27-3-2023
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರೆಲ್ಲ ಸಮುದಾಯಗಳಿಗಿಂತ ಮುಂದಿರುವ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತರು ಮತ್ತು ಮೊದಲಿಯಾರ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆಂದೇ ನೀಡಲಾಗುತ್ತಿರುವ 10% ಮೀಸಲಾತಿ ಗುಂಪಿಗೆ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಸೇರಿಸುವುದು ಮತ್ತು ನೀವು ಆ ಮುಂದುವರಿದ ಸಮುದಾಯದ ಜೊತೆ ಸೆಣಸಿ ಮೀಸಲಾತಿ ದಕ್ಕಿಸಿಕೊಳ್ಳಿ ಎನ್ನುವುದು ಕ್ರೌರ್ಯವಲ್ಲದೇ ಇನ್ನೇನು? ಹಾಗಂತ,
ಈ 10% ಮೀಸಲಾತಿಯಲ್ಲಿ ಮುಸ್ಲಿಮರಿಗಿಷ್ಟು, ಬ್ರಾಹ್ಮಣರಿಗಿಷ್ಟು, ಜೈನರಿಗಿಷ್ಟು ಎಂಬ ವಿಭಜನೆಯೇ ಇಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆಂದು (ಇಡಬ್ಲ್ಯೂಎಸ್) ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಹೊರತುಪಡಿಸಿ ಉಳಿದಂತೆ ಈ ಮೀಸಲಾತಿ ಗುಂಪಿನಲ್ಲಿ ಸೇರ್ಪಡೆಗೊಂಡಿರುವ ಸಮುದಾಯಗಳಿಗೆ ಉತ್ತಮ ಓದಿನ ಅವಕಾಶವಷ್ಟೇ ಅಲ್ಲ, ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳೂ ಆ ಸಮುದಾಯಗಳಲ್ಲೇ ಇದ್ದಾರೆ. ಇಂಥ ಸಮುದಾಯದ ಜೊತೆ ಸ್ಲಂನಲ್ಲಿ ಬದುಕುವ ಬಡ ಮುಸ್ಲಿಮ್ ಸಮುದಾಯದ ಮಕ್ಕಳು ಸ್ಪರ್ಧಿಸಿಯಾರೇ? ಸ್ಪರ್ಧಿಸಿ ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಪಡೆದಾರೇ?
1994ರಲ್ಲಿ ಪ್ರವರ್ಗ 2ಬಿಯನ್ನು ಜಾರಿಗೆ ತರುವ ಮೊದಲು ಹಲವು ವರದಿಗಳ ಪರಾಮರ್ಶೆ ನಡೆಸಲಾಗಿತ್ತು. ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿಯವರು ಈ ಕುರಿತಂತೆ ಸಾಕಷ್ಟು ಬೆವರು ಸುರಿಸಿದ್ದರು. ಮುಸ್ಲಿಮ್ ಪ್ರದೇಶಗಳಿಗೆ ಭೇಟಿ ನೀಡಿ ಸಮುದಾಯದ ಜೀವನ ಮಟ್ಟವನ್ನು ಅವಲೋಕಿಸಿದ್ದರು. ಶ್ರೀಮಂತರು ಮತ್ತು ಬಡವರ ನಡುವೆ ಇರುವ ಅಗಾಧ ಪ್ರಮಾಣದ ಆರ್ಥಿಕ-ಸಾಮಾಜಿಕ ಮತ್ತು ಶೈಕ್ಷಣಿಕ ಅಂತರವನ್ನು ದಾಖಲಿಸಿದ್ದರು. ಉದ್ಯೋಗ ರಂಗದಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತಳಮಟ್ಟದಲ್ಲಿರುವುದನ್ನು ಕಂಡಿದ್ದರು. ಹಾಗೆಯೇ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೆ. ರೆಹ್ಮಾನ್ ಖಾನ್ ನೇತೃತ್ವದಲ್ಲಿ ವರದಿಯನ್ನು ತರಿಸಿಕೊಳ್ಳಲಾಗಿತ್ತು. ಆ ವರದಿಯಲ್ಲಿ ಮುಸ್ಲಿಮ್ ಸಮುದಾಯದ ದಯನೀಯ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಲಾಗಿತ್ತು. ಆ ಕಾರಣದಿಂದಲೇ ಮುಸ್ಲಿಮ್ ಸಮುದಾಯಕ್ಕೆ 6% ಮೀಸಲಾತಿಯನ್ನು ಘೋಷಿಸಲಾಗಿತ್ತು. ಆದರೆ,
ಯಾವುದೇ ಮೀಸಲಾತಿ ಪ್ರಮಾಣವು 50%ಕ್ಕಿಂತ ಹೆಚ್ಚಾಗಬಾರದು ಎಂಬ ಸುಪ್ರೀಮ್ ಕೋರ್ಟಿನ ತೀರ್ಪಿನಿಂದಾಗಿ 6% ಅನ್ನು 4% ಆಗಿ ಪರಿವರ್ತಿಸಲಾಗಿತ್ತು. ಇದೀಗ ಈ 2ಬಿ ಕೆಟಗರಿಯನ್ನೇ ರದ್ದುಪಡಿಸಲಾಗಿದೆ. ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ 4% ಮೀಸಲಾತಿಯನ್ನು ಒಕ್ಕಲಿಗರು ಮತ್ತು ವೀರಶೈವ ಲಿಂಗಾಯಿತ ಸಮುದಾಯಕ್ಕೆ ತಲಾ 2%ಗಳಂತೆ ಹಂಚಲಾಗಿದೆ. ಆ ಸಮುದಾಯವಾದರೋ ಮುಸ್ಲಿಮರಿಂದ ಕಿತ್ತು ಕೊಡಲಾದ ಈ ಮೀಸಲಾತಿಯನ್ನು ಪ್ರಶ್ನೆ ಮಾಡದೇ ಸ್ವೀಕರಿಸಿಕೊಂಡಿದೆ. ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು ಈ ಸಮುದಾಯಗಳು ಒತ್ತಾಯಿಸುವಾಗ, ಎಲ್ಲೂ ಕೂಡ ಮುಸ್ಲಿಮ್ ಸಮುದಾಯದಿಂದ ಕಿತ್ತು ಕೊಡಿ ಎಂದು ಆಗ್ರಹಿಸಿಯೇ ಇರಲಿಲ್ಲ. ಆದರೆ, ಸರ್ಕಾರ ಈ ರೀತಿಯ ಆಘಾತಕಾರಿ ಮೀಸಲಾತಿ ಹಂಚುವಿಕೆಯ ಮೂಲಕ ಮುಸ್ಲಿಮ್ ಸಮುದಾಯದ ಅಸಹನೆಗೆ ಒಕ್ಕಲಿಗ ಮತ್ತು ವೀರಶೈವ ಲಿಂಗಾಯಿತ ಸಮುದಾಯ ಗುರಿಯಾಗುವಂತೆ ಮಾಡಿದೆ. ನಿಜವಾಗಿ,
