Tuesday, 20 June 2023

ಗೋಹತ್ಯಾ ನಿಷೇಧದ ಹಿಂದೆ ಗೋಮಾಳ ನುಂಗುವ ಸಂಚು ಇತ್ತೇ?

 

12-6-2023

ಹಿಜಾಬ್ ನಿಷೇಧ, ಮುಸ್ಲಿಮ್ ಮೀಸಲಾತಿ ರದ್ದು, ಹತ್ಯೆಗೀಡಾದವರಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ, ಮಾರಲ್ ಪೊಲೀಸಿಂಗ್ ಮತ್ತು ಗುಂಪು ಥಳಿತದಲ್ಲಿ ಭಾಗಿಯಾದವರಿಗೆ ದುರ್ಬಲ ಸೆಕ್ಷನ್‌ನಡಿ ಕೇಸು ದಾಖಲಿಸಿ ಸುಲಭದಲ್ಲಿ ಜಾಮೀನು ಸಿಗುವಂತೆ ನೋಡಿಕೊಂಡದ್ದೂ ಸೇರಿದಂತೆ ಬಹಿರಂಗಕ್ಕೆ ಕಾಣುವ ಅನ್ಯಾಯಗಳ ಜೊತೆಜೊತೆಗೇ ಬೊಮ್ಮಾಯಿ ಸರಕಾರ ಆಂತರಿಕವಾಗಿ ಕನ್ನಡಿಗರಿಗೆ ಕಡು ಮೋಸವನ್ನೂ ಎಸಗಿದೆ ಎಂಬುದನ್ನು ಆರ್‌ಟಿಐ ಕಾರ್ಯಕರ್ತ ಮತ್ತು ದಿ ಫೈಲ್ ಜಾಲತಾಣ ಪತ್ರಿಕೆಯ ಜಿ. ಮಹಾಂತೇಶ್ ಪುರಾವೆ ಸಹಿತ ಬಹಿರಂಗಕ್ಕೆ ತಂದಿದ್ದಾರೆ. ಸಂಘಪರಿವಾರದ ಅಂಗಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್‌ಗಳಿಗೆ ಗೋಮಾಳ ಮತ್ತು ನಿವೇಶನಗಳನ್ನು ಬೊಮ್ಮಾಯಿ ಸರ್ಕಾರ ಜುಜುಬಿ ಮೊತ್ತಕ್ಕೆ ಪರಭಾರೆ ಮಾಡಿದೆ ಎಂಬುದು ಗೊತ್ತಾಗಿದೆ. ವಿಶೇಷ ಏನೆಂದರೆ,


ಈ ಮಾರಾಟಕ್ಕೆ ಸರಕಾರದ ಕಾನೂನು ಮತ್ತು ಆರ್ಥಿಕ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬೊಮ್ಮಾಯಿ ಸರಕಾರದ ಭ್ರಷ್ಟ ಮತ್ತು ಸಂಘ ಓಲೈಕೆ ನೀತಿಯು ಈ ವಿರೋಧವನ್ನು ಲೆಕ್ಕಿಸದಷ್ಟು ಕುರುಡಾಗಿತ್ತು ಎಂಬುದನ್ನು ಈ ಮಾರಾಟ ಪ್ರಕ್ರಿಯೆಯು ಸ್ಪಷ್ಟಪಡಿಸುತ್ತದೆ. ಆದ್ದರಿಂದಲೇ, ಬೊಮ್ಮಾಯಿ ಸರಕಾರದ ಕೊನೆಯ ಆರು ತಿಂಗಳ ಭೂಮಂಜೂರಾತಿ ಪ್ರಕರಣಗಳ ಕುರಿತು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕೆಲವು ಆಘಾತಕಾರಿ ಮಾಹಿತಿಗಳು ಹೀಗಿವೆ:

