ಒಂದುಕಡೆ, ಸ್ವಾಮೀಜಿಗಳು ಮತ್ತು ಮಠಗಳ ಮೇಲೆ ಅಪಾರ ಭಯ-ಭಕ್ತಿಯನ್ನು ಪ್ರದರ್ಶಿಸುವುದು ಮತ್ತು ಇನ್ನೊಂದು ಕಡೆ, ಮದ್ಯವನ್ನು ಯಥೇಚ್ಛವಾಗಿ ಮಾರಾಟ ಮಾಡುವುದು- ಇವೆರಡೂ ಜೊತೆಜೊತೆಯಾಗಿ ಸಾಗುವುದೆಂದರೆ ಏನರ್ಥ? ಇದು ಕೊಡುವ ಸಂದೇಶವೇನು? ಈವರೆಗೆ 21 ವರ್ಷದೊಳಗಿನ ಯಾರೇ ಆಗಲಿ ಮದ್ಯ ಖರೀದಿಗೆ ನಿರ್ಬಂಧವಿತ್ತು. ಇದೀಗ ರಾಜ್ಯ ಸರ್ಕಾರ ಈ ನಿರ್ಬಂಧವನ್ನು 18 ವರ್ಷಕ್ಕೆ ಇಳಿಸಿದೆ. ಇನ್ನು ಮುಂದೆ 18ವರ್ಷ ತುಂಬಿದವರು ಮದ್ಯ ಖರೀದಿಸಬಹುದು. ಮಾತೆತ್ತಿದರೆ ಧರ್ಮ, ಕರ್ಮ, ವೇದ, ಉಪನಿಷತ್, ಸ್ವಾಮೀಜಿಗಳು, ಮಠಗಳು, ಮೌಲ್ಯಗಳು... ಎಂದೆಲ್ಲ ಪಾಠ ಮಾಡುವ ಮತ್ತು ಭಕ್ತಿ ಪ್ರದರ್ಶಿಸುವ ಸರ್ಕಾರವೊಂದು ಜನರಿಗೆ ಮದ್ಯವನ್ನು ಹಂಚುವುದಕ್ಕೆ ತುದಿಗಾಲಲ್ಲಿ ನಿಂತಿರುವುದೇಕೆ? ಅಷ್ಟಕ್ಕೂ, ಯಾವ ಮಠಗಳೂ ಇಲ್ಲವೇ ಸ್ವಾಮೀಜಿಗಳೂ ಮದ್ಯದ ಪರ ಮಾತಾಡಿಲ್ಲ. ರ‍್ಯಾಲಿ ನಡೆಸಿಲ್ಲ. 21 ವಯಸ್ಸನ್ನು 18ಕ್ಕೆ ಇಳಿಸಿ ಎಂದು ಒತ್ತಾಯಿಸಿಲ್ಲ. ಆದರೆ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಹಲವು ಸ್ವಾಮೀಜಿಗಳು ಕರೆ ಕೊಟ್ಟಿದ್ದಿದೆ. ಚಿತ್ರದುರ್ಗಾದಿಂದ ಬೆಂಗಳೂರಿನವರೆಗೆ ಈ ಹಿಂದೆ ಮಹಿಳೆಯರು ಕಾಲ್ನಡಿಗೆಯಲ್ಲಿ ತೆರಳಿ ಮದ್ಯಪಾನ ನಿಷೇಧಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಿದೆ. ಪತಿಯ ಕುಡಿತದಿಂದ ತಾವನುಭವಿಸುತ್ತಾ ಬಂದಿರುವ ಸಂಕಟಗಳನ್ನು ಈ ಹೋರಾಟಗಾರರು ಮಾಧ್ಯಮದ ಮುಂದೆ ಹಂಚಿಕೊಂಡೂ ಇದ್ದಾರೆ. ಇಷ್ಟಿದ್ದೂ, ಸರ್ಕಾರ ವಯಸ್ಸಿನ ಮಿತಿಯನ್ನು ಇಳಿಸುವ ನಿರ್ಧಾರ ಕೈಗೊಂಡಿರುವುದು ಏನನ್ನು ಸೂಚಿಸುತ್ತದೆ? ಮಠಾಧೀಶರಿಗೆ ಗೌರವ ಸಲ್ಲಿಸುವ ಯಾವುದೇ ಸರ್ಕಾರ ಇಷ್ಟು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವೇ? ಹಾಗಂತ,
