Monday, 27 August 2012

ಅಮೇರಿಕ ಅಂದರೆ ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ..

ನೀಲ್ ಆರ್ಮ್ ಸ್ಟ್ರಾಂಗ್
ಲ್ಯಾನ್ಸ್ ಆರ್ಮ್ ಸ್ಟ್ರಾಂಗ್
ಅಮೇರಿಕದ ಎರಡು ಮುಖಗಳಿಗೆ ಅತ್ಯಂತ ಪರಿಣಾಮಕಾರಿ ಉದಾಹರಣೆಗಳಾಗಬಹುದಾದ ಇಬ್ಬರು ವ್ಯಕ್ತಿಗಳು ಕಳೆದ ವಾರ ಜಾಗತಿಕವಾಗಿಯೇ ಸುದ್ದಿಗೊಳಗಾದರು. ಅವರೆಷ್ಟು ಪ್ರಭಾವಿಗಳೆಂದರೆ, ಜಗತ್ತಿನ ಮುಖ್ಯವಾಹಿನಿಯ ಪತ್ರಿಕೆಗಳು ಬಿಡಿ, ತೀರಾ ಭಾಷಾ ಪತ್ರಿಕೆಗಳು ಕೂಡಾ ಅವರಿಬ್ಬರಿಗೂ ಬಹುತೇಕ ಮುಖ ಪುಟಗಳಲ್ಲೇ ಜಾಗ ಕೊಟ್ಟು ಸುದ್ದಿ ಬರೆದುವು. ಅವರಿಬ್ಬರೂ ಅಮೇರಿಕದವರು. ಇಬ್ಬರ ಹೆಸರೂ ಆರ್ಮ್ ಸ್ಟ್ರಾಂಗ್ ಎಂದೇ. ಓರ್ವರು ಚಂದ್ರನ ಮೇಲೆ ಪ್ರಥಮವಾಗಿ ಹೆಜ್ಜೆ ಊರಿದ ನೀಲ್ ಆರ್ಮ್ ಸ್ಟ್ರಾಂಗ್ ಆದರೆ, ಇನ್ನೋರ್ವರು, ಸತತ ಏಳು ಬಾರಿ ವಿಶ್ವದ ಅತಿ ದೊಡ್ಡ ಟೂರ್ ಡಿ ಫ್ರಾನ್ಸ್ ಪ್ರಶಸ್ತಿಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸೈಕ್ಲಿಂಗ್ ಪಟು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್. ದುರಂತ ಏನೆಂದರೆ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್‍ಗೆ ಆಗಸ್ಟ್ 24ರಂದು ಆಜೀವ ನಿಷೇಧ ಹೇರಲಾಯಿತು. ಸೈಕ್ಲಿಂಗ್ ರೇಸ್‍ನ ದಂತಕತೆ ಎನಿಸಿಕೊಂಡಿದ್ದ ಇವರು, ಉದ್ದೀಪನಾ ಮದ್ದು ಸೇವಿಸಿರುವುದೇ ಇದಕ್ಕೆ ಕಾರಣ. ಅವರ ಪ್ರಶಸ್ತಿಗಳನ್ನೆಲ್ಲಾ ಹಿಂತೆಗೆಯಲು ಕ್ರಮ ಕೈಗೊಳ್ಳುವುದಾಗಿ ತಪಾಸಣಾ ಸಂಸ್ಥೆ (USADA) ಘೋಷಿಸಿತು. ಇದರ ಮರುದಿನವೇ, ಮೊತ್ತಮೊದಲ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್  ಸಾವಿಗೀಡಾದರು.
            ನಿಜವಾಗಿ, ಇವರಿಬ್ಬರ ಬಗ್ಗೆ ಬರೆಯುವುದೆಂದರೆ ಅಮೇರಿಕದ ಬಗ್ಗೆ ಬರೆದಂತೆ. ಅಮೇರಿಕ ಈ ಜಗತ್ತಿನಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳಬಹುದಾದ ಅನೇಕಾರು ಸಾಧನೆಗಳನ್ನು ಖಂಡಿತ ಮಾಡಿದೆ. ಒಲಿಂಪಿಕ್ಸ್ ನಲ್ಲಿ ಈ ಬಾರಿಯೂ ಅಮೇರಿಕವೇ ಮೊದಲು. ಆಧುನಿಕ ಸಂಶೋಧನಾ ಕ್ಷೇತ್ರದಲ್ಲಿ ಅಮೇರಿಕಕ್ಕೆ ಬಹಳ ದೊಡ್ಡ ಹೆಸರಿದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ನೀಡಲಾಗುವ ನೋಬೆಲ್ ಪ್ರಶಸ್ತಿಯ ಪಟ್ಟಿಯಲ್ಲಿ ಪ್ರತಿವರ್ಷ ಒಬ್ಬರಾದರೂ ಅಮೇರಿಕನ್ ವಿಜ್ಞಾನಿ ಇದ್ದೇ ಇರುತ್ತಾರೆ. ಕೈಗಾರಿಕಾ ಕ್ಷೇತ್ರದಲ್ಲೂ ಅಮೇರಿಕ ಬಹಳ ಮುಂದು.. ಈ ಪಟ್ಟಿ ತುಂಬಾ ಉದ್ದವಿದೆ. ಆದರೆ, ಅಮೇರಿಕಕ್ಕೆ ಇನ್ನೊಂದು ಮುಖವೂ ಇದೆ. ಅದು ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್‍ನಂಥ ಮುಖ. ಅಮೇರಿಕದ ಯಶೋ ಗಾಥೆಯ ಬಗ್ಗೆ ಬರೆಯುತ್ತಾ ಹೋದಂತೆಲ್ಲಾ, ಮನುಷ್ಯ ರಕ್ತದ, ಕಪಟತನದ, ದೌರ್ಜನ್ಯದ ಇತಿಹಾಸವೂ ಬಿಚ್ಚುತ್ತಲೇ ಹೋಗುತ್ತದೆ. ಇವತ್ತು ಕೆ.ಜಿ. ಕ್ಲಾಸಿನ ಮಕ್ಕಳಿಂದ ಹಿಡಿದು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವರೆಗೆ ಎಲ್ಲರಿಗೂ ಅಮೇರಿಕವೇ ಕನಸಿನ ದೇಶ. ಅಮೇರಿಕದಲ್ಲೊಂದು ಉದ್ಯೋಗ ಗಿಟ್ಟಿಸಲು, ಅಲ್ಲೊಂದು ಮನೆ ಮಾಡಲು, ಅಲ್ಲಿನ ಪ್ರಜೆಯಾಗಿ ಗುರುತಿಸಿಕೊಳ್ಳಲು ಆಸೆ ಪಡುವ ಕೋಟ್ಯಂತರ ಮಂದಿ ಈ ಜಗತ್ತಿನಲ್ಲಿದ್ದಾರೆ. ಅಮೇರಿಕವು ತನ್ನ ಸಾಧನೆ, ಅಭಿವೃದ್ಧಿಗಳ ಮುಖಾಂತರ ಈ ಜಗತ್ತಿನ ಮಂದಿಗೆ ನೀಲ್ ಆರ್ಮ್ ಸ್ಟ್ರಾಂಗ್ ಗ್‍ನಂತೆ ಕಾಣಿಸುತ್ತಿದೆ. ಆದರೆ ಆ ಸಾಧನೆಗಳ ಹಿಂದೆ ಅಫಘನ್ನಿಗಳ, ಇರಾಕಿಗಳ, ಕ್ಯೂಬನ್ನರ ರಕ್ತ ಇರುವುದು ಕಾಣಿಸುತ್ತಲೇ ಇಲ್ಲ. ಆರ್ಥಿಕ ಕ್ಷೇತ್ರದಲ್ಲಿ ಅಮೇರಿಕ ಇವತ್ತು ಬಲಾಢ್ಯ ಆಗಿದ್ದರೆ ಅಥವಾ ಜಗತ್ತಿನ ಅರ್ಥ ಕ್ಷೇತ್ರವನ್ನು ಪಲ್ಲಟಗೊಳಿಸುವ ಸಾಮರ್ಥ್ಯ  ಅಮೇರಿಕಕ್ಕಿದ್ದರೆ ಅದರ ಹಿಂದೆ ಕೊಲ್ಲಿ ರಾಷ್ಟ್ರಗಳಿಂದ ದರೋಡೆಗೈದ ತೈಲದ ಪಾತ್ರ ಇದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಅರಬ್ ರಾಷ್ಟ್ರಗಳ ಬಗ್ಗೆ, ಅಲ್ಲಿರುವ ಮನುಷ್ಯರ ಬಗ್ಗೆ ಅಮೇರಿಕ ಇವತ್ತು ಅಪಾರ ಆಸಕ್ತಿ ತೋರಿಸುತ್ತಿರುವುದು, ಮಾನವ ಹಕ್ಕಿನ ಮೇಲಿನ ಕಾಳಜಿಯಿಂದ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ತನ್ನ ಹಿತವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅದು ಏನು ಮಾಡುವುದಕ್ಕೂ ಹೇಸುವುದಿಲ್ಲ. ಒಂದು ರೀತಿಯಲ್ಲಿ ಅದರ ಸಾಧನೆಯ ಹಿಂದೆ ಗೋಲದ ಬಡ ರಾಷ್ಟ್ರಗಳಿಂದ ಹಿಂಡಿ ತೆಗೆದ ಉದ್ದೀಪನ ಮದ್ದು ಇದೆ. ಒಂದು ವೇಳೆ ಅತ್ಲೀಟ್‍ಗಳಂತೆ, ಅಮೇರಿಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳನ್ನು ಒಂದೊಂದಾಗಿ ಪರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿದ್ದರೆ, `ಬುಶ್‍ಗಳು’ ಇವತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನಂತೆ ತಲೆ ತಗ್ಗಿಸಿ ಬದುಕಬೇಕಾಗಿತ್ತು. ಅಫಘಾನ್-ಇರಾಕ್‍ಗಳ ಸಾವಿರಾರು ಮಂದಿಯ ರಕ್ತವೆಂಬ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಖಳರಾಗಿ ಅವರು ಗುರುತಿಸಿಕೊಳ್ಳಬೇಕಾಗಿತ್ತು. ವಿಷಾದ ಏನೆಂದರೆ, ಅತ್ಲೀಟ್‍ಗಳನ್ನು ಪರೀಕ್ಷಿಸುವುದಕ್ಕೆ ಉಪಕರಣಗಳಿರುವಂತೆ ಮನುಷ್ಯ ವಿರೋಧಿಗಳನ್ನು ಪರೀಕ್ಷಿಸುವುದಕ್ಕೆ ಈ ಜಗತ್ತಿನಲ್ಲಿ ಪರಿಣಾಮಕಾರಿ ಉಪಕರಣಗಳು ಇಲ್ಲ ಅನ್ನುವುದು. ನಿಜವಾಗಿ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್  ಉದ್ದೀಪನ ಮದ್ದು ಸೇವಿಸಿದುದರಿಂದ ಈ ಜಗತ್ತಿಗೆ ಯಾವ ಅನ್ಯಾಯವೂ ಆಗಿಲ್ಲ. ಹಾಗೇನೂ ಆಗಿದ್ದರೆ, ಅದು ಆತನ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕೆಲವಾರು ಸ್ಪರ್ಧಿಗಳಿಗೆ ಮಾತ್ರ. ಆದರೆ ಅಷ್ಟು ಸಣ್ಣ ಅನ್ಯಾಯಕ್ಕಾಗಿ ಓರ್ವ ವ್ಯಕ್ತಿಯ ಪ್ರಶಸ್ತಿಗಳನ್ನು ಹಿಂಪಡೆಯುವುದು, ಸಾಧಕರ ಪಟ್ಟಿಯಿಂದ ಆತನ ಹೆಸರನ್ನು ಅಳಿಸುವುದು ಮಾಡುತ್ತೇವೆಂದಾದರೆ, ಸಾವಿರಾರು ಮಂದಿಗೆ ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ನಾವು ಕೊಡಬಹುದಾದ ಶಿಕ್ಷೆಯಾದರೂ ಯಾವುದಿದ್ದೀತು? ಆರ್ಮ್ ಸ್ಟ್ರಾಂಗ್ ನಿಂದ ಪದಕಗಳನ್ನು ಹಿಂಪಡೆದಂತೆ ಅನ್ಯಾಯಕ್ಕೊಳಗಾದ ರಾಷ್ಟ್ರಗಳಿಗೆ ಅಮೇರಿಕದಿಂದ ಪರಿಹಾರ ಕೊಡಿಸುವುದಾದರೆ ಅದರ ಖಜಾನೆಯ ಸ್ಥಿತಿ ಏನಾದೀತು? ಜಿಡಿಪಿ ಎಲ್ಲಿಗೆ ಮುಟ್ಟೀತು?
        ಅಂದಹಾಗೆ, ನೀಲ್ ಆರ್ಮ್ ಸ್ಟ್ರಾಂಗ್  ಮತ್ತು ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಎಂಬುದು ಅಮೇರಿಕದ ಎರಡು ವ್ಯಕ್ತಿತ್ವಗಳಷ್ಟೇ ಅಲ್ಲ, ಅದರ ಎರಡು ಮುಖಗಳು ಕೂಡ. ಇವತ್ತು ಯಾರೆಲ್ಲ ನೀಲ್ ಆರ್ಮ್ ಸ್ಟ್ರಾಂಗ್‍ನ ಬಗ್ಗೆ, ಆತನ ಸಾಧನೆಯ ಬಗ್ಗೆ ಹೊಗಳಿಕೆಯ ಮಾತಾಡುತ್ತಾರೋ ಅವರೆಲ್ಲ ಲ್ಯಾನ್ಸ್ ಆರ್ಮ್ ಸ್ಟ್ರಾಂಗ ನ್ನೂ  ನೆನಪಿಸಿಕೊಳ್ಳಬೇಕು. ಯಾಕೆಂದರೆ, ಅಮೇರಿಕ ಎಂಬುದು ನೀಲ್ ಆರ್ಮ್ ಸ್ಟ್ರಾಂಗ್ ಅಷ್ಟೇ ಅಲ್ಲ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ಕೂಡ. ನಿಜವಾಗಿ ಜಗತ್ತಿನ ಬಡ ರಾಷ್ಟ್ರಗಳೆಲ್ಲ ಅಮೇರಿಕವನ್ನು ಇವತ್ತು ನೋಡುತ್ತಿರುವುದೇ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ಪ್ರತಿರೂಪದಂತೆ. ಯಾಕೆಂದರೆ, ಒಬಾಮ ಆಗಲಿ, ಕ್ಲಿಂಟನ್, ಬುಶ್‍ಗಳೇ ಆಗಲಿ.. ಎಲ್ಲರೂ ಉದ್ದೀಪನ ಮದ್ದು (ಮನುಷ್ಯ ರಕ್ತ) ಸೇವಿಸಿದವರೇ. ಜಗತ್ತಿಗೆ ಇವರು ಪಾಠ ಮಾಡುವಾಗಲೆಲ್ಲ, ಅದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ನ ಪ್ರಾಮಾಣಿಕತೆಗಿಂತ ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ನ ವಂಚನೆಯನ್ನೇ ಜಗತ್ತು ಗುರುತಿಸುತ್ತಾ ಇದೆ. ಏನೇ ಆಗಲಿ, ಅಮೇರಿಕ ಅವಲೋಕನಕ್ಕೆ ಸಿದ್ಧವಾಗುವುದಾದರೆ ಈ ಇಬ್ಬರು ಆರ್ಮ್ ಸ್ಟ್ರಾಂಗ್ ಗಳಲ್ಲಿ ಅದಕ್ಕೆ ಖಂಡಿತ ಧಾರಾಳ ಪಾಠಗಳಿವೆ.

Saturday, 18 August 2012

ಅವರೆಲ್ಲಾ ಮನುಷ್ಯರು,ಗುರುತು ಏನೇ ಆಗಿದ್ದರೂ..

ಈಶಾನ್ಯ ಭಾರತದ ಮಂದಿ ಈ ರಾಜ್ಯದಿಂದ ಸಾಮೂಹಿಕವಾಗಿ ವಲಸೆ ಹೋಗುವಾಗ ಕೆಲವು ಪ್ರಶ್ನೆಗಳನ್ನೂ ಬಿಟ್ಟು ಹೋಗಿದ್ದಾರೆ. ಅವರಾರೂ ಈ ರಾಜ್ಯದ ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪಾಗಿ ವಾಸಿಸುತ್ತಿರಲಿಲ್ಲ. ಎಲ್ಲೆಂದರಲ್ಲಿ ಚದುರಿ ಹೋಗಿದ್ದ ಇವರೆಲ್ಲಾ ಬೆಂಗಳೂರಿನಲ್ಲಿ ಒಮ್ಮೆಲೇ ಒಟ್ಟುಗೂಡಿದ್ದು ಹೇಗೆ? ರಾಜ್ಯದಲ್ಲಿ ಅವರದ್ದೇ ಆದ ಒಂದು ಸಂಘಟನೆಯೂ ಇಲ್ಲ. ಹೀಗಿರುವಾಗ ಅವರನ್ನು ಸಂಪರ್ಕಿಸುವ ಮತ್ತು ಸಂಘಟಿತಗೊಳಿಸುವ ಕೆಲಸವನ್ನು ಮಾಡಿದ್ದು ಯಾರು? ಅಷ್ಟಕ್ಕೂ ಅವರ ಮೇಲೆ ಅಧಿಕೃತವಾಗಿ ಒಂದೇ ಒಂದು ದಾಳಿ ಆಗುವುದಕ್ಕಿಂತ ಮೊದಲೇ ಅವರೆಲ್ಲಾ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಟ್ಟುಗೂಡಿದ್ದಾರೆ. ಹತ್ತಾರು ವರ್ಷಗಳಿಂದ ಈ ರಾಜ್ಯದಲ್ಲಿರುವ ಇವರನ್ನು ಒಂದು ಎಸ್ಸೆಮ್ಮೆಸ್ಸು, ಇಮೇಲು, ಅಥವಾ ಫೇಸ್‍ಬುಕ್‍ನ ಬರಹವು ಅಷ್ಟೊಂದು ಪ್ರಮಾಣದಲ್ಲಿ ಬೆದರಿಸಲು ಸಾಧ್ಯವೇ?
    ನಿಜವಾಗಿ, ಈ ದಿಢೀರ್ ಬೆಳವಣಿಗೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. 80ರ ದಶಕದಲ್ಲಿ ವಿ.ಪಿ. ಸಿಂಗ್‍ರು ಮಂಡಲ್ ವರದಿಯ ಜಾರಿಗೆ ಮುಂದಾದಾಗ, ಇಂಥದ್ದೇ ಸಮೂಹ ಸನ್ನಿ ನಿರ್ಮಾಣವಾಗಿತ್ತು. ದಲಿತರ ವಿರುದ್ಧ ಸಂಘಪರಿವಾರ ಮೇಲ್ವರ್ಗವನ್ನು ಎತ್ತಿ ಕಟ್ಟಿತ್ತು. ಆತ್ಮಾಹುತಿ ಪ್ರಕರಣಗಳೂ ನಡೆದಿದ್ದುವು. ಮಂಡಲ್ ವರದಿ ಜಾರಿಯಾದರೆ ಮೇಲ್ವರ್ಗದ ಮಂದಿ ದಲಿತರ ಗುಲಾಮರಂತೆ ಬದುಕಬೇಕಾದೀತು ಅನ್ನುವ ಸುಳ್ಳು ಭ್ರಮೆಯನ್ನು ಎಲ್ಲೆಡೆ ಹರಡಲಾಗಿತ್ತು. ಅದೊಂದೇ ಅಲ್ಲ, ಬಾಬರೀ ಮಸೀದಿಯನ್ನು ಉರುಳಿಸುವುದಕ್ಕೂ ಸಂಘಪರಿವಾರ ಆಯ್ಕೆ ಮಾಡಿಕೊಂಡಿದ್ದು ಇಂಥದ್ದೇ ತಂತ್ರವನ್ನು. ಬಿಜೆಪಿ ನೇತೃತ್ವದಲ್ಲಿ ಒಂದು ವರ್ಷಕ್ಕಿಂತ ಮೊದಲೇ ಅದು ಜನರಲ್ಲಿ ಒಂದು ಬಗೆಯ ಪ್ರಚೋದಕ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸಿತ್ತು. ಆ ಕುರಿತಂತೆ ದೇಶದೆಲ್ಲೆಡೆ ಸಭೆ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸಿತ್ತು. ಹಿಂದೂ ಧರ್ಮ, ಅದರ ಆರಾಧನಾಲಯಗಳು, ಸಂಸ್ಕøತಿ.. ಎಲ್ಲವೂ ಮುಸ್ಲಿಮರಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿವೆ ಅನ್ನುವ ಪ್ರಚಾರದೊಂದಿಗೆ ಇಟ್ಟಿಗೆ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಂದಹಾಗೆ, ಭಯದ ಸನ್ನಿವೇಶವನ್ನು ನಿರ್ಮಾಣ ಮಾಡಿ, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಲೆ ಸಂಘಪರಿವಾರಕ್ಕೆ ಚೆನ್ನಾಗಿಯೇ ಸಿದ್ದಿಸಿದೆ. ಹೀಗಿರುತ್ತಾ, ಈಶಾನ್ಯ ರಾಜ್ಯಗಳ ಮಂದಿಯ ವಲಸೆಯನ್ನು ನಾವು ಬರೇ ಭಾವನಾತ್ಮಕ ದೃಷ್ಟಿಯಿಂದ ನೋಡುವುದು ಎಷ್ಟು ಸರಿ? ಅಚ್ಚರಿ ಏನೆಂದರೆ, ಅಸ್ಸಾಮ್‍ನ ಘರ್ಷಣೆಗೆ ಅಕ್ರಮ ವಲಸಿಗರು ಕಾರಣ ಎಂದು ಹೇಳುತ್ತಾ ತಿರುಗಾಡುತ್ತಿರುವವರೇ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮಂದಿಯ ರಕ್ಷಕರಾಗಿ ಕಾಣಿಸಿಕೊಂಡಿರುವುದು. ರೈಲ್ವೆ ನಿಲ್ದಾಣದಲ್ಲಿ ಅವರ ರಕ್ಷಣೆಗೆ ಲಾಠಿ ಹಿಡಿದು, ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡಿರುವುದು.
        ಅಂದಹಾಗೆ, ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಗಲಭೆಯೇ ನಡೆಯದ ಪ್ರದೇಶದಿಂದ ವಲಸೆ ಹೋದುದು ಈ ದೇಶದಲ್ಲಿ ಇದೇ ಮೊದಲು. ಈ ರಾಜ್ಯದಿಂದ ಮಾತ್ರವಲ್ಲ, ಆಂಧ್ರ, ತಮಿಳ್ನಾಡು, ಮಹಾರಾಷ್ಟ್ರದಿಂದಲೂ ಇಂಥ ವಲಸೆಗಳು ನಡೆದಿವೆ. ಆದ್ದರಿಂದಲೇ  ಈ ಬೆಳವಣಿಗೆಯ ಕುರಿತಂತೆ ಅತ್ಯಂತ ಪರಿಣಾಮಕಾರಿ ತನಿಖೆ ನಡೆಯಬೇಕು. ಮನುಷ್ಯರ ನಡುವೆ ದ್ವೇಷವನ್ನು ಹುಟ್ಟು ಹಾಕುವ ಶಕ್ತಿಗಳು ಎಷ್ಟೇ ಬಲಿಷ್ಟವಾಗಿರಲಿ, ಅವರು ಮಾನವ ದ್ರೋಹಿಗಳು.
         ನಿಜವಾಗಿ, ಮನುಷ್ಯರನ್ನು ಅವರ ಚರ್ಮ, ಭಾಷೆ, ರಾಜ್ಯ, ದೇಶದ ಆಧಾರದಲ್ಲಿ ವಿಂಗಡಿಸುವುದೇ ದೊಡ್ಡ ಕ್ರೌರ್ಯ. ಕೊಕ್ರಾಜಾರ್‍ನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದರೆ, ಅದಕ್ಕೆ ಈ ರಾಜ್ಯದಲ್ಲಿರುವ ಬೋಡೋಗಳೋ ಮುಸ್ಲಿಮರೋ ಹೊಣೆಗಾರರಾಗುವುದಾದರೂ ಹೇಗೆ? ಅಲ್ಲಿ ಮುಸ್ಲಿಮನೊಬ್ಬನಿಗೆ ಏಟು ಬಿದ್ದರೆ, ಇಲ್ಲಿರುವ ಬೋಡೋ ವ್ಯಕ್ತಿಗೆ ಹೊಡೆಯುವುದು ನ್ಯಾಯವಾಗುತ್ತದಾ? ಒಂದು ಅನ್ಯಾಯವನ್ನು ಇನ್ನೊಂದು ಅನ್ಯಾಯದ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವೇ? ನ್ಯಾಯ ನಿನ್ನ ಹೆತ್ತವರ ವಿರುದ್ಧವಾಗಿದ್ದರೂ ನೀನು ನ್ಯಾಯದ ಪರವಾಗಿಯೇ ನಿಲ್ಲಬೇಕು ಅನ್ನುತ್ತದೆ ಪವಿತ್ರ ಕುರ್‍ಆನ್ (4: 59). ಬಹುಶಃ ಅಸ್ಸಾಮ್‍ನ ಬೆಳವಣಿಗೆಯನ್ನು ಬಳಸಿಕೊಂಡು ಇಡೀ ದೇಶದಲ್ಲಿ `ಮುಸ್ಲಿಮ್ ಭೀತಿ’ಯ ವಾತಾವರಣವನ್ನು ಸೃಷ್ಟಿಸಲು ಖಂಡಿತ ಹುನ್ನಾರವೊಂದು ನಡೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಂದು ವರ್ಷದೊಳಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವುದಕ್ಕೆ ಇಶ್ಶೂ ಒಂದರ ಅಗತ್ಯ ಇತ್ತು . ಒಂದು ಕಡೆ ಬಾಬಾ ರಾಮ್‍ದೇವ್‍ರ ಮುಖಾಂತರ ಈ ಕೆಲಸ ನಡೆಯುತ್ತಿರುವಾಗ ಇನ್ನೊಂದು ಕಡೆಯಿಂದ ಇಂಥದ್ದೊಂದು ಸನ್ನಿವೇಶಕ್ಕೆ ಚಾಲನೆ ನೀಡಿರುವ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯುವುದು?
        ಸ್ವಾತಂತ್ರೋತ್ಸವದ ವೇಳೆ ಧ್ವಜಸ್ತಂಭದ ಕೆಳಗೆ ನಿಂತು ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದು ಎಂದು ಎಷ್ಟೇ ಗಟ್ಟಿಯಾಗಿ ಹೇಳಿದರೂ ಈ ದೇಶದಲ್ಲಿ ಅಂಥ ಸನ್ನಿವೇಶ ನಿರ್ಮಾಣವಾಗಬಾರದೆಂದು ಬಯಸುವವರು ಇದ್ದಾರೆನ್ನುವುದು ಸ್ಪಷ್ಟ. ಮುಸ್ಲಿಮರನ್ನು ದೇಶದ ವೈರಿಗಳು, ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಪ್ರತಿನಿತ್ಯ ನಡೆಯುತ್ತಲೂ ಇದೆ. ಯಾವುದಾದರೂ ಬಿಡಿ ಪ್ರಕರಣವನ್ನು ಎತ್ತಿಕೊಂಡು ಇಡೀ ಸಮುದಾಯವನ್ನೇ ನಿಂದಿಸುವ, ಅವರ ದೇಶನಿಷ್ಠೆಯನ್ನು ಪ್ರಶ್ನಿಸುವ ಶ್ರಮ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಧಾರಾಳ ನಡೆಯುತ್ತಿವೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದಾಗಲೂ ಮೊದಲು ಶಂಕಿಸಿದ್ದು ಮುಸ್ಲಿಮರನ್ನೇ. ಆದ್ದರಿಂದ ಅಸ್ಸಾಮ್‍ನ ಘರ್ಷಣೆಯನ್ನು ನೆಪವಾಗಿಸಿಕೊಂಡು ಭೀತಿಯನ್ನು ಸೃಷ್ಟಿಸುವ ಯಾರೇ ಇರಲಿ, ಅವರನ್ನು ಮತ್ತು ಅವರ ಮೂಲವನ್ನು ಪತ್ತೆ ಹಚ್ಚಿ, ಶಿಕ್ಷೆಗೊಳಪಡಿಸಲೇಬೇಕು. ಅಂಥ ಎಸ್ಸೆಮ್ಮೆಸ್‍ಗೆ ಯಾರು ಪ್ರಾಯೋಜಕರು ಅನ್ನುವುದು ಬಹಿರಂಗವಾಗಬೇಕು. ಅಸ್ಸಾಮಿನಲ್ಲಿ ಬೋಡೋಗಳು ಮತ್ತು ಬೋಡೋಯೇತರರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಲ್ಲಿಯದ್ದೇ ಆದ ಕಾರಣ ಇದೆ. ಅದನ್ನು ಒಂದು ಎಸ್ಸೆಮ್ಮೆಸ್‍ನ ಮೂಲಕ ಪರಿಹರಿಸಬಹುದೆಂದು ನಂಬುವವರನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಆದ್ದರಿಂದ ಆ ನೆಪದಲ್ಲಿ ಈ ರಾಜ್ಯವನ್ನು ಅಸ್ಸಾಮ್ ಮಾಡುವವರ ಬಗ್ಗೆ ಜಾಗೃತರಾಗಿರೋಣ. ಈಶಾನ್ಯ ರಾಜ್ಯಕ್ಕೆ ಮರಳಿದವರು ಮತ್ತೆ ಇಲ್ಲಿಗೆ ಮರಳಿ ಬರುವಂಥ ವಾತಾವರಣವನ್ನು ನಿರ್ಮಿಸೋಣ. ಯಾಕೆಂದರೆ ಅವರೆಲ್ಲ ಮನುಷ್ಯರು, ಗುರುತು ಏನೇ ಆಗಿದ್ದರೂ.