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ನಿರ್ಮಾಣಕ್ಕಾಗಿ 20.17 ಎಕರೆ ಜಮೀನನ್ನು ಮೀಸಲಿಡಲಾಗಿತ್ತು. ಈ ಜಮೀನಿನ ಪೈಕಿ 5 ಎಕರೆ ವಿಸ್ತೀರ್ಣದ ಜಮೀನನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲಾಗಿದೆ ಎಂದು ದಿ ಫೈಲ್ ಜಾಲತಾಣ ಪತ್ರಿಕೆ ಬಹಿರಂಗಪಡಿಸಿದೆ. ಜನಸೇವಾ ಟ್ರಸ್ಟ್ ಗೆ 2022 ಮತ್ತು 23ರಲ್ಲಿ ಒಟ್ಟು 35 ಎಕರೆ ಗೋಮಾಳವನ್ನು ಜುಜುಬಿ ಮೊತ್ತಕ್ಕೆ ನೀಡಿ ಬೊಮ್ಮಾಯಿ ಸರಕಾರ ಆದೇಶ ಹೊರಡಿಸಿತ್ತು. ಇದರಲ್ಲಿ 25 ಎಕರೆ ಗೋಮಾಳವನ್ನು ಆಗಿನ ಮಾರುಕಟ್ಟೆ ಮೌಲ್ಯದ 25% ದರಕ್ಕೆ ವಿತರಿಸಿತ್ತು. ಹಾಗೆಯೇ ಉಳಿದ 10 ಎಕರೆ ಗೋಮಾಳಕ್ಕೆ ಆಗಿನ ಮಾರುಕಟ್ಟೆ ದರಕ್ಕೆ ಸಮಾನವಾದ ದರ ನಿಗದಿಗೊಳಿಸಿ ಮಾರಾಟ ಮಾಡಿತ್ತು. ಆದರೆ, ಈ ಮೊತ್ತವನ್ನು ಕೊಡಲು ಅಸಾಧ್ಯ ಎಂದು ಜನಸೇವಾ ಟ್ರಸ್ಟ್ ಸರಕಾರದೊಂದಿಗೆ ಕೇಳಿಕೊಂಡಿತು. ಆಗ ಸರಕಾರ ತಕ್ಷಣ ಅದಕ್ಕೆ ಸ್ಪಂದಿಸಿತಲ್ಲದೇ, ಮಾರುಕಟ್ಟೆ ದರದ ಕೇವಲ 5% ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು ಎಂದು ದಿ ಫೈಲ್ ವರದಿ ಮಾಡಿದೆ. ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಗಳ ವಿವಿಧೆಡೆ ಸುಮಾರು 20 ಎಕರೆ ಗೋಮಾಳವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಸರಕಾರ ಮಾರಾಟ ಮಾಡಿರುವುದೂ ಬಹಿರಂಗಕ್ಕೆ ಬಂದಿದೆ. ಹಾಗೆಯೇ ಯಲಹಂಕ ತಾಲೂಕಿನ ಹುರುಳಿ ಚಿಕ್ಕನಹಳ್ಳಿ ಗ್ರಾಮದಲ್ಲಿದ್ದ 7 ಕೋಟಿ 45 ಲಕ್ಷ ರೂಪಾಯಿ ಬೆಲೆಬಾಳುವ ಗೋಮಾಳವನ್ನು ಕೇವಲ ಒಂದು ಕೋಟಿ 86 ಲಕ್ಷ ರೂಪಾಯಿಗೆ ರಾಷ್ಟ್ರೋತ್ಥಾನ ಪರಿಷತ್‌ಗೆ ಮಾರಿದೆ ಮತ್ತು ಈ ಮೂಲಕ ಬೊಕ್ಕಸಕ್ಕೆ 5 ಕೋಟಿ 59 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದೆ ಎಂದೂ ದಿ ಫೈಲ್ ವರದಿ ಮಾಡಿದೆ. ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ,