ಪ್ರಶ್ನಿಸಬೇಕಾದುದು ಸರಕಾರವೊಂದನ್ನೇ ಅಲ್ಲ. ಇತ್ತೀಚೆಗೆ ಮೌಲ್ಯ ಶಿಕ್ಷಣದ ವಿಷಯದಲ್ಲಿ ಮಠಾಧೀಶರನ್ನೆಲ್ಲಾ ಸೇರಿಸಿ ಸರ್ಕಾರ ಅಭಿ ಪ್ರಾಯವನ್ನು ಕೇಳಿತ್ತು. ಅದಕ್ಕಿಂತ ಮೊದಲು ಎರಡ್ಮೂರು ವರ್ಷಗಳ ಹಿಂದೆ ಲಿಂಗಾಯಿತ ಸ್ವಾಮೀಜಿಗಳೆಲ್ಲ ಒಂದೆಡೆ ಸೇರಿ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿದ್ದರು. ಆ ಒತ್ತಡದಿಂದಾಗಿಯೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಎಂಬುದು ಬಹಿರಂಗ ರಹಸ್ಯ. ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟ ನಡೆ ದಿರುವುದು ಮತ್ತು ಸರ್ಕಾರ ಅದಕ್ಕೆ ಸ್ಪಂದಿಸಿರುವುದು ಕೂಡ ನಡೆದಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಇದ್ದೇಶಕ್ಕಾಗಿಯೇ 2ಬಿ ಮೀಸಲಾತಿಯನ್ನು ಒಡೆದು ವಿಶೇಷ ವ್ಯವಸ್ಥೆ ಮಾಡುವುದಕ್ಕೂ ಸರ್ಕಾರ ಮುಂದಾದ ಅಭೂತಪೂರ್ವ ಘಟನೆಯೂ ನಡೆದಿದೆ. ಅಲ್ಲದೇ, ಮಾಂಸವನ್ನು ಎಲ್ಲರೆದುರು ತೂಗು ಹಾಕಬಾರದು ಎಂದು ಪೇಜಾವರಶ್ರೀಗಳು ಹಂಚಿಕೊಂಡ ಅಭಿಪ್ರಾಯದ ಕುರಿತಾಗಲಿ, ಆಹಾರವನ್ನು ಸಾತ್ವಿಕ ಮತ್ತು ತಾಮಸ ಎಂದು ವರ್ಗೀಕರಿಸಿ, ತಾಮಸ ಆಹಾರದಿಂದ ಹಿಂಸಾ ಪ್ರಚೋದ ನೆಯಾಗುತ್ತದೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವುದರ ಬಗ್ಗೆಯಾಗಲಿ, ಸರ್ಕಾರದ ಯಾವುದೇ ವ್ಯಕ್ತಿ ಈವರೆಗೂ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಹಾಗಂತ,
ಈ ಸರ್ಕಾರದಲ್ಲಿ ಸಾತ್ವಿಕ ಅಥವಾ ಸಸ್ಯಾಹಾರ ಸೇವಿಸುವವರು ಮಾತ್ರ ಇದ್ದಾರೆ ಎಂದಲ್ಲ. ಆದರೂ ಸ್ವಾಮೀಜಿಯವರಿಗೆ ಗೌರವ ಕೊಟ್ಟು ಅವರೆಲ್ಲ ಸುಮ್ಮನಾಗಿದ್ದಾರೆ. ಸ್ವಾಮೀಜಿಗಳ ಬಗ್ಗೆ ಈ ಸರ್ಕಾರಕ್ಕೆ ಇಷ್ಟು ಗೌರವ ಇದ್ದಾಗ್ಯೂ ಮತ್ತು ತಮ್ಮ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿರುವ ಚರಿತ್ರೆ ಗೊತ್ತಿದ್ದೂ ಯಾಕೆ ಸರ್ಕಾರದ ಮದ್ಯ ನೀತಿಯ ವಿಷಯದಲ್ಲಿ ಈ ಸ್ವಾಮೀಜಿಗಳು ಏನನ್ನೂ ಮಾತಾಡುತ್ತಿಲ್ಲ? ಮೀಸಲಾತಿಗೆ ಒತ್ತಡ ಹೇರಿದಂತೆ ಅಥವಾ ಮುಖ್ಯಮಂತ್ರಿ ತಮ್ಮವರೇ ಆಗಬೇಕೆಂದು ಒತ್ತಡ ಹೇರಿದಂತೆ ಸಂಪೂರ್ಣ ಮದ್ಯ ನಿಷೇಧ ಜಾರಿಯಾಗಲಿ ಎಂದು ಯಾಕೆ ಸಾಮೂಹಿಕವಾಗಿ ದನಿಯೆತ್ತುವುದಿಲ್ಲ? ಸ್ವಾಮೀಜಿಗಳೆಲ್ಲ ಜೊತೆಗೂಡಿ ಪಾದಯಾತ್ರೆ ನಡೆಸಿದರೆ ಅಥವಾ ಒತ್ತಡವನ್ನು ಹೇರಿದರೆ, ಈ ಸರ್ಕಾರ ಕೇಳಬಾರದೇನು? ಮತದಾರರಿಗಿಂತ ಮಠಾಧೀಶರನ್ನೇ ಹೆಚ್ಚು ನಂಬಿರುವ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಇವರೆಲ್ಲ ಹಿಂದೇಟು ಹಾಕುತ್ತಿರುವುದೇಕೆ? ಒಂದುಕಡೆ, ಧರ್ಮವನ್ನು ಪ್ರತಿಪಾದಿಸುವುದು ಮತ್ತು ಇನ್ನೊಂದು ಕಡೆ ಅಧರ್ಮದ ಬಗ್ಗೆ ಮೌನವಿರುವುದು ಯಾವ ಸಂದೇಶವನ್ನು ನೀಡಬಲ್ಲದು?
ಗಾಂಜಾ-ಮದ್ಯ-ದ್ವೇಷ- ಇವು ಮೂರೂ ಈ ರಾಜ್ಯದ ನೆಮ್ಮದಿಯನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ದ.ಕ. ಜಿಲ್ಲೆಯಲ್ಲಿ ಕಳೆದವಾರ ಸುಮಾರು 15 ಮಂದಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ಗಾಂಜಾ ಬಳಕೆ-ಮಾರಾಟ ಪ್ರಯತ್ನಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ವೈದ್ಯರೇ ಹೀಗಾದರೆ ಇನ್ನು ಇವರ ಕೈಯಲ್ಲಿ ರೋಗಿಗಳ ಪರಿಸ್ಥಿತಿ ಏನು ಎಂದು ಜನಸಾಮಾನ್ಯರು ಆತಂಕಪಡುವಂತಾಗಿದೆ. ಇದರ ಜೊತೆಗೇ ಮದ್ಯವೂ ಅಗ್ಗವಾದರೆ ಅದು ಇನ್ನೆಂಥ ಪರಿಸ್ಥಿತಿಗೆ ಕಾರಣವಾಗಬಹುದು?
ಯಾವುದೇ ಹತ್ಯೆ, ಅತ್ಯಾಚಾರಗಳ ಹಿಂದೆ ಮಾದಕ ಪದಾರ್ಥ ಮತ್ತು ಮದ್ಯದ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಿರ್ಭಯಾ ಪ್ರಕರಣದಿಂದ ಹಿಡಿದು ಇವತ್ತಿನ ವರೆಗಿನ ಯಾವುದೇ ಅತ್ಯಾಚಾರ ಪ್ರಕರಣವನ್ನು ಪರಿಶೀಲಿಸಿದರೂ ಇದು ಸ್ಪಷ್ಟವಾಗುತ್ತದೆ. ಮೈಸೂರಿನ ಪ್ರಕರಣದಲ್ಲೂ ಮದ್ಯವೇ ಖಳನಾಯಕ. ಹೈದರಾಬಾದ್ ಪ್ರಕರಣದಲ್ಲೂ ಮದ್ಯವೇ ಮುಖ್ಯ ಆರೋಪಿ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವ ಹೈಪ್ರೊಫೈಲ್ ಅತ್ಯಾಚಾರ ಪ್ರಕರಣವಾಗಲಿ, ಸ್ಥಳೀಯವಾಗಿ ಸುದ್ದಿಗೀಡಾಗಿ ಸತ್ತು ಹೋಗುವ ಅತ್ಯಾಚಾರ ಪ್ರಕರಣಗಳಲ್ಲಾಗಲಿ ಮದ್ಯಕ್ಕೊಂದು ಪಾತ್ರ ಇದೇ ಇರುತ್ತದೆ. ಇದರ ಜೊತೆಗೇ ಕೋಮುಗಲಭೆ ಮತ್ತು ಧರ್ಮದ್ವೇಷದ ಹತ್ಯೆಗಳಲ್ಲೂ ಮದ್ಯಕ್ಕೆ ಬಹುಮುಖ್ಯ ಪಾತ್ರವಿರುತ್ತದೆ. ಇತ್ತೀಚೆಗೆ ಸುರತ್ಕಲ್ ಬಳಿ ನಡೆದ ಜಲೀಲ್ ಹತ್ಯಾ ಪ್ರಕರಣದಲ್ಲೂ ಈ ಮದ್ಯಕ್ಕೆ ಸ್ಥಾನವಿತ್ತು.
