27-6-2022
ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿದೆ. ಒಂದುವೇಳೆ, ಅವರಿಲ್ಲದೇ ಇರುತ್ತಿದ್ದರೆ ಗುಜರಾತ್ ನರಮೇಧದ ಸಂತ್ರಸ್ತರು ಹೇಗಿರುತ್ತಿದ್ದರು? ಅವರು ತಮ್ಮ ಕಮ್ಯುನಲಿಸಂ ಕೋಂಬಾಟ್ ಪತ್ರಿಕೆಯನ್ನು ವರ್ಷಗಳ ಕಾಲ ಗುಜರಾತ್ ಸಂತ್ರಸ್ತರ ಸಂಕಟಗಳಿಗೆ ಮೀಸಲಿಡದೇ ಇರುತ್ತಿದ್ದರೆ ಮತ್ತು ನರಮೇಧದ ಒಳಸಂಚುಗಳನ್ನು ಇಂಚಿಂಚಾಗಿ ನಾಗರಿಕ ಸಮಾಜದ ಮುಂದಿಡದೇ ಇರುತ್ತಿದ್ದರೆ, ಏನಾಗಿರುತ್ತಿತ್ತು? ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ನರಮೇಧದ ಸಂತ್ರಸ್ತರನ್ನು ಕೋರ್ಟಿಗೆ ಹೋಗುವಂತೆ ಧೈರ್ಯ ತುಂಬದೇ ಇರುತ್ತಿದ್ದರೆ, ಒಂದೇ ಒಂದು ಪ್ರಕರಣವಾದರೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತಿತ್ತೇ?
ತನ್ನವರನ್ನು ಕಳಕೊಂಡದ್ದಲ್ಲದೇ ಭೀಕರ ಅತ್ಯಾಚಾರಕ್ಕೂ ಗುರಿಯಾದ ಬಿಲ್ಕೀಸ್‌ಗೆ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆ ಸುಪ್ರೀಮ್ ಕೋರ್ಟು ಗುಜರಾತ್ ಸರಕಾರಕ್ಕೆ ಆದೇಶಿಸಿದ್ದರೆ, ಅದಕ್ಕೆ ಕಾರಣ ಇದೇ ಸೆಟಲ್ವಾಡ್. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೆ, ಅದರ ಹಿಂದಿನ ರೂವಾರಿ ಇದೇ ಸೆಟಲ್ವಾಡ್.
ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಸುಮಾರು 50ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಇವರಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರೂ ಇದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿಯ ನ್ನು ಕಟಕಟೆಯಲ್ಲಿ ನಿಲ್ಲಿಸಲು ಸಾಧ್ಯವಾಗಿದ್ದಿದ್ದರೆ ಅದರ ಹಿಂದೆ ಸೆಟಲ್ವಾಡ್‌ರ ಶ್ರಮ ಸಾಕಷ್ಟಿದೆ. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ತೀಸ್ತಾ ಸಂತ್ರಸ್ತರ ಆಮ್ಲಜನಕವಾಗಿದ್ದರು. ಪ್ರಭುತ್ವದ ಮೌನ ಸಮ್ಮತಿಯೊಂದಿಗೆ ನರಮೇಧವೊಂದು ನಡೆದಾಗ ಸಂತ್ರಸ್ತರ ಮುಂದೆ ಎರಡ್ಮೂರು ಸವಾಲುಗಳಿರುತ್ತವೆ.
1. ಪ್ರಭುತ್ವವೇ ಅವರ ವಿರುದ್ಧ ನಿಂತಿರುವುದು.
2. ಸಂತ್ರಸ್ತರೆಂಬ ನೆಲೆಯಲ್ಲಿನ ಅಸಹಾಯಕತೆ.
3. ನ್ಯಾಯಕ್ಕಾಗಿ ಕೋರ್ಟು ಮೆಟ್ಟಲು ಹತ್ತಬೇಕಾದರೆ ಎದುರಾಗುವ ಹಣಕಾಸಿನ ಅಡಚಣೆ.
ಎಲ್ಲಕ್ಕಿಂತ ದೊಡ್ಡ ಸವಾಲಿನ ಕೆಲಸವೇನೆಂದರೆ, ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು. ಗುಜರಾತ್ ನರಮೇಧದಲ್ಲಿ ಬದುಕುಳಿದ ಸಂತ್ರಸ್ತರು ತಮ್ಮ ಮೇಲಾದ ದೌರ್ಜನ್ಯ ಮತ್ತು ತಾವು ಕಂಡುಂಡ ಭೀಕರ ದೃಶ್ಯದ ವಿವರಗಳನ್ನು ದಾಖಲಿಸಬೇಕಿದ್ದುದು ಪೊಲೀಸ್ ಠಾಣೆಗಳಲ್ಲಿ. ಆದರೆ ಹೆಚ್ಚಿನ ಕ್ರೌರ್ಯಗಳು ಈ ಪೊಲೀಸ್ ಠಾಣೆಗಳ ನಿಷ್ಕ್ರೀಯತೆ ಅಥವಾ ಬೆಂಬಲದಿಂದಲೇ ನಡೆದಿದ್ದುವು. ಆದ್ದರಿಂದ, ಸಂತ್ರಸ್ತರೋರ್ವರು ಠಾಣೆಯೊಂದರ ಮೆಟ್ಟಲೇರುವುದು ಮತ್ತು ದೂರು ದಾಖಲಿಸುವುದು ಸುಲಭ ಅಲ್ಲ. ಅಲ್ಲಿನ ಪೊಲೀಸರು ಬಿಡಿ, ಕಂಭ ಕಂಭಗಳೂ ಆ ಸಂತ್ರಸ್ತರನ್ನು ದುರುಗುಟ್ಟಿ ನೋಡುವುದು ಸಹಜ. ಇಂಥ ಸವಾಲನ್ನು, ಆಗಷ್ಟೇ ತನ್ನವರನ್ನೆಲ್ಲ ಕಳಕೊಂಡು ಬೀದಿ ಪಾಲಾಗಿರುವ ಓರ್ವ ಸಂತ್ರಸ್ತ ಎದುರಿಸುವುದು ಸುಲಭ ಅಲ್ಲ. ತೀಸ್ತಾ ಮುಖ್ಯವಾಗುವುದೇ ಇಲ್ಲಿ. ದೇಶ ಕಂಡ ಪ್ರಪ್ರಥಮ ಅಟಾರ್ನಿ ಜನರಲ್ ಚಿಮನ್‌ಲಾಲ್ ಸೆಟಲ್ವಾಡ್‌ರ ಮೊಮ್ಮಗಳಾದ ಮತ್ತು ನ್ಯಾಯವಾದಿ ಅತುಲ್ ಸೆಟಲ್ವಾಡ್‌ರ ಮಗಳಾದ ತೀಸ್ತಾರಲ್ಲಿ ಸಹಜವಾಗಿಯೇ ಕಾನೂನು ಪರಿಜ್ಞಾನ ಚೆನ್ನಾಗಿತ್ತು. ಜೊತೆಗೆ ಅವರು ಮುಂಬೈಯಲ್ಲಿ ಬೆಳೆದವರಾದರೂ ಹುಟ್ಟಿದ್ದು ಗುಜರಾತ್ ನಲ್ಲಿದುದರಿಂದ ಆ ಮಣ್ಣಿನ ಗುಣವನ್ನು ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು.