Sunday, 12 August 2012

ಬಾಳೆಗೊನೆ ಮತ್ತು ಉಪವಾಸಿಗ


       ಓರ್ವ ಉಪವಾಸಿಗನ ನಿಜವಾದ ಉಪವಾಸ ಆರಂಭವಾಗುವುದೇ ಈದ್‍ನ ಬಳಿಕ. ಆದರೆ ಈ ಉಪವಾಸದಲ್ಲಿ ನೀರು ಕುಡಿಯಬಹುದು. ಊಟ ಮಾಡಬಹುದು. ಬೇಕಾದಾಗ ತಿನ್ನ ಬಹುದು. ಸಹ್ರಿ ಉಣ್ಣಬೇಕಿಲ್ಲ. ಇಫ್ತಾರ್ ಮಾಡಬೇಕಿಲ್ಲ. ತರಾವೀಹ್ ಇಲ್ಲ.. ಆದರೂ ಈ ಉಪವಾಸ ರಮಝಾನ್‍ನ ಉಪವಾಸಕ್ಕಿಂತ ಎಷ್ಟೋ ಪಾಲು ಕಠಿಣ. ಈ ಉಪವಾಸವನ್ನು ಭಂಗಪಡಿಸುವುದಕ್ಕೆ ನೂರಾರು ಆಮಿಷಗಳು ಎದುರಾಗುತ್ತಲೇ ಇರುತ್ತವೆ. ರಮಝಾನಿನ ಒಂದು ತಿಂಗಳಲ್ಲಿ ಯಾವೆಲ್ಲ ಕಟ್ಟುನಿಟ್ಟು, ಮೌಲ್ಯಗಳನ್ನು ಪಾಲಿಸಿದ್ದೆವೋ ಅವೆಲ್ಲವನ್ನೂ ಕೈಬಿಡುವಂತೆ ಸುತ್ತಲಿನ ಪ್ರಪಂಚ ಒತ್ತಾಯಿಸತೊಡಗುತ್ತದೆ. ರಮಝಾನ್ ಬೇರೆ, ಉಳಿದ 11 ತಿಂಗಳು ಬೇರೆ ಅನ್ನುತ್ತದೆ. ವರದಕ್ಷಿಣೆ ಪಡೆದುಕೋ, ವ್ಯಾಪಾರದಲ್ಲಿ ಸುಳ್ಳು ಹೇಳು, ನಮಾಝ್‍ನ ಜೊತೆ ರಾಜಿಯಾಗು, ಝಗಮಗಿಸುವ ಜಗತ್ತಿನಲ್ಲಿ ಜಾಲಿಯಾಗಿರು.. ಎಂದೆಲ್ಲಾ ಹೇಳತೊಡಗುತ್ತದೆ. ಒಂದು ರೀತಿಯಲ್ಲಿ ಉಪವಾಸಿಗ, ಬೆಳೆದ ಬಾಳೆಗೊನೆಯಷ್ಟೇ ಆಕರ್ಷಣೀಯ ವಸ್ತು. ಮೂರ್ನಾಲ್ಕು ವಾರಗಳ ಮೊದಲು ಯಾವ ಬೆಲೆಯೂ ಇಲ್ಲದೇ ನೇತಾಡಿಕೊಂಡಿದ್ದ, ಮಾಲಿಕನನ್ನೋ ವ್ಯಾಪಾರಿಯನ್ನೋ ಆಕರ್ಷಿಸದೇ ಇದ್ದ ಬಾಳೆಗೊನೆ ಪ್ರಬುದ್ಧವಾದಂತೆ ಮಾಲಿಕ, ವ್ಯಾಪಾರಿ.. ಎಲ್ಲರನ್ನೂ ಆಕರ್ಷಿಸತೊಡಗುತ್ತದೆ. ಮಾಲಿಕ ದುಡ್ಡು ಲೆಕ್ಕ ಹಾಕುತ್ತಾನೆ. ವ್ಯಾಪಾರಿ ಚೌಕಾಶಿಗಿಳಿಯುತ್ತಾನೆ. ವಿವಿಧ ಕಡೆಗಳಿಂದ ಆಮಿಷಗಳೂ ಬರತೊಡಗುತ್ತವೆ. ಒಂದು ದಿನ, ವ್ಯಾಪಾರಿಯು ಮಾಲಿಕನಿಂದ ಅದನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಿದರೆ, ಮಾರುಕಟ್ಟೆಯವ ಮದ್ದು ಸಿಂಪಡಿಸಿಯೋ ವಿವಿಧ ಕೃತಕ ವಿಧಾನಗಳನ್ನು ಬಳಸಿಯೋ ಹಣ್ಣಾಗಿಸುತ್ತಾನೆ. ಹೀಗೆ ಎಲ್ಲರ ಆಕರ್ಷಣೆಗೆ ಒಳಗಾದ ಬಾಳೆಗೊನೆಯು ಕೊನೆಗೊಂದು ದಿನ ಯಾರದೋ ಹೊಟ್ಟೆ ಸೇರಿ ತನ್ನ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತದೆ. ನಿಜವಾಗಿ, ಓರ್ವ ಉಪವಾಸಿಗ ಈದ್‍ನ ಬಳಿಕ ಎದುರಿಸುವ ಸವಾಲು ಇದು. ಆತ ಯಾಕೆ ಆಕರ್ಷಣೀಯ ಎಂದರೆ, ಆತನ ಜೊತೆ ರಮಝಾನಿನಲ್ಲಿ ಗಳಿಸಿದ ಬೆಲೆಬಾಳುವ ಮೌಲ್ಯ ಇರುತ್ತದೆ. ಕೆಡುಕಿನ ಜಗತ್ತು ಆ ಮೌಲ್ಯವನ್ನು ಖರೀದಿಸಲು ಈದ್‍ನ ಬಳಿಕ ಪ್ರತಿ ಸೆಕೆಂಡೂ ಕಾಯುತ್ತಿರುತ್ತದೆ. ಯಾರು ಬಾಳೆಗೊನೆಯಂತೆ ಖರೀದಿಗೆ ಒಳಗಾಗುತ್ತಾರೋ ಅವರು ಹಣ್ಣಾದ ಬಾಳೆ ಹಣ್ಣಿನಂತೆ ಕೊನೆಗೆ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತಾರೆ..
          ಆದ್ದರಿಂದ ಈದ್‍ನ ಪ್ರವಚನ ಕೇಳಿ, ಕಣ್ಣು ಮಂಜಾಗಿಸಿ, ಭಾರ ಹೃದಯದಿಂದ ರಮಝಾನ್‍ಗೆ ವಿದಾಯ ಕೋರುವ ಪ್ರತಿಯೋರ್ವರೂ ತಮ್ಮ ಕಣ್ಣ ಮುಂದೆ, ಬೆಳೆದ ಬಾಳೆಗೊನೆಯ ದೃಶ್ಯವನ್ನೊಮ್ಮೆ ತಂದುಕೊಳ್ಳಬೇಕು. ತಾನು ಎಂದೆಂದೂ ಈ ಆಕರ್ಷಣೆಯನ್ನು ಉಳಿಸಿಕೊಳ್ಳುವೆ, ಮಾರಾಟವಾಗಲಾರೆ ಎಂದು ಎದೆಗೆ ಕೈಯಿಟ್ಟು ತೀರ್ಮಾನಿಸಬೇಕು. ಇಲ್ಲದಿದ್ದರೆ ನಮ್ಮ ತಕ್ಬೀರ್‍ಗೆ, ಹೊಸ ಬಟ್ಟೆಗೆ, ಪಫ್ರ್ಯೂಮ್‍ಗೆ, ಮಂಜಾದ ಕಣ್ಣಿಗೆ ಯಾವ ಅರ್ಥವೂ ಇರುವುದಿಲ್ಲ.

