ರಾಜ್ಯದಿಂದ ಗೋವಾ ಸಹಿತ ಇತರ ರಾಜ್ಯಗಳಿಗೆ ಮಾಂಸ ರಫ್ತನ್ನೂ ಮಾಡುತ್ತಿದೆ. ಜೊತೆಗೇ ರಾಜ್ಯದಲ್ಲಿ ಗೋಮಾಂಸ ಸೇವನೆಗೂ ನಿಷೇಧವನ್ನು ವಿಧಿಸಲಾಗಿಲ್ಲ. ಈ ಯಾವ ಪ್ರಕ್ರಿಯೆಯಲ್ಲೂ ಮುಸ್ಲಿಮರ ಒಂದು ಶೇಕಡಾ ಪಾತ್ರ ಕೂಡಾ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಪಶುಸಂಗೋಪನಾ ಸಚಿವ ಪ್ರಭು ಚವ್ವಾಣ್ ವರೆಗೆ ಈ ಸರ್ಕಾರದ ಸಚಿವ ಸಂಪುಟದಲ್ಲಿ ಯಾರೊಬ್ಬರೂ ಮುಸ್ಲಿಮರಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುವಲ್ಲಿಂದ ಹಿಡಿದು ಕಸಾಯಿಖಾನೆಗಳಿಗೆ ಪರವಾನಿಗೆ ನೀಡುವಲ್ಲಿವರೆಗೆ ಮತ್ತು ಜಾನುವಾರು ಸಾಗಾಟಕ್ಕೆ ಲೈಸನ್ಸ್ ನೀಡುವಲ್ಲಿಂದ ಹಿಡಿದು ಮಾಂಸ ರಫ್ತು ಮತ್ತು ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸುವಲ್ಲಿ ವರೆಗೆ ಎಲ್ಲ ಪ್ರಕ್ರಿಯೆಯೂ ಈ ಬೊಮ್ಮಾಯಿ ಸರ್ಕಾರದ ಪೂರ್ತಿ ಕಣ್ಗಾವಲಲ್ಲಿ ನಡೆದಿದೆ. ಹೀಗಿರುವಾಗ, ಗೋರಕ್ಷಕರು ನಿಜಕ್ಕೂ ಪ್ರಶ್ನಿಸಬೇಕಾದದ್ದು ಯಾರನ್ನು? ಸರ್ಕಾರ ವಿತರಿಸಿದ ಪರವಾನಿಗೆಯನ್ನು ಪಡೆದುಕೊಂಡು ಜಾನುವಾರು ವ್ಯಾಪಾರ ಮಾಡುವ ಬಡ ಮುಸ್ಲಿಮರನ್ನೋ ಅಥವಾ ಬೊಮ್ಮಾಯಿ ಸರ್ಕಾರವನ್ನೋ?
ಕಳೆದ ಮೂರೂವರೆ ವರ್ಷಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ವಿವಿಧ ಭಾಗಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಅಲ್ಲದೇ ತನ್ನದೇ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯರೂ ಇದ್ದಾರೆ. ಹಾಗೆಯೇ ಪ್ರಭು ಚವ್ವಾಣ್ ಕೂಡ ಎಲ್ಲೂ ಅಡಗಿಕೊಂಡಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಗೋರಕ್ಷಣೆಯ ಹೆಸರಲ್ಲಿ ಬಡಪಾಯಿ ಮುಸ್ಲಿಮರನ್ನು ಥಳಿಸಿ ಹತ್ಯೆ ನಡೆಸುವ ಗುಂಪು ಒಂದೇ ಒಂದು ಬಾರಿ ಮುಖ್ಯಮಂತ್ರಿ ಬೊಮ್ಮಾಯಿಯವರಲ್ಲಿ ಕಸಾಯಿಖಾನೆ ಮುಚ್ಚಿಸಿ ಎಂದು ಒತ್ತಾಯಿಸಿದ್ದಿದೆಯೇ? ಜಾನು ವಾರು ಸಾಗಾಟದ ವೇಳೆ ಅಕ್ರಮಗಳಾಗುತ್ತಿವೆ ಎಂಬ ದೂರನ್ನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದಿದೆಯೇ? ಹೊರ ರಾಜ್ಯಗಳಿಗೆ ಮಾಂಸ ರಫ್ತು ಮಾಡಿ ಆದಾಯ ಗಳಿಸುವುದು ಪಾಪಕರ್ಮ ಎಂದು ಹೇಳಿದ್ದಿದೆಯೇ? ಗೋಹತ್ಯಾ ನಿಷೇಧ ಕಾನೂನು ಜಾರಿ ಮಾಡಿದ ಬಳಿಕವೂ ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸಿರುವುದು ದ್ವಂದ್ವ ಎಂದು ನೆನಪಿಸಿದ್ದಿದೆಯೇ? ಮುಖ್ಯಮಂತ್ರಿಗಳನ್ನು ಬಿಡಿ, ಪ್ರಭು ಚವ್ವಾಣ್ರಲ್ಲಿ ಇಂಥದ್ದೊಂದು ಅರಿಕೆ ಮಾಡಿದ್ದಿದೆಯೇ? ಅವರು ಸಾಗುತ್ತಿರುವ ವಾಹನವನ್ನು ಅಡ್ಡಗಟ್ಟಿ ಅವರಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಿದೆಯೇ? ಗೋರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೆವೆಂದು ಹೇಳುತ್ತಿರುವ ಯಾವ ಗುಂಪೂ ಇಂಥದ್ದೊಂದು ಮನವಿ ಸಲ್ಲಿಸಿದ್ದೇ ಇಲ್ಲ.
ನಿಜವಾಗಿ, ಈ ಗುಂಪಿಗೆ ಬೇಕಾಗಿರುವುದು ಗೋವುಗಳ ರಕ್ಷಣೆಯೋ ಅಕ್ರಮ ಜಾನುವಾರು ಸಾಗಾಟ ತಡೆಯೋ ಅಲ್ಲ. ಇದೊಂದು ದಂಧೆ. ಹಾಗೆಯೇ ಜನರ ಕಣ್ಣಲ್ಲಿ ಧರ್ಮರಕ್ಷಕರು ಮತ್ತು ಹೀರೋಗಳಾಗುವ ಕಡು ಕೆಟ್ಟ ವಾಂಛೆ. ಜಾನುವಾರು ಸಾಗಾಟದ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದು ಮತ್ತು ಹಾಗೆ ಹಣ ನೀಡದಿದ್ದರೆ ಅಂಥವರನ್ನು ಥಳಿಸಿ ವೀಡಿಯೋ ಮಾಡಿ ಹಂಚಿಕೊಂಡು ಗೋರಕ್ಷಣೆಯ ಪೋಸು ಕೊಡುವುದು ಇವರ ಉದ್ದೇಶ. ಅಲ್ಲದೇ, ಪೊಲೀಸರು ಗೋರಕ್ಷಣೆಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಸಂದೇಶವೂ ಇದರ ಜೊತೆಜೊತೆಗೇ ರವಾನೆಯಾಗುತ್ತದೆ ಮತ್ತು ತಮ್ಮ ಕಾನೂನುಬಾಹಿರ ಕೃತ್ಯಕ್ಕೆ ಜನರಿಂದ ಮೌನ ಸಮ್ಮತಿಯನ್ನು ಪಡಕೊಳ್ಳುವುದೂ ಸುಲಭವಾಗುತ್ತದೆ. ಇಂಥ ಆರೋಪಗಳು ಅನೇಕ ಬಂದಿವೆ. ವಾರಗಳ ಹಿಂದೆ ದ.