Tuesday, 20 June 2023

20 ಕೋಟಿ ಜನಸಂಖ್ಯೆಯನ್ನು ನಿರ್ಲಕ್ಷಿಸಬೇಡಿ

 

23-5- 2023

ರಾಜ್ಯ ಚುನಾವಣಾ ಫಲಿತಾಂಶದಿಂದ ಬಿಜೆಪಿ ಕಲಿತಿರುವ ಪಾಠವೇನು ಎಂಬುದಕ್ಕೆ ರಾಷ್ಟ್ರೀಯ ಮುಸ್ಲಿಮ್ ಮಂಚ್(MRM)ನ ಹೊಸ ನಡೆಯಲ್ಲಿ ಉತ್ತರವಿದೆ.

MRMನ ಮುಖ್ಯ ಉದ್ದೇಶವೇ ಮುಸ್ಲಿಮರನ್ನು ಬಿಜೆಪಿಯತ್ತ ಒಲಿಸುವುದು ಅಥವಾ ಮುಸ್ಲಿಮರಲ್ಲಿ ಸಂಘಪರಿವಾರದ ಬಗ್ಗೆ ಸದ್ಭಾವನೆಯನ್ನು ಮೂಡಿಸುವುದು. ರಾಜ್ಯ ಚುನಾವಣಾ ಫಲಿತಾಂಶದ ಮುನ್ನಾ ದಿನದವರೆಗೂ ಮೌನವಾಗಿದ್ದ ರಾಷ್ಟ್ರೀಯ ಮುಸ್ಲಿಮ್ ಮಂಚ್ ಇದೀಗ ಮೌನ ಮುರಿದಿದೆ. ರಾಜ್ಯದಲ್ಲಿ ಬಿಜೆಪಿಗೆ ಮುಖಭಂಗವಾಗಿರುವುದು ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳೆಲ್ಲ ಒಟ್ಟು ಸೇರಿ ಬಿಜೆಪಿಯನ್ನು ಎದುರಿಸುವ ಸೂಚನೆಗಳು ಕಾಣಿಸುತ್ತಿರುವುದರ ಬೆನ್ನಿಗೇ ‘ಏಕ ರಾಷ್ಟ್ರ, ಏಕ ಧ್ವಜ, ಏಕ ರಾಷ್ಟ್ರೀಯ ಗೀತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮುಸ್ಲಿಮರ ನಡುವೆ ಅಭಿಯಾನ ನಡೆಸಲು ಅದು ಸಿದ್ಧವಾಗಿದೆ. ‘ನಿಜವಾದ ಮುಸ್ಲಿಮ್ ಒಳ್ಳೆಯ ನಾಗರಿಕನಾಗಿರುತ್ತಾನೆ’ ಎಂಬುದು ಈ ಅಭಿಯಾನದ ಸಂದೇಶ. ಜೂನ್ 8ರಿಂದ 11ರ ವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ MRM ಸ್ವಯಂಸೇವಕರು ಮತ್ತು ಕಾರ್ಯಕರ್ತರಿಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ಆರೆಸ್ಸೆಸ್ ಕಾರ್ಯಕಾರೀ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್ ಇದರಲ್ಲಿ ಭಾಗವಹಿಸಲಿದ್ದಾರೆ. 2021ರ ಬಳಿಕ ಈವರೆಗೆ MRM ಸದಸ್ಯರಿಗೆ ತರಬೇತಿ ಶಿಬಿರವನ್ನೇ ಏರ್ಪಡಿಸಿಲ್ಲ ಎಂಬುದೂ ಮುಖ್ಯ. ನಿಜವಾಗಿ,