Monday, 6 August 2012

ಸಂಸ್ಕೃತಿ ರಕ್ಷಕರು ಮತ್ತು ವೃಂದಾವನದ ವಿಧವೆಯರು

ಮಂಗಳೂರಿನ ಹೋಮ್‍ಸ್ಟೇ ದಾಳಿ ಮತ್ತು ಅಣ್ಣಾ ಹಜಾರೆಯ ಜಂತರ್-ಮಂತರ್ ಪ್ಲಾಪ್ ಶೋನ ಮಧ್ಯೆ ನಾವು ನಿಜವಾಗಿಯೂ ಗಂಭೀರವಾಗಿ ಚರ್ಚಿಸಲೇಬೇಕಾಗಿದ್ದ ಸುದ್ದಿಯೊಂದು ಅಷ್ಟಾಗಿ ಯಾರ ಗಮನವನ್ನೂ ಸೆಳೆಯದೇ ಕಳೆದವಾರ ಕಣ್ಮರೆಯಾಯಿತು. `ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾದ ವೃಂದಾವನದಲ್ಲಿ 15 ಸಾವಿರದಷ್ಟು ವಿಧವೆಯರಿದ್ದು, ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ, ಗೋಣಿ ಚೀಲದಲ್ಲಿ ಹಾಕಿ ರಾತ್ರಿ ವೇಳೆ ಎಸೆಯಲಾಗುತ್ತದೆ, ಶವಸಂಸ್ಕಾರಕ್ಕೆ ದುಡ್ಡಿಲ್ಲದಿರುವುದೇ ಇದಕ್ಕೆ ಕಾರಣ’.. ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸುಪ್ರೀಮ್ ಕೋರ್ಟ್‍ ನ ಮುಂದೆ ತಂದಾಗ ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಠಾಕೂರ್ ಆಘಾತಗೊಂಡರು. `ವೃಂದಾವನ ಮತ್ತು ಪರಿಸರದಲ್ಲಿ ಬದುಕುವ ವಿಧವೆಯರ ದುರವಸ್ಥೆ’ ಎಂಬ ಶೀರ್ಷಿಕೆಯ ವರದಿಯನ್ನು ಇಂಗ್ಲಿಷ್ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಇದರ ಆಧಾರದಲ್ಲಿ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ದುರಂತ ಏನೆಂದರೆ, ವೃಂದಾವನದ ಸುತ್ತಮುತ್ತಲಿರುವ ನೂರಾರು ದೇಗುಲಗಳಲ್ಲಿ ಈ ವಿಧವೆಯರು ನಿತ್ಯ ಭಿಕ್ಷಾಟನೆ ನಡೆಸುತ್ತಾರೆ. ತುತ್ತು ಅನ್ನಕ್ಕಾಗಿ ಭಜನೆ ಮಾಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ತಲಾ 4 ಗಂಟೆ ಶ್ರೀ ಕೃಷ್ಣನ ಭಜನೆ ಮಾಡಿದರೆ 4 ರೂ. ಮತ್ತು ಒಂದಿಷ್ಟು ಅಕ್ಕಿ ಸಿಗುತ್ತದೆ. ಪತಿಯ ನಿಧನದ ಬಳಿಕ, `ಪವಿತ್ರ ವಿಧವೆಯ ಬದುಕನ್ನು’ ವೃಂದಾವನದಲ್ಲಿ ನಡೆಸುವಂತೆ ಕುಟುಂಬಗಳು ಬಲಾತ್ಕರಿಸುತ್ತವೆ.. ಎಂದೆಲ್ಲಾ ಪ್ರಾಧಿಕಾರದ ವರದಿಯಲ್ಲಿ ಹೇಳಲಾಗಿದೆ. ನಿಜವಾಗಿ, ಸಂಸ್ಕೃತಿಯ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸುವವರು ಬಿಡುವು ಮಾಡಿಕೊಂಡು ಒಮ್ಮೆ ವೃಂದಾವನಕ್ಕೆ ಹೋಗಬೇಕು. ಹೆಣ್ಣು-ಗಂಡು ಪರಸ್ಪರ ಮಾತಾಡುವುದು ಸಂಸ್ಕೃತಿಗೆ ಏಟು ಅನ್ನುವ ಮಂದಿಗೆ ಸಂಸ್ಕೃತಿಯ ಕೆಲಸ ಮಾಡುವುದಕ್ಕೆ ಅಲ್ಲಿ ಧಾರಾಳ ಅವಕಾಶವಿದೆ. ಅಷ್ಟಕ್ಕೂ ಈ ಸಂಸ್ಕೃತಿ ರಕ್ಷಕರು ವೃಂದಾವನಕ್ಕೆ ಉಚಿತ ಪಾಸ್ ಕೊಟ್ಟರೂ ಖಂಡಿತ ಹೋಗಲಾರರು. ಯಾಕೆಂದರೆ, ವೃಂದಾವನದಲ್ಲಿರುವುದು ಯುವತಿಯರು ಅಲ್ಲವಲ್ಲ.
     ಸಂಸ್ಕೃತಿ ಅಂದರೆ ಯಾರು ಎಷ್ಟು ಉದ್ದದ ಬಟ್ಟೆ ಧರಿಸಿದ್ದಾರೆ, ಯಾರ ಜೊತೆ ಮಾತಾಡುತ್ತಾರೆ, ಎಲ್ಲಿದ್ದಾರೆ ಅನ್ನುವುದನ್ನು ಪತ್ತೆ ಮಾಡುವುದಲ್ಲ. ಅದು ಅಸಂಸ್ಕೃತಿ ಅಷ್ಟೆ. ವೃಂದಾವನ ಎಂದಲ್ಲ, ಈ ದೇಶದ ಕೋಟ್ಯಂತರ ಮನೆಗಳಲ್ಲಿ, ಬೀದಿ, ಪಟ್ಟಣಗಳಲ್ಲಿ ವಿಧವೆಯರಿದ್ದಾರೆ. ಅವರ ತಪ್ಪು ಏನು ಅಂದರೆ, ಪತಿ ಸಾವಿಗೀಡಾಗಿರುವುದು. ವಿಧವೆಯರನ್ನು ಅಮಂಗಲ ಎಂದು ತೀರ್ಮಾನಿಸಿದ ಒಂದು ದೊಡ್ಡ ವರ್ಗ ಈ ದೇಶದಲ್ಲಿ ಈಗಲೂ ಬದುಕುತ್ತಾ ಇದೆ. ಅವರು ಮರು ಮದುವೆ ಆಗುವಂತಿಲ್ಲ. ಮದುವೆ, ಔತಣಗಳಲ್ಲಿ ಭಾಗವಹಿಸುವಂತಿಲ್ಲ. ಶೃಂಗಾರ ಮಾಡುವಂತಿಲ್ಲ.. ಇಂಥ 'ಇಲ್ಲ'ಗಳ ದೊಡ್ಡದೊಂದು ಪಟ್ಟಿಯನ್ನು ಸಮಾಜ ಅವರ ಕುತ್ತಿಗೆಗೆ ಕಟ್ಟಿ ಮೂಲೆಗೆ ತಳ್ಳಿ ಬಿಟ್ಟಿದೆ. ಅಂದಹಾಗೆ, ವಿಧವೆಯನ್ನು ಮರು ಮದುವೆಯಾಗಬೇಡ ಎಂದು ಹೇಳುವ ಸಮಾಜ ವಿಧುರನಿಗೆ ಆ ಅವಕಾಶ ಕೊಡುವುದಾದರೂ ಯಾಕೆ? ವಿಧವೆ ಅಮಂಗಲಳಾದರೆ ವಿಧುರ ಯಾಕೆ ಮಂಗಲನಾಗಬೇಕು? ಆತ ಮದುವೆ, ಔತಣಗಳಲ್ಲಿ ಭಾಗವಹಿಸುವುದು ಯಾಕೆ ಅಪರಾಧ ಅನ್ನಿಸುತ್ತಿಲ್ಲ? ಆತನೇಕೆ ವೃಂದಾವನದಲ್ಲಿ ಭಿಕ್ಷೆ ಬೇಡುವುದಿಲ್ಲ? ಜನನ ಮತ್ತು ಮರಣ ಎಂಬ ಪ್ರಕೃತಿಯ ಸಾಮಾನ್ಯ ಚಕ್ರವನ್ನು ಹೆಣ್ಣಿನ ಪಾಲಿಗೆ ಶಾಪಗೊಳಿಸಿದ್ದಾದರೂ ಯಾಕೆ?
      ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಆವರೆಗೆ ಆ ಸಮಾಜದಲ್ಲಿ ಹೆಣ್ಣು ಅಪವಿತ್ರ, ಅಮಂಗಲಳೇ ಆಗಿದ್ದಳು. ವೈಧವ್ಯದ ಬದುಕು ಹೆಣ್ಣಿನ ಪಾಲಿಗೆ ಸಾಮಾನ್ಯ ಆಗಿತ್ತು. 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ಕೈಗೊಂಡ ಈ ಕ್ರಾಂತಿಕಾರಿ ನಿರ್ಧಾರ ಒಟ್ಟು ಸಮಾಜದ ಆಲೋಚನೆಯನ್ನೇ ಬದಲಿಸಿತು. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎಂದು ನಂಬಿದ್ದ ಸಮಾಜವನ್ನು ಪ್ರವಾದಿ ಮುಹಮ್ಮದ್‍ರು ಪ್ರಾಯೋಗಿಕವಾಗಿ ತಿದ್ದಲು ಮುಂದಾದರು. ಹೆಣ್ಣು ವಿಚ್ಛೇದನಗೊಂಡರೆ ಅಥವಾ ವಿಧವೆಯಾದರೆ ಆಕೆಯನ್ನು ಸಲಹುವ ಎಲ್ಲ ಹೊಣೆಗಾರಿಕೆಯನ್ನೂ ಅವರು ತವರು ಮನೆಗೇ ವಹಿಸಿಕೊಟ್ಟರು. ಆಸ್ತಿಯಲ್ಲಿ ಆಕೆಗೆ ಪಾಲು ಕೊಡಿಸಿದರು. ಯಾರಿಗಾದರೂ ಮೂವರು ಹೆಣ್ಣು ಮಕ್ಕಳಿದ್ದು, ಅವರು ಆ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ವಿದ್ಯೆ ನೀಡಿ, ಮದುವೆ ಮಾಡಿಸಿ ಕೊಟ್ಟರೆ ಅವರಿಗೆ ಸ್ವರ್ಗ ಇದೆ ಅಂದರು. ನಿಮ್ಮ ಸೇವೆಗೆ ಅತ್ಯಂತ ಅರ್ಹರು ಯಾರೆಂದರೆ ಅದು ತಾಯಿ ಅಂದರು. ವೃದ್ಧ ಹೆತ್ತವರು ಮನೆಯಲ್ಲಿದ್ದರೆ ಅವರನ್ನು ಹೊರ ಹಾಕುವುದು ಬಿಡಿ, ಛೆ ಎಂಬ ಉದ್ಘಾರ ಕೂಡ ನಿಮ್ಮ ಬಾಯಿಯಿಂದ ಬರಬಾರದು ಎಂದು ತಾಕೀತು ಮಾಡಿದರು. ಎಲ್ಲಿಯ ವರೆಗೆಂದರೆ, ಒಂದು ವೇಳೆ ನಿಮ್ಮ ತಾಯಿ ಅಥವಾ ತಂದೆ ಮುಸ್ಲಿಮೇತರರಾಗಿದ್ದರೂ ಇದೇ ವರ್ತನೆ ನಿಮ್ಮದಾಗಿರಬೇಕು ಎಂದು ಆದೇಶಿಸಿದರು. ಅಂದಹಾಗೆ ಓರ್ವ ವ್ಯಕ್ತಿ ನಮಾಝ್, ಉಪವಾಸ, ಹಜ್ಜ್ ಮುಂತಾದ ಎಲ್ಲವನ್ನೂ ಮಾಡುತ್ತಿರುವ ಮಾತ್ರವಲ್ಲ, ಸಾರ್ವಜನಿಕವಾಗಿ ಭಾರೀ ಗೌರವಾದರಗಳನ್ನು ಗಿಟ್ಟಿಸಿಕೊಂಡ ಭಕ್ತನೇ ಆಗಿದ್ದರೂ ಆತನ ವಿರುದ್ಧ ತಾಯಿ ಮುನಿಸಿಕೊಂಡಿದ್ದರೆ ಆತ ಸ್ವರ್ಗ ಪ್ರವೇಶಿಸಲಾರ ಅಂದದ್ದೂ ಪ್ರವಾದಿಯೇ.
      ಇವತ್ತು ವೃಂದಾವನದಲ್ಲಿರುವ ವಿಧವೆಯರ ದೊಡ್ಡ ದೂರೇನೆಂದರೆ, ತಮ್ಮ ಮಕ್ಕಳು ತಮ್ಮನ್ನು ಮನೆಯಿಂದ ಹೊರಗಟ್ಟಿದರು ಅನ್ನುವುದು. ಮುದಿ ಹೆತ್ತವರನ್ನು ಹೊರೆ ಎಂದು ಭಾವಿಸುವ ಮಕ್ಕಳಿರುವ ದೇಶವೊಂದರಲ್ಲಿ ಸಂಸ್ಕೃತಿ ರಕ್ಷಕರ ಪಾತ್ರವಾದರೂ ಏನಾಗಿರಬೇಕು? ತಾಯಿಯನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿಸಿ, ಸಫಾಯಿ ಕರ್ಮಾಚಾರಿಗಳು ಎಸೆಯುವ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ. ಯಾವ ಮಕ್ಕಳಿಗೆ ತಾನೇ ಅದು ಇಷ್ಟವಾದೀತು? ಇಷ್ಟಿದ್ದೂ ವಿಧವೆಯರ ಸಮಸ್ಯೆಯನ್ನು ಎತ್ತಿಕೊಂಡು ಎಷ್ಟು ಸಂಸ್ಕೃತಿ ರಕ್ಷಕರು ಪ್ರತಿಭಟಿಸಿದ್ದಾರೆ? ಅವರನ್ನು ಸಮಾಜದ ಇತರರಂತೆ ಕಾಣಬೇಕೆಂದು ಒತ್ತಾಯಿಸಿ ಎಷ್ಟು ಮನೆಗಳಿಗೆ ನುಗ್ಗಿದ್ದಾರೆ? ಸಂಸ್ಕೃತಿ ಎಂಬುದು ಹೆಣ್ಣು-ಗಂಡುಗಳ ಮಾತುಕತೆಗೆ ಮಾತ್ರ ಸೀಮಿತವಾ?
     ಹೊಡೆತ, ಬಡಿತ, ಥಳಿತದಿಂದ ಒಂದು ಸಮಾಜವನ್ನು ಬದಲಿಸಲು ಖಂಡಿತ ಸಾಧ್ಯವಿಲ್ಲ. ಅದಕ್ಕೆ ಪ್ರವಾದಿ ಮುಹಮ್ಮದರಂತೆ ಪ್ರಾಯೋಗಿಕ ವಿಧಾನದ ಅಗತ್ಯವಿದೆ. ಸಮಾಜದ ಸಮಸ್ಯೆಗೆ ಸೈದ್ಧಾಂತಿಕ ಪರಿಹಾರ ಇಲ್ಲದವರು ಮಾತ್ರ ದಾಂಧಲೆಗಿಳಿಯುತ್ತಾರೆ. ಇದೆಂದೂ ಪರಿಹಾರ ಆಗಲಾರದು.

Tuesday, 31 July 2012

ಒಲಿಂಪಿಕ್ಸ್ ಅನ್ನು ಆನಂದಿಸುವಾಗ ಈ ಮಕ್ಕಳನ್ನು ನೆನಪಿಸಿಕೊಳ್ಳಿ

ಜುಲೈ 27ರಂದು ಉದ್ಘಾಟನೆಗೊಂಡ ಲಂಡನ್ ಒಲಿಂಪಿಕ್ಸ್ ಗಿಂತ  ಒಂದು ದಿನ ಮೊದಲು ಮಧ್ಯಪ್ರದೇಶದ ಭೋಪಾಲ್ ನಲ್ಲಿ , `ಭೋಪಾಲ್ ಸ್ಪೆಶಲ್ ಒಲಿಂಪಿಕ್ಸ್’ ಉದ್ಘಾಟನೆಗೊಂಡಿತ್ತು. ಮುಚ್ಚಲ್ಪಟ್ಟಿರುವ ಯೂನಿಯನ್ ಕಾರ್ಬೈಡ್ ಕಂಪೆನಿಯ ಬಲಬದಿಯಲ್ಲಿರುವ ಅಫ್ರಿ ನಗರ್ ಮೈದಾನದಲ್ಲಿ ನಡೆದ ಈ ಒಂದು ದಿನದ ಒಲಿಂಪಿಕ್ಸ್ ನ  ಧ್ಯೇಯ ವಾಕ್ಯ, `ಈಸ್ಟ್ ಇಂಡಿಯಾ ಕಂಪೆನಿಯಿಂದ ಡೌ ಕೆಮಿಕಲ್ ಕಂಪೆನಿ ವರೆಗೆ’ ಎಂದಿತ್ತು. ಈ ಒಲಿಂಪಿಕ್ಸ್ ನಲ್ಲೂ  ಕ್ರ್ಯಾಬ್ ರೇಸ್, 25 ಮೀಟರ್ ಸ್ಟ್ರಿಂಟ್, ವಾಕಿಂಗ್.. ಮುಂತಾದ ಕ್ರೀಡೆಗಳಿದ್ದುವು. ಆದರೆ ಇದರಲ್ಲಿ ಭಾಗವಹಿಸಿದ್ದು ಉಸೇನ್ ಬೋಲ್ಟ್, ಜೊನಾಥನ್ ಮೆರ್ಲಿ, ಅಸಾಫಾ ಪಾವೆಲ್ ಮುಂತಾದ ಖ್ಯಾತ ಓಟಗಾರರಲ್ಲ. ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರಾದ ಅಂಗವಿಕಲ ಮಕ್ಕಳೇ ಇಲ್ಲಿಯ ಸ್ಪರ್ಧಿಗಳು. ಲಂಡನ್ ಒಲಿಂಪಿಕ್ಸ್ ನಲ್ಲಿ  ಒಲಿಂಪಿಕ್ಸನ್ನು ಸ್ತುತಿಸುವ ಹಾಡಿದ್ದರೆ ಭೋಪಾಲ್ ನಲ್ಲಿ  ಈ ಮಕ್ಕಳು  ಲಂಡನ್ ಒಲಿಂಪಿಕ್ಸ್ ಗೆ  ಶೇಮ್ ಶೇಮ್ ಎಂದು ಹಾಡಿದರು.
         ಲಂಡನ್ ಒಲಿಂಪಿಕ್ಸ್ ನಲ್ಲಿ  ಯಾವ್ಯಾವ ರಾಷ್ಟ್ರಗಳು ಎಷ್ಟೆಷ್ಟು ಪದಕಗಳನ್ನು ದೋಚಿವೆ ಮತ್ತು ಯಾರು ಈ ಬಾರಿ ಅತ್ಯಧಿಕ ಚಿನ್ನದ ಪದಕ ಪಡೆಯುತ್ತಾರೆ ಎಂಬುದು ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ ನಡೆದ `ಭೋಪಾಲ್ ಒಲಿಂಪಿಕ್ಸ್’ ನಮ್ಮೆಲ್ಲರ ಚರ್ಚೆಗೆ ಅತ್ಯಂತ ಯೋಗ್ಯವಾದದ್ದು. ಕೈಯೋ ಕಾಲೋ ಕಣ್ಣೋ ಕಳಕೊಂಡ ವಿಕಲ ಮಕ್ಕಳು ಮೈದಾನದಲ್ಲಿ ಓಡುವುದೇ ತ್ರಾಸದಾಯಕ. ಆದ್ದರಿಂದಲೇ ಅಲ್ಲಿ ನೆರೆದವರಾರೂ ಚಪ್ಪಾಳೆ ತಟ್ಟಲಿಲ್ಲ. ಕೆಲವರ ಕಣ್ಣುಗಳು ಹನಿಗೂಡಿದುವು. 1984 ಡಿಸೆಂಬರ್ 2ರಂದು ರಾತ್ರಿ ಭೋಪಾಲ್ ನ  ಯೂನಿಯನ್ ಕಾರ್ಬೈಡ್ ಕಂಪೆನಿಯಿಂದ ವಿಷಾನಿಲ ಸೋರಿಕೆಯಾಯಿತು. ಅದೆಷ್ಟು ಭೀಕರವಾದ ವಾತಾವರಣವನ್ನು ಸೃಷ್ಟಿಸಿತೆಂದರೆ, ತಕ್ಷಣ 10 ಸಾವಿರಕ್ಕಿಂತಲೂ  ಹೆಚ್ಚು ಮಂದಿ ಸಾವಿಗೀಡಾದರು. ದುರ್ಘಟನೆ ನಡೆದು 28 ವರ್ಷಗಳಾದರೂ ವಿಷಾನಿಲದ ಪ್ರಭಾವದಿಂದ ಪ್ರದೇಶ ಈಗಲೂ  ಮುಕ್ತವಾಗಿಲ್ಲ. ಕಂಪೆನಿ ಮುಚ್ಚಿದ್ದರೂ ಅದರಿಂದ ವಿಷಾನಿಲ ಇವತ್ತೂ ಭೂಮಿಗೆ ಸೇರುತ್ತಿದ್ದು, ನೀರನ್ನು ಕಲುಷಿತಗೊಳಿಸುತ್ತಿದೆ. ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳು ಈಗಲೂ ಹುಟ್ಟುತ್ತಿದ್ದಾರೆ. ಆದರೆ ದುರ್ಘಟನೆಯ ಬಳಿಕ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿ ಡೌ ಕೆಮಿಕಲ್ ಕಂಪೆನಿಯು, ಸಂತ್ರಸ್ತರಿಂದ ಮಾರು ದೂರ ನಿಂತಿದೆ. ಸಂತ್ರಸ್ತರಿಗೆ ನೆರವಾಗುವ ಎಲ್ಲ ಜವಾಬ್ದಾರಿಗಳಿಂದಲೂ ನುಣುಚಿಕೊಳ್ಳುತ್ತಿದೆ. ವಿಶೇಷ ಏನೆಂದರೆ, ಇದೇ ಡೌ ಕಂಪೆನಿಯು ಲಂಡನ್ ಒಲಿಂಪಿಕ್ಸ್ ಅನ್ನು  ಪ್ರಾಯೋಜಿಸುತ್ತಿರುವುದು. ಆದ್ದರಿಂದಲೇ ಈ ಪ್ರಾಯೋಜಕತ್ವವನ್ನು ಖಂಡಿಸಿ ಭೋಪಾಲ್ ನ  ಅಂಗವಿಕಲ ಮಕ್ಕಳು ಅಫ್ರಿ ನಗರ್ ಮೈದಾನದಲ್ಲಿ ಓಡಿದ್ದಾರೆ. ಇದಕ್ಕಿಂತ ಮೊದಲು ಭೋಪಾಲ್ ನಲ್ಲಿ  ಸಾಕಷ್ಟು ರಾಲಿಗಳು  ನಡೆದಿದ್ದುವು. ಡೌ ಕಂಪೆನಿಯ ಪ್ರಾಯೋಜಕತ್ವದ ವಿರುದ್ಧ ಭಾರತವೂ ಪ್ರತಿಭಟಿಸಿತ್ತು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆಯೊಬ್ಬರು ಡೌವನ್ನು ಖಂಡಿಸಿ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದರು. ಆದರೂ ಪ್ರಭಾವಿ ಕಂಪೆನಿಯಾದ ಡೌವನ್ನು ಹೊರಗಿಡಲು ಲಂಡನ್ ಒಲಿಂಪಿಕ್ ಸಮಿತಿ ಮುಂದಾಗಲಿಲ್ಲ.