ಕ.ಜಿಲ್ಲೆಯ ಮೂಡಬಿದಿರೆಯಲ್ಲಿ ಸಂಶುದ್ದೀನ್ ಎಂಬವರ ಮನೆಗೆ ದಾಳಿ ನಡೆಸಲಾಗಿತ್ತು. ಹೈನುಗಾರರಾದ ಅವರಲ್ಲಿ ಗೋವುಗಳಿದ್ದುವು. ಹಾಲನ್ನು ಡಿಪೋ ಮತ್ತು ಹತ್ತಿರದ ಮನೆಗಳಿಗೆ ಅವರು ಮಾರಾಟವನ್ನೂ ಮಾಡುತ್ತಿದ್ದರು. ಆದರೆ, ಅವರ ಮನೆಗೆ ದಾಳಿ ನಡೆಸಿದ ಗುಂಪು 2 ಲಕ್ಷ ರೂಪಾಯಿ ಬೇಡಿಕೆಯನ್ನಿಟ್ಟಿತು. ಅವರು ನಿರಾಕರಿಸಿದಾಗ ಪೊಲೀಸರಿಗೆ ದೂರು ನೀಡಿ ಅವರ ಗೋವುಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಈ ಎಲ್ಲವನ್ನೂ ಕ್ಯಾಮರಾದ ಮುಂದೆಯೇ ಸಂಶುದ್ದೀನ್ ಹೇಳಿಕೊಂಡಿದ್ದಾರೆ. ಅಂದಹಾಗೆ,
ಎಲ್ಲೆಲ್ಲ ಸಕ್ರಮ ವ್ಯಾಪಾರ-ವ್ಯವಹಾರ ನಡೆಯುತ್ತೋ ಅಲ್ಲೆಲ್ಲ ಅಕ್ರಮಕ್ಕೂ ಅವಕಾಶ ತೆರೆದೇ ಇರುತ್ತದೆ. ಅಕ್ರಮವಾಗಿ ಅಕ್ಕಿಯೂ ಸಾಗಾಟವಾಗುತ್ತದೆ. ತರಕಾರಿಯೂ ಆಗುತ್ತದೆ. ಮರಳೂ ಆಗುತ್ತದೆ. ಜಾನುವಾರು ಸಾಗಾಟವನ್ನೂ ಈ ಪಟ್ಟಿಯಿಂದ ಹೊರಗಿಟ್ಟು ನೋಡಬೇಕಿಲ್ಲ. ಆದರೆ, ಇವನ್ನು ತಡೆಯಬೇಕಾದವರು ಯಾರು? ನಾಗರಿಕರ ಕರ್ತವ್ಯವೇನು? ಸಕ್ರಮ ಗುತ್ತಿಗೆ ಹಂಚಿಕೆ ಮಾಡಬೇಕಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ದಾರಿ ಹಿಡಿದಿರುವುದನ್ನು ಪೊಲೀಸರ ಗಮನಕ್ಕೆ ತಂದದ್ದು ಓರ್ವ ನಾಗರಿಕ. ಆತನೇನೂ ಗುಂಪು ಕಟ್ಟಿಕೊಂಡು ಬ್ಯಾಟು-ವಿಕೆಟ್ ಎತ್ತಿಕೊಂಡು ಈ ಕೆಲಸ ಮಾಡಿದ್ದಲ್ಲ. ಯಾರಿಗೆ ಸುದ್ದಿ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸಿದರು. ಆ ಮೂಲಕ ಬಹುದೊಡ್ಡ ಹಗರಣವೊಂದು ಬಯಲಿಗೆ ಬಂತು. ಜವಾಬ್ದಾರಿಯುತ ನಾಗರಿಕರು ಮಾಡಬೇಕಾಗಿರುವುದು ಇದನ್ನು. ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂಬ ಅನುಮಾನ ಬಂದರೆ ಆ ಬಗ್ಗೆ ಪೊಲೀಸರಿಗೆ ತಿಳಿಸುವುದನ್ನು ಬಿಟ್ಟು ಸ್ವಯಂ ಕಾರ್ಯಾಚರಣೆಗೆ ಇಳಿಯುವುದು ಅರಾಜಕರೆಯ ಸಂಕೇತವೇ ಹೊರತು ಅದು ಗೋರಕ್ಷಣೆಯೂ ಅಲ್ಲ, ಧರ್ಮ ಪ್ರೇಮವೂ ಅಲ್ಲ. ಹೀಗೆ ಮಾಡಬಯಸುವವರು ಗೋರಕ್ಷಣೆಯ ಹೊರತಾದ ಇತರ ಉದ್ದೇಶಗಳನ್ನು ಹೊಂದಿರುತ್ತಾರೆ. ಒಂದೋ ಮಾಡಾಳ್ ವಿರೂಪಾಕ್ಷಪ್ಪರಂತೆ ಅಕ್ರಮವಾಗಿ ಹಣ ಮಾಡುವ ದುರುದ್ದೇಶ ಅವರಲ್ಲಿ ಇರುವಂತಿದೆ ಅಥವಾ ಸಾರ್ವಜನಿಕವಾಗಿ ಐಡೆಂಟಿಟಿಯ ಹಪಾಹಪಿ ಇರುವಂತಿದೆ. ಇವು ಏನೇ ಇದ್ದರೂ ಅಂತಿಮವಾಗಿ ಇಂಥವರು ಒಂದಿಷ್ಟು ಕೇಸುಗಳನ್ನು ಜಡಿಸಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಇವರ ಈ ದುಷ್ಕೃತ್ಯವನ್ನು ರಾಜಕೀಯ ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಇನ್ನಾವುದೋ ಪುಡಾರಿ ಆರಾಮವಾಗಿ ಅದ್ದೂರಿ ಕಾರಲ್ಲಿ ಓಡಾಡುತ್ತಾ ಸುಖವಾಗಿರುತ್ತಾರೆ. ಅವರ ಮಕ್ಕಳಾಗಲಿ ಅಥವಾ ಇಂಥ ಕ್ರೌರ್ಯಗಳನ್ನು ಬೆಂಬಲಿಸುವವರ ಮಕ್ಕಳಾಗಲಿ ಯಾರೂ ಇಂಥ ತಂಡಗಳಲ್ಲಿ ಇರುವುದೇ ಇಲ್ಲ. ಎಲ್ಲೋ ದೂರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುತ್ತಾ ಅವರು ಸುರಕ್ಷಿತವಾಗಿರುತ್ತಾರೆ ಮತ್ತು ಈ ಬಗ್ಗೆ ಪ್ರಶ್ನೆಗಳೇಳದಂತೆ ಇವರೆಲ್ಲ ಜಾಣತನದಿಂದ ತಪ್ಪಿಸಿಕೊಳ್ಳುತ್ತಲೂ ಇರುತ್ತಾರೆ.
ಇದ್ರಿಸ್ ಪಾಶಾ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇದು ಸರ್ಕಾರದ ಕಾನೂನು ಸುವ್ಯವಸ್ಥೆಗೆ ಸಾರಿದ ಸವಾಲು. ಬೀದಿಯಲ್ಲಿ ನಿಂತ ದುಷ್ಕರ್ಮಿಗಳ ಗುಂಪು ಈ ಸರಕಾರವನ್ನು ಅಸಮರ್ಥ ಎಂದು ರಾಜಾರೋಷವಾಗಿ ಸಾರಿದೆ. ಇದು ಸರಕಾರಕ್ಕೆ ಅವಮಾನ. ಮೃತ ಇದ್ರೀಸ್ ಕುಟುಂಬಕ್ಕೆ ಪರಿಹಾರವನ್ನು ನೀಡುವ ಮೂಲಕ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಕಾನೂನು ಕ್ರಮ ಜರುಗಿಸುವ ಮೂಲಕ ತಾನು ನ್ಯಾಯದ ಜೊತೆಗಿದ್ದೇನೆ ಎಂದು ರಾಜ್ಯ ಸರಕಾರ ಘೋಷಿಸಬೇಕು. ಬೊಮ್ಮಾಯಿಯವರಿಗೆ ಕಡೆಯ ಅವಕಾಶ ಇದು.
No comments:
Post a Comment