ಈ ಚುನಾವಣೆಯಲ್ಲಿ ಸ್ಪಷ್ಟವಾದ ಅಂಶವೇನೆಂದರೆ, ಬಿಜೆಪಿಯ ಸೋಲು ಮತ್ತು ಗೆಲುವಿನಲ್ಲಿ ಮುಸ್ಲಿಮರ ಪಾತ್ರ ಅತಿಪ್ರಧಾನವಾದುದು ಎಂಬುದು. ಸೋತ ಬಿಜೆಪಿಯ ಹಲವು ಪ್ರಮುಖ ನಾಯಕರು ಈ ಬಾರಿ ಮುಸ್ಲಿಮರ ವಿರುದ್ಧ ಬಹಿರಂಗ ಅಸಮಾಧಾನ ಸೂಚಿಸುತ್ತಿರುವುದೂ ಈ ಲೆಕ್ಕಾಚಾರವನ್ನು ಇನ್ನಷ್ಟು ನಿಚ್ಚಳಗೊಳಿಸುತ್ತದೆ.

ಬಿಜೆಪಿ ನಾಯಕರಾದ ಶ್ರೀರಾಮುಲು, ಕೊಡಗಿನ ಭೋಪಯ್ಯ, ಹಾಸನದ ಪ್ರೀತಂ ಗೌಡ, ಸಿ.ಟಿ. ರವಿ ಸಹಿತ ಬಿಜೆಪಿಯ ಹಲವು ಮುಖಂಡರ ಗೆಲುವಿನಲ್ಲಿ ಈವರೆಗೆ ಮುಸ್ಲಿಮರು ಅತಿ ಮುಖ್ಯ ಪಾತ್ರ ನಿಭಾಯಿಸುತ್ತಿದ್ದರು. ನಿರ್ದಿಷ್ಟ ಪ್ರಮಾಣದ ಮುಸ್ಲಿಮ್ ಮತಗಳು ತಮ್ಮ ಖಾತೆಗೆ ಬೀಳುತ್ತಿದೆ ಎಂಬುದು ಈ ಎಲ್ಲರಿಗೂ ಗೊತ್ತಿತ್ತು. ಆದರೆ ಬಿಜೆಪಿ ಪ್ರತಿಯಾಗಿ ಮುಸ್ಲಿಮರಿಗೆ ನೀಡಿದ್ದಾದರೂ ಏನು? ಅವಮಾನ, ಹಿಂಸೆ, ಕಿರುಕುಳ ಮತ್ತು ದಬ್ಬಾಳಿಕೆ. ಬೊಮ್ಮಾಯಿ ಸರಕಾರವಂತೂ ತನ್ನ ಬಂದೂಕನ್ನು ಮುಸ್ಲಿಮರತ್ತಲೇ ತಿರುಗಿಸಿ ಇಟ್ಟಿತ್ತು. ಒಂದರ ಮೇಲೆ ಒಂದು ಮುಸ್ಲಿಮ್ ವಿರೋಧಿ ಧೋರಣೆಗಳನ್ನು ಪ್ರತ್ಯಕ್ಷವೋ ಪರೋಕ್ಷವೋ ಅಳವಡಿಸುತ್ತಲೇ ಬಂತು. ತಮ್ಮ ಪಕ್ಷಕ್ಕೆ ಮುಸ್ಲಿಮರು ಮತ ಚಲಾಯಿಸುತ್ತಾರೆ ಎಂದು ಗೊತ್ತಿದ್ದೂ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ ಮತ್ತು ಕೊನೆಗೆ ಮೀಸಲಾತಿ ರದ್ಧತಿಗೆ ಮುಂದಾಗುವುದೆಂದರೆ ಅರ್ಥವೇನು? ನಿಮ್ಮ ಮತಗಳ ಅಗತ್ಯವಿಲ್ಲ ಎಂದಲ್ಲವೇ?