         ನಿಜವಾಗಿ, ಭೋಪಾಲ್ ಅನಿಲ ದುರಂತಕ್ಕೆ ಡೌ ಕಂಪೆನಿ ನೇರವಾಗಿ ಹೊಣೆಗಾರ ಅಲ್ಲದೇ ಇರಬಹುದು. ಆದರೆ ಅದು ಖರೀದಿಸಿದ್ದು ಕೊಲೆಪಾತಕ ಕಂಪೆಯನ್ನು. ಕಂಪೆನಿಯ ಅಪರಾಧ ಏನು, ಸಂತ್ರಸ್ತರ ಮೇಲೆ ಅದರ ಹೊಣೆಗಾರಿಕೆ ಏನು ಅನ್ನುವುದೆಲ್ಲಾ ಖರೀದಿಸುವಾಗ ಡೌ ಕಂಪೆನಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗಿರುವಾಗ ಸಂತ್ರಸ್ತರಿಗೆ ನೆರವಾಗುವುದು ನಮ್ಮ ಕರ್ತವ್ಯವಲ್ಲ ಎಂದರೆ ಹೇಗೆ? ಯೂನಿಯನ್ ಕಾರ್ಬೈಡ್ ಯಾವೆಲ್ಲ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರವಾನಿಸುತ್ತಿತ್ತೋ ಅವೆಲ್ಲ ದೇಶಗಳಿಗೆ ಇವತ್ತು ಉತ್ಪನ್ನ ಸರಬರಾಜು ಮಾಡುವುದು ಡೌ ಕಂಪೆನಿ. ಯೂನಿಯನ್ ಕಾರ್ಬೈಡ್ ಈ ಹಿಂದೆ ಹೊಂದಿದ್ದ ಮಾರುಕಟ್ಟೆ ಇವತ್ತು ಡೌನ ವಶವಾಗಿದೆ. ಹಾಗಿರುವಾಗ ಯೂನಿಯನ್ ಕಾರ್ಬೈಡ್ ನ  ಪ್ರಮಾದಗಳು ತನಗೆ ಬೇಡ, ಅದರ ಮಾರುಕಟ್ಟೆ ಮತ್ತು ಲಾಭಗಳು ಮಾತ್ರ ಸಾಕು ಅನ್ನುವುದಕ್ಕೆ ಏನೆನ್ನಬೇಕು?
        ಇವತ್ತು, ದೊಡ್ಡ ದೊಡ್ಡ ಉದ್ದಿಮೆಗಳು ಯಾವುದೇ ಒಂದು ಪ್ರದೇಶದಲ್ಲಿ ಬಂಡವಾಳ ಹೂಡುವುದು, ಆ ಪ್ರದೇಶದ ಉದ್ಧಾರಕ್ಕೆ ಖಂಡಿತ ಅಲ್ಲ. ಲಾಭವೇ ಅವುಗಳ ಮುಖ್ಯ ಗುರಿ. ಅವುಗಳ ಪಾಲಿಗೆ ಮನುಷ್ಯರು ಬರೇ ಗಿನಿಪಿಗ್ ಗಳು . ಆದ್ದರಿಂದಲೇ ಭೋಪಾಲ್ ದುರಂತದ ಸಂತ್ರಸ್ತ ಮಕ್ಕಳ ಸ್ಪೆಷಲ್ ಒಲಿಂಪಿಕ್ಸ್ ಮುಖ್ಯವಾಗುವುದು. ಡೌ ಕಂಪೆನಿಗೆ ಹೋಲಿಸಿದರೆ ಕಳೆದ 28 ವರ್ಷಗಳಿಂದ ನ್ಯಾಯಯುತ ಪರಿಹಾರಕ್ಕಾಗಿ ಹೋರಾಡುತ್ತಾ ಬಂದಿರುವ ಸಂತ್ರಸ್ತರು ಏನೇನೂ ಅಲ್ಲ. ಡೌ ಕಂಪೆನಿಯಂತೆ ಅವರು ಕೋಟ್ಯಂತರ ರೂಪಾಯಿಗಳ ಒಡೆಯರೂ ಅಲ್ಲ. ಕೈಯನ್ನೋ ಕಾಲನ್ನೋ ಕಳಕೊಂಡು ಶಾಶ್ವತ ಮೂಲೆ ಸೇರಿರುವ ಮಗನನ್ನೋ ಮಗಳನ್ನೋ ಅಪ್ಪ ಅಲ್ಲಿ ಸಾಕುತ್ತಿರುತ್ತಾನೆ. ಅಂಧ ಮಗಳನ್ನು ಮನೆಯೊಳಗಿಟ್ಟು ದಿನದ ತುತ್ತಿಗಾಗಿ ತಾಯಿ ದುಡಿಯಲು ಹೋಗುತ್ತಾಳೆ. ಒಂದು ಮನೆಯಲ್ಲಿ ವಿಕಲ ಗಂಡನನ್ನು ಸಾಕುವ ಪತ್ನಿಯಿದ್ದರೆ ಇನ್ನೊಂದು ಮನೆಯಲ್ಲಿ ವಿಕಲ ಮಕ್ಕಳನ್ನು ಸಾಕುವ ತಂದೆ. ಪ್ರತಿ ಮನೆಗಳೂ ಒಂದೊಂದು ಕತೆಯನ್ನು ಹೇಳುತ್ತಾ ಭೋಪಾಲ್ ನಲ್ಲಿ  ಬದುಕುತ್ತಿವೆ. ಅಲ್ಲದೇ, ಇವನ್ನು ಹೇಳಿ ಹೇಳಿ ಮಾಧ್ಯಮಗಳಿಗೂ ಬೋರಾಗಿ ಬಿಟ್ಟಿವೆ. ಆದ್ದರಿಂದಲೋ ಏನೋ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಗೆ  ಅವು ಸ್ಪೇಸನ್ನೇ ಕೊಟ್ಟಿಲ್ಲ. ಮೈಕೆಲ್ ಫೆಲ್ಪ್ಸ್, ಫೆಡರರ್, ನೆಹ್ವಾಲ್, ಪಾವೆಲ್ ರನ್ನು  ಕೊಂಡಾಡುವ ಧಾವಂತದಲ್ಲಿ ಈ ವಿಕಲ ಮಕ್ಕಳ ಕೂಗು ಅವಕ್ಕೆ ಕೇಳಿಸಿಯೂ ಇಲ್ಲ.
          ಏನೇ ಆಗಲಿ, ಲಂಡನ್ ಒಲಿಂಪಿಕ್ಸ್ ನ  ಸಂದರ್ಭದಲ್ಲಿ ನಡೆದ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಖಂಡಿತ ಸ್ಪೆಷಲ್. ಅದಕ್ಕೆ ಲಂಡನ್ ಒಲಿಂಪಿಕ್ಸ್ ನ  ಖದರು, ಚೆಲುವು ಇಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ನಮ್ಮನ್ನೆಲ್ಲಾ ಆಕರ್ಷಿಸುವುದಕ್ಕೆ ಮತ್ತು ತುಸು ಹೊತ್ತು ಕೂತು ಚರ್ಚಿಸುವಂತೆ ಒತ್ತಾಯಿಸುವುದಕ್ಕೆ ನೂರು ಶೇಕಡಾ ಅರ್ಹತೆ ಉಳ್ಳದ್ದು. ಲಂಡನ್ ಒಲಿಂಪಿಕ್ಸ್ ನಲ್ಲಿ  ಯಾರೋ ಅಥ್ಲೀಟ್ ಒಬ್ಬ ಚಿಗರೆಯಂತೆ ಓಡಿದುದನ್ನು ಟಿ.ವಿ. ಮುಂದೆ ಕೂತು ಆನಂದಿಸುವಾಗ ಆ ಓಟದ ಹಿಂದೆ ಡೌ ಕಂಪೆನಿಯ ದುಡ್ಡಿದೆ ಎನ್ನುವುದನ್ನು ನಾವೆಲ್ಲ ತಿಳಿದಿರಬೇಕು. ಮಾತ್ರವಲ್ಲ, ಅದೇ ದುಡ್ಡಿನ ಒಂದಂಶವನ್ನು ಸಂತ್ರಸ್ತರಿಗೆ ನೀಡಲು ಅದು ಒಪ್ಪುತ್ತಿಲ್ಲ ಅನ್ನುವುದೂ ಗೊತ್ತಿರಬೇಕು. ಒಂದು ವೇಳೆ ಅದು ಭೋಪಾಲ್ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗುತ್ತಿದ್ದರೆ ಅಫ್ರಿ ಮೈದಾನದಲ್ಲಿ ವಿಕಲ ಮಕ್ಕಳು ಓಡುವ ಪರಿಸ್ಥಿತಿ ಬರುತ್ತಿರಲಿಲ್ಲ.

Monday, 23 July 2012

ಭಾರತೀಯರೆಂದರೆ ಯಾರು ಕಾಗೇರಿಯವರೆ?