ಹಿಂದುಳಿದ ವರ್ಗಗಳ ಅಭಿಪ್ರಾಯವನ್ನೇ ಕೇಳದೇ ಮತ್ತು ಸಾರ್ವಜನಿಕವಾಗಿ ಯಾವ ಸೂಚನೆಯನ್ನೂ ಕೊಡದೇ ಏಕಾಏಕಿ ಮುಸ್ಲಿಮರಿಂದ ಮೀಸಲಾತಿಯನ್ನು ಕಿತ್ತು ಇತರರಿಗೆ ನೀಡಿರುವುದು- ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿಲ್ಲ. ಧಾರ್ಮಿಕ ಆಧಾರದಲ್ಲಿ ಮೀಸಲಾತಿ ಕೊಡಲಾಗದು ಎಂಬುದು ಸರ್ಕಾರದ ವಾದ. ಇಲ್ಲೂ ಸರ್ಕಾರ ಪೂರ್ಣವಾಗಿ ಎಡವಿದೆ. ಲಿಂಗಾಯಿತ ಮತ್ತು ಒಕ್ಕಲಿಗರನ್ನು ಸಮುದಾಯವಾಗಿ ನೋಡುವಂತೆಯೇ ಸರ್ಕಾರ ಮುಸ್ಲಿಮರನ್ನೂ ಸಮುದಾಯವಾಗಿಯೇ ನೋಡಬೇಕು. ಇಸ್ಲಾಮ್ ಎಂಬುದು ಧರ್ಮವೇ ಹೊರತು ಮುಸ್ಲಿಮ್ ಎಂಬುದು ಸಮುದಾಯ. ಇಸ್ಲಾಮ್‌ನಲ್ಲಿ ಪಿಂಜಾರ, ನದಾಫ್, ಭಾಗವಾನ್ ಎಂಬ ನೇರ ವಿಭಜನೆಗಳಿಲ್ಲ. ಆದರೆ ಒಂದು ಸಮುದಾಯವಾಗಿ ಮುಸ್ಲಿಮರಲ್ಲಿ ಪಂಗಡ, ಪಂಥಗಳಿವೆ. ಇವು ಜಾತಿಗಳಂತೆ ಅಲ್ಲವಾದರೂ ವೃತ್ತಿ ಮತ್ತು ಇನ್ನಿತರ ಸ್ಥಳೀಯ ಕಾರಣಕ್ಕಾಗಿ ಗುರುತಿನ ಬೇರೆ ಬೇರೆ ಐಡೆಂಟಿಟಿಗಳಿವೆ. ಆದ್ದರಿಂದ ಇಸ್ಲಾಮನ್ನು ಒಂದು ಧರ್ಮವಾಗಿ ಮತ್ತು ಮುಸ್ಲಿಮ್ ಅನ್ನು ಒಂದು ಸಮುದಾಯವಾಗಿ ಪರಿಗಣಿಸಬೇಕೇ ಹೊರತು ಧರ್ಮವಾಗಿ ಅಲ್ಲ. ಈ ವಿಷಯದಲ್ಲಿ ಆಂಧ್ರ ಮತ್ತು ತೆಲಂಗಾಣದ ಮೀಸಲಾತಿ ವಿಷಯದಲ್ಲಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಕ ಮತ್ತು ವೀರಶೈವ ಲಿಂಗಾಯಿತ ಸಮುದಾಯವನ್ನು ಒಲಿಸಿಕೊಳ್ಳುವುದಕ್ಕಾಗಿ ಮುಸ್ಲಿಮರ ಮೇಲೆ ಪ್ರಹಾರ ನಡೆಸಿದೆ. ಅಂದಹಾಗೆ,
ಪ್ರವರ್ಗ 2ಬಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯಿಂದ ಸಮುದಾಯಕ್ಕೆ ಸಾಕಷ್ಟು ಲಾಭವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರು ಈ ಮೀಸಲಾತಿಯ ಲಾಭ ಪಡೆದು ಉನ್ನತ ಹಂತಕ್ಕೂ ಹೋಗಿದ್ದಾರೆ. ಪೊಲೀಸ್, ಡಿವೈಎಸ್ಪಿ, ಶಿಕ್ಷಕರು ಇನ್ನಿತರ ಹಲವು ಉದ್ಯೋಗಗಳು ಈ ಮೀಸಲಾತಿಯಿಂದಾಗಿ ಮುಸ್ಲಿಮರಿಗೆ ಲಭ್ಯವಾಗಿದೆ. ಶೈಕ್ಷಣಿಕವಾಗಿಯೂ 2ಬಿಯಿಂದ ಮುಸ್ಲಿಮ್ ಸಮುದಾಯ ಲಾಭ ಪಡೆದಿದೆ. ಹಾಗಂತ, ದಲಿತರಿಗಿಂತಲೂ ಮುಸ್ಲಿಮ್ ಸಮುದಾಯದ ಸ್ಥಿತಿ ಹೀನಾಯ ಎಂದು ಸಾಚಾರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿದರೆ ಮುಸ್ಲಿಮ್ ಸಮುದಾಯ 2ಬಿಯಲ್ಲಿ ಇರುವುದಕ್ಕೆ ಸೂಕ್ತವೇ ಹೊರತು ಇಡಬ್ಲ್ಯುಎಸ್‌ನಲ್ಲಲ್ಲ ಎಂಬುದು ಸ್ಪಷ್ಟ. ಅಷ್ಟಕ್ಕೂ,
ಮುಸ್ಲಿಮ್ ಎಂಬುದು ಸಮುದಾಯ ಸೂಚಕ ಮತ್ತು ಇಸ್ಲಾಮ್ ಎಂಬುದು ಧರ್ಮ ಸೂಚಕ ಎಂಬ ಅರಿವು ಇಲ್ಲದೇ ಬೊಮ್ಮಾಯಿ ಸರ್ಕಾರ ಹೀಗೆ ನಡಕೊಂಡಿದೆ ಎಂದು ಅಂದುಕೊಳ್ಳುವುದು ಬೋಳೆತನವಾದೀತು. ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಡಕೊಂಡಿರುವುದು ಅದರಲ್ಲೂ ಬೊಮ್ಮಾಯಿ ಸರ್ಕಾರ ನಡಕೊಂಡಿರುವುದೇ ಮುಸ್ಲಿಮ್ ವಿರೋಧಿಯಾಗಿ. ಮುಸ್ಲಿಮರ ಓಟು ಬೇಡ ಅನ್ನುವವರು ಬಿಜೆಪಿಯಲ್ಲೇ ಇದ್ದಾರೆ ಮತ್ತು ಬಹಿರಂಗವಾಗಿ ಹಾಗೆ ಹೇಳಿದ ಬಳಿಕವೂ ಅವರು ಯಾವ ಶಿಸ್ತು ಕ್ರಮಕ್ಕೂ ಒಳಗಾಗುವುದಿಲ್ಲ. ಮುಸ್ಲಿಮರನ್ನು ನಿಂದಿಸುವ, ಅವರ ಆರಾಧನಾ ಕ್ರಮಗಳನ್ನು ಲೇವಡಿ ಮಾಡುವ, ಅವರ ಧಾರ್ಮಿಕ ಉಡುಪನ್ನು ನಿಷೇಧಿಸುವ, ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಗಳಿಗೆ ಬಹಿಷ್ಕಾರ ಹೇರುವ, ಹಲಾಲ್ ಆಹಾರ ಕ್ರಮಕ್ಕೆ ಪ್ರತಿಯಾಗಿ ಜಟ್ಕಾ ಕಟ್ ಎಂಬ ಅಭಿಯಾನ ಆರಂಭಿಸುವ, ಮುಸ್ಲಿಮರ ಮೇಲಿನ ಹತ್ಯೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸುವವರು ಇದೇ ಸರ್ಕಾರದ ಭಾಗವಾಗಿಯೇ ಇದ್ದಾರೆ. ದ.ಕ. ಜಿಲ್ಲೆಯಲ್ಲಿ ನಡೆದ 3 ಹತ್ಯೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನಡಕೊಂಡ ರೀತಿಯೇ ಅವರ ಮನಸ್ಥಿತಿ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಲ್ಲದೇ, ನೆಟ್ಟಾರು ಪತ್ನಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟರು. ಅಲ್ಲದೇ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟು ಸಾಂತ್ವನವನ್ನೂ ಹೇಳಿದರು. ಆದರೆ,