ಮುಸ್ಲಿಮರಿಗೆ ಹೋಲಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಅತ್ಯಂತ ಬಲಿಷ್ಠ ಮತ್ತು ಪ್ರಭಾವಿ. ಈ ಎರಡೂ ಸಮುದಾಯಗಳು ಈ ರಾಜ್ಯಕ್ಕೆ ಒಂದಕ್ಕಿಂತ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟಿವೆ. ಅತ್ಯಂತ ಪ್ರಮುಖ ಸಚಿವ ಪದವಿಗಳನ್ನು ಪಡೆದಿದೆ. ಲಿಂಗಾಯತ ಮತ್ತು ಒಕ್ಕಲಿಗ ಮಠಾಧೀಶರು ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಿಗಳು. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ರಂಥ ಪ್ರಭಾವಿ ಒಕ್ಕಲಿಗ ಮುಖಂಡರು ರಾಜ್ಯ ರಾಜಕಾರಣದಲ್ಲಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿಯಂಥ ಲಿಂಗಾಯತ ಪ್ರಮುಖರೂ ರಾಜ್ಯ ರಾಜಕಾರಣದ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಇದ್ದೂ ಅತಿ ದುರ್ಬಲ ಮತ್ತು ರಾಜಕೀಯವಾಗಿ ಯಾವ ಪ್ರಭಾವವೂ ಇಲ್ಲದ ಮುಸ್ಲಿಮ್ ಸಮುದಾಯದ 4% ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಬಿಜೆಪಿ ಸರಕಾರ ಹಂಚಲು ಕಾರಣವೇನು? ಈ ಬಾರಿಯ ವಿಧಾನಸಭೆಯಲ್ಲಿ ಮುಸ್ಲಿಮ್ ಶಾಸಕರ ಸಂಖ್ಯೆ ಬರೇ 9. ಅಲ್ಲದೇ ಇವರಾರೂ ಉಪಮುಖ್ಯಮಂತ್ರಿಯಾಗುವುದು ಬಿಡಿ, ಪ್ರಭಾವಿ ಖಾತೆಗಳನ್ನು ಪಡೆಯದಷ್ಟೂ ಹಿಂದಣ ಬೆಂಚಿನವರು. ಅದೇವೇಳೆ,

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸುಮಾರು 90ರಷ್ಟು ಶಾಸಕರು ಈಗಿನ ವಿಧಾನಸಭೆಯಲ್ಲಿದ್ದಾರೆ. ಬೊಮ್ಮಾಯಿ ಸರಕಾರ ಇದ್ದಾಗಲೂ ಈ ಎರಡು ಸಮುದಾಯಗಳೇ ವಿಧಾನಸಭೆಯಲ್ಲಿ ಪ್ರಭಾವಿಯಾಗಿದ್ದುವು. ಬಹುದೊಡ್ಡ ಶಾಸಕರ ಸಂಖ್ಯೆಯೂ ಇತ್ತು. ಇವೆಲ್ಲ ಬೊಮ್ಮಾಯಿ ಸರಕಾರಕ್ಕೆ ಗೊತ್ತಿಲ್ಲ ಎಂದಲ್ಲ. ಆದರೂ ಮುಸ್ಲಿಮರಲ್ಲಿ ಒಂದು ಮಾತನ್ನೂ ಕೇಳದೆ, ಅನಾಮತ್ತಾಗಿ ಮೀಸಲಾತಿಯನ್ನು ಕಿತ್ತರಲ್ಲ ಮತ್ತು ಅತ್ಯಂತ ಬಲಾಢ್ಯ ಸಮುದಾಯಗಳಿಗೆ ಅವನ್ನು ಹಂಚಿದರಲ್ಲ, ಅವರ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಈ ಬಗ್ಗೆ ಪ್ರಶ್ನಿಸಿದ್ದಾರಾ? ಮುಸ್ಲಿಮರು ತಮಗೆ ಮತ ಹಾಕಲಿಲ್ಲ ಎಂದು ಅಸಮಾಧಾನ ಸೂಚಿಸುತ್ತಿರುವವರು ಯಾಕೆ ಇಂಥ ಅನ್ಯಾಯದ ಸಂದರ್ಭದಲ್ಲಿ ಧ್ವನಿ ಎತ್ತಲಿಲ್ಲ? ಈ ನಿರ್ಧಾರದಿಂದ ತಮ್ಮ ಮತಬ್ಯಾಂಕ್ ಗಟ್ಟಿಯಾಗುತ್ತದೆ ಎಂಬ ಸ್ವರಕ್ಷಣಾ ತಂತ್ರವೇ ಈ ಮೌನಕ್ಕೆ ಕಾರಣವಾಗಿತ್ತಲ್ಲವೇ? ಅಂದಹಾಗೆ,