ಭಾರತೀಯರು ಅಂದರೆ ಯಾರು, ಭಾರತೀಯರಾಗುವುದಕ್ಕೆ ಇರುವ ಅರ್ಹತೆಗಳು ಏನೆಲ್ಲ.. ಎಂಬೆಲ್ಲಾ ಪ್ರಶ್ನೆಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ಹೊರಡಿಸಿದ ಸುತ್ತೋಲೆಯೊಂದು ಹುಟ್ಟು ಹಾಕಿದೆ. `ಭಾರತೀಯರ ಹಬ್ಬ-ಹರಿದಿನಗಳು’ ಎಂಬ 640 ಪುಟಗಳ ಪುಸ್ತಕವನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಕಡ್ಡಾಯವಾಗಿ ಖರೀದಿಸಿ ತಮ್ಮ ಲೈಬ್ರರಿಗಳಲ್ಲಿ ಇಟ್ಟುಕೊಳ್ಳಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 500 ರೂ. ಬೆಲೆಯ ಈ ಪುಸ್ತಕವನ್ನು ಬರೆದಿರುವುದು ಬೆಂಗಳೂರಿಗೆ ಅಷ್ಟಂಗ ಯೋಗ ವಿಜ್ಞಾನ ಮಂದಿರಮ್ ನ  ನಿರ್ದೇಶಕ ಮತ್ತು ಸಂಸ್ಕøತ ತಜ್ಞ ಶ್ರೀ ಶ್ರೀ ರಂಗಪ್ರಿಯ. ವಿಶೇಷ ಏನೆಂದರೆ, ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ದೀಪಾವಳಿ, ಮಹಾ ಶಿವರಾತ್ರಿ, ಅಕ್ಷಯ ತೃತೀಯ.. ಎಂಬುದನ್ನೆಲ್ಲಾ ಬಿಡಿಬಿಡಿಯಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕೇವಲ ಉಪಕರ್ಮಗಳನ್ನು ವಿವರಿಸುವುದಕ್ಕೇ 30 ಪುಟಗಳನ್ನು ಮೀಸಲಿಡಲಾಗಿದೆ. ಅಲ್ಲದೇ ಮೇಲ್ವರ್ಗದ ಆಚರಣೆಗಳಾದ ಚಾತುರ್ಮಾಸ, ಉಪಕರ್ಮ, ಅನಂತ ಪದ್ಮನಾಭ ವ್ರತ, ನರಸಿಂಹ ಜಯಂತಿಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಾಗೆಯೇ, ದೇವಾಲಯದ ಗೋಪುರ, ಕಲಶ, ಋಷಿ, ದನಗಳ ಎದುರು ಭಕ್ತರಿಬ್ಬರು ಕೈ ಮುಗಿದು ಪ್ರಾರ್ಥಿಸುವ ಚಿತ್ರವನ್ನು ಮುಖಪುಟದಲ್ಲಿ ಬಳಸಲಾಗಿದೆ.. ಆದರೆ ಈ ಪುಸ್ತಕದಲ್ಲಿ ಮುಸ್ಲಿಮರ ಈದ್, ಕ್ರೈಸ್ತರ ಗುಡ್ ಫ್ರೈಡೇ, ಬೌದ್ಧರ ಬುದ್ಧ ಜಯಂತಿ, ಜೈನರ ಮಹಾವೀರ ಜಯಂತಿಯ ಬಗ್ಗೆ ಒಂದೇ ಒಂದು ಪದವೂ ಇಲ್ಲ. ಹೀಗಿರುವಾಗ ಇಂಥದ್ದೊಂದು ಪುಸ್ತಕವನ್ನು ಶಾಲೆಗಳು ಕಡ್ಡಾಯವಾಗಿ ಖರೀದಿಸಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದ್ದಾದರೂ ಏಕೆ? ಭಾರತೀಯರು ಅಂದರೆ ಹಿಂದೂಗಳು ಎಂದರ್ಥವೇ? ವಿದ್ಯಾರ್ಥಿಗಳನ್ನು ಭಾರತೀಯರು ಮತ್ತು ಅಭಾರತೀಯರು ಎಂದು ವಿಂಗಡಿಸಲು ಪ್ರಚೋದನೆ ಕೊಡುವ ಪುಸ್ತಕವೊಂದನ್ನು ಶಿಕ್ಷಣ ಇಲಾಖೆ ಶಾಲೆಗಳಿಗೆ ಕಡ್ಡಾಯಗೊಳಿಸಿದ್ದು ಎಷ್ಟು ಸರಿ?
ನಿಜವಾಗಿ, ಶಾಲೆಗಳ ಮುಖ್ಯ ಉದ್ದೇಶ ಒಳ್ಳೆಯ ಭಾರತೀಯರನ್ನು ತಯಾರುಗೊಳಿಸುವುದು. ಭಾರತದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರು ಎಂಬುದಾಗಿ ಶಾಲೆಗಳಲ್ಲಿ ಕಲಿಸಿಕೊಡಲಾಗುತ್ತದೆ. ಶಿಕ್ಷಣ ಮಂತ್ರಿ ಕಾಗೇರಿಯವರು ಬಿಡುವು ಸಿಕ್ಕಾಗಲೆಲ್ಲಾ ಶಾಲೆಗಳಿಗೆ ಭೇಟಿ ಕೊಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಪ್ರಚೋದಿಸುವುದೂ ನಡೆಯುತ್ತಿದೆ. ಇಷ್ಟಕ್ಕೂ, ಕ್ರೈಸ್ತ ಅಥವಾ ಮುಸ್ಲಿಮ್ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಾಲೆಗೇ ಪ್ರಥಮ ಸ್ಥಾನ ಪಡೆದರೆ ಅಥವಾ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದರೆ ಅವರನ್ನು ಅಭಾರತೀಯರು ಎಂದು ಯಾವ ಶಿಕ್ಷಕರೇ ಆಗಲಿ ಕರೆಯುತ್ತಾರಾ? ಝಹೀರ್ ಖಾನ್, ಇರ್ಫಾನ್ ಪಠಾಣ್ ರನ್ನು  ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಎಂದೇ ಕರೆಯಲಾಗುತ್ತದಲ್ಲವೇ? ಎ.ಪಿ.ಜೆ. ಅಬ್ದುಲ್ ಕಲಾಮ್ ರು  ಭಾರತೀಯ ರಾಷ್ಟ್ರಪತಿ ಎಂದು ಕರೆಸಿ ಕೊಂಡಿರುತ್ತಾರೆಯೇ ಹೊರತು ಅಭಾರತೀಯ ಎಂದಲ್ಲವಲ್ಲ. ಇಷ್ಟಿದ್ದೂ `ಭಾರತೀಯರ ಹಬ್ಬ-ಹರಿದಿನಗಳಲ್ಲಿ’ ಮುಸ್ಲಿಮರು ಕಾಣೆಯಾದದ್ದೇಕೆ? ಕ್ರೈಸ್ತರು, ಇನ್ನಿತರರನ್ನು ಹೊರಗಿಟ್ಟದ್ದೇಕೆ? ಒಂದು ವೇಳೆ, ಅದು ರಂಗಪ್ರಿಯ ಅವರ ಖಾಸಗಿ ಪುಸ್ತಕವಷ್ಟೇ ಆಗಿದ್ದರೆ ಆ ಬಗ್ಗೆ ಚರ್ಚಿಸುವ ಅಗತ್ಯವೇ ಇರಲಿಲ್ಲ. ಆದರೆ ಆ ಪುಸ್ತಕವನ್ನು ಲೈಬ್ರರಿಯಲ್ಲಿ ಇಡಲು ಸರಕಾರವೇ ಆದೇಶಿಸಿದೆ. ಇದರರ್ಥವೇನು? ಹಿಂದೂಗಳು ಮಾತ್ರ ಭಾರತೀಯರು ಎಂಬ ನಿಲುವು ಈ ಸರಕಾರದ್ದೂ ಎಂದೇ ಅಲ್ಲವೇ? ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಹಿಂದೂಗಳ ಹಬ್ಬಗಳನ್ನು ಭಾರತೀಯರ ಹಬ್ಬಗಳು ಎಂಬುದಾಗಿ ವಿದ್ಯಾರ್ಥಿಗಳ ಮೆದುಳಿಗೆ ತುರುಕಿಸುವುದರ ಉದ್ದೇಶ ಏನು? ಇದು ಭಾರತೀಕರಣವೇ ಅಥವಾ ಹಿಂದೂಕರಣವೇ?
ಹಿಂದೂ ಧರ್ಮದ ಮೇಲೆ ಕಾಗೇರಿ ಅವರಿಗೆ ಅಥವಾ ರಾಜ್ಯ ಸರಕಾರದ ಇನ್ನಾವುದೇ ಸಚಿವರಿಗೆ ಒಲವು ಇರುವುದು ಅಪರಾಧ ಖಂಡಿತ ಅಲ್ಲ. ಅದು ಅಪರಾಧ ಆಗುವುದು, ಆ ಒಲವನ್ನು ಕಾನೂನಾಗಿಸಿ ಎಲ್ಲರ ಮೇಲೂ ಹೇರುವಾಗ. ನಿಜವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೆದುಳು ಕಾಗೇರಿಯವರಷ್ಟು ಬೆಳೆದಿರುವುದಿಲ್ಲ. ಅವು ಶಾಲೆಯಲ್ಲಿ ಏನನ್ನು ಹೇಳಿಕೊಡಲಾಗುತ್ತದೋ ಅವನ್ನೇ ಬಲವಾಗಿ ನಂಬುತ್ತವೆ. ಲೈಬ್ರರಿಗಳಲ್ಲಿ ಯಾವೆಲ್ಲ ಪುಸ್ತಕಗಳಿವೆಯೋ ಮತ್ತು ಅವುಗಳೊಳಗೆ ಏನೇನೆಲ್ಲ ಬರೆದಿವೆಯೋ ಅವೆಲ್ಲವನ್ನೂ ಸತ್ಯವೆಂದೇ ನಂಬುತ್ತವೆ. ಇಂಥ ಮಕ್ಕಳ ಕೈಗೆ ರಂಗಪ್ರಿಯರ ಪುಸ್ತಕ ಸಿಕ್ಕರೆ ಏನಾದೀತು? ಹಿಂದೂ ವಿದ್ಯಾರ್ಥಿಯೋರ್ವ ತನ್ನ ಮುಸ್ಲಿಮ್ ಸಹಪಾಠಿಯನ್ನು ವಿದೇಶೀಯನಂತೆ ನೋಡಲು ಪ್ರಾರಂಭಿಸಿದರೆ ಏನು ಮಾಡುವುದು? ಹೀಗೆ ಬೆಳೆಯುವ ಮಕ್ಕಳು ಭಾರತ ಅಂದರೆ ಅದು ಹಿಂದೂಗಳದ್ದು ಎಂದು ಪ್ರತಿಪಾದಿಸುವ ಸಾಧ್ಯತೆ ಇಲ್ಲವೇ?
         ಈ ದೇಶದ ಮುಸ್ಲಿಮರಿಗೆ ಭಾರತೀಯತೆ, ದೇಶಪ್ರೇಮವನ್ನು ಕಾಗೇರಿಯವರ ಪಕ್ಷ ಆಗಾಗ ಬೋಧಿಸುತ್ತಿರುತ್ತದೆ. ಭಾರತ-ಪಾಕ್ ಗಳ  ಮಧ್ಯೆ ಕ್ರಿಕೆಟ್ ಪಂದ್ಯಾಟ ನಡೆದಾಗಲೆಲ್ಲ ಅದು ಭಾರತೀಯ ಮತ್ತು ವಿದೇಶೀಯರನ್ನು ಹುಡುಕುವುದೂ ಇದೆ. ಇಂಥ ಪಕ್ಷವೊಂದು ವಿದ್ಯಾರ್ಥಿಗಳನ್ನು ಬೆಳೆಸಬೇಕಾದದ್ದು ಯಾವ ಮಾನಸಿಕತೆಯೊಂದಿಗೆ? ಹಿಂದೂಯೇತರರನ್ನು ಭಾರತೀಯರೆಂದು ಒಪ್ಪಿಕೊಳ್ಳಲೇ ಸಿದ್ಧರಿಲ್ಲದವರು, ಭಾರತೀಯತೆಯ ಪಾಠ ಹೇಳುವುದಕ್ಕೆ ಎಷ್ಟು ಅರ್ಹರು? ಅಂದಹಾಗೆ, ಹಿಂದೂ ಧರ್ಮದ ಬಗ್ಗೆ ಕಾಗೇರಿಯವರ ವೈಯಕ್ತಿಕ ನಿಲುವು ಏನೇ ಇರಲಿ, ಸಚಿವರಾಗಿ ಅದನ್ನು ಶಾಲೆಗಳ ಮೇಲೆ ಹೇರುವುದು ಖಂಡಿತ ತಪ್ಪು. ನಾಳೆ ಮುಸ್ಲಿಮ್ ಸಚಿವರೊಬ್ಬರು ಇಸ್ಲಾಮಿನ ಹಬ್ಬಗಳನ್ನಷ್ಟೇ ಪಟ್ಟಿ ಮಾಡಿ, `ಭಾರತೀಯರ ಹಬ್ಬಗಳು’ ಎಂಬ ಶೀರ್ಷಿಕೆಯಲ್ಲಿರುವ ಪುಸ್ತಕವನ್ನು ಶಾಲಾ ಲೈಬ್ರರಿಗೆ ಸರಬರಾಜು ಮಾಡಿದರೆ ಕಾಗೇರಿಯವರ ನಿಲುವು ಏನಿದ್ದೀತು? ಶಿಕ್ಷಣದ ಇಸ್ಲಾಮೀಕರಣ, ತಾಲಿಬಾನೀಕರಣ ಎಂದೆಲ್ಲಾ ಅವರು ಹೇಳಲಾರರೇ? ಶಿಕ್ಷಣ ಇಲಾಖೆಯು ಕಾಗೇರಿಯವರ ಸ್ವಂತ ಆಸ್ತಿಯಲ್ಲ. ಮಕ್ಕಳನ್ನು ಭಾರತೀಯ-ವಿದೇಶೀಯ ಎಂದು ವಿಭಜಿಸುವುದಕ್ಕೆ ಅವರಿಗೆ ಈ ಸಂವಿಧಾನ ಅವಕಾಶವನ್ನೂ ಕೊಟ್ಟಿಲ್ಲ. ಒಂದು ವೇಳೆ ಕಾಗೇರಿಯವರಿಗೆ ರಂಗಪ್ರಿಯರ ಪುಸ್ತಕದಲ್ಲಿ ಅಷ್ಟೊಂದು ಪ್ರೀತಿಯಿದ್ದರೆ ತನ್ನ ಮನೆಯ ಕಪಾಟಿನಲ್ಲಿ ಅದನ್ನು ಧಾರಾಳ ಇಟ್ಟುಕೊಳ್ಳಲಿ. ಆದರೆ ಶಾಲೆಗಳ ಲೈಬ್ರರಿಗಳಲ್ಲಿ ಅದರ ಅಗತ್ಯವಿಲ್ಲ.

