Thursday, 9 May 2024

ಹುಬ್ಬಳ್ಳಿ ಘಟನೆಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಅತಿಯಾಯಿತೇ?

 ಸನ್ಮಾರ್ಗ ಸಂಪಾದಕೀಯ


ಬಹುಸಂಖ್ಯಾತರ ಭಾವನೆಯನ್ನು ಕೆರಳಿಸಿ ಧರ್ಮಧ್ರುವೀಕರಣ ನಡೆಸಬಯಸಿದವರನ್ನು ಹುಬ್ಬಳ್ಳಿಯ ಮುಸ್ಲಿಮರು ಗಾಢ ನಿರಾಶೆಗೆ ತಳ್ಳಿದ್ದಾರೆ.  ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿ ಹುಬ್ಬಳ್ಳಿಯ ಮುಸ್ಲಿಮ್ ಸಂಘಟನೆಗಳು ಮತ್ತು ನಾಗರಿಕರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧ  ಮತ್ತು ಮಾದರಿಯೋಗ್ಯ. ಘಟನೆ ನಡೆದ ಬೆನ್ನಿಗೇ ಅಲ್ಲಿನ ಅಂಜುಮನೆ ಇಸ್ಲಾಮ್ ಎಂಬ ಪ್ರಭಾವಿ ಸಂಘಟನೆಯ ವಿವಿಧ ಶಾಖೆಯ  ಅಧ್ಯಕ್ಷರುಗಳ ನಿಯೋಗ ಜಿಲ್ಲಾ ಪೊಲೀಸ್ ಕಮೀಶನರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು  ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತು. ಹತ್ಯೆಯನ್ನು ಖಂಡಿಸಿ ಶುಕ್ರವಾರದ ಜುಮಾ ನಮಾಝï‌ನ ಬಳಿಕ ಮುಸ್ಲಿಮರು ಸವದತ್ತಿಯಲ್ಲಿ  ಬೃಹತ್ ರ‍್ಯಾಲಿ ನಡೆಸಿದರು. ಫಯಾಝï‌ನ ತಂದೆ ಮತ್ತು ತಾಯಿಯೇ ಮಗನಿಂದ ಅಂತರ ಕಾಯ್ದುಕೊಂಡರು. ಆತನಿಗೆ ಶಿಕ್ಷೆಯಾಗಲಿ ಎಂದು  ಒತ್ತಾಯಿಸಿದರು. ಮಾತ್ರವಲ್ಲ, ಧಾರವಾಡ ಬಂದ್‌ಗೂ ಮುಸ್ಲಿಮ್ ಸಮುದಾಯ ಕರೆಕೊಟ್ಟಿತು. ಈ ಕ್ಷಿಪ್ರ ಬೆಳವಣಿಗೆಯಿಂದಾಗಿ ಆರೋಪಿ  ಫಯಾಝï‌ನನ್ನು ಎತ್ತಿಕೊಂಡು ಆ ಕ್ರೌರ್ಯವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಲು ಸಂಚು ಹೆಣೆದವರು ನಿರುತ್ತರರಾದರು. ಅಂದಹಾಗೆ,

ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಕೆಲವು ಪ್ರಶ್ನೆಗಳನ್ನೂ ಎತ್ತುತ್ತದೆ. 

‘ವ್ಯಕ್ತಿಯ ತಪ್ಪಿಗೆ ಮುಸ್ಲಿಮ್ ಸಮುದಾಯ ಈ ಬಗೆಯಲ್ಲಿ  ಪ್ರತಿಕ್ರಿಯಿಸುವ ಅಗತ್ಯ ಏನಿದೆ? ಅದೊಂದು ಕ್ರಿಮಿನಲ್ ಕೃತ್ಯ. ಕ್ರಿಮಿನಲ್‌ಗೆ ಧರ್ಮವೇ ಇರುವುದಿಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯ  ಬೀದಿಗಿಳಿದು ಪ್ರತಿಕ್ರಿಯಿಸಬೇಕಾದ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದಲ್ಲಿ ಅಪರಾಧಿ ಭಾವ ಸೃಷ್ಟಿಯಾಗಿದೆಯೇ? ಪ್ರಜಾತಂತ್ರ ಭಾರತದಲ್ಲಿ  ವ್ಯಕ್ತಿಯ ನಿಯಂತ್ರಣ ಸಮುದಾಯದ ಕೈಯಲ್ಲಿಲ್ಲ. ವ್ಯಕ್ತಿಯನ್ನು ಶಿಕ್ಷಿಸುವ ಅಧಿಕಾರವೂ ಸಮುದಾಯಕ್ಕಿಲ್ಲ. ಅದನ್ನು ನೋಡಿಕೊಳ್ಳಬೇಕಾದುದು  ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ. ಹೀಗಿರುತ್ತಾ, ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಏನನ್ನು ಸೂಚಿಸುತ್ತದೆ? ಈ ಪ್ರಕರಣಕ್ಕಿಂತ  ಒಂದು ದಿನ ಮೊದಲು ಪ್ರದೀಪ್ ಎಂಬವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರು. ರುಕ್ಸಾನ ಎಂಬ 21 ವರ್ಷದ ಯುವತಿಯನ್ನು  ಪ್ರೀತಿಸಿ, ಆಕೆಯ ಮಗುವಿಗೆ ತಂದೆಯೂ ಆಗಿದ್ದ ಈತ ಮಾರ್ಚ್ 31ರಂದು ಆಕೆಯನ್ನು ಸುಟ್ಟು ಹಾಕಿದ್ದ. ಆಕೆಯ ಮಗುವನ್ನು ತಳ್ಳುಗಾಡಿಯಲ್ಲಿ  ಬಿಟ್ಟು ಪರಾರಿಯಾಗಿದ್ದ. ಮಾತ್ರವಲ್ಲ, ತನಗೆ ಅದಾಗಲೇ ಮದುವೆಯಾಗಿರುವುದನ್ನು ರುಕ್ಸಾನಳಿಂದ ಅಡಗಿಸಿಯೂ ಇಟ್ಟಿದ್ದ. ಆದರೆ, ಆತನ ಅಪರಾಧವನ್ನು ಹಿಂದೂ ಸಮುದಾಯ ವಹಿಸಿಕೊಳ್ಳಲಿಲ್ಲ. ಪ್ರತಿಭಟನೆಯಾಗಲಿ, ರ‍್ಯಾಲಿಯಾಗಲಿ ಅಥವಾ ಬಂದ್‌ಗಾಗಲಿ ಕರೆಯನ್ನೂ ಕೊಡಲಿಲ್ಲ.  ಅದೊಂದು ಮಾಮೂಲಿ ಕ್ರಿಮಿನಲ್ ಪ್ರಕರಣವಾಗಿ ಹತ್ತರಲ್ಲಿ ಹನ್ನೊಂದು ಎಂಬಂತೆ ಕಳೆದು ಹೋಯಿತು. ಇದಕ್ಕಿಂತ 5 ತಿಂಗಳ ಹಿಂದೆ  ಉಡುಪಿಯ ನೇಜಾರಿನಲ್ಲಿ ಪ್ರವೀಣ್ ಚೌಗಲೆ ಎಂಬವ ತನ್ನ ಸಹೋದ್ಯೋಗಿ ಸಹಿತ ಮೂವರು ಮಹಿಳೆಯರು ಮತ್ತು ಓರ್ವ ಬಾಲಕನನ್ನು  ಇರಿದು ಹತ್ಯೆ ಮಾಡಿದ. ಏಕಮುಖ ಪ್ರೇಮ ಪ್ರಕರಣದಿಂದಾದ ಈ ಕ್ರೌರ್ಯವನ್ನು ಖಂಡಿಸಿ ಹಿಂದೂ ಸಮುದಾಯ ಬೀದಿಗಿಳಿಯಲಿಲ್ಲ.  ಬಂದ್‌ಗೆ ಕರೆ ಕೊಡಲಿಲ್ಲ. ರ‍್ಯಾಲಿಯನ್ನೂ ನಡೆಸಲಿಲ್ಲ. ಅದಕ್ಕಿಂತ ಮೊದಲು, ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಗುಜರಾತ್ ಸರಕಾರವೇ ಸನ್ನಡತೆಯ ಆಧಾರದಲ್ಲಿ ಬಿಟ್ಟು ಬಿಟ್ಟಾಗಲೂ ಹಿಂದೂ ಸಮುದಾಯ ಅದನ್ನು ವಹಿಸಿಕೊಳ್ಳಲಿಲ್ಲ. ಅಪರಾಧಿಗಳೆಲ್ಲ ಹಿಂದೂ ಮತ್ತು ಸಂತ್ರಸ್ತೆಯಾದ ಬಿಲ್ಕಿಸ್ ಬಾನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಹಿಂದೂ ಸಮುದಾಯ ಅಪರಾಧಿ ಭಾವದಿಂದ  ಪ್ರತಿಕ್ರಿಯಿಸಲಿಲ್ಲ. ಅದು ಕಾನೂನು ವ್ಯವಸ್ಥೆಯ ಭಾಗವೆಂಬಂತೆ ನಡಕೊಂಡಿತು. ಬೌದ್ಧಿಕ ವಲಯದ ವಿರೋಧವನ್ನು ಬಿಟ್ಟರೆ ಪ್ರತಿಭಟನೆಯಾಗಲಿ,  ರ‍್ಯಾಲಿಯಾಗಲಿ ನಡೆಯಲೇ ಇಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯವೇಕೆ ವ್ಯಕ್ತಿಯ ಅಪರಾಧವನ್ನು ಸ್ವಯಂ ವಹಿಸಿಕೊಂಡಂತೆ  ವರ್ತಿಸುತ್ತಿದೆ? ಕಾನೂನು ನೋಡಿಕೊಳ್ಳಲಿ ಎಂದು ಸಹಜವಾಗಿ ಇದ್ದು ಬಿಡುವುದು ಒಳಿತಲ್ಲವೇ.. ಎಂಬೆಲ್ಲಾ ಪ್ರಶ್ನೆಗಳಿಗೂ ಇಂಥ ಪ್ರತಿಕ್ರಿಯೆಗಳು  ಅವಕಾಶವನ್ನು ಒದಗಿಸುತ್ತದೆ. ನಿಜವಾಗಿ,

ಹುಬ್ಬಳ್ಳಿಯದ್ದಾಗಲಿ, ಬೆಂಗಳೂರು, ಗುಜರಾತ್ ಅಥವಾ ಜಮ್ಮುವಿನ ಆಸಿಫಾ ಎಂಬ 8ರ ಹರೆಯದ ಬಾಲೆಯದ್ದಾಗಲಿ ಎಲ್ಲವೂ ಕಾನೂನಿಗೆ  ಸಂಬಂಧಿಸಿದ ಸಂಗತಿಗಳೇ ಹೊರತು ಹಿಂದೂ-ಮುಸ್ಲಿಮ್ ವಿಷಯಗಳಲ್ಲ. ಯಾವುದೇ ಅಪರಾಧವೂ ಅಪರಾಧವಾಗಿ ಗುರುತಿಸಿಕೊಳ್ಳಬೇಕೇ  ಹೊರತು ಹಿಂದೂ ಅಪರಾಧಿ ಅಥವಾ ಮುಸ್ಲಿಮ್ ಅಪರಾಧಿ ಎಂದು ಗುರುತಿಸಿಕೊಳ್ಳುವುದು ಸಾಮಾಜಿಕ ಸೌಖ್ಯದ ದೃಷ್ಟಿ ಯಿಂದ ಅ ಪಾಯಕಾರಿ. ಅಪರಾಧಕ್ಕೂ ಧರ್ಮಕ್ಕೂ ಹೇಗೆ ಸಂಬಂಧ ಇಲ್ಲವೋ ಹಾಗೆಯೇ ಅಪರಾಧಿಗೂ ಸಮುದಾಯಕ್ಕೂ ಸಂಬಂಧ ಇಲ್ಲ.  ಆದ್ದರಿಂದಲೇ, ಯಾವುದೇ ಸಮುದಾಯ ಸಾಧಕರನ್ನು ಸನ್ಮಾನಿಸಿ ಅವರೊಂದಿಗೆ ಗುರುತಿಸಿಕೊಳ್ಳುತ್ತದೆಯೇ ಹೊರತು ಅಪರಾಧಿಯೊಂದಿಗಲ್ಲ.  ವಿಷಾದ ಏನೆಂದರೆ,

ಈ ದೇಶದಲ್ಲಿ ಬಹುಸಂಖ್ಯಾತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಡೆಯುತ್ತಿದೆ.  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಬಹು ಸಂಖ್ಯಾತ ಹಿಂದೂಗಳಲ್ಲಿ ಅಭದ್ರತಾ ಭಾವನೆಯನ್ನು ವ್ಯವಸ್ಥಿತವಾಗಿ  ಬಿತ್ತಲಾಗುತ್ತಿದೆ. ಈ ಅಭದ್ರತೆಗೆ 20 ಕೋಟಿಯಷ್ಟಿರುವ ಮುಸ್ಲಿಮರೇ ಕಾರಣ ಎಂಬ ಅಪ್ಪಟ ಸುಳ್ಳನ್ನು ಹರಡಲಾಗುತ್ತಿದೆ. ಮುಸ್ಲಿಮ್ ದ್ವೇಷದ  ಹತ್ತು ಹಲವು ಸುಳ್ಳುಗಳನ್ನು ಸೋಶಿಯಲ್ ಮೀಡಿಯಾ ಸಹಿತ ಲಭ್ಯವಿರುವ ಎಲ್ಲ ಮಾಧ್ಯಮ ಗಳ ಮೂಲಕ ಹಂಚಲಾಗುತ್ತಿದೆ. ಮುಸ್ಲಿಮರನ್ನು  ಕ್ರಿಮಿನಲ್‌ಗಳು, ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸುವವರು, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಗೋಮಾಂಸ  ಸೇವಿಸುವವರು, ಹಿಂದೂ ಧರ್ಮವನ್ನು ದ್ವೇಷಿಸುವವರು, ಭಾರತವನ್ನು ಇಸ್ಲಾಮ್ ರಾಷ್ಟ್ರವಾಗಿಸುವ ಸಂಚು ಹೆಣೆಯುತ್ತಿರುವವರು ಎಂಬಲ್ಲಿಂದ   ತೊಡಗಿ ಈ ಹಿಂದೆ ಈ ಉಪಭೂಖಂಡವನ್ನು ಆಳಿದ್ದ ಮುಸ್ಲಿಮ್ ದೊರೆ ಗಳ ವರೆಗೆ ಅತ್ಯಂತ ಹೀನಾಯ ಕಟ್ಟುಕತೆಗಳನ್ನು ಹೇಳಲಾಗುತ್ತಿದೆ.  ಇವಕ್ಕೆ ಫಯಾಝï‌ನಂಥ ಕ್ರಿಮಿನಲ್‌ಗಳು ನಡೆಸುವ ಕ್ರೌರ್ಯಗಳನ್ನು ಆಧಾರವಾಗಿ ನೀಡಲಾಗುತ್ತಿದೆ. ಒಂದುವೇಳೆ,

ಇದು ಕಾನೂನು ಸಂಬಂಧಿ ವಿಷಯ ಎಂದು ಇಂಥ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯ ಮೌನವಾದರೆ, ಅದನ್ನೇ ಈ ಮಂದಿ ಅಪ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಈ ಮೌನವೇ ಮುಸ್ಲಿಮ್ ಸಮುದಾಯ ಅಪರಾಧಿಯ ಜೊತೆಗಿದೆ ಅನ್ನುವುದಕ್ಕೆ ಪುರಾವೆ ಎಂಬಂತೆ ಪ್ರಚಾರ  ನಡೆಸುತ್ತಾರೆ. ಮಾತ್ರ ವಲ್ಲ, ಜನಸಾಮಾನ್ಯರು ಇದನ್ನು ನಂಬಿಬಿಡುವ ಸಂಭವವೂ ಇದೆ. ಇಂಥ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯ ಭಿನ್ನ  ನಿಲುವನ್ನು ಸ್ವೀಕರಿಸುವುದೇ ಹೆಚ್ಚು ಯೋಗ್ಯವಾದುದು. ಆದ್ದರಿಂದಲೇ, ಹುಬ್ಬಳ್ಳಿ ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ  ಅತ್ಯಂತ  ಸಮಯೋಚಿತ ಮತ್ತು ಪ್ರಬುದ್ಧವಾಗಿ ಕಾಣಿಸುತ್ತದೆ. ಫಯಾಝï‌ನ ಕ್ರೌರ್ಯದ ಹೊಣೆಯನ್ನು ಮುಸ್ಲಿಮ್ ಸಮುದಾಯದ ಮೇಲೆ ಹೊರಿಸಿ  ಅಪಪ್ರಚಾರ ಮಾಡುವವರನ್ನು ಹುಬ್ಬಳ್ಳಿ ಮುಸ್ಲಿಮರ ಸಮಯೋಚಿತ ಪ್ರತಿಕ್ರಿಯೆ ಮಣ್ಣುಪಾಲು ಮಾಡಿದೆ. ಒಂದುವೇಳೆ, ಅದೊಂದು ಕ್ರಿಮಿನಲ್  ಕೃತ್ಯ ಮತ್ತು ಅದಕ್ಕೂ ಸಮುದಾಯಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮುಸ್ಲಿಮ್ ಸಮುದಾಯ ಮೌನಕ್ಕೆ ಜಾರಿರುತ್ತಿದ್ದರೆ ಇವತ್ತು ಹುಬ್ಬಳ್ಳಿ  ಬಿಡಿ, ಇಡೀ ಕರ್ನಾಟಕವನ್ನೇ ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕೆ ದುಷ್ಟ ಶಕ್ತಿಗಳು ಯಶಸ್ವಿಯಾಗುತ್ತಿದ್ದರು. ನಿಜವಾಗಿ,

ಯಾವುದೇ ಅಪರಾಧ ಕೃತ್ಯವು ಹಿಂದೂ-ಮುಸ್ಲಿಮರಲ್ಲಿ ವಿಭಜನೆಯಾಗುವುದು ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಅಪಾಯಕಾರಿ.  ಉಡುಪಿ ನೇಜಾರಿನ ಪ್ರಕರಣಕ್ಕೆ ಹೇಗೆ ಹಿಂದೂ ಸಮುದಾಯ ಹೊಣೆಯಲ್ಲವೋ ಹುಬ್ಬಳ್ಳಿ ಪ್ರಕರಣಕ್ಕೆ ಮುಸ್ಲಿಮ್ ಸಮುದಾಯವೂ  ಹೊಣೆಯಲ್ಲ. 140 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಬರೇ 20 ಕೋಟಿಯಷ್ಟಿರುವ ಮುಸ್ಲಿಮ್ ಸಮುದಾಯದಿಂದ ಮಾತ್ರ ಸಂಪೂರ್ಣ  ಕಾನೂನುಬದ್ಧ ಮತ್ತು ಶಿಸ್ತಿನ ನಡವಳಿಕೆಯನ್ನು ಬಯಸುವುದು ಅಪ್ರಾಯೋಗಿಕ ಮತ್ತು ಅತಾರ್ಕಿಕ. ಉಳಿದ 120 ಕೋಟಿ ಬೃಹತ್ ಜನಸಂಖ್ಯೆಯುಳ್ಳ ಸಮುದಾಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೇಗೆ ಸಹಜವೋ ಈ 20 ಕೋಟಿ ಜನಸಂಖ್ಯೆಯ ಸಮುದಾಯದಲ್ಲೂ ಅವೆಲ್ಲ  ಸಹಜ. ಇವನ್ನು ಈ ದೇಶದ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಮಟ್ಟ ಹಾಕಬೇಕೇ ಹೊರತು ಸಮುದಾಯಗಳಲ್ಲ. ಕಾನೂನಿನೊಂದಿಗೆ ಸಹಕರಿಸುವುದಷ್ಟೇ ನಾಗರಿಕರ ಕರ್ತವ್ಯ. ಸದ್ಯ ಈ ಸತ್ಯವನ್ನು ಮರೆಮಾಚಿ ಒಂದು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ  ಸಂಚು ನಡೆಯುತ್ತಿದೆ. ಮುಸ್ಲಿಮ್ ವ್ಯಕ್ತಿಯ ಕ್ರಿಮಿನಲ್ ಕೃತ್ಯವನ್ನು ಹಿಂದೂ ವಿರೋಧಿಯಂತೆ ಬಿಂಬಿಸಲಾಗುತ್ತಿದೆ. ಇದನ್ನು ತಡೆಯಬೇಕಿದ್ದರೆ  ಮುಸ್ಲಿಮ್ ಸಮುದಾಯ ಮೌನ ಮರೆತು ಮಾತಾಡಲೇಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹುಬ್ಬಳ್ಳಿ ನಾಗರಿಕರು ಮತ್ತು ಅಂಜುಮನೆ  ಇಸ್ಲಾಮ್ ಶ್ಲಾಘನೆಗೆ ಅರ್ಹವೆನಿಸುತ್ತದೆ.