ಓರ್ವ ವ್ಯಕ್ತಿಯ ಒಳಗಿನ ಅಪರಾಧಿ ಮನಸ್ಥಿತಿಯನ್ನು ಪ್ರಚೋದಿಸಿ ಧೈರ್ಯ ತುಂಬುವ ಕೆಲಸವನ್ನು ಮಾದಕ ಪದಾರ್ಥಗಳು ಮಾಡುತ್ತವೆ ಎಂಬುದು ಸಂಶೋಧನೆಗಳಿಂದಲೂ ಪ್ರಾಯೋಗಿಕವಾಗಿಯೂ ದೃಢಪಟ್ಟಿದೆ. ಜನರಲ್ಲಿ ಆಕ್ರೋಶ, ಸಿಟ್ಟು, ಪ್ರತೀಕಾರ ಮನೋಭಾವ, ಕ್ರಿಮಿನಲ್ ಕೃತ್ಯದ ಬಯಕೆ ಸಂದರ್ಭಾನುಸಾರ ಹುಟ್ಟಿಕೊಳ್ಳುವುದಕ್ಕೆ ಅವಕಾಶ ಇದೆ. ತನಗೆ ಅವಮಾನವೋ ಅನ್ಯಾಯವೋ ವಂಚ ನೆಯೋ ಇನ್ನೇನೋ ಆದಾಗ ವಿವಿಧ ಭಾವಗಳು ವ್ಯಕ್ತಿಯೊಳಗೆ ಉಂಟಾಗುವುದು ಅಸಹಜ ಅಲ್ಲ. ಆದರೆ, ಈ ಭಾವಗಳು ಪ್ರಾಯೋಗಿಕಗೊಳ್ಳದಂತೆ ಬುದ್ಧಿಯು ತಡೆಯುತ್ತದೆ. ಪ್ರಾಯೋಗಿಕಗೊಂಡರೆ ಆಗಬಹುದಾದ ಅಪಾಯಗಳು ಮತ್ತು ಕಾನೂನಿನ ಕುರಿತ ಪ್ರಜ್ಞೆಯನ್ನು ಬುದ್ಧಿಯು ಮೂಡಿಸುತ್ತದೆ. ಆದ್ದರಿಂದ ಆಕ್ರೋಶಿತ ವ್ಯಕ್ತಿ ಆ ಬಳಿಕ ತಣ್ಣಗಾಗುತ್ತಾನೆ/ಳೆ. ತನಗಾದ ಅನ್ಯಾಯವನ್ನು ಕಾನೂನು ಪ್ರಕಾರ ಪ್ರಶ್ನಿಸುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಆದರೆ, ಅಮಲು ಪದಾರ್ಥ ಮತ್ತು ಮದ್ಯಪಾನ ಈ ಪ್ರಜ್ಞೆಯನ್ನೇ ಸಾಯಿಸಿ ಬಿಡುತ್ತದೆ. ತನ್ನಲ್ಲಿ ಉಂಟಾಗುವ ಆಕ್ರೋಶಕ್ಕೆ ಉಪ್ಪು-ಖಾರ ಸೇರಿಸಿ ಅದು ಪ್ರಚೋದಿಸುತ್ತದೆ. ಭಂಡ ಧೈರ್ಯವನ್ನೂ ತುಂಬುತ್ತದೆ. ಕಾ ನೂನನ್ನು ಕೈಗೆತ್ತಿಕೊಳ್ಳುವುದರಿಂದ ಆಗಬಹುದಾದ ಪರಿಣಾಮಗಳ ಕುರಿತೂ ಅದು ಚಿಂತಿಸದಂತೆ ಮಾಡುತ್ತದೆ. ಮದ್ಯ ಮತ್ತು ಮಾದಕ ವಸ್ತುವನ್ನು ಸೇವಿಸಿದ ವ್ಯಕ್ತಿ ಎಂಥಲ್ಲಾ ಅನಾಹುತಕಾರಿ ಕೃತ್ಯ ಎಸಗುವುದಕ್ಕೂ ಮುಂದಾಗುತ್ತಾನೆ/ಳೆ. ಅವರು ಅತ್ಯಾಚಾರಕ್ಕೂ ಹೇಸುವು ದಿಲ್ಲ. ಹತ್ಯೆಗೂ ಹೇಸುವುದಿಲ್ಲ. ಹಾಗಂತ,