1992ರಲ್ಲಿ ಮುಂಬೈ ಗಲಭೆ ನಡೆದಾಗ, ಅದನ್ನು ಹತ್ತಿರದಿಂದ ಕಂಡು ಮಾಧ್ಯಮಗಳಿಗೆ ವರದಿ ಮಾಡಿದ ಅನುಭವವೂ ಅವರಿಗಿತ್ತು. ಕೋಮು ಘರ್ಷಣೆಯ ಹೆಸರಲ್ಲಿ ನಡೆಯುವ ಜನಾಂಗೀಯ ಹಿಂಸೆ ಮತ್ತು ಏಕಮುಖ ಹತ್ಯಾಕಾಂಡಗಳನ್ನು ಅವರಿಗೆ ಮುಂಬೈ ಗಲಭೆ ಚೆನ್ನಾಗಿ ಪರಿಚಯಿಸಿತ್ತು. ಆದ್ದರಿಂದಲೇ, 2002ರ ಗುಜರಾತ್ ನರಮೇಧ ಕ್ಕಿಂತ 5 ವರ್ಷಗಳ ಮೊದಲೇ ಹತ್ಯಾಕಾಂಡವೊಂದರ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು ಮತ್ತು ವಿವಿಧ ದಾಖಲೆ ಹಾಗೂ ವರದಿಗಳನ್ನು ಸಂಗ್ರಹಿಸಿ ನ್ಯಾಯವಾದಿಗಳ ಬಾಗಿಲು ತಟ್ಟಿದ್ದರು. ಅಂದಹಾಗೆ, ತೀಸ್ತಾ ಅವರ ಛಲ ಬಿಡದ ಹೋರಾಟಕ್ಕೆ ಒಂದು ಸಾಕ್ಷ್ಯ ಬೇಕೆಂದರೆ ಅದು ಬಿಲ್ಕೀಸ್ ಬಾನು ಪ್ರಕರಣ. ಬೆಸ್ಟ್ ಬೇಕರಿ ಮತ್ತು ಬಿಲ್ಕೀಸ್ ಬಾನು ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸರು ಕೈಬಿಟ್ಟಿದ್ದರು. ತೀಸ್ತಾ ಸುಮ್ಮನಾಗಲಿಲ್ಲ. ಬಿಲ್ಕೀಸ್‌ರಲ್ಲಿ ಧೈರ್ಯ ತುಂಬಿದರು. ನ್ಯಾಯವನ್ನು ಪಡೆದೇ ತೀರಬೇಕೆಂಬ ಛಲ ಹುಟ್ಟಿಸಿದರು. ಅವರಿಂದಾಗಿಯೇ ಆ ಪ್ರಕರಣ ಸುಪ್ರೀಮ್ ಮೆಟ್ಟಿಲೇರಿತು ಮತ್ತು ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ ಅವರು ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದರು.
ನಿಜವಾಗಿ, ಪ್ರಭುತ್ವ ಭಾಗಿಯಾದ ಯಾವುದೇ ನರಮೇಧವು ಹೆಚ್ಚು ಸಮಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವುದು ಕಡಿಮೆ. ಇದಕ್ಕೆ ಕಾರಣ, ಪ್ರಭುತ್ವದ ಭೀತಿ. ರಾಷ್ಟ್ರೀಯ ಮಾಧ್ಯಮಗಳು ಒಂದಿಷ್ಟು ದಿನ ಇಂಥ ಕ್ರೌರ್ಯಗಳ ಅಷ್ಟಿಷ್ಟು ವರದಿಯನ್ನು ಮಾಡಿ ಬಳಿಕ ಬೆನ್ನು ಹಾಕುವುದು ರೂಢಿ. ಆದರೆ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಈ ಮಾತು ಸುಳ್ಳಾಗಿದ್ದರೆ ಅದರ ಪೂರ್ಣ ಶ್ರೇಯಸ್ಸು ತೀಸ್ತಾರಿಗೆ ಸಲ್ಲಬೇಕು. ಗುಜರಾತ್ ನರಮೇಧಕ್ಕೆ ಪೂರ್ವಭಾವಿಯಾಗಿ ನಡೆದಿರಬಹುದಾದ ಸಂಚುಗಳಿಂದ ಹಿಡಿದು, ಇಡೀ ನರಮೇಧಕ್ಕೆ ನೇತೃತ್ವ ನೀಡಿದವರು, ಪ್ರಚೋದನೆ ಕೊಟ್ಟವರು ಮತ್ತು ಮಾಧ್ಯಮಗಳ ಸುಳ್ಳು ಸುದ್ದಿಗಳನ್ನು ತೀಸ್ತಾ ತನ್ನ ಕಮ್ಯುನಲಿಸಂ ಕೊಂಬಾಟ್ ಪತ್ರಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಪ್ರಕಟಿಸತೊಡಗಿದರು. ನಿಜವಾಗಿ,