ಪ್ರಧಾನಿ ಸ್ಥಾನದ ಘನತೆಗೆ ಕಳಂಕ ತಂದ ಮೋದಿ

 



ಸನ್ಮಾರ್ಗ ಸಂಪಾದಕೀಯ


1. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಸಮುದಾಯಕ್ಕೆ ಹಂಚಲಿದೆ. ನಿಮ್ಮ ಪರಿಶ್ರಮದ ಹಣ  ನುಸುಳುಕೋರರಲ್ಲಿ ಹಂಚಿಕೆಯಾಗಬೇಕೇ?

2. ದಲಿತ್ ಮತ್ತು ಓಬಿಸಿ ಮೀಸಲಾತಿಯನ್ನು ಕಿತ್ತು ಅದನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸುತ್ತಿದೆ.

ಈ ಎರಡೂ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ರದ್ದೋ, ಅನಂತ ಕುಮಾರ್ ಹೆಗ್ಡೆಯದ್ದೋ, ಜಗದೀಶ್ ಕಾರಂತರದ್ದೋ ಅಥವಾ ದ್ವೇಷ  ಭಾಷಣಗಳಲ್ಲಿ ಕುಖ್ಯಾತಿಯನ್ನು ಪಡೆದಿರುವ ಪ್ರಜ್ಞಾಸಿಂಗ್ ಠಾಕೂರ್, ಗೋಲಿ ಮಾರೋ ಸಾಲೋಂಕೋ ಕುಖ್ಯಾತಿಯ ಅನುರಾಗ್ ಠಾಕೂರ್,  ಶಂಕರ್ ಬಿದೂರಿಯದ್ದೋ ಅಲ್ಲ. 140 ಕೋಟಿ ಭಾರತೀಯರನ್ನು ಸರಿಸಮಾನವಾಗಿ ನೋಡುವ ಪ್ರತಿಜ್ಞೆಯೊಂದಿಗೆ ಪ್ರಧಾನಿ ಹುದ್ದೆಯನ್ನು  ಅಲಂಕರಿಸಿರುವ ನರೇಂದ್ರ ಮೋದಿಯದ್ದು. ಮೊದಲ ಹೇಳಿಕೆಯನ್ನು ರಾಜಸ್ತಾನದ ಚುನಾವಣಾ ಸಭೆಯಲ್ಲಿ ನೀಡಿದ್ದರೆ ಎರಡನೇ ಹೇಳಿಕೆಯನ್ನು  ತೆಲಂಗಾಣದಲ್ಲಿ ನೀಡಿದ್ದಾರೆ. ಭಾರತೀಯ ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂಗಳ ವಿರುದ್ಧ ಓರ್ವ ಪ್ರಧಾನಿಯೇ ಈ ರೀತಿಯಲ್ಲಿ ಎತ್ತಿ  ಕಟ್ಟುತ್ತಾರೆಂದರೆ, ಅವರ ಸಬ್ಕಾ ಸಾಥ್ ಘೋಷಣೆಯ ಅರ್ಥವೇನು?

ಪ್ರಧಾನಿ ಒಂದು ಪಕ್ಷದ ಪ್ರತಿನಿಧಿಯಲ್ಲ. ದೇಶದ ಎಲ್ಲ ನಾಗರಿಕರ ಪ್ರತಿನಿಧಿ. ಅವರ ಮಾತು ಮತ್ತು ವರ್ತನೆಗಳಲ್ಲಿ ಈ ಸಮಗ್ರಭಾವ  ಬಿಂಬಿತವಾಗಬೇಕು. ದೇಶದ ಪ್ರತಿಯೋರ್ವ ನಾಗರಿಕರಲ್ಲೂ `ನಾನು ನಿಮ್ಮವನು' ಎಂಬ ಭದ್ರತಾ ಭಾವವನ್ನು ತುಂಬುವಂತಿರಬೇಕು. ಆದರೆ,  ಪ್ರಧಾನಿ ಮೋದಿಯ ಮಾತುಗಳಲ್ಲಿ ಈ ಭಾವ ಇದೆಯೇ? ಅವರೇಕೆ ಭಾರತೀಯ ಮುಸ್ಲಿಮರನ್ನು ಪದೇ ಪದೇ ನಿಂದಿಸುವ, ಅವಮಾನಿಸುವ  ಮತ್ತು ಅಪರಾಧಿಗಳಂತೆ ಬಿಂಬಿಸುವ ಮಾತುಗಳನ್ನು ಆಡುತ್ತಿದ್ದಾರೆ? ಹೀಗೆ ಹೇಳುವುದರಿಂದ ಹಿಂದೂಗಳು ತನಗೆ ಮತ ಚಲಾಯಿಸುತ್ತಾರೆ  ಎಂಬ ನಂಬಿಕೆಯೇ? ಒಂದು ವೇಳೆ ಹೀಗೆ ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಲಭಿಸಿದರೂ ಮತ್ತು ಮತ್ತೆ ಪ್ರಧಾನಿಯಾಗುವ ಅವಕಾಶ  ಲಭ್ಯವಾದರೂ `ಮುಸ್ಲಿಮ್ ನಿಂದಕ, ದ್ವೇಷ ಭಾಷಣಕಾರ' ಎಂಬ ಕಳಂಕದಿಂದ ಮುಕ್ತವಾಗಲು ಅವರಿಗೆ ಸಾಧ್ಯವಿದೆಯೇ? ಪ್ರಧಾನಿ ಪಟ್ಟ ಶಾಶ್ವತವಲ್ಲ; ಒಂದಿನ ಆ ಪಟ್ಟದಿಂದ ಕೆಳಗಿಳಿಯಲೇಬೇಕು ಮತ್ತು ಇತಿಹಾಸದ ಪುಟದಲ್ಲಿ `ಪ್ರಧಾನಿ'ಯಾಗಿ ಗುರುತಿಸಿಕೊಳ್ಳಲೇಬೇಕು. ಆದರೆ, ` ಪ್ರಧಾನಿ ಮೋದಿ' ಎಂದು ಇತಿಹಾಸದ ಪುಸ್ತಕಗಳಲ್ಲಿ ಓದುವಾಗಲೋ, ಕೇಳುವಾಗಲೋ ಅಥವಾ ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸು ವಾಗಲೋ,  ಈ ದೇಶದ ಬೃಹತ್ ಸಮುದಾಯವೊಂದು ಹೆಮ್ಮೆ ಪಡದ ಮತ್ತು ಅಸಮಾಧಾನ ಸೂಚಿಸುವ ವಾತಾವರಣವೊಂದು ನಿರ್ಮಾಣವಾಗುವುದು  ಒಳ್ಳೆಯದೇ? ಇತಿಹಾಸವನ್ನು ಅಧ್ಯಯನ ಮಾಡುವ ಭವಿಷ್ಯದ ವಿದ್ಯಾರ್ಥಿಗಳು ನೆಹರೂ, ಶಾಸ್ತ್ರಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ,  ದೇವೇಗೌಡ, ಮನ್‌ಮೋಹನ್ ಸಿಂಗ್ ಇತ್ಯಾದಿ ಹೆಸರುಗಳನ್ನು ಯಾವ ಭಾವದಲ್ಲಿ ಓದುತ್ತಾರೋ ಅದೇ ಭಾವದಲ್ಲಿ ನರೇಂದ್ರ ಮೋದಿ ಹೆಸರನ್ನು ಓದಲಾಗದಿದ್ದರೆ ಅದಕ್ಕೆ ಯಾರು ಹೊಣೆ?
ಈ ದೇಶದಲ್ಲಿ ಮುಸ್ಲಿಮರು 25 ಕೋಟಿಯಷ್ಟಿದ್ದಾರೆ ಮತ್ತು ಮೋದಿಯಾಗಲಿ ಇನ್ನಾರೇ ಆಗಲಿ ಎಷ್ಟೇ ಅವಮಾನಿಸಿದರೂ, ನಿಂದಿಸಿದರೂ  ಮತ್ತು ಗೇಲಿ ಮಾಡಿದರೂ ಈ ಬೃಹತ್ ಸಮುದಾಯವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೋ ಸಮೂಲ ನಾಶ ಮಾಡುವುದಕ್ಕೋ ಸಾಧ್ಯವೇ  ಇಲ್ಲ. ಅಂದರೆ, ಒಂದು ಸಮುದಾಯವನ್ನು ದ್ವೇಷಿಸುವುದರಿಂದ ಒಂದು ನಿರ್ದಿಷ್ಟ ಗುಂಪಿನ ಮನಸ್ಸನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸಬಹುದು  ಮತ್ತು ನಿರ್ದಿಷ್ಟ ಅವಧಿವರೆಗೆ ಅಧಿಕಾರ ಹಿಡಿಯಬಹುದು. ಆದರೆ, ಅಧಿಕಾರಕ್ಕಾಗಿ ಮಾಡುವ ಈ ವಿಭಜನವಾದಿ ತಂತ್ರವು ದೇಶದ ಅಭಿವೃದ್ಧಿ ಮತ್ತು ಒಗ್ಗಟ್ಟಿನ ಮೇಲೆ ಬೀರುವ ಅಡ್ಡ ಪರಿಣಾಮಗಳು ಇಷ್ಟೇ ತಾತ್ಕಾಲಿಕವಾಗಿರುತ್ತದೆಯೇ? 25 ಕೋಟಿಯಷ್ಟಿರುವ ಸಮುದಾಯವೊಂದನ್ನು 80 ಕೋಟಿಯಷ್ಟಿರುವ ಸಮುದಾಯದ  ವೈರಿ ಎಂದು ಬಿಂಬಿಸುವುದೇ  ದೇಶದ ನಾಗರಿಕರ ನಡುವೆ ಇರಲೇಬೇಕಾದ ವಿಶ್ವಾಸಾರ್ಹತೆಗೆ ಅತಿ ದೊಡ್ಡ ಪೆಟ್ಟು. ದೇಶದ ಅಭಿವೃದ್ಧಿ ನಾಗರಿಕರ ಒಗ್ಗಟ್ಟನ್ನು ಅವಲಂಬಿಸಿದೆ.

ಈ ದೇಶದಲ್ಲಿ ನಾಗರಿಕನೋರ್ವ ಉತ್ತು ಬಿತ್ತಿ ಬೆಳೆಯಬೇಕಾದರೆ, ಮೊದಲು ಆತ/ಕೆಯಲ್ಲಿ ಭದ್ರತಾಭಾವ ಮೂಡಿರಬೇಕು. ತನಗೆ ಈ ದೇಶದಲ್ಲಿ  ರಕ್ಷಣೆಯಿದೆ ಮತ್ತು ತನ್ನನ್ನು ಯಾವುದೇ ಪಕ್ಷಪಾತ ಭಾವವಿಲ್ಲದೇ ಇಲ್ಲಿನ ಸರ್ಕಾರ ನಡೆಸಿಕೊಳ್ಳುತ್ತದೆ ಎಂಬ ನಂಬಿಕೆ ಅವರಲ್ಲಿರಬೇಕು. ಈ ದೇಶದಲ್ಲಿ ಹೂಡಿಕೆ ಮಾಡುವವರೂ ಮೊದಲು ಇಂಥ ಭಾವ ಸೃಷ್ಟಿಯನ್ನೇ ಬಯಸುತ್ತಾರೆ. ತನ್ನ ದೇಶದ ಬಗ್ಗೆ ಓರ್ವ ನಾಗರಿಕ ಹೆಮ್ಮೆಪಡುವುದಕ್ಕೆ  ಆ ದೇಶ ಅವನನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ರಾಜಕೀಯ ಕಾರಣಕ್ಕಾಗಿ ತನ್ನ ದೇಶ ತನ್ನನ್ನು `ಹೊರೆ' ಎಂಬಂತೆ   ಬಿಂಬಿಸತೊಡಗಿದರೆ ಮತ್ತು ತನ್ನ ಕೊಡುಗೆಯನ್ನು ನಿಕೃಷ್ಟವಾಗಿ ಕಾಣತೊಡಗಿದರೆ, ಆತ/ಕೆ ಆ ದೇಶದ ಬಗ್ಗೆ ಹೆಮ್ಮೆಪಡುವುದಕ್ಕೆ ಸಾಧ್ಯವೇ ಇಲ್ಲ.  ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯು ಇಂಥ ನಕಾರಾತ್ಮಕ ರೂಪದಲ್ಲಿದೆ. ಈ ದೇಶದ ಮುಸ್ಲಿಮರಲ್ಲಿ ಅಭದ್ರತೆಯನ್ನು ಹುಟ್ಟು  ಹಾಕುವುದು ಅವರ ಉದ್ದೇಶದಂತಿದೆ. ತಾತ್ಕಾಲಿಕವಾಗಿ ಈ ತಂತ್ರ ಯಶಸ್ಸು ತಂದುಕೊಟ್ಟರೂ ದೀರ್ಘಕಾಲಿಕ ದೃಷ್ಟಿಯಿಂದ ಈ ತಂತ್ರ ಅತ್ಯಂತ  ಅಪಾಯಕಾರಿ.

ಅಧಿಕಾರ ಲಾಭಕ್ಕಾಗಿ ದೇಶದ ನಾಗರಿಕರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದರಿಂದ ದೇಶದ ಐಕ್ಯ ಭಾವಕ್ಕೆ ಆಳ ಗಾಯವಾಗುತ್ತದೆ.  ಒಂದು ಸಮುದಾಯವನ್ನು ಇನ್ನೊಂದು ಸಮುದಾಯ ಅನುಮಾನದಿಂದ ನೋಡತೊಡಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ಈ ಅನುಮಾನಿತ  ವಾತಾವರಣದಲ್ಲಿ ಬೆಳೆಯ ತೊಡಗುತ್ತಾರೆ. ಅವರ ಮನಸ್ಸಿನಲ್ಲಿ ಇನ್ನೊಂದು ಸಮುದಾಯದ ಬಗ್ಗೆ ಆತಂಕ ಮತ್ತು ದುರಾಭಿಪ್ರಾಯ ಅಚ್ಚೊತ್ತ  ತೊಡಗುತ್ತದೆ. ಇದು ಏಕ ಮುಖ ಅಲ್ಲ. ಮುಸ್ಲಿಮ್ ಸಮುದಾಯವನ್ನು ಯಾರು ನಿಂದಿಸುತ್ತಾರೋ ಅದೇ ವ್ಯಕ್ತಿಗೆ ಮತ್ತೆ ಮತ್ತೆ ಅಧಿಕಾರ  ಸಿಗತೊಡಗಿದಾಗ ಬಹುಸಂಖ್ಯಾತ ಸಮುದಾಯದ ಕುರಿತು ಮುಸ್ಲಿಮ್ ಸಮುದಾಯದಲ್ಲೂ ದುರಾಭಿಪ್ರಾಯ ಮೂಡ ತೊಡಗುತ್ತದೆ. ಅವರೆಲ್ಲ  ಮುಸ್ಲಿಮರನ್ನು ದ್ವೇಷಿಸುತ್ತಾರೆ ಎಂಬ ಭಾವದೊಂದಿಗೆ ಆ ಸಮುದಾಯದ ಎಳೆ ಪೀಳಿಗೆಯೂ ಬೆಳೆಯ ತೊಡಗುತ್ತದೆ. ಈ ಎರಡೂ  ಬೆಳವಣಿಗೆಯೂ ಅಪಾಯಕಾರಿ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಅನ್ಯಗೊಳಿಸುವ ಈ ತಂತ್ರವು ಮೋದಿ ಅಧಿಕಾರಿಂದ ಇಳಿದ ಬಳಿಕವೂ ನಾಗರಿಕರಲ್ಲಿ ಸುಪ್ತವಾಗಿ ಉಳಿದುಕೊಳ್ಳಲಾರದು ಎನ್ನುವ ಹಾಗಿಲ್ಲ. ಯಾವುದಾದರೊಂದು ಘಟನೆ ಸಂಭವಿಸಿದಾಗ  ಈ ಸುಪ್ತಭಾವ ಮತ್ತೆ ಜಾಗೃತಗೊಳ್ಳಬಹುದು. ಮುಸ್ಲಿಮ್ ಹುಡುಗಿಯೊಂದಿಗೆ ಹಿಂದೂ ಯುವಕ ಪರಾರಿಯಾದಾಗ ಅಥವಾ ಇದಕ್ಕೆ ತದ್ವಿರುದ್ಧ  ಘಟನೆ ಸಂಭವಿಸಿದಾಗ, ಈ ಸುಪ್ತಭಾವ ಮತ್ತೆ ಎಚ್ಚರಗೊಂಡು ಸಾರ್ವಜನಿಕ ಭಾವವಾಗಿ ಪರಿವರ್ತನೆಯಾಗಬಹುದು. ಪ್ರತಿಭಟನೆಗಳು, ಬಂದ್  ಕರೆಗಳು, ವದಂತಿಗಳು ಉಂಟಾಗಬಹುದು. ಇದು ಬರೇ ಊಹೆ ಅಲ್ಲ.