ಇದೇ ನೆಟ್ಟಾರು ಮನೆಯ ಅನತಿ ದೂರದಲ್ಲಿರುವ ಮಸೂದ್ ಮನೆಗೆ ಅವರು ಭೇಟಿ ಕೊಡಲಿಲ್ಲ. ಹತ್ಯೆಗೀಡಾದ ಆ 19 ವರ್ಷದ ತರುಣನ ತಾಯಿಯನ್ನು ಸಾಂತ್ವನಿಸಬೇಕೆಂದೋ ಪರಿಹಾರ ನೀಡಬೇಕೆಂದೋ ಅವರಿಗೆ ಅನಿಸಲೇ ಇಲ್ಲ. ಆ ಬಳಿಕ ನಡೆದ ಫಾಝಿಲ್ ಎಂಬ ಯುವಕನ ಹತ್ಯೆಗೂ ಅವರು ಮರುಗಲಿಲ್ಲ. ಪರಿಹಾರ ನೀಡಲಿಲ್ಲ. ಆ ಮನೆಗೆ ಭೇಟಿಯನ್ನೂ ಕೊಡಲಿಲ್ಲ. ಅಲ್ಲದೇ, ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹೇರುವ ಪ್ರಕ್ರಿಯೆ ರಾಜ್ಯಾದ್ಯಂತ ನಡೆದಾಗಲೂ ಅವರು ಮಾತಾಡಲಿಲ್ಲ. ಮುಸ್ಲಿಮ್ ನಿಂದನೆಯ ಮಾತುಗಳನ್ನು ಅವರದೇ ಸಹೋದ್ಯೋಗಿಗಳು ಮತ್ತು ಜನಪ್ರತಿನಿಧಿಗಳು ಪದೇಪದೇ ನೀಡುತ್ತಿದ್ದರೂ ಅವರು ವಿರೋಧಿಸಲಿಲ್ಲ. ಟಿಪ್ಪುವನ್ನು ಮರೆ ಮಾಡಿಕೊಂಡು ಅವರ ಸಂಪುಟದ ಸಚಿವರು ಮುಸ್ಲಿಮರನ್ನು ತಿವಿಯುವ ಮಾತುಗಳನ್ನಾಡುತ್ತಿದ್ದರೂ ಅವರ ಮೌನ ಮುರಿಯಲಿಲ್ಲ. ಬೊಮ್ಮಾಯಿ ಉದ್ದೇಶಪೂರ್ವಕವಾಗಿಯೇ ಹೀಗೆ ವರ್ತಿಸಿದ್ದಾರೆ ಎಂಬುದಕ್ಕೆ ಈ ಮೀಸಲಾತಿ ಪ್ರಕರಣ ಮತ್ತಷ್ಟು ಸಾಕ್ಷ್ಯವನ್ನು ಒದಗಿಸಿದೆ. ಅವರು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅವರ ಒಳಿತನ್ನಷ್ಟೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಒಂದುವೇಳೆ,
ಇಡಬ್ಲ್ಯುಎಸ್ ಗುಂಪಿನಲ್ಲಿರುವ ಸಮುದಾಯಗಳು ಮುಸ್ಲಿಮರ ಸೇರ್ಪಡೆಯನ್ನು ವಿರೋಧಿಸಿದರೆ ಮುಸ್ಲಿಮರನ್ನು ಅಲ್ಲಿಂದಲೂ ಕಿತ್ತು ಹಾಕುವುದಕ್ಕೆ ಈ ಸರ್ಕಾರ ಹಿಂದೇಟು ಹಾಕಲಾರದು ಎಂದೇ ಹೇಳಬೇಕಾಗುತ್ತದೆ. ಸರ್ಕಾರದ ಈ ಮೀಸಲಾತಿ ನೀತಿ ಅತ್ಯಂತ ಅಮಾನವೀಯ, ಅತಾರ್ಕಿಕ, ಏಕಮುಖ ಮತ್ತು ಪಕ್ಷಪಾತಿತನದ್ದು ಅನ್ನುವುದರಲ್ಲಿ ಅನುಮಾನವಿಲ್ಲ.
No comments:
Post a Comment