ಚುನಾವಣಾ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಲ್ಲೇ ಜನಸೇವಾ ಟ್ರಸ್ಟ್ ಗೆ 35.33 ಎಕರೆ ಜಮೀನನ್ನು ಮಾರುಕಟ್ಟೆ ಮೌಲ್ಯದ ಬರೇ 5% ದರವನ್ನು ನಿಗದಿಗೊಳಿಸಿ ಮಾರಾಟ ಮಾಡಿರುವುದು. ಇದರಿಂದಾಗಿ ಬೊಕ್ಕಸಕ್ಕೆ 139 ಕೋಟಿ 25 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಒಂದುರೀತಿಯಲ್ಲಿ, 2020ರಿಂದ 2023ರ ನಡುವೆ ಸಂಘಪರಿವಾರದ ಅಂಗಸಂಸ್ಥೆಗಳಿಗೆ 81.23 ಎಕರೆ ವಿಸ್ತೀರ್ಣದ ಭೂಮಿ ಮತ್ತು ಮಾದಾರ ಚೆನ್ನಯ್ಯ ಗುರುಪೀಠಕ್ಕೆ 81.23 ವಿಸ್ತೀರ್ಣದ ಗೋಮಾಳವೂ ಸೇರಿದಂತೆ ಒಟ್ಟು 167.23 ಎಕರೆ ಭೂಮಿಯನ್ನು ಬೊಮ್ಮಾಯಿ ಸರಕಾರ ಮಂಜೂರು ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲ, ಈ ಮಾಹಿತಿ ಬಹಿರಂಗಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗುತ್ತಿರುವಂತೆಯೇ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಕ್ರಿಯರಾಗಿದ್ದಾರೆ. ಸಂಘಪರಿವಾರಕ್ಕೆ ಕೊಟ್ಟ ಭೂಮಿಯನ್ನು ವಾಪಸು ಪಡೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ಮೂಲಕ ದಿ ಫೈಲ್ ಬಹಿರಂಗಗೊಳಿಸಿರುವ ಮಾಹಿತಿ ಸತ್ಯದಿಂದ ಕೂಡಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂದಹಾಗೆ,

ಗೋಮಾಳ ಎಂಬುದು ಗೋವುಗಳಿಗೆ ಮೇಯಲು ಮೀಸಲಿಟ್ಟ ಸ್ಥಳ. ಒಂದು ಕಡೆ, ಇದೇ ಬೊಮ್ಮಾಯಿ ಸರಕಾರ ಗೋವುಗಳ ಮೇಲೆ ವಿಪರೀತ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಬಂದಿತ್ತಲ್ಲದೇ, ಗೋಹತ್ಯಾ ನಿಷೇಧ ಕಾಯ್ದೆಯನ್ನೂ ಜಾರಿಗೊಳಿಸಿತು. ಗೋವಿನ ಹೆಸರಲ್ಲಿ ನಡೆಯುತ್ತಿದ್ದ ಥಳಿತ ಮತ್ತು ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸುವ ಹಂತಕ್ಕೆ ಅವರ ಬೆಂಬಲಿಗರು ಇಳಿದಿದ್ದರು. ಇನ್ನೊಂದು ಕಡೆ,

ಇದೇ ಸರಕಾರ ಗೋಮಾಳವನ್ನೇ ಜುಜುಬಿ ಬೆಲೆಗೆ ತನ್ನದೇ ಪರಿವಾರಕ್ಕೆ ಮಾರಾಟವನ್ನೂ ಮಾಡಿದೆ. ಗೋವಿನ ಮೇಲೆ ಪ್ರೀತಿ ಇರುವ ಯಾವುದೇ ಸರಕಾರ ಗೋಮಾಳವನ್ನು ಮಾರಾಟ ಮಾಡುವುದು ಬಿಡಿ, ಅಂಥದ್ದೊಂದು ಆಲೋಚನೆಯನ್ನೂ ಮಾಡಲು ಸಾಧ್ಯವಿದೆಯೇ? ಒಂದುವೇಳೆ, ಮೇಯಲು ಹುಲುಸಾದ ಹುಲ್ಲು ಇಲ್ಲ ಅಥವಾ ಮೇಯಲು ದನಗಳನ್ನು ಅಟ್ಟುವ ಸಂಪ್ರದಾಯ ಈಗ ಕಡಿಮೆಯಾಗಿದೆ ಎಂಬ ತರ್ಕ ಸರಕಾರದ್ದಾದರೆ, ಅದಕ್ಕೆ ಪರಿಹಾರ ಏನು? ಬೆಲೆಬಾಳುವ ಭೂಮಿಯನ್ನು ಜುಜುಬಿ ಮೊತ್ತಕ್ಕೆ ಮಾರಾಟ ಮಾಡುವುದೇ ಅಥವಾ ಆ ಗೋಮಾಳವನ್ನು ಅಭಿವೃದ್ಧಿಗೊಳಿಸಿ ಹುಲ್ಲುಗಳು ಬೆಳೆಯುವಂತೆ ಮಾಡಿ ಮತ್ತು ಜನರು ತಮ್ಮ ಗೋವುಗಳನ್ನು ಅಲ್ಲಿಗೆ ಪುನಃ ಕಳುಹಿಸುವಂತೆ ಮಾಡುವುದೇ? ಗೋಮಾಳ ಪಾಳು ಬಿದ್ದಿದ್ದರೆ ಅದಕ್ಕೆ ಕಾರಣ ಜನರಲ್ಲ, ಸರಕಾರ.

