22-7-2022
ಹೆಣ್ಣಿನ ಸುತ್ತ ಈ ಜಗತ್ತಿನಲ್ಲಿ ರಚಿತವಾಗಿರುವಷ್ಟು ಕತೆ, ಕಾದಂಬರಿ, ಹಾಡು, ಸಿನಿಮಾ, ನಾಟಕಗಳು ಇನ್ನಾವ ಜೀವಿಯ ಸುತ್ತವೂ ರಚ ನೆಯಾಗಿರುವ ಸಾಧ್ಯತೆ ಇಲ್ಲ. ಹೆಣ್ಣನ್ನು ಈ ದೇಶದಲ್ಲಿ ಪೂಜಿಸಲಾಗುತ್ತದೆ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂದು ಕೊಂಡಾಡಲಾಗುತ್ತದೆ. ಹೆಣ್ಣಿನ ಕೇಶ, ಕಣ್ಣು, ಕಿವಿ, ಮೂಗು, ಬಾಯಿ, ತುಟಿ, ಕೆನ್ನೆ, ಉಗುರು... ಹೀಗೆ ಎಲ್ಲವೂ ಬಣ್ಣನೆಗೆ ಒಳಗಾಗುತ್ತದೆ. ಹಾಗಂತ, ಇದು ಒಂದು ಮುಖವಾದರೆ, ಇದರ ಇನ್ನೊಂದು ಮುಖ ಅತ್ಯಂತ ಕರಾಳ. ಆಕೆಯ ಮೇಲೆ ದೌರ್ಜನ್ಯ ನಡೆಸುವ ಮತ್ತು ಇನ್ನಿಲ್ಲದಂತೆ ಸತಾಯಿಸುವ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಕಳೆದವಾರ ರಾಜ್ಯ ಹೈಕೋರ್ಟ್ ಇಂಥದ್ದೊಂದು ಪ್ರಕರಣದ ಮೇಲೆ ಬೆಳಕು ಚೆಲ್ಲಿದೆ. ನಿಜವಾಗಿ,
ಈ ಪ್ರಕರಣ ಸಾಮಾನ್ಯವಾಗಿ ವರದಿಯಾಗುವ ಅತ್ಯಾಚಾರ, ಹತ್ಯೆ, ದೌರ್ಜನ್ಯ ಇತ್ಯಾದಿಗಳಿಗಿಂತ ಭಿನ್ನವಾದುದು ಮತ್ತು ಹೆಣ್ಣಿನ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ್ದು.
ಚಿಕ್ಕಮಗಳೂರಿನ ಓರ್ವ ಮಹಿಳೆ ಪತಿಯಿಂದ ವಿಚ್ಛೇದನ ಕೋರಿ 2012ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಮದುವೆಯಾದುದು 1999ರಲ್ಲಿ. 2001ರಲ್ಲಿ ಹೆಣ್ಣು ಮಗುವಿನ ಜನನವೂ ಆಯಿತು. ಪತಿ ವ್ಯಾಪಾರಿ. ಸಾಲವೂ ಇತ್ತು. ಸಾಲ ಹೆಚ್ಚುತ್ತಾ ಹೋಯಿತಲ್ಲದೇ ಪತ್ನಿ ಮತ್ತು ಮಗುವಿನ ಬೇಕು-ಬೇಡಗಳಿಗೂ ಸ್ಪಂದಿಸುವುದನ್ನು ಪತಿ ಕಡಿಮೆ ಮಾಡತೊಡಗಿದ. ನಿರ್ವಾಹವಿಲ್ಲದೆ ಆಕೆ 2008ರಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡಳು. ಮಾತ್ರವಲ್ಲ, ಸಾಲದಿಂದ ಪತಿಯನ್ನು ಮೇಲೆತ್ತುವುದಕ್ಕಾಗಿ ಪ್ರತಿ ತಿಂಗಳು ಹಣ ನೀಡುತ್ತಲೂ ಇದ್ದಳು. ಅದುವೇ 60 ಲಕ್ಷ ರೂಪಾಯಿಯಷ್ಟಾಯಿತು. ಆದರೆ ಆತ ಸಾಲ ತೀರಿಸಲಿಲ್ಲ ಎಂದು ಮಾತ್ರವಲ್ಲ, ಪತ್ನಿ ನೀಡುತ್ತಿರುವ ಹಣವನ್ನೇ ಖರ್ಚು ಮಾಡುತ್ತಾ ಆರಾಮವಾಗಿ ಇರತೊಡಗಿದ. ಅಲ್ಲದೇ, ಆತನನ್ನು ವಿದೇಶಕ್ಕೆ ಕಳುಹಿಸಿ ಸೆಲೂನ್ ಅಂಗಡಿಯನ್ನೂ ಹಾಕಿಕೊಟ್ಟಳು. ಆದರೆ ಅದೂ ನಡೆಯಲಿಲ್ಲ. ಆತನ ಬೇಜವಾಬ್ದಾರಿತನವೇ ಸೆಲೂನ್ ಮುಚ್ಚಲು ಕಾರಣ ಎಂಬುದೂ ಆಕೆಗೆ ಮನದಟ್ಟಾಯಿತು. ಆತ ಮರಳಿ ಊರಿಗೆ ಬಂದ ಮತ್ತು ಪತ್ನಿಯನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಇವೆಲ್ಲದರಿಂದಲೂ ರೋಸಿ ಹೋದ ಪತ್ನಿ 2012ರಲ್ಲಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದಳು. ಆದರೆ, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೊಡಿಸಲು ನಿರಾಕರಿಸಿತು. ಪತಿಯಿಂದ ಯಾವುದೇ ಕ್ರೌರ್ಯ ನಡೆದಿಲ್ಲ ಎಂದು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು. ಇದನ್ನು ಪ್ರಶ್ನಿಸಿ ಆಕೆ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದಳು. ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ಜೆ.ಎಂ. ಖಾಜಿ ಅವರಿದ್ದ ನ್ಯಾಯಪೀಠ, ಆಕೆಗೆ ವಿಚ್ಛೇದನವನ್ನು ಮಂಜೂರು ಮಾಡಿತು ಮತ್ತು ಪತ್ನಿಯೊಂದಿಗೆ ಆತನಿಗೆ ಯಾವುದೇ ಬಾಂಧವ್ಯವಿಲ್ಲ, ಕೇವಲ ಧನಲಕ್ಷ್ಮಿಯಂತೆ ಆಕೆಯನ್ನು ಪರಿಗಣಿಸಿದ್ದಾನೆ, ಈ ಮೂಲಕ ಪತ್ನಿಗೆ ಆತ ಮಾನಸಿಕ ಆಘಾತ ನೀಡಿದ್ದಾನೆ ಎಂದು ಹೇಳಿತು. ಅಷ್ಟಕ್ಕೂ,
ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು 2012ರಲ್ಲಿ. ಆದರೆ ವಿಚ್ಛೇದನ ದೊರಕಿದ್ದು 2022ರಲ್ಲಿ. ಹಾಗಂತ, ಈ ತೀರ್ಪನ್ನೇ ಅಂತಿಮ ಎಂದು ಹೇಳುವ ಹಾಗಿಲ್ಲ. ಈ ತೀರ್ಪನ್ನು ನಿರಾಕರಿಸಿ ಪತಿ ಸುಪ್ರೀಮ್ ಕೋರ್ಟಿಗೆ ಹೋಗಬಹುದು ಮತ್ತು ಅಲ್ಲಿ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬೀಳುವಾಗ ಇನ್ನಷ್ಟು ವರ್ಷಗಳು ಉರುಳಲೂ ಬಹುದು. ಇದು ಪ್ರಕರಣದ ಒಂದು ಭಾಗವಾದರೆ, ಇನ್ನೊಂದು ಪತಿ ಮತ್ತು ಪತ್ನಿಯ ನಡುವಿನ ಹೊಣೆಗಾರಿಕೆಯದ್ದು.