ಈಗಾಗಲೇ ಈ ದೇಶದಲ್ಲಿ ಇಂಥ ಭಾವ ಜಾಗೃತವಾಗಿಯೇ ಇದೆ. ಮತ್ತು ಬಹಿರಂಗದಲ್ಲೂ ಕಾಣಿಸಿಕೊಳ್ಳುತ್ತಿದೆ. ತೀರಾ ತೀರಾ ವೈಯಕ್ತಿಕ  ಪ್ರಕರಣಕ್ಕೂ ಹಿಂದೂ-ಮುಸ್ಲಿಮ್ ಬಣ್ಣವನ್ನು ಕಟ್ಟಿ ಸಮಾಜದ ಶಾಂತಿಯನ್ನು ಕೆಡಿಸುವುದಕ್ಕೆ ಇವತ್ತು ಸಾಧ್ಯವಾಗಿರುವುದೇ ಸಮಾಜದಲ್ಲಿ ಈ  ಭಾವ ಆಳವಾಗಿ ಬೇರೂರಿರುವುದನ್ನು ಸೂಚಿಸುತ್ತದೆ. ಈ ದ್ವೇಷ ಭಾವ ಇರುವಷ್ಟು ಸಮಯ ಈ ದೇಶ ಜಾಗತಿಕ ಶಕ್ತಿಯಾಗಲು ಸಾಧ್ಯವೇ  ಇಲ್ಲ. ಒಂದು ಬೃಹತ್ ಸಮುದಾಯವನ್ನು ಅನ್ಯರಂತೆ ಮತ್ತು ವೈರಿಗಳಂತೆ ಕಾಣುವ ದೇಶವು ಅಂತಿಮವಾಗಿ ಆ ವಿಭಜನೆ ಹುಟ್ಟು ಹಾಕುವ  ಸಮಸ್ಯೆಗಳಲ್ಲೇ ಬಿದ್ದುಕೊಂಡು ಸ್ವಯಂ ಕುಸಿದು ಹೋಗುತ್ತದೆ. ಇದಕ್ಕೆ ನೆರೆಯ ಮ್ಯಾನ್ಮಾರ್, ಶ್ರೀಲಂಕಾಗಳಿಂದ  ಹಿಡಿದು ಸುಡಾನ್, ಸೋಮಾ ಲಿಯಗಳ ವರೆಗೆ ಧಾರಾಳ ಉದಾಹರಣೆಗಳಿವೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ಮೋದಿ ತನ್ನ ಸಾಧನೆಗಳ ಆಧಾರದಲ್ಲಿ ಮತಯಾಚಿಸುವುದನ್ನು ಬಿಟ್ಟು ಮುಸ್ಲಿಮರ ವಿರುದ್ಧ  ಹಿಂದೂಗಳನ್ನು ಎತ್ತಿ ಕಟ್ಟುವ ಮೂಲಕ ಮತ ಯಾಚಿಸುತ್ತಿದ್ದಾರೆಂದರೆ, ಅವರು ಈ ದೇಶವನ್ನಾಳುವುದಕ್ಕೆ ಅನರ್ಹರು ಎಂದೇ ಅರ್ಥ. ಈ ದೇ ಶದಲ್ಲಿ ಮುಸ್ಲಿಮರು 2014 ರಿಂದ ದಿಢೀರ್ ಉದ್ಭವವಾದವರಲ್ಲ. ಅವರಿಗೆ ಈ ಮಣ್ಣಿನಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಪೂರ್ವ  ಇತಿಹಾಸವಿದೆ. ಈ ದೇಶದ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಅತಿ ಪ್ರಾಮುಖ್ಯ ಹೊಣೆಗಾರಿಕೆ ನಿಭಾಯಿಸಿದ ಕೀರ್ತಿಯೂ ಇವರಿಗಿದೆ. 800 ವರ್ಷಗಳ  ಕಾಲ ಈ ಮಣ್ಣಿನಲ್ಲಿ ಆಡಳಿತ ನಡೆಸಿದ ಮತ್ತು ಈ ಮಣ್ಣಿಗೆ ಹತ್ತು ಹಲವು ಗಮನಾರ್ಹ ಕೊಡುಗೆಗಳನ್ನು ನೀಡಿದವರ ಇತಿಹಾಸವೂ ಇದೆ.  ಅವರ ಕೊಡುಗೆಯ ಕುರುಹಾಗಿ ತಾಜ್‌ಮಹಲೂ ಇದೆ. ಗೋಲ್‌ಗುಂಬಜೂ ಇದೆ ಮತ್ತು ರೇಶ್ಮೆ ಕೃಷಿ, ಬಡ್ಡಿರಹಿತ ರೈತ ಸಾಲ, ರಾಕೆಟ್  ತಂತ್ರಜ್ಞಾನದ ಅಭಿವೃದ್ಧಿಯಂಥ ನೂರಾರು ಸಾಕ್ಷಿಗಳೂ ಇವೆ. ಇವೆಲ್ಲವನ್ನೂ ನಿರಾಕರಿಸಿಕೊಂಡ ರೀತಿಯಲ್ಲಿ ಪ್ರಧಾನಿ ಮಾತು ಆಡುತ್ತಾರೆಂದರೆ  ಅದು ಅವರ ಸಣ್ಣತನಕ್ಕೆ ಆಧಾರವೇ ಹೊರತು ಇನ್ನೇನಲ್ಲ.

Tuesday, 23 April 2024

ತ್ರಿವಳಿ ತಲಾಕ್: ಪ್ರಧಾನಿ ಹೇಳುವುದೇನು, ವಾಸ್ತವ ಏನು?



ಸನ್ಮಾರ್ಗ ಸಂಪಾದಕೀಯ 

ತ್ರಿವಳಿ ತಲಾಕ್‌ನ ವಿರುದ್ಧ ಕೇಂದ್ರ ಸರಕಾರ ತಂದಿರುವ ಕಾನೂನು ಕ್ರಾಂತಿಕಾರಿಯೇ? ಅದರಿಂದ ಮುಸ್ಲಿಮ್ ಮಹಿಳೆಯರ ಬದುಕಿಗೆ ಭದ್ರತೆ ಒದಗಿದೆಯೇ? ಮುಸ್ಲಿಮ್ ಮಹಿಳೆಯರು ಈ ಕಾನೂನಿ ನಿಂದ ಸಂತೃಪ್ತರಾಗಿದ್ದಾರೆಯೇ?

ಉತ್ತರಾಖಂಡದ ಉಧಂಸಿಂಗ್  ನಗರದ ಶಾಯರಾ ಬಾನು ಅವರನ್ನು 2002ರಲ್ಲಿ ರಿಝ್ವಾನ್ ಅಹ್ಮದ್ ಎಂಬವರು ವಿವಾಹವಾಗುತ್ತಾರೆ. 2015ರಲ್ಲಿ ಶಾಯರಾ ಬಾನುಗೆ ರಿಝ್ವಾನ್ ತಲಾಕ್ (ವಿಚ್ಛೇದನ) ನೀಡುತ್ತಾರೆ. ಶಾಯರಾ ಈ ವಿಚ್ಛೇದನ ಕ್ರಮವನ್ನು ಒಪ್ಪುವುದಿಲ್ಲ. ‘ತಲಾಕ್ ತಲಾಕ್ ತಲಾಕ್’ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ಕ್ರಮದ ಮೂಲಕ ತನಗೆ ವಿಚ್ಛೇದನ ನೀಡಲಾಗಿದ್ದು, ಈ ತಲಾಕನ್ನು ರದ್ದುಗೊಳಿಸಬೇಕೆಂದು ಕೋರಿ ಆಕೆ 2016 ಫೆಬ್ರವರಿಯಲ್ಲಿ ಸುಪ್ರೀಮ್ ಕೋರ್ಟ್ನ ಬಾಗಿಲು ತಟ್ಟುತ್ತಾರೆ. ಅಲ್ಲದೇ, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಎಂಬೆರಡು ಪದ್ಧತಿಗಳನ್ನೂ ರದ್ದುಗೊಳಿಸುವಂತೆ ಸುಪ್ರೀಮ್ ಕೋರ್ಟಿಗೆ ಮನವಿ ಮಾಡುತ್ತಾರೆ. ಈ ಅರ್ಜಿಯ ವಿಚಾರಣೆಗಾಗಿ 2017 ಮಾರ್ಚ್ 30ರಂದು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸುತ್ತದೆ. ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ನೇತೃತ್ವದಲ್ಲಿ ರಚಿಸಲಾದ ಈ ಸಮಿತಿಯಲ್ಲಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಯು.ಯು. ಲಲಿತ್ ಮತ್ತು ಅಬ್ದುಲ್ ನಝೀರ್‌ರನ್ನು ಸೇರಿಸಲಾಗುತ್ತದೆ. ಈ ಪೀಠವು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುತ್ತದೆ. ಆದರೆ,

2017 ಆಗಸ್ಟ್ 22ರಂದು ನೀಡಲಾದ ಈ ತೀರ್ಪು ಭಿನ್ನಮತದಿಂದ ಕೂಡಿತ್ತು. ಐವರು ನ್ಯಾಯಾ ಧೀಶರ ಪೈಕಿ ಮುಖ್ಯ ನ್ಯಾಯಾಧೀಶ ಕೇಹರ್ ಮತ್ತು ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುವುದಕ್ಕೆ ವಿರುದ್ಧ ಇದ್ದರು. ಆದರೆ ಇದಕ್ಕೆ ಇತರ ಮೂವರು ನ್ಯಾಯಾಧೀಶರ ಬೆಂಬಲ ಸಿಗಲಿಲ್ಲ. ಹೀಗೆ ತ್ರಿವಳಿ ತಲಾಕ್ ಅಸಿಂಧು ಎಂಬುದಾಗಿ  3:2 ಬಹುಮತದ ಮೂಲಕ ಸಾರಲಾಯಿತು. ಅಂದರೆ, ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದರೆ ಅದು ವಿಚ್ಛೇದನ ಆಗುವುದಿಲ್ಲ ಎಂದು ಅರ್ಥ ಮತ್ತು  ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಮುಂದುವರಿಯುತ್ತಾರೆ ಎಂಬುದೇ ಇದರ ತಾತ್ಪರ್ಯ. ಆದರೆ 2019 ಜುಲೈಯಲ್ಲಿ ಕೇಂದ್ರ ಸರಕಾರ ತ್ರಿವಳಿ ತಲಾಕ್ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಿತು. ಅದರ ಪ್ರಕಾರ, ತ್ರಿವಳಿ ತಲಾಕ್ ಹೇಳುವುದು ಕ್ರಿಮಿನಲ್ ಅಪರಾಧ ಮತ್ತು ಅಂಥ ಅಪರಾಧ ಎಸಗಿದವರಿಗೆ 3 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಅಂದರೆ,

ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಸಿಂಧು ಎಂದು ಘೋಷಿಸುವಾಗ, ಕೇಂದ್ರ ಸರಕಾರವು ಈ ಕಾನೂನಿನ ಮೂಲಕ ತ್ರಿವಳಿ ತಲಾಕನ್ನೇ  ಸಿಂಧು ಎಂದು ಪರೋಕ್ಷವಾಗಿ ಘೋಷಿಸಿದಂತಾಯಿತು. ಸುಪ್ರೀಮ್ ಕೋರ್ಟ್ ನ  ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಬಳಿಕವೂ ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಉಳಿಯುತ್ತಾರೆ. ಆದರೆ, ಕೇಂದ್ರ ಸರಕಾರದ ಕಾನೂನಿನ ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಪತಿ ಮೂರು ವರ್ಷ ಜೈಲು ಪಾಲಾಗುತ್ತಾನೆ. ಹಾಗಂತ, ಈ ಸಂದರ್ಭದಲ್ಲಿ ಪತ್ನಿ-ಮಕ್ಕಳ ಜೀವನಕ್ಕೇನು ದಾರಿ ಎಂಬುದರ ಬಗ್ಗೆ ಯಾವ ವಿವರಣೆಯೂ ಈ ಕಾನೂನಿನಲ್ಲಿಲ್ಲ. ಹೀಗೆ ಪತಿಯನ್ನೇ ಜೈಲಿಗಟ್ಟಿದ ಪತ್ನಿ ಆ ಬಳಿಕ ಸಾಮಾಜಿಕವಾಗಿ ಎದುರಿಸಬೇಕಾದ ಆರ್ಥಿಕ  ಸವಾಲುಗಳಿಗೂ ಈ ಕಾನೂನಿನಲ್ಲಿ ಪರಿಹಾರಗಳಿಲ್ಲ. ಅಲ್ಲದೇ, ಪತಿ ಜೈಲಲ್ಲಿರುವ 3 ವರ್ಷಗಳ ವರೆಗೆ ಈ ಪತ್ನಿಗೆ ಬೇರೆ ವಿವಾಹ ಆಗುವಂತೆಯೂ ಇರುವುದಿಲ್ಲ. ಯಾಕೆಂದರೆ, ಅವರ ವಿಚ್ಛೇದನವೇ ನಡೆದಿಲ್ಲ. ಇನ್ನು, ಆತ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಬಳಿಕ ಆಕೆಯನ್ನು ಒಪ್ಪಿಕೊಳ್ಳುತ್ತಾನಾ ಅನ್ನುವ ಪ್ರಶ್ನೆಯೂ ಇದೆ. ತನ್ನನ್ನು ಜೈಲಿಗೆ ಹಾಕಿದವಳು ಎಂಬ ಆಕ್ರೋಶದಲ್ಲಿ ಗೃಹಹಿಂಸೆ, ದೌರ್ಜನ್ಯ, ನಿಂದನೆ ಇತ್ಯಾದಿ ಗಳಿಗೆ ಆಕೆ ತುತ್ತಾಗಲೂ ಬಹುದು. ಅಥವಾ ಸರಿಯಾದ ರೀತಿಯಲ್ಲಿ ವಿಚ್ಛೇದನ ಪಡಕೊಳ್ಳುವ ಪ್ರಕ್ರಿಯೆ ಆರಂಭವಾಗಬಹುದು. ಆದರೂ ಅಮೂಲ್ಯ 3 ವರ್ಷಗಳು ಅದಾಗಲೇ ಆಕೆಯ ಪಾಲಿಗೆ ನಷ್ಟವಾಗಿರುತ್ತದೆ. ಅತ್ತ ವಿಚ್ಛೇದನವೂ ಸಿಗದೇ ಮತ್ತು ಇತ್ತ ಪತಿಯೂ ಇಲ್ಲದೇ ಅಂತಿಮವಾಗಿ ಆಕೆಯೇ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಒಂದುರೀತಿಯಲ್ಲಿ, ಮುಸ್ಲಿಮ್ ಮಹಿಳೆಯರ ಪರ ಎಂಬ ಹಣೆಪಟ್ಟಿಯೊಂದಿಗೆ ಜಾರಿಗೊಂಡ ತ್ರಿವಳಿ ತಲಾಕ್ ಕಾನೂನಿನ ಒಳಗುಟ್ಟು ಇದು. ಅಸಿಂಧು ತಲಾಕ್ ಹೇಳಿದ ತಪ್ಪಿಗೆ ಪತಿ ಜೈಲು ಪಾಲಾಗುತ್ತಾನೆ ಅನ್ನುವುದನ್ನು ಬಿಟ್ಟರೆ, ಆಕೆಗೇನೂ ಸುಖ ಸಿಗುವುದಿಲ್ಲ. ಆತ ಜೈಲಲ್ಲಿರುವಷ್ಟು ಸಮಯ ಜೀವನ ಭದ್ರತೆಯೂ ಇಲ್ಲದೇ, ಇನ್ನೊಂದು ಮದುವೆಯಾಗುವುದಕ್ಕೆ ಅವಕಾಶವೂ ಇಲ್ಲದೇ ಆಕೆ ಕೊರಗಬೇಕಾಗುತ್ತದೆ. ಅಂದಹಾಗೆ,

ಪತ್ನಿಯನ್ನು ಏಕಾಏಕಿ ಬಿಟ್ಟುಹೋಗುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ ಎಂದಾಗಿದ್ದರೆ ಕೇಂದ್ರ ಸರಕಾರ ಹಿಂದೂ ಪತಿಗೂ ಇದೇ ಕಾನೂನನ್ನು ಅನ್ವಯಗೊಳಿಸಬೇಕಿತ್ತಲ್ಲವೇ? ಆದರೆ, ತ್ರಿವಳಿ ತಲಾಕ್ ಹೇಳುವುದನ್ನು ಕ್ರಿಮಿನಲ್ ಅಪರಾಧವೆಂದು ಸಾರಿರುವ ಕೇಂದ್ರ ಸರಕಾರ ಹಿಂದೂ ಪತಿಯ ಇಂಥದ್ದೇ  ಕ್ರಮವನ್ನು ಸಿವಿಲ್ ಅಪರಾಧವಾಗಿ ದಾಖಲಿಸಿದೆ. ಆ ಕಾನೂನಿನಲ್ಲಿ ಇಂಥ ಯಾವ ತೀವ್ರತೆಯೂ ಇಲ್ಲ. ಸಮಾನ ನಾಗರಿಕ ಸಂಹಿತೆಯ ಬಗ್ಗೆ ನಿಂತಲ್ಲಿ ಕುಳಿತಲ್ಲಿ ಮಾತಾಡುವ ಇದೇ ಕೇಂದ್ರ ಸರಕಾರವೇ ಮುಸ್ಲಿಮರಿಗೊಂದು ಮತ್ತು ಹಿಂದೂಗಳಿಗೊಂದು  ಕಾನೂನನ್ನು ರೂಪಿಸಿದೆ ಎಂಬುದೂ ಗಮನಾರ್ಹ. ನಿಜವಾಗಿ,