ಮುಸ್ಲಿಮರಿಗೆ ಸಂಬಂಧಿಸಿದಂತೆ ಬೊಮ್ಮಾಯಿ ಸರಕಾರದ ಯಾವ ನಿರ್ಧಾರವೂ ಪಕ್ಕಾ ಲೆಕ್ಕಾಚಾರದಿಂದಲೇ ಕೂಡಿತ್ತು. ಚುನಾವಣಾ ರಾಜಕೀಯವನ್ನು ಲೆಕ್ಕ ಹಾಕಿಕೊಂಡೇ ಅದು ಒಂದೊಂದೇ ಮುಸ್ಲಿಮ್ ವಿರೋಧಿ ದಾಳಗಳನ್ನು ಉರುಳಿಸತೊಡಗಿತ್ತು. ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸುವ ಮೂಲಕ ಹಿಂದೂ ಮತಬ್ಯಾಂಕನ್ನು ಧ್ರುವೀಕರಣಗೊಳಿಸುವುದು ಅವರ ಉದ್ದೇಶವಾಗಿತ್ತು. ಅದನ್ನು ಅವರು ಎಷ್ಟು ನಿರ್ಲಜ್ಜವಾಗಿ ಮಾಡಿದರೆಂದರೆ, ಪ್ರವೀಣ್ ನೆಟ್ಟಾರು ಮನೆಗೆ ಹೋದ ಮುಖ್ಯಮಂತ್ರಿಗಳು ಅಲ್ಲೇ ಪಕ್ಕದಲ್ಲಿದ್ದ ಮಸೂದ್ ಮನೆಗೆ ಭೇಟಿ ಕೊಡಲಿಲ್ಲ. ಪ್ರವೀಣ್ ನೆಟ್ಟಾರಿನಂಥದ್ದೇ ತಾಯಿ ಆ ಮನೆಯಲ್ಲೂ ಇದ್ದರು. ಮನೆಯ ಏಕೈಕ ಅನ್ನದ ಬಟ್ಟಲಾಗಿದ್ದ ಹರೆಯದ ಮಗನನ್ನು ಕಳಕೊಂಡು ಆ ತಾಯಿ ಧರಾಶಾಹಿಯಾಗಿದ್ದರು. ನೆಟ್ಟಾರು ಮನೆಗೆ ಬಂದ ಮುಖ್ಯಮಂತ್ರಿಗಳು ತನ್ನ ಮನೆಗೂ ಬರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಮುಖ್ಯಮಂತ್ರಿಗಳ ಭೇಟಿ ಮತ್ತು ಪರಿಹಾರ ಘೋಷಣೆ ರಾಜಕೀಯ ಉದ್ದೇಶವನ್ನು ಹೊಂದಿತ್ತೇ ಹೊರತು ಸಾಂತ್ವನವಲ್ಲ. ಅವರು ನೆಟ್ಟಾರು ಕುಟುಂಬಕ್ಕೆ 25 ಲಕ್ಷ ಪರಿಹಾರ, ಅವರ ಪತ್ನಿಗೆ ಉದ್ಯೋಗವನ್ನು ಘೋಷಿಸಿದರಲ್ಲದೇ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸಾಂತ್ವನವನ್ನಾಗಲಿ, ಪರಿಹಾರವನ್ನಾಗಲಿ, ಉದ್ಯೋಗವನ್ನಾಗಲಿ ಕೊನೆವರೆಗೂ ಘೋಷಿಸಲೇ ಇಲ್ಲ. ಅಲ್ಲದೇ, ಮುಖ್ಯಮಂತ್ರಿಗಳ ಈ ವರ್ತನೆಯನ್ನು ಅವರ ಸಂಪುಟದ ಸಚಿವರಾಗಲಿ, ಶಾಸಕರಾಗಲಿ ಅಥವಾ ಇವತ್ತು ಮುಸ್ಲಿಮರು ತಮಗೆ ಮತ ಹಾಕಿಲ್ಲ ಎಂದು ಅಸಮಾಧಾನ ಸೂಚಿಸುತ್ತಿರುವವರಾಗಲಿ ಯಾರೂ ವಿರೋಧಿಸಲೇ ಇಲ್ಲ.

