8- 2-2023
ಕಳೆದ ವಾರ ರಾಜ್ಯದಲ್ಲಿ ಮೂರು ಆತ್ಮಹತ್ಯೆ ಪ್ರಕರಣಗಳು ನಡೆದುವು. ಬಾಗಲಕೋಟೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯದಲ್ಲಿ 26ರ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಸಾಲದ ಕಾರಣಕ್ಕಾಗಿ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿದ್ದು, ಓರ್ವರು ಸಾವಿಗೀಡಾಗಿ ಉಳಿದವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವವರಲ್ಲಿ 4 ಮಂದಿ ಮಕ್ಕಳು.
ವಿಷಾದ ಏನೆಂದರೆ, ಇಂಥ ಸಾಮೂಹಿಕ ಆತ್ಮಹತ್ಯೆಗಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ ಓರ್ವ ರಾಜಕೀಯ ಪುಡಾರಿಯ ಹೇಳಿಕೆಯಷ್ಟೂ ಇವುಗಳಿಗೆ ನಾಗರಿಕ ಸಮಾಜದಲ್ಲಿ ಮಹತ್ವ ಲಭ್ಯವಾಗುತ್ತಿಲ್ಲ ಎಂಬುದು. ಆತ್ಮಹತ್ಯೆಯ ಸುದ್ದಿಯನ್ನು ಓದಿಯೋ ಕೇಳಿಯೋ ಛೆ, ತ್ಚು..ಎಂದು ಬೇಸಪಟ್ಟುಕೊಂಡು ಮರುಕ್ಷಣವೇ ರಾಜಕಾರಣಿಯ ಹೇಳಿಕೆಯ ಮೇಲೆ ಗಂಟೆಗಟ್ಟಲೆ ಮಾತಾಡುವಷ್ಟು ಸಾರ್ವಜನಿಕ ಸಂವೇದನೆ ನಶಿಸಿ ಹೋಗುತ್ತಿದೆ. ಜೀವ ಅಮೂಲ್ಯ ಎಂದು ನಂಬಿಕೊಂಡು ಬಂದ ಸಮಾಜವೊಂದು ತೀರಾ ಸಂವೇದ ನಾರಹಿತವಾಗಿ ಮತ್ತು ಅಸಹಜವಾಗಿ ಬದುಕುವ ಹಂತಕ್ಕೆ ತಲುಪಿದ್ದು ಹೇಗೆ? ಯಾಕೆ?
ತನ್ನ ಪಕ್ಕದ ಮನೆಯಲ್ಲೋ ಫ್ಲಾಟಿನಲ್ಲೋ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದರೆ, ಅದು ಆತ್ಮಹತ್ಯೆ ಮಾಡಿಕೊಂಡ ಮನೆಯ ಖಾಸಗಿ ಸಂಗತಿಯಷ್ಟೇ ಆಗಬೇಕಿಲ್ಲ ಅಥವಾ ಪಕ್ಕದ ಮನೆಯಿಂದ ಆಚೆಗೆ ಅದು ಚರ್ಚೆಗೆ ತೆರೆದುಕೊಳ್ಳಬಾರದ ವಿಷಯವೂ ಆಗಬೇಕಿಲ್ಲ. ಆತ್ಮಹತ್ಯೆ ಎಂಬುದು ಚಾರಣದಂಥ ಸಾಹಸ ಪ್ರವೃತ್ತಿ ಅಲ್ಲವಲ್ಲ. ಅದು ಬದುಕಿನ ಕೊನೆ. ಓರ್ವ ವ್ಯಕ್ತಿ ಸುಖಾಸುಮ್ಮನೆ ಬದುಕನ್ನು ಮುಗಿಸಿ ಬಿಡುವ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥ ಆತ್ಮಹತ್ಯೆಗಳಲ್ಲಿ ಹೊರಗೆ ಕಾಣುವ ಕಾರಣಗಳಿಗಿಂತಲೂ ಕಾಣದ ಕಾರಣಗಳಿರುತ್ತವೆ. ಸಾಲ, ಕಾಯಿಲೆ, ಖಿನ್ನತೆ, ಸಿಟ್ಟು, ಅವಮಾನ, ಅವಮರ್ಯಾದೆ, ಜೀವಭಯ... ಮುಂತಾದ ಕಾರಣಗಳು ಸಾಮಾನ್ಯವಾಗಿ ಯಾವುದೇ ಆತ್ಮಹತ್ಯೆಗಳ ಜೊತೆ ತೇಲಿ ಬರುವುದಿದೆ. ಇರಬಹುದು. ಆದರೆ,
ಈ ಎಲ್ಲ ಕಾರಣಗಳಲ್ಲೂ ಒಂದು ಪ್ರಧಾನ ಅಂಶ ಎದ್ದು ಕಾಣುತ್ತದೆ. ಅದುವೇ, ಸಮಾಜದ ಸ್ಪಂದನೆಯ ಕೊರತೆ. ಸಾಲ, ಕಾಯಿಲೆ, ಜಿಗುಪ್ಸೆ, ಅವಮರ್ಯಾದೆ.. ಇತ್ಯಾದಿಗಳೆಲ್ಲ ಈ 21ನೇ ಶತಮಾನದ ಮಹಾನ್ ಸಂಶೋಧನೆಗಳೇನಲ್ಲ. ನಮ್ಮ ಹಿರಿಯರ ಕಾಲದಲ್ಲೂ ಇದ್ದುವು. ಮುಂದೆಯೂ ಇರಲಿದೆ. ಆದರೆ, ಹಿರಿಯದ ಕಾಲದಲ್ಲಿ ಆತ್ಮಹತ್ಯೆಗಳು ಅಪರೂಪದಲ್ಲಿ ಅಪರೂಪ ಎನ್ನುವಷ್ಟು ಕಡಿಮೆಯಿತ್ತು. ಒಂದುವೇಳೆ, ಆತ್ಮಹತ್ಯೆಯೊಂದು ನಡೆಯಿತೆಂದರೆ, ಅದು ವಾರಗಟ್ಟಲೆ ಸಾರ್ವಜನಿಕ ಚರ್ಚೆಯ ವಸ್ತುವೂ ಆಗುತ್ತಿತ್ತು. ಹೊಟೇಲು, ಅಂಗಡಿ, ಉದ್ಯೋಗದ ಸ್ಥಳ, ಬಸ್ಸಿನಲ್ಲಿ ಪ್ರಯಾಣದ ವೇಳೆ, ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಆ ಆತ್ಮಹತ್ಯೆಯೇ ಪ್ರಧಾನ ಚರ್ಚಾ ವಿಷಯವಾಗುತ್ತಿತ್ತು.
ಯಾವಾಗ ಒಂದು ಆಘಾತಕಾರಿ ಸಂಗತಿ ಸಾರ್ವಜನಿಕ ಚರ್ಚೆಗೆ ತೆರೆದುಕೊಳ್ಳುತ್ತದೋ ಆವಾಗ ಅದರ ಸರಿ-ತಪ್ಪುಗಳ ವಿಮರ್ಶೆಯೂ ನಡೆಯುತ್ತದೆ. ಆತ್ಮಹತ್ಯೆಯ ಹೊರತಾದ ದಾರಿಗಳು ಮತ್ತು ಆತ್ಮಹತ್ಯೆಯ ಸುಳಿವನ್ನು ಪತ್ತೆಹಚ್ಚುವ ವಿಧಾನಗಳ ಬಗ್ಗೆಯೂ ಅಂಥ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತದೆ. ಆತ್ಮಹತ್ಯೆಯನ್ನು ಹೇಗೆ ತಡೆಯಬಹುದಿತ್ತು, ಸಾಲವನ್ನು ಹೇಗೆ ತೀರಿಸಬಹುದಿತ್ತು, ಆತ್ಮಹತ್ಯೆಯ ಸುಳಿವನ್ನು ಹೇಗೆ ಪತ್ತೆ ಹಚ್ಚಬಹುದಿತ್ತು ಮತ್ತು ವ್ಯಕ್ತಿಯನ್ನು ಆತ್ಮಹತ್ಯೆಯಿಂದ ಹೇಗೆ ಹಿಂಜರಿಯುವಂತೆ ಮಾಡಬಹುದಿತ್ತು ಎಂಬ ಚರ್ಚೆಯು ದೊಡ್ಡವರ ಮಧ್ಯೆ ನಡೆಯುವಾಗ ಅದನ್ನು ಚಿಕ್ಕವರೂ ಕೇಳಿಸಿಕೊಳ್ಳುತ್ತಿದ್ದರು. ಆ ಮೂಲಕ ಸಾಮಾಜಿಕ ಮತ್ತು ನೈತಿಕ ಪಾಠವೊಂದು ದೊಡ್ಡವರಿಂದ ಚಿಕ್ಕವರಿಗೆ ಸಹಜವಾಗಿ ರವಾನೆಯಾಗುತ್ತಿತ್ತು. ಅಂಥ ಆತ್ಮಹತ್ಯೆ ಸುದ್ದಿಗಳು ಪ್ರತಿ ಮನೆ ಮನೆಯ ಬ್ರೇಕಿಂಗ್ ಸುದ್ದಿಯಾಗಿ, ಮನೆಯ ಪ್ರಧಾನ ಚರ್ಚಾವಿಷಯವಾಗಿ ಮಾರ್ಪಾಡೂ ಆಗುತ್ತಿದ್ದುವು. ಇದೊಂದು ಸಹಜ ಜಾಗೃತಿ ಕಾರ್ಯಕ್ರಮ. ಸರ್ಕಾರದ ಯಾವುದೇ ಒತ್ತಾಸೆಯಿಲ್ಲದೆ ಮತ್ತು ಸರ್ಕಾರ ಯಾವುದೇ ಫಂಡ್ ಬಿಡುಗಡೆಗೊಳಿಸದೆಯೇ ಹಾಗೂ ಯಾವುದೇ ನಿರ್ದಿಷ್ಟ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸದೆಯೇ ಸಮಾಜವೇ ಅನಧಿಕೃತವಾಗಿ ನಡೆಸುವ ಅಭಿಯಾನ. ಆದರೆ
ಇವತ್ತು ಬದುಕಿನ ಚಿತ್ರಣ ಬದಲಾಗಿದೆ. ಪಕ್ಕದ ಫ್ಲಾಟಿನಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ ಎಂಬುದು ಗೊತ್ತೇ ಇಲ್ಲದಷ್ಟು ಬದುಕು ಬದಲಾಗಿ ಬಿಟ್ಟಿದೆ. ಪಕ್ಕದ ಮನೆಯವರ ಬದುಕು ಹೇಗಿದೆ, ಉದ್ಯೋಗ ಏನು, ಕಾಯಿಲೆ ಪೀಡಿತರಿದ್ದಾರೆಯೇ, ವಿದ್ಯಾರ್ಥಿಗಳಿದ್ದಾರೆಯೇ, ಹಣಕಾಸು ತಾಪತ್ರಯಗಳಿವೆಯೇ, ನಿರುದ್ಯೋಗದ ಸಮಸ್ಯೆಯಿದೆಯೇ ಇತ್ಯಾದಿಗಳ ಬಗ್ಗೆ ಏನೊಂದೂ ಅರಿವಿಲ್ಲದೆಯೇ ನಿಶ್ಚಿಂತೆಯಿಂದ ಬದುಕುವ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ, ಸಮಸ್ಯೆಗಳಲ್ಲಿ ಬಂಧಿಯಾದವ ಯಾರೊಂದಿಗೂ ಹೇಳಲಾಗದೇ ಒಳಗೊಳಗೇ ಕುಸಿಯತೊಡಗುತ್ತಾನೆ. ಇನ್ನೊಬ್ಬರೊಂದಿಗೆ ಹಂಚಿ ಹಗುರ ಮಾಡಿಕೊಳ್ಳುವ ಹಳೆಯ ಸಾಮಾಜಿಕ ವ್ಯವಸ್ಥೆಯು ಶಿಥಿಲಗೊಂಡು ತಾನಾಯಿತು, ತನ್ನ ಪಾಡಾಯಿತು ಎಂಬ ಹೊಸ ಸ್ಥಿತಿಯ ಉದಯವಾಗಿರುವುದರಿಂದ ಆತನನ್ನು ಆಲಿಸುವ ಮತ್ತು ಸಾಂತ್ವನಿಸುವ ಕಿವಿ-ಬಾಯಿಗಳ ನಿರೀಕ್ಷೆ ಹುಸಿಯಾಗತೊಡಗುತ್ತವೆ. ಅಂತಿಮವಾಗಿ ಪತ್ರಿಕೆಗಳಲ್ಲಿ ಒಂದು ಕಾಲಮ್ ಸುದ್ದಿಯೊಂದಿಗೆ ಆತ ಮತ್ತು ಆತನ ಕುಟುಂಬ ಶಾಶ್ವತ ಕಣ್ಮರೆಯಾಗುತ್ತವೆ. ಹಾಗಂತ,