ತ್ರಿವಳಿ ತಲಾಕ್‌ನ ವಿರುದ್ಧ ಸುಪ್ರೀಮ್ ಕೋರ್ಟಿಗೆ ದೂರು ಸಲ್ಲಿಸಿದ ಶಾಯರಾ ಬಾನುರದ್ದೇ  ಒಂದು ದೀರ್ಘ ಕತೆಯಿದೆ. ಈಕೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಬನ್ವಿಧರ್ ಭಾಗವತ್ ಸಮ್ಮುಖದಲ್ಲಿ 2020 ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಇದಕ್ಕಿಂತ ಎರಡು ವರ್ಷಗಳ ಮೊದಲೇ ತಾನು ಬಿಜೆಪಿ ಸೇರ್ಪಡೆಗೊಳ್ಳಲು ಬಯಸುವುದಾಗಿ ಹೇಳಿದ್ದರು. ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲೂ  ಸಿದ್ಧ ಎಂದೂ ಘೋಷಿಸಿದ್ದರು. ಆಕೆಯ ಮಾತು, ವರ್ತನೆ ಮತ್ತು ನಡವಳಿಕೆಗಳಲ್ಲಿ ಅನುಮಾನಕ್ಕೆ ಪೂರಕವಾದ ಧಾರಾಳ ಇದ್ದುವು. ತನ್ನ ಅಜೆಂಡಾ ಜಾರಿಗೊಳಿಸುವುದಕ್ಕಾಗಿ ಬಿಜೆಪಿ ಆಕೆಯನ್ನು ಬಳಸಿಕೊಂಡಿದೆ ಎಂಬ ಸಂದೇಹವನ್ನು ಆಕೆಯ ಬಿಜೆಪಿ ಸೇರ್ಪಡೆ ಪುಷ್ಠೀಕರಿಸಿದಂತಿತ್ತು. ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸುವುದಕ್ಕೆ ಬಿಜೆಪಿ ಆಕೆಯನ್ನು ಧಾರಾಳ ಬಳಸಿಕೊಂಡಿತು. ಅಸಮರ್ಪಕ ಕಾನೂನೊಂದನ್ನು ಸಂತ್ರಸ್ತೆಯ ಮೂಲಕವೇ ಸಮರ್ಥಿಸಿಕೊಂಡ ಬಿಜೆಪಿ, ತನ್ನನ್ನು ಮುಸ್ಲಿಮ್ ಮಹಿಳೆಯರ ಪಾಲಿನ ಮಸೀಹನಂತೆ ಬಿಂಬಿಸಿಕೊಂಡಿತು. ಇದೀಗ,

 ಪಶ್ಚಿಮ ಉತ್ತರ ಪ್ರದೇಶದ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಪ್ರಧಾನಿ ಮತ್ತೆ ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮ್ ಮಹಿಳೆಯರ ಬದುಕಿಗೆ ಭದ್ರತೆ ನೀಡಿ ವಿಮೋಚನೆಗೊಳಿಸಿದ್ದೇವೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಆದರೆ, ತ್ರಿವಳಿ ತಲಾಕ್ ಕಾನೂನಿಗಿಂತ ಮೊದಲು ದೇಶದಲ್ಲಿ ಎಷ್ಟು ತ್ರಿವಳಿ ತಲಾಕ್ ಪ್ರಕರಣಗಳಿದ್ದುವು ಮತ್ತು ಕಾನೂನಿನ ನಂತರ ಎಷ್ಟು ಪ್ರಕರಣಗಳಿವೆ ಎಂಬ ಸಣ್ಣ ಅಂಕಿ-ಅಂಶವನ್ನಾದರೂ ಅವರು ನೀಡಿರುತ್ತಿದ್ದರೆ ಅವರ ಮಾತಿಗೆ ಗೌರವ ಇರುತ್ತಿತ್ತು. ತ್ರಿವಳಿ ತಲಾಕ್‌ನಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಮುಸ್ಲಿಮ್ ಸಮುದಾಯದ ಒಪ್ಪಿತ ನಿಲುವಾಗಿದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದೇ ನಿಲುವನ್ನು ಹೊಂದಿದೆ. ತ್ರಿವಳಿ ತಲಾಕ್ ಬಿಡಿ, ಒಂದೇ ಉಸಿರಿನಲ್ಲಿ ನೂರು ತಲಾಕ್ ಹೇಳಿದರೂ ಅದು ಪೂರ್ಣ ತಲಾಕ್ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಮುಸ್ಲಿಮ್ ವಿದ್ವಾಂಸರು ಈ ಮೊದಲೇ ಹೊಂದಿದ್ದರು. ವಿಚ್ಛೇದನದ ಕನಿಷ್ಠ ಅವಧಿ 3 ತಿಂಗಳು. ಗರಿಷ್ಠ ಎಷ್ಟೂ ಆಗಬಹುದು. ಒಂದುಬಾರಿ ತಲಾಕ್ ಹೇಳಿ ಒಂದು ಆರ್ತವ ಕಾಲದ ವರೆಗೆ ಕಾಯಬೇಕು. ಆ ನಡುವೆ ಅವರಿಬ್ಬರೂ ಒಂದೇ ಮನೆಯಲ್ಲಿ ಪತಿ ಪತ್ನಿಯಾಗಿಯೇ ಇರುತ್ತಾರೆ. ಈ ನಡುವೆ ಅವರ ನಡುವೆ ದೈಹಿಕ ಸಂಬಂಧ ಏರ್ಪಟ್ಟರೆ ಆ ತಲಾಕ್ ಮುರಿಯುತ್ತದೆ. ಒಂದುವೇಳೆ, ಇಂಥ ಕ್ರಿಯೆ ಏರ್ಪಡದಿದ್ದರೆ ಕುಟುಂಬಗಳ ನಡುವೆ ಮಾತುಕತೆಯಂಥ ವಿವಿಧ ಕ್ರಿಯೆಗಳು ನಡೆಯಬೇಕು. ಇವೆಲ್ಲ ನಡೆದೂ ಪತಿ ವಿಚ್ಛೇದನಕ್ಕೆ ಬದ್ಧವಾಗಿರುವುದಾದರೆ ದ್ವಿತೀಯ ತಲಾಕ್ ಹೇಳಬೇಕು. ಆ ಬಳಿಕವೂ ಅವರಿಬ್ಬರೂ ಜೊತೆಯಾಗಿಯೇ ಇರಬೇಕು. ಆಗಲೂ ಅವರ ನಡುವೆ ದೈಹಿಕ ಸಂಬಂಧ  ಏರ್ಪಟ್ಟರೆ ತಲಾಕ್ ಮುರಿಯುತ್ತದೆ. ಒಂದು ವೇಳೆ, ಯಾವ ಮಾತುಕತೆ, ಕೌನ್ಸಿಲಿಂಗೂ ಯಶಸ್ವಿಯಾಗದಿದ್ದರೆ ಮೂರನೇ ತಲಾಕ್ ಮೂಲಕ ಆ ದಾಂಪತ್ಯ ಸಂಬಂಧ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಇದು ತಲಾಕ್‌ನ ಸರಿಯಾದ ಕ್ರಮ. ಆದರೆ,

ತಪ್ಪಾದ ಕ್ರಮದಿಂದ ಸರಿಯಾದ ಕ್ರಮದತ್ತ ಸಮಾಜವನ್ನು ಕೊಂಡೊಯ್ಯಬೇಕಾದ ಸರಕಾರ, ಪತಿಯನ್ನೇ ಜೈಲಲ್ಲಿಟ್ಟು ಪತ್ನಿಯನ್ನು ಅತಂತ್ರಗೊಳಿಸಿ ತಾನು ಮುಸ್ಲಿಮ್ ಮಹಿಳೆಯರ ಹಿತ ಕಾದಿದ್ದೇನೆ ಎಂದು ಹೇಳುತ್ತಿರುವುದು ನಾಚಿಕೆಗೇಡು.

Tuesday, 9 April 2024

ಝಕಾತ್: ಭಿನ್ನ ಪ್ರಯೋಗದ ಮೂಲಕ ಮಾಧ್ಯಮ ಗಮನ ಸೆಳೆದ ಜಮಾಅತೆ ಇಸ್ಲಾಮೀ ಹಿಂದ್




ಮೂವ್‌ಮೆಂಟ್  ಫಾರ್ ಪೀಸ್ ಆ್ಯಂಡ್ ಜಸ್ಟೀಸ್ (ಎಂಪಿಜೆ) ಎಂಬ ತೆಲಂಗಾಣದ ಸಂಸ್ಥೆಯೊಂದು  ಝಕಾತ್‌ನ ಮೂಲಕ ಕೈದಿಗಳಿಗೆ ಹೇಗೆ ನೆರವಾಗುತ್ತಿದೆ ಎಂಬ ಬಗ್ಗೆ ದಿ ಹಿಂದೂ ಪತ್ರಿಕೆ ಮಾರ್ಚ್ 31ರ ಸಂಚಿಕೆಯ ಮುಖಪುಟದಲ್ಲಿ ವಿವರವಾದ ವರದಿಯೊಂದನ್ನು ಪ್ರಕಟಿಸಿದೆ. ‘Zakaat helps free inmates during Ramzan ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ವರದಿ ಹಲವು ಸಕಾರಾತ್ಮಕ ಅಂಶಗಳನ್ನು ಎತ್ತಿ ಹೇಳಿದೆ. ಝಕಾತ್ ಎಂಬುದು ಮುಸ್ಲಿಮರಲ್ಲಿ ಮಾತ್ರ ಆಚರಣೆಯಲ್ಲಿರುವ ಮತ್ತು ಶ್ರೀಮಂತರು ತಮ್ಮ ಆಸ್ತಿಯಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ದಾನ ಮಾಡಲೇಬೇಕು ಎಂಬ ನಿಯಮವಿರುವ ಕ್ರಮ. ಸಾಮಾನ್ಯವಾಗಿ ಝಕಾತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕಾಗಿ ಬಳಸುವ ರೂಢಿಯಿದೆ. ಆದರೆ ತೆಲಂಗಾಣದ ಎಂಪಿಜೆ ಸಂಸ್ಥೆಯು ಈ ಸಾಮಾನ್ಯ ಆಲೋಚನೆಗಿಂತ ಭಿನ್ನವಾಗಿ ಅಸಹಾಯಕ ಕೈದಿಗಳು ಮತ್ತು ಅವರ ಕುಟುಂಬದ ಕಡೆಗೆ ಗಮನ ಹರಿಸಿದೆ. ಆದ್ದರಿಂದಲೇ ಈ ಸಂಸ್ಥೆಯು ದೇಶದ ಪ್ರಮುಖ ಮಾಧ್ಯಮವೊಂದರ ಮುಖಪುಟದಲ್ಲಿ ಕಾಣಿಸಿಕೊಂಡಿದೆ. ಈ ಎಂಪಿಜೆಯು ತೆಲಂಗಾಣ ಜಮಾಅತೆ ಇಸ್ಲಾಮೀ ಹಿಂದ್‌ನ ಅಂಗಸಂಸ್ಥೆ.

ಗೊತ್ತಿದ್ದೋ  ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಆ ಬಳಿಕ ಜಾಮೀನು ಮೊತ್ತವನ್ನೂ ಭರಿಸಲಾಗದೇ ಜೈಲಲ್ಲೇ  ಕೊಳೆಯುವ ಕೈದಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿದಿರುವುದು ಬಹಳ ಕಡಿಮೆ. ಜೊತೆಗೆ, ವ್ಯವಸ್ಥೆಯದ್ದೋ  ವ್ಯಕ್ತಿಗಳದ್ದೋ  ಸಂಚಿನಿಂದ  ಆರೋಪಿಯಾಗಿ ಜೈಲಲ್ಲಿ ಕಳೆಯುವವರೂ ಇದ್ದಾರೆ. ಹಾಗೆಯೇ, ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಶಿಕ್ಷಾ ಅವಧಿಯನ್ನು ಜೈಲಲ್ಲಿ ಕಳೆದರೂ ದಂಡದ  ಮೊತ್ತವನ್ನು ಪಾವತಿಸುವ ಸಾಮರ್ಥ್ಯವಿಲ್ಲದೇ ಜೈಲಲ್ಲೇ  ಕೊಳೆಯಬೇಕಾಗಿ ಬರುವುದೂ ಇದೆ. ಇಂಥ ಅಪರಾಧಿಗಳು ಮತ್ತು ಕೈದಿಗಳ ಬಗ್ಗೆ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಅಂತರಭಾವ ಇದ್ದೇ  ಇರುತ್ತದೆ. ಹಾಗೆಯೇ ಆಯಾ ಕುಟುಂಬಗಳೂ ಒಂದು ಹಂತದವರೆಗೆ ಅಪರಾಧಿ ಭಾವದೊಂದಿಗೆ ಬದುಕುವುದೂ ಇದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದ ಸಂಕಟದೊಂದಿಗೆ ಅವು ಬದುಕುತ್ತಿರುತ್ತವೆ. ಮನೆಯ ಏಕೈಕ ಆಧಾರಸ್ತಂಭವಾಗಿದ್ದ ವ್ಯಕ್ತಿ ಯಾವುದೋ ಅಪರಾಧ ಕೃತ್ಯದ ಆರೋಪದಲ್ಲಿ ಬಂಧನಕ್ಕೀಡಾದಾಗ ಅಥವಾ ಕೋರ್ಟು ಅಪರಾಧಿಯೆಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದಾಗ ಆ ವ್ಯಕ್ತಿಗಿಂತಲೂ ಕುಟುಂಬ ಹೆಚ್ಚು ಕಂಗಾಲಾಗುತ್ತದೆ. ಆ ಸಮಯದಲ್ಲಿ ಸಮಾಜ ಆದರಿಸದೇ ಹೋದರಂತೂ ಕುಟುಂಬ ಅಕ್ಷರಶಃ ಒಂಟಿತನದ ಭಾವದಿಂದ ಬೇಯುತ್ತದೆ. ಅಲ್ಲದೇ, ಆರೋಪಿಯ ಕುಟುಂಬದೊಂದಿಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ನೆರೆಕರೆಯವರು ಅಂಜುವುದೂ ಇದೆ. ಎಲ್ಲಿ ತಮ್ಮ ಮೇಲೆ ಅಪವಾದ ಬೀಳುತ್ತೋ, ಸರಕಾರ ಎಲ್ಲಿ ತಮ್ಮನ್ನೂ ಗುರಿ ಮಾಡುತ್ತೋ ಎಂಬ ಭಯ ಸಾಮಾನ್ಯ ಜನರನ್ನು ಕಾಡುವುದೂ ಇದೆ. ಇಂಥ ಸ್ಥಿತಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಮತ್ತು ಅವರಲ್ಲಿ ಧೈರ್ಯ ಮೂಡಿಸುವ ಪ್ರಯತ್ನಗಳೂ ಆಗಲೇಬೇಕು. ಆರೋಪಿ ಅಪರಾಧಿಯಲ್ಲ ಮತ್ತು ಅಪರಾಧಿಯ ಅಪರಾಧವು ಜೈಲು ಶಿಕ್ಷೆ ಪೂರ್ಣಗೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ ಎಂಬ ಸಕಾರಾತ್ಮಕ ಭಾವವನ್ನು ಸಮಾಜದಲ್ಲಿ ತುಂಬಬೇಕು. ಆದರೆ ಇಂಥ ಪ್ರಯತ್ನಗಳು ಆಗುತ್ತಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿಯೇ ಜಮಾಅತೆ ಇಸ್ಲಾಮೀ ಹಿಂದ್‌ನ ಈ ನಡೆಯನ್ನು ದಿ ಹಿಂದೂ ಪತ್ರಿಕೆ ಮುಖಪುಟದ ವಿಷಯವಾಗಿ ಎತ್ತಿಕೊಂಡಿದೆ ಎಂದೇ ಹೇಳಬೇಕಾಗುತ್ತದೆ.

ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್‌ನ ಪ್ರಕಾರ, ಈವರೆಗೆ 130 ಕೈದಿಗಳ ದಂಡದ ಮೊತ್ತವನ್ನು ಸಂಸ್ಥೆಯು ಭರಿಸಿದೆ. ಹಾಗೆಯೇ 35 ಆರೋಪಿಗಳ ಜಾಮೀನು ಮೊತ್ತವನ್ನು ಪಾವತಿಸಿದೆ. ಹೀಗೆ 165ರಷ್ಟು ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕೆ ಅದು ನೆರವಾಗಿದೆ. ಸಾಮಾನ್ಯವಾಗಿ ಈ ಎಂಪಿಜೆ ಸಂಸ್ಥೆಯು ಮೊದಲ ಬಾರಿ ಅಪರಾಧ ಎಸಗಿದ ಮತ್ತು ಜಾಮೀನು ಅಥವಾ ದಂಡದ ಮೊತ್ತವನ್ನು ಪಾವತಿಸಲು ಕುಟುಂಬಿಕರು ಅಥವಾ ಸ್ನೇಹಿತರನ್ನು ಹೊಂದಿರದ ಜೈಲು ಬಂಧಿಗಳನ್ನು ಗುರುತಿಸುತ್ತದೆ. ಇಂಥ ಕೈದಿಗಳ ಕೆಲವು ಕುಟುಂಬಗಳು ಎಷ್ಟು ದಯನೀಯ ಸ್ಥಿತಿಯಲ್ಲಿ ಇರುತ್ತಾರೆಂದರೆ, 500 ರೂಪಾಯಿ ಪಾವತಿಸುವುದಕ್ಕೂ ಅವರಲ್ಲಿ ಸಾಮರ್ಥ್ಯ ಇರುವುದಿಲ್ಲ. ಹಾಗೆಯೇ ತಮ್ಮ ಮನೆಯ ವ್ಯಕ್ತಿ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದ ಕುಟುಂಬಗಳಿರುತ್ತವೆ. ವಾರಗಳು ಅಥವಾ ತಿಂಗಳುಗಳ ನಂತರವಷ್ಟೇ ತಮ್ಮ ಮನೆಯ ವ್ಯಕ್ತಿ ಜೈಲಲ್ಲಿದ್ದಾನೆ ಎಂದು ತಿಳಿಯುವ ಬಡಪಾಯಿ ಕುಟುಂಬಗಳೂ ಇವೆಯೆಂದು ಎಂಪಿಜೆಯ ಮುಖ್ಯಸ್ಥರಾದ ಅಹ್ಮದ್ ಹಮೀದುದ್ದೀನ್ ಶಕೀಲ್ ಹೇಳಿರುವುದನ್ನು ದಿ ಹಿಂದೂ ಪ್ರಕಟಿಸಿದೆ. 2007ರಿಂದಲೇ ಸಕ್ರಿಯವಾಗಿರುವ ಈ ಸಂಸ್ಥೆಯು ಇವತ್ತು ಅಸಹಾಯಕ ಕೈದಿಗಳು ಮತ್ತು ಕುಟುಂಬಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಟ್ಟಿದೆ. ಝಕಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬ ಬಗ್ಗೆ ಅದು ಮಾದರಿಯೊಂದನ್ನು ಪರಿಚಯಿಸಿದೆ. ನಿಜವಾಗಿ,