ಈ ರಾಜ್ಯದಲ್ಲಿ ಮುಸ್ಲಿಮರು ಸುಮಾರು ಒಂದು ಕೋಟಿಯಷ್ಟಿದ್ದಾರೆ. ದೇಶದಲ್ಲಿ ಸುಮಾರು 20 ಕೋಟಿಯಷ್ಟಿದ್ದಾರೆ. ಇವೇನೂ ನಗಣ್ಯವಲ್ಲ. ಇಷ್ಟು ದೊಡ್ಡ ಸಂಖ್ಯೆಯನ್ನು ಸದಾ ಗೋಳು ಹೊಯ್ದುಕೊಂಡು ಚುನಾವಣೆಯನ್ನು ಗೆಲ್ಲಬಹುದು ಎಂಬ ಬಿಜೆಪಿ ಭಾವನೆಗೆ ಈ ಬಾರಿ ಬಲವಾದ ತಿರುಗೇಟು ಬಿದ್ದಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಮುಸ್ಲಿಮರು ಅತ್ಯಂತ ಯೋಜಿತವಾಗಿ ಮತ ಚಲಾಯಿಸಿದ್ದಾರೆ. ತಮ್ಮ ಹಕ್ಕುಗಳಿಗೆ ಬರೆ ಎಳೆಯುವುದನ್ನೇ ಆಡಳಿತ ನೀತಿಯಾಗಿಸಿಕೊಂಡಿರುವ ಬೊಮ್ಮಾಯಿ ಸರಕಾರಕ್ಕೆ ಮುಟ್ಟಿ ನೋಡುವ ಉತ್ತರವನ್ನು ನೀಡಿದ್ದಾರೆ. ಇತರ ಸಮುದಾಯಗಳ ಓಲೈಕೆಗಾಗಿ ಮುಸ್ಲಿಮರನ್ನು ನಿರ್ಲಕ್ಷಿಸುವುದು ರಾಜಕೀಯವಾಗಿ ಎಷ್ಟು ಅಪಾಯಕಾರಿ ಎಂಬುದನ್ನು ಸದ್ದಿಲ್ಲದೇ ಸಾರಿದ್ದಾರೆ. ಬಹುಶಃ ಬಿಜೆಪಿ ಪಾಲಿಗೆ ಮುಸ್ಲಿಮರ ಈ ಸಂದೇಶ ಬಲವಾಗಿ ನಾಟಿದೆ. ಮುಸ್ಲಿಮರನ್ನು ಖಳರಂತೆ ಸದಾ ಬಿಂಬಿಸುವುದರಿಂದ ತಿರುಗೇಟು ಬೀಳಬಹುದು ಎಂಬ ಜ್ಞಾನೋದಯವಾಗಿದೆ. ಆ ಕಾರಣದಿಂದ ಅದು ಈಗಿಂದೀಗಲೇ MRMನ್ನು ಕಣಕ್ಕಿಳಿಸಿದೆ. ಮುಸ್ಲಿಮ್ ಸಮುದಾಯದ ಮುನಿಸನ್ನು ಹೋಗಲಾಡಿಸಿ ರಾಷ್ಟ್ರೀಯತೆಯ ನೆಪದಲ್ಲಿ ಬಿಜೆಪಿಯತ್ತ ಸೆಳೆಯುವುದಕ್ಕೆ ಪಕ್ಕಾ ತಂತ್ರ ಹೆಣೆದಂತಿದೆ. ಮುಸ್ಲಿಮರು ಎಲ್ಲೆಲ್ಲಾ ನಿರ್ಣಾಯಕರಾಗಿರುತ್ತಾರೋ ಅಲ್ಲೆಲ್ಲಾ ಒಂದಕ್ಕಿಂತ ಹೆಚ್ಚು ಮುಸ್ಲಿಮ್ ಪಕ್ಷೇತರರನ್ನು ನಿಲ್ಲಿಸಿ ಮತ ವಿಭಜನೆಯಾಗುವಂತೆ ಮಾಡಿ ಗೆಲ್ಲುವುದು ಬಿಜೆಪಿ ಈ ವರೆಗೆ ಮಾಡಿಕೊಂಡು ಬಂದ ತಂತ್ರವಾಗಿತ್ತು. ಅಲ್ಲದೇ, ಇತರ ರಾಜಕೀಯ ಪಕ್ಷಗಳೂ ಇಂಥ ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ವಿಭಜನೆಯಾಗುವುದಕ್ಕೆ ಕಾರಣವಾಗುತ್ತಿತ್ತು. ಆದರೆ,