ಇವೆಲ್ಲ ಸರ್ಕಾರಕ್ಕಾಗಲಿ, ಧಾರ್ಮಿಕ ನೇತಾರರಿಗಾಗಲಿ ಗೊತ್ತಿಲ್ಲ ಎಂದಲ್ಲ. ಗೊತ್ತಿದೆ. ಆದರೆ ಸರ್ಕಾರಕ್ಕೆ ಈ ಮದ್ಯ ಮಾರಾಟದಿಂದ ಎರಡ್ಮೂರು ಲಾಭ ಇದೆ. ಒಂದು, ಖಜಾನೆ ತುಂಬುತ್ತದೆ. ಎರಡು, ವೈಯಕ್ತಿಕವಾಗಿ ಜನಪ್ರತಿನಿಧಿಗಳಿಗೆ ಮಾಮೂಲಿ ಸಂಗ್ರಹಿಸುವುದಕ್ಕೆ ಬೇಕಾಗುತ್ತದೆ. ಮೂರು, ಚುನಾವಣೆಯನ್ನು ಗೆಲ್ಲುವುದಕ್ಕೂ ಮದ್ಯ ಬೇಕಾಗುತ್ತದೆ. ಆದ್ದರಿಂದ, ಸರ್ಕಾರವೊಂದು ಮದ್ಯಪಾನ ನಿಷೇಧಕ್ಕೆ ಮುಂದಾಗುವುದು ಸುಲಭ ಅಲ್ಲ. ತಮ್ಮ ಆದಾಯ ಮೂಲವನ್ನೇ ಬಿಟ್ಟುಕೊಡಲು ಯಾವ ಸರ್ಕಾರವೂ ಒಪ್ಪಿಕೊಳ್ಳುವುದು ಕಷ್ಟ. ಆದರೆ,
ಧಾರ್ಮಿಕ ಗುರುಗಳು ಹಾಗಲ್ಲವಲ್ಲ. ಅವರು ಮದ್ಯ-ಮಾದಕ ವಸ್ತುಗಳನ್ನು ಕೆಡುಕುಗಳೆಂದು ಪರಿಗಣಿಸುತ್ತಾರೆ. ಮದ್ಯ ಸಾಮಾಜಿಕವಾಗಿ ಬೀರುತ್ತಿರುವ ಪರಿಣಾಮಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ. ಅಲ್ಲದೇ, ಮಠಾಧೀಶರಿಗಂತೂ ಸರ್ಕಾರದ ನಿರ್ಧಾರಗಳನ್ನೇ ಬದಲಿಸುವಷ್ಟು ಶಕ್ತಿ ಈ ಕರ್ನಾಟಕದಲ್ಲಿದೆ. ಹೀಗಿದ್ದೂ, ಸರ್ಕಾರದ ಮದ್ಯ ನೀತಿಯ ಬಗ್ಗೆ ಒಂದೇ ಒಂದು ಮಾತನ್ನೂ ಆಡದಿರುವುದನ್ನು ಸಾರ್ವಜನಿಕರು ಏನೆಂದು ತಿಳಿದುಕೊಳ್ಳಬೇಕು? ಸರ್ಕಾರದ ಉಳಿದೆಲ್ಲ ನೀತಿಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ವ್ಯಕ್ತಪಡಿಸುವ ಸ್ವಾಮೀಜಿಗಳು ಸಂಪೂರ್ಣ ಪಾನ ನಿಷೇಧದ ವಿಷಯದಲ್ಲಿ ಮೌನಿಗಳಾಗುತ್ತಿರುವುದು ಏಕೆ? ಕನಿಷ್ಠ 21ರಿಂದ 18 ವರ್ಷಕ್ಕೆ ವಯಸ್ಸಿನ ಮಿತಿಯನ್ನು ಇಳಿಸಿರುವುದರ ಕುರಿತಾದರೂ ವಿರೋಧ ವ್ಯಕ್ತ ಪಡಿಸಬಹುದಲ್ಲವೇ? ಈ ಮೌನದ ಅರ್ಥವೇನು?
No comments:
Post a Comment