ವಿಚ್ಛೇದನ ಈ ಸಮಾಜಕ್ಕೆ ಹೊಸತಲ್ಲ ಮತ್ತು ವಿಚ್ಛೇದನಕ್ಕಾಗಿ ಸಲ್ಲಿಸುವ ಅರ್ಜಿಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದೂ ರಹಸ್ಯವಾಗಿಲ್ಲ. ಆದರೆ ಇಂಥ ಅರ್ಜಿಗಳ ವಿಲೇವಾರಿಗೆ ತಗಲುವ ದೀರ್ಘ ಸಮಯವು ಅರ್ಜಿದಾರರ ಮೇಲೆ ಬೀರಬಹುದಾದ ಪರಿಣಾಮಗಳು ಏನೇನು? ಈ ಅರ್ಜಿ ಇತ್ಯರ್ಥವಾಗದೆ ಇನ್ನೊಂದು ಮದುವೆಯಾಗುವಂತಿಲ್ಲ. ವಿದೇಶಕ್ಕೆ ಹೋಗುವುದಕ್ಕೂ ತೊಂದರೆ ಎದುರಾಗುವ ಸಾಧ್ಯತೆಗಳೂ ಇರುತ್ತವೆ ಮತ್ತು ಈ ಪ್ರಕರಣ ಇತ್ಯರ್ಥವಾಗುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡಗಳು ಇದ್ದೇ ಇರುತ್ತವೆ. ಮದುವೆ ಎಂಬುದು ಹೇಗೆ ಎರಡು ಕುಟುಂಬಗಳ ನಡುವಿನ ಸಡಗರವೋ ಹಾಗೆಯೇ ವಿಚ್ಛೇದನವೂ ಎರಡು ಕುಟುಂಬಗಳ ವಿಷಾದವೂ ಆಗಿರುತ್ತದೆ. ಕೇವಲ ಪತಿ ಅಥವಾ ಪತ್ನಿ ಮಾತ್ರ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಲ್ಲ. ಎರಡು ಕುಟುಂಬಗಳೂ ಒಂದಲ್ಲ ಒಂದು ರೀತಿಯಲ್ಲಿ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಮಾನಸಿಕ ಒತ್ತಡ, ಸಾಮಾಜಿಕ ಪ್ರತಿಷ್ಠೆಯ ಪ್ರಶ್ನೆಗಳೂ ಇದರಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಇಂಥ ಪ್ರಕರಣಗಳು ಆದಷ್ಟು ಶೀಘ್ರ ಇತ್ಯರ್ಥವಾಗಬೇಕಾದುದು ಬಹಳ ಅಗತ್ಯ. ಅಲ್ಲದೇ,
ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಹೆಣ್ಣು ಅಥವಾ ಗಂಡಿನ ಪ್ರಾಯಕ್ಕೂ ನಾವಿಲ್ಲಿ ಮಹತ್ವ ಕಲ್ಪಿಸಬೇಕಾಗುತ್ತದೆ. ವಿಚ್ಛೇದನ ಎಂಬುದು ಆಸ್ತಿ ವಿವಾದದಂತೆ ಅಲ್ಲ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕದ ಪ್ರತಿದಿನವೂ ಪತಿ ಮತ್ತು ಪತ್ನಿಯ ಪಾಲಿಗೆ ಅಮೂಲ್ಯ. ಉದಾಹರಣೆಗಾಗಿ, ಈ ಮೇಲಿನ ಪ್ರಕರಣವನ್ನೇ ಎತ್ತಿಕೊಳ್ಳಿ. ಇವರಿಬ್ಬರೂ ಮದುವೆಯಾಗಿರುವುದು 