ಈ ಹಿಂದೆ ರೈತರು ಗೋವುಗಳನ್ನು ಎರಡ್ಮೂರು ಉದ್ದೇಶಗಳಿಗಾಗಿ ಸಾಕುತ್ತಾ ಇದ್ದರು. ಬರೇ ಪುಣ್ಯಭಾವವೊಂದೇ ಈ ಸಾಕಾಣಿಕೆಯ ಉದ್ದೇಶ ಆಗಿರಲಿಲ್ಲ. ಹಾಲು, ಹೈನು, ಗೊಬ್ಬರ, ಉಳುಮೆ ಇತ್ಯಾದಿಗಳು ಈ ಸಾಕಾಣಿಕೆಗೆ ಒಂದು ಕಾರಣವಾದರೆ, ಇನ್ನೊಂದು, ಹಾಲು ಕೊಡದ ಮತ್ತು ದುಡಿಯುವ ಸಾಮರ್ಥ್ಯ ಕಳಕೊಂಡ ಬಳಿಕ ಅವುಗಳನ್ನು ಮಾರಾಟ ಮಾಡಿ ಹೊಸ ಕರು-ಎತ್ತುಗಳನ್ನು ಖರೀದಿಸುವುದು ಮತ್ತು ಆ ಮೂಲಕ ಈ ಸಾಕಾಣಿಕೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು. ಆದರೆ, ಬೊಮ್ಮಾಯಿ ಸರಕಾರ ಈ ಸಂಪ್ರದಾಯಕ್ಕೆ ಗೋಹತ್ಯಾ ನಿಷೇಧ ಕಾಯ್ದೆ ಮೂಲಕ ಕೊಡಲಿಯೇಟು ನೀಡಿತು. ಗೋವು-ಎತ್ತುಗಳನ್ನು ಮಾರಾಟ ಮಾಡುವುದಕ್ಕೆ ತಡೆ ವಿಧಿಸಿತಲ್ಲದೇ, ಹೀಗೆ ಮಾರುವವರನ್ನು ಧರ್ಮ ವಿರೋಧಿಗಳು ಮತ್ತು ಹೆತ್ತ ತಾಯಿಯನ್ನೇ ಕಸಾಯಿಖಾನೆಗೆ ಅಟ್ಟುವ ಅಪರಾಧಿಗಳು ಎಂಬಂತೆ ಸಾರ್ವಜನಿಕವಾಗಿ ಬಿಂಬಿಸಿ ಹೀಯಾಳಿಸತೊಡಗಿತು. ರೈತರಿಂದ ಇಂಥ ಜಾನುವಾರುಗಳನ್ನು ಖರೀದಿಸಿ ಸಾಗಿಸುವವರನ್ನು ಥಳಿಸುವ ಮತ್ತು ಹತ್ಯೆ ನಡೆಸುವ ಪ್ರಕ್ರಿಯೆಗಳೂ ಎಗ್ಗಿಲ್ಲದೇ ನಡೆದುವು. ಅದರ ಪರಿಣಾಮ ಏನೆಂದರೆ,