ಝಕಾತ್ ಎಂಬುದು ಅತ್ಯಂತ ಕ್ರಾಂತಿಕಾರಿ ಯೋಜನೆ. ಶ್ರೀಮಂತರ ಸಂಪತ್ತಿನಲ್ಲಿ ಬಡವರಿಗೂ ಪಾಲಿದೆ ಎಂಬ ಅತಿ ವಿಶಿಷ್ಟ ಮತ್ತು ಅತಿ ಉದಾತ್ತ ಪರಿಕಲ್ಪನೆ. ವ್ಯಕ್ತಿಯ ವಾರ್ಷಿಕ ಉಳಿತಾಯದಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಬಡವರಲ್ಲಿ ಹಂಚಬೇಕು ಎಂಬ ಈ ನಿಲುವು ವರ್ಗ ಸಂಘರ್ಷವನ್ನು ತಡೆಯುತ್ತದೆ. ಶ್ರೀಮಂತನ ಶ್ರೀಮಂತಿಕೆಯ ಮೇಲೆ ಬಡವ ಅಸೂಯೆ ಪಡುವುದರ ಬದಲು ಆತನ ಶ್ರೀಮಂತಿಕೆಯು ತನ್ನ ಅಭಿವೃದ್ಧಿಗೆ ಕೊಡುಗೆಯಾಗಲಿದೆ ಎಂಬ ಆಶಾವಾದವನ್ನು ಸೃಷ್ಟಿಸುತ್ತದೆ. ಹಾಗೆಯೇ, ಈ ಝಕಾತ್ ಶ್ರೀಮಂತನನ್ನೂ ದೇವನಿಗೆ ವಿನೀತಗೊಳಿಸುತ್ತದೆ. ತನ್ನ ಸಂಪತ್ತು ದೇವನ ಅನುಗ್ರಹವಾಗಿದೆ ಎಂಬ ಭಾವವನ್ನು ಮೂಡಿಸುತ್ತದೆ. 2.5%ದಿಂದ ಆರಂಭವಾಗುವ ಈ ಝಕಾತ್ ನಿಯಮವು ನೀರಾವರಿ ಕೃಷಿ, ಮಳೆ ನೀರಿನ ಕೃಷಿ, ವಿವಿಧ ವ್ಯಾಪಾರ ವಹಿವಾಟುಗಳಿಗೆ ಬೇರೆ ಬೇರೆ ಶೇಕಡಾವಾರನ್ನು ನಿರ್ಣಯಿಸಿದೆ. ಇವತ್ತು ಜಾಗತಿಕವಾಗಿ ಝಕಾತ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ ಮತ್ತು ಅವು ಬಡರಾಷ್ಟ್ರಗಳ ಪಾಲಿನ ಭರವಸೆಯಾಗಿಯೂ ಉಳಿದಿದೆ. ಆಫ್ರಿಕಾ ಖಂಡದ ಬಡರಾಷ್ಟ್ರಗಳ ಜನರ ಶ್ರೇಯೋಭಿವೃದ್ಧಿಗೆಂದೇ ಅರಬ್ ರಾಷ್ಟ್ರಗಳ ಕೋಟ್ಯಂತರ ಹಣವು ಪ್ರತಿವರ್ಷ ವಿನಿಯೋಗವಾಗುತ್ತದೆ. ಒಂದುವೇಳೆ,

ಝಕಾತ್‌ನ ಮೊತ್ತ ಸಮರ್ಪಕವಾಗಿ ಸಂಗ್ರಹವಾದರೆ ಮತ್ತು ಯೋಜನಾಬದ್ಧವಾಗಿ ವಿನಿಯೋಗವಾದರೆ, ಸರಕಾರವನ್ನು ಅವಲಂಬಿಸದೆಯೇ ಸಮುದಾಯದ ಏಳಿಗೆ ಸಾಧ್ಯವಾದೀತು ಎಂಬ ಅಭಿಪ್ರಾಯವೂ ಇದೆ. ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಝಕಾತ್ ಪಾವತಿಸಲು ಅರ್ಹವಾದ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರ ಝಕಾತ್ ಆಯಾ ಮಸೀದಿ ವ್ಯಾಪ್ತಿಯ ಬಡವರು, ನಿರ್ಗತಿಕರು ಮತ್ತು ಇನ್ನಿತರ ವ್ಯಕ್ತಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ವ್ಯಯವಾಗುವಂತೆ ನೋಡಿಕೊಳ್ಳುವ ಕ್ರಿಯಾ ಯೋಜನೆ ತಯಾರಾಗಬೇಕು. ಅದಕ್ಕಿಂತ ಮೊದಲು ಪ್ರತಿ ಮಸೀದಿಯೂ ತನ್ನ ಜಮಾಅತ್‌ಗೊಳಪಟ್ಟ ಪ್ರತಿ ಮನೆಯ ಡೇಟಾವನ್ನು ಸಂಗ್ರಹಿಸಬೇಕು. ಮನೆಯಲ್ಲಿ ಎಷ್ಟು ಮಂದಿಯಿದ್ದಾರೆ, ಅವರಲ್ಲಿ ದುಡಿಯುವವರು ಎಷ್ಟು, ರೋಗಿಗಳು, ಮದುವೆ ಪ್ರಾಯಕ್ಕೆ ಬಂದ ಗಂಡು ಮತ್ತು ಹೆಣ್ಣು ಎಷ್ಟು, ವಿದ್ಯಾರ್ಥಿಗಳು, ವಿಧವೆ ಮತ್ತು ವಿಚ್ಛೇದಿತೆಯರು, ನಿರುದ್ಯೋಗಿಗಳು ಎಷ್ಟು, ಕೈದಿಗಳಿದ್ದಾರಾ... ಎಂಬೆಲ್ಲಾ ಪಕ್ಕಾ ಮಾಹಿತಿಗಳು ಮಸೀದಿ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರಬೇಕು. ಇದಕ್ಕಾಗಿ ಮಸೀದಿ ಆಡಳಿತ ಸಮಿತಿಯು ಉತ್ಸಾಹಿ ಯುವಕರನ್ನು ಸಂಘಟಿಸಿ ಸಮೀಕ್ಷೆ ನಡೆಸಬೇಕು. ಪ್ರತಿ ಮಸೀದಿಯೂ ಒಂದಕ್ಕಿಂತ  ಹೆಚ್ಚು ಯುವಕರ ಸಂಘಟನೆಯನ್ನು ಹೊಂದಿರುವುದರಿಂದ ಈ ಸಮೀಕ್ಷಾ ಕಾರ್ಯ ಕಷ್ಟವಲ್ಲ. ಈ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡಕೊಂಡು ಹೊಣೆಗಾರಿಕೆಯನ್ನು ವಿಭಜಿಸಿಕೊಟ್ಟರೆ ಕ್ರಾಂತಿಕಾರಿ ಬದಲಾವಣೆಗೆ ಬಹುದೊಡ್ಡ ಅಡಿಗಲ್ಲು ಹಾಕಿದಂತಾದೀತು.

ಏನೇ ಇದ್ದರೂ ತೆಲಂಗಾಣದ ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ಸಂಸ್ಥೆಯು ಭಿನ್ನ ಆಲೋಚನೆಯ ಮೂಲಕ ಸಾರ್ವಜನಿಕ ಗಮನ ಸೆಳೆದಿದೆ. ಝಕಾತ್ ಎಂಬ ಅಪ್ಪಟ ಧರ್ಮಾಧಾರಿತ ಯೋಜನೆಯು ಹೇಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಡಬಲ್ಲುದು ಎಂಬುದನ್ನು ಅದು ಎತ್ತಿ ತೋರಿಸಿದೆ. ದಶಕದ ಹಿಂದೆಯೇ  ಚಟುವಟಿಕೆಯಲ್ಲಿ ತೊಡಗಿರುವ ಈ ಸಂಸ್ಥೆಯನ್ನು ಇದೀಗ ಇಲ್ಲಿನ ಮುಂಚೂಣಿ ಮಾಧ್ಯಮವೂ ಗುರುತಿಸಿದೆ. ಒಂದು ರೀತಿಯಲ್ಲಿ ಇದು ಝಕಾತ್‌ನ ಗೆಲುವು. ಇಸ್ಲಾಮ್‌ನ ಕಡ್ಡಾಯ ಕರ್ಮವೊಂದು ನಾಗರಿಕ ಸ್ನೇಹಿಯಾಗಿ ಬಳಕೆಯಾದಾಗ ಹೇಗೆ ಸಾರ್ವತ್ರಿಕ ಮನ್ನಣೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಈ ಎಂಪಿಜೆ ಚಟುವಟಿಕೆಯೇ ಸಾಕ್ಷಿ.

Monday, 1 April 2024

ಹಿಂದೂ ಧಾರ್ಮಿಕ ಮುಖಂಡರೇಕೆ ಮೌನವಾಗಿದ್ದಾರೆ?




ನಿಜಕ್ಕೂ ಧರ್ಮ ಅಸಹಿಷ್ಣುಗಳು ಯಾರು ಎಂಬುದನ್ನು ಉತ್ತರ ಪ್ರದೇಶ ಮತ್ತೊಮ್ಮೆ ದೇಶದ ಮುಂದೆ ಬಹಿರಂಗವಾಗಿ ಸಾರಿ ಹೇಳಿದೆ.  ಬರೇಲ್ವಿ ಜಿಲ್ಲೆಯ ಮುಸ್ಲಿಮ್ ಧರ್ಮಗುರುಗಳ ಸಭೆ ನಡೆಸಿರುವ ಬರೇಲ್ವಿಯ ಹಿರಿಯ ಪೊಲೀಸ್ ಅಧೀಕ್ಷಕ ಗುಲೆ ಸುಶೀಲ್ ಚಂದ್ರಬಾನ್,  ಮಸೀದಿಗಳಿಗೆ
ಹೊದಿಕೆ ಹಾಕುವಂತೆ ಹೇಳಿದ್ದಾರೆ. ಹಾಗಂತ, ಹೀಗೆ ಹೊದಿಕೆ ಹಾಕುವುದು ದೂಳಿನಿಂದಲೋ ಬಿಸಿಲಿನಿಂದಲೋ ರಕ್ಷಣೆ  ಹೊಂದುವುದಕ್ಕಲ್ಲ. ಬರೇಲ್ವಿಯ ನರಸಿಂಹ ದೇವಾಲಯ, ಶಹಜಾನ್‌ಪುರದ ಪೂಲ್ಮತಿ ದೇವಾಲಯದಿಂದ ಹೋಳಿ ಹಬ್ಬದ ಹಿನ್ನೆಲೆಯಲ್ಲಿ  ಮೆರವಣಿಗೆ ನಡೆಯಲಿದ್ದು, ಕಿಡಿಗೇಡಿಗಳು ಮಸೀದಿಗಳಿಗೆ ಬಣ್ಣ ಎರಚದಂತೆ ತಡೆಯುವುದೇ ಇದರ ಉದ್ದೇಶ. ಪೊಲೀಸ್ ಅಧಿಕಾರಿಗಳ ಈ  ಸೂಚನೆಯನ್ನು ಮುಸ್ಲಿಮ್ ಸಮುದಾಯ ಪಾಲಿಸಿದ್ದು, ಮೆರವಣಿಗೆ ಸಾಗುವ ದಾರಿಯಲ್ಲಿನ ಮಸೀದಿಗಳಿಗೆ ಹೊದಿಕೆ ಹಾಸಿರುವ ಚಿತ್ರಗಳು  ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆಗೇ ಇನ್ನಷ್ಟು ವೀಡಿಯೋಗಳೂ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಗುತ್ತಿದ್ದು, ವಾಹನದಲ್ಲಿ ಸಾಗುತ್ತಿರುವ ಮುಸ್ಲಿಮ್ ಸಮುದಾಯದ ವ್ಯಕ್ತಿಗಳ ಮೇಲೆ ಬಲವಂತದಿಂದ ಬಣ್ಣ ಎರಚಿ ಧಾರ್ಮಿಕ  ಘೋಷಣೆಯೊಂದಿಗೆ ಸಂಭ್ರಮಪಡುತ್ತಿರುವುದೂ ಕಾಣಿಸಿದೆ. ಅಂದಹಾಗೆ,

ಈದ್‌ನ ಸಮಯದಲ್ಲಿ ಅಥವಾ ಪೈಗಂಬರರ ದಿನದ ಹೆಸರಲ್ಲಿ ನಡೆಯುವ ಮೆರವಣಿಗೆಗಳ ವೇಳೆ ದೇವಾಲಯಗಳಿಗೆ ಹೊದಿಕೆ ಹಾಸುವಂತೆ  ಕೋರಲಾಗಿರುತ್ತಿದ್ದರೆ ಏ
ನಾಗುತ್ತಿತ್ತು? ಟಿ.ವಿ. ಚಾನೆಲ್‌ಗಳಲ್ಲಿ ಯಾವೆಲ್ಲ ರೀತಿಯ ಚರ್ಚೆಗಳು ನಡೆಯುತ್ತಿತ್ತು? ಸೋಶಿಯಲ್ ಮೀಡಿಯಾದ  ಅಬ್ಬರ ಹೇಗಿರುತ್ತಿತ್ತು? ಮುಸ್ಲಿಮರನ್ನು ಅಸಹಿಷ್ಣುಗಳು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂದೆಲ್ಲಾ ಮಾಧ್ಯಮಗಳ ಮುಂದೆ  ಘೋಷಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ಎಷ್ಟಿರುತ್ತಿದ್ದರು?
ಈ ದೇಶದಲ್ಲಿ ಹೋಳಿಯಂತೆಯೇ ಈದ್ ಅನ್ನೂ  ಆಚರಿಸಲಾಗುತ್ತದೆ. ಆದರೆ, ಈ ದೇಶದ ಯಾವ ದೇವಾಲಯವೂ ಈದ್‌ನಿಂದಾಗಿ ಗಾಂಬರಿಗೊಂಡದ್ದಿಲ್ಲ. ಟಾರ್ಪಲಿನ್ ಹೊದಿಸಲಾದದ್ದೂ  ಇಲ್ಲ.

ಹಬ್ಬ ಎಂಬುದು ಆಯಾ ಧರ್ಮದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೊಗಡಿನ ಪ್ರತೀಕವೇ ಹೊರತು ಅನ್ಯಧರ್ಮ ಅಸಹಿಷ್ಣುತೆಯ ಆಯುಧ  ಅಲ್ಲ. ಹೋಳಿ ಹಬ್ಬಕ್ಕೊಂದು ಹಿನ್ನೆಲೆಯಿದೆ. ಆ ಹಿನ್ನೆಲೆಯ ಯಾವ ಭಾಗದಲ್ಲೂ ಮತ್ತು ಯಾವ ಪುಟದಲ್ಲೂ ಮುಸ್ಲಿಮರ ಪ್ರಸ್ತಾಪವೇ ಇಲ್ಲ.  ಮುಸ್ಲಿಮರನ್ನು ವಿರೋಧಿಸುವುದಕ್ಕಾಗಿಯೋ ಅಥವಾ ಅವರ ಮಸೀದಿಗೆ ಬಣ್ಣ ಎರಚುವುದಕ್ಕಾಗಿಯೋ ಹೋಳಿ ಆಚರಿಸಬೇಕೆಂಬ ಒಂದು ಸಣ್ಣ  ಗೆರೆಯ ಉಲ್ಲೇಖವೂ ಇಲ್ಲ. ಅದು ಪೂರ್ತಿಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಖುಷಿಯ ಪ್ರದರ್ಶನ. ಹಬ್ಬಗಳೆಲ್ಲ ಸಾಮಾನ್ಯವಾಗಿ ಹೀಗೆಯೇ  ಇವೆ. ಗಣೇಶ ಚತುರ್ಥಿಯಾಗಲಿ, ದೀಪಾವಳಿಯಾಗಲಿ ಅಥವಾ ಮುಸ್ಲಿಮರ ಈದ್, ಕ್ರೈಸ್ತರ ಕ್ರಿಸ್ಮಸ್‌ಗಳಾಗಲಿ.. ಯಾವುವೂ ಇನ್ನೊಂದು  ಧರ್ಮವನ್ನು ದ್ವೇಷಿಸಿಕೊಂಡೋ ಕೆರಳಿಸಿಕೊಂಡೋ ಹುಟ್ಟಿದ್ದಲ್ಲ. ಆಯಾ ಧರ್ಮಗಳ ಅನುಯಾಯಿಗಳು ಸಂತಸಪಡುವ ಸಂದರ್ಭಗಳಾಗಿ  ಅವು ಉಳಿದುಕೊಂಡಿವೆ. ಹೀಗಿರುವಾಗ, ಹೋಳಿ ಹಬ್ಬ ಆಚರಿಸುವವರು ಅದನ್ನಾಚರಿಸದವರ ಮೇಲೆ ಬಣ್ಣವನ್ನೇಕೆ ಎರಚಬೇಕು? ಮಸೀದಿಗಳನ್ನೇಕೆ ಗುರಿಯಾಗಿಸಬೇಕು? ಹೋಳಿಗೂ ಮಸೀದಿಗೂ ಏನು ಸಂಬಂಧ? ತಮಾಷೆ ಏನೆಂದರೆ,