Monday, 16 July 2012

ಉಪವಾಸ - ಹಸಿವೆಯ ಹೆಸರಲ್ಲ

    ನೀರುಳ್ಳಿ, ಬೆಳ್ಳುಳ್ಳಿ, ಮೆಣಸು, ಟೊಮೆಟೊ, ಉಪ್ಪು, ಶುಂಠಿ, ನೀರು.. ಇವೆಲ್ಲವುಗಳ ಉಪಯೋಗ ಏನು ಅಂತ ಎಲ್ಲರಿಗೂ ಗೊತ್ತು. ಇವುಗಳಲ್ಲಿ ಒಂದು ವಸ್ತು ಕಾಣೆಯಾದರೂ ಪಲ್ಯದ ಸ್ಥಿತಿ ಹೇಗಿರುತ್ತದೆ ಅನ್ನುವುದೂ ಗೊತ್ತು. ಪಲ್ಯಕ್ಕೆ ಟೇಸ್ಟೇ ಇರುವುದಿಲ್ಲ. ಅಂದ ಹಾಗೆ, ಎಷ್ಟೋ ಮನೆಗಳ ಜಗಳಗಳಲ್ಲಿ ಉಪ್ಪು ಅನ್ನುವ ಬಿಡಿವಸ್ತು ಪ್ರಮುಖ ಪಾತ್ರ ವಹಿಸಿದ್ದಿಲ್ಲವೇ? ಪಲ್ಯ ಚೆನ್ನಾಗಿಲ್ಲವೆಂದು ಹೊಟೇಲಿನಿಂದ ಅರ್ಧದಲ್ಲೇ ಎದ್ದು ಹೋಗುವವರು ಎಷ್ಟು ಮಂದಿಯಿಲ್ಲ? ನಿಜವಾಗಿ ಪಲ್ಯವನ್ನು ಪಲ್ಯ ಆಗಿಸುವುದು, ಊಟವನ್ನೋ ಇನ್ನೇನನ್ನೋ ಆಸಕ್ತಿಯಿಂದ ಸೇವಿಸುವಂತೆ ಮಾಡುವುದು ಮೇಲಿನ ಕೆಲವು ಬಿಡಿವಸ್ತುಗಳು. ಅವಿಲ್ಲದಿದ್ದರೆ ಪಲ್ಯ  ಆಗುವುದೇ ಇಲ್ಲ.
      ನಿಜವಾಗಿ, ಉಪವಾಸಕ್ಕೂ ಪಲ್ಯಕ್ಕೂ ಒಂದು ಹಂತದ ವರೆಗೆ ಹೋಲಿಕೆಯಿದೆ. ಪಲ್ಯದಂತೆಯೇ ಉಪವಾಸವನ್ನು ರುಚಿಕರವಾಗಿಸುವುದಕ್ಕೂ ಹತ್ತಾರು ಬಿಡಿ ಸಂಗತಿಗಳನ್ನು ಬಳಸಬೇಕಾಗುತ್ತದೆ. ಉಪವಾಸ ನನಗಾಗಿದೆ ಮತ್ತು ಅದಕ್ಕೆ ಖುದ್ದಾಗಿ ನಾನೇ ಪ್ರತಿಫಲ ಕೊಡುತ್ತೇನೆ ಎಂದು ಅಲ್ಲಾಹನು ಹೇಳಿದ್ದಾನೆ. ಹೀಗಿರುವಾಗ ಪ್ರತಿಫಲ ಬಯಸುವಷ್ಟು ರುಚಿಕರ ಉಪವಾಸ ನಮ್ಮದಾಗಿರಬೇಕಲ್ಲವೇ? ರುಚಿಯೇ ಕೆಟ್ಟು ಹೋದ ಉಪವಾಸವನ್ನು ಅಲ್ಲಾಹನಿಗೆ ಅರ್ಪಿಸಿ, ಅವನಿಂದ ಪ್ರತಿಫಲ ಬಯಸುವುದಾದರೂ ಯಾವ ಮುಖದಲ್ಲಿ? ಹೊಟೇಲಿನವ ಕೆಟ್ಟ ಆಹಾರವನ್ನು ಒದಗಿಸಿದರೆ ನಾವು ದುಡ್ಡು ಕೊಡುತ್ತೇವಾ? ನಿಜವಾಗಿ, ಬೆಳಗ್ಗಿನಿಂದ ಸಂಜೆಯ ವರೆಗೆ ಹಸಿವೆಯಿಂದಿರುವುದು ಉಪವಾಸದ ಮಾನದಂಡ ಅಲ್ಲ. ಹಾಗಿರುತ್ತಿದ್ದರೆ, ಬಡತನದಿಂದಾಗಿ ಹಸಿವೆಯಿಂದಿರುವ ಜಗತ್ತಿನಾದ್ಯಂತದ ಕೋಟ್ಯಂತರ ಮಂದಿಯನ್ನು ಉಪವಾಸಿಗರು ಎಂದು ಪರಿಗಣಿಸಬೇಕಾಗುತ್ತಿತ್ತು. ಹೀಗಿರುವಾಗ ನಮ್ಮ ಹಸಿವೆಯನ್ನು 'ಉಪವಾಸ'ಗೊಳಿಸುವುದು ಹೇಗೆ? ಅದನ್ನು ರುಚಿಕರವಾಗಿ ಮಾರ್ಪಡಿಸುವುದು ಹೇಗೆ?
    ಸುಳ್ಳು, ಪರನಿಂದೆ, ವಂಚನೆ, ಅಪ್ರಾಮಾಣಿಕತೆ, ಸಿಟ್ಟು, ಅಸಹನೆ.. ಇವೆಲ್ಲ ಉಪವಾಸದ ರುಚಿಯನ್ನು ಕೆಡಿಸುತ್ತವೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ಇವಾವುದನ್ನೂ ಬಳಸದೆಯೇ ರುಚಿಕಟ್ಟಾದ `ಉಪವಾಸ’ವನ್ನು ಆಚರಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಇಷ್ಟಕ್ಕೂ,  ರುಚಿಕರ ಪಲ್ಯವನ್ನು ನಿರಂತರ ಒಂದು ತಿಂಗಳು ತಯಾರಿಸಿದರೆ, ಆ ಬಳಿಕ ಕೆಟ್ಟ ಪಲ್ಯವನ್ನು ತಯಾರಿಸಲು ಯಾರಿಗಾದರೂ ಮನಸ್ಸು ಬಂದೀತೇ? ದುರಂತ ಏನೆಂದರೆ ಹೆಚ್ಚಿನ ಮಂದಿ ಉಪವಾಸದ ಬಗ್ಗೆ ಈ ರೀತಿಯಾಗಿ ಆಲೋಚಿಸುವುದೇ ಇಲ್ಲ. ಪಲ್ಯಕ್ಕೆ ಮೆಣಸು ತುಸು ಜಾಸ್ತಿಯಾದರೂ ಅಪಾರ ಸಿಟ್ಟಾಗುವ ಮಂದಿ, ಉಪವಾಸ ಆಚರಿಸಿಯೂ ಸುಳ್ಳು ಹೇಳಿದರೆ ಉಪವಾಸದ ಸ್ಥಿತಿಯೂ ಆ ಪಲ್ಯದಂತೆಯೇ ಎಂದು ಆಲೋಚಿಸುವುದಿಲ್ಲ. ಪ್ರತಿದಿನವೂ ಪಲ್ಯ ಅತ್ಯಂತ ರುಚಿಕರವಾಗಿರಬೇಕು ಎಂದು ಆಲೋಚಿಸುವ ನಾವು, ಬದುಕಿನ ಪ್ರತಿಕ್ಷಣವೂ ಸುಳ್ಳು, ವಂಚನೆ, ಅಸೂಯೆ, ಅಪ್ರಾಮಾಣಿಕತೆಗಳಿಲ್ಲದೇ ರುಚಿಕರವಾಗಿರಬೇಕೆಂದು ಅಲ್ಲಾಹನು ಬಯಸುತ್ತಾನೆನ್ನುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ರೀತಿಯಲ್ಲಿ ನಿತ್ಯದ ಬದುಕಿನಲ್ಲಿ ಸಿಗುವಂಥ ಎಲ್ಲವೂ ರುಚಿಕರವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಅಲ್ಲಾಹನು ನಮ್ಮಿಂದ ಅದನ್ನೇ ಬಯಸುತ್ತಾನೆ ಅನ್ನುವುದನ್ನು ಅರ್ಥೈಸಲು ವಿಫಲರಾಗುತ್ತೇವೆ.
         ರಮಝಾನ್ ಮತ್ತೆ ಬಂದಿರುವುದು ಇದನ್ನೇ ನೆನಪಿಸಲು.
ಒಂದು ವೇಳೆ ನಿತ್ಯದ ಬದುಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಉಪವಾಸವನ್ನು ಮತ್ತು ಆ ಮೂಲಕ ಇಡೀ ಬದುಕನ್ನೇ ರುಚಿಕರಗೊಳಿಸುವುದಕ್ಕೆ ಪೂರಕವಾದ ಧಾರಾಳ ಪಾಠಗಳು ಸಿಗಬಲ್ಲುದು..