ರೈತರು ಗೋಸಾಕಾಣಿಕೆಗೆ ಬೆನ್ನು ಹಾಕತೊಡಗಿದರು. ಉಳುಮೆಗೆ ಟ್ರಾಕ್ಟರ್ ಅವಲಂಬನೆ ಹೆಚ್ಚಾಯಿತು. ಗೋವು, ಕರು, ಎತ್ತುಗಳಿದ್ದ ಹಟ್ಟಿಗಳು ನಿಧಾನಕ್ಕೆ ಬರಿದಾದುವು. ಹಸುವೊಂದು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕವೂ ಹತ್ತು ವರ್ಷಗಳ ವರೆಗೆ ಬದುಕಿರುತ್ತದೆ. ಉಳುಮೆಗೆ ಬಾರದ ಎತ್ತು ಕೂಡಾ ಅಷ್ಟೇ ಆಯುಷ್ಯವನ್ನು ಹೊಂದಿರುತ್ತದೆ. ಹೀಗಿರುವಾಗ, ಒಂದು ಹಟ್ಟಿಯಲ್ಲಿ ಇಂಥ ನಾಲ್ಕೈದು ಹಸು-ಎತ್ತುಗಳಿದ್ದರೆ ಏನಾದೀತು? ರೈತ ಅದನ್ನು ಹೇಗೆ ಸಾಕಬಲ್ಲ? ಅದನ್ನು ಹಸಿವಿಗೆ ದೂಡುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂಬ ಸ್ಥಿತಿಯಲ್ಲಿ ರೈತ ಏನು ಮಾಡಬಲ್ಲ? ಗೋವು-ಎತ್ತು ಸಾಕಾಣಿಕೆಯನ್ನು ಖೈದು ಮಾಡದೇ ಬೇರೆ ಯಾವ ಆಯ್ಕೆ ಆತನಿಗಿದೆ?

ಬಹುಶಃ, ಗೋಹತ್ಯಾ ನಿಷೇಧದ ಹಿಂದೆ ರಾಜ್ಯಾದ್ಯಂತ ಎಕರೆಗಟ್ಟಲೆ ಇರುವ ಹುಲುಸಾದ ಗೋಮಾಳವನ್ನು ಮಾರಾಟ ಮಾಡುವ ದುರುದ್ದೇಶವೂ ಸರಕಾರಕ್ಕೆ ಇತ್ತೇ ಎಂಬ ಅನುಮಾನ ಈಗ ಕಾಡುತ್ತಿದೆ. ಹೊರಗೆ ಗೋರಕ್ಷಕನ ಮುಖವಾಡ ತೊಟ್ಟು ಒಳಗೊಳಗೇ ಭೂಮಾರಾಟ ದಂಧೆ ನಡೆಸುವುದಕ್ಕೆ ಸರಕಾರ ಯೋಚಿಸಿತ್ತೇ? ತನ್ನದೇ ಪರಿವಾರಕ್ಕೆ ನೂರಾರು ಗೋಮಾಳ ಭೂಮಿಯನ್ನು ಮಾರಾಟ ಮಾಡುವುದಕ್ಕಾಗಿ ಗೋಹತ್ಯಾ ನಿಷೇಧ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೆ ತರಲಾಯಿತೇ? ಇಲ್ಲದಿದ್ದರೆ, ಕನಿಷ್ಠ ಈ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ಗಳಾದರೂ ಈ ಗೋಮಾಳ ಭೂಮಿಯನ್ನು ತಿರಸ್ಕರಿಸಬೇಕಿತ್ತಲ್ಲವೇ? ಗೋವಿಗಾಗಿ ಮುಡಿಪಾಗಿಟ್ಟ ಭೂಮಿ ತನಗೆ ಬೇಡ ಎಂದು ಹೇಳಬೇಕಿದ್ದ ಅವುಗಳೂ ಯಾಕೆ ಜುಜುಬಿ ಮೊತ್ತಕ್ಕೆ ಖರೀದಿಸಿದುವು?

ಸಿದ್ದರಾಮಯ್ಯ ಸರಕಾರ ಮುಲಾಜು ಮತ್ತು ಸೇಡಿನ ಭಾವವಿಲ್ಲದೇ ತನಿಖೆ ಮಾಡಲಿ. ಗೋಮಾಳವನ್ನು ನುಂಗಿದವರಿಗೆ ನೀರು ಕುಡಿಸಲಿ.

No comments:

Post a Comment