ಮಸೀದಿಗೆ ಬಣ್ಣ ಎರಚುವ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕಾದ ಪೊಲೀಸ್ ಇಲಾಖೆಯು ಅದರ ಬದಲು ಮಸೀದಿಯನ್ನೇ ಹೊದಿಕೆಯಿಂದ  ಮುಚ್ಚುವಂತೆ ಆದೇಶಿಸಿರುವುದು. ಬರೇಲ್ವಿಯಲ್ಲಾಗಲಿ, ಶಹಜಹಾನ್‌ಪುರದಲ್ಲಾಗಲಿ ಯಾವ ಮಸೀದಿಯೂ ಹೋಳಿ ಹಬ್ಬದ ವಿರುದ್ಧ ಮಾತಾಡಿಲ್ಲ.  ಅಥವಾ ಹೋಳಿ ಹಬ್ಬದ ಮೆರಣಿಗೆಯ ದಿನದಂದು ತನ್ನದೇ ಕಾರ್ಯಕ್ರಮದ ಮೆರವಣಿಗೆಯನ್ನೂ ಇಟ್ಟುಕೊಂಡಿಲ್ಲ. ಹೀಗಿರುವಾಗ  ಕಿಡಿಗೇಡಿಗಳನ್ನು ಮಟ್ಟ ಹಾಕುವ ಬದಲು ಮಸೀದಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಏನರ್ಥವಿದೆ? ಮೆರವಣಿಗೆಯಲ್ಲಿ ಕಿಡಿಗೇಡಿಗಳು  ನುಸುಳುತ್ತಾರೆಂಬುದು ಪೊಲೀಸರ ಸಂದೇಹವಾದರೆ ಅದಕ್ಕಾಗಿ ದಂಡಿಸಬೇಕಾದದ್ದು ಮಸೀದಿಯನ್ನೋ ಅಲ್ಲ ಕಿಡಿಗೇಡಿಗಳನ್ನೋ? ಯಾವುದೇ  ಮಸೀದಿಯಾಗಲಿ ಮಂದಿರವಾಗಲಿ ಮೆರವಣಿಗೆಗಳನ್ನು ಆಯೋಜಿಸುತ್ತದೆಂದಾದರೆ, ಅದು ಶಾಂತಿಪೂರ್ಣ ಮತ್ತು ದ್ವೇಷರಹಿತವಾಗಿರುವಂತೆ  ನೋಡಿಕೊಳ್ಳಬೇಕಾದುದು ಮೆರವಣಿಗೆ ಆಯೋಚಿಸಿದವರ ಕರ್ತವ್ಯ. ಸಾಮಾನ್ಯವಾಗಿ ಪೊಲೀಸರು ಆಯೋಜಕರಿಂದ ಈ ಬಗ್ಗೆ ಮುಚ್ಚಳಿಕೆಯನ್ನು ಪಡಕೊಳ್ಳುವುದೂ ಇದೆ. ಅದು ಬಿಟ್ಟು ಮಸೀದಿಗಳನ್ನೇ ಅಪರಾಧಿಯಂತೆ ಕಾಣುವುದಕ್ಕೆ ಏನೆನ್ನಬೇಕು? ನಿಜವಾಗಿ,

ಮಸೀದಿಗಳನ್ನು ಹೊದಿಕೆಯಿಂದ ಮುಚ್ಚಿ ಎಂದು ಪೊಲೀಸರು ಮುಸ್ಲಿಮರಿಗೆ ಸೂಚಿಸುವುದರಲ್ಲಿ ಒಂದು ಸಂದೇಶವಂತೂ  ಸ್ಪಷ್ಟವಾಗಿ ರವಾನೆಯಾಗಿದೆ. ಹೋಳಿಯು ಬರೇ ಹಬ್ಬವಾಗಿ ಉಳಿದಿಲ್ಲ. ಅದು ಮುಸ್ಲಿಮ್ ದ್ವೇಷವನ್ನು ಕಾರುವುದಕ್ಕಿರುವ ಒಂದು ಸಂದರ್ಭವೂ ಆಗುತ್ತಿದೆ.  ಮಾತ್ರವಲ್ಲ, ವ್ಯವಸ್ಥೆಯೇ ಇದನ್ನು ಒಪ್ಪಿಕೊಳ್ಳುತ್ತಲೂ ಇದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಹೋಳಿ ಮೆರವಣಿಗೆಯಲ್ಲಿ ತೆರಳುವವರು  ಮಸೀದಿಯನ್ನೇಕೆ ದ್ವೇಷಿಸುತ್ತಾರೆ? ಅವರೇಕೆ ಮಸೀದಿಗಳಿಗೆ ಬಣ್ಣ ಎರಚುತ್ತಾರೆ? ಹಿಂದೂ ಧರ್ಮ ಅನ್ಯ ಧರ್ಮ ಅಸಹಿಷ್ಣುವೇ? ಅಲ್ಲ  ಎಂದಾದರೆ, ಮಸೀದಿಗೆ ಹೊದಿಸುವಂತೆ ವ್ಯವಸ್ಥೆಯೇ ಕರೆಕೊಡುವ ಸನ್ನಿವೇಶ ಉಂಟಾಗಿಯೂ ಯಾಕೆ ಹಿಂದೂ ಧರ್ಮದ ಯಾರೂ  ಮಾತಾಡುತ್ತಿಲ್ಲ? ತೀರಾ ತೀರಾ ಸಣ್ಣ ಸಣ್ಣ ವಿಷಯಗಳಿಗೂ ಮುಸ್ಲಿಮ್ ಧರ್ಮಗುರುಗಳ ಫತ್ವಾವನ್ನೋ ಸ್ಪಷ್ಟೀಕರಣವನ್ನೋ ಕೇಳಲಾಗುವ ಈ  ದೇಶದಲ್ಲಿ ಮಸೀದಿಗಳನ್ನೇ ಹೊದಿಕೆಯಿಂದ ಮುಚ್ಚಿದ ಘಟನೆಗಳು ನಡೆದ ಬಳಿಕವೂ ಯಾಕೆ ಯಾವ ವಿರೋಧವೂ ವ್ಯಕ್ತವಾಗುತ್ತಿಲ್ಲ?  ಒಂದುವೇಳೆ, ಮೆರವಣಿಗೆ ಆಯೋಜಿಸಿದವರು ಈ ಬೆಳವಣಿಗೆಯ ವಿರೋಧಿಗಳೆಂದಾದರೆ, ಅವರಾದರೂ ಹೇಳಿಕೆ ಕೊಡಬೇಕಿತ್ತಲ್ಲ? ಅಥವಾ  ಮಸೀದಿಗಳಿಗೆ ಟಾರ್ಪಲಿನ್ ಹೊದಿಸುವ ಸನ್ನಿವೇಶಕ್ಕೆ ವಿಷಾದ ಸೂಚಿಸಿ ಮೆರವಣಿಗೆಯನ್ನೇ ರದ್ದುಗೊಳಿಸಬಹುದಿತ್ತಲ್ಲ? ಹಾಗೆ ಮಾಡಿರುತ್ತಿದ್ದರೆ  ಅದು ಈ ಹೋಳಿ ಮೆರವಣಿಗೆ ಆಯೋಚಿಸಿದವರ ಕುರಿತಂತೆ ಗೌರವ ಹೆಚ್ಚಿಸುತ್ತಿತ್ತಲ್ಲವೇ? ದುರಂತ ಏನೆಂದರೆ,

ಹಿಂದೂ  ಧರ್ಮವನ್ನು ಮುಸ್ಲಿಮರ ವೈರಿಯಂತೆ ಬಿಂಬಿಸುವವರ ಕೈ ನಿಧಾನಕ್ಕೆ ಬಲ ಪಡೆಯುತ್ತಿರುವಂತೆ ಕಾಣಿಸುತ್ತಿದೆ. ಮುಸ್ಲಿಮರನ್ನು ನಿಂದಿಸುವ, ಹಿಂಸಿಸುವ ಮತ್ತು ಅವರ ಆರಾಧನೆಗಳಿಗೆ ಅಡ್ಡಿಪಡಿಸುವ ಘಟನೆಗಳೂ ಹೆಚ್ಚಾಗುತ್ತಿವೆ. ಮಾತ್ರವಲ್ಲ, ಈ ಎಲ್ಲವನ್ನೂ ಧಾರ್ಮಿಕ  ಘೋಷಣೆಯ ಜೊತೆಗೇ ಮಾಡಲಾಗುತ್ತಿದೆ. ಆದರೆ, ಇದು ಧರ್ಮವಲ್ಲ, ಅಧರ್ಮ ಎಂದು ಘಂಟಾಘೋಷವಾಗಿ ಹೇಳಬೇಕಾದವರು ಮೌ ನವಾಗಿದ್ದಾರೆ. ಈ ಮೌನವೇ ಈ ಅಧರ್ಮಿಗಳ ಧೈರ್ಯವನ್ನು ಹೆಚ್ಚಿಸುತ್ತಲೂ ಇದೆ. ಮಾತ್ರವಲ್ಲ, ಅವರ ಕೃತ್ಯಗಳು ಮತ್ತು ಘೋಷಣೆಗಳು  ಅವರು ಪ್ರತಿನಿಧಿಸುವ ಧರ್ಮಕ್ಕೆ ಮಸಿ ಬಳಿಯುತ್ತಲೂ ಇವೆ. ಸದ್ಯದ ಅಗತ್ಯ ಏನೆಂದರೆ, ಧಾರ್ಮಿಕ ಘೋಷಣೆಗಳೊಂದಿಗೆ ಧರ್ಮಬಾಹಿರ  ಕೃತ್ಯಗಳನ್ನು ನಡೆಸುವವರ ವಿರುದ್ಧ ಹಿಂದೂ ಧರ್ಮದ ಮುಖಂಡರು ಧ್ವನಿ ಎತ್ತಬೇಕು. ಮುಸ್ಲಿಮರನ್ನು ದ್ವೇಷಿಸುವುದರಿಂದ ಹಿಂದೂ ಧರ್ಮದ  ಉದ್ಧಾರವಾಗದು ಎಂದು ಬಲವಾಗಿ ಸಾರಬೇಕು. ಯಾವುದೇ ಧರ್ಮವು ಇನ್ನೊಂದು ಧರ್ಮವನ್ನು ದ್ವೇಷಿಸುವುದರಿಂದ ಬೆಳೆಯಲಾರದು.  ಆದರೆ ಧರ್ಮದ ಮೌಲ್ಯಗಳನ್ನು ಪಾಲಿಸುವುದರಿಂದ ಬೆಳೆಯಬಲ್ಲುದು. ಹಬ್ಬವಾಗಲಿ ಅದಕ್ಕೆ ಸಂಬಂಧಿಸಿ ಏರ್ಪಡಿಸುವ ಮೆರವಣಿಗೆಗಳಾಗಲಿ  ಧರ್ಮದ ಮೌಲ್ಯಗಳನ್ನು ಬಿತ್ತುವಂತಿರಬೇಕು. ಆ ಮೆರವಣಿಗೆಯು ಆ ಧರ್ಮದ ಅನುಯಾಯಿಗಳಲ್ಲದವರನ್ನೂ ಆಕರ್ಷಿಸಬೇಕು.  ಧರ್ಮವೊಂದು ತನ್ನ ಚೌಕಟ್ಟನ್ನೂ ಮೀರಿ ಬೆಳೆಯುವುದು ಹೀಗೆ. ಹೀಗೆ ಧರ್ಮವೊಂದು ಬೆಳೆಯಬೇಕಾದರೆ ಅದರ ಅನುಯಾಯಿಗಳು ಆ  ಧರ್ಮದ ನಿಜ ರಾಯಭಾರಿಗಳಾಗಬೇಕು. ಬದುಕಿನಲ್ಲಿ ಧರ್ಮದ ಮೌಲ್ಯಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆಗ ಅನ್ಯಧರ್ಮದ  ನೋಡುಗರ ಮೇಲೂ ಕೇಳುಗರ ಮೇಲೂ ಪ್ರಭಾವವನ್ನು ಬೀರುತ್ತದೆ. ಇದನ್ನು ಬಿಟ್ಟು ಅನುಯಾಯಿಗಳು ಅನ್ಯಧರ್ಮ ದ್ವೇಷವನ್ನೇ  ಮುಖ್ಯವಾಗಿಸಿಕೊಂಡಾಗ ಧರ್ಮ ಎಷ್ಟೇ ಒಳ್ಳೆಯದಿದ್ದರೂ ಪ್ರಾಯೋಗಿಕವಾಗಿ ಅದು ಸೋಲುತ್ತದೆ. ಹಿಂಸೆಯನ್ನು ಅಸ್ತ್ರವಾಗಿಸಿಕೊಳ್ಳುವ ಎಲ್ಲ  ಧರ್ಮೀಯರಲ್ಲೂ ಈ ಎಚ್ಚರಿಕೆ ಇರಬೇಕು.

Tuesday, 6 February 2024

ಭಾರತದ ಎದೆಗೆ ವಾಸಿಯಾಗದ ಗಾಯ ಮಾಡಿರುವುದೇ ಅರ್ಹತೆಯೇ?



 ಸನ್ಮಾರ್ಗ ಸಂಪಾದಕೀಯ


ಬಾಬರಿ ಮಸೀದಿ ಧ್ವಂಸವನ್ನು ಅಪರಾಧ ಮತ್ತು ಕ್ರಿಮಿನಲ್ ಕೃತ್ಯ ಎಂದು 2019 ನವೆಂಬರ್‌ನಲ್ಲಿ ಸುಪ್ರೀಮ್ ಕೋರ್ಟ್ ನ  ಐವರು  ನ್ಯಾಯಾಧೀಶರು ಘೋಷಿಸುವಾಗಲೂ ಧ್ವಂಸದ ಆರೋಪಿಯಾಗಿಯೇ ಉಳಿದುಕೊಂಡಿದ್ದ ಎಲ್.ಕೆ. ಅಡ್ವಾಣಿಯವರನ್ನು ಭಾರತ ರತ್ನ  ಪುರಸ್ಕಾರದ ಮೂಲಕ ಗೌರವಿಸಲಾಗಿದೆ. ಈ ತೀರ್ಪಿನ 11 ತಿಂಗಳ ಬಳಿಕ 2020 ಸೆಪ್ಟೆಂಬರ್ 20ರಂದು ಲಕ್ನೋದ ಸಿಬಿಐ ವಿಶೇಷ  ನ್ಯಾಯಾಲಯವು ಅಡ್ವಾಣಿ ಸಹಿತ 32 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಇದೇವೇಳೆ, ಅಡ್ವಾಣಿ ಮೇಲಿನ ಆರೋ ಪವನ್ನು ಸಾಬೀತುಪಡಿಸುವ ವೀಡಿಯೋವನ್ನು ನ್ಯಾಯಾಲಯದ ಮುಂದೆ ಸಿಬಿಐ  ನ್ಯಾಯಾಲಯ ಅದನ್ನು ಪುರಸ್ಕರಿಸ ಲಿಲ್ಲ. ಕಾರಣ ಏನೆಂದರೆ, ಫಾರೆನ್ಸಿಕ್ ಲ್ಯಾಬೋರೇಟರಿಯಲ್ಲಿ ಆ ವೀಡಿಯೋದ ಸಾಚಾತನವನ್ನು ಪರೀಕ್ಷಿಸಿಯೇ ಇರಲಿಲ್ಲ. ಹಾಗೆಯೇ,  ಅಂದಿನ ಧ್ವಂಸ ಕಾರ್ಯಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿತ್ತು. ಆದರೆ ಅದರ ಮೂಲ ಪ್ರತಿಯನ್ನೇ  ಸಲ್ಲಿಸಿರಲಿಲ್ಲ. ಅಷ್ಟಕ್ಕೂ,

ಸಾಕ್ಷ್ಯವಾಗಿ ಸಲ್ಲಿಸುವ ಯಾವುದೇ ವೀಡಿಯೋವನ್ನೂ ಫಾರೆನ್ಸಿಕ್ ಲ್ಯಾಬೋರೇಟರಿ ಪರೀಕ್ಷೆಗೆ ಒಳಪಡಿಸಬೇಕು ಎಂದೋ ಅಥವಾ ಯಾವುದೇ ಫೋಟೋದ ನೆಗೆಟಿವ್ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೋ ಸಿಬಿಐಗೆ ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೇ  ಹೀಗೆ ಮಾಡುವುದಕ್ಕೆ ಸಾಕಷ್ಟು ಸಮಯಾವಕಾಶ ಇರಲಿಲ್ಲ ಎಂದೂ ಅಲ್ಲ. 1992ರಿಂದ 2020ರ ನಡುವೆ ದೀರ್ಘ 28 ವರ್ಷಗಳೇ ಸಿಬಿಐಗೆ ಇತ್ತು. ಧ್ವಂಸ ವೀಡಿಯೋದ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸುವುದಕ್ಕೆ ಮತ್ತು ಫೋಟೋಗಳ ಮೂಲ ಪ್ರತಿಯನ್ನು ಸಂಗ್ರಹಿಸುವುದಕ್ಕೆ  ಇದಕ್ಕಿಂತಲೂ ಹೆಚ್ಚಿನ ಅವಧಿ ಬೇಕು ಎಂದು ಯಾರೂ ಹೇಳಲಾರರು. ಅಂದರೆ, ಸಿಬಿಐ ಉದ್ದೇಶಪೂರ್ವಕವಾಗಿಯೇ ಹೀಗೆ  ನಡಕೊಂಡಿತ್ತು. ಆರೋಪಿಗಳನ್ನು ದೋಷಮುಕ್ತಗೊಳಿಸುವುದೇ ಉದ್ದೇಶವಾಗಿರುವಾಗ ಅದು ಪ್ರಬಲ ಸಾಕ್ಷ್ಯ ಗಳನ್ನು ಸಲ್ಲಿಸುವುದಾದರೂ  ಹೇಗೆ? ಈ ತೀರ್ಪಿನ ವಿರುದ್ಧ ಉತ್ತರ ಪ್ರದೇಶದ ಹಾಜಿ ಮೆಹಬೂಬ್ ಮತ್ತು ಸೈಯದ್ ಅಖ್‌ಲಾಕ್ ಎಂಬವರು ಅರ್ಜಿ ಸ ಲ್ಲಿಸಿದರಾದರೂ 2022 ಸೆ. 9ರಂದು ಅಲಹಾಬಾದ್ ಹೈಕೋರ್ಟು ಆ ಅರ್ಜಿಯನ್ನೇ ತಳ್ಳಿಹಾಕಿತು. ಪ್ರಕರಣದಲ್ಲಿ ನೀವು ಸಂತ್ರಸ್ತರೆಂದು  ಸಾಬೀತಾಗದ ಕಾರಣ ನಿಮಗೆ ಅರ್ಜಿ ಸಲ್ಲಿಸುವ ಅರ್ಹತೆಯಿಲ್ಲ ಎಂದು ಕಾರಣವನ್ನೂ ನೀಡಿತು. ಹಾಗಂತ,

ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಮುಂತಾದವರು ಧ್ವಂಸ ಪ್ರಕರಣದಿಂದ  ದೋಷಮುಕ್ತಗೊಂಡದ್ದು ಇದೇ ಮೊದಲಲ್ಲ. 2003ರಲ್ಲಿ ಸಿಬಿಐ ನ್ಯಾಯಾಲಯವು ಈ ಪ್ರಕರಣದಿಂದ ಅಡ್ವಾಣಿಯನ್ನು ಮುಕ್ತಗೊಳಿಸಿತ್ತು.  ಆದರೆ, ಬಾಬರಿ ಮಸೀದಿ ಧ್ವಂಸಗೊಳ್ಳುವ ವೇಳೆ ಅಡ್ವಾಣಿಯವರ ಸುರಕ್ಷತೆಗಾಗಿ ನಿಯೋಜಿಸಲಾಗಿದ್ದ ಐಪಿಎಸ್ ಅಧಿಕಾರಿ ಅಂಜು ಗುಪ್ತ  ಅವರು ನೀಡಿರುವ ಸಾಕ್ಷ್ಯವನ್ನು ಪರಿಗಣಿಸಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಬೆಂಚ್ ಅಡ್ವಾಣಿ ಮೇಲಿನ ಪ್ರಕರಣವನ್ನು ಮರು  ಊರ್ಜಿತಗೊಳಿಸಿತು. ‘ಅಡ್ವಾಣಿಯವರು ಬಾಬರಿ ಮಸೀದಿ ಇದ್ದ ಸ್ಥಳಕ್ಕೆ ಆಗಮಿಸುವ ಮೊದಲು ಪರಿಸ್ಥಿತಿ ಶಾಂತವಾಗಿತ್ತು’ ಎಂದು  ಅಂಜು ಗುಪ್ತಾ ರಾಯ್‌ಬರೇಲ್ವಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಲ್ಲದೇ, ‘ಅಡ್ವಾಣಿಯವರ ಪ್ರಚೋದಕ ಭಾಷಣವೇ ಮಸೀದಿ  ಧ್ವಂಸಕ್ಕೆ ಕಾರಣವಾಗಿತ್ತು’ ಎಂದೂ ಹೇಳಿಕೆ ನೀಡಿದ್ದರು. ‘ಅವರ ಭಾಷಣ ಪರಿಸ್ಥಿತಿಯನ್ನು ಹದಗೆಡಿಸಿತು, ಮಸೀದಿಯ ಗುಂಬಜ್‌ಗಳು  ಉರುಳಿದಾಗ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ ಪರಸ್ಪರ ಆಲಿಂಗಿಸಿದರು, ಸಿಹಿ ಹಂಚಿದರು, ಮಾತ್ರವಲ್ಲ, ಅಡ್ವಾಣಿ, ಜೋಶಿ  ಮತ್ತು ಎಸ್.ಪಿ. ದೀಕ್ಷಿತ್‌ರನ್ನು ಆಲಿಂಗಿಸಿ ಸಂತೋಷ ವ್ಯಕ್ತಪಡಿಸಿದರು ಹಾಗೂ ಮಸೀದಿ ಧ್ವಂಸದ ಬಳಿಕ ಅವರೆಲ್ಲ ಪರಸ್ಪರ ಅಭಿನಂದನೆ ಸಲ್ಲಿಸಿಕೊಂಡರು..’  ಎಂದವರು 1993ರಲ್ಲಿ ಸಿಬಿಐ ಮುಂದೆ ಸಾಕ್ಷ ನುಡಿದಿದ್ದರು. ಮಸೀದಿಯನ್ನು ಬೀಳಿಸುವಂತೆ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ  ಪ್ರಚೋದಿಸಿದರು ಎಂದು 2010ರಲ್ಲಿ ಸಿಬಿಐ ನ್ಯಾಯಾಲಯಕ್ಕೆ ನೀಡಿದ ಸಾಕ್ಷಿಯಲ್ಲೂ ಅಂಜು ಗುಪ್ತ ಹೇಳಿದ್ದರು. ಸಿಬಿಐ ಪಟ್ಟಿ ಮಾಡಿದ್ದ  ಸಾಕ್ಷಿಗಳ ಪೈಕಿ 9ನೆಯವರಾಗಿದ್ದ ಅಂಜು ಗುಪ್ತ ಅವರ ಸಾಕ್ಷ ಬಹಳ ಪ್ರಾಮುಖ್ಯದ್ದಾಗಿತ್ತು. ಆದರೆ,

ಈ ಸಾಕ್ಷದ ಗಂಭೀರತೆಯನ್ನು ತಣಿಸುವುದಕ್ಕೆ ಏನೆಲ್ಲ ಬೇಕೋ ಅವೆಲ್ಲವನ್ನೂ ಆ ಬಳಿಕ ಸಿಬಿಐ ಶ್ರಮಿಸಿರುವಂತಿದೆ. ಸ್ಥಳೀಯ ಸಾಕ್ಷಿಗಳ  ಪೈಕಿ ಯಾರನ್ನೂ ಅದು ಪರೀಕ್ಷೆಗೆ ಒಳಪಡಿಸಲೇ ಇಲ್ಲ. ಹೀಗೆ ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸೇರಬೇಕು ಎಂಬ ಪ್ರಕರಣ  ಸುಪ್ರೀಮ್ ಕೋರ್ಟು ಮೆಟ್ಟಲೇರಿ 2019 ನವೆಂಬರ್ 9ರಂದು ತೀರ್ಪು ಪ್ರಕಟವಾಗುವಾಗಲೂ ಧ್ವಂಸ ಪ್ರಕರಣ ಇನ್ನೂ ಸಿಬಿಐ ನ್ಯಾಯಾ  ಲಯದಲ್ಲೇ  ಕೊಳೆಯುತ್ತಿತ್ತು. ಕೊನೆಗೂ ಬಾಬರಿ ಮಸೀದಿ ಧ್ವಂಸವನ್ನು ಕ್ರಿಮಿನಲ್ ಕೃತ್ಯ ಮತ್ತು ಅಪರಾಧ ಎಂದು ಹೇಳಿ ಮಂದಿರ  ನಿರ್ಮಾಣಕ್ಕೆ ಸುಪ್ರೀಮ್ ಅನುಮತಿ ನೀಡಿದ ಬಳಿಕ ಸಿಬಿಐ ಚುರುಕಾಯಿತು. 2020 ಸೆ. 30ರಂದು ಅಡ್ವಾಣಿ ಸಹಿತ ಎಲ್ಲರನ್ನೂ  ದೋಷಮುಕ್ತಗೊಳಿಸಿದ ಸಿಬಿಐ ನ್ಯಾಯಾಧೀಶ ಎಸ್.ಕೆ. ಯಾದವ್, ಅಂದೇ ನಿವೃತ್ತರಾದರು. ನಿಜವಾಗಿ, ಅವರು ಒಂದು ವರ್ಷದ  ಮೊದಲೇ ನಿವೃತ್ತರಾಗಬೇಕಿತ್ತು. ಆದರೆ, ಈ ಪ್ರಕರಣಕ್ಕೆಂದೇ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಅಷ್ಟಕ್ಕೂ,

ಅಡ್ವಾಣಿಯವರಿಗೆ ಭಾರತ ರತ್ನ ಸಲ್ಲಬೇಕೋ ಬೇಡವೋ ಎಂಬ ಚರ್ಚೆಯೇ ಅಪ್ರಸ್ತುತ. 1992 ರಿಂದ 2020 ಸೆಪ್ಟೆಂಬರ್ ವರೆಗೆ ದೀರ್ಘ  28 ವರ್ಷಗಳ ಕಾಲ ಗಂಭೀರ ಕ್ರಿಮಿನಲ್ ಆರೋಪವನ್ನು ಹೊತ್ತುಕೊಂಡ ಮತ್ತು 1989ರಲ್ಲಿ ರಥಯಾತ್ರೆ ನಡೆಸಿ ದೇಶದ ನಾಗರಿಕರನ್ನು  ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದಲ್ಲದೇ ರಕ್ತದೋಕುಳಿಗೂ ಕಾರಣವಾದ ವ್ಯಕ್ತಿಯೋರ್ವ ಭಾರತ ರತ್ನಕ್ಕೆ ಅರ್ಹರೇ ಎಂದು  ಚರ್ಚೆಗೊಳಗಾಗುವುದೇ ತಮಾಷೆ. ಅವರನ್ನು ಈಗಲೂ ಭಾರತದ ಗೃಹಸಚಿವರಾಗಿ ಯಾರೂ ನೆನಪಿಸುತ್ತಿಲ್ಲ. ಅಥವಾ ಸಚಿವರಾಗಿ  ಮಹತ್ವದ ಕೊಡುಗೆ ಕೊಟ್ಟವರಾಗಿಯೂ ಸ್ಮರಿಸುತ್ತಿಲ್ಲ. ರಥಯಾತ್ರೆ ಮತ್ತು ಅದಕ್ಕೆ ಸಂಬಂಧಿಸಿದ ನಾಗರಿಕ ಸಂಕಷ್ಟಗಳ ಕಾರಣಕ್ಕಾಗಿಯೇ  ಅವರೀಗಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಭಾರತ ರತ್ನಕ್ಕೆ ಯಾಕೆ ಅನರ್ಹ ಅನ್ನುವುದಕ್ಕೆ ಈ ಗುರುತೇ ಧಾರಾಳ ಸಾಕು.

ಅಡ್ವಾಣಿಯವರು ರಥಯಾತ್ರೆ ನಡೆಸುವ ಮೊದಲು ಬಾಬರೀ ಮಸೀದಿ ವಿವಾದವು ಅಯೋಧ್ಯೆಗೆ ಸೀಮಿತಗೊಂಡಿತ್ತು. ಬಾಬರೀ ಮಸೀದಿ  ಇದ್ದ ಸ್ಥಳ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ನ್ಯಾಯಾಲಯದಲ್ಲಿ ತನ್ನ ಪಾಡಿಗೆ ನಡೆಯುತ್ತಿತ್ತು. ನ್ಯಾಯಾಲಯದ ತೀರ್ಪಿನ ಮೂಲಕ  ಅದು ಇತ್ಯರ್ಥವಾಗುವುದಕ್ಕೂ ಅವಕಾಶವಿತ್ತು. ಒಂದುವೇಳೆ, ಈ ಪ್ರಕರಣವು ದೇಶವ್ಯಾಪಿ ಸಂಚಲನ ಸೃಷ್ಟಿಸಬೇಕಾದಷ್ಟು ಗಂಭೀರವೇ  ಆಗಿರುತ್ತಿದ್ದರೆ, ಸರ್ದಾರ್ ವಲ್ಲಭಬಾಯಿ  ಪಟೇಲ್, ಸಾವರ್ಕರ್ ಮತ್ತು ಆ ಕಾಲದಲ್ಲಿದ್ದ ಬಲಪಂಥೀಯ ನಾಯಕರು 1947 ಆಗಸ್ಟ್ 15ರ  ಬಳಿಕ ಇದನ್ನೇ ಪ್ರಧಾನ ವಿಷಯವಾಗಿ ಎತ್ತಿಕೊಳ್ಳುತ್ತಿದ್ದರು ಮತ್ತು ದೇಶದಾದ್ಯಂತ ಅದಕ್ಕಾಗಿ ಅಭಿಯಾನವನ್ನೇ ನಡೆಸುತ್ತಿದ್ದರು. ಭಾರತ  ಸ್ವತಂತ್ರಗೊಂಡ  ವೇಳೆ ಇಲ್ಲಿನ ಮುಸ್ಲಿಮ್ ನಾಯಕತ್ವ ಅತ್ಯಂತ ದುರ್ಬಲವಾಗಿತ್ತು ಮತ್ತು ಮುಸ್ಲಿಮರ ದೊಡ್ಡದೊಂದು ಗುಂಪು ಪಾಕಿಸ್ತಾನವಾಗಿ ಬದಲಾಗಿತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಈ ವಿವಾದವು ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸದೇ ಇರುವುದಕ್ಕೆ ಮತ್ತು ವಲ್ಲಭಬಾಯಿ   ನೇತೃತ್ವದಲ್ಲಿ ಗಂಭೀರ ಪ್ರಯತ್ನ ನಡೆಯದೇ ಇರುವುದಕ್ಕೆ ಕಾರಣಗಳೇನು? ನಿಜವಾಗಿ,

1989ರ ಅಡ್ವಾಣಿ ರಥಯಾತ್ರೆ ನಿಕಷಕ್ಕೆ ಒಳಗಾಗಬೇಕಾದದ್ದೇ  ಈ ಕಾರಣಕ್ಕಾಗಿ. ಬಾಬರಿ ಮಸೀದಿ ವಿವಾದವನ್ನು ಶಂಕರಾಚಾರ್ಯರ  ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಗಿತ್ತು ಮತ್ತು ವಾಜಪೇಯಿಯವರು ಅದನ್ನು ಒಮ್ಮೆ ಪ್ರಸ್ತಾಪಿಸಿಯೂ ಇದ್ದರು ಎಂಬುದನ್ನು  ಪರಿಗಣಿಸುವಾಗ ಅಡ್ವಾಣಿಯವರ ರಥಯಾತ್ರೆಯ ಮರ್ಮ ಅರ್ಥವಾಗುತ್ತದೆ. “ಆ ಜಾಗವನ್ನು ನಾವು ಹೋರಾಡಿಯೇ ಪಡಕೊಳ್ಳುತ್ತೇವೆ,  ಮಾತುಕತೆಯ ಇತ್ಯರ್ಥ ಬೇಕಾಗಿಲ್ಲ...” ಎಂಬ ರಾಜಕೀಯ ನಿಲುವಿನ ಕಾರಣದಿಂದಾಗಿಯೇ ಈ ಪ್ರಕರಣ ಇಷ್ಟೊಂದು ರಕ್ತಪಾತಕ್ಕೆ ಮತ್ತು  ಧಾರ್ಮಿಕ ವಿಭಜನೆಗೆ ಕಾರಣವಾಯಿತು ಎಂದೇ ಹೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಅಡ್ವಾಣಿಯವರೇ ಹೊರಬೇಕಾಗುತ್ತದೆ.  ಅವರು ನಡೆಸಿದ ರಥಯಾತ್ರೆ ಮತ್ತು ಆ ಬಳಿಕ ಉಂಟಾದ ಕಾನೂನುಬಾಹಿರ ಧ್ವಂಸವು ಈ ದೇಶದ ಆತ್ಮಕ್ಕೆ ಮಾಡಿರುವ ಗಾಯ ಇನ್ನೂ  ವಾಸಿಯಾಗಿಲ್ಲ. ಮಾತ್ರವಲ್ಲ, ಆ ಗಾಯವನ್ನು 3 ದಶಕಗಳ ಬಳಿಕ ಇವತ್ತಿಗೂ ಜೀವಂತ ಇಡಲಾಗಿದೆಯಲ್ಲದೇ, ಕೆದಕಿ ಕೆದಕಿ ಧರ್ಮ  ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಡ್ವಾಣಿ ನೇತೃತ್ವ ನೀಡಿದ ರಾಜಕೀಯ ಪಕ್ಷವು ಇವತ್ತೂ ಅದರ ದುರ್ಲಾಭವನ್ನು ಪಡೆಯುತ್ತಲೂ  ಇದೆ. ಹೀಗಿರುತ್ತಾ, 

ಭಾರತ ರತ್ನ ಅಡ್ವಾಣಿಯವರ ಮುಡಿಗೇರುವುದೆಂದರೆ, ಅದು ದೇಶದ ಪರಂಪರೆಗೆ ಆಗುವ ಅವಮಾನ. ದೇಶದ  ಆತ್ಮಕ್ಕೆ ಚುಚ್ಚಿದ ಮತ್ತು ಶಾಂತಿ-ನೆಮ್ಮದಿಗೆ ಭಂಗ ತಂದ ಆರೋಪವನ್ನು ನಿರಂತರ 28 ವರ್ಷಗಳ ಎದುರಿಸಿದ ವ್ಯಕ್ತಿಯೋರ್ವ ಭಾರತ  ರತ್ನವಾಗಿ ಗೌರವಿಸಲ್ಪಡುವುದು ಆಘಾತಕಾರಿ ಮತ್ತು ಆತಂಕಕಾರಿ.

Saturday, 3 February 2024

ವಾಯಿಲ್ ದಹ್ ದಾಹ್, ಹಕೀಮ್ ಮತ್ತು ಕ್ರೌರ್ಯದ 100 ದಿನಗಳು





ಫೆಲೆಸ್ತೀನ್ ಮೇಲೆ ಇಸ್ರೇಲ್‌ನ ಮುತ್ತಿಗೆ 100 ದಿನಗಳನ್ನೂ ದಾಟಿ ಮುಂದುವರಿದಿದೆ. ಫೆಲೆಸ್ತೀನಿನ 85% ಮಂದಿ ಕೂಡಾ ತಮ್ಮ ಮನೆಮಾರುಗಳನ್ನು ತೊರೆದು ನಿರಾಶ್ರಿತರಾಗಿ ಅಲೆಯುತ್ತಿದ್ದಾರೆ. ಗಾಝಾದ ಬಹುತೇಕ ಎಲ್ಲ ಆಸ್ಪತ್ರೆಗಳೂ ಸ್ಥಗಿತಗೊಂಡಿವೆ. ಶಾಲೆ,  ಕಾಲೇಜುಗಳು ಧರಾಶಾಹಿಯಾಗಿವೆ. ಯಾವ ಕ್ಷಣದಲ್ಲೂ ತಾವು ಹತ್ಯೆಗೀಡಾಗಬಹುದು ಎಂಬ ನಿರೀಕ್ಷೆಯಿಂದಲೇ ಫೆಲೆಸ್ತೀನಿಯರು ದಿನ  ದೂಡುತ್ತಿದ್ದಾರೆ. ರೋಗಿಗಳು, ಗಾಯಾಳುಗಳು, ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ದಾಳಿಯಿಂದ ತೀವ್ರ ಸಂಕಷ್ಟಕ್ಕೆ  ಒಳಗಾಗಿದ್ದಾರೆ. ಜನನಿಬಿಡ ಅಪಾರ್ಟ್ಮೆಂಟ್‌ಗಳ ಮೇಲೆ ಇಸ್ರೇಲ್ ಬಾಂಬ್ ಹಾಕುತ್ತಿರುವುದನ್ನು ನೋಡಿದರೆ, ನರಮೇಧವೇ ಅದರ  ಉದ್ದೇಶ ಅನ್ನುವುದನ್ನು ಸ್ಪಷ್ಟಪಡಿಸುತ್ತಿದೆ. ಹಮಾಸ್‌ನ ನೆಪದಲ್ಲಿ ಇಡೀ ಫೆಲೆಸ್ತೀನನ್ನು ನಿರ್ವೀರ್ಯಗೊಳಿಸುವುದು ಮತ್ತು ಸಂಪೂರ್ಣ  ಪರಾವಲಂಬಿಯಾಗಿಸುವುದು ಅದರ ರಣತಂತ್ರವೆಂಬುದು ದಿನೇದಿನೇ ನಿಚ್ಚಲವಾಗುತ್ತಿದೆ.