ಕರ್ನಾಟಕ ಚುನಾವಣೆ ಈ ಮತ ವಿಭಜನೆಗೆ ತಿರುಗೇಟು ಕೊಟ್ಟಿದೆ. ಮುಸ್ಲಿಮರು ಅತ್ಯಂತ ಲೆಕ್ಕಾಚಾರದೊಂದಿಗೆ ಮತ ವಿಭಜನೆಯಾಗದಂತೆ ನೋಡಿಕೊಂಡಿದ್ದಾರೆ. ಬಿಜೆಪಿಯ ಹೈಕಮಾಂಡನ್ನು ಬಹುಶಃ ಇದು ನಿದ್ದೆಗೆಡಿಸಿರಬೇಕು. ತಮ್ಮ ಬಹು ಯಶಸ್ವಿ ತಂತ್ರದ ಮರ್ಮವನ್ನು ಮುಸ್ಲಿಮರು ಅರಿತುಕೊಳ್ಳುತ್ತಿದ್ದಾರೆ ಎಂಬ ಆತಂಕ ಹೈಕಮಾಂಡ್‌ಗೆ ಎದುರಾಗಿರಬೇಕು. ಆದ್ದರಿಂದಲೇ ಅದು MRMಅನ್ನು ಕಣಕ್ಕಿಳಿಸಿರುವಂತಿದೆ. ನಿಜವಾಗಿ,

ಇದೊಂದು ಸಕಾರಾತ್ಮಕ ಬೆಳವಣಿಗೆ. ಚುನಾವಣಾ ರಾಜಕೀಯದಲ್ಲಿ ಮುಸ್ಲಿಮರೂ ನಿರ್ಣಾಯಕರು ಎಂದು ಬಿಜೆಪಿ ಒಪ್ಪಿಕೊಳ್ಳುವುದಾದರೆ ಅದು ಸ್ವಾಗತಾರ್ಹ. ಆದರೆ, ಅದು ತನ್ನ ಮಾತು, ವರ್ತನೆ, ನಡವಳಿಕೆ ಮತ್ತು ಧೋರಣೆಗಳಲ್ಲಿ ವ್ಯಕ್ತವಾಗಬೇಕು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯನ್ನು ಕಾರ್ಯತಃ ಮಾಡಿ ತೋರಿಸಬೇಕು. ಬಿಜೆಪಿ ಬದಲಾಗಲಿ.

No comments:

Post a Comment