ಈಗಿನ ಸಾಮಾಜಿಕ ಜೀವನ ಕ್ರಮ, ಫ್ಲ್ಯಾಟ್ ಸಂಸ್ಕೃತಿಯನ್ನು ಹಳೆಯ ಕಾಲಕ್ಕೆ ಮರಳಿಸಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಇಂಥ ಆತ್ಮಹತ್ಯೆಗಳನ್ನು ಸಾಕಷ್ಟು ತಡೆಯುವ ಸಾಮರ್ಥ್ಯ ಈಗಿನ ಸಮಾಜಕ್ಕಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. ಅಣು ಕುಟುಂಬದ ಇವತ್ತಿನ ದಿನಗಳಲ್ಲಿ ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿರುವುದು ಅನಿವಾರ್ಯವಾಗಿರುವಾಗ ಈ ಹಿಂದಿನಂಥ ಸಾಮಾಜಿಕ ಬೆರೆಯುವಿಕೆ ಸುಲಭವಲ್ಲ. ಸಮಯದ ಮಿತಿ, ಉದ್ಯೋಗದ ಸಮಯ ಮತ್ತು ಉದ್ಯೋಗದ ರೀತಿಯು ಇಂಥ ಬೆರೆಯುವಿಕೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಆದರೆ, ಈ ಮಿತಿಗಳನ್ನು ಮೀರಿಯೂ ಪ್ರತಿಯೋರ್ವರೂ ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖ ಹಂಚಿಕೊಳ್ಳುವ ಸಹಜ ಸಂಬಂಧವನ್ನು ಇಟ್ಟುಕೊಳ್ಳುವ ಸಾಧ್ಯತೆಗಳನ್ನು ಹುಡುಕಲೇಬೇಕಿದೆ. ವಾರದಲ್ಲಿ ಒಂದಷ್ಟು ಸಮಯವನ್ನು ಇಂಥ ಮಾತುಕತೆಗಳಿಗೆ ಮೀಸಲಿಡುವುದರಿಂದ ಭಿನ್ನ ಅನುಭವವೂ ದಕ್ಕುತ್ತದೆ ಮತ್ತು ಮಾಧ್ಯಮಗಳು ಹುಟ್ಟು ಹಾಕಿರುವ ಚರ್ಚಾವಿಷಯಗಳ ಏಕತಾನತೆಯಿಂದ ಆಚೆಗೆ ಬದುಕು-ಭಾವಗಳನ್ನು ವಿನಿಮಯ ಮಾಡಿಕೊಳ್ಳುವ ಸೌಖ್ಯವೂ ಲಭ್ಯವಾಗುತ್ತದೆ. ರಾಜಕೀಯ, ಭ್ರಷ್ಟಾಚಾರ, ಮಾಧ್ಯಮ ಗೌಜಿ-ಗದ್ದಲಗಳು...ಇವೆಲ್ಲ ಇದ್ದದ್ದೇ. ಇವನ್ನೇ ಇಂಥ ಮಾತುಕತೆಗಳಲ್ಲಿ ತಂದು ಮನಸು ಹಾಳು ಮಾಡಿಕೊಳ್ಳುವುದಕ್ಕಿಂತ ಬದುಕಿನ ಕುರಿತಾದ ವಿಷಯಗಳತ್ತ ಗಮನ ಹರಿಸುವುದರಿಂದ ಸುಖ-ದುಃಖಗಳ ಪ್ರಸ್ತಾಪವೂ ಆಗಬಲ್ಲುದು.