1999ರಲ್ಲಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು 2012ರಲ್ಲಿ. ಅಂದರೆ, ಮದುವೆಯಾಗಿ 13 ವರ್ಷಗಳ ಬಳಿಕ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ವಿಚ್ಛೇದನಕ್ಕಿಂತ ಮೊದಲೇ ಅವರಿಬ್ಬರ ನಡುವೆ ಹೊಣೆಗಾರಿಕೆಯ ಬಗ್ಗೆ ಸಾಕಷ್ಟು ತಿಕ್ಕಾಟಗಳು ನಡೆದಿವೆ. ಮಾನಸಿಕ ಸಂಬಂಧಗಳು ಕಡಿದು ಹೋಗಿವೆ. ಕೊನೆಗೆ 2012ರಲ್ಲಿ ವಿಚ್ಛೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದಾಳೆ. ಒಂದುರೀತಿಯಲ್ಲಿ, ಇದು 30-40 ವರ್ಷಗಳ ನಡುಪ್ರಾಯ. ಈ ಅರ್ಜಿ ಕುಟುಂಬ ನ್ಯಾಯಾಲಯದಿಂದ ಹೈಕೋರ್ಟಿಗೆ ತಲುಪಿ ಇತ್ಯರ್ಥವಾಗುವಾಗ 10 ವರ್ಷಗಳೇ ಕಳೆದಿವೆ. ನಿಜವಾಗಿ,
ಈ 10 ವರ್ಷ ಬಹು ಅಮೂಲ್ಯ. ನಡುವಯಸ್ಸಿನಲ್ಲಿ ಹಾಕಿದ ಅರ್ಜಿಯೊಂದು ವೃದ್ಧಾಪ್ಯದಲ್ಲಿ ಇತ್ಯರ್ಥವಾದರೆ ಹೇಗೋ ಹಾಗೆಯೇ ಇದು. ಅವರಿಬ್ಬರ ಬದುಕಿನ ಮಹತ್ವಪೂರ್ಣ 10 ವರ್ಷಗಳು ಬರೇ ಕೋರ್ಟು ತೀರ್ಪನ್ನು ಕಾಯುವುದರ ಕಳೆದಿವೆ. ಬೇಡದ ಮದುವೆಯಿಂದ ಬಿಡುಗಡೆಗೊಂಡು ಹೊಸ ದಾಂಪತ್ಯವೊAದನ್ನು ಪ್ರಾರಂಭಿಸಬೇಕಿದ್ದ ಅವರಿಬ್ಬರೂ ಕೋರ್ಟು ತೀರ್ಪನ್ನು ಕಾಯುತ್ತಾ ಯೌವನದ ಅಮೂಲ್ಯ ಸಮಯವನ್ನು ನಷ್ಟ ಮಾಡಿಕೊಂಡಿದ್ದಾರೆ. ಇದು ನಿಜಕ್ಕೂ ಗಂಭೀರ ಅವಲೋಕನಕ್ಕೆ ಒಳಗಾಗಬೇಕಾದ ಸಂಗತಿ. ವಿಚ್ಛೇದನ ಪ್ರಕರಣವನ್ನು ಇಂತಿಷ್ಟೇ ಅವಧಿಯೊಳಗೆ ಇತ್ಯರ್ಥಪಡಿಸಬೇಕೆಂಬ ನಿಯಮ ಮಾಡಿದರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಿಂತಲೂ ಮೊದಲು ವಿಚ್ಛೇದನ ತಗಾದೆಯನ್ನು ಕೌಟುಂಬಿಕವಾಗಿ ಇತ್ಯರ್ಥಪಡಿಸುವ ವಿಧಾನದ ಬಗ್ಗೆ ಸಾರ್ವ ಜನಿಕ ತಿಳುವಳಿಕೆ ಮೂಡಿಸಬೇಕು. ಯುವಪೀಳಿಗೆಯಲ್ಲಿ ಸಹನೆ ಕಡಿಮೆ. ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವ ಅವಸರ ಅವರಲ್ಲಿರುತ್ತದೆ. ಆದ್ದರಿಂದ ವಿವಾಹ ಮಾಡಿಕೊಡುವುದಷ್ಟೇ ಎರಡೂ ಕುಟುಂಬಗಳ ಹೊಣೆಗಾರಿಕೆ ಅಲ್ಲ. ಕೌಟುಂಬಿಕ ಜೀವನದಲ್ಲಿ ಎದುರಾಗುವ ಭಿನ್ನಾಭಿಪ್ರಾಯ, ಬಿಕ್ಕಟ್ಟುಗಳ ಬಗೆಗೂ ಪತಿ-ಪತ್ನಿ ಇಬ್ಬರಿಗೂ ತಿಳಿ ಹೇಳುವ ಪ್ರಯತ್ನಗಳೂ ನಡೆಯಬೇಕು. ಒಂದುವೇಳೆ,
ಅವರಿಬ್ಬರ ನಡುವೆ ಹೊಂದಾಣಿಕೆಯ ಪ್ರಶ್ನೆ ಎದುರಾದರೆ, ಎರಡೂ ಕುಟುಂಬಗಳು ಪ್ರತಿಷ್ಠೆ ಮರೆತು ಒಂದಾಗಬೇಕು. ಮಕ್ಕಳನ್ನು ಕೂರಿಸಿ ಮಾತುಕತೆ ನಡೆಸಬೇಕು. ಇಂಥ ಒಂದಕ್ಕಿಂತ ಹೆಚ್ಚು ಪ್ರಯತ್ನಗಳ ಬಳಿಕವೂ ಹೊಂದಾಣಿಕೆ ಅಸಾಧ್ಯ ಎಂದು ಕಂಡು ಬಂದಾಗ ಮಾತ್ರ ವಿಚ್ಛೇದನ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅಷ್ಟಕ್ಕೂ, ಮಾತುಕತೆಯ ಮೂಲಕ ಸಹಜ ವಾತಾವರಣದಲ್ಲಿ ಇದು ಇತ್ಯರ್ಥವಾಗುವುದಾದರೆ ಅದುವೇ ಉತ್ತಮ. ಯಾಕೆಂದರೆ, ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥ ವಾಗುವಾಗ ವರ್ಷಗಳೇ ದಾಟಿರುತ್ತವೆ ಮತ್ತು ತೀರ್ಪಿನ ಮೇಲೆ ಆಸಕ್ತಿಯೇ ಹೊರಟು ಹೋಗಿರುತ್ತದೆ.
ನಿಜವಾಗಿ, ಹೆಣ್ಣನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ದೇಶ ಇದು. ಆದರೆ, ಈಗಿನ ಸ್ಥಿತಿ, ಈ ಭಾವನೆಗೂ ಹೆಣ್ಣನ್ನು ಈ ದೇಶದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಗೂ ಯಾವ ಸಂಬಂಧವೂ ಇಲ್ಲ ಎಂಬಂತಿದೆ. ಈ ಮೇಲಿನ ಪ್ರಕರಣದಲ್ಲೂ ಹೆಣ್ಣನ್ನು ಸತಾಯಿಸಲಾಗಿದೆ. ಆಕೆಯ ದುಡಿಮೆಯ ಹಣವನ್ನು ಪಡೆದುದಲ್ಲದೇ ವಿಚ್ಛೇದನಕ್ಕೂ ಒಪ್ಪಿಕೊಳ್ಳದೇ ಕಿರುಕುಳಕೊಡಲಾಗಿದೆ. ಇಲ್ಲಿನ ನ್ಯಾಯ ವ್ಯವಸ್ಥೆಯಂತೂ ಆಕೆಗೆ ಸ್ಪಂದಿಸುವಾಗ ಅತ್ಯಮೂಲ್ಯ 12 ವರ್ಷಗಳೇ ಕಳೆದು ಹೋಗಿವೆ. ಇದು ಅತ್ಯಂತ ವಿಷಾದನೀಯ. ವಿಚ್ಛೇದನದ ಈ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರಲೇಬೇಕು.
No comments:
Post a Comment