ಈಗಾಗಲೇ ಹತ್ಯೆಗೀಡಾದ 23 ಸಾವಿರ ಮಂದಿ ಫೆಲೆಸ್ತೀನಿಯರ ಪೈಕಿ 10 ಸಾವಿರಕ್ಕಿಂತಲೂ ಅಧಿಕ ಮಕ್ಕಳೇ ಇದ್ದಾರೆ. 7  ಸಾವಿರಕ್ಕಿಂತಲೂ ಅಧಿಕ ಮಹಿಳೆಯರಿದ್ದಾರೆ. ಹಮಾಸನ್ನು ನಾಶ ಮಾಡುತ್ತೇವೆ ಎಂದು ಹೊರಟ ಇಸ್ರೇಲ್ ಎಲ್ಲವನ್ನೂ ನಾಶಮಾಡುತ್ತಿದೆ.  ಈ ಕ್ರೌರ್ಯದ ಭೀಕರತೆಯನ್ನು ಪ್ರತಿದಿನ ಅಲ್ ಜಝೀರಾ, ಮಿಡ್ಲ್ ಈಸ್ಟ್ ಐಯಂಥ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು  ಬಿತ್ತರಿಸುತ್ತಲೂ ಇವೆ. ಇಸ್ರೇಲ್‌ನ ಕ್ರೌರ್ಯದ ತೀವ್ರತೆಯನ್ನು ಅಂದಾಜಿಸುವುದಕ್ಕೆ ಗಾಝಾದ 30 ವರ್ಷದ ಹಕೀಮ್ ಮತ್ತು 56  ವರ್ಷದ ವಾಯಿಲ್ ದಹ್ ದಾಹ್ ರ ಅನುಭವಗಳೇ ಧಾರಾಳ ಸಾಕು. ನಿಜವಾಗಿ, ಈ ಹಕೀಮ್- ಗಾಝಾ ಪರಿಸ್ಥಿತಿಯ ಒಂದು ತುದಿಯಾದರೆ ವಾಯಿಲ್ ದಹ್ ದಾಹ್ ರು ಇನ್ನೊಂದು ತುದಿ.


ಗಾಝಾದ ಕೆಲವು ಯುವಕರನ್ನು ಇಸ್ರೇಲ್ ಸೇನೆ ಬಂಧಿಸಿ ಕೊಂಡೊಯ್ಯುತ್ತಿರುವ ವೀಡಿಯೋ ಮತ್ತು ಚಿತ್ರಗಳು ಡಿಸೆಂಬರ್  ಮಧ್ಯಭಾಗದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಯುವಕರ ಮೈಮೇಲೆ ಒಳವಸ್ತ್ರವೊಂದನ್ನು ಬಿಟ್ಟು ಇನ್ನೇನೂ ಇರಲಿಲ್ಲ. ಮಂಡಿಯೂರಿ  ಕುಳಿತಿದ್ದ ಈ ಗುಂಪಿನಲ್ಲಿ ಈ ಹಕೀಮ್ ಕೂಡಾ ಇದ್ದ. ಹಮಾಸ್‌ನ ಭೂಗತ ಸುರಂಗ ಮಾರ್ಗದ ಪತ್ತೆ ಕಾರ್ಯದಲ್ಲಿ ಇಸ್ರೇಲ್  ಯೋಧರು ಈ ಹಕೀಮ್‌ನನ್ನು ಮಾನವ ಬಾಂಬ್ ಆಗಿ ಪರಿವರ್ತಿಸುವ ತಂತ್ರ ಹೆಣೆದರು. ತಾವು ಪತ್ತೆ ಹಚ್ಚಿದ ಗಾಝಾದ  ಸುರಂಗದೊಳಗೆ ಹಮಾಸ್ ಯೋಧರು ಇದ್ದಾರೋ ಇಲ್ಲವೋ ಎಂಬುದಾಗಿ ಈ ಯೋಧರಿಗೆ ಪರೀಕ್ಷಿಸಬೇಕಾಗಿತ್ತು. ಅದಕ್ಕಾಗಿ ಈ  ಹಕೀಮ್‌ನನ್ನು ಬಳಸಿಕೊಳ್ಳಲು ಅವರು ನಿರ್ಧರಿಸಿದರು. ಈತನ ದೇಹಕ್ಕೆ ಬಾಂಬ್ ಬೆಲ್ಟನ್ನು ಕಟ್ಟಲಾಯಿತಲ್ಲದೇ, ತಲೆಗೊಂದು  ಕ್ಯಾಮರಾವನ್ನೂ ಅಳವಡಿಸಲಾಯಿತು. ಬಳಿಕ ಸುರಂಗದೊಳಗೆ ಕಳುಹಿಸಿಕೊಡಲಾಯಿತು. ಸುರಂಗದೊಳಗಿನ ಪ್ರತಿಯೊಂದೂ ಆ  ಕ್ಯಾಮರಾದ ಮೂಲಕ ಹೊರಗಿರುವ ಯೋಧರಿಗೆ ಸ್ಪಷ್ಟವಾಗಿ ಕಾಣಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದುವೇಳೆ,


ಸುರಂಗದೊಳಗೆ ಹಮಾಸ್ ಯೋಧರು ಅಡಗಿದ್ದರೆ ತಕ್ಷಣ ಈತನ ದೇಹಕ್ಕೆ ಕಟ್ಟಲಾಗಿದ್ದ ಬಾಂಬನ್ನು ಉಡಾಯಿಸುವುದು ಯೋಧರ  ತಂತ್ರವಾಗಿತ್ತು. ಹಕೀಮ್‌ಗೂ ಅದು ಗೊತ್ತಿತ್ತು. ನಿನ್ನನ್ನು ದೇವನಲ್ಲಿಗೆ ಕಳುಹಿಸುತ್ತಿದ್ದೇವೆ ಎಂದೇ ಆತನನ್ನು ಕಳುಹಿಸುವ ಮೊದಲು  ಯೋಧರು ತಿಳಿಸಿದ್ದರು. ಆದರೆ, ಸುರಂಗದೊಳಗೆ ಹಮಾಸ್ ಯೋಧರು ಪತ್ತೆಯಾಗದ ಕಾರಣ ಆತ ಜೀವಸಮೇತ ಹೊರಬಂದ  ಮತ್ತು ಆತನನ್ನು ಯೋಧರು ಬಿಡುಗಡೆಗೊಳಿಸಿದರು. ಈ ಇಡೀ ಘಟನೆಯನ್ನು ಈ ಹಕೀಮ್ ಆ ಬಳಿಕ ಮಾಧ್ಯಮಗಳ ಜೊತೆ  ಹಂಚಿಕೊಂಡ. ಈತನೊಬ್ಬನೇ ಅಲ್ಲ, 15 ವರ್ಷದ ಬಾಲಕನೂ ಸೇರಿದಂತೆ ಹಲವು ಮಂದಿ ಇಂಥ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದೂ  ವರದಿ ಇದೆ ಮತ್ತು ಅದರಲ್ಲಿ ಸ್ಫೋಟಕ್ಕೆ ಒಳಗಾದವರು ಎಷ್ಟು ಮಂದಿ ಅನ್ನುವುದು ಸ್ಪಷ್ಟವಾಗಿಲ್ಲ. ಹಾಗೆಯೇ,


ವಾಯಿಲ್ ದಹ್ ದಾಹ್ ರದ್ದು ಇನ್ನೊಂದು ತುದಿ. ಅಲ್ ಜಝೀರಾ ಚಾನೆಲ್‌ನ ಪತ್ರಕರ್ತ ಮತ್ತು ಫೆಲೆಸ್ತೀನ್ ಚೀಫ್ ಬ್ಯೂರೋ ಕೂಡ  ಆಗಿರುವ ಇವರು ಈ ವೃತ್ತಿಗಾಗಿ ತೆತ್ತಿರುವ ಬೆಲೆ ಅಪಾರವಾದದ್ದು. ಗಾಝಾದಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಇಸ್ರೇಲ್ ಬಾಂಬ್  ಹಾಕಿ ಸಾಯಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗಾಗಲೇ ೧೦೦ರಷ್ಟು ಪತ್ರಕರ್ತರನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿದೆ.  ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಲ್ಲಿ ಇಸ್ರೇಲ್ ಈ ಕಾರಣಕ್ಕಾಗಿಯೇ ವಿಚಾರಣೆಗೂ ಒಳಗಾಗಿದೆ. ಈ ವಾಯಿಲ್  ದಹ್ ದಾಹ್ ರು ಕಳೆದ ಅಕ್ಟೋಬರ್‌ನಲ್ಲಿ ಅಲ್ ಜಝೀರಾ ಚಾನೆಲ್‌ಗಾಗಿ ಲೈವ್ ವರದಿ ನೀಡುತ್ತಿದ್ದಾಗಲೇ ಅವರ ಪತ್ನಿ, 15 ವರ್ಷದ  ಮಗಳು, 7 ವರ್ಷದ ಮಗ ಮತ್ತು ಮೊಮ್ಮಗಳನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿತ್ತು. ಅಲ್ ಜಝೀರಾ ಫೋಟೋಗ್ರಾಫರ್ ಆಗಿದ್ದ  27 ವರ್ಷದ ಇವರ ಮಗ ಹಂಝ ಮತ್ತು ಮಗಳು ಬದುಕುಳಿದಿದ್ದರು. ಕಳೆದ ಜನವರಿ 7ರಂದು ಈ ಮಗನನ್ನೂ ಇಸ್ರೇಲ್ ಬಾಂಬ್  ಹಾಕಿ ಸಾಯಿಸಿದೆ. ಹೀಗೆ ಈ ದಹ್ ದಾಹ್ ತನ್ನ ಇಡೀ ಕುಟುಂಬವನ್ನೇ ಕಳಕೊಂಡು ಗಾಝಾದಲ್ಲಿ ಒಣ ಮರದಂತೆ ಅನಾಥವಾಗಿ  ನಿಂತಿದ್ದಾರೆ. ನಿಜವಾಗಿ,

ಗಾಝಾದಲ್ಲಿ ತಾನು ನಡೆಸುತ್ತಿರುವ ನರಮೇಧವನ್ನು ಇಸ್ರೇಲ್ ಬಚ್ಚಿಡಲು ಪ್ರಯತ್ನಿಸುತ್ತಿದೆ. ಗಾಝಾ ಪ್ರವೇಶಕ್ಕೆ ಅಂತಾರಾಷ್ಟ್ರೀಯ  ಮಾಧ್ಯಮ ಸಂಸ್ಥೆಗಳಿಗೆ ಇಸ್ರೇಲ್ ಅನುಮತಿಯನ್ನೂ ನೀಡುತ್ತಿಲ್ಲ. ಆದ್ದರಿಂದ, ಫೆಲೆಸ್ತೀನ್ ಕುರಿತು ಅಲ್ಲಿನ ನಾಗರಿಕರೇ ಸೆರೆ ಹಿಡಿದಿರುವ  ಸಣ್ಣ ಪುಟ್ಟ ವೀಡಿಯೋಗಳು, ಚಿತ್ರಗಳು ಮತ್ತು ವರದಿಗಳನ್ನೇ ಜಾಗತಿಕ ಮಾಧ್ಯಮಗಳು ಇವತ್ತು ಆಶ್ರಯಿಸುವಂತಾಗಿದೆ. ಫೆಲೆಸ್ತೀನಿ  ಪತ್ರಕರ್ತರು ಜೀವ ಕೈಯಲ್ಲಿ ಹಿಡಿದು ವೃತ್ತಿನಿರತರಾಗಬೇಕಾದ ಭಯಾನಕ ಸ್ಥಿತಿಯಿದೆ. ಅಂದಹಾಗೆ, ಯಾವುದೇ ವೃತ್ತಿನಿರತ  ಪತ್ರಕರ್ತರಿಗೂ ನಾಗರಿಕ ಪತ್ರಕರ್ತರಿಗೂ ಸಾಕಷ್ಟು ವ್ಯತ್ಯಾಸ ಇದೆ. ವೃತ್ತಿನಿರತ ಪತ್ರಕರ್ತರಲ್ಲಿ ಕೌಶಲ್ಯ ಇರುತ್ತದೆ. ಯಾವುದನ್ನು ಹೇಗೆ,  ಯಾವ ಕೋನದಲ್ಲಿ ಚಿತ್ರಿಸಬೇಕು ಮತ್ತು ಹೇಗೆ ವರದಿ ಮಾಡಬೇಕು ಎಂಬ ತಿಳುವಳಿಕೆ ಇರುತ್ತದೆ. ಆದರೆ ಕಂಡದ್ದನ್ನು ಮೊಬೈಲ್‌ನಲ್ಲಿ  ಸೆರೆ ಹಿಡಿಯುವ ಸಾಮಾನ್ಯ ನಾಗರಿಕರಿಗೆ ಈ ತಿಳುವಳಿಕೆ ಮತ್ತು ಕೌಶಲ್ಯ ಇರುವುದಿಲ್ಲ. ಇವತ್ತು ಜಗತ್ತಿಗೆ ಲಭ್ಯವಾಗುತ್ತಿರುವುದು ಈ  ಬಡಪಾಯಿ ನಾಗರಿಕರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳು ಹಾಗೂ ಅವರು ತಮಗೆ ತಿಳಿದಷ್ಟು ಬರೆದಿರುವ ವರ ದಿಗಳು. ಹಾಗಂತ, ಪತ್ರಕರ್ತರೇ ಅಲ್ಲದ ಇವರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳೇ ಇಷ್ಟು ಭಯಾನಕವಾಗಿದೆ ಮತ್ತು  ಜಗತ್ತಿನ ಎದೆಗೂಡನ್ನು ನಡುಗಿಸುವಂತಾಗಿದೆ ಎಂದಮೇಲೆ, ವೃತ್ತಿನಿರತ ಪತ್ರಕರ್ತರು ಮುಕ್ತವಾಗಿ ತಿರುಗಿ ವರದಿ ಮಾಡುವಂತಿದ್ದರೆ ಆ  ವರದಿ, ವೀಡಿಯೋ ಮತ್ತು ಚಿತ್ರಗಳು ಇನ್ನೆಷ್ಟು ಭಯಾನಕವಿದ್ದೀತು? ಬಹುಶಃ, ಈ ವಾಸ್ತವವನ್ನು ಇತರೆಲ್ಲರಿಗಿಂತ ಹೆಚ್ಚಾಗಿ ಇಸ್ರೇಲ್  ಅರಿತುಕೊಂಡಿದೆ. ಒಂದುವೇಳೆ,


ಸ್ವತಂತ್ರ  ಪತ್ರಕರ್ತರು ಗಾಝಾ ಪ್ರವೇಶಿಸಿದರೆ, ಅವರ ವರದಿಗಾರಿಕೆಯಿಂದಾಗಿ ಈಗ ತನ್ನ ಪರ ಇರುವವರಲ್ಲಿ ಹೆಚ್ಚಿನ ಮಂದಿಯನ್ನೂ  ತಾನು ಕಳಕೊಳ್ಳಬೇಕಾದೀತು ಎಂಬ ಭಯ ಅದಕ್ಕಿದೆ. ತನ್ನನ್ನು ಬೆಂಬಲಿಸುವ ರಾಷ್ಟ್ರಗಳಲ್ಲೇ  ತನ್ನ ವಿರುದ್ಧ ಪ್ರತಿಭಟನೆಗಳು  ಕಾಣಿಸಿಕೊಂಡೀತು ಮತ್ತು ಆಯಾ ರಾಷ್ಟ್ರಗಳು ತನ್ನನ್ನು ಕೈಬಿಟ್ಟೀತು ಎಂಬ ಆತಂಕ ಅದನ್ನು ಕಾಡುತ್ತಿದೆ. ಆ ಕಾರಣದಿಂದಲೇ ಫೆಲೆಸ್ತೀನ್‌ನಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಅದು ಹುಡುಕಿ ಹುಡುಕಿ ಸಾಯಿಸುತ್ತಿದೆ ಮತ್ತು ವಿದೇಶಿ ಪತ್ರಕರ್ತರನ್ನು ಗಾಝಾ  ಪ್ರವೇಶಿಸದಂತೆ ತಡೆಯುತ್ತಿದೆ. ಅಷ್ಟಕ್ಕೂ,


ಅಣುಬಾಂಬೂ ಸೇರಿದಂತೆ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಹೊಂದಿರುವ ದೇಶವೊಂದು ಅತ್ತ ದೇಶವೇ ಅಲ್ಲದ ಮತ್ತು ತನ್ನದೇ ಮಿಲಿಟರಿ  ವ್ಯವಸ್ಥೆಯನ್ನೂ ಹೊಂದಿಲ್ಲದ ಭೂಪ್ರದೇಶದ ಮೇಲೆ 100 ದಿನಗಳಿಗಿಂತಲೂ ಅಧಿಕ ಸಮಯದಿಂದ ಸತತ ಬಾಂಬ್ ದಾಳಿ ನಡೆಸುತ್ತಿದೆ  ಎಂಬುದು ಮಾನವ ಇತಿಹಾಸದಲ್ಲೇ  ಮೊಟ್ಟಮೊದಲನೆಯದಾದ ಮತ್ತು ಅತ್ಯಂತ ಭೀಭತ್ಸಕರವಾದ ಕ್ರೌರ್ಯವಾಗಿದೆ. ಆಯುಧ  ಬಲವಿಲ್ಲದ ಜನತೆಯೊಂದರ ಮೇಲೆ ಬಲಶಾಲಿ ರಾಷ್ಟ್ರವೊಂದು ನಡೆಸುತ್ತಿರುವ ಈ ಏಕಮುಖ ದಾಳಿಯನ್ನು ‘ಆತ್ಮರಕ್ಷಣೆ’ ಎಂಬ ಹೆಸರಲ್ಲಿ  ಜಗತ್ತಿನ ಬಲಾಢ್ಯ ಶಕ್ತಿಗಳು ಸಮರ್ಥಿಸಿಕೊಳ್ಳುತ್ತಿರುವುದು ಮನುಷ್ಯತ್ವದ ಅಣಕವಾಗಿದೆ. ನಿಜವಾಗಿ, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕ್ರಿಮಿನಲ್  ನ್ಯಾಯಾಲಯ ಇತ್ಯಾದಿಗಳು ಬಡರಾಷ್ಟ್ರಗಳ ಮೇಲೆ ಸವಾರಿ ಮಾಡಲು ಬಲಾಢ್ಯರು ರೂಪಿಸಿಕೊಂಡಿರುವ ಆಯುಧಗಳೇ ಹೊರತು ಇ ನ್ನೇನಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.