ಸಂಕಷ್ಟಕ್ಕೆ ಒಳಗಾದ ಯಾವುದೇ ವ್ಯಕ್ತಿ ತಕ್ಷಣ ತನ್ನ ಮನಸ್ಸನ್ನು ಇನ್ನೊಬ್ಬನ ಎದುರು ತೆರೆದುಕೊಳ್ಳಲಾರ. ತೀರಾ ಸಲುಗೆಯ ವ್ಯಕ್ತಿಯ ಜೊತೆಗೂ ಈ ವಿಷಯದಲ್ಲಿ ಒಂದು ಮುಜುಗರ ಇದ್ದೇ ಇರುತ್ತದೆ. ಒಂದಷ್ಟು ಹೊತ್ತು ಮಾತುಕತೆ ನಡೆದಾಗ ನಿಧಾನವಾಗಿ ಒಳಗಿನ ಬೇಗುದಿ, ಸಂಕಟಗಳು ಹೊರಬರುತ್ತವೆ. ಇದೊಂದು ರೀತಿಯಲ್ಲಿ ತನ್ನನ್ನು ತಾನು ಹಗುರ ಮಾಡಿಕೊಳ್ಳುವ ವಿಧಾನ. ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಹೀಗೆ ಹೇಳಿಕೊಳ್ಳುವುದಕ್ಕೂ ಬೇಕಾದ ಸಂದರ್ಭಗಳು ಸಿಗುತ್ತಿಲ್ಲ. ಯಾವಾಗ ವ್ಯಕ್ತಿಯೋರ್ವರಿಗೆ ತನ್ನೊಳಗಿನ ಸಂಕಟವನ್ನು ಹಂಚಿಕೊಳ್ಳುವುದಕ್ಕೆ ವಿಶ್ವಾಸಾರ್ಹವಾದ ವೇದಿಕೆಗಳು ಸಿಗುತ್ತವೋ ಆಗ ಆತ ಅರ್ಧದಷ್ಟು ಗೆಲುವಾಗುತ್ತಾನೆ/ಳೆ. ಅಂಥ ಸನ್ನಿವೇಶಗಳಲ್ಲಿ ಕೇಳುಗರು ಸಾಂತ್ವನಿಸುತ್ತಾರೆ. ಭರವಸೆ ತುಂಬುತ್ತಾರೆ. ಕೇಳುವವ ಸಮರ್ಥನಾಗಿದ್ದರೆ ನೆರವಾಗಬಹುದು ಅಥವಾ ಪರಿಹಾರದ ಬೇರೆ ದಾರಿಗಳನ್ನು ತೋರಿಸಬಹುದು. ಅಂತೂ ಸಮಸ್ಯೆಯಿಂದ ಬಿಡುಗಡೆಗೊಳ್ಳುವ ದಾರಿಯೊಂದರ ಪುಟ್ಟ ಹುಡುಕಾಟಕ್ಕೆ ಇಂಥ ಸಂದರ್ಭಗಳು ಅವಕಾಶ ಮಾಡಿಕೊಡುತ್ತವೆ.
ಸದ್ಯ, ಈ ಕುರಿತಂತೆ ಸಾಮಾಜಿಕ ಜಾಗೃತಿಯೊಂದು ದೊಡ್ಡಮಟ್ಟದಲ್ಲಿ ನಡೆಯಬೇಕಿದೆ. ಮಾಧ್ಯಮಗಳು ಮನಸ್ಸು ಮಾಡಿದರೆ ಇದು ಅಸಾಧ್ಯವಲ್ಲ. ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖಗಳನ್ನು ಹಂಚಿಕೊಳ್ಳುವಷ್ಟು ಸಲುಗೆಯನ್ನು ಬೆಳೆಸಿಕೊಳ್ಳುವ ಮತ್ತು ಅದಕ್ಕಾಗಿ ಸಮಯವನ್ನು ಮೀಸಲಿಡುವ ಸಂದರ್ಭಗಳು ಸೃಷ್ಟಿಯಾಗಲೇಬೇಕು. ಪಕ್ಕದ ಮನೆಯ ಸಾವಿನ ಸುದ್ದಿಯನ್ನು ವಾಟ್ಸಪ್ ಮೂಲಕ ತಿಳಿದುಕೊಳ್ಳುವ ಸ್ಥಿತಿಯತ್ತ ಸಮಾಜ ಹೊರಳುತ್ತಿರುವ ಈ ದಿನಗಳಲ್ಲಿ, ಜೀವನ ಕ್ರಮದ ಬಗ್ಗೆ ಮರು ಆಲೋಚಿಸುವ ತುರ್ತು ಅಗತ್ಯವಿದೆ
No comments:
Post a Comment