ತನ್ನ ಪತ್ರಿಕೆಯನ್ನು ಅವರು ಕೇವಲ ಗುಜರಾತ್ ನರಮೇಧದ ಬಲಿಪಶುಗಳಿಗಾಗಿಯೇ ಅರ್ಪಿಸಿದ್ದರು. ಆರಂಭದಿಂದ ಕೊನೆಪುಟದ ವರೆಗೆ ನರಮೇಧದ ಇಂಚಿಂಚು ವಿವರಗಳು ಮತ್ತು ಕಾನೂನು ಪ್ರಕ್ರಿಯೆಗಳ ಮಾಹಿತಿಗಾಗಿ ಮೀಸಲಿಟ್ಟರು. ಸಂತ್ರಸ್ತರನ್ನು ಭೇಟಿಯಾಗಿ ಅವರ ಮಾತುಗಳನ್ನು ಗುಜರಾತ್‌ನಿಂದ ಹೊರಗಿನ ಓದುಗರಿಗೆ ತಲುಪಿಸಿದರು. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯ ಮಾಹಿತಿಗಳನ್ನು ನೀಡುತ್ತಾ ಬಂದರು. ಎಲ್ಲೆಲ್ಲ ಸಂತ್ರಸ್ತರಿದ್ದರೋ ಅವರೆಲ್ಲರಿಗೂ ಏಕಧ್ವನಿ ಬರುವಂತೆ ಮತ್ತು ಧೈರ್ಯದಿಂದಿರುವಂಥ ವಾತಾವರಣ ಸೃಷ್ಟಿಸಿದರು. ಗುಜರಾತ್‌ನಿಂದ ಹೊರಬಂದು ವಿವಿಧ ರಾಜ್ಯಗಳಲ್ಲಿ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಹಂಚಿಕೊಂಡರು. ಯಾವ ಕಾರಣಕ್ಕೂ ಗುಜರಾತ್ ನರಮೇಧದ ರೂವಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಈ ನರಮೇಧ ಸಾರ್ವಜನಿಕ ಪ್ರಜ್ಞೆಯಿಂದ ಮಾಸಿ ಹೋಗಬಾರದು ಎಂಬ ಪ್ರಾಮಾಣಿಕ ಕಳಕಳಿ ತೀಸ್ತಾರಲ್ಲಿತ್ತು. ಒಂದು ನರಮೇಧದ ಪ್ರಜ್ಞೆ ಸಾರ್ವಜ ನಿಕವಾಗಿ ಇರುವವರೆಗೆ ಇನ್ನೊಂದು ನರಮೇಧ ಸುಲಭ ಅಲ್ಲ. ಯಾಕೆಂದರೆ,
ಜನರು ತಕ್ಷಣಕ್ಕೆ ಎಚ್ಚೆತ್ತುಕೊಳ್ಳುತ್ತಾರೆ. ನರಮೇಧದ ಸಾಧ್ಯತೆಗಳನ್ನು ಗುರುತಿಸಿ ಸಮಾಜಕ್ಕೆ ಎಚ್ಚರಿಕೆಯನ್ನು ರವಾನಿಸುತ್ತಾರೆ. ಕಳೆದ 20 ವರ್ಷಗಳಲ್ಲಿ ತೀಸ್ತಾ ತನ್ನ ಆಯು ಷ್ಯದ ಬಹುತೇಕ ಸಮಯವನ್ನು ಇನ್ನೊಂದು ನರಮೇಧ ನಡೆಯದಂತೆ ತಡೆಯುವುದಕ್ಕಾಗಿ ಮೀಸಲಿ ಟ್ಟರು ಎಂದರೂ ಸರಿ. 2002ರ ಗುಜರಾತ್ ಹತ್ಯಾಕಾಂಡಕ್ಕೆ ಪೂರ್ವಭಾವಿಯಾಗಿ ಅಲ್ಲಿನ ಆದಿವಾಸಿಗಳು, ಕ್ಷತ್ರಿಯ, ಹರಿಜನರಲ್ಲಿ ಹೇಗೆ ಮುಸ್ಲಿಮ್ ದ್ವೇಷವನ್ನು ಗಟ್ಟಿಗೊಳಿಸಲಾಗುತ್ತಾ ಬರಲಾಯಿತು ಎಂಬ ಮಾಹಿತಿ ತೀಸ್ತಾರಲ್ಲಿ ಇದ್ದುದರಿಂದಲೇ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದಾದ್ಯಂತ ಸುತ್ತಿದರು. ಒಂದುಕಡೆ, ತನ್ನ ಸಿಟಿಜನ್ಸ್ ಫಾರ್ ಜಸ್ಟೀಸ್ ಎಂಡ್ ಪೀಸ್ ಎಂಬ ಸಂಸ್ಥೆಯ ಮೂಲಕ ಗುಜರಾತ್ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತಾ ಮತ್ತು ಇನ್ನೊಂದು ಕಡೆ, ತನ್ನ ಕಮ್ಯುನಲಿಸಂ ಕೊಂಬಾಟ್ ಮೂಲಕ ದೇಶದ ಉದ್ದಗಲದ ಭಾರತೀಯರಲ್ಲಿ ನರಮೇಧದ ಪೈಶಾಚಿಕತೆಯನ್ನು ವಿವರಿಸುತ್ತಾ ನಡೆದರು. ಇದರಿಂದಾಗಿ ಪ್ರಭುತ್ವ ಮತ್ತು ಅವರ ಬೆಂಬಲಿಗರ ತೀವ್ರ ವಿರೋಧವನ್ನೂ ಕಟ್ಟಿಕೊಂಡರು. ಅವರನ್ನು ಕಾನೂ ನಿನ ಕುಣಿಕೆಯಲ್ಲಿ ಸಿಲುಕಿಸುವುದಕ್ಕೆ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಬಂದುವು. ಇದೀಗ, ಕ್ರಿಮಿನಲ್ ಪಿತೂರಿ, ಸುಳ್ಳು ಸಾಕ್ಷ್ಯಾಧಾರ ಸಲ್ಲಿಕೆ ಮತ್ತು ಸಂತ್ರಸ್ತರ ಭಾವುಕತೆಯನ್ನು ದುರುಪಯೋಗಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಬಂಧನದ ಹಿಂದೆ ಸುಪ್ರೀಮ್ ಕೋರ್ಟ್‌ನ ಪರಾಮರ್ಶೆಗೂ ಪಾತ್ರ ಇದೆ ಎಂಬುದೇ ಅತಿದೊಡ್ಡ ದುರಂತ. ಒಂದುವೇಳೆ,
ಮುಂಬೈ, ಭೀವಂಡಿ, ಭಾಗಲ್ಪುರ್, ನೆಲ್ಲಿ, ದೆಹಲಿ ಅಥವಾ ಇನ್ನಾವುದೇ ಕಡೆ ನಡೆದ ಹತ್ಯಾಕಾಂಡಗಳ ಬಗ್ಗೆ ತೀಸ್ತಾರಂತೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳು ರಂಗಕ್ಕಿಳಿಯದೇ ಇರುತ್ತಿದ್ದರೆ ಮತ್ತು ಸಂತ್ರಸ್ತರ ಬೆನ್ನಿಗೆ ನಿಲ್ಲದೇ ಇರುತ್ತಿದ್ದರೆ ಆ ಕ್ರೌರ್ಯಕ್ಕೆ ಕಾರಣರಾದವರು ಕಟಕಟೆಯ ವರೆಗೆ ತಲುಪುತ್ತಿದ್ದರೇ? ತೀಸ್ತಾರಂತೆ ಸಂತ್ರಸ್ತರ ಜೊತೆಗೆ ನಿಲ್ಲುವುದನ್ನೇ ಮತ್ತು ಅವರಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವ ಕಿಚ್ಚು ತುಂಬುವುದನ್ನೇ ಅಪರಾಧ ಎಂದು ಹೇಳುವುದಾದರೆ, ಸಂತ್ರಸ್ತರಿಗೆ ಇನ್ನು ಮುಂದೆ ನೆರವಾಗಲು ಯಾರು ಸಿಗಬಹುದು? ಅಷ್ಟಕ್ಕೂ, ಇನ್ನು ಮುಂದೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋದರೆ ಅದರ ಹೆಸರಲ್ಲಿ ನ್ಯಾಯವಾದಿ ಮತ್ತು ಎಫ್‌ಐಆರ್ ದಾಖಲಿಸಿದ ಪೊಲೀಸರನ್ನು ತೀಸ್ತಾರಂತೆ ಬಂಧಿಸಲಾಗುವುದೇ? ಮೋದಿಯವರಿಗೆ ಕ್ಲೀನ್‌ಚಿಟ್ ಕೊಡುವುದು ಬೇರೆ, ಅವರ ಮೇಲೆ ಕೇಸು ದಾಖಲಿಸಲು ನೆರವಾದುದಕ್ಕೆ ತೀಸ್ತಾರನ್ನು ಬಂಧಿಸುವುದು ಬೇರೆ. ಟೀಸ್ತಾ ಗೆದ್ದು ಬರಲಿ.
No comments:
Post a Comment